ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2003ರಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳು

2003ರಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳು

2003ರಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳು

ಅಕ್ಟೋಬರ್‌ 6, 2001ರ ಶನಿವಾರದಂದು, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ ಸದಸ್ಯರ ವಾರ್ಷಿಕ ಕೂಟವನ್ನು, ಅಮೆರಿಕದ ನ್ಯೂ ಜರ್ಸಿಯ, ಜರ್ಸಿ ಸಿಟಿಯಲ್ಲಿ ನಡೆಸಲಾಯಿತು. ಆ ಕೂಟದ ನಂತರ, ಆ ಸದಸ್ಯರು ಮತ್ತು ಅವರ ಅತಿಥಿಗಳು ಒಂದು ವಿಶೇಷ ಕಾರ್ಯಕ್ರಮದಲ್ಲಿ ಆನಂದಿಸಿದರು. ಮರುದಿನ, ಕೆನಡ ಮತ್ತು ಅಮೆರಿಕದಲ್ಲಿನ ನಾಲ್ಕು ನಗರಗಳಲ್ಲಿ ನಡೆಸಲ್ಪಟ್ಟ ಸಂಪೂರಕ ಕೂಟಗಳಲ್ಲಿ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರು ತಮ್ಮ ಕೊನೆಯ ಭಾಷಣದ ನಂತರ ಈ ಮುಂದಿನ ಘೋಷಣೆಯನ್ನು ಮಾಡಿದರು:

“ನಾವು ಭವಿಷ್ಯದತ್ತ ಮುನ್ನೋಡುತ್ತಿರುವಾಗ, ದೇವಜನರೆಲ್ಲರೂ ಜೊತೆಯಾಗಿ ಕೂಡಿಬರುವುದನ್ನು ಬಿಟ್ಟುಬಿಡದಿರುವುದು ಬಹಳಷ್ಟು ಪ್ರಾಮುಖ್ಯವಾಗಿದೆ. ಯೆಹೋವನ ಮಹಾ ಹಾಗೂ ಭಯಪ್ರೇರಕ ದಿನವು ಹತ್ತಿರವಾಗುತ್ತಾ ಹೋದಂತೆ, ಹೀಗೆ ಕೂಡಿಕೊಳ್ಳುವುದರ ಜೊತೆಗೆ, ಪರಸ್ಪರ ಉತ್ತೇಜಿಸುವುದನ್ನು ಮತ್ತಷ್ಟು ಮಾಡಬೇಕೆಂದು ಅಪೊಸ್ತಲ ಪೌಲನು ಹುರಿದುಂಬಿಸಿದನು. (ಇಬ್ರಿಯ 10:​24, 25) ಈ ಶಾಸ್ತ್ರೀಯ ಆಜ್ಞೆಗೆ ಹೊಂದಿಕೆಯಲ್ಲಿ, ಮುಂದಿನ ವರ್ಷ [2002]ದಲ್ಲಿ ನಾವು ಲೋಕದ ಎಲ್ಲ ಭಾಗಗಳಲ್ಲೂ ಜಿಲ್ಲಾ ಅಧಿವೇಶನಗಳನ್ನು ನಡೆಸಲು ನಿರೀಕ್ಷಿಸುತ್ತಿದ್ದೇವೆ. ಆಮೇಲೆ ಇಸವಿ 2003ರಲ್ಲಿ, ಯೆಹೋವನ ಚಿತ್ತವಿದ್ದರೆ ಲೋಕದ ಕೆಲವೊಂದು ಪ್ರದೇಶಗಳಲ್ಲಿ ವಿಶೇಷ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ನಡೆಸಲು ಸಾಧ್ಯವಾಗಬಹುದು. ಲೋಕ ರಂಗದಲ್ಲಿ ಘಟನೆಗಳು ಹೇಗೆ ವಿಕಸಿಸುವವು ಎಂಬುದನ್ನು ವಿವೇಚಿಸುತ್ತಾ, ಎಚ್ಚರದಿಂದ ಮತ್ತು ಜಾಗ್ರತೆಯಿಂದ ಇರಲು ಇದೇ ಸೂಕ್ತವಾದ ಸಮಯವಾಗಿದೆ.”

ಈ ಸದ್ಯದ ವ್ಯವಸ್ಥೆಯು ತನ್ನ ಅಂತ್ಯವನ್ನು ಸಮೀಪಿಸುತ್ತಿರುವಾಗ ಹೆಚ್ಚುತ್ತಿರುವ ಅನಿಶ್ಚಿತತೆ ಮತ್ತು ದುಗುಡದ ಎದುರಿನಲ್ಲೂ, ದೇವಜನರ ಚಟುವಟಿಕೆಯು ಮುಂದೊತ್ತುತ್ತಾ ಹೋಗಬೇಕು. ಬೈಬಲಿನ ಎಚ್ಚರಿಕೆಯ ಸಂದೇಶದ ಜೊತೆಗೆ ರಾಜ್ಯದ ಸುವಾರ್ತೆಯು, ಸಕಲ ಜನಾಂಗ ಕುಲ ಪ್ರಜೆ ಮತ್ತು ಭಾಷೆಗಳನ್ನಾಡುವವರಿಗೂ ತಿಳಿಸಲ್ಪಡಬೇಕು ಮತ್ತು ಅವರು ‘ದೇವರ ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿರುವುದರಿಂದ, ಆತನಿಗೆ ಭಯಪಟ್ಟು ಆತನನ್ನು ಘನಪಡಿಸುವಂತೆ’ ಕರೆಕೊಡಲ್ಪಡಬೇಕು. (ಪ್ರಕಟನೆ 14:​6, 7) ಆದುದರಿಂದ, ನಮ್ಮ ಸ್ವರ್ಗೀಯ ತಂದೆಯ ಚಿತ್ತ ಮತ್ತು ಪ್ರಸನ್ನತೆಗನುಸಾರ, 2003ನೆಯ ಇಸವಿಗಾಗಿ ಲೋಕದ ವಿಭಿನ್ನ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಯೋಜಿಸಲಾಗಿದೆ.

ಪ್ರಥಮವಾಗಿ, ಇಂಥ ಸಮ್ಮೇಳನಗಳನ್ನು ಉತ್ತರ ಅಮೆರಿಕ ಮತ್ತು ಸ್ವಲ್ಪ ಸಮಯದ ನಂತರ ಯೂರೋಪ್‌ನ ಕೆಲವು ನಗರಗಳಲ್ಲಿ ನಡೆಯುವಂತೆ ಪರೀಕ್ಷಾರ್ಥವಾಗಿ ಶೆಡ್ಯೂಲ್‌ ಮಾಡಲಾಗಿದೆ. 2003ರಲ್ಲಿ ಸ್ವಲ್ಪ ಸಮಯಾನಂತರ, ಅಭ್ಯರ್ಥಿಗಳ ಗುಂಪುಗಳು ಏಷಿಯದಲ್ಲಿರುವ ಕೆಲವು ನಗರಗಳಿಗೆ ಪ್ರಯಾಣಿಸಲು ಏರ್ಪಾಡುಗಳನ್ನು ಮಾಡಲಾಗುವುದು; ಮತ್ತು ವರ್ಷದ ಅಂತ್ಯದಲ್ಲಿ, ಹೆಚ್ಚಿನ ಗುಂಪುಗಳು ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಶಾಂತಸಾಗರದ ಕ್ಷೇತ್ರಕ್ಕೆ ಹೋಗುವವು. ಕೆಲವು ಬ್ರಾಂಚ್‌ಗಳಿಗೆ ನಿರ್ದಿಷ್ಟ ಅಧಿವೇಶನ ನಿವೇಶನಗಳಿಗೆ ಇಂತಿಷ್ಟೇ ಸಂಖ್ಯೆಯ ಅಭ್ಯರ್ಥಿಗಳನ್ನು ಕಳುಹಿಸುವಂತೆ ವಿನಂತಿಸಲಾಗುವುದು, ಆದುದರಿಂದ ಎಲ್ಲರೂ ಹಾಜರಾಗುವಂತೆ ಒಂದು ಆಮಂತ್ರಣವನ್ನು ಕೊಡಲು ಸಾಧ್ಯವಿಲ್ಲ. ಹಾಗಿದ್ದರೂ, ಪ್ರತಿಯೊಂದು ಸ್ಥಳದಲ್ಲಿ ಬೇರೆ ಬೇರೆ ದೇಶಗಳನ್ನು ಪ್ರತಿನಿಧಿಸುವ ಸೀಮಿತ ಅಭ್ಯರ್ಥಿ ಗುಂಪುಗಳಿರುವುದು ಪ್ರೋತ್ಸಾಹದಾಯಕವಾಗಿರುವುದು.

ಈ ಅಧಿವೇಶನಗಳ ಬಗ್ಗೆ ಯೆಹೋವನ ಸಾಕ್ಷಿಗಳ ಸಭೆಗಳು ಬಲುಬೇಗನೆ ಮಾಹಿತಿಯನ್ನು ಪಡೆಯುವವು. ಆಮಂತ್ರಿಸಲ್ಪಟ್ಟಿರುವ ಅಭ್ಯರ್ಥಿಗಳು ಹಾಜರಾಗಬಹುದಾದ ಅಧಿವೇಶನಗಳ ಸರಿಯಾದ ತಾರೀಖುಗಳು ಮತ್ತು ನಿರ್ದಿಷ್ಟ ನಗರಗಳ ಕುರಿತಾದ ಮಾಹಿತಿಯನ್ನು ಅವರವರ ಬ್ರಾಂಚ್‌ಗಳು ಒದಗಿಸುವವು. ಹೀಗಿರುವುದರಿಂದ, ಈಗಲೇ ನೀವು ಈ ವಿಷಯದ ಕುರಿತು ಪತ್ರಗಳನ್ನು ಬರೆಯದಂತೆ ಅಥವಾ ಅದರ ಕುರಿತು ವಿಚಾರಿಸದಂತೆ ಕೇಳಿಕೊಳ್ಳಲಾಗಿದೆ.

ಅಭ್ಯರ್ಥಿಗಳಾಗಿರುವಂತೆ ಕಟ್ಟಕಡೆಗೆ ಆಯ್ಕೆಮಾಡಲ್ಪಡುವವರು, ಉತ್ತಮ ಮಾದರಿಗಳಾಗಿರುವ ಮತ್ತು ಸ್ಥಳಿಕ ಸಹೋದರರಿಗೆ ಸಹೋದರ ಪ್ರೀತಿಯನ್ನು ತೋರಿಸುವ ಸಮರ್ಪಿತ ಮತ್ತು ದೀಕ್ಷಾಸ್ನಾನಿತ ಸಾಕ್ಷಿಗಳಾಗಿರಬೇಕು. ಸ್ಥಳಿಕ ಸಹೋದರರಿಗೆ, ಈ ಸಂದರ್ಶಕರಿಗೆ ಪ್ರೀತಿಭರಿತ ಸ್ವಾಗತ ಮತ್ತು ಮನಃಪೂರ್ವಕ ಅತಿಥಿಸತ್ಕಾರವನ್ನು ತೋರಿಸಲು ಉತ್ತಮ ಅವಕಾಶಗಳಿರುವವು. (ಇಬ್ರಿಯ 13:​1, 2) ಇದು “ಪ್ರೋತ್ಸಾಹದ ವಿನಿಮಯ”ದಲ್ಲಿ ಫಲಿಸುವುದು. (ರೋಮಾಪುರ 1:​11, 12, NW) ಈ ಏರ್ಪಾಡುಗಳ ಬಗ್ಗೆ ಹೆಚ್ಚಿನ ವಿವರಗಳನ್ನು, ನಿರ್ದಿಷ್ಟ ದೇಶಕ್ಕೆ ಇಲ್ಲವೆ ದೇಶಗಳಿಗೆ ಅಭ್ಯರ್ಥಿಗಳನ್ನು ಕಳುಹಿಸುವಂತೆ ಆಮಂತ್ರಿಸಲ್ಪಟ್ಟಿರುವ ಬ್ರಾಂಚ್‌ಗಳು ಒದಗಿಸುವವು.

ಎಂದಿನಂತೆ ಹೆಚ್ಚಿನ ದೇಶಗಳಲ್ಲಿ 2003ನೆಯ ಇಸವಿಗಾಗಿ ಮೂರು ದಿನಗಳ ಜಿಲ್ಲಾ ಅಧಿವೇಶನಗಳನ್ನು ಏರ್ಪಡಿಸಲಾಗುವುದು. ಜೊತೆಯಾಗಿ ಕೂಡಿಬರುವ ಮೂಲಕ ಎಲ್ಲರಿಗೂ, ‘ಕಿವಿಗೊಡಲು, ಕಲಿಯಲು ಮತ್ತು ಪ್ರೋತ್ಸಾಹಿಸಲ್ಪಡಲು’ ಅವಕಾಶ ಸಿಗುವುದು. (ಧರ್ಮೋಪದೇಶಕಾಂಡ 31:12; 1 ಕೊರಿಂಥ 14:31) ಇದು ದೇವಜನರೆಲ್ಲರಿಗೂ ‘ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಲು’ ಅವಕಾಶವನ್ನು ಕೊಡುವುದು. (ಕೀರ್ತನೆ 34:8) ಎಲ್ಲ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಹಾಗೂ ಅನೇಕ ಜಿಲ್ಲಾ ಅಧಿವೇಶನಗಳಲ್ಲೂ ಮಿಷನೆರಿಗಳು ಉಪಸ್ಥಿತರಿರುವರು, ಮತ್ತು ಕೆಲವರಿಗೆ ಕಾರ್ಯಕ್ರಮದಲ್ಲಿ ಭಾಗವಿರುವುದು.

ಈ ಕ್ಯಾಲೆಂಡರ್‌ ವರ್ಷದಲ್ಲಿ (2002) ನಾವು “ಹುರುಪಿನ ರಾಜ್ಯ ಘೋಷಕರು” ಎಂಬ ಜಿಲ್ಲಾ ಅಧಿವೇಶನಗಳಲ್ಲಿ ಆನಂದಿಸುತ್ತಿದ್ದೇವೆ. ಇದು ನಾವು ಹೆಚ್ಚು ದೊಡ್ಡ ಸಾಕ್ಷಿಯನ್ನು ಕೊಡುವಂತೆ ಪ್ರಚೋದಿಸುವುದು. ನಾವಿದನ್ನು ಮಾಡುತ್ತಾ ಹೋದಂತೆ, ಯೆಹೋವನು ಮುಂದಿನ ವರ್ಷಕ್ಕಾಗಿ ಏನನ್ನು ಕಾದಿರಿಸಿದ್ದಾನೊ ಅದಕ್ಕಾಗಿ ನಮ್ಮ ನಿರೀಕ್ಷಣೆಯು ಹೆಚ್ಚುವುದು. ಇದು ನಮಗೆ ಈ ಕಠಿನವಾದ ಹಾಗೂ ಬಹು ಮುಖ್ಯವಾದ ಸಮಯಗಳಲ್ಲಿ ‘ಜಾಗ್ರತೆಯಿಂದಿರಲು, ಎಚ್ಚರವಾಗಿರಲು ಮತ್ತು ಸಿದ್ಧವಾಗಿರಲು’ ಸಹಾಯಮಾಡುವುದು.​—ಮತ್ತಾಯ 24:​42-44.