ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಸತ್ಯವನ್ನು ಅನುಸರಿಸಿ ನಡೆಯುತ್ತಿದ್ದಾರೆ

ಅವರು ಸತ್ಯವನ್ನು ಅನುಸರಿಸಿ ನಡೆಯುತ್ತಿದ್ದಾರೆ

ಅವರು ಸತ್ಯವನ್ನು ಅನುಸರಿಸಿ ನಡೆಯುತ್ತಿದ್ದಾರೆ

“ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.”​—3 ಯೋಹಾನ 4.

1.“ಸುವಾರ್ತೆಯ ಸತ್ಯಾರ್ಥ” ಯಾವುದರ ಮೇಲೆ ಕೇಂದ್ರೀಕರಿಸುತ್ತದೆ?

ಯೆಹೋವನು ತನ್ನನ್ನು “ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸುವವರನ್ನು ಮಾತ್ರ ಅನುಮೋದಿಸುತ್ತಾನೆ. (ಯೋಹಾನ 4:​24, NW) ಅವರು ದೇವರ ವಾಕ್ಯದ ಮೇಲೆ ಆಧಾರಿತವಾದ ಕ್ರೈಸ್ತ ಬೋಧನೆಗಳ ಇಡೀ ಸಂಗ್ರಹವನ್ನೇ ಒಪ್ಪಿಕೊಂಡು ಸತ್ಯಕ್ಕೆ ವಿಧೇಯರಾಗುತ್ತಾರೆ. ಈ “ಸುವಾರ್ತೆಯ ಸತ್ಯಾರ್ಥ”ವು ಯೇಸು ಕ್ರಿಸ್ತನ ಮೇಲೆ ಮತ್ತು ರಾಜ್ಯದ ಮೂಲಕ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದ ಮೇಲೆ ಕೇಂದ್ರೀಕರಿಸುತ್ತದೆ. (ಗಲಾತ್ಯ 2:14) ದೇವರು ಸುಳ್ಳನ್ನು ಹೆಚ್ಚು ಇಷ್ಟಪಡುವವರ ಬಳಿಗೆ “ಅಸತ್ಯನಡಿಸುವ ಭ್ರಮೆಯು” ಹೋಗುವಂತೆ ಅನುಮತಿಸುತ್ತಾನೆ. ರಕ್ಷಣೆಯಾದರೊ, ಸುವಾರ್ತೆಯಲ್ಲಿಡುವ ನಂಬಿಕೆಯ ಮೇಲೆ ಮತ್ತು ಸತ್ಯವನ್ನು ಅನುಸರಿಸಿ ನಡೆಯುವುದರ ಮೇಲೆ ಹೊಂದಿಕೊಂಡಿರುತ್ತದೆ.​—2 ಥೆಸಲೊನೀಕ 2:9-12; ಎಫೆಸ 1:13, 14.

2. ಅಪೊಸ್ತಲ ಯೋಹಾನನು ವಿಶೇಷವಾಗಿ ಯಾವ ಕಾರಣಕ್ಕಾಗಿ ಸಂತೋಷದಿಂದಿದ್ದನು ಮತ್ತು ಅವನ ಮತ್ತು ಗಾಯನ ಮಧ್ಯೆ ಯಾವ ರೀತಿಯ ಸಂಬಂಧವಿತ್ತು?

2 ರಾಜ್ಯ ಘೋಷಕರು ‘ಸತ್ಯಕ್ಕೆ ಸಹಕಾರಿಗಳು’ ಆಗಿದ್ದಾರೆ. ಅಪೊಸ್ತಲ ಯೋಹಾನ ಮತ್ತು ಅವನ ಸ್ನೇಹಿತ ಗಾಯನಂತೆ ಅವರೂ ಸತ್ಯವನ್ನು ಬಿಗಿಯಾಗಿ ಹಿಡಿದುಕೊಂಡು ಅದಕ್ಕನುಸಾರವಾಗಿ ನಡೆಯುತ್ತಾರೆ. ಗಾಯನನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಯೋಹಾನನು ಬರೆದುದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.” (3 ಯೋಹಾನ 3-8) ವೃದ್ಧನಾಗಿದ್ದ ಯೋಹಾನನೇ ಒಂದುವೇಳೆ ಗಾಯನಿಗೆ ಸತ್ಯವನ್ನು ಕೊಟ್ಟಿರದಿದ್ದರೂ, ಆ ಅಪೊಸ್ತಲನ ಮುದಿ ಪ್ರಾಯ, ಕ್ರೈಸ್ತ ಪ್ರೌಢತೆ ಮತ್ತು ಪಿತೃಸದೃಶ ಮಮತೆಯು, ಈ ಯುವಕನು ಯೋಹಾನನ ಆತ್ಮಿಕ ಮಕ್ಕಳಲ್ಲಿ ಒಬ್ಬನಾಗಿ ಪರಿಗಣಿಸಲ್ಪಡಲು ಯೋಗ್ಯನನ್ನಾಗಿ ಮಾಡಿತ್ತು.

ಸತ್ಯ ಮತ್ತು ಕ್ರೈಸ್ತ ಆರಾಧನೆ

3. ಆದಿಕ್ರೈಸ್ತರು ನಡೆಸುತ್ತಿದ್ದ ಕೂಟಗಳ ಉದ್ದೇಶವೂ ಪ್ರಯೋಜನವೂ ಏನಾಗಿತ್ತು?

3 ಆದಿಕ್ರೈಸ್ತರು ಸತ್ಯವನ್ನು ಕಲಿಯಲಿಕ್ಕಾಗಿ ಸಭೆಗಳಾಗಿ, ಅನೇಕವೇಳೆ ಖಾಸಗಿ ಮನೆಗಳಲ್ಲಿ ಕೂಡಿಬರುತ್ತಿದ್ದರು. (ರೋಮಾಪುರ 16:​3-5) ಅವರು ಈ ರೀತಿಯಲ್ಲಿ ಪ್ರೋತ್ಸಾಹವನ್ನು ಪಡೆದುಕೊಂಡು, ಒಬ್ಬರನ್ನೊಬ್ಬರು ಪ್ರೀತಿ ಮತ್ತು ಸತ್ಕಾರ್ಯಗಳಿಗಾಗಿ ಹುರಿದುಂಬಿಸಿದರು. (ಇಬ್ರಿಯ 10:​24, 25) ಟೆರ್ಟಲ್ಯನ್‌ (ಸುಮಾರು ಸಾ.ಶ. 155ರಿಂದ ಸಾ.ಶ. 220ರ ತರುವಾಯ) ಎಂಬವನು ಆ ತರುವಾಯ ಜೀವಿಸುತ್ತಿದ್ದ ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದವರ ಕುರಿತು ಬರೆದುದು: “ದೇವರ ಗ್ರಂಥಗಳನ್ನು ಓದಲು ನಾವು ಕೂಡಿಬರುತ್ತೇವೆ. . . . ಈ ಪವಿತ್ರ ಹೇಳಿಕೆಗಳಿಂದ ನಾವು ನಮ್ಮ ನಂಬಿಕೆಯನ್ನು ಪೋಷಿಸಿ, ನಮ್ಮ ನಿರೀಕ್ಷೆಯನ್ನು ವರ್ಧಿಸಿ, ನಮ್ಮ ಭರವಸೆಯನ್ನು ದೃಢೀಕರಿಸುತ್ತೇವೆ.”​—ಅಪಾಲಜಿ, ಅಧ್ಯಾಯ 39.

4. ಕ್ರೈಸ್ತ ಕೂಟಗಳಲ್ಲಿ ಹಾಡುವುದು ಯಾವ ಪಾತ್ರವನ್ನು ವಹಿಸಿದೆ?

4 ಆದಿಕ್ರೈಸ್ತರ ಕೂಟಗಳಲ್ಲಿ ಗೀತೆಗಳೂ ಹಾಡಲ್ಪಡುತ್ತಿದ್ದದ್ದು ಸಂಭವನೀಯ. (ಎಫೆಸ 5:19; ಕೊಲೊಸ್ಸೆ 3:16) ಎರಡನೆಯ ಶತಮಾನದ ವಿಮರ್ಶಕ ಸೆಲ್ಸಸ್‌ ಎಂಬವನು ಆಗ ಕ್ರೈಸ್ತರೆನಿಸಿಕೊಳ್ಳುತ್ತಿದ್ದವರ ಗೀತೆಗಳ “ಇಂಪಾದ ಸ್ವರದಿಂದ ಸ್ವತಃ ಭಾವಪೂರಿತವಾಗಿ ಪ್ರಭಾವಿತನಾದುದಕ್ಕೆ ಅಸಮಾಧಾನಪಟ್ಟನು” ಎಂದು ಪ್ರೊಫೆಸರ್‌ ಹೆನ್ರಿ ಚ್ಯಾಡ್ವಿಕ್‌ ಬರೆಯುತ್ತಾರೆ. ಚ್ಯಾಡ್ವಿಕ್‌ ಮುಂದುವರಿಸುವುದು: “ಅಲೆಕ್ಸಾಂಡ್ರಿಯದ ಕ್ಲೆಮೆಂಟ್‌ ಎಂಬವನು, ಕ್ರೈಸ್ತರಿಗೆ ಹಾಡಲು ಯಾವುದು ತಕ್ಕದಾದ ಗೀತೆಯೆಂಬುದನ್ನು ಚರ್ಚಿಸಿದ ಕ್ರೈಸ್ತ ಲೇಖಕರಲ್ಲಿ ಪ್ರಥಮನು. ಅದು ಪ್ರಣಯ ನೃತ್ಯ ಸಂಗೀತದಂತಹದ್ದಾಗಿರಬಾರದೆಂದು ಅವನು ನಿರ್ದೇಶಿಸುತ್ತಾನೆ.” (ಆರಂಭದ ಚರ್ಚು, [ಇಂಗ್ಲಿಷ್‌] ಪುಟಗಳು 274-5) ಆದಿಕ್ರೈಸ್ತರು ಕೂಡಿಬಂದಾಗ ಗೀತೆಗಳನ್ನು ಹಾಡಿದರೆಂಬುದು ವ್ಯಕ್ತವಾಗುವಂತೆಯೇ, ಯೆಹೋವನ ಸಾಕ್ಷಿಗಳು ಅನೇಕವೇಳೆ ಬೈಬಲಾಧಾರಿತವಾಗಿರುವ, ದೇವರನ್ನೂ ಆತನ ರಾಜ್ಯವನ್ನೂ ಸ್ತುತಿಸುವ ಸ್ತೋತ್ರಗೀತೆಗಳನ್ನು ಹಾಡುತ್ತಾರೆ.

5. (ಎ) ಆದಿಕ್ರೈಸ್ತ ಸಭೆಗಳಲ್ಲಿ ಆತ್ಮಿಕ ಮಾರ್ಗದರ್ಶನವನ್ನು ಹೇಗೆ ಕೊಡಲಾಗುತ್ತಿತ್ತು? (ಬಿ) ಸತ್ಯ ಕ್ರೈಸ್ತರು ಮತ್ತಾಯ 23:​8, 9ರಲ್ಲಿರುವ ಯೇಸುವಿನ ಮಾತುಗಳನ್ನು ಹೇಗೆ ಅನ್ವಯಿಸಿಕೊಂಡಿದ್ದಾರೆ?

5 ಆದಿಕ್ರೈಸ್ತ ಸಭೆಗಳಲ್ಲಿ ಮೇಲ್ವಿಚಾರಕರು ಸತ್ಯವನ್ನು ಬೋಧಿಸಿದರು ಮತ್ತು ಶುಶ್ರೂಷಾ ಸೇವಕರು ಜೊತೆವಿಶ್ವಾಸಿಗಳಿಗೆ ವಿವಿಧ ರೀತಿಗಳಲ್ಲಿ ಸಹಾಯಮಾಡಿದರು. (ಫಿಲಿಪ್ಪಿ 1:1) ದೇವರ ವಾಕ್ಯ ಮತ್ತು ಪವಿತ್ರಾತ್ಮದ ಮೇಲೆ ಹೊಂದಿಕೊಂಡಿದ್ದ ಒಂದು ಆಡಳಿತ ಮಂಡಲಿಯು ಆತ್ಮಿಕ ಮಾರ್ಗದರ್ಶನವನ್ನು ಕೊಟ್ಟಿತು. (ಅ. ಕೃತ್ಯಗಳು 15:6, 23-31) ಧಾರ್ಮಿಕ ಬಿರುದುಗಳು ಉಪಯೋಗಿಸಲ್ಪಡುತ್ತಿರಲಿಲ್ಲ, ಏಕೆಂದರೆ ಯೇಸು ತನ್ನ ಶಿಷ್ಯರಿಗೆ, “ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ,” ಎಂದು ಆಜ್ಞಾಪಿಸಿದ್ದನು. (ಮತ್ತಾಯ 23:8, 9) ಈ ಮತ್ತು ಇತರ ಅನೇಕ ವಿಷಯಗಳಲ್ಲಿ, ಆದಿಕ್ರೈಸ್ತರ ಮತ್ತು ಯೆಹೋವನ ಸಾಕ್ಷಿಗಳ ಮಧ್ಯೆ ಸಾದೃಶ್ಯಗಳಿವೆ.

ಸತ್ಯವನ್ನು ಸಾರುವುದಕ್ಕಾಗಿ ಹಿಂಸಿಸಲ್ಪಡುವುದು

6, 7. ಸತ್ಯ ಕ್ರೈಸ್ತರು ಶಾಂತಿಯ ಸಂದೇಶವನ್ನು ಸಾರುತ್ತಿರುವುದಾದರೂ, ಅವರನ್ನು ಹೇಗೆ ಉಪಚರಿಸಲಾಗಿದೆ?

6 ಆದಿಕ್ರೈಸ್ತರು ಶಾಂತಿಪೂರ್ಣವಾದ ರಾಜ್ಯ ಸಂದೇಶವನ್ನು ಸಾರಿದರೂ, ಯೇಸುವಿನಂತೆಯೇ ಅವರಿಗೂ ಹಿಂಸೆ ಬಂತು. (ಯೋಹಾನ 15:20; 17:14) ಇತಿಹಾಸಕಾರ ಜಾನ್‌ ಎಲ್‌. ಫಾನ್‌ ಮೋಶೈಮ್‌, ಒಂದನೆಯ ಶತಮಾನದ ಕ್ರೈಸ್ತರನ್ನು, “ಅತಿ ನಿರುಪದ್ರವಿಗಳೂ ಸಾಧು ಸ್ವಭಾವದವರೂ, ಸರಕಾರಕ್ಕೆ ವಿರುದ್ಧವಾಗಿ ಹೋಗುವ ಯಾವುದೇ ವಿಚಾರವನ್ನು ಎಂದಿಗೂ ಮನಸ್ಸಿನಲ್ಲಿಟ್ಟುಕೊಳ್ಳದ ಜನರ ಗುಂಪೂ” ಎಂದು ಕರೆದರು. ಡಾ. ಮೋಶೈಮ್‌ ಹೇಳಿದ್ದೇನೆಂದರೆ, “ಕ್ರೈಸ್ತರ ವಿರುದ್ಧ ರೋಮನರನ್ನು ಕೋಪಗೊಳಿಸಿದ್ದು ಅವರ ಆರಾಧನೆಯ ಸರಳತೆಯಾಗಿತ್ತು. ಇತರರ ಪವಿತ್ರ ಸಂಸ್ಕಾರಗಳಿಗೂ ಇದಕ್ಕೂ ಯಾವ ಹೋಲಿಕೆಯೂ ಇರಲಿಲ್ಲ.” ಅವರು ಕೂಡಿಸಿ ಹೇಳಿದ್ದು: “ಅವರಿಗೆ ಯಜ್ಞ, ದೇವಸ್ಥಾನ, ಮೂರ್ತಿ, ದಿವ್ಯವಾಣಿ ಅಥವಾ ಪುರೋಹಿತ ವರ್ಗಗಳಿರಲಿಲ್ಲ. ಮತ್ತು ಈ ಸಂಸ್ಕಾರಗಳಿಲ್ಲದೆ ಧರ್ಮವಿರುವುದು ಅಸಾಧ್ಯವೆಂದು ಭಾವಿಸಿದ ಆಗಿನ ವಿಷಯಜ್ಞಾನವಿಲ್ಲದ ಸಮೂಹಕ್ಕೆ, ಕ್ರೈಸ್ತರ ಮೇಲೆ ದೋಷಾರೋಪಣೆ ಹೊರಿಸಲು ಇದು ಸಾಕಾಗಿತ್ತು. ಹೀಗೆ, ಅವರನ್ನು ಒಂದು ವಿಧದ ನಾಸ್ತಿಕರಂತೆ ನೋಡಲಾಗುತ್ತಿತ್ತು. ಮತ್ತು ರೋಮನ್‌ ಕಾನೂನಿಗನುಸಾರ ನಾಸ್ತಿಕರೆಂದು ಅಪವಾದ ಹೊರಿಸಲ್ಪಟ್ಟವರನ್ನು ಸಮಾಜದ ಪೀಡೆಗಳೆಂದು ಘೋಷಿಸಲಾಗುತ್ತಿತ್ತು.”

7 ಪುರೋಹಿತರು, ಶಿಲ್ಪಿಗಳು ಮತ್ತು ಹೊಟ್ಟೆಪಾಡಿಗಾಗಿ ವಿಗ್ರಹಾರಾಧನೆಯ ಮೇಲೆ ಹೊಂದಿಕೊಂಡಿದ್ದ ಇತರರು, ವಿಗ್ರಹಾರಾಧನೆಯ ಆಚಾರಗಳಲ್ಲಿ ಭಾಗವಹಿಸದೆ ಇದ್ದ ಕ್ರೈಸ್ತರ ವಿರುದ್ಧ ಜನರನ್ನು ಉದ್ರೇಕಿಸಿದರು. (ಅ. ಕೃತ್ಯಗಳು 19:23-40; 1 ಕೊರಿಂಥ 10:14) ಟೆರ್ಟಲ್ಯನನು ಬರೆದುದು: “ಸರಕಾರದ ಮೇಲೆ ಬರುವ ಪ್ರತಿಯೊಂದು ವಿಪತ್ತುಗಳಿಗೆ, ಜನರ ಮೇಲೆ ಬರುವ ದುರದೃಷ್ಟಗಳಿಗೆ ಕ್ರೈಸ್ತರು ಕಾರಣರೆಂದು ಅವರು ನಂಬುತ್ತಾರೆ. ಟೈಬರ್‌ ನದಿಯ ನೆರೆ ನೀರು ನಗರದ ಗೋಡೆಗಳಷ್ಟು ಮೇಲೆ ಬರುವಲ್ಲಿ, ನೈಲ್‌ ನದಿ ಉಕ್ಕಿ ಹೊಲಗಳಿಗೆ ನೀರು ತರದಿರುವಲ್ಲಿ, ಆಕಾಶದಿಂದ ಮಳೆ ಬೀಳದಿರುವಲ್ಲಿ, ಭೂಕಂಪವಾಗುವಲ್ಲಿ, ಕ್ಷಾಮ ಬರುವಲ್ಲಿ, ಪ್ಲೇಗ್‌ ಹರಡುವಲ್ಲಿ, ಒಡನೆ ಎದ್ದು ಬರುವ ಕೂಗು ಏನಂದರೆ, ‘ಕ್ರೈಸ್ತರನ್ನು ಸಿಂಹಗಳಿಗೆ ಎಸೆಯಿರಿ!’” ಆದರೆ ಪರಿಣಾಮ ಏನೇ ಆದರೂ, ಕ್ರೈಸ್ತರು ‘ವಿಗ್ರಹಗಳಿಂದ ತಮ್ಮನ್ನು ಕಾಪಾಡಿಕೊಳ್ಳುತ್ತಾರೆ.’​—1 ಯೋಹಾನ 5:21.

ಸತ್ಯ ಮತ್ತು ಧಾರ್ಮಿಕ ಆಚರಣೆಗಳು

8. ಸತ್ಯಾನುಸಾರ ನಡೆಯುವವರು ಕ್ರಿಸ್ಮಸನ್ನು ಏಕೆ ಆಚರಿಸುವುದಿಲ್ಲ?

8 ಸತ್ಯಾನುಸಾರ ನಡೆಯುವವರು ಅಶಾಸ್ತ್ರೀಯ ಆಚರಣೆಗಳಿಂದ ದೂರವಿರುತ್ತಾರೆ, ಏಕೆಂದರೆ, ‘ಬೆಳಕಿಗೂ ಕತ್ತಲೆಗೂ ಐಕ್ಯವಿರುವುದಿಲ್ಲ.’ (2 ಕೊರಿಂಥ 6:​14-18) ದೃಷ್ಟಾಂತಕ್ಕೆ, ಅವರು ಡಿಸೆಂಬರ್‌ 25ರಂದು ನಡೆಯುವ ಕ್ರಿಸ್ಮಸ್‌ ಹಬ್ಬವನ್ನು ಆಚರಿಸುವುದಿಲ್ಲ. ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಕ್ರಿಸ್ತನ ಜನನದ ಸರಿಯಾದ ತಾರೀಖು ಯಾರಿಗೂ ಗೊತ್ತಿಲ್ಲ.” ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ (1956 ಮುದ್ರಣ) ಹೇಳುವುದು: “ಮಧ್ಯ ಡಿಸೆಂಬರ್‌ನಲ್ಲಿ ಆಚರಿಸಲ್ಪಡುವ ರೋಮನ್‌ ಹಬ್ಬವಾದ ಸ್ಯಾಟರ್ನೇಲ್ಯ, ಕ್ರಿಸ್ಮಸ್‌ನಲ್ಲಿ ನಡೆಯುವ ಅನೇಕ ಮೋಜಿನ ಪದ್ಧತಿಗಳಿಗೆ ಆದರ್ಶವನ್ನು ಒದಗಿಸಿದೆ.” ಮೆಕ್ಲಿಂಟಕ್‌ ಆ್ಯಂಡ್‌ ಸ್ಟ್ರಾಂಗ್ಸ್‌ ಸೈಕ್ಲೊಪೀಡಿಯ ಹೇಳುವುದು: “ಕ್ರಿಸ್ಮಸ್‌ ಆಚರಣೆಯು ದೈವಿಕ ಆಜ್ಞೆಯೂ ಅಲ್ಲ, ಹೊಸ ಒಡಂಬಡಿಕೆಯ ಮೂಲದ್ದೂ ಅಲ್ಲ.” ಯೇಸುವಿನ ಕಾಲದಲ್ಲಿ ದೈನಂದಿನ ಜೀವನ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಕುರಿಹಿಂಡುಗಳು ಚಳಿಗಾಲದಲ್ಲಿ ಬೆಚ್ಚಗಿನ ಆಶ್ರಯದಲ್ಲಿ ಇರುತ್ತಿದ್ದವು. ಕೇವಲ ಈ ಒಂದು ಕಾರಣದಿಂದಲೇ, ಚಳಿಗಾಲದಲ್ಲಿರುವ ಕ್ರಿಸ್ಮಸ್‌ನ ಸಾಂಪ್ರದಾಯಿಕ ತಾರೀಖು ಸರಿಯಾಗಿರಸಾಧ್ಯವಿಲ್ಲ ಎಂದು ಹೇಳಸಾಧ್ಯವಿದೆ. ಏಕೆಂದರೆ ಕುರುಬರು ಹೊಲದಲ್ಲಿದ್ದರೆಂದು ಸುವಾರ್ತಾ ಪುಸ್ತಕವು ತಿಳಿಸುತ್ತದೆ.”​—ಲೂಕ 2:8-11.

9. ಹಿಂದಿನ ಮತ್ತು ಈಗಿನ ಯೆಹೋವನ ಸೇವಕರು ಈಸ್ಟರ್‌ ಹಬ್ಬಾಚರಣೆಯಿಂದ ದೂರವಿರುವುದು ಏಕೆ?

9 ಈಸ್ಟರ್‌ ಹಬ್ಬ ಕ್ರಿಸ್ತನ ಪುನರುತ್ಥಾನದ ಜ್ಞಾಪಕಾರ್ಥವಾಗಿದೆ ಎಂದು ಹೇಳಲಾಗುತ್ತದಾದರೂ, ಭರವಸಾರ್ಹ ಮೂಲಗಳು ಅದನ್ನು ಮಿಥ್ಯಾರಾಧನೆಯೊಂದಿಗೆ ಜೊತೆಗೂಡಿಸುತ್ತವೆ. ದ ವೆಸ್ಟ್‌ಮಿನ್‌ಸ್ಟರ್‌ ಡಿಕ್ಷನೆರಿ ಆಫ್‌ ದ ಬೈಬಲ್‌ ಈಸ್ಟರ್‌ನ ಕುರಿತು, “ಅದು ಆರಂಭದಲ್ಲಿ, ಆ್ಯಂಗ್ಲೋಸ್ಯಾಕ್ಸನ್‌ ಭಾಷೆಯಲ್ಲಿ ಈಸ್ಟ್ರೆ [ಅಥವಾ ಯೋಸ್ಟ್ರೆ] ಎಂದು ಕರೆಯಲಾಗುತ್ತಿದ್ದ, ಬೆಳಕು ಮತ್ತು ವಸಂತಕಾಲದ ಟ್ಯುಟಾನಿಕ್‌ ದೇವತೆಯ ಗೌರವಾರ್ಥವಾಗಿ ನಡೆಸಲ್ಪಡುತ್ತಿದ್ದ ವಸಂತಕಾಲದ ಹಬ್ಬವಾಗಿತ್ತು.” ಹೇಗೂ, ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ (11ನೆಯ ಮುದ್ರಣ) ಹೇಳುವುದು: “ಹೊಸ ಒಡಂಬಡಿಕೆಯಲ್ಲಿ ಈಸ್ಟರ್‌ ಹಬ್ಬದ ಆಚರಣೆಯ ಸೂಚನೆಯೇ ಇಲ್ಲ.” ಹೀಗೆ, ಈಸ್ಟರ್‌ ಹಬ್ಬ ಆದಿಕ್ರೈಸ್ತರ ಆಚರಣೆಯಾಗಿರಲಿಲ್ಲ ಮತ್ತು ಅದನ್ನು ಇಂದು ಯೆಹೋವನ ಸಾಕ್ಷಿಗಳು ಆಚರಿಸುವುದಿಲ್ಲ.

10. ಯೇಸು ಯಾವ ಆಚರಣೆಯನ್ನು ಸ್ಥಾಪಿಸಿದನು, ಮತ್ತು ಅದನ್ನು ಇನ್ನೂ ಸರಿಯಾದ ರೀತಿಯಲ್ಲಿ ಯಾರು ಆಚರಿಸುತ್ತಿದ್ದಾರೆ?

10 ಯೇಸು ತನ್ನ ಹಿಂಬಾಲಕರಿಗೆ ತನ್ನ ಜನನವನ್ನಾಗಲಿ ಪುನರುತ್ಥಾನವನ್ನಾಗಲಿ ಆಚರಿಸುವಂತೆ ಆಜ್ಞಾಪಿಸಲಿಲ್ಲ. ಆದರೆ ತನ್ನ ಯಜ್ಞಾರ್ಪಿತ ಮರಣದ ಸ್ಮಾರಕವನ್ನು ಅವನು ಸ್ಥಾಪಿಸಿದನು. (ರೋಮಾಪುರ 5:8) ಹೌದು, ತನ್ನ ಶಿಷ್ಯರು ಆಚರಿಸುವಂತೆ ಅವನು ಆಜ್ಞಾಪಿಸಿದ್ದು ಈ ಘಟನೆಯನ್ನು ಮಾತ್ರ. (ಲೂಕ 22:​19, 20) ಕರ್ತನ ಸಂಧ್ಯಾ ಭೋಜನವೆಂದು ಕರೆಯಲ್ಪಡುವ ಈ ವಾರ್ಷಿಕ ಘಟನೆಯನ್ನು ಯೆಹೋವನ ಸಾಕ್ಷಿಗಳು ಇನ್ನೂ ಆಚರಿಸುತ್ತಿದ್ದಾರೆ.​—1 ಕೊರಿಂಥ 11:​20-26.

ಭೂಮ್ಯಾದ್ಯಂತ ಪ್ರಕಟಿಸಲ್ಪಡುತ್ತಿರುವ ಸತ್ಯ

11, 12. ಸತ್ಯಾನುಸಾರ ನಡೆಯುವವರು ತಮ್ಮ ಸಾರುವ ಕೆಲಸವನ್ನು ಸದಾ ಹೇಗೆ ಬೆಂಬಲಿಸಿದ್ದಾರೆ?

11 ಸತ್ಯವನ್ನು ತಿಳಿದಿರುವವರು ಸುವಾರ್ತೆಯನ್ನು ಸಾರುವ ಕೆಲಸಕ್ಕೆ ತಮ್ಮ ಸಮಯ, ಶಕ್ತಿ ಮತ್ತು ಸಂಪತ್ತನ್ನು ಮೀಸಲಾಗಿಡುವುದನ್ನು ಗೌರವಾರ್ಹವೆಂದೆಣಿಸುತ್ತಾರೆ. (ಮಾರ್ಕ 13:10) ಆದಿಕ್ರೈಸ್ತರ ಸಾರುವ ಕಾರ್ಯವನ್ನು ಸ್ವಯಂಪ್ರೇರಿತ ದಾನಗಳು ಬೆಂಬಲಿಸಿದವು. (2 ಕೊರಿಂಥ 8:12; 9:7) ಟೆರ್ಟಲ್ಯನನು ಬರೆದುದು: “ಹಣಸಂಗ್ರಹದ ಪೆಟ್ಟಿಗೆ ಅಲ್ಲಿದ್ದರೂ, ಧರ್ಮವು ವ್ಯಾಪಾರವೊ ಎಂಬಂತೆ ಪ್ರವೇಶ ಧನವಾಗಿರುವ ಹಣ ಅದರಲ್ಲಿರಲಿಲ್ಲ. ಪ್ರತಿಯೊಬ್ಬನು ತಿಂಗಳಿಗೊಮ್ಮೆ ಚಿಕ್ಕ ವಂತಿಗೆಯ ಹಣವನ್ನು ಅಥವಾ ತಾನು ಬಯಸುವಷ್ಟನ್ನು ತರುತ್ತಾನೆ. ಅದೂ, ಅವನಿಗೆ ಇಷ್ಟವಿರುವಲ್ಲಿ ಮತ್ತು ಸಾಧ್ಯವಿರುವಲ್ಲಿ ಮಾತ್ರ. ಏಕೆಂದರೆ ಅದು ಸ್ವಯಂಪ್ರೇರಿತ ಕೊಡುವಿಕೆಯಾಗಿರುವುದರಿಂದ ಯಾರನ್ನೂ ನಿರ್ಬಂಧಿಸಲಾಗುವುದಿಲ್ಲ.”​—ಅಪಾಲಜಿ, ಅಧ್ಯಾಯ 39.

12 ಯೆಹೋವನ ಸಾಕ್ಷಿಗಳ ಭೌಗೋಳಿಕ ರಾಜ್ಯ ಸಾರುವಿಕೆಯೂ ಸ್ವಯಂಪ್ರೇರಿತ ದಾನಗಳಿಂದ ಬೆಂಬಲಿಸಲ್ಪಡುತ್ತದೆ. ಸಾಕ್ಷಿಗಳಲ್ಲದೆ, ಕೃತಜ್ಞತಾಭರಿತ ಆಸಕ್ತರೂ ಈ ಕಾರ್ಯವನ್ನು ಹಣದ ದಾನಗಳಿಂದ ಬೆಂಬಲಿಸುವುದನ್ನು ಒಂದು ಸುಯೋಗವಾಗಿ ಎಣಿಸುತ್ತಾರೆ. ಇದರಲ್ಲಿಯೂ ಆದಿಕ್ರೈಸ್ತರಿಗೂ ಯೆಹೋವನ ಸಾಕ್ಷಿಗಳಿಗೂ ಹೋಲಿಕೆಯಿದೆ.

ಸತ್ಯ ಮತ್ತು ವೈಯಕ್ತಿಕ ನಡತೆ

13. ನಡತೆಯ ವಿಷಯದಲ್ಲಿ, ಯೆಹೋವನ ಸಾಕ್ಷಿಗಳು ಪೇತ್ರನ ಯಾವ ಸಲಹೆಗೆ ಕಿವಿಗೊಡುತ್ತಾರೆ?

13 ಸತ್ಯಾನುಸಾರವಾಗಿ ನಡೆಯುತ್ತಿದ್ದ ಆದಿಕ್ರೈಸ್ತರು ಅಪೊಸ್ತಲ ಪೇತ್ರನ ಈ ಬುದ್ಧಿವಾದಕ್ಕೆ ವಿಧೇಯರಾದರು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” (1 ಪೇತ್ರ 2:12) ಯೆಹೋವನ ಸಾಕ್ಷಿಗಳು ಈ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.

14. ಅನೈತಿಕ ವಿನೋದಾವಳಿಗಳ ಬಗ್ಗೆ ಕ್ರೈಸ್ತ ವೀಕ್ಷಣವೇನು?

14 ಧರ್ಮಭ್ರಷ್ಟತೆಯು ದುರಾಕ್ರಮಣ ಮಾಡಿದಾಗಲೂ, ನಾಮಮಾತ್ರದ ಕ್ರೈಸ್ತರು ದುರಾಚಾರದ ಕಾರ್ಯಗಳಿಂದ ದೂರವಿದ್ದರು. ಡಬ್ಲ್ಯೂ. ಡಿ. ಕಿಲನ್‌ ಎಂಬ ಕ್ರೈಸ್ತ ಮಠೀಯ ಇತಿಹಾಸದ ಪ್ರೊಫೆಸರರು ಬರೆದುದು: “ಎರಡನೆಯ ಮತ್ತು ಮೂರನೆಯ ಶತಮಾನಗಳಲ್ಲಿ ಪ್ರತಿಯೊಂದು ದೊಡ್ಡ ಪಟ್ಟಣದ ನಾಟಕಶಾಲೆ ಆಕರ್ಷಣೆಯ ಕೇಂದ್ರವಾಗಿತ್ತು. ಮತ್ತು ನಟರು ಸಾಮಾನ್ಯವಾಗಿ ಅತಿ ದುರಾಚಾರಿಗಳಾಗಿದ್ದರೂ, ಅವರ ನಾಟಕ ಪ್ರದರ್ಶನಗಳು ಆ ಸಮಯದ ನೀತಿಭ್ರಷ್ಟ ಹಂಬಲಿಕೆಯನ್ನು ತೃಪ್ತಿಪಡಿಸುತ್ತಿದ್ದವು. . . . ಸತ್ಯ ಕ್ರೈಸ್ತರೆಲ್ಲರೂ ನಾಟಕ ಶಾಲೆಗಳನ್ನು ಜುಗುಪ್ಸೆಯಿಂದ ಕಾಣುತ್ತಿದ್ದರು. . . . ಆ ಅಶ್ಲೀಲತೆಯಿಂದ ಅವರು ಹಿಮ್ಮೆಟ್ಟಿದರು; ಮತ್ತು ಅಲ್ಲಿ ವಿಧರ್ಮಿ ದೇವದೇವತೆಗಳಿಗೆ ಕೊಡಲ್ಪಡುತ್ತಿದ್ದ ಸ್ಥಾನವು ಅವರ ಧಾರ್ಮಿಕ ನಿಶ್ಚಿತಾಭಿಪ್ರಾಯಗಳಿಗೆ ಧಕ್ಕೆ ತಂದಿತು.” (ಪೂರ್ವಕಾಲದ ಚರ್ಚ್‌, [ಇಂಗ್ಲಿಷ್‌] ಪುಟಗಳು 318-19) ಇಂದು ಯೇಸುವಿನ ನಿಜ ಅನುಯಾಯಿಗಳೂ ಅಶ್ಲೀಲವೂ ನೈತಿಕವಾಗಿ ಕೆಳಮಟ್ಟದ್ದೂ ಆದ ವಿನೋದಾವಳಿಗಳಿಂದ ದೂರವಿರುತ್ತಾರೆ.​—ಎಫೆಸ 5:​3-5.

ಸತ್ಯವೂ ‘ಮೇಲಧಿಕಾರಿಗಳೂ’

15, 16. ‘ಮೇಲಧಿಕಾರಿಗಳು’ ಯಾರು, ಮತ್ತು ಸತ್ಯಾನುಸಾರ ನಡೆಯುವವರು ಅವರನ್ನು ಹೇಗೆ ವೀಕ್ಷಿಸಿದ್ದಾರೆ?

15 ಆದಿಕ್ರೈಸ್ತರು ಸದ್ವರ್ತನೆಯುಳ್ಳವರಾಗಿದ್ದರೂ, ಹೆಚ್ಚಿನ ರೋಮನ್‌ ಚಕ್ರವರ್ತಿಗಳಿಗೆ ಅವರ ವಿಷಯದಲ್ಲಿ ತಪ್ಪಭಿಪ್ರಾಯವಿತ್ತು. ಇತಿಹಾಸಕಾರ ಇ. ಜಿ. ಹಾರ್ಡಿ ಹೇಳುವುದೇನಂದರೆ, ಸಮ್ರಾಟರು ಅವರನ್ನು, “ಕೊಂಚಮಟ್ಟಿಗೆ ತಿರಸ್ಕಾರಾರ್ಹರಾದ ಭ್ರಾಂತರೋ” ಎಂಬಂತೆ ವೀಕ್ಷಿಸಿದರು. ಬಿಥಿನ್ಯದ ರಾಜ್ಯಪಾಲ ಪ್ಲಿನೀ ದ ಯಂಗರ್‌ ಮತ್ತು ಸಮ್ರಾಟ ಟ್ರೇಜನ್‌ ಇವರ ಮಧ್ಯೆ ನಡೆದ ಪತ್ರವ್ಯವಹಾರವು, ಆಳುವ ವರ್ಗದವರಿಗೆ ಸಾಮಾನ್ಯವಾಗಿ ಕ್ರೈಸ್ತತ್ವದ ನಿಜ ಸ್ವರೂಪವು ತಿಳಿದಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಹಾಗಾದರೆ, ಕ್ರೈಸ್ತರು ಸರಕಾರವನ್ನು ಹೇಗೆ ವೀಕ್ಷಿಸುತ್ತಾರೆ?

16 ಯೇಸುವಿನ ಆದಿ ಹಿಂಬಾಲಕರಂತೆಯೇ, ಯೆಹೋವನ ಸಾಕ್ಷಿಗಳೂ ಸರಕಾರೀ ‘ಮೇಲಧಿಕಾರಿಗಳಿಗೆ’ ಸಂಬಂಧೀ ಅಧೀನತೆಯನ್ನು ತೋರಿಸುತ್ತಾರೆ. (ರೋಮಾಪುರ 13:​1-7) ಮಾನವರ ಒತ್ತಾಯದ ಬೇಡಿಕೆ ಮತ್ತು ದೇವರ ಚಿತ್ತದ ಮಧ್ಯೆ ಘರ್ಷಣೆ ಆಗುವಲ್ಲಿ, ಆಗ ಅವರು “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯ”ರಾಗುವ ನಿಲುವನ್ನು ತೆಗೆದುಕೊಳ್ಳುತ್ತಾರೆ. (ಅ. ಕೃತ್ಯಗಳು 5:29) ಯೇಸುವಿನ ತರುವಾಯ​—ಕ್ರೈಸ್ತತ್ವದ ವಿಜಯ (ಇಂಗ್ಲಿಷ್‌) ಪುಸ್ತಕವು ಹೇಳುವುದು: “ಕ್ರೈಸ್ತರು ಸಮ್ರಾಟಾರಾಧನೆಯಲ್ಲಿ ಭಾಗವಹಿಸಿರಲಿಕ್ಕಿಲ್ಲವಾದರೂ, ಅವರು ದೊಂಬಿ ಪ್ರೇರಕರಾಗಿರಲಿಲ್ಲ. ಮತ್ತು ಅವರ ಧರ್ಮವು, ವಿಚಿತ್ರವೂ ಕೆಲವು ಬಾರಿ ವಿಧರ್ಮಿಗಳ ದೃಷ್ಟಿಯಲ್ಲಿ ರೇಗಿಸುವಂಥದ್ದೂ ಆಗಿದ್ದರೂ, ಆ ಸಾಮ್ರಾಜ್ಯಕ್ಕೆ ಯಾವುದೇ ಅಪಾಯವನ್ನು ತಂದೊಡ್ಡುತ್ತಿರಲಿಲ್ಲ.”

17. (ಎ) ಆದಿಕ್ರೈಸ್ತರು ಯಾವ ಸರಕಾರದ ಸಮರ್ಥಕರಾಗಿದ್ದರು? (ಬಿ) ಕ್ರಿಸ್ತನ ನಿಜ ಹಿಂಬಾಲಕರು ತಮ್ಮ ಜೀವಿತಗಳಲ್ಲಿ ಯೆಶಾಯ 2:4ರ ಮಾತುಗಳನ್ನು ಹೇಗೆ ಅನ್ವಯಿಸಿಕೊಂಡಿದ್ದಾರೆ?

17 ಆದಿಕ್ರೈಸ್ತರು ದೇವರ ರಾಜ್ಯದ ಸಮರ್ಥಕರಾಗಿದ್ದರು. ಅಬ್ರಹಾಮ, ಇಸಾಕ, ಯಾಕೋಬರು ಆ ವಾಗ್ದತ್ತ ‘ದೇವನಿರ್ಮಿತ ಪಟ್ಟಣ’ದಲ್ಲಿ ನಂಬಿಕೆಯಿಟ್ಟಂತೆಯೇ ಇವರೂ ನಂಬಿಕೆಯಿಟ್ಟರು. (ಇಬ್ರಿಯ 11:​8-10) ತಮ್ಮ ಗುರುವಿನಂತೆ, ಯೇಸುವಿನ ಶಿಷ್ಯರೂ ‘ಲೋಕದವರಾಗಿರಲಿಲ್ಲ.’ (ಯೋಹಾನ 17:​14-16) ಮತ್ತು ಮಾನವ ಯುದ್ಧ ಹಾಗೂ ಕಲಹಗಳ ವಿಷಯದಲ್ಲಿ, ಅವರು “ಕತ್ತಿಗಳನ್ನು ಗುಳಗಳನ್ನಾಗಿ” ಮಾಡುವ ಮೂಲಕ ಶಾಂತಿಯನ್ನು ಬೆನ್ನಟ್ಟಿದ್ದರು. (ಯೆಶಾಯ 2:4) ಆಸಕ್ತಿಕರವಾದ ಸಾದೃಶ್ಯವನ್ನು ಗಮನಿಸುತ್ತಾ, ಚರ್ಚ್‌ ಇತಿಹಾಸದ ಉಪನ್ಯಾಸಕರಾದ ಜೆಫ್ರಿ ಎಫ್‌. ನಟಾಲ್‌ ಹೇಳಿದ್ದು: “ಯುದ್ಧದ ವಿಷಯದಲ್ಲಿ ಆದಿಕ್ರೈಸ್ತರಿಗಿದ್ದ ಮನೋಭಾವವನ್ನು ಅಂಗೀಕರಿಸುವುದು ನಮಗೆ ಕಷ್ಟಕರವಾಗಿರಬಹುದಾದರೂ, ಅದು ಹೆಚ್ಚುಕಡಿಮೆ, ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಕರೆದುಕೊಳ್ಳುವ ಜನರ ಮನೋಭಾವದಂತೆಯೇ ಇತ್ತು.”

18. ಯಾವುದೇ ಸರಕಾರಕ್ಕೂ ಯೆಹೋವನ ಸಾಕ್ಷಿಗಳಿಂದ ಅಪಾಯದ ಭಯವಿರಲು ಕಾರಣವಿಲ್ಲವೇಕೆ?

18 ‘ಮೇಲಧಿಕಾರಿಗಳಿಗೆ’ ಅಧೀನತೆಯಲ್ಲಿ ತಟಸ್ಥ ವ್ಯಕ್ತಿಗಳಾಗಿದ್ದ ಆ ಆದಿಕ್ರೈಸ್ತರು ಯಾವುದೇ ರಾಜಕೀಯ ಅಧಿಕಾರಗಳಿಗೆ ಅಪಾಯವನ್ನು ತರುವವರಾಗಿರಲಿಲ್ಲ. ಮತ್ತು ಯೆಹೋವನ ಸಾಕ್ಷಿಗಳೂ ಹಾಗೆಯೇ. ಉತ್ತರ ಅಮೆರಿಕದ ಸಂಪಾದಕೀಯ ಬರಹಗಾರನೊಬ್ಬನು ಬರೆದುದು: “ಯೆಹೋವನ ಸಾಕ್ಷಿಗಳು ಯಾವುದೇ ರಾಜಕೀಯ ಸರಕಾರಕ್ಕೆ ಅಪಾಯವನ್ನು ಬರಮಾಡುವವರೆಂದು ಹೇಳಲು ಮತಭ್ರಾಂತಿಯ ಮತ್ತು ಬುದ್ಧಿವಿಕಲ್ಪದ ಕಲ್ಪನೆಯು ಆವಶ್ಯಕ. ಅವರು ಯಾವುದೇ ಧಾರ್ಮಿಕ ಗುಂಪು ಹೇಗೆ ಸರಕಾರವನ್ನು ಉರುಳಿಸುವ ಪ್ರಯತ್ನವನ್ನು ಮಾಡದೆ ಶಾಂತಿಪ್ರಿಯವಾದ ಗುಂಪಾಗಿರಬೇಕೊ ಹಾಗೆಯೇ ಇದ್ದಾರೆ.” ಯೆಹೋವನ ಸಾಕ್ಷಿಗಳಿಂದ ಯಾವುದೇ ಅಪಾಯದ ಭಯವಿಲ್ಲವೆಂದು ತಿಳಿವಳಿಕೆಯುಳ್ಳ ಅಧಿಕಾರಿಗಳಿಗೆ ತಿಳಿದದೆ.

19. ತೆರಿಗೆ ತೆರುವ ವಿಷಯದಲ್ಲಿ, ಆದಿಕ್ರೈಸ್ತರ ಬಗ್ಗೆ ಮತ್ತು ಯೆಹೋವನ ಸಾಕ್ಷಿಗಳ ಬಗ್ಗೆ ಏನು ಹೇಳಬಹುದು?

19 ಆದಿಕ್ರೈಸ್ತರು ‘ಮೇಲಧಿಕಾರಿಗಳಿಗೆ’ ಗೌರವ ತೋರಿಸಿದ ಒಂದು ವಿಧವು ತೆರಿಗೆಗಳನ್ನು ತೆರುವ ಮೂಲಕವೇ. ರೋಮನ್‌ ಸಮ್ರಾಟ ಆ್ಯಂಟನೈನಸ್‌ ಪಾಯಸ್‌ (ಸಾ.ಶ. 138-161) ಎಂಬವನಿಗೆ ಬರೆಯುವಾಗ ಜಸ್ಟಿನ್‌ ಮಾರ್ಟರ್‌ ಹೇಳಿದ್ದೇನಂದರೆ, ತೆರಿಗೆ ತೆರುವುದರಲ್ಲಿ ಕ್ರೈಸ್ತರು “ಎಲ್ಲ ಜನರಿಗಿಂತ ಹೆಚ್ಚು ಸಿದ್ಧಮನಸ್ಸಿನವರಾಗಿದ್ದರು.” (ಫಸ್ಟ್‌ ಅಪಾಲಜಿ, ಅಧ್ಯಾಯ 17) ಟೆರ್ಟಲ್ಯನನು ರೋಮನ್‌ ಪ್ರಭುಗಳಿಗೆ, ಅವರ ತೆರಿಗೆ ವಸೂಲು ಮಾಡುವವರು “ಕ್ರೈಸ್ತರಿಗೆ ತೀರ ಆಭಾರಿಗಳಾಗಿರಬೇಕು” ಎಂದು ಹೇಳಿದನು, ಏಕೆಂದರೆ ಕ್ರೈಸ್ತರು ಶುದ್ಧಾಂತಃಕರಣದಿಂದ ತೆರಿಗೆ ಸಂದಾಯ ಮಾಡುತ್ತಿದ್ದರು. (ಅಪಾಲಜಿ, ಅಧ್ಯಾಯ 42) ಕ್ರೈಸ್ತರು ಕಾನೂನು ಕ್ರಮ, ಒಳ್ಳೆಯ ರಸ್ತೆಗಳು, ಮತ್ತು ಸಾಧಾರಣ ಸುಭದ್ರವಾಗಿದ್ದ ಸಮುದ್ರ ಪ್ರಯಾಣಗಳಿದ್ದ ಪಾಕ್ಸ್‌ ರೊಮಾನ ಅಥವಾ ರೋಮನ್‌ ಶಾಂತಿಯಿಂದ ಪ್ರಯೋಜನ ಪಡೆದರು. ಸಮಾಜಕ್ಕೆ ತಾವು ಋಣಿಗಳೆಂಬುದನ್ನು ಒಪ್ಪಿಕೊಂಡು, ಅವರು “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ,” ಎಂಬ ಯೇಸುವಿನ ಮಾತುಗಳಿಗೆ ಕಿವಿಗೊಟ್ಟರು. (ಮಾರ್ಕ 12:17) ಯೆಹೋವನ ಜನರು ಇಂದು ಇದೇ ಸಲಹೆಯನ್ನು ಅನುಸರಿಸುವ ಕಾರಣ, ತೆರಿಗೆ ತೆರುವುದರಲ್ಲಿ ಅವರ ಪ್ರಾಮಾಣಿಕತೆಗಾಗಿ ಪ್ರಶಂಸಿಸಲ್ಪಟ್ಟಿದ್ದಾರೆ.​—ಇಬ್ರಿಯ 13:18.

ಸತ್ಯ​—ಐಕ್ಯಗೊಳಿಸುವ ಬಂಧ

20, 21. ಶಾಂತಿಪೂರ್ಣ ಸಹೋದರತ್ವದ ಸಂಬಂಧದಲ್ಲಿ, ಆದಿಕ್ರೈಸ್ತರ ಹಾಗೂ ಯೆಹೋವನ ಆಧುನಿಕ ಸೇವಕರ ವಿಷಯದಲ್ಲಿ ಯಾವುದು ಸತ್ಯವಾಗಿದೆ?

20 ಆದಿಕ್ರೈಸ್ತರು ಸತ್ಯಾನುಸಾರ ನಡೆಯುತ್ತಿದ್ದ ಕಾರಣ, ಇಂದಿನ ಯೆಹೋವನ ಸಾಕ್ಷಿಗಳಂತೆಯೇ, ಅವರು ಒಂದು ಶಾಂತಿಪೂರ್ಣವಾದ ಸಹೋದರತ್ವದಲ್ಲಿ ಕಟ್ಟಲ್ಪಟ್ಟಿದ್ದರು. (ಅ. ಕೃತ್ಯಗಳು 10:​34, 35) ದ ಮಾಸ್ಕೋ ಟೈಮ್ಸ್‌ ವಾರ್ತಾಪತ್ರಿಕೆಯಲ್ಲಿ ಮುದ್ರಿಸಲ್ಪಟ್ಟ ಒಂದು ಪತ್ರ ಹೀಗಿತ್ತು: “[ಯೆಹೋವನ ಸಾಕ್ಷಿಗಳು] ಸ್ನೇಹಭಾವದವರು, ದಯಾಪರರು ಎಂದು ಪ್ರಸಿದ್ಧರಾಗಿದ್ದು, ಸುಲಭವಾಗಿ ಹೊಂದಿಕೊಂಡು ಹೋಗುವ ಸ್ವಭಾವದವರಾಗಿದ್ದಾರೆ. ಅವರು ಇತರರ ಮೇಲೆ ಯಾವುದೇ ಒತ್ತಡವನ್ನು ಹಾಕದೆ, ಇತರರೊಂದಿಗಿನ ತಮ್ಮ ಸಂಬಂಧದಲ್ಲಿ ಶಾಂತಿಪ್ರವೃತ್ತಿಯವರಾಗಿದ್ದಾರೆ. . . . ಅವರಲ್ಲಿ ಲಂಚ ತೆಗೆದುಕೊಳ್ಳುವವರಾಗಲಿ, ಕುಡುಕರಾಗಲಿ, ಅಮಲೌಷಧ ವ್ಯಸನಿಗಳಾಗಲಿ ಇಲ್ಲ ಮತ್ತು ಇದಕ್ಕೆ ಕಾರಣವು ತೀರ ಸುಲಭ: ಅವರು ಮಾಡುವ ಮತ್ತು ಹೇಳುವ ಪ್ರತಿಯೊಂದು ವಿಷಯದಲ್ಲಿ ಬೈಬಲಾಧಾರಿತ ನಿಶ್ಚಿತಾಭಿಪ್ರಾಯಗಳು ಅವರನ್ನು ನಡೆಸುವಂತೆ ಅವರು ಬಿಡುತ್ತಾರೆ. ಲೋಕದ ಎಲ್ಲಾ ಜನರು, ಯೆಹೋವನ ಸಾಕ್ಷಿಗಳಂತೆ ಬೈಬಲಿಗನುಸಾರ ಜೀವಿಸಲು ಕಡಿಮೆಪಕ್ಷ ಪ್ರಯತ್ನವನ್ನಾದರೂ ಮಾಡುವಲ್ಲಿ, ನಮ್ಮ ಕ್ರೂರ ಲೋಕವು ತೀರ ಭಿನ್ನವಾಗಿರುವುದು.”

21ಎನ್‌ಸೈಕ್ಲೊಪೀಡಿಯ ಆಫ್‌ ಅರ್ಲಿ ಕ್ರಿಶ್ಚಿಯಾನಿಟಿ ಹೇಳುವುದು: “ಆದಿಚರ್ಚು ತನ್ನನ್ನು ಒಂದೇ ಕುಟುಂಬವಾಗಿ ನೋಡಿತು. ಅದರಲ್ಲಿ ಹಿಂದೆ ವಿರೋಧಿಗಳಾಗಿದ್ದ ಯೆಹೂದ್ಯರೂ ಅನ್ಯರೂ ಶಾಂತಿಯಲ್ಲಿ ಐಕ್ಯರಾಗಿ ಜೀವಿಸಸಾಧ್ಯವಿತ್ತು.” ಹಾಗೆಯೇ, ಯೆಹೋವನ ಸಾಕ್ಷಿಗಳೂ ಶಾಂತಿಪ್ರಿಯರಾದ ಅಂತಾರಾಷ್ಟ್ರೀಯ ಸಹೋದರತ್ವ​—ನಿಜವಾಗಿಯೂ ಒಂದು ಹೊಸ ಲೋಕ ಸಮಾಜವಾಗಿದ್ದಾರೆ. (ಎಫೆಸ 2:11-18; 1 ಪೇತ್ರ 5:9; 2 ಪೇತ್ರ 3:13) ದಕ್ಷಿಣ ಆಫ್ರಿಕದ ಪ್ರಿಟೋರಿಯ ಶೋ ಗ್ರೌಂಡ್ಸ್‌ನ ಚೀಫ್‌ ಸೆಕ್ಯೂರಿಟಿ ಆಫೀಸರರು, ಎಲ್ಲಾ ಕುಲಗಳ ಸಾಕ್ಷಿಗಳು ಅಧಿವೇಶನದ ಪ್ರತಿನಿಧಿಗಳಾಗಿ ಶಾಂತಿಯಿಂದ ಕೂಡಿಬಂದುದನ್ನು ಕಂಡು ಹೇಳಿದ್ದು: “ಪ್ರತಿಯೊಬ್ಬರೂ ಸಭ್ಯತೆಯಿಂದ ವರ್ತಿಸಿದರು ಮತ್ತು ವರ್ತಿಸುತ್ತಾರೆ. ಜನರು ಪರಸ್ಪರ ನಮ್ರತೆಯಿಂದ ಮಾತಾಡುತ್ತಾರೆ. ಕಳೆದ ಕೆಲವು ದಿನಗಳಲ್ಲಿ ತೋರಿಸಲ್ಪಟ್ಟ ಅವರ ಮನೋಭಾವವು ನಿಮ್ಮ ಸಮಾಜದ ಸದಸ್ಯರ ನೈತಿಕ ಗುಣಮಟ್ಟವನ್ನು ತೋರಿಸುತ್ತದೆ. ಮತ್ತು ಎಲ್ಲರೂ ಸಂತೋಷದ ಒಂದೇ ಕುಟುಂಬದೋಪಾದಿ ಕೂಡಿ ಜೀವಿಸುತ್ತಾರೆ.”

ಸತ್ಯವನ್ನು ಬೋಧಿಸುವುದಕ್ಕಾಗಿ ಆಶೀರ್ವದಿತರು

22. ಕ್ರೈಸ್ತರು ಸತ್ಯವನ್ನು ಬೋಧಿಸುವ ಕಾರಣವಾಗಿ ಏನು ಸಂಭವಿಸಿದೆ?

22 ತಮ್ಮ ನಡತೆ ಮತ್ತು ಸಾರುವ ಕಾರ್ಯದ ಮೂಲಕ, ಪೌಲನೂ ಇತರ ಕ್ರೈಸ್ತರೂ “ಸತ್ಯವನ್ನು ಪರಿಷ್ಕಾರವಾಗಿ” ತಿಳಿಸಿದರು. (2 ಕೊರಿಂಥ 4:2) ಯೆಹೋವನ ಸಾಕ್ಷಿಗಳೂ ಹಾಗೆಯೇ ಮಾಡುತ್ತಾ, ಎಲ್ಲಾ ಜನಾಂಗಗಳಿಗೆ ಸತ್ಯವನ್ನು ಬೋಧಿಸುತ್ತಾರೆಂದು ನೀವು ಒಪ್ಪಿಕೊಳ್ಳುವುದಿಲ್ಲವೊ? ಜನರು ಲೋಕಾದ್ಯಂತವಾಗಿ ಸತ್ಯಾರಾಧನೆಯನ್ನು ಅವಲಂಬಿಸುತ್ತಿದ್ದು, ‘ಯೆಹೋವನ ಮಂದಿರದ ಬೆಟ್ಟ’ಕ್ಕೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಪ್ರವಹಿಸುತ್ತಾ ಇದ್ದಾರೆ. (ಯೆಶಾಯ 2:​2, 3) ಪ್ರತಿ ವರುಷ, ಸಾವಿರಾರು ಜನರು ದೇವರಿಗೆ ತಮ್ಮ ಸಮರ್ಪಣೆಯನ್ನು ತೋರಿಸುವ ದೀಕ್ಷಾಸ್ನಾನವನ್ನು ಹೊಂದುತ್ತಾರೆ. ಇದರಿಂದಾಗಿ ಅನೇಕ ಹೊಸ ಸಭೆಗಳು ರೂಪಿಸಲ್ಪಡುತ್ತವೆ.

23. ಎಲ್ಲಾ ಜನಾಂಗಗಳಿಗೆ ಸತ್ಯವನ್ನು ಬೋಧಿಸುವವರನ್ನು ನೀವು ಹೇಗೆ ವೀಕ್ಷಿಸುತ್ತೀರಿ?

23 ಯೆಹೋವನ ಜನರು ಅನೇಕ ಹಿನ್ನೆಲೆಗಳಿಂದ ಬಂದಿರುವುದಾದರೂ ಸತ್ಯಾರಾಧನೆಯಲ್ಲಿ ಐಕ್ಯರಾಗಿದ್ದಾರೆ. ಅವರು ತೋರಿಸುವ ಪ್ರೀತಿಯು, ಕ್ರಿಸ್ತನ ಶಿಷ್ಯರಾಗಿ ಅವರನ್ನು ಗುರುತಿಸುತ್ತದೆ. (ಯೋಹಾನ 13:35) ‘ದೇವರು ಅವರ ಮಧ್ಯೆ ನಿಜವಾಗಿಯೂ ಇರುವುದನ್ನು’ ನೀವು ನೋಡಬಲ್ಲಿರೊ? (1 ಕೊರಿಂಥ 14:25) ಎಲ್ಲಾ ಜನಾಂಗಗಳಿಗೆ ಸತ್ಯವನ್ನು ಬೋಧಿಸುವವರನ್ನು ನೀವು ಬೆಂಬಲಿಸಿದ್ದೀರೊ? ಹಾಗಿರುವಲ್ಲಿ, ನೀವು ಸತ್ಯಕ್ಕಾಗಿ ನಿತ್ಯಕ್ಕೂ ಕೃತಜ್ಞತೆಯನ್ನು ತೋರಿಸುತ್ತಾ, ಅದರಲ್ಲಿ ಸದಾ ನಡೆಯುವ ಸುಯೋಗ ನಿಮಗಿರುವಂತಾಗಲಿ.

ನೀವು ಹೇಗೆ ಉತ್ತರ ಕೊಡುವಿರಿ?

• ಆರಾಧನಾ ರೀತಿಯಲ್ಲಿ ಆದಿಕ್ರೈಸ್ತರಿಗೂ ಯೆಹೋವನ ಸಾಕ್ಷಿಗಳಿಗೂ ಯಾವ ಹೋಲಿಕೆಯಿದೆ?

• ಸತ್ಯಾನುಸಾರ ನಡೆಯುವವರು ಆಚರಿಸುವ ಒಂದೇ ಧಾರ್ಮಿಕ ಆಚರಣೆ ಯಾವುದು?

• ‘ಮೇಲಧಿಕಾರಿಗಳು’ ಯಾರು, ಮತ್ತು ಅವರನ್ನು ಕ್ರೈಸ್ತರು ಹೇಗೆ ವೀಕ್ಷಿಸುತ್ತಾರೆ?

• ಸತ್ಯವು ಐಕ್ಯದ ಬಂಧವಾಗಿರುವುದು ಹೇಗೆ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ಸತ್ಯಾನುಸಾರ ನಡೆಯುವವರಿಗೆ ಕ್ರೈಸ್ತ ಕೂಟಗಳು ಸದಾ ಆಶೀರ್ವಾದಕರವಾಗಿವೆ

[ಪುಟ 23ರಲ್ಲಿರುವ ಚಿತ್ರಗಳು]

ತನ್ನ ಯಜ್ಞಾರ್ಪಿತ ಮರಣದ ಸ್ಮಾರಕವನ್ನು ಆಚರಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದನು

[ಪುಟ 24ರಲ್ಲಿರುವ ಚಿತ್ರ]

ಆದಿಕ್ರೈಸ್ತರಂತೆ, ಯೆಹೋವನ ಸಾಕ್ಷಿಗಳು ‘ಮೇಲಧಿಕಾರಿಗಳಿಗೆ’ ಗೌರವ ತೋರಿಸುತ್ತಾರೆ