ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನರಕದ ಬೆಂಕಿ ಎಲ್ಲಿ ಹೋಯಿತು?

ನರಕದ ಬೆಂಕಿ ಎಲ್ಲಿ ಹೋಯಿತು?

ನರಕದ ಬೆಂಕಿ ಎಲ್ಲಿ ಹೋಯಿತು?

“ನರಕ” ಎಂದಾಕ್ಷಣ ನಿಮ್ಮ ಮನಸ್ಸಿಗೆ ಯಾವ ವಿಚಾರ ಬರುತ್ತದೆ? ಅದು, ಅಂತ್ಯವಿಲ್ಲದ ಯಾತನೆ ಮತ್ತು ಸಂಕಟಗಳ, ಅಗ್ನಿಗಂಧಕಗಳಿರುವ ನಿಜವಾದ ಸ್ಥಳವಾಗಿದೆಯೆಂದು ನೀವು ನೆನಸುತ್ತೀರೊ? ಇಲ್ಲವೆ ನರಕವು ಒಂದು ಸ್ಥಿತಿಯ ಕುರಿತಾದ ಸಾಂಕೇತಿಕ ವರ್ಣನೆಯಾಗಿದೆಯೊ?

ಅನೇಕ ಶತಮಾನಗಳಿಂದ ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು, ಉರಿಯುತ್ತಿರುವ ನರಕವನ್ನು, ಪಾಪಿಗಳಿಗಾಗಿರುವ ನಿಶ್ಚಿತ ವಿಧಿಯೋಪಾದಿ ಚಿತ್ರಿಸಿದ್ದಾರೆ. ಬೇರೆ ಧಾರ್ಮಿಕ ಗುಂಪುಗಳಲ್ಲಿಯೂ ಈ ವಿಚಾರವು ಈಗಲೂ ಜನಪ್ರಿಯವಾಗಿದೆ. ಯು.ಎಸ್‌. ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಹೇಳುವುದು: “ಕ್ರೈಸ್ತ ಧರ್ಮವು ನರಕ ಎಂಬ ಪದವನ್ನು ಮನೆಮಾತಾಗಿ ಮಾಡಿದ್ದಿರಬಹುದಾದರೂ ಈ ಬೋಧನೆಯು ಕೇವಲ ಕ್ರೈಸ್ತ ಧರ್ಮದ ವಿಶೇಷತೆಯಾಗಿಲ್ಲ. ಮರಣಾನಂತರದ ವೇದನಾಭರಿತ ಪ್ರತೀಕಾರದ ಬೆದರಿಕೆಯ ಪ್ರತಿರೂಪಗಳು, ಲೋಕದ ಬಹುಮಟ್ಟಿಗೆ ಪ್ರತಿಯೊಂದು ದೊಡ್ಡ ಧರ್ಮಗಳಲ್ಲಿ ಮತ್ತು ಕೆಲವು ಚಿಕ್ಕ ಧರ್ಮಗಳಲ್ಲೂ ಇವೆ.” ಹಿಂದೂಗಳು, ಬೌದ್ಧರು, ಮುಸಲ್ಮಾನರು, ಜೈನಮತದವರು ಮತ್ತು ಟಾವೊಮತದವರು ಒಂದಲ್ಲ ಒಂದು ವಿಧದ ನರಕದಲ್ಲಿ ನಂಬುತ್ತಾರೆ.

ಆದರೆ ಆಧುನಿಕ ಯೋಚನಾಧಾಟಿಯಲ್ಲಿ ನರಕವು ಒಂದು ಹೊಸ ರೂಪವನ್ನು ತಾಳಿದೆ. “ಸಾಂಪ್ರದಾಯಿಕವಾದ ಉರಿಯುತ್ತಿರುವ ಚಿತ್ರಣವನ್ನು ಈಗಲೂ ನಂಬುವವರಿದ್ದಾರೆ,” ಎಂದು ಈ ಮುಂಚೆ ತಿಳಿಸಲ್ಪಟ್ಟಿರುವ ಪತ್ರಿಕೆಯು ಹೇಳುತ್ತದೆ. “ಆದರೆ ಅದೇ ಸಮಯದಲ್ಲಿ, ಈ ನಿತ್ಯ ದಂಡನೆಯು, ವಿಶೇಷವಾಗಿ ಅಹಿತಕರವಾದ ಒಂಟಿ ಸೆರೆಯಾಗಿದೆ ಎಂಬ ಆಧುನಿಕ ಅಭಿಪ್ರಾಯಗಳು ಉದಯಿಸುತ್ತಾ ಇವೆ ಮತ್ತು ಇವು ನರಕವು ಇಷ್ಟರ ವರೆಗೆ ನಂಬಲಾಗಿರುವಂತೆ ಅಕ್ಷರಾರ್ಥವಾಗಿ ಉರಿಯುತ್ತಿರುವ ಸ್ಥಳವಾಗಿಲ್ಲ ಎಂಬುದನ್ನು ಸೂಚಿಸುತ್ತವೆ.”

ಲಾ ಚೀವೀಲ್ಟಾ ಕಾಟಲೀಕಾ ಎಂಬ ಜೆಸ್ಯೂಟ್‌ ಪತ್ರಿಕೆಯು ಹೇಳಿದ್ದು: “ದೇವರು, ದೆವ್ವಗಳ ಮುಖಾಂತರ . . . ಖಂಡಿಸಲ್ಪಟ್ಟವರ ಮೇಲೆ ಬೆಂಕಿಯಂಥ ಭಯಾನಕ ಯಾತನೆಗಳನ್ನು ತಂದೊಡ್ಡುತ್ತಾನೆಂದು ಯೋಚಿಸುವುದು ಮೋಸಕರವಾಗಿದೆ.” ಅದು ಕೂಡಿಸಿದ್ದು: “ನರಕವು ಅಸ್ತಿತ್ವದಲ್ಲಿದೆ, ಆದರೆ ಒಂದು ಸ್ಥಳದೋಪಾದಿ ಅಲ್ಲ ಬದಲಾಗಿ ಒಂದು ಸ್ಥಿತಿಯೋಪಾದಿ, ದೇವರಿಂದ ಪ್ರತ್ಯೇಕಿಸಲ್ಪಟ್ಟಿರುವ ನೋವನ್ನು ಅನುಭವಿಸುತ್ತಿರುವ ವ್ಯಕ್ತಿಯ ಸ್ಥಿತಿಯೋಪಾದಿ ಅಸ್ತಿತ್ವದಲ್ಲಿದೆ.” 1999ರಲ್ಲಿ IIನೆಯ ಪೋಪ್‌ ಜಾನ್‌ ಪಾಲ್‌ ಹೇಳಿದ್ದು: “ನರಕವು ಒಂದು ಸ್ಥಳವಾಗಿರುವ ಬದಲು, ಅದು ಎಲ್ಲ ಜೀವ ಮತ್ತು ಆನಂದದ ಮೂಲನಾಗಿರುವ ದೇವರಿಂದ ತಮ್ಮನ್ನು ಇಷ್ಟಪೂರ್ವಕವಾಗಿ ಮತ್ತು ಪೂರ್ಣವಾಗಿ ಪ್ರತ್ಯೇಕಿಸಿಕೊಳ್ಳುವಂಥ ಒಂದು ಸ್ಥಿತಿಯನ್ನು ಸೂಚಿಸುತ್ತದೆ.” ನರಕವು ಒಂದು ಉರಿಯುತ್ತಿರುವ ಸ್ಥಳವಾಗಿದೆಯೆಂದು ತೋರಿಸುವ ಚಿತ್ರಣಗಳ ಬಗ್ಗೆ ಅವರು ಹೇಳಿದ್ದು: “ದೇವರಿಲ್ಲದ ಜೀವನವು ಎಷ್ಟು ಸಂಪೂರ್ಣವಾಗಿ ನಿರಾಶಾಜನಕ ಹಾಗೂ ಅರ್ಥಹೀನವಾಗಿರುವುದು ಎಂಬುದನ್ನು ಅವು ತೋರಿಸುತ್ತವೆ.” ಪೋಪರು ಒಂದುವೇಳೆ ನರಕವನ್ನು ‘ಅಗ್ನಿಜ್ವಾಲೆಗಳು ಮತ್ತು ಕವಲುಗೋಲು ಹಿಡಿದಿರುವ ಪಿಶಾಚನು’ ಎಂಬ ಪದಗಳನ್ನು ಉಪಯೋಗಿಸುತ್ತಾ ವರ್ಣಿಸುತ್ತಿದ್ದಲ್ಲಿ, “ಜನರು ಅದನ್ನು ನಂಬುತ್ತಿರಲಿಲ್ಲ” ಎಂದು ಚರ್ಚ್‌ ಇತಿಹಾಸಕಾರರಾದ ಮಾರ್ಟಿನ್‌ ಮಾರ್ಟೀ ಹೇಳುತ್ತಾರೆ.

ಇದೇ ರೀತಿಯ ಬದಲಾವಣೆಗಳು, ಬೇರೆ ಪಂಗಡಗಳಲ್ಲೂ ಆಗುತ್ತಾ ಇವೆ. ಚರ್ಚ್‌ ಆಫ್‌ ಇಂಗ್ಲೆಂಡ್‌ನ ಬೋಧನೆಗಳನ್ನು ಪರೀಕ್ಷಿಸುವ ಮಂಡಲಿಯ ಒಂದು ವರದಿಯು ಹೇಳಿದ್ದು: “ನರಕವು ನಿತ್ಯ ಯಾತನೆಯಲ್ಲ. ಅದರ ಬದಲು, ಸಂಪೂರ್ಣವಾಗಿ ಮತ್ತು ಖಡಾಖಂಡಿತವಾಗಿ ದೇವರಿಗೆ ವಿರೋಧವಾಗಿರುವಂಥ ಜೀವನ ರೀತಿಯನ್ನು ಅಂತಿಮವಾಗಿ ಹಾಗೂ ಬದಲಾಯಿಸಲಾಗದಂಥ ರೀತಿಯಲ್ಲಿ ಆಯ್ಕೆಮಾಡುವುದೇ ಆಗಿದೆ. ಮತ್ತು ಇದರ ಏಕಮಾತ್ರ ಅಂತ್ಯವು ಸಂಪೂರ್ಣವಾದ ಅಸ್ತಿತ್ವಹೀನತೆಯೇ ಆಗಿದೆ.”

ಅಮೆರಿಕದ ಎಪಿಸ್ಕೋಪಲ್‌ ಚರ್ಚಿನ ಪ್ರಶ್ನೋತ್ತರ ಬೋಧನೆಯು ನರಕವನ್ನು, “ನಾವು ದೇವರನ್ನು ನಿರಾಕರಿಸುವುದರಿಂದಾಗಿ ಫಲಿಸುವ ನಿತ್ಯ ಮರಣ” ಎಂದು ಅರ್ಥನಿರೂಪಿಸುತ್ತದೆ. ಹೆಚ್ಚೆಚ್ಚು ಜನರು ಪ್ರವರ್ಧಿಸುತ್ತಿರುವ ವಿಚಾರವೇನೆಂದರೆ, “ದುಷ್ಟರ ಅಂತ್ಯವು ನಾಶನವಾಗಿದೆ, ನಿತ್ಯ ಯಾತನೆಯಲ್ಲ . . . ದೇವರನ್ನು ಕಟ್ಟಕಡೆಗೆ ನಿರಾಕರಿಸುವವರು ನರಕದ ‘ದಹಿಸುವ ಬೆಂಕಿ’ಯಲ್ಲಿ ಕೇವಲ ಅಸ್ತಿತ್ವಹೀನಗೊಳಿಸಲ್ಪಡುವರು ಎಂದು [ಅವರು] ವಾದಿಸುತ್ತಾರೆ” ಎಂದು ಯು.ಎಸ್‌. ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಹೇಳುತ್ತದೆ.

ಆಧುನಿಕ ದಿನದ ಪ್ರವೃತ್ತಿಯು, ಆ ಬೆಂಕಿ ಮತ್ತು ಗಂಧಕದ ಕುರಿತಾದ ವಿಚಾರಧಾರೆಯನ್ನು ತಿರಸ್ಕರಿಸುವುದಾಗಿರುವುದಾದರೂ, ಅನೇಕರು ಈಗಲೂ ನರಕವು ಯಾತನೆಯ ನಿಜವಾದ ಸ್ಥಳವಾಗಿದೆ ಎಂಬ ನಂಬಿಕೆಗೆ ಅಂಟಿಕೊಳ್ಳುವುದನ್ನು ಮುಂದುವರಿಸುತ್ತಾರೆ. “ನರಕವು ಉರಿಯುತ್ತಿರುವ ಯಾತನೆಯ ಒಂದು ನಿಜವಾದ ಸ್ಥಳವಾಗಿದೆ ಎಂದು ಶಾಸ್ತ್ರವು ಸ್ಪಷ್ಟವಾಗಿ ಹೇಳುತ್ತದೆ” ಎಂದು ಅಮೆರಿಕದ ಕೆಂಟಕಿಯ ಲೂಯಿವಿಲ್ಲ್‌ನ ಸತರ್ನ್‌ ಬ್ಯಾಪ್ಟಿಸ್ಟ್‌ ಥಿಯೊಲಾಜಿಕಲ್‌ ಸೆಮಿನೆರಿಯ ಆಲ್ಬರ್ಟ್‌ ಮೋಲರ್‌ ಹೇಳುತ್ತಾರೆ. ಮತ್ತು ಇವಾಂಜಲಿಕಲ್‌ ಅಲಾಯನ್ಸ್‌ ಕಮಿಷನ್‌ನಿಂದ ತಯಾರಿಸಲ್ಪಟ್ಟ ನರಕದ ಸ್ವರೂಪ (ಇಂಗ್ಲಿಷ್‌) ಎಂಬ ವರದಿಯು ತಿಳಿಸುವುದು: “ನರಕವು, ನಿರಾಕರಣೆ ಮತ್ತು ಯಾತನೆಯ ಪ್ರಜ್ಞಾಶೀಲ ಅನುಭವವಾಗಿದೆ.” ಅದು ಕೂಡಿಸಿದ್ದು: “ಭೂಮಿಯ ಮೇಲೆ ಮಾಡಲ್ಪಟ್ಟ ಪಾಪಗಳ ತೀಕ್ಷ್ಣತೆಗನುಸಾರ, ನರಕದಲ್ಲಿ ಶಿಕ್ಷೆ ಮತ್ತು ಯಾತನೆಯ ಭಿನ್ನ ಭಿನ್ನ ಮಟ್ಟಗಳಿವೆ.”

ಪುನಃ ಪ್ರಶ್ನೆಯೇನೆಂದರೆ, ನರಕವು ನಿತ್ಯ ಯಾತನೆಯ ಸ್ಥಳವಾಗಿದೆಯೊ ಅಥವಾ ನಾಶನದ ಉರಿಯುತ್ತಿರುವ ಸ್ಥಳವಾಗಿದೆಯೊ? ಅಥವಾ ಅದು ಕೇವಲ ದೇವರಿಂದ ಪ್ರತ್ಯೇಕಗೊಳ್ಳುವ ಒಂದು ಸ್ಥಿತಿಯಾಗಿದೆಯೊ? ನಿಜವಾಗಿಯೂ ನರಕವೆಂದರೇನು?

[ಪುಟ 4ರಲ್ಲಿರುವ ಚೌಕ/ಚಿತ್ರಗಳು]

ನರಕಾಗ್ನಿಯ ಒಂದು ಸಂಕ್ಷಿಪ್ತ ಇತಿಹಾಸ

ಕ್ರೈಸ್ತರೆಂದು ಹೇಳಿಕೊಳ್ಳುವವರು, ನರಕಾಗ್ನಿಯ ನಂಬಿಕೆಯನ್ನು ಅಂಗೀಕರಿಸಿದ್ದು ಯಾವಾಗ? ಯೇಸು ಕ್ರಿಸ್ತನ ಮತ್ತು ಅವನ ಅಪೊಸ್ತಲರ ಬಹಳಷ್ಟು ಸಮಯದ ನಂತರವೇ. “ನರಕದಲ್ಲಿ ಪಾಪಿಗಳ ಶಿಕ್ಷೆ ಮತ್ತು ಯಾತನೆಗಳ ಕುರಿತಾಗಿ ವರ್ಣಿಸಿದ ಮೊತ್ತಮೊದಲ [ಸಂಶಯ ಪ್ರಮಾಣದ] ಕ್ರೈಸ್ತ ಕೃತಿಯು ಅಪಾಕಲಿಪ್ಸ್‌ ಆಫ್‌ ಪೀಟರ್‌ (ಸಾ.ಶ. 2ನೆಯ ಶತಮಾನ) ಆಗಿತ್ತು” ಎಂದು ಫ್ರೆಂಚ್‌ ಎನ್‌ಸೈಕ್ಲೊಪೀಡಿಯ ಯೂನಿವರ್ಸಾಲಿಸ್‌ ಹೇಳುತ್ತದೆ.

ಆದರೆ ಆರಂಭದ ಚರ್ಚ್‌ ಫಾದರ್‌ಗಳ ನಡುವೆ ನರಕದ ಕುರಿತಾಗಿ ಒಮ್ಮತವಿರಲಿಲ್ಲ. ಜಸ್ಟಿನ್‌ ಮಾರ್ಟರ್‌, ಅಲೆಕ್ಸಾಂಡ್ರಿಯದ ಕ್ಲೆಮೆಂಟ್‌, ಟೆರ್ಟಲಿಯನ್‌ ಮತ್ತು ಸಿಪ್ರಿಯನ್‌, ನರಕವು ಒಂದು ಉರಿಯುತ್ತಿರುವ ಸ್ಥಳವಾಗಿದೆ ಎಂದು ನಂಬಿದರು. ಆರಿಜೆನನೂ ನಿಸಾದ ಗ್ರೆಗರಿ ಎಂಬ ದೇವತಾಶಾಸ್ತ್ರಜ್ಞನೂ, ನರಕವು ದೇವರಿಂದ ಪ್ರತ್ಯೇಕಗೊಂಡಿರುವ ಒಂದು ಸ್ಥಳ, ಆತ್ಮಿಕ ನರಳಾಟದ ಒಂದು ಸ್ಥಳವಾಗಿದೆಯೆಂದು ನೆನಸಿದರು. ಇನ್ನೊಂದು ಕಡೆಯಲ್ಲಿ ಹಿಪ್ಪೊವಿನ ಅಗಸ್ಟಿನ್‌, ನರಕದಲ್ಲಿನ ನರಳಾಟವು ಆತ್ಮಿಕವಾದದ್ದೂ ಶಾರೀರಿಕವಾದದ್ದೂ ಆಗಿದೆ ಎಂದು ನಂಬಿದನು ಮತ್ತು ಈ ದೃಷ್ಟಿಕೋನವು ಪ್ರಖ್ಯಾತವಾಯಿತು. “ಈ ಜೀವಿತದ ನಂತರ ಪಾಪಿಗಳಿಗೆ ಎರಡನೆಯ ಅವಕಾಶವಿರುವುದಿಲ್ಲ ಮತ್ತು ಅವರನ್ನು ನುಂಗಿಬಿಡುವ ಬೆಂಕಿಯು ಎಂದಿಗೂ ನಂದಿಹೋಗದು ಎಂಬ ಕಟುವಾದ ಬೋಧನೆಯು ಐದನೆಯ ಶತಮಾನದೊಳಗೆ ಎಲ್ಲೆಡೆಯೂ ಪ್ರಧಾನವಾಗಿತ್ತು” ಎಂದು ಪ್ರೊಫೆಸರ್‌ ಜೆ.ಎನ್‌.ಡಿ. ಕೆಲಿ ಬರೆದರು.

ನರಕದಲ್ಲಿನ ಉರಿಯುವಂಥ ಯಾತನೆಯು, ನಿತ್ಯಕ್ಕೂ ದೇವರಿಂದ ಪ್ರತ್ಯೇಕರಾಗಿರುವ ಸಾಂಕೇತಿಕ ರೂಪವಾಗಿದೆಯೆಂದು 16ನೆಯ ಶತಮಾನದಲ್ಲಿ ಮಾರ್ಟಿನ್‌ ಲೂಥರ್‌ ಮತ್ತು ಜಾನ್‌ ಕ್ಯಾಲ್ವಿನ್‌ರಂಥ ಪ್ರಾಟೆಸ್ಟಂಟ್‌ ಸುಧಾರಕರು ಅರ್ಥಮಾಡಿಕೊಂಡರು. ಆದರೆ, ಮುಂದಿನ ಎರಡು ಶತಮಾನಗಳೊಳಗೆ, ನರಕವು ಯಾತನೆಯ ಸ್ಥಳವಾಗಿದೆ ಎಂಬ ವಿಚಾರವು ಪುನಃ ಬಂತು. ಜಾನತನ್‌ ಎಡ್ವರ್ಡ್ಸ್‌ ಎಂಬ ಪ್ರಾಟೆಸ್ಟಂಟ್‌ ಉಪದೇಶಕನು, ನರಕದ ಕುರಿತಾದ ಕಣ್ಣಿಗೆ ಕಟ್ಟುವಂಥ ರೀತಿಯ ವರ್ಣನೆಗಳ ಮೂಲಕ 18ನೆಯ ಶತಮಾನದ ವಸಾಹತುಶಾಹಿ ಅಮೆರಿಕನರ ಹೃದಯಗಳಲ್ಲಿ ಭಯವನ್ನು ತುಂಬಿಸುತ್ತಿದ್ದನು.

ಆದರೆ ಸ್ವಲ್ಪ ಸಮಯದ ನಂತರವೇ, ನರಕದ ಜ್ವಾಲೆಗಳು ನಂದಿಹೋಗಲಾರಂಭಿಸಿದವು. “20ನೆಯ ಶತಮಾನವು ಬಹುಮಟ್ಟಿಗೆ ನರಕದ ಸಾವಿನ ವರ್ಷವಾಗಿತ್ತು,” ಎಂದು ಯು.ಎಸ್‌. ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ತಿಳಿಸುತ್ತದೆ.

[ಚಿತ್ರಗಳು]

ನರಕವು ಒಂದು ಉರಿಯುತ್ತಿರುವ ಸ್ಥಳವಾಗಿದೆಯೆಂದು ಜಸ್ಟಿನ್‌ ಮಾರ್ಟರ್‌ ನಂಬಿದನು

ಹಿಪ್ಪೊವಿನ ಅಗಸ್ಟಿನ್‌, ನರಕದಲ್ಲಿನ ನರಳಾಟವು ಆತ್ಮಿಕವೂ ಶಾರೀರಿಕವೂ ಆಗಿದೆ ಎಂದು ಕಲಿಸಿದನು