ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನರಕವು ನಿಜವಾಗಿಯೂ ಏನಾಗಿದೆ?

ನರಕವು ನಿಜವಾಗಿಯೂ ಏನಾಗಿದೆ?

ನರಕವು ನಿಜವಾಗಿಯೂ ಏನಾಗಿದೆ?

“ನರಕ” ಎಂಬ ಪದವು ನಿಮ್ಮ ಮನಸ್ಸಿಗೆ ಯಾವುದೇ ಚಿತ್ರಣವನ್ನು ತಂದರೂ, ಅದನ್ನು ಸಾಮಾನ್ಯವಾಗಿ ಪಾಪಗಳಿಗೋಸ್ಕರ ಶಿಕ್ಷೆಯನ್ನು ಕೊಡಲಾಗುವ ಸ್ಥಳವಾಗಿ ಎಣಿಸಲಾಗುತ್ತದೆ. ಪಾಪ ಮತ್ತು ಅದರ ಪರಿಣಾಮದ ಕುರಿತಾಗಿ ಬೈಬಲ್‌ ಹೇಳುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಶಾಸ್ತ್ರಗಳು ಹೀಗೂ ತಿಳಿಸುತ್ತವೆ: “ಪಾಪವು ಕೊಡುವ ಸಂಬಳ ಮರಣ.” (ರೋಮಾಪುರ 6:23) ಪಾಪಕ್ಕಾಗಿರುವ ಶಿಕ್ಷೆಯು ಮರಣವಾಗಿರುವುದರಿಂದ, ನರಕದ ನಿಜ ಸ್ವರೂಪವೇನೆಂಬುದನ್ನು ಪತ್ತೆಹಚ್ಚುವುದರಲ್ಲಿ ಒಂದು ಮೂಲಭೂತ ಪ್ರಶ್ನೆಯು, ನಾವು ಸಾಯುವಾಗ ನಮಗೇನು ಸಂಭವಿಸುತ್ತದೆ? ಎಂಬುದೇ.

ಯಾವುದಾದರೊಂದು ರೀತಿಯ ಜೀವವು ಯಾವುದಾದರೊಂದು ರೂಪದಲ್ಲಿ ಮರಣದ ನಂತರವೂ ಬದುಕಿರುತ್ತದೊ? ನರಕ ಎಂದರೇನು, ಮತ್ತು ಯಾವ ರೀತಿಯ ಜನರು ಅಲ್ಲಿಗೆ ಹೋಗುತ್ತಾರೆ? ನರಕದಲ್ಲಿರುವವರಿಗಾಗಿ ಯಾವುದೇ ನಿರೀಕ್ಷೆಯಿದೆಯೊ? ಈ ಪ್ರಶ್ನೆಗಳಿಗೆ ಬೈಬಲ್‌ ಸತ್ಯವಾದ ಹಾಗೂ ತೃಪ್ತಿದಾಯಕ ಉತ್ತರಗಳನ್ನು ಕೊಡುತ್ತದೆ.

ಮರಣಾನಂತರದ ಜೀವನ?

ನಮ್ಮ ದೇಹದೊಳಗಿನ ಆತ್ಮದಂಥ ಏನೋ ಒಂದು ಮರಣದ ಸಮಯದಲ್ಲಿ ದೇಹದಿಂದ ಹೊರಹೋಗುತ್ತದೊ? ಪ್ರಥಮ ಮಾನವನಾದ ಆದಾಮನಿಗೆ ಜೀವ ಹೇಗೆ ಬಂತು ಎಂಬುದನ್ನು ಪರಿಗಣಿಸಿರಿ. ಬೈಬಲ್‌ ತಿಳಿಸುವುದು: “ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು.” (ಆದಿಕಾಂಡ 2:7) ಇಲ್ಲಿ ಮನುಷ್ಯನಿಗೆ ಒಂದು ಆತ್ಮವು ಕೊಡಲ್ಪಟ್ಟಿರಲಿಲ್ಲ ಎಂಬುದನ್ನು ಗಮನಿಸಿರಿ. ಹೀಗಿರುವುದರಿಂದ, ಮನುಷ್ಯನು ಪ್ರಜ್ಞೆಯುಳ್ಳ ಒಬ್ಬ ಜೀವಂತ ವ್ಯಕ್ತಿಯಾಗಿರಬೇಕಾದರೆ ಅವನೊಳಗೆ ಒಂದು ಆತ್ಮವು ವಾಸಿಸುವ ಅಗತ್ಯವಿಲ್ಲ. ಉಸಿರಾಟವು ಅವನ ಜೀವವನ್ನು ಪೋಷಿಸುತ್ತಿದ್ದರೂ, ಅವನ ಮೂಗಿನಲ್ಲಿ “ಜೀವಶ್ವಾಸವನ್ನು” ಊದುವುದರಲ್ಲಿ, ಅವನ ಶ್ವಾಸಕೋಶಗಳೊಳಗೆ ಕೇವಲ ಗಾಳಿಯನ್ನು ಊದುವುದಕ್ಕಿಂತಲೂ ಹೆಚ್ಚು ಒಳಗೂಡಿತ್ತು. ಆದಾಮನ ನಿರ್ಜೀವ ದೇಹದೊಳಗೆ, ಎಲ್ಲ ಭೂಜೀವಿಗಳಲ್ಲಿ ಸಕ್ರಿಯವಾಗಿರುವ ‘ಜೀವದ ಶಕ್ತಿ’ಯನ್ನು​—ಜೀವದ ಕಿಡಿಯನ್ನು ದೇವರು ಹಾಕಿದನೆಂದು ಇದರರ್ಥ. (ಆದಿಕಾಂಡ 7:​22, NW) ಆ ಜೀವದ ಕಿಡಿ ಇಲ್ಲವೆ ಶಕ್ತಿಯನ್ನು, ಒಂದು ಯಂತ್ರ ಅಥವಾ ಉಪಕರಣವನ್ನು ಚಲಾಯಿಸುವ ಮತ್ತು ಅದು ಅದರ ಕೆಲಸವನ್ನು ಮಾಡುವಂತೆ ಸಾಧ್ಯಗೊಳಿಸುವ ವಿದ್ಯುಚ್ಛಕ್ತಿಗೆ ಹೋಲಿಸಬಹುದು. ಆ ವಿದ್ಯುಚ್ಛಕ್ತಿಯು, ಅದು ಚಲಾಯಿಸುವಂಥ ಉಪಕರಣದ ಲಕ್ಷಣಗಳನ್ನು ಎಂದಿಗೂ ಮೈಗೂಡಿಸಿಕೊಳ್ಳದಿರುವಂತೆಯೇ, ಈ ಜೀವಶಕ್ತಿಯು ಅದು ಚೇತನಗೊಳಿಸುವಂಥ ಜೀವಿಗಳ ಯಾವುದೇ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವುದಿಲ್ಲ. ಅದಕ್ಕೆ ಅದರ ಸ್ವಂತ ವ್ಯಕ್ತಿತ್ವವಿರುವುದಿಲ್ಲ ಮತ್ತು ಯಾವುದೇ ಯೋಚನಾ ಶಕ್ತಿಯಿಲ್ಲ.

ಆದರೆ ಕೀರ್ತನೆ 146:4ರಲ್ಲಿ ಸೂಚಿಸಲ್ಪಟ್ಟಿರುವ “ಉಸಿರು” ಏನಾಗಿದೆ, ಮತ್ತು ಒಬ್ಬ ವ್ಯಕ್ತಿ ಸಾಯುವಾಗ ಅದಕ್ಕೇನಾಗುತ್ತದೆ? ಆ ವಚನವು ಹೀಗೆ ಹೇಳುತ್ತದೆ: “ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” ಬೈಬಲ್‌ ಲೇಖಕರು ಈ ವಿಧದಲ್ಲಿ “ಉಸಿರು” ಎಂಬ ಪದವನ್ನು ಬಳಸಿದಾಗ, ಅವರ ಮನಸ್ಸಿನಲ್ಲಿ ಶರೀರವು ಸತ್ತ ನಂತರವೂ ಬದುಕುತ್ತಾ ಇರುವ ದೇಹರಹಿತವಾದ ಒಂದು ಆತ್ಮದ ವಿಚಾರವಿರಲಿಲ್ಲ, ಬದಲಾಗಿ ನಮ್ಮ ಸೃಷ್ಟಿಕರ್ತನಿಂದ ಬಂದಿರುವ ಜೀವಶಕ್ತಿಗೆ ಅವರು ಸೂಚಿಸುತ್ತಿದ್ದರು. ಒಬ್ಬ ವ್ಯಕ್ತಿಯು ಸಾಯುವಾಗ, ಅವನ “ಉಸಿರು” (ಜೀವಶಕ್ತಿ) ಮಾನವ ದೇಹವನ್ನು ಪೋಷಿಸುವುದನ್ನು ನಿಲ್ಲಿಸುತ್ತದೆ, ಮತ್ತು ಇಡೀ ಮನುಷ್ಯನು ಸತ್ತುಹೋಗುತ್ತಾನೆ. (ಕೀರ್ತನೆ 104:29) ಹಾಗಾದರೆ, ಪ್ರಸಂಗಿ 12:7ರಲ್ಲಿ “ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು” ಎಂದು ಹೇಳುವಾಗ ಅದರ ಅರ್ಥ ಏನು? ಇಲ್ಲಿ “ಆತ್ಮ” ಎಂಬದಕ್ಕೆ ಉಪಯೋಗಿಸಲ್ಪಟ್ಟಿರುವ ಹೀಬ್ರು ಪದವು, ಜೀವಶಕ್ತಿಗೆ ಸೂಚಿತವಾಗಿದೆ. ಮರಣದ ಸಮಯದಲ್ಲಿ ಅದು “ದೇವರ ಬಳಿಗೆ ಸೇರು”ವುದರ ಅರ್ಥ, ಆ ವ್ಯಕ್ತಿಯ ಭಾವೀ ಜೀವನದ ಯಾವುದೇ ನಿರೀಕ್ಷೆಯು ಈಗ ಸಂಪೂರ್ಣವಾಗಿ ದೇವರ ಕೈಯಲ್ಲಿದೆ ಎಂಬುದೇ.

ಹಾಗಾದರೆ, ಸತ್ತವರ ಸ್ಥಿತಿ ಏನಾಗಿದೆ? ಆದಾಮನಿಗೆ ದಂಡನೆಯನ್ನು ವಿಧಿಸುವಾಗ ಯೆಹೋವನು ಹೀಗಂದನು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ದೇವರು ಆದಾಮನನ್ನು ಭೂಮಿಯ ಮಣ್ಣಿನಿಂದ ರಚಿಸಿ, ಅವನಿಗೆ ಜೀವವನ್ನು ಕೊಡುವುದಕ್ಕೆ ಮುಂಚೆ ಆದಾಮನು ಎಲ್ಲಿದ್ದನು? ಅವನು ಅಸ್ತಿತ್ವದಲ್ಲೇ ಇರಲಿಲ್ಲ! ಆದಾಮನು ಸತ್ತಾಗ, ಅವನು ಸಂಪೂರ್ಣವಾಗಿ ಅಸ್ತಿತ್ವಹೀನ ಸ್ಥಿತಿಗೆ ಹಿಂದಿರುಗಿದನು. ಸತ್ತವರ ಸ್ಥಿತಿಯೇನಾಗಿದೆ ಎಂಬುದು ಪ್ರಸಂಗಿ 9:​5, 10ರಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” ಬೈಬಲಿಗನುಸಾರ, ಮರಣವು ಅಸ್ತಿತ್ವಹೀನ ಸ್ಥಿತಿಯಾಗಿದೆ. ಸತ್ತವರಿಗೆ ಯಾವುದೇ ಪ್ರಜ್ಞೆಯಿಲ್ಲ, ಭಾವನೆಗಳಿಲ್ಲ ಮತ್ತು ಯೋಚನೆಗಳಿಲ್ಲ.

ಅಂತ್ಯವಿಲ್ಲದ ಯಾತನೆಯೊ, ಸರ್ವಸಾಮಾನ್ಯ ಸಮಾಧಿಯೊ?

ಸತ್ತವರಿಗೆ ಯಾವುದೇ ಪ್ರಜ್ಞಾವಂತ ಅಸ್ತಿತ್ವವೇ ಇಲ್ಲದಿರುವುದರಿಂದ, ದುಷ್ಟರು ಸತ್ತನಂತರ ನರಳುವಂಥ, ನರಕವೆಂದು ಕರೆಯಲ್ಪಡುವ ಉರಿಯುತ್ತಿರುವ ಸ್ಥಳವು ಇರಲು ಸಾಧ್ಯವಿಲ್ಲ. ಬೈಬಲ್‌ ಲೇಖಕರು ಹೇಡೀಸ್‌ ಎಂಬ ಗ್ರೀಕ್‌ ಪದವನ್ನು ಉಪಯೋಗಿಸಿರುವುದರಿಂದ ಗಲಿಬಿಲಿ ಹುಟ್ಟಿಕೊಂಡಿದೆ. ಏಕೆಂದರೆ ಈ ಪದವನ್ನು ಪ್ರಾಚೀನ ಗ್ರೀಕರು, ಎಲ್ಲಿ ಸತ್ತವರ ಆತ್ಮಗಳು ಶಿಕ್ಷಿಸಲ್ಪಡುತ್ತಿದ್ದವೆಂದು ನಂಬಲಾಗುತ್ತಿತ್ತೊ ಅಂಥ ಒಂದು ನರಕಸದೃಶ ಲೋಕವನ್ನು ಸೂಚಿಸಲು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಕೆಲವು ಸ್ಥಳಗಳಲ್ಲಿ ಈ ಪದವನ್ನು ನರಕ ಎಂದೂ ಭಾಷಾಂತರಿಸಲಾಗಿದೆ. ಆದರೆ ಬೈಬಲ್‌ ಲೇಖಕರು ಹೇಡೀಸ್‌ ಎಂಬ ಪದವನ್ನು ಬಳಸಿದಾಗ ಅವರು ಏನನ್ನು ಅರ್ಥೈಸಿದರು? ನಮ್ಮ ಕನ್ನಡ ಬೈಬಲಿನಲ್ಲಿ ಈ ಪದವು ಹೇಗೆ ಭಾಷಾಂತರಿಸಲ್ಪಟ್ಟಿದೆ ಎಂಬುದನ್ನು ಪರೀಕ್ಷಿಸುವುದು, ಆ ಪ್ರಶ್ನೆಯನ್ನು ಉತ್ತರಿಸಲು ಸಹಾಯಮಾಡುತ್ತದೆ. ಯೇಸು ಸತ್ತಬಳಿಕ ಅವನಿಗೇನಾಯಿತು ಎಂಬುದನ್ನು ಬೈಬಲ್‌ ಲೇಖಕ ಲೂಕನು ವರ್ಣಿಸುತ್ತಾನೆ: ‘[ಯೇಸು] ಪಾತಾಳದಲ್ಲಿ [ಗ್ರೀಕ್‌, “ಹೇಡೀಸ್‌ನಲ್ಲಿ”] ಬಿಡಲ್ಪಡಲಿಲ್ಲ ಮತ್ತು ಆತನ ಶರೀರವು ಕೊಳೆಯುವ ಅವಸ್ಥೆಯನ್ನನುಭವಿಸಲಿಲ್ಲ.” * (ಅ. ಕೃತ್ಯಗಳು 2:31) ಯೇಸು ಎಲ್ಲಿಗೆ ಹೋದನೊ ಆ ಪಾತಾಳ ಇಲ್ಲವೆ ಹೇಡೀಸ್‌ ಎಲ್ಲಿತ್ತು? ಅಪೊಸ್ತಲ ಪೌಲನು ಹೀಗೆ ಬರೆದನು: “ನಾನು . . . ಒಂದು ಸಂಗತಿಯನ್ನು ನಿಮಗೆ ತಿಳಿಸಿಕೊಟ್ಟೆನು. . . . ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.” (1 ಕೊರಿಂಥ 15:3, 4) ಹಾಗಾದರೆ ಯೇಸು ಪಾತಾಳ ಇಲ್ಲವೆ ಹೇಡೀಸ್‌ನಲ್ಲಿ, ಅಂದರೆ ಸಮಾಧಿಯಲ್ಲಿದ್ದನು. ಆದರೆ ಅವನು ಅಲ್ಲೇ ಬಿಡಲ್ಪಡಲಿಲ್ಲ, ಯಾಕೆಂದರೆ ಅವನು ಉಜ್ಜೀವಿಸಲ್ಪಟ್ಟನು ಇಲ್ಲವೆ ಪುನರುತ್ಥಾನಗೊಳಿಸಲ್ಪಟ್ಟನು.

ಬಹಳಷ್ಟು ನರಳಾಟವನ್ನು ಅನುಭವಿಸಿದ ನೀತಿವಂತ ಪುರುಷನಾದ ಯೋಬನನ್ನೂ ಪರಿಗಣಿಸಿರಿ. ತನ್ನ ಆ ಅವಸ್ಥೆಯಿಂದ ಬಿಡುಗಡೆಗಾಗಿ ಹಾತೊರೆಯುತ್ತಾ ಅವನು ಬೇಡಿಕೊಂಡದ್ದು: “ನೀನು ನನ್ನನ್ನು ಪಾತಾಳದಲ್ಲಿ [ಹೀಬ್ರು “ಷೀಆಲ್‌,” ಗ್ರೀಕ್‌ “ಹೇಡೀಸ್‌”] ಬಚ್ಚಿಟ್ಟು ನಿನ್ನ ಕೋಪವು ಇಳಿಯುವ ಪರ್ಯಂತ ನನ್ನನ್ನು ಮರೆಮಾಡಿ ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!” (ಯೋಬ 14:13) * ಸಂರಕ್ಷಣೆಗಾಗಿ ಯೋಬನು ಬೆಂಕಿಯಿಂದ ಕಾದಿರುವಂಥ ಒಂದು ಸ್ಥಳಕ್ಕೆ ಹೋಗಲು ಆಶಿಸಿದನೆಂದು ಯೋಚಿಸುವುದು ಎಷ್ಟು ಮೂರ್ಖ ಸಂಗತಿಯಾಗಿದೆ! ಯೋಬನಿಗೆ “ಷೀಆಲ್‌” ಇಲ್ಲವೆ “ಹೇಡೀಸ್‌” ಕೇವಲ ಪಾತಾಳ ಇಲ್ಲವೆ ಸಮಾಧಿಯಾಗಿತ್ತು. ಅಲ್ಲಿ ಅವನ ನರಳಾಟವು ಕೊನೆಗೊಳ್ಳಲಿತ್ತು. ಹಾಗಾದರೆ ಬೈಬಲಿನ ಷೀಆಲ್‌ ಇಲ್ಲವೆ ಹೇಡೀಸ್‌, ಒಳ್ಳೇ ಜನರೂ ಕೆಟ್ಟ ಜನರೂ ಹೀಗೆ ಎಲ್ಲರೂ ಹೋಗುವಂಥ ಮಾನವಕುಲದ ಸಾಮಾನ್ಯ ಸಮಾಧಿ ಆಗಿದೆ ಅಷ್ಟೇ.

ಉರಿಯುತ್ತಿರುವ ನರಕ​—ಸರ್ವ ನಾಶಕ?

ನರಕದ ಬೆಂಕಿಯು ಸರ್ವವನ್ನೂ ನಾಶಮಾಡುವಂಥ ಇಲ್ಲವೆ ಸಂಪೂರ್ಣ ನಾಶನದ ಸಾಂಕೇತಿಕ ಪದವಾಗಿರಬಹುದೊ? ಪ್ರಕಟನೆ 20:14ರಲ್ಲಿ ಬೆಂಕಿಯನ್ನು ಹೇಗೆ ಉಪಯೋಗಿಸಲಾಗಿದೆ ಎಂಬುದನ್ನು ಗಮನಿಸಿರಿ. ಅದು ಹೇಳುವುದು: “ಮೃತ್ಯುವೂ ಪಾತಾಳವೂ (ಗ್ರೀಕ್‌, ಹೇಡೀಸ್‌) ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು.” ಇಲ್ಲಿ ತಿಳಿಸಲ್ಪಟ್ಟಿರುವ “ಕೆರೆ” ಸಾಂಕೇತಿಕವಾಗಿದೆ, ಯಾಕೆಂದರೆ ಅದರೊಳಗೆ ಎಸೆಯಲ್ಪಡುವ ಮರಣ ಮತ್ತು ಪಾತಾಳವು (ಹೇಡೀಸ್‌) ಅಕ್ಷರಶಃವಾಗಿ ಸುಡಲು ಸಾಧ್ಯವಾಗದಂಥ ಸಂಗತಿಗಳಾಗಿವೆ. “ಆ ಬೆಂಕಿಯ ಕೆರೆಯೇ ಎರಡನೆಯ ಮರಣವು,” ಅಂದರೆ ಪುನಃ ಉಜ್ಜೀವಿಸುವ ನಿರೀಕ್ಷೆಯಿಲ್ಲದಂಥ ಮರಣ.​—ಪ್ರಕಟನೆ 20:14.

ಈ ಬೆಂಕಿಯ ಕೆರೆಗೂ, ಯೇಸು ಯಾವುದರ ಬಗ್ಗೆ ಮಾತಾಡಿದನೊ ಆ “ಅಗ್ನಿನರಕ [ಗ್ರೀಕ್‌, ಗಿಹೆನ]”ಕ್ಕೂ ಒಂದೇ ರೀತಿಯ ಅರ್ಥವಿದೆ. (ಮತ್ತಾಯ 5:22; ಮಾರ್ಕ 9:​47, 48) ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಗಿಹೆನ ಎಂಬ ಪದವು 12 ಬಾರಿ ಕಂಡುಬರುತ್ತದೆ, ಮತ್ತು ಅದು ಯೆರೂಸಲೇಮಿನ ಗೋಡೆಗಳ ಹೊರಗಿದ್ದ ಹಿನ್ನೋಮ್‌ ಕಣಿವೆಗೆ ಸೂಚಿತವಾಗಿದೆ. ಯೇಸು ಭೂಮಿಯ ಮೇಲಿದ್ದಾಗ, ಈ ಕಣಿವೆಯನ್ನು ಒಂದು ಕಸದ ತಿಪ್ಪೆಯಾಗಿ ಉಪಯೋಗಿಸಲಾಗುತ್ತಿತ್ತು ಮತ್ತು “ಅಲ್ಲಿ ಅಪರಾಧಿಗಳ ಶವಗಳು, ಪ್ರಾಣಿಗಳ ಕಳೇಬರಗಳು ಮತ್ತು ಪ್ರತಿಯೊಂದು ವಿಧದ ಕೊಳಕು ಎಸೆಯಲ್ಪಡುತ್ತಿತ್ತು.” (ಸ್ಮಿತ್ಸ್‌ ಡಿಕ್ಷನೆರಿ ಆಫ್‌ ದ ಬೈಬಲ್‌) ಕಸವನ್ನು ಸುಡಲಿಕ್ಕಾಗಿ ಗಂಧಕವನ್ನು ಹಾಕುತ್ತಾ ಇರುವ ಮೂಲಕ ಬೆಂಕಿಯು ಯಾವಾಗಲೂ ಉರಿಯುತ್ತಾ ಇತ್ತು. ಹೀಗಿರುವುದರಿಂದ ಯೇಸು ಆ ಕಣಿವೆಯನ್ನು ನಿತ್ಯ ನಾಶನದ ಯೋಗ್ಯ ಪ್ರತೀಕವಾಗಿ ಉಪಯೋಗಿಸಿದನು.

ಗಿಹೆನದಂತೆಯೇ, ಬೆಂಕಿಯ ಕೆರೆಯು ನಿತ್ಯ ನಾಶನವನ್ನು ಸಂಕೇತಿಸುತ್ತದೆ. ಮರಣ ಮತ್ತು ಪಾತಾಳವು (ಹೇಡೀಸ್‌) ಅದರೊಳಗೆ ‘ದೊಬ್ಬಲ್ಪಡುವುದರ’ ಅರ್ಥ, ಮಾನವಕುಲವು ಪಾಪದಿಂದ ಮತ್ತು ಮರಣದ ಖಂಡನೆಯಿಂದ ವಿಮೋಚಿಸಲ್ಪಡುವಾಗ, ಅವು ಸಂಪೂರ್ಣವಾಗಿ ನಿರ್ಮೂಲಗೊಳಿಸಲ್ಪಡುವವು ಎಂದೇ. ಉದ್ದೇಶಪೂರ್ವಕ, ಪಶ್ಚಾತ್ತಾಪರಹಿತ ಪಾಪಿಗಳಿಗೂ ಆ ಕೆರೆಯಲ್ಲಿ “ಪಾಲು” ಇರುವುದು. (ಪ್ರಕಟನೆ 21:8) ಅವರೂ ಸದಾಕಾಲಕ್ಕಾಗಿ ನಾಶಗೊಳಿಸಲ್ಪಡುವರು. ಆದರೆ ಇನ್ನೊಂದು ಬದಿಯಲ್ಲಿ, ಪಾತಾಳದಲ್ಲಿ (ಹೇಡೀಸ್‌)​—ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿ​—ಇದ್ದರೂ ದೇವರ ಸ್ಮರಣೆಯಲ್ಲಿರುವವರಿಗೆ ಒಂದು ಅದ್ಭುತ ಭವಿಷ್ಯವಿದೆ.

ಹೇಡೀಸ್‌ ಬರಿದಾಗುವುದು!

ಪ್ರಕಟನೆ 20:13 ಹೇಳುವುದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ (ಹೇಡೀಸ್‌) ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.” ಹೌದು, ಬೈಬಲಿನ ಪಾತಾಳವು ಖಾಲಿಗೊಳಿಸಲ್ಪಡುವುದು. ಯೇಸು ಮಾತುಕೊಟ್ಟಂತೆ, “ಸಮಾಧಿಗಳಲ್ಲಿರುವವರೆಲ್ಲರು [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ಯೆಹೋವ ದೇವರ ಸ್ಮರಣೆಯಲ್ಲಿರುವ, ಆದರೆ ಸದ್ಯಕ್ಕೆ ಯಾವುದೇ ರೂಪದಲ್ಲಿ ಅಸ್ತಿತ್ವದಲ್ಲಿರದಂಥ ಲಕ್ಷಾಂತರ ಮಂದಿ ಮೃತರು, ಪುನಸ್ಸ್ಥಾಪಿತ ಭೂಪರದೈಸಿನಲ್ಲಿ ಪುನರುತ್ಥಾನಗೊಳಿಸಲ್ಪಡುವರು ಇಲ್ಲವೆ ಪುನಃ ಉಜ್ಜೀವಿಸಲ್ಪಡುವರು.​—ಲೂಕ 23:43; ಅ. ಕೃತ್ಯಗಳು 24:15.

ದೇವರ ನೂತನ ಲೋಕದಲ್ಲಿ, ಆತನ ನೀತಿಯ ನಿಯಮಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಪುನರುತ್ಥಿತ ಮಾನವರಿಗೆ ಪುನಃ ಸಾಯುವ ಆವಶ್ಯಕತೆ ಇರದು. (ಯೆಶಾಯ 25:8) ಯೆಹೋವನು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” ವಾಸ್ತವದಲ್ಲಿ “ಮೊದಲಿದ್ದದ್ದೆಲ್ಲಾ ಇಲ್ಲದೆ” ಹೋಗುವುದು. (ಪ್ರಕಟನೆ 21:4) ಪಾತಾಳದಲ್ಲಿರುವವರೆಲ್ಲರಿಗೆ (ಹೇಡೀಸ್‌)​—ಸಮಾಧಿಗಳಲ್ಲಿರುವವರೆಲ್ಲರಿಗೆ​—ಎಂಥ ಸಂತೋಷಕರ ಪ್ರತೀಕ್ಷೆಯಿದೆ! ಈ ಆಶೀರ್ವಾದವು ತಾನೇ ನಾವು ಯೆಹೋವ ದೇವರು ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಸಾಕಷ್ಟು ದೊಡ್ಡ ಕಾರಣವಾಗಿದೆ.​—ಯೋಹಾನ 17:3.

[ಪಾದಟಿಪ್ಪಣಿಗಳು]

^ ಪ್ಯಾರ. 9 ಕನ್ನಡ ಬೈಬಲಿನಲ್ಲಿ, ಹೇಡೀಸ್‌ ಎಂಬ ಗ್ರೀಕ್‌ ಪದವನ್ನು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಕಂಡುಬರುವ ಹತ್ತಕ್ಕಿಂತಲೂ ಹೆಚ್ಚು ಸಂದರ್ಭಗಳಲ್ಲಿ “ಪಾತಾಳ” ಎಂದು ಭಾಷಾಂತರಿಸಲಾಗಿದೆ. ಲೂಕ 16:19-31ರಲ್ಲಿರುವ ವರ್ಣನೆಯು ಪಾತಾಳದಲ್ಲಿನ ಯಾತನೆಯ ಬಗ್ಗೆಯೂ ತಿಳಿಸುತ್ತದಾದರೂ, ಆ ಇಡೀ ವೃತ್ತಾಂತದ ಅರ್ಥವು ಸಾಂಕೇತಿಕವಾಗಿದೆ. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಎಂಬ ಪುಸ್ತಕದ ಅಧ್ಯಾಯ 88ನ್ನು ನೋಡಿರಿ.

^ ಪ್ಯಾರ. 10 ಮೂಲ ಹೀಬ್ರು ಶಾಸ್ತ್ರಗಳಲ್ಲಿ, ಷೀಆಲ್‌ ಎಂಬ ಹೀಬ್ರು ಪದವು 65 ಬಾರಿ ಕಂಡುಬರುತ್ತದೆ, ಮತ್ತು ಅದನ್ನು ಕನ್ನಡ ಬೈಬಲಿನಲ್ಲಿ “ಪಾತಾಳ,” “ಸಮಾಧಿ,” ಮತ್ತು “ಮೃತ್ಯು” ಎಂದು ಭಾಷಾಂತರಿಸಲಾಗಿದೆ.

[ಪುಟ 5ರಲ್ಲಿರುವ ಚಿತ್ರ]

ಯೋಬನು ಪಾತಾಳದಲ್ಲಿನ ಸಂರಕ್ಷಣೆಗಾಗಿ ಪ್ರಾರ್ಥಿಸಿದನು

[ಪುಟ 6ರಲ್ಲಿರುವ ಚಿತ್ರ]

ಉರಿಯುತ್ತಿರುವ ನರಕ​—ನಿತ್ಯ ನಾಶನದ ಪ್ರತೀಕ

[ಪುಟ 7ರಲ್ಲಿರುವ ಚಿತ್ರ]

‘ಸಮಾಧಿಗಳಲ್ಲಿರುವವರೆಲ್ಲರೂ ಹೊರಗೆ ಬರುವರು’