ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಕ್ರೈಸ್ತ ಸ್ತ್ರೀಯೊಬ್ಬಳು ಆತ್ಮಿಕ ಕಾರಣಗಳಿಗಾಗಿ ಯಾವ ಸಂದರ್ಭಗಳಲ್ಲಿ ತಲೆಗೆ ಮುಸುಕು ಹಾಕಿಕೊಳ್ಳುವುದು ಯೋಗ್ಯವಾಗಿದೆ?

“ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ,” ಎಂದು ಅಪೊಸ್ತಲ ಪೌಲನು ಬರೆದನು. ಏಕೆ? ತಲೆತನದ ಸಂಬಂಧದಲ್ಲಿರುವ “ಸ್ತ್ರೀಗೆ ಪುರುಷನು ತಲೆ” ಎಂಬ ದೈವಿಕ ಮೂಲತತ್ತ್ವದ ಕಾರಣವೇ. ಕ್ರೈಸ್ತ ಸಭೆಯಲ್ಲಿ ಪ್ರಾರ್ಥಿಸುವುದಾಗಲಿ, ಸಾರುವುದಾಗಲಿ, ಸಾಮಾನ್ಯವಾಗಿ ಪುರುಷನ ಜವಾಬ್ದಾರಿಯಾಗಿದೆ. ಈ ಕಾರಣದಿಂದ, ಗಂಡನಿಂದ ಅಥವಾ ಇನ್ನೊಬ್ಬ ಸ್ನಾತ ಪುರುಷನಿಂದ ಸಾಧಾರಣವಾಗಿ ಮಾಡಲಾಗುವ ಆರಾಧನಾ ಸಂಬಂಧದ ವಿಷಯಗಳನ್ನು ಒಬ್ಬ ಕ್ರೈಸ್ತ ಸ್ತ್ರೀಯು ನೋಡಿಕೊಳ್ಳುವಲ್ಲಿ ಆಕೆ ತಲೆಗೆ ಮುಸುಕನ್ನು ಹಾಕಿಕೊಳ್ಳಬೇಕು.​—1 ಕೊರಿಂಥ 11:​3-10.

ಕ್ರೈಸ್ತ ಸ್ತ್ರೀಯೊಬ್ಬಳು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕಾದ ಸಂದರ್ಭವು ಆಕೆಯ ವೈವಾಹಿಕ ಸಂಬಂಧದಲ್ಲಿಯೇ ಬರಬಹುದು. ದೃಷ್ಟಾಂತಕ್ಕೆ, ಕುಟುಂಬವು ಬೈಬಲ್‌ ಅಧ್ಯಯನಕ್ಕೊ ಭೋಜನಕ್ಕೊ ಕೂಡಿಬರುವಾಗ, ಅವರಿಗೆ ಬೋಧಿಸುವುದರಲ್ಲಿ ಮತ್ತು ದೇವರಿಗೆ ಪ್ರಾರ್ಥಿಸುವುದರಲ್ಲಿ ಸಾಮಾನ್ಯವಾಗಿ ನಾಯಕತ್ವ ವಹಿಸುವವನು ಗಂಡನಾಗಿದ್ದಾನೆ. ಆದರೆ ಅವನು ಅವಿಶ್ವಾಸಿಯಾಗಿರುವಲ್ಲಿ, ಆ ಜವಾಬ್ದಾರಿಯು ಅವನ ಹೆಂಡತಿಯ ಮೇಲೆ ಬೀಳುತ್ತದೆ. ಆದುದರಿಂದ, ತನ್ನ ಪರವಾಗಿಯಾಗಲಿ ಬೇರೆಯವರ ಪರವಾಗಿಯಾಗಲಿ ಆಕೆ ಗಟ್ಟಿಯಾಗಿ ಪ್ರಾರ್ಥಿಸುವಲ್ಲಿ ಅಥವಾ ಆಕೆಯ ಗಂಡನು ಅಲ್ಲಿ ಉಪಸ್ಥಿತನಿರುವಾಗ ಆಕೆ ಮಕ್ಕಳೊಂದಿಗೆ ಬೈಬಲ್‌ ಅಧ್ಯಯನ ನಡೆಸುವಲ್ಲಿ, ಕ್ರೈಸ್ತ ಸಹೋದರಿಯು ಸಮಂಜಸವಾಗಿಯೇ ತಲೆಗೆ ಮುಸುಕನ್ನು ಹಾಕಿಕೊಳ್ಳುತ್ತಾಳೆ. ಆಕೆಯ ಗಂಡನು ಉಪಸ್ಥಿತನಿಲ್ಲದಿರುವಲ್ಲಿ, ಹೆಂಡತಿಯು ತಲೆಯನ್ನು ಮುಚ್ಚಿಕೊಳ್ಳುವ ಅಗತ್ಯವಿಲ್ಲ, ಏಕೆಂದರೆ ತನ್ನ ಮಕ್ಕಳಿಗೆ ಕಲಿಸುವ ದೈವಿಕ ಅಧಿಕಾರ ಆಕೆಗಿದೆ.​—ಜ್ಞಾನೋಕ್ತಿ 1:8; 6:20.

ಆದರೆ ಆ ಕುಟುಂಬದಲ್ಲಿ ಯೆಹೋವ ದೇವರ ಸಮರ್ಪಿತ, ಸ್ನಾತ ಸೇವಕನಾಗಿರುವ ಚಿಕ್ಕ ಪ್ರಾಯದ ಮಗನಿರುವಲ್ಲಿ ಆಗೇನು? ಆ ಮಗನು ಕ್ರೈಸ್ತ ಸಭೆಯ ಸದಸ್ಯನಾಗಿರುವುದರಿಂದ, ಅವನಿಗೆ ಆ ಸಭೆಯ ಪುರುಷ ಸದಸ್ಯರಿಂದ ಉಪದೇಶ ದೊರೆಯಬೇಕು. (1 ತಿಮೊಥೆಯ 2:12) ಅವನ ತಂದೆಯು ವಿಶ್ವಾಸಿಯಾಗಿರುವಲ್ಲಿ, ಆ ಮಗನಿಗೆ ಅವನ ತಂದೆಯು ಕಲಿಸಬೇಕು. ಆದರೂ, ತಂದೆ ಉಪಸ್ಥಿತನಿಲ್ಲದಿರುವಲ್ಲಿ, ಆ ಚಿಕ್ಕ ಪ್ರಾಯದ ಸ್ನಾತ ಮಗನೊಂದಿಗೆ ಮತ್ತು ಇತರ ಮಕ್ಕಳೊಂದಿಗೆ ಬೈಬಲ್‌ ಅಧ್ಯಯನ ಮಾಡುವಾಗ ತಾಯಿಯು ತಲೆಗೆ ಮುಸುಕು ಹಾಕಿಕೊಳ್ಳಬೇಕು. ಅಂತಹ ಅಧ್ಯಯನದ ಅಥವಾ ಭೋಜನದ ಸಮಯದಲ್ಲಿ ಪ್ರಾರ್ಥಿಸುವಂತೆ ಆ ಸ್ನಾತ ಮಗನನ್ನು ಕೇಳಿಕೊಳ್ಳಬೇಕೊ ಬೇಡವೊ ಎಂಬುದು ಅವಳ ನಿರ್ಣಯವಾಗಿರುತ್ತದೆ. ಅವನಿನ್ನೂ ಸಾಕಷ್ಟು ಸಮರ್ಥನಾಗಿಲ್ಲ ಎಂಬ ಅಭಿಪ್ರಾಯ ಅವಳಿಗಿದ್ದು, ತಾನೇ ಪ್ರಾರ್ಥನೆ ಮಾಡಲು ಆಕೆ ನಿರ್ಣಯಿಸಬಹುದು. ಆದರೆ ಆ ಸಂದರ್ಭದಲ್ಲಿ ಆಕೆ ಪ್ರಾರ್ಥಿಸಲು ನಿರ್ಣಯಿಸುವಲ್ಲಿ, ಆಕೆಯು ತಲೆಯನ್ನು ಮುಚ್ಚಿಕೊಳ್ಳಬೇಕು.

ಸಭೆಯ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸುವಾಗಲೂ ಕ್ರೈಸ್ತ ಸ್ತ್ರೀಯರು ತಲೆಗೆ ಮುಸುಕು ಹಾಕಿಕೊಳ್ಳುವ ಅಗತ್ಯವಿರಬಹುದು. ಉದಾಹರಣೆಗೆ, ವಾರದ ಮಧ್ಯದಲ್ಲಿ ಕ್ಷೇತ್ರ ಸೇವೆಗೆ ಕೂಡಿಬರುವಾಗ, ಸ್ನಾತ ಸಹೋದರರು ಇಲ್ಲದಿರುವ ಮತ್ತು ಕೇವಲ ಕ್ರೈಸ್ತ ಸ್ತ್ರೀಯರೇ ಇರುವ ಸಂದರ್ಭ ಬರಬಹುದು. ಬೇರೆ ಸಂದರ್ಭಗಳಲ್ಲಿ, ಸ್ನಾತ ಸಹೋದರರು ಸಭಾ ಕೂಟದಲ್ಲಿಯೂ ಉಪಸ್ಥಿತರಿಲ್ಲದಿರಬಹುದು. ಸಭೆಯು ಏರ್ಪಡಿಸಿದ ಕೂಟಗಳಲ್ಲಿ ಇಲ್ಲವೆ ಕ್ಷೇತ್ರ ಸೇವೆಗಾಗಿರುವ ಕೂಟದಲ್ಲಿ, ಸಾಮಾನ್ಯವಾಗಿ ಸಹೋದರರು ವಹಿಸಿಕೊಳ್ಳುವ ಕರ್ತವ್ಯಗಳನ್ನು ಒಬ್ಬ ಸಹೋದರಿಯು ನಿರ್ವಹಿಸಬೇಕಾಗಿರುವುದಾದರೆ, ಆಕೆ ತಲೆಗೆ ಮುಸುಕು ಹಾಕಿಕೊಳ್ಳಬೇಕು.

ಆದರೆ, ಬೈಬಲ್‌ ಭಾಷಣಗಳನ್ನು ಬಾಯಿಮಾತಿನಿಂದಲೊ ಸನ್ನೆಭಾಷೆಯಿಂದಲೊ ಭಾಷಾಂತರಿಸುವಾಗ ಅಥವಾ ಸಭಾ ಕೂಟದಲ್ಲಿ ಉಪಯೋಗಿಸಲ್ಪಡುವ ಬೈಬಲ್‌ ಅಧ್ಯಯನ ಸಹಾಯಕ ಪುಸ್ತಕದಿಂದ ಬಹಿರಂಗವಾಗಿ ಓದುವಾಗ, ಕ್ರೈಸ್ತ ಸ್ತ್ರೀಯು ತಲೆಗೆ ಮುಸುಕು ಹಾಕಿಕೊಳ್ಳಬೇಕೊ? ಹಾಕಿಕೊಳ್ಳಬಾರದು. ಏಕೆಂದರೆ ಈ ಕರ್ತವ್ಯವನ್ನು ಮಾಡುವ ಸ್ತ್ರೀಯರು ಅಧ್ಯಕ್ಷತೆ ವಹಿಸುತ್ತಿಲ್ಲ, ಅಥವಾ ಬೋಧಿಸುತ್ತಿಲ್ಲ. ಅದೇ ರೀತಿಯಲ್ಲಿ, ಪ್ರತ್ಯಕ್ಷಾಭಿನಯ ಮಾಡುವಾಗ, ಅನುಭವಗಳನ್ನು ಹೇಳುವಾಗ ಅಥವಾ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ವಿದ್ಯಾರ್ಥಿ ಭಾಷಣಗಳನ್ನು ಕೊಡುವಾಗ ಸಹೋದರಿಯರು ತಲೆಯನ್ನು ಮುಚ್ಚಿಕೊಳ್ಳಬೇಕೆಂದು ಅಪೇಕ್ಷಿಸಲಾಗುವುದಿಲ್ಲ.

ಸಭೆಯೊಳಗೆ ನಡೆಸಲ್ಪಡುವ ಬೋಧಿಸುವಿಕೆಯು ಸ್ನಾತ ಪುರುಷರಿಂದ ಮಾಡಲ್ಪಟ್ಟರೂ, ಸಭೆಯ ಹೊರಗಡೆ ಸಾರುವ ಮತ್ತು ಬೋಧಿಸುವ ಜವಾಬ್ದಾರಿಯು ಪುರುಷರಿಗೂ ಇದೆ, ಸ್ತ್ರೀಯರಿಗೂ ಇದೆ. (ಮತ್ತಾಯ 24:14; 28:19, 20) ಆದುದರಿಂದ, ಕ್ರೈಸ್ತ ಸ್ತ್ರೀಯು ಯೆಹೋವನ ಸಾಕ್ಷಿಯಾದ ಪುರುಷನೊಂದಿಗೆ ದೇವರ ವಾಕ್ಯದ ಬಗ್ಗೆ ಹೊರಗಿನವರೊಂದಿಗೆ ಮಾತಾಡುವಾಗ, ಆಕೆ ತಲೆಗೆ ಮುಸುಕು ಹಾಕಿಕೊಳ್ಳಬೇಕೆಂದಿರುವುದಿಲ್ಲ.

ಆದರೆ ಒಂದು ಮನೆಯಲ್ಲಿ ಕ್ರಮವಾದ, ನಿಯಮಿತ ಬೈಬಲ್‌ ಅಧ್ಯಯನವು ನಡೆಸಲ್ಪಡುವಾಗ ಸನ್ನಿವೇಶ ಬೇರೆಯಾಗಿರುತ್ತದೆ. ಇದು ಪೂರ್ವನಿಯಮಿತ ಬೋಧನಾ ಕಾರ್ಯಕ್ರಮವಾಗಿದ್ದು, ಅಧ್ಯಯನ ಚಾಲಕನು ವಾಸ್ತವವಾಗಿ ಅಧ್ಯಕ್ಷತೆ ವಹಿಸುತ್ತಾನೆ. ಇಂತಹ ಪರಿಸ್ಥಿತಿಗಳಲ್ಲಿ ಅಧ್ಯಯನವು ಸಭೆಯ ನಮೂನೆಗನುಸಾರ ನಡೆಯುತ್ತದೆ. ಆದುದರಿಂದ, ಸ್ನಾತಳಾದ ಸಾಕ್ಷಿ ಸ್ತ್ರೀಯು, ಸ್ನಾತ ಸಾಕ್ಷಿಯೊಬ್ಬನು ಉಪಸ್ಥಿತನಿರುವಾಗ ಅಂತಹ ಅಧ್ಯಯನವನ್ನು ನಡೆಸುವಲ್ಲಿ, ತಲೆಗೆ ಮುಸುಕು ಹಾಕಿಕೊಳ್ಳುವುದು ಸಮಂಜಸ. ಆದರೂ ಅಲ್ಲಿ ಸಮರ್ಪಿತ ಸಹೋದರನು ಪ್ರಾರ್ಥಿಸಬೇಕು. ಅಸಾಧಾರಣವಾದ ಕಾರಣಗಳ ಹೊರತು, ಉದಾಹರಣೆಗೆ, ಸಹೋದರನು ಶಾರೀರಿಕವಾಗಿ ವಾಕ್‌ಶಕ್ತಿಯನ್ನು ಕಳೆದುಕೊಂಡಿರುವಂತಹ ಕಾರಣಗಳ ಹೊರತು, ಸಹೋದರಿಯೊಬ್ಬಳು ಸಮರ್ಪಿತ ಸಹೋದರನ ಮುಂದೆ ಪ್ರಾರ್ಥಿಸಲಾರಳು.

ಕೆಲವೊಮ್ಮೆ, ಬೈಬಲ್‌ ಅಧ್ಯಯನಗಳಿಗೆ ಕ್ರೈಸ್ತ ಸಹೋದರಿಯ ಜೊತೆಗೆ ಅಸ್ನಾತ ರಾಜ್ಯ ಪ್ರಚಾರಕನೊಬ್ಬನು ಹೋಗಬಹುದು. ಆಕೆಗೆ ಇಷ್ಟವಿರುವಲ್ಲಿ, ಅವನು ಅಧ್ಯಯನ ನಡೆಸುವಂತೆ ಆಕೆ ಕೇಳಿಕೊಳ್ಳಬಹುದು. ಆದರೆ ಯೆಹೋವನಿಗೆ ಪ್ರಾರ್ಥಿಸುವಾಗ ಅವನು ಆ ಸ್ನಾತ ಸಹೋದರಿಯನ್ನು ಯೋಗ್ಯವಾಗಿ ಪ್ರತಿನಿಧಿಸುವುದು ಅಸಾಧ್ಯವಾಗಿರುವ ಕಾರಣ, ಆ ಅಧ್ಯಯನದಲ್ಲಿ ಆಕೆಯು ಪ್ರಾರ್ಥಿಸುವುದು ಸಮಂಜಸ. ಆದರೆ ಆಕೆ ಅಧ್ಯಯನ ನಡೆಸಿ, ಪ್ರಾರ್ಥಿಸುವಲ್ಲಿ, ಆಗ ಆಕೆ ತಲೆಗೆ ಮುಸುಕು ಹಾಕಿಕೊಳ್ಳುವ ಅಗತ್ಯವಿದೆ. ಏಕೆಂದರೆ ಆ ಗಂಡು ಪ್ರಚಾರಕನು ಇನ್ನೂ ಸ್ನಾತನಾಗಿಲ್ಲವಾದರೂ, ಅವನ ಸಾರುವ ಕಾರ್ಯದ ಕಾರಣ ಹೊರಗಿನವರು ಅವನನ್ನು ಸಭೆಯೊಂದಿಗೆ ಗುರುತಿಸುತ್ತಾರೆ.

“ದೂತರ ನಿಮಿತ್ತವಾಗಿ ಸ್ತ್ರೀಯು ಪುರುಷನ ಅಧಿಕಾರ ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು,” ಎಂದು ಪೌಲನು ಬರೆದನು. ಹೌದು, ಯೆಹೋವನಿಗೆ ತಮ್ಮನ್ನು ನಿಷ್ಠೆಯಿಂದ ಅಧೀನಪಡಿಸಿಕೊಳ್ಳುವ ಕೋಟ್ಯಂತರ ದೇವದೂತರಿಗೆ ಉತ್ತಮ ಮಾದರಿಗಳಾಗುವ ಸದವಕಾಶ ಕ್ರೈಸ್ತ ಸಹೋದರಿಯರಿಗಿದೆ. ಆದಕಾರಣ, ಸಂದರ್ಭವು ಅಗತ್ಯಗೊಳಿಸುವಾಗ ತಲೆಗೆ ಮುಸುಕು ಹಾಕಿಕೊಳ್ಳುವ ವಿಷಯಕ್ಕೆ ತಕ್ಕ ಗಮನವನ್ನು ಕೊಡುವುದು ದೇವಭಕ್ತ ಸ್ತ್ರೀಯರಿಗೆ ಅದೆಷ್ಟು ಉಚಿತ!

[ಪುಟ 26ರಲ್ಲಿರುವ ಚಿತ್ರಗಳು]

ತಲೆಗೆ ಮುಸುಕು ಹಾಕಿಕೊಳ್ಳುವುದು ತಲೆತನವನ್ನು ಗೌರವಿಸುವ ಗುರುತಾಗಿದೆ