ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ಅಧಿಕಾರಕ್ಕೆ ನಿಷ್ಠೆಯಿಂದ ಅಧೀನರಾಗಿರಿ

ದೈವಿಕ ಅಧಿಕಾರಕ್ಕೆ ನಿಷ್ಠೆಯಿಂದ ಅಧೀನರಾಗಿರಿ

ದೈವಿಕ ಅಧಿಕಾರಕ್ಕೆ ನಿಷ್ಠೆಯಿಂದ ಅಧೀನರಾಗಿರಿ

“ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮ [“ಶಾಸನ,” NW]ವಿಧಾಯಕ, ಯೆಹೋವನು ನಮ್ಮ ರಾಜ.”​—ಯೆಶಾಯ 33:22.

1. ಪುರಾತನ ಇಸ್ರಾಯೇಲನ್ನು ಜನಾಂಗಗಳಲ್ಲೇ ಅದ್ವಿತೀಯವಾದದ್ದಾಗಿ ಮಾಡಿದ ಅಂಶಗಳಾವುವು?

ಇಸ್ರಾಯೇಲ್‌ ಜನಾಂಗವು ಸಾ.ಶ.ಪೂ. 1513ರಲ್ಲಿ ಅಸ್ತಿತ್ವಕ್ಕೆ ಬಂತು. ಆ ಸಮಯದಲ್ಲಿ ಅದಕ್ಕೆ ರಾಜಧಾನಿಯಾಗಲಿ, ಸ್ವದೇಶವಾಗಲಿ, ದೃಶ್ಯ ಅರಸನಾಗಲಿ ಇರಲಿಲ್ಲ. ಅದರ ಪ್ರಜೆಗಳು ಮಾಜಿ ಗುಲಾಮರಾಗಿದ್ದರು. ಆದರೂ, ಆ ಹೊಸ ಜನಾಂಗವು ಇನ್ನೊಂದು ರೀತಿಯಲ್ಲೂ ಅದ್ವಿತೀಯವಾಗಿತ್ತು. ಯೆಹೋವ ದೇವರು ಅದರ ಅದೃಶ್ಯ ನ್ಯಾಯಾಧೀಶನೂ ಶಾಸನ ವಿಧಾಯಕನೂ ಅರಸನೂ ಆಗಿದ್ದನು. (ವಿಮೋಚನಕಾಂಡ 19:5, 6; ಯೆಶಾಯ 33:22) ಇನ್ನಾವ ಜನಾಂಗವೂ ಹೀಗೆ ಹೇಳಸಾಧ್ಯವಿರಲಿಲ್ಲ!

2.ಇಸ್ರಾಯೇಲು ಸಂಘಟಿಸಲ್ಪಟ್ಟ ರೀತಿಯ ಕುರಿತು ಯಾವ ಪ್ರಶ್ನೆ ಏಳುತ್ತದೆ, ಮತ್ತು ಇದಕ್ಕೆ ಸಿಗುವ ಉತ್ತರವು ನಮಗೇಕೆ ಪ್ರಾಮುಖ್ಯ?

2 ಯೆಹೋವನು ಕ್ರಮಬದ್ಧತೆ ಮತ್ತು ಶಾಂತಿಯ ದೇವರಾಗಿರುವುದರಿಂದ, ಆತನು ಆಳುವ ಯಾವುದೇ ಜನಾಂಗವು ಸುಸಂಘಟಿತವಾಗಿರಬೇಕೆಂದು ನಾವು ನಿರೀಕ್ಷಿಸಬೇಕು. (1 ಕೊರಿಂಥ 14:33) ಇಸ್ರಾಯೇಲಿನ ವಿಷಯದಲ್ಲಿ ಇದು ನಿಜವಾಗಿತ್ತು. ಆದರೆ ಭೌಮಿಕವಾದ, ದೃಶ್ಯ ಸಂಸ್ಥೆಯು ಅದೃಶ್ಯನಾದ ದೇವರಿಂದ ನಡೆಸಲ್ಪಡುವುದಾದರೂ ಹೇಗೆ? ಯೆಹೋವನು ಆ ಪುರಾತನ ರಾಷ್ಟ್ರವನ್ನು ಹೇಗೆ ಆಳಿದನು ಎಂಬುದನ್ನು ನಾವು ಚರ್ಚಿಸುವುದು ಪ್ರಯೋಜನಕರವಾಗಿದೆ. ಹಾಗೆ ಮಾಡುತ್ತಾ, ಆತನು ಇಸ್ರಾಯೇಲಿನೊಂದಿಗೆ ವ್ಯವಹರಿಸಿದಾಗ, ಆ ವ್ಯವಹಾರಗಳು ದೈವಿಕ ಅಧಿಕಾರಕ್ಕೆ ನಿಷ್ಠೆಯಿಂದ ಅಧೀನರಾಗುವ ಪ್ರಮುಖತೆಯನ್ನು ಹೇಗೆ ಎತ್ತಿ ತೋರಿಸುತ್ತವೆಂಬುದನ್ನು ಪ್ರತ್ಯೇಕವಾಗಿ ಗಮನಿಸೋಣ.

ಪುರಾತನ ಇಸ್ರಾಯೇಲ್‌ ಆಳಲ್ಪಟ್ಟ ವಿಧ

3. ಯೆಹೋವನು ತನ್ನ ಜನರ ಮಾರ್ಗದರ್ಶನಕ್ಕಾಗಿ ಯಾವ ಪ್ರಾಯೋಗಿಕ ವ್ಯವಸ್ಥೆಯನ್ನು ಮಾಡಿದನು?

3 ಯೆಹೋವನು ಇಸ್ರಾಯೇಲಿನ ಅದೃಶ್ಯ ರಾಜನಾಗಿದ್ದರೂ, ಆತನು ನಂಬಿಗಸ್ತ ಪುರುಷರನ್ನು ತನ್ನ ದೃಶ್ಯ ಪ್ರತಿನಿಧಿಗಳಾಗಿ ನೇಮಿಸಿದನು. ಜನರಿಗೆ ಸಲಹೆಗಾರರಾಗಿ ಮತ್ತು ನ್ಯಾಯಾಧಿಪತಿಗಳಾಗಿ ಸೇವೆಮಾಡಲು ಪ್ರಧಾನ ಪುರುಷರು, ಕುಲಾಧಿಪತಿಗಳು ಮತ್ತು ಹಿರೀ ಪುರುಷರು ಇದ್ದರು. (ವಿಮೋಚನಕಾಂಡ 18:25, 26; ಧರ್ಮೋಪದೇಶಕಾಂಡ 1:15) ಆದರೂ, ಈ ಜವಾಬ್ದಾರಿಯುತ ಪುರುಷರು ದೈವಿಕ ಮಾರ್ಗದರ್ಶನವಿಲ್ಲದೆ ಹೇಗೊ ತಪ್ಪಿಲ್ಲದ ವಿವೇಚನೆ ಮತ್ತು ತಿಳಿವಳಿಕೆಯಿಂದ ವಿಷಯಗಳನ್ನು ಇತ್ಯರ್ಥ ಮಾಡಿದರೆಂದು ನಾವು ತೀರ್ಮಾನಿಸಬಾರದು. ಅವರು ಪರಿಪೂರ್ಣರಾಗಿ ಇಲ್ಲದಿದ್ದುದರಿಂದ, ಜೊತೆ ಆರಾಧಕರ ಹೃದಯಗಳನ್ನು ಅವರಿಗೆ ಓದಸಾಧ್ಯವಿರಲಿಲ್ಲ. ಆದರೂ, ದೇವಭಯವಿದ್ದ ನ್ಯಾಯಾಧೀಶರು ಜೊತೆ ವಿಶ್ವಾಸಿಗಳಿಗೆ ಸಹಾಯಕರವಾದ ಸಲಹೆಯನ್ನು ಕೊಡುವ ಸಾಧ್ಯತೆ ಇತ್ತು, ಏಕೆಂದರೆ ಅದು ಯೆಹೋವನ ಧರ್ಮಶಾಸ್ತ್ರದ ಮೇಲೆ ಆಧಾರಿತವಾಗಿತ್ತು.​—ಧರ್ಮೋಪದೇಶಕಾಂಡ 19:15; ಕೀರ್ತನೆ 119:97-100.

4. ಇಸ್ರಾಯೇಲಿನ ನಂಬಿಗಸ್ತ ನ್ಯಾಯಾಧೀಶರು ಯಾವ ಪ್ರವೃತ್ತಿಗಳಿಂದ ದೂರವಿರಲು ತವಕಪಟ್ಟರು, ಮತ್ತು ಏಕೆ?

4 ಆದರೂ, ನ್ಯಾಯಾಧೀಶನಾಗಿ ಸೇವೆಮಾಡುವುದರಲ್ಲಿ ನಿಯಮಜ್ಞಾನಕ್ಕಿಂತ ಹೆಚ್ಚಿನದ್ದು ಸೇರಿಕೊಂಡಿತ್ತು. ಅಪರಿಪೂರ್ಣರಾಗಿದ್ದುದರಿಂದ, ಈ ಹಿರೀ ಪುರುಷರು ತಮ್ಮ ತೀರ್ಪನ್ನು ವಕ್ರಗೊಳಿಸಸಾಧ್ಯವಿದ್ದ ತಮ್ಮ ಸ್ವಂತ ಮೊಂಡಾದ ಪ್ರವೃತ್ತಿಗಳನ್ನು, ಅಂದರೆ ಸ್ವಾರ್ಥ, ಪಕ್ಷಪಾತ ಮತ್ತು ಲೋಭಗಳನ್ನು ನಿಗ್ರಹಿಸಿಕೊಳ್ಳಲು ಎಚ್ಚರವಾಗಿರಬೇಕಾಗಿತ್ತು. ಮೋಶೆಯು ಅವರಿಗೆ ಹೇಳಿದ್ದು: “ನೀವು ನ್ಯಾಯದ ಪ್ರಕಾರವೇ ತೀರ್ಪು ಮಾಡಬೇಕು. ನ್ಯಾಯವಿಚಾರಿಸುವಾಗ ಮುಖದಾಕ್ಷಿಣ್ಯಮಾಡದೆ ಅಧಿಕರನ್ನೂ ಅಲ್ಪರನ್ನೂ ಸಮನಾಗಿ ತಿಳಿಯಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯ ತೀರಿಸುವವರಾದ ಕಾರಣ [“ನ್ಯಾಯತೀರ್ಪು ದೇವರದ್ದಾಗಿರುವ ಕಾರಣ,” NW] ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ.” (ಓರೆ ಅಕ್ಷರಗಳು ನಮ್ಮವು.) ಹೌದು, ಇಸ್ರಾಯೇಲಿನ ನ್ಯಾಯಾಧೀಶರು ದೇವರ ಹೆಸರಿನಲ್ಲಿ ನ್ಯಾಯತೀರಿಸುತ್ತಿದ್ದರು. ಎಂಥ ಗಂಭೀರ ಸುಯೋಗ ಅದಾಗಿತ್ತು!​—ಧರ್ಮೋಪದೇಶಕಾಂಡ 1:16, 17.

5. ಯೆಹೋವನು ನ್ಯಾಯಾಧೀಶರನ್ನು ನೇಮಿಸಿದ್ದು ಮಾತ್ರವಲ್ಲ, ತನ್ನ ಜನರನ್ನು ಪರಾಮರಿಸಲು ಇನ್ನಾವ ಏರ್ಪಾಡುಗಳನ್ನೂ ಮಾಡಿದನು?

5 ಯೆಹೋವನು ತನ್ನ ಜನರ ಆತ್ಮಿಕಾವಶ್ಯಕತೆಗಳನ್ನು ನೋಡಿಕೊಳ್ಳಲು ಬೇರೆ ಏರ್ಪಾಡುಗಳನ್ನೂ ಮಾಡಿದನು. ಅವರು ವಾಗ್ದತ್ತ ದೇಶಕ್ಕೆ ಬಂದು ಮುಟ್ಟುವ ಮೊದಲೇ, ಒಂದು ಸಾಕ್ಷಿಗುಡಾರವನ್ನು, ಸತ್ಯಾರಾಧನೆಯ ಕೇಂದ್ರವನ್ನು ಕಟ್ಟುವಂತೆ ಆತನು ಆಜ್ಞಾಪಿಸಿದನು. ಹಾಗೂ ಧರ್ಮಶಾಸ್ತ್ರವನ್ನು ಬೋಧಿಸಲು, ಪ್ರಾಣಿ ಯಜ್ಞಾರ್ಪಣೆಗಳನ್ನು ಮಾಡಲು, ಮತ್ತು ಬೆಳಿಗ್ಗೆ ಹಾಗೂ ಸಾಯಂಕಾಲ ಧೂಪವನ್ನು ಸುಡಲು ಒಂದು ಯಾಜಕತ್ವವನ್ನು ಏರ್ಪಡಿಸಿದನು. ದೇವರು ಮೋಶೆಯ ಅಣ್ಣನಾದ ಆರೋನನನ್ನು ಇಸ್ರಾಯೇಲಿನ ಪ್ರಥಮ ಮಹಾಯಾಜಕನಾಗಿ ನೇಮಿಸಿ, ಆರೋನನ ಪುತ್ರರನ್ನು, ತಂದೆಯ ಅವಶ್ಯ ಕರ್ತವ್ಯಗಳಲ್ಲಿ ಸಹಾಯಕರಾಗಿರುವಂತೆ ನೇಮಿಸಿದನು.​—ವಿಮೋಚನಕಾಂಡ 28:1; ಅರಣ್ಯಕಾಂಡ 3:10; 2 ಪೂರ್ವಕಾಲವೃತ್ತಾಂತ 13:10, 11.

6, 7. (ಎ) ಯಾಜಕರ ಮತ್ತು ಯಾಜಕರಲ್ಲದ ಲೇವ್ಯರ ಮಧ್ಯೆ ಯಾವ ಸಂಬಂಧವಿತ್ತು? (ಬಿ) ಲೇವ್ಯರಿಗೆ ಅನೇಕ ವಿಧದ ಕೆಲಸಗಳನ್ನು ಮಾಡಲಿಕ್ಕಿದ್ದುದರಿಂದ, ನಾವು ಯಾವ ಪಾಠವನ್ನು ಕಲಿಯಬಲ್ಲೆವು? (ಕೊಲೊಸ್ಸೆ 3:23)

6 ಲಕ್ಷಾಂತರ ಮಂದಿಯ ಆತ್ಮಿಕ ಆವಶ್ಯಕತೆಗಳ ಆರೈಕೆಯನ್ನು ಮಾಡುವುದು ಭಾರೀ ಜವಾಬ್ದಾರಿಯಾಗಿತ್ತು. ಆದರೆ ಯಾಜಕರ ಸಂಖ್ಯೆಯನ್ನು ನೋಡುವಾಗ ಅವರು ಕೊಂಚವೇ ಆಗಿದ್ದರು. ಆದಕಾರಣ, ಲೇವಿ ಕುಲದ ಇತರ ಸದಸ್ಯರು ಅವರಿಗೆ ನೆರವನ್ನು ನೀಡುವ ಏರ್ಪಾಡನ್ನು ಮಾಡಲಾಯಿತು. ಯೆಹೋವನು ಮೋಶೆಗೆ ಹೇಳಿದ್ದು: “ನೀನು ಲೇವಿಯರನ್ನು ಆರೋನನಿಗೂ ಅವನ ಮಕ್ಕಳಿಗೂ ಒಪ್ಪಿಸಬೇಕು; ಇಸ್ರಾಯೇಲ್ಯರಲ್ಲಿ ಆರೋನನಿಗೆ ಸಂಪೂರ್ಣವಾಗಿ ವಶಮಾಡಲ್ಪಟ್ಟವರು [“ಕೊಡಲ್ಪಟ್ಟವರು,” NW] ಇವರೇ.”​—ಅರಣ್ಯಕಾಂಡ 3:​9, 39.

7 ಲೇವ್ಯರು ಸುಸಂಘಟಿತರಾಗಿದ್ದರು. ಅವರು ಮೂರು ಕುಟುಂಬಗಳಾಗಿ ವಿಂಗಡಿಸಲ್ಪಟ್ಟಿದ್ದರು. ಗೆರ್ಷೋನ್‌, ಕೆಹಾತ್‌ ಮತ್ತು ಮೆರಾರೀ ಕುಟುಂಬದವರು ಇವರಾಗಿದ್ದು, ಅವರಿಗೆ ಅವರದ್ದೇ ಆದ ಕೆಲಸವನ್ನು ಮಾಡಲಿಕ್ಕಿತ್ತು. (ಅರಣ್ಯಕಾಂಡ 3:14-17, 23-37) ಕೆಲವು ನೇಮಕಗಳು ಬೇರೆ ಕೆಲಸಗಳಿಗಿಂತ ಹೆಚ್ಚು ಪ್ರಾಮುಖ್ಯವೆಂದು ತೋರಿಬರಬಹುದಾಗಿದ್ದರೂ, ಅವುಗಳಲ್ಲಿ ಎಲ್ಲವೂ ಆವಶ್ಯಕ ಕೆಲಸಗಳಾಗಿದ್ದವು. ಕೆಹಾತ್‌ ಕುಟುಂಬದ ಲೇವ್ಯರು, ಪವಿತ್ರ ಮಂಜೂಷ ಮತ್ತು ಸಾಕ್ಷಿಗುಡಾರದ ಪೀಠೋಪಕರಣಗಳ ಸುತ್ತಲಿರುವಂತೆ ಅಪೇಕ್ಷಿಸಲಾಗುತ್ತಿತ್ತು. ಆದರೂ, ಎಲ್ಲ ಲೇವ್ಯರಿಗೂ​—ಅವರು ಕೆಹಾತ್ಯರಾಗಿರಲಿ ಇಲ್ಲದಿರಲಿ​—ಆಶ್ಚರ್ಯಕರವಾದ ಸುಯೋಗದಲ್ಲಿ ಆನಂದಿಸುವ ಸಂದರ್ಭವಿತ್ತು. (ಅರಣ್ಯಕಾಂಡ 1:​51, 53) ಆದರೆ, ವಿಷಾದಕರವಾಗಿ, ಕೆಲವರು ಅವರಿಗಿದ್ದ ಸುಯೋಗಗಳಿಗೆ ಕೃತಜ್ಞರಾಗಲಿಲ್ಲ. ಅವರು ನಿಷ್ಠೆಯಿಂದ ದೈವಿಕ ಅಧಿಕಾರಕ್ಕೆ ಅಧೀನರಾಗುವ ಬದಲಿಗೆ, ಅಸಂತೃಪ್ತರಾಗಿ, ದುರಹಂಕಾರ, ಹೆಬ್ಬಯಕೆ ಮತ್ತು ಹೊಟ್ಟೆಕಿಚ್ಚಿಗೆ ಬಲಿಯಾದರು. ಅವರಲ್ಲಿ ಒಬ್ಬನು ಕೋರಹ ಎಂಬ ಲೇವ್ಯನಾಗಿದ್ದನು.

“ಯಾಜಕತ್ವವೂ ನಿಮಗೆ ಆಗಬೇಕೆಂದು ಕೋರುತ್ತೀರಾ?”

8. (ಎ) ಕೋರಹನು ಯಾರು? (ಬಿ) ಕೋರಹನು ಮಾನವ ದೃಷ್ಟಿಕೋನದಿಂದ ಮಾತ್ರ ಯಾಜಕರನ್ನು ನೋಡಲಾರಂಭಿಸುವಂತೆ ಯಾವುದು ಮಾಡಿರಬಹುದು?

8 ಕೋರಹನು ಲೇವಿ ಕುಲಾಧಿಪತಿಯೂ ಆಗಿರಲಿಲ್ಲ, ಕೆಹಾತ್ಯ ಕುಟುಂಬಗಳ ಮುಖ್ಯನೂ ಆಗಿರಲಿಲ್ಲ. (ಅರಣ್ಯಕಾಂಡ 3:​30, 32) ಆದರೂ, ಅವನು ಇಸ್ರಾಯೇಲಿನ ಸನ್ಮಾನ್ಯ ಪ್ರಧಾನ ಪುರುಷನಾಗಿದ್ದನು. ಕೋರಹನ ಕೆಲಸಗಳು ಅವನನ್ನು ಆರೋನನೊಂದಿಗೆ ಮತ್ತು ಅವನ ಪುತ್ರರೊಂದಿಗೆ ನಿಕಟ ಸಹವಾಸಕ್ಕೆ ತಂದಿದ್ದಿರಬಹುದು. (ಅರಣ್ಯಕಾಂಡ 4:​18, 19) ಈ ಪುರುಷರ ಅಪರಿಪೂರ್ಣತೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಕೋರಹನು ಹೀಗೆ ತರ್ಕಿಸಿದ್ದಿರಬಹುದು: ‘ಈ ಯಾಜಕರು ಇಷ್ಟೊಂದು ಅಪರಿಪೂರ್ಣರಾಗಿರುವುದಾದರೂ, ನಾನು ಅವರಿಗೆ ಅಧೀನನಾಗಿರಬೇಕಂತೆ! ಸ್ವಲ್ಪ ಸಮಯದ ಹಿಂದೆ ಆರೋನನು ಚಿನ್ನದ ಬಸವನನ್ನು ಮಾಡಿದ್ದನು. ಮತ್ತು ಆ ಬಸವನ ಆರಾಧನೆ ನಮ್ಮ ಜನರನ್ನು ವಿಗ್ರಹಾರಾಧನೆಗೆ ನಡೆಸಿತು. ಈಗ ಆ ಆರೋನನೇ, ಆ ಮೋಶೆಯ ಅಣ್ಣನು, ಮಹಾಯಾಜಕನಾಗಿ ಸೇವೆಮಾಡುತ್ತಾನೆ! ಇದೆಂಥ ಪಕ್ಷಪಾತ! ಮತ್ತು ಆರೋನನ ಮಕ್ಕಳಾದ ನಾದಾಬ್‌ ಮತ್ತು ಅಬೀಹು ಎಂಬವರ ವಿಷಯದಲ್ಲಿ ಏನು ಹೇಳಬಹುದು? ಅವರ ಸೇವಾ ಸುಯೋಗಗಳಿಗೆ ಅವರು ವಿಪರೀತ ಅವಮರ್ಯಾದೆಯನ್ನು ತೋರಿಸಿದ ಕಾರಣ ಯೆಹೋವನು ಅವರನ್ನು ಕೊಲ್ಲಬೇಕಾಯಿತು!’ * (ವಿಮೋಚನಕಾಂಡ 32:1-5; ಯಾಜಕಕಾಂಡ 10:1, 2) ಕೋರಹನ ಆಲೋಚನೆ ಏನೇ ಆಗಿದ್ದಿರಲಿ, ಅವನು ಆ ಯಾಜಕತ್ವವನ್ನು ಮಾನವ ದೃಷ್ಟಿಕೋನದಿಂದ ನೋಡಿದನೆಂಬುದು ಸ್ಪಷ್ಟ. ಅದು, ಮೋಶೆ ಮತ್ತು ಆರೋನರ ವಿರುದ್ಧ, ಮತ್ತು ಕೊನೆಯಲ್ಲಿ ಯೆಹೋವನ ಎದುರಾಗಿ ಅವನು ದಂಗೆಯೇಳುವಂತೆ ನಡೆಸಿತು.​—1 ಸಮುವೇಲ 15:23; ಯಾಕೋಬ 1:14, 15.

9, 10. ಕೋರಹನೂ ಜೊತೆ ದಂಗೆಕೋರರೂ ಮೋಶೆಯ ಮೇಲೆ ಯಾವ ಅಪವಾದವನ್ನು ಹಾಕಿದರು, ಮತ್ತು ಅದು ಸರಿಯಲ್ಲವೆಂದು ಅವರಿಗೆ ಏಕೆ ಗೊತ್ತಿರಬೇಕಾಗಿತ್ತು?

9 ಕೋರಹನು ಪ್ರಭಾವಶಾಲಿಯಾಗಿದ್ದ ಪುರುಷನಾಗಿದ್ದುದರಿಂದ, ಅದೇ ಮನೋಭಾವದ ಇತರರು ತನ್ನನ್ನು ಬೆಂಬಲಿಸುವಂತೆ ಮಾಡುವುದು ಅವನಿಗೆ ಕಷ್ಟಕರವಾಗಿರಲಿಲ್ಲ. ಅವನು, ದಾತಾನ್‌ ಹಾಗೂ ಅಬೀರಾಮ್‌ರೊಂದಿಗೆ ಅದೇ ಮನಸ್ಸಿನ ಇನ್ನು 250 ಮಂದಿಯ ಬೆಂಬಲವನ್ನು ಪಡೆದನು. ಇವರೆಲ್ಲರೂ ಪ್ರಧಾನ ಪುರುಷರಾಗಿದ್ದರು. ಅವರೆಲ್ಲರೂ ಸೇರಿ ಮೋಶೆ ಆರೋನರ ಬಳಿಗೆ ಬಂದು, “ಈ ಸಮೂಹದವರಲ್ಲಿ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ; ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನಲ್ಲವೇ; ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವದೇನು ಎಂದು ಹೇಳಿದರು.”​—ಅರಣ್ಯಕಾಂಡ 16:1-3.

10 ಅವರಿಗಿದ್ದ ಮಾಹಿತಿಯ ದೃಷ್ಟಿಯಲ್ಲಿ, ಅವರು ಮೋಶೆಯ ಅಧಿಕಾರದ ಸಂಬಂಧದಲ್ಲಿ ಸವಾಲೊಡ್ಡಬಾರದಾಗಿತ್ತು. ಸ್ವಲ್ಪ ಕಾಲದ ಹಿಂದೆ, ಆರೋನನೂ ಮಿರ್ಯಾಮಳೂ ಹಾಗೆಯೇ ಮಾಡಿದ್ದರು. ಅಷ್ಟೇ ಅಲ್ಲ, ಅವರು ಕೋರಹನು ಉಪಯೋಗಿಸಿದ ತರ್ಕವನ್ನೇ ಉಪಯೋಗಿಸಿದ್ದರು! ಅರಣ್ಯಕಾಂಡ 12:​1, 2ರಲ್ಲಿ, “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತಾಡಿದ್ದಾನೋ; ನಮ್ಮ ಮೂಲಕವೂ ಆತನು ಮಾತಾಡಲಿಲ್ಲವೇ ಎಂದು ಹೇಳಿಕೊಂಡರು.” ಇದನ್ನು ಆಲಿಸುತ್ತಿದ್ದ ಯೆಹೋವನು, ತಾನೇ ನಾಯಕನ ಆಯ್ಕೆಯನ್ನು ಸೂಚಿಸುವಂತೆ, ಮೋಶೆ, ಆರೋನ ಮತ್ತು ಮಿರ್ಯಾಮ್‌ರನ್ನು ಸಾಕ್ಷಿಗುಡಾರದ ದ್ವಾರದಲ್ಲಿ ಕೂಡಿಬರುವಂತೆ ಆಜ್ಞಾಪಿಸಿದನು. ಮತ್ತು ಯೆಹೋವನು ಸ್ಪಷ್ಟವಾಗಿ ತಿಳಿಸಿದ್ದು: “ನಿಮ್ಮಲ್ಲಿ ಪ್ರವಾದಿಯಿದ್ದರೆ ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಕಾಣಿಸಿಕೊಳ್ಳುವೆನು, ಇಲ್ಲವೆ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು. ನನ್ನ ಸೇವಕನಾದ ಮೋಶೆ ಅಂಥವನಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನು [“ನನ್ನ ಮನೆವಾರ್ತೆಯೆಲ್ಲಾ ಅವನಿಗೆ ವಹಿಸಲ್ಪಟ್ಟಿದೆ,” NW].” ಇದಾದ ಬಳಿಕ, ಯೆಹೋವನು ಮಿರ್ಯಾಮಳ ಮೇಲೆ ಸ್ವಲ್ಪಕಾಲಕ್ಕೆ ಕುಷ್ಠರೋಗವನ್ನು ಬರಮಾಡಿದನು.​—ಅರಣ್ಯಕಾಂಡ 12:4-7, 10.

11. ಕೋರಹನನ್ನು ಒಳಗೊಂಡಿದ್ದ ಸನ್ನಿವೇಶವನ್ನು ಮೋಶೆ ಹೇಗೆ ನಿಭಾಯಿಸಿದನು?

11 ಕೋರಹನಿಗೂ ಅವನ ಪಕ್ಷವಹಿಸಿದವರಿಗೂ ಆ ಘಟನೆಯ ಬಗ್ಗೆ ಗೊತ್ತಿದ್ದಿರಬೇಕಾಗಿತ್ತು. ಆದುದರಿಂದ ಅವರ ದಂಗೆ ಅಕ್ಷಮ್ಯವಾಗಿತ್ತು. ಆದರೂ, ಮೋಶೆಯು ತಾಳ್ಮೆಯಿಂದ ಅವರೊಂದಿಗೆ ತರ್ಕಸಮ್ಮತವಾಗಿ ಮಾತಾಡಲು ಪ್ರಯತ್ನಿಸಿದನು. ಅವರು ತಮ್ಮ ಸುಯೋಗಗಳಿಗೆ ಹೆಚ್ಚು ಆಭಾರಿಗಳಾಗಿರುವಂತೆ ಅವನು ಪ್ರೋತ್ಸಾಹಿಸಿ ಹೇಳಿದ್ದು: “ಇಸ್ರಾಯೇಲ್ಯರ ದೇವರು ಅವರ ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿ . . . ತನ್ನ ಹತ್ತಿರ ಇಟ್ಟುಕೊಂಡದ್ದು ಅಲ್ಪಕಾರ್ಯವೆಂದು ನಿಮಗೆ ಕಾಣುತ್ತದೋ?” ಅಲ್ಲ, ಅದು “ಅಲ್ಪಕಾರ್ಯ” ಆಗಿರಲಿಲ್ಲ! ಲೇವ್ಯರಿಗೆ ಆಗಲೇ ಎಷ್ಟೋ ಸುಯೋಗಗಳಿದ್ದವು. ಅವರಿಗೆ ಇನ್ನೇನು ಬೇಕಾಗಿತ್ತು? ಮೋಶೆ ಮುಂದಕ್ಕೆ ಹೇಳಿದ ಮಾತುಗಳು ಅವರ ಹೃದಯದ ಆಲೋಚನೆಯನ್ನು ಬಯಲುಪಡಿಸಿದವು: “ಯಾಜಕತ್ವವೂ ನಿಮಗೆ ಆಗಬೇಕೆಂದು ಕೋರುತ್ತೀರಾ?” * (ಅರಣ್ಯಕಾಂಡ 12:3; 16:​9, 10) ಆದರೆ ಯೆಹೋವನು ಆ ದೈವಿಕ ಅಧಿಕಾರಕ್ಕೆ ವಿರುದ್ಧವಾದ ದಂಗೆಗೆ ಹೇಗೆ ಪ್ರತಿವರ್ತಿಸಿದನು?

ಇಸ್ರಾಯೇಲಿನ ನ್ಯಾಯಾಧಿಪತಿಯಿಂದ ಹಸ್ತಕ್ಷೇಪ

12. ದೇವರೊಂದಿಗೆ ಇಸ್ರಾಯೇಲಿನ ಮುಂದುವರಿಯುವ ಸುಸಂಬಂಧವು ಯಾವುದರ ಮೇಲೆ ಹೊಂದಿಕೊಂಡಿತ್ತು?

12 ಯೆಹೋವನು ಇಸ್ರಾಯೇಲಿಗೆ ಧರ್ಮಶಾಸ್ತ್ರವನ್ನು ಕೊಟ್ಟಾಗ, ಅವರು ಅದಕ್ಕೆ ವಿಧೇಯರಾಗುವಲ್ಲಿ “ಪರಿಶುದ್ಧಜನ” ಆಗುವರೆಂದೂ, ಯೆಹೋವನ ಏರ್ಪಾಡನ್ನು ಅಂಗೀಕರಿಸುವಷ್ಟು ಕಾಲ ಆ ಜನಾಂಗವು ಪರಿಶುದ್ಧವಾಗಿರುವುದೆಂದೂ ಹೇಳಿದನು. (ವಿಮೋಚನಕಾಂಡ 19:​5, 6) ಆದರೆ ಈಗ, ಬಹಿರಂಗವಾಗಿ ದಂಗೆಯೆದ್ದಿರುವ ಸಮಯದಲ್ಲಿ, ಇಸ್ರಾಯೇಲಿನ ನ್ಯಾಯಾಧಿಪತಿಯೂ ಶಾಸನ ವಿಧಾಯಕನೂ ಆಗಿರುವಾತನು ಈ ಮಧ್ಯೆ ಕೈಹಾಕುವ ಸಮಯವು ಬಂದಿತ್ತು! ಮೋಶೆಯು ಕೋರಹನಿಗೆ ಹೇಳಿದ್ದು: “ನಾಳೆ ನೀನೂ ನಿನ್ನ ಸಮೂಹದವರೆಲ್ಲರೂ ಆರೋನನೂ ಯೆಹೋವನ ಸನ್ನಿಧಿಗೆ ಬರಬೇಕು; ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ಧೂಪಾರತಿಯನ್ನು, ಅಂದರೆ ಒಟ್ಟಾಗಿ ಇನ್ನೂರೈವತ್ತು ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು; ಹಾಗೆಯೇ ನೀನೂ ಆರೋನನೂ ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು.”​—ಅರಣ್ಯಕಾಂಡ 16:16, 17.

13. (ಎ) ದಂಗೆಕೋರರು ಯೆಹೋವನ ಮುಂದೆ ಧೂಪವನ್ನರ್ಪಿಸುವ ಸಂಗತಿಯು ದುರಹಂಕಾರವಾಗಿತ್ತೇಕೆ? (ಬಿ) ಯೆಹೋವನು ಆ ದಂಗೆಕೋರರೊಂದಿಗೆ ಹೇಗೆ ವ್ಯವಹರಿಸಿದನು?

13 ದೇವರ ನಿಯಮಾನುಸಾರ, ಯಾಜಕರು ಮಾತ್ರ ಧೂಪವನ್ನು ಅರ್ಪಿಸಬಹುದಾಗಿತ್ತು. ಹಾಗಿರುವಾಗ, ಯಾಜಕರಲ್ಲದ ಲೇವ್ಯರು ಯೆಹೋವನ ಮುಂದೆ ಧೂಪವನ್ನು ಅರ್ಪಿಸುವ ಆಲೋಚನೆಯೇ, ಆ ದಂಗೆಕೋರರನ್ನು ಅದುರಿಸಿ ಸ್ವಸ್ಥಬುದ್ಧಿಗೆ ನಡೆಸಬೇಕಾಗಿತ್ತು. (ವಿಮೋಚನಕಾಂಡ 30:7; ಅರಣ್ಯಕಾಂಡ 4:16) ಆದರೆ ಕೋರಹನಿಗೂ ಅವನ ಬೆಂಬಲಿಗರಿಗೂ ಹಾಗೆನಿಸಲಿಲ್ಲ! ಮರುದಿನ, “ಕೋರಹನು [ಮೋಶೆ ಆರೋನರಿಗೆ] ಎದುರಾಗಿ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಲಿನ ಹತ್ತಿರಕ್ಕೆ ಕೂಡಿಸಿದನು.” ದಾಖಲೆಯು ನಮಗೆ ತಿಳಿಸುವುದು: “ಯೆಹೋವನು ಮೋಶೆ ಆರೋನರಿಗೆ​—ನೀವು ಈ ಸಮೂಹದವರಿಂದ ಪ್ರತ್ಯೇಕವಾಗಿ ನಿಲ್ಲಿರಿ; ನಾನು ಇವರನ್ನು ಒಂದು ಕ್ಷಣದಲ್ಲಿ ಭಸ್ಮಮಾಡುತ್ತೇನೆ ಎಂದು ಆಜ್ಞಾಪಿ”ಸಿದನು. ಆದರೆ ಮೋಶೆ ಮತ್ತು ಆರೋನರು ಜನರ ಜೀವಗಳನ್ನು ಉಳಿಸಬೇಕೆಂದು ಬೇಡಿಕೊಳ್ಳಲಾಗಿ, ಯೆಹೋವನು ಅದಕ್ಕೆ ಒಪ್ಪಿದನು. ಆದರೆ ಕೋರಹ ಮತ್ತು ಅವನ ಸಂಗಡಿಗರನ್ನು, “ಯೆಹೋವನ ಬಳಿಯಿಂದ ಬೆಂಕಿಹೊರಟು ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ಭಸ್ಮಮಾಡಿತು.”​—ಅರಣ್ಯಕಾಂಡ 16:19-22, 35. *

14. ಯೆಹೋವನು ಇಸ್ರಾಯೇಲ್ಯರ ವಿಷಯದಲ್ಲಿ ದೃಢವಾದ ಕ್ರಮವನ್ನು ಕೈಕೊಂಡದ್ದೇಕೆ?

14 ಆದರೆ ಆಶ್ಚರ್ಯಕರವಾಗಿ, ಯೆಹೋವನು ದಂಗೆಕೋರರೊಂದಿಗೆ ವ್ಯವಹರಿಸಿದ ವಿಧವನ್ನು ನೋಡಿದ ಇಸ್ರಾಯೇಲ್ಯರು ಆಗಲೂ ಪಾಠವನ್ನು ಕಲಿಯಲಿಲ್ಲ. “ಮರುದಿನ ಇಸ್ರಾಯೇಲ್ಯರ ಸರ್ವಸಮೂಹದವರು ಮೋಶೆ ಆರೋನರ ಮೇಲೆ ಗುಣುಗುಟ್ಟುತ್ತಾ​—ನೀವೇ ಯೆಹೋವನ ಜನರನ್ನು ಸಾಯಿಸಿದಿರಿ ಎಂದು ಹೇಳುವವರಾದರು.” ಆ ಇಸ್ರಾಯೇಲ್ಯರು ಒಳಸಂಚುಗಾರರ ಪಕ್ಷವನ್ನು ವಹಿಸಿದರು! ಕೊನೆಗೆ, ಯೆಹೋವನ ತಾಳ್ಮೆ ಅಂತ್ಯಗೊಂಡಿತು. ಈಗ ಯಾರೂ, ಮೋಶೆ ಆರೋನರು ಸಹ, ಜನರ ಪರವಾಗಿ ಬೇಡಿಕೊಳ್ಳಸಾಧ್ಯವಿರಲಿಲ್ಲ. ಆ ಅವಿಧೇಯ ಜನರ ಮೇಲೆ ಯೆಹೋವನು ಘೋರವ್ಯಾಧಿಯನ್ನು ಬರಮಾಡಿದನು. “ಕೋರಹನನ್ನು ಕೂಡಿಕೊಂಡು ಸತ್ತವರಲ್ಲದೆ ಆ ವಿಪತ್ತಿನಿಂದ ಸತ್ತವರು ಹದಿನಾಲ್ಕುಸಾವಿರದ ಏಳುನೂರು ಮಂದಿ.”​—ಅರಣ್ಯಕಾಂಡ 16:41-49.

15. (ಎ) ಮೋಶೆ ಮತ್ತು ಆರೋನರ ನಾಯಕತ್ವವನ್ನು ಯಾವ ಕಾರಣಗಳಿಗಾಗಿ ಇಸ್ರಾಯೇಲ್ಯರು ಶಂಕಿಸದೆ ಒಪ್ಪಿಕೊಳ್ಳಬೇಕಾಗಿತ್ತು? (ಬಿ) ಈ ವೃತ್ತಾಂತವು ಯೆಹೋವನ ಕುರಿತು ನಿಮಗೆ ಏನನ್ನು ಕಲಿಸಿದೆ?

15 ಅಷ್ಟು ಜನರು ಅನಾವಶ್ಯಕವಾಗಿ ಜೀವವನ್ನು ಕಳೆದುಕೊಳ್ಳಬೇಕಾಗಿರಲಿಲ್ಲ. ಅವರು ತಮ್ಮ ವಿವೇಚನಾಶಕ್ತಿಯನ್ನು ಉಪಯೋಗಿಸಬಹುದಿತ್ತು. ತಮ್ಮೊಳಗೆ ಇಂತಹ ಪ್ರಶ್ನೆಗಳನ್ನು ಕೇಳಿಕೊಂಡು ತರ್ಕಿಸಬಹುದಿತ್ತು: ‘ತಮ್ಮ ಜೀವವು ಅಪಾಯಕ್ಕೊಳಗಾಗಿದ್ದರೂ, ಫರೋಹನ ಮುಂದೆ ಹೋದವರಾರು? ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಬೇಕೆಂದು ಪಟ್ಟುಹಿಡಿದವರಾರು? ಇಸ್ರಾಯೇಲ್ಯರ ಬಿಡುಗಡೆಯ ತರುವಾಯ, ದೇವದೂತನೊಂದಿಗೆ ಮುಖಾಮುಖಿಯಾಗಿ ಮಾತಾಡಲು ಹೋರೆಬ್‌ ಬೆಟ್ಟವನ್ನು ಹತ್ತಬೇಕೆಂಬ ಕರೆ ಯಾರಿಗೆ ಮಾತ್ರ ಕೊಡಲಾಗಿತ್ತು?’ ಮೋಶೆ ಮತ್ತು ಆರೋನರ ಕಾರ್ಯಗಳ ಗಮನಾರ್ಹ ದಾಖಲೆಯು, ಯೆಹೋವನ ಕಡೆಗೆ ಅವರಿಗಿದ್ದ ನಿಷ್ಠೆ ಮತ್ತು ಜನರಿಗಾಗಿ ಅವರಿಗಿದ್ದ ಪ್ರೀತಿಗೆ ರುಜುವಾತನ್ನು ಕೊಟ್ಟಿತ್ತೆಂಬುದು ನಿಶ್ಚಯ. (ವಿಮೋಚನಕಾಂಡ 10:28; 19:24; 24:12-15) ದಂಗೆಕೋರರನ್ನು ಸಂಹರಿಸುವುದರಲ್ಲಿ ಯೆಹೋವನು ಆನಂದಿಸಲಿಲ್ಲ. ಆದರೂ, ಅವರು ತಮ್ಮ ದಂಗೆಯಲ್ಲಿ ಪಟ್ಟುಹಿಡಿಯುತ್ತಿದ್ದಾರೆಂದು ತೋರಿಬಂದಾಗ, ಆತನು ನಿರ್ಧಾರಕ ಕ್ರಮವನ್ನು ಕೈಕೊಂಡನು. (ಯೆಹೆಜ್ಕೇಲ 33:11) ಇದೆಲ್ಲ ನಮಗೆ ಇಂದು ತುಂಬ ಮಹತ್ವಾರ್ಥವುಳ್ಳದ್ದಾಗಿದೆ. ಏಕೆ?

ಇಂದಿನ ಸಂಪರ್ಕ ಮಾಧ್ಯಮವನ್ನು ಗುರುತಿಸುವುದು

16. (ಎ) ಯೇಸುವೇ ಯೆಹೋವನ ಪ್ರತಿನಿಧಿಯೆಂಬುದನ್ನು ಒಂದನೆಯ ಶತಮಾನದ ಯೆಹೂದ್ಯರಿಗೆ ಯಾವ ರುಜುವಾತು ಮನವೊಪ್ಪಿಸಬೇಕಾಗಿತ್ತು? (ಬಿ) ಆ ಲೇವ್ಯ ಯಾಜಕತ್ವವನ್ನು ಯೆಹೋವನು ಏಕೆ ಮತ್ತು ಯಾವುದರಿಂದ ಭರ್ತಿಮಾಡಿದನು?

16 ಇಂದು, ಯೆಹೋವನೇ ನ್ಯಾಯಾಧಿಪತಿಯೂ ಶಾಸನ ವಿಧಾಯಕನೂ ಅರಸನೂ ಆಗಿರುವ ಒಂದು ಹೊಸ ‘ಜನಾಂಗವು’ ಅಸ್ತಿತ್ವದಲ್ಲಿದೆ. (ಮತ್ತಾಯ 21:43) ಆ ‘ಜನಾಂಗ’ ಸಾ.ಶ. ಒಂದನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂತು. ಅಷ್ಟರೊಳಗೆ, ಮೋಶೆಯ ದಿನಗಳ ಸಾಕ್ಷಿಗುಡಾರಕ್ಕೆ ಬದಲಾಗಿ ಯೆರೂಸಲೇಮಿನಲ್ಲಿ, ಲೇವ್ಯರು ಕಾರ್ಯ ನಡೆಸುತ್ತಿದ್ದ ಒಂದು ಸುಂದರವಾದ ದೇವಾಲಯವಿತ್ತು. (ಲೂಕ 1:​5, 8, 9) ಆದರೂ, ಸಾ.ಶ. 29ರಲ್ಲಿ, ಇನ್ನೊಂದು ದೇವಾಲಯವು, ಅಂದರೆ ಯೇಸು ಕ್ರಿಸ್ತನು ಮಹಾಯಾಜಕನಾಗಿರುವ ಆತ್ಮಿಕ ದೇವಾಲಯವು ಅಸ್ತಿತ್ವಕ್ಕೆ ಬಂದಿತ್ತು. (ಇಬ್ರಿಯ 9:​9, 11) ದೈವಿಕ ಅಧಿಕಾರದ ಪ್ರಶ್ನೆ ಇನ್ನೊಮ್ಮೆ ಎದ್ದುಬಂತು. ಈ ಹೊಸ ‘ಜನಾಂಗ’ವನ್ನು ನಡೆಸಲು ಯೆಹೋವನು ಯಾರನ್ನು ಉಪಯೋಗಿಸಲಿದ್ದನು? ಯೇಸು ತಾನು ಯೆಹೋವನಿಗೆ ನಿರುಪಾಧಿಕವಾಗಿ ನಿಷ್ಠನಾಗಿದ್ದೇನೆ ಎಂದು ತೋರಿಸಿಕೊಟ್ಟನು. ಅವನು ಜನರನ್ನು ಪ್ರೀತಿಸಿದನು. ಅವನು ಅನೇಕ ಅದ್ಭುತಕರವಾದ ಸೂಚಕಕಾರ್ಯಗಳನ್ನೂ ನಡೆಸಿದನು. ಆದರೂ, ಲೇವ್ಯರಲ್ಲಿ ಹೆಚ್ಚಿನವರು, ಅವರ ಹಟಮಾರಿಗಳಾದ ಪೂರ್ವಜರಂತೆಯೇ, ಯೇಸುವನ್ನು ಅಂಗೀಕರಿಸಲು ನಿರಾಕರಿಸಿದರು. (ಮತ್ತಾಯ 26:63-68; ಅ. ಕೃತ್ಯಗಳು 4:5, 6, 18; 5:17) ಕೊನೆಗೆ, ಯೆಹೋವನು ಆ ಲೇವ್ಯ ಯಾಜಕತ್ವವನ್ನು ತೆಗೆದುಹಾಕಿ, ಅದರ ಸ್ಥಾನದಲ್ಲಿ ತೀರ ಭಿನ್ನವಾದ ರಾಜವಂಶಸ್ಥರಾದ ಯಾಜಕರನ್ನು ಏರ್ಪಡಿಸಿದನು. ಆ ರಾಜವಂಶಸ್ಥರಾದ ಯಾಜಕರು ಈ ದಿನದ ವರೆಗೂ ಇದ್ದಾರೆ.

17. (ಎ) ಯಾವ ಗುಂಪು ಇಂದು ರಾಜವಂಶಸ್ಥರಾದ ಯಾಜಕರು ಆಗಿರುತ್ತದೆ? (ಬಿ) ಯೆಹೋವನು ಈ ರಾಜವಂಶಸ್ಥ ಯಾಜಕರನ್ನು ಹೇಗೆ ಉಪಯೋಗಿಸುತ್ತಾನೆ?

17 ಇಂದು ಈ ರಾಜವಂಶಸ್ಥರಾದ ಯಾಜಕರಲ್ಲಿ ಯಾರು ಒಳಗೂಡಿದ್ದಾರೆ? ಅಪೊಸ್ತಲ ಪೇತ್ರನು ತನ್ನ ಒಂದನೆಯ ಪ್ರೇರಿತ ಪತ್ರಿಕೆಯಲ್ಲಿ ಈ ಪ್ರಶ್ನೆಗೆ ಉತ್ತರ ಕೊಡುತ್ತಾನೆ. ಕ್ರಿಸ್ತನ ದೇಹದ ಅಭಿಷಿಕ್ತ ಸದಸ್ಯರಿಗೆ ಪೇತ್ರನು ಬರೆದುದು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ.” (1 ಪೇತ್ರ 2:9) ಈ ಮಾತುಗಳಿಂದ, ಯೇಸುವಿನ ಅಭಿಷಿಕ್ತ ಹಿಂಬಾಲಕರು ಒಂದು ಸಮೂಹವಾಗಿ, ಪೇತ್ರನು ಯಾರನ್ನು “ಮೀಸಲಾದ ಜನ” ಎಂದು ಸಹ ಕರೆದನೊ ಆ ‘ರಾಜವಂಶಸ್ಥರಾದ ಯಾಜಕರು’ ಆಗುತ್ತಾರೆಂಬುದು ಸ್ಪಷ್ಟವಾಗುತ್ತದೆ. ಯೆಹೋವನು ತನ್ನ ಜನರಿಗೆ ಉಪದೇಶ ಮತ್ತು ಆತ್ಮಿಕ ಮಾರ್ಗದರ್ಶನವನ್ನು ಒದಗಿಸಲು ಉಪಯೋಗಿಸುವ ಸಂಪರ್ಕ ಮಾಧ್ಯಮವೇ ಇವರಾಗಿದ್ದಾರೆ.​—ಮತ್ತಾಯ 24:​45-47.

18. ನೇಮಕ ಹೊಂದಿದ ಹಿರಿಯರು ಮತ್ತು ರಾಜವಂಶಸ್ಥ ಯಾಜಕರ ನಡುವೆ ಯಾವ ಸಂಬಂಧವಿದೆ?

18 ಈ ರಾಜವಂಶಸ್ಥ ಯಾಜಕರನ್ನು ಪ್ರತಿನಿಧಿಸುತ್ತಾ, ನೇಮಕ ಹೊಂದಿರುವ ಹಿರಿಯರು ಭೂಮ್ಯಾದ್ಯಂತವಾಗಿ ಯೆಹೋವನ ಜನರ ಸಭೆಗಳಲ್ಲಿ ಜವಾಬ್ದಾರಿಯ ಸ್ಥಾನಗಳಲ್ಲಿ ಸೇವೆಮಾಡುತ್ತಾರೆ. ಇವರು ಅಭಿಷಿಕ್ತರಾಗಿರಲಿ ಇಲ್ಲದಿರಲಿ, ನಮ್ಮ ಸನ್ಮಾನ ಮತ್ತು ಪೂರ್ಣಹೃದಯದ ಬೆಂಬಲಕ್ಕೆ ಅರ್ಹರು. ಏಕೆ? ಏಕೆಂದರೆ ಯೆಹೋವನು ಈ ಹಿರೀ ಪುರುಷರನ್ನು ತನ್ನ ಪವಿತ್ರಾತ್ಮದ ಮೂಲಕ ಅವರ ಸ್ಥಾನಗಳಿಗೆ ನೇಮಿಸಿದ್ದಾನೆ. (ಇಬ್ರಿಯ 13:​7, 17) ಅದು ಸಾಧ್ಯವಾಗುವುದು ಹೇಗೆ?

19. ಹಿರಿಯರು ಯಾವ ರೀತಿಯಲ್ಲಿ ಪವಿತ್ರಾತ್ಮದ ಮೂಲಕ ನೇಮಕ ಹೊಂದಿರುತ್ತಾರೆ?

19 ಈ ಹಿರೀ ಪುರುಷರು, ಯಾವುದು ದೇವರಾತ್ಮದ ಉತ್ಪನ್ನವಾಗಿದೆಯೊ ಆ ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವ ಅಗತ್ಯ ಯೋಗ್ಯತೆಗಳಿಗೆ ಹೊಂದಿಕೊಂಡಿರುತ್ತಾರೆ. (1 ತಿಮೊಥೆಯ 3:1-7; ತೀತ 1:5-9) ಆದಕಾರಣ, ಅವರ ನೇಮಕವು ಪವಿತ್ರಾತ್ಮದಿಂದಾಗಿದೆ ಎಂದು ಹೇಳಬಹುದು. (ಅ. ಕೃತ್ಯಗಳು 20:28) ಈ ಹಿರೀ ಪುರುಷರು ಅಥವಾ ಹಿರಿಯರು ದೇವರ ವಾಕ್ಯವನ್ನು ಚೆನ್ನಾಗಿ ತಿಳಿದವರಾಗಿರಬೇಕು. ಅವರನ್ನು ನೇಮಿಸಿರುವ ಪರಮ ನ್ಯಾಯಾಧಿಪತಿಯಂತೆಯೇ, ಈ ಹಿರಿಯರೂ ನ್ಯಾಯತೀರಿಸುವಿಕೆಯಲ್ಲಿ ಇರಬಹುದಾದ ಪಕ್ಷಪಾತದಂತೆ ಕಾಣುವ ಯಾವುದೇ ಸಂಗತಿಯನ್ನು ಹೇಸಬೇಕು.​—ಧರ್ಮೋಪದೇಶಕಾಂಡ 10:17, 18.

20. ಶ್ರಮಪಟ್ಟು ಕೆಲಸ ಮಾಡುವ ಹಿರಿಯರ ವಿಷಯದಲ್ಲಿ ನೀವು ಯಾವುದನ್ನು ಗಣ್ಯಮಾಡುತ್ತೀರಿ?

20 ಆದುದರಿಂದ, ಅವರ ಅಧಿಕಾರದ ವಿರುದ್ಧ ಪ್ರತಿಭಟಿಸುವ ಬದಲು, ಶ್ರಮಪಟ್ಟು ಕೆಲಸಮಾಡುವ ನಮ್ಮ ಹಿರಿಯರನ್ನು ನಾವು ನಿಜವಾಗಿಯೂ ಗಣ್ಯಮಾಡುತ್ತೇವೆ! ಅವರ ನಂಬಿಗಸ್ತಿಕೆಯ ಸೇವಾದಾಖಲೆ, ಅನೇಕವೇಳೆ ಅನೇಕ ದಶಕಗಳಲ್ಲಿ ಅವರು ಮಾಡಿರುವ ಸೇವಾದಾಖಲೆಯು ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತದೆ. ಅವರು ನಂಬಿಗಸ್ತಿಕೆಯಿಂದ ಸಭಾ ಕೂಟಗಳಿಗೆ ತಯಾರಿಸಿ ಅವನ್ನು ನಡೆಸುತ್ತಾರೆ. ನಮ್ಮೊಂದಿಗೇ ಅವರು ಸಹ “ರಾಜ್ಯದ ಸುವಾರ್ತೆ”ಯನ್ನು ಸಾರುತ್ತಾರೆ. ಮತ್ತು ನಮಗೆ ಬೇಕಾಗಿರುವಾಗ ಶಾಸ್ತ್ರೀಯ ಸಲಹೆಯನ್ನು ನೀಡುತ್ತಾರೆ. (ಮತ್ತಾಯ 24:14; ಇಬ್ರಿಯ 10:23, 25; 1 ಪೇತ್ರ 5:2) ನಮಗೆ ಅಸೌಖ್ಯವಿರುವಾಗ ಅವರು ನಮ್ಮನ್ನು ಭೇಟಿಮಾಡಿ, ಶೋಕಿಸುವಾಗ ಸಾಂತ್ವನವನ್ನು ನೀಡುತ್ತಾರೆ. ಅವರು ನಿಷ್ಠೆಯಿಂದಲೂ ನಿಸ್ವಾರ್ಥಭಾವದಿಂದಲೂ ರಾಜ್ಯಾಭಿರುಚಿಗಳನ್ನು ಸಮರ್ಥಿಸುತ್ತಾರೆ. ಯೆಹೋವನ ಆತ್ಮ ಅವರ ಮೇಲಿದೆ; ಆತನು ಅವರನ್ನು ಒಪ್ಪುತ್ತಾನೆ.​—ಗಲಾತ್ಯ 5:​22, 23.

21. ಹಿರಿಯರು ಯಾವುದರ ಪ್ರಜ್ಞೆಯುಳ್ಳವರಾಗಿರಬೇಕು ಮತ್ತು ಏಕೆ?

21 ಹೌದು, ಈ ಹಿರೀ ಪುರುಷರು ಪರಿಪೂರ್ಣರಾಗಿರುವುದಿಲ್ಲ. ತಮ್ಮ ಇತಿಮಿತಿಗಳನ್ನು ತಿಳಿದಿರುವ ಅವರು, “ದೇವರ ಸ್ವತ್ತು” ಆಗಿರುವ ಮಂದೆಯ ಮೇಲೆ ದೊರೆತನ ಮಾಡುವುದಿಲ್ಲ. ಬದಲಿಗೆ, ತಾವು ‘ತಮ್ಮ ಸಹೋದರರ ಸಂತೋಷಕ್ಕೆ ಸಹಾಯಕರು’ ಎಂದು ಅವರೆಣಿಸುತ್ತಾರೆ. (1 ಪೇತ್ರ 5:​3, NW; 2 ಕೊರಿಂಥ 1:24) ದೀನರೂ ಪ್ರಯಾಸಪಟ್ಟು ಕೆಲಸ ಮಾಡುವವರೂ ಆದ ಹಿರಿಯರು ಯೆಹೋವನನ್ನು ಪ್ರೀತಿಸುವವರಾಗಿದ್ದು, ಆತನನ್ನು ಅವರು ಹೆಚ್ಚು ನಿಕಟವಾಗಿ ಅನುಕರಿಸುವಲ್ಲಿ, ಅವರು ಸಭೆಗೆ ಅಷ್ಟೇ ಹೆಚ್ಚು ಒಳಿತನ್ನು ಮಾಡಶಕ್ತರಾಗುವರು ಎಂಬುದನ್ನು ತಿಳಿದವರಾಗಿದ್ದಾರೆ. ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಅವರು ಸತತ ಪ್ರೀತಿ, ಕನಿಕರ ಮತ್ತು ತಾಳ್ಮೆಯಂತಹ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾರೆ.

22. ಕೋರಹನ ವೃತ್ತಾಂತದ ಪುನರ್ವಿಮರ್ಶೆಯು ಯೆಹೋವನ ದೃಶ್ಯ ಸಂಸ್ಥೆಯ ಮೇಲೆ ನಿಮಗಿರುವ ನಂಬಿಕೆಯನ್ನು ಹೇಗೆ ಬಲಗೊಳಿಸಿದೆ?

22 ಯೆಹೋವನು ನಮ್ಮ ಅದೃಶ್ಯ ಪ್ರಭುವೂ, ಯೇಸು ಕ್ರಿಸ್ತನು ನಮ್ಮ ಮಹಾ ಯಾಜಕನೂ, ಮತ್ತು ಅಭಿಷಿಕ್ತ ರಾಜವಂಶಸ್ಥ ಯಾಜಕತ್ವದ ಸದಸ್ಯರು ನಮ್ಮ ಬೋಧಕರೂ ಮತ್ತು ನಂಬಿಗಸ್ತ ಕ್ರೈಸ್ತ ಹಿರೀ ಪುರುಷರು ನಮ್ಮ ಸಲಹೆಗಾರರೂ ಆಗಿರುವುದಕ್ಕಾಗಿ ನಾವೆಷ್ಟು ಸಂತುಷ್ಟರು! ಮಾನವರು ನಡೆಸುವ ಯಾವುದೇ ಸಂಸ್ಥೆ ಪರಿಪೂರ್ಣವಾಗಿರಲು ಸಾಧ್ಯವಿಲ್ಲದಿದ್ದರೂ, ಸಂತೋಷದಿಂದ ದೈವಿಕ ಅಧಿಕಾರಕ್ಕೆ ಅಧೀನರಾಗಿರುವ ನಂಬಿಗಸ್ತರಾದ ಜೊತೆ ವಿಶ್ವಾಸಿಗಳೊಂದಿಗೆ ದೇವರನ್ನು ಸೇವಿಸಶಕ್ತರಾಗಿರುವುದಕ್ಕೆ ನಾವು ಸಂತೋಷಪಡುತ್ತೇವೆ!

[ಪಾದಟಿಪ್ಪಣಿಗಳು]

^ ಪ್ಯಾರ. 8 ಆರೋನನ ಇನ್ನಿಬ್ಬರು ಗಂಡುಮಕ್ಕಳಾಗಿದ್ದ ಎಲ್ಲಾಜಾರ್‌ ಮತ್ತು ಈತಾಮಾರ್‌, ಯೆಹೋವನ ಸೇವೆಯಲ್ಲಿ ಉತ್ತಮ ಮಾದರಿಗಳಾಗಿದ್ದರು.​—ಯಾಜಕಕಾಂಡ 10:6.

^ ಪ್ಯಾರ. 11 ಕೋರಹನ ಜೊತೆಗೆ ಒಳಸಂಚು ನಡೆಸಿದ ದಾತಾನ್‌ ಮತ್ತು ಅಬೀರಾಮ್‌ ರೂಬೇನ್ಯರಾಗಿದ್ದರು. ಆದುದರಿಂದ ಯಾಜಕತ್ವಕ್ಕಾಗಿ ಅವರು ಆಶಿಸಲಿಲ್ಲವೆಂಬುದು ವ್ಯಕ್ತ. ಆದರೆ ಅವರು ಮೋಶೆಯ ನಾಯಕತ್ವದ ವಿಷಯದಲ್ಲಿ ಮತ್ತು ತಾವು ವಾಗ್ದತ್ತ ದೇಶವನ್ನು ತಲಪುವ ನಿರೀಕ್ಷೆಯು ಇನ್ನೂ ನೆರವೇರಿಲ್ಲವೆಂಬ ವಿಷಯದಲ್ಲಿ ಅಸಮಾಧಾನಪಟ್ಟಿದ್ದರು.​—ಅರಣ್ಯಕಾಂಡ 16:12-14.

^ ಪ್ಯಾರ. 13 ಮೂಲಪಿತೃ ಪದ್ಧತಿಯ ಕಾಲಗಳಲ್ಲಿ, ಪ್ರತಿ ಕುಟುಂಬದ ಯಜಮಾನನು ತನ್ನ ಹೆಂಡತಿ ಮಕ್ಕಳನ್ನು ಯೆಹೋವನ ಮುಂದೆ ಪ್ರತಿನಿಧಿಸಿ, ಅವರ ಪರವಾಗಿ ಯಜ್ಞಗಳನ್ನೂ ಅರ್ಪಿಸುತ್ತಿದ್ದನು. (ಆದಿಕಾಂಡ 8:20; 46:1; ಯೋಬ 1:5) ಆದರೆ ಧರ್ಮಶಾಸ್ತ್ರವು ಬಂದಾಗ, ಯೆಹೋವನು ಆರೋನನ ಕುಟುಂಬದ ಪುರುಷರನ್ನು ಯಾಜಕರಾಗಿ ನೇಮಿಸಿ ಅವರ ಮುಖಾಂತರ ಯಜ್ಞಗಳು ಅರ್ಪಿಸಲ್ಪಡುವಂತೆ ನೇಮಿಸಿದನು. ಆದುದರಿಂದ ಆ 250 ಮಂದಿ ದಂಗೆಕೋರರು, ಕಾರ್ಯವಿಧಾನದಲ್ಲಿ ಆದ ಈ ಹೊಂದಾಣಿಕೆಯೊಂದಿಗೆ ಸಹಕರಿಸಲು ಸಮ್ಮತಿಸಲಿಲ್ಲವೆಂಬುದು ವ್ಯಕ್ತವಾಗುತ್ತದೆ.

ನೀವು ಏನು ಕಲಿತಿರಿ?

• ಇಸ್ರಾಯೇಲ್ಯರನ್ನು ಪರಾಮರಿಸಲು ಯೆಹೋವನು ಯಾವ ಪ್ರೀತಿಪೂರ್ವಕ ಏರ್ಪಾಡುಗಳನ್ನು ಮಾಡಿದನು?

• ಮೋಶೆ ಮತ್ತು ಆರೋನರ ವಿರುದ್ಧ ಕೋರಹನು ಎಬ್ಬಿಸಿದ ದಂಗೆಯು ಅಕ್ಷಮ್ಯವೇಕೆ?

• ಯೆಹೋವನು ದಂಗೆಕೋರರೊಂದಿಗೆ ವ್ಯವಹರಿಸಿದ ರೀತಿಯಲ್ಲಿ ನಮಗೆ ಯಾವ ಪಾಠವಿದೆ?

• ನಾವು ಇಂದು ಯೆಹೋವನ ಏರ್ಪಾಡುಗಳಿಗೆ ಕೃತಜ್ಞರೆಂಬುದನ್ನು ಹೇಗೆ ತೋರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ನೀವು ಯೆಹೋವನ ಸೇವೆಯಲ್ಲಿ ಯಾವುದೇ ನೇಮಕವನ್ನು ಅಮೂಲ್ಯವಾದ ಸದವಕಾಶವೆಂದು ಎಣಿಸುತ್ತೀರೊ?

[ಪುಟ 10ರಲ್ಲಿರುವ ಚಿತ್ರ]

“ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವದೇನು”?

[ಪುಟ 13ರಲ್ಲಿರುವ ಚಿತ್ರ]

ನೇಮಕ ಹೊಂದಿರುವ ಹಿರಿಯರು ರಾಜವಂಶಸ್ಥರಾದ ಯಾಜಕರನ್ನು ಪ್ರತಿನಿಧಿಸುತ್ತಾರೆ