ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರ್ಣಾಯುಷ್ಯದಿಂದ ದಿನತುಂಬಿದವಳಾಗಿ ತೃಪ್ತಳಾಗಿದ್ದೇನೆ

ಪೂರ್ಣಾಯುಷ್ಯದಿಂದ ದಿನತುಂಬಿದವಳಾಗಿ ತೃಪ್ತಳಾಗಿದ್ದೇನೆ

ಜೀವನ ಕಥೆ

ಪೂರ್ಣಾಯುಷ್ಯದಿಂದ ದಿನತುಂಬಿದವಳಾಗಿ ತೃಪ್ತಳಾಗಿದ್ದೇನೆ

ಮ್ಯೂರಿಯಲ್‌ ಸ್ಮಿತ್‌ ಅವರು ಹೇಳಿದಂತೆ

ಯಾರೊ ಮುಂದಿನ ಬಾಗಿಲನ್ನು ಗಟ್ಟಿಯಾಗಿ ಬಡಿದರು. ನಾನು ಬೆಳಗ್ಗಿನ ಸಾರುವ ಕೆಲಸದಿಂದ ಊಟಕ್ಕಾಗಿ ಆಗ ತಾನೇ ಬಂದಿದ್ದೆ. ನನ್ನ ಪದ್ಧತಿಯಂತೆ, ನಾನು ಚಹಾಕ್ಕಾಗಿ ನೀರು ಕಾಯಿಸಿ ನನ್ನ ಅರ್ಧ ತಾಸಿನ ವಿಶ್ರಾಂತಿಗಾಗಿ ಕಾಲು ಚಾಚುವುದರಲ್ಲಿದ್ದೆ. ತಟ್ಟುವಿಕೆಯು ಮುಂದುವರಿಯುತ್ತಾ ಇದ್ದದ್ದನ್ನು ನೋಡಿ, ಈ ಹೊತ್ತಿನಲ್ಲಿ ಯಾರಪ್ಪಾ ಬರುತ್ತಾರೆ ಎಂದು ತಿಳಿಯಲು ಬಾಗಿಲ ಬಳಿ ಹೋದೆ. ಅವರು ಯಾರೆಂಬುದನ್ನು ಬೇಗನೆ ಕಂಡುಕೊಂಡೆ. ಇಬ್ಬರು ವ್ಯಕ್ತಿಗಳು ತಾವು ಪೊಲೀಸ್‌ ಆಫೀಸರರು ಎಂದು ಹೇಳಿ ಅಲ್ಲಿ ನಿಂತಿದ್ದರು. ನಿಷಿದ್ಧ ಸಂಸ್ಥೆಯಾದ ಯೆಹೋವನ ಸಾಕ್ಷಿಗಳ ಸಾಹಿತ್ಯ ನನ್ನ ಮನೆಯಲ್ಲಿದೆಯೊ ಎಂದು ಹುಡುಕಲಿಕ್ಕಾಗಿ ತಾವು ಬಂದಿದ್ದೇವೆಂದು ಅವರು ಹೇಳಿದರು.

ಆಸ್ಟ್ರೇಲಿಯದಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ಬರಲು ಕಾರಣವೇನು ಮತ್ತು ನಾನು ಅವರಲ್ಲಿ ಒಬ್ಬಳಾದದ್ದು ಹೇಗೆ? ನಾನು 1910ರಲ್ಲಿ ಹತ್ತು ವರ್ಷ ವಯಸ್ಸಿನವಳಾಗಿದ್ದಾಗ, ನನ್ನ ತಾಯಿ ನನಗೆ ಕೊಟ್ಟ ಕೊಡುಗೆಯಿಂದ ಇದೆಲ್ಲ ಆರಂಭಗೊಂಡಿತು.

ಉತ್ತರ ಸಿಡ್ನಿಯ ಕ್ರೋಸ್‌ ನೆಸ್ಟ್‌ ಉಪನಗರದಲ್ಲಿ ನನ್ನ ಕುಟುಂಬ ವಾಸಿಸುತ್ತಿತ್ತು. ಒಂದು ದಿನ ನಾನು ಶಾಲೆಯಿಂದ ಮನೆಗೆ ಬರಲಾಗಿ, ನನ್ನ ತಾಯಿ ಮನೆಯ ಮುಂದಿನ ಬಾಗಿಲಿನಲ್ಲಿ ಒಬ್ಬನೊಡನೆ ಮಾತಾಡುತ್ತಿದ್ದರು. ಪುಸ್ತಕಗಳಿಂದ ತುಂಬಿದ್ದ ಬ್ಯಾಗನ್ನು ಹಿಡಿದಿದ್ದ ಈ ಸೂಟುಧಾರಿ ಅಪರಿಚಿತನ ಗುರುತನ್ನು ನಾನು ತಿಳಿಯಬಯಸಿದೆ. ನಾನು ‘ಕ್ಷಮಿಸಿ’ ಎಂದು ಹೇಳಿ ಮನೆಯೊಳಗೆ ಹೋದೆ. ಸ್ವಲ್ಪದರಲ್ಲಿ, ತಾಯಿ ನನ್ನನ್ನು ಕರೆದರು. ಅವರು ಹೇಳಿದ್ದು: “ಈ ವ್ಯಕ್ತಿ ಆಸಕ್ತಿಕರವಾದ ಪುಸ್ತಕಗಳನ್ನು ತಂದಿದ್ದಾರೆ ಮತ್ತು ಇವೆಲ್ಲವೂ ಶಾಸ್ತ್ರಸಂಬಂಧದ ಪುಸ್ತಕಗಳಾಗಿವೆ. ನಿನ್ನ ಹುಟ್ಟಿದ ದಿನ ಬೇಗನೆ ಬರಲಿರುವುದರಿಂದ, ನಿನಗೆ ಏನು ಬೇಕು, ಹೊಸ ಬಟ್ಟೆಯೊ, ಈ ಪುಸ್ತಕಗಳೊ?”

“ಓ, ಮಮ್ಮಿ, ನಾನು ಪುಸ್ತಕಗಳನ್ನೇ ತೆಗೆದುಕೊಳ್ಳುವೆ, ಉಪಕಾರ” ಎಂದೆ ನಾನು.

ಹೀಗೆ ನನ್ನ ಹತ್ತನೆಯ ವಯಸ್ಸಿನಲ್ಲಿ, ಚಾರ್ಲ್ಸ್‌ ಟೇಸ್‌ ರಸಲ್‌ ಬರೆದಿರುವ, ಶಾಸ್ತ್ರವಚನಗಳಲ್ಲಿನ ಅಧ್ಯಯನ (ಇಂಗ್ಲಿಷ್‌) ಪುಸ್ತಕದ ಮೊದಲ ಮೂರು ಸಂಪುಟಗಳು ನನ್ನಲ್ಲಿದ್ದವು. ಮನೆಯ ಬಾಗಿಲಿಗೆ ಬಂದಿದ್ದ ಆ ವ್ಯಕ್ತಿ ನನ್ನ ತಾಯಿಗೆ, ಆ ಪುಸ್ತಕಗಳು ನನಗೆ ಅರ್ಥಮಾಡಿಕೊಳ್ಳಲು ತೀರ ಕಷ್ಟಕರವಾಗಿರಬಹುದೆಂದೂ, ಈ ಕಾರಣದಿಂದ ನಿಮ್ಮ ಸಹಾಯದ ಅಗತ್ಯವಿದೆಯೆಂದೂ ಹೇಳಿದರು. ಅದನ್ನು ಮಾಡಲು ಇಷ್ಟಪಡುತ್ತೇನೆಂದು ತಾಯಿ ಹೇಳಿದರು. ಆದರೆ ವಿಷಾದಕರವಾಗಿ, ಇದಾಗಿ ಸ್ವಲ್ಪದರಲ್ಲಿ ನನ್ನ ತಾಯಿ ತೀರಿಕೊಂಡರು. ನಮ್ಮ ತಂದೆಯವರು ತುಂಬ ಶ್ರದ್ಧೆಯಿಂದ ನನ್ನ ತಮ್ಮ, ತಂಗಿ ಮತ್ತು ನನ್ನ ಪರಾಮರಿಕೆಯನ್ನು ಮಾಡಿದರೂ, ಈಗ ನನ್ನ ಮೇಲೆ ಹೆಚ್ಚು ಜವಾಬ್ದಾರಿಗಳು, ನಾನು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತೋರುವಷ್ಟು ಜವಾಬ್ದಾರಿಗಳು ಬಿದ್ದವು. ಆದರೂ, ಇನ್ನೊಂದು ದುರಂತ ಇನ್ನೇನು ಸಂಭವಿಸುವುದರಲ್ಲಿತ್ತು.

ಒಂದನೆಯ ಲೋಕಯುದ್ಧವು 1914ರಲ್ಲಿ ತಲೆದೋರಿತು ಮತ್ತು ಇನ್ನೊಂದು ವರುಷದೊಳಗೆ ನಮ್ಮ ಪ್ರಿಯ ತಂದೆಯವರು ಕೊಲ್ಲಲ್ಪಟ್ಟರು. ಅನಾಥರಾದ ನಮ್ಮಲ್ಲಿ ನನ್ನ ತಮ್ಮ ಮತ್ತು ತಂಗಿಯರನ್ನು ಸಂಬಂಧಿಕರ ಮನೆಗೂ ನನ್ನನ್ನು ಕ್ಯಾಥೊಲಿಕ್‌ ಬೋರ್ಡಿಂಗ್‌ ಕಾಲೇಜಿಗೂ ಕಳುಹಿಸಲಾಯಿತು. ಕೆಲವೊಮ್ಮೆ ನಾನು ಒಂಟಿತನದಿಂದ ಸಂಕಟಪಟ್ಟೆ. ಆದರೂ, ನನಗೆ ಇಷ್ಟವಾಗಿದ್ದ ಸಂಗೀತವನ್ನು, ವಿಶೇಷವಾಗಿ ಪಿಯಾನೊ ನುಡಿಸುವ ಕಲೆಯನ್ನು ಬೆನ್ನಟ್ಟಲು ಕೊಡಲ್ಪಟ್ಟ ಸದವಕಾಶಕ್ಕಾಗಿ ನಾನು ಆಭಾರಿಯಾಗಿದ್ದೇನೆ. ವರ್ಷಗಳು ಕಳೆಯಲಾಗಿ, ನಾನು ಆ ಬೋರ್ಡಿಂಗ್‌ ಕಾಲೇಜಿನಿಂದ ಉತ್ತೀರ್ಣಳಾಗಿ ಹೊರಬಂದೆ. ನಾನು 1919ರಲ್ಲಿ ರಾಯ್‌ ಸ್ಮಿತ್‌ ಎಂಬ ಸಂಗೀತೋಪಕರಣ ಮಾರಾಟಗಾರನನ್ನು ಮದುವೆಯಾದೆ. 1920ರಲ್ಲಿ ನಮಗೆ ಮಗು ಹುಟ್ಟಲು ನಾನು ಪುನಃ ದೈನಂದಿನ ಜೀವನಕ್ರಮದಲ್ಲಿ ಮಗ್ನಳಾದೆ. ಆದರೆ ಆ ಪುಸ್ತಕಗಳ ಕುರಿತಾಗಿ ಏನು?

ನೆರೆಯವಳು ಕೊಟ್ಟ ಆತ್ಮಿಕ ಸತ್ಯ

ಆ ವರುಷಗಳಲ್ಲೆಲ್ಲ ಆ “ಬೈಬಲ್‌ ಪುಸ್ತಕಗಳು” ನನ್ನೊಂದಿಗೆ ಇದ್ದವು. ನಾನು ಅವುಗಳನ್ನು ಓದಿರದಿದ್ದರೂ, ಅವುಗಳಲ್ಲಿರುವ ಸಂದೇಶವು ಮಹತ್ವದ್ದೆಂದು ನನಗೆ ಆಂತರಿಕವಾಗಿ ತಿಳಿದಿತ್ತು. ಬಳಿಕ 1920ನೆಯ ದಶಕದ ಕೊನೆಯಲ್ಲಿ ಒಂದು ದಿನ ಲಿಲ್‌ ಬಿಮ್ಸನ್‌ ಎಂಬ ನೆರೆಯಾಕೆ ನನ್ನನ್ನು ಭೇಟಿಮಾಡಲು ಬಂದಳು. ನಾವು ಹಜಾರದಲ್ಲಿ ಕುಳಿತು ಚಹಾ ಕುಡಿದೆವು.

ಆಕೆ ಥಟ್ಟನೆ, “ಓ, ನಿನ್ನೊಡನೆ ಆ ಪುಸ್ತಕಗಳಿವೆ!” ಎಂದಳು.

“ಯಾವ ಪುಸ್ತಕಗಳು?” ಎಂದೆ ನಾನು ತಬ್ಬಿಬ್ಬಾಗಿ.

ಆಕೆ ಅಲಮಾರಿನಲ್ಲಿದ್ದ ಶಾಸ್ತ್ರವಚನಗಳಲ್ಲಿನ ಅಧ್ಯಯನ (ಇಂಗ್ಲಿಷ್‌) ಪುಸ್ತಕಗಳನ್ನು ತೋರಿಸಿದಳು. ಲಿಲ್‌ ಅವುಗಳನ್ನು ಅಲ್ಪ ಸಮಯಕ್ಕೆ ಮನೆಗೆ ತೆಗೆದುಕೊಂಡು ಹೋಗಿ ಅತ್ಯಾಸಕ್ತಿಯಿಂದ ಓದಿದಳು. ತಾನು ಓದಿ ತಿಳಿದುಕೊಂಡ ವಿಷಯಗಳಿಂದ ಅವಳಲ್ಲಿ ಉಂಟಾದ ಉದ್ರೇಕವು ಬೇಗನೆ ಪ್ರತ್ಯಕ್ಷವಾಯಿತು. ಆಗ ಬೈಬಲ್‌ ವಿದ್ಯಾರ್ಥಿಗಳೆಂದು ಪ್ರಸಿದ್ಧರಾಗಿದ್ದ ಯೆಹೋವನ ಸಾಕ್ಷಿಗಳಿಂದ ಲಿಲ್‌ ಇನ್ನೂ ಹೆಚ್ಚು ಸಾಹಿತ್ಯಗಳನ್ನು ಪಡೆದುಕೊಂಡಳು. ಇದಲ್ಲದೆ, ಆಕೆ ಕಲಿತುಕೊಂಡಿದ್ದ ವಿಷಯಗಳನ್ನು ಇತರರಿಗೆ ಹೇಳದೆ ಸುಮ್ಮನಿರಲು ಆಕೆಗೆ ಸಾಧ್ಯವಾಗದೆ ಹೋಯಿತು. ಆಕೆ ಪಡೆದುಕೊಂಡ ಒಂದು ಪುಸ್ತಕವು ದ ಹಾರ್ಪ್‌ ಆಫ್‌ ಗಾಡ್‌ ಆಗಿತ್ತು. ಅದು ಬೇಗನೆ ನಮ್ಮ ಮನೆಗೂ ಬಂದು ಮುಟ್ಟಿತು. ಯೆಹೋವನ ಸೇವೆಯಲ್ಲಿ ನನ್ನ ಜೀವನವು ಕೊನೆಗೆ, ನಾನು ಈ ಬೈಬಲಾಧಾರಿತ ಪುಸ್ತಕವನ್ನು ಓದತೊಡಗಿದಾಗ ಆರಂಭಗೊಂಡಿತು. ನನ್ನ ಮೂಲಭೂತ ಪ್ರಶ್ನೆಗಳಿಗೆ ಚರ್ಚಿನಲ್ಲಿ ನನಗೆ ಲಭ್ಯವಾಗದಿದ್ದ ಉತ್ತರಗಳನ್ನು ನಾನು ಕಟ್ಟಕಡೆಗೆ ಕಂಡುಕೊಂಡೆ.

ಸಂತೋಷಕರವಾದ ವಿಷಯವೇನಂದರೆ, ರಾಯ್‌ ಬೈಬಲಿನ ಸಂದೇಶಕ್ಕೆ ವಿಶೇಷವಾದ ಗಮನವನ್ನು ಕೊಡಲಾಗಿ, ನಾವಿಬ್ಬರೂ ಆಸಕ್ತಿಯ ಬೈಬಲ್‌ ವಿದ್ಯಾರ್ಥಿಗಳಾದೆವು. ಈ ಮೊದಲು ರಾಯ್‌ ಫ್ರೀಮೇಸನ್ಸ್‌ ಸಂಸ್ಥೆಯ ಸದಸ್ಯರಾಗಿದ್ದರು. ಆದರೆ ಈಗ ನಮ್ಮ ಕುಟುಂಬವು ಸತ್ಯಾರಾಧನೆಯಲ್ಲಿ ಐಕ್ಯಗೊಳ್ಳಲಾಗಿ ಸಹೋದರರಲ್ಲಿ ಒಬ್ಬರು ವಾರಕ್ಕೆ ಎರಡಾವರ್ತಿ ಇಡೀ ಕುಟುಂಬದೊಂದಿಗೆ ಬೈಬಲ್‌ ಅಧ್ಯಯನ ನಡೆಸಿದರು. ನಾವು ಬೈಬಲ್‌ ವಿದ್ಯಾರ್ಥಿಗಳ ಕೂಟಗಳಿಗೆ ಹಾಜರಾಗಲು ಆರಂಭಿಸಿದಾಗ ಇನ್ನೂ ಹೆಚ್ಚಿನ ಉತ್ತೇಜನ ನಮಗೆ ದೊರೆಯಿತು. ಕೂಟದ ಸ್ಥಳವು ಸಿಡ್ನಿಯ ಉಪನಗರವಾದ ನ್ಯೂಟೌನ್‌ ಎಂಬಲ್ಲಿದ್ದ ಒಂದು ಚಿಕ್ಕ ಬಾಡಿಗೆಯ ಸಭಾಗೃಹವಾಗಿತ್ತು. ಆ ಸಮಯದಲ್ಲಿ, ಇಡೀ ದೇಶದಲ್ಲೇ 400ಕ್ಕಿಂತಲೂ ಕಡಿಮೆ ಸಾಕ್ಷಿಗಳು ಇದ್ದ ಕಾರಣ, ಹೆಚ್ಚಿನ ಸಹೋದರರಿಗೆ ಕೂಟಗಳಿಗೆ ಹಾಜರಾಗಲು ತುಂಬ ದೂರದ ಪ್ರಯಾಣವನ್ನು ಮಾಡಬೇಕಾಗಿತ್ತು.

ನಮ್ಮ ಕುಟುಂಬಕ್ಕಾದರೊ, ಕೂಟಗಳಿಗೆ ಹಾಜರಾಗಲಿಕ್ಕಾಗಿ ಸಿಡ್ನಿ ಹಾರ್ಬರ್‌ ಅನ್ನು ಕ್ರಮವಾಗಿ ದಾಟಿಹೋಗಬೇಕಾಗುತ್ತಿತ್ತು. ಸಿಡ್ನಿ ಹಾರ್ಬರ್‌ ಬ್ರಿಜ್‌ 1932ರಲ್ಲಿ ಕಟ್ಟಲ್ಪಡುವುದಕ್ಕೆ ಮೊದಲು ಇಂತಹ ಪ್ರತಿಯೊಂದು ದಾಟುವಿಕೆಯನ್ನು ದೋಣಿಯ ಮೂಲಕ ಮಾಡಬೇಕಾಗುತ್ತಿತ್ತು. ಪ್ರಯಾಣಕ್ಕೆ ತಗಲುವ ಸಮಯ ಮತ್ತು ಹಣದ ಎದುರಿನಲ್ಲಿಯೂ ಯೆಹೋವನು ಒದಗಿಸುತ್ತಿದ್ದ ಈ ಆತ್ಮಿಕ ಭೋಜನದಲ್ಲಿ ಒಂದನ್ನೂ ತಪ್ಪಿಸದಿರಲು ನಾವು ಪ್ರಯತ್ನಿಸಿದೆವು. ನಮ್ಮನ್ನು ಸತ್ಯದಲ್ಲಿ ಭದ್ರವಾಗಿ ಬೇರೂರಿಸಿಕೊಳ್ಳುವ ಪ್ರಯತ್ನವು ಸಾರ್ಥಕವಾಗಿತ್ತು. ಏಕೆಂದರೆ ಎರಡನೆಯ ಲೋಕಯುದ್ಧದ ಮೋಡವು ಕವಿಯತೊಡಗಿತ್ತು ಮತ್ತು ತಾಟಸ್ಥ್ಯದ ವಿವಾದಾಂಶವು ನಮ್ಮ ಕುಟುಂಬಕ್ಕೆ ನೇರವಾಗಿ ತಟ್ಟಲಿಕ್ಕಿತ್ತು.

ಪರೀಕ್ಷೆ ಮತ್ತು ಪ್ರತಿಫಲಗಳ ಸಮಯ

ನನಗೂ ನನ್ನ ಕುಟುಂಬಕ್ಕೂ 1930ಗಳ ಆದಿಭಾಗ ರೋಮಾಂಚಕಾರಿಯಾದ ಸಮಯವಾಗಿತ್ತು. ನನಗೆ 1930ರಲ್ಲಿ ದೀಕ್ಷಾಸ್ನಾನವಾಯಿತು ಮತ್ತು 1931ರಲ್ಲಿ ಆ ಸ್ಮರಣೀಯ ಅಧಿವೇಶನದಲ್ಲಿ ನಾನು ಹಾಜರಿದ್ದೆ. ಆಗ ನಾವೆಲ್ಲರೂ ಎದ್ದು ನಿಂತು, ಯೆಹೋವನ ಸಾಕ್ಷಿಗಳು ಎಂಬ ಆ ಸುಂದರವಾದ ಹೆಸರನ್ನು ಅಂಗೀಕರಿಸಲು ಒಪ್ಪಿಕೊಂಡೆವು. ಸಂಸ್ಥೆಯು ಪ್ರೋತ್ಸಾಹಿಸಿದ ಎಲ್ಲ ಸಾರುವ ವಿಧಾನ ಮತ್ತು ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಾ, ರಾಯ್‌ ಮತ್ತು ನಾನು ಆ ಹೆಸರಿಗನುಸಾರ ಜೀವಿಸಲು ಪ್ರಯತ್ನಿಸಿದೆವು. ಉದಾಹರಣೆಗೆ, 1932ರಲ್ಲಿ, ಸಿಡ್ನಿ ಹಾರ್ಬರ್‌ ಬ್ರಿಜ್‌ ಪ್ರಾರಂಭೋತ್ಸವಕ್ಕೆ ಬಂದಿದ್ದ ಜನಸ್ತೋಮಕ್ಕೆ ಕೊಡಲು ಏರ್ಪಡಿಸಿದ ಆ ವಿಶೇಷ ಪುಸ್ತಿಕೆಯ ಕಾರ್ಯಾಚರಣೆಯಲ್ಲಿ ನಾವು ಭಾಗವಹಿಸಿದೆವು. ಆಗ ಧ್ವನಿವರ್ಧಕ ಕಾರ್‌ಗಳ ಉಪಯೋಗವು ಒಂದು ವಿಶೇಷ ಆಕರ್ಷಣೆಯಾಗಿತ್ತು ಮತ್ತು ನಮ್ಮ ಕುಟುಂಬದ ಕಾರಿಗೆ ಸಹ ಧ್ವನಿವರ್ಧಕವನ್ನು ಕಟ್ಟಿ ಉಪಯೋಗಿಸುವ ಸುಯೋಗ ಸಿಕ್ಕತು. ಈ ತಂತ್ರಜ್ಞಾನದ ಮೂಲಕ, ಸಿಡ್ನಿಯ ರಸ್ತೆಗಳು ಸಹೋದರ ರದರ್‌ಫರ್ಡ್‌ ಅವರ ರೆಕಾರ್ಡ್‌ ಮಾಡಲ್ಪಟ್ಟ ಬೈಬಲ್‌ ಭಾಷಣಗಳಿಂದ ಪ್ರತಿಧ್ವನಿಸುವಂತೆ ಮಾಡಿದೆವು.

ಆದರೂ, ಕಾಲವು ಪುನಃ ಬದಲಾಗುತ್ತಿದ್ದು, ಹೆಚ್ಚು ಕಷ್ಟಕರವಾಗಿ ಪರಿಣಮಿಸತೊಡಗಿತು. ಮಹಾ ಆರ್ಥಿಕ ಕುಸಿತವು 1932ರಲ್ಲಿ ಆಸ್ಟ್ರೇಲಿಯದ ಮೇಲೆ ಭಾರಿ ಪ್ರಭಾವವನ್ನು ಬೀರಲಾಗಿ, ರಾಯ್‌ ಮತ್ತು ನಾನು ನಮ್ಮ ಜೀವನವನ್ನು ಸರಳೀಕರಿಸಲು ನಿರ್ಣಯಿಸಿದೆವು. ನಾವು ಇದನ್ನು ಮಾಡಿದ ಒಂದು ವಿಧವು, ನಾವು ಸಭೆಯ ಸಮೀಪ ಮನೆಮಾಡಿದ್ದೇ ಆಗಿತ್ತು ಮತ್ತು ಹೀಗೆ ನಾವು ನಮ್ಮ ಪ್ರಯಾಣದ ವೆಚ್ಚಗಳನ್ನು ಬಹಳ ಮಟ್ಟಿಗೆ ಕಡಿಮೆಮಾಡಿದೆವು. ಆದರೆ ಎರಡನೆಯ ಲೋಕ ಯುದ್ಧದ ಭೀತಿಯು ಭೂಗೋಳವನ್ನು ಆವರಿಸಿದಾಗ ಈ ಆರ್ಥಿಕ ಒತ್ತಡಗಳು ಕ್ಷುಲ್ಲಕವಾಗಿ ಕಂಡುಬಂದವು.

ಲೋಕದ ಭಾಗವಾಗಿರಬಾರದೆಂಬ ಯೇಸುವಿನ ಆಜ್ಞೆಗೆ ವಿಧೇಯರಾದುದರಿಂದ ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಹಿಂಸೆಯ ಗುರಿಹಲಗೆಯಾದಾಗ, ಆಸ್ಟ್ರೇಲಿಯಕ್ಕೆ ಇದರಿಂದ ವಿನಾಯಿತಿ ಇರಲಿಲ್ಲ. ಯುದ್ಧಸಮಯದ ಉನ್ಮಾದದಿಂದ ಕೆರಳಿ, ಕೆಲವರು ನಮ್ಮನ್ನು ಕಮ್ಯೂನಿಸ್ಟರೆಂದು ಕರೆದರು. ಆಸ್ಟ್ರೇಲಿಯದಲ್ಲಿ ನಮಗಿದ್ದ ನಾಲ್ಕು ರೇಡಿಯೊ ಸ್ಟೇಷನ್‌ಗಳನ್ನು, ಯೆಹೋವನ ಸಾಕ್ಷಿಗಳು ಜಪಾನಿನ ಸೈನ್ಯಕ್ಕೆ ಸುದ್ದಿಗಳನ್ನು ಕಳುಹಿಸಲು ಉಪಯೋಗಿಸುತ್ತಾರೆಂದು ಹೇಳಿ ಈ ವಿರೋಧಿಗಳು ಸುಳ್ಳು ಅಪವಾದ ಹೊರಿಸಿದರು.

ಸೇನಾ ಸೇವೆಗೆ ಕರೆಯಲ್ಪಟ್ಟ ಯುವ ಸಹೋದರರ ಮೇಲೆ ಒಪ್ಪಂದ ಮಾಡಿಕೊಳ್ಳಲು ಭಾರೀ ಒತ್ತಡವು ಬಂತು. ಆದರೆ ನನ್ನ ಮೂವರು ಗಂಡುಮಕ್ಕಳೂ ತಮ್ಮ ವಿಶ್ವಾಸಗಳನ್ನು ಸಮರ್ಥಿಸಿ ತಮ್ಮ ತಾಟಸ್ಥ್ಯವನ್ನು ಕಾಪಾಡಿಕೊಂಡರೆಂದು ಹೇಳಲು ನಾನು ಸಂತೋಷಿಸುತ್ತೇನೆ. ನಮ್ಮ ಹಿರಿಯ ಮಗ ರಿಚರ್ಡ್‌ಗೆ 18 ತಿಂಗಳುಗಳ ಸೆರೆವಾಸ ಸಿಕ್ಕಿತು. ಎರಡನೆಯ ಮಗ ಕೆವಿನ್‌, ಆತ್ಮಸಾಕ್ಷಿಕ ವಿರೋಧಿಯಾಗಿ ನೋಂದಾಯಿಸಿಕೊಂಡನು. ಆದರೆ ಕೊನೆಯ ಮಗ ಸ್ಟೂಅರ್ಟ್‌, ಈ ತಾಟಸ್ಥ್ಯದ ವಿಷಯ ಸಮರ್ಥಿಸಿಕೊಂಡು ಕೋರ್ಟ್‌ ಕೇಸನ್ನು ಮುಗಿಸಲು ಮೋಟರ್‌ ಸೈಕಲಿನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿ ತೀರಿಕೊಂಡನು. ಈ ದುರಂತ ನಿಜವಾಗಿಯೂ ತುಂಬ ಮಾನಸಿಕ ಒತ್ತಡವನ್ನು ತಂದಿತು. ಆದರೂ ರಾಜ್ಯದ ಮೇಲೆ ಮತ್ತು ಯೆಹೋವನ ಪುನರುತ್ಥಾನದ ವಾಗ್ದಾನದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು, ನಾವು ತಾಳಿಕೊಳ್ಳುವಂತೆ ಸಹಾಯಮಾಡಿತು.

ನಿಜ ಬಹುಮಾನವು ಅವರ ಕೈಗೆ ಸಿಗಲಿಲ್ಲ

ಜನವರಿ 1941ರಲ್ಲಿ, ಆಸ್ಟ್ರೇಲಿಯದಲ್ಲಿ ಯೆಹೋವನ ಸಾಕ್ಷಿಗಳನ್ನು ನಿಷೇಧಿಸಲಾಯಿತು. ಆದರೆ ಯೇಸುವಿನ ಅಪೊಸ್ತಲರು ಮಾಡಿದಂತೆ, ರಾಯ್‌ ಮತ್ತು ನಾನು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾದೆವು. ನಾವು ಎರಡೂವರೆ ವರ್ಷಕಾಲ ಗುಪ್ತ ರೀತಿಯಲ್ಲಿ ಕಾರ್ಯನಡೆಸಿದೆವು. ನಾನು ಹಿಂದೆ ಮಾತಾಡಿದ್ದ ಆ ಮಾಮೂಲಿ ಉಡುಪಿನ ಪೊಲೀಸರು ನನ್ನ ಬಾಗಿಲನ್ನು ತಟ್ಟಿದ್ದು ಇದೇ ಸಮಯದಲ್ಲಿ. ಆಗ ಏನಾಯಿತು?

ನಾನು ಅವರನ್ನು ಒಳಗೆ ಕರೆದೆ. ಅವರು ಮನೆಯನ್ನು ಪ್ರವೇಶಿಸಿದಾಗ, “ನೀವು ಮನೆಯ ತಲಾಷು ಮಾಡುವ ಮೊದಲು ನಾನು ಚಹಾ ಕುಡಿದು ಮುಗಿಸುವಂತೆ ಅನುಮತಿಸುವಿರೊ?” ಎಂದು ಕೇಳಿದೆ. ಆಶ್ಚರ್ಯಕರವಾಗಿ ಅವರು ಒಪ್ಪಿದಾಗ, ನಾನು ಯೆಹೋವನಿಗೆ ಪ್ರಾರ್ಥಿಸಲು ಮತ್ತು ನನ್ನ ಆಲೋಚನೆಗಳನ್ನು ಸಂಘಟಿಸಲು ಅಡುಗೆ ಮನೆಗೆ ಹೋದೆ. ನಾನು ಹಿಂದಿರುಗಿದಾಗ, ಪೊಲೀಸರಲ್ಲಿ ಒಬ್ಬನು ನಮ್ಮ ಅಧ್ಯಯನದ ವಿಭಾಗಕ್ಕೆ ಹೋಗಿ, ವಾಚ್‌ಟವರ್‌ ಎಂಬ ಲಾಂಛನವಿದ್ದ ಪ್ರತಿ ಪುಸ್ತಕವನ್ನು, ನನ್ನ ಸಾಕ್ಷಿಕಾರ್ಯದಲ್ಲಿ ಉಪಯೋಗಿಸಿದ ಬ್ಯಾಗ್‌ನಲ್ಲಿದ್ದ ಸಾಹಿತ್ಯ ಮತ್ತು ಬೈಬಲನ್ನೂ ತೆಗೆದುಕೊಂಡನು.

ಅವನು ನಂತರ ಕೇಳಿದ್ದು: “ಬೇರೆಲ್ಲಿಯೂ ಕಾರ್ಟನ್‌ಗಳಲ್ಲಿ ಅಡಗಿಸಿಟ್ಟ ಪುಸ್ತಕಗಳು ನಿಮ್ಮಲ್ಲಿಲ್ಲ ಎಂಬುದು ಖಾತ್ರಿಯೊ? ಈ ರಸ್ತೆಯ ಕೊನೆಯಲ್ಲಿರುವ ಸಭಾಗೃಹದಲ್ಲಿ ನೀವು ಪ್ರತಿವಾರ ಕೂಟಗಳಿಗೆ ಹಾಜರಾಗುತ್ತೀರೆಂದೂ ಅಲ್ಲಿಗೆ ತುಂಬ ಸಾಹಿತ್ಯಗಳನ್ನು ಒಯ್ಯುತ್ತೀರೆಂದೂ ನಮಗೆ ಸುದ್ದಿ ಸಿಕ್ಕಿದೆ.”

“ಅದು ನಿಜ, ಆದರೆ ಈಗ ಅದು ಅಲ್ಲಿಲ್ಲ” ಎಂದೆ ನಾನು.

“ಹೌದು, ಶ್ರೀಮತಿ ಸ್ಮಿತ್‌, ಅದು ನಮಗೆ ಗೊತ್ತು. ಆದರೆ ಈ ಜಿಲ್ಲೆಯಾದ್ಯಂತವಿರುವವರ ಮನೆಗಳಲ್ಲಿ ಆ ಸಾಹಿತ್ಯಗಳನ್ನು ಅಡಗಿಸಿಡಲಾಗಿದೆ ಎಂಬುದೂ ನಮಗೆ ಗೊತ್ತು” ಎಂದು ಅವನು ಹೇಳಿದನು.

ಅವರು ನಮ್ಮ ಮಗನ ಮಲಗುವ ಕೋಣೆಯಲ್ಲಿ ಫ್ರೀಡಮ್‌ ಆರ್‌ ರೋಮನಿಸ್ಮ್‌ ಪುಸ್ತಕದ ಐದು ಕಾರ್ಟನ್‌ಗಳನ್ನು ಕಂಡುಹಿಡಿದರು.

“ಗ್ಯಾರೇಜ್‌ನಲ್ಲಿ ಇನ್ನು ಏನೂ ಇಲ್ಲದಿರುವುದು ನಿಶ್ಚಯವೊ?” ಎಂದನವನು.

“ಅಲ್ಲಿ ನಿಶ್ಚಯವಾಗಿ ಏನೂ ಇಲ್ಲ” ಎಂದೆ ನಾನು.

ಆಗ ಅವನು ಊಟದ ಕೋಣೆಗೆ ಹೋಗಿ ಅಲಮಾರಿಯನ್ನು ತೆರೆದನು. ಅದರಲ್ಲಿ ಸಭಾ ವರದಿಯನ್ನು ಹಾಕಲು ಉಪಯೋಗಿಸುವ ಖಾಲಿ ಫಾರ್ಮುಗಳಿದ್ದವು. ಅವನು ಇದನ್ನು ತೆಗೆದುಕೊಂಡು ಗ್ಯಾರೇಜನ್ನು ನೋಡಬೇಕೆಂದು ಪಟ್ಟುಹಿಡಿದನು.

“ಹಾಗಿರುವಲ್ಲಿ, ಈ ಕಡೆ ಬನ್ನಿ,” ಎಂದೆ ನಾನು.

ಅವರು ನನ್ನ ಹಿಂದಿನಿಂದ ಗ್ಯಾರೇಜಿಗೆ ಬಂದು, ತಲಾಷಿನ ಬಳಿಕ ಕೊನೆಗೆ ಹೋಗಿಬಿಟ್ಟರು.

ಆ ಪೊಲೀಸರು ಆ ಐದು ಕಾರ್ಟನ್‌ಗಳಲ್ಲಿ ತಮ್ಮ ತಲಾಷಿಗೆ ಉತ್ತಮ ಬಹುಮಾನ ದೊರಕಿತೆಂದು ನೆನಸಿದರು! ಆದರೂ ಅವರು ನಿಜ ಬಹುಮಾನವನ್ನು ಹಿಂದೆ ಬಿಟ್ಟಿದ್ದರು. ಆ ದಿನಗಳಲ್ಲಿ, ನಾನು ಸಭೆಯ ಕಾರ್ಯದರ್ಶಿಯಾಗಿದ್ದೆ ಮತ್ತು ಮನೆಯಲ್ಲಿ ಸಭಾ ಪ್ರಚಾರಕರ ಪಟ್ಟಿ ಮತ್ತು ಇತರ ಪ್ರಮುಖ ಮಾಹಿತಿಗಳಿದ್ದವು. ಇಂತಹ ತಲಾಷುಗಳಿಗೆ ಸಿದ್ಧಳಾಗಿರುವಂತೆ ಸಹೋದರರು ನನಗೆ ಮುನ್ನೆಚ್ಚರಿಕೆ ಕೊಟ್ಟಿದ್ದರು. ಮತ್ತು ನಾನು ಈ ದಾಖಲೆಗಳನ್ನು ಜಾಗರೂಕತೆಯಿಂದ ಅಡಗಿಸಿಟ್ಟಿದ್ದೆ. ನಾನು ಅವನ್ನು ಲಕೋಟೆಯಲ್ಲಿ ಹಾಕಿ ಚಹಾ, ಸಕ್ಕರೆ ಮತ್ತು ಹಿಟ್ಟಿನ ಟಿನ್ನುಗಳ ಅಡಿಯಲ್ಲಿ ಇಟ್ಟಿದ್ದೆ. ನಾನು ಕೆಲವನ್ನು ಗ್ಯಾರೇಜ್‌ನ ಬಳಿಯಿದ್ದ ಪಕ್ಷಿಗೃಹದಲ್ಲಿಯೂ ಇಟ್ಟಿದ್ದೆ. ಹೀಗೆ, ಪೊಲೀಸರು ತಮಗೆ ಬೇಕಾಗಿದ್ದ ಮಾಹಿತಿಯ ಬಳಿಯಿಂದಲೇ ನಡೆದು ಸೀದಾ ಮುಂದೆ ಹೋಗಿದ್ದರು.

ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವುದು

ವರುಷ 1947ರೊಳಗೆ, ನಮ್ಮ ದೊಡ್ಡ ಮಕ್ಕಳು ತಮ್ಮ ಸ್ವಂತ ಕುಟುಂಬಗಳನ್ನು ಆರಂಭಿಸಿದ್ದರು. ಈ ಹಂತದಲ್ಲಿ, ಪೂರ್ಣ ಸಮಯದ ಸೇವೆಯನ್ನು ಆರಂಭಿಸುವುದು ನಮಗೆ ಸಾಧ್ಯವಿರುವ ವಿಷಯವೆಂದು ರಾಯ್‌ ಮತ್ತು ನಾನು ತೀರ್ಮಾನಿಸಿದೆವು. ದಕ್ಷಿಣ ಆಸ್ಟ್ರೇಲಿಯ ಕ್ಷೇತ್ರಗಳಲ್ಲಿ ಪಯನೀಯರರ ಅಗತ್ಯವಿದ್ದುದರಿಂದ, ನಾವು ನಮ್ಮ ಮನೆಯನ್ನು ಮಾರಿ, ಒಂದು ಕ್ಯಾರವಾನ್‌ ಅಥವಾ ಟ್ರೇಲರ್‌ ವಾಹನವನ್ನು ಖರೀದಿಸಿ, ಅದಕ್ಕೆ “ಕಾವಲಿನಬುರುಜು” ಎಂಬ ಅರ್ಥವಿರುವ ಮಿಚ್ಪಾ ಎಂದು ಹೆಸರಿಟ್ಟೆವು. ಈ ರೀತಿಯ ವಾಸಶೈಲಿಯು ನಾವು ಚದರಿರುವ ಪ್ರದೇಶಗಳಲ್ಲಿ ಸೇವೆಮಾಡುವಂತೆ ಬಿಡುತ್ತದೆ. ಅನೇಕವೇಳೆ, ಯಾರಿಗೂ ನೇಮಿಸಲ್ಪಟ್ಟಿರದ ಗ್ರಾಮ್ಯ ಪ್ರದೇಶಗಳಲ್ಲಿ ನಾವು ಕೆಲಸ ಮಾಡಿದೆವು. ಆ ಸಮಯದ ಅನೇಕ ಸವಿ ನೆನಪುಗಳು ನನಗಿವೆ. ನಾನು ಮಾಡುತ್ತಿದ್ದ ಒಂದು ಅಧ್ಯಯನವು ಬೆವರ್ಲಿಯೆಂಬ ಯುವತಿಯೊಂದಿಗೆ. ದೀಕ್ಷಾಸ್ನಾನಕ್ಕೆ ಪ್ರಗತಿ ಹೊಂದುವ ಮೊದಲೇ ಆಕೆ ಆ ಪ್ರದೇಶವನ್ನು ಬಿಟ್ಟುಹೋದಳು. ಆದರೆ ವರ್ಷಗಳ ಬಳಿಕ, ಒಂದು ಅಧಿವೇಶನದಲ್ಲಿ ಒಬ್ಬ ಸಹೋದರಿ ನನ್ನನ್ನು ಸಮೀಪಿಸಿ, ತಾನೇ ಬೆವರ್ಲಿ ಎಂದು ಹೇಳಿದಾಗ ನನಗಾದ ಸಂತೋಷವು ಎಷ್ಟೆಂದು ತುಸು ಊಹಿಸಿಕೊಳ್ಳಿರಿ! ಆಕೆಯ ಗಂಡ ಮತ್ತು ಮಕ್ಕಳೊಂದಿಗೆ ಅಷ್ಟು ವರ್ಷಗಳ ಬಳಿಕ ಆಕೆ ಯೆಹೋವನನ್ನು ಸೇವಿಸುತ್ತಿರುವುದನ್ನು ನೋಡುವಾಗ ನನ್ನ ಆನಂದಕ್ಕೆ ಮಿತಿಯಿರಲಿಲ್ಲ.

ವರುಷ 1979ರಲ್ಲಿ ನನಗೆ ಪಯನೀಯರ್‌ ಸೇವಾ ಶಾಲೆಗೆ ಹಾಜರಾಗುವ ಸದವಕಾಶ ದೊರೆಯಿತು. ಆ ಶಾಲೆಯಲ್ಲಿ ಒತ್ತಿ ಹೇಳಲ್ಪಟ್ಟ ವಿಷಯಗಳಲ್ಲಿ ಒಂದು, ಪಯನೀಯರ್‌ ಶುಶ್ರೂಷೆಯಲ್ಲಿ ತಾಳಿಕೊಂಡಿರಬೇಕಾದರೆ ನಮಗೆ ಒಂದು ಉತ್ತಮವಾದ ಸ್ವಂತ ಬೈಬಲ್‌ ಅಧ್ಯಯನದ ಕ್ರಮವಿರಬೇಕು. ಅದು ನಿಜವೆಂದು ನಾನು ತಿಳಿದುಕೊಂಡಿರುವುದು ನಿಶ್ಚಯ. ಅಧ್ಯಯನ, ಕೂಟ ಮತ್ತು ಸೇವೆ​—ಇವೇ ನನ್ನ ಜೀವನವಾಗಿವೆ. ನಾನು 50ಕ್ಕೂ ಹೆಚ್ಚು ವರುಷಗಳಲ್ಲಿ ರೆಗ್ಯುಲರ್‌ ಪಯನೀಯರಳಾಗಿ ಸೇವೆಮಾಡಿರುವ ವಿಷಯವನ್ನು ನಾನು ಒಂದು ಸುಯೋಗವಾಗಿ ಪರಿಗಣಿಸುತ್ತೇನೆ.

ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವುದು

ಆದರೆ ಕಳೆದ ಕೆಲವು ದಶಕಗಳು ನನಗೆ ವಿಶೇಷವಾದ ಕೆಲವು ಸಮಸ್ಯೆಗಳನ್ನು ತಂದೊಡ್ಡಿವೆ. ನನಗೆ ಗ್ಲಾಕೋಮ ಎಂಬ ಕಣ್ಣು ವ್ಯಾಧಿ ಇದೆಯೆಂದು 1962ರಲ್ಲಿ ಪತ್ತೆಹಚ್ಚಲಾಯಿತು. ಆಗ ದೊರೆಯುತ್ತಿದ್ದ ಚಿಕಿತ್ಸೆ ತೀರ ಸೀಮಿತವಾಗಿದ್ದುದರಿಂದ ನನ್ನ ದೃಷ್ಟಿ ತೀರ ಬೇಗನೆ ಕೆಡತೊಡಗಿತು. ರಾಯ್‌ ಆರೋಗ್ಯವೂ ಕೆಡತೊಡಗಿ, 1983ರಲ್ಲಿ ಅತಿ ಕಠಿನ ರೀತಿಯ ಪಾರ್ಶ್ವವಾಯು ಹೊಡೆತವು ಅವರನ್ನು ಆಂಶಿಕವಾಗಿ ಶಕ್ತಿಹೀನವೂ ವಾಕ್‌ಶಕ್ತಿಯನ್ನು ಕಳೆದುಕೊಳ್ಳುವಂತೆಯೂ ಮಾಡಿತು. ಅವರು 1986ರಲ್ಲಿ ತೀರಿಕೊಂಡರು. ನನ್ನ ಪೂರ್ಣ ಸಮಯದ ಸೇವೆಯ ಕಾಲದಲ್ಲಿ ಅವರು ನನಗೆ ತುಂಬ ಪ್ರಾಯೋಗಿಕ ಬೆಂಬಲವನ್ನು ಕೊಟ್ಟಿದ್ದರು ಮತ್ತು ಅವರ ಇಲ್ಲದಿರುವಿಕೆಗಾಗಿ ನಾನು ನಿಜವಾಗಿಯೂ ನೊಂದುಕೊಳ್ಳುತ್ತಿದ್ದೇನೆ.

ಇಂತಹ ಪ್ರತಿಬಂಧಗಳ ಎದುರಿನಲ್ಲಿಯೂ, ನಾನು ಉತ್ತಮವಾದ ಆತ್ಮಿಕ ಕಾರ್ಯಕ್ರಮವನ್ನು ಪಾಲಿಸಲು ಪ್ರಯತ್ನಿಸಿದೆ. ನಾನು ಗಟ್ಟಿಯಾಗಿದ್ದ, ನಮ್ಮ ಅರ್ಧಗ್ರಾಮೀಣ ಪ್ರದೇಶದಲ್ಲಿ ಕ್ಷೇತ್ರ ಸೇವೆಗೆ ಯೋಗ್ಯವಾಗಿರುವ ಒಂದು ಕಾರನ್ನು ಖರೀದಿಸಿ, ನನ್ನ ಮಗಳಾದ ಜಾಯ್ಸ್‌ ಜೊತೆಗೆ ನನ್ನ ಪಯನೀಯರ್‌ ಸೇವೆಯನ್ನು ಮುಂದುವರಿಸಿದೆ. ನನ್ನ ದೃಷ್ಟಿ ಪ್ರಗತಿಪರವಾಗಿ ಕೆಡುತ್ತಾ ಹೋಗಿ, ಕೊನೆಗೆ ನಾನು ಒಂದು ಕಣ್ಣಿನ ದೃಷ್ಟಿಯನ್ನು ಪೂರ್ತಿ ಕಳೆದುಕೊಂಡೆ. ಅದರ ಬದಲಿಗೆ ಡಾಕ್ಟರರು ಗಾಜಿನ ಕಣ್ಣನ್ನು ಹಾಕಿದರು. ಆದರೂ, ಭೂತಗನ್ನಡಿ ಮತ್ತು ದೊಡ್ಡ ಅಕ್ಷರಗಳ ಸಾಹಿತ್ಯಗಳನ್ನು ಉಪಯೋಗಿಸಿ, ನನ್ನ ಒಂದು ಕಣ್ಣಿನಲ್ಲಿ ಬಾಕಿ ಇರುವ ಲೇಶ ದೃಷ್ಟಿಯನ್ನು ಉಪಯೋಗಿಸಿ ನಾನು ದಿನಾಲೂ ಮೂರರಿಂದ ಐದು ತಾಸುಗಳ ವರೆಗೆ ಅಧ್ಯಯನ ಮಾಡಲು ಶಕ್ತಳಾದೆ.

ಈ ಅಧ್ಯಯನದ ವೇಳೆಯು ನನಗೆ ಸದಾ ಅತ್ಯಮೂಲ್ಯವಾಗಿತ್ತು. ಹೀಗಿರುವಾಗ, ಒಂದು ಅಪರಾಹ್ಣ ನಾನು ಅಧ್ಯಯನ ಮಾಡುತ್ತಿದ್ದಾಗ ಥಟ್ಟನೆ ನನಗೆ ಏನನ್ನೂ ನೋಡಲಿಕ್ಕಾಗದೆ ಹೋದಾಗ ನನಗಾದ ಭಯಂಕರ ತಳಮಳವನ್ನು ಭಾವಿಸಿರಿ. ಯಾರೊ ಬಂದು ಲೈಟನ್ನು ಆರಿಸಿಬಿಟ್ಟ ಹಾಗೆ ಅದಿತ್ತು. ನನ್ನ ದೃಷ್ಟಿ ಈಗ ಪೂರ್ತಿ ನಷ್ಟವಾಗಿ ಹೋಗಿತ್ತು. ಹಾಗಾದರೆ, ನಾನು ಅಧ್ಯಯನ ಮಾಡುತ್ತಾ ಮುಂದುವರಿದಿರುವುದು ಹೇಗೆ? ನನ್ನ ಕಿವಿ ಹೆಚ್ಚುಕಡಿಮೆ ಕಿವುಡಾಗಿರುವುದಾದರೂ, ಈಗ ನಾನು ಆತ್ಮಿಕವಾಗಿ ಬಲವಾಗಿರಲು ಆಡಿಯೊಕ್ಯಾಸೆಟ್‌ಗಳ ಮೇಲೆ ಮತ್ತು ನನ್ನ ಕುಟುಂಬದ ಪ್ರೀತಿಪೂರ್ವಕವಾದ ಬೆಂಬಲದ ಮೇಲೆ ಹೊಂದಿಕೊಂಡಿದ್ದೇನೆ.

ಕೊನೆಯ ತನಕ ತಾಳಿಕೊಳ್ಳುವುದು

ಈಗ ಒಬ್ಬ ಶತಾಯುಷಿಯಾಗಿರುವ ನನ್ನ ಆರೋಗ್ಯವು ಇನ್ನೂ ಹೆಚ್ಚು ಕೆಟ್ಟಿರುವುದರಿಂದ ನಾನು ಗಣನೀಯವಾಗಿ ನಿಧಾನಿಯಾಗಲೇ ಬೇಕಾಗಿದೆ. ಕೆಲವು ಬಾರಿ ನಾನು ತುಸು ಕಕ್ಕಾಬಿಕ್ಕಿಯಾಗುತ್ತೇನೆ. ಕಾರ್ಯತಃ, ಈಗ ನನಗೆ ದೃಷ್ಟಿಯೇ ಇಲ್ಲದ ಕಾರಣ ನಾನು ನಿಜವಾಗಿಯೂ ದಾರಿತಪ್ಪಿ ಹೋಗುತ್ತೇನೆ! ನನಗೆ ಪುನಃ ಕೆಲವು ಬೈಬಲ್‌ ಅಧ್ಯಯನಗಳನ್ನು ನಡೆಸಲು ಇಷ್ಟವಿದೆಯಾದರೂ, ನನ್ನ ಆರೋಗ್ಯದ ದೆಸೆಯಿಂದ, ನನಗೆ ಹೊರಗೆ ಹೋಗಿ ಅವುಗಳನ್ನು ಪಡೆಯಲಾಗುವುದಿಲ್ಲ. ಆರಂಭದಲ್ಲಿ, ಇದು ನನ್ನನ್ನು ಖಿನ್ನಳಾಗಿ ಮಾಡಿತು. ಆದರೆ ನನ್ನ ಇತಿಮಿತಿಗಳನ್ನು ಒಪ್ಪಿಕೊಂಡು ಅವುಗಳ ಪರಿಮಿತಿಗಳಲ್ಲಿ ಕೆಲಸಮಾಡಲು ಕಲಿಯಬೇಕಾಯಿತು. ಇದು ಸುಲಭವೇನೂ ಆಗಿರಲಿಲ್ಲ. ಆದರೂ, ಪ್ರತಿ ತಿಂಗಳಲ್ಲಿ ನಮ್ಮ ಮಹಾ ದೇವರಾದ ಯೆಹೋವನ ವಿಷಯ ಮಾತಾಡುತ್ತಾ ಕೆಲವು ತಾಸುಗಳನ್ನಾದರೂ ಕಳೆಯಸಾಧ್ಯವಿರುವುದು ಎಂತಹ ಸುಸಂದರ್ಭವಾಗಿದೆ! ಬೈಬಲಿನ ವಿಷಯದಲ್ಲಿ ಮಾತಾಡುವ ಸಂದರ್ಭಗಳು ಏಳುವಾಗ, ನರ್ಸ್‌ಗಳೊ, ಕಸಬಿನವರೊ, ಇತರರೊ ನನ್ನ ಬಳಿಗೆ ಬರುವಾಗ, ಆ ಸಂದರ್ಭವನ್ನು ಉಪಯೋಗಿಸಿಕೊಂಡು, ಸಮಯೋಚಿತ ನಯದಿಂದ ಅವರೊಂದಿಗೆ ಮಾತಾಡುತ್ತೇನೆ.

ನನ್ನ ಆಶೀರ್ವಾದಗಳಲ್ಲಿ ಅತಿ ತೃಪ್ತಿಕರವಾದ ಒಂದು ಆಶೀರ್ವಾದವು ನನ್ನ ಕುಟುಂಬದ ನಾಲ್ಕು ತಲೆಮಾರುಗಳು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿರುವುದನ್ನು ನೋಡುವುದೇ. ಇವರಲ್ಲಿ ಕೆಲವರು ಎಲ್ಲಿ ಅಗತ್ಯವಿದೆಯೊ ಅಲ್ಲಿ ಪಯನೀಯರ್‌ ಸೇವೆಗೆ, ಹಿರಿಯರಾಗಿ ಅಥವಾ ಶುಶ್ರೂಷಾ ಸೇವಕರಾಗಿ ಮತ್ತು ಬೆತೆಲ್‌ಗಳಲ್ಲಿ ಸೇವೆಮಾಡಲು ಶ್ರಮವಹಿಸಿದ್ದಾರೆ. ಹೌದು, ನನ್ನ ಸಂತತಿಯವರಲ್ಲಿ ಹೆಚ್ಚಿನವರಂತೆ, ಈ ವ್ಯವಸ್ಥೆಯ ಅಂತ್ಯವು ಎಷ್ಟೋ ಬೇಗನೆ ಬರುವುದೆಂದು ನಾನು ನಿರೀಕ್ಷಿಸಿದ್ದೆ. ಆದರೆ ಈ ಏಳು ದಶಕಗಳ ನನ್ನ ಸೇವೆಯಲ್ಲಿ ನಾನೆಷ್ಟು ಅಭಿವೃದ್ಧಿಯನ್ನು ನೋಡಿರುತ್ತೇನೆ! ಇಷ್ಟು ಮಹತ್ತಾಗಿರುವ ಕೆಲಸದಲ್ಲಿ ಕೂಡಿಕೊಂಡಿದ್ದದ್ದು ನನಗೆ ಮಹಾ ಸಂತೃಪ್ತಿಯನ್ನು ತರುತ್ತದೆ.

ನನ್ನನ್ನು ಭೇಟಿಮಾಡುವ ನರ್ಸ್‌ಗಳು, ನನ್ನ ನಂಬಿಕೆಯೇ ನನ್ನನ್ನು ಜೀವಂತವಾಗಿರಿಸಿದೆಯೆಂದು ಹೇಳುತ್ತಾರೆ. ಅದನ್ನು ನಾನು ಒಪ್ಪುತ್ತೇನೆ. ಯೆಹೋವನ ಸೇವೆಯಲ್ಲಿನ ಕ್ರಿಯಾಶೀಲತೆಯು, ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದ ಜೀವನವನ್ನು ಫಲಿಸುತ್ತದೆ. ರಾಜ ದಾವೀದನಂತೆಯೇ ನಾನೂ ದೀರ್ಘಾಯುಷ್ಯವನ್ನು ಸಂತೃಪ್ತಿಯಿಂದ ಅನುಭವಿಸಿದ್ದೇನೆಂದು ಹೇಳಬಲ್ಲೆ.​—1 ಪೂರ್ವಕಾಲವೃತ್ತಾಂತ 29:28.

(ಈ ಲೇಖನವು ಅಂತಿಮ ರೂಪಕ್ಕೆ ತರಲ್ಪಡುತ್ತಿದ್ದಾಗ, ಅಂದರೆ 2002, ಏಪ್ರಿಲ್‌ 1ರಂದು ಸಹೋದರಿ ಮ್ಯೂರಿಯಲ್‌ ಸ್ಮಿತ್‌ ಮರಣಪಟ್ಟರು. 102 ವರ್ಷ ತುಂಬಲು ಕೇವಲ ಒಂದು ತಿಂಗಳು ಮಾತ್ರ ಬಾಕಿಯಿತ್ತು; ನಂಬಿಗಸ್ತಿಕೆ ಹಾಗೂ ತಾಳ್ಮೆಯಲ್ಲಿ ಅವರು ನಿಜವಾಗಿಯೂ ಆದರ್ಶಪ್ರಾಯರಾಗಿದ್ದರು.)

[ಪುಟ 24ರಲ್ಲಿರುವ ಚಿತ್ರಗಳು]

ನಾನು ಸುಮಾರು ಐದು ವಯಸ್ಸಿನವಳಾಗಿದ್ದಾಗ ಮತ್ತು 19ನೆಯ ವಯಸ್ಸಿನಲ್ಲಿ ನನ್ನ ಗಂಡ ರಾಯ್‌ ಅವರನ್ನು ಭೇಟಿಯಾದಾಗ

[ಪುಟ 26ರಲ್ಲಿರುವ ಚಿತ್ರ]

ನಮ್ಮ ಕಾರ್‌ ಮತ್ತು ಮಿಚ್ಪಾ ಎಂದು ನಾವು ಹೆಸರಿಸಿದ ನಮ್ಮ ಕ್ಯಾರವಾನ್‌

[ಪುಟ 27ರಲ್ಲಿರುವ ಚಿತ್ರ]

ನನ್ನ ಗಂಡ ರಾಯ್‌ ಅವರೊಂದಿಗೆ, 1971ರಲ್ಲಿ