ಮೂಢನಂಬಿಕೆಗಳು ನಿಮ್ಮ ಜೀವನವನ್ನು ನಿಯಂತ್ರಿಸುತ್ತವೆಯೆ?
ಮೂಢನಂಬಿಕೆಗಳು ನಿಮ್ಮ ಜೀವನವನ್ನು ನಿಯಂತ್ರಿಸುತ್ತವೆಯೆ?
ಮೂಢನಂಬಿಕೆಗಳು ಲೋಕದಲ್ಲೆಲ್ಲ ಇವೆ. ಕೆಲವೊಮ್ಮೆ ಅವನ್ನು ಸಾಂಸ್ಕೃತಿಕ ಪರಂಪರೆಯಾಗಿ ಗೌರವಿಸಲಾಗುತ್ತದೆ. ಇಲ್ಲವೆ ಅವನ್ನು ಅಲ್ಪ ಕೌತುಕದ, ಜೀವನದ ಸ್ವಾರಸ್ಯವಾಗಿ ಪರಿಗಣಿಸಲಾಗುತ್ತದೆ. ಪಾಶ್ಚಾತ್ಯ ಜಗತ್ತಿನಲ್ಲಾದರೊ, ಮೂಢನಂಬಿಕೆಗಳು ಸಾಮಾನ್ಯವಾಗಿ ಅತ್ಯುಕ್ತಿಯೆಂದು ಪರಿಗಣಿಸಲ್ಪಟ್ಟು ಸಂದೇಹಿಸಲ್ಪಡುತ್ತವೆ. ಆದರೆ ಬೇರೆ ಕಡೆಗಳಲ್ಲಿ, ದೃಷ್ಟಾಂತಕ್ಕೆ, ಆಫ್ರಿಕದಲ್ಲಿ ಇಂತಹ ಮೂಢನಂಬಿಕೆಗಳು ಜನರ ಜೀವನಗಳನ್ನು ಗಂಭೀರವಾಗಿ ಬಾಧಿಸಬಲ್ಲವು.
ಆಫ್ರಿಕದ ಸಂಸ್ಕೃತಿಯಲ್ಲಿ ಹೆಚ್ಚಿನದ್ದು ಮೂಢನಂಬಿಕೆಯ ಮೇಲೆ ಆಧಾರಿತವಾಗಿದೆ. ಅಲ್ಲಿ ತಯಾರಿಸಲ್ಪಡುವ ಚಲನಚಿತ್ರಗಳು, ರೇಡಿಯೊ ಕಾರ್ಯಕ್ರಮಗಳು ಮತ್ತು ಸಾಹಿತ್ಯಗಳು ಅನೇಕವೇಳೆ, ಮಾಯಾವಿದ್ಯೆ, ಪೂರ್ವಿಕರ ಆರಾಧನೆ ಮತ್ತು ಮಾಂತ್ರಿಕ ವಸ್ತುಗಳಂತಹ ಮೂಢನಂಬಿಕೆಯ ಮತ್ತು ರಹಸ್ಯಾರ್ಥದ ವಿಷಯಗಳನ್ನು ಎತ್ತಿತೋರಿಸುತ್ತವೆ. ಹಾಗಾದರೆ ಜನರು ಮೂಢನಂಬಿಕೆಗಳಿಂದ ಅಷ್ಟು ಪ್ರಭಾವಿತರಾಗುವುದು ಏಕೆ ಮತ್ತು ಮೂಢನಂಬಿಕೆಗಳು ಎಲ್ಲಿಂದ ಬರುತ್ತವೆ?
ಮೂಢನಂಬಿಕೆಗಳ ಮೂಲವೇನು?
ಅನೇಕ ಮೂಢನಂಬಿಕೆಗಳು ಮೂಲತಃ ಮೃತರ ಆತ್ಮಗಳ ಅಥವಾ ಬೇರೆ ಯಾವುದೇ ರೀತಿಯ ಆತ್ಮಗಳ ಭಯದಿಂದ ಬಂದವುಗಳಾಗಿವೆ. ನಡೆಯುವಂಥ ಘಟನೆಗಳು, ಈ ಆತ್ಮಗಳು ಜೀವಿತರನ್ನು ಬೆದರಿಕೆ, ಎಚ್ಚರಿಕೆ ಅಥವಾ ಆಶೀರ್ವಾದದಿಂದ ಸಂಪರ್ಕಿಸುವ ಪ್ರಯತ್ನಗಳಾಗಿವೆ ಎಂಬುದಾಗಿ ಹೇಳಲಾಗುತ್ತದೆ.
ಮೂಢನಂಬಿಕೆಗಳು ರೋಗೋಪಶಮನ ಮತ್ತು ಔಷಧದೊಂದಿಗೂ ಒತ್ತಾಗಿ ಕೂಡಿಕೊಂಡಿವೆ. ಅಭಿವೃದ್ಧಿಶೀಲ ಜಗತ್ತಿನಲ್ಲಿ ಆಧುನಿಕ ಔಷಧವು ಅತಿ ದುಬಾರಿಯಾಗಿರುತ್ತದೆ ಮತ್ತು ಅನೇಕವೇಳೆ ಲಭ್ಯವೇ ಇರುವುದಿಲ್ಲ. ಈ ಕಾರಣದಿಂದ, ಅನೇಕರು ಚಿಕಿತ್ಸೆಗಾಗಿ ಅಥವಾ ರೋಗ ತಡೆಗಾಗಿ ಪುರಾತನ ಪದ್ಧತಿಗಳಿಗೆ, ಅಂದರೆ ಪ್ರೇತವ್ಯವಹಾರಕ್ಕೆ ಮತ್ತು ಮೂಢನಂಬಿಕೆಗಳಿಗೆ ತಿರುಗುತ್ತಾರೆ. ಅವರು ಡಾಕ್ಟರರ ಮುಂದೆ ಬರುವುದಕ್ಕಿಂತ ತಮ್ಮ ಪದ್ಧತಿ ಮತ್ತು ಭಾಷೆಯನ್ನು ಅರಿತಿರುವ ಮಾಂತ್ರಿಕನ ಮುಂದೆ ಆರಾಮವಾಗಿರುತ್ತಾರೆ. ಹೀಗೆ, ಮೂಢನಂಬಿಕೆಗಳು ಸಮೃದ್ಧವಾಗಿ ಬೆಳೆಯುತ್ತವೆ.
ರೋಗ ಮತ್ತು ಅಪಘಾತಗಳು ಕೇವಲ ಆಕಸ್ಮಿಕ ಘಟನೆಗಳಲ್ಲ, ಅವು ಆತ್ಮಲೋಕದ ಶಕ್ತಿಗಳಿಂದ ಆಗಿಸಲ್ಪಡುತ್ತವೆಂದು ಮೂಢನಂಬಿಕೆಯ ಸಂಪ್ರದಾಯಗಳು ಹೇಳುತ್ತವೆ. ಸತ್ತಿರುವ ಪೂರ್ವಿಕನೊಬ್ಬನು ಯಾವುದೊ ಕಾರಣಕ್ಕಾಗಿ ಅಸಂತುಷ್ಟನಾಗಿದ್ದಾನೆ ಎಂದು ಮಾಂತ್ರಿಕರು ಹೇಳಬಹುದು. ಅಥವಾ, ಒಬ್ಬ ಪ್ರತಿಸ್ಪರ್ಧಿ ಮಾಂತ್ರಿಕನ ಸಹಾಯದಿಂದ ಯಾರೊ ಅವನ ಮೇಲೆ ಶಾಪ ಹಾಕಿದ್ದಾರೆ ಮತ್ತು ಆ ಕಾರಣದಿಂದಲೇ ಕಾಯಿಲೆ ಅಥವಾ ಅಪಘಾತ ನಡೆದಿದೆ ಎಂದು ಪ್ರೇತ ವಿಷಯ ವಾಹಕರು ಹೇಳಬಹುದು.
ಮೂಢನಂಬಿಕೆಗಳಲ್ಲಿ ಲೋಕಾದ್ಯಂತ ಭಾರೀ ವೈವಿಧ್ಯವಿದೆ. ಮತ್ತು ಅವುಗಳ ಹಬ್ಬುವಿಕೆಯು ಪಾರಂಪರ್ಯ, ಐತಿಹ್ಯ ಮತ್ತು ಸಂದರ್ಭಗಳ ಮೇಲೆ ಹೊಂದಿಕೊಂಡಿದೆ. ಆದರೆ ಇವೆಲ್ಲವುಗಳಲ್ಲಿರುವ ಒಂದು ಸಾಮಾನ್ಯ ಅಂಶವೇನೆಂದರೆ, ಅದೃಶ್ಯವಾದ ಆತ್ಮಲೋಕದಲ್ಲಿರುವ ಯಾರನ್ನೊ ಅಥವಾ ಯಾವುದನ್ನೊ ತೃಪ್ತಿಪಡಿಸಿ ಶಮನಮಾಡಬೇಕಾಗಿದೆ ಎಂಬ ನಂಬಿಕೆಯೇ.
ಹಾನಿರಹಿತವೊ ಅಪಾಯಕರವೊ?
ಅನೇಕ ಕುಟುಂಬಗಳಿಗೆ ಅವಳಿ ಮಕ್ಕಳ ಜನನವು ಅಸಾಧಾರಣವೂ ರೋಮಾಂಚಕವೂ ಆದ ಸಂದರ್ಭವಾಗಿರುತ್ತದೆ. ಆದರೆ ಮೂಢನಂಬಿಕೆಯವರು ಅದನ್ನು ಒಂದು ವಿಶೇಷ ಸೂಚನೆಯಾಗಿ ಪರಿಗಣಿಸಬಹುದು. ಪಶ್ಚಿಮ ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಈ ಜನನವನ್ನು ದೇವತೆಗಳ ಜನನವಾಗಿ ವೀಕ್ಷಿಸಲಾಗುತ್ತದೆ ಮತ್ತು ಅವಳಿ ಮಕ್ಕಳನ್ನು ಆರಾಧಿಸಲಾಗುತ್ತದೆ. ಆ ಅವಳಿಗಳಲ್ಲಿ ಒಂದು ಅಥವಾ ಎರಡೂ ಸಾಯುವುದಾದರೆ, ಅವುಗಳ ಚಿಕ್ಕ ಮೂರ್ತಿಗಳನ್ನು ಮಾಡಿ, ಆ ಕುಟುಂಬವು ಈ ಮೂರ್ತಿಗಳಿಗೆ ಆಹಾರವನ್ನು ಅರ್ಪಿಸಲೇ ಬೇಕು. ಆದರೆ ಬೇರೆ ಕಡೆಗಳಲ್ಲಿ, ಅವಳಿ ಜನನವನ್ನು ಶಾಪವಾಗಿ ನೋಡಲಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಕೆಲವು ಹೆತ್ತವರು
ಅವುಗಳಲ್ಲಿ ಒಂದನ್ನಾದರೂ ಕೊಲ್ಲುವುದೂ ಉಂಟು. ಏಕೆ? ಅವುಗಳಲ್ಲಿ ಎರಡೂ ಬದುಕಿ ಉಳಿಯುವಲ್ಲಿ, ಒಂದು ದಿನ ಅವು ಹೆತ್ತವರನ್ನು ಕೊಲ್ಲುವವೆಂದು ನಂಬಲಾಗುತ್ತದೆ.ಕೆಲವು ಮೂಢನಂಬಿಕೆಗಳು ಆಕರ್ಷಕ ರೀತಿಯಲ್ಲಿ ವಿಚಿತ್ರವೂ ಅನಾಕ್ಷೇಪಣೀಯವೂ ಆಗಿರಬಹುದಾದರೂ, ಇತರ ಮೂಢನಂಬಿಕೆಗಳು ಅಪಾಯಕರವೂ ಮಾರಕವೂ ಆಗಿರಬಲ್ಲವು. ಅಮಂಗಳಸೂಚಕ ಅರ್ಥ ವಿವರಣೆಯು ಒಂದು ನಿರಪಾಯಕಾರಿ ಘಟನೆಯನ್ನು ಅಪಾಯಕರವಾದ ವಿಚಾರವಾಗಿ ಮಾರ್ಪಡಿಸಬಹುದು.
ಹೌದು, ವಾಸ್ತವದಲ್ಲಿ ಮೂಢನಂಬಿಕೆಯು ಒಂದು ವಿಶ್ವಾಸವಾಗಿದೆ, ಧರ್ಮದ ಒಂದು ರೂಪವಾಗಿದೆ. ಮೂಢನಂಬಿಕೆಗಳ ಈ ಅಪಾಯಕರವಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವಾಗ, ಹೀಗೆ ಕೇಳುವುದು ಪ್ರಾಮುಖ್ಯ ವಿಷಯವಾಗಿದೆ: ಈ ಮೂಢನಂಬಿಕೆಗಳಿಂದ ಮತ್ತು ಪದ್ಧತಿಗಳಿಂದ ಕಾರ್ಯತಃ ಪ್ರಯೋಜನ ಪಡೆಯುವವರು ಯಾರು?
ಮೂಢನಂಬಿಕೆಗಳ ಮೂಲ
ಧಾರಾಳ ಪುರಾವೆ ಇರುವುದಾದರೂ ಕೆಲವರು ಸೈತಾನನ ಅಥವಾ ದುಷ್ಟಾತ್ಮಗಳ ಅಸ್ತಿತ್ವವನ್ನು ಅಲ್ಲಗಳೆಯುತ್ತಾರೆ. ಆದರೂ, ಯುದ್ಧದ ಸಮಯದಲ್ಲಿ, ಅಪಾಯಕಾರಿಯಾದ ವೈರಿಯ ಅಸ್ತಿತ್ವವನ್ನು ಇಲ್ಲವೆಂದು ನಿರಾಕರಿಸುವಲ್ಲಿ ಅದು ಕೇವಲ ವಿಪತ್ತಿಗೆ ನಡೆಸುವುದೆಂಬುದು ನಿಶ್ಚಯ. ಮಾನವಾತೀತ ಆತ್ಮಜೀವಿಗಳೊಂದಿಗೆ ನಡೆಯುವ ಹೋರಾಟದಲ್ಲಿಯೂ ಇದು ನಿಜವಾಗಿರಬಲ್ಲದು. ಏಕೆಂದರೆ ಅಪೊಸ್ತಲ ಪೌಲನು ಬರೆದುದು: “ನಾವು ಹೋರಾಡುವದು . . . ದುರಾತ್ಮಗಳ ಸೇನೆಯ ಮೇಲೆ.” (ಓರೆ ಅಕ್ಷರಗಳು ನಮ್ಮವು.)—ಎಫೆಸ 6:12.
ದುಷ್ಟಾತ್ಮಗಳನ್ನು ನೋಡುವುದು ನಮಗೆ ಅಸಾಧ್ಯವಾದರೂ, ಅವುಗಳ ಇರುವಿಕೆಯಂತೂ ನಿಶ್ಚಯ. ಒಬ್ಬ ಧ್ವನ್ಯಂತರಾನುಕಾರಿಯು ಕೃತಕಾಕೃತಿಯನ್ನು ಮುಂದಿಟ್ಟು ಮಾತಾಡುವಂತೆಯೇ, ಒಬ್ಬ ಅದೃಶ್ಯ ಆತ್ಮವ್ಯಕ್ತಿಯು ಸರ್ಪವನ್ನು ಉಪಯೋಗಿಸಿ ಪ್ರಥಮ ಸ್ತ್ರೀಯಾದ ಹವ್ವಳೊಂದಿಗೆ ಮಾತಾಡಿ, ಆಕೆ ದೇವರಿಗೆದುರಾಗಿ ದಂಗೆಯೇಳುವಂತೆ ನಡೆಸಿದನೆಂದು ಬೈಬಲು ಹೇಳುತ್ತದೆ. (ಆದಿಕಾಂಡ 3:1-5) ಬೈಬಲು ಈ ಆತ್ಮವ್ಯಕ್ತಿಯನ್ನು, “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು” ಎಂದು ಹೇಳಿ ಗುರುತಿಸುತ್ತದೆ. (ಪ್ರಕಟನೆ 12:9) ಅದೇ ಸೈತಾನನು ಇತರ ದೇವದೂತರನ್ನೂ ದಂಗೆಗೆ ಪ್ರೇರಿಸಿದನು. (ಯೂದ 6) ಈ ದುಷ್ಟ ದೂತರು, ದೆವ್ವಗಳೂ ದೇವರ ವೈರಿಗಳೂ ಆದರು.
ಯೇಸು ದೆವ್ವಗಳನ್ನು ಬಿಡಿಸಿದನು ಮತ್ತು ಅವನ ಶಿಷ್ಯರೂ ಹಾಗೆ ಮಾಡಿದರು. (ಮಾರ್ಕ 1:34; ಅ. ಕೃತ್ಯಗಳು 16:18) ಈ ಆತ್ಮಜೀವಿಗಳು ಸತ್ತ ಪೂರ್ವಿಕರಾಗಿರುವುದಿಲ್ಲ, ಏಕೆಂದರೆ, “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ಬದಲಿಗೆ, ಇವರು ಸೈತಾನನಿಂದ ದುರ್ಮಾರ್ಗಕ್ಕೆ ಎಳೆಯಲ್ಪಟ್ಟ ದಂಗೆಯೆದ್ದ ದೇವದೂತರೇ. ಆದುದರಿಂದ ಅವರ ಸಂಪರ್ಕ ಬೆಳೆಸುವುದನ್ನು ಅಥವಾ ಅವರ ಪ್ರಭಾವಕ್ಕೆ ಅಧೀನರಾಗುವುದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಏಕೆಂದರೆ, ಅವರು ತಮ್ಮ ನಾಯಕ, ಪಿಶಾಚನಾದ ಸೈತಾನನಂತೆಯೇ ನಮ್ಮನ್ನು ನುಂಗಲು ಇಷ್ಟಪಡುತ್ತಾರೆ. (1 ಪೇತ್ರ 5:8) ಅವರ ಗುರಿಯು, ಮಾನವಕುಲದ ಏಕಮಾತ್ರ ನಿರೀಕ್ಷೆಯಾಗಿರುವ ದೇವರ ರಾಜ್ಯದಿಂದ ನಮ್ಮನ್ನು ತಿರುಗಿಸಿಬಿಡುವುದೇ ಆಗಿದೆ.
ಸೈತಾನನೂ ಅವನ ದೆವ್ವಗಳೂ ಉಪಯೋಗಿಸುವ ವಿಧಾನಗಳಲ್ಲಿ ಒಂದನ್ನು ಬೈಬಲು ತಿಳಿಯಪಡಿಸುತ್ತದೆ: “ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳು”ತ್ತಾನೆ. (2 ಕೊರಿಂಥ 11:14, 15) ನಮಗೆ ಅವನು ಹೆಚ್ಚು ಉತ್ತಮವಾದ ಜೀವನ ರೀತಿಯನ್ನು ನೀಡಬಲ್ಲನೆಂದು ನಮ್ಮನ್ನು ನಂಬಿಸಿ ಮೋಸಗೊಳಿಸುವುದು ಸೈತಾನನ ಇಚ್ಛೆ. ಈ ಕಾರಣದಿಂದಲೇ, ಈ ದುಷ್ಟಾತ್ಮಗಳ ಹಸ್ತಕ್ಷೇಪದಿಂದಾಗಿ ನಮಗೆ ಕೆಲವು ತಾತ್ಕಾಲಿಕ ಪ್ರಯೋಜನಗಳು ಬರುವಂತೆ ತೋರಬಹುದು. ಆದರೆ ಈ ದೆವ್ವಗಳು ಕಾಯಂ ಆಗಿರುವ ಯಾವುದೇ ಪರಿಹಾರವನ್ನು ನೀಡಲಾರವು. (2 ಪೇತ್ರ 2:4) ಯಾರಿಗೂ ನಿತ್ಯಜೀವವನ್ನು ಕೊಡುವ ಸಾಮರ್ಥ್ಯ ಅವರಿಗಿಲ್ಲ ಮಾತ್ರವಲ್ಲ ಈ ದೆವ್ವಗಳು ಬೇಗನೆ ನಾಶಗೊಳ್ಳಲಿಕ್ಕಿವೆ. (ರೋಮಾಪುರ 16:20) ನಮ್ಮ ನಿತ್ಯಜೀವದ ಮತ್ತು ನಿಜ ಸಂತೋಷದ ಏಕಮಾತ್ರ ಮೂಲನು ಸೃಷ್ಟಿಕರ್ತನೇ ಆಗಿರುತ್ತಾನೆ, ಮತ್ತು ಆತನೇ ದುಷ್ಟಾತ್ಮಸೇನೆಗಳ ವಿರುದ್ಧ ನಮಗಿರುವ ಅತ್ಯಂತ ಬಲವುಳ್ಳ ಸಂರಕ್ಷಣೆಯಾಗಿದ್ದಾನೆ.—ಯಾಕೋಬ 4:7.
ಪ್ರೇತವ್ಯವಹಾರಗಳ ಮೂಲಕ ಸಹಾಯ ಯಾಚನೆಯನ್ನು ದೇವರು ಖಂಡಿಸುತ್ತಾನೆ. (ಧರ್ಮೋಪದೇಶಕಾಂಡ 18:10-12; 2 ಅರಸುಗಳು 21:6) ಏಕೆಂದರೆ ಅದು ವೈರಿಯೊಂದಿಗೆ, ದೇವದ್ರೋಹಿಗಳೊಂದಿಗೆ ಮಿತ್ರತ್ವ ಬೆಳೆಸಿ ಆಡುವ ಸರಸಸಲ್ಲಾಪವಾಗಿರುತ್ತದೆ! ಜಾತಕವನ್ನು ವಿಚಾರಿಸುವುದು, ಗೋತ್ರದ ಮಂತ್ರವೈದ್ಯನನ್ನು ವಿಚಾರಿಸುವುದು ಅಥವಾ ಯಾವುದೇ ಮೂಢನಂಬಿಕೆಯಲ್ಲಿ ಕೈಹಾಕುವುದು, ನೀವು ನಿಮ್ಮ ಜೀವನದಲ್ಲಿ ಮಾಡುವ ನಿರ್ಣಯಗಳನ್ನು ಆ ದುಷ್ಟಾತ್ಮಗಳು ನಿಯಂತ್ರಿಸುವಂತೆ ಬಿಡುವುದೆಂದು ಅರ್ಥ. ಅದು ದೇವರ ವಿರುದ್ಧ ಅವರು ಹೂಡಿರುವ ದಂಗೆಯಲ್ಲಿ ಕೂಡಿಕೊಳ್ಳುವುದಕ್ಕೆ ಸಮವಾಗಿದೆ.
ಕೆಟ್ಟದ್ದರಿಂದ ಸಂರಕ್ಷಣೆ—ಸಾಧ್ಯವೊ?
ನೈಜರ್‌ನಲ್ಲಿ ಜೀವಿಸುತ್ತಿದ್ದ ಆಡೇ * ಎಂಬವನು ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಒಬ್ಬ ಸೇವಕನೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿದ್ದನು. ತನ್ನ ಅಂಗಡಿಯಲ್ಲಿ ತಾಯಿತಿಯನ್ನು ಇಟ್ಟುಕೊಂಡಿರುವುದು ತನಗೆ “ಅನೇಕ ವೈರಿಗಳು ಇರುವುದರಿಂದಲೇ” ಎಂದು ಆಡೇ ಹೇಳಿದನು. ಆಗ ಆಡೇಗೆ ಬೈಬಲಿನ ಕುರಿತು ಕಲಿಸುತ್ತಿದ್ದವನು, ನಿಜ ಸಂರಕ್ಷಣೆಗೆ ಭರವಸಯೋಗ್ಯನು ಯೆಹೋವನೊಬ್ಬನೇ ಎಂದು ತೋರಿಸಿದನು. ಅವನು ಆಡೇಗೆ ಕೀರ್ತನೆ 34:7ನ್ನು ಓದಿ ಹೇಳಿದನು: “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.” ಆಗ ಆಡೇ ಹೇಳಿದ್ದು: “ಯೆಹೋವನು ನನ್ನನ್ನು ನಿಜವಾಗಿಯೂ ಕಾಪಾಡುವಲ್ಲಿ ನಾನು ಈ ತಾಯಿತಿಯನ್ನು ತೆಗೆದುಬಿಡುತ್ತೇನೆ.” ಈಗ, ವರ್ಷಗಳು ಕಳೆದಿವೆ, ಅವನು ಒಬ್ಬ ಹಿರಿಯನೂ ಪೂರ್ಣ ಸಮಯದ ಶುಶ್ರೂಷಕನೂ ಆಗಿ ಸೇವೆ ಮಾಡುತ್ತಾನೆ. ಅವನ ವೈರಿಗಳಲ್ಲಿ ಯಾರೂ ಅವನಿಗೆ ಹಾನಿಯನ್ನು ಬರಮಾಡಿಲ್ಲ.
ನಾವು ಮೂಢನಂಬಿಕೆಯವರಾಗಿರಲಿ ಇಲ್ಲದಿರಲಿ, ಕಾಲವೂ ಪ್ರಾಪ್ತಿಯೂ ನಮಗೆಲ್ಲರಿಗೂ ಸಂಭವಿಸುತ್ತವೆಂದು ಬೈಬಲು ಹೇಳುತ್ತದೆ. (ಪ್ರಸಂಗಿ 9:11) ಆದರೆ ಕೆಟ್ಟ ಸಂಗತಿಗಳಿಂದ ಯೆಹೋವನು ನಮ್ಮನ್ನು ಪರೀಕ್ಷೆಗೊಳಪಡಿಸುವುದಿಲ್ಲ. (ಯಾಕೋಬ 1:13) ನಮಗೆ ಬಂದೊದಗುವ ಮರಣವೂ ಅಪರಿಪೂರ್ಣತೆಯೂ ಆದಾಮನಿಂದ ಬಂದಿರುವ ಪಾಪದ ನಿಮಿತ್ತವಾಗಿದೆ. (ರೋಮಾಪುರ 5:12) ಈ ಕಾರಣದಿಂದಲೇ, ಪ್ರತಿಯೊಬ್ಬನೂ ಆಗಾಗ ಕಾಯಿಲೆ ಬೀಳುವುದು ಮಾತ್ರವಲ್ಲ ವಿಪತ್ಕಾರಕ ಪರಿಣಾಮಗಳನ್ನು ತಂದೊಡ್ಡಬಹುದಾದ ತಪ್ಪುಗಳನ್ನೂ ಮಾಡುತ್ತಾನೆ. ಆದುದರಿಂದ, ಎಲ್ಲ ಕಾಯಿಲೆಗಳು ಅಥವಾ ಜೀವನದ ಸಮಸ್ಯೆಗಳು ದುಷ್ಟಾತ್ಮಗಳ ಕೆಲಸವೆಂದು ಹೇಳುವುದು ತಪ್ಪು. ಹಾಗೆ ನಂಬುವಲ್ಲಿ, ಆತ್ಮಗಳನ್ನು ಹೇಗಾದರೂ ತೃಪ್ತಿಗೊಳಿಸಲು ಪ್ರಯತ್ನಿಸಬೇಕೆಂಬ ಪ್ರೇರಣೆ ನಮಗಾದೀತು. * ಆದಕಾರಣ, ನಾವು ಕಾಯಿಲೆ ಬೀಳುವಲ್ಲಿ ಯೋಗ್ಯವಾದ ವೈದ್ಯಕೀಯ ಸಹಾಯವನ್ನು ಪಡೆಯಬೇಕೇ ಹೊರತು, “ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ” ಆಗಿರುವ ಪಿಶಾಚನಾದ ಸೈತಾನನ ಸಲಹೆಯನ್ನು ನಾವು ಕೇಳಬಾರದು. (ಯೋಹಾನ 8:44) ಪೂರ್ವಜರಿಂದ ಬಂದಿರುವ ಮೂಢನಂಬಿಕೆಗಳುಳ್ಳ ದೇಶಗಳ ಜನರು ಬೇರೆ ದೇಶಗಳ ಜನರಿಗಿಂತ ಹೆಚ್ಚುಕಾಲ ಅಥವಾ ಹೆಚ್ಚು ಉತ್ತಮವಾಗಿ ಜೀವಿಸುವುದಿಲ್ಲವೆಂದು ಸಂಖ್ಯಾಸಂಗ್ರಹಣಗಳು ತಿಳಿಸುತ್ತವೆ. ಹೀಗೆ, ಮೂಢನಂಬಿಕೆಗಳು ಆರೋಗ್ಯದ ಸಂಬಂಧದಲ್ಲಿ ಲಾಭವನ್ನು ಕೊಡುವುದಿಲ್ಲವೆಂಬುದು ಸ್ಪಷ್ಟ.
ದೇವರು ಯಾವುದೇ ದೆವ್ವಕ್ಕಿಂತ ಹೆಚ್ಚು ಬಲಾಢ್ಯನೂ ನಮ್ಮ ಹಿತಾಭಿಲಾಷಿಯೂ ಆಗಿದ್ದಾನೆ. “ಕರ್ತನು [“ಯೆಹೋವನು,” NW] ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ.” (1 ಪೇತ್ರ 3:12) ಆದುದರಿಂದ, ಸಂರಕ್ಷಣೆಗಾಗಿಯೂ ವಿವೇಕಕ್ಕಾಗಿಯೂ ಆತನಿಗೆ ಪ್ರಾರ್ಥಿಸಿರಿ. (ಜ್ಞಾನೋಕ್ತಿ 15:29; 18:10) ಆತನ ಪವಿತ್ರ ವಾಕ್ಯವಾದ ಬೈಬಲನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಬೈಬಲಿನ ನಿಷ್ಕೃಷ್ಟ ಜ್ಞಾನವೇ ನಮಗಿರುವ ಅತ್ಯುತ್ತಮ ಸಂರಕ್ಷಣೆಯಾಗಿದೆ. ಕೆಟ್ಟ ವಿಷಯಗಳು ಸಂಭವಿಸುವುದೇಕೆ ಮತ್ತು ಸರ್ವಶಕ್ತನಾದ ದೇವರ ಅನುಗ್ರಹವನ್ನು ನಾವು ಹೇಗೆ ಪಡೆಯಬಲ್ಲೆವು ಎಂಬುದನ್ನು ಗುರುತಿಸಲು ಅದು ಸಹಾಯಮಾಡುವುದು.
ದೇವಜ್ಞಾನದ ಪ್ರಯೋಜನಗಳು
ಅಜ್ಞಾನ ಮತ್ತು ಮೂಢನಂಬಿಕೆಗೆ ವಿರುದ್ಧವಾಗಿರುವ, ಯೆಹೋವನ ಮತ್ತು ಆತನ ಉದ್ದೇಶಗಳ ನಿಷ್ಕೃಷ್ಟ ಜ್ಞಾನವೇ ನಿಜ ಸಂರಕ್ಷಣೆಯನ್ನು ಪಡೆಯುವುದಕ್ಕಿರುವ ಕೀಲಿ ಕೈ. ಬೆನಿನ್ ದೇಶದ ಶಾನ್ ಎಂಬವನನ್ನು ತೆಗೆದುಕೊಳ್ಳಿ. ಶಾನ್‌ನ ಕುಟುಂಬದಲ್ಲಿ ಮೂಢನಂಬಿಕೆಗಳು ಆಳವಾಗಿ ಬೇರೂರಿದ್ದವು. ಆ ಗೋತ್ರದ ಪದ್ಧತಿಗನುಸಾರ, ಗಂಡು ಮಗುವನ್ನು ಹೆರುವ ಸ್ತ್ರೀ, ಒಂಬತ್ತು ದಿನಗಳ ವರೆಗೆ ಪ್ರತ್ಯೇಕವಾಗಿ ಕಟ್ಟಿದ ಗುಡಿಸಲಿನಲ್ಲಿ ವಾಸಿಸಬೇಕು. ಹೆಣ್ಣು ಮಗುವನ್ನು ಹೆರುವಲ್ಲಿ ಏಳು ದಿನಗಳ ವರೆಗೆ ಆಕೆ ಅಲ್ಲಿರಬೇಕು.
ವರುಷ 1975ರಲ್ಲಿ, ಶಾನ್‌ನ ಹೆಂಡತಿ, ಅವರು ಮಾರ್ಕ್ ಎಂದು ಹೆಸರಿಸಿದ ಸುಂದರ ಗಂಡು ಮಗುವನ್ನು ಹೆತ್ತಳು. ಅವರಿಗಿದ್ದ ಬೈಬಲ್ ಜ್ಞಾನದ ಆಧಾರದ ಮೇರೆಗೆ, ಶಾನ್ ಮತ್ತು ಅವನ ಹೆಂಡತಿ ದುಷ್ಟಾತ್ಮಗಳೊಂದಿಗೆ ಯಾವ ವ್ಯವಹಾರವನ್ನೂ ಮಾಡಲು ಇಷ್ಟಪಡಲಿಲ್ಲ. ಆದರೆ ಮೂಢನಂಬಿಕೆಯನ್ನು ಅನುಸರಿಸುವ ಭಯ ಮತ್ತು ಒತ್ತಡಕ್ಕೆ ಮಣಿದು, ಆ ತಾಯಿ ಗುಡಿಸಲಿನಲ್ಲಿ ವಾಸಿಸುವಂತೆ ಅವರು ಒಪ್ಪಿಕೊಂಡರೊ? ಇಲ್ಲ, ಅವರು ಈ ಗೋತ್ರದ ಮೂಢನಂಬಿಕೆಯನ್ನು ಅನುಸರಿಸಲು ನಿರಾಕರಿಸಿದರು.—ರೋಮಾಪುರ 6:16; 2 ಕೊರಿಂಥ 6:14, 15.
ಈ ಕಾರಣದಿಂದ, ಶಾನ್‌ನ ಕುಟುಂಬಕ್ಕೆ ಹಾನಿಯಾಯಿತೊ? ಅನೇಕ ವರುಷಗಳು ದಾಟಿವೆ ಮತ್ತು ಮಾರ್ಕ್ ಈಗ ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆ ಮಾಡುತ್ತಿದ್ದಾನೆ. ಮೂಢನಂಬಿಕೆಯ ಪ್ರಭಾವಕ್ಕೆ ಒಳಗಾಗಿ ತಮ್ಮ ಆತ್ಮಿಕ ಹಿತಕ್ಕೆ ಅಪಾಯವನ್ನು ತರದಿದ್ದುದರಿಂದ ಇಡೀ ಕುಟುಂಬವು ಸಂತೋಷದಿಂದಿದೆ.—1 ಕೊರಿಂಥ 10:21, 22.
ಸತ್ಯ ಕ್ರೈಸ್ತರು ಮೂಢನಂಬಿಕೆಗಳ ದುಷ್ಟ ಆಚರಣೆಗಳನ್ನು ತಮ್ಮ ಜೀವನಗಳಿಂದ ದೂರವಿರಿಸಿ, ಸೃಷ್ಟಿಕರ್ತನಾದ ಯೆಹೋವನೂ ಆತನ ಪುತ್ರನಾದ ಯೇಸು ಕ್ರಿಸ್ತನೂ ಕೊಡುವ ಆತ್ಮಿಕ ಬೆಳಕನ್ನು ಅಂಗೀಕರಿಸಬೇಕು. ಹೀಗೆ ಅವರು ತಾವು ದೇವರ ದೃಷ್ಟಿಯಲ್ಲಿ ಸರಿಯಾಗಿರುವುದನ್ನು ಮಾಡುತ್ತಿದ್ದೇವೆಂಬ ಅರಿವುಳ್ಳವರಾಗಿ ನಿಜ ಮನಶ್ಶಾಂತಿಯನ್ನು ಅನುಭವಿಸಬಲ್ಲರು.—ಯೋಹಾನ 8:32.
[ಪಾದಟಿಪ್ಪಣಿಗಳು]
^ ಪ್ಯಾರ. 20 ಹೆಸರುಗಳು ಬದಲಾಯಿಸಲ್ಪಟ್ಟಿವೆ.
^ ಪ್ಯಾರ. 21 ಸೆಪ್ಟೆಂಬರ್ 1, 1999ರ ಕಾವಲಿನಬುರುಜು ಪತ್ರಿಕೆಯಲ್ಲಿ, “ಪಿಶಾಚನು ನಮಗೆ ರೋಗವನ್ನು ಬರಿಸುತ್ತಾನೋ?” ಎಂಬ ಲೇಖನವನ್ನು ನೋಡಿ.
[ಪುಟ 5ರಲ್ಲಿರುವ ಚೌಕ/ಚಿತ್ರ]
ಲೋಕದಾದ್ಯಂತ ಇರುವ ಕೆಲವು ಸಾಮಾನ್ಯ ಮೂಢನಂಬಿಕೆಗಳು
• ಅನ್ನದ ಬಟ್ಟಲಲ್ಲಿ ನೇರವಾಗಿ ಇಡಲ್ಪಟ್ಟಿರುವ ಚಾಪ್‌ಸ್ಟಿಕ್ (ಊಟದ ಕಡ್ಡಿ)ಗಳು ಮರಣಸೂಚಕವಾಗಿವೆ
• ಸೂರ್ಯನ ಬೆಳಕಿನಲ್ಲಿ ಒಂದು ಗೂಬೆಯನ್ನು ನೋಡುವುದು ದುರದೃಷ್ಟಕರವಾಗಿದೆ
• ಒಂದು ಸಮಾರಂಭದ ಸಮಯದಲ್ಲಿ ಒಂದು ಮೇಣದಬತ್ತಿಯು ನಂದಿಹೋಗುವುದು, ದುರಾತ್ಮಗಳು ಹತ್ತಿರದಲ್ಲಿವೆ ಎಂದರ್ಥ
• ಒಂದು ಛತ್ರಿ ನೆಲದ ಮೇಲೆ ಬೀಳುವುದು, ಆ ಮನೆಯಲ್ಲಿ ಒಂದು ಕೊಲೆ ನಡೆಯಲಿದೆ ಎಂಬುದನ್ನು ಅರ್ಥೈಸುತ್ತದೆ
• ಹಾಸಿಗೆಯ ಮೇಲೆ ಒಂದು ಟೋಪಿಯನ್ನು ಹಾಕುವುದು ದುರದೃಷ್ಟವನ್ನು ತರುತ್ತದೆ
• ಗಂಟೆಗಳ ನಾದವು ದೆವ್ವಗಳನ್ನು ಓಡಿಸಿಬಿಡುತ್ತದೆ
• ಒಂದು ಬರ್ತ್‌ಡೇ ಕೇಕಿನ ಮೇಲಿರುವ ಮೇಣದಬತ್ತಿಗಳನ್ನೆಲ್ಲಾ ಒಂದೇ ಬಾರಿಗೆ ಆರಿಸುವುದು, ಒಬ್ಬನ ಬಯಕೆಯನ್ನು ಈಡೇರಿಸುತ್ತದೆ
• ಹಾಸಿಗೆಗೆ ಒರಗಿಸಿ ಇಡಲ್ಪಟ್ಟ ಒಂದು ಪೊರಕೆಯು, ಪೊರಕೆಯಲ್ಲಿರುವ ದುರಾತ್ಮಗಳು ಹಾಸಿಗೆಗೆ ಮಂತ್ರಬಡಿಯುವಂತೆ ಮಾಡುತ್ತದೆ
• ನಿಮ್ಮ ದಾರಿಯಲ್ಲಿ ಅಡ್ಡಹಾದುಹೋಗುವ ಒಂದು ಕರಿಯ ಬೆಕ್ಕು ಅಪಶಕುನದ ಸಂಕೇತವಾಗಿದೆ
• ಮುಳ್ಳುಚಮಚ ಬೀಳುವುದು, ಒಬ್ಬ ಮನುಷ್ಯನು ಭೇಟಿಯಾಗಲು ಬರುತ್ತಾನೆ ಎಂಬುದನ್ನು ಅರ್ಥೈಸುತ್ತದೆ
• ಆನೆಗಳ ಚಿತ್ರವು ಬಾಗಿಲ ಕಡೆಗೆ ಮುಖಮಾಡಿ ಇಡಲ್ಪಟ್ಟಿರುವಲ್ಲಿ, ಅದು ಅದೃಷ್ಟವನ್ನು ತರುತ್ತದೆ
• ಬಾಗಿಲ ಮೇಲ್ಪಟ್ಟಿಯ ಮೇಲೆ ಜಡಿಯಲ್ಪಡುವ ಕುದುರೆಯ ಲಾಳವು ಅದೃಷ್ಟವನ್ನು ತರುತ್ತದೆ
• ಮನೆಯ ಮೇಲೆ ಬೆಳೆಯುವ ಐವಿ ಬಳ್ಳಿಯು ಕೆಡುಕಿನಿಂದ ರಕ್ಷಣೆಯನ್ನು ನೀಡುತ್ತದೆ
• ಒಂದು ಏಣಿಯ ಕೆಳಗೆ ನಡೆಯುವುದು ಅಪಶಕುನವಾಗಿದೆ
• ಒಂದು ಕನ್ನಡಿಯನ್ನು ಒಡೆದುಹಾಕುವುದು, ಏಳು ವರ್ಷಗಳ ಅಶುಭವನ್ನು ಅರ್ಥೈಸುತ್ತದೆ
• ಕರಿ ಮೆಣಸನ್ನು ಚೆಲ್ಲುವುದು, ನಿಮ್ಮ ಆಪ್ತ ಸ್ನೇಹಿತನೊಂದಿಗೆ ನೀವು ಜಗಳವಾಡುವಿರಿ ಎಂಬುದನ್ನು ಅರ್ಥೈಸುತ್ತದೆ
• ಉಪ್ಪು ಬಿದ್ದಾಗ, ಎಡಭುಜದ ಮೇಲಿನಿಂದ ಒಂದು ಚಿಟಿಕೆ ಉಪ್ಪನ್ನು ಎಸೆಯದಿದ್ದರೆ ಅದು ದುರದೃಷ್ಟವನ್ನು ತರುವುದು
• ಒಂದು ಆಡುಕುರ್ಚಿ (ರಾಕಿಂಗ್ ಚೇರ್)ಯು ಖಾಲಿಯಾಗಿರುವಾಗ ಅದು ಆಡುತ್ತಾ ಇರುವಂತೆ ಬಿಡುವುದಾದರೆ, ಅದರಲ್ಲಿ ಕುಳಿತುಕೊಳ್ಳುವಂತೆ ದೆವ್ವಗಳನ್ನು ಆಮಂತ್ರಿಸುವುದಾಗಿದೆ
• ಚಪ್ಪಲಿಗಳನ್ನು ಕೆಳಮುಖವಾಗಿ ಇಡುವುದು ದುರದೃಷ್ಟವನ್ನು ಬರಮಾಡುತ್ತದೆ
• ಯಾರಾದರೊಬ್ಬರು ಸತ್ತಾಗ, ಆತ್ಮವು ಹೊರಗೆ ಹೋಗಸಾಧ್ಯವಾಗುವಂತೆ ಕಿಟಕಿಗಳು ತೆರೆದಿಡಲ್ಪಡಬೇಕು
[ಪುಟ 6ರಲ್ಲಿರುವ ಚೌಕ]
ಮೂಢನಂಬಿಕೆಯ ಹಿಡಿತದಿಂದ ವಿಮುಕ್ತಿ
ಯೆಹೋವನ ಸಾಕ್ಷಿಗಳು ದಕ್ಷಿಣ ಆಫ್ರಿಕದ ಒಂದು ಪ್ರದೇಶದಲ್ಲಿ ಸಾರುತ್ತಿದ್ದರು. ಬಾಗಿಲು ತಟ್ಟಿ, ಅದು ತೆರೆಯಲ್ಪಟ್ಟಾಗ ಪೂರ್ತಿ ಸಾಂಗೋಮ (ಮಾಂತ್ರಿಕಳ) ವಿಶೇಷ ಉಡುಪನ್ನು ಉಟ್ಟಿದ್ದ ಸ್ತ್ರೀ ಎದುರಿಗೆ ಬಂದಳು. ಆಗ ಸಾಕ್ಷಿಗಳು ಹೊರಟು ಹೋಗಲು ಬಯಸಿದರೂ, ಅವರು ತಮ್ಮ ಸಂದೇಶವನ್ನು ಕೊಡಲೇಬೇಕೆಂದು ಆ ಸ್ತ್ರೀ ಪಟ್ಟುಹಿಡಿದಳು. ಸಾಕ್ಷಿಗಳಲ್ಲಿ ಒಬ್ಬರು, ಪ್ರೇತವ್ಯವಹಾರಾಚಾರಗಳ ವಿಷಯದಲ್ಲಿ ದೇವರ ದೃಷ್ಟಿಕೋನವನ್ನು ತಿಳಿಸಲು ಧರ್ಮೋಪದೇಶಕಾಂಡ 18:10-12ನ್ನು ಓದಿದಾಗ, ಆ ಮಾಂತ್ರಿಕಳು ಆ ಸಂದೇಶವನ್ನು ಸ್ವೀಕರಿಸಿ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡಳು. ಮತ್ತು ಬೈಬಲಿನ ಅಧ್ಯಯನದಿಂದ ಸಾಂಗೋಮಳಾಗಿ ಕೆಲಸ ಮಾಡುವುದು ಯೆಹೋವನ ಚಿತ್ತಕ್ಕೆ ವಿರುದ್ಧವಾಗಿದೆ ಎಂದು ತನಗೆ ನಿಶ್ಚಯವಾಗುವಲ್ಲಿ, ತಾನು ಅದನ್ನು ಬಿಟ್ಟುಬಿಡುತ್ತೇನೆಂದು ಆಕೆ ಹೇಳಿದಳು.
ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ 10ನೇ ಅಧ್ಯಾಯದ ಅಧ್ಯಯನದ ಬಳಿಕ, ಆಕೆ ತನ್ನ ಮಾಟದ ಸಾಮಾನುಗಳನ್ನೆಲ್ಲ ಸುಟ್ಟುಬಿಟ್ಟು ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗಲು ಆರಂಭಿಸಿದಳು. ಇದಲ್ಲದೆ, ತನ್ನ ಗಂಡನಿಂದ ಆಕೆ 17 ವರುಷಕಾಲ ಪ್ರತ್ಯೇಕವಾಸ ಮಾಡುತ್ತಿದ್ದರೂ, ಆಕೆ ತನ್ನ ವಿವಾಹವನ್ನು ಶಾಸನಬದ್ಧವಾಗಿ ಮಾಡಿದಳು. ಈಗ ಅವರಿಬ್ಬರೂ ಯೆಹೋವನ ಸಮರ್ಪಿತ ಮತ್ತು ಸ್ನಾತ ಸಾಕ್ಷಿಗಳಾಗಿದ್ದಾರೆ.
[ಪುಟ 6ರಲ್ಲಿರುವ ಚಿತ್ರ]
ರೋಗಿಯ ಸಮಸ್ಯೆಗಳ ಕಾರಣವನ್ನು ಮಾಂತ್ರಿಕವಾಗಿ ತಿಳಿಯಲು ಒಬ್ಬ “ಸಾಂಗೋಮ” ಎಲುಬುಗಳನ್ನು ಮೇಲೆಸೆಯುವುದು
[ಪುಟ 7ರಲ್ಲಿರುವ ಚಿತ್ರಗಳು]
ದೇವರ ನಿಷ್ಕೃಷ್ಟ ಜ್ಞಾನವು ನಿಜ ಸಂರಕ್ಷಣೆ ಮತ್ತು ಸಂತೋಷವನ್ನು ತರುತ್ತದೆ