ಮೂಢನಂಬಿಕೆಯ ನಿಯಂತ್ರಣದ ಕೆಳಗಿನ ಜೀವನ
ಮೂಢನಂಬಿಕೆಯ ನಿಯಂತ್ರಣದ ಕೆಳಗಿನ ಜೀವನ
ಮನೆಯಿಂದ ಹೋಗುವಾಗ ದಾರಿಯಲ್ಲಿ ಯಾರನ್ನೊ ಸಂಧಿಸುತ್ತೀರಿ. ನಡೆಯುತ್ತಿರುವಾಗ ನಿಮ್ಮ ಕಾಲ್ಬೆರಳನ್ನು ಕಲ್ಲಿಗೆ ತಾಕಿಸಿಕೊಳ್ಳುತ್ತೀರಿ. ರಾತ್ರಿಯಲ್ಲಿ ಒಂದು ಪಕ್ಷಿಯ ಕೂಗು ಕೇಳಿಸುತ್ತದೆ. ನೀವು ಒಂದೇ ಸ್ವಪ್ನವನ್ನು ಪದೇ ಪದೇ ಕಾಣುತ್ತೀರಿ. ಅನೇಕರಿಗೆ ಇವು ನಿರಪಾಯಕಾರಿಯಾದ ಸಾಮಾನ್ಯ ಸಂಭವಗಳಾಗಿವೆ. ಆದರೆ ಪಶ್ಚಿಮ ಆಫ್ರಿಕದ ಕೆಲವು ಜನರಿಗೆ ಇವು ಆತ್ಮಜಗತ್ತಿನಿಂದ ಬರುವ ಸೂಚನೆ, ಶಕುನ ಅಥವಾ ಸಂದೇಶಗಳಾಗಿವೆ. ಆ ಸೂಚನೆ ಮತ್ತು ಅದರ ಅರ್ಥವಿವರಣೆಗಳ ಮೇಲೆ ಹೊಂದಿಕೊಂಡು, ನಿಮಗಾಗಿ ಒಂದೊ ಭಾಗ್ಯ ಅಥವಾ ವಿಪತ್ತು ಕಾದಿರುತ್ತದೆ.
ಹೌದು, ಆಫ್ರಿಕದಲ್ಲಿ ಮಾತ್ರವಲ್ಲ, ಬೇರೆ ದೇಶಗಳಲ್ಲಿಯೂ ಮೂಢನಂಬಿಕೆಗಳಿವೆ. ಚೀನ ಮತ್ತು ಹಿಂದಿನ ಸೋವಿಯಟ್ ರಾಷ್ಟ್ರಗಳಲ್ಲಿ ಜನರು ಅಧಿಕೃತವಾದ ನಾಸ್ತಿಕತ್ವದ ಕೆಳಗೆ ಅನೇಕ ವರ್ಷಕಾಲ ಜೀವಿಸುತ್ತಿದ್ದರೂ, ಈಗಲೂ ಮೂಢನಂಬಿಕೆಗಳಿಗೆ ಅಂಟಿಕೊಂಡಿರುವವರ ಸಂಖ್ಯೆಯು ಬೆರಗುಗೊಳಿಸುವಂಥದ್ದಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ, ಅನೇಕರು ಜಾತಕವನ್ನು ನೋಡುತ್ತಾರೆ, 13ನೆಯ ತಾರೀಖಿಗೆ ಬರುವ ಶುಕ್ರವಾರಕ್ಕೆ ಹೆದರುತ್ತಾರೆ, ಮತ್ತು ಕರೀಬೆಕ್ಕುಗಳಿಂದ ದೂರವಿರುತ್ತಾರೆ. ಭೂಮಿಯ ಉತ್ತರಾರ್ಧಗೋಳದಲ್ಲಿ ಜೀವಿಸುವ ಜನರು ಉತ್ತರ ಧ್ರುವ ಪ್ರಭೆಯನ್ನು ಯುದ್ಧ ಅಥವಾ ಅಂಟುರೋಗಗಳ ಸೂಚನೆಯಾಗಿ ವೀಕ್ಷಿಸುತ್ತಾರೆ. ಭಾರತದಲ್ಲಿ ಟ್ರಕ್ ಡ್ರೈವರ್ಗಳ ನಂಬಿಕೆಯೇನಂದರೆ, ಉಷ್ಣದ ದಿನಗಳಲ್ಲಿ ದೇಹವನ್ನು ತಣ್ಣಗಾಗಿರಿಸಬೇಕಾದರೆ ಲೈಂಗಿಕ ಸಂಭೋಗ ಅಗತ್ಯ ಮತ್ತು ಇಂಥವರು ಏಡ್ಸ್ ರೋಗವನ್ನು ಹರಡಿಸುತ್ತಿದ್ದಾರೆ. ಜಪಾನಿನಲ್ಲಿ, ಸುರಂಗಮಾರ್ಗಗಳ ಕೆಲಸಗಾರರು, ಆ ಸುರಂಗದ ಕೆಲಸವು ಮುಗಿಯುವ ಮೊದಲು ಒಬ್ಬ ಸ್ತ್ರೀ ಒಳಗೆ ಬರುವಲ್ಲಿ ಅದು ದುರದೃಷ್ಟದ ಸೂಚನೆ ಎಂದು ನಂಬುತ್ತಾರೆ. ಸಂಘಟಿತ ಕ್ರೀಡೆಗಳಲ್ಲಿಯೂ ಮೂಢನಂಬಿಕೆಗಳು ಹೇರಳವಾಗಿವೆ. ವಾಲಿಬಾಲ್ ಆಟಗಾರನೊಬ್ಬನು, ತನ್ನ ವಿಜಯಸರಣಿಗೆ ಕಾರಣವು, ಬಿಳಿಯ ಕಾಲುಚೀಲಗಳ ಬದಲಿಗೆ ಕರಿಯ ಕಾಲುಚೀಲಗಳನ್ನು ತಾನು ತೊಟ್ಟದ್ದೇ ಎಂದು ಹೇಳಿದನು. ಹೀಗೆ ಮೂಢನಂಬಿಕೆಗಳ ಸಂಖ್ಯೆಗೆ ಅಂತ್ಯವಿಲ್ಲ.
ನಿಮ್ಮ ನಂಬಿಕೆಯೇನು? ನಿಮ್ಮನ್ನು ಒಂದು ಗುಪ್ತವಾದ, ವಿವರಿಸಲಾಗದಂಥ ಭಯವು ಕಾಡುತ್ತಿದೆಯೆ? ಯಾವುದಕ್ಕೆ, “ಒಂದು ನ್ಯಾಯಸಮ್ಮತವಾದ ವಿವರಣೆಯಿಲ್ಲವೆಂದು ಕಂಡುಬರುತ್ತದೋ ಅಂತಹ ವಿಶ್ವಾಸ, ಅರ್ಧ ವಿಶ್ವಾಸ ಅಥವಾ ಆಚಾರ”ಗಳಿಂದ ನೀವು ಪ್ರಭಾವಿಸಲ್ಪಟ್ಟಿದ್ದೀರೊ? ಒಂದು ಪ್ರಮಾಣಗ್ರಂಥವು “ಮೂಢನಂಬಿಕೆ”ಯನ್ನು ಹಾಗೆ ನಿರೂಪಿಸುವುದರಿಂದ, ಇದಕ್ಕೆ ನೀವು ಕೊಡುವ ಉತ್ತರವು ನಿಮ್ಮ ಜೀವನವನ್ನು ಮೂಢನಂಬಿಕೆಯು ನಿಯಂತ್ರಿಸುತ್ತಿದೆಯೊ ಎಂಬುದನ್ನು ತೋರಿಸಬಲ್ಲದು.
ತನ್ನ ನಿರ್ಣಯಗಳನ್ನು ಮತ್ತು ದಿನಚರಿಯನ್ನು ಮೂಢನಂಬಿಕೆಯು ನಿಯಂತ್ರಿಸುವಂತೆ ಬಿಡುವವನು, ತಾನು ನಿಜವಾಗಿಯೂ ಗ್ರಹಿಸದಿರುವ ಒಂದು ವಿಷಯವು ತನ್ನ ಮೇಲೆ ದೊರೆತನ ಮಾಡುವಂತೆ ಬಿಡುವವನಾಗಿದ್ದಾನೆ. ಇದು ವಿವೇಕಪ್ರದವೊ? ನಾವು ಅಂತಹ ಅಸ್ಪಷ್ಟವೂ ಪ್ರಾಯಶಃ ಕೆಡುಕನ್ನುಂಟುಮಾಡುವಂಥದ್ದೂ ಆಗಿರುವ ಪ್ರಭಾವಕ್ಕೆ ನಮ್ಮನ್ನು ಅಧೀನರಾಗಿ ಮಾಡಿಕೊಳ್ಳಬೇಕೊ? ಮೂಢನಂಬಿಕೆಯು ಹಾನಿಕರವಲ್ಲದ ಬಲಹೀನತೆಯಾಗಿದೆಯೊ ಇಲ್ಲವೆ ಅಪಾಯಸೂಚನೆಯ ವಿಷಯವಾಗಿದೆಯೊ?