ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಗ ಕೇವಲ ವ್ಯಾಯಾಮ ಪದ್ಧತಿಯೊ ಅಥವಾ ಅದರಲ್ಲಿ ಇನ್ನೇನಾದರೂ ಸೇರಿದೆಯೊ?

ಯೋಗ ಕೇವಲ ವ್ಯಾಯಾಮ ಪದ್ಧತಿಯೊ ಅಥವಾ ಅದರಲ್ಲಿ ಇನ್ನೇನಾದರೂ ಸೇರಿದೆಯೊ?

ಯೋಗ ಕೇವಲ ವ್ಯಾಯಾಮ ಪದ್ಧತಿಯೊ ಅಥವಾ ಅದರಲ್ಲಿ ಇನ್ನೇನಾದರೂ ಸೇರಿದೆಯೊ?

ತೆಳ್ಳಗಿನ, ಆರೋಗ್ಯಕರವಾದ ದೇಹ ತಮಗಿರಬೇಕೆಂಬುದು ಇಂದು ಹೆಚ್ಚಿನ ಜನರ ಮನಸ್ಸಿನಲ್ಲಿರುವ ಒಂದು ವಿಷಯವಾಗಿದೆ. ಇದು ಅನೇಕರನ್ನು, ಸಹಾಯಕ್ಕಾಗಿ ವ್ಯಾಯಾಮ ಶಾಲೆ ಮತ್ತು ಹೆಲ್ತ್‌ ಕ್ಲಬ್‌ಗಳ ಮೊರೆಹೋಗುವಂತೆ ಮಾಡಿದೆ. ಈ ಕಾರಣವೇ, ಪಾಶ್ಚಾತ್ಯ ಜಗತ್ತಿನ ಸಹಸ್ರಾರು ಜನರನ್ನು ಯೋಗ ಎಂಬ ಪೌರಸ್ತ್ಯ ಕಲೆಗೆ ತಿರುಗುವಂತೆ ಮಾಡಿರುತ್ತದೆ.

ಒತ್ತಡ, ಖಿನ್ನತೆ ಮತ್ತು ಹತಾಶೆಗಳಿಂದ ನರಳುತ್ತಿರುವವರು ಸಹ ಸಾಂತ್ವನ ಮತ್ತು ರೋಗಪರಿಹಾರಕ್ಕಾಗಿ ಯೋಗದ ಮೊರೆಹೊಕ್ಕಿದ್ದಾರೆ. ವಿಶೇಷವಾಗಿ, ಹಿಪ್ಪಿಗಳ ದಶಕವಾಗಿದ್ದ 1960ಗಳಿಂದ ಹಿಡಿದು, ಪೌರಸ್ತ್ಯ ಧರ್ಮಗಳಲ್ಲಿ ಮತ್ತು ಅವುಗಳ ಗೂಢಾರ್ಥಕ ಪದ್ಧತಿಗಳಲ್ಲಿ ಆಸಕ್ತಿಯು ಪಾಶ್ಚಾತ್ಯ ದೇಶಗಳಲ್ಲೆಲ್ಲ ಹರಡಿದೆ. ಯೋಗದ ನಿಕಟ ಶಾಖೆಯಾಗಿರುವ ಪ್ರಕೃತ್ಯತೀತ ಅತೀಂದ್ರಿಯ ಧ್ಯಾನವನ್ನು ಚಿತ್ರನಟರು ಮತ್ತು ರಾಕ್‌ ಸಂಗೀತಗಾರರು ಜನಪ್ರಿಯವಾಗುವಂತೆ ಮಾಡಿದ್ದಾರೆ. ಯೋಗದಲ್ಲಿ ಹೆಚ್ಚುತ್ತಿರುವ ಈ ಆಸಕ್ತಿಯು ಕಂಡುಬರುವುದರಿಂದ ನಾವು ಹೀಗೆ ಕೇಳಬಹುದು: ‘ಯೋಗವು ಅದರ ಅಭ್ಯಾಸಿಗಳಿಗೆ ಆರೋಗ್ಯಕರವಾದ, ತೆಳ್ಳಗಿನ ದೇಹವನ್ನು ಮತ್ತು ತುಸು ಮನಶ್ಶಾಂತಿಯನ್ನು ಕೊಡುವ ವ್ಯಾಯಾಮ ಪದ್ಧತಿ ಮಾತ್ರ ಆಗಿದೆಯೆ? ಈ ಯೋಗಾಭ್ಯಾಸವನ್ನು ಯಾವುದೇ ಧಾರ್ಮಿಕ ಸೂಚ್ಯಾರ್ಥವಿಲ್ಲದೆ ಅಭ್ಯಸಿಸುವುದು ಸಾಧ್ಯವೆ? ಯೋಗಾಭ್ಯಾಸವು ಕ್ರೈಸ್ತರಿಗೆ ಯೋಗ್ಯವಾಗಿದೆಯೆ?’

ಯೋಗದ ಹಿನ್ನೆಲೆ

“ಯೋಗ” ಎಂಬ ಸಂಸ್ಕೃತ ಪದವು ಜೋಡಿಸುವುದು, ಇಲ್ಲವೆ ಜೊತೆಯಾಗಿ ಕೂಡಿಸುವುದು ಅಥವಾ ನೊಗದೊಳಗೆ ತರುವುದು, ಸಜ್ಜುಹಾಕುವುದು ಅಥವಾ ಹತೋಟಿಯಲ್ಲಿಡುವುದು ಎಂಬ ಅರ್ಥವನ್ನು ಕೊಡಬಲ್ಲದು. ಒಬ್ಬ ಹಿಂದೂ ವ್ಯಕ್ತಿಯ ದೃಷ್ಟಿಕೋನದಲ್ಲಿ, ಯೋಗವು ಮಹಾ ಅತಿಮಾನುಷ ಶಕ್ತಿ ಅಥವಾ ಪರಮಾತ್ಮನೊಂದಿಗಿನ ಸಮಾಗಮಕ್ಕೆ ನಡೆಸುವ ಇಂದ್ರಿಯ ನಿಗ್ರಹ ವಿಧಾನ ಅಥವಾ ಶಿಕ್ಷಣವಾಗಿದೆ. ಅದನ್ನು, “ಶರೀರ, ಮನಸ್ಸು ಮತ್ತು ಆತ್ಮದ ಸಕಲ ಶಕ್ತಿಗಳನ್ನು ದೇವರಿಗೆ ಕೂಡಿಸಿಕೊಳ್ಳುವುದು” ಎಂದು ವರ್ಣಿಸಲಾಗಿದೆ.

ಯೋಗವು ಇತಿಹಾಸದಲ್ಲಿ ಯಾವಾಗ ಪ್ರಾರಂಭಗೊಂಡಿತೆಂದು ಹೇಳಬಹುದು? ಜನರು ವಿವಿಧ ಯೋಗಾಸನ ಭಂಗಿಯಲ್ಲಿ ಕುಳಿತಿರುವ ಮುದ್ರೆಗಳು ಈಗ ಪಾಕಿಸ್ತಾನದಲ್ಲಿರುವ ಸಿಂಧೂ ನದೀ ಕಣಿವೆಯಲ್ಲಿ ತೋರಿಬರುತ್ತವೆ. ಈ ಸಿಂಧೂ ನದೀ ಕಣಿವೆಯ ನಾಗರಿಕತೆಯ ಸಮಯವನ್ನು ಪ್ರಾಕ್ತನಶಾಸ್ತ್ರಜ್ಞರು ಸಾ.ಶ.ಪೂ. ಮೂರನೆಯ ಮತ್ತು ಎರಡನೆಯ ಸಹಸ್ರಾಬ್ದಗಳ ಮಧ್ಯೆ ನಮೂದಿಸುತ್ತಾರೆ. ಇದು ಮೆಸಪೊಟೇಮ್ಯ ಸಂಸ್ಕೃತಿಯ ಸಮಯಕ್ಕೆ ಅತಿ ಹತ್ತಿರದಲ್ಲಿದೆ. ಈ ಎರಡೂ ಪ್ರದೇಶಗಳ ಮನುಷ್ಯನಿರ್ಮಿತ ವಸ್ತುಗಳು, “ಅತಿಸಾಹಸಿಯಾದ ಬೇಟೆಗಾರ”ನಾದ ನಿಮ್ರೋದನನ್ನು ಸೂಚಿಸುವ ರೀತಿಯಲ್ಲಿ, ಒಬ್ಬ ದೇವನನ್ನು ಪ್ರತಿನಿಧಿಸುವ ಮನುಷ್ಯನು, ಮೃಗಗಳ ಕೊಂಬುಗಳನ್ನು ಧರಿಸಿ, ಮೃಗಗಳಿಂದ ಆವರಿಸಲ್ಪಟ್ಟಿರುವುದನ್ನು ಚಿತ್ರಿಸುತ್ತವೆ. (ಆದಿಕಾಂಡ 10:​8, 9) ಯೋಗದ ಭಂಗಿಯಲ್ಲಿ ಕುಳಿತಿರುವ ಆಕೃತಿಗಳು, ಮೃಗೇಂದ್ರನೂ ಯೋಗೇಂದ್ರನೂ ಆದ, ಅನೇಕವೇಳೆ ಲಿಂಗ ಪ್ರತೀಕದ ಮೂಲಕ ಆರಾಧಿಸಲ್ಪಡುವ ಶಿವ ದೇವನ ಮೂರ್ತಿಗಳೆಂದು ಹಿಂದೂಗಳು ಸಮರ್ಥಿಸುತ್ತಾರೆ. ಹೀಗೆ, ಹಿಂದೂ ಜಗತ್ತು (ಇಂಗ್ಲಿಷ್‌) ಎಂಬ ಪುಸ್ತಕವು ಯೋಗವನ್ನು, “ಮೂಲದಲ್ಲಿ ಆರ್ಯರಿಗಿಂತ ಮುಂಚಿನ ಕಾಲದಲ್ಲಿ, ಅನೇಕ ಪೂರ್ವಕಾಲದ ಕಲ್ಪನೆ ಮತ್ತು ಆಚಾರಗಳು ಸೇರಿದ್ದ ದೇಹದಂಡನೆಯ ಅಭ್ಯಾಸಗಳ ಪದ್ಧತಿ” ಎಂದು ಕರೆಯುತ್ತದೆ.

ಯೋಗ ವಿಧಾನಗಳು ಆದಿಯಲ್ಲಿ ಬಾಯಿಮಾತಿನ ಮೂಲಕ ಕೊಡಲ್ಪಟ್ಟವು. ತರುವಾಯ ಅವನ್ನು ಭಾರತೀಯ ಯೋಗಜ್ಞಾನಿ ಪತಂಜಲಿ ಸವಿವರವಾದ ಲಿಖಿತ ರೂಪದಲ್ಲಿ ನಮೂದಿಸಿದನು. ಯೋಗ ಸೂತ್ರ ಎಂದು ಕರೆಯಲ್ಪಡುವ ಈ ಪುಸ್ತಕವು ಮೂಲಭೂತ ಯೋಗ ಶಿಕ್ಷಣದ ಪುಸ್ತಕವಾಗಿದೆ. ಪತಂಜಲಿಯ ಅಭಿಪ್ರಾಯದಂತೆ, ಯೋಗವು “ಭೌತಿಕ ಹಾಗೂ ಪಾರಭೌತಿಕ ಮಾನವ ಪ್ರಕೃತಿಯ ವಿಭಿನ್ನ ಮೂಲಾಂಶಗಳ ನಿಯಂತ್ರಣದ ಮೂಲಕ ಪರಿಪೂರ್ಣತೆಯನ್ನು ಸಂಪಾದಿಸುವ ಕ್ರಮಬದ್ಧ ಪ್ರಯತ್ನವಾಗಿದೆ.” ಅದರ ಆರಂಭದಿಂದ ಹಿಡಿದು ಇಂದಿನ ತನಕ ಯೋಗವು ಪೌರಸ್ತ್ಯ ಧರ್ಮಗಳ ಮತ್ತು ಇಂದು ವಿಶೇಷವಾಗಿ, ಹಿಂದೂ, ಜೈನ ಮತ್ತು ಬೌದ್ಧಮತಗಳ ಅವಿಭಾಜ್ಯ ಭಾಗವಾಗಿರುತ್ತದೆ. ಕೆಲವು ಯೋಗಾಭ್ಯಾಸಿಗಳು, ಯೋಗವು ಸರ್ವವ್ಯಾಪಿ ಆತ್ಮದೊಂದಿಗೆ ಐಕ್ಯಗೊಳ್ಳುವ ಮೂಲಕ, ತಾವು ಮೋಕ್ಷವನ್ನು ಅಥವಾ ಮುಕ್ತಿಯನ್ನು ಪಡೆಯುವಂತೆ ಮಾಡುತ್ತದೆಂದು ನಂಬುತ್ತಾರೆ.

ಹೀಗಿರುವುದರಿಂದ, ನಾವು ಪುನಃ ಹೀಗೆ ಕೇಳುತ್ತೇವೆ: ‘ಕೇವಲ ಆರೋಗ್ಯಕರವಾದ ದೇಹ ಮತ್ತು ಆರಾಮವಾಗಿರುವ ಮನಸ್ಸನ್ನು ಪಡೆದುಕೊಳ್ಳಲಿಕ್ಕಾಗಿ, ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲದೆ, ಬರಿಯ ಶಾರೀರಿಕ ವ್ಯಾಯಾಮವಾಗಿ ಯೋಗವನ್ನು ಅಭ್ಯಸಿಸಬಹುದೊ?’ ಅದರ ಹಿನ್ನೆಲೆಯ ದೃಷ್ಟಿಯಲ್ಲಿ, ಉತ್ತರವು ಇಲ್ಲ ಎಂದಾಗಿರಲೇ ಬೇಕು.

ಯೋಗವು ನಿಮ್ಮನ್ನು ಎಲ್ಲಿಗೆ ನಡೆಸಬಹುದು?

ಯೋಗ ಶಿಕ್ಷಣದ ಗುರಿಯು, ಒಬ್ಬನು ಅತಿಮಾನುಷ ಪರಮಾತ್ಮದೊಂದಿಗೆ ಕೂಡಲ್ಪಡುವ ಅಥವಾ ಐಕ್ಯವಾಗುವ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದೇ ಆಗಿದೆ. ಆದರೆ ಅದು ಯಾವ ಆತ್ಮ ಆಗಿರಬಹುದು?

ಹಿಂದೂ ಜಗತ್ತು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ, ಲೇಖಕ ಬೆಂಜಮಿನ್‌ ವಾಕರ್‌ ಯೋಗದ ಕುರಿತು ಹೇಳುವುದು: “ಅದೊಂದು ಆದಿಕಾಲದ ಮಾಂತ್ರಿಕ ಸಂಸ್ಕಾರ ಪದ್ಧತಿಯಾಗಿದ್ದಿರಬಹುದು, ಮತ್ತು ಯೋಗದಲ್ಲಿ ಇನ್ನೂ ಮಂತ್ರವಿದ್ಯೆ ಮತ್ತು ಮಾಟದ ಸುಳಿವಿದೆ.” ಯೋಗಾಭ್ಯಾಸವು ಪ್ರಕೃತ್ಯತೀತ ಶಕ್ತಿಗಳನ್ನು ಕೊಡಬಲ್ಲದೆಂದು ಹಿಂದೂ ತತ್ತ್ವಜ್ಞಾನಿಗಳು ಒಪ್ಪಿಕೊಳ್ಳುತ್ತಾರಾದರೂ, ಇದು ಯೋಗದ ಏಕೈಕ ಗುರಿಯಲ್ಲವೆಂದೂ ಅವರು ಸಾಮಾನ್ಯವಾಗಿ ವಾದಿಸುತ್ತಾರೆ. ದೃಷ್ಟಾಂತಕ್ಕೆ, ಭಾರತೀಯ ತತ್ತ್ವಜ್ಞಾನ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ, ಮಾಜಿ ರಾಷ್ಟ್ರಪತಿಯಾದ ಡಾ. ಎಸ್‌. ರಾಧಾಕೃಷ್ಣನ್‌ ಅವರು ಯೋಗಿಯ ಬಗ್ಗೆ, “ಆಸನಗಳ ಮೂಲಕ ಮಾಡುವ ದೇಹನಿಯಂತ್ರಣವು ಶೀತೋಷ್ಣಗಳ ವೈಪರೀತ್ಯವನ್ನು ಉಪೇಕ್ಷಿಸುವಂತೆ ಮಾಡುತ್ತದೆ. . . . ಯೋಗಿಯು ದೂರದಿಂದ ಕೇಳಿಸಿಕೊಳ್ಳುವಂತೆಯೂ ನೋಡುವಂತೆಯೂ ಸಾಧ್ಯವಾಗುತ್ತದೆ . . . ಸಾಮಾನ್ಯ ಸಂಪರ್ಕ ಸಾಧನಗಳಿಲ್ಲದೆ ಒಬ್ಬನು ಇನ್ನೊಬ್ಬನಿಗೆ ತನ್ನ ಯೋಚನೆಯನ್ನು ರವಾನಿಸುವುದು ತೀರ ಸಾಧ್ಯ. . . . ಯೋಗಿಯು ತನ್ನ ದೇಹವನ್ನು ಅದೃಶ್ಯವಾಗುವಂತೆ ಮಾಡಬಲ್ಲನು,” ಎಂದು ಹೇಳುತ್ತಾರೆ.

ಯೋಗಿಯೊಬ್ಬನು ಮೊಳೆಯ ಮಂಚದ ಮೇಲೆ ಮಲಗುವ ಅಥವಾ ಬೆಂಕಿಯ ಕೆಂಡಗಳ ಮೇಲೆ ನಡೆಯುವ ಚಿತ್ರವು ಕೆಲವರಿಗೆ ಮೋಸಕರವಾಗಿಯೂ ಇತರರಿಗೆ ಹಾಸ್ಯಕರವಾಗಿಯೂ ಕಂಡುಬಂದೀತು. ಆದರೆ ಇವು ಭಾರತದಲ್ಲಿ ಸಾಮಾನ್ಯ ಘಟನೆಗಳಾಗಿವೆ. ಸೂರ್ಯನನ್ನು ನೇರವಾಗಿ ತಾಸುಗಟ್ಟಲೆ ನೋಡುತ್ತಾ ಒಂದು ಕಾಲಿನಲ್ಲಿ ನಿಲ್ಲುವ ಮತ್ತು ಉಸಿರು ನಿಯಂತ್ರಣದ ಮುಖೇನ ದೀರ್ಘಕಾಲ ಒಬ್ಬನನ್ನು ಉಸುಬಿನಲ್ಲಿ ಸಜೀವ ಸಮಾಧಿಮಾಡುವ ಸಂದರ್ಭಗಳೂ ಸಾಮಾನ್ಯವಾಗಿವೆ. ಜೂನ್‌ 1995ರಲ್ಲಿ, ದ ಟೈಮ್ಸ್‌ ಆಫ್‌ ಇಂಡಿಯ ವಾರ್ತಾಪತ್ರಿಕೆಯು, ಸಮಾಧಿ ಸ್ಥಿತಿಯಲ್ಲಿದ್ದ ಮೂರೂವರೆ ವರ್ಷ ಪ್ರಾಯದ ಹುಡುಗಿಯ ಹೊಟ್ಟೆಯ ಮೇಲೆ 750 ಕಿಲೊಗ್ರ್ಯಾಮ್‌ ಭಾರದ ಕಾರು ಓಡಿಸಲ್ಪಟ್ಟಿರುವ ಸಂಗತಿಯನ್ನು ವರದಿಮಾಡಿತು. ಅವಳು ಎಚ್ಚೆತ್ತಾಗ, ಯಾವ ಹಾನಿಯೂ ಆಗದಿದ್ದುದನ್ನು ನೋಡಿ ಜನರು ಆಶ್ಚರ್ಯಪಟ್ಟರು. ಆ ವರದಿ ಹೇಳಿದ್ದು: “ಅದು ಶುದ್ಧ ಯೋಗಶಕ್ತಿಯಾಗಿತ್ತು.”

ಇಂತಹ ಕೆಲಸಗಳಲ್ಲಿ ಯಾವುದನ್ನೂ, ಸಾಧಾರಣವಾಗಿ ಮನುಷ್ಯನು ಮಾಡಲಾರನು ಎಂಬುದರಲ್ಲಿ ಸಂಶಯವಿಲ್ಲ. ಆದುದರಿಂದ ಒಬ್ಬ ಕ್ರೈಸ್ತನು ಹೀಗೆ ಪ್ರಶ್ನಿಸತಕ್ಕದ್ದು: ಇಂತಹ ಸಾಮರ್ಥ್ಯಗಳು ಏನನ್ನು ಸೂಚಿಸುತ್ತವೆ? “ಭೂಲೋಕದಲ್ಲೆಲ್ಲಾ ಸರ್ವೋನ್ನತ”ನಾದ ಯೆಹೋವ ದೇವರಿಂದ ಇವು ಬರುತ್ತವೊ ಅಥವಾ ಬೇರೆ ಮೂಲದಿಂದ ಬರುತ್ತವೆಯೆ? (ಕೀರ್ತನೆ 83:18) ಬೈಬಲು ಈ ವಿಷಯದಲ್ಲಿ ಅತಿ ಸ್ಪಷ್ಟವಾಗಿ ಮಾತಾಡುತ್ತದೆ. ಕಾನಾನ್ಯರ ವಶದಲ್ಲಿದ್ದ ವಾಗ್ದತ್ತ ದೇಶವನ್ನು ಇಸ್ರಾಯೇಲ್ಯರು ಇನ್ನೇನು ಪ್ರವೇಶಿಸಲಿದ್ದಾಗ, ಯೆಹೋವನು ಇಸ್ರಾಯೇಲ್ಯರಿಗೆ ಮೋಶೆಯ ಮೂಲಕ, “ಅಲ್ಲಿರುವ ಜನಗಳು ಮಾಡುವ ಹೇಸಿಗೆಕೆಲಸಗಳನ್ನು ಅನುಸರಿಸಲೇಬಾರದು,” ಎಂದು ಹೇಳಿದನು. ಯಾವ ‘ಹೇಸಿಗೆಕೆಲಸಗಳು’? “ಕಣಿಕೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡು”ವವರ ವಿರುದ್ಧ ಮೋಶೆಯು ಎಚ್ಚರಿಸಿದನು. (ಧರ್ಮೋಪದೇಶಕಾಂಡ 18:9, 10) ಇವು ದೇವರಿಗೆ ಅಸಹ್ಯವಾಗಿದ್ದವು, ಏಕೆಂದರೆ ಅವು ದೆವ್ವಗಳ ಮತ್ತು ಪಾಪಿಗಳಾದ ಮನುಷ್ಯರ ಕೆಲಸಗಳಾಗಿದ್ದವು.​—ಗಲಾತ್ಯ 5:​19-21.

ಕ್ರೈಸ್ತರು ಆಯ್ಕೆ ಮಾಡುವ ವಿಷಯಗಳಲ್ಲ

ಆರೋಗ್ಯ ಶಿಕ್ಷಕರು ಏನೇ ಹೇಳಲಿ, ಯೋಗಾಭ್ಯಾಸವು ಕೇವಲ ಶಾರೀರಿಕ ವ್ಯಾಯಾಮವಾಗಿರುವುದಿಲ್ಲ. ಹಿಂದೂ ರೀತಿರಿವಾಜುಗಳು ಮತ್ತು ಕರ್ಮಾಚರಣೆಗಳು (ಇಂಗ್ಲಿಷ್‌) ಎಂಬ ಪುಸ್ತಕವು, ಗುರುವಿನ ಮಾರ್ಗದರ್ಶನದಲ್ಲಿದ್ದ ಯೋಗದ ನವಶಿಷ್ಯರಲ್ಲಿ ಇಬ್ಬರ ಅನುಭವಗಳನ್ನು ತಿಳಿಸುತ್ತದೆ. ಒಬ್ಬನು ಹೀಗೆ ಹೇಳಿದನೆಂದು ಉದ್ಧರಿಸಲಾಗಿದೆ: “ನನ್ನಿಂದ ಸಾಧ್ಯವಿರುವಷ್ಟರ ಮಟ್ಟಿಗೆ ನಾನು ಉಸಿರು ಹಿಡಿಯಲು ಅತಿಮಾನುಷ ಪ್ರಯತ್ನವನ್ನು ಮಾಡಿದೆ. ಇನ್ನೇನು ಮೂರ್ಛೆ ಹೋಗಲಿದ್ದೇನೆ ಎಂದೆಣಿಸಿದಾಗ ಮಾತ್ರ ಉಸಿರು ಬಿಟ್ಟೆ. . . . ಒಂದು ದಿನ ಮಧ್ಯಾಹ್ನದ ಹೊತ್ತಿನಲ್ಲಿ ಉಜ್ವಲವಾಗಿದ್ದ ಚಂದ್ರನನ್ನು ಕಂಡೆ ಎಂದು ನಾನು ನೆನಸಿದೆ ಮತ್ತು ಅದು ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಓಲಾಡುತ್ತಿತ್ತು. ಇನ್ನೊಂದು ಬಾರಿ, ಒಂದು ಮಧ್ಯಾಹ್ನ ಸ್ವತಃ ನಾನೇ ದಟ್ಟವಾದ ಅಂಧಕಾರದಲ್ಲಿ ಸಿಕ್ಕಿಹಾಕಿಕೊಂಡಿರುವಂತೆ ಕಲ್ಪಿಸಿಕೊಂಡೆ. ನನ್ನ ಮಾರ್ಗದರ್ಶಕರು . . . ಈ ದರ್ಶನಗಳ ಕುರಿತು ನಾನು ತಿಳಿಸಿದಾಗ ತುಂಬ ಸಂತೋಷಪಟ್ಟರು. . . . ನನ್ನ ದೇಹದಂಡನೆಯ ಕಾರಣ ಸಿಗಲಿರುವ ಇನ್ನೂ ಹೆಚ್ಚು ಆಶ್ಚರ್ಯಕರವಾದ ಅನುಭವಗಳನ್ನು ನಾನು ಪಡೆಯಲಿದ್ದ ಸಮಯ ಅತಿ ಹತ್ತಿರವಿದೆ ಎಂದು ಅವರು ನನಗೆ ಆಶ್ವಾಸನೆ ಕೊಟ್ಟರು.” ಎರಡನೆಯವನು ಹೇಳಿದ್ದು: “ನಾನು ಪ್ರತಿದಿನ ಕಣ್ಣು ಮಿಟುಕಿಸದೆ ಮತ್ತು ನನ್ನ ಭಂಗಿಯನ್ನು ಬದಲಾಯಿಸಿದೆ ಆಕಾಶವನ್ನು ದಿಟ್ಟಿಸಿ ನೋಡುವಂತೆ ಅವರು ನಿರ್ಬಂಧಪಡಿಸಿದರು. . . . ಕೆಲವು ಬಾರಿ ಗಾಳಿಯಲ್ಲಿ ಬೆಂಕಿಕಿಡಿಗಳು ಹಾರುವುದನ್ನು ನೋಡಿದಂತಹ ಅನಿಸಿಕೆ ನನಗಾಯಿತು. ಬೇರೆ ಸಮಯಗಳಲ್ಲಿ, ಬೆಂಕಿಯ ಗೋಳಗಳನ್ನು ಮತ್ತು ಇತರ ಉಲ್ಕೆಗಳನ್ನು ನೋಡಿದಂತೆ ಕಾಣಿಸಿತು. ನನ್ನ ಪ್ರಯತ್ನಗಳ ಸಾಫಲ್ಯದಿಂದ ನನ್ನ ಶಿಕ್ಷಕರಿಗೆ ತುಂಬ ಸಂತೋಷವಾಯಿತು.”

ಯೋಗಾಭ್ಯಾಸದ ನಿಜ ಗುರಿಯ ಕಡೆಗೆ ಹೋಗುವಾಗ ಈ ವಿಚಿತ್ರ ದೃಶ್ಯಗಳು ಯೋಗ್ಯವಾದ ಪರಿಣಾಮಗಳೆಂದು ಆ ಗುರುಗಳು ನಂಬಿದರೆಂಬುದು ವ್ಯಕ್ತ. ಹೌದು, ಯೋಗದ ಅಂತಿಮ ಗುರಿಯು, ಯಾವುದೊ ವ್ಯಕ್ತಿಸ್ವರೂಪವಿಲ್ಲದ ಮಹಾ ಆತ್ಮದೊಂದಿಗೆ ಲೀನವಾಗುವುದೆಂದು ಹೇಳಲಾಗುವ ಮೋಕ್ಷವಾಗಿದೆ. ಇದನ್ನು, “ಮನಸ್ಸಿನ ಸಹಜ ಯೋಚನಾಸಾಮರ್ಥ್ಯ ವಿಧಾನವನ್ನು (ಉದ್ದೇಶಪೂರ್ವಕವಾಗಿ) ನಿಲ್ಲಿಸುವುದು” ಎಂದು ವರ್ಣಿಸಲಾಗಿದೆ. ಆದರೆ ಹೀಗೆ ಮಾಡುವುದು ಕ್ರೈಸ್ತರಿಗೆ ಕೊಡಲ್ಪಟ್ಟಿರುವ ಗುರಿಗೆ ವ್ಯತಿರಿಕ್ತವಾಗಿದೆ. ಏಕೆಂದರೆ ಅವರಿಗೆ ಕೊಡಲ್ಪಟ್ಟಿರುವ ಸಲಹೆಯು ಹೇಳುವುದು: “ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು. ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.”​—ರೋಮಾಪುರ 12:1, 2.

ಯಾವ ದೈಹಿಕ ವ್ಯಾಯಾಮಗಳನ್ನು ಮಾಡಬೇಕೆಂದು ಆಯ್ಕೆಮಾಡುವುದು ಒಬ್ಬನ ಸ್ವಂತ ಇಷ್ಟ. ಆದರೆ ಕ್ರೈಸ್ತರು, ಅದು ದೈಹಿಕ ತರಬೇತಾಗಲಿ, ಉಣ್ಣುವುದು, ಕುಡಿಯುವುದು, ಉಡುಪು, ವಿನೋದಾವಳಿ, ಇಲ್ಲವೆ ಇನ್ನೇನೇ ಆಗಲಿ, ಯೆಹೋವ ದೇವರೊಂದಿಗೆ ತಮಗಿರುವ ಸಂಬಂಧವನ್ನು ಅದು ಹಾಳುಗೆಡವುವಂತೆ ಬಿಡರು. (1 ಕೊರಿಂಥ 10:31) ಆರೋಗ್ಯದ ಉದ್ದೇಶದಿಂದ ಮಾತ್ರ ವ್ಯಾಯಾಮ ಮಾಡುವವರಿಗೆ, ಪ್ರೇತವ್ಯವಹಾರ ಮತ್ತು ಮಂತ್ರವಿದ್ಯೆಯ ಅಪಾಯಗಳಿಗೆ ಅವರನ್ನು ಒಡ್ಡದಿರುವಂಥ ಅನೇಕ ಮಾರ್ಗಗಳು ಲಭ್ಯವಿವೆ. ನಾವು ಸುಳ್ಳುಧರ್ಮದಲ್ಲಿ ಬೇರೂರಿರುವ ಆಚಾರಗಳು ಮತ್ತು ನಂಬಿಕೆಗಳಿಂದ ದೂರವಿರುವಲ್ಲಿ, ನಾವು ನೀತಿಯ ನೂತನ ವ್ಯವಸ್ಥೆಯಲ್ಲಿ ದೇವರ ಆಶೀರ್ವಾದಕ್ಕಾಗಿ ಮುನ್ನೋಡಬಹುದು. ಮತ್ತು ಅಲ್ಲಿ ನಾವು ನಮ್ಮ ತನುಮನಗಳಲ್ಲಿ ಪರಿಪೂರ್ಣ ಆರೋಗ್ಯವನ್ನು ಅನುಭವಿಸಬಲ್ಲೆವು.​—2 ಪೇತ್ರ 3:13; ಪ್ರಕಟನೆ 21:3, 4.

[ಪುಟ 22ರಲ್ಲಿರುವ ಚಿತ್ರಗಳು]

ಅನೇಕರು, ತಮ್ಮನ್ನು ಪ್ರೇತವ್ಯವಹಾರಕ್ಕೆ ಒಡ್ಡಿಕೊಳ್ಳದಿರುವ ಆರೋಗ್ಯಕರವಾದ ಚಟುವಟಿಕೆಗಳಲ್ಲಿ ಸಂತೋಷಿಸುತ್ತಾರೆ