ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ದೇವರ ಮೆಚ್ಚಿಗೆಯನ್ನು ಪಡೆಯಲಿಕ್ಕಾಗಿ ಪ್ರಾಣಿ ಯಜ್ಞದ ಆವಶ್ಯಕತೆಯಿತ್ತು ಎಂಬುದು ಹೇಬೆಲನಿಗೆ ಗೊತ್ತಿತ್ತೋ?
ಕಾಯಿನ ಹಾಗೂ ಹೇಬೆಲರು ತಮ್ಮ ಕಾಣಿಕೆಗಳನ್ನು ನೀಡಿದ್ದರ ಕುರಿತಾದ ಬೈಬಲ್ ವೃತ್ತಾಂತವು ತುಂಬ ಸಂಕ್ಷಿಪ್ತವಾಗಿದೆ. ಆದಿಕಾಂಡ 4:3-5ರಲ್ಲಿ ನಾವು ಓದುವುದು: “ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮಮಾಡಿದನು. ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ.”
ಯಜ್ಞಗಳ ವಿಷಯದಲ್ಲಿ ಅಥವಾ ಯಾವ ರೀತಿಯ ಯಜ್ಞಗಳು ತನಗೆ ಸ್ವೀಕಾರಾರ್ಹವಾಗಿವೆ ಎಂಬ ವಿಷಯದಲ್ಲಿ ಯೆಹೋವನು ನಿರ್ದಿಷ್ಟ ಮಾಹಿತಿಯನ್ನು ಕೊಟ್ಟಿದ್ದನು ಎಂಬ ಯಾವುದೇ ಉಲ್ಲೇಖವು ಈ ಘಟನೆಗೆ ಮುಂಚೆ ಬೈಬಲಿನಲ್ಲಿ ಕಂಡುಬರುವುದಿಲ್ಲ. ಹೀಗಿರುವುದರಿಂದ, ಕಾಯಿನ ಹೇಬೆಲರು ತಮ್ಮ ಕಾಣಿಕೆಗಳನ್ನು ತಮ್ಮ ಸ್ವಂತ ಆಯ್ಕೆಯ ಮೇರೆಗೆ ನೀಡಿದ್ದರು ಎಂಬುದು ಸುವ್ಯಕ್ತ. ತಮ್ಮ ಹೆತ್ತವರ ಮೂಲ ಪರದೈಸ ಮನೆಯನ್ನು ಪ್ರವೇಶಿಸದಂತೆ ಅವರನ್ನು ತಡೆಯಲಾಗಿತ್ತು; ಅವರು ಪಾಪದ ಪರಿಣಾಮಗಳನ್ನು ಅನುಭವಿಸತೊಡಗಿದ್ದರು; ಮತ್ತು ಅವರು ದೇವರಿಂದ ವಿಮುಖರಾಗಿದ್ದರು. ತಮ್ಮ ಪಾಪಭರಿತ ಹಾಗೂ ಕರುಣಾಜನಕ ಸ್ಥಿತಿಯಲ್ಲಿ, ಸಹಾಯಕ್ಕಾಗಿ ದೇವರ ಕಡೆಗೆ ತಿರುಗುವ ಬಲವತ್ತಾದ ಅನಿಸಿಕೆ ಅವರಿಗಾಗಿದ್ದಿರಬಹುದು. ದೇವರಿಗೆ ಒಂದು ಕೊಡುಗೆಯನ್ನು ನೀಡುವುದು, ದೇವರ ಮೆಚ್ಚಿಗೆಯನ್ನು ಪಡೆಯಲಿಕ್ಕಾಗಿ ತಮ್ಮ ಕಡೆಯಿಂದ ಮಾಡಲ್ಪಡುವ ಒಂದು ಸ್ವಯಂಪ್ರೇರಿತ ಕೃತ್ಯವಾಗಿತ್ತು.
ಇದರ ಫಲಿತಾಂಶವೇನೆಂದರೆ, ಹೇಬೆಲನ ಕಾಣಿಕೆಯನ್ನು ದೇವರು ಮೆಚ್ಚಿದನು ಆದರೆ ಕಾಯಿನನ ಕಾಣಿಕೆಯನ್ನು ಮೆಚ್ಚಲಿಲ್ಲ. ಏಕೆ? ಹೇಬೆಲನು ಸೂಕ್ತವಾದ ವಸ್ತುವನ್ನು ಕಾಣಿಕೆಯಾಗಿ ಕೊಟ್ಟನು ಮತ್ತು ಕಾಯಿನನು ಹಾಗೆ ಮಾಡಲಿಲ್ಲ ಎಂಬ ಕಾರಣಕ್ಕಾಗಿಯೋ? ಅವರು ಸಲ್ಲಿಸಿದ ರೀತಿಯ ಕಾಣಿಕೆಗೂ ಫಲಿತಾಂಶಕ್ಕೂ ಸಂಬಂಧವಿತ್ತೋ ಎಂಬುದರ ಬಗ್ಗೆ ನಮಗೆ ನಿಶ್ಚಯವಿಲ್ಲ. ಏಕೆಂದರೆ ಯಾವುದು ಸ್ವೀಕಾರಾರ್ಹವಾಗಿದೆ ಮತ್ತು ಯಾವುದು ಸ್ವೀಕಾರಾರ್ಹವಾಗಿಲ್ಲ ಎಂಬುದು ಅವರಿಬ್ಬರಿಗೂ ಹೇಳಲ್ಪಟ್ಟಿರಲಿಲ್ಲ. ಆದರೂ, ಎರಡೂ ರೀತಿಯ ಕಾಣಿಕೆಯು ಸ್ವೀಕಾರಾರ್ಹವಾಗಿದ್ದಿರುವ ಸಂಭವವೂ ಇದೆ. ಕಾಲಕ್ರಮೇಣ ಇಸ್ರಾಯೇಲ್ ಜನಾಂಗಕ್ಕೆ ಯೆಹೋವನು ಕೊಟ್ಟಂಥ ಧರ್ಮಶಾಸ್ತ್ರದಲ್ಲಿ, ಸ್ವೀಕಾರಾರ್ಹ ಯಜ್ಞಗಳಲ್ಲಿ ಕೇವಲ ಪ್ರಾಣಿಗಳು ಅಥವಾ ಪ್ರಾಣಿಯ ಭಾಗಗಳು ಮಾತ್ರವಲ್ಲ, ಸುಟ್ಟ ತೆನೆಗಳು, ಜವೆಗೋದಿಯ ಸಿವುಡುಗಳು, ಗೋದಿಯ ಹಿಟ್ಟು, ಸುಟ್ಟ ಪದಾರ್ಥಗಳು ಹಾಗೂ ದ್ರಾಕ್ಷಾರಸ ಸಹ ಒಳಗೂಡಿತ್ತು. (ಯಾಜಕಕಾಂಡ 6:19-23; 7:11-13; 23:10-13) ಕಾಯಿನ ಹಾಗೂ ಹೇಬೆಲರ ಯಜ್ಞಗಳಲ್ಲಿ, ಭೌತಿಕ ವಸ್ತು ಮಾತ್ರವೇ ದೇವರು ಒಂದು ಯಜ್ಞವನ್ನು ಸ್ವೀಕರಿಸಿ ಇನ್ನೊಂದನ್ನು ನಿರಾಕರಿಸುವಂತೆ ಮಾಡಲಿಲ್ಲ ಎಂಬುದು ಸುಸ್ಪಷ್ಟ.—ಹೋಲಿಸಿರಿ ಯೆಶಾಯ 1:11; ಆಮೋಸ 5:22.
ಶತಮಾನಗಳ ಬಳಿಕ, ಅಪೊಸ್ತಲ ಪೌಲನು ಹೇಳಿದ್ದು: “ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ತಾನು ನೀತಿವಂತನೆಂದು ಸಾಕ್ಷಿಹೊಂದಿದನು; ದೇವರು ಅವನ ಕಾಣಿಕೆಗಳನ್ನು ಅಂಗೀಕಾರಮಾಡಿದ್ದೇ ಆ ಸಾಕ್ಷಿ.” (ಇಬ್ರಿಯ 11:4) ಹೀಗೆ, ನಂಬಿಕೆಯ ಕಾರಣದಿಂದಲೇ ಹೇಬೆಲನು ದೇವರಿಂದ ನೀತಿವಂತನೆಂದು ಅಂಗೀಕರಿಸಲ್ಪಟ್ಟನು. ಆದರೆ ಯಾವುದರಲ್ಲಿ ನಂಬಿಕೆ? ಯಾರು ‘ಸರ್ಪನ ತಲೆಯನ್ನು ಜಜ್ಜ’ಲಿದ್ದನೋ ಆ ಸಂತಾನವನ್ನು ಒದಗಿಸುವುದು ಮತ್ತು ಮಾನವಕುಲವು ಒಂದುಕಾಲದಲ್ಲಿ ಆನಂದಿಸಿದಂಥ ಶಾಂತಿ ಹಾಗೂ ಪರಿಪೂರ್ಣತೆಯನ್ನು ಪುನಸ್ಸ್ಥಾಪಿಸುವುದರ ಕುರಿತಾದ ಯೆಹೋವನ ವಾಗ್ದಾನದಲ್ಲಿನ ನಂಬಿಕೆಯೇ. ಆ ಸಂತಾನದ ‘ಹಿಮ್ಮಡಿಯು ಕಚ್ಚಲ್ಪಡುವುದರ’ ಕುರಿತಾದ ಹೇಳಿಕೆಯಿಂದ ಹೇಬೆಲನು, ರಕ್ತವನ್ನು ಸುರಿಸುವುದನ್ನು ಒಳಗೊಂಡಿರುವ ಒಂದು ಯಜ್ಞದ ಆವಶ್ಯಕತೆಯಿತ್ತು ಎಂದು ವಿವೇಚಿಸಿದ್ದಿರಬಹುದು. (ಆದಿಕಾಂಡ 3:15) ಆದರೂ, ಹೇಬೆಲನ ನಂಬಿಕೆಯ ಅಭಿವ್ಯಕ್ತಿಯೇ ಅವನು “ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು” ಅರ್ಪಿಸುವಂತೆ ಮಾಡಿತೆಂಬುದು ಸತ್ಯವಾಗಿದೆ.
ತದ್ರೀತಿಯಲ್ಲಿ, ಕಾಯಿನನು ತಪ್ಪಾದ ರೀತಿಯ ಯಜ್ಞವನ್ನು ಅರ್ಪಿಸಿದ್ದಕ್ಕಾಗಿ ಅಲ್ಲ, ಬದಲಾಗಿ ಅವನ ಕ್ರಿಯೆಗಳಿಂದ ಸೂಚಿಸಲ್ಪಟ್ಟಂತೆ, ಅವನಲ್ಲಿ ನಂಬಿಕೆಯ ಕೊರತೆಯಿದ್ದ ಕಾರಣಕ್ಕಾಗಿ ಅವನನ್ನು ತಳ್ಳಿಹಾಕಲಾಯಿತು. ಯೆಹೋವನು ಸ್ಪಷ್ಟವಾಗಿಯೇ ಕಾಯಿನನಿಗೆ ಹೀಗೆ ಹೇಳಿದನು: “ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ”? (ಆದಿಕಾಂಡ 4:7) ಕಾಯಿನನ ಕಾಣಿಕೆಯ ವಿಷಯದಲ್ಲಿ ಅಸಮ್ಮತಿ ಇದ್ದದ್ದರ ಕಾರಣ ದೇವರು ಅವನ ಕಾಣಿಕೆಯನ್ನು ನಿರಾಕರಿಸಲಿಲ್ಲ. ಬದಲಾಗಿ, ‘ಅವನ ಕೃತ್ಯಗಳು ಕೆಟ್ಟವುಗಳಾಗಿದ್ದರಿಂದಲೇ,’ ಅಂದರೆ ಈರ್ಷ್ಯೆ, ದ್ವೇಷ, ಮತ್ತು ಅಂತಿಮವಾಗಿ ಕೊಲೆಯಿಂದ ಗುರುತಿಸಲ್ಪಟ್ಟದ್ದರಿಂದಲೇ ಕಾಯಿನನು ದೇವರಿಂದ ನಿರಾಕರಿಸಲ್ಪಟ್ಟನು.—1 ಯೋಹಾನ 3:12.