ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶ್ರದ್ಧಾಪೂರ್ವಕ ಪ್ರಯತ್ನ ಅದನ್ನು ಯೆಹೋವನು ಯಾವಾಗ ಆಶೀರ್ವದಿಸುತ್ತಾನೆ?

ಶ್ರದ್ಧಾಪೂರ್ವಕ ಪ್ರಯತ್ನ ಅದನ್ನು ಯೆಹೋವನು ಯಾವಾಗ ಆಶೀರ್ವದಿಸುತ್ತಾನೆ?

ಶ್ರದ್ಧಾಪೂರ್ವಕ ಪ್ರಯತ್ನ ಅದನ್ನು ಯೆಹೋವನು ಯಾವಾಗ ಆಶೀರ್ವದಿಸುತ್ತಾನೆ?

“ನನ್ನನ್ನು ಬಿಡು, ಬೆಳಗಾಗುತ್ತದೆ.”

“ನೀನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವದಿಲ್ಲ.”

“ನಿನ್ನ ಹೆಸರೇನು”?

“ಯಾಕೋಬ.”

“ಇನ್ನು ಮೇಲೆ ನೀನು ಯಾಕೋಬನೆನ್ನಿಸಿಕೊಳ್ಳುವದಿಲ್ಲ; ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದ್ದರಿಂದ ನಿನಗೆ ಇಸ್ರಾಯೇಲೆಂದು ಹೆಸರುಂಟಾಗುವದು.”​—ಆದಿಕಾಂಡ 32:​26-28.

ಆಸಕ್ತಿಕರವಾದ ಈ ಸಂಭಾಷಣೆಯು, 97 ವರ್ಷ ಪ್ರಾಯದವನಾಗಿದ್ದ ಯಾಕೋಬನ ಕಸರತ್ತಿನ ಚಟುವಟಿಕೆಯ ಒಂದು ಗಮನಾರ್ಹ ಪ್ರದರ್ಶನದ ಫಲಿತಾಂಶವಾಗಿತ್ತು. ಬೈಬಲು ಅವನನ್ನು ಒಬ್ಬ ಕಸರತ್ತುಗಾರನನ್ನಾಗಿ ವರ್ಣಿಸದಿರುವುದಾದರೂ, ಅವನು ಒಬ್ಬ ದೇವದೂತನೊಂದಿಗೆ ರಾತ್ರಿಯೆಲ್ಲ ಮಲ್ಲಯುದ್ಧಮಾಡಿದನು ಅಥವಾ ಕೈಕೈ ಮಿಲಾಯಿಸಿ ಹೋರಾಡಿದನು. ಏಕೆ? ತನ್ನ ಪೂರ್ವಜನಿಗೆ ಯೆಹೋವನು ಮಾಡಿದ್ದ ವಾಗ್ದಾನದ ವಿಷಯದಲ್ಲಿ ಯಾಕೋಬನಿಗೆ ಗಾಢಾಸಕ್ತಿಯಿತ್ತು. ಈ ವಾಗ್ದಾನವು ಅವನ ಆತ್ಮಿಕ ಪರಂಪರೆಯಾಗಿತ್ತು.

ಅನೇಕ ವರ್ಷಗಳ ಮುಂಚೆ ಯಾಕೋಬನ ಅಣ್ಣನಾದ ಏಸಾವನು, ಒಂದು ಬಟ್ಟಲು ಅಲಸಂದಿಗುಗ್ಗರಿಗೆ ಬದಲಾಗಿ ತನ್ನ ಚೊಚ್ಚಲತನದ ಹಕ್ಕನ್ನು ತಮ್ಮನಿಗೆ ಮಾರಿಬಿಟ್ಟಿದ್ದನು. ಈಗ ಏಸಾವನು 400 ಜನರ ಸಮೇತ ತನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಿದ್ದಾನೆಂಬ ಸುದ್ದಿಯು ಯಾಕೋಬನಿಗೆ ಮುಟ್ಟುತ್ತದೆ. ಚಿಂತಾಕ್ರಾಂತನಾದ ಯಾಕೋಬನು, ಯೊರ್ದನ್‌ ನದಿಯ ಈಚೆಗಿರುವ ಪ್ರದೇಶದಲ್ಲಿ ತನ್ನ ಕುಟುಂಬವು ಏಳಿಗೆಹೊಂದುವುದೆಂಬ ಯೆಹೋವನ ವಾಗ್ದಾನದ ದೃಢೀಕರಣವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಯಾಕೋಬನು ನಿರ್ಣಾಯಕ ಕ್ರಿಯೆಯನ್ನು ಕೈಗೊಳ್ಳುತ್ತಾನೆ. ಅವನು ತನ್ನನ್ನು ಎದುರುಗೊಳ್ಳಲು ಬರುತ್ತಿರುವ ಏಸಾವನಿಗೆ ಉದಾರವಾದ ಕಾಣಿಕೆಗಳನ್ನು ಕಳುಹಿಸುತ್ತಾನೆ. ಅದೇ ಸಮಯದಲ್ಲಿ ಅವನು ತನ್ನ ಹಿಂಡನ್ನು ಎರಡಾಗಿ ವಿಭಾಗಿಸಿ, ತನ್ನ ಪತ್ನಿಯರು ಹಾಗೂ ಮಕ್ಕಳನ್ನು ಯಬ್ಬೋಕ್‌ ಹೊಳೆಯಿಂದಾಚೆಗೆ ರವಾನಿಸುವ ಮೂಲಕ ರಕ್ಷಣಾತ್ಮಕ ಕ್ರಮಗಳನ್ನೂ ತೆಗೆದುಕೊಳ್ಳುತ್ತಾನೆ. ತದನಂತರ ಸತತ ಪ್ರಯತ್ನ ಹಾಗೂ ಕಣ್ಣೀರು ಸುರಿಸುತ್ತಾ ಅವನು, ‘ತನಗಾಗಿ ಕೃಪೆಯನ್ನು ಬೇಡಿಕೊಳ್ಳಸಾಧ್ಯವಾಗುವಂತೆ’ ಒಬ್ಬ ದೇವದೂತನೊಂದಿಗೆ ಇಡೀ ರಾತ್ರಿ ಕೈಕೈ ಮಿಲಾಯಿಸಿ ಹೋರಾಡುವ ಮೂಲಕ ಇನ್ನಷ್ಟು ಶ್ರಮಿಸುತ್ತಾನೆ.​—ಹೋಶೇಯ 12:4; ಆದಿಕಾಂಡ 32:​1-32.

ಇದಕ್ಕಿಂತಲೂ ಹಿಂದಿನ ಒಂದು ಉದಾಹರಣೆಯನ್ನು ಪರಿಗಣಿಸಿರಿ. ಇದು, ಯಾಕೋಬನು ತುಂಬ ಪ್ರೀತಿಸುತ್ತಿದ್ದ ಅವನ ಎರಡನೆಯ ಹೆಂಡತಿಯಾದ ರಾಹೇಲಳದ್ದಾಗಿದೆ. ಯಾಕೋಬನನ್ನು ಆಶೀರ್ವದಿಸುವುದರ ಕುರಿತಾದ ಯೆಹೋವನ ವಾಗ್ದಾನದ ಕುರಿತು ರಾಹೇಲಳಿಗೆ ಚೆನ್ನಾಗಿ ತಿಳಿದಿತ್ತು. ಯಾಕೋಬನ ಮೊದಲನೆಯ ಹೆಂಡತಿಯೂ ಅವಳ ಅಕ್ಕನೂ ಆಗಿದ್ದ ಲೇಯಳು ನಾಲ್ಕು ಮಂದಿ ಗಂಡುಮಕ್ಕಳಿಂದ ಆಶೀರ್ವದಿಸಲ್ಪಟ್ಟರೂ, ರಾಹೇಲಳಾದರೊ ಬಂಜೆಯಾಗಿಯೇ ಉಳಿದಿದ್ದಳು. (ಆದಿಕಾಂಡ 29:​31-35) ತನ್ನ ಸ್ಥಿತಿಗಾಗಿ ಕೊರಗಿ ಕೊರಗಿ ಸೋತುಹೋಗುವ ಬದಲು, ಅವಳು ಪ್ರಾರ್ಥನೆಯಲ್ಲಿ ಯೆಹೋವನಿಗೆ ಬೇಡಿಕೊಳ್ಳುತ್ತಾ ಇದ್ದಳು ಮತ್ತು ತನ್ನ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ನಿರ್ಣಾಯಕ ಕ್ರಿಯೆಯನ್ನೂ ಕೈಗೊಂಡಳು. ಅವಳ ಪೂರ್ವಜಳಾಗಿದ್ದ ಸಾರಳು ಹಾಗರಳೊಂದಿಗೆ ಮಾಡಿದಂತೆಯೇ ರಾಹೇಲಳು ತನ್ನ ದಾಸಿಯಾದ ಬಿಲ್ಹಳನ್ನು ಕರೆಸಿ, ಅವಳನ್ನು ಯಾಕೋಬನಿಗೆ ಉಪಪತ್ನಿಯಾಗುವುದಕ್ಕೆ ಒಪ್ಪಿಸಿದಳು. ಏಕೆಂದರೆ, ರಾಹೇಲಳೇ ಹೇಳುವಂತೆ, “ಹಾಗೆ ನನಗೂ ಸಂತಾನವಾಗುವದು.” * ಬಿಲ್ಹಳು ಯಾಕೋಬನಿಗೆ ದಾನ್‌ ಮತ್ತು ನಫ್ತಾಲಿ ಎಂಬ ಎರಡು ಗಂಡುಮಕ್ಕಳನ್ನು ಹೆತ್ತಳು. ನಫ್ತಾಲಿಯ ಜನನದ ಸಮಯದಲ್ಲಿ ರಾಹೇಲಳು ತನ್ನ ಭಾವನಾತ್ಮಕ ಪ್ರಯತ್ನದ ವ್ಯಾಪ್ತಿಯನ್ನು ಹೀಗೆ ವಿವರಿಸುತ್ತಾಳೆ: “ನನ್ನ ಅಕ್ಕನ ಸಂಗಡ ಬಲವಾಗಿ ಹೋರಾಡಿ ಗೆದ್ದಿದ್ದೇನೆ”! ತದನಂತರ ಸ್ವತಃ ರಾಹೇಲಳು ಯೋಸೇಫ ಮತ್ತು ಬೆನ್ಯಾಮೀನ್‌ ಎಂಬ ಅವಳ ಸ್ವಂತ ಗಂಡುಮಕ್ಕಳಿಂದ ಆಶೀರ್ವದಿಸಲ್ಪಟ್ಟಳು.​—ಆದಿಕಾಂಡ 30:​1-8; 35:24.

ಯೆಹೋವನು ಯಾಕೋಬನ ಹಾಗೂ ರಾಹೇಲಳ ಶಾರೀರಿಕ ಹಾಗೂ ಭಾವನಾತ್ಮಕ ಪ್ರಯತ್ನಗಳನ್ನು ಏಕೆ ಆಶೀರ್ವದಿಸಿದನು? ಏಕೆಂದರೆ ಅವರು ಯೆಹೋವನ ಚಿತ್ತವನ್ನು ಕೇಂದ್ರಬಿಂದುವಾಗಿಟ್ಟುಕೊಂಡರು ಮತ್ತು ತಮ್ಮ ಆತ್ಮಿಕ ಪರಂಪರೆಗೆ ಮಾನ್ಯತೆ ನೀಡಿದರು. ತಮ್ಮ ಜೀವಿತಗಳಲ್ಲಿ ಆತನ ಆಶೀರ್ವಾದಕ್ಕಾಗಿ ಅವರು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದರು ಮತ್ತು ದೇವರ ಚಿತ್ತಕ್ಕೆ ಹಾಗೂ ತಮ್ಮ ಸ್ವಂತ ಬಿನ್ನಹಗಳಿಗೆ ಹೊಂದಿಕೆಯಲ್ಲಿ ಅಗತ್ಯವಿರುವ ಕ್ರಮವನ್ನು ಕೈಗೊಂಡರು.

ಯಾಕೋಬ ಹಾಗೂ ರಾಹೇಲರಂತೆ, ಯೆಹೋವನ ಆಶೀರ್ವಾದವನ್ನು ಪಡೆದುಕೊಳ್ಳಲು ಶ್ರದ್ಧಾಪೂರ್ವಕ ಪ್ರಯತ್ನದ ಅಗತ್ಯವಿದೆ ಎಂಬುದಕ್ಕೆ ಇಂದು ಅನೇಕರು ಪುರಾವೆಯನ್ನು ನೀಡಬಲ್ಲರು. ಅವರ ಪ್ರಯತ್ನಗಳು ಅನೇಕವೇಳೆ ಕಣ್ಣೀರು, ನಿರುತ್ಸಾಹ ಹಾಗೂ ಹತಾಶೆಯಿಂದ ಕೂಡಿರುತ್ತವೆ. ಎಲಿಸಬೆತ್‌ ಎಂಬ ಒಬ್ಬ ಕ್ರೈಸ್ತ ತಾಯಿಯು, ದೀರ್ಘವಾದ ಅನುಪಸ್ಥಿತಿಯ ಬಳಿಕ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದನ್ನು ಆರಂಭಿಸಲು ಮಾಡಬೇಕಾಗಿದ್ದ ಶ್ರದ್ಧಾಪೂರ್ವಕ ಪ್ರಯತ್ನದ ಕುರಿತು ಮರುಜ್ಞಾಪಿಸಿಕೊಳ್ಳುತ್ತಾಳೆ. ಐವರು ಚಿಕ್ಕ ಗಂಡುಮಕ್ಕಳು, ಅವಿಶ್ವಾಸಿ ಪತಿ, ಹಾಗೂ ಅತಿ ಹತ್ತಿರದ ರಾಜ್ಯ ಸಭಾಗೃಹಕ್ಕೆ ಹೋಗಲಿಕ್ಕಾಗಿ 30 ಕಿಲೊಮೀಟರುಗಳ ಪ್ರಯಾಣವು ನಿಜವಾಗಿಯೂ ಪಂಥಾಹ್ವಾನದಾಯಕವಾಗಿತ್ತು. “ಕ್ರಮವಾಗಿ ಕೂಟಗಳಿಗೆ ಹಾಜರಾಗಲು ಪ್ರಯತ್ನಿಸುವುದು ಅತ್ಯಧಿಕ ಸ್ವಶಿಸ್ತನ್ನು ಅಗತ್ಯಪಡಿಸಿತು; ಆದರೆ ಇದು ನನಗೂ ನನ್ನ ಗಂಡುಮಕ್ಕಳಿಗೂ ಪ್ರಯೋಜನದಾಯಕವಾಗಿದೆ ಎಂದು ನನಗೆ ಗೊತ್ತಿತ್ತು. ಇದು, ಈ ಜೀವನಮಾರ್ಗವು ಬೆನ್ನಟ್ಟಲು ಯೋಗ್ಯವಾದ ಮಾರ್ಗವಾಗಿತ್ತು ಎಂಬುದನ್ನು ಮನಗಾಣಲು ಅವರಿಗೆ ಸಹಾಯಮಾಡಿತು.” ಯೆಹೋವನು ಅವಳ ಪ್ರಯತ್ನಗಳನ್ನು ಆಶೀರ್ವದಿಸಿದನು. ಕ್ರೈಸ್ತ ಸಭೆಯಲ್ಲಿ ಕ್ರಿಯಾಶೀಲರಾಗಿರುವ ಅವಳ ಮೂರು ಮಂದಿ ಗಂಡುಮಕ್ಕಳಲ್ಲಿ ಇಬ್ಬರು ಪೂರ್ಣ ಸಮಯದ ಶುಶ್ರೂಷೆಯಲ್ಲಿದ್ದಾರೆ. ಅವರ ಆತ್ಮಿಕ ಮುನ್ನಡೆಯಲ್ಲಿ ಆನಂದಿಸುತ್ತಾ ಅವಳು ಹೇಳುವುದು: “ಆತ್ಮಿಕ ಬೆಳವಣಿಗೆಯಲ್ಲಿ ಅವರು ನನ್ನನ್ನೂ ಮೀರಿಸಿದ್ದಾರೆ.” ಅವಳ ಶ್ರದ್ಧಾಪೂರ್ವಕ ಪ್ರಯತ್ನಕ್ಕೆ ಎಂಥ ಉತ್ತಮ ಪ್ರತಿಫಲ!

ಯೆಹೋವನು ಆಶೀರ್ವದಿಸುವಂಥ ಶ್ರದ್ಧಾಪೂರ್ವಕ ಪ್ರಯತ್ನ

ಶ್ರದ್ಧಾಪೂರ್ವಕ ಪ್ರಯತ್ನಕ್ಕೆ ಮತ್ತು ಕಠಿನ ಪರಿಶ್ರಮಕ್ಕೆ ಖಂಡಿತವಾಗಿಯೂ ಪ್ರತಿಫಲವು ಸಿಗುತ್ತದೆ. ಒಂದು ಕೆಲಸದಲ್ಲಿ ಅಥವಾ ನೇಮಕದಲ್ಲಿ ನಾವು ಎಷ್ಟು ಹೆಚ್ಚು ಪ್ರಯತ್ನವನ್ನು ಮಾಡುತ್ತೇವೋ ಪ್ರತಿಯಾಗಿ ಅಷ್ಟೇ ಹೆಚ್ಚು ಸಂತೃಪ್ತಿಯನ್ನು ನಾವು ಪಡೆದುಕೊಳ್ಳುತ್ತೇವೆ. ಯೆಹೋವನು ನಮ್ಮನ್ನು ಇದೇ ರೀತಿ ರಚಿಸಿದ್ದಾನೆ. “ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ” ಎಂದು ಅರಸನಾದ ಸೊಲೊಮೋನನು ಬರೆದನು. (ಪ್ರಸಂಗಿ 3:13; 5:​18, 19) ಆದರೂ, ದೇವರಿಂದ ಒಂದು ಆಶೀರ್ವಾದವನ್ನು ಪಡೆದುಕೊಳ್ಳಬೇಕಾದರೆ, ನಮ್ಮ ಪ್ರಯತ್ನಗಳು ಯೋಗ್ಯವಾಗಿ ಮಾರ್ಗದರ್ಶಿಸಲ್ಪಟ್ಟಿವೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಉದಾಹರಣೆಗೆ, ಆತ್ಮಿಕ ವಿಷಯಗಳನ್ನು ಎರಡನೆಯ ಸ್ಥಾನಕ್ಕೆ ತಳ್ಳುವಂಥ ಒಂದು ಜೀವನ ಶೈಲಿಯ ಮೇಲೆ ಯೆಹೋವನ ಆಶೀರ್ವಾದವನ್ನು ನಿರೀಕ್ಷಿಸುವುದು ಸಮಂಜಸವಾಗಿದೆಯೋ? ಒಬ್ಬ ಸಮರ್ಪಿತ ಕ್ರೈಸ್ತನು, ಕ್ರೈಸ್ತ ಕೂಟಗಳಲ್ಲಿನ ನಂಬಿಕೆಯನ್ನು ಕಟ್ಟುವಂಥ ಸಹವಾಸ ಹಾಗೂ ಉಪದೇಶವನ್ನು ಕ್ರಮವಾಗಿ ತಪ್ಪಿಸಿಕೊಳ್ಳುವಂತೆ ಮಾಡುವ ಉದ್ಯೋಗವನ್ನು ಅಥವಾ ಬಡತಿಗಳನ್ನು ಅಂಗೀಕರಿಸುವಲ್ಲಿ, ಅವನು ಯೆಹೋವನ ಸಮ್ಮತಿಯನ್ನು ನಿರೀಕ್ಷಿಸಸಾಧ್ಯವಿದೆಯೋ?​—ಇಬ್ರಿಯ 10:​23-25.

ಆತ್ಮಿಕ ವಿಷಯಗಳನ್ನು ಬದಿಗಿಟ್ಟು, ಐಹಿಕ ಜೀವನೋಪಾಯ ಅಥವಾ ಪ್ರಾಪಂಚಿಕ ಸಮೃದ್ಧಿಯನ್ನು ಬೆನ್ನಟ್ಟಲಿಕ್ಕಾಗಿ ಒಬ್ಬನು ಜೀವಮಾನದುದ್ದಕ್ಕೂ ಮಾಡುವ ಪ್ರಯಾಸವು, ಅವನು ‘ಸುಖವನ್ನು ಅನುಭವಿಸುವಂತೆ’ ಮಾಡುತ್ತದೆಂದು ಅರ್ಥೈಸುವುದಿಲ್ಲ. ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟ ಪ್ರಯತ್ನದ ಪರಿಣಾಮಗಳನ್ನು ಯೇಸು, ಬಿತ್ತುವವನ ಕುರಿತಾದ ತನ್ನ ಸಾಮ್ಯದಲ್ಲಿ ವರ್ಣಿಸಿದನು. ‘ಮುಳ್ಳು ಗಿಡಗಳಲ್ಲಿ ಬಿದ್ದ’ ಬೀಜದ ಕುರಿತು ಯೇಸು “ಒಬ್ಬನು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ ಐಶ್ವರ್ಯದಿಂದುಂಟಾಗುವ ಮೋಸವೂ ಆ ವಾಕ್ಯವನ್ನು ಅಡಗಿಸಿಬಿಡುವದರಿಂದ, ಫಲವನ್ನು ಕೊಡದೆ ಇರುತ್ತಾನೆ” ಎಂದು ವಿವರಿಸಿದನು. (ಮತ್ತಾಯ 13:22) ಪೌಲನು ಸಹ ಇದೇ ಪಾಶದ ಕುರಿತು ಎಚ್ಚರಿಕೆ ನೀಡಿದನು ಮತ್ತು ಯಾರು ಪ್ರಾಪಂಚಿಕ ರೀತಿಯ ಜೀವನ ಮಾರ್ಗವನ್ನು ಬೆನ್ನಟ್ಟುತ್ತಾರೋ ಅವರು “ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ” ಎಂದು ಹೇಳಿದನು. ಆತ್ಮಿಕವಾಗಿ ಹಾನಿಕರವಾಗಿರುವ ಇಂಥ ಜೀವನ ಮಾರ್ಗಕ್ಕಿರುವ ಪರಿಹಾರವೇನು? ಪೌಲನು ಮುಂದುವರಿಸಿದ್ದು: ‘ನೀವು ಇವುಗಳಿಗೆ ದೂರವಾಗಿರಿ ಮತ್ತು ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಿರಿ.’​—1 ತಿಮೊಥೆಯ 6:​9, 11, 17, 18.

ನಮ್ಮ ವಯಸ್ಸು ಎಷ್ಟೇ ಆಗಿರಲಿ ಅಥವಾ ನಾವು ಎಷ್ಟೇ ದೀರ್ಘ ಸಮಯದಿಂದ ಯೆಹೋವನ ಸೇವೆಮಾಡುತ್ತಿರಲಿ, ಯಾಕೋಬ ಹಾಗೂ ರಾಹೇಲರಿಂದ ಮಾಡಲ್ಪಟ್ಟ ಶ್ರದ್ಧಾಪೂರ್ವಕ ಪ್ರಯತ್ನವನ್ನು ಅನುಕರಿಸುವ ಮೂಲಕ ನಾವೆಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. ದೈವಿಕ ಅನುಗ್ರಹವನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ, ಅವರ ಪರಿಸ್ಥಿತಿಗಳು ಎಷ್ಟೇ ಭೀಕರ ಅಥವಾ ಆಶಾಭಂಗದಾಯಕವಾಗಿದ್ದರೂ, ಅವರು ತಮ್ಮ ಪರಂಪರೆಯನ್ನು ಎಂದೂ ಮರೆಯಲಿಲ್ಲ. ಇಂದು ನಾವು ಎದುರಿಸುವ ಒತ್ತಡಗಳು ಮತ್ತು ತೊಂದರೆಗಳು ತದ್ರೀತಿಯಲ್ಲಿ ಭೀಕರವೂ ಆಶಾಭಂಗದಾಯಕವೂ ಖಿನ್ನತೆಯನ್ನು ಉಂಟುಮಾಡುವಂಥವುಗಳೂ ಆಗಿರಬಹುದು. ಹೋರಾಡುವುದನ್ನು ನಿಲ್ಲಿಸಿ, ಸೈತಾನನ ಆಕ್ರಮಣಕ್ಕೆ ಇನ್ನೊಂದು ಬಲಿಪಶುವಾಗಿ ಪರಿಣಮಿಸುವಂಥ ಶೋಧನೆಯು ಬರಬಹುದು. ಸೈತಾನನು ತನ್ನ ಉದ್ದೇಶಗಳನ್ನು ಸಾಧಿಸಲಿಕ್ಕಾಗಿ, ತನ್ನ ಬಳಿಯಿರುವ ಯಾವುದೇ ಸಾಧನೋಪಾಯವನ್ನು, ಅಂದರೆ ವಿನೋದ ಅಥವಾ ಮನೋರಂಜನೆಯನ್ನು ಸಹ ಉಪಯೋಗಿಸಬಹುದು. ಅನೇಕವೇಳೆ ಅಪೇಕ್ಷಿತ ಫಲಿತಾಂಶಗಳ ಆಶ್ವಾಸನೆ ನೀಡಲ್ಪಡುತ್ತದಾದರೂ, ಅವುಗಳು ಫಲಿಸುವುದು ತೀರ ಅಪರೂಪ. ಇಂಥ ಬೆನ್ನಟ್ಟುವಿಕೆಗಳಲ್ಲಿ ಒಳಗೂಡುವಂತೆ ವಂಚಿಸಲ್ಪಟ್ಟಿರುವವರು ಅಥವಾ ಅದರಲ್ಲಿ ಮೋಸದಿಂದ ಸಿಕ್ಕಿಹಾಕಿಕೊಂಡಿರುವವರು, ಅನೇಕವೇಳೆ ಅತ್ಯಧಿಕ ನಿರಾಶೆಯಲ್ಲಿ ಮುಳುಗಿರುವುದಾಗಿ ಕಂಡುಕೊಳ್ಳುತ್ತಾರೆ. ಪುರಾತನಕಾಲದ ಯಾಕೋಬ ಮತ್ತು ರಾಹೇಲರಂತೆ, ನಾವು ಸಹ ಶ್ರದ್ಧಾಪೂರ್ವಕ ಹೋರಾಟಗಾರನ ಮನೋಭಾವವನ್ನು ಬೆಳೆಸಿಕೊಳ್ಳೋಣ ಮತ್ತು ಸೈತಾನನ ತಂತ್ರೋಪಾಯಗಳನ್ನು ಜಯಿಸೋಣ.

‘ಪರಿಸ್ಥಿತಿಯು ಕೈಮೀರಿ ಹೋಗಿದೆ. ಈಗ ಏನನ್ನೂ ಮಾಡಸಾಧ್ಯವಿಲ್ಲ. ಇನ್ನು ಯಾವುದೇ ಪ್ರಯತ್ನವನ್ನು ಮಾಡುವುದರಲ್ಲಿ ಪ್ರಯೋಜನವಿಲ್ಲ’ ಎಂದು ಭಾವಿಸುತ್ತಾ, ನಾವು ಪೂರ್ಣ ರೀತಿಯಲ್ಲಿ ಸೋತುಹೋಗುವುದನ್ನು ನೋಡುವುದೇ ಪಿಶಾಚನ ಕಟ್ಟಾಸೆಯಾಗಿದೆ. ಹಾಗಾದರೆ, ‘ನನ್ನನ್ನು ಯಾರೂ ಪ್ರೀತಿಸುವುದಿಲ್ಲ’ ಮತ್ತು ‘ಯೆಹೋವನು ನನ್ನನ್ನು ಮರೆತುಬಿಟ್ಟಿದ್ದಾನೆ’ ಎಂದು ಆಲೋಚಿಸುತ್ತಾ, ನಾವೆಲ್ಲರೂ ವಿಧಿಲಿಖಿತ ಮನೋಭಾವವನ್ನು ಬೆಳೆಸಿಕೊಳ್ಳುವುದರ ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳುವುದು ಎಷ್ಟು ಅತ್ಯಾವಶ್ಯಕವಾಗಿದೆ! ಇಂತಹ ಆಲೋಚನೆಗಳಿಗೆ ಬಲಿಬೀಳುವುದು ಆತ್ಮಘಾತುಕವಾಗಿದೆ. ನಾವು ಪ್ರಯತ್ನವನ್ನು ಬಿಟ್ಟುಬಿಟ್ಟಿದ್ದೇವೆ ಮತ್ತು ನಾವು ಒಂದು ಆಶೀರ್ವಾದವನ್ನು ಪಡೆದುಕೊಳ್ಳುವ ತನಕ ಇನ್ನೆಂದಿಗೂ ಹೋರಾಡುವುದಿಲ್ಲ ಎಂಬುದನ್ನು ಅದು ಸೂಚಿಸಸಾಧ್ಯವಿದೆಯೋ? ಯೆಹೋವನು ನಮ್ಮ ಶ್ರದ್ಧಾಪೂರ್ವಕ ಪ್ರಯತ್ನವನ್ನು ಆಶೀರ್ವದಿಸುತ್ತಾನೆ ಎಂಬುದನ್ನು ಮರೆಯದಿರಿ.

ಯೆಹೋವನ ಆಶೀರ್ವಾದಕ್ಕಾಗಿ ಹೋರಾಡುತ್ತಾ ಇರಿ

ನಮ್ಮ ಆತ್ಮಿಕ ಹಿತಕ್ಷೇಮವು, ಯೆಹೋವನ ಒಬ್ಬ ಸೇವಕನೋಪಾದಿ ನಮ್ಮ ಜೀವಿತದ ಕುರಿತಾದ ಎರಡು ಮೂಲಭೂತ ಸತ್ಯಗಳನ್ನು ನಾವು ಅರ್ಥಮಾಡಿಕೊಳ್ಳುವುದರ ಮೇಲೆ ಬಹುಮಟ್ಟಿಗೆ ಹೊಂದಿಕೊಂಡಿದೆ. (1) ಸಮಸ್ಯೆಗಳು, ರೋಗರುಜಿನಗಳು ಅಥವಾ ಜೀವನದಲ್ಲಿನ ಕಷ್ಟಕರ ಸನ್ನಿವೇಶಗಳು ಕೇವಲ ಒಬ್ಬನ ಮೇಲೆ ಮಾತ್ರ ಬರುವುದಿಲ್ಲ, ಎಲ್ಲರ ಮೇಲೂ ಬರುತ್ತವೆ, ಮತ್ತು (2) ಸಹಾಯಕ್ಕಾಗಿ ಹಾಗೂ ಆಶೀರ್ವಾದಕ್ಕಾಗಿ ಯಾರು ತನ್ನ ಬಳಿ ಶ್ರದ್ಧಾಪೂರ್ವಕವಾಗಿ ಮೊರೆಯಿಡುತ್ತಾರೋ ಅವರಿಗೆ ಯೆಹೋವನು ಕಿವಿಗೊಡುತ್ತಾನೆ.​—ವಿಮೋಚನಕಾಂಡ 3:​7-10; ಯಾಕೋಬ 4:​8, 10; 1 ಪೇತ್ರ 5:​8, 9.

ನಿಮ್ಮ ಸನ್ನಿವೇಶಗಳು ಎಷ್ಟೇ ಕಷ್ಟಕರವಾಗಿರಲಿ ಅಥವಾ ನಿಮಗೆ ಎಷ್ಟೇ ಇತಿಮಿತಿಯಿರುವ ಅನಿಸಿಕೆಯಾಗಲಿ, ‘ನಮಗೆ ಅಭ್ಯಂತರ ಮಾಡುವ ಪಾಪಕ್ಕೆ’ ನಾವು ಮಣಿಯದಿರೋಣ. (ಇಬ್ರಿಯ 12:1) ಒಂದು ಆಶೀರ್ವಾದವನ್ನು ಪಡೆದುಕೊಳ್ಳುವ ತನಕ ನೀವು ಹೋರಾಟವನ್ನು ಮುಂದುವರಿಸಿರಿ. ಒಂದು ಆಶೀರ್ವಾದಕ್ಕಾಗಿ ಇಡೀ ರಾತ್ರಿ ಕೈಕೈ ಮಿಲಾಯಿಸಿ ಹೋರಾಡಿದ ವೃದ್ಧ ಯಾಕೋಬನನ್ನು ಜ್ಞಾಪಿಸಿಕೊಳ್ಳುತ್ತಾ, ತಾಳ್ಮೆಯನ್ನು ಅಭ್ಯಾಸಿಸಿರಿ. ವಸಂತಕಾಲದಲ್ಲಿ ಬೀಜವನ್ನು ಬಿತ್ತಿ, ಕೊಯ್ಲಿಗಾಗಿ ಕಾಯುವಂಥ ವ್ಯವಸಾಯಗಾರನಂತೆ, ನಿಮ್ಮ ಆತ್ಮಿಕ ಚಟುವಟಿಕೆಯು ತೀರ ಕಡಿಮೆಯಾಗಿದೆ ಎಂದು ನಿಮಗೆ ಅನೇಕಸಲ ಅನಿಸುವುದಾದರೂ, ನಿಮ್ಮ ಚಟುವಟಿಕೆಯ ಮೇಲೆ ಯೆಹೋವನ ಆಶೀರ್ವಾದಕ್ಕಾಗಿ ತಾಳ್ಮೆಯಿಂದ ಎದುರುನೋಡುತ್ತಾ ಇರಿ. (ಯಾಕೋಬ 5:​7, 8) ಮತ್ತು ಯಾವಾಗಲೂ ಕೀರ್ತನೆಗಾರನ ಈ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಿ: “ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು.” (ಕೀರ್ತನೆ 126:5; ಗಲಾತ್ಯ 6:9) ದೃಢರಾಗಿ ನಿಲ್ಲಿರಿ, ಮತ್ತು ಹೋರಾಟಗಾರರ ನಡುವೆಯೇ ಉಳಿಯಿರಿ.

[ಪಾದಟಿಪ್ಪಣಿ]

^ ಪ್ಯಾರ. 9 ಧರ್ಮಶಾಸ್ತ್ರದೊಡಂಬಡಿಕೆಗಿಂತ ಮುಂಚೆ ಉಪಪತ್ನಿತ್ವವು ಅಸ್ತಿತ್ವದಲ್ಲಿತ್ತು ಮತ್ತು ಧರ್ಮಶಾಸ್ತ್ರದಿಂದ ಅಂಗೀಕರಿಸಲ್ಪಟ್ಟು, ವಿಧಿಬದ್ಧಗೊಳಿಸಲ್ಪಟ್ಟಿತ್ತು. ಏದೆನ್‌ ತೋಟದಲ್ಲಿ ತಾನು ಸ್ಥಾಪಿಸಿದ್ದಂಥ ಏಕಪತ್ನಿತ್ವದ ಮೂಲ ಮಟ್ಟವನ್ನು ಯೇಸು ಕ್ರಿಸ್ತನ ಬರೋಣದ ತನಕ ಪುನಸ್ಸ್ಥಾಪಿಸುವುದು ಸೂಕ್ತವಾಗಿದೆ ಎಂದು ದೇವರು ಪರಿಗಣಿಸಲಿಲ್ಲ, ಆದರೆ ಆತನು ಉಪಪತ್ನಿಯನ್ನು ಶಾಸನದ ಮೂಲಕ ಸಂರಕ್ಷಿಸಿದನು. ಉಪಪತ್ನಿತ್ವವು, ಇಸ್ರಾಯೇಲ್‌ ಜನಸಂಖ್ಯೆಯಲ್ಲಿ ತೀವ್ರಗತಿಯ ಹೆಚ್ಚಳವನ್ನು ಉಂಟುಮಾಡುವುದರಲ್ಲಿ ಸಹಾಯಮಾಡಿತು.