ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಓದಲು ಕಲಿತುಕೊಂಡ ಕಾರಣ ಸಂತೋಷಗೊಂಡಿದ್ದಾರೆ!

ಅವರು ಓದಲು ಕಲಿತುಕೊಂಡ ಕಾರಣ ಸಂತೋಷಗೊಂಡಿದ್ದಾರೆ!

ಅವರು ಓದಲು ಕಲಿತುಕೊಂಡ ಕಾರಣ ಸಂತೋಷಗೊಂಡಿದ್ದಾರೆ!

ಸಾಲೊಮನ್‌ ಐಲೆಂಡ್ಸ್‌ನ ಕೆಲವು ಭಾಗಗಳಲ್ಲಿ, ಈಗ ಯೆಹೋವನ ಸಾಕ್ಷಿಗಳಾಗಿರುವವರಲ್ಲಿ ಸುಮಾರು 80 ಪ್ರತಿಶತದಷ್ಟು ಮಂದಿ ಅನಕ್ಷರತೆಯೊಂದಿಗೆ ಹೋರಾಡಬೇಕಾಗಿತ್ತು. ಇದು ಸಾಪ್ತಾಹಿಕ ಕೂಟಗಳಲ್ಲಿನ ಅವರ ಭಾಗವಹಿಸುವಿಕೆಯನ್ನು ಸೀಮಿತಗೊಳಿಸಿರುವುದರ ಜೊತೆಗೆ, ರಾಜ್ಯದ ಸತ್ಯಗಳನ್ನು ಇತರರಿಗೆ ಬೋಧಿಸುವುದನ್ನು ಅವರಿಗೆ ಹೆಚ್ಚು ಕಷ್ಟಕರವಾದದ್ದಾಗಿ ಮಾಡಿತು. ಆದರೆ ತಮ್ಮ ಜೀವಿತದಲ್ಲಿ ಹಿಂದೆಂದೂ ಒಂದು ಪೆನ್ಸಿಲನ್ನು ಕೈಗೆತ್ತಿಕೊಂಡಿರದಿದ್ದ ವಯಸ್ಕರು ಈಗ ನಿಜವಾಗಿಯೂ ಓದುವುದನ್ನು ಕಲಿಯಸಾಧ್ಯವಿದೆಯೋ?

ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ವಾಚನಕ್ಕೂ ಬರವಣಿಗೆಗೂ ಶ್ರದ್ಧಾಪೂರ್ವಕವಾದ ಗಮನವನ್ನು ಕೊಡಿರಿ (ಇಂಗ್ಲಿಷ್‌) ಎಂಬ ಬ್ರೋಷರ್‌, ಇಡೀ ಸಾಲೊಮನ್‌ ಐಲೆಂಡ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಹೆಚ್ಚುಕಡಿಮೆ ಪ್ರತಿಯೊಂದು ಸಭೆಯಲ್ಲೂ ಸಾಕ್ಷರತಾ ತರಗತಿಗಳಲ್ಲಿ ಉಪಯೋಗಿಸಲ್ಪಟ್ಟಿದೆ. ಈ ಕಾರ್ಯಕ್ರಮದ ಮೂಲಕ ನೂರಾರು ಜನರು ಹೇಗೆ ತಮ್ಮ ಸಾಮರ್ಥ್ಯದ ಮಟ್ಟವನ್ನು ಉತ್ತಮಗೊಳಿಸಲು ಸಹಾಯಮಾಡಲ್ಪಟ್ಟಿದ್ದಾರೆ ಎಂಬುದನ್ನು ಮುಂದಿನ ಅನುಭವಗಳು ದೃಷ್ಟಾಂತಿಸುತ್ತವೆ. ಹೆಚ್ಚು ಪ್ರಾಮುಖ್ಯ ಸಂಗತಿಯೇನೆಂದರೆ, ಓದಲು ಕಲಿತುಕೊಳ್ಳುವುದು ಅವರು ತಮ್ಮ ನಂಬಿಕೆಯ ಕುರಿತು ಹೆಚ್ಚು ಉತ್ತಮವಾದ ಸಾಕ್ಷಿಯನ್ನು ಕೊಡುವಂತೆ ಅವರನ್ನು ಶಕ್ತರನ್ನಾಗಿ ಮಾಡಿದೆ.​—1 ಪೇತ್ರ 3:15.

ನೂರಕ್ಕಿಂತ ಹೆಚ್ಚು ಮಂದಿ ರಾಜ್ಯ ಪ್ರಚಾರಕರಿದ್ದ ಒಂದು ಸಭೆಗೆ ನೇಮಿಸಲ್ಪಟ್ಟ ಒಬ್ಬ ಮಿಷನೆರಿಯು, ಕಾವಲಿನಬುರುಜು ಪತ್ರಿಕೆಯನ್ನು ಉಪಯೋಗಿಸುತ್ತಾ ನಡೆಸಲ್ಪಡುವ ಸಾಪ್ತಾಹಿಕ ಬೈಬಲ್‌ ಅಧ್ಯಯನದಲ್ಲಿ, ಕೆಲವರ ಬಳಿ ಮಾತ್ರ ಈ ಪತ್ರಿಕೆಯ ಒಂದು ಸ್ವಂತ ಪ್ರತಿಯಿರುವುದನ್ನು ಮತ್ತು ಅದರಲ್ಲೂ ಕೊಂಚ ಮಂದಿ ಮಾತ್ರ ಹೇಳಿಕೆಗಳನ್ನು ನೀಡುವುದನ್ನೂ ಗಮನಿಸಿದಳು. ಇದಕ್ಕೆ ಕಾರಣವೇನು? ಅನಕ್ಷರತೆ. ಓದುಬರಹವನ್ನು ಕಲಿಸುವಂಥ ಒಂದು ಶಾಲೆಯ ಏರ್ಪಾಡಿನ ಕುರಿತು ಸಭೆಗೆ ಪ್ರಕಟನೆ ಮಾಡಲ್ಪಟ್ಟಾಗ, ಈ ಮಿಷನೆರಿಯು ಒಬ್ಬ ಶಿಕ್ಷಕಿಯಾಗಿರಲು ಸಂತೋಷದಿಂದ ಒಪ್ಪಿಕೊಂಡಳು. ಮೊದಲು, ಕೆಲವು ಮಂದಿ ವಿದ್ಯಾರ್ಥಿಗಳು ಮಾತ್ರ ಬಂದರು. ಆದರೆ ಶೀಘ್ರವೇ ಎಲ್ಲ ಪ್ರಾಯಗಳ 40 ಮಂದಿ ಜನರು ಹಾಜರಾಗಲಾರಂಭಿಸಿದರು.

ಫಲಿತಾಂಶಗಳೇನಾಗಿದ್ದವು? ಆ ಮಿಷನೆರಿಯು ವಿವರಿಸುವುದು: “ಸಾಕ್ಷರತಾ ತರಗತಿಯು ಪ್ರಾರಂಭವಾದ ಕೊಂಚ ಸಮಯದ ನಂತರ, ಮಿಷನೆರಿ ಗೃಹಕ್ಕಾಗಿ ಆಹಾರವನ್ನು ತರಲಿಕ್ಕಾಗಿ ನಾನು ಬೆಳಗ್ಗೆ ಆರು ಗಂಟೆಗೆ ಮಾರುಕಟ್ಟೆಗೆ ಹೋಗಿದ್ದೆ. ಅಲ್ಲಿ ನಾನು ಕೆಲವು ವಿದ್ಯಾರ್ಥಿಗಳು, ತೀರ ಚಿಕ್ಕವರೂ ಕೂಡ, ತೆಂಗಿನಕಾಯಿಗಳು ಮತ್ತು ತರಕಾರಿಗಳನ್ನು ಮಾರುತ್ತಿರುವುದನ್ನು ನೋಡಿದೆ. ಏಕೆ? ಏಕೆಂದರೆ ಸಾಕ್ಷರತಾ ತರಗತಿಯಲ್ಲಿ ಉಪಯೋಗಿಸಲಿಕ್ಕಾಗಿ ಒಂದು ಪೆನ್ಸಿಲ್‌ ಮತ್ತು ನೋಟ್‌ಪುಸ್ತಕವನ್ನು ಖರೀದಿಸಲಿಕ್ಕಾಗಿ ಅವರಿಗೆ ಸಾಕಷ್ಟು ಹಣ ಬೇಕಾಗಿತ್ತು! ಮಾತ್ರವಲ್ಲದೆ, ಆ ತರಗತಿಗೆ ಹಾಜರಾಗುವುದು ಕಾವಲಿನಬುರುಜು ಪತ್ರಿಕೆಯ ಒಂದು ವೈಯಕ್ತಿಕ ಪ್ರತಿಯನ್ನು ಹೊಂದಿರುವುದಕ್ಕೆ ಒಂದು ಪ್ರಚೋದನೆಯಾಗಿತ್ತು.” ಅವಳು ಕೂಡಿಸಿ ಹೇಳುವುದು: “ಈಗ ಸಭಾ ಕಾವಲಿನಬುರುಜು ಅಧ್ಯಯನದ ಸಮಯದಲ್ಲಿ ಆಬಾಲವೃದ್ಧರೆಲ್ಲರೂ ಭಾಗವಹಿಸುತ್ತಾರೆ, ಮತ್ತು ನಮ್ಮ ಚರ್ಚೆಗಳು ಸಜೀವಕರವಾಗಿವೆ.” ತರಗತಿಯ ನಾಲ್ಕು ಮಂದಿ ಸದಸ್ಯರು ತಾವು ಸಾರ್ವಜನಿಕ ಸಾರುವಿಕೆಯಲ್ಲಿ ಭಾಗವಹಿಸಬಹುದೋ ಎಂದು ಕೇಳಿದಾಗ ಈ ಮಿಷನೆರಿಯು ವಿಶೇಷವಾಗಿ ಸಂತೋಷಪಟ್ಟಳು. ಏಕೆಂದರೆ ಅವರು ಹೇಳಿದಂತೆ ಅವರಿಗೆ “ಈಗ ಮುಜುಗರದ ಅನಿಸಿಕೆಯಾಗುವುದಿಲ್ಲ.”

ಸಾಕ್ಷರತಾ ತರಗತಿಗಳಲ್ಲಿ ವಿದ್ಯಾರ್ಥಿಗಳ ಮೇಲೆ ಬೀರಲಾಗುವ ಸಕಾರಾತ್ಮಕ ಪರಿಣಾಮಗಳು, ಓದುಬರಹವನ್ನು ಕಲಿಯುವುದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಿವೆ. ಉದಾಹರಣೆಗೆ, ಅನೇಕ ವರ್ಷಗಳ ವರೆಗೆ ಒಬ್ಬ ಸಾಕ್ಷಿಯ ಅವಿಶ್ವಾಸಿ ಹೆಂಡತಿಯು ಸಭೆಗೆ ಚಿಂತೆಯ ಕಾರಣವಾಗಿದ್ದಳು. ಸ್ವಲ್ಪವೇ ಕೋಪಗೊಳಿಸಲ್ಪಟ್ಟರೂ ಅವಳು ಜನರ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದಳು ಮತ್ತು ಬೇರೆ ಸ್ತ್ರೀಯರನ್ನು ಕಟ್ಟಿಗೆಯಿಂದ ಹೊಡೆದೋಡಿಸುತ್ತಿದ್ದಳು. ಅವಳು ಆಗಾಗ್ಗ ತನ್ನ ಗಂಡನೊಂದಿಗೆ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದಾಗ ಅವಳು ಅವನ ಮೇಲೆ ಎಷ್ಟು ಅಸೂಯೆಗೊಳ್ಳುತ್ತಿದ್ದಳೆಂದರೆ, ಅವನು ಬೇರೆ ಹೆಂಗಸರನ್ನು ನೋಡುತ್ತಿದ್ದಾನೆಂದು ಅವಳು ಅವನನ್ನು ದೂಷಿಸದಂತೆ ಅವನು ಕಪ್ಪು ಕನ್ನಡಕಗಳನ್ನು ಹಾಕತೊಡಗಿದನು.

ಆದರೆ, ಸಾಕ್ಷರತಾ ತರಗತಿಗಳು ಪ್ರಾರಂಭವಾದ ಸ್ವಲ್ಪದರಲ್ಲೇ, ಈ ಸ್ತ್ರೀಯು ಸೌಮ್ಯವಾಗಿ ಕೇಳಿದ್ದು: “ನಾನು ತರಗತಿಗೆ ಸೇರಿಕೊಳ್ಳಬಹುದೋ?” ಉತ್ತರವು ಹೌದಾಗಿತ್ತು. ಅಂದಿನಿಂದ ಅವಳು ಒಂದು ತರಗತಿಯನ್ನಾಗಲಿ, ಸಭಾ ಕೂಟವನ್ನಾಗಲಿ ತಪ್ಪಿಸಿರುವುದಿಲ್ಲ. ಅವಳು ತನ್ನ ಓದುವಿಕೆಯ ಪಾಠಗಳ ವಿಷಯದಲ್ಲಿ ತುಂಬ ಪರಿಶ್ರಮಪಟ್ಟಳು ಮತ್ತು ಅದ್ಭುತಕರವಾದ ಪ್ರಗತಿಯನ್ನು ಮಾಡಿದಳು, ಮತ್ತು ಇದು ಅವಳನ್ನು ಹೆಚ್ಚು ಸಂತೋಷಪಡಿಸಿತು. ಅವಳ ಮುಂದಿನ ಕೋರಿಕೆಯು, “ನಾನು ಬೈಬಲ್‌ ಅಧ್ಯಯನ ಮಾಡಬಹುದೋ?” ಎಂದಾಗಿತ್ತು. ಅವಳ ಗಂಡನು ಅವಳೊಂದಿಗೆ ಸಂತೋಷದಿಂದ ಅಧ್ಯಯನ ಮಾಡಲು ಆರಂಭಿಸಿದನು, ಮತ್ತು ಅವಳು ತನ್ನ ಓದುಬರಹದ ಸಾಮರ್ಥ್ಯದಲ್ಲಿ ಮತ್ತು ಬೈಬಲಿನ ಕುರಿತಾದ ತನ್ನ ಜ್ಞಾನದಲ್ಲಿ ಪ್ರಗತಿಪರವಾಗಿ ಮುಂದುವರಿಯುತ್ತಾ ಇದ್ದಾಳೆ.

ಒಂದು ಪೆನ್ಸಿಲನ್ನು ಎಂದೂ ಮುಟ್ಟಿರದಿದ್ದಂಥ ಒಬ್ಬ 50 ವರ್ಷ ಪ್ರಾಯದ ವ್ಯಕ್ತಿಗೆ, ಕೇವಲ ಪೆನ್ಸಿಲನ್ನು ಹಿಡಿದು ಅಕ್ಷರಗಳನ್ನು ಬರೆಯುವುದೇ ಒಂದು ದೊಡ್ಡ ಪಂಥಾಹ್ವಾನವಾಗಿರಬಹುದು. ಕೆಲವರು ಕಲಿಕೆಯ ಆರಂಭದ ಹಂತಗಳಲ್ಲಿ, ಪೆನ್ಸಿಲ್‌ನ ಮೇಲೆ ಮತ್ತು ಕಾಗದದ ಮೇಲೆ ಹಾಕುವ ಒತ್ತಡದ ಕಾರಣ ಅವರ ಬೆರಳುಗಳ ಮೇಲೆ ಬೊಕ್ಕೆಗಳು ಬಂದುಬಿಡುತ್ತವೆ. ಪೆನ್ಸಿಲನ್ನು ಹಿಡಿಯಲು ಮತ್ತು ಅದನ್ನು ನಿಯಂತ್ರಿಸಲು ವಾರಗಳ ವರೆಗೆ ಹೋರಾಡಿದ ನಂತರ, ಕೆಲವು ವಿದ್ಯಾರ್ಥಿಗಳು ದೊಡ್ಡ ನಸುನಗೆಯೊಂದಿಗೆ, “ನಾನು ನನ್ನ ಕೈಯನ್ನು ಕಾಗದದ ಮೇಲೆ ಮೃದುವಾಗಿ ಚಲಿಸಬಲ್ಲೆ!” ಎಂದು ಘೋಷಿಸುತ್ತಾರೆ. ವಿದ್ಯಾರ್ಥಿಗಳ ಪ್ರಗತಿಯನ್ನು ನೋಡುವುದು ಸಹ ಶಿಕ್ಷಕರನ್ನು ಸಂತೋಷಪಡಿಸುತ್ತದೆ. ಒಬ್ಬ ಶಿಕ್ಷಕಿಯು ಹೇಳಿದ್ದು: “ಒಂದು ತರಗತಿಗೆ ಕಲಿಸುವುದು ನಿಜವಾಗಿಯೂ ಅತ್ಯಾನಂದದ ಸಂಗತಿಯಾಗಿದೆ. ಮತ್ತು ಯೆಹೋವನ ಈ ಒದಗಿಸುವಿಕೆಗಾಗಿ ವಿದ್ಯಾರ್ಥಿಗಳ ಪ್ರಾಮಾಣಿಕ ಗಣ್ಯತೆಯು ಅನೇಕವೇಳೆ ತರಗತಿಯ ಅಂತ್ಯದಲ್ಲಿ ಚಪ್ಪಾಳೆಯ ಮೂಲಕ ವ್ಯಕ್ತಪಡಿಸಲ್ಪಡುತ್ತದೆ.”

ಮಿಷನೆರಿಗಳೊಂದಿಗೆ ಈಗ ಅಕ್ಷರಸ್ಥರಾಗಿರುವ ಈ ಸಾಕ್ಷಿಗಳು ಹರ್ಷಾನಂದಗೈಯುತ್ತಾರೆ. ಏಕೆ? ಏಕೆಂದರೆ, ಈಗ ಅವರು ತಮ್ಮ ಓದುಬರಹದ ಸಾಮರ್ಥ್ಯವನ್ನು ಯೆಹೋವನನ್ನು ಮಹಿಮೆಪಡಿಸುವುದರಲ್ಲಿ ಉಪಯೋಗಿಸಬಲ್ಲರು.

[ಪುಟ 8, 9ರಲ್ಲಿರುವ ಚಿತ್ರಗಳು]

ಆಬಾಲವೃದ್ಧರು ಸಾಕ್ಷರತಾ ತರಗತಿಗಳನ್ನು ಗಣ್ಯಮಾಡುತ್ತಾರೆ