ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಲೋಚನಾ ಸಾಮರ್ಥ್ಯವು ನಿಮ್ಮನ್ನು ಹೇಗೆ ಕಾಪಾಡಬಲ್ಲದು?

ಆಲೋಚನಾ ಸಾಮರ್ಥ್ಯವು ನಿಮ್ಮನ್ನು ಹೇಗೆ ಕಾಪಾಡಬಲ್ಲದು?

ಆಲೋಚನಾ ಸಾಮರ್ಥ್ಯವು ನಿಮ್ಮನ್ನು ಹೇಗೆ ಕಾಪಾಡಬಲ್ಲದು?

ಎತ್ತರದ ಅಲೆಗಳನ್ನು ನೋಡುವುದು ಒಂದು ನಯನಮನೋಹರ ದೃಶ್ಯವಾಗಿದೆ. ಆದರೆ ಆ ಅಲೆಗಳೇ, ನಾವಿಕರಿಗೆ ಅಪಾಯವನ್ನು ತಂದೊಡ್ಡಬಲ್ಲವು. ಆ ಉಕ್ಕೇರುತ್ತಿರುವ ಜಲಧಾರೆಯು ಅವರ ಜೀವಗಳನ್ನೇ ಬಲಿತೆಗೆದುಕೊಳ್ಳಬಲ್ಲದು.

ಅದೇ ರೀತಿಯಲ್ಲಿ, ದೇವರ ಸೇವಕರು ಸದಾ ಹೆಚ್ಚುತ್ತಿರುವ ಒತ್ತಡಗಳನ್ನು ಎದುರಿಸುತ್ತಿರಬಹುದು. ಇವುಗಳಲ್ಲೇ ಅವರು ಮುಳುಗಿಹೋಗುವ ಅಪಾಯವಿದೆ. ಕ್ರೈಸ್ತರ ಮೇಲೆ ಅಲೆಅಲೆಯಾಗಿ ಎರಗುವ ಪರೀಕ್ಷೆಗಳು ಮತ್ತು ಶೋಧನೆಗಳು ನಿಮಗೆ ತಿಳಿದಿರಬಹುದು. ಆತ್ಮಿಕ ಹಡಗೊಡೆತವನ್ನು ದೂರವಿರಿಸುವ ದೃಢನಿರ್ಧಾರದೊಂದಿಗೆ, ನೀವು ಅವುಗಳನ್ನು ನಿರ್ಣಾಯಕ ರೀತಿಯಲ್ಲಿ ನಿಷ್ಪ್ರಯೋಜಕಗೊಳಿಸಲು ಖಂಡಿತವಾಗಿಯೂ ಬಯಸುತ್ತೀರಿ. (1 ತಿಮೊಥೆಯ 1:19) ಆಲೋಚನಾ ಸಾಮರ್ಥ್ಯವು ನಿಮ್ಮ ರಕ್ಷಣಾ ವ್ಯವಸ್ಥೆಯ ಒಂದು ಅತ್ಯಾವಶ್ಯಕ ಭಾಗವಾಗಿದೆ. ಅದು ಏನಾಗಿದೆ, ಮತ್ತು ಅದನ್ನು ಹೇಗೆ ಪಡೆಯಲಾಗುತ್ತದೆ?

“ಆಲೋಚನಾ ಸಾಮರ್ಥ್ಯ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವಾದ ಮೆಸ್ಸೀಮಾ, “ಯೋಜಿಸು ಇಲ್ಲವೆ ಸಂಚುಹೂಡು” ಎಂಬರ್ಥವುಳ್ಳ ಒಂದು ಮೂಲ ಪದದಿಂದ ಬಂದದ್ದಾಗಿದೆ. (ಜ್ಞಾನೋಕ್ತಿ 1:4, NW) ಹೀಗಿರುವುದರಿಂದ ಕೆಲವು ಬೈಬಲ್‌ ಭಾಷಾಂತರಗಳು, ಮೆಸ್ಸೀಮಾ ಎಂಬ ಪದವನ್ನು “ವ್ಯವಹಾರ ಪರಿಜ್ಞಾನ” ಇಲ್ಲವೆ “ಮುಂದಾಲೋಚನೆ” ಎಂದು ಭಾಷಾಂತರಿಸುತ್ತವೆ. ಜೇಮೀಸನ್‌, ಫಾಸೆಟ್‌, ಮತ್ತು ಬ್ರೌನ್‌ ಎಂಬ ಬೈಬಲ್‌ ಸಂಬಂಧಿತ ವಿದ್ವಾಂಸರು ಮೆಸ್ಸೀಮಾ ಎಂಬುದನ್ನು, “ಕೇಡನ್ನು ತಪ್ಪಿಸಲು ಮತ್ತು ಒಳಿತನ್ನು ಕಂಡುಹಿಡಿಯಲಿಕ್ಕಾಗಿರುವ ಎಚ್ಚರಿಕೆಯ ಪ್ರಜ್ಞೆ” ಎಂದು ವರ್ಣಿಸುತ್ತಾರೆ. ಇದು, ನಮ್ಮ ಕ್ರಿಯೆಗಳ ದೀರ್ಘಕಾಲಿಕ ಹಾಗೂ ತತ್‌ಕ್ಷಣದ ಫಲಿತಾಂಶಗಳನ್ನು ಪರಿಗಣಿಸುವುದನ್ನು ಸೂಚಿಸುತ್ತದೆ. ಆಲೋಚನಾ ಸಾಮರ್ಥ್ಯವಿರುವಾಗ, ನಾವು ಯಾವುದೇ ಕ್ರಿಯೆಗೈಯುವ ಮುಂಚೆ ನಮ್ಮ ಮುಂದಿರುವ ಆಯ್ಕೆಗಳನ್ನು ಜಾಗರೂಕತೆಯಿಂದ ಪರಿಗಣಿಸುವೆವು. ವಿಶೇಷವಾಗಿ ನಾವು ಮಹತ್ವಪೂರ್ಣ ನಿರ್ಣಯಗಳ ಸಂಬಂಧದಲ್ಲಿ ಹೀಗೆ ಮಾಡುವೆವು.

ಆಲೋಚನಾ ಸಾಮರ್ಥ್ಯವುಳ್ಳ ಒಬ್ಬ ಮನುಷ್ಯನು, ಭವಿಷ್ಯದ ಬಗ್ಗೆ ಇಲ್ಲವೆ ಸದ್ಯದಲ್ಲಿ ತಾನಿರುವ ಸನ್ನಿವೇಶಗಳ ಬಗ್ಗೆ ನಿರ್ಣಯಗಳನ್ನು ಮಾಡುವಾಗ, ಅವನು ಎಲ್ಲಕ್ಕಿಂತಲೂ ಮೊದಲು ಅದರಲ್ಲಿರುವ ಸಂಭಾವ್ಯ ಗಂಡಾಂತರಗಳು ಇಲ್ಲವೆ ಕುಳಿಗಳನ್ನು ವಿಶ್ಲೇಷಿಸುತ್ತಾನೆ. ಅವುಗಳನ್ನು ಗುರುತಿಸಿದ ನಂತರ, ಅವುಗಳಿಂದ ತಾನು ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸುತ್ತಾನೆ, ಮತ್ತು ತನ್ನ ಪರಿಸರ ಹಾಗೂ ಸಹವಾಸದ ಪರಿಣಾಮವನ್ನೂ ಪರಿಗಣಿಸುತ್ತಾನೆ. ಹೀಗೆ ಅವನು ಒಂದು ಒಳ್ಳೆಯ ಫಲಿತಾಂಶವನ್ನು ತರುವ, ಪ್ರಾಯಶಃ ದೈವಿಕ ಆಶೀರ್ವಾದಗಳನ್ನೂ ತರಬಹುದಾದ ಒಂದು ಮಾರ್ಗಕ್ರಮವನ್ನು ಅನುಸರಿಸುವುದರ ಬಗ್ಗೆ ಯೋಜಿಸಬಹುದು. ಈ ಕಾರ್ಯವಿಧಾನವನ್ನು ದೃಷ್ಟಾಂತಿಸುವಂಥ ಕೆಲವೊಂದು ವ್ಯಾವಹಾರಿಕ ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ.

ಲೈಂಗಿಕ ಅನೈತಿಕತೆಯ ಪಾಶದಿಂದ ದೂರವಿರಿ

ಗಾಳಿಯು ಒಂದು ದೋಣಿಯ ಮೂತಿಯತ್ತ ಶಕ್ತಿಶಾಲಿಯಾದ ಅಲೆಗಳನ್ನು ತಳ್ಳುವಾಗ, ಅದನ್ನು ಎದುರಲೆ (ಹೆಡ್‌ ಸೀ) ಎಂದು ವರ್ಣಿಸಲಾಗುತ್ತದೆ. ನಾವಿಕರು ಆ ಅಲೆಗಳನ್ನು ಎದುರುಬದುರಾಗಿ ಎದುರಿಸಲು ತಮ್ಮ ದೋಣಿಯನ್ನು ಚಾತುರ್ಯದಿಂದ ನಡೆಸದಿರುವಲ್ಲಿ, ಅದು ಮುಳುಗಿಹೋಗುವ ಅಪಾಯವಿದೆ.

ನಾವು ಇದೇ ರೀತಿಯ ಸನ್ನಿವೇಶದಲ್ಲಿದ್ದೇವೆ. ಸೆಕ್ಸ್‌ ಬಗ್ಗೆ ಗೀಳುಹಿಡಿದಿರುವ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. ಪ್ರತಿ ದಿನ, ಲೈಂಗಿಕ ವಿಚಾರಗಳು ಮತ್ತು ಚಿತ್ರಣಗಳು ಅಲೆಗಳಂತೆ ನಮ್ಮ ಕಣ್ಣೆದುರಿಗೆ ಬರುತ್ತವೆ. ನಮ್ಮ ಸಹಜವಾದ ಲೈಂಗಿಕಾಸೆಗಳ ಮೇಲೆ ಅವು ಬೀರುವ ಪರಿಣಾಮವನ್ನು ನಾವು ಅಲಕ್ಷಿಸಲಾರೆವು. ಅಪಾಯಕರವಾದ ಸನ್ನಿವೇಶಗಳೊಳಗೆ ತೇಲಿಕೊಂಡು ಹೋಗುವ ಬದಲು, ನಾವು ಆಲೋಚನಾ ಸಾಮರ್ಥ್ಯವನ್ನು ಉಪಯೋಗಿಸಿ, ಆ ಪ್ರಲೋಭನಗಳನ್ನು ನಿರ್ಣಾಯಕವಾದ ರೀತಿಯಲ್ಲಿ ಎದುರಿಸಬೇಕು.

ಉದಾಹರಣೆಗಾಗಿ, ಕ್ರೈಸ್ತ ಪುರುಷರು ಅನೇಕವೇಳೆ, ಸ್ತ್ರೀಯರ ಬಗ್ಗೆ ಗೌರವಭಾವವಿಲ್ಲದ ಮತ್ತು ಅವರನ್ನು ಕೇವಲ ಲೈಂಗಿಕ ಆಸೆಯನ್ನು ತಣಿಸುವ ವಸ್ತುಗಳಾಗಿ ದೃಷ್ಟಿಸುವಂಥ ಜನರೊಂದಿಗೆ ಕೆಲಸಮಾಡುತ್ತಾರೆ. ಜೊತೆ ಕಾರ್ಮಿಕರು ತಮ್ಮ ಸಂಭಾಷಣೆಗಳಲ್ಲಿ ಅಶ್ಲೀಲವಾದ ನಗೆಚಟಾಕಿಗಳು ಮತ್ತು ಲೈಂಗಿಕ ವ್ಯಂಗ್ಯೋಕ್ತಿಗಳನ್ನು ಒಳಗೂಡಿಸಬಹುದು. ಈ ರೀತಿಯ ವಾತಾವರಣವು ಕಟ್ಟಕಡೆಗೆ ಒಬ್ಬ ಕ್ರೈಸ್ತನ ಮನಸ್ಸಿನಲ್ಲಿ ಅನೈತಿಕ ವಿಚಾರಗಳನ್ನು ಬೇರೂರಿಸಬಲ್ಲದು.

ಒಬ್ಬ ಕ್ರೈಸ್ತ ಸ್ತ್ರೀಯೂ ಕೆಲಸಕ್ಕೆ ಹೋಗಬೇಕಾಗಿ ಬರಬಹುದು ಮತ್ತು ತೊಂದರೆಗಳನ್ನು ಅನುಭವಿಸಬಹುದು. ತನಗಿರುವಂಥ ನೈತಿಕ ಮಟ್ಟಗಳಿಲ್ಲದ ಸ್ತ್ರೀಪುರುಷರೊಂದಿಗೆ ಅವಳು ಕೆಲಸಮಾಡುತ್ತಿರಬಹುದು. ಪ್ರಾಯಶಃ ಅವಳ ಸಹೋದ್ಯೋಗಿಯೊಬ್ಬನು ಅವಳಲ್ಲಿ ಆಸಕ್ತಿಯನ್ನು ತೋರಿಸಾನು. ಶುರುಶುರುವಿನಲ್ಲಿ ಅವನು ತುಂಬ ವಿಚಾರಪರತೆಯಿಂದ ಅವಳನ್ನು ಉಪಚರಿಸಬಹುದು, ಮತ್ತು ಅವಳ ಧಾರ್ಮಿಕ ಅಭಿಪ್ರಾಯಗಳಿಗಾಗಿ ಅವಳನ್ನು ಗೌರವಿಸಲೂ ಬಹುದು. ಅವನು ಸದಾ ಕೊಡುತ್ತಿರುವ ಗಮನ ಮತ್ತು ಅವನ ನಿರಂತರ ಶಾರೀರಿಕ ಉಪಸ್ಥಿತಿಯು, ಅವಳು ಅವನೊಂದಿಗೆ ಇನ್ನೂ ಹೆಚ್ಚಿನ ಸಹವಾಸವನ್ನಿಡಲು ಬಯಸುವಂತೆ ಮಾಡಬಹುದು.

ಇಂಥ ಪರಿಸ್ಥಿತಿಗಳಲ್ಲಿ ಕ್ರೈಸ್ತರಾಗಿರುವ ನಮಗೆ ಆಲೋಚನಾ ಸಾಮರ್ಥ್ಯವು ಹೇಗೆ ಸಹಾಯಮಾಡಬಲ್ಲದು? ಮೊತ್ತಮೊದಲಾಗಿ ಅದು ನಮಗೆ ಆತ್ಮಿಕ ಅಪಾಯಗಳ ಕುರಿತಾಗಿ ಎಚ್ಚರಿಸಬಲ್ಲದು, ಮತ್ತು ಎರಡನೆಯದಾಗಿ, ನಾವು ಯಥೋಚಿತವಾದ ಕ್ರಮವನ್ನು ಯೋಜಿಸುವಂತೆ ಅದು ನಮ್ಮನ್ನು ಪ್ರಚೋದಿಸಬಲ್ಲದು. (ಜ್ಞಾನೋಕ್ತಿ 3:​21-23) ಇಂಥ ಸನ್ನಿವೇಶಗಳಲ್ಲಿ, ನಮ್ಮ ಶಾಸ್ತ್ರೀಯ ನಂಬಿಕೆಗಳಿಂದಾಗಿ ನಮ್ಮ ಮಟ್ಟಗಳು ತೀರ ಭಿನ್ನವಾಗಿವೆ ಎಂಬ ಸ್ಪಷ್ಟವಾದ ಸಂದೇಶವನ್ನು ನಮ್ಮ ಜೊತೆ ಕಾರ್ಮಿಕರಿಗೆ ತಲಪಿಸಬೇಕಾಗಬಹುದು. (1 ಕೊರಿಂಥ 6:18) ನಮ್ಮ ಈ ಸಂದೇಶಕ್ಕೆ ನಮ್ಮ ಮಾತುಕತೆ ಹಾಗೂ ನಡತೆಯು ಪುಷ್ಟಿ ನೀಡಬಲ್ಲದು. ಅದಲ್ಲದೆ, ನಿರ್ದಿಷ್ಟ ಸಹೋದ್ಯೋಗಿಗಳೊಂದಿಗಿನ ವ್ಯವಹಾರಗಳನ್ನು ನಿರ್ಬಂಧಿಸಬೇಕಾಗಬಹುದು.

ಆದರೆ ಅನೈತಿಕತೆಯ ಒತ್ತಡಗಳು ಕೆಲಸದ ಸ್ಥಳಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಒಬ್ಬ ವಿವಾಹಿತ ದಂಪತಿಯು ಸಮಸ್ಯೆಗಳು ತಮ್ಮ ಐಕ್ಯವನ್ನು ಶಿಥಿಲಗೊಳಿಸುವಂತೆ ಅನುಮತಿಸುವಲ್ಲಿಯೂ ಇಂಥ ಒತ್ತಡಗಳು ಉದಯಿಸಬಹುದು. ಒಬ್ಬ ಸಂಚರಣಾ ಮೇಲ್ವಿಚಾರಕರು ಹೇಳಿದ್ದು: “ಒಂದು ವಿವಾಹವು ಒಮ್ಮಿಂದೊಮ್ಮೆ ಮುರಿದುಬೀಳುವುದಿಲ್ಲ. ದಂಪತಿಯು ಅಪರೂಪವಾಗಿ ಪರಸ್ಪರ ಮಾತಾಡುತ್ತಾ ಇರುವ ಮೂಲಕ ಇಲ್ಲವೆ ಜೊತೆಯಾಗಿ ಸಮಯವನ್ನು ಕಳೆಯದಿರುವ ಮೂಲಕ ಕ್ರಮೇಣವಾಗಿ ಪರಸ್ಪರರಿಂದ ದೂರ ಸರಿಯುತ್ತಾ ಹೋಗಬಹುದು. ತಮ್ಮ ವಿವಾಹದಲ್ಲಿನ ಶೂನ್ಯತೆಯನ್ನು ತುಂಬಿಸಿಕೊಳ್ಳಲಿಕ್ಕಾಗಿ ಅವರು ಭೌತಿಕ ಸ್ವತ್ತುಗಳನ್ನು ಬೆನ್ನಟ್ಟಿಕೊಂಡು ಹೋಗಬಹುದು. ಮತ್ತು ಅವರು ವಿರಳವಾಗಿ ಪರಸ್ಪರರ ಬಗ್ಗೆ ಮೆಚ್ಚುಗೆ ಸೂಚಿಸುವುದರಿಂದ, ಅವರು ವಿರುದ್ಧ ಲಿಂಗದ ಬೇರೆ ಸದಸ್ಯರ ಕಡೆಗೆ ಆಕರ್ಷಿಸಲ್ಪಡಬಹುದು.”

ಈ ಅನುಭವೀ ಶುಶ್ರೂಷಕನು ಮುಂದುವರಿಸಿ ಹೇಳಿದ್ದು: “ಆಗಿಂದಾಗ್ಗೆ, ವಿವಾಹ ಸಂಗಾತಿಗಳು ಕುಳಿತುಕೊಂಡು, ತಮ್ಮ ಸಂಬಂಧವನ್ನು ಯಾವುದೇ ವಿಷಯವು ಹಾನಿಗೊಳಪಡಿಸುತ್ತಿದೆಯೊ ಎಂಬುದರ ಕುರಿತಾಗಿ ಮಾತಾಡಬೇಕು. ಅವರು ಜೊತೆಯಾಗಿ ಅಧ್ಯಯನ, ಪ್ರಾರ್ಥನೆ ಮತ್ತು ಸಾರುವ ಕೆಲಸವನ್ನು ಹೇಗೆ ಮಾಡಬಹುದೆಂಬುದನ್ನು ಯೋಜಿಸಬೇಕು. ಹೆತ್ತವರು ಮತ್ತು ಮಕ್ಕಳು ಮಾಡುವಂತೆಯೇ ಅವರು ಸಹ ‘ಮನೆಯಲ್ಲಿ, ದಾರಿಯಲ್ಲಿ, ಮಲಗುವಾಗಲೂ, ಏಳುವಾಗಲೂ’ ಪರಸ್ಪರರೊಂದಿಗೆ ಮಾತಾಡುವುದರಿಂದ ಬಹಳಷ್ಟು ಪ್ರಯೋಜನ ಪಡೆಯುವರು.”​—ಧರ್ಮೋಪದೇಶಕಾಂಡ 6:​7-9.

ಅಕ್ರೈಸ್ತ ನಡವಳಿಕೆಯನ್ನು ನಿಭಾಯಿಸುವುದು

ಆಲೋಚನಾ ಸಾಮರ್ಥ್ಯವು ನೈತಿಕ ಪ್ರಲೋಭನಗಳನ್ನು ಯಶಸ್ವಿಯಾಗಿ ಎದುರಿಸಲು ಸಹಾಯಮಾಡುವುದಲ್ಲದೆ, ಜೊತೆ ಕ್ರೈಸ್ತರೊಂದಿಗಿನ ಸಮಸ್ಯೆಗಳನ್ನು ನಿಭಾಯಿಸಲೂ ನಮಗೆ ಸಹಾಯಮಾಡಬಲ್ಲದು. ಗಾಳಿಯು, ದೋಣಿಯ ಹಿಂಭಾಗದತ್ತ ಅಲೆಗಳನ್ನು ತಳ್ಳುವಾಗ, ಅದು ದೋಣಿಯು ಸಾಗುತ್ತಿರುವ ದಿಕ್ಕಿನಲ್ಲೇ ಚಲಿಸುವಂಥ ಅಲೆಗಳನ್ನು (ಫಾಲೋಇಂಗ್‌ ಸೀ) ಉಂಟುಮಾಡುತ್ತದೆ. ಈ ಅಲೆಗಳು ದೋಣಿಯ ಹಿಂಭಾಗವನ್ನು ಎತ್ತಿ ಅದನ್ನು ಮಗ್ಗುಲಿಗೆ ಒಯ್ಯುತ್ತವೆ. ಇದರಿಂದಾಗಿ ದೋಣಿಯ ಒಂದು ಪಕ್ಕವು ಅಲೆಗಳ ದಿಕ್ಕಿಗೆ ಮುಖಮಾಡಿಕೊಂಡಿರುತ್ತದೆ ಮತ್ತು ಹೀಗೆ ಅವುಗಳಿಂದ ಹಾನಿಗೊಳಗಾಗುವ ಸಾಧ್ಯತೆ ಇದೆ.

ನಾವು ಸಹ ಒಂದು ಅನಿರೀಕ್ಷಿತ ದಿಕ್ಕಿನಿಂದ ಬರುವಂಥ ಅಪಾಯಕ್ಕೆ ಸಿಕ್ಕಿಬೀಳಬಹುದು. ನಮ್ಮ ಅನೇಕ ಮಂದಿ ನಂಬಿಗಸ್ತ ಕ್ರೈಸ್ತ ಸಹೋದರಸಹೋದರಿಯರ ಪಕ್ಕದಲ್ಲಿ ನಾವು ‘ಒಂದೇ ಹೆಗಲಿನಿಂದ’ ಯೆಹೋವನ ಸೇವೆಮಾಡುತ್ತೇವೆ. (ಚೆಫನ್ಯ 3:​9, ಪಾದಟಿಪ್ಪಣಿ) ಅವರಲ್ಲಿ ಯಾರಾದರೊಬ್ಬರು ಅಕ್ರೈಸ್ತ ರೀತಿಯಲ್ಲಿ ವರ್ತಿಸುವಲ್ಲಿ, ಅದು ನಂಬಿಕೆಯಲ್ಲಿನ ಒಂದು ಬಿರುಕಿನಂತೆ ತೋರಬಹುದು ಮತ್ತು ನಮಗೆ ಅತೀವ ಕ್ಲೇಶವನ್ನು ಉಂಟುಮಾಡಬಹುದು. ಆದರೆ ನಾವು ಸಮತೋಲನ ತಪ್ಪದಂತೆ ಮತ್ತು ಅತಿಯಾಗಿ ನೊಂದವರಾಗದಂತೆ ಆಲೋಚನಾ ಸಾಮರ್ಥ್ಯವು ನಮ್ಮನ್ನು ಹೇಗೆ ತಡೆಗಟ್ಟಬಹುದು?

“ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲ” ಎಂಬುದನ್ನು ಜ್ಞಾಪಕದಲ್ಲಿಡಿರಿ. (1 ಅರಸುಗಳು 8:46) ಆದುದರಿಂದ ಕೆಲವೊಮ್ಮೆ ಒಬ್ಬ ಕ್ರೈಸ್ತ ಸಹೋದರನು ನಮ್ಮನ್ನು ಕಿರಿಕಿರಿಗೊಳಿಸಬಹುದು ಇಲ್ಲವೆ ಸಿಟ್ಟಿಗೆಬ್ಬಿಸಬಹುದೆಂಬ ಸಂಗತಿಯು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಇದನ್ನು ತಿಳಿದವರಾಗಿ, ನಾವು ಆ ಸಂಭವನೀಯತೆಗಾಗಿ ನಮ್ಮನ್ನೇ ಸಿದ್ಧಪಡಿಸಿಕೊಳ್ಳಬಹುದು ಮತ್ತು ಒಂದುವೇಳೆ ಹಾಗಾಗುವಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕೆಂಬುದರ ಕುರಿತಾಗಿ ಮನನಮಾಡಬೇಕು. ಅಪೊಸ್ತಲ ಪೌಲನ ಕ್ರೈಸ್ತ ಸಹೋದರರಲ್ಲಿ ಕೆಲವರು ಅವನ ಬಗ್ಗೆ ಮನನೋಯಿಸುವಂಥ, ಹೀನಾಯವಾದ ರೀತಿಯಲ್ಲಿ ಮಾತಾಡಿದಾಗ ಅವನು ಹೇಗೆ ಪ್ರತಿಕ್ರಿಯಿಸಿದನು? ತನ್ನ ಆತ್ಮಿಕ ಸಮತೋಲನವನ್ನು ಕಳೆದುಕೊಳ್ಳುವ ಬದಲಿಗೆ, ಮನುಷ್ಯನ ಸಮ್ಮತಿಯನ್ನು ಗಳಿಸುವುದಕ್ಕಿಂತಲೂ ಯೆಹೋವನ ಸಮ್ಮತಿಯನ್ನು ಗಳಿಸುವುದು ಹೆಚ್ಚು ಪ್ರಾಮುಖ್ಯವಾಗಿದೆ ಎಂಬ ತೀರ್ಮಾನಕ್ಕೆ ಬಂದನು. (2 ಕೊರಿಂಥ 10:​10-18) ಅಂಥ ಮನೋಭಾವವು ನಮಗಿರುವಲ್ಲಿ, ಇನ್ನೊಬ್ಬ ವ್ಯಕ್ತಿಯ ಕೃತ್ಯಗಳಿಗೆ ನಾವು ತಟ್ಟನೆ ಪ್ರತಿಕ್ರಿಯೆ ತೋರಿಸುವುದರಿಂದ ದೂರವಿರಲು ಅದು ನಮಗೆ ಸಹಾಯಮಾಡುವುದು.

ಇದು, ನಮ್ಮ ಕಾಲ್ಬೆರಳನ್ನು ನಾವು ಆಕಸ್ಮಿಕವಾಗಿ ಎಲ್ಲಿಯಾದರೂ ತಗುಲಿಸಿಕೊಂಡಂತೆ ಇದೆ. ಹೀಗಾಗುವಾಗ ಒಂದೆರಡು ನಿಮಿಷಗಳ ವರೆಗೆ ನಮಗೆ ಸರಿಯಾಗಿ ಯೋಚಿಸಲಿಕ್ಕಾಗದಿರಬಹುದು. ಆದರೆ ಆ ನೋವು ತಗ್ಗಿದ ನಂತರ, ನಾವು ಸಾಮಾನ್ಯ ರೀತಿಯಲ್ಲಿ ತರ್ಕಿಸಬಲ್ಲೆವು ಮತ್ತು ಕ್ರಿಯೆಗೈಯಬಲ್ಲೆವು. ಅದೇ ರೀತಿಯಲ್ಲಿ ಯಾರಾದರೂ ಹೇಳುವ ನಿರ್ದಯ ಮಾತು ಇಲ್ಲವೆ ಮಾಡುವ ನಿರ್ದಯ ಕೃತ್ಯಕ್ಕೆ ನಾವು ಆ ಕೂಡಲೇ ಪ್ರತಿಕ್ರಿಯಿಸಬಾರದು. ಅದರ ಬದಲು, ಸ್ವಲ್ಪ ಕಾದು, ಯೋಚಿಸದೆ ಪ್ರತೀಕಾರ ತೀರಿಸುವುದರ ಫಲಿತಾಂಶಗಳೇನಾಗಿರುವವು ಎಂಬುದರ ಬಗ್ಗೆ ಯೋಚಿಸಿರಿ.

ಅನೇಕ ವರ್ಷಗಳಿಂದ ಒಬ್ಬ ಮಿಷನೆರಿಯಾಗಿರುವ ಮಾಲ್ಕಮ್‌ ಎಂಬವನು, ತನಗೆ ಕೋಪಬಂದಾಗ ಏನು ಮಾಡುತ್ತಾನೆಂಬುದನ್ನು ವಿವರಿಸುತ್ತಾನೆ. “ನಾನು ಮಾಡುವ ಮೊದಲ ಸಂಗತಿಯೇನೆಂದರೆ, ಈ ಪ್ರಶ್ನೆಗಳ ಒಂದು ಪಟ್ಟಿಯನ್ನು ಓದುವುದು: ನಮ್ಮ ವ್ಯಕ್ತಿತ್ವಗಳ ವ್ಯತ್ಯಾಸಗಳಿಂದಾಗಿ ನಾನು ಈ ಸಹೋದರನ ಮೇಲೆ ಸಿಟ್ಟುಗೊಂಡಿದ್ದೇನೊ? ಅವನು ಏನು ಹೇಳಿದನೊ ಅದನ್ನು ನಾನು ನಿಜವಾಗಿ ಮನಸ್ಸಿಗೆ ಹಚ್ಚಿಕೊಳ್ಳಬೇಕೊ? ಮಲೇರಿಯಾ ರೋಗವು, ಈ ನನ್ನ ತೀಕ್ಷ್ಣ ಭಾವನೆಗಳ ಮೇಲೆ ಪ್ರಭಾವವನ್ನು ಬೀರುತ್ತಿರಬಹುದೊ? ಕೆಲವು ತಾಸುಗಳ ನಂತರ ನಾನು ಅದೇ ವಿಷಯವನ್ನು ಬೇರೆ ದೃಷ್ಟಿಯಿಂದ ನೋಡುವೆನೊ?” ಅನೇಕವೇಳೆ, ಒಂದು ಮನಸ್ತಾಪವು ಅಮುಖ್ಯವೂ ಅಲಕ್ಷಿಸಲ್ಪಡಸಾಧ್ಯವಿರುವಂಥದ್ದೂ ಆಗಿದೆಯೆಂಬುದನ್ನು ಮಾಲ್ಕಮ್‌ ಕಂಡುಹಿಡಿದಿದ್ದಾನೆ. *

ಮಾಲ್ಕಮ್‌ ಕೂಡಿಸಿ ಹೇಳಿದ್ದು: “ಕೆಲವೊಮ್ಮೆ, ಸಮಸ್ಯೆಯನ್ನು ಬಗೆಹರಿಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ ನಂತರವೂ, ಆ ಇನೊಬ್ಬ ಸಹೋದರನ ಮನೋಭಾವವು ಕಠೋರವಾಗಿರುತ್ತದೆ. ಇದು ನನ್ನ ಮನಶ್ಶಾಂತಿಯನ್ನು ಕೆಡಿಸಲು ಬಿಡದಂತೆ ಪ್ರಯತ್ನಿಸುತ್ತೇನೆ. ನನ್ನಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿದ ನಂತರ, ನಾನು ಆ ವಿಷಯವನ್ನು ಭಿನ್ನವಾದ ದೃಷ್ಟಿಕೋನದಿಂದ ನೋಡುತ್ತೇನೆ. ಮಾನಸಿಕವಾಗಿ ನಾನು ಈ ವಿಷಯವನ್ನು ‘ವೈಯಕ್ತಿಕ ಫೈಲ್‌’ನಲ್ಲಿಯಲ್ಲ ಬದಲಾಗಿ ‘ಪೆಂಡಿಂಗ್‌ ಫೈಲ್‌’ನಲ್ಲಿ ಹಾಕುತ್ತೇನೆ. ಅದು ನನ್ನನ್ನು ಆತ್ಮಿಕ ರೀತಿಯಲ್ಲಿ ಕೆಳಗೆ ಎಳೆಯುವಂತೆ ಇಲ್ಲವೆ ಯೆಹೋವನೊಂದಿಗಿನ ಮತ್ತು ನನ್ನ ಸಹೋದರರೊಂದಿಗಿನ ಸಂಬಂಧವನ್ನು ಬಾಧಿಸುವಂತೆ ನಾನು ಬಿಡುವುದಿಲ್ಲ.”

ಮಾಲ್ಕಮ್‌ನಂತೆ ನಾವು ಸಹ ಕೇವಲ ಒಬ್ಬ ವ್ಯಕ್ತಿಯ ದುರ್ನಡತೆಯು ನಮ್ಮ ಮನಶ್ಶಾಂತಿಯನ್ನು ತೀರ ವಿಪರೀತವಾಗಿ ಕೆಡಿಸುವಂತೆ ಬಿಡಬಾರದು. ಪ್ರತಿಯೊಂದು ಸಭೆಯಲ್ಲಿ ಅನೇಕಾನೇಕ ಹರ್ಷಭರಿತ, ನಂಬಿಗಸ್ತ ಸಹೋದರಸಹೋದರಿಯರಿದ್ದಾರೆ. ಅವರೊಂದಿಗೆ “ಐಕಮತ್ಯದಿಂದ” ಕ್ರೈಸ್ತ ಮಾರ್ಗದಲ್ಲಿ ನಡೆಯುವುದು ಒಂದು ಆನಂದವಾಗಿದೆ. (ಫಿಲಿಪ್ಪಿ 1:27) ನಮ್ಮ ಸ್ವರ್ಗೀಯ ತಂದೆಯ ಪ್ರೀತಿಪರ ಬೆಂಬಲವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಹ, ನಾವು ವಿಷಯಗಳನ್ನು ವಾಸ್ತವಿಕ ದೃಷ್ಟಿಕೋನದಿಂದ ನೋಡುವಂತೆ ನಮಗೆ ಸಹಾಯಮಾಡುವುದು.​—ಕೀರ್ತನೆ 23:​1-3; ಜ್ಞಾನೋಕ್ತಿ 5:​1, 2; 8:12.

ಲೋಕದ ವಸ್ತುಗಳನ್ನು ಪ್ರೀತಿಸದಿರುವುದು

ಆಲೋಚನಾ ಸಾಮರ್ಥ್ಯವು ನಾವು ಇನ್ನೊಂದು ನವಿರಾದ ಒತ್ತಡವನ್ನು ಎದುರಿಸಲು ಸಹಾಯಮಾಡಬಲ್ಲದು. ಗಾಳಿಯ ಬಡಿತದಿಂದ ಅಲೆಗಳು ಹಡಗಿನ ಪಕ್ಕ ಇಲ್ಲವೆ ಪಾರ್ಶ್ವದತ್ತ ತಿರುಗುವಾಗ, ಅದನ್ನು ಪಕ್ಕ ಸಮುದ್ರ (ಬೀಮ್‌ ಸೀ) ಎಂದು ಕರೆಯಲಾಗುತ್ತದೆ. ಸಾಧಾರಣವಾದ ಸ್ಥಿತಿಗಳಲ್ಲಿ, ಅಂಥ ಸಮುದ್ರವು ನಿಧಾನವಾಗಿ ಹಡಗನ್ನು ಅದರ ನಿಜವಾದ ದಿಕ್ಕಿನಿಂದ ದೂರ ಸರಿಸಬಹುದು. ಬಿರುಗಾಳಿಯಿದ್ದರಂತೂ ಈ ಪಕ್ಕ ಸಮುದ್ರವು ಹಡಗನ್ನು ಮುಳುಗಿಸಿಬಿಡಬಲ್ಲದು.

ಅದೇ ರೀತಿಯಲ್ಲಿ, ಈ ದುಷ್ಟ ಲೋಕವು ನೀಡುವಂಥದ್ದೆಲ್ಲವನ್ನೂ ಆಸ್ವಾದಿಸುವ ಒತ್ತಡಕ್ಕೆ ನಾವು ಮಣಿಯುವಲ್ಲಿ, ಈ ಪ್ರಾಪಂಚಿಕವಾದ ಜೀವನ ಶೈಲಿಯು ನಮ್ಮನ್ನು ಆತ್ಮಿಕವಾಗಿ ದಾರಿತಪ್ಪಿಸಬಲ್ಲದು. (2 ತಿಮೊಥೆಯ 4:10) ಲೋಕದ ಪ್ರೀತಿಯು ನಿಯಂತ್ರಿಸಲ್ಪಡದಿರುವಲ್ಲಿ, ನಾವು ಕಟ್ಟಕಡೆಗೆ ಕ್ರೈಸ್ತ ಮಾರ್ಗಕ್ರಮವನ್ನು ಸಂಪೂರ್ಣವಾಗಿ ತೊರೆಯುವಂತೆ ಅದು ಮಾಡಬಹುದು. (1 ಯೋಹಾನ 2:15) ಹಾಗಿರುವಾಗ, ಆಲೋಚನಾ ಸಾಮರ್ಥ್ಯವು ನಮಗೆ ಹೇಗೆ ನೆರವು ನೀಡಬಹುದು?

ಮೊತ್ತಮೊದಲಾಗಿ, ನಾವು ಎದುರಿಸಬಹುದಾದ ಅಪಾಯಗಳೇನೆಂಬುದನ್ನು ಅಂದಾಜುಮಾಡುವಂತೆ ಅದು ಸಹಾಯಮಾಡುತ್ತದೆ. ಈ ಲೋಕವು ನಮ್ಮನ್ನು ಆಕರ್ಷಿಸಲಿಕ್ಕಾಗಿ, ಮಾರಾಟಗಾರಿಕೆಯಲ್ಲಿ ಊಹಿಸಲು ಸಾಧ್ಯವಿರುವ ಪ್ರತಿಯೊಂದು ತಂತ್ರವನ್ನು ಬಳಸಿದೆ. ಪ್ರತಿಯೊಬ್ಬ ವ್ಯಕ್ತಿಯು ಬೆನ್ನಟ್ಟಿಕೊಂಡು ಹೋಗಬೇಕೆಂದು ಹೇಳಲಾಗುವ ಒಂದು ಜೀವನ ಶೈಲಿಯನ್ನು, ಅಂದರೆ ಧನಿಕರು, ಬೆಡಗಿನವರು ಮತ್ತು “ಯಶಸ್ವೀ” ಜನರ ಆಡಂಬರದ ಜೀವನ ಶೈಲಿಯನ್ನು ಅದು ಸತತವಾಗಿ ಪ್ರವರ್ಧಿಸುತ್ತಿದೆ. (1 ಯೋಹಾನ 2:16) ನಮ್ಮ ಸಮಾನಸ್ಥರ ಮತ್ತು ನೆರೆಹೊರೆಯವರ ಮೆಚ್ಚುಗೆ ಮತ್ತು ಸಮ್ಮತಿಯನ್ನು ಗಳಿಸುವ ಆಮಿಷವನ್ನೊಡ್ಡಲಾಗುತ್ತದೆ. ಆದರೆ ಆಲೋಚನಾ ಸಾಮರ್ಥ್ಯವು ನಾವು ಈ ತಪ್ಪು ಮಾಹಿತಿಯನ್ನು ತಳ್ಳಿಹಾಕಲು ಸಹಾಯಮಾಡುವುದು. ಯೆಹೋವನು ‘ನಮ್ಮನ್ನು ಎಂದಿಗೂ ತೊರೆಯುವುದಿಲ್ಲ’ ಎಂದು ಮಾತುಕೊಟ್ಟಿರುವುದರಿಂದ, ‘ಹಣದ ಮೋಹದಿಂದ ಮುಕ್ತರಾಗಿರುವ’ ಮಹತ್ವವನ್ನು ಅದು ನಮಗೆ ಜ್ಞಾಪಕಹುಟ್ಟಿಸುತ್ತಾ ಇರುತ್ತದೆ.​—ಇಬ್ರಿಯ 13:​5, NW.

ಎರಡನೆಯದಾಗಿ, ಆಲೋಚನಾ ಸಾಮರ್ಥ್ಯವು, ನಾವು ‘ಸತ್ಯಭ್ರಷ್ಟರಾಗಿರು’ವವರನ್ನು ಹಿಂಬಾಲಿಸುವುದರಿಂದ ನಮ್ಮನ್ನು ತಡೆಯುವುದು. (2 ತಿಮೊಥೆಯ 2:18) ನಾವು ಇಷ್ಟಪಟ್ಟಿರುವ ಮತ್ತು ಭರವಸೆ ಇಟ್ಟಿರುವಂಥ ಜನರು ತಪ್ಪಾಗಿದ್ದಾರೆಂದು ಹೇಳುವುದು ಬಹಳ ಕಷ್ಟಕರ ಸಂಗತಿ. (1 ಕೊರಿಂಥ 15:​12, 32-34) ಕ್ರೈಸ್ತ ಮಾರ್ಗಕ್ರಮವನ್ನು ಬಿಟ್ಟುಹೋದವರಿಂದ ನಾವು ಅತಿ ಕನಿಷ್ಠ ಪ್ರಮಾಣದಲ್ಲಿ ಪ್ರಭಾವಿಸಲ್ಪಟ್ಟರೂ ಸಾಕು, ಅದು ನಮ್ಮ ಆತ್ಮಿಕ ಪ್ರಗತಿಯನ್ನು ತಡೆಗಟ್ಟಬಲ್ಲದು ಮಾತ್ರವಲ್ಲ, ಕಟ್ಟಕಡೆಗೆ ನಮ್ಮನ್ನು ಅಪಾಯದಲ್ಲಿಯೂ ಸಿಕ್ಕಿಸಬಲ್ಲದು. ನಾವು, ಅದರ ಸರಿಯಾದ ಪಥದಿಂದ ಕೇವಲ ಒಂದು ಡಿಗ್ರಿ ಆಚೆಗೆ ಚಲಿಸಿರುವ ಒಂದು ಹಡಗಿನಂತೆ ಆಗಬಲ್ಲೆವು. ದೀರ್ಘವಾದ ಪ್ರಯಾಣದಲ್ಲಿ, ಅಂಥ ಹಡಗಿಗೆ ಸರಿಯಾದ ಪಥದಿಂದ ದೊಡ್ಡ ಅಂತರವುಂಟಾಗಿ, ತನ್ನ ಗಮ್ಯಸ್ಥಾನವನ್ನು ಅದು ತಲಪದೇ ಹೋಗಬಹುದು.​—ಇಬ್ರಿಯ 3:12.

ಆಲೋಚನಾ ಸಾಮರ್ಥ್ಯವು, ನಾವು ಒಂದು ಆತ್ಮಿಕಾರ್ಥದಲ್ಲಿ ಎಲ್ಲಿದ್ದೇವೆ ಮತ್ತು ಎಲ್ಲಿ ತಲಪಲಿದ್ದೇವೆ ಎಂಬುದನ್ನು ಪತ್ತೆಹಚ್ಚಲು ಸಹಾಯಮಾಡಬಲ್ಲದು. ಕ್ರೈಸ್ತ ಚಟುವಟಿಕೆಗಳಲ್ಲಿ ನಾವು ಇನ್ನೂ ಹೆಚ್ಚು ಪಾಲ್ಗೊಳ್ಳುವ ಅಗತ್ಯವಿದೆ ಎಂಬುದು ನಮ್ಮ ಅರಿವಿಗೆ ಬರಬಹುದು. (ಇಬ್ರಿಯ 6:​11, 12) ಆತ್ಮಿಕ ಗುರಿಗಳನ್ನು ಬೆನ್ನಟ್ಟಲಿಕ್ಕಾಗಿ ಒಬ್ಬ ಯುವ ಸಾಕ್ಷಿಯು ಆಲೋಚನಾ ಸಾಮರ್ಥ್ಯವನ್ನು ಹೇಗೆ ಉಪಯೋಗಿಸಿದನೆಂಬುದನ್ನು ಗಮನಿಸಿರಿ: “ಪತ್ರಿಕೋದ್ಯಮದಲ್ಲಿ ಜೀವನವೃತ್ತಿಯನ್ನು ಬೆನ್ನಟ್ಟಲಿಕ್ಕಾಗಿ ನನಗೊಂದು ಒಳ್ಳೆಯ ಅವಕಾಶವಿತ್ತು. ಇದು ನನ್ನನ್ನು ನಿಜವಾಗಿಯೂ ಆಕರ್ಷಿಸಿತು. ಆದರೂ ‘ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ, ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು’ ಎಂದು ಹೇಳುವ ಬೈಬಲ್‌ ವಚನವು ನನ್ನ ನೆನಪಿಗೆ ಬಂತು. (1 ಯೋಹಾನ 2:17) ನಾನು ಜೀವಿಸುವ ರೀತಿಯು, ನನ್ನ ನಂಬಿಕೆಗಳಿಗೆ ಒಂದು ಕನ್ನಡಿಯಾಗಿರಬೇಕೆಂದು ನಾನು ತರ್ಕಿಸಿದೆ. ನನ್ನ ಹೆತ್ತವರು ಕ್ರೈಸ್ತ ನಂಬಿಕೆಯನ್ನು ತೊರೆದಿದ್ದರು. ಮತ್ತು ನನಗೆ ಅವರ ಮಾದರಿಯನ್ನು ಅನುಕರಿಸಲು ಮನಸ್ಸಿರಲಿಲ್ಲ. ಆದುದರಿಂದ ನಾನು ಒಂದು ಉದ್ದೇಶಭರಿತ ಜೀವನವನ್ನು ನಡೆಸುವ ದೃಢನಿರ್ಧಾರಮಾಡಿ, ಒಬ್ಬ ರೆಗ್ಯುಲರ್‌ ಪಯನೀಯರನೋಪಾದಿ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆ. ಅಂದಿನಿಂದ ನಾಲ್ಕು ತೃಪ್ತಿದಾಯಕ ವರ್ಷಗಳು ಕಳೆದಿವೆ ಮತ್ತು ನಾನು ಸರಿಯಾದ ಆಯ್ಕೆಯನ್ನೇ ಮಾಡಿದ್ದೇನೆಂದು ನನಗೆ ಗೊತ್ತಿದೆ.”

ಆತ್ಮಿಕ ಬಿರುಗಾಳಿಗಳನ್ನು ಯಶಸ್ವಿಕರವಾಗಿ ಎದುರಿಸುವುದು

ನಾವು ಇಂದು ಆಲೋಚನಾ ಸಾಮರ್ಥ್ಯವನ್ನು ಪ್ರಯೋಗಿಸುವುದು ತುರ್ತಿನದ್ದಾಗಿದೆ ಏಕೆ? ನಾವಿಕರು, ಅಪಾಯದ ಸಂಕೇತಗಳು ಕಂಡುಬರುತ್ತಿವೆಯೊ ಎಂಬುದನ್ನು ಸದಾ ನೋಡುತ್ತಾ ಇರಬೇಕು. ವಿಶೇಷವಾಗಿ ಬಿರುಗಾಳಿಯು ಶುರುವಾಗಲಿರುವಾಗ ಇದನ್ನು ಮಾಡಬೇಕು. ತಾಪಮಾನವು ಒಮ್ಮೆಲೇ ತಣ್ಣಗಾಗುವಾಗ ಮತ್ತು ಗಾಳಿಯ ರಭಸವು ಹೆಚ್ಚಾಗುವಾಗ, ಅವರು ಹಡಗಿನ ಕಂಡಿಯನ್ನು ಟಾರ್‌ಪಾಲಿನ್‌ನಿಂದ ಮುಚ್ಚುವುದಕ್ಕಾಗಿ ಅಡ್ಡದಿಮ್ಮಿಯ ಮೇಲೆ ಮೊಳೆ ಬಡಿದು ಬಿಗಿಯುತ್ತಾರೆ ಮತ್ತು ಅತಿ ಕಷ್ಟಕರವಾದ ಪರಿಸ್ಥಿತಿಗಳಿಗಾಗಿ ಸಿದ್ಧರಾಗಿರುತ್ತಾರೆ. ಈ ರೀತಿಯಲ್ಲೇ, ಈ ದುಷ್ಟ ವ್ಯವಸ್ಥೆಯ ಅಂತ್ಯವು ಸಮೀಪಿಸುತ್ತಿರುವಾಗ, ನಾವು ಭಾರೀ ತೀವ್ರತೆಯ ಒತ್ತಡಗಳನ್ನು ಎದುರಿಸಲು ತಯಾರಿಯನ್ನು ನಡೆಸಬೇಕು. ಸಮಾಜದ ನೈತಿಕ ಬಟ್ಟೆಯ ದಾರಗಳು ಬಿಚ್ಚಿಹೋಗುತ್ತಾ ಇವೆ ಮತ್ತು ‘ದುಷ್ಟರೂ ವಂಚಕರೂ ಹೆಚ್ಚಾದ ಕೆಟ್ಟತನಕ್ಕೆ ಹೋಗುತ್ತಿದ್ದಾರೆ.’ (2 ತಿಮೊಥೆಯ 3:13) ನಾವಿಕರು ಕ್ರಮವಾಗಿ ಹವಾಮಾನ ಮುನ್ಸೂಚನೆಗಳಿಗೆ ಕಿವಿಗೊಡುವಂತೆಯೇ, ನಾವು ಸಹ ದೇವರ ಪ್ರೇರಿತ ವಾಕ್ಯದ ಪ್ರವಾದನಾತ್ಮಕ ಎಚ್ಚರಿಕೆಗಳಿಗೆ ಕಿವಿಗೊಡಬೇಕು.​—ಕೀರ್ತನೆ 19:​7-11.

ನಾವು ಆಲೋಚನಾ ಸಾಮರ್ಥ್ಯವನ್ನು ಬಳಸುವಾಗ, ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಅನ್ವಯಿಸಿಕೊಳ್ಳುತ್ತೇವೆ. (ಯೋಹಾನ 17:3) ನಾವು ಸಮಸ್ಯೆಗಳನ್ನು ನಿರೀಕ್ಷಿಸಬಹುದು ಮತ್ತು ಅವುಗಳನ್ನು ಹೇಗೆ ಜಯಿಸುವುದು ಎಂಬುದನ್ನು ನಿರ್ಧರಿಸಬಹುದು. ಈ ಕಾರಣದಿಂದ ನಾವು ಕ್ರೈಸ್ತ ಮಾರ್ಗಕ್ರಮದಿಂದ ವಿಚಲಿತರಾಗದಿರುವ ದೃಢಸಂಕಲ್ಪವನ್ನು ಮಾಡುವೆವು, ಮತ್ತು ಆತ್ಮಿಕ ಗುರಿಗಳನ್ನಿಟ್ಟುಕೊಂಡು, ಅವುಗಳನ್ನು ಬೆನ್ನಟ್ಟುವ ಮೂಲಕ ‘ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವನ್ನು’ ಹಾಕುವೆವು.​—1 ತಿಮೊಥೆಯ 6:18.

ನಾವು ವ್ಯಾವಹಾರಿಕ ಬುದ್ಧಿ ಮತ್ತು ಆಲೋಚನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ, ನಾವು “ಫಕ್ಕನೆ ಬರುವ ಅಪಾಯಕ್ಕಾಗಿ ಅಂಜುವ” ಅಗತ್ಯವಿರುವುದಿಲ್ಲ. (ಜ್ಞಾನೋಕ್ತಿ 3:​21, 25, 26) ಅದರ ಬದಲು ನಾವು ದೇವರ ಈ ವಾಗ್ದಾನದಿಂದ ಸಾಂತ್ವನವನ್ನು ಪಡೆಯಬಹುದು: “ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು [“ಆಲೋಚನಾ ಸಾಮರ್ಥ್ಯವು,” NW] ನಿನ್ನನ್ನು ಕಾಪಾಡುವದು.”​—ಜ್ಞಾನೋಕ್ತಿ 2:10, 11.

[ಪಾದಟಿಪ್ಪಣಿ]

^ ಪ್ಯಾರ. 19 ಮತ್ತಾಯ 5:​23, 24ರಲ್ಲಿರುವ ಸಲಹೆಗೆ ಹೊಂದಿಕೆಯಲ್ಲಿ, ಕ್ರೈಸ್ತರು ಶಾಂತಿಯನ್ನು ಪ್ರವರ್ಧಿಸಲು ಪ್ರಯತ್ನಿಸಬೇಕು. ಗಂಭೀರವಾದ ಪಾಪಗಳು ಒಳಗೂಡಿರುವಲ್ಲಿ, ಮತ್ತಾಯ 18:​15-17ರಲ್ಲಿ ತಿಳಿಸಲ್ಪಟ್ಟಿರುವಂತೆ ಅವರು ತಮ್ಮ ಸಹೋದರರನ್ನು ಸಂಪಾದಿಸಲು ಪ್ರಯತ್ನಿಸಬೇಕು. ಅಕ್ಟೋಬರ್‌ 15, 1999ರ ಕಾವಲಿನಬುರುಜು ಪತ್ರಿಕೆಯ 17-22ನೆಯ ಪುಟಗಳನ್ನು ನೋಡಿರಿ.

[ಪುಟ 23ರಲ್ಲಿರುವ ಚಿತ್ರ]

ಕ್ರಮವಾದ ಸಂವಾದವು ವಿವಾಹವನ್ನು ಕಟ್ಟುತ್ತದೆ