ನಿಮ್ಮ ಸಮಗ್ರತೆಯನ್ನು ನೀವು ಕಾಪಾಡಿಕೊಳ್ಳುವಿರೊ?
ನಿಮ್ಮ ಸಮಗ್ರತೆಯನ್ನು ನೀವು ಕಾಪಾಡಿಕೊಳ್ಳುವಿರೊ?
ನಿನ್ನೆ ಎಷ್ಟು ಗುಬ್ಬಿಗಳು ಸತ್ತವು? ಯಾರಿಗೂ ಗೊತ್ತಿಲ್ಲ. ಮತ್ತು ಜನರು ಅದರ ಬಗ್ಗೆ ಚಿಂತಿಸುವುದೂ ಇಲ್ಲ, ಏಕೆಂದರೆ ಅದೆಷ್ಟೊ ಪಕ್ಷಿಗಳಿವೆ. ಆದರೆ ಯೆಹೋವನು ಚಿಂತಿಸುತ್ತಾನೆ. ಕ್ಷುಲ್ಲಕವಾಗಿ ತೋರುವ ಈ ಪಕ್ಷಿಗಳ ಬಗ್ಗೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು.” ಅವನು ಕೂಡಿಸಿ ಹೇಳಿದ್ದು: “ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.”—ಮತ್ತಾಯ 10:29, 31.
ಯೆಹೋವನು ತಮ್ಮನ್ನು ಎಷ್ಟು ಅಮೂಲ್ಯರಾಗಿ ಪರಿಗಣಿಸುತ್ತಾನೆಂಬುದನ್ನು ಶಿಷ್ಯರು ಮುಂದೆ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಂಡರು. ಆ ಶಿಷ್ಯರಲ್ಲೊಬ್ಬನಾದ ಯೋಹಾನನು ಬರೆದುದು: “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ.” (1 ಯೋಹಾನ 4:9) ಯೆಹೋವನು ಪ್ರಾಯಶ್ಚಿತ್ತ ಯಜ್ಞವನ್ನು ಒದಗಿಸಿದ್ದು ಮಾತ್ರವಲ್ಲ, ತನ್ನ ಸೇವಕರಲ್ಲಿ ಒಬ್ಬೊಬ್ಬರಿಗೂ ಆತನು ಈ ಆಶ್ವಾಸನೆಯನ್ನು ಕೊಡುತ್ತಾನೆ: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.”—ಇಬ್ರಿಯ 13:5.
ಯೆಹೋವನಿಗೆ ತನ್ನ ಜನರ ಕಡೆಗಿರುವ ಪ್ರೀತಿಯು ಅಚಲವಾದದ್ದಾಗಿದೆ ಎಂಬುದು ಸ್ಪಷ್ಟ. ಆದರೆ, ‘ನಾವು ಯೆಹೋವನನ್ನು ಎಂದಿಗೂ ಬಿಟ್ಟುಹೋಗದಷ್ಟು ನಿಕಟವಾಗಿ ಆತನಿಗೆ ಅಂಟಿಕೊಂಡಿದ್ದೇವೋ?’ ಎಂಬ ಪ್ರಶ್ನೆ ಏಳುತ್ತದೆ.
ನಮ್ಮ ಸಮಗ್ರತೆಯನ್ನು ಮುರಿಯಲು ಸೈತಾನನ ಯತ್ನಗಳು
ಯೋಬನ ಸಮಗ್ರತೆಯ ಮಾರ್ಗಕ್ರಮದ ಕಡೆಗೆ ಯೆಹೋವನು ಸೈತಾನನ ಗಮನಸೆಳೆದಾಗ, ಸೈತಾನನು ಪ್ರತ್ಯುತ್ತರಿಸಿದ್ದು: “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?” (ಯೋಬ 1:9) ದೇವರ ಕಡೆಗೆ ಮನುಷ್ಯರು ತೋರಿಸುವ ನಿಷ್ಠೆಯು, ‘ಅವರಿಗೆ ಅದರಿಂದ ಸಿಗುವ ಲಾಭದ’ ಮೇಲೆ ಪೂರ್ಣವಾಗಿ ಅವಲಂಬಿಸಿದೆ ಎಂದು ಅವನು ಸೂಚ್ಯವಾಗಿ ಹೇಳಿದನು. ಈ ವಿಚಾರವು ಸತ್ಯವಾಗಿರುವಲ್ಲಿ, ಒಂದು ನೀಡಿಕೆಯು ಸಾಕಷ್ಟು ಆಕರ್ಷಕವಾಗಿರುವಲ್ಲಿ ಯಾವುದೇ ಕ್ರೈಸ್ತನ ಸಮಗ್ರತೆಯು ದುರ್ಬಲಗೊಳಿಸಲ್ಪಡಬಹುದಿತ್ತು.
ಯೋಬನ ವಿಷಯದಲ್ಲಾದರೊ, ಸೈತಾನನು ಆರಂಭದಲ್ಲಿ ವಾದಿಸಿದ್ದೇನೆಂದರೆ, ಅವನು ಅಮೂಲ್ಯವಾಗಿ ಪರಿಗಣಿಸುವುದೆಲ್ಲವೂ ಅವನ ಕೈತಪ್ಪಿ ಹೋದರೆ ದೇವರ ಕಡೆಗಿನ ಅವನ ನಿಷ್ಠೆಯು ಮಾಯವಾಗಿ ಹೋಗುವುದು. (ಯೋಬ 1:10, 11) ಈ ಹೀನಾಯವಾದ ಮಾತು ಸುಳ್ಳೆಂದು ರುಜುವಾದಾಗ, ಸೈತಾನನು ವಾದಿಸಿದ್ದು: “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.” (ಯೋಬ 2:4) ಸೈತಾನನ ಈ ಹೇಳಿಕೆಯು ಕೆಲವರ ವಿಷಯದಲ್ಲಿ ಸತ್ಯವಾಗಿರಬಹುದಾದರೂ, ಯೋಬನು ಮಾತ್ರ ತನ್ನ ಸಮಗ್ರತೆಯನ್ನು ಬಿಟ್ಟುಕೊಡಲು ನಿರಾಕರಿಸಿದನು. ಮತ್ತು ಐತಿಹಾಸಿಕ ದಾಖಲೆಯು ಇದನ್ನು ರುಜುಪಡಿಸುತ್ತದೆ. (ಯೋಬ 27:5; 42:10-17) ನಿಮಗೂ ಇದೇ ರೀತಿಯ ನಿಷ್ಠೆಯಿದೆಯೊ? ಇಲ್ಲವೆ ಸೈತಾನನು ನಿಮ್ಮ ಸಮಗ್ರತೆಯನ್ನು ಮುರಿಯುವಂತೆ ನೀವು ಅನುಮತಿಸುವಿರೊ? ಪ್ರತಿಯೊಬ್ಬ ಕ್ರೈಸ್ತ ವ್ಯಕ್ತಿಯನ್ನು ಒಳಗೂಡಿಸುವ ಕೆಲವು ಸತ್ಯಗಳನ್ನು ನಾವು ಈಗ ಪರಿಶೀಲಿಸುವಾಗ ನಿಮ್ಮ ಬಗ್ಗೆಯೇ ಯೋಚಿಸಿರಿ.
ನಿಜವಾದ ಕ್ರೈಸ್ತ ನಿಷ್ಠೆಯು ತುಂಬ ಪ್ರಬಲವಾಗಿರಬಲ್ಲದೆಂದು ಅಪೊಸ್ತಲ ಪೌಲನು ನಂಬಿದನು. ಅವನು ಬರೆದುದು: “ಮರಣವಾಗಲಿ ಜೀವವಾಗಲಿ . . . ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ . . . ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.” (ರೋಮಾಪುರ 8:38, 39) ಯೆಹೋವನಿಗಾಗಿರುವ ನಮ್ಮ ಪ್ರೀತಿಯು ಬಲವಾಗಿರುವಲ್ಲಿ, ನಮಗೂ ಅದೇ ರೀತಿಯ ದೃಢ ಮನವರಿಕೆ ಇರಬಲ್ಲದು. ಅಂಥ ಪ್ರೀತಿಯು ಮರಣವೂ ಜಯಿಸಲಾರದಂಥ ಅವಿನಾಶಕರ ಬಂಧವಾಗಿದೆ.
ದೇವರೊಂದಿಗೆ ನಮಗೆ ಅಂಥ ಸಂಬಂಧವಿರುವಲ್ಲಿ, ‘ಕೆಲವು ವರ್ಷಗಳ ನಂತರವೂ ನಾನು ಯೆಹೋವನನ್ನು ಸೇವಿಸುತ್ತಿರುವೆನೊ?’ ಎಂದು ನಾವು ಕೇಳದಿರುವೆವು. ಅಂಥ ಅನಿಶ್ಚಿತತೆಯು ದೇವರಿಗೆ ನಾವು ತೋರಿಸುವ ನಿಷ್ಠೆಯು, ನಮ್ಮ ಜೀವನದಲ್ಲಿ ನಮಗೆ ಏನಾಗಬಹುದೊ ಅದರ ಮೇಲೆ ಹೊಂದಿಕೊಂಡಿದೆ ಎಂಬುದನ್ನು ಸೂಚಿಸುವುದು. ಆದರೆ ನಿಜವಾದ ಸಮಗ್ರತೆಯಾದರೊ, ಯಾವುದೇ ಬಾಹ್ಯ ಪರಿಸ್ಥಿತಿಗಳಿಂದ ಬಾಧಿಸಲ್ಪಡುವುದಿಲ್ಲ. ನಾವು ಆಂತರಿಕವಾಗಿ ಯಾವ 2 ಕೊರಿಂಥ 4:16-18) ನಾವು ಯೆಹೋವನನ್ನು ಮನಸಾರೆ ಪ್ರೀತಿಸುತ್ತಿರುವಲ್ಲಿ, ನಾವು ಎಂದಿಗೂ ಆತನನ್ನು ನಿರಾಶೆಗೊಳಿಸೆವು.—ಮತ್ತಾಯ 22:37; 1 ಕೊರಿಂಥ 13:8.
ರೀತಿಯ ವ್ಯಕ್ತಿಯಾಗಿದ್ದೇವೊ ಅದರ ಮೇಲೆ ಅದು ಹೊಂದಿಕೊಂಡಿರುತ್ತದೆ. (ಆದರೆ ಸೈತಾನನು ನಮ್ಮ ಸಮಗ್ರತೆಯನ್ನು ಮುರಿಯಲು ಸತತವಾಗಿ ಪ್ರಯತ್ನಿಸುತ್ತಿದ್ದಾನೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅವನು ನಾವು ಶರೀರದಾಶೆಗಳಿಗೆ ಮಣಿಯುವಂತೆ ಮಾಡಬಹುದು, ಸಮಾನಸ್ಥರ ಒತ್ತಡಕ್ಕೆ ತಲೆಬಾಗುವಂತೆ ನಮ್ಮನ್ನು ಪ್ರಲೋಭಿಸಬಹುದು ಇಲ್ಲವೆ ಯಾವುದಾದರೂ ರೀತಿಯ ಸಂಕಷ್ಟವು ನಾವು ಸತ್ಯವನ್ನು ಬಿಟ್ಟುಹೋಗುವಂತೆ ಮಾಡಬಹುದು. ನಮ್ಮ ಸ್ವಂತ ಅಪರಿಪೂರ್ಣತೆಗಳು ಅವನ ಕೆಲಸವನ್ನು ಸುಲಭಗೊಳಿಸುತ್ತವಾದರೂ, ಈ ಆಕ್ರಮಣದಲ್ಲಿ, ದೇವರಿಂದ ದೂರಸರಿದಿರುವ ಈ ಲೋಕವು ಸೈತಾನನ ಪ್ರಮುಖ ಜೊತೆಯಾಗಿದೆ. (ರೋಮಾಪುರ 7:19, 20; 1 ಯೋಹಾನ 2:16) ಹಾಗಿದ್ದರೂ ಈ ಕದನದಲ್ಲಿ ನಮ್ಮ ಬಳಿ ಹಲವಾರು ಅನುಕೂಲತೆಗಳಿವೆ. ಮತ್ತು ಇವುಗಳಲ್ಲಿ ಅಗ್ರಗಣ್ಯವಾದದ್ದೇನೆಂದರೆ, ನಾವು ಸೈತಾನನ ಯೋಜನೆಗಳ ಬಗ್ಗೆ ಅರಿಯದವರಲ್ಲ ಎಂಬ ವಾಸ್ತವಾಂಶವೇ.—2 ಕೊರಿಂಥ 2:11, ಪರಿಶುದ್ಧ ಬೈಬಲ್.
ಸೈತಾನನ ಯೋಜನೆಗಳು ಯಾವುವು? ಎಫೆಸದವರಿಗೆ ಪೌಲನು ಬರೆದ ಪತ್ರದಲ್ಲಿ ಅವುಗಳನ್ನು ‘ತಂತ್ರೋಪಾಯಗಳು’ ಇಲ್ಲವೇ ‘ಕುಟಿಲ ಕೃತ್ಯಗಳು’ * ಎಂದು ವರ್ಣಿಸಿದನು. (ಎಫೆಸ 6:11) ನಮ್ಮ ಸಮಗ್ರತೆಯನ್ನು ಮುರಿಯಲಿಕ್ಕಾಗಿ ಸೈತಾನನು ನಮ್ಮ ಮಾರ್ಗದಲ್ಲಿ ಕುತಂತ್ರದ ಉಪಾಯಗಳನ್ನಿರಿಸುತ್ತಾನೆ. ಸಂತೋಷಕರವಾಗಿ ಈ ಕುಟಿಲ ಕೃತ್ಯಗಳನ್ನು ನಾವು ಗುರುತಿಸಬಲ್ಲೆವು, ಯಾಕೆಂದರೆ ಪಿಶಾಚನ ಕಾರ್ಯವಿಧಾನಗಳು ದೇವರ ವಾಕ್ಯದಲ್ಲಿ ನಮಗೋಸ್ಕರ ದಾಖಲಿಸಿಡಲ್ಪಟ್ಟಿವೆ. ಯೇಸು ಮತ್ತು ಯೋಬರ ಸಮಗ್ರತೆಯನ್ನು ನಾಶಗೊಳಿಸಲು ಸೈತಾನನು ಮಾಡಿದ ಯತ್ನಗಳು, ಅವನು ನಮ್ಮ ಕ್ರೈಸ್ತ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸುವ ಕೆಲವೊಂದು ವಿಧಗಳನ್ನು ಉದಾಹರಿಸುತ್ತವೆ.
ಯೇಸುವಿನ ಸಮಗ್ರತೆಯು ಮುರಿಯಲಸಾಧ್ಯವಾದದ್ದಾಗಿತ್ತು
ಯೇಸುವಿನ ಶುಶ್ರೂಷೆಯ ಆರಂಭದಲ್ಲಿ, ಕಲ್ಲುಗಳನ್ನು ರೊಟ್ಟಿಯಾಗಿ ಬದಲಾಯಿಸುವ ಸವಾಲನ್ನೊಡ್ಡುವ ಮೂಲಕ ದೇವಪುತ್ರನನ್ನು ಪ್ರಲೋಭಿಸುವಷ್ಟು ಸೊಕ್ಕು ಸೈತಾನನಿಗಿತ್ತು. ಎಂಥ ಕುಟಿಲತೆ! ಏಕೆಂದರೆ ಯೇಸು 40 ದಿನಗಳಿಂದ ಏನನ್ನೂ ತಿಂದಿರಲಿಲ್ಲ, ಆದುದರಿಂದ ಅವನು ಖಂಡಿತವಾಗಿಯೂ ತುಂಬ ಹಸಿದಿದ್ದನು. (ಲೂಕ 4:2, 3) ಯೆಹೋವನ ಚಿತ್ತಕ್ಕೆ ವಿರುದ್ಧವಾದ ರೀತಿಯಲ್ಲಿ ತನ್ನ ಶಾರೀರಿಕ ಆಸೆಯನ್ನು ಆ ಕೂಡಲೆ ತೀರಿಸಿಕೊಳ್ಳುವಂತೆ ಸೈತಾನನು ಯೇಸುವಿಗೆ ಸಲಹೆಯನ್ನು ಕೊಟ್ಟನು. ತದ್ರೀತಿಯಲ್ಲಿ ಇಂದು, ಲೋಕದಲ್ಲಿನ ಪ್ರಾಪಗ್ಯಾಂಡವು, ಫಲಿತಾಂಶಗಳು ಏನಾಗಿವೆ ಎಂಬುದರ ಬಗ್ಗೆ ಕಿಂಚಿತ್ತೂ ಆಲೋಚಿಸದೆ ಆಸೆಗಳನ್ನು ತತ್‌ಕ್ಷಣವೇ ತಣಿಸುವುದನ್ನು ಉತ್ತೇಜಿಸುತ್ತದೆ. ‘ಈಗಿಂದೀಗಲೇ ಅದು ನಿಮಗೆ ಸಿಗಬೇಕು’ ಇಲ್ಲವೇ ‘ಏನು ಬೇಕಾದರೂ ಮಾಡಿ!’ ಎಂಬುದೇ ಈಗಿನ ಸಂದೇಶವಾಗಿದೆ.
ಒಂದುವೇಳೆ ಯೇಸು ಫಲಿತಾಂಶಗಳು ಏನಾಗಿರಬಹುದೆಂಬುದನ್ನು ಯೋಚಿಸದೇ ತನ್ನ ಹಸಿವನ್ನು ಇಂಗಿಸುತ್ತಿದ್ದರೆ, ಅವನು ಸ್ವತಃ ತನ್ನ ಸಮಗ್ರತೆಯನ್ನು ರಾಜಿಮಾಡಿಕೊಳ್ಳುವಂತೆ ಮಾಡುವುದರಲ್ಲಿ ಸೈತಾನನು ಸಫಲನಾಗುತ್ತಿದ್ದನು. ಯೇಸು ವಿಷಯಗಳನ್ನು ಆತ್ಮಿಕ ದೃಷ್ಟಿಕೋನದಿಂದ ನೋಡಿ, ದೃಢತೆಯಿಂದ ಹೀಗೆ ಪ್ರತಿಕ್ರಿಯಿಸಿದನು: “ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವದಿಲ್ಲ ಎಂದು ಬರೆದದೆ.”—ಲೂಕ 4:4; ಮತ್ತಾಯ 4:4.
ಆಮೇಲೆ ಸೈತಾನನು ತನ್ನ ತಂತ್ರಗಳನ್ನು ಬದಲಾಯಿಸಿದನು. ಯೇಸು ಎಲ್ಲಿಂದ ಉಲ್ಲೇಖಿಸಿ ಮಾತಾಡುತ್ತಿದ್ದನೊ ಆ ಶಾಸ್ತ್ರವಚನಗಳನ್ನೇ ಪಿಶಾಚನು ತಪ್ಪಾಗಿ ಅನ್ವಯಿಸುತ್ತಾ, ಯೇಸು ದೇವಾಲಯದ ಶಿಖರದ ಮೇಲಿಂದ ಧುಮುಕುವಂತೆ ಅವನನ್ನು ಉತ್ತೇಜಿಸಿದನು. ‘ಒಬ್ಬ ದೇವದೂತನು ನಿನ್ನನ್ನು ಕಾಯುವನು’ ಎಂದು ಸೈತಾನನು ವಾದಿಸಿದನು. ಯೇಸುವಿಗಾದರೊ, ತನ್ನ ಕಡೆಗೆ ಗಮನವನ್ನು ಸೆಳೆಯುವ ಒಂದೇ ಕಾರಣಕ್ಕಾಗಿ ತನ್ನ ತಂದೆಯಿಂದ ಅದ್ಭುತಕರ ಸಂರಕ್ಷಣೆಯನ್ನು ಬೇಡಿಕೊಳ್ಳಲು ಸ್ವಲ್ಪವೂ ಮನಸ್ಸಿರಲಿಲ್ಲ. ಆದುದರಿಂದ, ‘ನಿನ್ನ ದೇವರಾಗಿರುವ ಯೆಹೋವನನ್ನು ಪರೀಕ್ಷಿಸಬಾರದು’ ಅಂದನು ಯೇಸು.—ಮತ್ತಾಯ 4:5-7; ಲೂಕ 4:9-12.
ಸೈತಾನನು ಉಪಯೋಗಿಸಿದ ಕೊನೆಯ ಅಸ್ತ್ರವು ಹೆಚ್ಚು ನೇರವಾಗಿತ್ತು. ಅವನು ಯೇಸುವಿನೊಂದಿಗೆ ಕೊಡು-ಕೊಳ್ಳು ವ್ಯವಹಾರವನ್ನು ಕುದುರಿಸಲು ಪ್ರಯತ್ನಿಸಿದನು. ಯೇಸುವಿನ ಆರಾಧನೆಯ ಕೇವಲ ಒಂದು ಸಾಷ್ಟಾಂಗ ನಮಸ್ಕಾರಕ್ಕೆ ಬದಲಾಗಿ ಸೈತಾನನು ಅವನಿಗೆ ಇಡೀ ಲೋಕವನ್ನೂ ಅದರ ಮಹಿಮೆಯನ್ನೂ ಕೊಡುವ ನೀಡಿಕೆಯನ್ನು ಮತ್ತಾಯ 4:8-11; ಲೂಕ 4:5-8.
ಮುಂದಿಟ್ಟನು. ಅದು ಕಾರ್ಯತಃ ಸೈತಾನನು ನೀಡಶಕ್ತವಾಗಿದ್ದ ಸರ್ವಸ್ವವೂ ಆಗಿತ್ತು. ಆದರೆ ಯೇಸು ತನ್ನ ತಂದೆಯ ಮುಖ್ಯ ಶತ್ರುವಿನ ಮುಂದೆ ಹೇಗೆ ತಾನೇ ಸಾಷ್ಟಾಂಗ ನಮಸ್ಕಾರವನ್ನು ಮಾಡಾನು? ಅದು ಅವನು ಯೋಚಿಸಲೂ ಅಸಾಧ್ಯವಾದ ಸಂಗತಿಯಾಗಿತ್ತು! ‘ನಿನ್ನ ದೇವರಾಗಿರುವ ಯೆಹೋವನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು’ ಎಂದು ಯೇಸು ಉತ್ತರಿಸಿದನು.—ಈ ಮೂರೂ ಪ್ರಯತ್ನಗಳು ನೆಲಕಚ್ಚಿದಾಗ, ಸೈತಾನನು ‘ಯೇಸುವನ್ನು ತಕ್ಕಕಾಲ ಬರುವ ತನಕ ಬಿಟ್ಟುಹೋದನು.’ (ಲೂಕ 4:13, ಪರಿಶುದ್ಧ ಬೈಬಲ್) ಇದು, ಯೇಸುವಿನ ಸಮಗ್ರತೆಯನ್ನು ಪರೀಕ್ಷೆಗೊಡ್ಡಲು ಸೈತಾನನು ಯಾವಾಗಲೂ ಒಂದು ಅವಕಾಶಕ್ಕಾಗಿ ಹುಡುಕುತ್ತಾ ಇದ್ದನೆಂಬುದನ್ನು ಸೂಚಿಸುತ್ತದೆ. ಸುಮಾರು ಎರಡೂವರೆ ವರ್ಷಗಳ ನಂತರ, ಸಮೀಪಿಸುತ್ತಿರುವ ತನ್ನ ಮರಣದ ವಿಷಯದಲ್ಲಿ ಯೇಸು ತನ್ನ ಶಿಷ್ಯರನ್ನು ಮಾನಸಿಕವಾಗಿ ಸಿದ್ಧಗೊಳಿಸುತ್ತಿದ್ದಾಗ, ಆ ತಕ್ಕಕಾಲವು ಬಂತು. ಆಗ ಅಪೊಸ್ತಲ ಪೇತ್ರನು ಹೇಳಿದ್ದು: “ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು.”—ಮತ್ತಾಯ 16:21, 22.
ಒಳ್ಳೇ ಉದ್ದೇಶಗಳೊಂದಿಗೆ ಕೊಡಲ್ಪಟ್ಟರೂ ತಪ್ಪಾಗಿದ್ದ ಈ ಸಲಹೆಯು, ಅದೂ ತನ್ನ ಸ್ವಂತ ಶಿಷ್ಯರಲ್ಲೊಬ್ಬನಿಂದ ಕೊಡಲ್ಪಟ್ಟದ್ದು ಯೇಸುವಿಗೆ ಹಿಡಿಸಿತೊ? ಆ ಮಾತುಗಳು ಯೆಹೋವನ ಇಷ್ಟಗಳನ್ನಲ್ಲ ಬದಲಾಗಿ ಸೈತಾನನ ಇಷ್ಟಗಳನ್ನು ಪ್ರತಿಫಲಿಸುತ್ತಿದ್ದವೆಂಬುದನ್ನು ಯೇಸು ಆ ಕ್ಷಣದಲ್ಲೇ ಗುರುತಿಸಿದನು. ದೃಢತೆಯಿಂದ ಯೇಸು, “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ” ಎಂದು ಪ್ರತ್ಯುತ್ತರಿಸಿದನು.—ಮತ್ತಾಯ 16:23.
ಯೆಹೋವನಿಗಾಗಿ ಯೇಸುವಿಗಿದ್ದ ಅಮರವಾದ ಪ್ರೀತಿಯಿಂದಾಗಿ, ಸೈತಾನನು ಅವನ ಸಮಗ್ರತೆಯನ್ನು ಮುರಿಯಲು ಸಾಧ್ಯವಿರಲಿಲ್ಲ. ಪಿಶಾಚನು ಏನನ್ನೇ ನೀಡಿದರೂ, ಯಾವುದೇ ಪರೀಕ್ಷೆಯನ್ನು ತಂದೊಡ್ಡಿದರೂ, ಅದು ಯೇಸುವಿಗೆ ತನ್ನ ಸ್ವರ್ಗೀಯ ತಂದೆಯ ಕಡೆಗಿದ್ದ ನಿಷ್ಠೆಯನ್ನು ದುರ್ಬಲಗೊಳಿಸಲು ಸಾಧ್ಯವಿರಲಿಲ್ಲ. ನಮ್ಮ ಪರಿಸ್ಥಿತಿಗಳು ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳುವುದನ್ನು ಕಷ್ಟಕರವನ್ನಾಗಿ ಮಾಡುವಾಗ, ನಮಗೂ ತದ್ರೀತಿಯ ದೃಢನಿರ್ಧಾರವಿರುವುದೊ? ಯೋಬನ ಮಾದರಿಯು, ನಾವು ಎದುರಿಸಬಹುದಾದ ದುಸ್ಸಾಧ್ಯ ಕಷ್ಟಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುವುದು.
ಕಷ್ಟಕಾಲದಲ್ಲೂ ನಿಷ್ಠೆ
ಯೋಬನು ಅನುಭವದಿಂದ ತಿಳಿದುಕೊಂಡಂತೆ, ಕಷ್ಟಗಳು ನಮ್ಮ ಮೇಲೆ ಅನಿರೀಕ್ಷಿತವಾಗಿ ಬಂದೆರಗಬಲ್ಲವು. ಅವನು ಹತ್ತು ಮಕ್ಕಳಿದ್ದು, ಒಳ್ಳೆಯ ಆತ್ಮಿಕ ನಿಯತಕ್ರಮವಿದ್ದ ಒಬ್ಬ ಸುಖೀ ವಿವಾಹಿತ ಪುರುಷನಾಗಿದ್ದನು. (ಯೋಬ 1:5) ಆದರೆ ದೇವರ ಕಡೆಗಿನ ಅವನ ಸಮಗ್ರತೆಯು ಸ್ವರ್ಗೀಯ ಆಸ್ಥಾನದಲ್ಲಿ ವಾಗ್ವಾದಕ್ಕೊಳಗಾಗಿತ್ತು ಮತ್ತು ಸೈತಾನನು, ಹೇಗಾದರೂ ಮಾಡಿ ಅವನ ಸಮಗ್ರತೆಯನ್ನು ಮುರಿಯುವ ಪಣತೊಟ್ಟಿದ್ದನು ಎಂಬುದು ಯೋಬನಿಗೆ ತಿಳಿದಿರಲಿಲ್ಲ.
ಸ್ವಲ್ಪ ಸಮಯದೊಳಗೇ ಯೋಬನು ತನ್ನ ಪ್ರಾಪಂಚಿಕ ಐಶ್ವರ್ಯವನ್ನು ಕಳೆದುಕೊಂಡನು. (ಯೋಬ 1:14-17) ಹಾಗಿದ್ದರೂ ಯೋಬನ ಸಮಗ್ರತೆಯು ಪರೀಕ್ಷೆಯನ್ನು ಎದುರಿಸಿ ನಿಂತಿತು, ಯಾಕೆಂದರೆ ಅವನು ಎಂದೂ ಹಣದ ಮೇಲೆ ತನ್ನ ಭರವಸೆಯನ್ನಿಟ್ಟಿರಲಿಲ್ಲ. ತಾನು ಧನಿಕನಾಗಿದ್ದ ಸಮಯವನ್ನು ಜ್ಞಾಪಿಸಿಕೊಳ್ಳುತ್ತಾ ಯೋಬನು ತಿಳಿಸಿದ್ದು: “ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು . . . ನನ್ನ ಆಸ್ತಿ ದೊಡ್ಡದೆಂದೂ . . . ಹೆಚ್ಚಳಪಟ್ಟಿದ್ದರೆ ಇದು . . . ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.”—ಯೋಬ 31:24, 25, 28.
ಇಂದು ಕೂಡ, ದಿನಬೆಳಗಾಗುವುದರೊಳಗೆ ನಾವು ನಮ್ಮ ಬಳಿ ಇರುವಂಥ ಕಾರ್ಯತಃ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ. ಯೆಹೋವನ ಸಾಕ್ಷಿಯಾಗಿರುವ ಒಬ್ಬ ವ್ಯಾಪಾರಿಯನ್ನು ಬಹುದೊಡ್ಡ ಮೊತ್ತದ ಹಣದಲ್ಲಿ ವಂಚಿಸಲಾಯಿತು. ಮತ್ತು ಅವನು ಬಹುಮಟ್ಟಿಗೆ ದಿವಾಳಿಯಾದನು. ಅವನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳುವುದು: “ನನಗೆ ಹೃದಯಾಘಾತ ಆಗುವುದೊಂದು ಉಳಿದಿತ್ತು ಅಷ್ಟೆ. ದೇವರೊಂದಿಗೆ ನನಗೆ ಒಳ್ಳೇ ಸಂಬಂಧವು ಇಲ್ಲದಿರುತ್ತಿದ್ದಲ್ಲಿ, ಅದೂ ಸಂಭವಿಸುತ್ತಿತ್ತೆಂದು ನೆನಸುತ್ತೇನೆ. ಹಾಗಿದ್ದರೂ ಈ ಅನುಭವವು, ಆತ್ಮಿಕ ಮೌಲ್ಯಗಳು ನನ್ನ ಬದುಕಿನಲ್ಲಿ ಪ್ರಥಮ ಸ್ಥಾನದಲ್ಲಿಲ್ಲ ಎಂಬ ಸತ್ಯವನ್ನು ನನಗೆ ಮನದಟ್ಟು ಮಾಡಿಸಿತು. ಹಣವನ್ನು ಸಂಪಾದಿಸುವುದೇ ನನಗೆ ಬೇರೆಲ್ಲದ್ದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ವಿಷಯವಾಗಿಬಿಟ್ಟಿತ್ತು.” ಅಂದಿನಿಂದ ಹಿಡಿದು, ಈ ಸಾಕ್ಷಿಯು ತನ್ನ ವ್ಯಾಪಾರದ ಚಟುವಟಿಕೆಯನ್ನು ಕನಿಷ್ಠಮಟ್ಟಕ್ಕೆ ಇಳಿಸಿದ್ದಾನೆ, ಮತ್ತು ಒಂದು ತಿಂಗಳಿಗೆ ಕ್ರೈಸ್ತ ಶುಶ್ರೂಷೆಯಲ್ಲಿ 50 ಅಥವಾ ಅದಕ್ಕಿಂತಲೂ ಹೆಚ್ಚಿನ ತಾಸುಗಳನ್ನು ಕಳೆಯುತ್ತಾ, ಕ್ರಮವಾಗಿ ಒಬ್ಬ ಆಕ್ಸಿಲಿಯರಿ ಪಯನೀಯರನೋಪಾದಿ ಸೇವೆಸಲ್ಲಿಸುತ್ತಿದ್ದಾನೆ. ಆದರೆ ಬೇರೆ ಸಮಸ್ಯೆಗಳು ಒಬ್ಬನ ಸ್ವತ್ತುಗಳ ನಷ್ಟಕ್ಕಿಂತಲೂ ಹೆಚ್ಚು ಧ್ವಂಸಕಾರಿಯಾಗಿರಬಲ್ಲವು.
ಯೋಬನು ತನ್ನ ಐಶ್ವರ್ಯಗಳ ನಷ್ಟದ ಕುರಿತಾದ ಸುದ್ದಿಯನ್ನು ಅರಗಿಸಿಕೊಳ್ಳುವಷ್ಟರಲ್ಲಿ, ಅವನಿಗೆ ಇನ್ನೊಂದು ಸುದ್ದಿ ಬಂತು. ಅವನ ಹತ್ತು ಮಂದಿ ಮಕ್ಕಳು ಸತ್ತುಹೋಗಿದ್ದರು. ಆದರೂ ಅವನ ಬಾಯಲ್ಲಿದ್ದ ಒಂದೇ ಮಾತು, “ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಎಂಬುದಾಗಿತ್ತು. (ಯೋಬ 1:18-21) ನಮ್ಮ ಕುಟುಂಬದ ಅನೇಕ ಸದಸ್ಯರನ್ನು ನಾವು ಮರಣದಲ್ಲಿ ಕಳೆದುಕೊಂಡರೂ ನಮ್ಮ ಸಮಗ್ರತೆಯನ್ನು ನಾವು ಕಾಪಾಡಿಕೊಳ್ಳುವೆವೊ? ಸ್ಪೆಯಿನ್‌ನಲ್ಲಿ ಒಬ್ಬ ಕ್ರೈಸ್ತ ಮೇಲ್ವಿಚಾರಕನಾಗಿರುವ ಫ್ರಾನ್ಸಿಸ್ಕೊ ಎಂಬವನು, ಒಂದು ಭೀಕರ ಬಸ್ ಅಪಘಾತದಲ್ಲಿ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡನು. ಯೆಹೋವನಿಗೆ ಇನ್ನೂ ಹತ್ತಿರವಾಗುವ ಮೂಲಕ ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ತನ್ನ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಅವನು ಸಾಂತ್ವನವನ್ನು ಕಂಡುಕೊಂಡನು.
ತನ್ನ ಮಕ್ಕಳ ಧಕ್ಕೆಬರಿಸುವಂಥ ನಷ್ಟದ ನಂತರವೂ ಯೋಬನ ಪರೀಕ್ಷೆಯು ನಿಂತುಹೋಗಲಿಲ್ಲ. ಸೈತಾನನು ಅವನ ಮೇಲೆ ಒಂದು ಅಸಹ್ಯವಾದ, ನೋವುಭರಿತ ರೋಗವನ್ನು ಬರಮಾಡಿದನು. ಆ ಕ್ಷಣದಲ್ಲಿ ಯೋಬನಿಗೆ ತನ್ನ ಹೆಂಡತಿಯಿಂದ ತಪ್ಪಾದ ಸಲಹೆಯು ಸಿಕ್ಕಿತು. ಯೋಬ 2:9, 10) ಅವನ ಸಮಗ್ರತೆಯು ತನ್ನ ಕುಟುಂಬದಿಂದ ಸಿಗುವ ಬೆಂಬಲದ ಮೇಲೆ ಅವಲಂಬಿಸಿರಲಿಲ್ಲ, ಬದಲಾಗಿ ಯೆಹೋವನೊಂದಿಗೆ ಅವನಿಗಿದ್ದ ವೈಯಕ್ತಿಕ ಸಂಬಂಧದ ಮೇಲೆ ಹೊಂದಿಕೊಂಡಿತ್ತು.
“ದೇವರನ್ನು ದೂಷಿಸಿ ಸಾಯಿ” ಎಂದು ಅವಳು ಅವನನ್ನು ಪ್ರೇರೇಪಿಸಿದಳು. ಯೋಬನು ಅವಳ ಸಲಹೆಯನ್ನು ಅಲಕ್ಷಿಸಿದನು ಮತ್ತು ‘ಪಾಪದ ಒಂದು ಮಾತೂ ಅವನ ತುಟಿಗಳಿಂದ ಹೊರಡಲಿಲ್ಲ.’ (ಫ್ಲೋರಾ ಎಂಬವಳ ಗಂಡ ಮತ್ತು ಹಿರಿಯ ಮಗನು, ಹತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯದ ಹಿಂದೆ ಕ್ರೈಸ್ತ ಮಾರ್ಗವನ್ನು ಪರಿತ್ಯಾಗಮಾಡಿದ್ದರು. ಯೋಬನಿಗೆ ಯಾವ ರೀತಿಯ ಭಾವನೆಗಳಿದ್ದಿರಬಹುದೆಂಬುದನ್ನು ಅವಳು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲಳು. “ಒಮ್ಮಿಂದೊಮ್ಮೆಲೇ ನಿಮ್ಮ ಕುಟುಂಬದ ಬೆಂಬಲವು ಇಲ್ಲವಾಗುವಾಗ, ಮನಸ್ಸಿಗೆ ತೀವ್ರವಾದ ನೋವಾಗಬಲ್ಲದು” ಎಂದು ಅವಳು ಒಪ್ಪಿಕೊಳ್ಳುತ್ತಾಳೆ. “ಆದರೆ ಯೆಹೋವನ ಸಂಸ್ಥೆಯ ಹೊರತು ಬೇರೆಲ್ಲೂ ನನಗೆ ಸಂತೋಷ ಸಿಗಲಾರದೆಂದು ನನಗೆ ತಿಳಿದಿತ್ತು. ಆದುದರಿಂದ ನಾನು ದೃಢಳಾಗಿ ನಿಂತು, ಯೆಹೋವನನ್ನು ಪ್ರಥಮ ಸ್ಥಾನದಲ್ಲಿಟ್ಟೆ. ಆದರೆ ಅದೇ ಸಮಯದಲ್ಲಿ ನಾನೊಬ್ಬ ಒಳ್ಳೇ ಪತ್ನಿ ಹಾಗೂ ತಾಯಿಯಾಗಿ ಮುಂದುವರಿಯಲು ಪ್ರಯತ್ನಿಸಿದೆ. ನಾನು ಯಾವಾಗಲೂ ಪ್ರಾರ್ಥಿಸುತ್ತಾ ಇದ್ದೆ ಮತ್ತು ಯೆಹೋವನು ನನಗೆ ಬಲವನ್ನು ಕೊಟ್ಟನು. ನಾನೀಗ ಸಂತೋಷಿತಳಾಗಿದ್ದೇನೆ, ಏಕೆಂದರೆ ನನ್ನ ಗಂಡನ ವಿರೋಧದ ಎದುರಿನಲ್ಲೂ ನಾನು ಯೆಹೋವನ ಮೇಲೆ ಸಂಪೂರ್ಣವಾಗಿ ಆತುಕೊಳ್ಳಲು ಕಲಿತಿದ್ದೇನೆ.”
ಯೋಬನ ಸಮಗ್ರತೆಯನ್ನು ಮುರಿಯಲು ಸೈತಾನನು ಬಳಸಿದ ಮುಂದಿನ ಅಸ್ತ್ರವು, ಅವನ ಮೂವರು ಸಂಗಡಿಗರನ್ನು ಒಳಗೊಂಡಿತ್ತು. (ಯೋಬ 2:11-13) ಅವರು ಅವನನ್ನು ಟೀಕಿಸಲಾರಂಭಿಸಿದಾಗ ಅವನಿಗೆಷ್ಟು ಮನೋಯಾತನೆಯಾಗಿದ್ದಿರಬೇಕು. ಅವನು ಅವರ ವಾದಸರಣಿಗಳನ್ನು ಒಪ್ಪಿಕೊಳ್ಳುತ್ತಿದ್ದರೆ, ಯೆಹೋವ ದೇವರಲ್ಲಿನ ತನ್ನ ಭರವಸೆಯನ್ನು ಅವನು ಕಳೆದುಕೊಳ್ಳುತ್ತಿದ್ದನು. ನಿರುತ್ತೇಜಿಸುವಂಥ ಅವರ ಸಲಹೆಯು ಅವನನ್ನು ಎದೆಗುಂದಿಸಿ, ಅವನ ಸಮಗ್ರತೆಯನ್ನು ಮುರಿಯಸಾಧ್ಯವಿತ್ತು. ಮತ್ತು ಹೀಗೆ ಸೈತಾನನ ಉಪಾಯವು ಯಶಸ್ವಿಯಾಗುತ್ತಿತ್ತು.
ಅದಕ್ಕೆ ಬದಲಾಗಿ ಯೋಬನು ಪಟ್ಟುಹಿಡಿದು ಹೇಳಿದ್ದು: “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು [“ಸಮಗ್ರತೆಯನ್ನು,” NW] ಕಳಕೊಳ್ಳೆನು.” (ಯೋಬ 27:5) ‘ನೀವು ನನ್ನ ಸಮಗ್ರತೆಯನ್ನು ಮುರಿಯಲು ಬಿಡುವುದಿಲ್ಲ’ ಎಂದವನು ಹೇಳಲಿಲ್ಲ. ಏಕೆಂದರೆ ತನ್ನ ಸಮಗ್ರತೆಯು ಸ್ವತಃ ತನ್ನ ಮೇಲೆ ಮತ್ತು ಯೆಹೋವನಿಗಾಗಿ ತನಗಿದ್ದ ಪ್ರೀತಿಯ ಮೇಲೆ ಹೊಂದಿಕೊಂಡಿತ್ತೆಂಬುದು ಯೋಬನಿಗೆ ತಿಳಿದಿತ್ತು.
ಹೊಸ ಬೇಟೆಗಾಗಿ ಹಳೆಯ ತಂತ್ರ
ಸೈತಾನನು ಈಗಲೂ, ಸ್ನೇಹಿತರು ಮತ್ತು ಜೊತೆ ವಿಶ್ವಾಸಿಗಳಿಂದ ಬರುವ ತಪ್ಪಾದ ಸಲಹೆ ಇಲ್ಲವೆ ವಿಚಾರಹೀನ ಮಾತುಗಳನ್ನು ಬಳಸುತ್ತಾನೆ. ಸಭೆಯೊಳಗಿಂದ ಬರುವ ನಿರುತ್ತೇಜನವು, ಸಭೆಯ ಹೊರಗಿನಿಂದ ಬರುವ ಹಿಂಸೆಗಿಂತಲೂ ಹೆಚ್ಚು ಸುಲಭವಾಗಿ ನಮ್ಮ ಆತ್ಮಭರವಸೆಯನ್ನು ಶಿಥಿಲಗೊಳಿಸಬಹುದು. ಹಿಂದೆ ಒಬ್ಬ ಸೈನಿಕನೋಪಾದಿ ಯುದ್ಧವನ್ನು ನೋಡಿದ್ದಂಥ ಒಬ್ಬ ಕ್ರೈಸ್ತ ಹಿರಿಯನು, ಆ ಹೋರಾಟ ಹಾಗೂ ಕೆಲವು ಜೊತೆ ಕ್ರೈಸ್ತರ ವಿಚಾರಹೀನ ಮಾತುಗಳು ಮತ್ತು ಕೃತ್ಯಗಳಿಂದಾಗಿ ತಾನು ಅನುಭವಿಸಿದಂಥ ನೋವಿನ ನಡುವೆಯಿದ್ದ ವ್ಯತ್ಯಾಸವನ್ನು ತೋರಿಸಿದನು. ಜೊತೆ ಕ್ರೈಸ್ತರ ವಿಚಾರಹೀನ ಮಾತುಗಳು ಮತ್ತು ಕೃತ್ಯಗಳ ಕುರಿತಾಗಿ ಅವನಂದದ್ದು: “ನಾನು ಹಿಂದೆಂದೂ ಅನುಭವಿಸಿರದಂಥ ಅತಿ ಕಠಿನವಾದ ನೋವು ಅದಾಗಿತ್ತು.”
ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ, ಜೊತೆ ವಿಶ್ವಾಸಿಗಳ ಅಪರಿಪೂರ್ಣತೆಗಳಿಂದ ನಾವು ಎಷ್ಟು ವಿಚಲಿತರಾಗಬಹುದೆಂದರೆ, ನಾವು ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಮಾತಾಡುವುದನ್ನೇ ನಿಲ್ಲಿಸಬಹುದು ಇಲ್ಲವೆ ಕ್ರೈಸ್ತ ಕೂಟಗಳಿಗೆ ತಪ್ಪಿಸಿಕೊಳ್ಳಲೂ ಆರಂಭಿಸಬಹುದು. ನಮ್ಮ ನೋವಿನ ಅನಿಸಿಕೆಗಳನ್ನು ಶಮನಗೊಳಿಸುವುದೇ ಅತಿ ಪ್ರಾಮುಖ್ಯವಾದ ವಿಷಯವಾಗಿರುವಂತೆ ತೋರಬಹುದು. ಆದರೆ ದೂರದೃಷ್ಟಿಯಿಲ್ಲದ ಅಂಥ ದೃಷ್ಟಿಕೋನವನ್ನು ಇಟ್ಟುಕೊಂಡು, ನಮ್ಮ ಅತ್ಯಮೂಲ್ಯವಾದ ಸ್ವತ್ತು ಅಂದರೆ ಯೆಹೋವನೊಂದಿಗಿನ ನಮ್ಮ ಸಂಬಂಧವು, ಬೇರೆಯವರ ಮಾತುಗಳು ಅಥವಾ ಕೃತ್ಯಗಳಿಂದ ದುರ್ಬಲಗೊಳಿಸಲ್ಪಡುವಂತೆ ಬಿಡುವುದು ಎಷ್ಟು ವಿಷಾದದ ಸಂಗತಿಯಾಗಿದೆ! ಹಾಗಾಗುವಂತೆ ನಾವು ಬಿಡುವಲ್ಲಿ, ಸೈತಾನನ ಒಂದು ತೀರ ಹಳೆಯ ತಂತ್ರಕ್ಕೆ ನಾವು ಬಲಿಬೀಳುವೆವು.
ಕ್ರೈಸ್ತ ಸಭೆಯಲ್ಲಿ ನಾವು ಉಚ್ಚ ಮಟ್ಟಗಳಿರುವುದನ್ನು ನಿರೀಕ್ಷಿಸುತ್ತೇವೆ ಎಂಬುದು ನಿಜ. ಆದರೆ ಇನ್ನೂ ಅಪರಿಪೂರ್ಣರಾಗಿರುವ ನಮ್ಮ ಜೊತೆ ಆರಾಧಕರಿಂದ ನಾವು ತೀರ ಹೆಚ್ಚನ್ನು ನಿರೀಕ್ಷಿಸುವಲ್ಲಿ, ನಾವು ಖಂಡಿತವಾಗಿಯೂ ನಿರಾಶೆಗೊಳಿಸಲ್ಪಡುವೆವು. ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೊ ಅದರ ವಿಷಯದಲ್ಲಿ ಆತನು ವಾಸ್ತವಿಕ ದೃಷ್ಟಿಯುಳ್ಳವನಾಗಿದ್ದಾನೆ. ನಾವು ಆತನ ಮಾದರಿಯನ್ನು ಅನುಕರಿಸುವಲ್ಲಿ, ನಾವು ನಮ್ಮ ಜೊತೆ ಆರಾಧಕರ ಅಪರಿಪೂರ್ಣತೆಗಳನ್ನು ಸಹಿಸಿಕೊಂಡು ಹೋಗಲು ಸಿದ್ಧರಾಗಿರುವೆವು. (ಎಫೆಸ 4:2, 32) ಅಪೊಸ್ತಲ ಪೌಲನು ಈ ಬುದ್ಧಿವಾದವನ್ನು ಕೊಟ್ಟನು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ.”—ಎಫೆಸ 4:26, 27.
ಬೈಬಲ್ ಸ್ಪಷ್ಟವಾಗಿ ತೋರಿಸುವಂತೆ, ಒಬ್ಬ ಕ್ರೈಸ್ತನ ಸಮಗ್ರತೆಯನ್ನು ಮುರಿಯುವ ವಿಧವನ್ನು ಕಂಡುಹಿಡಿಯಲು—ಒಂದುವೇಳೆ ಅವನಿಂದ ಸಾಧ್ಯವಾಗುವಲ್ಲಿ—ಸೈತಾನನು ವಿವಿಧ ಕುಟಿಲೋಪಾಯಗಳನ್ನು ಬಳಸುತ್ತಾನೆ. ಅವನ ತಂತ್ರಗಳಲ್ಲಿ ಕೆಲವು, ಪತಿತ ಶರೀರಕ್ಕೆ ಆಕರ್ಷಕವಾಗಿರುತ್ತವೆ; ಇನ್ನಿತರ ತಂತ್ರಗಳು ನೋವನ್ನು ಉಂಟುಮಾಡುವಂಥವುಗಳಾಗಿವೆ. ಆದರೆ ಈ ವರೆಗಿನ ಚರ್ಚೆಯಲ್ಲಿ, ಇದೆಲ್ಲವೂ ನಿಮಗೆ ಏಕೆ ಅನಿರೀಕ್ಷಿತವಾದದ್ದು ಆಗಿರಬಾರದೆಂಬದನ್ನು ನೋಡಬಲ್ಲಿರಿ. ನಿಮ್ಮ ಹೃದಯದಲ್ಲಿ ದೇವರಿಗಾಗಿರುವ ಪ್ರೀತಿಯನ್ನು ದೃಢವಾಗಿಟ್ಟುಕೊಂಡು, ಪಿಶಾಚನನ್ನು ಒಬ್ಬ ಸುಳ್ಳುಗಾರನೆಂದು ರುಜುಪಡಿಸಲು ದೃಢಸಂಕಲ್ಪಮಾಡಿ, ಯೆಹೋವನ ಮನಸ್ಸನ್ನು ಸಂತೋಷಪಡಿಸಿರಿ. (ಜ್ಞಾನೋಕ್ತಿ 27:11; ಯೋಹಾನ 8:44) ನಮ್ಮ ಮಾರ್ಗದಲ್ಲಿ ಯಾವುದೇ ಪರೀಕ್ಷೆಗಳು ಬರಲಿ, ನಿಜವಾದ ಕ್ರೈಸ್ತ ಸಮಗ್ರತೆಯನ್ನು ಎಂದಿಗೂ ರಾಜಿಮಾಡಿಕೊಳ್ಳಬಾರದೆಂಬುದನ್ನು ಯಾವಾಗಲೂ ನೆನಪಿನಲ್ಲಿಡಿರಿ.
[ಪಾದಟಿಪ್ಪಣಿ]
^ ಪ್ಯಾರ. 11 ಬೈಬಲ್ ವಿದ್ವಾಂಸ ಡಬ್ಲ್ಯೂ. ಈ. ವೈನ್ ಹೇಳುವುದೇನೆಂದರೆ, ಮೂಲ ಗ್ರೀಕ್ ಪದವನ್ನು “ಒಂದು ಕುಟಿಲೋಪಾಯ” ಎಂದೂ ಭಾಷಾಂತರಿಸಬಹುದು.