ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮ್ಮ ಹಣವನ್ನು ಏಕೆ ಹಿಂದಿರುಗಿಸುತ್ತಿದ್ದೇನೆಂದು ನಿಮಗೆ ಗೊತ್ತೇ?”

“ನಿಮ್ಮ ಹಣವನ್ನು ಏಕೆ ಹಿಂದಿರುಗಿಸುತ್ತಿದ್ದೇನೆಂದು ನಿಮಗೆ ಗೊತ್ತೇ?”

“ನಿಮ್ಮ ಹಣವನ್ನು ಏಕೆ ಹಿಂದಿರುಗಿಸುತ್ತಿದ್ದೇನೆಂದು ನಿಮಗೆ ಗೊತ್ತೇ?”

‘ಓ, ನನಗೆ ಅತ್ಯಗತ್ಯವಾಗಿ ಸ್ವಲ್ಪ ಹಣ ಬೇಕಾಗಿದೆ!’ ಎಂದು ರಿಪಬ್ಲಿಕ್‌ ಆಫ್‌ ಜಾರ್ಜಿಯದ ಕಾಸ್ಪೀಯಲ್ಲಿ ಜೀವಿಸುತ್ತಿರುವ ಮೂವರು ಮಕ್ಕಳ ತಾಯಿಯಾದ ನಾನ ಮನಸ್ಸಲ್ಲೇ ನೆನಸಿದಳು. ಒಂದು ಬೆಳಗ್ಗೆ ಸ್ವಲ್ಪ ಹಣವನ್ನು ಕಂಡುಕೊಳ್ಳುವ ಅವಳ ಕನಸು ನನಸಾಯಿತು. ಅವಳು 300 ಲಾರೀ (ಸುಮಾರು 7,000 ರೂಪಾಯಿಗಳು)ಯನ್ನು ಪೊಲೀಸ್‌ ಠಾಣೆಯ ಪಕ್ಕದಲ್ಲಿ ಕಂಡುಕೊಂಡಳು. ಸುತ್ತಮುತ್ತ ಯಾರೂ ಇರಲಿಲ್ಲ. ಅದು ಸಾಕಷ್ಟು ದೊಡ್ಡ ಮೊತ್ತದ ಹಣವಾಗಿತ್ತು. ವಾಸ್ತವದಲ್ಲಿ, ಲಾರೀ ರಾಷ್ಟ್ರೀಯ ಚಲಾವಣೆಯ ಹಣವಾಗಿ ಐದು ವರ್ಷಗಳು ಕಳೆದಿದ್ದರೂ ನಾನಳು 100 ಲಾರೀಯ ನೋಟನ್ನು ಇಷ್ಟರ ತನಕ ಕಂಡಿರಲಿಲ್ಲ. ಹಲವಾರು ವರ್ಷಗಳ ವರೆಗೆ ಕಷ್ಟಪಟ್ಟು ಸಂಪಾದನೆ ಮಾಡಿದರೂ ಸ್ಥಳಿಕ ವ್ಯಾಪಾರಿಗಳು ಅಷ್ಟು ಮೊತ್ತದ ಹಣವನ್ನು ಸಂಪಾದಿಸಲಾರರು.

‘ನಾನು ನನ್ನ ನಂಬಿಕೆ, ದೈವಿಕ ಭಯ ಮತ್ತು ಆತ್ಮಿಕತೆಯನ್ನು ಕಳೆದುಕೊಳ್ಳುವುದಾದರೆ, ಈ ಹಣ ನನಗೆ ಯಾತಕ್ಕಾಗಿ?’ ಎಂದು ನಾನ ಯೋಚಿಸಿದಳು. ತನ್ನ ನಂಬಿಕೆಗೋಸ್ಕರ ಕ್ರೂರ ಹಿಂಸೆ ಮತ್ತು ಹೊಡೆತಗಳನ್ನು ಸಹ ತಾಳಿಕೊಳ್ಳುತ್ತಾ, ಅವಳು ಇಂತಹ ಕ್ರೈಸ್ತ ಗುಣಗಳನ್ನು ಬೆಳೆಸಿಕೊಂಡಿದ್ದಳು.

ಪೊಲೀಸ್‌ ಠಾಣೆಗೆ ಹೋದಾಗ, ಐದು ಮಂದಿ ಅಧಿಕಾರಿಗಳು ಯಾವುದೋ ತೀವ್ರ ಹುಡುಕಾಟದಲ್ಲಿ ಒಳಗೂಡಿರುವುದನ್ನು ನಾನ ನೋಡಿದಳು. ಅವರು ಹಣಕ್ಕಾಗಿ ಹುಡುಕಾಡುತ್ತಿದ್ದರು ಎಂಬುದನ್ನು ಅವಳು ಗ್ರಹಿಸಿದಳು. ಆದುದರಿಂದ, ಅವಳು ಅವರನ್ನು ಸಮೀಪಿಸುತ್ತಾ ಕೇಳಿದ್ದು: “ನೀವು ಏನನ್ನಾದರೂ ಕಳೆದುಕೊಂಡಿದ್ದೀರೋ?”

“ಹಣವನ್ನು,” ಎಂದು ಅವರು ಉತ್ತರಿಸಿದರು.

“ಎಷ್ಟು?”

“ಮುನ್ನೂರು ಲಾರೀ!”

“ನಾನು ನಿಮ್ಮ ಹಣವನ್ನು ಕಂಡುಕೊಂಡೆ,” ಎಂದಳು ನಾನ. ನಂತರ ಅವಳು ಕೇಳಿದ್ದು: “ನಿಮ್ಮ ಹಣವನ್ನು ಏಕೆ ಹಿಂದಿರುಗಿಸುತ್ತಿದ್ದೇನೆಂದು ನಿಮಗೆ ಗೊತ್ತೇ?” ಅವರಿಗೆ ಗೊತ್ತಿರಲಿಲ್ಲ.

“ಏಕೆಂದರೆ ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು,” ಎಂದು ಅವಳು ಮುಂದುವರಿಸಿದಳು. “ನಾನು ಒಬ್ಬ ಸಾಕ್ಷಿಯಾಗಿರಲಿಲ್ಲವಾದರೆ, ನಾನು ನಿಮ್ಮ ಹಣವನ್ನು ಹಿಂದಿರುಗಿಸುತ್ತಿರಲಿಲ್ಲ.”

ಹಣವನ್ನು ಕಳೆದುಕೊಂಡಿದ್ದ ಪೊಲೀಸ್‌ ಅಧಿಕಾರಿಯು, ನಾನಳ ಪ್ರಾಮಾಣಿಕ ನಡತೆಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಅವಳಿಗೆ 20 ಲಾರೀಯನ್ನು ಕೊಟ್ಟರು.

ವಿಷಯವು ಬೇಗನೆ ಕಾಸ್ಪೀ ಜಿಲ್ಲೆಯಿಡೀ ಹಬ್ಬಿತು. ಮರುದಿನ, ಪೊಲೀಸ್‌ ಠಾಣೆಯಿಂದ ಹೊರಗೆ ಬಂದ ಒಬ್ಬ ಶುಚಿಮಾಡುವ ಹೆಂಗಸು ನಾನಳಿಗೆ ಹೇಳಿದ್ದು: “[ಆ ಅಧಿಕಾರಿ] ತಮ್ಮ ಆಫೀಸ್‌ನಲ್ಲಿ ಯಾವಾಗಲೂ ನಿಮ್ಮ ಸಾಹಿತ್ಯವನ್ನು ಇಡುತ್ತಾರೆ. ಈಗ ಪ್ರಾಯಶಃ ಅವರು ಅದನ್ನು ಇನ್ನೂ ಹೆಚ್ಚು ಗಣ್ಯಮಾಡಬಹುದು.” ಒಬ್ಬ ಪೊಲೀಸ್‌ ಅಧಿಕಾರಿಯು, “ಎಲ್ಲರೂ ಯೆಹೋವನ ಸಾಕ್ಷಿಗಳಾಗಿದ್ದರೆ, ಅಪರಾಧಗಳನ್ನು ಯಾರು ಮಾಡುತ್ತಿದ್ದರು?” ಎಂದೂ ಹೇಳಿದರು.