ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿರಂತರವೂ ನನ್ನನ್ನು ಹಿಂಬಾಲಿಸಿರಿ’

‘ನಿರಂತರವೂ ನನ್ನನ್ನು ಹಿಂಬಾಲಿಸಿರಿ’

‘ನಿರಂತರವೂ ನನ್ನನ್ನು ಹಿಂಬಾಲಿಸಿರಿ’

“ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.”​—1 ಪೇತ್ರ 2:21.

1, 2. ಒಬ್ಬ ಬೋಧಕನೋಪಾದಿ ಯೇಸುವಿನ ಪರಿಪೂರ್ಣ ಮಾದರಿಯು, ನಾವು ಅನುಕರಿಸಲಾಗದಷ್ಟು ಉನ್ನತಮಟ್ಟದ್ದಾಗಿಲ್ಲವೇಕೆ?

ಯೇಸು ಕ್ರಿಸ್ತನು, ಭೂಮಿಯ ಮೇಲೆ ಜೀವಿಸಿರುವ ಬೋಧಕರಲ್ಲೇ ಅತಿ ಮಹಾ ಬೋಧಕನಾಗಿದ್ದನು. ಅದಲ್ಲದೆ, ಅವನು ಪರಿಪೂರ್ಣನೂ ಆಗಿದ್ದನು. ಒಬ್ಬ ಮನುಷ್ಯನೋಪಾದಿ ಅವನ ಇಡೀ ಜೀವನ ಕ್ರಮದಲ್ಲಿ ಒಂದೇ ಒಂದು ಸಾರಿಯೂ ಅವನು ಪಾಪಮಾಡಲಿಲ್ಲ. (1 ಪೇತ್ರ 2:22) ಹಾಗಾದರೆ ಇದರರ್ಥ, ಒಬ್ಬ ಬೋಧಕನೋಪಾದಿ ಯೇಸುವಿಟ್ಟ ಮಾದರಿಯು ಅಪರಿಪೂರ್ಣ ಮಾನವರಾದ ನಮಗೆ ನಿಲುಕಲಾರದಷ್ಟು ಎತ್ತರದಲ್ಲಿದೆ ಎಂದಾಗಿದೆಯೊ? ಖಂಡಿತವಾಗಿಯೂ ಇಲ್ಲ.

2 ಹಿಂದಿನ ಲೇಖನದಲ್ಲಿ ನಾವು ನೋಡಿದಂತೆ, ಯೇಸುವಿನ ಬೋಧಿಸುವಿಕೆಯ ಅಸ್ತಿವಾರವು ಪ್ರೀತಿಯಾಗಿತ್ತು. ಮತ್ತು ಪ್ರೀತಿಯು ನಾವೆಲ್ಲರೂ ಬೆಳೆಸಿಕೊಳ್ಳಬಹುದಾದ ಒಂದು ಗುಣವಾಗಿದೆ. ಇತರರಿಗಾಗಿ ನಮಗಿರುವ ಪ್ರೀತಿಯಲ್ಲಿ ಬೆಳೆಯುವಂತೆ ಮತ್ತು ಅಭಿವೃದ್ಧಿಮಾಡುವಂತೆ ದೇವರ ವಾಕ್ಯವು ನಮ್ಮನ್ನು ಅನೇಕ ಸಾರಿ ಉತ್ತೇಜಿಸುತ್ತದೆ. (ಫಿಲಿಪ್ಪಿ 1:​9, 10; ಕೊಲೊಸ್ಸೆ 3:14) ಯೆಹೋವನು ತನ್ನ ಸೃಷ್ಟಿಜೀವಿಗಳಿಂದ, ಅವರಿಗೆ ಮಾಡಲಸಾಧ್ಯವಾದ ವಿಷಯಗಳನ್ನು ಎಂದಿಗೂ ಅಪೇಕ್ಷಿಸುವುದಿಲ್ಲ. ವಾಸ್ತವದಲ್ಲಿ “ದೇವರು ಪ್ರೀತಿಸ್ವರೂಪಿ” ಆಗಿರುವುದರಿಂದ ಮತ್ತು ನಮ್ಮನ್ನು ತನ್ನ ಸ್ವಂತ ಸ್ವರೂಪದಲ್ಲಿ ಸೃಷ್ಟಿಸಿರುವುದರಿಂದ, ನಾವು ಪ್ರೀತಿಯನ್ನು ತೋರಿಸುವಂಥ ರೀತಿಯಲ್ಲಿ ಆತನು ನಮ್ಮನ್ನು ವಿನ್ಯಾಸಿಸಿದ್ದಾನೆಂದು ಹೇಳಸಾಧ್ಯವಿದೆ. (1 ಯೋಹಾನ 4:8; ಆದಿಕಾಂಡ 1:27) ಆದುದರಿಂದ ನಮ್ಮ ಮುಖ್ಯ ವಚನದಲ್ಲಿ ದಾಖಲಿಸಲ್ಪಟ್ಟಿರುವ ಅಪೊಸ್ತಲ ಪೇತ್ರನ ಮಾತುಗಳನ್ನು ನಾವು ಓದುವಾಗ, ನಾವು ಅದನ್ನು ಮಾಡುವುದರಲ್ಲಿ ಸಫಲರಾಗುವೆವು ಎಂಬ ಮನವರಿಕೆಯೊಂದಿಗೆ ಪ್ರತಿಕ್ರಿಯಿಸಬಲ್ಲೆವು. ನಾವು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯಬಲ್ಲೆವು. ವಾಸ್ತವದಲ್ಲಿ ನಾವು ಸ್ವತಃ ಯೇಸು ಕೊಟ್ಟ ಈ ಆಜ್ಞೆಗೆ ವಿಧೇಯರಾಗಬಲ್ಲೆವು: ‘ನಿರಂತರವೂ ನನ್ನನ್ನು ಹಿಂಬಾಲಿಸಿರಿ.’ (ಲೂಕ 9:​23, NW) ಮೊದಲು, ಕ್ರಿಸ್ತನು ತಾನು ಬೋಧಿಸಿದ ಸತ್ಯಗಳಿಗಾಗಿ ತೋರಿಸಿದ ಪ್ರೀತಿಯನ್ನು ಮತ್ತು ನಂತರ ತಾನು ಬೋಧಿಸಿದ ಜನರಿಗಾಗಿ ತೋರಿಸಿದ ಪ್ರೀತಿಯನ್ನು ನಾವು ಹೇಗೆ ಅನುಕರಿಸಬಲ್ಲೆವೆಂಬುದನ್ನು ನಾವು ಪರಿಗಣಿಸೋಣ.

ನಾವು ಕಲಿಯುವ ಸತ್ಯಗಳಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದು

3. ಕೆಲವರಿಗೆ ಅಧ್ಯಯನ ಮಾಡುವುದು ಏಕೆ ಕಷ್ಟಕರವಾಗಿರುತ್ತದೆ, ಆದರೆ ಜ್ಞಾನೋಕ್ತಿ 2:​1-5ರಲ್ಲಿ ಯಾವ ಬುದ್ಧಿವಾದವು ಕೊಡಲ್ಪಟ್ಟಿದೆ?

3 ನಾವು ಇತರರಿಗೆ ಬೋಧಿಸುವಂಥ ಸತ್ಯಗಳಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾದರೆ, ಮೊದಲು ಸ್ವತಃ ನಾವು ಅಂಥ ಸತ್ಯಗಳನ್ನು ಕಲಿಯಲು ಇಷ್ಟಪಡಬೇಕು. ಇಂದಿನ ಜಗತ್ತಿನಲ್ಲಿ ಆ ರೀತಿಯ ಪ್ರೀತಿಯು ಯಾವಾಗಲೂ ಸುಲಭವಾಗಿ ಹುಟ್ಟಿಕೊಳ್ಳುವುದಿಲ್ಲ. ನ್ಯೂನ ಶಿಕ್ಷಣ ಮತ್ತು ಯೌವನಾವಸ್ಥೆಯಲ್ಲಿ ಬೆಳೆಸಿಕೊಂಡಿರುವ ದುರಭ್ಯಾಸಗಳು, ಅನೇಕರು ಅಧ್ಯಯನ ಮಾಡುವುದನ್ನೇ ಇಷ್ಟಪಡದಿರುವಂತೆ ಮಾಡಿವೆ. ಆದರೆ ನಾವು ಯೆಹೋವನಿಂದ ಕಲಿತುಕೊಳ್ಳುವುದು ಅತಿ ಪ್ರಾಮುಖ್ಯ. ಜ್ಞಾನೋಕ್ತಿ 2:​1-5 ಹೇಳುವುದು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.”

4. ಹೃದಯವನ್ನು ‘ತಿರುಗಿಸುವುದರ’ ಅರ್ಥವೇನು, ಮತ್ತು ಯಾವ ದೃಷ್ಟಿಕೋನವು ನಾವು ಹಾಗೆ ಮಾಡುವಂತೆ ಸಹಾಯಮಾಡುವುದು?

4 ವಚನಗಳು 1ರಿಂದ 4ರಲ್ಲಿ, ನಮಗೆ ಕೇವಲ ‘ಪಡೆದುಕೊಳ್ಳಲು’ ಮತ್ತು “ನಿಧಿಯಂತೆ ಕಾಪಾಡಿ”ಕೊಳ್ಳಲು ಪ್ರಯತ್ನವನ್ನು ಮಾಡುತ್ತಾ ಇರುವಂತೆ ಉತ್ತೇಜಿಸಲ್ಪಟ್ಟಿಲ್ಲ, ಬದಲಾಗಿ “ಹುಡುಕು”ವಂತೆಯೂ ಹೇಳಲಾಗಿದೆ. ಆದರೆ ನಾವು ಇದೆಲ್ಲವನ್ನು ಮಾಡುವಂತೆ ಯಾವುದು ನಮ್ಮನ್ನು ಪ್ರಚೋದಿಸುವುದು? ‘ನಿನ್ನ ಹೃದಯವನ್ನು ವಿವೇಕದ ಕಡೆಗೆ ತಿರುಗಿಸು’ ಎಂಬ ವಾಕ್ಸರಣಿಯನ್ನು ಗಮನಿಸಿರಿ. ಈ ಹುರಿದುಂಬಿಸುವಿಕೆಯು, “ಕೇವಲ ಗಮನವನ್ನು ಕೇಳಿಕೊಳ್ಳುವ ಒಂದು ವಿನಂತಿ ಅಲ್ಲ, ಅದು ಒಂದು ನಿರ್ದಿಷ್ಟವಾದ ಮನೋಭಾವ, ಅಂದರೆ ಬೋಧನೆಗಳ ಕಡೆಗೆ ಕಾತುರವಾದ ಗ್ರಹಣಾಕಾಂಕ್ಷೆಗಾಗಿ ಒತ್ತಾಯದ ಬೇಡಿಕೆಯಾಗಿದೆ” ಎಂದು ಒಂದು ಕೃತಿಯು ಹೇಳುತ್ತದೆ. ಯೆಹೋವನು ನಮಗೇನನ್ನು ಕಲಿಸುತ್ತಾನೊ ಅದನ್ನು ಕಲಿಯಲಿಕ್ಕಾಗಿ ನಮ್ಮನ್ನು ಶೀಘ್ರ ಗ್ರಾಹಿಗಳೂ ಕಾತುರರೂ ಆಗಿ ಮಾಡುವಂಥ ಸಂಗತಿಯು ಯಾವುದು? ನಮ್ಮ ದೃಷ್ಟಿಕೋನವೇ. ನಾವು “ದೈವಜ್ಞಾನವನ್ನು” “ಬೆಳ್ಳಿ” ಮತ್ತು “ನಿಕ್ಷೇಪ”ಗಳೋಪಾದಿ ದೃಷ್ಟಿಸಬೇಕು.

5, 6. (ಎ) ಸಮಯ ಸರಿದಂತೆ ಏನಾಗಬಹುದು, ಮತ್ತು ನಾವು ಅದನ್ನು ಹೇಗೆ ತಡೆಗಟ್ಟಬಹುದು? (ಬಿ) ನಾವು ಬೈಬಲಿನಲ್ಲಿ ಕಂಡುಕೊಂಡಿರುವ ಜ್ಞಾನದ ನಿಕ್ಷೇಪಗಳಿಗೆ ಏಕೆ ಹೆಚ್ಚನ್ನು ಕೂಡಿಸುತ್ತಾ ಇರಬೇಕು?

5 ಅಂಥ ಒಂದು ದೃಷ್ಟಿಕೋನವನ್ನು ಪಡೆದುಕೊಳ್ಳುವುದು ಕಷ್ಟಕರವೇನಲ್ಲ. ಉದಾಹರಣೆಗಾಗಿ, ನೀವು ಪಡೆದುಕೊಂಡಿರಬಹುದಾದ “ದೈವಜ್ಞಾನ”ದಲ್ಲಿ, ಭೂಮಿಯ ಮೇಲೆ ಪರದೈಸಿನಲ್ಲಿ ನಂಬಿಗಸ್ತ ಮಾನವಕುಲವು ಸದಾಕಾಲ ಬಾಳಬೇಕೆಂಬುದನ್ನು ಯೆಹೋವನು ಉದ್ದೇಶಿಸುತ್ತಾನೆಂಬ ಸತ್ಯವು ಒಳಗೂಡಿದೆ. (ಕೀರ್ತನೆ 37:​28, 29) ನೀವು ಮೊತ್ತಮೊದಲ ಬಾರಿ ಆ ಸತ್ಯವನ್ನು ಕಲಿತಾಗ, ನೀವು ನಿಸ್ಸಂದೇಹವಾಗಿಯೂ ಅದನ್ನು ನಿಜವಾದ ನಿಕ್ಷೇಪದೋಪಾದಿ ಪರಿಗಣಿಸಿದಿರಿ. ಅದು ನಿಮ್ಮ ಹೃದಮನಗಳನ್ನು ನಿರೀಕ್ಷೆ ಮತ್ತು ಆನಂದದಿಂದ ತುಂಬಿಸಿದಂಥ ಜ್ಞಾನದ ತುಣುಕಾಗಿತ್ತು. ಆದರೆ ಈಗ? ಕಾಲಚಕ್ರವು ಉರುಳಿದಂತೆ, ನಿಮ್ಮ ನಿಕ್ಷೇಪಕ್ಕಾಗಿದ್ದ ಆ ಗಣ್ಯತೆಯು ಮಾಸಿಹೋಗಿದೆಯೊ ಇಲ್ಲವೆ ಕಾಂತಿಹೀನವಾಗಿದೆಯೊ? ಹಾಗಿರುವಲ್ಲಿ, ಎರಡು ಸಂಗತಿಗಳನ್ನು ಮಾಡಲು ಪ್ರಯತ್ನಿಸಿರಿ. ಮೊದಲನೆಯದಾಗಿ, ನಿಮ್ಮ ಗಣ್ಯತೆಯನ್ನು ನವೀಕರಿಸಿರಿ, ಅಂದರೆ ಯೆಹೋವನು ನಿಮಗೆ ಕಲಿಸಿರುವಂಥ, ನೀವು ಅನೇಕ ವರ್ಷಗಳ ಹಿಂದೆಯೂ ಕಲಿತಂಥ ಪ್ರತಿಯೊಂದು ಸತ್ಯವು ನಿಮಗೇಕೆ ಅಮೂಲ್ಯವಾಗಿದೆ ಎಂಬುದನ್ನು ಕ್ರಮವಾಗಿ ಮನಸ್ಸಿಗೆ ತರುತ್ತಾ ಇರಿ.

6 ಎರಡನೆಯದಾಗಿ, ನಿಮ್ಮ ಆ ನಿಕ್ಷೇಪಕ್ಕೆ ಹೆಚ್ಚನ್ನು ಕೂಡಿಸುತ್ತಾ ಇರಿ. ನೀವು ಅಗೆಯುತ್ತಿರುವಾಗ ಅಕಸ್ಮಾತ್ತಾಗಿ ಒಂದು ಅಮೂಲ್ಯ ರತ್ನವನ್ನು ಕಂಡುಕೊಳ್ಳುವಲ್ಲಿ, ಅದನ್ನು ನಿಮ್ಮ ಜೇಬಿನಲ್ಲಿ ಹಾಕಿಕೊಂಡು, ಸಂತೃಪ್ತರಾಗಿ ಅಲ್ಲಿಂದ ಹೊರಟುಹೋಗುವಿರೊ? ಅಥವಾ ಅಲ್ಲಿ ಇನ್ನೂ ಹೆಚ್ಚು ರತ್ನಗಳಿವೆಯೊ ಎಂಬುದನ್ನು ನೋಡಲು ಇನ್ನೂ ಹೆಚ್ಚು ಅಗೆಯುವಿರೊ? ದೇವರ ವಾಕ್ಯವು ಸತ್ಯದ ರತ್ನಗಳು ಮತ್ತು ಗಟ್ಟಿಗಳಿಂದ ತುಂಬಿದೆ. ನೀವು ಈಗಾಗಲೇ ಎಷ್ಟೇ ರತ್ನಗಳನ್ನು ಕಂಡುಕೊಂಡಿರಲಿ, ನೀವು ಇನ್ನೂ ಹೆಚ್ಚನ್ನು ಕಂಡುಕೊಳ್ಳಸಾಧ್ಯವಿದೆ. (ರೋಮಾಪುರ 11:33) ನೀವು ಸತ್ಯದ ಒಂದು ಗಟ್ಟಿಯನ್ನು ಹೊರತೆಗೆಯುವಾಗ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯಾವುದು ಇದನ್ನು ಒಂದು ನಿಕ್ಷೇಪವಾಗಿ ಮಾಡುತ್ತದೆ? ಯೆಹೋವನ ವ್ಯಕ್ತಿತ್ವ ಇಲ್ಲವೆ ಆತನ ಉದ್ದೇಶಗಳ ಕುರಿತಾಗಿ ಅದು ನನಗೆ ಗಾಢವಾದ ಒಳನೋಟವನ್ನು ಕೊಡುತ್ತದೊ? ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವಂತೆ ಸಹಾಯಮಾಡಬಲ್ಲ ಸ್ವಲ್ಪ ವ್ಯಾವಹಾರಿಕ ಮಾರ್ಗದರ್ಶನವನ್ನು ಅದು ಕೊಡುತ್ತದೊ?’ ಅಂಥ ಪ್ರಶ್ನೆಗಳ ಕುರಿತಾಗಿ ಮನನಮಾಡುವುದು, ಯೆಹೋವನು ನಿಮಗೆ ಕಲಿಸಿರುವಂಥ ಸತ್ಯಗಳಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯಮಾಡುವುದು.

ನಾವು ಬೋಧಿಸುವಂಥ ಸತ್ಯಗಳಿಗಾಗಿ ಪ್ರೀತಿಯನ್ನು ತೋರಿಸುವುದು

7, 8. ನಾವು ಬೈಬಲಿನಿಂದ ಕಲಿತುಕೊಂಡಿರುವ ಸತ್ಯಗಳನ್ನು ಪ್ರೀತಿಸುತ್ತೇವೆಂದು ಇತರರಿಗೆ ತೋರಿಸಬಲ್ಲ ಕೆಲವು ವಿಧಗಳಾವುವು? ಒಂದು ಉದಾಹರಣೆಯನ್ನು ಕೊಡಿ.

7 ನಾವು ಬೇರೆಯವರಿಗೆ ಬೋಧಿಸುತ್ತಿರುವಾಗ, ದೇವರ ವಾಕ್ಯದಿಂದ ಕಲಿತಿರುವಂಥ ಸತ್ಯಗಳನ್ನು ಸ್ವತಃ ಪ್ರೀತಿಸುತ್ತೇವೆಂಬುದನ್ನು ನಾವು ಹೇಗೆ ತೋರಿಸಬಲ್ಲೆವು? ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ನಮ್ಮ ಸಾರುವಿಕೆ ಮತ್ತು ಬೋಧಿಸುವಿಕೆಯಲ್ಲಿ ನಾವು ಬೈಬಲಿನ ಮೇಲೆ ಬಹಳಷ್ಟು ಆತುಕೊಳ್ಳುತ್ತೇವೆ. ಇತ್ತೀಚಿನ ಸಮಯಗಳಲ್ಲಿ, ಭೂಸುತ್ತಲಿರುವ ದೇವಜನರು ತಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಬೈಬಲನ್ನು ಇನ್ನೂ ಹೆಚ್ಚಾಗಿ ಉಪಯೋಗಿಸುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ಆ ಸಲಹೆಯನ್ನು ನೀವು ಅನ್ವಯಿಸುತ್ತಾ ಹೋದಂತೆ, ನೀವು ಬೈಬಲಿನಿಂದ ಯಾವ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೀರೊ ಅದನ್ನು ಸ್ವತಃ ನೀವೇ ಅಮೂಲ್ಯವೆಂದೆಣಿಸುತ್ತೀರಿ ಎಂಬುದನ್ನು ಮನೆಯವನಿಗೆ ತಿಳಿಯಪಡಿಸಲು ಮಾರ್ಗಗಳನ್ನು ಹುಡುಕಿರಿ.​—ಮತ್ತಾಯ 13:52.

8 ಉದಾಹರಣೆಗೆ, ಕಳೆದ ವರ್ಷ ನ್ಯೂ ಯಾರ್ಕ್‌ ನಗರದಲ್ಲಿ ಭಯೋತ್ಪಾದಕರ ದಾಳಿಯ ನಂತರದ ಅವಧಿಯಲ್ಲಿ, ಒಬ್ಬ ಕ್ರೈಸ್ತ ಸಹೋದರಿಯು ತನ್ನ ಶುಶ್ರೂಷೆಯಲ್ಲಿ ಭೇಟಿಯಾಗುತ್ತಿದ್ದ ಜನರಿಗೆ ಕೀರ್ತನೆ 46:​1, 11ನ್ನು ಓದಿಹೇಳುತ್ತಿದ್ದಳು. ಈ ದುರಂತದ ನಂತರ ಅವರು ಹೇಗೆ ನಿಭಾಯಿಸಿಕೊಂಡು ಹೋಗುತ್ತಿದ್ದಾರೆಂದು ಅವಳು ಮೊದಲು ಜನರಿಗೆ ಕೇಳುತ್ತಿದ್ದಳು. ಅವರು ಏನು ಉತ್ತರ ಕೊಡುತ್ತಿದ್ದರೊ ಅದನ್ನು ಗಮನಕೊಟ್ಟು ಆಲಿಸುತ್ತಿದ್ದಳು, ಒಪ್ಪಿಕೊಳ್ಳುತ್ತಿದ್ದಳು ಮತ್ತು ನಂತರ, “ಈ ಕಷ್ಟಕರವಾದ ಸಮಯದಲ್ಲಿ ನನ್ನನ್ನು ನಿಜವಾಗಿ ಸಂತೈಸಿದಂಥ ಒಂದು ವಚನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದೋ?” ಎಂದು ಕೇಳುತ್ತಿದ್ದಳು. ಇದನ್ನು ನಿರಾಕರಿಸಿದವರು ತೀರ ಕೊಂಚ ಮಂದಿ, ಮತ್ತು ಅನೇಕ ಉತ್ತಮವಾದ ಚರ್ಚೆಗಳು ಫಲಿಸಿದವು. ಯುವ ಜನರೊಂದಿಗೆ ಮಾತಾಡುವಾಗ, ಅದೇ ಸಹೋದರಿಯು ಹೆಚ್ಚಿನವೇಳೆ ಹೀಗನ್ನುತ್ತಾಳೆ: “ನಾನೀಗ 50 ವರ್ಷಗಳಿಂದ ಬೈಬಲನ್ನು ಕಲಿಸುತ್ತಾ ಇದ್ದೇನೆ, ಮತ್ತು ನಿಮಗೆ ಒಂದು ವಿಷಯವನ್ನು ಹೇಳಲೊ? ಇಷ್ಟರ ತನಕ ನಾನು, ಈ ಪುಸ್ತಕವು ಬಗೆಹರಿಸಲು ಅಸಾಧ್ಯವಾದಂಥ ಒಂದೇ ಒಂದು ಸಮಸ್ಯೆಯನ್ನೂ ಎದುರಿಸಿಲ್ಲ.” ಪ್ರಾಮಾಣಿಕ ಮನಸ್ಸಿನಿಂದ ಮತ್ತು ಉತ್ಸುಕತೆಯಿಂದ ಮಾತಾಡುವ ಮೂಲಕ, ನಾವು ದೇವರ ವಾಕ್ಯದಿಂದ ಏನನ್ನು ಕಲಿತಿದ್ದೇವೊ ಅದನ್ನು ಅಮೂಲ್ಯವೆಂದೆಣಿಸುತ್ತೇವೆ ಮತ್ತು ಪ್ರೀತಿಸುತ್ತೇವೆ ಎಂಬುದನ್ನು ಜನರಿಗೆ ತೋರಿಸುತ್ತೇವೆ.​—ಕೀರ್ತನೆ 119:​97, 105.

9, 10. ನಮ್ಮ ನಂಬಿಕೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಬೈಬಲನ್ನು ಉಪಯೋಗಿಸುವುದು ಪ್ರಾಮುಖ್ಯವೇಕೆ?

9 ನಮ್ಮ ನಂಬಿಕೆಗಳ ಕುರಿತಾಗಿ ಜನರು ಪ್ರಶ್ನೆಗಳನ್ನು ಕೇಳುವಾಗ, ನಾವು ದೇವರ ವಾಕ್ಯವನ್ನು ಪ್ರೀತಿಸುತ್ತೇವೆಂದು ತೋರಿಸಲು ನಮಗೊಂದು ಸದವಕಾಶವಿರುತ್ತದೆ. ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ನಾವು ನಮ್ಮ ಉತ್ತರಗಳನ್ನು ನಮ್ಮ ಸ್ವಂತ ವಿಚಾರಗಳ ಮೇಲಾಧಾರಿಸುವುದಿಲ್ಲ. (ಜ್ಞಾನೋಕ್ತಿ 3:​5, 6) ಅದಕ್ಕೆ ಬದಲಾಗಿ, ನಾವು ಉತ್ತರ ಕೊಡುವಾಗ ಬೈಬಲನ್ನು ಉಪಯೋಗಿಸುತ್ತೇವೆ. ನಿಮಗೆ ಉತ್ತರ ಕೊಡಲು ಸಾಧ್ಯವಾಗದಂಥ ಒಂದು ಪ್ರಶ್ನೆಯನ್ನು ಯಾರಾದರೂ ಕೇಳಬಹುದೆಂದು ನೀವು ಹೆದರುತ್ತೀರೊ? ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ತೆಗೆದುಕೊಳ್ಳಬಹುದಾದ ಎರಡು ಸಕಾರಾತ್ಮಕ ಹೆಜ್ಜೆಗಳನ್ನು ಪರಿಗಣಿಸಿರಿ.

10ಸಿದ್ಧರಾಗಿರಲಿಕ್ಕಾಗಿ ನಿಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿರಿ. ಅಪೊಸ್ತಲ ಪೇತ್ರನು ಹೀಗೆ ಬರೆದನು: “ನಿಮ್ಮ ಹೃದಯಗಳಲ್ಲಿ ಕ್ರಿಸ್ತನೇ ಪ್ರಭುವಾಗಿರಲಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ನಿಮ್ಮನ್ನು ಕೇಳುವ ಪ್ರತಿಯೊಬ್ಬರಿಗೂ ಉತ್ತರ ಹೇಳಲು ಯಾವಾಗಲೂ ಸಿದ್ಧವಾಗಿರಿ. ಆದರೆ ಸಾತ್ವಿಕತೆಯಿಂದ ಗೌರವಕರವಾದ ರೀತಿಯಲ್ಲಿ ಅವರಿಗೆ ಉತ್ತರವನ್ನು ಹೇಳಿ.” (1 ಪೇತ್ರ 3:​15, ಪರಿಶುದ್ಧ ಬೈಬಲ್‌) ನಿಮ್ಮ ನಂಬಿಕೆಗಳನ್ನು ಸಮರ್ಥಿಸಲು ನೀವು ಸಿದ್ಧರಾಗಿದ್ದೀರೊ? ಉದಾಹರಣೆಗೆ, ನಾವು ಒಂದು ಅಶಾಸ್ತ್ರೀಯ ಪದ್ಧತಿ ಇಲ್ಲವೆ ರೂಢಿಯಲ್ಲಿ ಏಕೆ ಪಾಲ್ಗೊಳ್ಳುವುದಿಲ್ಲವೆಂಬುದನ್ನು ಯಾರಾದರೂ ತಿಳಿದುಕೊಳ್ಳಲು ಬಯಸುವಲ್ಲಿ, “ಅದು ನನ್ನ ಧರ್ಮಕ್ಕೆ ವಿರುದ್ಧವಾಗಿದೆ” ಎಂದಷ್ಟೇ ಹೇಳಿ ಸುಮ್ಮನಾಗಬೇಡಿರಿ. ಈ ರೀತಿಯ ಉತ್ತರವು, ಬೇರೆಯವರು ನಿಮಗಾಗಿ ನಿರ್ಣಯಗಳನ್ನು ಮಾಡುವಂತೆ ಬಿಡುತ್ತೀರಿ ಮತ್ತು ಈ ಕಾರಣದಿಂದ ನೀವು ಯಾವುದೊ ಒಂದು ಪಂಥದ ಸದಸ್ಯರಾಗಿದ್ದೀರೆಂಬುದನ್ನು ಸೂಚಿಸಬಹುದು. “ದೇವರ ವಾಕ್ಯವಾದ ಬೈಬಲು ಅದನ್ನು ನಿಷೇಧಿಸುತ್ತದೆ,” ಇಲ್ಲವೆ “ಅದು ನನ್ನ ದೇವರನ್ನು ಅಸಂತುಷ್ಟಗೊಳಿಸುತ್ತದೆ” ಎಂದು ಹೇಳುವುದು ಹೆಚ್ಚು ಉತ್ತಮವಾಗಿರಬಹುದು. ಆಮೇಲೆ ಇದಕ್ಕೆ ಕಾರಣವೇನೆಂಬುದಕ್ಕೆ ಸಮಂಜಸವಾದ ವಿವರಣೆಯನ್ನು ಕೊಡಿರಿ.​—ರೋಮಾಪುರ 12:1.

11. ದೇವರ ವಾಕ್ಯದ ಸತ್ಯಗಳ ಕುರಿತಾದ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ ಸಿದ್ಧರಾಗಿರಲು ಯಾವ ಸಂಶೋಧನಾ ಸಾಧನವು ನಮಗೆ ಸಹಾಯಮಾಡಬಹುದು?

11 ನೀವು ಸಿದ್ಧರಾಗಿಲ್ಲವೆಂಬ ಅನಿಸಿಕೆ ನಿಮಗಿರುವಲ್ಲಿ, ನಿಮ್ಮ ಭಾಷೆಯಲ್ಲಿ ಲಭ್ಯವಿದ್ದರೆ ಚರ್ಚೆಗಾಗಿ ಬೈಬಲ್‌ ವಿಷಯಗಳು * ಎಂಬ ಪುಸ್ತಿಕೆಯನ್ನು ಅಧ್ಯಯನ ಮಾಡಲಿಕ್ಕಾಗಿ ಸ್ವಲ್ಪ ಸಮಯವನ್ನು ವ್ಯಯಿಸಬಾರದೇಕೆ? ಹೆಚ್ಚಾಗಿ ಜನರು ಕೇಳಬಹುದಾದ ಕೆಲವೊಂದು ವಿಷಯಗಳನ್ನು ಆಯ್ಕೆಮಾಡಿರಿ, ಮತ್ತು ಕೆಲವೊಂದು ಶಾಸ್ತ್ರೀಯ ಅಂಶಗಳನ್ನು ಬಾಯಿಪಾಠಮಾಡಿರಿ. ಚರ್ಚೆಗಾಗಿ ಬೈಬಲ್‌ ವಿಷಯಗಳು ಪುಸ್ತಿಕೆಯನ್ನು ಹಾಗೂ ನಿಮ್ಮ ಬೈಬಲನ್ನು ಸುಲಭವಾಗಿ ಕೈಗೆ ಸಿಗುವಂತೆ ಸಿದ್ಧವಾಗಿಡಿರಿ. ಪ್ರಶ್ನೆಗಳಿಗೆ ಬೈಬಲ್‌ ಉತ್ತರಗಳನ್ನು ಕಂಡುಹಿಡಿಯಲಿಕ್ಕಾಗಿ ನೀವು ಉಪಯೋಗಿಸಲು ಬಯಸುವಂಥ ಒಂದು ಸಂಶೋಧನಾ ಸಾಧನವು ನಿಮ್ಮ ಬಳಿ ಇದೆ ಎಂದು ಹೇಳುತ್ತಾ, ಇವೆರಡನ್ನೂ ಉಪಯೋಗಿಸಲು ಹಿಂಜರಿಯಬೇಡಿರಿ.

12. ಒಂದು ಬೈಬಲ್‌ ಪ್ರಶ್ನೆಗೆ ಉತ್ತರವೇನೆಂದು ನಮಗೆ ಗೊತ್ತಿಲ್ಲದಿರುವಾಗ, ನಾವು ಹೇಗೆ ಪ್ರತಿಕ್ರಿಯಿಸಬಹುದು?

12ಅನಾವಶ್ಯಕವಾಗಿ ಚಿಂತೆಮಾಡದಿರಲು ಪ್ರಯತ್ನಿಸಿ. ಯಾವುದೇ ಅಪರಿಪೂರ್ಣ ಮಾನವನ ಬಳಿ ಎಲ್ಲ ಉತ್ತರಗಳಿರುವುದಿಲ್ಲ. ಆದುದರಿಂದ ನಿಮಗೆ ಉತ್ತರಿಸಲಾಗದಂಥ ಒಂದು ಬೈಬಲ್‌ ಪ್ರಶ್ನೆಯು ಕೇಳಲ್ಪಟ್ಟಾಗ, ನೀವು ಹೀಗೇನನ್ನಾದರೂ ಹೇಳಬಹುದು: “ಇಂಥ ಆಸಕ್ತಿದಾಯಕ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ಉಪಕಾರ. ನಿಜವಾಗಿ ಹೇಳುವುದಾದರೆ ನನಗೆ ಅದರ ಉತ್ತರ ಗೊತ್ತಿಲ್ಲ. ಆದರೆ ಬೈಬಲ್‌ ಈ ವಿಷಯದ ಕುರಿತು ಮಾತಾಡುತ್ತದೆಂದು ನನಗೆ ಖಂಡಿತವಾಗಿಯೂ ಗೊತ್ತಿದೆ. ನನಗೆ ಬೈಬಲ್‌ ಸಂಶೋಧನೆ ಮಾಡುವುದೆಂದರೆ ತುಂಬ ಇಷ್ಟ. ಆದುದರಿಂದ ನಿಮ್ಮ ಈ ಪ್ರಶ್ನೆಯ ಬಗ್ಗೆ ಸಂಶೋಧನೆ ಮಾಡಿ, ಪುನಃ ಬಂದು ಅದರ ಉತ್ತರವನ್ನು ನಿಮಗೆ ತಿಳಿಸುವೆ.” ಈ ರೀತಿಯ ಮುಚ್ಚುಮರೆಯಿಲ್ಲದ, ವಿನಯಶೀಲ ಮಾತು, ಇನ್ನೂ ಹೆಚ್ಚಿನ ಚರ್ಚೆಗಳಿಗೆ ದಾರಿಯನ್ನು ಮಾಡಿಕೊಡಬಹುದು.​—ಜ್ಞಾನೋಕ್ತಿ 11:2.

ನಾವು ಯಾರಿಗೆ ಬೋಧಿಸುತ್ತೇವೊ ಆ ಜನರಿಗಾಗಿ ಪ್ರೀತಿ

13. ನಾವು ಯಾರಿಗೆ ಸಾರುತ್ತೇವೊ ಅವರ ಬಗ್ಗೆ ನಾವೇಕೆ ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು?

13 ಯೇಸು ಯಾರಿಗೆ ಬೋಧಿಸಿದನೋ ಆ ಜನರಿಗಾಗಿ ಪ್ರೀತಿಯನ್ನು ತೋರಿಸಿದನು. ಈ ವಿಷಯದಲ್ಲಿ ನಾವು ಅವನನ್ನು ಹೇಗೆ ಅನುಕರಿಸಬಲ್ಲೆವು? ನಮ್ಮ ಸುತ್ತಲಿರುವ ಜನರ ಕಡೆಗೆ ನಾವು ಎಂದಿಗೂ ಕಠೋರ ಮನೋಭಾವವನ್ನು ಬೆಳೆಸಿಕೊಳ್ಳಬಾರದು. ‘ದೇವರ ಮಹಾ ದಿನದಲ್ಲಾಗುವ ಯುದ್ಧವು’ ಹೆಚ್ಚೆಚ್ಚು ಹತ್ತಿರವಾಗುತ್ತಾ ಇದೆಯೆಂಬುದು ನಿಜ, ಮತ್ತು ಮಾನವಕುಲದ ನೂರಾರು ಕೋಟಿ ಜನರು ನಾಶವಾಗುವರು. (ಪ್ರಕಟನೆ 16:14; ಯೆರೆಮೀಯ 25:33) ಹೀಗಿದ್ದರೂ ಯಾರು ಬದುಕುವರು ಮತ್ತು ಯಾರು ಸಾಯುವರೆಂಬುದು ನಮಗೆ ತಿಳಿದಿಲ್ಲ. ಆ ನ್ಯಾಯತೀರ್ಪು ಮುಂದೆ ಆಗಲಿದೆ ಮತ್ತು ಅದನ್ನು ಯೆಹೋವನು ನೇಮಿಸಿರುವ ಯೇಸು ಕ್ರಿಸ್ತನು ಮಾಡುವನು. ಆ ನ್ಯಾಯತೀರ್ಪು ಆಗುವ ವರೆಗೂ, ನಾವು ಪ್ರತಿಯೊಬ್ಬ ವ್ಯಕ್ತಿಯನ್ನು, ಯೆಹೋವನ ಒಬ್ಬ ಭಾವೀ ಸೇವಕನೋಪಾದಿ ವೀಕ್ಷಿಸುವೆವು.​—ಮತ್ತಾಯ 19:​24-26; 25:​31-33; ಅ. ಕೃತ್ಯಗಳು 17:31.

14. (ಎ) ನಾವು ಜನರ ಕಡೆಗೆ ಪರಾನುಭೂತಿಯುಳ್ಳವರಾಗಿದ್ದೇವೊ ಇಲ್ಲವೊ ಎಂಬುದನ್ನು ಹೇಗೆ ಪರೀಕ್ಷಿಸಿಕೊಳ್ಳಬಹುದು? (ಬಿ) ಯಾವ ವ್ಯಾವಹಾರಿಕ ವಿಧಗಳಲ್ಲಿ ನಾವು ಇತರರಿಗಾಗಿ ಪರಾನುಭೂತಿ ಮತ್ತು ವೈಯಕ್ತಿಕ ಆಸಕ್ತಿಯನ್ನು ತೋರಿಸಬಹುದು?

14 ಆದುದರಿಂದ ಯೇಸುವಿನಂತೆ ನಾವು ಜನರಿಗಾಗಿ ಪರಾನುಭೂತಿಯುಳ್ಳವರಾಗಿರಬೇಕು. ನಾವು ನಮ್ಮನ್ನೇ ಹೀಗೆ ಪ್ರಶ್ನಿಸಿಕೊಳ್ಳಬಹುದು: ‘ಈ ಲೋಕದ ಧಾರ್ಮಿಕ, ರಾಜಕೀಯ, ಮತ್ತು ವಾಣಿಜ್ಯ ಘಟಕಗಳ ಜಾಣ ಸುಳ್ಳುಗಳು ಮತ್ತು ಕುತಂತ್ರಗಳಿಂದ ಮೋಸಹೋಗಿರುವ ಜನರಿಗಾಗಿ ನಾನು ಮರುಗುತ್ತೇನೊ? ನಾವು ಅವರಿಗೆ ಕೊಡುವ ಸಂದೇಶದ ಕಡೆಗೆ ಅವರು ಉದಾಸೀನಭಾವವನ್ನು ತೋರಿಸುವವರಂತೆ ಕಂಡುಬರುವಲ್ಲಿ, ಅವರಿಗೆ ಹಾಗೇಕೆ ಅನಿಸುತ್ತದೆಂಬುದನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೊ? ನಾನು ಅಥವಾ ಸದ್ಯದಲ್ಲಿ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿರುವ ಇತರರು ಕೂಡ, ಒಂದು ಕಾಲದಲ್ಲಿ ಹಾಗೆಯೇ ಭಾವಿಸುತ್ತಿದ್ದೆವೆಂಬುದನ್ನು ನಾನು ಅಂಗೀಕರಿಸುತ್ತೇನೊ? ನಾನು ಅವರಿಗೆ ತಕ್ಕಂತೆ ನನ್ನ ಸಾರುವ ವಿಧಾನವನ್ನು ಹೊಂದಿಸಿಕೊಂಡಿದ್ದೇನೊ? ಅಥವಾ ಇವರು ಎಂದಿಗೂ ಬದಲಾಗದ ಜನರು ಎಂಬ ಅಭಿಪ್ರಾಯವನ್ನು ತಾಳಿದ್ದೇನೊ?’ (ಪ್ರಕಟನೆ 12:9) ಜನರ ಕಡೆಗೆ ನಮಗಿರುವ ನಿಜವಾದ ಪರಾನುಭೂತಿಯನ್ನು ಅವರು ಗ್ರಹಿಸುವಾಗ, ಅವರು ನಮ್ಮ ಸಂದೇಶಕ್ಕೆ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು. (1 ಪೇತ್ರ 3:8) ಪರಾನುಭೂತಿಯು, ನಾವು ಶುಶ್ರೂಷೆಯಲ್ಲಿ ಭೇಟಿಯಾಗುವಂಥ ಜನರಲ್ಲಿ ಇನ್ನೂ ಹೆಚ್ಚಿನ ಆಸಕ್ತಿಯನ್ನು ವಹಿಸುವಂತೆ ನಮ್ಮನ್ನು ಪ್ರಚೋದಿಸುವುದು. ಅವರ ಪ್ರಶ್ನೆಗಳು ಮತ್ತು ಚಿಂತೆಗಳ ಬಗ್ಗೆ ನಾವು ಟಿಪ್ಪಣಿಯನ್ನು ಬರೆದುಕೊಳ್ಳಬಹುದು. ನಾವು ಪುನಃ ಅವರ ಬಳಿಗೆ ಹೋಗುವಾಗ, ಅವರು ಹಿಂದಿನ ಭೇಟಿಯಲ್ಲಿ ಮಾಡಿದಂಥ ಹೇಳಿಕೆಗಳ ಕುರಿತಾಗಿ ನಾವು ಯೋಚಿಸುತ್ತಿದ್ದೇವೆಂಬುದನ್ನು ವ್ಯಕ್ತಪಡಿಸಬಹುದು. ಮತ್ತು ಆ ಕ್ಷಣದಲ್ಲಿ ಅವರಿಗೆ ತುರ್ತಾದ ಅಗತ್ಯವೇನಾದರೂ ಇರುವಲ್ಲಿ, ನಾವು ವ್ಯಾವಹಾರಿಕ ಸಹಾಯವನ್ನು ಕೊಡಲು ಶಕ್ತರಾಗಿರಬಹುದೆಂದು ಅವರಿಗೆ ತಿಳಿಯಪಡಿಸಿರಿ.

15. ನಾವು ಜನರ ಒಳ್ಳೇ ಗುಣಗಳಿಗಾಗಿ ಏಕೆ ಹುಡುಕಬೇಕು, ಮತ್ತು ನಾವಿದನ್ನು ಹೇಗೆ ಮಾಡಬಲ್ಲೆವು?

15 ಯೇಸುವಿನಂತೆ, ನಾವು ಜನರಲ್ಲಿರುವ ಒಳ್ಳೇ ಗುಣಗಳಿಗಾಗಿ ಹುಡುಕುತ್ತೇವೆ. ಪ್ರಾಯಶಃ ಒಬ್ಬ ಒಂಟಿ ತಾಯಿಯು ತನ್ನ ಮಕ್ಕಳನ್ನು ಬೆಳೆಸುವುದರಲ್ಲಿ ಪ್ರಶಂಸಾರ್ಹ ಪ್ರಯತ್ನವನ್ನು ಮಾಡುತ್ತಿದ್ದಾಳೆ. ಒಬ್ಬ ಪುರುಷನು ತನ್ನ ಕುಟುಂಬವನ್ನು ಪೋಷಿಸಲು ಹೆಣಗಾಡುತ್ತಿದ್ದಾನೆ. ಒಬ್ಬ ವೃದ್ಧ ವ್ಯಕ್ತಿಯು ಆತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ತೋರಿಸುತ್ತಾನೆ. ನಾವು ಭೇಟಿಯಾಗುವಂಥ ಜನರಲ್ಲಿ ಇಂಥ ಗುಣಗಳನ್ನು ಗಮನಿಸಿ, ಅದಕ್ಕನುಸಾರ ಅವರನ್ನು ಶ್ಲಾಘಿಸುತ್ತೇವೊ? ಹಾಗೆ ಮಾಡುವುದರಿಂದ, ನಾವು ನಮ್ಮ ನಡುವೆ ಇರುವ ಸಾಮಾನ್ಯ ವಿಷಯಕ್ಕೆ ಒತ್ತುನೀಡುತ್ತೇವೆ ಮತ್ತು ಇದು ರಾಜ್ಯದ ಕುರಿತಾಗಿ ಒಂದು ಸಾಕ್ಷಿಯನ್ನು ಕೊಡಲು ಎಡೆಮಾಡಿಕೊಡುವುದು.​—ಅ. ಕೃತ್ಯಗಳು 26:​2, 3.

ಪ್ರೀತಿಯನ್ನು ತೋರಿಸಲು ನಮ್ರತೆಯು ಅತ್ಯಾವಶ್ಯಕ

16. ನಾವು ಯಾರಿಗೆ ಸಾರುತ್ತೇವೊ ಅವರೊಂದಿಗೆ ಸಾತ್ವಿಕತೆಯಿಂದಲೂ ಗೌರವದಿಂದಲೂ ನಡೆದುಕೊಳ್ಳುವುದು ಏಕೆ ಪ್ರಾಮುಖ್ಯ?

16 ನಾವು ಯಾರಿಗೆ ಬೋಧಿಸುತ್ತೇವೊ ಆ ಜನರಿಗಾಗಿರುವ ಪ್ರೀತಿಯು, ನಾವು ಬೈಬಲಿನ ಈ ವಿವೇಕಯುತ ಎಚ್ಚರಿಕೆಯನ್ನು ಪಾಲಿಸುವಂತೆ ಪ್ರಚೋದಿಸುವುದು: “ಜ್ಞಾನವು ಉಬ್ಬಿಸುತ್ತದೆ, ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.” (1 ಕೊರಿಂಥ 8:1) ಯೇಸುವಿನ ಬಳಿ ಅಪಾರವಾದ ಜ್ಞಾನವಿತ್ತು, ಆದರೆ ಅವನು ಎಂದಿಗೂ ಅಹಂಕಾರಿಯಾಗಿರಲಿಲ್ಲ. ಆದುದರಿಂದ ನೀವು ನಿಮ್ಮ ನಂಬಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಾಗ, ವಾದವಿವಾದದ ವಿಧಾನವನ್ನು ಇಲ್ಲವೆ ದುರಹಂಕಾರವನ್ನು ದೂರವಿಡಿರಿ. ನಮ್ಮ ಗುರಿಯು ಹೃದಯಗಳನ್ನು ತಲಪುವುದು ಮತ್ತು ನಾವು ಬಹಳಷ್ಟು ಪ್ರೀತಿಸುವಂಥ ಸತ್ಯಗಳ ಕಡೆಗೆ ಜನರನ್ನು ಆಕರ್ಷಿಸುವುದೇ ಆಗಿದೆ. (ಕೊಲೊಸ್ಸೆ 4:6) ಕ್ರೈಸ್ತರು ಉತ್ತರ ಕೊಡಲು ಸಿದ್ಧರಾಗಿರಬೇಕೆಂದು ಪೇತ್ರನು ಸಲಹೆ ಕೊಟ್ಟಾಗ, ನಾವು ಅದನ್ನು ‘ಸಾತ್ವಿಕತೆಯಿಂದ ಮತ್ತು ಗೌರವಕರವಾದ ರೀತಿಯಲ್ಲಿ’ ಮಾಡಬೇಕೆಂಬ ಮರುಜ್ಞಾಪಕವನ್ನೂ ಸೇರಿಸಿದನು. (1 ಪೇತ್ರ 3:15) ನಾವು ಸಾತ್ವಿಕರೂ ಗೌರವಪೂರ್ಣರೂ ಆಗಿರುವಲ್ಲಿ, ನಾವು ಸೇವಿಸುತ್ತಿರುವ ದೇವರ ಕಡೆಗೆ ನಾವು ಜನರನ್ನು ಆಕರ್ಷಿಸುವ ಸಾಧ್ಯತೆಗಳು ಇನ್ನೂ ಹೆಚ್ಚಾಗಿರುತ್ತವೆ.

17, 18. (ಎ) ಶುಶ್ರೂಷಕರೋಪಾದಿ ನಮ್ಮ ಅರ್ಹತೆಗಳ ಕುರಿತಾದ ಟೀಕಾತ್ಮಕ ಮನೋಭಾವಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? (ಬಿ) ಬೈಬಲ್‌ ವಿದ್ಯಾರ್ಥಿಗಳಿಗೆ ಬೈಬಲಿನ ಪುರಾತನ ಭಾಷೆಗಳ ಜ್ಞಾನವು ಅತ್ಯಗತ್ಯವಿಲ್ಲವೇಕೆ?

17 ನಮಗಿರುವ ಜ್ಞಾನ ಇಲ್ಲವೆ ಶಿಕ್ಷಣದ ಪ್ರದರ್ಶನ ಮಾಡುತ್ತಾ ಜನರನ್ನು ಪ್ರಭಾವಿಸುವ ಅಗತ್ಯವಿಲ್ಲ. ನಿಮ್ಮ ಟೆರಿಟೊರಿಯಲ್ಲಿರುವ ಕೆಲವರು, ವಿಶ್ವವಿದ್ಯಾನಿಲಯದ ಕೆಲವು ಡಿಗ್ರಿಗಳು ಇಲ್ಲವೆ ಪದವಿಗಳಿಲ್ಲದ ಯಾವುದೇ ವ್ಯಕ್ತಿಗೆ ಕಿವಿಗೊಡಲು ನಿರಾಕರಿಸುವಲ್ಲಿ, ಅವರ ಮನೋಭಾವದಿಂದ ನೀವು ನಿರುತ್ತೇಜಿತರಾಗುವ ಅಗತ್ಯವಿಲ್ಲ. ತನ್ನ ಸಮಯದಲ್ಲಿದ್ದ ಪ್ರತಿಷ್ಠಿತ ರಬ್ಬಿ ಶಾಲೆಗಳಿಗೆ ತಾನು ಹೋಗಿರಲಿಲ್ಲ ಎಂಬ ಆಕ್ಷೇಪಣೆಯನ್ನು ಯೇಸು ಕಿವಿಗೆ ಹಾಕಿಕೊಳ್ಳಲಿಲ್ಲ. ಮತ್ತು ತನಗಿದ್ದ ಅಪಾರವಾದ ಜ್ಞಾನದೊಂದಿಗೆ ಜನರನ್ನು ಪ್ರಭಾವಿಸಲು ಪ್ರಯತ್ನಿಸುತ್ತಾ ಅವನು ಆಗ ಜನಪ್ರಿಯವಾಗಿದ್ದ ಪೂರ್ವಾಗ್ರಹಗಳಿಗೆ ಮಣಿಯಲಿಲ್ಲ.​—ಯೋಹಾನ 7:15.

18 ಯಾವುದೇ ಪ್ರಮಾಣದ ಐಹಿಕ ಶಿಕ್ಷಣಕ್ಕಿಂತಲೂ ನಮ್ರತೆ ಮತ್ತು ಪ್ರೀತಿಯೇ ಕ್ರೈಸ್ತ ಶುಶ್ರೂಷಕರಿಗೆ ಹೆಚ್ಚು ಪ್ರಾಮುಖ್ಯವಾಗಿದೆ. ಮಹಾನ್‌ ಶಿಕ್ಷಕನಾದ ಯೆಹೋವನು ನಮ್ಮನ್ನು ಶುಶ್ರೂಷೆಗಾಗಿ ಅರ್ಹಗೊಳಿಸುತ್ತಾನೆ. (2 ಕೊರಿಂಥ 3:​5, 6) ಮತ್ತು ಕ್ರೈಸ್ತಪ್ರಪಂಚದ ಪಾದ್ರಿಗಳಲ್ಲಿ ಕೆಲವರು ಏನೇ ಹೇಳಲಿ, ದೇವರ ವಾಕ್ಯದ ಶಿಕ್ಷಕರಾಗಲು ನಾವು ಬೈಬಲಿನ ಪುರಾತನ ಭಾಷೆಗಳನ್ನು ಕಲಿಯುವ ಅಗತ್ಯವಿಲ್ಲ. ಯೆಹೋವನು ಬೈಬಲಿನ ಬರಹವನ್ನು ಪ್ರೇರಿಸಿದಾಗ, ಅದನ್ನು ಎಷ್ಟು ಸ್ಪಷ್ಟ ಹಾಗೂ ನಿರ್ದಿಷ್ಟ ಅಭಿವ್ಯಕ್ತಿಗಳನ್ನು ಬಳಸಿ ಬರೆಸಿದನೆಂದರೆ, ಕಾರ್ಯತಃ ಪ್ರತಿಯೊಬ್ಬರೂ ಅದರ ಅಮೂಲ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಆ ಸತ್ಯಗಳು, ನೂರಾರು ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಾಗ, ಸ್ವಲ್ಪವೂ ಬದಲಾಗದೇ ಹಾಗೆಯೇ ಉಳಿದಿವೆ. ಆದುದರಿಂದ ಆಗೊಮ್ಮೆ ಈಗೊಮ್ಮೆ ಪುರಾತನ ಭಾಷೆಗಳ ಜ್ಞಾನವು ಉಪಯುಕ್ತವಾಗಿರುವುದಾದರೂ, ಅದು ಇರಲೇಬೇಕೆಂಬ ಆವಶ್ಯಕತೆಯೇನಿಲ್ಲ. ಆದರೆ ಭಾಷಾಸಾಮರ್ಥ್ಯವನ್ನು ಹೊಂದಿರುವುದರ ಬಗ್ಗೆ ಒಬ್ಬನಲ್ಲಿ ಅಹಂಭಾವವಿರುವಲ್ಲಿ, ಅದು ಸತ್ಕ್ರೈಸ್ತರಿಗೆ ಅತ್ಯಾವಶ್ಯಕವಾಗಿರುವ ಒಂದು ಗುಣವನ್ನು ಕಳೆದುಕೊಳ್ಳುವಂತೆ ಮಾಡುವುದು. ಮತ್ತು ಆ ಗುಣವು, ಕಲಿಯುವ ಮನಸ್ಸುಳ್ಳವರಾಗಿರುವುದೇ ಆಗಿದೆ.​—1 ತಿಮೊಥೆಯ 6:4.

19. ನಮ್ಮ ಕ್ರೈಸ್ತ ಶುಶ್ರೂಷೆಯು ಯಾವ ಅರ್ಥದಲ್ಲಿ ಒಂದು ಸೇವೆಯಾಗಿದೆ?

19 ನಮ್ಮ ಕ್ರೈಸ್ತ ಶುಶ್ರೂಷೆಯು ನಮ್ರ ಮನೋಭಾವವನ್ನು ಅವಶ್ಯಪಡಿಸುವಂಥ ಒಂದು ಕೆಲಸವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ನಾವು ಕ್ರಮವಾಗಿ ವಿರೋಧ, ಉದಾಸೀನಭಾವ ಮತ್ತು ಹಿಂಸೆಗೂ ಗುರಿಯಾಗುತ್ತೇವೆ. (ಯೋಹಾನ 15:20) ಆದರೂ ನಮ್ಮ ಶುಶ್ರೂಷೆಯನ್ನು ನಂಬಿಗಸ್ತಿಕೆಯಿಂದ ಪೂರೈಸುವ ಮೂಲಕ, ನಾವು ಒಂದು ಅತ್ಯಾವಶ್ಯಕವಾದ ಸೇವೆಯನ್ನು ಸಲ್ಲಿಸುತ್ತೇವೆ. ಈ ಕೆಲಸದಲ್ಲಿ ನಾವು ನಮ್ರತೆಯಿಂದ ಇತರರ ಸೇವೆಮಾಡುತ್ತಾ ಮುಂದುವರಿದರೆ, ನಾವು ಯೇಸು ಕ್ರಿಸ್ತನು ಜನರ ಕಡೆಗೆ ತೋರಿಸಿದಂಥ ಪ್ರೀತಿಯನ್ನು ಅನುಕರಿಸುತ್ತಿದ್ದೇವೆ. ಇದನ್ನು ಪರಿಗಣಿಸಿರಿ: ಉದಾಸೀನಭಾವವನ್ನು ಮತ್ತು ವಿರೋಧವನ್ನು ತೋರಿಸುವಂಥ ಸಾವಿರಾರು ಜನರಿಗೆ ನಾವು ಸಾರಿ, ಆಮೇಲೆ ಒಬ್ಬ ಕುರಿಸದೃಶ ವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ, ನಮ್ಮ ಪ್ರಯತ್ನವು ಸಾರ್ಥಕವಾಗುವುದಲ್ಲವೊ? ಖಂಡಿತವಾಗಿಯೂ ಸಾರ್ಥಕವಾಗುವುದು! ಆದುದರಿಂದ ಈ ಕೆಲಸದಲ್ಲಿ ಪಟ್ಟುಹಿಡಿದು ಎಂದಿಗೂ ಪ್ರಯತ್ನವನ್ನು ಬಿಟ್ಟುಬಿಡದಿರುವ ಮೂಲಕ, ನಾವು ಇನ್ನೂ ತಲಪಬೇಕಾದ ಕುರಿಸದೃಶ ಜನರಿಗೆ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುತ್ತಿದ್ದೇವೆ. ಅಂತ್ಯವು ಬರುವ ಮುಂಚೆ ಇಂಥ ಅನೇಕಾನೇಕ ಅಮೂಲ್ಯ ವ್ಯಕ್ತಿಗಳು ಕಂಡುಹಿಡಿಯಲ್ಪಟ್ಟು, ಸಹಾಯವನ್ನು ಪಡೆಯುವಂತೆ ಯೆಹೋವನೂ ಯೇಸುವೂ ನೋಡಿಕೊಳ್ಳುವರು ಎಂಬುದಂತೂ ನಿಶ್ಚಯ.​—ಹಗ್ಗಾಯ 2:7.

20. ನಾವು ಮಾದರಿಯ ಮೂಲಕ ಕಲಿಸಬಹುದಾದ ಕೆಲವೊಂದು ವಿಧಗಳಾವುವು?

20 ಮಾದರಿಯ ಮೂಲಕ ಕಲಿಸುವುದು, ನಾವು ಇತರರನ್ನು ಸೇವಿಸಲು ಸಿದ್ಧರಾಗಿದ್ದೇವೆಂದು ತೋರಿಸುವ ಇನ್ನೊಂದು ವಿಧವಾಗಿದೆ. ದೃಷ್ಟಾಂತಕ್ಕಾಗಿ, “ಸಂತೋಷಭರಿತ ದೇವರಾಗಿರುವ” ಯೆಹೋವನನ್ನು ಸೇವಿಸುವುದೇ, ಸಾಧ್ಯವಿರುವವುಗಳಲ್ಲೇ ಅತ್ಯುತ್ತಮವಾದ, ಅತಿ ತೃಪ್ತಿದಾಯಕವಾದ ಜೀವನ ಮಾರ್ಗವಾಗಿದೆ ಎಂಬುದನ್ನು ನಾವು ಜನರಿಗೆ ಕಲಿಸಲು ಬಯಸುತ್ತೇವೆ. (1 ತಿಮೊಥೆಯ 1:​11, NW) ನಮ್ಮ ನೆರೆಯವರು, ಸಹಪಾಠಿಗಳು, ಮತ್ತು ಜೊತೆ ಕಾರ್ಮಿಕರೊಂದಿಗಿನ ನಮ್ಮ ನಡತೆ ಮತ್ತು ನಮ್ಮ ವ್ಯವಹಾರಗಳನ್ನು ಅವರು ಗಮನಿಸುವಾಗ, ನಾವು ಸಂತೋಷಿತರೂ ಸಂತೃಪ್ತರೂ ಆಗಿದ್ದೇವೆಂಬುದನ್ನು ಅವರು ನೋಡಬಲ್ಲರೊ? ಅದೇ ರೀತಿಯಲ್ಲಿ, ಈ ನಿರ್ದಯಿ, ಕಠೋರ ಲೋಕದಲ್ಲಿ ಕ್ರೈಸ್ತ ಸಭೆಯು ಪ್ರೀತಿಯ ಓಯಸೀಸ್‌ನಂತಿದೆಯೆಂದು ನಾವು ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ. ನಾವು ಸಭೆಯಲ್ಲಿರುವವರೆಲ್ಲರನ್ನೂ ಪ್ರೀತಿಸುತ್ತೇವೆ ಮತ್ತು ಪರಸ್ಪರರೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಶ್ರದ್ಧೆಯಿಂದ ಪ್ರಯಾಸಪಡುತ್ತೇವೆ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಸುಲಭವಾಗಿ ನೋಡಬಲ್ಲರೊ?​—1 ಪೇತ್ರ 4:8.

21, 22. (ಎ) ನಮ್ಮ ಶುಶ್ರೂಷೆಯ ಕುರಿತಾದ ಸ್ವಪರೀಕ್ಷೆಯು, ನಾವು ಯಾವ ಅವಕಾಶಗಳ ಪ್ರಯೋಜನ ಪಡೆದುಕೊಳ್ಳುವಂತೆ ನಡೆಸಬಲ್ಲದು? (ಬಿ) ಕಾವಲಿನಬುರುಜು ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿನ ಲೇಖನಗಳಲ್ಲಿ ಏನನ್ನು ಚರ್ಚಿಸಲಾಗುವುದು?

21 ನಮ್ಮ ಶುಶ್ರೂಷೆಯ ಕಡೆಗೆ ನಮಗಿರುವ ಸಿದ್ಧಮನಸ್ಸು ಕೆಲವೊಮ್ಮೆ ನಾವು ನಮ್ಮನ್ನೇ ಪುನಃ ಪರೀಕ್ಷಿಸಿಕೊಳ್ಳುವಂತೆ ಪ್ರಚೋದಿಸಬಲ್ಲದು. ಪ್ರಾಮಾಣಿಕವಾಗಿ ಹಾಗೆ ಪರೀಕ್ಷಿಸಿಕೊಳ್ಳುವಾಗ, ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವ ಮೂಲಕ ಇಲ್ಲವೆ ಪ್ರಚಾರಕರ ಅಗತ್ಯವು ಹೆಚ್ಚಾಗಿರುವ ಕ್ಷೇತ್ರಕ್ಕೆ ಸ್ಥಳಾಂತರಿಸುವ ಮೂಲಕ ತಮ್ಮ ಸೇವೆಯನ್ನು ಹೆಚ್ಚಿಸಬಹುದೆಂದು ಅನೇಕರು ಕಂಡುಕೊಳ್ಳುತ್ತಾರೆ. ಇನ್ನಿತರರು, ತಮ್ಮ ಸ್ವಂತ ಟೆರಿಟೊರಿಯಲ್ಲಿ ಬೆಳೆಯುತ್ತಿರುವ ವಲಸಿಗರ ಸಮುದಾಯದ ಸೇವೆಮಾಡಲಿಕ್ಕಾಗಿ ಒಂದು ವಿದೇಶಿ ಭಾಷೆಯನ್ನು ಕಲಿಯಲು ನಿರ್ಧರಿಸಿದ್ದಾರೆ. ಇಂಥ ಆಯ್ಕೆಗಳು ನಿಮ್ಮ ಮುಂದಿರುವಲ್ಲಿ, ಅವುಗಳನ್ನು ಜಾಗರೂಕತೆಯಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿರಿ. ಸೇವಾ ಜೀವನವು ಬಹಳಷ್ಟು ಆನಂದ, ತೃಪ್ತಿ ಮತ್ತು ಮನಶ್ಶಾಂತಿಯನ್ನು ತರುತ್ತದೆ.​—ಪ್ರಸಂಗಿ 5:12.

22 ನಾವು ಬೋಧಿಸುವಂಥ ಸತ್ಯಗಳಿಗಾಗಿ ಮತ್ತು ನಾವು ಯಾರಿಗೆ ಬೋಧಿಸುತ್ತೇವೊ ಆ ಜನರಿಗಾಗಿ ನಮ್ಮ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕ ನಾವು ಎಲ್ಲ ರೀತಿಯಲ್ಲಿ ಯೇಸು ಕ್ರಿಸ್ತನನ್ನು ಅನುಕರಿಸೋಣ. ಈ ಎರಡು ವಿಧಗಳಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಮತ್ತು ಪ್ರದರ್ಶಿಸುವುದು, ನಾವು ಕ್ರಿಸ್ತನಂಥ ಬೋಧಕರಾಗಿರಲು ಒಂದು ಒಳ್ಳೆಯ ಅಸ್ತಿವಾರವನ್ನು ಹಾಕಲು ನಮಗೆ ಸಹಾಯಮಾಡುವುದು. ಆದರೆ ಆ ಅಸ್ತಿವಾರದ ಮೇಲೆ ನಾವು ಹೇಗೆ ಕಟ್ಟಬಲ್ಲೆವು? ಕಾವಲಿನಬುರುಜು ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ, ಲೇಖನಗಳ ಒಂದು ಸರಮಾಲೆಯು ಯೇಸು ಉಪಯೋಗಿಸಿದಂಥ ನಿರ್ದಿಷ್ಟ ಬೋಧನಾ ವಿಧಾನಗಳನ್ನು ಚರ್ಚಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 11 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ನೀವು ಹೇಗೆ ಉತ್ತರಿಸುವಿರಿ?

• ಒಬ್ಬ ಬೋಧಕನೋಪಾದಿ ಯೇಸುವಿನ ಮಾದರಿಯು, ನಾವು ಅನುಕರಿಸಲಾಗದಷ್ಟು ಉನ್ನತಮಟ್ಟದಲ್ಲಿಲ್ಲ ಎಂಬುದಕ್ಕೆ ಯಾವ ಆಶ್ವಾಸನೆ ನಮಗಿದೆ?

• ನಾವು ಬೈಬಲಿನಿಂದ ಕಲಿತಿರುವ ಸತ್ಯಗಳನ್ನು ಪ್ರೀತಿಸುತ್ತೇವೆಂದು ಹೇಗೆ ತೋರಿಸಬಹುದು?

• ನಾವು ಜ್ಞಾನದಲ್ಲಿ ಬೆಳೆಯುತ್ತಾ ಹೋದಂತೆ, ನಮ್ರರಾಗಿ ಉಳಿಯುವುದು ಪ್ರಾಮುಖ್ಯವಾಗಿದೆ ಏಕೆ?

• ನಾವು ಕಲಿಸಲು ಪ್ರಯತ್ನಿಸುವಂಥ ಜನರಿಗಾಗಿ ನಾವು ಪ್ರೀತಿಯನ್ನು ತೋರಿಸಬಹುದಾದ ಕೆಲವೊಂದು ವಿಧಗಳಾವುವು?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚಿತ್ರಗಳು]

ಸಿದ್ಧರಾಗಿರಲಿಕ್ಕಾಗಿ ನಿಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿರಿ

[ಪುಟ 16, 17ರಲ್ಲಿರುವ ಚಿತ್ರಗಳು]

ನೀವು “ದೈವಜ್ಞಾನವನ್ನು” ನಿಕ್ಷೇಪದಂತೆ ಕೂಡಿಸಿಟ್ಟರೆ, ಬೈಬಲನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಶಕ್ತರಾಗಿರುವಿರಿ

[ಪುಟ 18ರಲ್ಲಿರುವ ಚಿತ್ರ]

ಜನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವ ಮೂಲಕ ನಾವು ಅವರಿಗೆ ಪ್ರೀತಿಯನ್ನು ತೋರಿಸುತ್ತೇವೆ