ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಷ್ಠೆಯ ಕುರಿತು ವಿಕೃತ ನೋಟಗಳುಳ್ಳ ಒಂದು ಲೋಕ

ನಿಷ್ಠೆಯ ಕುರಿತು ವಿಕೃತ ನೋಟಗಳುಳ್ಳ ಒಂದು ಲೋಕ

ನಿಷ್ಠೆಯ ಕುರಿತು ವಿಕೃತ ನೋಟಗಳುಳ್ಳ ಒಂದು ಲೋಕ

ಒಂದು ಬೆಚ್ಚಗಿನ ಶುಕ್ರವಾರ ಸಾಯಂಕಾಲದಂದು, ಇಸ್ರಾಯೇಲಿನ ಟೆಲ್‌ ಅವಿವ್‌ನಲ್ಲಿ ಒಬ್ಬ ಯುವಕನು ಒಂದು ನೈಟ್‌ಕ್ಲಬ್‌ನ ಹೊರಗೆ ಕಾಯುತ್ತಿದ್ದ ಒಂದು ಯುವಕರ ಗುಂಪಿನೊಟ್ಟಿಗೆ ಜೊತೆಗೂಡಿದನು. ಕ್ಷಣಗಳಾನಂತರ ಒಂದು ಧ್ವಂಸಕಾರಕ ಸ್ಫೋಟವು ಆ ಗುಂಪನ್ನು ಛಿನ್ನವಿಚ್ಛಿನ್ನಗೊಳಿಸಿತು.

ಮತ್ತೊಬ್ಬ ಆತ್ಮಹತ್ಯಾ ಬಾಂಬರ್‌ ತನ್ನ ಜೀವವನ್ನು ಬಲಿಕೊಟ್ಟು, ನಿರ್ದಯವಾಗಿ ಇತರ 19 ಮಂದಿ ಯುವಕರ ಪ್ರಾಣವನ್ನು ಬಲಿತೆಗೆದುಕೊಂಡಿದ್ದನು. “ಎಲ್ಲೆಡೆಯೂ ದೇಹದ ಭಾಗಗಳು ಬಿದ್ದಿದ್ದವು, ಎಲ್ಲರೂ ಯುವಕರಾಗಿದ್ದರು, ತುಂಬ ಚಿಕ್ಕ ಪ್ರಾಯದವರು​—ನಾನು ಹಿಂದೆಂದೂ ಕಂಡಿರದಂಥ ಅತಿ ಘೋರವಾದ ದೃಶ್ಯ ಅದಾಗಿತ್ತು,” ಎಂದು ನಂತರ ಒಬ್ಬ ವೈದ್ಯನು ವರದಿಸಿದನು.

“ಎಲ್ಲರೂ . . . ಮೆಚ್ಚುವಂಥ ನಿಷ್ಠೆಯಂಥ ಗುಣಗಳೇ, ಯುದ್ಧಗಳು ಪ್ರಾರಂಭವಾಗುವುದನ್ನು ಹೆಚ್ಚು ಸಂಭವನೀಯವಾಗಿ ಮಾಡುತ್ತವೆ ಮತ್ತು ಕೊನೆಗೊಳ್ಳುವುದನ್ನು ಹೆಚ್ಚು ಕಷ್ಟಕರವಾಗಿ ಮಾಡುತ್ತವೆ,” ಎಂದು ದ ಲ್ಯಾನ್ಸೆಟ್‌ನಲ್ಲಿ ಥರ್ಸ್‌ಟನ್‌ ಬ್ರೂಅನ್‌ ಬರೆದರು. ಹೌದು, ಕ್ರೈಸ್ತಪ್ರಪಂಚದ ಧರ್ಮಯುದ್ಧಗಳಿಂದ ಹಿಡಿದು ನಾಸಿ ಜರ್ಮನಿಯ ವ್ಯವಸ್ಥಿತವಾದ ಕಗ್ಗೊಲೆಯ ತನಕ, ಮಾನವ ಇತಿಹಾಸವು ನಿಷ್ಠೆಯ ಹೆಸರಿನಲ್ಲಿ ಮಾಡಲ್ಪಟ್ಟ ಹತ್ಯೆಗಳಿಂದ ರಕ್ತಸಿಕ್ತವಾಗಿದೆ.

ನಿಷ್ಠಾಹೀನತೆಗೆ ಅಧಿಕ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ಜನರು

ಅಂಧಾಭಿಮಾನದ ನಿಷ್ಠೆಯು ವಿನಾಶಕರವಾಗಿರಬಲ್ಲದಾದರೂ, ನಿಷ್ಠೆಯ ಕೊರತೆ ಕೂಡ ಸಮಾಜವನ್ನು ಧ್ವಂಸಮಾಡಬಲ್ಲದು ಎಂಬುದಂತೂ ನಿಶ್ಚಯ. ನಿಷ್ಠಾವಂತರಾಗಿರುವುದರ ಅರ್ಥ, ಒಬ್ಬ ವ್ಯಕ್ತಿಗೆ ಅಥವಾ ಕಾರಣಕ್ಕೆ ನಂಬಿಗಸ್ತರಾಗಿರುವುದು ಮತ್ತು ಅವನನ್ನು/ಅದನ್ನು ತೊರೆದುಬಿಡಲು ಅಥವಾ ದ್ರೋಹಮಾಡಲು ಏಳಬಹುದಾದ ಯಾವುದೇ ಶೋಧನೆಯ ಎದುರಿನಲ್ಲಿ ವೈಯಕ್ತಿಕವಾಗಿ ಸ್ಥಿರಚಿತ್ತರಾಗಿ ಅಂಟಿಕೊಳ್ಳುವುದೇ ಆಗಿದೆ. ಈ ರೀತಿಯ ನಿಷ್ಠೆಯನ್ನು ತಾವು ಮೆಚ್ಚುತ್ತೇವೆಂದು ಅಧಿಕಾಂಶ ಜನರು ಹೇಳುತ್ತಾರಾದರೂ, ಸಮಾಜವು ಅದರ ಅತಿ ಮೂಲಭೂತ ಅಂತಸ್ತಾದ ಕುಟುಂಬ ವೃತ್ತದಲ್ಲೇ ಅತಿ ಹೆಚ್ಚು ಪ್ರಮಾಣದ ನಿಷ್ಠೆಯ ಕೊರತೆಯನ್ನು ಅನುಭವಿಸುತ್ತಿದೆ. ವೈಯಕ್ತಿಕ ಅಭಿಲಾಷೆಗಳ ಪೂರೈಕೆಗೆ ಕೊಡಲಾಗುತ್ತಿರುವ ಮಹತ್ವ, ದೈನಂದಿನ ಜೀವಿತದ ನಿರ್ಬಂಧಗಳು ಹಾಗೂ ಒತ್ತಡಗಳು ಮತ್ತು ವ್ಯಾಪಕವಾದ ಲೈಂಗಿಕ ಅಪನಂಬಿಗಸ್ತಿಕೆಯ ಪರಿಣಾಮಗಳ ಕಾರಣ, ವಿವಾಹ ವಿಚ್ಛೇದದ ಪ್ರಮಾಣವು ಉತ್ತುಂಗಕ್ಕೇರಿದೆ. ಮತ್ತು ಟೆಲ್‌ ಅವಿವ್‌ನ ಬಾಂಬ್‌ ವಿಸ್ಫೋಟದಲ್ಲಿ ಜೀವನಷ್ಟವಾದಂತೆ, ಹೆಚ್ಚಿನ ವೇಳೆ ಯುವ ಜನರೇ ಮುಗ್ಧ ಬಲಿಪಶುಗಳಾಗುತ್ತಾರೆ.

“ವಿವಾಹ ವಿಚ್ಛೇದ, ಪ್ರತ್ಯೇಕ ವಾಸ, ಮತ್ತು ಏಕ ಹೆತ್ತವರು ಎಂಬಂಥ ಕಾರಣಗಳಿಂದ ಏಳುವ ಕೌಟುಂಬಿಕ ಅಸ್ಥಿರತೆಯಿಂದಾಗಿ ತೀರ ವ್ಯತಿರಿಕ್ತವಾಗಿ ಬಾಧಿಸಲ್ಪಡುವುದು ಒಂದು ಮಗುವಿನ ವಿದ್ಯಾಭ್ಯಾಸವೇ,” ಎಂದು ಒಂದು ವರದಿಯು ಹೇಳುತ್ತದೆ. ವಿಶೇಷವಾಗಿ ಒಂಟಿ ತಾಯಿ ಇರುವಂಥ ಕುಟುಂಬಗಳಲ್ಲಿರುವ ಹುಡುಗರು, ವಿದ್ಯಾಭ್ಯಾಸದ ಅನನುಕೂಲತೆ, ಆತ್ಮಹತ್ಯೆ, ಮತ್ತು ಬಾಲಾಪರಾಧದ ಅಪಾಯಕ್ಕೊಳಗಾಗಿರುವಂತೆ ತೋರುತ್ತದೆ. ಪ್ರತಿ ವರ್ಷ, ಅಮೆರಿಕದಲ್ಲಿ ಸುಮಾರು ಹತ್ತು ಲಕ್ಷ ಮಕ್ಕಳು ತಮ್ಮ ಹೆತ್ತವರ ವಿಚ್ಛೇದವನ್ನು ಅನುಭವಿಸುತ್ತಾರೆ, ಮತ್ತು ಯಾವುದೇ ನಿರ್ದಿಷ್ಟ ವರ್ಷದಲ್ಲಿ, ಆ ದೇಶದಲ್ಲಿ ವಿವಾಹಿತ ಹೆತ್ತವರಿಗೆ ಹುಟ್ಟುವಂಥ ಮಕ್ಕಳಲ್ಲಿ ಅರ್ಧ ಮಂದಿ 18 ವರ್ಷ ಪ್ರಾಯವನ್ನು ತಲಪುವಷ್ಟರಲ್ಲಿ, ವಿವಾಹ ವಿಚ್ಛೇದದ ಬಲಿಗಳಾಗಿರುವುದು ಸಂಭವನೀಯ. ಪ್ರಪಂಚದ ಇತರ ಭಾಗಗಳಲ್ಲಿ ಕೂಡ ಅನೇಕ ಯುವ ಜನರಿಗಿರುವ ಪ್ರತೀಕ್ಷೆಯು ತದ್ರೀತಿಯಲ್ಲಿ ಎದೆಯೊಡೆಯುವಂಥದ್ದಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ.

ನಿಷ್ಠೆ​—ತಲಪಲು ತುಂಬ ಕಷ್ಟಕರವಾದ ಮಟ್ಟವೋ?

ಸಾಂಪ್ರದಾಯಿಕ ನಿಷ್ಠೆಯಲ್ಲಿನ ಸದ್ಯದ ಕುಸಿತವು, ರಾಜ ದಾವೀದನ ಮಾತುಗಳು ಹಿಂದೆಂದಿಗಿಂತಲೂ ಹೆಚ್ಚು ಸೂಕ್ತವಾಗಿ ಕಂಡುಬರುವಂತೆ ಮಾಡುತ್ತದೆ: “ಯೆಹೋವನೇ, ರಕ್ಷಿಸು; ಭಕ್ತರು [“ನಿಷ್ಠಾವಂತರು,” NW] ಮುಗಿದು ಹೋಗಿದ್ದಾರೆ. ಜನರೊಳಗೆ ನಂಬಿಕೆಯುಳ್ಳವರು ಕಾಣಿಸುವದೇ ಇಲ್ಲ.” (ಕೀರ್ತನೆ 12:1) ನಿಷ್ಠೆಯ ಇಷ್ಟು ವ್ಯಾಪಕವಾದ ಕೊರತೆಯೇಕೆ? ರಾಜರ್‌ ರೋಸನ್‌ಬ್ಲಾಟ್‌, ಟೈಮ್‌ ಪತ್ರಿಕೆಯಲ್ಲಿ ಬರೆಯುತ್ತಾ ಹೇಳಿದ್ದು: “ನಿಷ್ಠೆಯು ಅತಿ ಗೌರವಪೂರ್ಣ ಮಟ್ಟವಾಗಿರುವುದಾದರೂ, ನೈತಿಕವಾಗಿ ದುರ್ಬಲರಾಗಿರುವ ಮಾನವ ಜೀವಿಗಳು ನಿಷ್ಠೆಯ ಮಟ್ಟವನ್ನು ಕಾಪಾಡಿಕೊಳ್ಳುವಂತೆ ನಿರೀಕ್ಷಿಸಲಿಕ್ಕಾಗಿ, ನಮ್ಮ ಮೂಲಭೂತ ಮಾನವ ಗುಣಗಳಲ್ಲಿ ಭಯ, ಆತ್ಮಸಂಶಯ, ಸಮಯಸಾಧಕತೆ ಮತ್ತು ಮಹತ್ವಾಕಾಂಕ್ಷೆಗಳೇ ತೀರ ಹೆಚ್ಚಾಗಿವೆ.” ನಾವು ಜೀವಿಸುತ್ತಿರುವ ಕಾಲದ ಕುರಿತಾಗಿ ವರ್ಣಿಸುತ್ತಾ ಬೈಬಲ್‌ ಮುಚ್ಚುಮರೆಯಿಲ್ಲದೆ ತಿಳಿಸುವುದು: “ಮನುಷ್ಯರು ಸ್ವಾರ್ಥಚಿಂತಕರೂ . . . ದೇವಭಯವಿಲ್ಲದವರೂ [“ನಿಷ್ಠಾಹೀನರೂ,” NW] ಮಮತೆಯಿಲ್ಲದವರೂ . . . ಆಗಿರುವರು.”​—2 ತಿಮೊಥೆಯ 3:1-5.

ನಿಷ್ಠೆಯು​—ಅಥವಾ ಅದರ ಕೊರತೆಯು​—ಒಬ್ಬ ವ್ಯಕ್ತಿಯ ಆಲೋಚನೆ ಮತ್ತು ಕೃತ್ಯಗಳ ಮೇಲೆ ಬೀರುವ ಬಲವಾದ ಪ್ರಭಾವವನ್ನು ಪರಿಗಣಿಸಿರಲಾಗಿ, ‘ಯಾರು ನಿಜವಾಗಿಯೂ ನಮ್ಮ ನಿಷ್ಠೆಗೆ ಅರ್ಹರಾಗಿದ್ದಾರೆ?’ ಎಂದು ನಾವು ಕೇಳಬಹುದು. ಈ ಪ್ರಶ್ನೆಯ ಕುರಿತು ಮುಂದಿನ ಲೇಖನವು ಏನು ಹೇಳಲಿದೆ ಎಂಬುದನ್ನು ಪರಿಗಣಿಸಿರಿ.

[ಪುಟ 3ರಲ್ಲಿರುವ ಚಿತ್ರ ಕೃಪೆ]

ಮೇಲಿರುವ ಫೋಟೋ: © AFP/CORBIS