ನೀವು ಯಾರಿಗೆ ನಿಷ್ಠರಾಗಿರಬೇಕು?
ನೀವು ಯಾರಿಗೆ ನಿಷ್ಠರಾಗಿರಬೇಕು?
“ನಮ್ಮ ದೇಶ: . . . ಅದು ಮಾಡುವುದೆಲ್ಲವೂ ಸದಾ ಸರಿಯಾಗಿರಲಿ; ಅದು ಮಾಡುವಂಥದ್ದು ಸರಿಯಾಗಿರಲಿ, ತಪ್ಪಾಗಿರಲಿ, ನಮ್ಮ ದೇಶ ನಮ್ಮ ದೇಶವೇ.”—ಸ್ಟೀಫನ್ ಡಿಕಾಟರ್, ಯು.ಎಸ್. ನೌಕಾದಳ ಅಧಿಕಾರಿ, 1779-1820.
ಒಬ್ಬನ ದೇಶಕ್ಕಾಗಿ ಸಂಪೂರ್ಣ ನಿಷ್ಠೆಯನ್ನು ತೋರಿಸುವುದನ್ನು ಅನೇಕರು ತಮ್ಮ ಪ್ರಪ್ರಧಾನ ಕರ್ತವ್ಯವಾಗಿ ಪರಿಗಣಿಸುತ್ತಾರೆ. ಇತರರು ಸ್ಟೀಫನ್ ಡಿಕಾಟರ್‌ನ ವಾಕ್ಯವನ್ನು ಬೇರೆ ಮಾತುಗಳಲ್ಲಿ, ‘ನನ್ನ ಧರ್ಮ, ಅದು ಮಾಡುವುದೆಲ್ಲವೂ ಸದಾ ಸರಿಯಾಗಿರಲಿ; ಅದು ಮಾಡುವಂಥದ್ದು ಸರಿಯಾಗಿರಲಿ, ತಪ್ಪಾಗಿರಲಿ, ನನ್ನ ಧರ್ಮ ನನ್ನ ಧರ್ಮವೇ’ ಎಂದು ಹೇಳಬಹುದು.
ವಾಸ್ತವಿಕವಾಗಿ, ನಮ್ಮ ನಿಷ್ಠೆಯನ್ನು ಹಕ್ಕೊತ್ತಾಯದಿಂದ ಕೇಳಿಕೊಳ್ಳುವಂಥ ದೇಶ ಅಥವಾ ಧರ್ಮವನ್ನು ಅನೇಕವೇಳೆ ನಮ್ಮ ಜನ್ಮಸ್ಥಳವು ನಿರ್ಧರಿಸುತ್ತದೆ. ಆದರೆ ನಾವು ಯಾರಿಗೆ ನಿಷ್ಠರಾಗಿರಬೇಕು ಎಂಬ ತೀರ್ಮಾನವು, ಅಕಸ್ಮಾತ್ತಾಗಿ ಆಗುತ್ತದೆಂದು ಹೇಳಿ ಸುಮ್ಮನಿರುವಷ್ಟು ಸಾಮಾನ್ಯವಾದ ವಿಷಯವಲ್ಲ. ಆದರೂ, ಒಬ್ಬನು ಯಾವ ನಿಷ್ಠೆಗಳೊಂದಿಗೆ ಬೆಳೆಸಲ್ಪಟ್ಟಿದ್ದಾನೋ ಅವುಗಳಿಗೆ ಸವಾಲನ್ನೊಡ್ಡುವುದು ಧೈರ್ಯವನ್ನು ಕೇಳಿಕೊಳ್ಳುತ್ತದೆ ಮತ್ತು ಪಂಥಾಹ್ವಾನಗಳನ್ನು ಎಬ್ಬಿಸುತ್ತದೆ.
ನಿಷ್ಠೆಗಳ ಪರೀಕ್ಷೆ
ಸಾಂಬಿಯದಲ್ಲಿ ಬೆಳೆದ ಒಬ್ಬ ಸ್ತ್ರೀಯು ಹೇಳುವುದು: “ನಾನು ಚಿಕ್ಕ ಪ್ರಾಯದಿಂದಲೇ ಧಾರ್ಮಿಕ ಮನೋಭಾವದವಳಾಗಿದ್ದೆ. ಕುಟುಂಬದ ಪೂಜಾಸ್ಥಳದಲ್ಲಿ ಪ್ರತಿನಿತ್ಯ ಪ್ರಾರ್ಥನೆ, ಧಾರ್ಮಿಕ ದಿನಗಳ ಆಚರಣೆ, ಮತ್ತು ದೇವಸ್ಥಾನಕ್ಕೆ ಕ್ರಮವಾಗಿ ಹೋಗುವಂಥದ್ದು ಕುಟುಂಬದಿಂದ ಕೊಡಲ್ಪಟ್ಟ ತರಬೇತಿಯಾಗಿತ್ತು. ನನ್ನ ಧರ್ಮ ಮತ್ತು ಆರಾಧನೆಯು
ನನ್ನ ಸಂಸ್ಕೃತಿ, ಸಮಾಜ ಮತ್ತು ಕುಟುಂಬದೊಂದಿಗೆ ನಿಕಟವಾಗಿ ಹೆಣೆಯಲ್ಪಟ್ಟಿತ್ತು.”ಆದರೂ, ಅವಳು ತನ್ನ ಹದಿಪ್ರಾಯದ ಕೊನೆಯಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದಳು ಮತ್ತು ತದನಂತರ ಶೀಘ್ರದಲ್ಲೇ ತನ್ನ ಧರ್ಮವನ್ನು ಬದಲಾಯಿಸುವ ತೀರ್ಮಾನವನ್ನು ಮಾಡಿದಳು. ಇದು ಒಂದು ನಿಷ್ಠಾಹೀನ ಕೃತ್ಯವಾಗಿತ್ತೋ?
ಸ್ಲಾಟ್‌ಕೋ ಎಂಬವನು ಬಾಸ್ನಿಯದಲ್ಲಿ ಬೆಳೆಸಲ್ಪಟ್ಟವನಾಗಿದ್ದನು. ಮತ್ತು ತನ್ನ ಸ್ವದೇಶವನ್ನು ಮುತ್ತಿಕೊಂಡಂಥ ಒಂದು ಹೋರಾಟದಲ್ಲಿ ಒಂದಷ್ಟು ಕಾಲಾವಧಿಯ ವರೆಗೆ ಅವನು ಹೋರಾಡಿದನು. ಅವನು ಕೂಡ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದನು. ಈಗ ಅವನು ಯಾರ ವಿರುದ್ಧವೇ ಆಗಲಿ ಆಯುಧಗಳನ್ನು ಎತ್ತುವುದನ್ನು ನಿರಾಕರಿಸುತ್ತಾನೆ. ಹೀಗೆ ಮಾಡುವುದರಿಂದ ಅವನು ನಿಷ್ಠಾಹೀನನಾಗಿದ್ದಾನೋ?
ಈ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರ ಕೊಡುವಿರಿ ಎಂಬುದು ನಿಮ್ಮ ದೃಷ್ಟಿಕೋನದ ಮೇಲೆ ಆತುಕೊಂಡಿದೆ. ಈ ಮೊದಲು ತಿಳಿಸಿದಂಥ ಸ್ತ್ರೀಯು ಹೇಳುವುದು: “ನನ್ನ ಸಮಾಜದಲ್ಲಿ, ಒಬ್ಬನ ಧರ್ಮವನ್ನು ಬದಲಾಯಿಸುವುದು ಅಕ್ಷಮ್ಯ ಅಪರಾಧವಾಗಿ ವೀಕ್ಷಿಸಲ್ಪಡುತ್ತಿತ್ತು; ಇದು ನಿಷ್ಠಾಹೀನತೆಯ ಕೃತ್ಯವಾಗಿ, ಒಬ್ಬ ವ್ಯಕ್ತಿಯು ತನ್ನ ಸ್ವಂತ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಎಸಗಿರುವ ದ್ರೋಹವಾಗಿ ಪರಿಗಣಿಸಲ್ಪಡುತ್ತಿತ್ತು.” ತದ್ರೀತಿಯಲ್ಲಿ, ಸ್ಲಾಟ್‌ಕೋನ ಮಾಜಿ ಮಿಲಿಟರಿ ಸಂಗಡಿಗರು, ತಮ್ಮ ಪಕ್ಷದಲ್ಲಿ ಕಾದಾಡಲು ನಿರಾಕರಿಸುವ ಯಾರನ್ನೂ ದ್ರೋಹಿಗಳೆಂದು ವೀಕ್ಷಿಸುತ್ತಿದ್ದರು. ಆದರೆ ಆ ಮಹಿಳೆ ಮತ್ತು ಸ್ಲಾಟ್‌ಕೋರಿಬ್ಬರೂ, ಒಂದು ಉನ್ನತ ರೀತಿಯ ನಿಷ್ಠೆಯು—ದೇವರಿಗಾಗಿರುವ ನಿಷ್ಠೆಯು—ತಮ್ಮ ಕೃತ್ಯಗಳನ್ನು ಪ್ರೇರಿಸುತ್ತದೆ ಎಂದು ನೆನಸುತ್ತಾರೆ. ಹೆಚ್ಚು ಪ್ರಾಮುಖ್ಯವಾಗಿ, ತನಗೆ ನಿಷ್ಠರಾಗಿರಲು ಬಯಸುವವರನ್ನು ದೇವರು ಹೇಗೆ ವೀಕ್ಷಿಸುತ್ತಾನೆ?
ನಿಜವಾದ ನಿಷ್ಠೆ—ಪ್ರೀತಿಯ ಒಂದು ಸಂಕೇತ
ರಾಜ ದಾವೀದನು ಯೆಹೋವ ದೇವರಿಗೆ ಹೇಳಿದ್ದು: “ನೀನು ನಿಷ್ಠಾವಂತನೊಂದಿಗೆ ನಿಷ್ಠೆಯಿಂದಲೇ ವರ್ತಿಸುತ್ತೀ.” (2 ಸಮುವೇಲ 22:26, NW) “ನಿಷ್ಠೆ” ಎಂದು ಇಲ್ಲಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು, ಒಂದು ವಿಷಯದ ಸಂಬಂಧದಲ್ಲಿ ಅದರ ಉದ್ದೇಶವು ಸಾಧಿಸಲ್ಪಡುವ ತನಕ ಆ ವಿಷಯದೊಂದಿಗೆ ಪ್ರೀತಿಯಿಂದ ಅಂಟಿಕೊಂಡಿರುವ ದಯೆಯನ್ನು ಸೂಚಿಸುತ್ತದೆ. ಒಂದು ಮೊಲೆಕೂಸಿನೊಂದಿಗೆ ಒಬ್ಬ ತಾಯಿಗಿರುವ ಮನೋಭಾವದಂತೆಯೇ, ತನಗೆ ಯಾರು ನಿಷ್ಠರಾಗಿರುತ್ತಾರೋ ಅವರಿಗೆ ಯೆಹೋವನು ತನ್ನನ್ನೇ ಪ್ರೀತಿಯಿಂದ ಅಂಟಿಸಿಕೊಳ್ಳುತ್ತಾನೆ. ಪುರಾತನ ಇಸ್ರಾಯೇಲಿನಲ್ಲಿದ್ದ ತನ್ನ ನಿಷ್ಠಾವಂತ ಸೇವಕರಿಗೆ ಯೆಹೋವನು ಹೇಳಿದ್ದು: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ.” (ಯೆಶಾಯ 49:15) ಯಾರು ತಮ್ಮ ಜೀವಿತಗಳಲ್ಲಿ ಬೇರೆಲ್ಲಾ ವಿಷಯಗಳಿಗಿಂತ ಮಿಗಿಲಾಗಿ ಯೆಹೋವನಿಗೆ ತೋರಿಸುವ ನಿಷ್ಠೆಗೆ ಅಗ್ರಗಣ್ಯ ಸ್ಥಾನವನ್ನು ಕೊಡಲು ಬಯಸುತ್ತಾರೋ ಅವರಿಗೆ ಆತನ ಪ್ರೀತಿಯ ಆರೈಕೆಯ ಆಶ್ವಾಸನೆಯಿರುತ್ತದೆ.
ಯೆಹೋವನಿಗಾಗಿರುವ ನಿಷ್ಠೆಯು ಪ್ರೀತಿಯ ಮೇಲೆ ಆಧಾರಿತವಾಗಿದೆ. ಇದು ಒಬ್ಬ ವ್ಯಕ್ತಿಯು ಯೆಹೋವನು ಪ್ರೀತಿಸುವಂಥ ವಿಷಯಗಳನ್ನು ಪ್ರೀತಿಸುವಂತೆಯೂ ಆತನು ಹೇಸುವ ದುಷ್ಟ ವಿಷಯಗಳನ್ನು ಹೇಸುವಂತೆಯೂ ಪ್ರೇರಿಸುತ್ತದೆ. (ಕೀರ್ತನೆ 97:10) ಯೆಹೋವನ ಪ್ರಧಾನ ಗುಣವು ಪ್ರೀತಿಯಾಗಿರುವುದರಿಂದ, ದೇವರ ಕಡೆಗಿನ ನಿಷ್ಠೆಯು ನೀವು ಇತರರ ಬಗ್ಗೆ ಪ್ರೀತಿರಹಿತವಾದ ರೀತಿಯಲ್ಲಿ ವರ್ತಿಸದಿರುವಂತೆ ಸಹಾಯಮಾಡುತ್ತದೆ. (1 ಯೋಹಾನ 4:8) ಆದುದರಿಂದ, ಒಬ್ಬ ವ್ಯಕ್ತಿಯು ದೇವರ ಕಡೆಗಿನ ನಿಷ್ಠೆಯ ಕಾರಣ ತನ್ನ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸುವುದಾದರೆ, ಇನ್ನು ಮುಂದೆ ಅವನು ತನ್ನ ಕುಟುಂಬವನ್ನು ಪ್ರೀತಿಸುವುದಿಲ್ಲ ಎಂಬುದನ್ನು ಅದು ಅರ್ಥೈಸುವುದಿಲ್ಲ.
ದೇವರಿಗೆ ನಿಷ್ಠೆ—ಒಂದು ಪ್ರಯೋಜನದಾಯಕ ಶಕ್ತಿ
ಈ ಮುಂಚೆ ತಿಳಿಸಲ್ಪಟ್ಟಿರುವ ಮಹಿಳೆಯು ತಾನು ಕೈಗೊಂಡ ಕ್ರಮಗಳ ಕುರಿತು ಈ ರೀತಿಯಲ್ಲಿ ವಿವರಿಸುತ್ತಾಳೆ: “ನನ್ನ ಬೈಬಲ್ ಅಧ್ಯಯನದ ಮೂಲಕ ಯೆಹೋವನು ಸತ್ಯ ದೇವರಾಗಿದ್ದಾನೆಂಬುದನ್ನು ನಾನು ಕಂಡುಕೊಂಡೆ, ಮತ್ತು ಆತನೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡೆ. ನಾನು ಇದಕ್ಕೆ ಮುಂಚೆ ಆರಾಧಿಸಿದಂತಹ ಯಾವುದೇ ದೇವರುಗಳಂತೆ ಯೆಹೋವನಿರಲಿಲ್ಲ; ಆತನು ಪ್ರೀತಿ, ನ್ಯಾಯ, ವಿವೇಕ, ಮತ್ತು ಶಕ್ತಿಯಲ್ಲಿ ಪರಿಪೂರ್ಣವಾಗಿ ಸಮತೂಕನಾಗಿದ್ದಾನೆ. ಯೆಹೋವನು ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವುದರಿಂದ, ನಾನು ಬೇರೆ ದೇವರುಗಳನ್ನು ಬಿಟ್ಟುಬಿಡಬೇಕಾಯಿತು.
“ನಾನು ಏನು ಮಾಡುತ್ತಿದ್ದೇನೊ ಅದು ನನ್ನ ಹೆತ್ತವರಿಗೆ ಕಿಂಚಿತ್ತೂ ಇಷ್ಟವಿಲ್ಲ ಮತ್ತು ನಾನು ಅವರನ್ನು ನಿರಾಶೆಗೊಳಿಸುತ್ತಿದ್ದೇನೆ ಎಂದು ಅವರು ಪುನಃ ಪುನಃ ಹೇಳಿದರು. ಇದು ನನಗೆ ತೀರ ಕಷ್ಟಕರವಾಗಿತ್ತು, ಏಕೆಂದರೆ ನನ್ನ ಹೆತ್ತವರ ಮೆಚ್ಚಿಗೆಯು ನನಗೆ ಬಹಳ ಅಮೂಲ್ಯವಾದದ್ದಾಗಿತ್ತು. ಆದರೆ ನಾನು ಬೈಬಲ್ ಸತ್ಯದ ಜ್ಞಾನದಲ್ಲಿ ಪ್ರಗತಿಪರವಾಗಿ ಬೆಳೆದಂತೆ, ನಾನು ಒಂದು ತೀರ್ಮಾನವನ್ನು ಮಾಡಬೇಕು ಎಂಬುದು ನನಗೆ ಸ್ಪಷ್ಟವಾಗಿ ಅರ್ಥವಾಗತೊಡಗಿತು. ನಾನು ಯೆಹೋವನನ್ನು ಬಿಟ್ಟುಬಿಡಲು ಸಾಧ್ಯವಿರಲಿಲ್ಲ.
“ಧಾರ್ಮಿಕ ಸಂಪ್ರದಾಯಗಳಿಗೆ ಬದಲಾಗಿ ಯೆಹೋವನಿಗೆ ನಿಷ್ಠಳಾಗಿರಲು ತೀರ್ಮಾನಿಸಿದ್ದು, ನಾನು ನನ್ನ ಕುಟುಂಬಕ್ಕೆ ನಿಷ್ಠೆಯನ್ನು ತೋರಿಸಲು ತಪ್ಪಿಹೋಗಿದ್ದೇನೆ ಎಂಬುದನ್ನು ಅರ್ಥೈಸುವುದಿಲ್ಲ. ನಾನು ನನ್ನ ನಡೆನುಡಿಯ ಮೂಲಕ, ಅವರಿಗೆ ಹೇಗನಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ತೋರಿಸಲು ಪ್ರಯತ್ನಿಸುತ್ತೇನೆ. ಆದರೆ ನಾನು ಯೆಹೋವನಿಗೆ ನಿಷ್ಠಳಾಗಿರದಿದ್ದರೆ, ನನ್ನ ಕುಟುಂಬವು ಆತನ ಕುರಿತು ತಿಳಿದುಕೊಳ್ಳುವುದರಿಂದ ನಾನು ಅವರನ್ನು ತಡೆಗಟ್ಟಬಹುದು, ಮತ್ತು ಅದು ನಿಜವಾಗಿಯೂ ನಿಷ್ಠಾರಹಿತ ಕೃತ್ಯವಾಗಿರುವುದು.”
ತದ್ರೀತಿಯಲ್ಲಿ, ದೇವರ ಕಡೆಗಿನ ನಿಷ್ಠೆಯು, ಒಬ್ಬ ವ್ಯಕ್ತಿಯು ರಾಜಕೀಯವಾಗಿ ತಟಸ್ಥನಾಗಿ ಉಳಿಯಬೇಕೆಂದು ಮತ್ತು ಇತರರ ವಿರುದ್ಧ ಆಯುಧಗಳನ್ನು ಎತ್ತುವುದರಿಂದ ದೂರವಿರಬೇಕೆಂದು ಅಗತ್ಯಪಡಿಸುವುದಾದರೆ, ಆ ವ್ಯಕ್ತಿಯು ಒಬ್ಬ ದ್ರೋಹಿಯಾಗಿದ್ದಾನೆ ಎಂದಾಗುವುದಿಲ್ಲ. ಸ್ಲಾಟ್‌ಕೋ ತನ್ನ ಕೃತ್ಯಗಳನ್ನು ಈ ರೀತಿಯಲ್ಲಿ ವಿವರಿಸುತ್ತಾನೆ: “ನಾನು ನಾಮಮಾತ್ರದ ಒಬ್ಬ ಕ್ರೈಸ್ತನಾಗಿ ಬೆಳೆಸಲ್ಪಟ್ಟಿದ್ದರೂ, ಕ್ರೈಸ್ತಳಾಗಿರದ ಒಬ್ಬ ಹುಡುಗಿಯನ್ನು ಮದುವೆ ಮಾಡಿಕೊಂಡೆ. ಯುದ್ಧವು ಆರಂಭವಾದಾಗ, ಎರಡೂ ಪಕ್ಷಗಳು ನನ್ನ ನಿಷ್ಠೆಯನ್ನು ತಗಾದೆಮಾಡಿದವು. ನಾನು ಯಾವ ಪಕ್ಷದ ಪರವಾಗಿ ಹೋರಾಡಬೇಕೆಂಬುದನ್ನು ಬಲಾತ್ಕಾರವಾಗಿ ಆಯ್ದುಕೊಳ್ಳುವಂತೆ ಒತ್ತಾಯಿಸಲ್ಪಟ್ಟೆ. ನಾನು ಯುದ್ಧದಲ್ಲಿ ಮೂರೂವರೆ ವರ್ಷಗಳ ವರೆಗೆ ಹೋರಾಡಬೇಕಾಯಿತು. ಕಟ್ಟಕಡೆಗೆ ನನ್ನ ಹೆಂಡತಿ ಮತ್ತು ನಾನು ಕ್ರೊಏಷಿಯಾಗೆ ಪಲಾಯನಗೈದೆವು ಮತ್ತು ಅಲ್ಲಿ ನಾವು ಯೆಹೋವನ ಸಾಕ್ಷಿಗಳನ್ನು ಭೇಟಿಯಾದೆವು.
“ಬೈಬಲಿನ ನಮ್ಮ ಅಧ್ಯಯನದ ಮೂಲಕ, ನಮ್ಮ ನಿಷ್ಠೆಯನ್ನು ಪಡೆದುಕೊಳ್ಳಬೇಕಾದ ಪ್ರಧಾನ ವ್ಯಕ್ತಿಯು ಯೆಹೋವನಾಗಿದ್ದಾನೆ ಮತ್ತು ನಮ್ಮ ನೆರೆಯವನು ಯಾವ ಧರ್ಮದವನೇ ಆಗಿರಲಿ ಅಥವಾ ಯಾವ ಕುಲಕ್ಕೇ ಸೇರಿದವನಾಗಿರಲಿ, ನಾವು ಅವನನ್ನು ಪ್ರೀತಿಸುವಂತೆ ಯೆಹೋವನು ಬಯಸುತ್ತಾನೆ ಎಂಬುದನ್ನು ತಿಳಿದುಕೊಂಡೆವು. ಈಗ ನನ್ನ ಪತ್ನಿ ಮತ್ತು ನಾನು ಯೆಹೋವನ ಆರಾಧನೆಯಲ್ಲಿ ಐಕ್ಯರಾಗಿದ್ದೇವೆ, ಮತ್ತು ನಾನು ಯೆಹೋವನಿಗೆ ನಿಷ್ಠಾವಂತನಾಗಿದ್ದು ಅದೇ ಸಮಯದಲ್ಲಿ ನನ್ನ ನೆರೆಯವನ ವಿರುದ್ಧ ಹೋರಾಡಲಾರೆ ಎಂಬುದನ್ನು ಕಲಿತುಕೊಂಡಿದ್ದೇನೆ.”
ನಿಷ್ಕೃಷ್ಟ ಜ್ಞಾನದಿಂದ ರೂಪಿಸಲ್ಪಟ್ಟಿರುವ ನಿಷ್ಠೆ
ಯೆಹೋವನು ನಮ್ಮ ಸೃಷ್ಟಿಕರ್ತನಾಗಿರುವುದರಿಂದ, ಆತನಿಗೆ ತೋರಿಸುವಂಥ ನಿಷ್ಠೆಯು, ನಮ್ಮ ನಿಷ್ಠೆಯನ್ನು ತಗಾದೆಮಾಡುವಂಥ ಬೇರೆಲ್ಲಾ ಕೋರಿಕೆಗಳಿಗಿಂತ ಮೇಲುಗೈ ಪಡೆಯುತ್ತದೆ. (ಪ್ರಕಟನೆ 4:11) ಆದರೂ, ಯೆಹೋವನಿಗಾಗಿರುವ ನಿಷ್ಠೆಯು ಅಂಧಾಭಿಮಾನ ಮತ್ತು ವಿನಾಶಕಾರಕ ಶಕ್ತಿಯಾಗಿ ರೂಪಾಂತರಹೊಂದುವುದರಿಂದ ತಡೆಯಲಿಕ್ಕಾಗಿ, ಅದು ನಿಷ್ಕೃಷ್ಟ ಜ್ಞಾನದಿಂದ ರೂಪಿಸಲ್ಪಟ್ಟಿರಬೇಕು. ಬೈಬಲು ನಮ್ಮನ್ನು ಉತ್ತೇಜಿಸುವುದು: “ನೀವು ನಿಮ್ಮ ಅಂತರ್ಯದಲ್ಲಿ ಹೊಸಬರಾಗಿ ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ . . . ದೇವಭಯವುಳ್ಳದ್ದಾಗಿಯೂ [“ನಿಜ . . . ನಿಷ್ಠೆಯುಳ್ಳದ್ದಾಗಿಯೂ,” NW] ನಿರ್ಮಿಸಲ್ಪಟ್ಟಿದೆ.” (ಓರೆ ಅಕ್ಷರಗಳು ನಮ್ಮವು.) (ಎಫೆಸ 4:23, 24) ಆ ಪ್ರೇರಿತ ಮಾತುಗಳನ್ನು ಬರೆದ ಪ್ರಖ್ಯಾತ ಮನುಷ್ಯನು ತಾನು ಯಾವ ನಿಷ್ಠೆಗಳೊಂದಿಗೆ ಬೆಳೆಸಲ್ಪಟ್ಟಿದ್ದನೋ ಅವುಗಳನ್ನು ಪ್ರಶ್ನಿಸುವ ಧೈರ್ಯಮಾಡಿದನು. ಅವನು ಮಾಡಿದ ಪರಿಶೀಲನೆಯು ಒಂದು ಪ್ರಯೋಜನಕರವಾದ ಪರಿವರ್ತನೆಗೆ ನಡೆಸಿತು.
ಹೌದು, ನಮ್ಮ ದಿನಗಳಲ್ಲಿ ಅನೇಕರು ಎದುರಿಸಿರುವಂತೆ ಸೌಲನು ಸಹ ನಿಷ್ಠೆಗಳ ಶೋಧನೆಯನ್ನು ಎದುರಿಸಿದನು. ಸೌಲನು ತನ್ನ ಕುಟುಂಬದ ಕಟ್ಟುನಿಟ್ಟಾದ ಸಂಪ್ರದಾಯಗಳ ನಡುವೆ ಬೆಳೆಸಲ್ಪಟ್ಟಿದ್ದನು, ಮತ್ತು ಅವನ ಹುಟ್ಟು ಧರ್ಮಕ್ಕೆ ಅವನು ಎದ್ದುಕಾಣುವಂಥ ರೀತಿಯಲ್ಲಿ ನಿಷ್ಠಾವಂತನಾದನು. ತನ್ನ ಧಾರ್ಮಿಕ ಉದ್ದೇಶಗಳಿಗಾಗಿ ಅವನಿಗಿದ್ದ ನಿಷ್ಠೆಯು, ಅವನ ದೃಷ್ಟಿಕೋನದೊಂದಿಗೆ ಸಮ್ಮತಿಸದಿದ್ದವರ ವಿರುದ್ಧ ಹಿಂಸಾಕೃತ್ಯಗಳನ್ನು ನಡೆಸುವಷ್ಟರ ಮಟ್ಟಿಗೆ ಅವನನ್ನು ಪ್ರಚೋದಿಸಿತು. ಸೌಲನು ಕ್ರೈಸ್ತರ ಮನೆಗಳ ಮೇಲೆ ಆಕ್ರಮಣ ಮಾಡಿ, ಅವರನ್ನು ದಂಡನೆಗೆ ಅಥವಾ ಮರಣಕ್ಕೂ ಎಳೆದುಕೊಂಡು ಹೋಗುವುದಕ್ಕೆ ಕುಖ್ಯಾತನಾಗಿದ್ದನು.—ಅ. ಕೃತ್ಯಗಳು 22:3-5; ಫಿಲಿಪ್ಪಿ 3:4-6.
ಆದರೂ, ಒಮ್ಮೆ ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದಾಕ್ಷಣ, ತನ್ನ ಸಮಾನಸ್ಥರಲ್ಲಿ ಅನೇಕರು ಯಾವುದನ್ನು ಯೋಚಿಸಲಸಾಧ್ಯವಾದ ಕಾರ್ಯವೆಂದು ಪರಿಗಣಿಸಿದ್ದರೋ ಅದನ್ನು ಸೌಲನು ಮಾಡಿದನು. ಅವನು ತನ್ನ ಧರ್ಮವನ್ನು ಬದಲಾಯಿಸಿದನು. ಸಮಯಾನಂತರ ಅಪೊಸ್ತಲ ಪೌಲನೆಂದು ಪ್ರಖ್ಯಾತನಾದ ಸೌಲನು, ಸಂಪ್ರದಾಯಕ್ಕೆ ಬದಲಾಗಿ ದೇವರಿಗೆ ನಿಷ್ಠನಾಗಿರಲು ತೀರ್ಮಾನಿಸಿದನು. ನಿಷ್ಕೃಷ್ಟ ಜ್ಞಾನದ ಮೇಲಾಧಾರಿತವಾದ ದೇವರಿಗಾಗಿರುವ ನಿಷ್ಠೆಯು, ತನ್ನ ಹಿಂದಿನ ವಿನಾಶಕಾರಕ, ಅಂಧಾಭಿಮಾನದ ನಡತೆಗೆ ವ್ಯತಿರಿಕ್ತವಾಗಿ ಸಹಿಷ್ಣುತೆಯುಳ್ಳವನಾಗಿ, ಪ್ರೀತಿಯುಳ್ಳವನಾಗಿ ಮತ್ತು ಪ್ರೋತ್ಸಾಹವನ್ನು ನೀಡುವವನಾಗುವಂತೆ ಸೌಲನನ್ನು ಉತ್ತೇಜಿಸಿತು.
ಏಕೆ ನಿಷ್ಠರಾಗಿರಬೇಕು?
ದೇವರ ಮಟ್ಟಗಳು ನಮ್ಮ ನಿಷ್ಠೆಗಳನ್ನು ರೂಪಿಸುವಂತೆ ಬಿಡುವುದು ನಿಜವಾದ ಆಶೀರ್ವಾದಗಳನ್ನು ತರುತ್ತದೆ. ಉದಾಹರಣೆಗೆ, ಬಾಳುವ ಮತ್ತು ತೃಪ್ತಿದಾಯಕವಾದ ವಿವಾಹಗಳಿಗಾಗಿರುವ ಮೂಲತತ್ತ್ವಗಳಲ್ಲಿ, “ಭರವಸೆ ಮತ್ತು ನಂಬಿಗಸ್ತಿಕೆ . . . [ಮತ್ತು] ಆತ್ಮಿಕತೆಯ ಪ್ರಜ್ಞೆಯು” ಒಳಗೂಡಿದೆ ಎಂದು, ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಮಿಲಿ ಸ್ಟಡೀಸ್‌ನ 1999ರ ಒಂದು ವರದಿಯು ತಿಳಿಸುತ್ತದೆ.
ಅದೇ ಅಧ್ಯಯನವು ಕಂಡುಕೊಂಡಿದ್ದೇನೆಂದರೆ, “ಸ್ಥಿರವಾದ ಮತ್ತು ಸಂತೃಪ್ತಿಕರವಾದ ವಿವಾಹಗಳು” ಪುರುಷರು ಮತ್ತು ಸ್ತ್ರೀಯರು ಹೆಚ್ಚೆಚ್ಚು ಸಂತೋಷವಾಗಿರಲು, ಆರೋಗ್ಯದಿಂದಿರಲು, ಮತ್ತು ದೀರ್ಘಕಾಲ ಬಾಳಲು ಸಹಾಯಮಾಡುತ್ತವೆ, ಹಾಗೂ ಸ್ಥಿರವಾದ ವಿವಾಹಗಳು, ಮಕ್ಕಳು ಸಂತೋಷಕರವಾದ ಜೀವನವನ್ನು ಅನುಭವಿಸುವ ಸದವಕಾಶವನ್ನು ನೀಡುತ್ತವೆ.ಇಂದಿನ ಅನಿಶ್ಚಿತ ಲೋಕದಲ್ಲಿ, ಹೆಣಗಾಡುತ್ತಿರುವ ಒಬ್ಬ ಈಜುಗಾರನನ್ನು ಜೀವರಕ್ಷಕ ಹಡಗಿಗೆ ಕಟ್ಟುವ ಒಂದು ಪ್ರಾಣರಕ್ಷಕ ಹಗ್ಗದಂತೆ ನಿಷ್ಠೆಯು ಕಾರ್ಯನಡಿಸುತ್ತದೆ. “ಈಜುಗಾರನಿಗೆ” ಯಾವುದೇ ನಿಷ್ಠೆಗಳಿಲ್ಲವಾದರೆ, ಅವನು ಅಲೆಗಳಿಂದ ಮತ್ತು ಗಾಳಿಯಿಂದ ಬಡಿಯಲ್ಪಟ್ಟವನಾಗಿ ಅತ್ತಿತ್ತ ನೂಕಲ್ಪಡುವನು. ಆದರೆ ಅವನ ನಿಷ್ಠೆಯು ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟಿರುವಲ್ಲಿ, ಅದು ಅವನ ಪ್ರಾಣರಕ್ಷಕ ಹಗ್ಗವು ಮುಳುಗುತ್ತಿರುವ ಒಂದು ಹಡಗಿಗೆ ಕಟ್ಟಲ್ಪಟ್ಟಿರುವಂತಿದೆ. ಸೌಲನಂತೆ, ವಿನಾಶಕರವಾದ ಒಂದು ಮಾರ್ಗದಲ್ಲಿ ಸ್ವತಃ ಎಳೆಯಲ್ಪಡುತ್ತಿರುವುದನ್ನು ಅವನು ಕಂಡುಕೊಳ್ಳಬಹುದು. ಆದರೆ, ನಿಷ್ಕೃಷ್ಟ ಜ್ಞಾನದ ಆಧಾರದ ಮೇಲೆ ಯೆಹೋವನಿಗೆ ತೋರಿಸಲ್ಪಡುವ ನಿಷ್ಠೆಯು, ನಮಗೆ ಸ್ಥಿರತೆಯನ್ನು ಕೊಡುವ ಮತ್ತು ನಮ್ಮ ರಕ್ಷಣೆಗೆ ನಡೆಸುವ ಪ್ರಾಣರಕ್ಷಕ ಹಗ್ಗವಾಗಿದೆ.—ಎಫೆಸ 4:13-15.
ತನಗೆ ನಿಷ್ಠರಾಗಿರುವವರಿಗೆ ಯೆಹೋವನು ಈ ವಾಗ್ದಾನವನ್ನು ಮಾಡುತ್ತಾನೆ: “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು [“ತನಗೆ ನಿಷ್ಠರಾಗಿರುವವರನ್ನು,” NW] ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು.” (ಕೀರ್ತನೆ 37:28) ಶೀಘ್ರವೇ, ಯೆಹೋವನಿಗೆ ನಿಷ್ಠರಾಗಿರುವವರೆಲ್ಲರೂ ಒಂದು ಪರದೈಸ ಭೂಮಿಯೊಳಗೆ ಪ್ರವೇಶವನ್ನು ಪಡೆಯುವರು. ಅಲ್ಲಿ ಅವರು ದುಃಖ ಹಾಗೂ ನೋವುಗಳಿಂದ ಸಿಗುವ ಬಿಡುಗಡೆಯಲ್ಲಿ ಆನಂದಿಸುವರು, ಮತ್ತು ಧಾರ್ಮಿಕ ಹಾಗೂ ರಾಜಕೀಯ ವಿಭಜನೆಗಳಿಂದ ವಿಮುಕ್ತವಾಗಿರುವ ಬಾಳುವ ಸಂಬಂಧಗಳಲ್ಲಿ ಉಲ್ಲಾಸವನ್ನು ಕಂಡುಕೊಳ್ಳುವರು.—ಪ್ರಕಟನೆ 7:9, 14; 21:3, 4.
ಈಗಲೂ, ಭೂಗೋಳದಾದ್ಯಂತವಿರುವ ಲಕ್ಷಾಂತರ ಮಂದಿ, ಯೆಹೋವನಿಗೆ ತಾವು ತೋರಿಸುವ ನಿಷ್ಠೆಯಿಂದ ಮಾತ್ರವೇ ನಿಜವಾದ ಸಂತೋಷವು ಬರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಬೈಬಲ್ ಸತ್ಯದ ಬೆಳಕಿನಲ್ಲಿ ನಿಷ್ಠೆಯ ಕುರಿತಾಗಿರುವ ನಿಮ್ಮ ದೃಷ್ಟಿಕೋನವನ್ನು ಪರೀಕ್ಷಿಸಿ ನೋಡುವಂತೆ ನಿಮಗೆ ಸಹಾಯಮಾಡಲು ನೀವೇಕೆ ಯೆಹೋವನ ಸಾಕ್ಷಿಗಳಿಗೆ ಅವಕಾಶ ಕೊಡಬಾರದು? ಬೈಬಲು ನಮಗೆ ಹೇಳುವುದು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ.”—2 ಕೊರಿಂಥ 13:5.
ನಾವು ನಮ್ಮ ನಂಬಿಕೆಯ ಬಗ್ಗೆ ಮತ್ತು ನಾವದಕ್ಕೆ ಏಕೆ ನಿಷ್ಠರಾಗಿದ್ದೇವೆ ಎಂಬುದರ ಬಗ್ಗೆ ಪ್ರಶ್ನಿಸಿಕೊಳ್ಳುವುದು ಧೈರ್ಯವನ್ನು ಕೇಳಿಕೊಳ್ಳುತ್ತದೆ ನಿಜ. ಆದರೆ ಇದರ ಪರಿಣಾಮವು ನಮ್ಮನ್ನು ಯೆಹೋವ ದೇವರಿಗೆ ಆಪ್ತರನ್ನಾಗಿ ಮಾಡುವಾಗ, ಇದಕ್ಕಾಗಿ ನಾವು ಮಾಡಿರುವ ಪ್ರಯತ್ನಗಳೆಲ್ಲವು ಸಾರ್ಥಕವಾಗಿರುವವು. ಈ ಮುಂಚೆ ಉಲ್ಲೇಖಿಸಲ್ಪಟ್ಟಿರುವ ಮಹಿಳೆಯು ಹೀಗೆ ಹೇಳುವಾಗ ಅನೇಕ ಜನರ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾಳೆ: “ಯೆಹೋವನಿಗೆ ಮತ್ತು ಆತನ ಮಟ್ಟಗಳಿಗೆ ನಿಷ್ಠರಾಗಿರುವುದು, ನಾವು ನಮ್ಮ ಕುಟುಂಬದೊಂದಿಗಿನ ವ್ಯವಹಾರಗಳಲ್ಲಿ ಸಮತೂಕರಾಗಿರಲು ಮತ್ತು ಸಮಾಜದ ಉತ್ತಮ ಸದಸ್ಯರಾಗಿರಲು ಸಹಾಯಮಾಡುತ್ತದೆ ಎಂಬುದನ್ನು ನಾನು ಕಲಿತುಕೊಂಡಿದ್ದೇನೆ. ಪರೀಕ್ಷೆಗಳು ಅದೆಷ್ಟೇ ಕಠಿನಕರವಾಗಿರಲಿ, ನಾವು ಯೆಹೋವನಿಗೆ ನಿಷ್ಠರಾಗಿರುವುದಾದರೆ, ಆತನು ಯಾವಾಗಲೂ ನಮಗೆ ನಿಷ್ಠನಾಗಿರುವನು.”
[ಪುಟ 6ರಲ್ಲಿರುವ ಚಿತ್ರಗಳು]
ನಿಷ್ಕೃಷ್ಟ ಜ್ಞಾನವು, ಸೌಲನು ತನ್ನ ನಿಷ್ಠೆಯ ಕೇಂದ್ರಬಿಂದುವನ್ನು ಬದಲಾಯಿಸುವಂತೆ ಪ್ರಚೋದಿಸಿತು
[ಪುಟ 7ರಲ್ಲಿರುವ ಚಿತ್ರ]
ಬೈಬಲ್ ಸತ್ಯದ ಬೆಳಕಿನಲ್ಲಿ ನಿಮ್ಮ ನಿಷ್ಠೆಗಳನ್ನು ಏಕೆ ಪರೀಕ್ಷಿಸಬಾರದು?
[ಪುಟ 4ರಲ್ಲಿರುವ ಚಿತ್ರ ಕೃಪೆ]
ಚರ್ಚಿಲ್, ಮೇಲೆ ಎಡಕ್ಕೆ: U.S. National Archives photo; ಜೋಸೇಫ್ ಗಾಬೆಲ್ಸ್, ಬಲಗಡೆ ಕೊನೆಯಲ್ಲಿ: