ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಹೆತ್ತವರಲ್ಲೊಬ್ಬರು ಯೆಹೋವನ ಸಾಕ್ಷಿಯಾಗಿದ್ದು ಇನ್ನೊಬ್ಬರು ಸಾಕ್ಷಿಯಾಗಿಲ್ಲದಿರುವಲ್ಲಿ, ಮಗುವಿನ ತರಬೇತಿಯ ವಿಷಯದಲ್ಲಿ ಶಾಸ್ತ್ರವಚನಗಳು ಯಾವ ಮಾರ್ಗದರ್ಶನವನ್ನು ನೀಡುತ್ತವೆ?

ಸಾಕ್ಷಿಯಲ್ಲದ ಒಬ್ಬ ಸಂಗಾತಿಯುಳ್ಳ ಒಬ್ಬ ಸಾಕ್ಷಿ ಹೆತ್ತವರು ಮಗುವಿಗೆ ಕೊಡಬೇಕಾದ ತರಬೇತಿಯ ಕುರಿತಾಗಿ ಎರಡು ಮುಖ್ಯ ಶಾಸ್ತ್ರೀಯ ಮೂಲತತ್ತ್ವಗಳು ಮಾರ್ಗದರ್ಶನವನ್ನು ನೀಡುತ್ತವೆ. ಒಂದು: ‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಬೇಕು.’ (ಅ. ಕೃತ್ಯಗಳು 5:29) ಇನ್ನೊಂದು: “ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.” (ಎಫೆಸ 5:23) ಈ ಎರಡನೆಯ ಮೂಲತತ್ತ್ವವು, ಸಾಕ್ಷಿಗಳಾಗಿರುವ ಗಂಡಂದಿರುಳ್ಳ ಹೆಂಡತಿಯರಿಗೆ ಮಾತ್ರವಲ್ಲ, ಸಾಕ್ಷಿಗಳಾಗಿರದ ಗಂಡಂದಿರುಳ್ಳ ಹೆಂಡತಿಯರಿಗೂ ಅನ್ವಯವಾಗುತ್ತದೆ. (1 ಪೇತ್ರ 3:1) ಒಬ್ಬ ಸಾಕ್ಷಿಯಾಗಿರುವ ತಂದೆ/ತಾಯಿಯು, ಅವನ ಅಥವಾ ಅವಳ ಮಕ್ಕಳಿಗೆ ಕಲಿಸುವಾಗ ಈ ಮೂಲತತ್ತ್ವಗಳನ್ನು ಹೇಗೆ ಅನ್ವಯಿಸಬಲ್ಲರು?

ಗಂಡನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವಲ್ಲಿ, ತನ್ನ ಕುಟುಂಬಕ್ಕಾಗಿ ಆತ್ಮಿಕ ಹಾಗೂ ಶಾರೀರಿಕ ಆವಶ್ಯಕತೆಗಳನ್ನು ಒದಗಿಸಲು ಅವನೇ ಜವಾಬ್ದಾರನಾಗಿದ್ದಾನೆ. (1 ತಿಮೊಥೆಯ 5:8) ಅವಿಶ್ವಾಸಿಯಾಗಿರುವ ತಾಯಿಯು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬಹುದಾದರೂ, ಸಾಕ್ಷಿಯಾಗಿರುವ ತಂದೆಯು ತನ್ನ ಮಕ್ಕಳಿಗೆ ಮನೆಯಲ್ಲಿ ಆತ್ಮಿಕ ತರಬೇತಿಯನ್ನು ಕೊಡುವ ಮೂಲಕ ಮತ್ತು ಅವರನ್ನು ಕ್ರೈಸ್ತ ಕೂಟಗಳಿಗೆ ಕರೆದೊಯ್ಯುವ ಮೂಲಕ ಅವರಿಗೆ ಕಲಿಸಬೇಕು. ಈ ಕೂಟಗಳಲ್ಲಿ ಮಕ್ಕಳು ನೈತಿಕ ಉಪದೇಶ ಮತ್ತು ಹಿತಕರವಾದ ಸಹವಾಸದಿಂದ ಪ್ರಯೋಜನಹೊಂದುವರು.

ಆದರೆ ಅವಿಶ್ವಾಸಿ ತಾಯಿಯು, ಮಕ್ಕಳನ್ನು ತನ್ನ ಆರಾಧನಾ ಸ್ಥಳಕ್ಕೆ ಕರೆದೊಯ್ಯಲು ಇಲ್ಲವೆ ತನ್ನ ನಂಬಿಕೆಗಳನ್ನು ಅವರಿಗೆ ಕಲಿಸಲು ಹಠಹಿಡಿಯುವಲ್ಲಿ ಆಗೇನು? ದೇಶದ ಕಾನೂನು ಅವಳಿಗೆ ಹಾಗೆ ಮಾಡುವ ಹಕ್ಕನ್ನು ಕೊಡಬಹುದು. ಇಂಥ ಸ್ಥಳಗಳಲ್ಲಿ ಮಕ್ಕಳು ಆರಾಧನಾ ಕೃತ್ಯಗಳನ್ನು ಮಾಡಲು ಪ್ರಲೋಭಿಸಲ್ಪಡುತ್ತಾರೊ ಇಲ್ಲವೊ ಎಂಬುದು, ತಂದೆಯ ಆತ್ಮಿಕ ಬೋಧನಾ ಗುಣಮಟ್ಟದ ಮೇಲೆ ಬಹಳಷ್ಟು ಮಟ್ಟಿಗೆ ಅವಲಂಬಿಸಿರಬಹುದು. ಮಕ್ಕಳು ದೊಡ್ಡವರಾಗುತ್ತಾ ಹೋದಂತೆ, ಅವರ ತಂದೆಯು ಕೊಡುವ ಶಾಸ್ತ್ರೀಯ ಶಿಕ್ಷಣವು, ದೇವರ ವಾಕ್ಯದ ಸತ್ಯವನ್ನು ಹಿಂಬಾಲಿಸುವಂತೆ ಅವರಿಗೆ ಸಹಾಯಮಾಡಬೇಕು. ತನ್ನ ಮಕ್ಕಳು ಸತ್ಯಕ್ಕಾಗಿ ನಿಲುವನ್ನು ತೆಗೆದುಕೊಳ್ಳುವಲ್ಲಿ, ವಿಶ್ವಾಸಿ ಗಂಡನಿಗೆ ಎಷ್ಟೊಂದು ಸಂತೋಷವಾಗುವುದು!

ತಾಯಿಯು ಯೆಹೋವನ ಸಾಕ್ಷಿಗಳಲ್ಲೊಬ್ಬಳಾಗಿರುವಲ್ಲಿ, ಅವಳು ಶಿರಸ್ಸುತನದ ಮೂಲತತ್ತ್ವಕ್ಕೆ ಗೌರವವನ್ನು ತೋರಿಸಬೇಕು ಮತ್ತು ಅದೇ ಸಮಯದಲ್ಲಿ ತನ್ನ ಮಕ್ಕಳ ನಿತ್ಯ ಕ್ಷೇಮದ ಕುರಿತಾಗಿಯೂ ಚಿಂತಿತಳಾಗಿರಬೇಕು. (1 ಕೊರಿಂಥ 11:3) ಹೆಚ್ಚಿನ ವಿದ್ಯಮಾನಗಳಲ್ಲಿ, ತನ್ನ ಸಾಕ್ಷಿ ಹೆಂಡತಿಯು ಮಕ್ಕಳಿಗೆ ನೈತಿಕ ಇಲ್ಲವೇ ಆತ್ಮಿಕ ಶಿಕ್ಷಣವನ್ನು ಕೊಟ್ಟರೆ ಅವಿಶ್ವಾಸಿಯಾಗಿರುವ ಗಂಡನು ಆಕ್ಷೇಪವೆತ್ತಲಿಕ್ಕಿಲ್ಲ ಮತ್ತು ಆ ರೀತಿಯ ಶಿಕ್ಷಣವನ್ನು ಪಡೆಯಲಿಕ್ಕಾಗಿ ಸಹಾಯವು ಯೆಹೋವನ ಜನರ ಕೂಟಗಳಲ್ಲಿ ಲಭ್ಯವಿದೆ. ತಮ್ಮ ಮಕ್ಕಳು ಯೆಹೋವನ ಸಂಸ್ಥೆಯ ಮೂಲಕ ಪಡೆಯುವ ರಚನಾತ್ಮಕ ಶಿಕ್ಷಣದ ಪ್ರಯೋಜನಗಳನ್ನು ನೋಡುವಂತೆ ತಾಯಿಯು ತನ್ನ ಅವಿಶ್ವಾಸಿ ಗಂಡನಿಗೆ ಸಹಾಯಮಾಡಬಲ್ಲಳು. ತಮ್ಮ ಮಕ್ಕಳು ನೈತಿಕವಾಗಿ ಹದಗೆಡುತ್ತಿರುವಂಥ ಒಂದು ಲೋಕದಲ್ಲಿ ಜೀವಿಸುತ್ತಿರುವುದರಿಂದ, ಅವರಲ್ಲಿ ಬೈಬಲಿನ ನೈತಿಕ ಮೂಲತತ್ತ್ವಗಳನ್ನು ಬೇರೂರಿಸುವುದರ ಮೌಲ್ಯವನ್ನು ಅವಳು ನಯವಾದ ಜಾಣ್ಮೆಯೊಂದಿಗೆ ಒತ್ತಿಹೇಳಬಹುದು.

ಆದರೆ, ಅವಿಶ್ವಾಸಿ ಗಂಡನು ಮಕ್ಕಳು ತನ್ನ ಧರ್ಮವನ್ನು ಪಾಲಿಸಬೇಕೆಂದು ಹಠಹಿಡಿಯುತ್ತಾ, ಅವರನ್ನು ತನ್ನ ಆರಾಧನಾ ಸ್ಥಳಕ್ಕೆ ಕರೆದೊಯ್ದು, ತನ್ನ ನಂಬಿಕೆಗನುಸಾರ ಅವರಿಗೆ ಧಾರ್ಮಿಕ ಶಿಕ್ಷಣವನ್ನು ಕೊಟ್ಟಾನು. ಇಲ್ಲವೆ ಗಂಡನು ಎಲ್ಲ ವಿಧದ ಧರ್ಮವನ್ನು ವಿರೋಧಿಸಿ, ತನ್ನ ಮಕ್ಕಳಿಗೆ ಯಾವುದೇ ರೀತಿಯ ಧಾರ್ಮಿಕ ಶಿಕ್ಷಣ ಕೊಡಲ್ಪಡಬಾರದೆಂದೂ ಪಟ್ಟುಹಿಡಿಯಬಹುದು. ಅವನು ಕುಟುಂಬದ ಶಿರಸ್ಸಾಗಿರುವುದರಿಂದ, ನಿರ್ಣಯವನ್ನು ಮಾಡುವ ಪ್ರಮುಖ ಜವಾಬ್ದಾರಿ ಅವನಿಗಿದೆ. *

ವಿಶ್ವಾಸಿಯಾಗಿರುವ ಹೆಂಡತಿಯು ತನ್ನ ಗಂಡನ ಶಿರಸ್ಸುತನವನ್ನು ಗೌರವಿಸಬೇಕು, ಆದರೆ ಅದೇ ಸಮಯದಲ್ಲಿ ಒಬ್ಬ ಸಮರ್ಪಿತ ಕ್ರೈಸ್ತಳೋಪಾದಿ ಅವಳು ಅಪೊಸ್ತಲರಾದ ಪೇತ್ರಯೋಹಾನರ ಮನೋಭಾವವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅವರಂದದ್ದು: “ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು.” (ಅ. ಕೃತ್ಯಗಳು 4:​19, 20) ಸಾಕ್ಷಿಯಾಗಿರುವ ತಾಯಿಯೊಬ್ಬಳು, ತನ್ನ ಮಕ್ಕಳ ಆತ್ಮಿಕ ಕ್ಷೇಮದ ಕುರಿತಾದ ಚಿಂತೆಯಿಂದ, ಅವರಿಗೆ ನೈತಿಕ ನಿರ್ದೇಶನವನ್ನು ಕೊಡಲಿಕ್ಕಾಗಿ ಸಂದರ್ಭಗಳನ್ನು ಕಂಡುಕೊಳ್ಳುವಳು. ಯಾವುದು ಸತ್ಯವೆಂದು ಅವಳಿಗೆ ತಿಳಿದಿದೆಯೊ ಅದನ್ನು ಇತರರಿಗೆ ಕಲಿಸುವ ಜವಾಬ್ದಾರಿ ಅವಳಿಗೆ ಯೆಹೋವನ ಮುಂದೆ ಇದೆ, ಮತ್ತು ಈ ವಿಷಯದಲ್ಲಿ ಅವಳ ಮಕ್ಕಳಿಗೆ ವಿನಾಯಿತಿಯಿರುವುದಿಲ್ಲ. (ಜ್ಞಾನೋಕ್ತಿ 1:8; ಮತ್ತಾಯ 28:​19, 20) ಈ ಬಿಕ್ಕಟ್ಟನ್ನು ಸಾಕ್ಷಿಯಾಗಿರುವ ತಾಯಿಯು ಹೇಗೆ ನಿಭಾಯಿಸಬಲ್ಲಳು?

ಉದಾಹರಣೆಗಾಗಿ, ದೇವರಲ್ಲಿನ ನಂಬಿಕೆಯ ವಿಷಯವನ್ನು ತೆಗೆದುಕೊಳ್ಳಿ. ತನ್ನ ಗಂಡನ ನಿರ್ಬಂಧಗಳ ಕಾರಣದಿಂದ ಸಾಕ್ಷಿಯಾಗಿರುವ ಹೆಂಡತಿಯು, ತನ್ನ ಮಕ್ಕಳೊಂದಿಗೆ ಔಪಚಾರಿಕವಾಗಿ ಬೈಬಲ್‌ ಅಧ್ಯಯನವನ್ನು ಮಾಡಲು ಶಕ್ತಳಾಗಿರಲಿಕ್ಕಿಲ್ಲ. ಈ ಕಾರಣದಿಂದ ಅವಳು ತನ್ನ ಮಕ್ಕಳಿಗೆ ಯೆಹೋವನ ಬಗ್ಗೆ ಏನನ್ನಾದರೂ ಹೇಳುವುದರಿಂದ ದೂರವಿರಬೇಕೊ? ಇಲ್ಲ. ಅವಳ ನಡೆನುಡಿಗಳು ಸ್ವಾಭಾವಿಕವಾಗಿಯೇ ಸೃಷ್ಟಿಕರ್ತನಲ್ಲಿ ಅವಳಿಗಿರುವ ನಂಬಿಕೆಯನ್ನು ಪ್ರತಿಬಿಂಬಿಸುವವು. ಈ ವಿಷಯದ ಕುರಿತು ಅವಳ ಮಕ್ಕಳಿಗೆ ನಿಸ್ಸಂದೇಹವಾಗಿಯೂ ಪ್ರಶ್ನೆಗಳಿರುವವು. ಸೃಷ್ಟಿಕರ್ತನಲ್ಲಿ ತನಗಿರುವ ನಂಬಿಕೆಯನ್ನು ಇತರರಿಗೆ​—ತನ್ನ ಮಕ್ಕಳನ್ನೂ ಸೇರಿಸಿ​—ವ್ಯಕ್ತಪಡಿಸುವ ಮೂಲಕ, ಧರ್ಮದ ಬಗ್ಗೆ ತನಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಲು ಅವಳು ಸ್ವತಂತ್ರಳಾಗಿರಬೇಕು. ಅವಳು ಮಕ್ಕಳೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ನಡೆಸಲು ಇಲ್ಲವೆ ಅವರನ್ನು ಕ್ರಮವಾಗಿ ಕೂಟಗಳಿಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲದಿರುವಲ್ಲಿಯೂ, ಅವಳು ಯೆಹೋವ ದೇವರ ಕುರಿತಾದ ಜ್ಞಾನವನ್ನು ಅವರಿಗೆ ನೀಡಬಲ್ಲಳು.​—ಧರ್ಮೋಪದೇಶಕಾಂಡ 6:7.

ಒಬ್ಬ ಸಾಕ್ಷಿ ಮತ್ತು ಅವನ ಅಥವಾ ಅವಳ ಅವಿಶ್ವಾಸಿ ಸಂಗಾತಿಯ ನಡುವೆ ಇರಬೇಕಾದ ಸಂಬಂಧದ ಕುರಿತಾಗಿ ಅಪೊಸ್ತಲ ಪೌಲನು ಬರೆದುದು: “ಯಾಕಂದರೆ ಕ್ರಿಸ್ತನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ದೇವಜನಕ್ಕೆ ಸಂಬಂಧಪಟ್ಟವನಾದನು [“ಪವಿತ್ರೀಕರಿಸಲ್ಪಟ್ಟನು,” NW]; ಮತ್ತು ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯು ನಮ್ಮ ಸಹೋದರನಾದ ತನ್ನ ಗಂಡನಲ್ಲಿ ದೇವಜನಕ್ಕೆ ಸಂಬಂಧಪಟ್ಟವಳಾದಳು [“ಪವಿತ್ರೀಕರಿಸಲ್ಪಟ್ಟಳು,” NW]. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ದೇವಜನರಲ್ಲಿ ಸೇರಿದವರೇ ಆಗಿದ್ದಾರೆ.” (1 ಕೊರಿಂಥ 7:14) ವಿಶ್ವಾಸಿಯಾಗಿರುವ ಸಂಗಾತಿಯ ಕಾರಣ ಯೆಹೋವನು ಆ ವೈವಾಹಿಕ ಸಂಬಂಧವನ್ನು ಪವಿತ್ರವೆಂದೆಣಿಸುತ್ತಾನೆ ಮತ್ತು ಮಕ್ಕಳು ಯೆಹೋವನ ದೃಷ್ಟಿಯಲ್ಲಿ ಪವಿತ್ರರಾಗಿ ಪರಿಗಣಿಸಲ್ಪಡುತ್ತಾರೆ. ಸಾಕ್ಷಿಯಾಗಿರುವ ಹೆಂಡತಿಯು ತನ್ನ ಮಕ್ಕಳು ಸತ್ಯವನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲು ತನ್ನಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿ, ಅಂತಿಮ ಫಲವನ್ನು ಯೆಹೋವನ ಹಸ್ತಗಳಲ್ಲಿ ಬಿಟ್ಟುಬಿಡಬೇಕು.

ಮಕ್ಕಳು ದೊಡ್ಡವರಾಗುತ್ತಾ ಹೋದಂತೆ, ತಮ್ಮ ಹೆತ್ತವರಿಂದ ತಾವು ಪಡೆದಿರುವ ಮಾಹಿತಿಯ ಆಧಾರದ ಮೇರೆಗೆ ತಾವು ಯಾವ ನಿಲುವನ್ನು ತೆಗೆದುಕೊಳ್ಳುವೆವು ಎಂಬುದನ್ನು ಅವರೇ ನಿರ್ಣಯಿಸಬೇಕು. “ಯಾರಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆ ಅಥವಾ ತಾಯಿಯನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ” ಎಂಬ ಯೇಸುವಿನ ಮಾತುಗಳಿಗನುಸಾರ ಅವರು ಕ್ರಿಯೆಗೈಯಲು ನಿರ್ಣಯಿಸಬಹುದು. (ಮತ್ತಾಯ 10:​37, ಪರಿಶುದ್ಧ ಬೈಬಲ್‌) ಅವರಿಗೆ ಹೀಗೂ ಆಜ್ಞಾಪಿಸಲಾಗಿದೆ: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು.” (ಎಫೆಸ 6:1) ಅನೇಕ ಯುವ ಜನರು ಸಾಕ್ಷಿಯಾಗಿರದ ಹೆತ್ತವನಿಂದ/ಳಿಂದ ಬಹಳಷ್ಟು ಕಷ್ಟಗಳನ್ನು ಅನುಭವಿಸಿದರೂ, ಅವರು ಹೆತ್ತವರಿಗಲ್ಲ ಬದಲಾಗಿ ‘ದೇವರಿಗೆ ವಿಧೇಯರಾಗಲು’ ನಿರ್ಣಯಿಸಿದ್ದಾರೆ. ವಿರೋಧದ ಮಧ್ಯೆಯೂ, ಮಕ್ಕಳು ಯೆಹೋವನನ್ನು ಸೇವಿಸುವ ನಿರ್ಣಯವನ್ನು ಮಾಡುವುದನ್ನು ನೋಡುವುದು, ಸಾಕ್ಷಿಯಾಗಿರುವ ಹೆತ್ತವನಿಗೆ/ಳಿಗೆ ಎಷ್ಟು ಪ್ರತಿಫಲದಾಯಕವಾಗಿರುವುದು!

[ಪಾದಟಿಪ್ಪಣಿ]

^ ಪ್ಯಾರ. 7 ಧರ್ಮದ ಸ್ವಾತಂತ್ರ್ಯದ ವಿಷಯದಲ್ಲಿ ಹೆಂಡತಿಗಿರುವ ಕಾನೂನುಬದ್ಧ ಹಕ್ಕಿನಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗುವ ಹಕ್ಕೂ ಸೇರಿದೆ. ಕೆಲವೊಂದು ಸಂದರ್ಭಗಳಲ್ಲಿ, ಗಂಡನು ಆ ಕೂಟಗಳ ಸಮಯದಲ್ಲಿ ಚಿಕ್ಕ ಮಕ್ಕಳ ಆರೈಕೆ ಮಾಡಲು ಸಿದ್ಧನಾಗಿಲ್ಲದಿರುವುದರಿಂದ, ಪ್ರೀತಿಯುಳ್ಳ ತಾಯಿಯು ಅವರನ್ನು ತನ್ನೊಂದಿಗೆ ಕೂಟಗಳಿಗೆ ಕರೆದುಕೊಂಡು ಹೋಗುವಂತೆ ನಿರ್ಬಂಧಿಸಲ್ಪಟ್ಟಿದ್ದಾಳೆ.