ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ”

“ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ”

“ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ”

‘ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟರು.’​—ಲೂಕ 4:22.

1, 2. (ಎ) ಯೇಸುವನ್ನು ಹಿಡಿಯಲು ಕಳುಹಿಸಲ್ಪಟ್ಟಿದ್ದ ಓಲೇಕಾರರು ಏಕೆ ಬರಿಗೈಯಲ್ಲಿ ಹಿಂದಿರುಗಿದರು? (ಬಿ) ಯೇಸುವಿನ ಬೋಧನೆಯಿಂದ ಪ್ರಭಾವಿತರಾದದ್ದು ಓಲೇಕಾರರು ಮಾತ್ರವೇ ಅಲ್ಲ ಎಂಬುದನ್ನು ಯಾವುದು ತೋರಿಸುತ್ತದೆ?

ಓಲೇಕಾರರು ತಮಗೆ ನೇಮಿಸಲ್ಪಟ್ಟ ಕೆಲಸವನ್ನು ಪೂರೈಸಲು ತಪ್ಪಿಹೋದರು. ಯೇಸು ಕ್ರಿಸ್ತನನ್ನು ಸೆರೆಹಿಡಿಯಲು ಅವರನ್ನು ಕಳುಹಿಸಲಾಗಿತ್ತಾದರೂ ಅವರು ಬರಿಗೈಯಲ್ಲಿ ಹಿಂದಿರುಗಿದರು. ಮಹಾಯಾಜಕರು ಮತ್ತು ಫರಿಸಾಯರು “ನೀವು ಯಾಕೆ ಅವನನ್ನು ಹಿಡತರಲಿಲ್ಲ?” ಎಂದು ಅದರ ಬಗ್ಗೆ ವಿವರವನ್ನು ಕೇಳಿದರು. ಹೌದು, ಯಾವುದೇ ರೀತಿಯಲ್ಲಿ ಶಾರೀರಿಕವಾಗಿ ಪ್ರತಿರೋಧವನ್ನು ತೋರಿಸದಿರುವಂಥ ಒಬ್ಬ ವ್ಯಕ್ತಿಯನ್ನು ಓಲೇಕಾರರು ಏಕೆ ಹಿಡಿಯಲಿಲ್ಲ? ಓಲೇಕಾರರು ವಿವರಿಸಿದ್ದು: “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ.” ಅವರು ಯೇಸುವಿನ ಬೋಧನೆಯಿಂದ ಎಷ್ಟು ಪ್ರಭಾವಿತರಾದರೆಂದರೆ, ಈ ಶಾಂತಚಿತ್ತ ವ್ಯಕ್ತಿಯನ್ನು ಬಂಧಿಸಲು ಅವರಿಗೆ ಮನಸ್ಸೇ ಆಗಲಿಲ್ಲ. *​—ಯೋಹಾನ 7:​32, 45, 46.

2 ಯೇಸುವಿನ ಬೋಧನೆಯಿಂದ ಪ್ರಭಾವಿತರಾದವರು ಆ ಓಲೇಕಾರರು ಮಾತ್ರವೇ ಆಗಿರಲಿಲ್ಲ. ಅವನು ಮಾತಾಡುವುದನ್ನು ಕೇಳಿಸಿಕೊಳ್ಳಲಿಕ್ಕಾಗಿ ದೊಡ್ಡ ಸಂಖ್ಯೆಗಳಲ್ಲಿ ಜನಸ್ತೋಮಗಳು ಕೂಡಿಬರುತ್ತಿದ್ದವು ಎಂದು ಬೈಬಲು ನಮಗೆ ಹೇಳುತ್ತದೆ. ಅವನ ಸ್ವಂತ ಊರಿನ ಜನರು “ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ” ಆಶ್ಚರ್ಯಪಟ್ಟರು. (ಲೂಕ 4:22) ಗಲಿಲಾಯ ಸಮುದ್ರದ ದಡದಲ್ಲಿ ಕೂಡಿಬಂದಿದ್ದ ದೊಡ್ಡ ಜನಸಮೂಹಗಳಿಗೆ ಅವನು ಒಂದಕ್ಕಿಂತಲೂ ಹೆಚ್ಚು ಬಾರಿ ದೋಣಿಯೊಳಗಿಂದ ಮಾತಾಡಿದ್ದನು. (ಮಾರ್ಕ 3:9; 4:1; ಲೂಕ 5:​1-3) ಒಂದು ಸಂದರ್ಭದಲ್ಲಿ, ಜನರ ಒಂದು ದೊಡ್ಡ “ಗುಂಪು” ಬಹಳ ದಿವಸಗಳ ವರೆಗೆ​—ಊಟಕ್ಕೆ ಏನೂ ಇರಲಿಲ್ಲವಾದರೂ​—ಅವನೊಂದಿಗೆ ಉಳಿಯಿತು.​—ಮಾರ್ಕ 8:​1, 2.

3. ಯೇಸು ಅಷ್ಟು ಗಮನಾರ್ಹ ಬೋಧಕನಾಗಿದ್ದದ್ದಕ್ಕೆ ಪ್ರಮುಖ ಕಾರಣವು ಯಾವುದಾಗಿತ್ತು?

3 ಯಾವುದು ಯೇಸುವನ್ನು ಒಬ್ಬ ಗಮನಾರ್ಹ ಬೋಧಕನನ್ನಾಗಿ ಮಾಡಿತು? ಪ್ರಮುಖ ಕಾರಣವು ಪ್ರೀತಿಯೇ ಆಗಿತ್ತು. * ಯೇಸು ತಾನು ತಿಳಿಯಪಡಿಸಿದಂಥ ಸತ್ಯಗಳನ್ನು ಪ್ರೀತಿಸಿದನು ಮತ್ತು ಯಾವ ಜನರಿಗೆ ಅವನು ಬೋಧಿಸಿದನೋ ಅವರನ್ನು ಪ್ರೀತಿಸಿದನು. ಆದರೆ ಪರಿಣಾಮಕಾರಿಯಾದ ಬೋಧನಾ ವಿಧಾನಗಳನ್ನು ಉಪಯೋಗಿಸುವ ಅಸಾಮಾನ್ಯ ಸಾಮರ್ಥ್ಯವು ಸಹ ಯೇಸುವಿಗಿತ್ತು. ಈ ಸಂಚಿಕೆಯ ಅಧ್ಯಯನ ಲೇಖನಗಳಲ್ಲಿ, ಅವನು ಉಪಯೋಗಿಸಿದಂಥ ಪರಿಣಾಮಕಾರಿ ವಿಧಾನಗಳಲ್ಲಿ ಕೆಲವನ್ನು ಹಾಗೂ ನಾವು ಅವುಗಳನ್ನು ಹೇಗೆ ಅನುಕರಿಸಸಾಧ್ಯವಿದೆ ಎಂಬುದನ್ನು ಚರ್ಚಿಸುವೆವು.

ಸರಳತೆ ಮತ್ತು ಸ್ಪಷ್ಟತೆ

4, 5. (ಎ) ಯೇಸು ತನ್ನ ಬೋಧನೆಯಲ್ಲಿ ಸರಳ ಪದಪ್ರಯೋಗವನ್ನು ಮಾಡಿದ್ದೇಕೆ, ಮತ್ತು ಅವನು ಹಾಗೆ ಮಾಡಿದ್ದರ ನಿಜತ್ವದ ವಿಷಯದಲ್ಲಿ ಯಾವುದು ಗಮನಾರ್ಹವಾದದ್ದಾಗಿದೆ? (ಬಿ) ಪರ್ವತ ಪ್ರಸಂಗವು ಹೇಗೆ ಯೇಸು ಕಲಿಸಿದ ಸರಳತೆಯ ಒಂದು ಉದಾಹರಣೆಯಾಗಿದೆ?

4 ಸುಶಿಕ್ಷಿತ ಜನರು, ತಮ್ಮ ಕೇಳುಗರಿಗೆ ಅರ್ಥವಾಗದಿರುವಂಥ ಪದಪ್ರಯೋಗವನ್ನು ಮಾಡುವುದು ಅಸಾಮಾನ್ಯವಾದದ್ದೇನಲ್ಲ. ಆದರೆ ನಾವು ಏನು ಹೇಳುತ್ತೇವೋ ಅದನ್ನು ಇತರರು ಅರ್ಥಮಾಡಿಕೊಳ್ಳಸಾಧ್ಯವಿರದಿದ್ದಲ್ಲಿ, ನಮ್ಮ ಜ್ಞಾನದಿಂದ ಅವರು ಪ್ರಯೋಜನ ಪಡೆದುಕೊಳ್ಳುವುದಾದರೂ ಹೇಗೆ? ಒಬ್ಬ ಬೋಧಕನೋಪಾದಿ ಯೇಸು, ಇತರರು ಅರ್ಥಮಾಡಿಕೊಳ್ಳಲು ಅಸಾಧ್ಯವಾದಂಥ ರೀತಿಯಲ್ಲಿ ಎಂದೂ ಮಾತಾಡಲಿಲ್ಲ. ಅವನು ಉಪಯೋಗಿಸಸಾಧ್ಯವಿದ್ದ ವಿಸ್ತಾರವಾದ ಶಬ್ದಭಂಡಾರದ ಕುರಿತು ತುಸು ಊಹಿಸಿಕೊಳ್ಳಿರಿ. ಅವನಿಗೆ ಅಗಾಧವಾದ ಜ್ಞಾನವಿತ್ತಾದರೂ, ಸ್ವತಃ ತನ್ನ ಕುರಿತಾಗಿ ಅಲ್ಲ ಬದಲಾಗಿ ತನ್ನ ಕೇಳುಗರ ಕುರಿತು ಅವನು ಆಲೋಚಿಸಿದನು. ಅವರಲ್ಲಿ ಅನೇಕರು “ಶಾಸ್ತ್ರಾಭ್ಯಾಸ ಮಾಡದ ಸಾಧಾರಣ”ರಾಗಿದ್ದರೆಂಬುದು ಅವನಿಗೆ ತಿಳಿದಿತ್ತು. (ಅ. ಕೃತ್ಯಗಳು 4:13) ಅವರ ಹೃದಯವನ್ನು ತಲಪಲಿಕ್ಕಾಗಿ ಅವನು, ಜನರು ಅರ್ಥಮಾಡಿಕೊಳ್ಳಲು ಸಾಧ್ಯವಿದ್ದಂಥ ರೀತಿಯ ಪದಪ್ರಯೋಗವನ್ನು ಮಾಡಿದನು. ಬಳಸಲ್ಪಟ್ಟ ಮಾತುಗಳು ಸರಳವಾಗಿದ್ದಿರಬಹುದಾದರೂ, ಅವುಗಳು ತಿಳಿಯಪಡಿಸಿದ ಸತ್ಯಗಳು ಅಗಾಧವಾಗಿದ್ದವು.

5 ಉದಾಹರಣೆಗೆ, ಮತ್ತಾಯ 5:​3-7:27ರಲ್ಲಿ ದಾಖಲಿಸಲ್ಪಟ್ಟಿರುವ ಪರ್ವತ ಪ್ರಸಂಗವನ್ನು ತೆಗೆದುಕೊಳ್ಳಿ. ಆ ಪ್ರಸಂಗವನ್ನು ನೀಡಲಿಕ್ಕಾಗಿ ಯೇಸು ಕೇವಲ 20 ನಿಮಿಷಗಳನ್ನು ತೆಗೆದುಕೊಂಡಿದ್ದಿರಬಹುದು. ಆದರೂ, ಅದರ ಬೋಧನೆಗಳು ಗಾಢವಾದವುಗಳಾಗಿದ್ದು, ವ್ಯಭಿಚಾರ, ವಿವಾಹ ವಿಚ್ಛೇದ ಮತ್ತು ಪ್ರಾಪಂಚಿಕತೆಯಂಥ ವಿಚಾರಗಳ ಮೂಲಭೂತ ಅಂಶಗಳನ್ನು ತಿಳಿಸುವಂಥವುಗಳಾಗಿವೆ. (ಮತ್ತಾಯ 5:​27-32; 6:​19-34) ಆದರೂ, ತುಂಬ ಜಟಿಲವಾದ ಅಥವಾ ಶಬ್ದಾಡಂಬರದಿಂದ ಕೂಡಿರುವ ಅಭಿವ್ಯಕ್ತಿಗಳು ಅದರಲ್ಲಿಲ್ಲ. ಅಷ್ಟೇಕೆ, ಒಂದು ಮಗುವು ಸುಲಭವಾಗಿ ಅರ್ಥಮಾಡಿಕೊಳ್ಳಲು ಅಸಾಧ್ಯವಾದಂಥ ಒಂದು ಪದವೂ ಅದರಲ್ಲಿಲ್ಲ! ಹೀಗಿರುವುದರಿಂದ ಅವನು ಪ್ರಸಂಗವನ್ನು ಮುಗಿಸಿದಾಗ, ಜನರ ಗುಂಪುಗಳು​—ಅನೇಕ ರೈತರು, ಕುರುಬರು ಮತ್ತು ಬೆಸ್ತರು ಸೇರಿದ್ದಿರಬಹುದು​—“ಆತನ ಉಪದೇಶಕ್ಕೆ ಆತ್ಯಾಶ್ಚರ್ಯಪಟ್ಟ”ದ್ದೇಕೆಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು!​—ಮತ್ತಾಯ 7:28.

6. ಯಾವ ರೀತಿಯಲ್ಲಿ ಯೇಸು ಸರಳವಾದರೂ ತುಂಬ ಅರ್ಥಭರಿತವಾಗಿದ್ದ ಹೇಳಿಕೆಗಳನ್ನು ನುಡಿದನು ಎಂಬುದಕ್ಕೆ ಒಂದು ಉದಾಹರಣೆಯನ್ನು ಕೊಡಿರಿ.

6 ಅನೇಕವೇಳೆ ಸ್ಪಷ್ಟವಾದ, ಚಿಕ್ಕಪುಟ್ಟ ವಾಕ್ಸರಣಿಗಳನ್ನು ಉಪಯೋಗಿಸುತ್ತಾ ಯೇಸು, ಸರಳವಾದರೂ ತುಂಬ ಅರ್ಥಭರಿತವಾಗಿದ್ದ ಹೇಳಿಕೆಗಳನ್ನು ನುಡಿದನು. ಹೀಗೆ, ಮುದ್ರಿತ ಪುಸ್ತಕಗಳ ಆಗಮನಕ್ಕೂ ಹಿಂದಿನ ಯುಗದಲ್ಲಿ ಅವನು, ತನ್ನ ಕೇಳುಗರ ಹೃದಮನಗಳ ಮೇಲೆ ತನ್ನ ಸಂದೇಶವನ್ನು ಮರೆಯಲಸಾಧ್ಯವಾದ ರೀತಿಯಲ್ಲಿ ಅಚ್ಚೊತ್ತಿದನು. ಕೆಲವು ಉದಾಹರಣೆಗಳನ್ನು ಗಮನಿಸಿರಿ: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. . . . ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.” “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ.” “ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.” “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು.” “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.” * (ಮತ್ತಾಯ 6:24; 7:​1, 20; 9:12; 26:52; ಮಾರ್ಕ 12:17; ಅ. ಕೃತ್ಯಗಳು 20:35) ಇದುವರೆಗೆ, ಯೇಸುವಿನಿಂದ ಆ ಮಾತುಗಳು ನುಡಿಯಲ್ಪಟ್ಟು ಸುಮಾರು 2,000 ವರ್ಷಗಳು ಕಳೆದಿವೆಯಾದರೂ, ಅಂಥ ಪ್ರಬಲ ಹೇಳಿಕೆಗಳನ್ನು ಈಗಲೂ ಸುಲಭವಾಗಿ ಜ್ಞಾಪಿಸಿಕೊಳ್ಳಸಾಧ್ಯವಿದೆ.

ಪ್ರಶ್ನೆಗಳ ಉಪಯೋಗ

7. ಯೇಸು ಏಕೆ ಪ್ರಶ್ನೆಗಳನ್ನು ಕೇಳಿದನು?

7 ಯೇಸು ಗಮನಾರ್ಹ ರೀತಿಯಲ್ಲಿ ಪ್ರಶ್ನೆಗಳನ್ನು ಉಪಯೋಗಿಸಿದನು. ತನ್ನ ಕೇಳುಗರಿಗೆ ನೇರವಾಗಿ ಮುಖ್ಯಾಂಶವನ್ನು ತಿಳಿಸಿಬಿಡಲು ಕಡಿಮೆ ಸಮಯ ತಗಲುತ್ತಿರುತ್ತಿದ್ದರೂ ಅವನು ಅನೇಕವೇಳೆ ಹೀಗೆ ಮಾಡಿದನು. ಅವನು ಪ್ರಶ್ನೆಗಳನ್ನು ಏಕೆ ಕೇಳಿದನು? ಕೆಲವೊಮ್ಮೆ, ಅವನು ತನ್ನ ವಿರೋಧಿಗಳ ಇಂಗಿತಗಳನ್ನು ಬಯಲುಪಡಿಸಲಿಕ್ಕಾಗಿ ಮನಸ್ಸಿಗೆ ನಾಟುವಂಥ ಪ್ರಶ್ನೆಗಳನ್ನು ಉಪಯೋಗಿಸಿದನು ಮತ್ತು ಹೀಗೆ ಅವರ ಬಾಯಿಮುಚ್ಚಿಸುತ್ತಿದ್ದನು. (ಮತ್ತಾಯ 12:​24-30; 21:​23-27; 22:​41-46) ಆದರೆ ಅನೇಕ ಸಂದರ್ಭಗಳಲ್ಲಿ, ಸತ್ಯಗಳನ್ನು ತಿಳಿಸಲಿಕ್ಕಾಗಿ, ಕೇಳುಗರು ತಮ್ಮ ಹೃದಯಗಳಲ್ಲಿ ಏನಿತ್ತೋ ಅದನ್ನು ವ್ಯಕ್ತಪಡಿಸುವಂತೆ ಮಾಡಲಿಕ್ಕಾಗಿ, ಹಾಗೂ ತನ್ನ ಶಿಷ್ಯರ ಆಲೋಚನೆಯನ್ನು ಪ್ರಚೋದಿಸಲು ಮತ್ತು ತರಬೇತುಗೊಳಿಸಲಿಕ್ಕಾಗಿ ಯೇಸು ಪ್ರಶ್ನೆಗಳನ್ನು ಕೇಳಲು ಸಮಯವನ್ನು ತೆಗೆದುಕೊಂಡನು. ಈ ವಿಷಯದಲ್ಲಿ ನಾವು ಎರಡು ಉದಾಹರಣೆಗಳನ್ನು ಪರೀಕ್ಷಿಸೋಣ. ಈ ಎರಡೂ ಉದಾಹರಣೆಗಳಲ್ಲಿ ಅಪೊಸ್ತಲ ಪೇತ್ರನು ಒಳಗೂಡಿದ್ದಾನೆ.

8, 9. ದೇವಾಲಯದ ತೆರಿಗೆಯನ್ನು ತೆರುವ ವಿಷಯದಲ್ಲಿ ಪೇತ್ರನು ಸರಿಯಾದ ತೀರ್ಮಾನಕ್ಕೆ ಬರುವಂತೆ ಅವನಿಗೆ ಸಹಾಯಮಾಡಲಿಕ್ಕಾಗಿ ಯೇಸು ಹೇಗೆ ಪ್ರಶ್ನೆಗಳನ್ನು ಉಪಯೋಗಿಸಿದನು?

8 ಮೊದಲನೆಯದಾಗಿ, ಯೇಸು ದೇವಾಲಯದ ತೆರಿಗೆಯನ್ನು ಸಲ್ಲಿಸುತ್ತಾನೊ ಎಂದು ತೆರಿಗೆಯನ್ನು ಎತ್ತುವವರು ಪೇತ್ರನನ್ನು ಕೇಳಿದ ಸಂದರ್ಭವನ್ನು ಜ್ಞಾಪಿಸಿಕೊಳ್ಳಿರಿ. * ಕೆಲವೊಮ್ಮೆ ಹಿಂದುಮುಂದು ನೋಡದೆ ಮುನ್ನುಗ್ಗುವ ಪ್ರವೃತ್ತಿಯವನಾಗಿದ್ದ ಪೇತ್ರನು, ಇದಕ್ಕೆ “ಹೌದು” ಎಂದು ಉತ್ತರಿಸಿದನು. ಆದರೆ, ಸ್ವಲ್ಪ ಸಮಯದ ಬಳಿಕ ಯೇಸು ಅವನೊಂದಿಗೆ ಹೀಗೆ ತರ್ಕಿಸಿದನು: “ಸೀಮೋನಾ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ? ಬೇರೆಯವರಿಂದಲೋ ಎಂದು ಕೇಳಿದನು. ಅವನು​—ಬೇರೆಯವರಿಂದ ಎಂದು ಉತ್ತರಕೊಡಲು ಯೇಸು ಅವನಿಗೆ​—ಹಾಗಾದರೆ ಮಕ್ಕಳು ಅದಕ್ಕೆ ಒಳಗಾದವರಲ್ಲವಲ್ಲಾ . . . ಎಂದು ಹೇಳಿದನು.” (ಮತ್ತಾಯ 17:​24-27) ಯೇಸುವಿನ ಪ್ರಶ್ನೆಗಳ ಉತ್ತರವು ಪೇತ್ರನಿಗೆ ಸ್ಪಷ್ಟವಾಗಿ ಅರ್ಥವಾಗಿದ್ದಿರಬೇಕು. ಅದೇಕೆ?

9 ಯೇಸುವಿನ ದಿನದಲ್ಲಿ, ಅರಸರ ಕುಟುಂಬದ ಸದಸ್ಯರು ತೆರಿಗೆಯನ್ನು ತೆರುವುದರಿಂದ ವಿನಾಯಿತಿ ಪಡೆದಿದ್ದರು. ಹೀಗೆ, ಆ ದೇವಾಲಯದಲ್ಲಿ ಆರಾಧಿಸಲ್ಪಡುತ್ತಿದ್ದ ಸ್ವರ್ಗೀಯ ರಾಜನ ಏಕಜಾತ ಪುತ್ರನೋಪಾದಿ ಯೇಸು, ತೆರಿಗೆಯನ್ನು ತೆರುವ ಹಂಗಿಗೆ ಒಳಗಾಗುವ ಅಗತ್ಯವಿರಲಿಲ್ಲ. ಪೇತ್ರನಿಗೆ ನೇರವಾಗಿ ಸರಿಯಾದ ಉತ್ತರವನ್ನು ತಿಳಿಸುವುದಕ್ಕೆ ಬದಲಾಗಿ, ಪೇತ್ರನು ಸರಿಯಾದ ತೀರ್ಮಾನಕ್ಕೆ ಬರುವಂತೆ ಮತ್ತು ಮಾತಾಡುವುದಕ್ಕೆ ಮೊದಲು ಹೆಚ್ಚು ಜಾಗರೂಕತೆಯಿಂದ ಆಲೋಚಿಸುವ ಆವಶ್ಯಕತೆಯನ್ನು ಮನಗಾಣುವಂತೆ ಅವನಿಗೆ ಸಹಾಯಮಾಡಲು ಯೇಸು, ಪರಿಣಾಮಕಾರಿಯಾದರೂ ಮೃದುವಾದ ರೀತಿಯಲ್ಲಿ ಪ್ರಶ್ನೆಗಳನ್ನು ಉಪಯೋಗಿಸಿದನು ಎಂಬುದನ್ನು ಗಮನಿಸಿರಿ.

10, 11. ಸಾ.ಶ. 33ರ ಪಸ್ಕಹಬ್ಬದ ರಾತ್ರಿಯಂದು ಪೇತ್ರನು ಕತ್ತಿಯಿಂದ ಒಬ್ಬ ವ್ಯಕ್ತಿಯ ಕಿವಿಯನ್ನು ಕಡಿದುಹಾಕಿದಾಗ, ಯೇಸು ಹೇಗೆ ಪ್ರತಿಕ್ರಿಯಿಸಿದನು, ಮತ್ತು ಯೇಸು ಪ್ರಶ್ನೆಗಳ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದನು ಎಂಬುದನ್ನು ಇದು ಹೇಗೆ ತೋರಿಸುತ್ತದೆ?

10 ಎರಡನೆಯ ಉದಾಹರಣೆಯು, ಸಾ.ಶ. 33ರ ಪಸ್ಕಹಬ್ಬದ ರಾತ್ರಿಯಂದು, ಜನರ ಒಂದು ಗುಂಪು ಯೇಸುವನ್ನು ಬಂಧಿಸಲು ಬಂದಾಗ ಏನು ಸಂಭವಿಸಿತೋ ಆ ಘಟನೆಯಾಗಿದೆ. ಯೇಸುವಿನ ರಕ್ಷಣೆಗಾಗಿ ತಾವು ಹೋರಾಡಬೇಕೋ ಇಲ್ಲವೋ ಎಂದು ಅವನ ಶಿಷ್ಯರು ಕೇಳಿದರು. (ಲೂಕ 22:49) ಉತ್ತರಕ್ಕಾಗಿ ಕಾಯದೆ, ಪೇತ್ರನು ಒಂದು ಕತ್ತಿಯಿಂದ ಒಬ್ಬ ವ್ಯಕ್ತಿಯ ಕಿವಿಯನ್ನು ಕಡಿದುಹಾಕಿದನು (ಬಹುಶಃ ಪೇತ್ರನು ಆ ವ್ಯಕ್ತಿಗೆ ಇನ್ನೂ ಹೆಚ್ಚು ಗಂಭೀರವಾದ ಹಾನಿಯನ್ನು ಮಾಡಲು ಉದ್ದೇಶಿಸಿದ್ದಿರಬಹುದು). ಪೇತ್ರನು ಮಾಡಿದ ಈ ಕೆಲಸವು ತನ್ನ ಸ್ವಾಮಿಯ ಇಷ್ಟಕ್ಕೆ ವಿರುದ್ಧವಾಗಿತ್ತು, ಏಕೆಂದರೆ ಯೇಸು ತನ್ನನ್ನು ಒಪ್ಪಿಸಿಕೊಡಲು ಪೂರ್ಣವಾಗಿ ಸಿದ್ಧನಿದ್ದನು. ಯೇಸು ಹೇಗೆ ಪ್ರತಿಕ್ರಿಯಿಸಿದನು? ಎಂದಿನಂತೆಯೇ ತಾಳ್ಮೆಯಿಂದಿದ್ದು, ಯೇಸು ಪೇತ್ರನಿಗೆ ಮೂರು ಪ್ರಶ್ನೆಗಳನ್ನು ಕೇಳಿದನು: “ತಂದೆ ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ”? “ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ? ಕಳುಹಿಸಿಕೊಟ್ಟರೆ ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ”?​—ಯೋಹಾನ 18:11; ಮತ್ತಾಯ 26:​52-54.

11 ಆ ವೃತ್ತಾಂತದ ಕುರಿತು ಒಂದು ಕ್ಷಣ ಯೋಚಿಸಿರಿ. ಕೋಪಗೊಂಡಿದ್ದ ಜನರ ಒಂದು ಗುಂಪಿನಿಂದ ಸುತ್ತುವರಿಯಲ್ಪಟ್ಟಿದ್ದ ಯೇಸು, ತನ್ನ ಮರಣವು ಸಮೀಪಿಸಿದೆ ಮತ್ತು ತನ್ನ ತಂದೆಯ ಹೆಸರಿನ ನಿರ್ದೋಷೀಕರಣ ಹಾಗೂ ಮಾನವ ಕುಟುಂಬವನ್ನು ರಕ್ಷಿಸುವ ಜವಾಬ್ದಾರಿಯು ತನ್ನ ಮೇಲಿದೆ ಎಂಬುದನ್ನು ತಿಳಿದವನಾಗಿದ್ದನು. ಆದರೂ, ಅದೇ ಕ್ಷಣದಲ್ಲಿ ಪ್ರಶ್ನೆಗಳ ಮೂಲಕ ಪ್ರಾಮುಖ್ಯವಾಗಿದ್ದ ಸತ್ಯಗಳನ್ನು ಪೇತ್ರನ ಮನಸ್ಸಿನಲ್ಲಿ ಅಚ್ಚೊತ್ತಿಸಲು ಅವನು ಸಮಯವನ್ನು ತೆಗೆದುಕೊಂಡನು. ಯೇಸು ಪ್ರಶ್ನೆಗಳ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದನು ಎಂಬುದು ಇದರಿಂದ ಸುವ್ಯಕ್ತವಾಗುವುದಿಲ್ಲವೋ?

ಕಣ್ಣಿಗೆ ಕಟ್ಟುವಂಥ ರೀತಿಯ ಉತ್ಪ್ರೇಕ್ಷಾಲಂಕಾರ

12, 13. (ಎ) ಉತ್ಪ್ರೇಕ್ಷಾಲಂಕಾರ ಎಂದರೇನು? (ಬಿ) ನಮ್ಮ ಸಹೋದರರ ಚಿಕ್ಕಪುಟ್ಟ ಲೋಪದೋಷಗಳನ್ನು ಟೀಕಿಸುವುದರ ಮೂರ್ಖತನವನ್ನು ಒತ್ತಿಹೇಳಲಿಕ್ಕಾಗಿ ಯೇಸು ಹೇಗೆ ಉತ್ಪ್ರೇಕ್ಷಾಲಂಕಾರವನ್ನು ಉಪಯೋಗಿಸಿದನು?

12 ತನ್ನ ಶುಶ್ರೂಷೆಯಲ್ಲಿ ಯೇಸು ಅನೇಕವೇಳೆ ಪರಿಣಾಮಕಾರಿಯಾದ ಇನ್ನೊಂದು ಬೋಧನಾ ವಿಧಾನವನ್ನು ಉಪಯೋಗಿಸಿದನು. ಅದು ಉತ್ಪ್ರೇಕ್ಷಾಲಂಕಾರವೇ ಆಗಿತ್ತು. ಇದು, ಒತ್ತಿಹೇಳುವ ಉದ್ದೇಶದಿಂದ ಬೇಕುಬೇಕೆಂದೇ ಹೇಳಲ್ಪಡುವ ಅತಿಶಯೋಕ್ತಿಯಾಗಿದೆ. ಉತ್ಪ್ರೇಕ್ಷಾಲಂಕಾರದ ಸಹಾಯದಿಂದ ಯೇಸು, ಮರೆಯಲಸಾಧ್ಯವಾಗಿದ್ದಂಥ ಮಾನಸಿಕ ಚಿತ್ರಣಗಳನ್ನು ರೂಪಿಸಲು ಶಕ್ತನಾದನು. ನಾವೀಗ ಕೆಲವೊಂದು ಉದಾಹರಣೆಗಳನ್ನು ನೋಡೋಣ.

13 ಪರ್ವತ ಪ್ರಸಂಗದಲ್ಲಿ, ಇತರರಿಗೆ ‘ತೀರ್ಪುಮಾಡುವುದನ್ನು’ ನಿಲ್ಲಿಸುವ ಆವಶ್ಯಕತೆಯ ಕುರಿತು ಒತ್ತಿಹೇಳುತ್ತಾ ಯೇಸುವಂದದ್ದು: “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?” (ಮತ್ತಾಯ 7:​1-3) ನೀವು ಈ ದೃಶ್ಯವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಲ್ಲಿರೋ? ಟೀಕಾತ್ಮಕ ಮನೋಭಾವದ ಒಬ್ಬ ವ್ಯಕ್ತಿಯು, ತನ್ನ ಸಹೋದರನ “ಕಣ್ಣಿನಲ್ಲಿರುವ” ರವೆಯನ್ನು ತೆಗೆಯಲು ಪ್ರಯತ್ನಿಸುತ್ತಾನೆ. ತನ್ನ ಸಹೋದರನು ಅಂಗೀಕಾರಾರ್ಹವಾದ ರೀತಿಯಲ್ಲಿ ತೀರ್ಪುಗಳನ್ನು ಮಾಡುವಷ್ಟರ ಮಟ್ಟಿಗೆ ವಿಷಯಗಳನ್ನು ಸ್ಪಷ್ಟವಾಗಿ ಕಾಣಶಕ್ತನಾಗಿಲ್ಲ ಎಂದು ಆ ಟೀಕಾತ್ಮಕ ವ್ಯಕ್ತಿಯು ಪ್ರತಿಪಾದಿಸಬಹುದು. ಆದರೆ, ನ್ಯಾಯತೀರ್ಪುಮಾಡುವ ವಿಷಯದಲ್ಲಿ ಸ್ವತಃ ಆ ಟೀಕಾತ್ಮಕ ವ್ಯಕ್ತಿಗಿರುವ ಸಾಮರ್ಥ್ಯವೇ, ಒಂದು “ತೊಲೆ”ಯಿಂದ, ಅಂದರೆ ಒಂದು ಛಾವಣಿಗೆ ಆಧಾರವಾಗಿ ಉಪಯೋಗಿಸಬಹುದಾದ ಒಂದು ಮರದ ತುಂಡು ಅಥವಾ ಕಂಬದಷ್ಟು ದೊಡ್ಡ ತಡೆಗಟ್ಟಿನಿಂದ ದುರ್ಬಲಗೊಳಿಸಲ್ಪಟ್ಟಿದೆ. ನಮ್ಮಲ್ಲೇ ಅನೇಕ ದೊಡ್ಡ ಕುಂದುಕೊರತೆಗಳಿರುವಾಗ, ನಮ್ಮ ಸಹೋದರರ ಚಿಕ್ಕಪುಟ್ಟ ಲೋಪದೋಷಗಳನ್ನು ಟೀಕಿಸುವುದು ಎಷ್ಟು ಮೂರ್ಖತನವೆಂಬುದನ್ನು ಒತ್ತಿಹೇಳುವ ಎಂಥ ಅವಿಸ್ಮರಣೀಯ ವಿಧ!

14. ಸೊಳ್ಳೆಯನ್ನು ಸೋಸುವುದು ಮತ್ತು ಒಂಟೆಯನ್ನು ನುಂಗುವುದರ ಕುರಿತಾದ ಯೇಸುವಿನ ಮಾತುಗಳು, ಏಕೆ ವಿಶೇಷವಾಗಿ ಪ್ರಬಲವಾದ ಉತ್ಪ್ರೇಕ್ಷಾಲಂಕಾರವಾಗಿದ್ದವು?

14 ಇನ್ನೊಂದು ಸಂದರ್ಭದಲ್ಲಿ, “ದಾರಿತೋರಿಸುವ ಕುರುಡರೇ; ನೀವು ಸೊಳ್ಳೇ ಸೋಸುವವರು, ಒಂಟೇ ನುಂಗುವವರು” ಎಂದು ಯೇಸು ಫರಿಸಾಯರನ್ನು ಖಂಡಿಸಿದನು. (ಮತ್ತಾಯ 23:24) ಇದು ವಿಶೇಷವಾಗಿ ಒಂದು ಉತ್ಪ್ರೇಕ್ಷಾಲಂಕಾರದ ಪ್ರಬಲವಾದ ಬಳಕೆಯಾಗಿತ್ತು. ಏಕೆ? ಒಂದು ಚಿಕ್ಕ ಸೊಳ್ಳೆ ಹಾಗೂ ಯೇಸುವಿನ ಕೇಳುಗರಿಗೆ ಗೊತ್ತಿದ್ದ ಅತಿ ದೊಡ್ಡ ಪ್ರಾಣಿಗಳಲ್ಲಿ ಒಂದಾಗಿದ್ದ ಒಂಟೆಯ ನಡುವಣ ವ್ಯತ್ಯಾಸವು, ನಿಜವಾಗಿಯೂ ತುಂಬ ಪ್ರಭಾವಶೀಲವಾಗಿತ್ತು. ಒಂದು ಸರಾಸರಿ ಒಂಟೆಯ ತೂಕಕ್ಕೆ ಸಮಾನವಾಗಬೇಕಾದರೆ ಸುಮಾರು ಏಳು ಕೋಟಿ ಸೊಳ್ಳೆಗಳ ಅಗತ್ಯವಿದೆ ಎಂದು ಅಂದಾಜುಮಾಡಲಾಗಿದೆ! ಇದಲ್ಲದೆ, ಫರಿಸಾಯರು ತಮ್ಮ ದ್ರಾಕ್ಷಾರಸವನ್ನು ಬಟ್ಟೆಯ ಜಾಲರಿಯಲ್ಲಿ ಸೋಸುತ್ತಿದ್ದರು ಎಂಬುದು ಯೇಸುವಿಗೆ ತಿಳಿದಿತ್ತು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಈ ಫರಿಸಾಯರು, ಸೊಳ್ಳೆಯನ್ನು ನುಂಗುವ ಮೂಲಕ ಸಾಂಪ್ರದಾಯಿಕವಾಗಿ ಅಶುದ್ಧರಾಗದಂತೆ ಹೀಗೆ ಮಾಡುತ್ತಿದ್ದರು. ಆದರೂ, ಸಾಂಕೇತಿಕ ಅರ್ಥದಲ್ಲಿ ಅವರು ಒಂಟೆಯನ್ನು ನುಂಗುತ್ತಿದ್ದು, ಮತ್ತು ಇದು ಸಹ ಒಂದು ಅಶುದ್ಧ ಪ್ರಾಣಿಯಾಗಿತ್ತು. (ಯಾಜಕಕಾಂಡ 11:​4, 21-24) ಯೇಸುವಿನ ಮುಖ್ಯಾಂಶವು ಸ್ಪಷ್ಟವಾಗಿತ್ತು. ಆ ಫರಿಸಾಯರು ಧರ್ಮಶಾಸ್ತ್ರದ ಅತಿ ಚಿಕ್ಕ ಆವಶ್ಯಕತೆಗಳ ಸೂಕ್ಷ್ಮ ವಿವರಗಳಿಗೂ ಮಿತಿಮೀರಿದ ಗಮನಕೊಡುತ್ತಿದ್ದರು ಮತ್ತು ಅವುಗಳಿಗನುಸಾರ ನಡೆಯುತ್ತಿದ್ದರು, ಆದರೆ ಅವುಗಳಿಗಿಂತಲೂ ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು, ಅಂದರೆ “ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ” ಅವರು ಅಲಕ್ಷಿಸುತ್ತಿದ್ದರು. (ಮತ್ತಾಯ 23:23) ಅವರ ನಿಜ ವ್ಯಕ್ತಿತ್ವವನ್ನು ಯೇಸು ಎಷ್ಟು ಸ್ಪಷ್ಟವಾದ ರೀತಿಯಲ್ಲಿ ಬಯಲುಪಡಿಸಿದನು!

15. ಉತ್ಪ್ರೇಕ್ಷಾಲಂಕಾರಗಳನ್ನು ಉಪಯೋಗಿಸುವ ಮೂಲಕ ಯೇಸು ಕಲಿಸಿದ ಪಾಠಗಳಲ್ಲಿ ಕೆಲವು ಯಾವುವು?

15 ತನ್ನ ಶುಶ್ರೂಷೆಯಾದ್ಯಂತ, ಯೇಸು ಅನೇಕವೇಳೆ ಉತ್ಪ್ರೇಕ್ಷಾಲಂಕಾರಗಳನ್ನು ಉಪಯೋಗಿಸಿದನು. ಇನ್ನೂ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ. “[ಚಿಕ್ಕ] ಸಾಸಿವೇಕಾಳಷ್ಟು ನಂಬಿಕೆ”ಯು ಒಂದು ಬೆಟ್ಟವನ್ನು ಕದಲಿಸಸಾಧ್ಯವಿದೆ​—ಸ್ವಲ್ಪ ನಂಬಿಕೆಯಿರುವುದಾದರೂ ಅದು ಬಹಳಷ್ಟನ್ನು ಸಾಧಿಸಬಲ್ಲದು ಎಂಬುದನ್ನು ಒತ್ತಿಹೇಳಲಿಕ್ಕಾಗಿ ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ಒಂದು ವಿಧವನ್ನು ಯೇಸು ಕಂಡುಕೊಳ್ಳಸಾಧ್ಯವಿರಲಿಲ್ಲ. (ಮತ್ತಾಯ 17:20) ಒಂದು ದೊಡ್ಡ ಒಂಟೆಯು ಹೊಲಿಗೆಹಾಕುವ ಒಂದು ಸೂಜಿಯ ಕಣ್ಣಿನ ಮೂಲಕ ನುಗ್ಗಲು ಪ್ರಯತ್ನಿಸುತ್ತಿರುವುದು​—ಒಂದು ಪ್ರಾಪಂಚಿಕ ಜೀವನ ಶೈಲಿಯನ್ನು ಬೆನ್ನಟ್ಟುತ್ತಾ, ಅದೇ ಸಮಯದಲ್ಲಿ ದೇವರ ಸೇವೆಯನ್ನು ಮಾಡಲು ಪ್ರಯತ್ನಿಸುವ ಒಬ್ಬ ಧನಿಕ ವ್ಯಕ್ತಿಯು ಎದುರಿಸುವ ತೊಂದರೆಯನ್ನು ಎಷ್ಟು ಚೆನ್ನಾಗಿ ದೃಷ್ಟಾಂತಿಸುತ್ತದೆ! (ಮತ್ತಾಯ 19:24) ಯೇಸುವಿನ ಕಣ್ಣಿಗೆ ಕಟ್ಟುವಂಥ ಅಲಂಕಾರಗಳು ಹಾಗೂ ಕೆಲವೇ ಮಾತುಗಳಿಂದ ಅತ್ಯಧಿಕ ಪರಿಣಾಮವನ್ನು ಸಾಧಿಸುವ ಅವನ ಸಾಮರ್ಥ್ಯವನ್ನು ನೋಡಿ ನೀವು ಬೆರಗಾಗುವುದಿಲ್ಲವೋ?

ನಿರಾಕರಿಸಲು ಅಸಾಧ್ಯವಾದ ತರ್ಕಬದ್ಧ ವಾದಸರಣಿ

16. ಯೇಸು ಯಾವಾಗಲೂ ತನ್ನ ಕುಶಲ ಮಾನಸಿಕ ಸಾಮರ್ಥ್ಯಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಿದನು?

16 ಪರಿಪೂರ್ಣ ಮನಸ್ಸುಳ್ಳವನಾಗಿದ್ದ ಯೇಸು, ಜನರೊಂದಿಗೆ ತರ್ಕಬದ್ಧವಾಗಿ ವಾದಿಸುವುದರಲ್ಲಿ ನಿಸ್ಸೀಮನಾಗಿದ್ದನು. ಆದರೆ ಅವನೆಂದೂ ತನ್ನ ಸಾಮರ್ಥ್ಯವನ್ನು ದುರುಪಯೋಗಿಸಲಿಲ್ಲ. ತನ್ನ ಬೋಧನೆಯಲ್ಲಿ ಅವನು, ಯಾವಾಗಲೂ ಸತ್ಯವನ್ನು ಪ್ರವರ್ಧಿಸಲಿಕ್ಕಾಗಿ ತನ್ನ ಮಾನಸಿಕ ಸಾಮರ್ಥ್ಯಗಳನ್ನು ಉಪಯೋಗಿಸಿದನು. ಕೆಲವೊಮ್ಮೆ, ತನ್ನ ಧಾರ್ಮಿಕ ವಿರೋಧಿಗಳ ಸುಳ್ಳು ಆರೋಪಗಳನ್ನು ಖಂಡಿಸಲಿಕ್ಕಾಗಿ ಅವನು ಬಲವಾದ ತರ್ಕವನ್ನು ಉಪಯೋಗಿಸಿದನು. ಅನೇಕ ಸಂದರ್ಭಗಳಲ್ಲಿ, ತನ್ನ ಶಿಷ್ಯರಿಗೆ ಪ್ರಾಮುಖ್ಯವಾದ ಪಾಠಗಳನ್ನು ಕಲಿಸಲಿಕ್ಕಾಗಿ ಅವನು ತರ್ಕಬದ್ಧವಾದ ವಾದಸರಣಿಯನ್ನು ಉಪಯೋಗಿಸಿದನು. ಯೇಸುವಿನ ತರ್ಕಬದ್ಧ ವಾದಸರಣಿಯನ್ನು ಉಪಯೋಗಿಸುವ ಕೌಶಲಭರಿತ ಸಾಮರ್ಥ್ಯದ ಕಡೆಗೆ ನಾವೀಗ ಗಮನಹರಿಸೋಣ.

17, 18. ಫರಿಸಾಯರ ಸುಳ್ಳು ಆರೋಪವನ್ನು ಖಂಡಿಸಲಿಕ್ಕಾಗಿ ಯೇಸು ಯಾವ ಪ್ರಬಲ ತರ್ಕಬದ್ಧ ವಾದಸರಣಿಯನ್ನು ಉಪಯೋಗಿಸಿದನು?

17 ಕುರುಡನೂ ಮೂಕನೂ ಆಗಿದ್ದ ದೆವ್ವಹಿಡಿದಿದ್ದ ಒಬ್ಬ ಮನುಷ್ಯನನ್ನು ಯೇಸು ವಾಸಿಮಾಡಿದ ಸಂದರ್ಭವನ್ನು ಪರಿಗಣಿಸಿರಿ. ಇದರ ಕುರಿತು ಕೇಳಿಸಿಕೊಂಡ ಬಳಿಕ ಫರಿಸಾಯರು ಹೇಳಿದ್ದು: “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲ [ಸೈತಾನ]ನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೇ ಹೊರತು ಬೇರೆ ರೀತಿಯಿಂದ ಬಿಡಿಸುವದಿಲ್ಲ.” ಸೈತಾನನ ದೆವ್ವಗಳನ್ನು ಬಿಡಿಸಲಿಕ್ಕಾಗಿ ಅತಿಲೌಕಿಕ ಶಕ್ತಿಯ ಅಗತ್ಯವಿತ್ತು ಎಂಬುದನ್ನು ಫರಿಸಾಯರು ಒಪ್ಪಿಕೊಂಡರೆಂಬುದನ್ನು ಗಮನಿಸಿರಿ. ಆದರೂ, ಜನರು ಯೇಸುವಿನಲ್ಲಿ ನಂಬಿಕೆಯಿಡುವುದನ್ನು ತಡೆಯಲಿಕ್ಕಾಗಿ, ಅವನ ಶಕ್ತಿಯು ಸೈತಾನನಿಂದ ಬಂದದ್ದೆಂದು ಅವರು ಹೇಳಿದರು. ಅವರು ತಮ್ಮ ವಾದವನ್ನು ಅದರ ತರ್ಕಬದ್ಧ ಸಮಾಪ್ತಿಯ ವರೆಗೆ ಆದ್ಯಂತವಾಗಿ ಪರಿಗಣಿಸಿರಲಿಲ್ಲವೆಂಬುದನ್ನು ತೋರಿಸುತ್ತಾ, ಯೇಸು ಪ್ರತ್ಯುತ್ತರಿಸಿದ್ದು: “ಯಾವ ರಾಜ್ಯವಾದರೂ ತನ್ನಲ್ಲಿ ಭೇದಹುಟ್ಟಿದರೆ ಹಾಳಾಗುವದು; ತನ್ನಲ್ಲಿ ಭೇದ ಹುಟ್ಟಿದ ಯಾವ ಪಟ್ಟಣವಾದರೂ ಮನೆಯಾದರೂ ನಿಲ್ಲದು. ಅದರಂತೆ ಸೈತಾನನು ಸೈತಾನನನ್ನು ಹೊರಡಿಸಿದರೆ ತನ್ನಲ್ಲಿ ಭೇದ ಹುಟ್ಟಿಸಿಕೊಂಡ ಹಾಗಾಯಿತು. ಹಾಗಾದರೆ ಅವನ ರಾಜ್ಯವು ಹೇಗೆ ಉಳಿದೀತು?” (ಮತ್ತಾಯ 12:​22-27ಎ) ಕಾರ್ಯತಃ ಯೇಸು ಹೀಗೆ ಹೇಳುತ್ತಿದ್ದನು: ‘ಒಂದುವೇಳೆ ನೀವು ಹೇಳುವಂತೆ ನಾನು ಸೈತಾನನ ನಿಯೋಗಿಯಾಗಿದ್ದು, ಅವನು ಏನು ಮಾಡಿದ್ದಾನೋ ಅದನ್ನು ಹಾಳುಮಾಡುತ್ತಿರುವಲ್ಲಿ, ಸೈತಾನನು ತನ್ನ ಸ್ವಂತ ಅಭಿರುಚಿಗಳ ವಿರುದ್ಧ ಕಾರ್ಯನಡಿಸುತ್ತಿದ್ದಾನೆ ಮತ್ತು ಅವನು ಬೇಗನೆ ಪತನಗೊಳ್ಳುವನು.’ ಇದು ಪ್ರಬಲವಾದ ತರ್ಕಬದ್ಧ ವಾದಸರಣಿಯಾಗಿತ್ತು, ಅಲ್ಲವೆ?

18 ತದನಂತರ ಯೇಸು ಈ ವಿಷಯದ ಕುರಿತು ಇನ್ನಷ್ಟು ತರ್ಕಿಸಿದನು. ಫರಿಸಾಯರಲ್ಲೇ ಕೆಲವರು ಈ ಮುಂಚೆ ದೆವ್ವಗಳನ್ನು ಬಿಡಿಸಿದ್ದರು ಎಂಬುದು ಅವನಿಗೆ ತಿಳಿದಿತ್ತು. ಆದುದರಿಂದ, ಅವನು ಸರಳವಾದರೂ ತುಂಬ ಪರಿಣಾಮಕಾರಿಯಾದ ಈ ಪ್ರಶ್ನೆಯನ್ನು ಕೇಳಿದನು: “ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವದಾದರೆ ನಿಮ್ಮವರು [ಪುತ್ರರು ಅಥವಾ ಶಿಷ್ಯರು] ಯಾರ ಬಲದಿಂದ ಬಿಡಿಸುತ್ತಾರೆ?” (ಮತ್ತಾಯ 12:27ಬಿ) ಒಂದರ್ಥದಲ್ಲಿ ಯೇಸುವಿನ ವಾದವು ಹೀಗಿತ್ತು: ‘ವಾಸ್ತವದಲ್ಲಿ, ಒಂದುವೇಳೆ ನಾನು ಸೈತಾನನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಿರುವುದಾದರೆ, ನಿಮ್ಮ ಸ್ವಂತ ಶಿಷ್ಯರು ಸಹ ಇದೇ ಶಕ್ತಿಯಿಂದ ಕಾರ್ಯನಡಿಸುತ್ತಿರಬೇಕು.’ ಫರಿಸಾಯರು ಏನು ಹೇಳಸಾಧ್ಯವಿತ್ತು? ತಮ್ಮ ಶಿಷ್ಯರು ಸೈತಾನನ ಶಕ್ತಿಯಿಂದ ಕಾರ್ಯನಡಿಸಿದರು ಎಂಬುದನ್ನು ಅವರೆಂದೂ ಒಪ್ಪಿಕೊಳ್ಳರು. ನಿರಾಕರಿಸಲು ಅಸಾಧ್ಯವಾದ ತರ್ಕಬದ್ಧ ವಾದಸರಣಿಯನ್ನು ಉಪಯೋಗಿಸುತ್ತಾ, ತನ್ನ ವಿರುದ್ಧ ಅವರು ಹೊರಿಸಿದ ಆರೋಪವನ್ನು ಯೇಸು ಅಸಂಗತವಾದದ್ದೆಂದು ರುಜುಪಡಿಸಿದನು.

19, 20. (ಎ) ಯಾವ ಸಕಾರಾತ್ಮಕ ವಿಧದಲ್ಲಿ ಯೇಸು ತರ್ಕಬದ್ಧ ವಾದಸರಣಿಯನ್ನು ಉಪಯೋಗಿಸಿದನು? (ಬಿ) ಹೇಗೆ ಪ್ರಾರ್ಥಿಸುವುದು ಎಂಬುದನ್ನು ಕಲಿಸುವಂತೆ ತನ್ನ ಶಿಷ್ಯರು ಮಾಡಿದ ಬೇಡಿಕೆಗೆ ಉತ್ತರಿಸುವಾಗ ಯೇಸು, ‘ಎಷ್ಟೋ ಹೆಚ್ಚು’ ಎಂದು ಕರೆಯಬಹುದಾದ ತರ್ಕಸರಣಿಯನ್ನು ಹೇಗೆ ಉಪಯೋಗಿಸಿದನು?

19 ತನ್ನ ವಿರೋಧಿಗಳ ಬಾಯಿಮುಚ್ಚಿಸಲಿಕ್ಕಾಗಿ ಯೇಸು ತರ್ಕಬದ್ಧ ವಾದಸರಣಿಯನ್ನು ಉಪಯೋಗಿಸುವುದರ ಜೊತೆಗೆ, ಯೆಹೋವನ ಕುರಿತಾದ ಸಕಾರಾತ್ಮಕ ಹಾಗೂ ಹೃತ್ಪೂರ್ವಕ ಸತ್ಯಗಳನ್ನು ಕಲಿಸಲಿಕ್ಕಾಗಿ, ನ್ಯಾಯಸಮ್ಮತವಾದ, ಮನಸೆಳೆಯುವಂಥ ವಾದಗಳನ್ನೂ ಉಪಯೋಗಿಸಿದನು. ಅವನು ಉಪಯೋಗಿಸಿದಂಥ ತರ್ಕಸರಣಿಯಲ್ಲಿ ಅನೇಕ ಸಲ ‘ಎಷ್ಟೋ ಹೆಚ್ಚು’ ಎಂಬ ವಾಕ್ಸರಣಿ ಇರುತ್ತಿತ್ತು. ಹೀಗೆ ತನ್ನ ಕೇಳುಗರು ಒಂದು ಚಿರಪರಿಚಿತವಾದ ಸತ್ಯದಿಂದ ಇನ್ನೂ ಹೆಚ್ಚಿನ ನಿಶ್ಚಿತಾಭಿಪ್ರಾಯದ ಕಡೆಗೆ ಪ್ರಗತಿ ಮಾಡುವಂತೆ ಸಹಾಯಮಾಡಿದನು. ನಾವೀಗ ಎರಡು ಉದಾಹರಣೆಗಳನ್ನು ಮಾತ್ರ ಪರೀಕ್ಷಿಸೋಣ.

20 ಹೇಗೆ ಪ್ರಾರ್ಥಿಸಬೇಕು ಎಂಬುದನ್ನು ಕಲಿಸುವಂತೆ ತನ್ನ ಶಿಷ್ಯರು ಮಾಡಿದ ಬೇಡಿಕೆಗೆ ಉತ್ತರಿಸುವಾಗ ಯೇಸು ಒಬ್ಬ ಮನುಷ್ಯನ ದೃಷ್ಟಾಂತವನ್ನು ತಿಳಿಸಿದನು. ಆ ಮನುಷ್ಯನು, ತನ್ನ ಬೇಡಿಕೆಯನ್ನು ಪೂರೈಸಲು ಇಷ್ಟವಿಲ್ಲದಿದ್ದಂಥ ಒಬ್ಬ ಸ್ನೇಹಿತನು ಕೊನೆಗೆ ಅದನ್ನು ಪೂರೈಸುವಂತೆ “ದಿಟ್ಟವಾದ ಪಟ್ಟುಹಿಡಿಯುವಿಕೆಯಿಂದ” (NW) ಒಡಂಬಡಿಸಿದನು. ತಮ್ಮ ಮಕ್ಕಳಿಗೆ “ಒಳ್ಳೇ ಪದಾರ್ಥಗಳನ್ನು ಕೊಡ”ಲು ಹೆತ್ತವರಿಗಿರುವ ಮನಃಪೂರ್ವಕತೆಯನ್ನು ಸಹ ಯೇಸು ವರ್ಣಿಸಿದನು. ತದನಂತರ ಅವನು ಈ ಮಾತುಗಳಿಂದ ಮುಕ್ತಾಯಗೊಳಿಸಿದನು: “ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಓರೆ ಅಕ್ಷರಗಳು ನಮ್ಮವು.) (ಲೂಕ 11:​1-13) ಯೇಸು ತಿಳಿಸಿದ ಮುಖ್ಯಾಂಶವು ಹೋಲಿಕೆಯ ಮೇಲಲ್ಲ, ಬದಲಾಗಿ ಪರಸ್ಪರ ಭಿನ್ನವಾದ ವಿಷಯದ ಮೇಲೆ ಆಧಾರಿತವಾದದ್ದಾಗಿದೆ. ಇಷ್ಟವಿಲ್ಲದಂಥ ಒಬ್ಬ ಸ್ನೇಹಿತನು ಕಟ್ಟಕಡೆಗೂ ತನ್ನ ನೆರೆಯವನ ಆವಶ್ಯಕತೆಯನ್ನು ಪೂರೈಸುವಂತೆ ಒಡಂಬಡಿಸಲ್ಪಡಸಾಧ್ಯವಿರುವಲ್ಲಿ, ಮತ್ತು ಅಪರಿಪೂರ್ಣ ಮಾನವ ಹೆತ್ತವರು ತಮ್ಮ ಮಕ್ಕಳ ಆವಶ್ಯಕತೆಗಳನ್ನು ಪೂರೈಸಸಾಧ್ಯವಿರುವಲ್ಲಿ, ಪ್ರಾರ್ಥನೆಯಲ್ಲಿ ದೀನಭಾವದಿಂದ ತನ್ನ ಬಳಿಗೆ ಬರುವ ನಿಷ್ಠಾವಂತ ಸೇವಕರಿಗೆ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಎಷ್ಟು ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನು!

21, 22. (ಎ) ಪ್ರಾಪಂಚಿಕ ವಿಷಯಗಳ ಕುರಿತಾದ ಚಿಂತೆಯೊಂದಿಗೆ ವ್ಯವಹರಿಸುವುದರ ಬಗ್ಗೆ ಸಲಹೆಯನ್ನು ಕೊಡುತ್ತಿರುವಾಗ ಯೇಸು ಯಾವ ತರ್ಕಸರಣಿಯನ್ನು ಉಪಯೋಗಿಸಿದನು? (ಬಿ) ಯೇಸುವಿನ ಬೋಧನಾ ವಿಧಾನಗಳಲ್ಲಿ ಕೆಲವನ್ನು ಪುನರ್ವಿಮರ್ಶಿಸಿದ ಬಳಿಕ, ನಾವು ಯಾವ ತೀರ್ಮಾನಕ್ಕೆ ಬರಬಲ್ಲೆವು?

21 ಪ್ರಾಪಂಚಿಕ ವಿಷಯಗಳ ಕುರಿತಾದ ಚಿಂತೆಯೊಂದಿಗೆ ವ್ಯವಹರಿಸುವುದರ ಬಗ್ಗೆ ಸಲಹೆಯನ್ನು ಕೊಡುವಾಗ ಯೇಸು ತದ್ರೀತಿಯ ತರ್ಕಸರಣಿಯನ್ನು ಉಪಯೋಗಿಸಿದನು. ಅವನು ಹೇಳಿದ್ದು: “ಕಾಗೆಗಳನ್ನು ಲಕ್ಷ್ಯವಿಟ್ಟು ಯೋಚಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ. ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಯೋಚಿಸಿರಿ; ಅವು ದುಡಿಯುವದಿಲ್ಲ, ನೂಲುವದಿಲ್ಲ . . . ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.” (ಓರೆ ಅಕ್ಷರಗಳು ನಮ್ಮವು.) (ಲೂಕ 12:​24, 27, 28) ಹೌದು, ಯೆಹೋವನು ಹಕ್ಕಿಗಳನ್ನು ಮತ್ತು ಹೂವುಗಳನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುವುದಾದರೆ, ತನ್ನ ಸೇವಕರನ್ನು ಇನ್ನೂ ಎಷ್ಟು ಹೆಚ್ಚಾಗಿ ಆತನು ನೋಡಿಕೊಳ್ಳುವನು! ಇಂಥ ಕೋಮಲವಾದ ಆದರೆ ಪ್ರಬಲವಾದ ತರ್ಕಸರಣಿಯು, ಯೇಸುವಿನ ಕೇಳುಗರ ಹೃದಯವನ್ನು ಸ್ಪರ್ಶಿಸಿತು ಎಂಬುದರಲ್ಲಿ ಸಂಶಯವೇ ಇಲ್ಲ.

22 ಯೇಸುವಿನ ಬೋಧನಾ ವಿಧಾನಗಳಲ್ಲಿ ಕೆಲವನ್ನು ಪುನರ್ವಿಮರ್ಶಿಸಿದ ಬಳಿಕ ನಾವು, ಅವನನ್ನು ಬಂಧಿಸದಿದ್ದ ಆ ಓಲೇಕಾರರು “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ” ಎಂದು ಹೇಳಿದಾಗ, ಖಂಡಿತವಾಗಿಯೂ ಅತಿಶಯಿಸಿ ಹೇಳುತ್ತಿರಲಿಲ್ಲ ಎಂದು ಸುಲಭವಾಗಿ ತೀರ್ಮಾನಿಸಬಲ್ಲೆವು. ಆದರೆ, ಯಾವ ಬೋಧನಾ ವಿಧಾನಕ್ಕಾಗಿ ಯೇಸು ಪ್ರಾಯಶಃ ತುಂಬ ಪ್ರಸಿದ್ಧನಾಗಿದ್ದನೋ ಅದು, ದೃಷ್ಟಾಂತಗಳು ಅಥವಾ ಸಾಮ್ಯಗಳ ಉಪಯೋಗವೇ ಆಗಿತ್ತು. ಅವನು ಈ ವಿಧಾನವನ್ನು ಏಕೆ ಉಪಯೋಗಿಸಿದನು? ಮತ್ತು ಅವನ ದೃಷ್ಟಾಂತಗಳನ್ನು ಯಾವುದು ಇಷ್ಟೊಂದು ಪರಿಣಾಮಕಾರಿಯಾಗಿ ಮಾಡಿತು? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 1 ಈ ಓಲೇಕಾರರು ಬಹುಶಃ ಹಿರೀಸಭೆಯ ನಿಯೋಗಿಗಳಾಗಿದ್ದು, ಮಹಾಯಾಜಕರ ಅಧಿಕಾರದ ಕೆಳಗಿದ್ದರು.

^ ಪ್ಯಾರ. 3 ಕಾವಲಿನಬುರುಜು ಪತ್ರಿಕೆಯ 2002, ಆಗಸ್ಟ್‌ 15ರ ಸಂಚಿಕೆಯಲ್ಲಿರುವ “ನಿಮಗೆ ಮಾದರಿಯನ್ನು ತೋರಿಸಿದ್ದೇನೆ” ಮತ್ತು ‘ನಿರಂತರವೂ ನನ್ನನ್ನು ಹಿಂಬಾಲಿಸಿರಿ’ ಎಂಬ ಲೇಖನಗಳನ್ನು ನೋಡಿರಿ.

^ ಪ್ಯಾರ. 6 ಅ. ಕೃತ್ಯಗಳು 20:35ರಲ್ಲಿ ಕಂಡುಬರುವ ಈ ಕೊನೆಯ ಉದ್ಧೃತ ಭಾಗವು, ಅಪೊಸ್ತಲ ಪೌಲನಿಂದ ಮಾತ್ರ ಉಲ್ಲೇಖಿಸಲ್ಪಟ್ಟಿದೆಯಾದರೂ, ಆ ಮಾತುಗಳ ತಾತ್ಪರ್ಯವು ಸುವಾರ್ತಾ ಪುಸ್ತಕಗಳಲ್ಲಿ ಕಂಡುಬರುತ್ತದೆ. ಪೌಲನು ಈ ಹೇಳಿಕೆಯನ್ನು ಬಾಯಿಮಾತಿನಿಂದ (ಯೇಸು ಇದನ್ನು ಹೇಳುವಾಗ ಅದನ್ನು ಕೇಳಿಸಿಕೊಂಡಿದ್ದ ಒಬ್ಬ ಶಿಷ್ಯನಿಂದ ಅಥವಾ ಪುನರುತ್ಥಿತ ಯೇಸುವಿನಿಂದ) ಇಲ್ಲವೆ ದೈವಿಕ ಪ್ರಕಟನೆಯಿಂದ ಪಡೆದುಕೊಂಡಿದ್ದಿರಬಹುದು.​—ಅ. ಕೃತ್ಯಗಳು 22:​6-15; 1 ಕೊರಿಂಥ 15:​6, 8.

^ ಪ್ಯಾರ. 8 ಯೆಹೂದ್ಯರು ದೇವಾಲಯದ ವಾರ್ಷಿಕ ತೆರಿಗೆಯಾದ ಎರಡು ದಿದ್ರಾಖ್ಮ (ಸುಮಾರು ಎರಡು ದಿನಗಳ ಕೂಲಿ)ವನ್ನು ತೆರುವಂತೆ ಅಗತ್ಯಪಡಿಸಲ್ಪಟ್ಟಿದ್ದರು. ತೆರಿಗೆಯ ಹಣವನ್ನು, ದೇವಾಲಯದ ದುರಸ್ತಿಕಾರ್ಯಕ್ಕಾಗಿ, ಅಲ್ಲಿ ನಡೆಸಲ್ಪಡುವ ಸೇವೆಗಾಗಿ, ಮತ್ತು ಜನಾಂಗದ ಪರವಾಗಿ ಸಲ್ಲಿಸಲ್ಪಡುವ ದೈನಂದಿನ ಯಜ್ಞಗಳಿಗಾಗಿ ಉಪಯೋಗಿಸಲಾಗುತ್ತಿತ್ತು.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ಯೇಸು ಸರಳವಾಗಿ ಮತ್ತು ಸ್ಪಷ್ಟವಾಗಿ ಕಲಿಸಿದನು ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ?

• ತನ್ನ ಬೋಧನೆಯಲ್ಲಿ ಯೇಸು ಪ್ರಶ್ನೆಗಳನ್ನು ಏಕೆ ಉಪಯೋಗಿಸಿದನು?

• ಉತ್ಪ್ರೇಕ್ಷಾಲಂಕಾರ ಎಂದರೇನು, ಮತ್ತು ಯೇಸು ಈ ಬೋಧನಾ ವಿಧಾನವನ್ನು ಹೇಗೆ ಉಪಯೋಗಿಸಿದನು?

• ಯೆಹೋವನ ಕುರಿತಾದ ಹೃತ್ಪೂರ್ವಕ ಸತ್ಯಗಳನ್ನು ತನ್ನ ಶಿಷ್ಯರಿಗೆ ಕಲಿಸಲಿಕ್ಕಾಗಿ ಯೇಸು ತರ್ಕಬದ್ಧವಾದ ವಾದಸರಣಿಯನ್ನು ಹೇಗೆ ಉಪಯೋಗಿಸಿದನು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಯೇಸು, ಸಾಧಾರಣ ಜನರು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದ್ದ ಸರಳ ಪದಪ್ರಯೋಗವನ್ನು ಮಾಡಿದನು

[ಪುಟ 10ರಲ್ಲಿರುವ ಚಿತ್ರ]

ಫರಿಸಾಯರು ‘ಸೊಳ್ಳೆಯನ್ನು ಸೋಸಿದರು, ಆದರೆ ಒಂಟೆಯನ್ನು ನುಂಗಿದರು’