ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಒಂದು ದೃಷ್ಟಾಂತವಿಲ್ಲದೆ ಅವನು ಅವರೊಂದಿಗೆ ಮಾತಾಡುತ್ತಿರಲಿಲ್ಲ”

“ಒಂದು ದೃಷ್ಟಾಂತವಿಲ್ಲದೆ ಅವನು ಅವರೊಂದಿಗೆ ಮಾತಾಡುತ್ತಿರಲಿಲ್ಲ”

“ಒಂದು ದೃಷ್ಟಾಂತವಿಲ್ಲದೆ ಅವನು ಅವರೊಂದಿಗೆ ಮಾತಾಡುತ್ತಿರಲಿಲ್ಲ”

“ಯೇಸು ಈ ಮಾತುಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯ [“ದೃಷ್ಟಾಂತ,” NW]ರೂಪವಾಗಿ ಹೇಳಿದನು; ಸಾಮ್ಯವಿಲ್ಲದೆ [“ದೃಷ್ಟಾಂತವಿಲ್ಲದೆ,” NW] ಒಂದನ್ನೂ ಹೇಳಲಿಲ್ಲ.”​—ಮತ್ತಾಯ 13:​34.

1, 2. (ಎ) ಪರಿಣಾಮಕಾರಿಯಾದ ದೃಷ್ಟಾಂತಗಳನ್ನು ಏಕೆ ಸುಲಭವಾಗಿ ಮರೆಯಸಾಧ್ಯವಿಲ್ಲ? (ಬಿ) ಯಾವ ರೀತಿಯ ದೃಷ್ಟಾಂತಗಳನ್ನು ಯೇಸು ಉಪಯೋಗಿಸಿದನು, ಮತ್ತು ದೃಷ್ಟಾಂತಗಳ ಅವನ ಉಪಯೋಗದ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ? (ಪಾದಟಿಪ್ಪಣಿಯನ್ನೂ ನೋಡಿರಿ.)

ಅನೇಕ ವರ್ಷಗಳ ಹಿಂದೆ, ಬಹುಶಃ ಒಂದು ಬಹಿರಂಗ ಭಾಷಣದಲ್ಲಿ ನೀವು ಕೇಳಿಸಿಕೊಂಡ ಒಂದು ದೃಷ್ಟಾಂತವು ನಿಮಗೆ ಜ್ಞಾಪಕವಿದೆಯೊ? ಪರಿಣಾಮಕಾರಿಯಾದ ದೃಷ್ಟಾಂತಗಳನ್ನು ಬೇಗನೆ ಮರೆಯಲಾಗುವುದಿಲ್ಲ. ದೃಷ್ಟಾಂತಗಳು “ಕಿವಿಗಳನ್ನು ಕಣ್ಣುಗಳಾಗಿ ಮಾರ್ಪಡಿಸುತ್ತವೆ ಮತ್ತು ಕೇಳುಗರು ತಮ್ಮ ಮನಸ್ಸಿನಲ್ಲಿ ಮಾನಸಿಕ ಚಿತ್ರಗಳೊಂದಿಗೆ ಆಲೋಚಿಸುವಂತೆ ಮಾಡುತ್ತವೆ” ಎಂದು ಒಬ್ಬ ಲೇಖಕನು ಬರೆದನು. ಮಾನಸಿಕ ಚಿತ್ರಗಳು ಅನೇಕವೇಳೆ ನಮ್ಮ ತಿಳಿವಳಿಕೆಗೆ ಅತ್ಯುತ್ತಮ ಸಹಾಯಕಗಳಾಗಿರುವುದರಿಂದ, ದೃಷ್ಟಾಂತಗಳು ವಿಷಯಗಳನ್ನು ಗ್ರಹಿಸುವುದನ್ನು ಹೆಚ್ಚು ಸುಲಭವಾದದ್ದಾಗಿ ಮಾಡಸಾಧ್ಯವಿದೆ. ದೃಷ್ಟಾಂತಗಳು ಮಾತುಗಳಲ್ಲಿ ಜೀವವನ್ನು ತುಂಬಿಸಬಲ್ಲವು, ಮತ್ತು ನಮ್ಮ ಸ್ಮರಣೆಯಲ್ಲಿ ಬಲವಾಗಿ ನೆಲೆಯೂರುವಂಥ ಪಾಠಗಳನ್ನು ಕಲಿಸಬಲ್ಲವು.

2 ಭೂಮಿಯಲ್ಲಿರುವ ಯಾವುದೇ ಬೋಧಕನು, ದೃಷ್ಟಾಂತಗಳನ್ನು ಉಪಯೋಗಿಸುವುದರಲ್ಲಿ ಯೇಸು ಕ್ರಿಸ್ತನಿಗಿಂತ ಹೆಚ್ಚು ನಿಸ್ಸೀಮನಾಗಿಲ್ಲ. ಯೇಸುವಿನ ಅನೇಕ ಸಾಮ್ಯಗಳು ತಿಳಿಸಲ್ಪಟ್ಟು ಸುಮಾರು ಎರಡು ಸಾವಿರ ವರ್ಷಗಳು ಕಳೆದಿರುವುದಾದರೂ ಅವುಗಳನ್ನು ಸುಲಭವಾಗಿ ಜ್ಞಾಪಿಸಿಕೊಳ್ಳಲಾಗುತ್ತದೆ. * ವಿಶೇಷವಾಗಿ ಈ ಬೋಧನಾ ವಿಧಾನದ ಮೇಲೆ ಯೇಸು ಏಕೆ ಅತ್ಯಧಿಕವಾಗಿ ಅವಲಂಬಿಸಿದ್ದನು? ಮತ್ತು ಅವನ ದೃಷ್ಟಾಂತಗಳು ಹೇಗೆ ಇಷ್ಟೊಂದು ಪರಿಣಾಮಕಾರಿಯಾಗುತ್ತಿದ್ದವು?

ಯೇಸು ದೃಷ್ಟಾಂತಗಳ ಮೂಲಕ ಕಲಿಸಲು ಕಾರಣವೇನು?

3. (ಎ) ಮತ್ತಾಯ 13:​34, 35ಕ್ಕನುಸಾರ, ಯೇಸು ದೃಷ್ಟಾಂತಗಳನ್ನು ಏಕೆ ಉಪಯೋಗಿಸಿದನು ಎಂಬುದಕ್ಕೆ ಒಂದು ಕಾರಣವೇನು? (ಬಿ) ಯೆಹೋವನು ಈ ರೀತಿಯ ಬೋಧನಾ ವಿಧಾನವನ್ನು ಅಮೂಲ್ಯವಾಗಿ ಪರಿಗಣಿಸಿದ್ದಿರಬೇಕು ಎಂಬುದನ್ನು ಯಾವುದು ಸೂಚಿಸುತ್ತದೆ?

3 ಯೇಸು ದೃಷ್ಟಾಂತಗಳನ್ನು ಏಕೆ ಉಪಯೋಗಿಸಿದನು ಎಂಬುದಕ್ಕೆ ಬೈಬಲು ಎರಡು ಗಮನಾರ್ಹ ಕಾರಣಗಳನ್ನು ಕೊಡುತ್ತದೆ. ಮೊದಲನೆಯದಾಗಿ, ಅವನು ಹಾಗೆ ಮಾಡಿದ್ದು ಪ್ರವಾದನೆಯನ್ನು ನೆರವೇರಿಸಿತು. ಅಪೊಸ್ತಲ ಮತ್ತಾಯನು ಬರೆದುದು: “ಯೇಸು ಈ ಮಾತುಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯ [“ದೃಷ್ಟಾಂತ,” NW]ರೂಪವಾಗಿ ಹೇಳಿದನು; ಸಾಮ್ಯವಿಲ್ಲದೆ [“ದೃಷ್ಟಾಂತವಿಲ್ಲದೆ,” NW] ಒಂದನ್ನೂ ಹೇಳಲಿಲ್ಲ. ಹೀಗೆ​—ನಾನು ಬಾಯಿದೆರೆದು ಸಾಮ್ಯ [“ದೃಷ್ಟಾಂತ,” NW]ರೂಪವಾಗಿ ಉಪದೇಶಿಸುವೆನು; ಲೋಕಾದಿಯಿಂದ ಮರೆಯಾಗಿದ್ದವುಗಳನ್ನು ಹೊರಪಡಿಸುವೆನು ಎಂದು ಒಬ್ಬ ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು.” (ಮತ್ತಾಯ 13:​34, 35) ಮತ್ತಾಯನಿಂದ ಉಲ್ಲೇಖಿಸಲ್ಪಟ್ಟ ಆ “ಒಬ್ಬ ಪ್ರವಾದಿ”ಯು, ಕೀರ್ತನೆ 78:2ರ ರಚಕನಾಗಿದ್ದನು. ಯೇಸುವಿನ ಜನನಕ್ಕಿಂತಲೂ ಎಷ್ಟೋ ಶತಮಾನಗಳ ಮುಂಚೆಯೇ ಆ ಕೀರ್ತನೆಗಾರನು ದೇವರಾತ್ಮದ ಪ್ರೇರಣೆಯ ಕೆಳಗೆ ಇದನ್ನು ಬರೆದಿದ್ದನು. ನೂರಾರು ವರ್ಷಗಳಿಗೆ ಮೊದಲೇ ಯೆಹೋವನು, ತನ್ನ ಮಗನು ದೃಷ್ಟಾಂತಗಳ ಮೂಲಕ ಬೋಧಿಸುವನು ಎಂಬುದನ್ನು ನಿರ್ಧರಿಸಿದ್ದು ಗಮನಾರ್ಹವಾದ ಸಂಗತಿಯಲ್ಲವೋ? ಖಂಡಿತವಾಗಿಯೂ ಯೆಹೋವನು ಈ ರೀತಿಯ ಬೋಧನಾ ವಿಧಾನವನ್ನು ಅಮೂಲ್ಯವಾಗಿ ಪರಿಗಣಿಸಿದ್ದಿರಬೇಕು!

4. ಯೇಸು ತಾನು ದೃಷ್ಟಾಂತಗಳನ್ನು ಉಪಯೋಗಿಸಿದ್ದರ ಕಾರಣವನ್ನು ಹೇಗೆ ವಿವರಿಸಿದನು?

4 ಎರಡನೆಯದಾಗಿ, ಯಾರ ಹೃದಯಗಳು ಪ್ರತಿಕ್ರಿಯೆ ತೋರಿಸುವುದಿಲ್ಲವೋ ಅಂಥವರನ್ನು ಪ್ರತ್ಯೇಕಿಸಲಿಕ್ಕಾಗಿ ತಾನು ದೃಷ್ಟಾಂತಗಳನ್ನು ಉಪಯೋಗಿಸುತ್ತಿದ್ದೇನೆಂದು ಸ್ವತಃ ಯೇಸುವೇ ವಿವರಿಸಿದನು. ಕೂಡಿಬಂದಿದ್ದ ‘ಬಹಳ ಜನರಿಗೆ’ ಅವನು ಬಿತ್ತುವವನ ಕುರಿತಾದ ಸಾಮ್ಯವನ್ನು ತಿಳಿಸಿದ ಬಳಿಕ, ಅವನ ಶಿಷ್ಯರು ಅವನನ್ನು ಕೇಳಿದ್ದು: “ಯಾಕೆ ಸಾಮ್ಯರೂಪವಾಗಿ [“ದೃಷ್ಟಾಂತಗಳನ್ನು ಉಪಯೋಗಿಸಿ,” NW] ಅವರ ಸಂಗಡ ಮಾತಾಡುತ್ತೀ”? ಯೇಸು ಉತ್ತರಿಸಿದ್ದು: “ಪರಲೋಕರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ; ಅವರಿಗೆ ಕೊಟ್ಟಿಲ್ಲ. ನಾನು ಅವರ ಸಂಗಡ ಸಾಮ್ಯರೂಪವಾಗಿ [“ದೃಷ್ಟಾಂತಗಳನ್ನು ಉಪಯೋಗಿಸಿ,” NW] ಮಾತಾಡುವದಕ್ಕೆ ಕಾರಣವೇನಂದರೆ ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ, ಕಿವಿಯಿದ್ದರೂ ಕೇಳುವದಿಲ್ಲ ಮತ್ತು ತಿಳುಕೊಳ್ಳುವದಿಲ್ಲ. ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ; ಅದೇನಂದರೆ​—ನೀವು ಕಿವಿಯಿದ್ದು ಕೇಳಿದರೂ ತಿಳುಕೊಳ್ಳುವದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವದೇ ಇಲ್ಲ. ಈ ಜನರ ಹೃದಯವು ಕೊಬ್ಬಿತು.”​—ಮತ್ತಾಯ 13:​2, 10, 11, 13-15; ಯೆಶಾಯ 6:​9, 10.

5. ಯೇಸುವಿನ ದೃಷ್ಟಾಂತಗಳು, ದೀನ ಮನೋಭಾವವುಳ್ಳ ಕೇಳುಗರನ್ನು ಅಹಂಕಾರಿಗಳಾದ ಕೇಳುಗರಿಂದ ಹೇಗೆ ಪ್ರತ್ಯೇಕಿಸಿದವು?

5 ಯೇಸುವಿನ ದೃಷ್ಟಾಂತಗಳ ಕುರಿತಾದ ಯಾವ ಸಂಗತಿಯು ಜನರನ್ನು ಪ್ರತ್ಯೇಕಿಸಿತು? ಕೆಲವು ಸಂದರ್ಭಗಳಲ್ಲಿ, ಅವನ ಮಾತುಗಳ ಪೂರ್ಣ ಅರ್ಥವನ್ನು ಗ್ರಹಿಸಲಿಕ್ಕಾಗಿ ಅವನ ಕೇಳುಗರು ಜಾಗರೂಕತೆಯಿಂದ ಅನ್ವೇಷಣೆ ನಡೆಸಬೇಕಾಗಿತ್ತು. ದೀನ ಮನೋಭಾವದ ವ್ಯಕ್ತಿಗಳು ಇನ್ನೂ ಹೆಚ್ಚಿನ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳುವಂತೆ ಪ್ರಚೋದಿಸಲ್ಪಟ್ಟರು. (ಮತ್ತಾಯ 13:36; ಮಾರ್ಕ 4:34) ಹೀಗೆ, ಯೇಸುವಿನ ದೃಷ್ಟಾಂತಗಳು, ಯಾರ ಹೃದಯಗಳು ಸತ್ಯಕ್ಕಾಗಿ ಹಸಿದಿದ್ದವೋ ಅಂಥವರಿಗೆ ಸತ್ಯವನ್ನು ಬಯಲುಪಡಿಸಿದವು; ಮತ್ತು ಅದೇ ಸಮಯದಲ್ಲಿ ಅವನ ದೃಷ್ಟಾಂತಗಳು, ಯಾರ ಹೃದಯಗಳು ಅಹಂಕಾರದಿಂದ ತುಂಬಿದ್ದವೋ ಅವರಿಂದ ಸತ್ಯವನ್ನು ಮರೆಮಾಚಿದವು. ಯೇಸು ಎಷ್ಟು ಗಮನಾರ್ಹ ಬೋಧಕನಾಗಿದ್ದನು! ಅವನ ದೃಷ್ಟಾಂತಗಳನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಮಾಡಿದಂಥ ಅಂಶಗಳಲ್ಲಿ ಕೆಲವನ್ನು ನಾವೀಗ ಪರೀಕ್ಷಿಸೋಣ.

ಆಯ್ದ ವಿವರಗಳ ಉಪಯೋಗ

6-8. (ಎ) ಯೇಸುವಿನ ಪ್ರಥಮ ಶತಮಾನದ ಕೇಳುಗರಿಗೆ ಯಾವ ಸೌಕರ್ಯ ಇರಲಿಲ್ಲ? (ಬಿ) ವಿವರಗಳನ್ನು ಉಪಯೋಗಿಸುವ ವಿಷಯದಲ್ಲಿ ಯೇಸು ತುಂಬ ಆಯ್ಕೆಮಾಡುವವನಾಗಿದ್ದನು ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ?

6 ಯಾರು ಯೇಸು ಬೋಧಿಸುವುದನ್ನು ನೇರವಾಗಿ ಕೇಳಿಸಿಕೊಂಡರೋ ಆ ಪ್ರಥಮ ಶತಮಾನದ ಶಿಷ್ಯರಿಗೆ ಆ ಅನುಭವವು ಹೇಗಿದ್ದಿರಬಹುದು ಎಂದು ನೀವೆಂದಾದರೂ ಕುತೂಹಲಪಟ್ಟಿದ್ದೀರೊ? ಯೇಸುವಿನ ಧ್ವನಿಯನ್ನು ಕೇಳಿಸಿಕೊಳ್ಳುವ ಅಪೂರ್ವ ಸುಯೋಗ ಅವರಿಗಿತ್ತಾದರೂ, ಅವನು ಹೇಳಿದ ವಿಷಯಗಳನ್ನು ಅವರಿಗೆ ಜ್ಞಾಪಕಹುಟ್ಟಿಸಲಿಕ್ಕಾಗಿ ಒಂದು ಲಿಖಿತ ದಾಖಲೆಯಲ್ಲಿ ಹುಡುಕುವ ಸೌಕರ್ಯ ಆಗಿನ್ನೂ ಅವರಿಗಿರಲಿಲ್ಲ. ಬದಲಾಗಿ, ಅವರು ಯೇಸುವಿನ ಮಾತುಗಳನ್ನು ತಮ್ಮ ಹೃದಮನಗಳಲ್ಲಿ ಕಾಪಾಡಿಕೊಳ್ಳಬೇಕಾಗಿತ್ತು. ದೃಷ್ಟಾಂತಗಳ ತನ್ನ ಕೌಶಲಭರಿತ ಉಪಯೋಗದ ಮೂಲಕ ಯೇಸು, ತಾನು ಏನನ್ನು ಕಲಿಸಿದನೋ ಅದನ್ನು ಅವರು ಜ್ಞಾಪಕದಲ್ಲಿಟ್ಟುಕೊಳ್ಳುವುದನ್ನು ಹೆಚ್ಚು ಸುಲಭಗೊಳಿಸಿದನು. ಯಾವ ರೀತಿಯಲ್ಲಿ?

7 ವಿವರಗಳನ್ನು ಉಪಯೋಗಿಸುವ ವಿಷಯದಲ್ಲಿ ಯೇಸು ತುಂಬ ಆಯ್ಕೆಮಾಡುವವನಾಗಿದ್ದನು. ಒಂದು ಕಥೆಗೆ ವಿವರಗಳು ಸೂಕ್ತವಾಗಿರುವಾಗ ಅಥವಾ ಒತ್ತಿಹೇಳಲಿಕ್ಕಾಗಿ ಅಗತ್ಯವಾಗಿರುವಾಗ ಮಾತ್ರ ಅವನು ಈ ವಿವರಗಳನ್ನು ಒಳಗೂಡಿಸಲು ವಿಶೇಷ ಕಾಳಜಿ ವಹಿಸಿದನು. ಆದುದರಿಂದಲೇ ಅವನು, ಕಳೆದುಹೋಗಿದ್ದ ಒಂದು ಕುರಿಯನ್ನು ಅದರ ಯಜಮಾನನು ಹುಡುಕುತ್ತಿರುವಾಗ, ಇನ್ನೆಷ್ಟು ಕುರಿಗಳು ಉಳಿದಿದ್ದವು, ದ್ರಾಕ್ಷೇತೋಟದಲ್ಲಿ ಎಷ್ಟು ತಾಸುಗಳ ಕಾಲ ಆಳುಗಳು ಕೂಲಿಮಾಡಿದರು, ಮತ್ತು ಆಳುಗಳಿಗೆ ಎಷ್ಟು ತಲಾಂತುಗಳು ಕೊಡಲ್ಪಟ್ಟವು ಎಂಬುದನ್ನು ನಿರ್ದಿಷ್ಟವಾಗಿ ಹೇಳಿದನು.​—ಮತ್ತಾಯ 18:​12-14; 20:​1-16; 25:​14-30.

8 ಅದೇ ಸಮಯದಲ್ಲಿ, ದೃಷ್ಟಾಂತಗಳ ಅರ್ಥವನ್ನು ಗ್ರಹಿಸುವುದರಿಂದ ನಮ್ಮನ್ನು ತಡೆಯಬಹುದಾದ ಅನಗತ್ಯ ವಿವರಗಳನ್ನು ಯೇಸು ಒಳಗೂಡಿಸಲಿಲ್ಲ. ಉದಾಹರಣೆಗೆ, ಕರುಣಾರಹಿತನಾದ ಸೇವಕನ ಸಾಮ್ಯದಲ್ಲಿ, ಆ ಸೇವಕನು 10,000 ತಲಾಂತುಗಳಷ್ಟು ಮೊತ್ತದ ಸಾಲವನ್ನು ಹೇಗೆ ಮಾಡಿದ್ದನು ಎಂಬ ವಿಷಯದಲ್ಲಿ ಯಾವುದೇ ವಿವರವು ಕೊಡಲ್ಪಟ್ಟಿರಲಿಲ್ಲ. ಯೇಸು ಇಲ್ಲಿ ಕ್ಷಮಿಸುವ ಆವಶ್ಯಕತೆಯನ್ನು ಒತ್ತಿಹೇಳುತ್ತಿದ್ದನು. ಆದುದರಿಂದ, ಆ ಸೇವಕನು ಹೇಗೆ ಸಾಲದಲ್ಲಿ ಬಿದ್ದನು ಎಂಬುದು ಪ್ರಾಮುಖ್ಯವಾದ ವಿಷಯವಾಗಿರಲಿಲ್ಲ; ಬದಲಾಗಿ ಅವನ ಸಾಲವು ಹೇಗೆ ಮನ್ನಿಸಲ್ಪಟ್ಟಿತು ಮತ್ತು ಇದಕ್ಕೆ ಪ್ರತಿಯಾಗಿ ಅವನು, ತುಲನಾತ್ಮಕವಾಗಿ ಕೊಂಚವೇ ಹಣವನ್ನು ತನಗೆ ಕೊಡಬೇಕಾಗಿದ್ದ ಜೊತೆ ಸೇವಕನನ್ನು ಹೇಗೆ ಉಪಚರಿಸಿದನು ಎಂಬುದು ಪ್ರಾಮುಖ್ಯವಾದ ವಿಷಯವಾಗಿತ್ತು. (ಮತ್ತಾಯ 18:​23-35, 24ನೇ ವಚನದ ಪಾದಟಿಪ್ಪಣಿ) ತದ್ರೀತಿಯಲ್ಲಿ, ಪೋಲಿಹೋದ ಮಗನ ಕುರಿತಾದ ದೃಷ್ಟಾಂತದಲ್ಲಿ, ಕಿರಿಯ ಮಗನು ಇದ್ದಕ್ಕಿದ್ದಂತೆ ತನ್ನ ಪಾಲಿನ ಆಸ್ತಿಯನ್ನು ಏಕೆ ತಗಾದೆಮಾಡಿದನು ಮತ್ತು ಅದನ್ನು ಏಕೆ ದುಂದುಮಾಡಿಬಿಟ್ಟನು ಎಂಬ ವಿಷಯದಲ್ಲಿ ಯೇಸು ಯಾವ ವಿವರಣೆಯನ್ನೂ ಕೊಡಲಿಲ್ಲ. ಆದರೆ ತನ್ನ ಮಗನು ಮನಸ್ಸನ್ನು ಬದಲಾಯಿಸಿ ಮನೆಗೆ ಹಿಂದಿರುಗಿದಾಗ ತಂದೆಗೆ ಯಾವ ಅನಿಸಿಕೆಯಾಯಿತು ಮತ್ತು ಅವನು ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ಯೇಸು ವಿವರವಾಗಿ ವರ್ಣಿಸಿದನು. ತಂದೆಯ ಪ್ರತಿಕ್ರಿಯೆಯ ಕುರಿತಾದ ಅಂಥ ವಿವರಗಳು, ಯೇಸು ಯಾವ ಮುಖ್ಯಾಂಶವನ್ನು ಸೂಚಿಸಿ ಮಾತಾಡುತ್ತಿದ್ದನೋ ಅದಕ್ಕೆ, ಅಂದರೆ ಯೆಹೋವನು “ಮಹಾಕೃಪೆಯಿಂದ” ಕ್ಷಮಿಸುತ್ತಾನೆ ಎಂಬುದಕ್ಕೆ ಅತ್ಯಾವಶ್ಯಕವಾಗಿದ್ದವು.​—ಯೆಶಾಯ 55:7; ಲೂಕ 15:​11-32.

9, 10. (ಎ) ತನ್ನ ದೃಷ್ಟಾಂತಗಳಲ್ಲಿನ ವ್ಯಕ್ತಿಗಳನ್ನು ಚಿತ್ರಿಸುತ್ತಿರುವಾಗ ಯೇಸು ಯಾವುದರ ಮೇಲೆ ಗಮನವನ್ನು ಕೇಂದ್ರೀಕರಿಸಿದನು? (ಬಿ) ತನ್ನ ಕೇಳುಗರು ಅಥವಾ ಇನ್ನಿತರರು ತನ್ನ ದೃಷ್ಟಾಂತಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದನ್ನು ಯೇಸು ಯಾವ ರೀತಿಯಲ್ಲಿ ಹೆಚ್ಚು ಸುಲಭಗೊಳಿಸಿದನು?

9 ತನ್ನ ಸಾಮ್ಯಗಳಲ್ಲಿನ ವ್ಯಕ್ತಿಗಳನ್ನು ಚಿತ್ರಿಸಿದಂಥ ವಿಧದಲ್ಲಿ ಸಹ ಯೇಸು ವಿವೇಚನಾಭರಿತನಾಗಿದ್ದನು. ಒಬ್ಬ ವ್ಯಕ್ತಿಯ ಹೊರತೋರಿಕೆಯ ವಿಷಯದಲ್ಲಿ ಸವಿಸ್ತಾರವಾದ ವರ್ಣನೆಯನ್ನು ನೀಡುವುದಕ್ಕೆ ಬದಲಾಗಿ, ಯೇಸು ಅನೇಕವೇಳೆ ಅವರು ಏನು ಮಾಡಿದರು ಅಥವಾ ತಾನು ಕಥಾರೂಪದಲ್ಲಿ ತಿಳಿಸಿದಂಥ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸಿದರು ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿದನು. ಆದುದರಿಂದ, ನೆರೆಯವನಾದ ಸಮಾರ್ಯದವನ ಹೊರತೋರಿಕೆ ಹೇಗಿತ್ತು ಎಂಬುದನ್ನು ವರ್ಣಿಸುವುದಕ್ಕೆ ಬದಲಾಗಿ, ಇನ್ನೂ ಹೆಚ್ಚು ಅರ್ಥಗರ್ಭಿತವಾದ ವಿಷಯವನ್ನು ಯೇಸು ತಿಳಿಸಿದನು. ಗಾಯಗೊಂಡು ದಾರಿಯಲ್ಲಿ ಬಿದ್ದಿದ್ದ ಒಬ್ಬ ಯೆಹೂದಿಗೆ ಸಮಾರ್ಯದವನು ಹೇಗೆ ಸಹಾನುಭೂತಿಯಿಂದ ಸಹಾಯಮಾಡಿದನು ಎಂಬುದೇ ಆ ವಿಷಯವಾಗಿತ್ತು. ನೆರೆಯವರ ಪ್ರೀತಿಯು ನಮ್ಮ ಸ್ವಂತ ಕುಲ ಅಥವಾ ರಾಷ್ಟ್ರೀಯತೆಯ ಜನರಿಗೆ ಮಾತ್ರವಲ್ಲ ಇತರರಿಗೂ ತೋರಿಸಲ್ಪಡಬೇಕು ಎಂಬುದನ್ನು ಕಲಿಸಲು ಅಗತ್ಯವಿರುವ ವಿವರಗಳನ್ನು ಯೇಸು ಒದಗಿಸಿದನು.​—ಲೂಕ 10:​29, 33-37.

10 ಯೇಸು ಅಗತ್ಯವಿರುವ ವಿವರಗಳನ್ನು ಜಾಗರೂಕತೆಯಿಂದ ಉಪಯೋಗಿಸಿದ್ದರಿಂದ, ಅವನ ದೃಷ್ಟಾಂತಗಳು ಸಂಕ್ಷಿಪ್ತವಾಗಿದ್ದು, ವಿಪರೀತ ವಿವರಗಳಿಂದ ತುಂಬಿರಲಿಲ್ಲ. ಹೀಗೆ ಅವನು ತನ್ನ ಪ್ರಥಮ ಶತಮಾನದ ಕೇಳುಗರು ಮತ್ತು ಸಮಯಾನಂತರ ಪ್ರೇರಿತ ಸುವಾರ್ತಾ ವೃತ್ತಾಂತಗಳನ್ನು ಓದುವಂಥ ಇತರ ಅಸಂಖ್ಯಾತ ಜನರು, ಆ ದೃಷ್ಟಾಂತಗಳನ್ನು ಮತ್ತು ಅವು ಕಲಿಸಿದ ಅಮೂಲ್ಯ ಪಾಠಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದನ್ನು ಹೆಚ್ಚು ಸುಲಭವಾದದ್ದಾಗಿ ಮಾಡಿದನು.

ದೈನಂದಿನ ಜೀವಿತಕ್ಕೆ ಸಂಬಂಧಿಸಿದ ದೃಷ್ಟಾಂತಗಳು

11. ಯೇಸುವಿನ ಸಾಮ್ಯಗಳು, ಅವನು ಗಲಿಲಾಯದಲ್ಲಿ ಬೆಳೆಯುತ್ತಿದ್ದಾಗ ಸೂಕ್ಷ್ಮವಾಗಿ ಗಮನಿಸಿದ್ದಿರಬಹುದಾದ ವಿಷಯಗಳನ್ನು ಹೇಗೆ ಪ್ರತಿಬಿಂಬಿಸಿದವು ಎಂಬುದಕ್ಕೆ ಉದಾಹರಣೆಗಳನ್ನು ಕೊಡಿರಿ.

11 ಜನರ ಜೀವಿತಗಳಿಗೆ ಸಂಬಂಧಿಸಿದ ದೃಷ್ಟಾಂತಗಳನ್ನು ಉಪಯೋಗಿಸುವುದರಲ್ಲಿ ಯೇಸು ತುಂಬ ನಿಪುಣನಾಗಿದ್ದನು. ಅವನ ಸಾಮ್ಯಗಳಲ್ಲಿ ಹೆಚ್ಚಿನವು, ಅವನು ಗಲಿಲಾಯದಲ್ಲಿ ಬೆಳೆಯುತ್ತಿದ್ದಾಗ ಸೂಕ್ಷ್ಮವಾಗಿ ಗಮನಿಸಿದ್ದಿರಬಹುದಾದ ವಿಷಯಗಳನ್ನು ಪ್ರತಿಬಿಂಬಿಸಿದವು. ಅವನ ಆರಂಭದ ಜೀವಿತದ ಕುರಿತು ಒಂದು ಕ್ಷಣ ಆಲೋಚಿಸಿರಿ. ಅವನ ತಾಯಿ ಹಿಂದಿನ ದಿನ ತಯಾರಿಸಿದ ರೊಟ್ಟಿಹಿಟ್ಟಿನಿಂದ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು, ಮರುದಿನದ ಹಿಟ್ಟನ್ನು ಹುಳಿಹಿಡಿಸಲಿಕ್ಕಾಗಿ ಅದನ್ನು ಉಪಯೋಗಿಸುವ ಮೂಲಕ ಹುಳಿಹಿಡಿದ ರೊಟ್ಟಿಯನ್ನು ತಯಾರಿಸುವುದನ್ನು ಅವನು ಎಷ್ಟೊಂದು ಬಾರಿ ನೋಡಿದ್ದಿರಬೇಕು. (ಮತ್ತಾಯ 13:33) ಬೆಸ್ತರು ಗಲಿಲಾಯ ಸಮುದ್ರದ ತಿಳಿಯಾದ ನಸುನೀಲಿ ಬಣ್ಣದ ನೀರಿನಲ್ಲಿ ತಮ್ಮ ಬಲೆಗಳನ್ನು ಬೀಸುವುದನ್ನು ಅವನು ಎಷ್ಟು ಸಲ ಕಣ್ಣಾರೆ ನೋಡಿದ್ದಿರಬಹುದು. (ಮತ್ತಾಯ 13:47) ಮಕ್ಕಳು ಪೇಟೆಯಲ್ಲಿ ಆಟವಾಡುತ್ತಿರುವುದನ್ನು ಅವನೆಷ್ಟು ಸಲ ಗಮನಿಸಿದ್ದಿರಬಹುದು. (ಮತ್ತಾಯ 11:16) ಇನ್ನಿತರ ಸರ್ವಸಾಮಾನ್ಯ ವಿಷಯಗಳನ್ನು ಯೇಸು ಸೂಕ್ಷ್ಮವಾಗಿ ಗಮನಿಸಿದ್ದಿರಬೇಕು ಎಂಬುದಂತೂ ಖಂಡಿತ, ಮತ್ತು ಇವುಗಳನ್ನು ಅವನು ತನ್ನ ದೃಷ್ಟಾಂತಗಳಲ್ಲಿ ಉಪಯೋಗಿಸಿದನು. ಉದಾಹರಣೆಗೆ ಬಿತ್ತಲ್ಪಡುತ್ತಿರುವ ಬೀಜಗಳು, ಸಂತೋಷಭರಿತ ಮದುವೆಯ ಔತಣಗಳು, ಮತ್ತು ಸೂರ್ಯನ ಬೆಳಕಿನಲ್ಲಿ ಮಾಗಿ ನಿಂತಿರುವ ಬೆಳೆಯ ಹೊಲಗಳು.​—ಮತ್ತಾಯ 13:​3-8; 25:​1-12; ಮಾರ್ಕ 4:​26-29.

12, 13. ಗೋದಿ ಮತ್ತು ಹಣಜಿಯ ಕುರಿತಾದ ಯೇಸುವಿನ ಸಾಮ್ಯವು, ಸ್ಥಳಿಕ ಪರಿಸ್ಥಿತಿಗಳೊಂದಿಗೆ ಅವನು ಚಿರಪರಿಚಿತನಾಗಿದ್ದನು ಎಂಬುದನ್ನು ಹೇಗೆ ಪ್ರತಿಬಿಂಬಿಸಿತು?

12 ಹೀಗೆ, ದೈನಂದಿನ ಜೀವಿತದ ಪರಿಸ್ಥಿತಿಗಳು ಮತ್ತು ಸನ್ನಿವೇಶಗಳು ಯೇಸುವಿನ ಅನೇಕ ದೃಷ್ಟಾಂತಗಳಾದ್ಯಂತ ಹರಡಿಕೊಂಡಿದ್ದವು ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಆದುದರಿಂದ, ಈ ಬೋಧನಾ ವಿಧಾನವನ್ನು ಬಳಸುವುದರಲ್ಲಿನ ಅವನ ಕೌಶಲವನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲಿಕ್ಕಾಗಿ, ಅವನ ಮಾತುಗಳು ಅವನ ಯೆಹೂದಿ ಕೇಳುಗರಿಗೆ ಏನನ್ನು ಅರ್ಥೈಸಿದವು ಎಂಬುದನ್ನು ಪರಿಗಣಿಸುವುದು ಸಹಾಯಕರವಾದದ್ದಾಗಿದೆ. ನಾವೀಗ ಎರಡು ಉದಾಹರಣೆಗಳ ಕಡೆಗೆ ಗಮನಹರಿಸೋಣ.

13 ಮೊದಲನೆಯದಾಗಿ, ಗೋದಿ ಮತ್ತು ಹಣಜಿಯ ಕುರಿತಾದ ಸಾಮ್ಯದಲ್ಲಿ ಯೇಸು, ತನ್ನ ಹೊಲದಲ್ಲಿ ಒಳ್ಳೆಯ ಗೋದಿಯನ್ನು ಬಿತ್ತಿದ್ದ ಒಬ್ಬ ಮನುಷ್ಯನ ಕುರಿತಾಗಿ ಹೇಳಿದನು. ಆದರೆ ಅವನ “ವೈರಿಯು” ಆ ಹೊಲದ ಮೇಲೆ ದಾಳಿಮಾಡಿ, ಗೋದಿಯ ನಡುವೆ ಹಣಜಿಯನ್ನು ಬಿತ್ತಿದನು. ಯೇಸು ನಿರ್ದಿಷ್ಟವಾಗಿ ಆ ಶತ್ರುತ್ವದ ಕಾರ್ಯವನ್ನೇ ಏಕೆ ಆಯ್ದುಕೊಂಡನು? ಅವನು ಗಲಿಲಾಯ ಸಮುದ್ರದ ಸಮೀಪವೇ ಈ ದೃಷ್ಟಾಂತವನ್ನು ತಿಳಿಸಿದನು, ಮತ್ತು ಗಲಿಲಾಯದವರ ಮುಖ್ಯ ಕಸಬು ಖಂಡಿತವಾಗಿಯೂ ವ್ಯವಸಾಯವಾಗಿತ್ತು ಎಂಬುದನ್ನು ಮನಸ್ಸಿನಲ್ಲಿಡಿರಿ. ಒಬ್ಬ ರೈತನಿಗೆ, ವೈರಿಯೊಬ್ಬನು ರಹಸ್ಯವಾಗಿ ಹೊಲದೊಳಕ್ಕೆ ನುಗ್ಗಿ, ಅದರ ಮಧ್ಯೆ ವಿನಾಶಕರವಾದ ಹಣಜಿಯನ್ನು ಬಿತ್ತಿಹೋಗುವುದಕ್ಕಿಂತ ಹೆಚ್ಚು ಹಾನಿಕರವಾದ ಇನ್ಯಾವ ವಿಷಯವಿರಸಾಧ್ಯವಿತ್ತು? ಆ ಕಾಲದಲ್ಲಿದ್ದ ಐಹಿಕ ನಿಯಮಗಳು, ಅಂಥ ಆಕ್ರಮಣಗಳು ನಡೆಯುತ್ತಿದ್ದವು ಎಂಬುದನ್ನು ತೋರಿಸುತ್ತವೆ. ತನ್ನ ಕೇಳುಗರು ಅರ್ಥಮಾಡಿಕೊಳ್ಳಲು ಸಾಧ್ಯವಿರುವಂಥ ಒಂದು ಸನ್ನಿವೇಶವನ್ನು ಯೇಸು ಉಪಯೋಗಿಸಿದನು ಎಂಬುದು ಸುಸ್ಪಷ್ಟವಲ್ಲವೋ?​—ಮತ್ತಾಯ 13:​1, 2, 24-30.

14. ನೆರೆಯವನಾದ ಸಮಾರ್ಯದವನ ಕುರಿತಾದ ಸಾಮ್ಯದಲ್ಲಿ, ತನ್ನ ಮುಖ್ಯಾಂಶವನ್ನು ಒತ್ತಿಹೇಳಲಿಕ್ಕಾಗಿ “ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ” ಹೋಗುತ್ತಿದ್ದ ದಾರಿಯನ್ನೇ ಯೇಸು ಉಪಯೋಗಿಸಿದ್ದು ಗಮನಾರ್ಹವಾಗಿತ್ತೇಕೆ?

14 ಎರಡನೆಯದಾಗಿ, ನೆರೆಯವನಾದ ಸಮಾರ್ಯದವನ ಸಾಮ್ಯವನ್ನು ಜ್ಞಾಪಿಸಿಕೊಳ್ಳಿರಿ. ಯೇಸು ಹೀಗೆ ಹೇಳುವ ಮೂಲಕ ಆರಂಭಿಸಿದನು: “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು.” (ಲೂಕ 10:30) ತನ್ನ ಮುಖ್ಯಾಂಶವನ್ನು ಸ್ಪಷ್ಟಪಡಿಸಲಿಕ್ಕಾಗಿ ಯೇಸು, “ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ” ಹೋಗುತ್ತಿದ್ದ ದಾರಿಯನ್ನೇ ಉಪಯೋಗಿಸಿದನು ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ಸಾಮ್ಯವನ್ನು ಹೇಳುತ್ತಿದ್ದಾಗ ಅವನು ಯೂದಾಯದಲ್ಲಿದ್ದನು ಮತ್ತು ಇದು ಯೆರೂಸಲೇಮಿನಿಂದ ಅಷ್ಟೇನೂ ದೂರದಲ್ಲಿರಲಿಲ್ಲ; ಹೀಗೆ ಅವನ ಕೇಳುಗರು ದೃಷ್ಟಾಂತದಲ್ಲಿ ವರ್ಣಿಸಲ್ಪಟ್ಟಿದ್ದ ದಾರಿಯ ಕುರಿತು ತಿಳಿದಿದ್ದರು ಎಂಬುದು ಸಂಭವನೀಯ. ಆ ನಿರ್ದಿಷ್ಟ ದಾರಿಯು ಅಪಾಯಕ್ಕೆ ಕುಪ್ರಸಿದ್ಧವಾಗಿತ್ತು, ಅದರಲ್ಲೂ ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುತ್ತಿರುವ ಒಬ್ಬ ವ್ಯಕ್ತಿಯಂತೂ ಸುಲಭವಾಗಿ ಅಪಾಯಕ್ಕೆ ತುತ್ತಾಗಸಾಧ್ಯವಿತ್ತು. ಏಕಾಂತವಾದ ಭೂಪ್ರದೇಶದುದ್ದಕ್ಕೂ ಇದ್ದ ಈ ದಾರಿಯು ಅಂಕುಡೊಂಕಾಗಿದ್ದು, ಅದರಲ್ಲಿ ಅನೇಕ ತಿರುವುಗಳು ಇದ್ದವು. ಇದು ಕಳ್ಳರಿಗೆ ಅವಿತುಕೊಳ್ಳಲು ಬಹಳಷ್ಟು ಸ್ಥಳಾವಕಾಶವನ್ನು ಒದಗಿಸುತ್ತಿತ್ತು.

15. ನೆರೆಯವನಾದ ಸಮಾರ್ಯದವನ ಕುರಿತಾದ ದೃಷ್ಟಾಂತದಲ್ಲಿ, ಯಾಜಕನ ಹಾಗೂ ಲೇವಿಯನ ತಾತ್ಸಾರ ಮನೋಭಾವವನ್ನು ಯಾರೊಬ್ಬರೂ ಸರಿಯೆಂದು ಸಮರ್ಥಿಸಸಾಧ್ಯವಿರಲಿಲ್ಲವೇಕೆ?

15 “ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ” ಹೋಗುತ್ತಿದ್ದ ದಾರಿಯ ಕುರಿತು ಯೇಸು ಸೂಚಿಸಿ ಮಾತಾಡಿದ್ದರ ವಿಷಯದಲ್ಲಿ ಇನ್ನೊಂದು ಅಂಶವೂ ಗಮನಾರ್ಹವಾಗಿತ್ತು. ಆ ಸಾಮ್ಯಕ್ಕನುಸಾರ, ಮೊದಲಾಗಿ ಒಬ್ಬ ಯಾಜಕನೂ ನಂತರ ಒಬ್ಬ ಲೇವ್ಯನೂ ಆ ದಾರಿಯಲ್ಲಿ ಪ್ರಯಾಣಿಸುತ್ತಿದ್ದರು​—ಆದರೂ ಅವರಿಬ್ಬರಲ್ಲಿ ಯಾರೂ ಗಾಯಗೊಂಡಿದ್ದ ವ್ಯಕ್ತಿಗೆ ಸಹಾಯ ನೀಡಲು ನಿಲ್ಲಲಿಲ್ಲ. (ಲೂಕ 10:​31, 32) ಯಾಜಕರು ಯೆರೂಸಲೇಮಿನಲ್ಲಿರುವ ದೇವಾಲಯದಲ್ಲಿ ಸೇವೆಮಾಡುತ್ತಿದ್ದರು, ಮತ್ತು ಲೇವಿಯರು ಅವರಿಗೆ ನೆರವಾಗುತ್ತಿದ್ದರು. ಅನೇಕ ಯಾಜಕರು ಮತ್ತು ಲೇವಿಯರು ದೇವಾಲಯದಲ್ಲಿ ಕೆಲಸವನ್ನು ಮಾಡದೇ ಇದ್ದಾಗ ಯೆರಿಕೋವಿನಲ್ಲಿ ವಾಸಿಸುತ್ತಿದ್ದರು. ಏಕೆಂದರೆ ಯೆರೂಸಲೇಮಿನಿಂದ ಯೆರಿಕೋ ಕೇವಲ 23 ಕಿಲೊಮೀಟರುಗಳಷ್ಟು ದೂರದಲ್ಲಿತ್ತು. ಆದುದರಿಂದ, ಅವರು ಆ ದಾರಿಯ ಮೂಲಕ ಹಾದುಹೋಗುವ ಅವಕಾಶವಿತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಯಾಜಕನೂ ಲೇವಿಯನೂ “ಯೆರೂಸಲೇಮಿನಿಂದ” ಆ ದಾರಿಯಲ್ಲಿ ಹೋಗುತ್ತಿದ್ದರು ಎಂಬುದನ್ನೂ ಗಮನಿಸಿರಿ. ಅಂದರೆ ಅವರು ದೇವಾಲಯದಿಂದ ಹೊರಟು ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. * ಆದುದರಿಂದ, ‘ಗಾಯಗೊಂಡಿದ್ದ ಆ ವ್ಯಕ್ತಿಯು ಸತ್ತವನಂತೆ ತೋರಿದ್ದರಿಂದಲೇ ಅವರು ವಾರೆಯಾಗಿ ಹೋದರು, ಯಾಕೆಂದರೆ ಒಂದು ಶವವನ್ನು ಸ್ಪರ್ಶಿಸುವುದು ಅವರನ್ನು ತಾತ್ಕಾಲಿಕವಾಗಿ ದೇವಾಲಯದಲ್ಲಿ ಸೇವೆಸಲ್ಲಿಸಲು ಅಯೋಗ್ಯರನ್ನಾಗಿ ಮಾಡಸಾಧ್ಯವಿತ್ತು’ ಎಂದು ಹೇಳುವ ಮೂಲಕ, ಈ ಮನುಷ್ಯರ ತಾತ್ಸಾರ ಮನೋಭಾವವನ್ನು ಯಾರೊಬ್ಬರೂ ಸರಿಯೆಂದು ಸಮರ್ಥಿಸಸಾಧ್ಯವಿರಲಿಲ್ಲ. (ಯಾಜಕಕಾಂಡ 21:1; ಅರಣ್ಯಕಾಂಡ 19:​11, 16) ಯೇಸುವಿನ ದೃಷ್ಟಾಂತವು ತನ್ನ ಕೇಳುಗರಿಗೆ ಚಿರಪರಿಚಿತವಾಗಿದ್ದ ವಿಷಯಗಳನ್ನು ಪ್ರತಿಬಿಂಬಿಸಿತು ಎಂಬುದು ಇದರಿಂದ ಸ್ಪಷ್ಟವಾಗುವುದಿಲ್ಲವೋ?

ಸೃಷ್ಟಿಯಿಂದ ತೆಗೆದುಕೊಂಡ ದೃಷ್ಟಾಂತಗಳು

16. ಯೇಸು ಸೃಷ್ಟಿಯೊಂದಿಗೆ ತುಂಬ ಚಿರಪರಿಚಿತನಾಗಿದ್ದನು ಎಂಬುದು ಆಶ್ಚರ್ಯಕರ ಸಂಗತಿಯಲ್ಲವೇಕೆ?

16 ಯೇಸುವಿನ ಅನೇಕ ದೃಷ್ಟಾಂತಗಳು ಮತ್ತು ಸಾಮ್ಯಗಳು, ಸಸ್ಯಗಳು, ಪ್ರಾಣಿಗಳು, ಮತ್ತು ಹವಾಮಾನದ ಘಟಕಗಳೊಂದಿಗೆ ಅವನು ಚಿರಪರಿಚಿತನಾಗಿದ್ದನು ಎಂಬುದನ್ನು ಪ್ರಕಟಪಡಿಸುತ್ತವೆ. (ಮತ್ತಾಯ 6:​26, 28-30; 16:​2, 3) ಅವನು ಅಂಥ ಜ್ಞಾನವನ್ನು ಎಲ್ಲಿಂದ ಪಡೆದುಕೊಂಡನು? ಅವನು ಗಲಿಲಾಯದಲ್ಲಿ ಬೆಳೆಯುತ್ತಿದ್ದಾಗ, ಯೆಹೋವನ ಸೃಷ್ಟಿಯನ್ನು ಗಮನಿಸಲು ಅವನಿಗೆ ನಿಸ್ಸಂದೇಹವಾಗಿಯೂ ಸಾಕಷ್ಟು ಅವಕಾಶವಿತ್ತು. ಅಷ್ಟುಮಾತ್ರವಲ್ಲದೆ, ಯೇಸು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದನು ಮತ್ತು ಯೆಹೋವನು ಅವನನ್ನು ಎಲ್ಲ ವಸ್ತುಗಳನ್ನು ಸೃಷ್ಟಿಸುವುದರಲ್ಲಿ “ಶಿಲ್ಪಿಯಾಗಿ” ಉಪಯೋಗಿಸಿದನು. (ಕೊಲೊಸ್ಸೆ 1:​15, 16; ಜ್ಞಾನೋಕ್ತಿ 8:​30, 31) ಹೀಗಿರುವುದರಿಂದ, ಯೇಸು ಸೃಷ್ಟಿಯೊಂದಿಗೆ ಚಿರಪರಿಚಿತನಾಗಿದ್ದುದರಲ್ಲಿ ಆಶ್ಚರ್ಯಪಡುವಂಥದ್ದೇನಾದರೂ ಇದೆಯೊ? ಅವನು ಈ ಜ್ಞಾನವನ್ನು ತನ್ನ ಬೋಧನೆಯಲ್ಲಿ ಹೇಗೆ ಕೌಶಲದಿಂದ ಉಪಯೋಗಿಸಿದನು ಎಂಬುದನ್ನು ನಾವೀಗ ನೋಡೋಣ.

17, 18. (ಎ) ಯೋಹಾನ 10ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು, ಕುರಿಗಳ ಪ್ರವೃತ್ತಿಗಳು ಅವನಿಗೆ ಚಿರಪರಿಚಿತವಾಗಿದ್ದವು ಎಂಬುದನ್ನು ಹೇಗೆ ಬಯಲುಪಡಿಸುತ್ತವೆ? (ಬಿ) ಬೈಬಲ್‌ ದೇಶಗಳಿಗೆ ಭೇಟಿಯಿತ್ತ ಸಂದರ್ಶಕರು, ಕುರುಬರ ಹಾಗೂ ಅವರ ಕುರಿಗಳ ಮಧ್ಯೆಯಿರುವ ಬಂಧದ ಕುರಿತು ಏನನ್ನು ಗಮನಿಸಿದ್ದಾರೆ?

17 ಯೇಸುವಿನ ದೃಷ್ಟಾಂತಗಳಲ್ಲೇ ಅತಿ ಕೋಮಲವಾದದ್ದು, ಯೋಹಾನ 10ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ದೃಷ್ಟಾಂತವಾಗಿದೆ. ಅಲ್ಲಿ ಅವನು ತನ್ನ ಶಿಷ್ಯರೊಂದಿಗಿನ ತನ್ನ ಸಂಬಂಧವನ್ನು, ಒಬ್ಬ ಕುರುಬನಿಗೂ ಅವನ ಕುರಿಗಳಿಗೂ ಇರುವ ಸಂಬಂಧಕ್ಕೆ ಹೋಲಿಸುತ್ತಾನೆ. ಯೇಸುವಿಗೆ ಸಾಕುಕುರಿಗಳ ಪ್ರವೃತ್ತಿಗಳು ಚಿರಪರಿಚಿತವಾಗಿದ್ದವು ಎಂಬುದನ್ನು ಅವನ ಮಾತುಗಳೇ ಬಯಲುಪಡಿಸುತ್ತವೆ. ಕುರಿಗಳು ತಮ್ಮ ಕುರುಬನ ಮಾರ್ಗದರ್ಶನಕ್ಕೆ ಮನಃಪೂರ್ವಕವಾಗಿ ಪ್ರತಿಕ್ರಿಯಿಸುತ್ತವೆ ಮತ್ತು ಅವು ನಂಬಿಗಸ್ತಿಕೆಯಿಂದ ಅವನನ್ನು ಅನುಸರಿಸುತ್ತವೆ ಎಂದು ಅವನು ಸೂಚಿಸಿದನು. (ಯೋಹಾನ 10:​2-4) ಕುರುಬರು ಹಾಗೂ ಕುರಿಗಳ ನಡುವೆ ಇರುವ ಅಪೂರ್ವ ಬಂಧವು, ಬೈಬಲ್‌ ದೇಶಗಳಿಗೆ ಭೇಟಿಯಿತ್ತ ಸಂದರ್ಶಕರಿಂದ ಗಮನಿಸಲ್ಪಟ್ಟಿದೆ. 19ನೆಯ ಶತಮಾನದಲ್ಲಿ, ಪ್ರಕೃತಿಶಾಸ್ತ್ರಜ್ಞರಾದ ಏಚ್‌. ಬಿ. ಟ್ರಿಸ್‌ಟ್ರಮ್‌ ಎಂಬವರು ತಿಳಿಸಿದ್ದು: “ಒಂದು ಸಲ ನಾನು ಒಬ್ಬ ಕುರುಬನು ತನ್ನ ಮಂದೆಯೊಂದಿಗೆ ಆಟವಾಡುತ್ತಿದ್ದದ್ದನ್ನು ನೋಡಿದೆ. ಅವನು ಓಡಿಹೋಗುವವನಂತೆ ನಟಿಸಿದನು; ಕುರಿಗಳು ಅವನ ಬೆನ್ನಟ್ಟಿ, ಅವನ ಸುತ್ತಲೂ ಸುತ್ತುವರಿದವು. . . . ಕೊನೆಗೆ ಇಡೀ ಮಂದೆಯು ವೃತ್ತಾಕಾರದಲ್ಲಿ ಅವನ ಸುತ್ತಲೂ ಕುಪ್ಪಳಿಸುತ್ತಾ ಇತ್ತು.”

18 ಕುರಿಗಳು ಅವುಗಳ ಕುರುಬನನ್ನು ಏಕೆ ಹಿಂಬಾಲಿಸುತ್ತವೆ? ಏಕೆಂದರೆ ‘ಅವುಗಳಿಗೆ ಅವನ ಸ್ವರ ತಿಳಿದಿದೆ’ ಎಂದು ಯೇಸು ಹೇಳಿದನು. (ಯೋಹಾನ 10:4) ಕುರಿಗಳಿಗೆ ನಿಜವಾಗಿಯೂ ಅವುಗಳ ಕುರುಬನ ಸ್ವರವು ತಿಳಿದಿರುತ್ತದೋ? ವೈಯಕ್ತಿಕ ವೀಕ್ಷಣೆಯಿಂದ, ಜಾರ್ಜ್‌ ಎ. ಸ್ಮಿತ್‌ ಎಂಬವರು ಪವಿತ್ರ ದೇಶದ ಐತಿಹಾಸಿಕ ಭೂಗೋಳ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಬರೆದುದು: “ಎಲ್ಲಿ ಮೂರು ಅಥವಾ ನಾಲ್ಕು ಮಂದಿ ಕುರುಬರು ತಮ್ಮ ಮಂದೆಗಳೊಂದಿಗೆ ಬಂದರೋ ಆ ಯೂದಾಯದ ಬಾವಿಗಳಲ್ಲೊಂದರ ಬಳಿ ಕಳೆದ ನಮ್ಮ ಮಧ್ಯಾಹ್ನದ ವಿಶ್ರಾಂತಿಯನ್ನು ಕೆಲವೊಮ್ಮೆ ನಾವು ಆನಂದಿಸಿದೆವು. ಆ ಮಂದೆಗಳ ಕುರಿಗಳು ಪರಸ್ಪರ ಬೆರೆತವು, ಮತ್ತು ಪ್ರತಿಯೊಬ್ಬ ಕುರುಬನು ತನ್ನ ಸ್ವಂತ ಮಂದೆಯನ್ನು ಹೇಗೆ ಒಟ್ಟುಗೂಡಿಸುವನು ಎಂದು ನಾವು ಕುತೂಹಲಪಟ್ಟೆವು. ಆದರೆ ಮಂದೆಗಳು ನೀರು ಕುಡಿಯುವುದನ್ನು ಮತ್ತು ಆಟವಾಡುವುದನ್ನು ಮುಗಿಸಿದ ಬಳಿಕ, ಕುರುಬರು ಒಬ್ಬೊಬ್ಬರಾಗಿ ಕಣಿವೆಯ ಬೇರೆ ಬೇರೆ ದಿಕ್ಕುಗಳ ಕಡೆಗೆ ನಡೆದರು, ಮತ್ತು ಅವರಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ವಿಚಿತ್ರ ಸ್ವರದಲ್ಲಿ ಕೂಗಿದರು; ಆ ದೊಡ್ಡ ಗುಂಪಿನಿಂದ ಚಲಿಸುತ್ತಾ ಪ್ರತಿಯೊಬ್ಬ ಕುರುಬನ ಮಂದೆಯ ಕುರಿಗಳು ತಮ್ಮ ತಮ್ಮ ಕುರುಬನ ಬಳಿ ಸರಿದವು, ಮತ್ತು ಬಂದ ರೀತಿಯಲ್ಲೇ ಸುವ್ಯವಸ್ಥಿತವಾಗಿ ಅಲ್ಲಿಂದ ಹೊರಟುಹೋದವು.” ತನ್ನ ಮುಖ್ಯಾಂಶವನ್ನು ದೃಷ್ಟಾಂತಿಸಲಿಕ್ಕಾಗಿ ಯೇಸು ಇದಕ್ಕಿಂತ ಹೆಚ್ಚು ಉತ್ತಮವಾದ ವಿಧವನ್ನು ಕಂಡುಕೊಳ್ಳಸಾಧ್ಯವಿರಲಿಲ್ಲ. ನಾವು ಅವನ ಬೋಧನೆಗಳನ್ನು ಗ್ರಹಿಸಿ ಅವುಗಳಿಗೆ ವಿಧೇಯರಾಗುವಲ್ಲಿ ಮತ್ತು ಅವನ ನಾಯಕತ್ವವನ್ನು ಅನುಸರಿಸುವಲ್ಲಿ, ಆ “ಒಳ್ಳೇ ಕುರುಬನ” ಕೋಮಲವಾದ ಹಾಗೂ ಪ್ರೀತಿಯ ಆರೈಕೆಯ ಕೆಳಗೆ ಬರಸಾಧ್ಯವಿದೆ.​—ಯೋಹಾನ 10:11.

ಅವನ ಕೇಳುಗರಿಗೆ ತಿಳಿದಿದ್ದ ಘಟನೆಗಳಿಂದ ತೆಗೆದ ದೃಷ್ಟಾಂತಗಳು

19. ಒಂದು ಸುಳ್ಳು ವಿಚಾರಧಾರೆಯನ್ನು ತಳ್ಳಿಹಾಕಲಿಕ್ಕಾಗಿ, ಯೇಸು ಒಂದು ಸ್ಥಳಿಕ ದುರಂತವನ್ನು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಿದನು?

19 ಪರಿಣಾಮಕಾರಿಯಾದ ದೃಷ್ಟಾಂತಗಳಲ್ಲಿ, ಯಾವುದರಿಂದ ಪಾಠಗಳನ್ನು ಕಲಿಯಸಾಧ್ಯವಿದೆಯೋ ಅಂಥ ಅನುಭವಗಳು ಅಥವಾ ಉದಾಹರಣೆಗಳು ಸಹ ಒಳಗೂಡಿರಸಾಧ್ಯವಿದೆ. ಒಂದು ಸಂದರ್ಭದಲ್ಲಿ, ದುರಂತವು ಯಾರು ಅದಕ್ಕೆ ಅರ್ಹರೋ ಅವರ ಮೇಲೇ ಬಂದೆರಗುತ್ತದೆ ಎಂಬ ಸುಳ್ಳು ವಿಚಾರಧಾರೆಯನ್ನು ಅಲ್ಲಗಳೆಯಲಿಕ್ಕಾಗಿ ಯೇಸು ಆಗಲೇ ನಡೆದಿದ್ದ ಒಂದು ಘಟನೆಯನ್ನು ಉಪಯೋಗಿಸಿದನು. ಅವನು ಹೇಳಿದ್ದು: “ಸಿಲೊವಾಮಿನಲ್ಲಿ ಬುರುಜುಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಅಪರಾಧಿಗಳೆಂದು [ಪಾಪಿಗಳೆಂದು] ಭಾವಿಸುತ್ತೀರೋ?” (ಲೂಕ 13:4) ಪೂರ್ವಕಲ್ಪಿತ ಅಭಿಪ್ರಾಯದ ತರ್ಕಸರಣಿಯ ವಿರುದ್ಧ ಯೇಸು ನಿರರ್ಗಳವಾದ ಮಾತುಗಾರಿಕೆಯಿಂದ ವಾಗ್ವಾದಿಸಿದನು. ಆ 18 ಮಂದಿ, ದೈವಿಕ ಕೋಪವನ್ನು ಬರಮಾಡಿದಂಥ ಯಾವುದೋ ಪಾಪದ ಕಾರಣದಿಂದ ಮರಣಹೊಂದಿರಲಿಲ್ಲ. ಅದಕ್ಕೆ ಬದಲಾಗಿ, ಅವರ ದುರಂತಮಯ ಮರಣವು, ಕಾಲ ಮತ್ತು ಮುಂಗಾಣದ ಸಂಭವದ ಫಲಿತಾಂಶವಾಗಿತ್ತು. (ಪ್ರಸಂಗಿ 9:​11, NW) ಹೀಗೆ, ತನ್ನ ಕೇಳುಗರಿಗೆ ಚೆನ್ನಾಗಿ ತಿಳಿದಿದ್ದ ಒಂದು ಘಟನೆಗೆ ಸೂಚಿಸಿ ಮಾತಾಡುವ ಮೂಲಕ ಯೇಸು ಒಂದು ಸುಳ್ಳು ಬೋಧನೆಯನ್ನು ಖಂಡಿಸಿದನು.

20, 21. (ಎ) ಫರಿಸಾಯರು ಯೇಸುವಿನ ಶಿಷ್ಯರನ್ನು ಏಕೆ ಖಂಡಿಸಿದರು? (ಬಿ) ತನ್ನ ಸಬ್ಬತ್‌ ನಿಯಮವನ್ನು ವಿಪರೀತ ಕಟ್ಟುನಿಟ್ಟಾದ ರೀತಿಯಲ್ಲಿ ಅನ್ವಯಿಸುವುದನ್ನು ದೇವರು ಎಂದೂ ಉದ್ದೇಶಿಸಿರಲಿಲ್ಲ ಎಂಬುದನ್ನು ದೃಷ್ಟಾಂತಿಸಲಿಕ್ಕಾಗಿ ಯೇಸು ಯಾವ ಶಾಸ್ತ್ರೀಯ ವೃತ್ತಾಂತವನ್ನು ಉಪಯೋಗಿಸಿದನು? (ಸಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

20 ತನ್ನ ಬೋಧನೆಯಲ್ಲಿ ಯೇಸು ಶಾಸ್ತ್ರೀಯ ಉದಾಹರಣೆಗಳನ್ನು ಸಹ ಉಪಯೋಗಿಸಿದನು. ಸಬ್ಬತ್‌ ದಿನದಲ್ಲಿ ಯೇಸುವಿನ ಶಿಷ್ಯರು ತೆನೆಗಳನ್ನು ಮುರಿದು ತಿಂದದ್ದಕ್ಕಾಗಿ ಫರಿಸಾಯರು ಅವರನ್ನು ಖಂಡಿಸಿದ ಸಮಯವನ್ನು ಜ್ಞಾಪಿಸಿಕೊಳ್ಳಿರಿ. ವಾಸ್ತವದಲ್ಲಿ, ಶಿಷ್ಯರು ದೇವರ ಧರ್ಮಶಾಸ್ತ್ರವನ್ನಲ್ಲ, ಬದಲಾಗಿ ಸಬ್ಬತ್‌ ದಿನದಲ್ಲಿ ಯಾವುದು ನಿಯಮಕ್ಕೆ ವಿರುದ್ಧವಾದ ಕೃತ್ಯವಾಗಿ ಮಾಡುತ್ತದೆಂಬುದರ ಬಗ್ಗೆ ಫರಿಸಾಯರು ಮಾಡಿದ ಕಟ್ಟುನಿಟ್ಟಿನ ಅರ್ಥನಿರೂಪಣೆಯನ್ನು ಉಲ್ಲಂಘಿಸಿದ್ದರು. ತನ್ನ ಸಬ್ಬತ್‌ ನಿಯಮವನ್ನು ವಿಪರೀತ ಕಟ್ಟುನಿಟ್ಟಾದ ರೀತಿಯಲ್ಲಿ ಅನ್ವಯಿಸಬೇಕೆಂದು ದೇವರು ಎಂದೂ ಉದ್ದೇಶಿಸಿರಲಿಲ್ಲ ಎಂಬುದನ್ನು ದೃಷ್ಟಾಂತಿಸಲಿಕ್ಕಾಗಿ, 1 ಸಮುವೇಲ 21:​3-6ರಲ್ಲಿ ದಾಖಲಿಸಲ್ಪಟ್ಟಿರುವ ಒಂದು ಘಟನೆಗೆ ಯೇಸು ಸೂಚಿಸಿದನು. ದಾವೀದನೂ ಅವನ ಜನರೂ ತುಂಬಾ ಹಸಿದಿದ್ದಾಗ, ದೇವದರ್ಶನದ ಗುಡಾರಕ್ಕೆ ಹೋದರು ಮತ್ತು ಬದಲಿಮಾಡಲ್ಪಟ್ಟಿದ್ದಂಥ ನೈವೇದ್ಯದ ರೊಟ್ಟಿಗಳನ್ನು ತಿಂದರು. ಹಳೆಯ ರೊಟ್ಟಿಗಳು ಸಾಮಾನ್ಯವಾಗಿ ಯಾಜಕರು ತಿನ್ನಲಿಕ್ಕೋಸ್ಕರ ಮೀಸಲಾಗಿರಿಸಲ್ಪಡುತ್ತಿದ್ದವು. ಆದರೂ, ಆ ಸನ್ನಿವೇಶದಲ್ಲಿ ದಾವೀದನೂ ಅವನ ಜನರೂ ಅವುಗಳನ್ನು ತಿಂದದ್ದಕ್ಕಾಗಿ ಖಂಡಿತವಾಗಿಯೂ ಖಂಡಿಸಲ್ಪಡಲಿಲ್ಲ. ಈ ವೃತ್ತಾಂತವು, ಹಳೆಯ ರೊಟ್ಟಿಗಳನ್ನು ಯಾಜಕರಲ್ಲದವರು ಉಪಯೋಗಿಸಿದ್ದರ ಕುರಿತು ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಏಕಮಾತ್ರ ಘಟನೆಯಾಗಿದೆ ಎಂಬುದಂತೂ ಗಮನಾರ್ಹವಾಗಿದೆ. ನಿರ್ದಿಷ್ಟವಾಗಿ ಸೂಕ್ತವಾದ ವೃತ್ತಾಂತವನ್ನು ಉಪಯೋಗಿಸುವ ರೀತಿಯು ಯೇಸುವಿಗೆ ತಿಳಿದಿತ್ತು, ಮತ್ತು ಅವನ ಯೆಹೂದಿ ಕೇಳುಗರಿಗೆ ಈ ವೃತ್ತಾಂತವು ಚಿರಪರಿಚಿತವಾಗಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ.​—ಮತ್ತಾಯ 12:​1-8.

21 ನಿಜವಾಗಿಯೂ ಯೇಸು ಒಬ್ಬ ಮಹಾ ಬೋಧಕನಾಗಿದ್ದನು! ತನ್ನ ಕೇಳುಗರು ಅರ್ಥಮಾಡಿಕೊಳ್ಳುವಂಥ ರೀತಿಯಲ್ಲಿ ಪ್ರಮುಖ ಸತ್ಯಗಳನ್ನು ತಿಳಿಯಪಡಿಸುವ ಅವನ ಅಪೂರ್ವ ಸಾಮರ್ಥ್ಯವನ್ನು ನೋಡಿ ನಾವು ನಿಜವಾಗಿಯೂ ವಿಸ್ಮಿತರಾಗುತ್ತೇವೆ. ಆದರೆ ನಮ್ಮ ಬೋಧಿಸುವಿಕೆಯಲ್ಲಿ ನಾವು ಅವನನ್ನು ಹೇಗೆ ಅನುಕರಿಸಸಾಧ್ಯವಿದೆ? ಮುಂದಿನ ಲೇಖನದಲ್ಲಿ ಇದನ್ನು ಚರ್ಚಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 2 ಉದಾಹರಣೆಗಳು, ಹೋಲಿಕೆಗಳು, ಉಪಮಾಲಂಕಾರಗಳು ಮತ್ತು ರೂಪಕಾಲಂಕಾರಗಳನ್ನೂ ಒಳಗೊಂಡು ಯೇಸುವಿನ ದೃಷ್ಟಾಂತಗಳು ಅನೇಕ ರೂಪಗಳನ್ನು ತಾಳಿದವು. ಸಾಮ್ಯಗಳ ಉಪಯೋಗಕ್ಕಾಗಿ ಅವನು ಸುಪ್ರಸಿದ್ಧನಾಗಿದ್ದಾನೆ. ಸಾಮ್ಯವನ್ನು, “ಯಾವುದರಿಂದ ಒಂದು ನೈತಿಕ ಅಥವಾ ಆತ್ಮಿಕ ಸತ್ಯವನ್ನು ಪಡೆದುಕೊಳ್ಳಸಾಧ್ಯವಿದೆಯೋ ಅದರ ಸಂಕ್ಷಿಪ್ತವಾದ, ಸಾಮಾನ್ಯವಾಗಿ ಕಾಲ್ಪನಿಕವಾದ ಕಥಾರೂಪ” ಎಂದು ಅರ್ಥನಿರೂಪಿಸಲಾಗುತ್ತದೆ.

^ ಪ್ಯಾರ. 15 ಯೆರೂಸಲೇಮು ಯೆರಿಕೋವಿಗಿಂತ ತುಂಬ ಎತ್ತರ ಪ್ರದೇಶದಲ್ಲಿತ್ತು. ಆದುದರಿಂದ, ಸಾಮ್ಯದಲ್ಲಿ ತಿಳಿಸಲ್ಪಟ್ಟಿರುವಂತೆ “ಯೆರೂಸಲೇಮಿನಿಂದ . . . ಯೆರಿಕೋವಿಗೆ” ಒಬ್ಬ ಪ್ರಯಾಣಿಕನು “ಘಟ್ಟಾ ಇಳಿದು” ಪ್ರಯಾಣಿಸಬೇಕಾಗಿತ್ತು.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ಯೇಸು ದೃಷ್ಟಾಂತಗಳೊಂದಿಗೆ ಏಕೆ ಕಲಿಸಿದನು?

• ತನ್ನ ಪ್ರಥಮ ಶತಮಾನದ ಕೇಳುಗರು ಅರ್ಥಮಾಡಿಕೊಳ್ಳಸಾಧ್ಯವಿದ್ದ ದೃಷ್ಟಾಂತಗಳನ್ನು ಯೇಸು ಉಪಯೋಗಿಸಿದನು ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ?

• ಸೃಷ್ಟಿಯ ಕುರಿತಾದ ತನ್ನ ಜ್ಞಾನವನ್ನು ಯೇಸು, ತನ್ನ ದೃಷ್ಟಾಂತಗಳಲ್ಲಿ ಕೌಶಲದಿಂದ ಹೇಗೆ ಉಪಯೋಗಿಸಿದನು?

• ಯೇಸು ತನ್ನ ಕೇಳುಗರಿಗೆ ಚಿರಪರಿಚಿತವಾಗಿದ್ದ ಘಟನೆಗಳನ್ನು ಯಾವ ವಿಧಗಳಲ್ಲಿ ಉಪಯೋಗಿಸಿಕೊಂಡನು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರಗಳು]

ತೀರ ಚಿಕ್ಕ ಸಾಲವನ್ನು ಕ್ಷಮಿಸಲು ನಿರಾಕರಿಸಿದಂಥ ಒಬ್ಬ ಸೇವಕನ ಕುರಿತು ಮತ್ತು ತನ್ನ ಇಡೀ ಆಸ್ತಿಯನ್ನು ಪೋಲುಮಾಡಿದ್ದ ಒಬ್ಬ ಮಗನನ್ನು ಕ್ಷಮಿಸಿದಂಥ ಒಬ್ಬ ತಂದೆಯ ಕುರಿತು ಯೇಸು ತಿಳಿಸಿದನು

[ಪುಟ 16ರಲ್ಲಿರುವ ಚಿತ್ರ]

ನೆರೆಯವನಾದ ಸಮಾರ್ಯದವನ ಕುರಿತಾದ ಯೇಸುವಿನ ಸಾಮ್ಯದ ಮುಖ್ಯಾಂಶವೇನಾಗಿತ್ತು?

[ಪುಟ 17ರಲ್ಲಿರುವ ಚಿತ್ರ]

ಕುರಿಗಳು ನಿಜವಾಗಿಯೂ ತಮ್ಮ ಕುರುಬನ ಸ್ವರವನ್ನು ತಿಳಿದಿವೆಯೊ?