ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಒಬ್ಬರಿಗೊಬ್ಬರು ಕ್ಷಮಿಸಿರಿ’

‘ಒಬ್ಬರಿಗೊಬ್ಬರು ಕ್ಷಮಿಸಿರಿ’

‘ಒಬ್ಬರಿಗೊಬ್ಬರು ಕ್ಷಮಿಸಿರಿ’

ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿದ್ದಾನೆಂದು ನೀವು ನಂಬುತ್ತೀರೊ? ಅಮೆರಿಕದಲ್ಲಿ ಹೆಚ್ಚಿನ ವಯಸ್ಕರು ಹಾಗೆ ನಂಬುವಂತೆ ತೋರುತ್ತದೆ. ಸಾಮಾಜಿಕ ಸಂಶೋಧನೆಗಾಗಿರುವ ಮಿಷಿಗನ್‌ ಇನ್‌ಸ್ಟಿಟ್ಯೂಟ್‌ನ ವಿಶ್ವವಿದ್ಯಾನಿಲಯದಲ್ಲಿ ನಡೆಸಲ್ಪಟ್ಟ ಸಮೀಕ್ಷೆಯ ಮುಖ್ಯ ಕರ್ತೃರಾಗಿರುವ ಡಾಕ್ಟರ್‌ ಲೊರೆನ್‌ ಟುಸಾನ್‌ ವರದಿಸಿದ್ದೇನೆಂದರೆ, ಸಮೀಕ್ಷೆ ನಡೆಸಲ್ಪಟ್ಟ 1,423 ಅಮೆರಿಕನರಲ್ಲಿ 45 ವರ್ಷಕ್ಕಿಂತಲೂ ಹೆಚ್ಚಿನ ಪ್ರಾಯದ ಸುಮಾರು 80 ಪ್ರತಿಶತ ವಯಸ್ಕರು, ದೇವರು ತಮ್ಮ ಪಾಪಗಳನ್ನು ಕ್ಷಮಿಸಿದ್ದಾನೆಂದು ಹೇಳಿದರು.

ಆದರೆ ಸಮೀಕ್ಷೆ ನಡೆಸಲ್ಪಟ್ಟವರಲ್ಲಿ ಕೇವಲ 57 ಪ್ರತಿಶತ ಮಂದಿ, ತಾವೂ ಇತರರನ್ನು ಕ್ಷಮಿಸುತ್ತೇವೆಂದು ಹೇಳಿದ್ದು ಆಸಕ್ತಿದಾಯಕ ಸಂಗತಿಯಾಗಿದೆ. ಈ ಅಂಕಿಸಂಖ್ಯೆಯು, ಪರ್ವತ ಪ್ರಸಂಗದಲ್ಲಿನ ಯೇಸುವಿನ ಮಾತುಗಳನ್ನು ನೆನಪಿಗೆ ತರುತ್ತದೆ: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ.” (ಮತ್ತಾಯ 6:14, 15) ಹೌದು, ನಮ್ಮ ಪಾಪಗಳಿಗಾಗಿ ದೇವರ ಕ್ಷಮಾಪಣೆಯನ್ನು ಪಡೆಯುವುದು ಷರತ್ತುಳ್ಳದ್ದಾಗಿದೆ. ನಾವು ಇತರರನ್ನು ಕ್ಷಮಿಸಲು ಸಿದ್ಧರಾಗಿರುವುದರ ಮೇಲೆ ಅದು ಭಾಗಶಃ ಹೊಂದಿಕೊಂಡಿದೆ.

ಅಪೊಸ್ತಲ ಪೌಲನು ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಈ ಮೂಲತತ್ತ್ವವನ್ನು ಜ್ಞಾಪಕಹುಟ್ಟಿಸಿನು. ಅವನು ಅವರನ್ನು ಪ್ರೇರಿಸಿದ್ದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13) ನಿಜ, ಇದನ್ನು ಮಾಡುವುದು ಯಾವಾಗಲೂ ಸುಲಭವೇನಲ್ಲ. ಉದಾಹರಣೆಗಾಗಿ ಯಾರಾದರೂ ನಿಮ್ಮ ಮೇಲೆ ದಯಾರಹಿತ ಹಾಗೂ ವಿಚಾರಹೀನ ಮಾತುಗಳ ಸುರಿಮಳೆಗೈಯುತ್ತಿರುವಲ್ಲಿ, ಆ ವ್ಯಕ್ತಿಯನ್ನು ಕ್ಷಮಿಸುವುದು ಕಷ್ಟಕರವಾಗಿರಬಹುದು.

ಹಾಗಿದ್ದರೂ, ಕ್ಷಮೆಯನ್ನು ತೋರಿಸುವುದರ ಪ್ರಯೋಜನಗಳು ಅನೇಕ. ಒಬ್ಬ ಸಮಾಜಶಾಸ್ತ್ರಜ್ಞರಾದ ಡಾಕ್ಟರ್‌ ಡೇವಿಡ್‌ ಆರ್‌. ವಿಲ್ಯಮ್ಸ್‌ ತಮ್ಮ ಸಂಶೋಧನೆಯ ಬಗ್ಗೆ ಹೇಳಿದ್ದು: “ಇತರರನ್ನು ಕ್ಷಮಿಸುವುದು ಮತ್ತು ಮಧ್ಯವಯಸ್ಸಿನ ಹಾಗೂ ವೃದ್ಧ ಅಮೆರಿಕನರ ಮಾನಸಿಕ ಆರೋಗ್ಯದ ನಡುವೆ ವಿಶೇಷವಾಗಿ ಬಲವಾದ ಸಂಬಂಧವನ್ನು ನಾವು ಕಂಡುಕೊಂಡೆವು.” ಇದು ವಿವೇಕಿ ಅರಸನಾದ ಸೊಲೊಮೋನನ ಮಾತುಗಳಿಗೆ ಹೊಂದಿಕೆಯಲ್ಲಿದೆ. ಅವನು ಸುಮಾರು 3,000 ವರ್ಷಗಳ ಹಿಂದೆ ಬರೆದದ್ದು: “ಶಾಂತಿಗುಣವು ದೇಹಕ್ಕೆ ಜೀವಾಧಾರವು; ಕ್ರೋಧವು ಎಲುಬಿಗೆ ಕ್ಷಯವು.” (ಜ್ಞಾನೋಕ್ತಿ 14:30) ಕ್ಷಮಿಸುವ ಮನೋಭಾವವು ದೇವರೊಂದಿಗೆ ಮತ್ತು ನಮ್ಮ ನೆರೆಯವರೊಂದಿಗೆ ಒಳ್ಳೇ ಸಂಬಂಧಗಳಿಗೆ ಇಂಬುಕೊಡುವುದರಿಂದ, ನಾವು ಮನಃಪೂರ್ವಕವಾಗಿ ಪರಸ್ಪರ ಕ್ಷಮಿಸಲು ಸಕಾರಣವಿದೆ.​—ಮತ್ತಾಯ 18:35.