ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ನೆರೆಯವರು ಉಪಯುಕ್ತರೇ ಸರಿ

ಒಳ್ಳೇ ನೆರೆಯವರು ಉಪಯುಕ್ತರೇ ಸರಿ

ಒಳ್ಳೇ ನೆರೆಯವರು ಉಪಯುಕ್ತರೇ ಸರಿ

“ದೂರವಾಗಿರುವ ಅಣ್ಣನಿಗಿಂತ ಹತ್ತಿರವಾಗಿರುವ ನೆರೆಯವನು ಲೇಸು.”—ಜ್ಞಾನೋಕ್ತಿ 27:10.

ಸಾಮಾನ್ಯ ಶಕ ಒಂದನೆಯ ಶತಮಾನದ ಒಬ್ಬ ಧರ್ಮೋಪದೇಶಕನು ಯೇಸುವನ್ನು ಕೇಳಿದ್ದು: “ನನ್ನ ನೆರೆಯವನು ಯಾರು”? ಇದಕ್ಕೆ ಉತ್ತರವಾಗಿ ಯೇಸು ಅವನಿಗೆ ಯಾರು ಅವನ ನೆರೆಯವನು ಎಂದು ಹೇಳಲಿಲ್ಲ, ಬದಲಾಗಿ ಯಾವುದು ಒಬ್ಬನನ್ನು ನಿಜವಾದ ನೆರೆಯವನನ್ನಾಗಿ ಮಾಡುತ್ತದೆ ಎಂದು ಹೇಳಿದನು. ಬಹುಶಃ ನಿಮಗೂ ಯೇಸುವಿನ ದೃಷ್ಟಾಂತವು ಚಿರಪರಿಚಿತವಾಗಿರಬಹುದು. ಹೆಚ್ಚಿನವರಿಗೆ ಇದು ನೆರೆಯವನಾದ ಸಮಾರ್ಯದವನ ಸಾಮ್ಯ ಎಂದು ತಿಳಿದಿದೆ ಮತ್ತು ಇದು ಲೂಕನ ಸುವಾರ್ತೆಯಲ್ಲಿ ದಾಖಲಿಸಲ್ಪಟ್ಟಿದೆ. ಯೇಸು ಈ ಕೆಳಗಿನಂತೆ ಆ ಕಥೆಯನ್ನು ಹೇಳಿದನು:

“ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. ಆಗ ಹೇಗೋ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು. ಅದೇ ರೀತಿಯಲ್ಲಿ ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು ವಾರೆಯಾಗಿ ಹೋದನು. ಆದರೆ ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನಿದ್ದಲ್ಲಿಗೆ ಬಂದು ಅವನನ್ನು ಕಂಡು ಕನಿಕರಿಸಿ ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಚತ್ರಕ್ಕೆ ಕರಕೊಂಡು ಹೋಗಿ ಅವನನ್ನು ಆರೈಕೆಮಾಡಿದನು. ಮರುದಿನ ಅವನು ಎರಡು ಹಣಗಳನ್ನು ತೆಗೆದು ಚತ್ರದವನಿಗೆ ಕೊಟ್ಟು​—ಇವನನ್ನು ಆರೈಕೆಮಾಡು; ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು ಅಂದನು. ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು”?​—ಲೂಕ 10:​29-36.

ಆ ಧರ್ಮೋಪದೇಶಕನು ಈ ಸಾಮ್ಯದ ಸಾರಾಂಶವನ್ನು ಸ್ಪಷ್ಟವಾಗಿ ಮನಗಂಡನು ಎಂಬುದು ಸುವ್ಯಕ್ತ. ಯಾವುದೇ ಹಿಂಜರಿಕೆಯಿಲ್ಲದೆ ಅವನು ಆ ಗಾಯಾಳು ವ್ಯಕ್ತಿಗೆ ಯಾರು ನೆರೆಯವನಾದನೆಂಬುದನ್ನು ಸರಿಯಾಗಿಯೇ ಗುರುತಿಸುತ್ತಾ ಹೇಳಿದ್ದು: “ಅವನಿಗೆ ದಯತೋರಿಸಿದವನೇ.” ತದನಂತರ ಯೇಸು ಅವನಿಗೆ ಹೇಳಿದ್ದು: “ಹೋಗು, ನೀನೂ ಅದರಂತೆ ಮಾಡು.” (ಲೂಕ 10:37) ಒಬ್ಬ ನಿಜ ನೆರೆಯವನಾಗಿರುವುದರ ಅರ್ಥವೇನೆಂಬುದರ ಕುರಿತಾದ ಎಷ್ಟು ಪ್ರಬಲ ದೃಷ್ಟಾಂತವಿದು! ಯೇಸುವಿನ ಸಾಮ್ಯವು ಸ್ವತಃ ನಾವು ಹೀಗೆ ಕೇಳಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸಬಲ್ಲದು: ‘ನಾನು ಯಾವ ರೀತಿಯ ನೆರೆಯವನಾಗಿದ್ದೇನೆ? ನನಗೆ ಯಾರು ನೆರೆಯವರಾಗಿದ್ದಾರೆ ಎಂಬುದನ್ನು ನಿರ್ಧರಿಸುವುದರಲ್ಲಿ, ನನ್ನ ಜಾತಿ ಅಥವಾ ರಾಷ್ಟ್ರೀಯ ಹಿನ್ನೆಲೆಯು ಪ್ರಭಾವ ಬೀರುತ್ತದೋ? ಈ ಅಂಶಗಳು, ಯಾರು ತೊಂದರೆಯಲ್ಲಿರುವುದನ್ನು ನಾನು ನೋಡುತ್ತೇನೋ ಆ ಜೊತೆ ಮಾನವನಿಗೆ ಯಾವುದೇ ರೀತಿಯ ಸಹಾಯವನ್ನು ನೀಡುವ ನನ್ನ ಕರ್ತವ್ಯವನ್ನು ಮಿತಗೊಳಿಸುತ್ತವೋ? ಒಬ್ಬ ಒಳ್ಳೇ ನೆರೆಯವನಾಗಿರಲು ನಾನು ಅತ್ಯಧಿಕ ಪ್ರಯತ್ನವನ್ನು ಮಾಡುತ್ತೇನೋ?’

ಎಲ್ಲಿ ಆರಂಭಿಸುವುದು?

ಈ ವಿಷಯದಲ್ಲಿ ನಾವು ಸುಧಾರಣೆ ಮಾಡಬೇಕು ಎಂದು ನಮಗನಿಸುವುದಾದರೆ, ನಮ್ಮ ಮಾನಸಿಕ ಮನೋಭಾವದಿಂದ ನಾವು ಆರಂಭಿಸಬೇಕು. ನಮ್ಮ ಹಿತಾಸಕ್ತಿಗಳು ಒಬ್ಬ ಒಳ್ಳೇ ನೆರೆಯವರಾಗಿ ಇರುವುದರ ಮೇಲೆ ಕೇಂದ್ರೀಕೃತವಾಗಿರಬೇಕು. ಇದು ನಮಗೂ ಒಳ್ಳೇ ನೆರೆಯವರು ಇರುವಂತೆ ಮಾಡುವುದರಲ್ಲಿ ನೆರವನ್ನೀಯುತ್ತದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ತನ್ನ ಪರ್ವತ ಪ್ರಸಂಗದಲ್ಲಿ ಯೇಸು, ಮಾನವ ಸಂಬಂಧಗಳ ಕುರಿತಾದ ಆ ಪ್ರಮುಖ ಮೂಲತತ್ತ್ವವನ್ನು ಒತ್ತಿಹೇಳಿದನು. ಅವನು ಹೇಳಿದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಇತರರನ್ನು ಗೌರವ, ಮರ್ಯಾದೆ, ಹಾಗೂ ದಯಾಭಾವದಿಂದ ಉಪಚರಿಸುವುದು, ಅವರು ಸಹ ನಿಮ್ಮನ್ನು ಅದೇ ರೀತಿಯಲ್ಲಿ ಉಪಚರಿಸುವಂತೆ ಉತ್ತೇಜಿಸುತ್ತದೆ.

ಪತ್ರಕರ್ತೆಯೂ ಲೇಖಕಿಯೂ ಆಗಿರುವಂಥ ಲೀಸ ಫಂಡರ್‌ಬರ್ಗ್‌ ಅವರು, 1865ರಂದಿನಿಂದ ನಮ್ಮ ರಾಷ್ಟ್ರ (ಇಂಗ್ಲಿಷ್‌) ಎಂಬ ಪತ್ರಿಕೆಯಲ್ಲಿ ಕಂಡುಬರುವ “ನಿಮ್ಮ ನೆರೆಯವರನ್ನು ಪ್ರೀತಿಸುವುದು” ಎಂಬ ಲೇಖನದಲ್ಲಿ, ನೆರೆಹೊರೆಯಲ್ಲಿ ಸ್ನೇಹಭಾವವನ್ನು ಉತ್ತೇಜಿಸಲಿಕ್ಕಾಗಿ ಮಾಡಸಾಧ್ಯವಿರುವಂಥ ಕೆಲವು ಸರಳ ವಿಷಯಗಳ ಕುರಿತು ತಿಳಿಸಿದರು. ಅವರು ಬರೆದುದು: “ನೆರೆಯವರು ಒಬ್ಬರು ಇನ್ನೊಬ್ಬರಿಗಾಗಿ ಮಾಡುವ ಅನೇಕ ಚಿಕ್ಕಪುಟ್ಟ ದಯಾಪರ ಕೃತ್ಯಗಳಲ್ಲಿ, ವಾರ್ತಾಪತ್ರಿಕೆಯನ್ನು ತೆಗೆದುಕೊಂಡುಹೋಗಿ ಕೊಡುವುದು, ಮಕ್ಕಳನ್ನು ನೋಡಿಕೊಳ್ಳುವುದು, ಅಂಗಡಿಯಿಂದ ಏನನ್ನಾದರೂ ತಂದುಕೊಡುವಂಥ ಕೆಲಸಗಳನ್ನು ಮಾಡುವ ಮೂಲಕ ವೈಯಕ್ತಿಕ ಸಂಬಂಧವನ್ನು ವ್ಯಕ್ತಪಡಿಸುವುದನ್ನು . . . ನಾನು ಅಪೇಕ್ಷಿಸುತ್ತೇನೆ. ಎಲ್ಲಿ ಸಮುದಾಯಗಳು ಭಯ ಮತ್ತು ದುಷ್ಕೃತ್ಯಗಳ ಕಾರಣ ದುರ್ಬಲಗೊಂಡಿವೆಯೋ ಮತ್ತು ಅಭದ್ರತೆಯನ್ನು ಅನುಭವಿಸುತ್ತಿವೆಯೋ ಅಂಥ ಅತ್ಯಧಿಕವಾಗಿ ವಿಮುಖಗೊಳ್ಳುತ್ತಿರುವ ಲೋಕದಲ್ಲಿ, ನಾನು ಈ ಸಂಬಂಧವಿರುವಂತೆ ಬಯಸುತ್ತೇನೆ.” ತದನಂತರ ಅವರು ಕೂಡಿಸುವುದು: “ನೀವೇ ಅದನ್ನು ಎಲ್ಲಿಯಾದರೂ ಆರಂಭಿಸಬೇಕು. ಮತ್ತು ಅದು ನಿಮ್ಮ ಪಕ್ಕದ ಮನೆಯಿಂದಲೇ ಆಗಿರಬಹುದು.”

ಕೆನೇಡಿಯನ್‌ ಜಿಯೊಗ್ರ್ಯಾಫಿಕ್‌ ಎಂಬ ಪತ್ರಿಕೆಯು ಸಹ, ಒಬ್ಬರು ಇನ್ನೊಬ್ಬರ ಕಡೆಗೆ ಹಿತಕರವಾದ ಮನೋಭಾವವನ್ನು ಬೆಳೆಸಿಕೊಳ್ಳುವುದರಲ್ಲಿ ನೆರೆಯವರಿಗೆ ಸಹಾಯಮಾಡಸಾಧ್ಯವಿರುವ ಒಂದು ಸಹಾಯಕರ ಅಂಶವನ್ನು ತಿಳಿಸಿತು. ಲೇಖಕಿಯಾದ ಮರ್ನಿ ಜ್ಯಾಕ್‌ಸನ್‌ ಗಮನಿಸಿದ್ದು: “ಕುಟುಂಬದವರಂತೆಯೇ, ನೆರೆಯವರು ಸಹ ನಮ್ಮ ಜೀವಿತದ ಭಾಗವಾಗಿರುವ ಜನರಾಗಿದ್ದು, ನಿಮಗೆ ಯಾವಾಗಲೂ ಅವರನ್ನು ಆರಿಸಿಕೊಳ್ಳುವ ಅವಕಾಶವಿರುವುದಿಲ್ಲ. ಇಂಥ ಸಂಬಂಧಗಳು ಜಾಣ್ಮೆಯನ್ನು, ವಿನಯಶೀಲತೆಯನ್ನು ಮತ್ತು ಸಹನೆಯನ್ನು ಅಗತ್ಯಪಡಿಸುತ್ತವೆ.”

ಒಳ್ಳೇ ನೆರೆಯವರು​—ಮನಃಪೂರ್ವಕವಾಗಿ ಕೊಡುವವರು

ನಮ್ಮಲ್ಲಿ ಹೆಚ್ಚಿನವರು ನೆರೆಯವರನ್ನು ಸಮೀಪಿಸುವುದರ ವಿಷಯದಲ್ಲಿ ಸ್ವಲ್ಪ ಕಸಿವಿಸಿಗೊಳ್ಳುತ್ತೇವೆ ಎಂಬುದೇನೋ ನಿಜ. ಅವರೊಂದಿಗಿನ ಸಂಪರ್ಕವನ್ನು ತಡೆಯುವುದು ಮತ್ತು ನಮ್ಮನ್ನೇ ಪ್ರತ್ಯೇಕವಾಗಿರಿಸಿಕೊಳ್ಳುವುದು ಅದಕ್ಕಿಂತಲೂ ಹೆಚ್ಚು ಸುಲಭವಾದದ್ದಾಗಿ ಕಂಡುಬರಬಹುದು. ಆದರೆ, “ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಬೈಬಲ್‌ ಹೇಳುತ್ತದೆ. (ಅ. ಕೃತ್ಯಗಳು 20:​35, NW) ಆದುದರಿಂದ, ಒಬ್ಬ ಒಳ್ಳೇ ನೆರೆಯವನು ತನ್ನ ಸುತ್ತಲಿರುವ ಜನರಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಪ್ರಯತ್ನವನ್ನು ಮಾಡುತ್ತಾನೆ. ಅವನು ಅಗತ್ಯವಾಗಿ ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳಲು ಬಯಸದಿರಬಹುದಾದರೂ, ಒಂದು ಸ್ನೇಹಪರ ನಸುನಗೆ ಅಥವಾ ಅಭಿವಂದನೆಯ ಮೂಲಕ ಆರಂಭಿಸುತ್ತಾ, ಆಗಿಂದಾಗ್ಗೆ ಹಿತಕರವಾದ ಸಂಭಾಷಣೆಯನ್ನು ಆರಂಭಿಸಲು ಪ್ರಯತ್ನವನ್ನು ಮಾಡುತ್ತಾನೆ.

ಈ ಮೇಲೆ ಹೇಳಲ್ಪಟ್ಟಂತೆ, ನೆರೆಯವರು ಒಬ್ಬರು ಇನ್ನೊಬ್ಬರಿಗೆ ಮಾಡುವಂಥ ‘ಚಿಕ್ಕಪುಟ್ಟ ದಯಾಪರ ಕೃತ್ಯಗಳು,’ ನೆರೆಯವರೊಂದಿಗೆ ಸಂಬಂಧಗಳನ್ನು ಸ್ಥಾಪಿಸುವುದರಲ್ಲಿ ಮತ್ತು ಕಾಪಾಡಿಕೊಳ್ಳುವುದರಲ್ಲಿ ನಿಜವಾಗಿಯೂ ತುಂಬ ಪ್ರಾಮುಖ್ಯವಾಗಿವೆ. ಆದುದರಿಂದ, ಒಬ್ಬ ನೆರೆಯವನಿಗಾಗಿ ಮಾಡಸಾಧ್ಯವಿರುವ ದಯಾಪರ ಕೃತ್ಯಗಳಿಗಾಗಿ ಎದುರುನೋಡುವುದು ಪ್ರಯೋಜನಕರವಾದದ್ದಾಗಿದೆ. ಏಕೆಂದರೆ ಅನೇಕವೇಳೆ ಇದೇ, ಸಹಕಾರ ಮನೋಭಾವವನ್ನು ಮತ್ತು ಪರಸ್ಪರ ಗೌರವವನ್ನು ಉಂಟುಮಾಡುವುದು. ಅಷ್ಟುಮಾತ್ರವಲ್ಲ, ಹೀಗೆ ಮಾಡುವ ಮೂಲಕ ನಾವು ಬೈಬಲಿನ ಈ ಸಲಹೆಯನ್ನು ಅನುಸರಿಸುವೆವು: “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.”​—ಜ್ಞಾನೋಕ್ತಿ 3:27; ಯಾಕೋಬ 2:​14-17.

ಒಳ್ಳೇ ನೆರೆಯವರು​—ಗಣ್ಯತಾಭಾವದಿಂದ ಸ್ವೀಕರಿಸುವವರು

ಪ್ರತಿಯೊಬ್ಬರೂ ಸಹಾಯವನ್ನು ಅಥವಾ ಉಡುಗೊರೆಗಳನ್ನು ಗಣ್ಯತಾಭಾವದಿಂದ ಸ್ವೀಕರಿಸುತ್ತಾರೆ ಎಂದು ನಾವು ಹೇಳಶಕ್ತರಾಗಿದ್ದಲ್ಲಿ ಅದು ಒಳ್ಳೇದಿತ್ತು. ಅಸಂತೋಷಕರವಾಗಿ, ವಿಷಯವು ಯಾವಾಗಲೂ ಹೀಗಿರುವುದಿಲ್ಲ. ಅನೇಕ ಸಹಾಯಗಳು ಮತ್ತು ಸದುದ್ದೇಶಭರಿತ ಉಡುಗೊರೆಗಳು ಎಷ್ಟು ಕೃತಘ್ನಭಾವದಿಂದ ಸ್ವೀಕರಿಸಲ್ಪಟ್ಟಿವೆಯೆಂದರೆ, ಪ್ರಾಮಾಣಿಕ ಮನಸ್ಸಿನಿಂದ ಕೊಟ್ಟಾತನು ‘ಇದೇ ಕೊನೆ, ಇನ್ನೆಂದಿಗೂ ನಾನು ಹೀಗೆ ಕೊಡುವುದಿಲ್ಲ!’ ಎಂದು ಆಲೋಚಿಸುವಂತೆ ಮಾಡಬಹುದು. ಕೆಲವೊಮ್ಮೆ, ನೀವು ನಿಮ್ಮ ನೆರೆಯವರ ಗೆಳೆತನವನ್ನು ಪಡೆದುಕೊಳ್ಳಲಿಕ್ಕಾಗಿ ಸ್ನೇಹಭಾವದಿಂದ ಅಭಿವಂದಿಸಲು ಮತ್ತು ಕೈಬೀಸಲು ಮಾಡುವ ಎಲ್ಲ ಪ್ರಯತ್ನಗಳಿಗೆ, ಅವರು ಕೇವಲ ಬಲವಂತದಿಂದ ತಲೆಯಾಡಿಸಿ ಪ್ರತಿಕ್ರಿಯೆ ತೋರಿಸುತ್ತಿರಬಹುದು.

ಆದರೂ, ಅನೇಕ ಸಂದರ್ಭಗಳಲ್ಲಿ ಸಹಾಯವನ್ನು ಪಡೆದುಕೊಳ್ಳುವವನು ಹೊರತೋರಿಕೆಗೆ ಗಣ್ಯತೆ ತೋರಿಸದಿರುವಂತೆ ಕಂಡುಬರಬಹುದಾದರೂ, ವಾಸ್ತವದಲ್ಲಿ ಅವನು ಹಾಗಿರಲಿಕ್ಕಿಲ್ಲ. ಅವನ ಸಾಂಸ್ಕೃತಿಕ ಹಿನ್ನೆಲೆಯು ಅವನನ್ನು ಹಿಂಜರಿಯುವಂತೆ ಅಥವಾ ಕಸಿವಿಸಿಗೊಳ್ಳುವಂತೆ ಮಾಡುತ್ತಿರಬಹುದು ಮತ್ತು ಅನಾಸಕ್ತಿಯಿಂದ, ಹೊರತೋರಿಕೆಗೆ ಸ್ನೇಹಪರವಲ್ಲದ ರೀತಿಯಲ್ಲಿ ವರ್ತಿಸುವಂತೆ ಮಾಡುತ್ತಿರಬಹುದು. ಇನ್ನೊಂದು ಕಡೆಯಲ್ಲಿ, ಗಣ್ಯತಾಭಾವವಿಲ್ಲದಿರುವಂಥ ಈ ಲೋಕದಲ್ಲಿ, ಕೆಲವು ಜನರು ನಿಮ್ಮ ಸ್ನೇಹಭಾವವನ್ನು ಅಸಾಮಾನ್ಯವಾದದ್ದಾಗಿ ಪರಿಗಣಿಸಬಹುದು ಮತ್ತು ನಿಮ್ಮ ಉದ್ದೇಶಗಳನ್ನು ಅನುಮಾನಿಸಲೂಬಹುದು. ಅವರಿಗೆ ಸ್ವಲ್ಪ ಪುನರಾಶ್ವಾಸನೆಯ ಅಗತ್ಯವಿರಬಹುದು. ಹೀಗೆ, ಸ್ನೇಹಪರ ಸಂಬಂಧಗಳನ್ನು ಸ್ಥಾಪಿಸಲು ಸಮಯ ಮತ್ತು ತಾಳ್ಮೆಯ ಆವಶ್ಯಕತೆಯಿರಬಹುದು. ಆದರೂ, ಒಳ್ಳೇ ರೀತಿಯಲ್ಲಿ ಕೊಡುವವರೂ ಗಣ್ಯತಾಭಾವದಿಂದ ಸ್ವೀಕರಿಸುವವರೂ ಆಗಿರುವ ಕಲೆಯನ್ನು ಕಲಿಯುವಂಥ ನೆರೆಯವರು, ಶಾಂತಿಭರಿತವಾದ ಮತ್ತು ಸಂತೋಷಕರವಾದ ನೆರೆಹೊರೆಯ ವಾತಾವರಣವನ್ನು ಉತ್ತೇಜಿಸುವುದರಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುವರು.

ಆಪತ್ತು ಬಂದೆರಗುವಾಗ

ವಿಪತ್ತು ಬಂದೆರಗುವಾಗ ಒಬ್ಬ ಒಳ್ಳೇ ನೆರೆಯವನು ವಿಶೇಷಕರವಾಗಿ ಅಮೂಲ್ಯವಾದ ಸಹಾಯಹಸ್ತವನ್ನು ಚಾಚುವವನಾಗಿದ್ದಾನೆ. ನೆರೆಹೊರೆಯವರ ನಿಜವಾದ ಮನೋಭಾವವು ಆಪತ್ತಿನ ಸಮಯಗಳಲ್ಲಿ ವ್ಯಕ್ತಪಡಿಸಲ್ಪಡುತ್ತದೆ. ಅಂಥ ಸಮಯಗಳಲ್ಲಿ ನೆರೆಯವರಿಂದ ಮಾಡಲ್ಪಟ್ಟ ನಿಸ್ವಾರ್ಥ ಕೃತ್ಯಗಳ ಅನೇಕ ವೃತ್ತಾಂತಗಳಿವೆ. ಎಲ್ಲರ ಮೇಲೂ ಸಮಾನವಾದ ದುರಂತವು ಸಂಭವಿಸುವಾಗ, ಅದು ನೆರೆಯವರು ತಾವಾಗಿಯೇ ಸಹಕರಿಸಲು ಮತ್ತು ಒಬ್ಬರು ಇನ್ನೊಬ್ಬರಿಗಾಗಿ ಹೆಣಗಾಡಲು ಪ್ರಚೋದನೆಯನ್ನು ನೀಡುವಂತೆ ತೋರುತ್ತದೆ. ಆಗ, ವಿರುದ್ಧ ದೃಷ್ಟಿಕೋನಗಳಿರುವವರು ಸಹ ಅನೇಕವೇಳೆ ಒಟ್ಟುಗೂಡಿ ಕೆಲಸಮಾಡುತ್ತಾರೆ.

ಉದಾಹರಣೆಗೆ, 1999ರಲ್ಲಿ ಒಂದು ವಿಧ್ವಂಸಕ ಭೂಕಂಪವು ಟರ್ಕಿಯ ಮೇಲೆ ಬಂದೆರಗಿದಾಗ, ಸಾಂಪ್ರದಾಯಿಕ ಶತ್ರುಗಳು ನೆರೆಹೊರೆಭಾವದ ಒಗ್ಗಟ್ಟನ್ನು ತೋರಿಸಿದರು ಎಂದು ದ ನ್ಯೂ ಯಾರ್ಕ್‌ ಟೈಮ್ಸ್‌ ವರದಿಸಿತು. ಆ್ಯಥೆನ್ಸ್‌ನ ಒಂದು ವಾರ್ತಾಪತ್ರಿಕೆಯಲ್ಲಿ ಗ್ರೀಕ್‌ ಅಂಕಣಕಾರ್ತಿಯಾದ ಆ್ಯನ ಸ್ಟಾರಿಯು ಬರೆದುದು: “ಅನೇಕ ವರ್ಷಗಳಿಂದ ನಮಗೆ ಟರ್ಕಿಯವರನ್ನು ದ್ವೇಷಿಸುವಂತೆ ಕಲಿಸಲಾಗಿತ್ತು. ಆದರೆ ಅವರ ಅಸಾಧಾರಣವಾದ ವೇದನೆಯು ನಮಗೆ ಯಾವುದೇ ರೀತಿಯ ಸಂತೋಷವನ್ನು ನೀಡುವುದಿಲ್ಲ. ನಾವು ತುಂಬ ಕ್ಷೋಭೆಗೊಂಡಿದ್ದೆವು, ನಾವು ಮೃತ ಶಿಶುಗಳನ್ನು ನೋಡಿದಾಗ, ವರ್ಷಗಳಿಂದಲೂ ಅಸ್ತಿತ್ವದಲ್ಲಿದ್ದ ದ್ವೇಷವು ಕಣ್ಮರೆಯಾಯಿತೋ ಎಂಬಂತೆ ಅತ್ತುಬಿಟ್ಟೆವು.” ಭೂಕಂಪದಿಂದ ಜನರನ್ನು ರಕ್ಷಿಸುವ ಕಾರ್ಯಾಚರಣೆಗಳು ಅಧಿಕೃತವಾಗಿ ನಿಲ್ಲಿಸಲ್ಪಟ್ಟ ಬಳಿಕವೂ, ಗ್ರೀಕ್‌ ಪ್ರಾಣರಕ್ಷಕ ತಂಡಗಳು, ಬದುಕಿ ಉಳಿದಿರಬಹುದಾದವರಿಗಾಗಿರುವ ಹುಡುಕಾಟವನ್ನು ನಿಲ್ಲಿಸಲು ನಿರಾಕರಿಸಿದವು.

ವಿಪತ್ತುಗಳು ಬಂದೆರಗಿದ ನಂತರ ಜನರನ್ನು ಕಾಪಾಡುವ ಕೆಲಸದಲ್ಲಿ ಒಳಗೂಡುವುದು, ನಿಶ್ಚಯವಾಗಿಯೂ ನೆರೆಹೊರೆಭಾವದ ಉದಾತ್ತ ಹಾಗೂ ವೀರೋಚಿತ ಕೃತ್ಯವಾಗಿದೆ. ಹಾಗಿದ್ದರೂ, ಒಂದು ಆಪತ್ತು ಬಂದೆರಗುವುದಕ್ಕೆ ಮುಂಚೆಯೇ ಒಬ್ಬ ನೆರೆಯವನ ಜೀವಕ್ಕಿರುವ ಅಪಾಯದ ಕುರಿತು ಎಚ್ಚರಿಕೆ ನೀಡುವ ಮೂಲಕ ಅವನನ್ನು ರಕ್ಷಿಸುವುದು, ನೆರೆಯವರು ಮಾಡಸಾಧ್ಯವಿರುವ ಇನ್ನೂ ಹೆಚ್ಚು ಅಮೂಲ್ಯವಾದ ಕೃತ್ಯವಾಗಿ ಪರಿಗಣಿಸಲ್ಪಡುತ್ತದೆ ಎಂಬುದಂತೂ ಖಂಡಿತ. ಅಸಂತೋಷಕರವಾಗಿಯೇ, ಬರುತ್ತಿರುವ ವಿಪತ್ತುಗಳ ಕುರಿತು ನೆರೆಯವರಿಗೆ ಎಚ್ಚರಿಕೆ ಕೊಡುವವರನ್ನು ಅನೇಕವೇಳೆ ಆದರದಿಂದ ಬರಮಾಡಿಕೊಳ್ಳಲಾಗುವುದಿಲ್ಲ ಎಂಬುದನ್ನು ಇತಿಹಾಸವು ಬಯಲುಪಡಿಸುತ್ತದೆ; ಏಕೆಂದರೆ ಎಚ್ಚರಿಕೆ ನೀಡುವಂಥ ಸಮಯದಲ್ಲಿ, ಸಮೀಪಿಸುತ್ತಿರುವ ಆ ವಿಪತ್ತು ಆಗಲೇ ತೋರಿಬರುವುದಿಲ್ಲ. ಯಾರು ಈ ಎಚ್ಚರಿಕೆಯನ್ನು ಕೊಡುತ್ತಾರೋ ಅವರನ್ನು ಅನೇಕವೇಳೆ ಶಂಕಿಸಲಾಗುತ್ತದೆ. ಯಾರಿಗೆ ತಮ್ಮ ಅಪಾಯಕರ ಪರಿಸ್ಥಿತಿಯ ಬಗ್ಗೆ ಅರಿವಿಲ್ಲವೊ ಅಂಥ ವ್ಯಕ್ತಿಗಳಿಗೆ ಸಹಾಯಮಾಡಲು ಪ್ರಯತ್ನಿಸುತ್ತಿರುವವರು, ಈ ಕೆಲಸದಲ್ಲಿ ಛಲದಿಂದ ಮುಂದುವರಿಯಬೇಕಾಗಿದೆ ಮತ್ತು ಸ್ವತ್ಯಾಗದ ಮನೋಭಾವದವರಾಗಿರಬೇಕಾಗಿದೆ.

ನೆರೆಹೊರೆಭಾವದ ಅತಿ ದೊಡ್ಡ ಕೆಲಸ

ಇಂದು, ನೈಸರ್ಗಿಕ ವಿಪತ್ತಿಗಿಂತಲೂ ಹೆಚ್ಚು ಪ್ರಮುಖವಾದ ಒಂದು ವಿಪತ್ತು ಮಾನವಕುಲದ ಮೇಲೆ ಬಂದೆರಗಲಿದೆ. ಇದು, ಭೂಮಿಯಿಂದ ದುಷ್ಕೃತ್ಯ, ದುಷ್ಟತನ ಮತ್ತು ಸಂಬಂಧಿತ ಸಮಸ್ಯೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸರ್ವಶಕ್ತ ದೇವರ ಮುಂತಿಳಿಸಲ್ಪಟ್ಟ ಕೃತ್ಯವಾಗಿದೆ. (ಪ್ರಕಟನೆ 16:16; 21:​3, 4) ಈ ಬಹು ಪ್ರಾಮುಖ್ಯವಾದ ಘಟನೆಯು ಸಂಭವಿಸಬಹುದು ಎಂಬ ವಿಷಯವಲ್ಲ, ಬದಲಾಗಿ ನಿಶ್ಚಿತವಾಗಿ ಸಂಭವಿಸಲಿರುವ ಘಟನೆಯಾಗಿದೆ! ಸಮೀಪಿಸುತ್ತಿರುವ ಈ ಅರ್ಥಗರ್ಭಿತ ಘಟನೆಯಿಂದ ಪಾರಾಗಿ ಉಳಿಯಲು ಅಗತ್ಯವಿರುವ ಜ್ಞಾನವನ್ನು, ಸಾಧ್ಯವಿರುವಷ್ಟು ಹೆಚ್ಚು ಜನರೊಂದಿಗೆ ಹಂಚಿಕೊಳ್ಳಲು ಯೆಹೋವನ ಸಾಕ್ಷಿಗಳು ಅತ್ಯಾಸಕ್ತಿಯುಳ್ಳವರಾಗಿದ್ದಾರೆ. ಆದುದರಿಂದಲೇ ಲೋಕದಾದ್ಯಂತ ಅವರು ತಮ್ಮ ಸುಪ್ರಸಿದ್ಧ ಸಾರುವ ಚಟುವಟಿಕೆಯಲ್ಲಿ ಪಟ್ಟುಬಿಡದೆ ಒಳಗೂಡುತ್ತಾರೆ. (ಮತ್ತಾಯ 24:14) ಇದನ್ನು ಅವರು ಸಿದ್ಧಮನಸ್ಸಿನಿಂದ, ಯೆಹೋವನಿಗಾಗಿ ಮತ್ತು ನೆರೆಯವರಿಗಾಗಿರುವ ಪ್ರೀತಿಯಿಂದ ಮಾಡುತ್ತಾರೆ.

ಆದುದರಿಂದ, ಸಾಕ್ಷಿಗಳು ನಿಮ್ಮ ಮನೆ ಬಾಗಿಲಿಗೆ ಬರುವಾಗ ಅಥವಾ ಬೇರೆಲ್ಲಿಯಾದರೂ ನಿಮ್ಮನ್ನು ಸಮೀಪಿಸುವಾಗ, ಪೂರ್ವಕಲ್ಪಿತ ಅಭಿಪ್ರಾಯವಾಗಲಿ ಸಿಡುಕಾಗಲಿ ನೀವು ಅವರಿಗೆ ಕಿವಿಗೊಡುವುದನ್ನು ತಡೆಯುವಂತೆ ಬಿಡಬೇಡಿ. ಅವರು ಒಳ್ಳೇ ನೆರೆಯವರಾಗಿರಲು ಪ್ರಯತ್ನಿಸುತ್ತಿದ್ದಾರೆ. ಆದುದರಿಂದ, ಅವರು ನಿಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡುವಂತೆ ಕೇಳಿಕೊಳ್ಳುವಾಗ, ಅದನ್ನು ಅಂಗೀಕರಿಸಿರಿ. ನೆರೆಯವರ ಮಧ್ಯೆ ಹರ್ಷಭರಿತ ಸಹಬಾಳ್ವೆಯನ್ನು ನಡೆಸುವ ಭವಿಷ್ಯತ್ತು ಬೇಗನೆ ಬರಲಿದೆ ಎಂಬುದರ ಆಶ್ವಾಸನೆಯನ್ನು ದೇವರ ವಾಕ್ಯವು ನಮಗೆ ಹೇಗೆ ನೀಡುತ್ತದೆ ಎಂಬುದನ್ನು ಕಲಿಯಿರಿ. ಆ ಸಮಯದಲ್ಲಿ, ಕುಲಸಂಬಂಧಿತ, ಧಾರ್ಮಿಕ ಅಥವಾ ವರ್ಗ ಭೇದವು, ನಮ್ಮಲ್ಲಿ ಅಧಿಕಾಂಶ ಮಂದಿ ನಿಜವಾಗಿಯೂ ಇಷ್ಟಪಡುವ ಆದರಪೂರ್ವಕ ಸಂಬಂಧವನ್ನು ಇನ್ನೆಂದಿಗೂ ಹಾಳುಮಾಡದು.

[ಪುಟ 6, 7ರಲ್ಲಿರುವ ಚಿತ್ರಗಳು]

ನಿಮ್ಮ ನೆರೆಹೊರೆಯಲ್ಲಿ ದಯಾಪರ ಕೃತ್ಯಗಳನ್ನು ಮಾಡುವುದು ಒಳ್ಳೇದು

[ಕೃಪೆ]

ಭೂಗೋಳ: Mountain High Maps® Copyright © 1997 Digital Wisdom, Inc.