ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಾನು ಏನನ್ನೂ ಬದಲಾಯಿಸಲು ಇಷ್ಟಪಡೆನು!”

“ನಾನು ಏನನ್ನೂ ಬದಲಾಯಿಸಲು ಇಷ್ಟಪಡೆನು!”

ಜೀವನ ಕಥೆ

“ನಾನು ಏನನ್ನೂ ಬದಲಾಯಿಸಲು ಇಷ್ಟಪಡೆನು!”

ಗ್ಲಾಡಿಸ್‌ ಆ್ಯಲೆನ್‌ ಅವರು ಹೇಳಿದಂತೆ

ಕೆಲವೊಮ್ಮೆ ನನಗೆ, “ನೀವು ನಿಮ್ಮ ಬದುಕನ್ನು ಪುನಃ ಒಮ್ಮೆ ಜೀವಿಸಲು ಶಕ್ತಿರಾಗಿರುತ್ತಿದ್ದಲ್ಲಿ, ನೀವು ಏನನ್ನು ಬದಲಾಯಿಸಲು ಇಷ್ಟಪಡುವಿರಿ?” ಎಂದು ಕೇಳಲಾಗಿದೆ. “ನಾನು ಏನನ್ನೂ ಬದಲಾಯಿಸಲು ಇಷ್ಟಪಡೆನು!” ಎಂದು ನಾನು ನಿಜವಾಗಿಯೂ ಹೇಳಬಲ್ಲೆ. ನನಗೆ ಹೀಗೇಕೆ ಅನಿಸುತ್ತದೆಂಬುದನ್ನು ನಿಮಗೆ ವಿವರಿಸುವೆ.

ನಾನು ಎರಡು ವರ್ಷದವಳಾಗಿದ್ದಾಗ, ಅಂದರೆ 1929ರ ಬೇಸಗೆ ಕಾಲದಲ್ಲಿ, ನನ್ನ ತಂದೆ ಮ್ಯಾಥ್ಯೂ ಆ್ಯಲೆನ್‌ರಿಗೆ ಒಂದು ಅಪೂರ್ವ ಅನುಭವವಾಯಿತು. ಅವರು ಅಂತಾರಾಷ್ಟ್ರೀಯ ಬೈಬಲ್‌ ವಿದ್ಯಾರ್ಥಿಗಳಿಂದ (ಆ ಕಾಲದಲ್ಲಿ ಯೆಹೋವನ ಸಾಕ್ಷಿಗಳು ಈ ಹೆಸರಿನಿಂದ ಪ್ರಸಿದ್ಧರಾಗಿದ್ದರು) ಪ್ರಕಾಶಿಸಲ್ಪಟ್ಟಿದ್ದ, ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ! (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು ಪಡೆದರು. ಅದರ ಕೆಲವೇ ಪುಟಗಳನ್ನು ಅತ್ಯಾತುರವಾಗಿ ಓದಿದ ನಂತರ, “ನಾನು ಓದಿರುವುದರಲ್ಲೇ ಅತಿ ಶ್ರೇಷ್ಠವಾದ ಮಾಹಿತಿ ಇದಾಗಿದೆ!” ಎಂದು ಅಪ್ಪನವರು ಉದ್ಗರಿಸಿದರು.

ಆ ಬಳಿಕ ಸ್ವಲ್ಪ ಸಮಯದೊಳಗೆ, ತಂದೆಯವರು ಬೈಬಲ್‌ ವಿದ್ಯಾರ್ಥಿಗಳ ಬೇರೆ ಪ್ರಕಾಶನಗಳನ್ನು ತರಿಸಿಕೊಂಡರು. ಆ ಕೂಡಲೇ ಅವರು ತಾವು ಕಲಿಯುತ್ತಿದ್ದಂಥ ವಿಷಯಗಳನ್ನು ನೆರೆಯವರೆಲ್ಲರಿಗೆ ತಿಳಿಸಲಾರಂಭಿಸಿದರು. ಆದರೆ ನಮ್ಮ ಆ ಗ್ರಾಮೀಣ ಸಮುದಾಯದಲ್ಲಿ ಯೆಹೋವನ ಸಾಕ್ಷಿಗಳ ಒಂದು ಸಭೆಯಿರಲಿಲ್ಲ. ಕ್ರಮವಾದ ಕ್ರೈಸ್ತ ಸಹವಾಸದ ಅಗತ್ಯವನ್ನು ಗ್ರಹಿಸುತ್ತಾ, 1935ರಲ್ಲಿ ತಂದೆಯವರು ನಮ್ಮ ಕುಟುಂಬವನ್ನು ಕೆನಡದ ಆಂಟೇರಿಯೊವಿನ ಆರೆಂಜ್‌ವಿಲ್‌ ಎಂಬ ಪಟ್ಟಣಕ್ಕೆ ಸ್ಥಳಾಂತರಿಸಿದರು​—ಕಾರಣ ಅಲ್ಲಿ ಒಂದು ಸಭೆಯಿತ್ತು.

ಆ ಕಾಲದಲ್ಲಿ, ಮಕ್ಕಳನ್ನು ಸಭೆಯ ಕೂಟಗಳಿಗೆ ಹಾಜರಾಗುವಂತೆ ಯಾವಾಗಲೂ ಉತ್ತೇಜಿಸಲಾಗುತ್ತಿರಲಿಲ್ಲ. ವಯಸ್ಕರು ಕೂಟವನ್ನು ಮುಗಿಸುವ ವರೆಗೂ ಅವರು ಸಾಮಾನ್ಯವಾಗಿ ಕೂಟ ನಡೆಯುವ ಸ್ಥಳದ ಹೊರಗೆ ಆಟವಾಡಿಕೊಂಡಿರುತ್ತಿದ್ದರು. ತಂದೆಯವರಿಗೆ ಇದು ಹಿಡಿಸಲಿಲ್ಲ. “ಕೂಟಗಳು ನನಗೆ ಪ್ರಯೋಜನಕರವಾಗಿರುವಲ್ಲಿ, ನನ್ನ ಮಕ್ಕಳಿಗೂ ಅವು ಪ್ರಯೋಜನಕರವಾಗಿರಬೇಕು” ಎಂಬುದು ಅವರ ವಾದವಾಗಿತ್ತು. ಆದುದರಿಂದ, ನಾವು ಆ ಸಭೆಯಲ್ಲಿ ಹೊಸದಾಗಿ ಸಹವಾಸಮಾಡುತ್ತಿದ್ದವರಾಗಿದ್ದರೂ, ನನ್ನ ಅಣ್ಣ ಬಾಬ್‌, ನನ್ನ ಅಕ್ಕಂದಿರಾದ ಎಲಾ ಮತ್ತು ರೂಬಿ ಹಾಗೂ ನಾನು ಕೂಟಗಳಲ್ಲಿ ವಯಸ್ಕರೊಂದಿಗೆ ಜೊತೆಗೂಡುವಂತೆ ತಂದೆಯವರು ಹೇಳಿದರು, ಮತ್ತು ನಾವು ಹಾಗೆಯೇ ಮಾಡಿದೆವು. ಆಮೇಲೆ ಇತರ ಸಾಕ್ಷಿಗಳ ಮಕ್ಕಳು ಕೂಡ ಕೂಟಗಳಿಗೆ ಹಾಜರಾಗಲಾರಂಭಿಸಿದರು. ಅಂದಿನಿಂದ, ಕೂಟಗಳಿಗೆ ಹಾಜರಾಗುವುದು ಮತ್ತು ಉತ್ತರಗಳನ್ನು ಕೊಡುವುದು ನಮ್ಮ ಜೀವಿತಗಳ ಒಂದು ಅತಿ ಮುಖ್ಯ ಭಾಗವಾಗಿ ಪರಿಣಮಿಸಿತು.

ತಂದೆಯವರು ಬೈಬಲನ್ನು ಪ್ರೀತಿಸುತ್ತಿದ್ದರು ಮತ್ತು ಬೈಬಲ್‌ ಕಥೆಗಳನ್ನು ನಮಗೆ ತುಂಬ ಆನಂದದಾಯಕವಾದ ರೀತಿಯಲ್ಲಿ ಅಭಿನಯಿಸಿ ತೋರಿಸುವುದು ಅವರಿಗೆ ತಿಳಿದಿತ್ತು. ಇವುಗಳ ಮೂಲಕ ಅವರು ನಮ್ಮ ಎಳೆಯ ಹೃದಯಗಳ ಮೇಲೆ ಪ್ರಮುಖ ಪಾಠಗಳನ್ನು ಅಚ್ಚೊತ್ತಿಸಿದರು; ನಾನು ಅವುಗಳನ್ನು ಈಗಲೂ ಬಲು ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತೇನೆ. ನನ್ನ ನೆನಪಿಗೆ ಬರುವ ಒಂದು ಪಾಠವು ಯಾವುದೆಂದರೆ, ಯೆಹೋವನು ತನಗೆ ವಿಧೇಯರಾಗಿರುವವರನ್ನು ಆಶೀರ್ವದಿಸುತ್ತಾನೆ ಎಂಬುದೇ.

ನಮ್ಮ ನಂಬಿಕೆಯನ್ನು ಸಮರ್ಥಿಸುವುದರಲ್ಲಿ ಬೈಬಲನ್ನು ಉಪಯೋಗಿಸುವುದನ್ನೂ ತಂದೆ ನಮಗೆ ಕಲಿಸಿದರು. ನಾವು ಇದಕ್ಕಾಗಿ ಒಂದು ಆಟವನ್ನಾಡುತ್ತಿದ್ದೆವು. ತಂದೆ ಹೀಗನ್ನುತ್ತಿದ್ದರು: “ಸತ್ತ ನಂತರ ಸ್ವರ್ಗಕ್ಕೆ ಹೋಗುತ್ತೇನೆಂದು ನಾನು ನಂಬುತ್ತೇನೆ. ಈಗ, ಇದು ಸರಿಯಲ್ಲ ಎಂದು ನನಗೆ ರುಜುಪಡಿಸಿ ತೋರಿಸಿ.” ಆ ಬೋಧನೆಯು ತಪ್ಪೆಂದು ರುಜುಪಡಿಸಲಿಕ್ಕಾಗಿ ರೂಬಿ ಮತ್ತು ನಾನು ಕಾನ್‌ಕಾರ್ಡನ್ಸ್‌ನಲ್ಲಿ ಶಾಸ್ತ್ರವಚನಗಳನ್ನು ಹುಡುಕುತ್ತಿದ್ದೆವು. ನಾವು ಕಂಡುಕೊಂಡ ವಚನಗಳನ್ನು ಓದಿದ ನಂತರ, ತಂದೆಯವರು “ಅದು ತುಂಬ ಆಸಕ್ತಿದಾಯಕ ವಿಷಯ ನಿಜ, ಆದರೆ ನನಗಿನ್ನೂ ಪೂರ್ಣವಾಗಿ ಮನದಟ್ಟಾಗಿಲ್ಲ” ಎಂದು ಹೇಳುತ್ತಿದ್ದರು. ಆದುದರಿಂದ ನಾವು ಪುನಃ ವಚನಗಳನ್ನು ಹುಡುಕಲು ಕಾನ್‌ಕಾರ್ಡನ್ಸ್‌ ಅನ್ನು ಜಾಲಾಡಿಸುತ್ತಿದ್ದೆವು. ನಾವು ಕೊಟ್ಟ ಉತ್ತರಗಳಿಂದ ತಂದೆಗೆ ತೃಪ್ತಿಯಾಗುವ ವರೆಗೂ ಎಷ್ಟೋ ಬಾರಿ ಹೀಗೆ ಅನೇಕ ತಾಸುಗಳ ವರೆಗೆ ನಡೆಯುತ್ತಿತ್ತು. ಫಲಿತಾಂಶವಾಗಿ, ರೂಬಿ ಮತ್ತು ನಾನು, ನಮ್ಮ ನಂಬಿಕೆಗಳನ್ನು ವಿವರಿಸಲು ಮತ್ತು ನಮ್ಮ ನಂಬಿಕೆಯನ್ನು ಸಮರ್ಥಿಸಲು ಸುಸಜ್ಜಿತರಾದೆವು.

ಮನುಷ್ಯನ ಭಯವನ್ನು ಜಯಿಸುವುದು

ನಾನು ಮನೆಯಲ್ಲಿ ಹಾಗೂ ಸಭಾ ಕೂಟಗಳಲ್ಲಿ ಉತ್ತಮ ತರಬೇತಿಯನ್ನು ಪಡೆದಿದ್ದರೂ, ಒಬ್ಬ ಕ್ರೈಸ್ತಳಾಗಿರುವುದರಲ್ಲಿ ಸೇರಿದಂಥ ಕೆಲವೊಂದು ಅಂಶಗಳು ನನಗೆ ತುಂಬ ಪಂಥಾಹ್ವಾನದಾಯಕವಾಗಿದ್ದವು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ಅನೇಕ ಯುವ ಜನರಂತೆ ನಾನು ಕೂಡ ಬೇರೆಯವರಿಂದ, ಅದರಲ್ಲೂ ವಿಶೇಷವಾಗಿ ನನ್ನ ಸಹಪಾಠಿಗಳಿಂದ ಭಿನ್ನಳಾಗಿರುವುದನ್ನು ಇಷ್ಟಪಡುತ್ತಿರಲಿಲ್ಲ. ನನ್ನ ನಂಬಿಕೆಯ ಒಂದು ಆರಂಭದ ಪರೀಕ್ಷೆಯು, ನಾವು ಯಾವುದನ್ನು ಮಾಹಿತಿ ಮೆರವಣಿಗೆಗಳೆಂದು ಕರೆಯುತ್ತಿದ್ದೆವೊ ಅದರ ಸಂಬಂಧದಲ್ಲಿತ್ತು.

ಸಹೋದರ ಸಹೋದರಿಯರ ಒಂದು ಗುಂಪು, ತಮ್ಮೊಂದಿಗೆ ಗುರಿನುಡಿಗಳುಳ್ಳ ಸೂಚನಾಫಲಕಗಳನ್ನು ಹೊತ್ತುಕೊಂಡು ಪಟ್ಟಣದ ಮುಖ್ಯ ಬೀದಿಗಳಲ್ಲಿ ನಿಧಾನವಾಗಿ ನಡೆಯಬೇಕಾಗಿತ್ತು. ಸುಮಾರು 3,000 ಜನರಿದ್ದ ನಮ್ಮ ಪಟ್ಟಣದಲ್ಲಿ ಎಲ್ಲರಿಗೂ ಒಬ್ಬರಿಗೊಬ್ಬರ ಪರಿಚಯವಿತ್ತು. ಅಂಥ ಒಂದು ಮಾಹಿತಿ ಮೆರವಣಿಗೆಯ ಸಮಯದಲ್ಲಿ, ನಾನು ಪಂಕ್ತಿಯ ಕೊನೆಯಲ್ಲಿದ್ದು “ಧರ್ಮವು ಒಂದು ಪಾಶ ಮತ್ತು ಹೂಟವಾಗಿದೆ” ಎಂಬ ಗುರಿನುಡಿಯಿರುವ ಸೂಚನಾಫಲಕವನ್ನು ಹೊತ್ತುಕೊಂಡು ನಡೆಯುತ್ತಿದ್ದೆ. ನನ್ನ ಸಹಪಾಠಿಗಳಲ್ಲಿ ಕೆಲವರು ನನ್ನನ್ನು ನೋಡಿಯೇ ಬಿಟ್ಟರು, ಮತ್ತು ಕೂಡಲೇ ಆ ಪಂಕ್ತಿಯಲ್ಲಿ ನನ್ನ ಹಿಂದೆ ನಿಂತು, “ದೇವರೇ ರಾಜನನ್ನು ರಕ್ಷಿಸು” ಎಂಬ ರಾಷ್ಟ್ರಗೀತೆಯನ್ನು ಹಾಡಲಾರಂಭಿಸಿದರು. ಈ ಸನ್ನಿವೇಶವನ್ನು ನಾನು ಹೇಗೆ ನಿಭಾಯಿಸಿದೆ? ಈ ಕೆಲಸದಲ್ಲಿ ಮುಂದುವರಿಯುತ್ತಾ ಇರಲು ನಾನು ಬಲಕ್ಕಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದೆ. ಕೊನೆಗೆ ಆ ಮೆರವಣಿಗೆಯು ಮುಗಿದ ನಂತರ, ನನ್ನ ಸೂಚನಾಫಲಕವನ್ನು ಹಿಂದಿರುಗಿಸಿ ಮನೆಗೆ ಹೋಗಲು ನಾನು ರಾಜ್ಯ ಸಭಾಗೃಹಕ್ಕೆ ಅವಸರದಿಂದ ಹೋದೆ. ಆದರೆ ಆಗ ಈ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದವರು, ಇನ್ನೊಂದು ಮಾಹಿತಿ ಮೆರವಣಿಗೆಯು ಸ್ವಲ್ಪ ಸಮಯದೊಳಗೆ ಆರಂಭವಾಗಲಿದೆ, ಮತ್ತು ಒಂದು ಸೂಚನಾಫಲಕವನ್ನು ಒಯ್ಯಲು ಇನ್ನೂ ಒಬ್ಬರ ಆವಶ್ಯಕತೆಯಿದೆಯೆಂದು ನನಗೆ ಹೇಳಿದರು. ಆದುದರಿಂದ ನಾನು ಪುನಃ ಹೋಗಬೇಕಾಯಿತು ಮತ್ತು ನಾನು ಹಿಂದಿನ ಸಲಕ್ಕಿಂತಲೂ ಹೆಚ್ಚು ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದೆ. ಆದರೆ ಅಷ್ಟರೊಳಗೆ ನನ್ನ ಸಹಪಾಠಿಗಳು ದಣಿದು ಮನೆಗೆ ಹೊರಟುಹೋಗಿದ್ದರು. ಬಲಕ್ಕಾಗಿ ನಾನು ಮಾಡಿದ ಪ್ರಾರ್ಥನೆಗಳು ಈಗ ಉಪಕಾರಸ್ತುತಿಯ ಪ್ರಾರ್ಥನೆಗಳಾದವು!​—ಜ್ಞಾನೋಕ್ತಿ 3:5.

ಪೂರ್ಣ ಸಮಯದ ಸೇವಕರಿಗೆ ನಮ್ಮ ಬಾಗಿಲು ಯಾವಾಗಲೂ ತೆರೆದಿತ್ತು. ಅವರು ಒಂದು ಸಂತೋಷಭರಿತ ಗುಂಪಾಗಿದ್ದರು ಮತ್ತು ಅವರನ್ನು ಸತ್ಕರಿಸುವುದು ಆನಂದದಾಯಕವಾಗಿತ್ತು. ನನಗೆ ನೆನಪಿರುವಷ್ಟರ ಮಟ್ಟಿಗೆ, ಯಾವಾಗಲೂ ನಮ್ಮ ಹೆತ್ತವರು ಪೂರ್ಣ ಸಮಯದ ಶುಶ್ರೂಷೆಯೇ ಸಾಧ್ಯವಿರುವ ಅತ್ಯುತ್ತಮ ಜೀವನವೃತ್ತಿಯಾಗಿದೆ ಎಂಬ ಭಾವನೆಯನ್ನು ಮಕ್ಕಳಾಗಿದ್ದ ನಮ್ಮಲ್ಲಿ ಬೇರೂರಿಸಿದ್ದರು.

ಅವರ ಉತ್ತೇಜನಕ್ಕೆ ಪ್ರತಿಕ್ರಿಯಿಸುತ್ತಾ, ನಾನು 1945ರಲ್ಲಿ ಪೂರ್ಣ ಸಮಯದ ಶುಶ್ರೂಷೆಯಲ್ಲಿ ನನ್ನ ಜೀವನವೃತ್ತಿಯನ್ನು ಆರಂಭಿಸಿದೆ. ತದನಂತರ, ಆಂಟೇರಿಯೊದ ಲಂಡನ್‌ನಲ್ಲಿ ಪಯನೀಯರ್‌ ಸೇವೆಯನ್ನು ಮಾಡುತ್ತಿದ್ದ ನನ್ನ ಅಕ್ಕ ಎಲಾಳನ್ನು ಜೊತೆಗೂಡಿದೆ. ಅಲ್ಲಿ, ನಾನೆಂದೂ ಮಾಡಲಾರೆನೆಂದು ನೆನಸುತ್ತಿದ್ದ ಒಂದು ಸೇವಾ ವೈಶಿಷ್ಟ್ಯವನ್ನು ನನಗೆ ಪರಿಚಯಿಸಲಾಯಿತು. ಸಹೋದರರು ಅಲ್ಲಿನ ಸ್ಥಳಿಕ ಬಾರ್‌ಗಳಲ್ಲಿ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಹೋಗುತ್ತಾ, ಗಿರಾಕಿಗಳಿಗೆ ದ ವಾಚ್‌ಟವರ್‌ ಮತ್ತು ಕಾನ್ಸಲೇಷನ್‌ (ಈಗ ಅವೇಕ್‌!) ಪತ್ರಿಕೆಗಳ ಪ್ರತಿಗಳನ್ನು ನೀಡುತ್ತಿದ್ದರು. ಒಂದು ಒಳ್ಳೇ ಸಂಗತಿಯೇನೆಂದರೆ, ಆ ಕೆಲಸವನ್ನು ಶನಿವಾರ ಮಧ್ಯಾಹ್ನಗಳಂದು ಮಾಡಲಾಗುತ್ತಿತ್ತು. ಆದುದರಿಂದ ಆ ಕೆಲಸಕ್ಕೆ ಹೋಗಲಿಕ್ಕಾಗಿ ಧೈರ್ಯವನ್ನು ಪಡೆದುಕೊಳ್ಳಲು ನಾನು ಇಡೀ ವಾರ ಪ್ರಾರ್ಥಿಸಬಹುದಿತ್ತು! ಆ ಕೆಲಸವು ನನಗೆ ಸುಲಭವಾಗಿರಲಿಲ್ಲವಾದರೂ ಅದು ಪ್ರತಿಫಲದಾಯಕವಾಗಿತ್ತು.

ಆದರೆ ಇನ್ನೊಂದು ಬದಿಯಲ್ಲಿ, ನಾಸಿ ಸೆರೆಶಿಬಿರಗಳಲ್ಲಿರುವ ನಮ್ಮ ಸಹೋದರರ ಹಿಂಸೆಯ ಕುರಿತಾದ ಕಾನ್ಸಲೇಷನ್‌ ಪತ್ರಿಕೆಯ ವಿಶೇಷ ಸಂಚಿಕೆಗಳನ್ನು ಹೇಗೆ ನೀಡುವುದು, ವಿಶೇಷವಾಗಿ ದೊಡ್ಡ ದೊಡ್ಡ ಕಾರ್ಪೊರೇಷನ್‌ಗಳ ಅಧ್ಯಕ್ಷರನ್ನೂ ಒಳಗೊಂಡು ಕೆನಡದ ಪ್ರಮುಖ ವ್ಯಾಪಾರಿಗಳನ್ನು ಹೇಗೆ ಸಂಪರ್ಕಿಸುವುದು ಎಂಬುದನ್ನು ನಾನು ಕಲಿತುಕೊಂಡೆ. ನಾವು ಬಲಕ್ಕಾಗಿ ಯೆಹೋವನ ಮೇಲೆ ಆತುಕೊಂಡರೆ ಆತನು ಯಾವಾಗಲೂ ನಮ್ಮನ್ನು ಬೆಂಬಲಿಸುತ್ತಾನೆಂಬುದನ್ನು ನಾನು ಈ ಎಲ್ಲ ವರ್ಷಗಳಲ್ಲಿ ಕಂಡುಕೊಂಡಿದ್ದೇನೆ. ನಮ್ಮ ತಂದೆ ಹೇಳುತ್ತಿದ್ದಂತೆ, ಯೆಹೋವನು ತನಗೆ ವಿಧೇಯರಾಗಿರುವವರನ್ನು ಆಶೀರ್ವದಿಸುತ್ತಾನೆ.

ಕ್ವಿಬೆಕ್‌ನಲ್ಲಿ ಸೇವೆಮಾಡಲಿಕ್ಕಾಗಿ ಕೊಡಲ್ಪಟ್ಟ ಕರೆಗೆ ಓಗೊಡುವುದು

ಇಸವಿ 1940ರ ಜುಲೈ 4ರಂದು ಯೆಹೋವನ ಸಾಕ್ಷಿಗಳ ಕೆಲಸವನ್ನು ಕೆನಡದಲ್ಲಿ ನಿಷೇಧಿಸಲಾಯಿತು. ತದನಂತರ ನಿಷೇಧವನ್ನು ತೆಗೆಯಲಾಯಿತು, ಆದರೆ ನಮ್ಮನ್ನು ಆಗಲೂ ಕ್ವಿಬೆಕ್‌ನ ರೋಮನ್‌ ಕ್ಯಾಥೊಲಿಕ್‌ ಪ್ರಾಂತದಲ್ಲಿ ಹಿಂಸಿಸಲಾಗುತ್ತಿತ್ತು. ದೇವರು ಮತ್ತು ಕ್ರಿಸ್ತನಿಗಾಗಿ ಹಾಗೂ ಸ್ವಾತಂತ್ರ್ಯಕ್ಕಾಗಿ ಕ್ವಿಬೆಕ್‌ನ ಉತ್ಕಟ ದ್ವೇಷವು ಇಡೀ ಕೆನಡಕ್ಕೆ ನಾಚಿಕೆಗೇಡು (ಇಂಗ್ಲಿಷ್‌) ಎಂಬ ಕಟುನುಡಿಗಳುಳ್ಳ ಒಂದು ಟ್ರ್ಯಾಕ್ಟನ್ನು ಉಪಯೋಗಿಸಿ, ಅಲ್ಲಿ ನಮ್ಮ ಸಹೋದರರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಕಡೆಗೆ ಗಮನವನ್ನು ಸೆಳೆಯಲು ಒಂದು ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಯಿತು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿದ್ದ ನೇತನ್‌ ಏಚ್‌. ನಾರ್‌ ಅವರು, ನಾವು ಮಾಡಲಿದ್ದ ಕೆಲಸದ ತೊಡಕುಗಳನ್ನು ವಿವರಿಸಲಿಕ್ಕಾಗಿ, ಮಾಂಟ್ರೀಯಲ್‌ ನಗರದಲ್ಲಿ ನೂರಾರು ಮಂದಿ ಪಯನೀಯರರೊಂದಿಗೆ ಕೂಟವನ್ನು ಏರ್ಪಡಿಸಿದರು. ನಾವು ಆ ಕಾರ್ಯಾಚರಣೆಯಲ್ಲಿ ಒಳಗೂಡಿದರೆ, ದಸ್ತಗಿರಿ ಮಾಡಲ್ಪಟ್ಟು, ಜೈಲಿಗೆ ತಳ್ಳಲ್ಪಡುವ ಸಾಧ್ಯತೆಯಿದೆಯೆಂದು ಸಹೋದರ ನಾರ್‌ ನಮಗೆ ಹೇಳಿದರು. ಅದೆಷ್ಟು ಸತ್ಯವಾಗಿತ್ತು! ನಾನು 15 ಸಲ ದಸ್ತಗಿರಿ ಮಾಡಲ್ಪಟ್ಟೆ. ನಾವು ಕ್ಷೇತ್ರ ಸೇವೆಗೆ ಹೋಗುವ ಮೊದಲು, ನಮ್ಮ ಟೂತ್‌ಬ್ರಷ್‌ ಮತ್ತು ಬಾಚಣಿಗೆಯು ನಮ್ಮ ಬಳಿ ಇರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೆವು, ಯಾಕೆಂದರೆ ನಾವು ಆ ರಾತ್ರಿ ಜೈಲಿನಲ್ಲಿ ಕಳೆಯಬೇಕಾದಿತೊ ಏನೊ ಯಾರಿಗೆ ಗೊತ್ತು.

ನಮ್ಮ ಕಡೆಗೆ ಸಾಧ್ಯವಿರುವಷ್ಟು ಕಡಿಮೆ ಗಮನವನ್ನು ಸೆಳೆಯಲಿಕ್ಕಾಗಿ ನಾವು ಆರಂಭದಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡುತ್ತಿದ್ದೆವು. ನಾನು ಟ್ರ್ಯಾಕ್ಟ್‌ಗಳ ಹೆಚ್ಚಿನ ಸರಬರಾಯಿಯನ್ನು ಒಂದು ಚೀಲದಲ್ಲಿ ಒಯ್ಯುತ್ತಿದ್ದೆ, ಮತ್ತು ಆ ಚೀಲವನ್ನು ನನ್ನ ಕೋಟಿನ ಕೆಳಗೆ ನನ್ನ ಕತ್ತಿನ ಸುತ್ತ ತೂಗುಹಾಕುತ್ತಿದ್ದೆ. ಟ್ರ್ಯಾಕ್ಟ್‌ಗಳಿಂದ ತುಂಬಿರುತ್ತಿದ್ದ ಆ ಚೀಲವು ತುಂಬ ದೊಡ್ಡದಾಗಿರುತ್ತಿತ್ತು, ಮತ್ತು ನಾನು ಗರ್ಭಿಣಿಯಾಗಿದ್ದೇನೊ ಎಂಬಂತೆ ತೋರುತ್ತಿತ್ತು. ಇದರಿಂದಾಗಿ ನನಗೆ ತುಂಬ ಪ್ರಯೋಜನವಾಗುತ್ತಿತ್ತು. ವಿಶೇಷವಾಗಿ ನಾನು ಟೆರಿಟೊರಿಗೆ ಹೋಗಲು ಕಿಕ್ಕಿರಿದಿರುವ ಸ್ಟ್ರೀಟ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದಾಗಲಂತೂ ಇದು ತುಂಬ ಸಹಾಯಕರವಾಗಿತ್ತು. ಎಷ್ಟೋ ಸಲ ಯಾರಾದರೊಬ್ಬರು ಮಹಾಶಯರು ಸೀಟಿನಿಂದ ಎದ್ದು, ಈ “ಗರ್ಭವತಿಗೆ” ತಮ್ಮ ಸೀಟನ್ನು ಬಿಟ್ಟುಕೊಟ್ಟಿದ್ದಾರೆ.

ಸಮಯ ಸರಿದಂತೆ, ನಾವು ಹಗಲಿನಲ್ಲೂ ಈ ವಿತರಣಾ ಕೆಲಸದಲ್ಲಿ ತೊಡಗಿದೆವು. ನಾವು ಮೂರು ಇಲ್ಲವೆ ನಾಲ್ಕು ಮನೆಗಳಲ್ಲಿ ಟ್ರ್ಯಾಕ್ಟ್‌ಗಳನ್ನು ಬಿಟ್ಟು, ಆಮೇಲೆ ಇನ್ನೊಂದು ಟೆರಿಟೊರಿಗೆ ಹೋಗುತ್ತಿದ್ದೆವು. ಸಾಮಾನ್ಯವಾಗಿ ಹೀಗೆ ಮಾಡುವುದು ಯಶಸ್ಸನ್ನು ತಂದಿತು. ಆದರೆ ನಾವು ಒಂದು ಕ್ಷೇತ್ರದಲ್ಲಿದ್ದೇವೆ ಎಂಬ ಸುದ್ದಿ ಒಬ್ಬ ರೋಮನ್‌ ಕ್ಯಾಥೊಲಿಕ್‌ ಪಾದ್ರಿಗೆ ಮುಟ್ಟುತ್ತಿದ್ದಲ್ಲಿ ಮಾತ್ರ ನಾವು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಿದ್ದೆವು. ಒಂದು ಸಂದರ್ಭದಲ್ಲಿ, ಒಬ್ಬ ಪಾದ್ರಿಯು ನಮ್ಮ ಮೇಲೆ ಟೊಮೆಟೊ ಮತ್ತು ಮೊಟ್ಟೆಗಳನ್ನು ಎಸೆಯುವಂತೆ 50 ಅಥವಾ 60 ಮಂದಿ ವಯಸ್ಕರು ಮತ್ತು ಮಕ್ಕಳಿಂದ ಕೂಡಿದ್ದ ಒಂದು ಗುಂಪನ್ನು ಪ್ರೇರಿಸಿದನು. ನಾವು ಒಬ್ಬ ಕ್ರೈಸ್ತ ಸಹೋದರಿಯ ಮನೆಯಲ್ಲಿ ಆಶ್ರಯವನ್ನು ಪಡೆದೆವು. ಮತ್ತು ನಾವು ಅಲ್ಲಿಯೇ ನೆಲದ ಮೇಲೆ ಮಲಗಿ ರಾತ್ರಿಯನ್ನು ಕಳೆಯಬೇಕಾಯಿತು.

ಕ್ವಿಬೆಕ್‌ನಲ್ಲಿದ್ದ ಫ್ರೆಂಚ್‌ ಭಾಷೆಯನ್ನಾಡುವ ಜನರಿಗೆ ಸಾರಲಿಕ್ಕಾಗಿ ಪಯನೀಯರರ ಆವಶ್ಯಕತೆ ಅತ್ಯಧಿಕವಾಗಿತ್ತು. ಆದುದರಿಂದ ಡಿಸೆಂಬರ್‌ 1958ರಲ್ಲಿ ನನ್ನ ಅಕ್ಕ ರೂಬಿ ಮತ್ತು ನಾನು ಫ್ರೆಂಚ್‌ ಭಾಷೆಯನ್ನು ಕಲಿಯಲಾರಂಭಿಸಿದೆವು. ತದನಂತರ ನಮ್ಮನ್ನು ಆ ಪ್ರಾಂತದಲ್ಲಿದ್ದ ಅನೇಕ ಫ್ರೆಂಚ್‌ ಭಾಷಾ ಕ್ಷೇತ್ರಗಳಿಗೆ ನೇಮಿಸಲಾಯಿತು. ಪ್ರತಿಯೊಂದು ನೇಮಕದಲ್ಲೂ ನಮಗೊಂದು ಅಪೂರ್ವವಾದ ಅನುಭವವಾಗುತ್ತಿತ್ತು. ಒಂದು ಸ್ಥಳದಲ್ಲಿ, ನಾವು ಎರಡು ವರ್ಷಗಳ ವರೆಗೆ, ದಿನಕ್ಕೆ ಎಂಟು ತಾಸುಗಳನ್ನು ಮನೆಯಿಂದ ಮನೆಗೆ ಹೋಗುವುದರಲ್ಲಿ ಕಳೆದೆವು. ಆದರೆ ನಮಗೆ ಒಬ್ಬರೂ ಬಾಗಿಲನ್ನು ತೆರೆಯಲಿಲ್ಲ! ಆ ಜನರು ತಮ್ಮ ಬಾಗಿಲುಗಳ ಬಳಿಗೆ ಬಂದು ಕಣ್ಣುಹಾಯಿಸಿ, ಕಿಟಕಿಗಳ ಪರದೆಗಳನ್ನು ಮುಚ್ಚಿಬಿಡುತ್ತಿದ್ದರು ಅಷ್ಟೇ. ಆದರೆ ನಾವು ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ. ಇಂದು ಆ ಪಟ್ಟಣದಲ್ಲಿ ಹುಲುಸಾಗಿ ಬೆಳೆಯುತ್ತಿರುವ ಎರಡು ಸಭೆಗಳಿವೆ.

ಪ್ರತಿಯೊಂದು ವಿಧದಲ್ಲೂ ಯೆಹೋವನಿಂದ ಪೋಷಿಸಲ್ಪಟ್ಟದ್ದು

ನಾವು 1965ರಲ್ಲಿ ವಿಶೇಷ ಪಯನೀಯರರೋಪಾದಿ ನಮ್ಮ ಕೆಲಸವನ್ನು ಆರಂಭಿಸಿದೆವು. ಒಂದು ವಿಶೇಷ ಪಯನೀಯರ್‌ ನೇಮಕದಲ್ಲಿ, ನಾವು 1 ತಿಮೊಥೆಯ 6:8ರಲ್ಲಿ ದಾಖಲಿಸಲ್ಪಟ್ಟಿರುವ “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು” ಎಂಬ ಪೌಲನ ಮಾತುಗಳ ಪೂರ್ಣ ಅರ್ಥವನ್ನು ಗ್ರಹಿಸಿದೆವು. ನಮ್ಮ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲಿಕ್ಕಾಗಿ ನಾವು ಒಂದು ಕಟ್ಟುನಿಟ್ಟಿನ ಬಜೆಟನ್ನು ಪಾಲಿಸಬೇಕಿತ್ತು. ಆದುದರಿಂದ ನಾವು ಶಾಖ, ಬಾಡಿಗೆ, ವಿದ್ಯುತ್‌ ಮತ್ತು ಆಹಾರಕ್ಕಾಗಿ ಹಣವನ್ನು ಬದಿಗಿರಿಸಿದೆವು. ಅದೆಲ್ಲವನ್ನು ಬದಿಗಿರಿಸಿದ ನಂತರ ನಮ್ಮ ಬಳಿ ಉಳಿಯುತ್ತಿದ್ದದ್ದು 25 ಸೆಂಟ್ಸ್‌ ಅಷ್ಟೇ. ಇದನ್ನೇ ನಾವು ತಿಂಗಳ ಉಳಿದ ಭಾಗದಲ್ಲಿ ನಮಗೆ ಬೇಕಾದಂತೆ ಖರ್ಚುಮಾಡಬಹುದಿತ್ತು.

ನಮ್ಮ ಬಳಿ ಸೀಮಿತ ಮೊತ್ತದ ಹಣವಿದ್ದದ್ದರಿಂದ, ನಮ್ಮ ಮನೆಯಲ್ಲಿ ರಾತ್ರಿ ಸಮಯದಲ್ಲಿ ಕೆಲವೇ ತಾಸುಗಳಿಗೆ ಮಾತ್ರ ಶಾಖವನ್ನು ಉಪಯೋಗಿಸಸಾಧ್ಯವಿತ್ತು. ಆದುದರಿಂದ ನಮ್ಮ ಮಲಗುವ ಕೋಣೆಯ ಉಷ್ಣತೆಯು ಎಂದೂ 15 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತಿರಲಿಲ್ಲ, ಮತ್ತು ಅನೇಕವೇಳೆ ಇದಕ್ಕಿಂತಲೂ ಹೆಚ್ಚು ಶೀತಲವಾಗಿರುತ್ತಿತ್ತು. ಒಂದು ದಿನ, ರೂಬಿಯ ಬೈಬಲ್‌ ವಿದ್ಯಾರ್ಥಿಯೊಬ್ಬಳ ಮಗನು ನಮ್ಮ ಮನೆಗೆ ಭೇಟಿಯಿತ್ತನು. ಅವನು ಮನೆಗೆ ಹೋಗಿ, ನಾವು ಮರಗಟ್ಟಿಸುವಂಥ ಚಳಿಯಲ್ಲಿ ವಾಸಿಸುತ್ತಿದ್ದೇವೆಂದು ತನ್ನ ತಾಯಿಗೆ ಹೇಳಿರಬೇಕು. ಏಕೆಂದರೆ ಅಂದಿನಿಂದ ಹಿಡಿದು, ಪ್ರತಿ ತಿಂಗಳು ಅವಳು ನಮಗೆ ಹತ್ತು ಡಾಲರುಗಳನ್ನು (ಮುನ್ನೂರು ರೂಪಾಯಿಗಳು) ಕಳುಹಿಸುತ್ತಿದ್ದಳು. ಇದು, ನಾವು ಶಾಖದ ಯಂತ್ರವನ್ನು ಎಲ್ಲ ಸಮಯ ಆನ್‌ ಇಡಲಿಕ್ಕಾಗಿ ಎಣ್ಣೆಯನ್ನು ಖರೀದಿಸಲಿಕ್ಕಾಗಿತ್ತು. ಯಾವುದೇ ರೀತಿಯ ಕೊರತೆ ನಮಗಿದೆ ಎಂಬ ಅನಿಸಿಕೆ ನಮಗಾಗಲಿಲ್ಲ. ನಾವು ಧನಿಕರಾಗಿರಲಿಲ್ಲ ನಿಜ, ಆದರೆ ಆವಶ್ಯಕವಾದ ವಸ್ತುಗಳು ಯಾವಾಗಲೂ ನಮ್ಮ ಬಳಿ ಇರುತ್ತಿದ್ದವು. ಆವಶ್ಯಕತೆಗಿಂತ ಹೆಚ್ಚಾಗಿದ್ದ ಯಾವುದೇ ವಸ್ತುವು ಒಂದು ಆಶೀರ್ವಾದವಾಗಿದೆ ಎಂದು ನಮಗನಿಸುತ್ತಿತ್ತು. ಕೀರ್ತನೆ 37:25ರ ಈ ಮಾತುಗಳು ಎಷ್ಟು ಸತ್ಯವಾಗಿವೆ: “ನಾನು . . . ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ”!

ವಿರೋಧದ ಎದುರಿನಲ್ಲೂ, ನಾನು ಬೈಬಲ್‌ ಅಧ್ಯಯನಗಳನ್ನು ನಡೆಸಿದಂಥ ಹಲವಾರು ಜನರು ಸತ್ಯದ ಜ್ಞಾನವನ್ನು ಪಡೆಯುವುದನ್ನು ನೋಡುವ ಆನಂದ ನನಗಿತ್ತು. ಇವರಲ್ಲಿ ಕೆಲವರು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದರು ಮತ್ತು ಇದು ನನಗೆ ವಿಶೇಷವಾದ ಆನಂದವನ್ನು ತಂದಿತ್ತು.

ಯಶಸ್ವಿಕರವಾದ ರೀತಿಯಲ್ಲಿ ಹೊಸ ಪಂಥಾಹ್ವಾನಗಳನ್ನು ಎದುರಿಸುವುದು

ಇಸವಿ 1970ರಲ್ಲಿ ಆಂಟೇರಿಯೊವಿನಲ್ಲಿರುವ ಕಾರ್ನ್‌ವಾಲ್‌ ನಮ್ಮ ಹೊಸ ನೇಮಕವಾಗಿ ಪರಿಣಮಿಸಿತು. ನಾವು ಕಾರ್ನ್‌ವಾಲ್‌ಗೆ ಬಂದು ತಲಪಿದ ಸುಮಾರು ಒಂದು ವರ್ಷದ ನಂತರ, ನಮ್ಮ ತಾಯಿ ಅಸ್ವಸ್ಥರಾದರು. ತಂದೆಯವರು 1957ರಲ್ಲೇ ಮರಣಹೊಂದಿದ್ದರು, ಮತ್ತು ನನ್ನ ಇಬ್ಬರು ಅಕ್ಕಂದಿರು ಹಾಗೂ ನಾನು, ನಮ್ಮ ತಾಯಿ 1972ರಲ್ಲಿ ಸಾಯುವ ವರೆಗೂ ಸರದಿಗನುಸಾರ ಅವರ ಆರೈಕೆ ಮಾಡಿದೆವು. ನಮ್ಮ ವಿಶೇಷ ಪಯನೀಯರ್‌ ಸಂಗಾತಿಗಳಾಗಿದ್ದ ಎಲಾ ಲಿಸಿಟ್ಸಾ ಹಾಗೂ ಆ್ಯನ್‌ ಕೊವಾಲೆಂಕೊ ಅವರು, ಈ ಸಮಯದಲ್ಲಿ ನಮ್ಮ ಮೇಲೆ ಸ್ಥಿರಗೊಳಿಸುವ ಪ್ರಭಾವವನ್ನು ಬೀರಿದರು ಮತ್ತು ಪ್ರೀತಿಪರವಾದ ಬೆಂಬಲವನ್ನು ಕೊಟ್ಟರು. ನಾವು ಇಲ್ಲದಿದ್ದ ಸಮಯದಲ್ಲಿ ಅವರು ನಮ್ಮ ಬೈಬಲ್‌ ಅಧ್ಯಯನಗಳನ್ನು ನಡೆಸಿದರು ಮತ್ತು ಇತರ ಜವಾಬ್ದಾರಿಗಳನ್ನು ನಿರ್ವಹಿಸಿದರು. “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” ಎಂಬ ಜ್ಞಾನೋಕ್ತಿ 18:24ರ ಮಾತುಗಳು ಎಷ್ಟು ಸತ್ಯವಾಗಿವೆ!

ಜೀವನವು ಖಂಡಿತವಾಗಿಯೂ ಪಂಥಾಹ್ವಾನಗಳಿಂದ ತುಂಬಿರುತ್ತದೆ. ಯೆಹೋವನ ಪ್ರೀತಿಯ ಬೆಂಬಲದ ಹಸ್ತದಿಂದಾಗಿ ನಾನು ಅವುಗಳನ್ನು ಎದುರಿಸಲು ಶಕ್ತಳಾಗಿದ್ದೇನೆ. ನಾನು ಈಗಲೂ ಆನಂದದಿಂದ ಪೂರ್ಣ ಸಮಯದ ಸೇವೆಯ ಜೀವನವನ್ನು ಬೆನ್ನಟ್ಟುತ್ತಿದ್ದೇನೆ. 1993ರಲ್ಲಿ ಮರಣಹೊಂದಿದ ಬಾಬ್‌, ಪಯನೀಯರ್‌ ಕೆಲಸದಲ್ಲಿ 20ಕ್ಕಿಂತಲೂ ಹೆಚ್ಚು ವರ್ಷಗಳನ್ನು ಕಳೆದನು. ಇದರಲ್ಲಿ ಅವನು ತನ್ನ ಪತ್ನಿ ಡಾಲ್‌ಳೊಂದಿಗೆ ಪಯನೀಯರ್‌ ಸೇವೆಯಲ್ಲಿ ಕಳೆದಂಥ 10 ಅಮೂಲ್ಯ ವರ್ಷಗಳೂ ಸೇರಿದ್ದವು. 1998ರ ಅಕ್ಟೋಬರ್‌ ತಿಂಗಳಿನಲ್ಲಿ ಮರಣಹೊಂದಿದ ನನ್ನ ಹಿರಿಯಕ್ಕ ಎಲಾ, 30ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಪಯನೀಯರ್‌ ಸೇವೆಯನ್ನು ಮಾಡಿದಳು ಮತ್ತು ಯಾವಾಗಲೂ ಪಯನೀಯರ್‌ ಆತ್ಮವನ್ನು ಕಾಪಾಡಿಕೊಂಡಿದ್ದಳು. 1991ರಲ್ಲಿ ನನ್ನ ಇನ್ನೊಬ್ಬ ಅಕ್ಕ ರೂಬಿಗೆ ಕ್ಯಾನ್ಸರ್‌ ರೋಗ ಇರುವುದಾಗಿ ತಿಳಿದುಬಂತು. ಆದರೂ ಅವಳು ಸುವಾರ್ತೆಯನ್ನು ಸಾರಲಿಕ್ಕಾಗಿ ತನ್ನ ಸೀಮಿತ ಬಲವನ್ನು ಉಪಯೋಗಿಸಿದಳು. 1999ರ ಸೆಪ್ಟೆಂಬರ್‌ 26ರ ಬೆಳಗ್ಗೆ ಸಾಯುವ ವರೆಗೂ ಅವಳಲ್ಲಿ ಹಾಸ್ಯ ಪ್ರಜ್ಞೆಯಿತ್ತು. ನನಗೀಗ ನನ್ನ ಅಕ್ಕಂದಿರು ಇಲ್ಲದಿರುವುದಾದರೂ, ನಾನು ಯಾವಾಗಲೂ ಹಾಸ್ಯ ಪ್ರಜ್ಞೆಯುಳ್ಳವಳಾಗಿರುವಂತೆ ನನಗೆ ಸಹಾಯಮಾಡುವ ಸಹೋದರ ಸಹೋದರಿಯರುಳ್ಳ ಒಂದು ಆತ್ಮಿಕ ಕುಟುಂಬವಿದೆ.

ನನ್ನ ಬದುಕನ್ನು ನಾನು ಹಿಂದಿರುಗಿ ನೋಡುವಾಗ, ನಾನೇನನ್ನು ಬದಲಾಯಿಸುವೆ? ನನಗೆಂದೂ ಮದುವೆಯಾಗಲಿಲ್ಲ, ಆದರೆ ಸತ್ಯವನ್ನು ತಮ್ಮ ಜೀವಿತಗಳಲ್ಲಿ ಪ್ರಥಮವಾಗಿಟ್ಟ ಪ್ರೀತಿಪರ ಹೆತ್ತವರು, ಒಬ್ಬ ಅಣ್ಣ ಮತ್ತು ಅಕ್ಕಂದಿರೊಂದಿಗೆ ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ನಾನು ಅತಿ ಬೇಗನೆ ಅವರೆಲ್ಲರನ್ನೂ ಪುನರುತ್ಥಾನದಲ್ಲಿ ನೋಡಲು ಕಾಯುತ್ತಿದ್ದೇನೆ. ಆ ನಿರೀಕ್ಷೆ ನನಗೆ ಎಷ್ಟು ನೈಜವಾಗಿದೆಯೆಂದರೆ, ನನ್ನ ತಂದೆ ನನ್ನನ್ನು ತಬ್ಬಿಕೊಳ್ಳುತ್ತಿರುವ ಅನಿಸಿಕೆ ಈಗಲೇ ನನಗಾಗುತ್ತದೆ ಮತ್ತು ನನ್ನ ತಾಯಿ ಹಾಗೂ ನಾನು ಪರಸ್ಪರ ಅಪ್ಪಿಕೊಳ್ಳುವಾಗ ಅವರ ಕಣ್ಣುಗಳಲ್ಲಿನ ಕಂಬನಿಗಳನ್ನು ನೋಡಬಲ್ಲೆ. ಎಲಾ, ರೂಬಿ ಮತ್ತು ಬಾಬ್‌ ಸಂತೋಷದಿಂದ ಕುಣಿದಾಡುತ್ತಿರುವರು.

ಅಷ್ಟರ ವರೆಗೆ, ನನ್ನ ಬಳಿ ಉಳಿದಿರುವ ಅಲ್ಪಸ್ವಲ್ಪ ಆರೋಗ್ಯ ಮತ್ತು ಶಕ್ತಿಯನ್ನು ಯೆಹೋವನ ಸ್ತುತಿ ಹಾಗೂ ಗೌರವಕ್ಕಾಗಿ ಉಪಯೋಗಿಸುವುದನ್ನು ಮುಂದುವರಿಸುವ ಉದ್ದೇಶ ನನಗಿದೆ. ಪೂರ್ಣ ಸಮಯದ ಪಯನೀಯರ್‌ ಸೇವೆಯು ಅದ್ಭುತಕರವಾದ, ಪ್ರತಿಫಲದಾಯಕ ಜೀವನವಾಗಿದೆ. ಅದು, ಯೆಹೋವನ ಮಾರ್ಗಗಳಲ್ಲಿ ನಡೆಯುವವರ ಬಗ್ಗೆ ಕೀರ್ತನೆಗಾರನು ಹೇಳಿದಂತೆಯೇ ಇದೆ: “ನೀನು ಧನ್ಯನು, ನಿನಗೆ ಶುಭವಿರುವದು.”​—ಕೀರ್ತನೆ 128:1, 2.

[ಪುಟ 26ರಲ್ಲಿರುವ ಚಿತ್ರಗಳು]

ತಂದೆಯವರು ಬೈಬಲನ್ನು ಪ್ರೀತಿಸುತ್ತಿದ್ದರು. ನಮ್ಮ ನಂಬಿಕೆಯನ್ನು ಸಮರ್ಥಿಸಲಿಕ್ಕಾಗಿ ಅದನ್ನು ಉಪಯೋಗಿಸುವುದನ್ನು ಅವರು ನಮಗೆ ಕಲಿಸಿದರು

[ಪುಟ 28ರಲ್ಲಿರುವ ಚಿತ್ರ]

ಎಡದಿಂದ ಬಲಬದಿ: 1947ರಲ್ಲಿ ರೂಬಿ, ನಾನು, ಬಾಬ್‌, ಎಲಾ, ಅಮ್ಮ ಮತ್ತು ಅಪ್ಪ

[ಪುಟ 28ರಲ್ಲಿರುವ ಚಿತ್ರ]

ಮುಂದಿನ ಸಾಲಿನಲ್ಲಿ, ಎಡದಿಂದ ಬಲಕ್ಕೆ: ನಾನು, ರೂಬಿ, ಮತ್ತು ಎಲಾ 1998ರ ಒಂದು ಜಿಲ್ಲಾ ಅಧಿವೇಶನದಲ್ಲಿ