ನೆರೆಯವರೆಲ್ಲಾ ಏನಾದರು?
ನೆರೆಯವರೆಲ್ಲಾ ಏನಾದರು?
“ಆಧುನಿಕ ಸಮಾಜವು ನೆರೆಯವರನ್ನು ಅಂಗೀಕರಿಸುವುದಿಲ್ಲ.”—ಬೆಂಜಮಿನ್ ಡಿಸ್ರೇಲಿ, 19ನೆಯ ಶತಮಾನದ ಇಂಗ್ಲಿಷ್ ರಾಜ್ಯ ನೀತಿಜ್ಞ.
ಕ್ಯುಬದ ವೃದ್ಧರು, ಹಿತಕ್ಷೇಮವನ್ನು ಪ್ರವರ್ಧಿಸಲಿಕ್ಕಾಗಿ ಒಂದು ಅಸಾಧಾರಣವಾದ ಯೋಜನೆಯನ್ನು ಮಾಡಿಕೊಂಡಿದ್ದಾರೆ: ನೆರೆಹೊರೆಯ ಜಾಲಗಳು, ಅಥವಾ ಅಜ್ಜಅಜ್ಜಿಯರ ಗುಂಪುಗಳು ಎಂದು ಅವರು ಅದನ್ನು ಕರೆಯುತ್ತಾರೆ. 1997ರ ಒಂದು ವರದಿಗನುಸಾರ, ಕ್ಯುಬದ ಸುಮಾರು 5 ಮಂದಿ ವೃದ್ಧರಲ್ಲಿ ಒಬ್ಬರು ಅಂಥ ಗುಂಪುಗಳಿಗೆ ಸೇರಿದವರಾಗಿರುತ್ತಾರೆ. ಆ ಗುಂಪುಗಳಲ್ಲಿ ಅವರು ಸಾಂಗತ್ಯವನ್ನೂ ಬೆಂಬಲವನ್ನೂ ಆರೋಗ್ಯಕರವಾದ ಜೀವನ ಶೈಲಿಯನ್ನೂ ಕಾಪಾಡಿಕೊಳ್ಳುವುದರಲ್ಲಿ ಬೇಕಾಗಿರುವ ಪ್ರಾಯೋಗಿಕ ನೆರವನ್ನು ಕಂಡುಕೊಳ್ಳುತ್ತಾರೆ. ಲೋಕ ಆರೋಗ್ಯ (ಇಂಗ್ಲಿಷ್) ಪತ್ರಿಕೆಯು ಹೀಗೆ ಹೇಳುತ್ತದೆ: “ಲಸಿಕೆಯನ್ನು ನೀಡುವ ಕಾರ್ಯಾಚರಣೆಯಲ್ಲಿ ನೆರೆಹೊರೆಯ ಕುಟುಂಬದ ವೈದ್ಯರಿಗೆ ಸಹಾಯವು ಬೇಕಾದಾಗಲೆಲ್ಲ, ಅಜ್ಜಅಜ್ಜಿಯರ ಗುಂಪಿನಲ್ಲೇ ಅವರು ಮನಃಪೂರ್ವಕವಾದ ಹಾಗೂ ದಕ್ಷ ಸಹಾಯಕರನ್ನು ಕಂಡುಕೊಳ್ಳುತ್ತಾರೆ.”
ಆದರೂ ಲೋಕದ ಅನೇಕ ಭಾಗಗಳಲ್ಲಿ, ನೆರೆಹೊರೆಯವರಲ್ಲಿ ಅಂಥ ಕಾಳಜಿ ವಹಿಸುವ ಸಮುದಾಯಗಳು ಕಾಣೆಯಾಗುತ್ತಿವೆ. ವೂಲ್ಫ್‌ಗ್ಯಾಂಗ್ ಡರ್ಕ್ಸ್‌ನ ದುರಂತಕರ ಉದಾಹರಣೆಯನ್ನು ಪರಿಗಣಿಸಿರಿ. ಅವನು ಪಶ್ಚಿಮ ಯೂರೋಪಿನ ಒಂದು ಬಹುಮಹಡಿ ಕಟ್ಟಡದಲ್ಲಿ ವಾಸಿಸುತ್ತಿದ್ದನು. ದ ಕ್ಯಾನ್‌ಬೆರ ಟೈಮ್ಸ್ ಕೆಲವು ವರ್ಷಗಳ ಹಿಂದೆ ವರದಿಸಿದ್ದೇನೆಂದರೆ, ವೂಲ್ಫ್‌ಗ್ಯಾಂಗ್ ವಾಸಿಸುತ್ತಿದ್ದ ಬಹುಮಹಡಿ ಕಟ್ಟಡದಲ್ಲೇ ವಾಸಿಸುತ್ತಿದ್ದ 17 ಕುಟುಂಬಗಳವರು ಅವನ ಅನುಪಸ್ಥಿತಿಯನ್ನು ಗಮನಿಸಿದ್ದರಾದರೂ, “ಅವರಲ್ಲಿ ಯಾರೊಬ್ಬರೂ ಅವನ ಮನೆಯ ಕರೆಗಂಟೆಯನ್ನು ಬಾರಿಸುವ ಗೋಜಿಗೆ ಹೋಗಲಿಲ್ಲ.” ಕೊನೆಗೂ ಅಲ್ಲಿನ ಅಪಾರ್ಟ್‌ಮೆಂಟ್‌ನ ಯಜಮಾನನು ಅಲ್ಲಿಗೆ ಬಂದಾಗ, “ಟೆಲಿವಿಷನ್ ಸೆಟ್ ಮುಂದೆ ಕುಳಿತುಕೊಂಡಿದ್ದ ಒಂದು ಅಸ್ಥಿಪಂಜರವನ್ನು ನೋಡಿದನು.” ಆ ಅಸ್ಥಿಪಂಜರದ ತೊಡೆಯ ಮೇಲೆ, 1993, ಡಿಸೆಂಬರ್ 5ರ ತಾರೀಖಿರುವ ಟೆಲಿವಿಷನ್ ಕಾರ್ಯಕ್ರಮದ ಪಟ್ಟಿಯು ತೆರೆದಿಡಲ್ಪಟ್ಟಿತ್ತು. ವೂಲ್ಫ್‌ಗ್ಯಾಂಗ್ ಸುಮಾರು ಐದು ವರ್ಷಗಳಿಗೆ ಮುಂಚೆಯೇ ಅಲ್ಲಿ ಕೊನೆಯುಸಿರೆಳೆದಿದ್ದನು. ನೆರೆಹೊರೆಯವರ ನಡುವಿನ ಆಸಕ್ತಿ ಹಾಗೂ ಕಾಳಜಿ ಕಣ್ಮರೆಯಾಗುತ್ತಿದೆ ಎಂಬುದಕ್ಕೆ ಎಂಥ ದುಃಖಭರಿತ ಪುರಾವೆ! ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸಿನ್‌ನಲ್ಲಿ ಒಬ್ಬ ಪ್ರಬಂಧಕಾರನು, ತನ್ನ ನೆರೆಹೊರೆಯು ಇನ್ನಿತರ ಅನೇಕ ನೆರೆಹೊರೆಗಳಂತೆ “ಅಪರಿಚಿತರ ಒಂದು ಸಮುದಾಯವಾಗಿ” ಪರಿಣಮಿಸಿತ್ತು ಎಂದು ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ. ನಿಮ್ಮ ನೆರೆಹೊರೆಯ ವಿಷಯದಲ್ಲಿಯೂ ಇದು ಸತ್ಯವಾಗಿದೆಯೋ?
ಕೆಲವು ಗ್ರಾಮೀಣ ಸಮುದಾಯಗಳು ಈಗಲೂ ನೆರೆಹೊರೆಯಲ್ಲಿ ನಿಜವಾದ ಸ್ನೇಹವನ್ನು ಆನಂದಿಸುತ್ತವೆ ಮತ್ತು ಪಟ್ಟಣದ ಕೆಲವು ಸಮುದಾಯಗಳು ನೆರೆಯವರ ವಿಷಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಲಿಕ್ಕಾಗಿ ಹೆಣಗಾಡುತ್ತಿವೆ ಎಂಬುದೇನೋ ನಿಜ. ಆದರೂ, ಅನೇಕ ನಗರವಾಸಿಗಳಿಗೆ, ತಮ್ಮ ಸ್ವಂತ ನೆರೆಹೊರೆಯಲ್ಲಿ ತಾವು ಒಂಟಿಯಾಗಿದ್ದೇವೆ ಮತ್ತು ಸುಲಭವಾಗಿ ಆಕ್ರಮಣಕ್ಕೆ ಒಳಗಾಗುವಂತಿದ್ದೇವೆ ಎಂಬ ಅನಿಸಿಕೆಯಾಗುತ್ತದೆ. ಅವರು ಅನಾಮಕತ್ವದ ಗೋಡೆಗಳ ಹಿಂದೆ ಪ್ರತ್ಯೇಕಿಸಲ್ಪಟ್ಟಿದ್ದಾರೆ. ಹೇಗೆ?
ಅನಾಮಕತ್ವದ ಗೋಡೆಗಳ ಹಿಂದೆ
ನಮ್ಮಲ್ಲಿ ಹೆಚ್ಚಿನವರ ನೆರೆಯವರು ತೀರ ಹತ್ತಿರದಲ್ಲೇ ವಾಸಿಸುತ್ತಿರುತ್ತಾರೆ ಎಂಬುದೇನೋ ನಿಜ. ಟೆಲಿವಿಷನ್‌ನ ಮಿನುಗುತ್ತಿರುವ ಬೆಳಕು, ಕಿಟಕಿಯ ಬಳಿ ಚಲಿಸುತ್ತಿರುವ ನೆರಳುಗಳು, ಲೈಟ್‌ಗಳು ಹಾಕಲ್ಪಡುತ್ತಿರುವುದು ಹಾಗೂ ಆರಿಸಲ್ಪಡುತ್ತಿರುವುದು, ಬರುತ್ತಿರುವ ಮತ್ತು ಹೋಗುತ್ತಿರುವ ಕಾರುಗಳ ಶಬ್ದ, ಕಟ್ಟಡದ ಕೈಸಾಲೆಯಲ್ಲಿ ಕೇಳಿಬರುವ ಹೆಜ್ಜೆಸಪ್ಪಳಗಳು, ಕೀಲಿ ಕೈಗಳಿಂದ ಬಾಗಿಲುಗಳನ್ನು ತೆಗೆಯುತ್ತಿರುವ ಹಾಗೂ ಹಾಕುತ್ತಿರುವ ಶಬ್ದ—ಇವೆಲ್ಲವೂ ನೆರೆಹೊರೆಯವರು “ಜೀವಂತ”ರಾಗಿದ್ದಾರೆ ಎಂಬುದರ ಸೂಚನೆಗಳಾಗಿವೆ. ಆದರೂ, ಅಕ್ಕಪಕ್ಕದಲ್ಲೇ ಜೀವಿಸುತ್ತಿರುವ ಜನರು ಅನಾಮಕತ್ವದ ಗೋಡೆಗಳ ಹಿಂದೆ ಬಚ್ಚಿಕೊಂಡಿರುವಾಗ ಅಥವಾ ತೀವ್ರಗತಿಯ ಚಟುವಟಿಕೆಯಿಂದ ಕೂಡಿದ ಜೀವನ ಶೈಲಿಯನ್ನು ಬೆನ್ನಟ್ಟುವ ಆತುರದಲ್ಲಿ ಒಬ್ಬರು ಇನ್ನೊಬ್ಬರನ್ನು ಅಲಕ್ಷಿಸುವಾಗ, ನಿಜವಾದ ನೆರೆಹೊರೆಯ ಸ್ನೇಹಭಾವವು ಮಾಯವಾಗಿಹೋಗುತ್ತದೆ. ನೆರೆಯವರ ವ್ಯವಹಾರದಲ್ಲಿ ತಲೆಹಾಕುವ ಅಗತ್ಯವಿಲ್ಲ ಅಥವಾ ಯಾವುದೇ ರೀತಿಯಲ್ಲಿ ಅವರ ಹಂಗಿಗೆ ಒಳಗಾಗುವುದು ಬೇಡ ಎಂದು ಜನರಿಗೆ ಅನಿಸಬಹುದು. ಹೆರಲ್ಡ್ ಸನ್ ಎಂಬ ಆಸ್ಟ್ರೇಲಿಯದ ವಾರ್ತಾಪತ್ರಿಕೆಯು ಒಪ್ಪಿಕೊಳ್ಳುವುದು: “ಅನೇಕ ವ್ಯಕ್ತಿಗಳು ತಮ್ಮ ಸ್ವಂತ ನೆರೆಹೊರೆಯಲ್ಲೇ ಹೆಚ್ಚು ಅನಾಮಿಕರಾಗಿರುತ್ತಾರೆ, ಮತ್ತು ಅಂಥವರು ಸಾಮಾಜಿಕ ಹಂಗಿನ ಬಂಧಗಳ ನಿರ್ಬಂಧಕ್ಕೆ ಒಳಗಾಗುವುದು ತೀರ ಕಡಿಮೆ. ಸಾಮಾಜಿಕವಾಗಿ ಆಕರ್ಷಕರಾಗಿರದಂಥ ವ್ಯಕ್ತಿಗಳನ್ನು ಅಲಕ್ಷಿಸುವುದು ಅಥವಾ ಸಮಾಜದಿಂದ ಬಹಿಷ್ಕರಿಸುವುದು ಈಗ ತುಂಬ ಸುಲಭವಾಗಿದೆ.”
ಪರಿಸ್ಥಿತಿಯು ಈ ಮಟ್ಟಕ್ಕೆ ಇಳಿದಿರುವುದು ಆಶ್ಚರ್ಯಕರವೇನಲ್ಲ. ಜನರು “ಸ್ವಾರ್ಥಚಿಂತಕ”ರಾಗಿರುವಂಥ ಒಂದು ಲೋಕದಲ್ಲಿ, ನೆರೆಹೊರೆಯವರು ಅಂಥ ವ್ಯಕ್ತಿಗಳ ಸ್ವವಿಚಾರಾಸಕ್ತ ಜೀವನ ಶೈಲಿಯ ಪರಿಣಾಮಗಳನ್ನು ಕೊಯ್ಯುತ್ತಿದ್ದಾರೆ. (2 ತಿಮೊಥೆಯ 3:2) ಇದರ ಫಲಿತಾಂಶವೇ ವ್ಯಾಪಕವಾದ ಒಂಟಿತನ ಹಾಗೂ ವಿಮುಖತೆಯಾಗಿದೆ. ವಿಶೇಷವಾಗಿ ಹಿಂಸಾಚಾರ ಮತ್ತು ದುಷ್ಕೃತ್ಯವು ನೆರೆಹೊರೆಯಲ್ಲಿ ಸತತವಾದ ಬೆದರಿಕೆಯನ್ನೊಡ್ಡುವಾಗ, ಈ ವಿಮುಖತೆಯು ಅಪನಂಬಿಕೆಯನ್ನು ಹುಟ್ಟಿಸುತ್ತದೆ. ಇದರ ಫಲಿತಾಂಶವಾಗಿ, ಈ ಅಪನಂಬಿಕೆಯು ಮಾನವ ಸಹಾನುಭೂತಿಯನ್ನು ಜಡಗೊಳಿಸುತ್ತದೆ.
ನಿಮ್ಮ ನೆರೆಹೊರೆಯಲ್ಲಿ ಸನ್ನಿವೇಶವು ಹೇಗೇ ಇರಲಿ, ಒಳ್ಳೇ ನೆರೆಯವರು ಒಂದು ಸಮುದಾಯಕ್ಕೆ ಉಪಯುಕ್ತರು ಎಂಬುದನ್ನು ನೀವು ಒಪ್ಪಿಕೊಳ್ಳುವಿರಿ ಎಂಬುದರಲ್ಲಿ ಸಂದೇಹವೇ ಇಲ್ಲ. ಒಂದು ಸಮಾನ ಗುರಿಯನ್ನು ಪೂರೈಸುವುದಕ್ಕಾಗಿ ಜನರು ಒಟ್ಟಿಗೆ ಕಾರ್ಯನಡಿಸುವಾಗ, ಬಹಳಷ್ಟನ್ನು ಸಾಧಿಸಸಾಧ್ಯವಿದೆ. ಒಳ್ಳೇ ನೆರೆಯವರಿರುವುದು ಆಶೀರ್ವಾದವಾಗಿರಸಾಧ್ಯವಿದೆ. ಇದು ಹೇಗೆಂಬುದನ್ನು ಮುಂದಿನ ಲೇಖನವು ತೋರಿಸುವುದು.