ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರೀಕ್ಷೆಗಳ ಕುರಿತು ನಮ್ಮ ದೃಷ್ಟಿಕೋನ ಏನಾಗಿರಬೇಕು?

ಪರೀಕ್ಷೆಗಳ ಕುರಿತು ನಮ್ಮ ದೃಷ್ಟಿಕೋನ ಏನಾಗಿರಬೇಕು?

ಪರೀಕ್ಷೆಗಳ ಕುರಿತು ನಮ್ಮ ದೃಷ್ಟಿಕೋನ ಏನಾಗಿರಬೇಕು?

ಪರೀಕ್ಷೆಗಳು! ಎಲ್ಲರೂ ಇವುಗಳನ್ನು ಎದುರಿಸಲೇಬೇಕು. ವ್ಯಕ್ತಿತ್ವದ ಸಂಘರ್ಷಗಳು, ಆರ್ಥಿಕ ಮುಗ್ಗಟ್ಟು, ಅಸ್ವಸ್ಥತೆ, ಪ್ರಲೋಭನಗಳು, ತಪ್ಪನ್ನು ಮಾಡಲಿಕ್ಕಾಗಿರುವ ಸಮಾನಸ್ಥರ ಒತ್ತಡ, ಹಿಂಸೆ, ತಟಸ್ಥತೆ ಇಲ್ಲವೆ ವಿಗ್ರಹಾರಾಧನೆಯ ವಿರುದ್ಧ ನಾವು ತೆಗೆದುಕೊಂಡಿರುವ ನಿಲುವಿಗೆ ಪಂಥಾಹ್ವಾನಗಳು ಮತ್ತು ಇನ್ನೂ ಅನೇಕ ಪರೀಕ್ಷೆಗಳು ಬರಬಲ್ಲವು. ಪರೀಕ್ಷೆಗಳು ಯಾವುದೇ ರೂಪದಲ್ಲಿ ಬರಲಿ, ಅವು ತುಂಬ ವ್ಯಾಕುಲತೆಯನ್ನು ಉಂಟುಮಾಡುತ್ತವೆ ಎಂಬುದಂತೂ ಖಂಡಿತ. ನಾವು ಅವುಗಳನ್ನು ಹೇಗೆ ಯಶಸ್ವಿಕರವಾಗಿ ನಿಭಾಯಿಸಸಾಧ್ಯವಿದೆ? ಯಾವುದೇ ರೀತಿಯಲ್ಲಿ ಅವು ನಮಗೆ ಪ್ರಯೋಜನಕರವಾಗಿವೆಯೋ?

ಅತ್ಯುತ್ತಮ ಬೆಂಬಲ

ಪ್ರಾಚೀನ ಕಾಲದ ರಾಜ ದಾವೀದನು ಜೀವಮಾನವಿಡೀ ಪರೀಕ್ಷೆಗಳನ್ನು ಅನುಭವಿಸಿದನು. ಆದರೂ ಅವನು ನಂಬಿಗಸ್ತನಾಗಿ ಸತ್ತನು. ಅವನು ತಾಳಿಕೊಳ್ಳಲು ಶಕ್ತನಾದದ್ದು ಹೇಗೆ? ತನ್ನ ಬಲದ ಮೂಲದ ಕಡೆಗೆ ಕೈತೋರಿಸುತ್ತಾ ಅವನು ಹೇಳಿದ್ದು: “ಯೆಹೋವನು ನನಗೆ ಕುರುಬನು; ಕೊರತೆ ಪಡೆನು.” ಅನಂತರ ಅವನು ಮುಂದುವರಿಸುತ್ತಾ ಹೇಳಿದ್ದು: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯಕೊಡುತ್ತವೆ.” (ಕೀರ್ತನೆ 23:1, 4) ಹೌದು, ಯೆಹೋವನು ಅಪಾರ ಬೆಂಬಲದ ಮೂಲನಾಗಿದ್ದಾನೆ. ತೀರ ಒತ್ತಡಭರಿತ ಸಮಯಗಳಲ್ಲಿ ಆತನು ದಾವೀದನನ್ನು ನಡೆಸಿದನು, ಮತ್ತು ಅಗತ್ಯವಿರುವಾಗಲೆಲ್ಲ ನಮಗೂ ಅದನ್ನೇ ಮಾಡಲು ಆತನು ಸಿದ್ಧನಿದ್ದಾನೆ.

ನಾವು ಯೆಹೋವನ ಬೆಂಬಲವನ್ನು ಹೇಗೆ ಪಡೆಯಬಲ್ಲೆವು? “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ” ಎಂದು ಬೈಬಲು ಹೇಳುವಾಗ, ಅದು ನಮಗೆ ಆ ವಿಧವನ್ನು ತೋರಿಸುತ್ತದೆ. (ಕೀರ್ತನೆ 34:8) ಅದೊಂದು ಹೃತ್ಪೂರ್ವಕ ಆಮಂತ್ರಣವಾಗಿದೆ. ಆದರೆ ಅದರ ಅರ್ಥವೇನು? ಅದು, ಯೆಹೋವನ ಸೇವೆಮಾಡಿ, ನಮ್ಮ ಜೀವಿತಗಳನ್ನು ಆತನ ಚಿತ್ತಕ್ಕೆ ಪೂರ್ಣವಾಗಿ ಹೊಂದಿಸಿಕೊಳ್ಳಲಿಕ್ಕಾಗಿರುವ ಒಂದು ಉತ್ತೇಜನವಾಗಿದೆ. ಅಂಥ ಮಾರ್ಗಕ್ರಮವನ್ನು ಅನುಸರಿಸುವುದು, ನಾವು ನಮ್ಮ ಸ್ವಾತಂತ್ರ್ಯವನ್ನು ಬಿಟ್ಟುಕೊಡುತ್ತಾ, ಕೆಲವೊಂದು ತ್ಯಾಗಗಳನ್ನು ಮಾಡುವುದನ್ನು ಅರ್ಥೈಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ, ಅದು ಪರೀಕ್ಷೆಗಳಿಗೂ, ಅಂದರೆ ಹಿಂಸೆ ಮತ್ತು ನರಳಾಟಕ್ಕೂ ನಡಿಸಬಲ್ಲದು. ಹಾಗಿದ್ದರೂ, ಯೆಹೋವನ ಆಮಂತ್ರಣವನ್ನು ಪೂರ್ಣಹೃದಯದಿಂದ ಸ್ವೀಕರಿಸುವವರು, ಹಾಗೆ ಮಾಡಿದ್ದಕ್ಕಾಗಿ ಎಂದೂ ವಿಷಾದಪಡಬೇಕಾಗಿಲ್ಲ. ಯೆಹೋವನು ಅವರಿಗೆ ತುಂಬ ಒಳಿತನ್ನು ಮಾಡುವನು. ಆತನು ಅವರನ್ನು ಆತ್ಮಿಕವಾಗಿ ಮಾರ್ಗದರ್ಶಿಸಿ, ಅವರ ಆರೈಕೆಮಾಡುವನು. ತನ್ನ ವಾಕ್ಯ, ತನ್ನ ಪವಿತ್ರಾತ್ಮ ಮತ್ತು ಕ್ರೈಸ್ತ ಸಭೆಯ ಮೂಲಕ ಆತನು ಅವರನ್ನು ಪರೀಕ್ಷೆಗಳ ಸಮಯದಲ್ಲೂ ಪೋಷಿಸುವನು. ಮತ್ತು ಕಟ್ಟಕಡೆಗೆ ಆತನು ಅವರಿಗೆ ನಿತ್ಯಜೀವದ ಪ್ರತಿಫಲವನ್ನು ಕೊಡುವನು.​—ಕೀರ್ತನೆ 23:6; 25:9; ಯೆಶಾಯ 30:21; ರೋಮಾಪುರ 15:5.

ಯೆಹೋವನ ಸೇವೆಮಾಡುವೆವು ಎಂಬ, ಬದುಕನ್ನೇ ಬದಲಾಯಿಸುವಂಥ ನಿರ್ಣಯವನ್ನು ಮಾಡಿ, ಆ ನಿರ್ಣಯಕ್ಕೆ ಬಲವಾಗಿ ಅಂಟಿಕೊಳ್ಳುವವರು, ಯೆಹೋವನು ತನ್ನ ಎಲ್ಲ ವಾಗ್ದಾನಗಳನ್ನು ಪೂರೈಸುತ್ತಾನೆಂಬುದನ್ನು ಕಂಡುಕೊಳ್ಳುತ್ತಾರೆ. ಯೆಹೋಶುವನನ್ನು ಹಿಂಬಾಲಿಸಿ ವಾಗ್ದತ್ತ ದೇಶವನ್ನು ಪ್ರವೇಶಿಸಿದಂಥ ಇಸ್ರಾಯೇಲ್ಯರ ಅನುಭವವು ಇದೇ ಆಗಿತ್ತು. ಒಮ್ಮೆ ಅವರು ಯೊರ್ದನ್‌ ಹೊಳೆಯನ್ನು ದಾಟಿದ ಬಳಿಕ, ಅವರು ಪರೀಕ್ಷೆಗಳನ್ನು ತಾಳಿಕೊಳ್ಳಬೇಕಾಗಿತ್ತು, ಹೋರಾಟಗಳನ್ನು ನಡೆಸಬೇಕಾಗಿತ್ತು ಮತ್ತು ಕಠಿನ ರೀತಿಯ ಪಾಠಗಳನ್ನು ಕಲಿಯಬೇಕಾಗಿತ್ತು. ಆದರೆ ಆ ತಲೆಮಾರಿನವರು, ಐಗುಪ್ತದಿಂದ ಹೊರಬಂದು ಅರಣ್ಯದಲ್ಲಿ ಮೃತಪಟ್ಟ ತಮ್ಮ ಪೂರ್ವಜರಿಗಿಂತಲೂ ಹೆಚ್ಚು ನಂಬಿಗಸ್ತರಾಗಿ ರುಜುವಾದರು. ಆದುದರಿಂದಲೇ ಯೆಹೋವನು ನಂಬಿಗಸ್ತರನ್ನು ಬೆಂಬಲಿಸಿದನು ಮತ್ತು ಯೆಹೋಶುವನ ಜೀವನದ ಅಂತ್ಯದಲ್ಲಿ ಅವರ ಸ್ಥಿತಿಯೇನಾಗಿತ್ತು ಎಂಬುದರ ಬಗ್ಗೆ ಬೈಬಲ್‌ ದಾಖಲೆಯು ಹೀಗನ್ನುತ್ತದೆ: “ಯೆಹೋವನು ಅವರ ಪೂರ್ವಿಕರಿಗೆ ಆಣೆಯಿಟ್ಟು ಹೇಳಿದಂತೆ ಅವರಿಗೆ ಎಲ್ಲಾ ಕಡೆಯಲ್ಲಿಯೂ ಸಮಾಧಾನ ಕೊಟ್ಟನು. . . . ಆತನು ಇಸ್ರಾಯೇಲ್ಯರಿಗೆ ಮಾಡಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲಾ ನೆರವೇರಿದವು.” (ಯೆಹೋಶುವ 21:44, 45) ಪರೀಕ್ಷೆಯ ಸಮಯದಲ್ಲಿ ಮತ್ತು ಬೇರೆ ಸಮಯಗಳಲ್ಲೂ ನಾವು ಯೆಹೋವನ ಮೇಲೆ ಪೂರ್ಣವಾಗಿ ಆತುಕೊಳ್ಳುವಲ್ಲಿ, ಇದು ನಮ್ಮ ಅನುಭವವೂ ಆಗಿರಬಲ್ಲದು.

ಯೆಹೋವನಲ್ಲಿನ ನಮ್ಮ ದೃಢಭರವಸೆಯನ್ನು ಯಾವುದು ದುರ್ಬಲಗೊಳಿಸಬಲ್ಲದು? ಒಂದು ವಿಷಯವನ್ನು ಸೂಚಿಸುತ್ತಾ ಯೇಸು ಹೀಗೆ ಹೇಳಿದನು: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. . . . ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.” (ಮತ್ತಾಯ 6:24) ನಾವು ಯೆಹೋವನಲ್ಲಿ ಭರವಸೆಯಿಡುವುದಾದರೆ, ಲೋಕದಲ್ಲಿರುವ ಅನೇಕರು ಭದ್ರತೆಗಾಗಿ ಎಲ್ಲಿ ನೋಡುತ್ತಾರೋ ಅವುಗಳತ್ತ, ಅಂದರೆ ಭೌತಿಕ ವಸ್ತುಗಳತ್ತ ನಾವು ಭದ್ರತೆಗಾಗಿ ನೋಡದಿರುವೆವು. ಯೇಸು ತನ್ನ ಹಿಂಬಾಲಕರಿಗೆ ಸಲಹೆ ನೀಡಿದ್ದು: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ [ಆವಶ್ಯಕವಾದ ಭೌತಿಕ ವಿಷಯಗಳು] ನಿಮಗೆ ದೊರಕುವವು.” (ಮತ್ತಾಯ 6:33) ಭೌತಿಕ ವಸ್ತುಗಳ ಕುರಿತು ಸಮತೋಲನದ ದೃಷ್ಟಿಕೋನವನ್ನಿಟ್ಟುಕೊಂಡು, ತನ್ನ ಜೀವಿತದಲ್ಲಿ ದೇವರ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡುವಂಥ ಒಬ್ಬ ಕ್ರೈಸ್ತನು ಸರಿಯಾದ ಆಯ್ಕೆಯನ್ನು ಮಾಡುತ್ತಾನೆ. (ಪ್ರಸಂಗಿ 7:12) ಆದರೆ ಖಂಡಿತವಾಗಿಯೂ ಅವನು ಇದಕ್ಕಾಗಿ ಒಂದು ಬೆಲೆಯನ್ನು ತೆರಬೇಕಾಗುವುದು. ಭೌತಿಕ ರೀತಿಯಲ್ಲಿ ಅವನು ತ್ಯಾಗಗಳನ್ನು ಮಾಡಬೇಕಾಗಬಹುದು. ಹಾಗಿದ್ದರೂ, ಅವನು ಅನೇಕ ಪ್ರತಿಫಲಗಳನ್ನು ಕೊಯ್ಯುವನು. ಮತ್ತು ಯೆಹೋವನು ಅವನನ್ನು ಬೆಂಬಲಿಸುವನು.​—ಯೆಶಾಯ 48:​17, 18.

ನಾವು ಪರೀಕ್ಷೆಗಳಿಂದ ಕಲಿಯುವ ಪಾಠಗಳು

‘ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡುವ’ ಆಯ್ಕೆಮಾಡುವುದು ನಮ್ಮನ್ನು ಜೀವಿತದ ಅನಿರೀಕ್ಷಿತ ಸಂಭವಗಳಿಂದ ಸಂರಕ್ಷಿಸುವುದಿಲ್ಲ, ಇಲ್ಲವೆ ನಮ್ಮನ್ನು ಸೈತಾನನ ಮತ್ತು ಅವನ ಮಾನವ ಪ್ರತಿನಿಧಿಗಳ ದಾಳಿಗಳಿಂದ ಸಂಪೂರ್ಣವಾಗಿ ರಕ್ಷಿಸುವುದಿಲ್ಲ. (ಪ್ರಸಂಗಿ 9:11) ಇದರ ಫಲಿತಾಂಶವಾಗಿ, ಒಬ್ಬ ಕ್ರೈಸ್ತನ ಪ್ರಾಮಾಣಿಕತೆ ಮತ್ತು ದೃಢನಿರ್ಧಾರವು ಪರೀಕ್ಷೆಗೊಡ್ಡಲ್ಪಡಬಹುದು. ತನ್ನ ಅರಾಧಕರು ಅಂಥ ಪರೀಕ್ಷೆಗಳಿಗೆ ಒಡ್ಡಲ್ಪಡುವಂತೆ ಯೆಹೋವನು ಬಿಡುವುದೇಕೆ? ಈ ಮುಂದಿನಂತೆ ಬರೆದಾಗ, ಅಪೊಸ್ತಲ ಪೇತ್ರನು ಒಂದು ಕಾರಣವನ್ನು ಕೊಟ್ಟನು: “ನೀವು ಸದ್ಯಕ್ಕೆ ಸ್ವಲ್ಪಕಾಲ ದೇವರ ಚಿತ್ತಾನುಸಾರ ನಾನಾ ಕಷ್ಟಗಳಲ್ಲಿದ್ದು ದುಃಖಿಸುವವರಾಗಿದ್ದರೂ . . . ಹರ್ಷಿಸುವವರಾಗಿದ್ದೀರಿ. ಭಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು.” (1 ಪೇತ್ರ 1:6, 7) ಹೌದು, ಪರೀಕ್ಷೆಗಳು, ನಮ್ಮ ನಂಬಿಕೆಯ ಹಾಗೂ ಯೆಹೋವನಿಗಾಗಿರುವ ನಮ್ಮ ಪ್ರೀತಿಯ ಗುಣಮಟ್ಟವನ್ನು ಪ್ರದರ್ಶಿಸಲು ಅವಕಾಶವನ್ನು ಕೊಡುತ್ತವೆ. ಅಷ್ಟುಮಾತ್ರವಲ್ಲದೆ, ಪಿಶಾಚನಾದ ಸೈತಾನನ ಕೆಣಕುನುಡಿಗಳು ಮತ್ತು ಸುಳ್ಳಾರೋಪಗಳಿಗೆ ಉತ್ತರವನ್ನು ಕೊಡಲು ಅವು ಸಹಾಯಮಾಡುತ್ತವೆ.​—ಜ್ಞಾನೋಕ್ತಿ 27:11; ಪ್ರಕಟನೆ 12:10.

ಪರೀಕ್ಷೆಗಳು ನಾವು ಇತರ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳುವಂತೆಯೂ ನಮಗೆ ಸಹಾಯಮಾಡುತ್ತವೆ. ಉದಾಹರಣೆಗಾಗಿ ಕೀರ್ತನೆಗಾರನ ಮಾತುಗಳನ್ನು ಪರಿಗಣಿಸಿರಿ: “ಯೆಹೋವನು . . . ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತುಹಿಡಿಯುತ್ತಾನೆ.” (ಕೀರ್ತನೆ 138:6) ನಮ್ಮಲ್ಲಿ ಅನೇಕರು ಸ್ವಭಾವತಃ ದೀನರಾಗಿರುವುದಿಲ್ಲ. ಆದರೆ ಪರೀಕ್ಷೆಗಳು ನಾವು ಆ ಅತ್ಯಾವಶ್ಯಕ ಗುಣವನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲವು. ಮೋಶೆಯ ದಿನದಲ್ಲಿನ ಒಂದು ಸಂದರ್ಭವನ್ನು ಮನಸ್ಸಿಗೆ ತಂದುಕೊಳ್ಳಿರಿ. ಇಸ್ರಾಯೇಲ್ಯರಲ್ಲಿ ಕೆಲವರಿಗೆ, ವಾರವಾರವೂ, ಪ್ರತಿ ತಿಂಗಳೂ ಮನ್ನವನ್ನು ತಿನ್ನುವುದು ಬೇಸರ ಹುಟ್ಟಿಸುವ ಸಂಗತಿಯಾಗಿಬಿಟ್ಟಿತ್ತು. ಮನ್ನವು ಒಂದು ಅದ್ಭುತಕರವಾದ ಒದಗಿಸುವಿಕೆಯಾಗಿದ್ದರೂ, ಪ್ರಾಯಶಃ ಇದು ಅವರಿಗಾಗಿ ಒಂದು ಪರೀಕ್ಷೆಯಾಗಿತ್ತು. ಆ ಪರೀಕ್ಷೆಯ ಉದ್ದೇಶವೇನಾಗಿತ್ತು? ಮೋಶೆ ಅವರಿಗೆ ಹೇಳಿದ್ದು: “ಆತನು [ಯೆಹೋವನು] ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದನಂತರ ನಿಮಗೆ ಮೇಲನ್ನುಂಟುಮಾಡಬೇಕೆಂಬ [“ನಿಮ್ಮನ್ನು ದೀನರನ್ನಾಗಿ ಮಾಡುವ,” NW] ಉದ್ದೇಶದಿಂದ . . . ಮನ್ನವನ್ನು ಕೊಟ್ಟು ಪೋಷಿಸಿ”ದನು.​—ಧರ್ಮೋಪದೇಶಕಾಂಡ 8:15.

ನಮ್ಮ ದೀನಭಾವವೂ ಅದೇ ರೀತಿಯಲ್ಲಿ ಪರೀಕ್ಷೆಗೊಡ್ಡಲ್ಪಡಬಹುದು. ಹೇಗೆ? ಉದಾಹರಣೆಗಾಗಿ, ಸಂಘಟನೆಯ ಹೊಂದಾಣಿಕೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? (ಯೆಶಾಯ 60:17) ಸಾರುವ ಮತ್ತು ಕಲಿಸುವ ಕೆಲಸಕ್ಕಾಗಿ ನಾವು ಮನಃಪೂರ್ವಕ ಬೆಂಬಲವನ್ನು ಕೊಡುತ್ತೇವೊ? (ಮತ್ತಾಯ 24:14; 28:​19, 20) ಬೈಬಲ್‌ ಸತ್ಯಗಳ ಬಗ್ಗೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ವಿವರಣೆಗಳನ್ನು ನಾವು ಅತ್ಯಾಸಕ್ತಿಯಿಂದ ಸ್ವೀಕರಿಸುತ್ತೇವೊ? (ಮತ್ತಾಯ 24:​45-47; ಜ್ಞಾನೋಕ್ತಿ 4:18) ಅತ್ಯಂತ ನವೀನ ಉಪಕರಣವನ್ನೊ, ಹೊಸದಾಗಿ ಬಂದಿರುವ ಉಡುಪಿನ ಫ್ಯಾಷನನ್ನೊ, ಇಲ್ಲವೆ ನವನವೀನ ಮಾದರಿಯ ವಾಹನವನ್ನೊ ಖರೀದಿಸುವಂತೆ ಹೇರಲಾಗುವ ಒತ್ತಡವನ್ನು ನಾವು ಪ್ರತಿರೋಧಿಸುತ್ತೇವೊ? ದೀನಭಾವದ ಒಬ್ಬ ವ್ಯಕ್ತಿಯು ಇಂಥ ಪ್ರಶ್ನೆಗಳಿಗೆ ಹೌದೆಂದು ಉತ್ತರಿಸಲು ಶಕ್ತನಾಗಿರುವನು.​—1 ಪೇತ್ರ 1:​14-16; 2 ಪೇತ್ರ 3:11.

ಪರೀಕ್ಷೆಗಳು ನಾವು ಮತ್ತೊಂದು ಪ್ರಮುಖ ಗುಣವನ್ನು, ಅಂದರೆ ತಾಳ್ಮೆಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಬಲ್ಲವು. ಶಿಷ್ಯನಾದ ಯಾಕೋಬನು ಹೇಳಿದ್ದು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.” (ಯಾಕೋಬ 1:2, 3) ಯೆಹೋವನ ಮೇಲೆ ಪೂರ್ಣವಾಗಿ ಆತುಕೊಳ್ಳುತ್ತಾ, ಒಂದರ ನಂತರ ಇನ್ನೊಂದು ಪರೀಕ್ಷೆಯನ್ನು ಯಶಸ್ವಿಕರವಾಗಿ ತಾಳಿಕೊಳ್ಳುವುದು, ಸ್ಥಿರಚಿತ್ತತೆ, ನಿಶ್ಚಲತೆ ಮತ್ತು ಸಮಗ್ರತೆಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುತ್ತದೆ. ಕೋಪದಿಂದ ಕೆರಳಿರುವ ಈ ಲೋಕದ ದೇವರಾದ ಸೈತಾನನಿಂದ ಬರುವ ಭಾವೀ ದಾಳಿಗಳನ್ನು ಎದುರಿಸಲು ಅದು ನಮ್ಮನ್ನು ಬಲಪಡಿಸುತ್ತದೆ.​—1 ಪೇತ್ರ 5:​8-10; 1 ಯೋಹಾನ 5:19; ಪ್ರಕಟನೆ 12:12.

ಪರೀಕ್ಷೆಗಳ ಬಗ್ಗೆ ಸರಿಯಾದ ದೃಷ್ಟಿಕೋನವನ್ನಿಟ್ಟುಕೊಳ್ಳಿರಿ

ದೇವರ ಪರಿಪೂರ್ಣ ಪುತ್ರನಾದ ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ ಅನೇಕ ಪರೀಕ್ಷೆಗಳನ್ನು ಎದುರಿಸಿದನು ಮತ್ತು ಅವುಗಳನ್ನು ತಾಳಿಕೊಳ್ಳುವುದರಿಂದ ಶ್ರೇಷ್ಠವಾದ ಪ್ರಯೋಜನಗಳನ್ನು ಪಡೆದನು. ಯೇಸು “ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು” ಎಂದು ಪೌಲನು ಬರೆದನು. (ಇಬ್ರಿಯ 5:8) ಮರಣಪರ್ಯಂತ ಯೇಸು ತೋರಿಸಿದ ನಿಷ್ಠೆಯು ಯೆಹೋವನ ನಾಮಕ್ಕೆ ಸ್ತುತಿಯನ್ನು ತಂದಿತು ಮತ್ತು ಅವನು ಮಾನವಕುಲಕ್ಕಾಗಿ ತನ್ನ ಪರಿಪೂರ್ಣ ಮಾನವ ಜೀವದ ಮೌಲ್ಯವನ್ನು ವಿಮೋಚನಾ ಯಜ್ಞವಾಗಿ ನೀಡುವುದನ್ನು ಸಾಧ್ಯಗೊಳಿಸಿತು. ಇದು, ಯೇಸುವಿನಲ್ಲಿ ನಂಬಿಕೆಯಿಡುವವರಿಗೆ ನಿತ್ಯಜೀವದ ಪ್ರತೀಕ್ಷೆಯನ್ನು ಹೊಂದಲು ಮಾರ್ಗವನ್ನು ತೆರೆಯಿತು. (ಯೋಹಾನ 3:16) ಯೇಸು ಪರೀಕ್ಷೆಗಳ ಕೆಳಗೆ ನಂಬಿಗಸ್ತನಾಗಿ ಉಳಿದಿದ್ದರಿಂದ, ಈಗ ಅವನು ನಮ್ಮ ಮಹಾ ಯಾಜಕನೂ ಸಿಂಹಾಸನಾರೂಢನಾದ ಅರಸನೂ ಆಗಿದ್ದಾನೆ.​—ಇಬ್ರಿಯ 7:​26-28; 12:2.

ನಮ್ಮ ಕುರಿತಾಗಿ ಏನು? ಪರೀಕ್ಷೆಗಳ ಎದುರಿನಲ್ಲೂ ನಾವು ತೋರಿಸುವ ನಿಷ್ಠೆಯು, ಅದೇ ರೀತಿಯಲ್ಲಿ ಮಹಾನ್‌ ಆಶೀರ್ವಾದಗಳನ್ನು ತರುತ್ತದೆ. ಸ್ವರ್ಗೀಯ ನಿರೀಕ್ಷೆಯುಳ್ಳವರ ಕುರಿತಾಗಿ ಬೈಬಲ್‌ ಹೇಳುವುದು: “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು; ಸ್ವಾಮಿಯು [“ಯೆಹೋವನು,” NW] ತನ್ನನ್ನು ಪ್ರೀತಿಸುವವರಿಗೆ ಇದನ್ನು ವಾಗ್ದಾನಮಾಡಿದ್ದಾನೆ.” (ಯಾಕೋಬ 1:12) ಭೂಮಿಯ ಮೇಲೆ ಜೀವಿಸುವ ನಿರೀಕ್ಷೆಯುಳ್ಳವರು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವಲ್ಲಿ, ಭೂಪರದೈಸಿನಲ್ಲಿ ನಿತ್ಯಜೀವವನ್ನು ಪಡೆಯುವ ಆಶ್ವಾಸನೆ ಅವರಿಗಿದೆ. (ಪ್ರಕಟನೆ 21:​3-6) ಮತ್ತು ಇದಕ್ಕಿಂತಲೂ ಪ್ರಾಮುಖ್ಯವಾದ ಸಂಗತಿಯೇನೆಂದರೆ, ಅವರ ನಂಬಿಗಸ್ತ ತಾಳ್ಮೆಯು, ಯೆಹೋವನ ನಾಮಕ್ಕೆ ಸ್ತುತಿಯನ್ನು ತರುತ್ತದೆ.

ನಾವು ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುತ್ತಿರುವಾಗ, ಈ ವಿಷಯಗಳ ವ್ಯವಸ್ಥೆಯಲ್ಲಿ ನಮಗೆದುರಾಗುವ ಎಲ್ಲ ಪರೀಕ್ಷೆಗಳನ್ನು ನಿಭಾಯಿಸುವುದರಲ್ಲಿ ನಾವು ಸಫಲರಾಗಬಲ್ಲೆವು ಎಂಬ ಭರವಸೆ ನಮಗಿರಬಲ್ಲದು. (1 ಕೊರಿಂಥ 10:13; 1 ಪೇತ್ರ 2:21) ಹೇಗೆ? ತನ್ನ ಮೇಲೆ ಆತುಕೊಳ್ಳುವವರಿಗೆ “ಬಲಾಧಿಕ್ಯ”ವನ್ನು ಒದಗಿಸುವಂಥ ಯೆಹೋವನ ಮೇಲೆ ಆತುಕೊಳ್ಳುವ ಮೂಲಕವೇ. (2 ಕೊರಿಂಥ 4:7) ಕಠೋರವಾದ ಪರೀಕ್ಷೆಗಳನ್ನು ತಾಳಿಕೊಳ್ಳುತ್ತಿರುವಾಗಲೂ ಯೋಬನು, “ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು” ಎಂದು ದೃಢಭರವಸೆಯಿಂದ ನುಡಿದನು. ನಮಗೂ ಯೋಬನಂಥದ್ದೇ ನಿಶ್ಚಿತಾಭಿಪ್ರಾಯವಿರಲಿ.​—ಯೋಬ 23:10.

[ಪುಟ 31ರಲ್ಲಿರುವ ಚಿತ್ರ]

ಪರೀಕ್ಷೆಯ ಎದುರಿನಲ್ಲೂ ಯೇಸು ತೋರಿಸಿದ ನಿಷ್ಠೆಯು ಯೆಹೋವನ ನಾಮಕ್ಕೆ ಸ್ತುತಿಯನ್ನು ತಂದಿತು. ನಮ್ಮ ನಿಷ್ಠೆಯೂ ಅದನ್ನೇ ಮಾಡಬಲ್ಲದು