ಮಹಾ ಬೋಧಕನನ್ನು ಅನುಕರಿಸಿರಿ
ಮಹಾ ಬೋಧಕನನ್ನು ಅನುಕರಿಸಿರಿ
“ನೀವು ಹೊರಟುಹೋಗಿ . . . ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”—ಮತ್ತಾಯ 28:19, 20.
1, 2. (ಎ) ಒಂದರ್ಥದಲ್ಲಿ ನಾವೆಲ್ಲರೂ ಹೇಗೆ ಶಿಕ್ಷಕರಾಗಿದ್ದೇವೆ ಅಥವಾ ಬೋಧಕರಾಗಿದ್ದೇವೆ? (ಬಿ) ಬೋಧಿಸುವ ವಿಷಯಕ್ಕೆ ಬರುವಾಗ, ನಿಜ ಕ್ರೈಸ್ತರಿಗೆ ಯಾವ ಅದ್ವಿತೀಯ ಜವಾಬ್ದಾರಿ ಇದೆ?
ನೀವು ಒಬ್ಬ ಶಿಕ್ಷಕರೋ ಅಥವಾ ಒಬ್ಬ ಬೋಧಕರೋ? ಒಂದರ್ಥದಲ್ಲಿ ನಾವೆಲ್ಲರೂ ಶಿಕ್ಷಕರು ಅಥವಾ ಬೋಧಕರಾಗಿದ್ದೇವೆ. ದಾರಿತಪ್ಪಿರುವ ಒಬ್ಬ ಪ್ರಯಾಣಿಕನಿಗೆ ನೀವು ದಾರಿತೋರಿಸುವಾಗ, ಒಬ್ಬ ಜೊತೆ ಕೆಲಸಗಾರನಿಗೆ ಒಂದು ನಿರ್ದಿಷ್ಟ ಕೆಲಸವನ್ನು ಹೇಗೆ ಮಾಡಬೇಕೆಂಬುದನ್ನು ತೋರಿಸಿಕೊಡುವಾಗ, ಅಥವಾ ಒಂದು ಮಗುವಿಗೆ ತನ್ನ ಶೂಗಳ ದಾರವನ್ನು ಹೇಗೆ ಕಟ್ಟುವುದು ಎಂಬುದನ್ನು ನೀವು ವಿವರಿಸುವಾಗಲೆಲ್ಲ, ನೀವು ಬೋಧಿಸುತ್ತಿದ್ದೀರಿ ಅಥವಾ ಕಲಿಸುತ್ತಿದ್ದೀರಿ. ಇಂಥ ವಿಧಗಳಲ್ಲಿ ಇತರರಿಗೆ ಸಹಾಯಮಾಡುವುದು ಸ್ವಲ್ಪ ಮಟ್ಟಿಗಿನ ಸಂತೃಪ್ತಿಯನ್ನು ತರುತ್ತದೆ, ಅಲ್ಲವೋ?
2 ಬೋಧಿಸುವಿಕೆಯ ವಿಷಯಕ್ಕೆ ಬರುವಾಗ, ನಿಜ ಕ್ರೈಸ್ತರಿಗೆ ಒಂದು ಅದ್ವಿತೀಯ ಜವಾಬ್ದಾರಿಯಿದೆ. ‘ಜನರನ್ನು ಶಿಷ್ಯರನ್ನಾಗಿ ಮಾಡುವ, . . . ಅವರಿಗೆ ಉಪದೇಶ ನೀಡುವ [“ಬೋಧಿಸುವ,” NW]’ ನೇಮಕವು ನಮಗೆ ಕೊಡಲ್ಪಟ್ಟಿದೆ. (ಮತ್ತಾಯ 28:19, 20) ಸಭೆಯಲ್ಲಿ ಸಹ ನಮಗೆ ಬೋಧಿಸುವ ಸಂದರ್ಭವಿರುತ್ತದೆ. ಸಭೆಯ ಭಕ್ತಿವೃದ್ಧಿಮಾಡುವಂಥ ಉದ್ದೇಶದಿಂದ, ಅರ್ಹರಾದ ಪುರುಷರನ್ನು “ಕುರುಬರನ್ನಾಗಿಯೂ ಬೋಧಕರನ್ನಾಗಿಯೂ” ಕಾರ್ಯನಡಿಸಲಿಕ್ಕಾಗಿ ನೇಮಿಸಲಾಗುತ್ತದೆ. (ಎಫೆಸ 4:11-13, NW) ಪ್ರೌಢ ಸ್ತ್ರೀಯರು ತಮ್ಮ ದೈನಂದಿನ ಕ್ರೈಸ್ತ ಚಟುವಟಿಕೆಗಳಲ್ಲಿ, ಯುವಪ್ರಾಯದ ಸ್ತ್ರೀಯರಿಗೆ “ಸದ್ಬೋಧನೆ ಹೇಳುವವರೂ” ಆಗಿರಬೇಕು. (ತೀತ 2:3-5) ಜೊತೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸುವಂತೆ ನಮ್ಮೆಲ್ಲರನ್ನೂ ಉತ್ತೇಜಿಸಲಾಗಿದೆ, ಮತ್ತು ಇತರರ ಭಕ್ತಿವೃದ್ಧಿಮಾಡಲಿಕ್ಕಾಗಿ ಬೈಬಲನ್ನು ಉಪಯೋಗಿಸುವ ಮೂಲಕ ನಾವು ಆ ಸ್ನೇಹಪರ ಬುದ್ಧಿವಾದಕ್ಕೆ ಕಿವಿಗೊಡಸಾಧ್ಯವಿದೆ. (1 ಥೆಸಲೊನೀಕ 5:11) ದೇವರ ವಾಕ್ಯದ ಒಬ್ಬ ಬೋಧಕರಾಗಿರುವುದು ಮತ್ತು ಶಾಶ್ವತವಾದ ಪ್ರಯೋಜನಗಳನ್ನು ಹೊಂದಿರುವ ಆತ್ಮಿಕ ಮೌಲ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಎಂಥ ಒಂದು ಸುಯೋಗವಾಗಿದೆ!
3. ಬೋಧಕರೋಪಾದಿ ನಮ್ಮ ಪರಿಣಾಮಕಾರಿತ್ವವನ್ನು ನಾವು ಹೇಗೆ ಉತ್ತಮಗೊಳಿಸಸಾಧ್ಯವಿದೆ?
3 ಆದರೂ, ಬೋಧಕರೋಪಾದಿ ನಮ್ಮ ಪರಿಣಾಮಕಾರಿತ್ವವನ್ನು ನಾವು ಹೇಗೆ ಉತ್ತಮಗೊಳಿಸಸಾಧ್ಯವಿದೆ? ಪ್ರಾಥಮಿಕವಾಗಿ, ಮಹಾ ಬೋಧಕನಾಗಿರುವ ಯೇಸುವನ್ನು ಅನುಕರಿಸುವ ಮೂಲಕವೇ. ‘ಆದರೆ ನಾವು ಯೇಸುವನ್ನು ಹೇಗೆ ಅನುಕರಿಸಸಾಧ್ಯವಿದೆ? ಅವನು ಪರಿಪೂರ್ಣ ವ್ಯಕ್ತಿಯಾಗಿದ್ದನು’ ಎಂದು ಕೆಲವರು ಕುತೂಹಲಪಡಬಹುದು. ನಾವು ಪರಿಪೂರ್ಣ ಬೋಧಕರಾಗಲು ಸಾಧ್ಯವಿಲ್ಲ ಎಂಬುದು ನಿಜ. ಆದರೂ, ನಮ್ಮ ಸಾಮರ್ಥ್ಯಗಳು ಏನೇ ಇರಲಿ, ಯೇಸು ಬೋಧಿಸಿದಂಥ ವಿಧವನ್ನು ಅನುಕರಿಸಲು ನಾವು ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಸಾಧ್ಯವಿದೆ. ಅವನ ವಿಧಾನಗಳಲ್ಲಿ ನಾಲ್ಕನ್ನು, ಅಂದರೆ ಸರಳತೆ, ಪರಿಣಾಮಕಾರಿ ಪ್ರಶ್ನೆಗಳು, ತರ್ಕಬದ್ಧ ವಾದಸರಣಿ, ಮತ್ತು ಸೂಕ್ತವಾದ ದೃಷ್ಟಾಂತಗಳೆಂಬ ವಿಷಯಗಳನ್ನು ನಾವು ಹೇಗೆ ಅನ್ವಯಿಸಸಾಧ್ಯವಿದೆ ಎಂಬುದನ್ನು ನಾವೀಗ ಚರ್ಚಿಸೋಣ.
ಸರಳತೆಯಿಂದ ಬೋಧಿಸಿರಿ
4, 5. (ಎ) ಸರಳತೆಯು ಬೈಬಲ್ ಸತ್ಯದ ಒಂದು ಪ್ರಮುಖ ವೈಶಿಷ್ಟ್ಯವಾಗಿದೆ ಏಕೆ? (ಬಿ) ಸರಳವಾದ ರೀತಿಯಲ್ಲಿ ಬೋಧಿಸಲಿಕ್ಕಾಗಿ, ನಮ್ಮ ಶಬ್ದಭಂಡಾರವನ್ನು ಜಾಗರೂಕತೆಯಿಂದ ಪರಿಗಣಿಸುವುದು ಪ್ರಾಮುಖ್ಯವಾಗಿದೆ ಏಕೆ?
4 ದೇವರ ವಾಕ್ಯದ ಮೂಲಭೂತ ಸತ್ಯಗಳು ಜಟಿಲವಾಗಿರುವುದಿಲ್ಲ. ಪ್ರಾರ್ಥನೆಯಲ್ಲಿ ಯೇಸು ಹೇಳಿದ್ದು: “ತಂದೆಯೇ, . . . ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ.” (ಮತ್ತಾಯ 11:25) ಯಾರು ಪ್ರಾಮಾಣಿಕ ಹಾಗೂ ದೀನ ಹೃದಯವುಳ್ಳವರಾಗಿದ್ದಾರೋ ಅಂಥವರಿಗೆ ಯೆಹೋವನು ತನ್ನ ಉದ್ದೇಶಗಳನ್ನು ತಿಳಿಯಪಡಿಸಿದ್ದಾನೆ. (1 ಕೊರಿಂಥ 1:26-28) ಆದುದರಿಂದ, ಸರಳತೆಯು ಬೈಬಲ್ ಸತ್ಯದ ಒಂದು ಮುಖ್ಯ ವೈಶಿಷ್ಟ್ಯವಾಗಿದೆ.
5 ನೀವು ಒಂದು ಮನೆ ಬೈಬಲ್ ಅಧ್ಯಯನವನ್ನು ನಡಿಸುವಾಗ ಅಥವಾ ಆಸಕ್ತ ವ್ಯಕ್ತಿಗಳನ್ನು ಪುನರ್ಭೇಟಿಮಾಡುವಾಗ, ಸರಳವಾದ ರೀತಿಯಲ್ಲಿ ಹೇಗೆ ಬೋಧಿಸಬಲ್ಲಿರಿ? ನಾವು ಮಹಾ ಬೋಧಕನಿಂದ ಏನನ್ನು ಕಲಿತೆವು? ತನ್ನ ಕೇಳುಗರಲ್ಲಿ ಹೆಚ್ಚಿನವರು “ಶಾಸ್ತ್ರಾಭ್ಯಾಸ ಮಾಡದ ಸಾಧಾರಣ”ರಾಗಿದ್ದರಿಂದ, ಅವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಸಾಧ್ಯವಿದ್ದ ಸಾಧಾರಣ ಭಾಷೆಯನ್ನೇ ಯೇಸು ಉಪಯೋಗಿಸಿದನು. (ಅ. ಕೃತ್ಯಗಳು 4:13) ಆದುದರಿಂದ, ಸರಳತೆಯಿಂದ ಬೋಧಿಸಲಿಕ್ಕಾಗಿರುವ ಮೊದಲ ಆವಶ್ಯಕತೆಯು, ನಮ್ಮ ಶಬ್ದಭಂಡಾರವನ್ನು ಜಾಗರೂಕತೆಯಿಂದ ಪರಿಗಣಿಸುವುದೇ ಆಗಿದೆ. ದೇವರ ವಾಕ್ಯದ ಸತ್ಯವನ್ನು ಇತರರಿಗೆ ಹೆಚ್ಚು ಒಡಂಬಡಿಸುವಂಥ ರೀತಿಯಲ್ಲಿ ಮಾಡಲಿಕ್ಕಾಗಿ ನಾವು ಶಬ್ದಾಡಂಬರದ ಮಾತುಗಳನ್ನು ಅಥವಾ ಪದಗುಚ್ಛಗಳನ್ನು ಉಪಯೋಗಿಸುವ ಅಗತ್ಯವಿಲ್ಲ. ಸ್ವಲ್ಪವೇ ಶಿಕ್ಷಣವನ್ನು ಪಡೆದಿರುವ ಅಥವಾ ಮಿತವಾದ ಸಾಮರ್ಥ್ಯವಿರುವವರಿಗೆ ಅಂಥ “ವಾಕ್ಚಾತುರ್ಯ”ವು ಮುಜುಗರಗೊಳಿಸುವಂಥದ್ದು ಆಗಿರಸಾಧ್ಯವಿದೆ. (1 ಕೊರಿಂಥ 2:1, 2) ಜಾಗರೂಕತೆಯಿಂದ ಆಯ್ಕೆಮಾಡಿದ ಪದಗಳು ಹೆಚ್ಚು ಪ್ರಬಲವಾದ ರೀತಿಯಲ್ಲಿ ಸತ್ಯವನ್ನು ತಿಳಿಯಪಡಿಸಬಲ್ಲವು ಎಂಬುದನ್ನು ಯೇಸುವಿನ ಮಾದರಿಯು ತೋರಿಸುತ್ತದೆ.
6. ಒಬ್ಬ ಬೈಬಲ್ ವಿದ್ಯಾರ್ಥಿಯನ್ನು ತೀರ ಹೆಚ್ಚು ಮಾಹಿತಿಯಿಂದ ಮುಳುಗಿಸಿಬಿಡುವುದನ್ನು ನಾವು ಹೇಗೆ ತಡೆಯಸಾಧ್ಯವಿದೆ?
6 ಸರಳವಾದ ರೀತಿಯಲ್ಲಿ ಬೋಧಿಸಲಿಕ್ಕಾಗಿ, ಒಬ್ಬ ಬೈಬಲ್ ವಿದ್ಯಾರ್ಥಿಯನ್ನು ತೀರ ಹೆಚ್ಚು ಮಾಹಿತಿಯಿಂದ ಮುಳುಗಿಸಿಬಿಡದಂತೆ ಸಹ ನಾವು ಎಚ್ಚರಿಕೆಯನ್ನು ವಹಿಸಬೇಕು. ಯೇಸು ತನ್ನ ಶಿಷ್ಯರ ಇತಿಮಿತಿಗಳಿಗೆ ಪರಿಗಣನೆ ತೋರಿಸಿದನು. (ಯೋಹಾನ 16:12) ನಾವು ಸಹ ಬೈಬಲ್ ವಿದ್ಯಾರ್ಥಿಯ ಇತಿಮಿತಿಗಳಿಗೆ ಪರಿಗಣನೆ ತೋರಿಸಬೇಕು. ಉದಾಹರಣೆಗೆ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿ ಒಂದು ಅಧ್ಯಯನವನ್ನು ನಡೆಸುತ್ತಿರುವಾಗ, ನಾವು ಪ್ರತಿಯೊಂದೂ ವಿಷಯದ ಸಕಲ ವಿವರವನ್ನು ತಿಳಿಸುವ ಅಗತ್ಯವಿಲ್ಲ. * ಅಥವಾ ನಿರ್ದಿಷ್ಟ ಪ್ರಮಾಣದ ವಿಷಯವನ್ನು ಆವರಿಸುವುದೇ ಅತಿ ಪ್ರಾಮುಖ್ಯವಾದ ಸಂಗತಿಯಾಗಿದೆಯೋ ಎಂಬಂತೆ, ಮಾಹಿತಿಯನ್ನು ಅವಸರವಸರವಾಗಿ ಚರ್ಚಿಸಿ ಮುಗಿಸುವ ಆವಶ್ಯಕತೆಯೂ ಇಲ್ಲ. ಅದಕ್ಕೆ ಬದಲಾಗಿ, ವಿದ್ಯಾರ್ಥಿಯ ಆವಶ್ಯಕತೆಗಳು ಮತ್ತು ಸಾಮರ್ಥ್ಯಗಳು ಅಧ್ಯಯನದ ಧಾಟಿಯನ್ನು ನಿರ್ಧರಿಸುವಂತೆ ಬಿಡುವುದು ವಿವೇಕಯುತವಾದದ್ದಾಗಿದೆ. ವಿದ್ಯಾರ್ಥಿಯು ಕ್ರಿಸ್ತನ ಒಬ್ಬ ಶಿಷ್ಯನಾಗುವಂತೆ ಹಾಗೂ ಯೆಹೋವನ ಒಬ್ಬ ಆರಾಧಕನಾಗುವಂತೆ ಸಹಾಯಮಾಡುವುದೇ ನಮ್ಮ ಗುರಿಯಾಗಿದೆ. ಆಸಕ್ತ ವಿದ್ಯಾರ್ಥಿಯು ತಾನು ಕಲಿಯುತ್ತಿರುವ ವಿಷಯವನ್ನು ಸ್ಪಷ್ಟವಾಗಿ ಗ್ರಹಿಸುವಂತೆ ಸಹಾಯಮಾಡಲಿಕ್ಕಾಗಿ ಎಷ್ಟು ಸಮಯದ ಅಗತ್ಯವಿರುತ್ತದೋ ಅಷ್ಟು ಸಮಯವನ್ನು ನಾವು ತೆಗೆದುಕೊಳ್ಳಬೇಕು. ಹೀಗೆ, ಸತ್ಯವು ಅವನ ಹೃದಯಕ್ಕೆ ತಲಪಬಹುದು ಮತ್ತು ಕ್ರಿಯೆಗೈಯುವಂತೆ ಅವನನ್ನು ಪ್ರಚೋದಿಸಬಹುದು.—ರೋಮಾಪುರ 12:2.
7. ನಾವು ಸಭೆಯಲ್ಲಿ ಭಾಷಣಗಳನ್ನು ಕೊಡುವಾಗ, ಸರಳವಾದ ರೀತಿಯಲ್ಲಿ ಬೋಧಿಸುವಂತೆ ಯಾವ ಸಲಹೆಗಳು ನಮಗೆ ಸಹಾಯಮಾಡಸಾಧ್ಯವಿದೆ?
7 ನಾವು ಸಭೆಯಲ್ಲಿ ಭಾಷಣಗಳನ್ನು ಕೊಡುವಾಗ, ಅದರಲ್ಲೂ ವಿಶೇಷವಾಗಿ ಸಭಿಕರಲ್ಲಿ ಹೊಸಬರು ಇರುವಾಗ, ಯಾವ ರೀತಿಯಲ್ಲಿ ನಾವು ಸುಲಭವಾಗಿ ‘ತಿಳಿಯಬಹುದಾದ ಭಾಷೆಯನ್ನು’ ಆಡಸಾಧ್ಯವಿದೆ? (1 ಕೊರಿಂಥ 14:9) ಸಹಾಯಮಾಡಸಾಧ್ಯವಿರುವ ಮೂರು ಸಲಹೆಗಳನ್ನು ಪರಿಗಣಿಸಿರಿ. ಮೊದಲನೆಯದಾಗಿ, ನೀವು ಉಪಯೋಗಿಸಬೇಕಾಗಿರುವ ಯಾವುದೇ ಅಪರಿಚಿತ ಪದಗಳನ್ನು ವಿವರಿಸಿ ಹೇಳಿ. ದೇವರ ವಾಕ್ಯದ ಕುರಿತಾದ ನಮ್ಮ ತಿಳಿವಳಿಕೆಯು ನಮಗೆ ಅದ್ವಿತೀಯವಾದ ಶಬ್ದಭಂಡಾರವನ್ನು ನೀಡಿದೆ. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” “ಬೇರೆ ಕುರಿಗಳು” ಮತ್ತು ‘ಮಹಾ ಬಾಬೆಲ್’ ಎಂಬಂಥ ಅಭಿವ್ಯಕ್ತಿಗಳನ್ನು ನಾವು ಉಪಯೋಗಿಸುವಲ್ಲಿ, ಅವುಗಳ ಅರ್ಥವನ್ನು ಸ್ಪಷ್ಟಗೊಳಿಸುವಂಥ ಸರಳವಾದ ವಾಕ್ಸರಣಿಯಿಂದ ಅವುಗಳನ್ನು ವಿವರಿಸುವ ಅಗತ್ಯವಿರಬಹುದು. ಎರಡನೆಯದಾಗಿ, ವಿಪರೀತ ಶಬ್ದಗಳನ್ನು ಉಪಯೋಗಿಸುವುದರಿಂದ ದೂರವಿರಿ. ತೀರ ಹೆಚ್ಚು ಪದಗಳನ್ನು, ತೀರ ಹೆಚ್ಚು ವಿವರಿಸಿ ಹೇಳುವುದು, ಸಭಿಕರು ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ಅನಗತ್ಯವಾದ ಪದಗಳು ಹಾಗೂ ಪದಗುಚ್ಛಗಳನ್ನು ಉಪಯೋಗಿಸದಿರುವುದರಿಂದ ಸ್ಪಷ್ಟತೆಯು ಫಲಿಸುತ್ತದೆ. ಮೂರನೆಯದಾಗಿ, ತುಂಬ ಹೆಚ್ಚು ವಿಷಯಭಾಗವನ್ನು ಆವರಿಸಲು ಪ್ರಯತ್ನಿಸಬೇಡಿ. ನಮ್ಮ ಸಂಶೋಧನೆಯಲ್ಲಿ ನಮಗೆ ಆಸಕ್ತಿಕರವಾದ ಬಹಳಷ್ಟು ವಿವರಗಳು ಸಿಗಬಹುದು. ಆದರೆ ನಮ್ಮ ವಿಷಯಭಾಗವನ್ನು ಕೆಲವೊಂದು ಮುಖ್ಯಾಂಶಗಳಾಗಿ ಮಾರ್ಪಡಿಸಿ, ಆ ಅಂಶಗಳನ್ನು ಬೆಂಬಲಿಸುವಂಥ ಹಾಗೂ ನಿಗದಿತ ಸಮಯದಲ್ಲಿ ಸ್ಪಷ್ಟವಾಗಿ ವಿಕಸಿಸಸಾಧ್ಯವಿರುವಂಥ ಮಾಹಿತಿಯನ್ನು ಮಾತ್ರ ಉಪಯೋಗಿಸುವುದು ಅತ್ಯುತ್ತಮ.
ಪ್ರಶ್ನೆಗಳ ಪರಿಣಾಮಕಾರಿ ಉಪಯೋಗ
8, 9. ಮನೆಯವನ ಅಭಿರುಚಿಗೆ ಸೂಕ್ತವಾಗಿ ಹೊಂದಿಕೊಳ್ಳುವಂಥ ಒಂದು ಪ್ರಶ್ನೆಯನ್ನು ನಾವು ಹೇಗೆ ಆಯ್ಕೆಮಾಡಸಾಧ್ಯವಿದೆ? ಉದಾಹರಣೆಗಳನ್ನು ಕೊಡಿರಿ.
8 ತನ್ನ ಶಿಷ್ಯರು ತಮ್ಮ ಮನಸ್ಸುಗಳಲ್ಲಿ ಏನಿದೆಯೋ ಅದನ್ನು ವ್ಯಕ್ತಪಡಿಸುವಂತೆ ಮಾಡಲಿಕ್ಕಾಗಿ, ಹಾಗೂ ಅವರ ಆಲೋಚನೆಯನ್ನು ಉತ್ತೇಜಿಸಲು ಮತ್ತು ತರಬೇತುಗೊಳಿಸಲಿಕ್ಕಾಗಿ ಪ್ರಶ್ನೆಗಳನ್ನು ಉಪಯೋಗಿಸುವುದರಲ್ಲಿ ಯೇಸು ನಿಸ್ಸೀಮನಾಗಿದ್ದನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ತನ್ನ ಪ್ರಶ್ನೆಗಳ ಮೂಲಕ ಯೇಸು ಕೋಮಲವಾದ ರೀತಿಯಲ್ಲಿ ಅವರ ಹೃದಯಗಳನ್ನು ತಲಪಿದನು ಮತ್ತು ಮನಸ್ಸುಗಳನ್ನು ಪ್ರಚೋದಿಸಿದನು. (ಮತ್ತಾಯ 16:13, 15; ಯೋಹಾನ 11:26) ಯೇಸುವಿನಂತೆ ನಾವು ಹೇಗೆ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ?
9 ಮನೆಯಿಂದ ಮನೆಗೆ ಸಾರುವಾಗ, ನಾವು ದೇವರ ರಾಜ್ಯದ ಕುರಿತು ಮಾತಾಡಲು ಮಾರ್ಗವನ್ನು ಸಿದ್ಧಪಡಿಸುತ್ತಾ, ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ಪ್ರಶ್ನೆಗಳನ್ನು ಉಪಯೋಗಿಸಸಾಧ್ಯವಿದೆ. ಮನೆಯವನ ಅಭಿರುಚಿಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುವಂಥ ಒಂದು ಪ್ರಶ್ನೆಯನ್ನು ನಾವು ಹೇಗೆ ಆಯ್ಕೆಮಾಡಸಾಧ್ಯವಿದೆ? ಗಮನಶೀಲರಾಗಿರಿ. ಒಂದು ಮನೆಯನ್ನು ಸಮೀಪಿಸುವಾಗ, ಅದರ ಸುತ್ತಮುತ್ತಲೂ ಇರುವ ಸಂಗತಿಗಳನ್ನು ಗಮನಿಸಿರಿ. ಆ ಮನೆಯಲ್ಲಿ ಮಕ್ಕಳಿದ್ದಾರೆ ಎಂಬುದನ್ನು ಸೂಚಿಸಲಿಕ್ಕಾಗಿ ಅಂಗಳದಲ್ಲಿ ಆಟದ ಸಾಮಾನುಗಳು ಕಂಡುಬರುತ್ತವೋ? ಹಾಗಿರುವಲ್ಲಿ, ‘ನಿಮ್ಮ ಮಕ್ಕಳು ಬೆಳೆದು ದೊಡ್ಡವರಾಗುವಾಗ ಈ ಲೋಕವು ಹೇಗಿರುವುದೆಂದು ನೀವೆಂದಾದರೂ ಆಲೋಚಿಸಿದ್ದೀರೋ?’ ಎಂದು ನಾವು ಕೇಳಬಹುದು. (ಕೀರ್ತನೆ 37:10, 11) ಮುಂದಿನ ಬಾಗಿಲಿನಲ್ಲಿ ಅನೇಕ ಬೀಗಗಳು ಇವೆಯೋ ಅಥವಾ ಭದ್ರತಾ ವ್ಯವಸ್ಥೆಯು ಇದೆಯೋ? ಆಗ ನಾವು ಹೀಗೆ ಕೇಳಬಹುದು: ‘ನಾನು ಮತ್ತು ನೀವು ನಮ್ಮ ನಮ್ಮ ಮನೆಗಳಲ್ಲಿ ಹಾಗೂ ಬೀದಿಯಲ್ಲಿ ಸುರಕ್ಷಿತತೆಯನ್ನು ಅನುಭವಿಸುವಂಥ ಕಾಲವು ಬರುವುದು ಎಂದು ನೀವು ನೆನಸುತ್ತೀರೋ?’ (ಮೀಕ 4:3, 4) ಗಾಲಿಕುರ್ಚಿಯು ಹೋಗಿಬರಲಿಕ್ಕಾಗಿ ಒಂದು ಇಳಿಜಾರು ದಾರಿ ಇದೆಯೋ? ಆಗ, ‘ಪ್ರತಿಯೊಬ್ಬರೂ ಒಳ್ಳೆಯ ಆರೋಗ್ಯದಲ್ಲಿ ಆನಂದಿಸುವ ಒಂದು ಕಾಲವು ಬರುವುದೋ?’ ಎಂದು ನಾವು ಕೇಳಬಹುದು. (ಯೆಶಾಯ 33:24) ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯಲ್ಲಿ ಅನೇಕ ಸಲಹೆಗಳನ್ನು ಕಂಡುಕೊಳ್ಳಸಾಧ್ಯವಿದೆ. *
10. ಒಬ್ಬ ಬೈಬಲ್ ವಿದ್ಯಾರ್ಥಿಯ ಹೃದಯದ ಆಲೋಚನೆಗಳು ಮತ್ತು ಭಾವನೆಗಳನ್ನು ‘ಸೇದಲಿಕ್ಕಾಗಿ’ ನಾವು ಪ್ರಶ್ನೆಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ, ಆದರೆ ನಾವು ಯಾವ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
10 ಬೈಬಲ್ ಅಧ್ಯಯನಗಳನ್ನು ನಡೆಸುವಾಗ, ನಾವು ಪ್ರಶ್ನೆಗಳನ್ನು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ? ಯೇಸುವಿನಂತೆ ನಾವು ಹೃದಯಗಳನ್ನು ಓದಲಾರೆವು. ಹಾಗಿದ್ದರೂ, ಜಾಣ್ಮೆಯಿಂದ ಕೂಡಿದ ಆದರೆ ವಿವೇಚನಾಭರಿತವಾದ ಪ್ರಶ್ನೆಗಳು, ವಿದ್ಯಾರ್ಥಿಯ ಹೃದಯದ ಆಲೋಚನೆಗಳು ಮತ್ತು ಭಾವನೆಗಳನ್ನು ‘ಸೇದಲು’ ನಮಗೆ ಸಹಾಯಮಾಡಬಲ್ಲವು. (ಜ್ಞಾನೋಕ್ತಿ 20:5) ಉದಾಹರಣೆಗೆ, ಜ್ಞಾನ ಪುಸ್ತಕದಲ್ಲಿ “ದೈವಭಕ್ತಿಯ ಜೀವನವನ್ನು ನಡೆಸುವುದು ಸಂತೋಷವನ್ನು ತರುವ ಕಾರಣ” ಎಂಬ ಅಧ್ಯಾಯವನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ ಎಂದಿಟ್ಟುಕೊಳ್ಳಿ. ಅದು ಅಪ್ರಾಮಾಣಿಕತೆ, ವ್ಯಭಿಚಾರ, ಮತ್ತು ಇನ್ನಿತರ ವಿಷಯಗಳ ಕುರಿತಾದ ದೇವರ ದೃಷ್ಟಿಕೋನವನ್ನು ಚರ್ಚಿಸುತ್ತದೆ. ವಿದ್ಯಾರ್ಥಿಯು ಮುದ್ರಿತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಬಹುದು, ಆದರೆ ಅವನು ಏನನ್ನು ಕಲಿಯುತ್ತಿದ್ದಾನೋ ಅದರೊಂದಿಗೆ ಸಮ್ಮತಿಸುತ್ತಾನೋ? ನಾವು ಹೀಗೆ ಕೇಳಬಹುದು: ‘ಅಂಥ ವಿಷಯಗಳ ಕುರಿತಾದ ಯೆಹೋವನ ದೃಷ್ಟಿಕೋನವು ನಿಮಗೆ ಸಮಂಜಸವಾಗಿ ಕಾಣುತ್ತದೋ?’ ‘ಈ ಬೈಬಲ್ ಮೂಲತತ್ತ್ವಗಳನ್ನು ನೀವು ನಿಮ್ಮ ಜೀವಿತದಲ್ಲಿ ಹೇಗೆ ಅನ್ವಯಿಸಬಲ್ಲಿರಿ?’ ಆದರೂ, ವಿದ್ಯಾರ್ಥಿಗೆ ಸಲ್ಲತಕ್ಕ ಮಾನವನ್ನು ಸಲ್ಲಿಸುತ್ತಾ, ಗೌರವವನ್ನು ತೋರಿಸುವ ಅಗತ್ಯವಿದೆ ಎಂಬುದನ್ನು ಮನಸ್ಸಿನಲ್ಲಿಡಿರಿ. ಒಬ್ಬ ಬೈಬಲ್ ವಿದ್ಯಾರ್ಥಿಗೆ ಪೇಚಾಟವನ್ನುಂಟುಮಾಡುವ ಅಥವಾ ಅವಮಾನಕರವಾಗಿರುವ ಪ್ರಶ್ನೆಗಳನ್ನು ನಾವು ಕೇಳಲು ಬಯಸಬಾರದು.—ಜ್ಞಾನೋಕ್ತಿ 12:18.
11. ಯಾವ ರೀತಿಗಳಲ್ಲಿ ಸಾರ್ವಜನಿಕ ಭಾಷಣಕಾರರು ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ?
11 ಸಾರ್ವಜನಿಕ ಭಾಷಣಕಾರರು ಸಹ ಪ್ರಶ್ನೆಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಉಪಯೋಗಿಸಬಲ್ಲರು. ಅಲಂಕಾರಿಕ ಪ್ರಶ್ನೆಗಳು, ಅಂದರೆ ನಮ್ಮ ಕೇಳುಗರು ಗಟ್ಟಿಯಾಗಿ ಉತ್ತರಿಸುವಂತೆ ನಾವು ನಿರೀಕ್ಷಿಸದಿರುವಂಥ ಪ್ರಶ್ನೆಗಳು, ಸಭಿಕರು ಮನಸ್ಸಿನಲ್ಲೇ ಆಲೋಚಿಸುವಂತೆ ಮತ್ತು ತರ್ಕಿಸುವಂತೆ ಸಹಾಯಮಾಡಸಾಧ್ಯವಿದೆ. ಕೆಲವೊಮ್ಮೆ ಯೇಸು ಅಂಥ ಪ್ರಶ್ನೆಗಳನ್ನು ಉಪಯೋಗಿಸಿದನು. (ಮತ್ತಾಯ 11:7-9) ಇದಕ್ಕೆ ಕೂಡಿಸಿ, ಪೀಠಿಕಾ ಹೇಳಿಕೆಗಳನ್ನು ಮಾಡಿದ ನಂತರ, ಚರ್ಚಿಸಲ್ಪಡಲಿರುವ ಮುಖ್ಯಾಂಶಗಳನ್ನು ತಿಳಿಸಲಿಕ್ಕಾಗಿಯೂ ಒಬ್ಬ ಭಾಷಣಕಾರನು ಪ್ರಶ್ನೆಗಳನ್ನು ಉಪಯೋಗಿಸಬಹುದು. “ನಮ್ಮ ಇಂದಿನ ಚರ್ಚೆಯಲ್ಲಿ, . . . ಎಂಬ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ಪರಿಗಣಿಸಲಿರುವೆವು” ಎಂದು ಅವನು ಹೇಳಬಹುದು. ತದನಂತರ ಸಮಾಪ್ತಿಯಲ್ಲಿ, ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಆ ಪ್ರಶ್ನೆಗಳನ್ನು ಅವನು ಸಂಬೋಧಿಸಸಾಧ್ಯವಿದೆ.
12. ಒಬ್ಬ ಜೊತೆ ವಿಶ್ವಾಸಿಯು ದೇವರ ವಾಕ್ಯದಿಂದ ಸಾಂತ್ವನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಕ್ರೈಸ್ತ ಹಿರಿಯರು ಹೇಗೆ ಪ್ರಶ್ನೆಗಳನ್ನು ಉಪಯೋಗಿಸಸಾಧ್ಯವಿದೆ ಎಂಬುದನ್ನು ತೋರಿಸಲಿಕ್ಕಾಗಿ ಒಂದು ಉದಾಹರಣೆಯನ್ನು ಕೊಡಿರಿ.
12 ಕ್ರೈಸ್ತ ಹಿರಿಯರು, “ಮನಗುಂದಿ”ರುವಂಥ ಒಬ್ಬ ವ್ಯಕ್ತಿಯು ಯೆಹೋವನ ವಾಕ್ಯದಿಂದ ಸಾಂತ್ವನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ, ತಮ್ಮ ಕುರಿಪಾಲನಾ ಕೆಲಸದಲ್ಲಿಯೂ ಪ್ರಶ್ನೆಗಳನ್ನು ಉಪಯೋಗಿಸಬಲ್ಲರು. (1 ಥೆಸಲೊನೀಕ 5:14) ಉದಾಹರಣೆಗೆ, ಖಿನ್ನನಾಗಿರುವಂಥ ಒಬ್ಬ ವ್ಯಕ್ತಿಗೆ ಸಹಾಯಮಾಡಲಿಕ್ಕಾಗಿ ಒಬ್ಬ ಹಿರಿಯನು ಕೀರ್ತನೆ 34:18ರ ಕಡೆಗೆ ಗಮನವನ್ನು ಮಾರ್ಗದರ್ಶಿಸಬಹುದು. ಅದು ಹೀಗೆ ಹೇಳುತ್ತದೆ: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” ಈ ವಚನವು ತನಗೆ ವೈಯಕ್ತಿಕವಾಗಿ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ನಿರುತ್ಸಾಹಗೊಂಡಿರುವ ಒಬ್ಬ ವ್ಯಕ್ತಿಯು ಅರ್ಥಮಾಡಿಕೊಳ್ಳುತ್ತಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಹಿರಿಯರು ಹೀಗೆ ಕೇಳಬಹುದು: ‘ಯೆಹೋವನು ಯಾರಿಗೆ ನೆರವಾಗುತ್ತಾನೆ? ನಿಮಗೂ ಕೆಲವೊಮ್ಮೆ ‘ಮನಸ್ಸು ಮುರಿದ’ ಹಾಗೂ “ಕುಗ್ಗಿಹೋದ” ಅನಿಸಿಕೆಯಾಗುತ್ತದೋ? ಬೈಬಲು ಹೇಳುವಂತೆ, ಈ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಯೆಹೋವನು ನೆರವಾಗುತ್ತಾನಾದರೆ ಆತನು ನಿಮಗೂ ನೆರವು ನೀಡುತ್ತಾನೆ ಎಂದು ಇದು ಅರ್ಥೈಸುವುದಿಲ್ಲವೋ?’ ಇಂಥ ಕೋಮಲಭಾವದ ಪುನರಾಶ್ವಾಸನೆಯು, ಮನಗುಂದಿರುವಂಥ ಒಬ್ಬ ವ್ಯಕ್ತಿಯ ಆತ್ಮವನ್ನು ಉಜ್ಜೀವಿಸುವುದು.—ಯೆಶಾಯ 57:15.
ತರ್ಕಬದ್ಧವಾದ ವಾದಸರಣಿ
13, 14. (ಎ) ತಾನು ನೋಡಸಾಧ್ಯವಿಲ್ಲದಿರುವಂಥ ಒಬ್ಬ ದೇವರಲ್ಲಿ ನಂಬಿಕೆಯಿಡಲಾರೆ ಎಂದು ಹೇಳುವಂಥ ಯಾರೊಂದಿಗಾದರೂ ನಾವು ಹೇಗೆ ತರ್ಕಿಸಬಹುದು? (ಬಿ) ಪ್ರತಿಯೊಬ್ಬರೂ ನಮ್ಮ ವಾದಸರಣಿಯನ್ನು ಒಪ್ಪುವರು ಎಂದು ನಾವು ನಿರೀಕ್ಷಿಸಬಾರದೇಕೆ?
13 ನಮ್ಮ ಶುಶ್ರೂಷೆಯಲ್ಲಿ ನಾವು ಸದೃಢವಾದ, ಒಡಂಬಡಿಸುವಂಥ ಅ. ಕೃತ್ಯಗಳು 19:8; 28:23, 24) ದೇವರ ವಾಕ್ಯದ ಸತ್ಯದ ಕುರಿತು ಇತರರನ್ನು ಒಡಂಬಡಿಸಲಿಕ್ಕಾಗಿ ನಾವು ಜಟಿಲವಾದ ತರ್ಕವನ್ನು ಉಪಯೋಗಿಸಲು ಕಲಿಯಬೇಕು ಎಂಬುದನ್ನು ಇದು ಅರ್ಥೈಸುತ್ತದೋ? ಖಂಡಿತವಾಗಿಯೂ ಇಲ್ಲ. ಸದೃಢವಾದ ವಾದಸರಣಿಯು ಜಟಿಲವಾಗಿರುವ ಅಗತ್ಯವಿಲ್ಲ. ಸರಳವಾದ ರೀತಿಯಲ್ಲಿ ಪ್ರಸ್ತುತಪಡಿಸಲ್ಪಟ್ಟ ತರ್ಕಬದ್ಧವಾದ ವಾದಗಳು ಅನೇಕವೇಳೆ ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಒಂದು ಉದಾಹರಣೆಯನ್ನು ಪರಿಗಣಿಸಿರಿ.
ವಾದಸರಣಿಯೊಂದಿಗೆ ಜನರ ಹೃದಯಗಳನ್ನು ತಲಪಲು ಬಯಸುತ್ತೇವೆ. (14 ತಾನು ನೋಡಸಾಧ್ಯವಿಲ್ಲದ ಒಬ್ಬ ದೇವರಲ್ಲಿ ನಂಬಿಕೆಯಿಡಲಾರೆ ಎಂದು ಯಾರಾದರೊಬ್ಬರು ಹೇಳುವಾಗ ನಾವು ಹೇಗೆ ಪ್ರತಿಕ್ರಿಯಿಸಬಹುದು? ಕಾರ್ಯಕಾರಣಭಾವದ ಕುರಿತಾದ ಸ್ವಾಭಾವಿಕ ನಿಯಮದ ಆಧಾರದ ಮೇಲೆ ನೀವು ತರ್ಕಿಸಬಹುದು. ಒಂದು ಕಾರ್ಯವನ್ನು ಗಮನಿಸುವಾಗ, ಅದಕ್ಕೆ ಒಂದು ಕಾರಣವೂ ಇರಬೇಕೆಂದು ನಾವು ಒಪ್ಪಿಕೊಳ್ಳುತ್ತೇವೆ. ನಾವು ಹೀಗೆ ಹೇಳಬಹುದು: ‘ನೀವು ಬಹು ದೂರದಲ್ಲಿರುವ ಒಂದು ಪ್ರದೇಶದಲ್ಲಿದ್ದು, ಚೆನ್ನಾಗಿ ಕಟ್ಟಲ್ಪಟ್ಟಿರುವ ಒಂದು ಮನೆಯನ್ನು ಹಾಗೂ ಅದರ ಕಪಾಟುಗಳು ಆಹಾರದಿಂದ (ಕಾರ್ಯ) ತುಂಬಿರುವುದನ್ನು ನೀವು ಅನಿರೀಕ್ಷಿತವಾಗಿ ನೋಡುವುದಾದರೆ, ಯಾರೋ ಒಬ್ಬರು (ಕಾರಣ) ಆ ಮನೆಯನ್ನು ಕಟ್ಟಿದರು ಮತ್ತು ಅದರ ಉಗ್ರಾಣಗಳಲ್ಲಿ ಸಾಮಾನುಗಳನ್ನು ತುಂಬಿಟ್ಟಿದ್ದರು ಎಂಬುದನ್ನು ನೀವು ಸುಲಭವಾಗಿ ಒಪ್ಪಿಕೊಳ್ಳುವಿರಿ. ತದ್ರೀತಿಯಲ್ಲಿ, ನಿಸರ್ಗದಲ್ಲಿನ ವಿನ್ಯಾಸವನ್ನು ಹಾಗೂ ಭೂಮಿಯ “ಉಗ್ರಾಣ”ದಲ್ಲಿ (ಕಾರ್ಯ) ಯಥೇಚ್ಛವಾಗಿರುವ ಆಹಾರವನ್ನು ನಾವು ನೋಡುವಾಗ, ಯಾರೋ ಒಬ್ಬರು (ಕಾರಣ) ಅದಕ್ಕೆ ಕಾರಣರಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದು ತರ್ಕಬದ್ಧವಾದುದಲ್ಲವೋ?’ ಬೈಬಲಿನ ಸರಳವಾದ ವಾದವು, ಈ ವಾಸ್ತವಾಂಶವನ್ನು ಸ್ಪಷ್ಟವಾಗಿ ಈ ಮಾತುಗಳಲ್ಲಿ ತಿಳಿಸುತ್ತದೆ: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ಆದರೆ ನಮ್ಮ ವಾದಸರಣಿಯು ಎಷ್ಟೇ ಸದೃಢವಾಗಿರಬಹುದಾದರೂ, ಪ್ರತಿಯೊಬ್ಬರೂ ಅದನ್ನು ಒಪ್ಪಲಾರರು. ಯಾರು “ನಿತ್ಯಜೀವಕ್ಕೆ ನೇಮಿಸಲ್ಪಟ್ಟವ”ರಾಗಿದ್ದಾರೋ ಅಂಥವರು ಮಾತ್ರ ವಿಶ್ವಾಸಿಗಳಾಗುವರು ಎಂದು ಬೈಬಲು ನಮಗೆ ಜ್ಞಾಪಕಹುಟ್ಟಿಸುತ್ತದೆ.—ಅ. ಕೃತ್ಯಗಳು 13:48; 2 ಥೆಸಲೊನೀಕ 3:2.
15. ಯೆಹೋವನ ಗುಣಗಳನ್ನು ಮತ್ತು ಮಾರ್ಗಗಳನ್ನು ಎತ್ತಿತೋರಿಸಲಿಕ್ಕಾಗಿ ನಾವು ತರ್ಕಬದ್ಧವಾದ ಯಾವ ವಾದಸರಣಿಯನ್ನು ಉಪಯೋಗಿಸಸಾಧ್ಯವಿದೆ, ಮತ್ತು ಅಂಥ ವಾದಸರಣಿಯನ್ನು ನಾವು ಹೇಗೆ ಉಪಯೋಗಿಸಬಹುದು ಎಂಬುದನ್ನು ಯಾವ ಎರಡು ಉದಾಹರಣೆಗಳು ತೋರಿಸುತ್ತವೆ?
15 ನಮ್ಮ ಬೋಧನೆಯಲ್ಲಿ—ಕ್ಷೇತ್ರ ಶುಶ್ರೂಷೆಯಲ್ಲಾಗಲಿ ಸಭೆಯಲ್ಲಾಗಲಿ—ಯೆಹೋವನ ಗುಣಗಳನ್ನು ಮತ್ತು ಮಾರ್ಗಗಳನ್ನು ಎತ್ತಿತೋರಿಸಲಿಕ್ಕಾಗಿ ನಾವು ತರ್ಕಬದ್ಧವಾದ ವಾದಸರಣಿಯನ್ನು ಉಪಯೋಗಿಸಸಾಧ್ಯವಿದೆ. ಕೆಲವೊಮ್ಮೆ ಯೇಸು ಉಪಯೋಗಿಸಿದ ‘ಎಷ್ಟು ಹೆಚ್ಚು’ ಎಂಬ ವಾದಸರಣಿಯು ವಿಶೇಷವಾಗಿ ಪರಿಣಾಮಕಾರಿಯಾಗಿದೆ. (ಲೂಕ 11:13; 12:24) ತದ್ವಿರುದ್ಧವಾದ ವಿಷಯಗಳ ಮೇಲಾಧಾರಿತವಾದ ಈ ರೀತಿಯ ವಾದಸರಣಿಯು ಬಲವಾದ ಪ್ರಭಾವವನ್ನು ಬೀರಬಲ್ಲದು. ನರಕಾಗ್ನಿಯ ಸಿದ್ಧಾಂತದ ಕುರಿತಾದ ಅಸಂಬದ್ಧತೆಯನ್ನು ಬಯಲುಪಡಿಸಲಿಕ್ಕಾಗಿ, ನಾವು ಹೀಗೆ ಹೇಳಬಹುದು: ‘ಪ್ರೀತಿಯುಳ್ಳ ಯಾವ ತಂದೆಯೂ ತನ್ನ ಮಗುವಿನ ಕೈಯನ್ನು ಬೆಂಕಿಯ ಮೇಲೆ ಹಿಡಿಯುವ ಮೂಲಕ ಅದಕ್ಕೆ ಶಿಕ್ಷೆಕೊಡಲಾರನು. ಹೀಗಿರುವಾಗ, ನಮ್ಮ ಪ್ರೀತಿಯ ಸ್ವರ್ಗೀಯ ತಂದೆಗೆ, ನರಕಾಗ್ನಿಯ ಕಲ್ಪನೆಯೇ ಎಷ್ಟು ಹೆಚ್ಚು ಅಸಹ್ಯಕರವಾಗಿರಬೇಕು!’ (ಯೆರೆಮೀಯ 7:31) ಯೆಹೋವನು ತನ್ನ ಸೇವಕರಲ್ಲಿ ಒಬ್ಬೊಬ್ಬರನ್ನೂ ಪರಾಮರಿಸುತ್ತಾನೆ ಎಂಬುದನ್ನು ಬೋಧಿಸಲಿಕ್ಕಾಗಿ ನಾವು ಹೀಗೆ ಹೇಳಸಾಧ್ಯವಿದೆ: ‘ನೂರಾರು ಕೋಟಿ ನಕ್ಷತ್ರಗಳಲ್ಲಿ ಪ್ರತಿಯೊಂದನ್ನೂ ಯೆಹೋವನು ಹೆಸರಿನಿಂದ ಕರೆಯುವುದಾದರೆ, ತನ್ನನ್ನು ಪ್ರೀತಿಸುವ ಹಾಗೂ ತನ್ನ ಪುತ್ರನ ಅಮೂಲ್ಯ ರಕ್ತದಿಂದ ಕೊಂಡುಕೊಳ್ಳಲ್ಪಟ್ಟಿರುವ ಮಾನವರ ಕುರಿತು ಆತನೆಷ್ಟು ಕಾಳಜಿಯುಳ್ಳವನಾಗಿರಬೇಕು!’ (ಯೆಶಾಯ 40:26; ಅ. ಕೃತ್ಯಗಳು 20:28) ಇಂಥ ಒಡಂಬಡಿಸುವ ವಾದಸರಣಿಯು, ಇತರರ ಹೃದಯಗಳನ್ನು ತಲಪಲು ನಮಗೆ ಸಹಾಯಮಾಡಬಲ್ಲದು.
ಸೂಕ್ತವಾದ ದೃಷ್ಟಾಂತಗಳು
16. ಬೋಧಿಸುವಿಕೆಯಲ್ಲಿ ದೃಷ್ಟಾಂತಗಳು ಏಕೆ ಅಮೂಲ್ಯವಾಗಿವೆ?
16 ಪರಿಣಾಮಕಾರಿ ದೃಷ್ಟಾಂತಗಳು ಮಸಾಲೆಯಂತಿದ್ದು, ನಮ್ಮ ಬೋಧನೆಯನ್ನು ಇತರರಿಗೆ ಹೆಚ್ಚು ಸ್ವಾದಿಷ್ಟಕರವಾಗಿ ಮಾಡುತ್ತವೆ. ಬೋಧನೆಯಲ್ಲಿ ದೃಷ್ಟಾಂತಗಳು ಏಕೆ ಅಮೂಲ್ಯವಾದವುಗಳಾಗಿವೆ? ಒಬ್ಬ ಶಿಕ್ಷಕನು ಗಮನಿಸಿದ್ದು: “ಅಗೋಚರವಾದ ವಿಷಯದ ಕುರಿತಾಗಿ ಆಲೋಚಿಸುವ ಸಾಮರ್ಥ್ಯವು, ಮಾನವ ಸಾಧನೆಗಳಲ್ಲೇ ಅತ್ಯಂತ ಕಷ್ಟಕರವಾದ ಸಾಧನೆಯಾಗಿದೆ.” ದೃಷ್ಟಾಂತಗಳು ಅರ್ಥಭರಿತವಾದ ಚಿತ್ರಗಳನ್ನು ನಮ್ಮ ಮನಸ್ಸಿನ ಮೇಲೆ ಅಚ್ಚೊತ್ತುತ್ತವೆ ಮತ್ತು ಹೊಸ ವಿಚಾರಗಳನ್ನು ಗ್ರಹಿಸಲು ನಮಗೆ ಪೂರ್ಣ ರೀತಿಯಲ್ಲಿ ಸಹಾಯಮಾಡುತ್ತವೆ. ದೃಷ್ಟಾಂತಗಳ ತನ್ನ ಉಪಯೋಗದಲ್ಲಿ ಯೇಸು ಗಮನಾರ್ಹನಾಗಿದ್ದನು. (ಮಾರ್ಕ 4:33, 34) ಈ ಬೋಧನಾ ವಿಧಾನವನ್ನು ನಾವು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ನಾವೀಗ ಪರಿಗಣಿಸೋಣ.
17. ಯಾವ ನಾಲ್ಕು ಅಂಶಗಳು ಒಂದು ದೃಷ್ಟಾಂತವನ್ನು ಪರಿಣಾಮಕಾರಿಯಾದದ್ದಾಗಿ ಮಾಡುತ್ತವೆ?
17 ಒಂದು ದೃಷ್ಟಾಂತವನ್ನು ಯಾವುದು ಪರಿಣಾಮಕಾರಿಯಾಗಿ ಮಾಡುತ್ತದೆ? ಮೊದಲನೆಯದಾಗಿ, ನಮ್ಮ ಕೇಳುಗರು ಸುಲಭವಾಗಿ ಅರ್ಥಮಾಡಿಕೊಳ್ಳುವಂಥ ಸನ್ನಿವೇಶಗಳನ್ನು ಉಪಯೋಗಿಸುತ್ತಾ, ಅದು ನಮ್ಮ ಸಭಿಕರಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತಿರಬೇಕು. ಯೇಸು ತನ್ನ ಅನೇಕ ದೃಷ್ಟಾಂತಗಳನ್ನು, ತನ್ನ ಕೇಳುಗರ ದೈನಂದಿನ ಜೀವಿತಕ್ಕೆ ಸಂಬಂಧಿಸಿದ ವಿಷಯಗಳಿಂದ ಪಡೆದುಕೊಂಡನು ಎಂಬುದನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಎರಡನೆಯದಾಗಿ, ಉಪಯೋಗಿಸಲ್ಪಡುವ ದೃಷ್ಟಾಂತವು ತಿಳಿಸಲ್ಪಡುತ್ತಿರುವ ಅಂಶಕ್ಕೆ ಸಮಂಜಸವಾದ ರೀತಿಯಲ್ಲಿ ಹೋಲಿಕೆಯುಳ್ಳದ್ದಾಗಿರಬೇಕು. ಹೋಲಿಕೆಯು ಸೂಕ್ತವಾಗಿರದಿದ್ದಲ್ಲಿ, ದೃಷ್ಟಾಂತವು ನಮ್ಮ ಕೇಳುಗರನ್ನು ಅಪಕರ್ಷಿಸಬಹುದು. ಮೂರನೆಯದಾಗಿ, ಒಂದು ದೃಷ್ಟಾಂತದಲ್ಲಿ ಅನೇಕ ಅನಗತ್ಯ ವಿವರಗಳು ಒಳಗೂಡಿರಬಾರದು. ಯೇಸು ಅಗತ್ಯವಿರುವ ವಿವರಗಳನ್ನು ಒದಗಿಸಿದನಾದರೂ ಅನಗತ್ಯ ವಿಷಯಗಳನ್ನು ಒಳಗೂಡಿಸಲಿಲ್ಲ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನಾಲ್ಕನೆಯದಾಗಿ, ನಾವು ಒಂದು ದೃಷ್ಟಾಂತವನ್ನು ಉಪಯೋಗಿಸುವಾಗ, ಅದರ ಅನ್ವಯವು ಸ್ಪಷ್ಟವಾಗಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಕೆಲವರು ಆ ದೃಷ್ಟಾಂತದ ಅನ್ವಯವನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಬಹುದು.
18. ನಾವು ಸೂಕ್ತವಾದ ದೃಷ್ಟಾಂತಗಳನ್ನು ಹೇಗೆ ಮಂಡಿಸಸಾಧ್ಯವಿದೆ?
18 ಸೂಕ್ತವಾದ ದೃಷ್ಟಾಂತಗಳನ್ನು ನಾವು ಹೇಗೆ ಮಂಡಿಸಸಾಧ್ಯವಿದೆ? ಅ. ಕೃತ್ಯಗಳು 3:19ರಲ್ಲಿ ತಿಳಿಸಲ್ಪಟ್ಟಿರುವ ಅಂಶವನ್ನು ದೃಷ್ಟಾಂತಿಸಲು ನಾವು ಬಯಸುತ್ತೇವೆ. ಅಲ್ಲಿ ಯೆಹೋವನು ನಮ್ಮ ಪಾಪಗಳನ್ನು ‘ಅಳಿಸಿಬಿಡುತ್ತಾನೆ’ ಎಂದು ತಿಳಿಸಲಾಗಿದೆ. ಅದು ತಾನೇ ಒಂದು ಸುಸ್ಪಷ್ಟವಾದ ಅಲಂಕಾರವಾಗಿದೆ, ಆದರೆ ಆ ಅಂಶವನ್ನು ದೃಷ್ಟಾಂತಿಸಲಿಕ್ಕಾಗಿ ನಾವು ಯಾವ ನೈಜ ಉದಾಹರಣೆಯನ್ನು ಉಪಯೋಗಿಸಸಾಧ್ಯವಿದೆ—ಒಂದು ರಬ್ಬರನ್ನೊ? ಒಂದು ಸ್ಪಂಜನ್ನೊ? ನಾವು ಹೀಗೆ ಹೇಳಬಹುದು: ‘ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುವಾಗ, ಅದು ಆತನು ಒಂದು ಸ್ಪಂಜನ್ನೊ (ಅಥವಾ ಒಂದು ರಬ್ಬರನ್ನೊ) ತೆಗೆದುಕೊಂಡು ಅವುಗಳನ್ನು ಅಳಿಸಿಹಾಕುತ್ತಾನೋ ಎಂಬಂತಿದೆ.’ ಅಂಥ ಒಂದು ಸರಳ ದೃಷ್ಟಾಂತದ ಅಂಶವನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೇನಲ್ಲ.
ತುಂಬ ಉದ್ದವಾದ, ವಿವರಣಾತ್ಮಕವಾದ ಕಥೆಗಳ ಕುರಿತು ನಾವು ಆಲೋಚಿಸುವ ಅಗತ್ಯವಿಲ್ಲ. ಚಿಕ್ಕ ದೃಷ್ಟಾಂತಗಳು ತುಂಬ ಪರಿಣಾಮಕಾರಿಯಾಗಿರಸಾಧ್ಯವಿದೆ. ಚರ್ಚಿಸಲ್ಪಡುತ್ತಿರುವ ಅಂಶದ ಕುರಿತಾದ ಉದಾಹರಣೆಗಳ ಬಗ್ಗೆ ಆಲೋಚಿಸಲು ಪ್ರಯತ್ನಿಸಿರಿ. ಉದಾಹರಣೆಗಾಗಿ, ನಾವು ದೇವರ ಕ್ಷಮಾಪಣೆಯ ವಿಷಯದಲ್ಲಿ ಚರ್ಚಿಸುತ್ತಿದ್ದೇವೆ ಎಂದಿಟ್ಟುಕೊಳ್ಳಿ. ಮತ್ತು19, 20. (ಎ) ಒಳ್ಳೆಯ ದೃಷ್ಟಾಂತಗಳನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? (ಬಿ) ನಮ್ಮ ಸಾಹಿತ್ಯದಲ್ಲಿ ಪ್ರಕಾಶಿಸಲ್ಪಟ್ಟಿರುವ ಪರಿಣಾಮಕಾರಿ ದೃಷ್ಟಾಂತಗಳ ಕೆಲವು ಉದಾಹರಣೆಗಳು ಯಾವುವು? (ರೇಖಾಚೌಕವನ್ನು ಸಹ ನೋಡಿ.)
19 ನಿಜ ಜೀವನದ ಉದಾಹರಣೆಗಳನ್ನೂ ಸೇರಿಸಿ, ಸೂಕ್ತವಾದ ದೃಷ್ಟಾಂತಗಳನ್ನು ನೀವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ನಿಮ್ಮ ಸ್ವಂತ ಜೀವನದಲ್ಲಿ ಅಥವಾ ಜೊತೆ ವಿಶ್ವಾಸಿಗಳ ಬೇರೆ ಬೇರೆ ಹಿನ್ನೆಲೆಗಳಲ್ಲಿ ಅಥವಾ ಅನುಭವಗಳಲ್ಲಿ ಅವುಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. ಸಜೀವ ಹಾಗೂ ನಿರ್ಜೀವ ವಸ್ತುಗಳಿಂದ, ಮನೆಯ ವಸ್ತುಗಳಿಂದ, ಅಥವಾ ಸಮುದಾಯದಲ್ಲಿ ಸುಪ್ರಸಿದ್ಧವಾಗಿರುವ ಸದ್ಯದ ಒಂದು ಘಟನೆಯನ್ನೂ ಒಳಗೊಂಡು ಇನ್ನಿತರ ಮೂಲಗಳಿಂದಲೂ ದೃಷ್ಟಾಂತಗಳನ್ನು ಆಯ್ದುಕೊಳ್ಳಸಾಧ್ಯವಿದೆ. ಒಳ್ಳೆಯ ದೃಷ್ಟಾಂತಗಳನ್ನು ಕಂಡುಕೊಳ್ಳಲಿಕ್ಕಾಗಿರುವ ಪರಿಣಾಮಕಾರಿ ವಿಧವು, ನಮ್ಮ ಸುತ್ತಲೂ ನಡೆಯುವ ದೈನಂದಿನ ಸನ್ನಿವೇಶಗಳ ವಿಷಯದಲ್ಲಿ ಎಚ್ಚರರಾಗಿರುವುದು, ಅಂದರೆ “ಚೆನ್ನಾಗಿ ನೋಡು”ವುದೇ ಆಗಿದೆ. (ಅ. ಕೃತ್ಯಗಳು 17:22, 23) ಬಹಿರಂಗವಾಗಿ ಭಾಷಣ ನೀಡುವುದರ ವಿಷಯದಲ್ಲಿ ಒಂದು ಪರಾಮರ್ಶೆಯ ಕೃತಿಯು ಹೀಗೆ ವಿವರಿಸುತ್ತದೆ: “ಮಾನವ ಜೀವಿತವನ್ನು ಹಾಗೂ ಅದರ ಬೇರೆ ಬೇರೆ ವೃತ್ತಿಗಳನ್ನು ಗಮನಿಸುವ, ಎಲ್ಲ ರೀತಿಯ ಮನುಷ್ಯರೊಂದಿಗೆ ಮಾತಾಡುವ, ವಿಷಯಗಳನ್ನು ನಿಕಟವಾಗಿ ಪರೀಕ್ಷಿಸುವ ಮತ್ತು ತಾನು ಅವುಗಳನ್ನು ಅರ್ಥಮಾಡಿಕೊಳ್ಳುವ ತನಕ ಪ್ರಶ್ನೆಗಳನ್ನು ಕೇಳುವ ಒಬ್ಬ ಭಾಷಣಕರ್ತನು, ಅಗತ್ಯವಿರುವಾಗ ತನಗೆ ತುಂಬ ಸಹಾಯಕರವಾಗಿರುವಂಥ ದೃಷ್ಟಾಂತಭರಿತ ವಿಷಯಭಾಗವನ್ನು ಅತ್ಯಧಿಕ ಮಟ್ಟಿಗೆ ಸಂಗ್ರಹಿಸುತ್ತಾನೆ.”
20 ಇನ್ನೊಂದು ರೀತಿಯ ಪರಿಣಾಮಕಾರಿ ದೃಷ್ಟಾಂತಗಳ ಸಂಪದ್ಭರಿತ ಮೂಲವು ಇದೆ. ಇದು ಯೆಹೋವನ ಸಾಕ್ಷಿಗಳಿಂದ ಉತ್ಪಾದಿಸಲ್ಪಡುವ ಕಾವಲಿನಬುರುಜು, ಎಚ್ಚರ!, ಮತ್ತು ಇತರ ಸಾಹಿತ್ಯವೇ ಆಗಿದೆ. ಈ ಪ್ರಕಾಶನಗಳು ದೃಷ್ಟಾಂತಗಳನ್ನು ಹೇಗೆ ಉಪಯೋಗಿಸುತ್ತವೆ ಎಂಬುದನ್ನು ಗಮನಿಸುವ ಮೂಲಕ ನೀವು ಹೆಚ್ಚಿನದ್ದನ್ನು ಕಲಿಯಸಾಧ್ಯವಿದೆ. * ಉದಾಹರಣೆಗೆ, ಜ್ಞಾನ ಪುಸ್ತಕದ 17ನೆಯ ಅಧ್ಯಾಯದ 11ನೆಯ ಪ್ಯಾರಗ್ರಾಫ್‌ನಲ್ಲಿ ಉಪಯೋಗಿಸಲ್ಪಟ್ಟಿರುವ ದೃಷ್ಟಾಂತವನ್ನು ತೆಗೆದುಕೊಳ್ಳಿ. ಅದು ಸಭೆಯಲ್ಲಿರುವ ಬೇರೆ ಬೇರೆ ರೀತಿಯ ವ್ಯಕ್ತಿತ್ವಗಳನ್ನು, ರಸ್ತೆಯಲ್ಲಿ ನೀವು ಪ್ರಯಾಣಿಸುತ್ತಿರುವ ದಿಕ್ಕಿನಲ್ಲೇ ಪ್ರಯಾಣಿಸುತ್ತಿರುವ ಬೇರೆ ಬೇರೆ ರೀತಿಯ ವಾಹನಗಳಿಗೆ ಹೋಲಿಸುತ್ತದೆ. ಇದು ಪರಿಣಾಮಕಾರಿಯಾಗಿದೆ ಏಕೆ? ಏಕೆಂದರೆ ಇದು ದೈನಂದಿನ ಪರಿಸ್ಥಿತಿಗಳ ಮೇಲೆ ಆಧಾರಿತವಾದದ್ದಾಗಿದೆ, ತಿಳಿಸಲ್ಪಡುತ್ತಿರುವ ಅಂಶಕ್ಕೆ ಹೋಲಿಕೆಯುಳ್ಳದ್ದಾಗಿದೆ, ಮತ್ತು ಅದರ ಅನ್ವಯವು ಸ್ಪಷ್ಟವಾಗಿದೆ ಎಂಬುದನ್ನು ಗಮನಿಸಿರಿ. ಒಬ್ಬ ಬೈಬಲ್ ವಿದ್ಯಾರ್ಥಿಯ ಆವಶ್ಯಕತೆಗಳಿಗೆ ಹೊಂದಿಸಿಕೊಂಡು ಅಥವಾ ಒಂದು ಭಾಷಣದಲ್ಲಿನ ಉಪಯೋಗಕ್ಕಾಗಿ ದೃಷ್ಟಾಂತಗಳನ್ನು ಅಳವಡಿಸಿಕೊಂಡು, ನಮ್ಮ ಬೋಧನೆಯಲ್ಲಿ ನಾವು ಮುದ್ರಿತ ದೃಷ್ಟಾಂತಗಳನ್ನು ಉಪಯೋಗಿಸಬಹುದು.
21. ದೇವರ ವಾಕ್ಯದ ಪರಿಣಾಮಕಾರಿ ಬೋಧಕರಾಗಿರುವುದರಿಂದ ಯಾವ ಪ್ರತಿಫಲಗಳು ಸಿಗುತ್ತವೆ?
21 ಪರಿಣಾಮಕಾರಿ ಬೋಧಕರಾಗಿರುವುದರ ಪ್ರತಿಫಲಗಳು ಮಹತ್ತರವಾಗಿವೆ. ನಾವು ಬೋಧಿಸುವಾಗ, ನಮ್ಮಲ್ಲಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುತ್ತೇವೆ; ನಮ್ಮ ಸಂಪನ್ಮೂಲಗಳಲ್ಲಿ ಕೆಲವನ್ನು ಅವರಿಗೆ ಸಹಾಯಮಾಡಲಿಕ್ಕಾಗಿ ಉಪಯೋಗಿಸುತ್ತೇವೆ. ಅಂಥ ಕೊಡುವಿಕೆಯು ಸಂತೋಷವನ್ನು ನೀಡುತ್ತದೆ, ಏಕೆಂದರೆ ಬೈಬಲ್ ಹೇಳುವುದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.” (ಅ. ಕೃತ್ಯಗಳು 20:35) ದೇವರ ವಾಕ್ಯದ ಬೋಧಕರಿಗಾದರೋ, ನಿಜವಾದ ಹಾಗೂ ಶಾಶ್ವತವಾದ ಮೌಲ್ಯವುಳ್ಳ ಏನನ್ನೋ—ಅಂದರೆ ಯೆಹೋವನ ಕುರಿತಾದ ಸತ್ಯವನ್ನು—ನಾವು ಇತರರಿಗೆ ತಿಳಿಯಪಡಿಸುತ್ತಿದ್ದೇವೆ ಎಂಬುದನ್ನು ಅರಿತಿರುವ ಆನಂದವೇ ಆ ಸಂತೋಷವಾಗಿದೆ. ನಾವು ಮಹಾ ಬೋಧಕನಾದ ಯೇಸು ಕ್ರಿಸ್ತನನನ್ನು ಅನುಕರಿಸುತ್ತಿದ್ದೇವೆ ಎಂಬುದನ್ನು ತಿಳಿಯುವುದರಿಂದ ಉಂಟಾಗುವ ಸಂತೃಪ್ತಿಯನ್ನೂ ನಾವು ಪಡೆಯಸಾಧ್ಯವಿದೆ.
[ಪಾದಟಿಪ್ಪಣಿಗಳು]
^ ಪ್ಯಾರ. 6 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟದ್ದು.
^ ಪ್ಯಾರ. 9 ಈ ಪುಸ್ತಿಕೆಯ 1-7ನೆಯ ಪುಟಗಳಲ್ಲಿರುವ, “ಪೀಠಿಕೆಗಳು—ಕ್ಷೇತ್ರ ಶುಶ್ರೂಷೆಯಲ್ಲಿ ಉಪಯೋಗಿಸಲಿಕ್ಕಾಗಿ” ಎಂಬ ವಿಭಾಗವನ್ನು ನೋಡಿರಿ.—ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟದ್ದು.
^ ಪ್ಯಾರ. 20 ಉದಾಹರಣೆಗಳನ್ನು ಕಂಡುಕೊಳ್ಳಲಿಕ್ಕಾಗಿ, ವಾಚ್ ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ 1986-2000 ಪುಸ್ತಕದಲ್ಲಿ “ದೃಷ್ಟಾಂತಗಳು” ಎಂಬ ಮೇಲ್ವಿಷಯದ ಕೆಳಗೆ ನೋಡಿರಿ—ಇದು ಯೆಹೋವನ ಸಾಕ್ಷಿಗಳಿಂದ ಅನೇಕ ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿದೆ.
ನಿಮಗೆ ನೆನಪಿದೆಯೆ?
• ಒಂದು ಮನೆ ಬೈಬಲ್ ಅಧ್ಯಯನವನ್ನು ನಡೆಸುತ್ತಿರುವಾಗ ಹಾಗೂ ಸಭೆಯಲ್ಲಿ ಒಂದು ಭಾಷಣವನ್ನು ಕೊಡುತ್ತಿರುವಾಗ ನಾವು ಹೇಗೆ ಸರಳವಾದ ರೀತಿಯಲ್ಲಿ ಬೋಧಿಸಬಲ್ಲೆವು?
• ಮನೆಯಿಂದ ಮನೆಗೆ ಸಾರುತ್ತಿರುವಾಗ ನಾವು ಹೇಗೆ ಪ್ರಶ್ನೆಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಉಪಯೋಗಿಸಬಲ್ಲೆವು?
• ಯೆಹೋವನ ಗುಣಗಳನ್ನು ಮತ್ತು ಮಾರ್ಗಗಳನ್ನು ಎತ್ತಿತೋರಿಸಲಿಕ್ಕಾಗಿ ನಾವು ಹೇಗೆ ತರ್ಕಬದ್ಧವಾದ ವಾದಸರಣಿಯನ್ನು ಉಪಯೋಗಿಸಬಹುದು?
• ಸೂಕ್ತವಾದ ದೃಷ್ಟಾಂತಗಳನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
[ಅಧ್ಯಯನ ಪ್ರಶ್ನೆಗಳು]
[ಪುಟ 23ರಲ್ಲಿರುವ ಚೌಕ/ಚಿತ್ರ]
ನಿಮಗೆ ಈ ದೃಷ್ಟಾಂತಗಳ ನೆನಪಿದೆಯೇ?
ಇಲ್ಲಿ ಪರಿಣಾಮಕಾರಿಯಾದ ಕೆಲವೊಂದು ದೃಷ್ಟಾಂತಗಳನ್ನು ಕೊಡಲಾಗಿದೆ. ಕೊಡಲ್ಪಟ್ಟಿರುವ ರೆಫರೆನ್ಸ್‌ಗಳನ್ನು ತೆರೆದು, ಚರ್ಚಿಸಲ್ಪಡುತ್ತಿರುವ ಅಂಶವನ್ನು ಒತ್ತಿಹೇಳಲಿಕ್ಕಾಗಿ ದೃಷ್ಟಾಂತವನ್ನು ಹೇಗೆ ಉಪಯೋಗಿಸಲಾಗಿದೆ ಎಂದು ನೋಡಬಾರದೇಕೆ?
• ಉಯ್ಯಾಲೆ ದಂಡದ ಮೇಲೆ ಸಾಹಸದ ಆಟಗಳನ್ನು ತೋರಿಸುವ ಕ್ರೀಡಾಪಟುಗಳು ಅಥವಾ ಸ್ಕೇಟಿಂಗ್ ಮಾಡುತ್ತಿರುವ ಒಂದು ಜೋಡಿಯಂತೆ, ಯಶಸ್ವಿಕರವಾದ ವಿವಾಹವು ಹೆಚ್ಚಾಗಿ ಒಬ್ಬ ಒಳ್ಳೆಯ ಸಂಗಾತಿಯನ್ನು ಹೊಂದಿರುವುದರ ಮೇಲೆ ಆಧಾರಿತವಾಗಿದೆ.—ಕಾವಲಿನಬುರುಜು, ಮೇ 15, 2001, ಪುಟ 16.
• ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಒಂದು ಚೆಂಡನ್ನು ಎಸೆಯುವಂತಿದೆ. ನೀವು ಅದನ್ನು ಮೃದುವಾಗಿ ಎಸೆಯಸಾಧ್ಯವಿದೆ ಅಥವಾ ಇನ್ನೊಬ್ಬ ವ್ಯಕ್ತಿಗೆ ಘಾಸಿಯಾಗುವಷ್ಟು ರಭಸವಾಗಿಯೂ ಎಸೆಯಸಾಧ್ಯವಿದೆ.—ಎಚ್ಚರ!, ಏಪ್ರಿಲ್ 8, 2001, ಪುಟ 10.
• ಪ್ರೀತಿಯನ್ನು ತೋರಿಸಲು ಕಲಿಯುವುದು, ಒಂದು ಹೊಸ ಭಾಷೆಯನ್ನು ಕಲಿಯುವುದಕ್ಕೆ ಸಮಾನವಾಗಿದೆ.—ಕಾವಲಿನಬುರುಜು, ಫೆಬ್ರವರಿ 15, 1999, ಪುಟ 18, 22-3.
• ಬೇಟೆಗಾರರಿಗೆ ಪ್ರಾಣಿಗಳ ಸೆಳೆಆಹಾರ ಏನು ಮಾಡುತ್ತದೋ ಅದನ್ನೇ ದೆವ್ವಗಳಿಗೆ ಪ್ರೇತವ್ಯವಹಾರವು ಮಾಡುತ್ತದೆ. ಅದು ಬೇಟೆಯ ಪ್ರಾಣಿಯನ್ನು ಆಕರ್ಷಿಸುತ್ತದೆ.—ನಿತ್ಯಜೀವಕ್ಕೆ ನಡೆಸುವ ಜ್ಞಾನ, ಪುಟ 111.
[ಪುಟ 20ರಲ್ಲಿರುವ ಚಿತ್ರಗಳು]
ನಿಜ ಕ್ರೈಸ್ತರು ದೇವರ ವಾಕ್ಯದ ಬೋಧಕರಾಗಿದ್ದಾರೆ
[ಪುಟ 21ರಲ್ಲಿರುವ ಚಿತ್ರ]
ಜೊತೆ ವಿಶ್ವಾಸಿಗಳು ದೇವರ ವಾಕ್ಯದಿಂದ ಸಾಂತ್ವನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಹಿರಿಯರು ಪ್ರಶ್ನೆಗಳನ್ನು ಉಪಯೋಗಿಸಬಲ್ಲರು