ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಲಿತಂಥ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುತ್ತಾ ಇರಿ

ಕಲಿತಂಥ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುತ್ತಾ ಇರಿ

ಕಲಿತಂಥ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುತ್ತಾ ಇರಿ

“ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ, ಮತ್ತು ಯಾವದನ್ನು ನನ್ನಲ್ಲಿ ಕೇಳಿ ಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ [“ಕಾರ್ಯರೂಪಕ್ಕೆ ಹಾಕಿರಿ,” NW]. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.”​—ಫಿಲಿಪ್ಪಿ 4:9.

1, 2. ಸಾಮಾನ್ಯವಾಗಿ, ತಮ್ಮನ್ನು ಧಾರ್ಮಿಕರೆಂದು ಪರಿಗಣಿಸುವ ಜನರ ಜೀವಿತಗಳ ಮೇಲೆ ಬೈಬಲ್‌ ಪ್ರಭಾವವನ್ನು ಬೀರುತ್ತಿದೆಯೊ? ವಿವರಿಸಿರಿ.

“ಧರ್ಮದ ಪ್ರಭಾವವು ಹೆಚ್ಚಾಗುತ್ತಾ ಇದೆ, ಆದರೆ ನೈತಿಕತೆಯ ಪ್ರಭಾವವು ಕಡಿಮೆಯಾಗುತ್ತಾ ಇದೆ.” ತಲೆದೋರುತ್ತಿರುವ ಪ್ರವೃತ್ತಿಗಳು (ಇಂಗ್ಲಿಷ್‌) ಎಂಬ ವಾರ್ತಾಪತ್ರದಲ್ಲಿದ್ದ ಈ ಶೀರ್ಷಿಕಾ ಬರಹವು, ಅಮೆರಿಕದಲ್ಲಿ ನಡೆಸಲ್ಪಟ್ಟ ರಾಷ್ಟ್ರಾದ್ಯಂತದ ಸಮೀಕ್ಷೆಯ ಫಲಿತಾಂಶಗಳನ್ನು ಸಾರಾಂಶಿಸಿತು. ಆ ದೇಶದಲ್ಲಿ, ಚರ್ಚಿಗೆ ಹಾಜರಾಗುವ ಮತ್ತು ಧರ್ಮಕ್ಕೆ ತಮ್ಮ ಜೀವಿತದಲ್ಲಿ ಒಂದು ಪ್ರಮುಖ ಸ್ಥಾನವಿದೆಯೆಂದು ಹೇಳಿಕೊಳ್ಳುವ ಜನರ ಸಂಖ್ಯೆಯಲ್ಲಿ ವೃದ್ಧಿಯಾಗಿರುವಂತೆ ತೋರುತ್ತದೆ. ಆದರೆ ಆ ವರದಿಯು ಹೀಗೂ ಹೇಳುತ್ತದೆ: “ಈ ಭಾವೋತ್ಪಾದಕ ಸಂಖ್ಯೆಗಳ ಎದುರಲ್ಲೂ ಅನೇಕ ಅಮೆರಿಕನರಿಗೆ, ವ್ಯಕ್ತಿಗತ ಜೀವನಗಳು ಮತ್ತು ಸಾಮಾನ್ಯವಾಗಿ ಇಡೀ ಸಮಾಜದ ಮೇಲೆ ಧಾರ್ಮಿಕ ನಂಬಿಕೆಯು ಬೀರುತ್ತಿರುವ ಪ್ರಭಾವದ ಕುರಿತಾಗಿ ಸಂದೇಹಗಳಿವೆ.”

2 ಈ ಸನ್ನಿವೇಶವು ಕೇವಲ ಒಂದು ದೇಶದ ಕಥೆಯಾಗಿರುವುದಿಲ್ಲ. ಲೋಕದಾದ್ಯಂತ ಬೈಬಲನ್ನು ಅಂಗೀಕರಿಸುತ್ತೇವೆ ಮತ್ತು ಧಾರ್ಮಿಕರಾಗಿದ್ದೇವೆಂದು ಹೇಳಿಕೊಳ್ಳುವ ಅನೇಕ ಜನರು, ಶಾಸ್ತ್ರವಚನಗಳು ತಮ್ಮ ಜೀವಿತದ ಮೇಲೆ ನಿಜವಾಗಿಯೂ ಯಾವುದೇ ಪ್ರಭಾವವನ್ನು ಬೀರುವಂತೆ ಬಿಡುವುದಿಲ್ಲ. (2 ತಿಮೊಥೆಯ 3:5) “ನಾವು ಬೈಬಲಿಗೆ ಉಚ್ಚ ಮಾನ್ಯತೆಯನ್ನು ನೀಡುತ್ತೇವಾದರೂ, ವಾಸ್ತವದಲ್ಲಿ ಅದನ್ನು ಓದಲು, ಅಧ್ಯಯನ ಮಾಡಲು ಮತ್ತು ಅನ್ವಯಿಸಲು ಸಮಯವನ್ನು ಕೊಡುವ ವಿಷಯವಾದರೊ ಗತಕಾಲದ ಸಂಗತಿಯಾಗಿಬಿಟ್ಟಿದೆ” ಎಂದು ಒಂದು ಸಂಶೋಧನಾ ಗುಂಪಿನ ಮುಖ್ಯಸ್ಥನು ಹೇಳಿದನು.

3. (ಎ) ನಿಜವಾದ ಕ್ರೈಸ್ತರಾಗುವವರನ್ನು ಬೈಬಲ್‌ ಹೇಗೆ ಪ್ರಭಾವಿಸುತ್ತದೆ? (ಬಿ) ಫಿಲಿಪ್ಪಿ 4:9ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಸಲಹೆಯನ್ನು ಯೇಸುವಿನ ಹಿಂಬಾಲಕರು ಹೇಗೆ ಅನ್ವಯಿಸುತ್ತಾರೆ?

3 ನಿಜವಾದ ಕ್ರೈಸ್ತರ ವಿಷಯದಲ್ಲಾದರೊ ಸನ್ನಿವೇಶವು ಭಿನ್ನವಾಗಿದೆ. ದೇವರ ವಾಕ್ಯದಿಂದ ಬರುವ ಸಲಹೆಯ ಅನ್ವಯವು, ಅವರ ಯೋಚನಾಧಾಟಿ ಮತ್ತು ನಡತೆಯಲ್ಲಿ ಬದಲಾವಣೆಗಳನ್ನು ತಂದಿದೆ. ಮತ್ತು ಅವರು ಪ್ರದರ್ಶಿಸುವಂಥ ಹೊಸ ವ್ಯಕ್ತಿತ್ವವು ಬೇರೆಯವರಿಂದ ಕೂಡಲೇ ಗಮನಿಸಲ್ಪಡುತ್ತದೆ. (ಕೊಲೊಸ್ಸೆ 3:​5-10) ಯೇಸುವಿನ ಹಿಂಬಾಲಕರಿಗೆ ಬೈಬಲು, ಒಂದು ಶೆಲ್ಫ್‌ ಮೇಲೆ ಬಿದ್ದು ಧೂಳುಹಿಡಿಯುವ ಒಂದು ಪುಸ್ತಕವಾಗಿರುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅಪೊಸ್ತಲ ಪೌಲನು ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಹೇಳಿದ್ದು: “ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ, ಮತ್ತು ಯಾವದನ್ನು ನನ್ನಲ್ಲಿ ಕೇಳಿ ಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ [“ಕಾರ್ಯರೂಪಕ್ಕೆ ಹಾಕಿರಿ,” NW]. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.” (ಓರೆ ಅಕ್ಷರಗಳು ನಮ್ಮವು.) (ಫಿಲಿಪ್ಪಿ 4:9) ಕ್ರೈಸ್ತರು ದೇವರ ವಾಕ್ಯದ ಸತ್ಯವನ್ನು ಅಂಗೀಕರಿಸುವುದಕ್ಕಿಂತಲೂ ಹೆಚ್ಚನ್ನು ಮಾಡುತ್ತಾರೆ. ಅವರು ಏನನ್ನು ಕಲಿಯುತ್ತಾರೊ ಅದಕ್ಕನುಸಾರ ಕ್ರಿಯೆಗೈಯುತ್ತಾರೆ, ಬೈಬಲಿನ ಸಲಹೆಯನ್ನು ಕುಟುಂಬದಲ್ಲಿ, ಉದ್ಯೋಗದ ಸ್ಥಳದಲ್ಲಿ, ಸಭೆಯಲ್ಲಿ ಮತ್ತು ಜೀವನದ ಬೇರೆ ಕ್ಷೇತ್ರಗಳಲ್ಲಿ ಅನ್ವಯಿಸುತ್ತಾ ಇರುತ್ತಾರೆ.

4. ದೇವರ ನಿಯಮಗಳನ್ನು ಕಾರ್ಯರೂಪಕ್ಕೆ ಹಾಕುವುದು ಏಕೆ ಒಂದು ಪಂಥಾಹ್ವಾನವಾಗಿದೆ?

4 ದೇವರ ನಿಯಮಗಳನ್ನೂ ಮೂಲತತ್ತ್ವಗಳನ್ನೂ ಕಾರ್ಯರೂಪಕ್ಕೆ ಹಾಕುವುದು ಸುಲಭವಲ್ಲ. ನಾವು ಜೀವಿಸುತ್ತಿರುವ ಈ ಲೋಕವು ಪಿಶಾಚನಾದ ಸೈತಾನನ ಕೈಕೆಳಗಿದೆ. ಮತ್ತು ಬೈಬಲು ಅವನನ್ನು “ಈ ಪ್ರಪಂಚದ ದೇವರು” ಎಂದು ಕರೆಯುತ್ತದೆ. (2 ಕೊರಿಂಥ 4:4; 1 ಯೋಹಾನ 5:19) ಹೀಗಿರುವುದರಿಂದ, ಯೆಹೋವ ದೇವರ ಕಡೆಗೆ ಸಮಗ್ರತೆಯ ಮಾರ್ಗಕ್ರಮವನ್ನು ಬೆನ್ನಟ್ಟುವುದರಿಂದ ನಮ್ಮನ್ನು ತಡೆಗಟ್ಟಬಹುದಾದ ಯಾವುದೇ ವಿಷಯದ ವಿರುದ್ಧ ಎಚ್ಚರದಿಂದಿರುವುದು ಬಹುಮುಖ್ಯವಾಗಿದೆ. ನಾವು ಹೇಗೆ ಸಮಗ್ರತಾ ಪಾಲಕರಾಗಿರಬಲ್ಲೆವು?

‘ಸ್ವಸ್ಥ ಬೋಧನಾ ವಾಕ್ಯಗಳನ್ನು’ ಮಾದರಿಮಾಡಿಕೊಂಡು ಅನುಸರಿಸು

5. ‘ನಿರಂತರವಾಗಿ ನನ್ನ ಹಿಂದೆ ಬನ್ನಿ’ ಎಂಬ ಯೇಸುವಿನ ಹೇಳಿಕೆಯ ಅರ್ಥವೇನು?

5 ನಾವು ಕಲಿತಿರುವ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವುದರ ಒಂದು ಅಂಶವು, ಅವಿಶ್ವಾಸಿಗಳಿಂದ ಬರುವ ವಿರೋಧದ ಎದುರಿನಲ್ಲೂ ಸತ್ಯಾರಾಧನೆಯನ್ನು ನಿಷ್ಠೆಯಿಂದ ಎತ್ತಿಹಿಡಿಯುವುದನ್ನು ಅಗತ್ಯಪಡಿಸುತ್ತದೆ. ಇಂಥ ತಾಳ್ಮೆಗಾಗಿ ಪ್ರಯತ್ನ ಆವಶ್ಯಕ. “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು [“ಯಾತನಾ ಕಂಭವನ್ನು,” NW] ಹೊತ್ತುಕೊಂಡು [“ನಿರಂತರವಾಗಿ,” NW] ನನ್ನ ಹಿಂದೆ ಬರಲಿ” ಎಂದು ಯೇಸು ಹೇಳಿದನು. (ಮತ್ತಾಯ 16:24) ನಾವು ಅವನನ್ನು ಕೇವಲ ಒಂದು ವಾರ, ಒಂದು ತಿಂಗಳು, ಇಲ್ಲವೆ ಒಂದು ವರ್ಷ ಹಿಂಬಾಲಿಸಬೇಕೆಂದು ಯೇಸು ಹೇಳಲಿಲ್ಲ. ಅದರ ಬದಲು ಅವನು ಹೇಳಿದ್ದು: ‘ನಿರಂತರವಾಗಿ ನನ್ನ ಹಿಂದೆ ಬನ್ನಿ.’ ನಮ್ಮ ಶಿಷ್ಯತನವು ನಮ್ಮ ಜೀವನದ ಬರಿಯ ಒಂದು ಹಂತವಾಗಿರಲಾರದು, ಇಲ್ಲವೆ ಇವತ್ತಿದ್ದು ನಾಳೆ ಇಲ್ಲವಾಗುವ ಒಂದು ಕ್ಷಣಿಕ ಭಕ್ತಿ ಆಗಿರಲಾರದೆಂದು ಅವನ ಮಾತುಗಳು ಸೂಚಿಸುತ್ತವೆ. ಸತ್ಯಾರಾಧನೆಯನ್ನು ನಿಷ್ಠೆಯಿಂದ ಎತ್ತಿಹಿಡಿಯುವುದರ ಅರ್ಥ, ನಾವು ಆಯ್ಕೆಮಾಡಿರುವ ಮಾರ್ಗಕ್ರಮದಲ್ಲಿ ಏನೇ ಬರಲಿ ನಂಬಿಗಸ್ತಿಕೆಯಿಂದ ತಾಳಿಕೊಳ್ಳುವುದೇ ಆಗಿದೆ. ನಾವಿದನ್ನು ಹೇಗೆ ಮಾಡಬಲ್ಲೆವು?

6. ಪ್ರಥಮ ಶತಮಾನದ ಕ್ರೈಸ್ತರು ಪೌಲನಿಂದ ಕಲಿತಂಥ ಸ್ವಸ್ಥ ಬೋಧನಾವಾಕ್ಯಗಳ ಮಾದರಿ ಏನಾಗಿದೆ?

6 ಪೌಲನು ತನ್ನ ಜೊತೆ ಕೆಲಸಗಾರನಾದ ತಿಮೊಥೆಯನನ್ನು ಪ್ರೇರಿಸಿದ್ದು: “ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು.” (2 ತಿಮೊಥೆಯ 1:13) ಪೌಲನ ಮಾತುಗಳ ಅರ್ಥವೇನಾಗಿತ್ತು? ಇಲ್ಲಿ “ಮಾದರಿ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು ಅಕ್ಷರಾರ್ಥವಾಗಿ, ಒಬ್ಬ ಚಿತ್ರಕಾರನು ಬರೆಯುವ ರೂಪ ರೇಖೆಗೆ ಸೂಚಿಸುತ್ತದೆ. ಇದರಲ್ಲಿ ಪ್ರತಿಯೊಂದು ವಿವರವು ಇಲ್ಲದಿದ್ದರೂ, ವಿವೇಚನೆಯುಳ್ಳ ಒಬ್ಬ ಪ್ರೇಕ್ಷಕನು, ಆ ಇಡೀ ಚಿತ್ರ ಏನಾಗಿರಬಹುದೆಂದು ವಿವೇಚಿಸಸಾಧ್ಯವಿರುವಷ್ಟು ಸ್ಪಷ್ಟವಾದ ಆಕಾರವುಳ್ಳದ್ದಾಗಿರುತ್ತದೆ. ತದ್ರೀತಿಯಲ್ಲಿ, ಪೌಲನು ತಿಮೊಥೆಯನಿಗೂ ಇತರರಿಗೂ ಕಲಿಸಿದಂಥ ಸತ್ಯದ ಮಾದರಿಯು, ಊಹಿಸಸಾಧ್ಯವಿರುವ ಪ್ರತಿಯೊಂದೂ ಪ್ರಶ್ನೆಗೆ ಒಂದು ಉತ್ತರವನ್ನು ಕೊಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರಲಿಲ್ಲ. ಆದರೂ, ಈ ಬೋಧನಾವಾಕ್ಯಗಳ ಮಾದರಿಯು ಒಂದು ಹೊರರೇಖೆಯೊ ಎಂಬಂತೆ, ಪ್ರಾಮಾಣಿಕ ಹೃದಯದ ವ್ಯಕ್ತಿಗಳು ಯೆಹೋವನು ತಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಗ್ರಹಿಸಲು ಬೇಕಾಗುವಷ್ಟು ಮಾರ್ಗದರ್ಶನವನ್ನು ಕೊಡುತ್ತದೆ. ಆದರೆ ದೇವರನ್ನು ಮೆಚ್ಚಿಸಲಿಕ್ಕಾಗಿ, ಅವರು ಕಲಿತಿರುವ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಆ ಸತ್ಯದ ಮಾದರಿಗೆ ಅವರು ಅಂಟಿಕೊಳ್ಳುತ್ತಾ ಇರುವ ಅಗತ್ಯವಿದೆ.

7. ಕ್ರೈಸ್ತರು ಸ್ವಸ್ಥ ಬೋಧನಾವಾಕ್ಯಗಳ ಮಾದರಿಗೆ ಹೇಗೆ ಅಂಟಿಕೊಂಡಿರಬಲ್ಲರು?

7 ಪ್ರಥಮ ಶತಮಾನದಲ್ಲಿ ಹುಮೆನಾಯ, ಅಲೆಕ್ಸಾಂದರ ಮತ್ತು ಪಿಲೇತನಂಥ ವ್ಯಕ್ತಿಗಳು, ‘ಸ್ವಸ್ಥ ಬೋಧನಾವಾಕ್ಯಗಳ ಮಾದರಿಗೆ’ ಹೊಂದಿಕೆಯಲ್ಲಿಲ್ಲದ ವಿಚಾರಗಳನ್ನು ಪ್ರವರ್ಧಿಸುತ್ತಿದ್ದರು. (1 ತಿಮೊಥೆಯ 1:​18-20; 2 ತಿಮೊಥೆಯ 2:​16, 17) ಆರಂಭದ ಕ್ರೈಸ್ತರು ಧರ್ಮಭ್ರಷ್ಟರಿಂದ ತಪ್ಪುದಾರಿಗೆಳೆಯಲ್ಪಡುವುದನ್ನು ಹೇಗೆ ತಪ್ಪಿಸಿಕೊಳ್ಳಸಾಧ್ಯವಿತ್ತು? ಪ್ರೇರಿತ ಬರಹಗಳನ್ನು ಜಾಗರೂಕತೆಯಿಂದ ಅಧ್ಯಯನ ಮಾಡಿ, ತಮ್ಮ ಜೀವಿತದಲ್ಲಿ ಅವುಗಳನ್ನು ಅನ್ವಯಿಸಿಕೊಳ್ಳುವ ಮೂಲಕವೇ. ಪೌಲ ಮತ್ತು ಇತರ ನಂಬಿಗಸ್ತರ ಮಾದರಿಯನ್ನು ಅನುಸರಿಸುತ್ತಾ ನಡೆಯುತ್ತಿದ್ದವರು, ತಮಗೆ ಕಲಿಸಲ್ಪಡುತ್ತಿದ್ದ ಸತ್ಯದ ಮಾದರಿಗೆ ಅನುಗುಣವಾಗಿರದಿದ್ದ ಯಾವುದೇ ವಿಷಯವನ್ನು ಗುರುತಿಸಿ ತಿರಸ್ಕರಿಸಲು ಶಕ್ತರಾಗಿದ್ದರು. (ಫಿಲಿಪ್ಪಿ 3:17; ಇಬ್ರಿಯ 5:14) “ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿಯಲ್ಲಿ”ರುವ ಬದಲು ಅವರು ತಮ್ಮ ದೈವಭಕ್ತಿಯ ಸರಿಯಾದ ಮಾರ್ಗಕ್ರಮದಲ್ಲಿ ಮುಂದುವರಿಯುತ್ತಾ ಇದ್ದರು. (1 ತಿಮೊಥೆಯ 6:​3-6) ನಾವು ಕಲಿತಿರುವ ಸತ್ಯಗಳನ್ನು ಕಾರ್ಯರೂಪಕ್ಕೆ ಹಾಕುತ್ತಾ ಇರುವಾಗ ನಾವು ಕೂಡ ಅದನ್ನೇ ಮಾಡುತ್ತೇವೆ. ಭೂಮ್ಯಾದ್ಯಂತ ಲಕ್ಷಾಂತರ ಮಂದಿ, ತಮಗೆ ಕಲಿಸಲ್ಪಟ್ಟಿರುವ ಬೈಬಲ್‌ ಸತ್ಯದ ಮಾದರಿಗೆ ದೃಢವಾಗಿ ಅಂಟಿಕೊಂಡಿರುವುದನ್ನು ನೋಡುವುದು ಎಷ್ಟು ನಂಬಿಕೆವರ್ಧಕವಾಗಿದೆ!​—1 ಥೆಸಲೊನೀಕ 1:​2-5.

“ಕಲ್ಪನಾಕಥೆಗಳನ್ನು” ತಿರಸ್ಕರಿಸಿರಿ

8. (ಎ) ಸೈತಾನನು ಇಂದು ನಮ್ಮ ನಂಬಿಕೆಯನ್ನು ನಾಶಗೊಳಿಸಲು ಪ್ರಯತ್ನಿಸುವುದು ಹೇಗೆ? (ಬಿ) ಪೌಲನ ಯಾವ ಎಚ್ಚರಿಕೆಯನ್ನು 2 ತಿಮೊಥೆಯ 4:​3, 4ರಲ್ಲಿ ಕಂಡುಕೊಳ್ಳಸಾಧ್ಯವಿದೆ?

8 ನಾವೇನನ್ನು ಕಲಿತಿದ್ದೇವೊ ಅದರ ಬಗ್ಗೆ ಸಂದೇಹದ ಬೀಜಗಳನ್ನು ಬಿತ್ತುವ ಮೂಲಕ ಸೈತಾನನು ನಮ್ಮ ಸಮಗ್ರತೆಯನ್ನು ಮುರಿದುಹಾಕಲು ಪ್ರಯತ್ನಿಸುತ್ತಾನೆ. ಪ್ರಥಮ ಶತಮಾನದಂತೆಯೇ ಇಂದು ಕೂಡ, ಧರ್ಮಭ್ರಷ್ಟರು ಮತ್ತು ಇತರರು, ಮುಗ್ಧರ ನಂಬಿಕೆಯನ್ನು ನಾಶಪಡಿಸಲು ಪ್ರಯತ್ನಿಸುತ್ತಾರೆ. (ಗಲಾತ್ಯ 2:4; 5:​7, 8) ಕೆಲವೊಮ್ಮೆ ಅವರು, ತಿರುಚಲ್ಪಟ್ಟಿರುವ ಮಾಹಿತಿಯನ್ನು ಅಥವಾ ಯೆಹೋವನ ಜನರ ವಿಧಾನಗಳು ಮತ್ತು ಉದ್ದೇಶಗಳ ಕುರಿತಾಗಿ ಶುದ್ಧ ಸುಳ್ಳುಗಳನ್ನೂ ಹಬ್ಬಿಸಲಿಕ್ಕಾಗಿ ವಾರ್ತಾಮಾಧ್ಯಮವನ್ನು ಉಪಯೋಗಿಸುತ್ತಾರೆ. ಕೆಲವರು ಸತ್ಯದಿಂದ ತಿರುಗಿಹೋಗುವರೆಂದು ಪೌಲನು ಎಚ್ಚರಿಸಿದನು. ಅವನು ಬರೆದುದು: “ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು.”​—2 ತಿಮೊಥೆಯ 4:3, 4.

9. “ಕಲ್ಪನಾಕಥೆ”ಗಳೆಂದು ಹೇಳುವಾಗ ಪೌಲನ ಮನಸ್ಸಿನಲ್ಲಿ ಏನಿದ್ದಿರಬಹುದು?

9 ಸ್ವಸ್ಥ ಬೋಧನಾವಾಕ್ಯಗಳ ಮಾದರಿಗೆ ಅಂಟಿಕೊಳ್ಳುವ ಬದಲಿಗೆ, ಕೆಲವರು “ಕಲ್ಪನಾಕಥೆ”ಗಳಿಂದ ಸೆಳೆಯಲ್ಪಟ್ಟಿದ್ದರು. ಈ ಕಲ್ಪನಾಕಥೆಗಳು ಏನಾಗಿದ್ದವು? ಪ್ರಾಯಶಃ ಪೌಲನ ಮನಸ್ಸಿನಲ್ಲಿ, ಟೊಬಿತ್‌ ಎಂಬ ಸಂದೇಹಾಸ್ಪದ ಪುಸ್ತಕದಲ್ಲಿರುವಂಥ ಊಹಾತ್ಮಕ ಕಥೆಗಳು ಇದ್ದಿರಬಹುದು. * ಆ ಕಲ್ಪನಾಕಥೆಗಳಲ್ಲಿ, ಕೌತುಕಕಾರಿ ಮತ್ತು ಊಹಾಪೋಹದ ಗಾಳಿಸುದ್ದಿಗಳೂ ಒಳಗೂಡಿದ್ದಿರಬಹುದು. ಅಲ್ಲದೆ, ಕೆಲವರು ‘ತಮ್ಮ ದುರಾಶೆಗಳಿಗೆ ಅನುಕೂಲಕರವಾಗಿ,’ ದೇವರ ಮಟ್ಟಗಳ ಬಗ್ಗೆ ಸ್ವಚ್ಛಂದ ದೃಷ್ಟಿಕೋನವನ್ನಿಟ್ಟಿದ್ದ ಇಲ್ಲವೆ ಸಭೆಯಲ್ಲಿ ಮುಂದಾಳುತನ ವಹಿಸುತ್ತಿದ್ದವರ ಬಗ್ಗೆ ಟೀಕಾತ್ಮಕರಾಗಿದ್ದವರಿಂದ ವೈಚಾರಿಕವಾಗಿ ಮೋಸಗೊಳಿಸಲ್ಪಟ್ಟಿರಬಹುದು. (3 ಯೋಹಾನ 9, 10; ಯೂದ 4) ಅಡ್ಡಿಯನ್ನುಂಟುಮಾಡುತ್ತಿದ್ದ ಯಾವುದೇ ತಡೆಗಳು ಉಪಯೋಗಿಸಲ್ಪಟ್ಟಿರಲಿ, ಕೆಲವರಂತೂ ದೇವರ ವಾಕ್ಯದ ಸತ್ಯಗಳಿಗಿಂತಲೂ ಸುಳ್ಳುಗಳನ್ನೇ ಇಷ್ಟಪಟ್ಟರೆಂದು ವ್ಯಕ್ತವಾಗುತ್ತದೆ. ಸ್ವಲ್ಪ ಸಮಯದೊಳಗೆ ಅವರು ತಾವು ಕಲಿತಂಥ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವುದನ್ನು ನಿಲ್ಲಿಸಿದರು, ಮತ್ತು ಇದು ಸ್ವತಃ ಅವರಿಗೆ ಆತ್ಮಿಕ ಹಾನಿಯನ್ನು ತಂದಿತು.​—2 ಪೇತ್ರ 3:​15, 16.

10. ಸದ್ಯದ ದಿನದ ಕೆಲವು ಕಲ್ಪನಾಕಥೆಗಳು ಯಾವುವು, ಮತ್ತು ಎಚ್ಚರದಿಂದಿರುವ ಅಗತ್ಯವನ್ನು ಯೋಹಾನನು ಹೇಗೆ ಎತ್ತಿಹೇಳಿದನು?

10 ನಾವು ಯಾವುದಕ್ಕೆ ಕಿವಿಗೊಡುತ್ತೇವೊ ಮತ್ತು ಏನನ್ನು ಓದುತ್ತೇವೊ ಅದನ್ನು ಪರೀಕ್ಷಿಸಿ ಆಯ್ಕೆಮಾಡುವವರಾಗಿರುವುದಾದರೆ, ನಾವು ಇಂದು ಕಲ್ಪನಾಕಥೆಗಳಿಂದ ಆಕರ್ಷಿಸಲ್ಪಡುವುದನ್ನು ತಪ್ಪಿಸಬಲ್ಲೆವು. ಉದಾಹರಣೆಗಾಗಿ, ವಾರ್ತಾಮಾಧ್ಯಮವು ಅನೈತಿಕತೆಯನ್ನು ಅನೇಕವೇಳೆ ಪ್ರವರ್ಧಿಸುತ್ತದೆ. ಅನೇಕ ಜನರು ಅಜ್ಞೇಯತಾವಾದವನ್ನು ಇಲ್ಲವೆ ಮುಚ್ಚುಮರೆಯಿಲ್ಲದೆ ನಾಸ್ತಿಕವಾದವನ್ನು ಉತ್ತೇಜಿಸುತ್ತಾರೆ. ಉಚ್ಚ ವಿಮರ್ಶಕರು, ಬೈಬಲ್‌ ದೇವರ ವಾಕ್ಯವಾಗಿರುವುದಾಗಿ ಅದು ಮಾಡುವ ದಾವೆಯನ್ನು ಅಪಹಾಸ್ಯಮಾಡುತ್ತಾರೆ. ಮತ್ತು ಆಧುನಿಕ ದಿನದ ಧರ್ಮಭ್ರಷ್ಟರು, ಕ್ರೈಸ್ತರ ನಂಬಿಕೆಯನ್ನು ತಪ್ಪುದಾರಿಗೆಳೆಯಲು, ಸಂದೇಹದ ಬೀಜಗಳನ್ನು ಬಿತ್ತಲು ಪ್ರಯತ್ನಿಸುತ್ತಾ ಇದ್ದಾರೆ. ಪ್ರಥಮ ಶತಮಾನದಲ್ಲಿ, ಸುಳ್ಳುಪ್ರವಾದಿಗಳಿಂದ ಒಡ್ಡಲ್ಪಟ್ಟಿದ್ದ ಇದಕ್ಕೆ ಹೋಲುವ ಅಪಾಯದ ಕುರಿತಾಗಿ ಅಪೊಸ್ತಲ ಯೋಹಾನನು ಎಚ್ಚರಿಸಿದ್ದು: “ಪ್ರಿಯರೇ, ಅನೇಕ ಮಂದಿ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವದರಿಂದ ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.” (1 ಯೋಹಾನ 4:1) ಆದುದರಿಂದ ನಾವು ಜಾಗರೂಕರಾಗಿರುವ ಅಗತ್ಯವಿದೆ.

11. ನಾವು ನಂಬಿಕೆಯಲ್ಲಿ ಇದ್ದೇವೊ ಇಲ್ಲವೊ ಎಂಬುದನ್ನು ಪರೀಕ್ಷಿಸಿ ನೋಡುವ ಒಂದು ವಿಧ ಯಾವುದು?

11 ಈ ವಿಷಯದಲ್ಲಿ ಪೌಲನು ಬರೆದುದು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ.” (2 ಕೊರಿಂಥ 13:5) ನಾವು ಕ್ರೈಸ್ತ ನಂಬಿಕೆಗಳೆಲ್ಲವುಗಳಿಗೆ ಅಂಟಿಕೊಳ್ಳುತ್ತಿದ್ದೇವೊ ಇಲ್ಲವೊ ಎಂಬ ವಿಷಯದಲ್ಲಿ ನಮ್ಮನ್ನೇ ಪರೀಕ್ಷಿಸಿಕೊಳ್ಳುವಂತೆ ಅಪೊಸ್ತಲನು ನಮ್ಮನ್ನು ಪ್ರೇರೇಪಿಸಿದನು. ದುಮ್ಮಾನದ ವ್ಯಕ್ತಿಗಳ ಮಾತುಗಳಿಗೆ ಕಿವಿಗೊಡುವ ಪ್ರವೃತ್ತಿ ನಮಗಿರುವಲ್ಲಿ, ನಾವು ನಮ್ಮನ್ನೇ ಪ್ರಾರ್ಥನಾಪೂರ್ವಕವಾಗಿ ವಿಶ್ಲೇಷಿಸಿಕೊಳ್ಳುವ ಅಗತ್ಯವಿದೆ. (ಕೀರ್ತನೆ 139:​23, 24) ಯೆಹೋವನ ಜನರ ದೋಷಗಳನ್ನು ಹುಡುಕುತ್ತಾ ಇರುವ ಪ್ರವೃತ್ತಿ ನಮಗಿದೆಯೊ? ಇರುವಲ್ಲಿ, ಅದೇಕೆ ಇದೆ? ಯಾರೋ ಹೇಳಿದ ಮಾತುಗಳು ಅಥವಾ ಅವರ ಕಾರ್ಯಗಳಿಂದ ನಮ್ಮ ಮನಸ್ಸು ನೋಯಿಸಲ್ಪಟ್ಟಿದೆಯೊ? ಹಾಗಿರುವುದಾದರೆ ನಾವು ಸರಿಯಾದ ದೃಷ್ಟಿಕೋನದಿಂದ ವಿಷಯಗಳನ್ನು ದೃಷ್ಟಿಸುತ್ತಿದ್ದೇವೊ? ಈ ವಿಷಯಗಳ ವ್ಯವಸ್ಥೆಯಲ್ಲಿ ನಾವು ಎದುರಿಸಬಹುದಾದ ಯಾವುದೇ ಸಂಕಟವು ತಾತ್ಕಾಲಿಕವಾಗಿದೆ. (2 ಕೊರಿಂಥ 4:17) ಸಭೆಯಲ್ಲಿ ನಾವು ಯಾವುದೇ ಪರೀಕ್ಷೆಯನ್ನು ಅನುಭವಿಸಿದರೂ, ನಾವು ದೇವರ ಸೇವೆಮಾಡುವುದನ್ನು ಏಕೆ ನಿಲ್ಲಿಸಬೇಕು? ನಮಗೆ ಯಾವುದೊ ವಿಷಯದ ಕುರಿತಾಗಿ ಬೇಸರವಾಗಿರುವಲ್ಲಿ, ಆ ವಿಷಯವನ್ನು ಬಗೆಹರಿಸಲು ನಮ್ಮಿಂದ ಸಾಧ್ಯವಿರುವಷ್ಟನ್ನು ಮಾಡಿ ಅನಂತರ ಅದನ್ನು ಯೆಹೋವನ ಕೈಗಳಲ್ಲಿ ಬಿಟ್ಟುಬಿಡುವುದು ಹೆಚ್ಚು ಉತ್ತಮವಲ್ಲವೊ?​—ಕೀರ್ತನೆ 4:4; ಜ್ಞಾನೋಕ್ತಿ 3:​5, 6; ಎಫೆಸ 4:26.

12. ಬೆರೋಯದವರು ನಮಗೋಸ್ಕರ ಒಂದು ಒಳ್ಳೇ ಮಾದರಿಯನ್ನಿಟ್ಟದ್ದು ಹೇಗೆ?

12 ಟೀಕಾತ್ಮಕರಾಗಿರುವ ಬದಲು, ವೈಯಕ್ತಿಕ ಅಧ್ಯಯನ ಹಾಗೂ ಸಭಾ ಕೂಟಗಳ ಮೂಲಕ ಸಿಗುವ ಮಾಹಿತಿಯ ಬಗ್ಗೆ ಆತ್ಮಿಕವಾಗಿ ಸ್ವಸ್ಥಕರವಾದ ದೃಷ್ಟಿಕೋನವನ್ನು ಕಾಪಾಡಿಕೊಳ್ಳೋಣ. (1 ಕೊರಿಂಥ 2:​14, 15) ಮತ್ತು ದೇವರ ವಾಕ್ಯವನ್ನು ಪ್ರಶ್ನಿಸುವುದರ ಬದಲಿಗೆ, ಶಾಸ್ತ್ರವಚನಗಳನ್ನು ನಿಕಟವಾಗಿ ಪರೀಕ್ಷಿಸಿದ ಪ್ರಥಮ ಶತಮಾನದ ಬೆರೋಯದವರ ಮನೋಭಾವವುಳ್ಳವರಾಗಿರುವುದು ಎಷ್ಟು ಬುದ್ಧಿವಂತಿಕೆಯ ಸಂಗತಿ! (ಅ. ಕೃತ್ಯಗಳು 17:​10, 11) ಹಾಗಾದರೆ, ನಾವೇನನ್ನು ಕಲಿಯುತ್ತೇವೊ ಅದಕ್ಕನುಸಾರ ಕ್ರಿಯೆಗೈದು, ಕಲ್ಪನಾಕಥೆಗಳನ್ನು ತಳ್ಳಿಹಾಕಿ, ಸತ್ಯಕ್ಕೆ ಅಂಟಿಕೊಂಡಿರೋಣ.

13. ನಾವು ಗೊತ್ತಿಲ್ಲದೆ ಕಲ್ಪನಾಕಥೆಗಳನ್ನು ಹಬ್ಬಿಸುತ್ತಿರಬಹುದು ಹೇಗೆ?

13 ನಾವು ಎಚ್ಚರದಿಂದಿರಬೇಕಾದ ಇನ್ನೊಂದು ಕಲ್ಪನಾಕಥೆಯ ರೂಪವಿದೆ. ಬಹಳಷ್ಟು ಕೌತುಕಕಾರಿಯಾದ ದಂತಕಥೆಗಳು, ಅನೇಕವೇಳೆ ಇ-ಮೇಲ್‌ ಮುಖಾಂತರ ಚಲಾವಣೆಯಾಗುತ್ತವೆ. ಇಂಥ ಕಥೆಗಳ ಬಗ್ಗೆ, ವಿಶೇಷವಾಗಿ ಆ ಮಾಹಿತಿಯ ನಿಜ ಮೂಲ ಯಾವುದೆಂದು ನಮಗೆ ಗೊತ್ತಿಲ್ಲದಿರುವಾಗ ಅದರ ಬಗ್ಗೆ ನಾವು ಎಚ್ಚರವಾಗಿರಬೇಕು. ಒಳ್ಳೇ ಹೆಸರುಳ್ಳ ಒಬ್ಬ ಕ್ರೈಸ್ತನಿಂದ ಒಂದು ಅನುಭವ ಅಥವಾ ಕಥೆ ಕಳುಹಿಸಲ್ಪಟ್ಟರೂ, ಆ ವ್ಯಕ್ತಿಗೆ ವಾಸ್ತವಾಂಶಗಳ ಬಗ್ಗೆ ನೇರವಾದ ಮಾಹಿತಿ ಇರಲಿಕ್ಕಿಲ್ಲ. ಆದುದರಿಂದಲೇ, ಪ್ರಮಾಣೀಕರಿಸಲ್ಪಟ್ಟಿರದ ವೃತ್ತಾಂತಗಳನ್ನು ಇನ್ನೊಬ್ಬರಿಗೆ ಹೇಳುವ ಇಲ್ಲವೆ ಕಂಪ್ಯೂಟರ್‌ನಲ್ಲಿ ಕಳುಹಿಸುವುದರ ಬಗ್ಗೆ ಜಾಗರೂಕರಾಗಿರುವುದು ಪ್ರಾಮುಖ್ಯವಾಗಿದೆ. ಖಂಡಿತವಾಗಿಯೂ ನಾವು “ಭಕ್ತಿರಹಿತವಾದ ಮಿಥ್ಯೆಗಳು” ಇಲ್ಲವೆ “ಪವಿತ್ರವಾದದ್ದನ್ನು ಉಲ್ಲಂಘಿಸುವ ಸುಳ್ಳು ಕಥೆಗಳನ್ನು” ಪುನರುಚ್ಚರಿಸಲು ಬಯಸುವುದಿಲ್ಲ. (1 ತಿಮೊಥೆಯ 4:​7; ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ನಾವು ಪರಸ್ಪರರೊಂದಿಗೆ ಸತ್ಯವನ್ನಾಡುವ ಹಂಗುಳ್ಳವರಾಗಿರುವುದರಿಂದಲೂ, ಗೊತ್ತಿಲ್ಲದೆ ಅಸತ್ಯಗಳನ್ನು ಹಬ್ಬಿಸುವಂತೆ ಮಾಡುವ ಯಾವುದೇ ಸಂಗತಿಯನ್ನು ದೂರಮಾಡುವ ಮೂಲಕ ನಾವು ವಿವೇಕಯುತವಾಗಿ ಕ್ರಿಯೆಗೈಯುತ್ತಿರುವೆವು.​—ಎಫೆಸ 4:25.

ಸತ್ಯವನ್ನು ಕಾರ್ಯರೂಪಕ್ಕೆ ಹಾಕುವುದರ ಸಕಾರಾತ್ಮಕ ಪರಿಣಾಮಗಳು

14. ನಾವು ದೇವರ ವಾಕ್ಯದಿಂದ ಕಲಿತಿರುವ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವುದರಿಂದ ಯಾವ ಪ್ರಯೋಜನಗಳು ಫಲಿಸುತ್ತವೆ?

14 ವೈಯಕ್ತಿಕ ಬೈಬಲ್‌ ಅಧ್ಯಯನ ಮತ್ತು ಕ್ರೈಸ್ತ ಕೂಟಗಳ ಮೂಲಕ ನಾವೇನನ್ನು ಕಲಿಯುತ್ತೇವೊ ಅದನ್ನು ಕಾರ್ಯರೂಪಕ್ಕೆ ಹಾಕುವುದು ಅನೇಕ ಪ್ರಯೋಜನಗಳನ್ನು ತರುವುದು. ಉದಾಹರಣೆಗಾಗಿ, ನಂಬಿಕೆಯಲ್ಲಿರುವವರೊಂದಿಗಿನ ನಮ್ಮ ಸಂಬಂಧಗಳು ಉತ್ತಮಗೊಳ್ಳುತ್ತಿರುವುದನ್ನು ನಾವು ಕಂಡುಕೊಳ್ಳಬಹುದು. (ಗಲಾತ್ಯ 6:10) ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ನಮ್ಮ ಸ್ವಂತ ಮನೋವೃತ್ತಿಯು ಉತ್ತಮಗೊಳ್ಳುವುದು. (ಕೀರ್ತನೆ 19:8) ಅಷ್ಟುಮಾತ್ರವಲ್ಲದೆ, ನಾವೇನನ್ನು ಕಲಿಯುತ್ತೇವೊ ಅದನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ, ನಾವು ‘ದೇವರ ಉಪದೇಶವನ್ನು ಅಲಂಕರಿಸುತ್ತೇವೆ’ ಮತ್ತು ಬೇರೆಯವರನ್ನು ಸತ್ಯಾರಾಧನೆಯ ಕಡೆಗೆ ಆಕರ್ಷಿಸಬಹುದು.​—ತೀತ 2:​6-10.

15. (ಎ) ಒಬ್ಬ ಯುವತಿಯು ಶಾಲೆಯಲ್ಲಿ ಸಾಕ್ಷಿಕೊಡುವಂತೆ ಧೈರ್ಯಮಾಡಿದ್ದು ಹೇಗೆ? (ಬಿ) ಈ ಅನುಭವದಿಂದ ನೀವೇನು ಕಲಿತಿರಿ?

15 ಬೈಬಲಿನ ವೈಯಕ್ತಿಕ ಅಧ್ಯಯನ ಮತ್ತು ಕ್ರೈಸ್ತ ಪ್ರಕಾಶನಗಳು ಹಾಗೂ ಸಭಾ ಕೂಟಗಳಲ್ಲಿನ ಕ್ರಮವಾದ ಹಾಜರಿಯ ಮೂಲಕ ಕಲಿತಂಥ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವ ಅನೇಕ ಯುವ ಜನರು ಯೆಹೋವನ ಸಾಕ್ಷಿಗಳ ನಡುವೆ ಇದ್ದಾರೆ. ಅವರ ಸುನಡತೆಯು ಶಾಲೆಯಲ್ಲಿ ಶಿಕ್ಷಕರಿಗೂ ಜೊತೆ ವಿದ್ಯಾರ್ಥಿಗಳಿಗೂ ಒಂದು ಪ್ರಭಾವಶಾಲಿ ಸಾಕ್ಷಿಯಾಗಿದೆ. (1 ಪೇತ್ರ 2:12) ಅಮೆರಿಕದಲ್ಲಿರುವ 13 ವರ್ಷ ಪ್ರಾಯದವಳಾಗಿರುವ ಲೆಸ್ಲಿ ಎಂಬವಳನ್ನು ಪರಿಗಣಿಸಿರಿ. ತನ್ನ ಶಾಲಾ ಸಂಗಾತಿಗಳಿಗೆ ತನ್ನ ನಂಬಿಕೆಯ ಬಗ್ಗೆ ಮಾತಾಡುವುದು ಅವಳಿಗೆ ಕಷ್ಟವಾಗುತ್ತಿತ್ತೆಂದು ಅವಳು ಒಪ್ಪಿಕೊಳ್ಳುತ್ತಾಳೆ. ಆದರೆ ಒಂದು ದಿನ ಇದು ಬದಲಾಯಿತು. “ಜನರು ವಸ್ತುಗಳನ್ನು ಹೇಗೆ ಮಾರಲು ಪ್ರಯತ್ನಿಸುತ್ತಾರೆಂಬುದರ ಬಗ್ಗೆ ತರಗತಿಯು ಮಾತಾಡುತ್ತಿತ್ತು. ಒಂದು ಹುಡುಗಿ ತನ್ನ ಕೈಯನ್ನೆತ್ತಿ, ಯೆಹೋವನ ಸಾಕ್ಷಿಗಳ ಬಗ್ಗೆ ಹೇಳಿದಳು.” ಒಬ್ಬ ಸಾಕ್ಷಿಯೋಪಾದಿ ಲೆಸ್ಲಿಯ ಪ್ರತಿಕ್ರಿಯೆ ಏನಾಗಿತ್ತು? “ನನ್ನ ನಂಬಿಕೆಯನ್ನು ನಾನು ಸಮರ್ಥಿಸಿದೆ. ಮತ್ತು ಇದು ಎಲ್ಲರನ್ನೂ ಖಂಡಿತವಾಗಿಯೂ ಚಕಿತಗೊಳಿಸಿರಬಹುದು, ಏಕೆಂದರೆ ಸಾಮಾನ್ಯವಾಗಿ ನಾನು ಶಾಲೆಯಲ್ಲಿ ತುಂಬ ಮೌನಳಾಗಿರುತ್ತೇನೆ” ಎಂದವಳು ಹೇಳುತ್ತಾಳೆ. ಲೆಸ್ಲಿ ತೋರಿಸಿದ ಧೈರ್ಯದ ಫಲಿತಾಂಶವೇನಾಗಿತ್ತು? “ಆ ವಿದ್ಯಾರ್ಥಿಗೆ ಬೇರೆ ಪ್ರಶ್ನೆಗಳೂ ಇದ್ದದರಿಂದ ನಾನು ಅವಳಿಗೆ ಒಂದು ಬ್ರೋಷರ್‌ ಮತ್ತು ಟ್ರ್ಯಾಕ್ಟನ್ನು ಕೊಡಲು ಶಕ್ತಳಾದೆ” ಎಂದು ಲೆಸ್ಲಿ ಹೇಳುತ್ತಾಳೆ. ತಾವು ಕಲಿತಂಥ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವ ಯುವ ಜನರು, ಶಾಲೆಯಲ್ಲಿ ಸಾಕ್ಷಿಯನ್ನು ಕೊಡಲು ಧೈರ್ಯಮಾಡುವಾಗ ಯೆಹೋವನು ಎಷ್ಟು ಸಂತೋಷಿಸುತ್ತಿರಬಹುದು!​—ಜ್ಞಾನೋಕ್ತಿ 27:11; ಇಬ್ರಿಯ 6:10.

16. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ಒಬ್ಬ ಯುವ ಸಾಕ್ಷಿಗೆ ಹೇಗೆ ಪ್ರಯೋಜನ ತಂದಿದೆ?

16 ಇನ್ನೊಂದು ಉದಾಹರಣೆ ಎಲೀಸಬೆತಳದ್ದಾಗಿದೆ. ಏಳು ವರ್ಷ ಪ್ರಾಯದಿಂದ ಆರಂಭಿಸಿ, ಪ್ರಾಥಮಿಕ ಶಾಲಾ ಶಿಕ್ಷಣದ ವರ್ಷಗಳಾದ್ಯಂತ ಈ ಪುಟ್ಟ ಬಾಲಕಿಯು ತನಗೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಷಣದ ನೇಮಕವಿದ್ದಾಗಲೆಲ್ಲ ತನ್ನ ಶಿಕ್ಷಕರನ್ನು ರಾಜ್ಯ ಸಭಾಗೃಹಕ್ಕೆ ಬರುವಂತೆ ಆಮಂತ್ರಿಸುತ್ತಿದ್ದಳು. ಒಬ್ಬ ಶಿಕ್ಷಕರಿಗೆ ಹಾಜರಾಗಲು ಸಾಧ್ಯವಾಗದಿರುತ್ತಿದ್ದಲ್ಲಿ, ಎಲೀಸಬೆತಳು ಶಾಲೆಯ ನಂತರ ಹಿಂದುಳಿದು, ಆ ಶಿಕ್ಷಕರ ಮುಂದೆ ತನ್ನ ಭಾಷಣವನ್ನು ಕೊಡುತ್ತಿದ್ದಳು. ಪ್ರೌಢ ಶಾಲೆಯ ಕೊನೆಯ ವರ್ಷದಲ್ಲಿ ಎಲೀಸಬೆತಳು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪ್ರಯೋಜನಗಳ ಬಗ್ಗೆ ಹತ್ತು ಪುಟಗಳ ಒಂದು ವರದಿಯನ್ನು ಬರೆದು, ನಾಲ್ಕು ಮಂದಿ ಶಿಕ್ಷಕರ ತಂಡದ ಮುಂದೆ ಅದನ್ನು ಓದಿ ಪ್ರಸ್ತುತಪಡಿಸಿದಳು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಒಂದು ಮಾದರಿ ಭಾಷಣವನ್ನು ಕೊಡುವಂತೆಯೂ ಅವಳನ್ನು ಕೇಳಿಕೊಳ್ಳಲಾಯಿತು. ಅದಕ್ಕಾಗಿ ಅವಳು “ದೇವರು ದುಷ್ಟತನವನ್ನು ಏಕೆ ಅನುಮತಿಸುತ್ತಾನೆ?” ಎಂಬ ವಿಷಯವನ್ನು ಆಯ್ಕೆಮಾಡಿದಳು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುವ ಶೈಕ್ಷಣಿಕ ಕಾರ್ಯಕ್ರಮದಿಂದ ಎಲೀಸಬೆತಳು ಪ್ರಯೋಜನ ಪಡೆದಿದ್ದಾಳೆ. ಆತನ ವಾಕ್ಯದಿಂದ ತಾವು ಕಲಿತಿರುವ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಯೆಹೋವನಿಗೆ ಸ್ತುತಿಯನ್ನು ತರುತ್ತಿರುವ ಅನೇಕ ಮಂದಿ ಯುವ ಕ್ರೈಸ್ತರಲ್ಲಿ ಅವಳು ಒಬ್ಬಳಷ್ಟೇ.

17, 18. (ಎ) ಪ್ರಾಮಾಣಿಕತೆಯ ಬಗ್ಗೆ ಬೈಬಲ್‌ ಯಾವ ಸಲಹೆಯನ್ನು ಕೊಡುತ್ತದೆ? (ಬಿ) ಯೆಹೋವನ ಸಾಕ್ಷಿಗಳ ಪ್ರಾಮಾಣಿಕ ನಡತೆಯು ಒಬ್ಬ ಮನುಷ್ಯನನ್ನು ಹೇಗೆ ಪ್ರಭಾವಿಸಿತು?

17 ಕ್ರೈಸ್ತರು ಎಲ್ಲ ವಿಷಯಗಳಲ್ಲೂ ಪ್ರಾಮಾಣಿಕರಾಗಿ ನಡೆದುಕೊಳ್ಳುವಂತೆ ಬೈಬಲ್‌ ಬುದ್ಧಿವಾದ ನೀಡುತ್ತದೆ. (ಇಬ್ರಿಯ 13:18) ಅಪ್ರಾಮಾಣಿಕತೆಯು ಇತರರೊಂದಿಗಿನ ನಮ್ಮ ಸಂಬಂಧವನ್ನು ಮತ್ತು ಅದಕ್ಕಿಂತಲೂ ಮಿಗಿಲಾಗಿ ಸ್ವತಃ ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಕೆಡವಿಹಾಕಬಲ್ಲದು. (ಜ್ಞಾನೋಕ್ತಿ 12:22) ನಮ್ಮ ಭರವಸಾರ್ಹ ನಡತೆಯು ನಾವು ಕಲಿತಂಥ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುತ್ತಿದ್ದೇವೆಂಬ ರುಜುವಾತನ್ನು ಕೊಡುತ್ತದೆ ಮತ್ತು ಅನೇಕರಿಗೆ ಯೆಹೋವನ ಸಾಕ್ಷಿಗಳ ಕಡೆಗೆ ಹೆಚ್ಚು ಗೌರವವನ್ನುಂಟುಮಾಡಿದೆ.

18 ಫಿಲಿಪ್‌ ಎಂಬ ಹೆಸರಿನ ಒಬ್ಬ ಮಿಲಿಟರಿ ವ್ಯಕ್ತಿಯ ಅನುಭವವನ್ನು ಪರಿಗಣಿಸಿರಿ. ಅವನು ಖಾಲಿಯಾದ, ಆದರೆ ಸಹಿಹಾಕಲ್ಪಟ್ಟಿದ್ದ ಒಂದು ಚೆಕ್‌ ಅನ್ನು ಎಲ್ಲಿಯೊ ಕಳೆದುಕೊಂಡಿದ್ದನು. ಇದು ಅವನಿಗೆ ಪೋಸ್ಟ್‌ ಮೂಲಕ ಹಿಂದಿರುಗಿಸಲ್ಪಟ್ಟಾಗಲೇ ಅವನಿಗೆ ಇದರ ಅರಿವಾಯಿತು. ಯೆಹೋವನ ಸಾಕ್ಷಿಗಳಲ್ಲೊಬ್ಬರು ಆ ಚೆಕ್‌ ಅನ್ನು ಕಂಡುಕೊಂಡರು ಮತ್ತು ಅದನ್ನು ಕಂಡುಕೊಂಡವನು ತನ್ನ ಧಾರ್ಮಿಕ ನಂಬಿಕೆಗಳೇ ಇದನ್ನು ಹಿಂದಿರುಗಿಸುವಂತೆ ಪ್ರಚೋದಿಸಿದವೆಂದು ಹೇಳಿದ ಒಂದು ಚೀಟಿ ಅದಕ್ಕೆ ಜೋಡಿಸಲ್ಪಟ್ಟಿತ್ತು. ಫಿಲಿಪ್‌ನಿಗೆ ದಂಗುಬಡಿದಂತಾಯಿತು. “ಅವರು ನನ್ನಿಂದ 9,000 ಡಾಲರುಗಳನ್ನು (4,32,000 ರೂಪಾಯಿಗಳು) ಬೋಳಿಸಬಹುದಿತ್ತು” ಎಂದವನು ಹೇಳುತ್ತಾನೆ. ಒಂದು ಸಂದರ್ಭದಲ್ಲಿ ಅವನ ಸ್ವಂತ ಚರ್ಚಿನಲ್ಲಿ ಅವನ ಟೋಪಿಯು ಕದಿಯಲ್ಪಟ್ಟಾಗ ಅವನಿಗೆ ನಿರಾಶೆಯಾಗಿತ್ತು. ಪ್ರಾಯಶಃ ಅವನಿಗೆ ಪರಿಚಯವಿದ್ದ ಒಬ್ಬ ವ್ಯಕ್ತಿಯೇ ಅವನ ಟೋಪಿಯನ್ನು ಕೊಂಡೊಯ್ದಿದ್ದಿರಬಹುದು. ಆದರೆ ಈಗ ಒಬ್ಬ ಅಪರಿಚಿತನು ಸಾವಿರಾರು ಡಾಲರುಗಳಷ್ಟು ಬೆಲೆಬಾಳುವ ಒಂದು ಚೆಕ್‌ ಅನ್ನು ಹಿಂದಿರುಗಿಸಿದ್ದನು! ನಿಜವಾಗಲೂ, ಪ್ರಾಮಾಣಿಕ ಕ್ರೈಸ್ತರು ಯೆಹೋವ ದೇವರಿಗೆ ಗೌರವವನ್ನು ತರುತ್ತಾರೆ!

ನೀವು ಕಲಿತಿರುವ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುತ್ತಾ ಇರಿ

19, 20. ನಾವು ಕಲಿಯುವಂಥ ಶಾಸ್ತ್ರೀಯ ಸಂಗತಿಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವುದರಿಂದ ನಾವು ಹೇಗೆ ಪ್ರಯೋಜನಪಡೆಯಬಲ್ಲೆವು?

19 ದೇವರ ವಾಕ್ಯದಿಂದ ತಾವು ಕಲಿತಿರುವ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವವರು ಅಸಂಖ್ಯಾತ ಪ್ರಯೋಜನಗಳನ್ನು ಕೊಯ್ಯುತ್ತಾರೆ. ಶಿಷ್ಯನಾದ ಯಾಕೋಬನು ಬರೆದುದು: “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತುಹೋಗುವವನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.” (ಯಾಕೋಬ 1:25) ಹೌದು, ನಾವು ಕಲಿಯುವ ಶಾಸ್ತ್ರೀಯ ಸಂಗತಿಗಳಿಗೆ ಹೊಂದಿಕೆಯಲ್ಲಿ ನಾವು ಕ್ರಿಯೆಗೈದರೆ, ನಮಗೆ ನಿಜವಾದ ಸಂತೋಷವಿರುವುದು ಮತ್ತು ನಾವು ಜೀವನದ ಒತ್ತಡಗಳನ್ನು ನಿಭಾಯಿಸಲು ಹೆಚ್ಚು ಶಕ್ತರಾಗಿರುವೆವು. ಎಲ್ಲಕ್ಕಿಂತಲೂ ಹೆಚ್ಚಾಗಿ, ನಮಗೆ ಯೆಹೋವನ ಆಶೀರ್ವಾದವಿರುವುದು ಮತ್ತು ನಿತ್ಯಜೀವದ ಪ್ರತೀಕ್ಷೆಯಿರುವುದು!​—ಜ್ಞಾನೋಕ್ತಿ 10:22; 1 ತಿಮೊಥೆಯ 6:6.

20 ಆದುದರಿಂದ, ದೇವರ ವಾಕ್ಯದ ಅಧ್ಯಯನದಲ್ಲಿ ನಿರತರಾಗಿರುವುದನ್ನು ಮುಂದುವರಿಸಿರಿ. ಯೆಹೋವನ ಆರಾಧಕರೊಂದಿಗೆ ಕ್ರಮವಾಗಿ ಜೊತೆಗೂಡಿರಿ, ಮತ್ತು ಕ್ರೈಸ್ತ ಕೂಟಗಳಲ್ಲಿ ಪ್ರಸ್ತುತಪಡಿಸಲ್ಪಡುವ ವಿಷಯಕ್ಕೆ ಗಮನಕೊಡಿರಿ. ನೀವು ಕಲಿಯುವ ಸಂಗತಿಗಳನ್ನು ಅನ್ವಯಿಸಿರಿ, ಅದನ್ನು ಕಾರ್ಯರೂಪಕ್ಕೆ ಹಾಕುತ್ತಾ ಇರಿ, ಮತ್ತು ಆಗ “ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.”​—ಫಿಲಿಪ್ಪಿ 4:9.

[ಪಾದಟಿಪ್ಪಣಿ]

^ ಪ್ಯಾರ. 9 ಟೊಬಿತ್‌ ಎಂಬ ಪುಸ್ತಕವು ಪ್ರಾಯಶಃ ಸಾ.ಶ.ಪೂ. ಮೂರನೆಯ ಶತಮಾನದಲ್ಲಿ ಬರೆಯಲ್ಪಟ್ಟಿದ್ದಿರಬಹುದು. ಇದರಲ್ಲಿ, ಟೊಬಾಯಸ್‌ ಎಂಬ ಹೆಸರಿನ ಒಬ್ಬ ಯೆಹೂದಿಯ ಕುರಿತಾದ ಮೂಢನಂಬಿಕೆ ತುಂಬಿರುವ ದಂತಕಥೆಯು ಒಳಗೂಡಿದೆ. ಒಂದು ದೈತ್ಯಾಕಾರದ ಮೀನಿನ ಹೃದಯ, ಪಿತ್ತಕೋಶ ಮತ್ತು ಯಕೃತ್ತನ್ನು ಉಪಯೋಗಿಸುವ ಮೂಲಕ ಅವನಿಗೆ ಗುಣಪಡಿಸುವ ಮತ್ತು ದೆವ್ವಗಳನ್ನು ಬಿಡಿಸುವ ಶಕ್ತಿಯಿತ್ತೆಂದು ಹೇಳಲಾಗುತ್ತಿತ್ತು.

ನಿಮಗೆ ನೆನಪಿದೆಯೊ?

• ‘ಸ್ವಸ್ಥ ಬೋಧನಾವಾಕ್ಯಗಳ ಮಾದರಿ’ ಏನಾಗಿದೆ, ಮತ್ತು ನಾವು ಹೇಗೆ ಅದಕ್ಕೆ ಅಂಟಿಕೊಳ್ಳುತ್ತಾ ಇರಬಲ್ಲೆವು?

• ನಾವು ಯಾವ “ಕಲ್ಪನಾಕಥೆಗಳನ್ನು” ತಳ್ಳಿಹಾಕುವ ಅಗತ್ಯವಿದೆ?

• ದೇವರ ವಾಕ್ಯದಿಂದ ತಾವು ಕಲಿಯುವ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವವರಿಗೆ ಯಾವ ಪ್ರಯೋಜನಗಳು ಸಿಗುತ್ತವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ಆರಂಭದ ಕ್ರೈಸ್ತರು, ಧರ್ಮಭ್ರಷ್ಟರಿಂದ ತಪ್ಪುದಾರಿಗೆ ನಡೆಸಲ್ಪಡುವುದರಿಂದ ಹೇಗೆ ತಪ್ಪಿಸಿಕೊಳ್ಳಸಾಧ್ಯವಿತ್ತು?

[ಪುಟ 18ರಲ್ಲಿರುವ ಚಿತ್ರಗಳು]

ವಾರ್ತಾಮಾಧ್ಯಮ, ಇಂಟರ್‌ನೆಟ್‌ ಮತ್ತು ಆಧುನಿಕ ದಿನದ ಧರ್ಮಭ್ರಷ್ಟರ ಮೂಲಕ ಸಂದೇಹದ ಬೀಜಗಳು ಬಿತ್ತಲ್ಪಡಸಾಧ್ಯವಿದೆ

[ಪುಟ 19ರಲ್ಲಿರುವ ಚಿತ್ರ]

ಪ್ರಮಾಣೀಕರಿಸಲ್ಪಟ್ಟಿರದಂಥ ವರದಿಗಳನ್ನು ಹಬ್ಬಿಸುವುದು ವಿವೇಕತನವಲ್ಲ

[ಪುಟ 20ರಲ್ಲಿರುವ ಚಿತ್ರಗಳು]

ಉದ್ಯೋಗದ ಸ್ಥಳದಲ್ಲಿ, ಶಾಲೆಯಲ್ಲಿ ಮತ್ತು ಬೇರೆ ಕಡೆಗಳಲ್ಲಿ, ಯೆಹೋವನ ಸಾಕ್ಷಿಗಳು ತಾವು ದೇವರ ವಾಕ್ಯದಲ್ಲಿ ಓದುವಂಥ ವಿಷಯವನ್ನು ಅನ್ವಯಿಸಿಕೊಳ್ಳುತ್ತಾರೆ