ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜವಾದ ಸಂತರು ನಿಮಗೆ ಹೇಗೆ ಸಹಾಯಮಾಡಬಲ್ಲರು?

ನಿಜವಾದ ಸಂತರು ನಿಮಗೆ ಹೇಗೆ ಸಹಾಯಮಾಡಬಲ್ಲರು?

ನಿಜವಾದ ಸಂತರು ನಿಮಗೆ ಹೇಗೆ ಸಹಾಯಮಾಡಬಲ್ಲರು?

ಶಾಸ್ತ್ರವಚನಗಳಲ್ಲಿ “ಸಂತ” ಎಂದು ಕೆಲವೊಂದು ಭಾಷಾಂತರಗಳಲ್ಲಿ ತರ್ಜುಮೆ ಮಾಡಲ್ಪಟ್ಟಿರುವ ಗ್ರೀಕ್‌ ಪದವನ್ನು, “ಪವಿತ್ರನು” ಎಂದು ಭಾಷಾಂತರಿಸಸಾಧ್ಯವಿದೆ. ಆ ಪದವು ಯಾರಿಗೆ ಅನ್ವಯವಾಗುತ್ತಿತ್ತು? “ವಿಶ್ವಾಸಿಗಳಿಗೆ ಸೂಚಿಸಿ ಮಾತಾಡುವಾಗ ಬಹುವಚನದಲ್ಲಿ ಅದು ಎಲ್ಲ ವಿಶ್ವಾಸಿಗಳಿಗೆ ಅನ್ವಯವಾಗುತ್ತದೆ ಮತ್ತು, ಅಸಾಧಾರಣವಾದ ಪಾವಿತ್ರತೆಯಿರುವ ವ್ಯಕ್ತಿಗಳಿಗೆ ಇಲ್ಲವೆ, ಯಾರು ಅಸಾಧಾರಣವಾದ ವೀರೋಚಿತತೆಯ ಕೃತ್ಯಗಳನ್ನು ನಡೆಸುತ್ತಿದ್ದರೊ ಆ ಮೃತ ವ್ಯಕ್ತಿಗಳಿಗೆ ಮಾತ್ರ ಅನ್ವಯಿಸಲ್ಪಡುವುದಿಲ್ಲ” ಎಂದು ಆ್ಯನ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಹೇಳುತ್ತದೆ.

ಈ ಕಾರಣದಿಂದ ಅಪೊಸ್ತಲ ಪೌಲನು ಎಲ್ಲ ಆರಂಭದ ಕ್ರೈಸ್ತರನ್ನು ನಿಜ ಸಂತರು ಇಲ್ಲವೆ ಪವಿತ್ರ ಜನರೆಂದು ಸಂಬೋಧಿಸಿದನು. ಉದಾಹರಣೆಗಾಗಿ ಸಾ.ಶ. ಒಂದರಲ್ಲಿ ಅವನು ಬರೆದ ಪತ್ರವನ್ನು, “ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಅಖಾಯ [ಎಂಬ ರೋಮನ್‌ ಪ್ರಾಂತ] ಸೀಮೆಯಲ್ಲೆಲ್ಲಾ ಇರುವ ದೇವಜನರೆಲ್ಲರಿಗೂ [“ಪವಿತ್ರ ಜನರಿಗೆ,” NW]” ಸಂಬೋಧಿಸಿದನು. (2 ಕೊರಿಂಥ 1:1) ತದನಂತರ ಪೌಲನು, ‘ರೋಮಾಪುರದಲ್ಲಿ ದೇವರಿಗೆ ಪ್ರಿಯರೂ ದೇವಜನರಾಗುವದಕ್ಕೆ [“ಸಂತರಾಗಲು,” NW ಪಾದಟಿಪ್ಪಣಿ] ಕರೆಯಲ್ಪಟ್ಟವರೂ’ ಆಗಿದ್ದವರಿಗೆ ಬರೆದನು. (ರೋಮಾಪುರ 1:7) ಈ ಪವಿತ್ರ ಜನರು ಇನ್ನೂ ಸತ್ತಿರಲಿಲ್ಲವೆಂಬುದು ವ್ಯಕ್ತ. ಮತ್ತು ಉಳಿದ ವಿಶ್ವಾಸಿಗಳಿಗಿಂತಲೂ ಮೇಲಕ್ಕೇರಿಸಲ್ಪಟ್ಟು, ಗಮನಾರ್ಹವಾದ ಸದ್ಗುಣಕ್ಕಾಗಿ ಅವರು ಪ್ರತ್ಯೇಕಿಸಲ್ಪಡಲೂ ಇಲ್ಲ. ಹಾಗಾದರೆ ಯಾವ ಆಧಾರದ ಮೇಲೆ ಅವರು ಸಂತರೆಂದು ಗುರುತಿಸಲ್ಪಟ್ಟಿದ್ದರು?

ದೇವರಿಂದ ಪವಿತ್ರೀಕರಿಸಲ್ಪಟ್ಟವರು

ಒಬ್ಬ ವ್ಯಕ್ತಿಯು ಮನುಷ್ಯರಿಂದಾಗಲಿ, ಒಂದು ಸಂಸ್ಥೆಯಿಂದಾಗಲಿ ಸಂತನಾಗಿ ಮಾಡಲ್ಪಡುವುದಿಲ್ಲವೆಂದು ದೇವರ ವಾಕ್ಯವು ತೋರಿಸುತ್ತದೆ. ಶಾಸ್ತ್ರವಚನಗಳು ಹೀಗೆ ತಿಳಿಸುತ್ತವೆ: “[ದೇವರು] ನಮ್ಮಲ್ಲಿ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವದಕ್ಕೆ ಕರೆದನು.” (2 ತಿಮೊಥೆಯ 1:9) ಒಬ್ಬ ಪವಿತ್ರ ವ್ಯಕ್ತಿಯು ಪವಿತ್ರೀಕರಿಸಲ್ಪಡಲು ಕಾರಣ, ದೇವರ ಅಪಾತ್ರ ದಯೆಗನುಸಾರ ಮತ್ತು ಆತನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಯೆಹೋವನ ಕರೆಯುವಿಕೆಯೇ.

ಕ್ರೈಸ್ತ ಸಭೆಯಲ್ಲಿರುವ ಪವಿತ್ರ ಜನರು “ಒಂದು ಹೊಸ ಒಡಂಬಡಿಕೆ”ಯಲ್ಲಿ ಸಹಭಾಗಿಗಳಾಗಿದ್ದಾರೆ. ಯೇಸು ಕ್ರಿಸ್ತನ ಸುರಿದ ರಕ್ತವು ಈ ಒಡಂಬಡಿಕೆಯನ್ನು ಊರ್ಜಿತಗೊಳಿಸಿ, ಅದರ ಭಾಗಿಗಳನ್ನು ಪವಿತ್ರೀಕರಿಸುತ್ತದೆ. (ಇಬ್ರಿಯ 9:15; 10:29; 13:​20, 24) ದೇವರ ದೃಷ್ಟಿಯಲ್ಲಿ ಶುದ್ಧಗೊಂಡವರಾಗಿ, ಅವರು ‘ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಯಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕವರ್ಗ’ವಾಗಿದ್ದಾರೆ.​—1 ಪೇತ್ರ 2:5, 9.

ಸಂತರಿಗೆ ಪ್ರಾರ್ಥನೆ ಮತ್ತು ಅವರ ಮಧ್ಯಸ್ಥಿಕೆ

“ಸಂತರು” ವಿಶ್ವಾಸಿಗಳಿಗೆ ವಿಶೇಷವಾದ ಶಕ್ತಿಗಳನ್ನು ದಯಪಾಲಿಸುತ್ತಾರೆಂಬ ನಂಬಿಕೆಯಿಂದ ಕೋಟಿಗಟ್ಟಲೆ ಜನರು ಸ್ಮಾರಕವಸ್ತುಗಳನ್ನು ಬಳಸುವ ಮೂಲಕವೊ, ಮಧ್ಯಸ್ಥಗಾರರೆಂದು ಅವರಿಗೆ ಪ್ರಾರ್ಥಿಸುವ ಮೂಲಕವೊ ಸಂತರನ್ನು ಪೂಜಿಸುತ್ತಾರೆ. ಇದೊಂದು ಬೈಬಲ್‌ ಬೋಧನೆಯೊ? ಪರ್ವತ ಪ್ರಸಂಗದಲ್ಲಿ, ಯೇಸು ತನ್ನ ಹಿಂಬಾಲಕರಿಗೆ, ಅವರು ದೇವರಿಗೆ ಹೇಗೆ ಪ್ರಾರ್ಥಿಸಬೇಕು ಎಂಬುದನ್ನು ಕಲಿಸುತ್ತಾ ಅಂದದ್ದು: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು​—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:​9, 10) ಹಾಗಾದರೆ ಪ್ರಾರ್ಥನೆಗಳು ಕೇವಲ ಯೆಹೋವ ದೇವರೊಬ್ಬನಿಗೆ ಯೋಗ್ಯವಾಗಿ ಸಂಬೋಧಿಸಲ್ಪಡಬೇಕು.

“ಸಂತರ” ಮಧ್ಯಸ್ಥಿಕೆಯನ್ನು ಸಮರ್ಥಿಸುವ ಪ್ರಯತ್ನದಲ್ಲಿ ಕೆಲವು ದೇವತಾಶಾಸ್ತ್ರಜ್ಞರು ರೋಮಾಪುರ 15:30ನ್ನು ಉಲ್ಲೇಖಿಸುತ್ತಾರೆ. ಅಲ್ಲಿ ಹೀಗೆ ಓದುತ್ತೇವೆ: “ಸಹೋದರರೇ, ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಬಲೀಯವಾಗಿ ವಿಜ್ಞಾಪಿಸಿಕೊಳ್ಳಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿಮಿತ್ತವಾಗಿಯೂ ಪವಿತ್ರಾತ್ಮನಿಂದಾಗುವ ಪ್ರೀತಿಯ ನಿಮಿತ್ತವಾಗಿಯೂ ನಿಮ್ಮನ್ನು ಬೇಡಿಕೊಳ್ಳುತ್ತೇನೆ.” ಆ ವಿಶ್ವಾಸಿಗಳು ತನಗೆ ಪ್ರಾರ್ಥಿಸುವಂತೆ ಇಲ್ಲವೆ ದೇವರಿಗೆ ಪ್ರಾರ್ಥಿಸುವಾಗ ತನ್ನ ಹೆಸರನ್ನು ಉಪಯೋಗಿಸುವಂತೆ ಪೌಲನು ಉತ್ತೇಜಿಸುತ್ತಿದ್ದನೊ? ಇಲ್ಲ. ನಿಜ ಸಂತರು ಇಲ್ಲವೆ ಪವಿತ್ರ ಜನರ ಪರವಾಗಿ ಪ್ರಾರ್ಥನೆಗಳನ್ನು ಸಲ್ಲಿಸುವುದನ್ನು ಬೈಬಲ್‌ ಉತ್ತೇಜಿಸುತ್ತದಾದರೂ, ಅಂಥ ಪವಿತ್ರ ಜನರಿಗೆ ನೇರವಾಗಿ ಪ್ರಾರ್ಥಿಸುವಂತೆ ಅಥವಾ ಅವರ ಮುಖಾಂತರ ಪ್ರಾರ್ಥಿಸುವಂತೆ ದೇವರು ಎಲ್ಲಿಯೂ ಆಜ್ಞಾಪಿಸುವುದಿಲ್ಲ.​—ಫಿಲಿಪ್ಪಿ 1:​1, 3, 4.

ಆದರೆ ನಮ್ಮ ಪ್ರಾರ್ಥನೆಗಳಿಗಾಗಿ ದೇವರೇ ಒಬ್ಬ ಮಧ್ಯಸ್ಥಗಾರನನ್ನು ನೇಮಿಸಿದ್ದಾನೆ. “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ” ಎಂದು ಯೇಸು ಕ್ರಿಸ್ತನು ಹೇಳಿದನು. ಅವನು ಹೀಗೂ ಹೇಳಿದನು: “ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ನಿಮಗೋಸ್ಕರ ಅದನ್ನು ನೆರವೇರಿಸುವೆನು. ಆಗ ಮಗನ ಮೂಲಕವಾಗಿ ತಂದೆಗೆ ಮಹಿಮೆ ಆಗುವುದು. ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ಅದನ್ನು ನೆರವೇರಿಸುವೆನು.” (ಯೋಹಾನ 14:6, 13, 14, ಪರಿಶುದ್ಧ ಬೈಬಲ್‌) ಯೇಸುವಿನ ಹೆಸರಿನಲ್ಲಿ ಸಲ್ಲಿಸಲ್ಪಡುವ ಪ್ರಾರ್ಥನೆಗಳಿಗೆ ಕಿವಿಗೊಡಲು ಯೆಹೋವನಿಗೆ ಸಿದ್ಧಮನಸ್ಸಿದೆ ಎಂಬುದರ ಬಗ್ಗೆ ನಾವು ಭರವಸೆಯಿಂದಿರಬಲ್ಲೆವು. ಯೇಸುವಿನ ಬಗ್ಗೆ ಬೈಬಲ್‌ ಹೇಳುವುದು: “ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ [ಇಲ್ಲವೆ, ಮಧ್ಯಸ್ಥಿಕೆ ವಹಿಸಲು] ಯಾವಾಗಲೂ ಬದುಕುವವನಾಗಿದ್ದಾನೆ.”​—ಇಬ್ರಿಯ 7:25.

ನಮ್ಮ ಪರವಾಗಿ ಯೇಸು ಮಧ್ಯಸ್ಥಿಕೆ ವಹಿಸಲು ಸಿದ್ಧನಾಗಿರುವಾಗ, ಕ್ರೈಸ್ತಪ್ರಪಂಚದ ಆರಾಧಕರು “ಸಂತರಿಗೆ” ಪ್ರಾರ್ಥಿಸುವುದೇಕೆ? ನಂಬಿಕೆಯ ಯುಗ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಇತಿಹಾಸಕಾರ ವಿಲ್‌ ಡ್ಯೂರಾಂಟ್‌, ಈ ಪದ್ಧತಿಯ ಮೂಲವನ್ನು ತಿಳಿಸುತ್ತಾರೆ. ಸರ್ವಶಕ್ತ ದೇವರಿಗೆ ಜನರು ಭಯಪಡುತ್ತಿದ್ದರು ಮತ್ತು ಯೇಸುವಿನ ಬಳಿ ಹೋಗುವುದು ಹೆಚ್ಚು ಸುಲಭವಾಗಿರುವಂತೆ ತೋರುತ್ತಿತ್ತೆಂದು ಡ್ಯೂರಾಂಟ್‌ ಹೇಳುತ್ತಾರೆ, ಆದರೆ ಅದೇ ಸಮಯದಲ್ಲಿ ಅವರು ತಿಳಿಸಿದ್ದು: “ಅವನ ಧನ್ಯವಾಕ್ಯಗಳನ್ನು ಪೂರ್ಣವಾಗಿ ಅಲಕ್ಷಿಸಿದ ನಂತರ, [ಯೇಸುವಿನೊಂದಿಗೆ] ಮುಖಾಮುಖಿಯಾಗಿ ಮಾತಾಡಲು ಯಾರೂ ಧೈರ್ಯಮಾಡುತ್ತಿರಲ್ಲಿಲ್ಲ. ಆದುದರಿಂದ, ವಿಧಿಪೂರ್ವಕವಾಗಿ ಸಂತನಾಗಿಸಲ್ಪಟ್ಟ ಕಾರಣದಿಂದಾಗಿ ಖಂಡಿತವಾಗಿಯೂ ಸ್ವರ್ಗದಲ್ಲಿದ್ದಾನೆಂದು ಎಣಿಸಲಾಗುತ್ತಿದ್ದ ಒಬ್ಬ ಸಂತನಿಗೆ ಪ್ರಾರ್ಥಿಸುವುದು, ಅವನು ಅಥವಾ ಅವಳು ಕ್ರಿಸ್ತನೊಂದಿಗೆ ಮಧ್ಯಸ್ಥಿಕೆಮಾಡುವುದು ಹೆಚ್ಚು ಬುದ್ಧಿವಂತಿಕೆಯ ಸಂಗತಿಯಾಗಿ ತೋರಿತು.” ಆದರೆ ಯೇಸುವಿನ ಮುಖಾಂತರ ದೇವರಿಗೆ ನೇರವಾಗಿ ಪ್ರಾರ್ಥಿಸುವುದರ ಕುರಿತಾದ ಈ ರೀತಿಯ ಚಿಂತೆಗಳು ನ್ಯಾಯೋಚಿತವೊ?

ಯೇಸುವಿನ ಮುಖಾಂತರ ನಾವು “ಸ್ವತಂತ್ರದಿಂದ ಮತ್ತು ನಿರ್ಭಯದಿಂದ” ದೇವರಿಗೆ ಪ್ರಾರ್ಥನೆ ಮಾಡಬಹುದೆಂದು ಬೈಬಲ್‌ ನಮಗೆ ಕಲಿಸುತ್ತದೆ. (ಎಫೆಸ 3:​11, 12, ಪರಿಶುದ್ಧ ಬೈಬಲ್‌) ಸರ್ವಶಕ್ತ ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳದಷ್ಟು ದೂರದಲ್ಲಿಲ್ಲ. ಕೀರ್ತನೆಗಾರನಾದ ದಾವೀದನು ಭರವಸೆಯಿಂದ ಹೀಗೆ ಪ್ರಾರ್ಥಿಸಿದನು: “ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.” (ಕೀರ್ತನೆ 65:2) ಮೃತ “ಸಂತರ” ಅವಶೇಷಗಳ ಮುಖಾಂತರ ಶಕ್ತಿಯನ್ನು ದಾಟಿಸುವ ಬದಲು, ಯೆಹೋವನು ತನ್ನ ಪವಿತ್ರಾತ್ಮವನ್ನು ಅದಕ್ಕಾಗಿ ನಂಬಿಕೆಯಿಂದ ಕೇಳುವವರ ಮೇಲೆ ಸುರಿಸುತ್ತಾನೆ. ಯೇಸು ಹೀಗೆ ತರ್ಕಿಸಿದನು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.”​—ಲೂಕ 11:13.

ಪವಿತ್ರ ಜನರ ಪಾತ್ರ

ಪೌಲನು ಯಾರಿಗೆ ಪತ್ರಗಳನ್ನು ಬರೆದನೋ ಆ ಪವಿತ್ರ ಜನರು ಶತಮಾನಗಳ ಹಿಂದೆ ಸತ್ತರು ಮತ್ತು ಸಕಾಲದಲ್ಲಿ ಸ್ವರ್ಗಕ್ಕೆ ಪುನರುತ್ಥಾನವಾಗಿ “ಜೀವವೆಂಬ ಜಯಮಾಲೆಯನ್ನು” ಪಡೆಯಲಿದ್ದರು. (ಪ್ರಕಟನೆ 2:10) ಈ ನಿಜ ಸಂತರ ಕಡೆಗಿನ ಪೂಜ್ಯಭಾವನೆಯು ಅಶಾಸ್ತ್ರೀಯವಾಗಿದೆ ಮತ್ತು ತಮಗೆ ಅಸ್ವಸ್ಥತೆ, ನೈಸರ್ಗಿಕ ವಿಪತ್ತುಗಳು, ಆರ್ಥಿಕ ಅಸ್ಥಿರತೆ, ವೃದ್ಧಾಪ್ಯ ಇಲ್ಲವೆ ಮರಣದಿಂದ ಸಂರಕ್ಷಣೆಯನ್ನು ಕೊಡಲಾರದೆಂಬದನ್ನು ಯೆಹೋವ ದೇವರ ಆರಾಧಕರು ಗ್ರಹಿಸುತ್ತಾರೆ. ಹೀಗಿರುವುದರಿಂದ, ‘ದೇವರ ಪವಿತ್ರ ಜನರಿಗೆ ನಿಜವಾಗಿಯೂ ನಮ್ಮ ಬಗ್ಗೆ ಕಾಳಜಿಯಿದೆಯೊ? ಅವರು ನಮ್ಮ ಪರವಾಗಿ ಕ್ರಿಯೆಗೈಯುವಂತೆ ನಾವು ನಿರೀಕ್ಷಿಸಬೇಕೊ?’ ಎಂದು ನೀವು ಕೇಳಬಹುದು.

ದಾನಿಯೇಲನಿಂದ ದಾಖಲಿಸಲ್ಪಟ್ಟ ಒಂದು ಪ್ರವಾದನೆಯಲ್ಲಿ, ಪವಿತ್ರ ಜನರ ಬಗ್ಗೆ ಎದ್ದುಕಾಣುವಂಥ ರೀತಿಯಲ್ಲಿ ತಿಳಿಸಲ್ಪಟ್ಟಿದೆ. ಸಾ.ಶ.ಪೂ. ಆರನೆಯ ಶತಮಾನದಲ್ಲಿ ಅವನು ಒಂದು ಮನಕೆರಳಿಸುವ ದರ್ಶನವನ್ನು ನೋಡಿದನು. ಅದರ ನೆರವೇರಿಕೆಯು ನಮ್ಮೀ ದಿನಗಳ ವರೆಗೂ ವ್ಯಾಪಿಸುತ್ತದೆ. ಮಾನವಕುಲದ ನೈಜ ಅಗತ್ಯಗಳನ್ನು ಪೂರೈಸಲಾರದ ಮಾನವ ಸರಕಾರಗಳನ್ನು ಸಾಂಕೇತಿಸುವ ನಾಲ್ಕು ಭಯಾನಕ ಕಾಡುಮೃಗಗಳು ಸಮುದ್ರದೊಳಗಿಂದ ಮೇಲೆ ಬಂದವು. ದಾನಿಯೇಲನು ಅನಂತರ ಪ್ರವಾದಿಸಿದ್ದು: “ಆದರೆ ರಾಜ್ಯವು ಪರಾತ್ಪರನ ಭಕ್ತರಿಗೆ [“ಪವಿತ್ರ ಜನರಿಗೆ,” NW] ಲಭಿಸುವದು, ಅವರೇ ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವರು.”​—ದಾನಿಯೇಲ 7:17, 18.

“ಪವಿತ್ರ ಜನರಿಗಾಗಿರುವ ಸ್ವಾಸ್ಥ್ಯವನ್ನು,” ಅಂದರೆ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಜೊತೆ ಬಾಧ್ಯಸ್ಥರಾಗಿರುವ ವಿಷಯವನ್ನು ಪೌಲನು ದೃಢೀಕರಿಸಿ ಹೇಳಿದನು. (ಎಫೆಸ 1:​18-21, NW) 1,44,000 ಮಂದಿ ಪವಿತ್ರ ಜನರು ಸ್ವರ್ಗೀಯ ಮಹಿಮೆಗೆ ಪುನರುತ್ಥಾನಗೊಳಿಸಲ್ಪಡಲಿಕ್ಕಾಗಿ ಯೇಸುವಿನ ರಕ್ತವು ಮಾರ್ಗವನ್ನು ತೆರೆಯಿತು. ಅಪೊಸ್ತಲ ಯೋಹಾನನು ಘೋಷಿಸಿದ್ದು: “ಪ್ರಥಮ ಪುನರುತ್ಥಾನದಲ್ಲಿ ಸೇರಿರುವವನು ಧನ್ಯನೂ ಪರಿಶುದ್ಧನೂ ಆಗಿದ್ದಾನೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ; ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರುಷ ಆಳುವರು.” (ಪ್ರಕಟನೆ 20:4, 6; ಪ್ರಕಟನೆ 14:1, 3) ದರ್ಶನದಲ್ಲಿ, ಸ್ವರ್ಗೀಯ ಜೀವಿಗಳ ಒಂದು ದಂಡು, ಮಹಿಮೆಗೇರಿಸಲ್ಪಟ್ಟಿರುವ ಯೇಸುವಿನ ಮುಂದೆ ಹೀಗೆ ಹಾಡುವುದನ್ನು ಯೋಹಾನನು ಕೇಳಿಸಿಕೊಂಡನು: “ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ; ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ; ಅವರು ಭೂಮಿಯ ಮೇಲೆ ಆಳುವರು.” (ಪ್ರಕಟನೆ 5:9, 10) ಎಷ್ಟು ಆಶ್ವಾಸನಾದಾಯಕ! ಸ್ವತಃ ಯೆಹೋವ ದೇವರೇ ಈ ಸ್ತ್ರೀಪುರುಷರನ್ನು ತುಂಬ ಜಾಗರೂಕತೆಯಿಂದ ಆಯ್ಕೆಮಾಡಿದ್ದಾನೆ. ಅಷ್ಟುಮಾತ್ರವಲ್ಲದೆ ಇವರು ಈ ಭೂಮಿಯ ಮೇಲೆ ಮಾನವರು ಅನುಭವಿಸಿರುವ ಕಾರ್ಯತಃ ಪ್ರತಿಯೊಂದು ಸಮಸ್ಯೆಯನ್ನೂ ಎದುರಿಸಿ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸಿದ್ದಾರೆ. (1 ಕೊರಿಂಥ 10:13) ಆದುದರಿಂದ ಈ ಪವಿತ್ರ ಜನರು ಇಲ್ಲವೆ ಸಂತರು, ನಮ್ಮ ದೌರ್ಬಲ್ಯಗಳನ್ನೂ ಇತಿಮಿತಿಗಳನ್ನೂ ಮನಸ್ಸಿನಲ್ಲಿಟ್ಟುಕೊಂಡು, ದಯಾಪೂರ್ವಕವಾದ ಹಾಗೂ ನಮ್ಮನ್ನು ಅರ್ಥಮಾಡಿಕೊಳ್ಳುವಂಥ ಅಧಿಪತಿಗಳಾಗಿರುವರೆಂಬ ದೃಢಭರವಸೆ ನಮಗಿರಬಲ್ಲದು.

ರಾಜ್ಯದಾಳಿಕೆಯ ಕೆಳಗೆ ಆಶೀರ್ವಾದಗಳು

ಆ ರಾಜ್ಯ ಸರಕಾರವು ಬೇಗನೆ ಈ ಭೂಮಿಯಿಂದ ದುಷ್ಟತನ ಮತ್ತು ಕಷ್ಟಾನುಭವವನ್ನು ತೊಲಗಿಸಲು ಕ್ರಿಯೆಗೈಯುವುದು. ಆ ಸಮಯದಲ್ಲಿ ಮನುಷ್ಯರು ಹಿಂದೆಂದಿಗಿಂತಲೂ ಹೆಚ್ಚಾಗಿ ದೇವರ ಹತ್ತಿರಕ್ಕೆ ಬರುವರು. ಯೋಹಾನನು ಬರೆದುದು: “ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು​—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು.” ಇದು ಮಾನವಕುಲಕ್ಕೆ ಅಪಾರ ಆಶೀರ್ವಾದಗಳನ್ನು ತರುವುದು. ಏಕೆಂದರೆ ಆ ಪ್ರವಾದನೆಯು ಹೀಗೆ ಮುಂದುವರಿಯುತ್ತದೆ: “ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”​—ಪ್ರಕಟನೆ 21:3, 4.

ಅದೆಂಥ ಆನಂದಕರ ಸಮಯವಾಗಿರುವುದು! ಯೇಸು ಕ್ರಿಸ್ತನ ಮತ್ತು 1,44,000 ಮಂದಿ ಪವಿತ್ರ ಜನರ ಪರಿಪೂರ್ಣ ಆಳ್ವಿಕೆಯ ಫಲಿತಾಂಶಗಳನ್ನು ಮೀಕ 4:​3, 4ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳಲ್ಲಿ ವರ್ಣಿಸಲಾಗಿದೆ: “[ಯೆಹೋವನು] ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು; ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ. ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.”

ಇಂಥ ಆಶೀರ್ವಾದಗಳಲ್ಲಿ ಭಾಗಿಗಳಾಗುವ ಆಮಂತ್ರಣವನ್ನು ಈ ಪವಿತ್ರ ಜನರು ನೀಡುತ್ತಾರೆ. ಒಬ್ಬ ಮದಲಗಿತ್ತಿಯಿಂದ ಸಾಂಕೇತಿಸಲ್ಪಟ್ಟಿರುವ ಈ ನಿಜ ಸಂತರು “ಬಾ” ಎನ್ನುತ್ತಾ ಇರುತ್ತಾರೆ. ನಂತರ ವಚನವು ಹೀಗೆ ಮುಂದುವರಿಯುತ್ತದೆ: “ಕೇಳುವವನು​—ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:17) ಈ “ಜೀವಜಲ”ದಲ್ಲಿ ಏನು ಒಳಗೂಡಿದೆ? ಬೇರೆ ವಿಷಯಗಳೊಂದಿಗೆ, ದೇವರ ಉದ್ದೇಶಗಳ ಕುರಿತಾದ ನಿಷ್ಕೃಷ್ಟ ಜ್ಞಾನವು ಒಳಗೂಡಿದೆ. ದೇವರಿಗೆ ಪ್ರಾರ್ಥನೆ ಮಾಡುತ್ತಿರುವಾಗ ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಈ ಜ್ಞಾನವು ಬೈಬಲಿನ ಕ್ರಮವಾದ ಅಧ್ಯಯನದ ಮೂಲಕ ಲಭ್ಯವಿದೆ. ದೇವರ ವಾಕ್ಯದ ಮೂಲಕ ನಾವು ಪವಿತ್ರ ಜನರ ನಿಜ ಗುರುತನ್ನು ವಿವೇಚಿಸಸಾಧ್ಯವಿದೆ ಮತ್ತು ದೇವರು ಅವರನ್ನು ಮಾನವಕುಲದ ನಿತ್ಯ ಪ್ರಯೋಜನಕ್ಕಾಗಿ ಹೇಗೆ ಉಪಯೋಗಿಸುವನೆಂಬುದನ್ನು ಕಲಿಯಸಾಧ್ಯವಿರುವುದಕ್ಕಾಗಿ ನಾವೆಷ್ಟು ಸಂತೋಷಿತರು!

[ಪುಟ 4ರಲ್ಲಿರುವ ಚಿತ್ರ]

ಪೌಲನು ನಿಜವಾದ ಸಂತರಿಗೆ ಪ್ರೇರಿತ ಪತ್ರಗಳನ್ನು ಬರೆದನು

[ಪುಟ 4, 5ರಲ್ಲಿರುವ ಚಿತ್ರ]

ಯೇಸುವಿನ ನಂಬಿಗಸ್ತ ಅಪೊಸ್ತಲರು ನಿಜವಾದ ಸಂತರು, ಇಲ್ಲವೆ ಪವಿತ್ರ ಜನರಾದರು

[ಪುಟ 6ರಲ್ಲಿರುವ ಚಿತ್ರ]

ಯೇಸು ಕ್ರಿಸ್ತನ ಮುಖಾಂತರ ನಾವು ದೃಢಭರವಸೆಯಿಂದ ದೇವರಿಗೆ ಪ್ರಾರ್ಥಿಸಬಲ್ಲೆವು

[ಪುಟ 7ರಲ್ಲಿರುವ ಚಿತ್ರ]

ಪುನರುತ್ಥಿತ ಸಂತರು ಇಲ್ಲವೆ ಪವಿತ್ರ ಜನರು, ಭೂಮಿಯನ್ನಾಳುವ ಕರುಣಾಭರಿತ ಅಧಿಪತಿಗಳಾಗಿರುವರು