ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು’

‘ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು’

‘ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು’

ಬೈಬಲ್‌ ದೇಶಗಳ ಸುಡುವ ಹವಾಮಾನದಲ್ಲಿ, ಕುರಿಗಳಿಗೆ ಪ್ರತಿ ದಿನ ನೀರು ಕುಡಿಯಬೇಕಾಗುತ್ತದೆ. ಆದುದರಿಂದ, ಒಬ್ಬ ಕುರುಬನ ಕೆಲಸದ ಮುಖ್ಯ ಭಾಗವು, ತನ್ನ ಮಂದೆಗೆ ನೀರನ್ನು ಒದಗಿಸುವುದೇ ಆಗಿದೆ. ಕೆಲವೊಮ್ಮೆ ಕುರುಬರು ಒಂದು ಬಾವಿಯಿಂದ ನೀರನ್ನು ಸೇದಿ, ತಮ್ಮ ಕುರಿಗಳಿಗೆ ಕುಡಿಯಲು ಸಾಧ್ಯವಾಗುವಂತೆ ತೊಟ್ಟಿಗಳಲ್ಲಿ ಸುರಿಯಬಹುದು. (ಆದಿಕಾಂಡ 29:​1-3) ಆದರೆ ವಿಶೇಷವಾಗಿ ಮಳೆಗಾಲದಲ್ಲಿ ಚಿಕ್ಕ ತೊರೆಗಳು ಮತ್ತು ನದಿಗಳ ಸುತ್ತಲಿನ ಪ್ರದೇಶಗಳು, ಪ್ರಶಾಂತವಾದ, ‘ವಿಶ್ರಾಂತಿಕರವಾದ ನೀರಾವರಿ ಸ್ಥಳಗಳನ್ನು’ ಒದಗಿಸುತ್ತವೆ.​—ಕೀರ್ತನೆ 23:2, NW.

ಒಬ್ಬ ಒಳ್ಳೇ ಕುರುಬನು, ತನ್ನ ಮಂದೆಗಾಗಿ ನೀರನ್ನೂ ಸೂಕ್ತವಾದ ಹುಲ್ಲುಗಾವಲಿನ ಪ್ರದೇಶವನ್ನೂ ಎಲ್ಲಿ ಕಂಡುಕೊಳ್ಳಬಹುದು ಎಂಬುದನ್ನು ತಿಳಿದಿರಬೇಕು. ಒಂದು ಪ್ರದೇಶದ ಬಗ್ಗೆ ಅವನಿಗಿರುವ ಒಳ್ಳೇ ಪರಿಚಯವು, ಅವನ ಕುರಿಗಳು ಬದುಕಿ ಉಳಿಯುವುದನ್ನು ಖಾತ್ರಿಪಡಿಸುವುದು. ಯೂದಾಯದ ಗುಡ್ಡಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸುವುದರಲ್ಲಿ ಅನೇಕ ವರ್ಷಗಳನ್ನು ಕಳೆದಿದ್ದ ದಾವೀದನು, ದೇವರ ಆತ್ಮಿಕ ಮಾರ್ಗದರ್ಶನವನ್ನು ಒಳ್ಳೆಯ ಹುಲ್ಲುಗಾವಲು ಮತ್ತು ಜೀವದಾಯಕ ನೀರುಗಳ ಕಡೆಗೆ ನಡೆಸುವ ಒಬ್ಬ ಕುರುಬನಿಗೆ ಹೋಲಿಸುತ್ತಾನೆ. ಒಂದು ಭಾಷಾಂತರಕ್ಕನುಸಾರ, ದಾವೀದನು ಹೇಳಿದ್ದು: “ಆತನು . . . ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.”​—ಕೀರ್ತನೆ 23:​1-3, ಪರಿಶುದ್ಧ ಬೈಬಲ್‌.

ವರ್ಷಗಳಾನಂತರ, ತನ್ನ ಪ್ರವಾದಿಯಾದ ಯೆಹೆಜ್ಕೇಲನ ಮೂಲಕ ಯೆಹೋವನು ಅದೇ ರೀತಿಯ ದೃಷ್ಟಾಂತವನ್ನು ಉಪಯೋಗಿಸಿದನು. ಒಬ್ಬ ಕುರುಬನು ತನ್ನ ಕುರಿಗಳನ್ನು ಒಟ್ಟುಗೂಡಿಸುವಂತೆಯೇ, ತನ್ನ ಜನರನ್ನು ಚದುರಿಹೋದಂಥ ದೇಶಗಳಿಂದ ಒಟ್ಟುಗೂಡಿಸುವೆನೆಂದು ಆತನು ಮಾತುಕೊಡುತ್ತಾನೆ. “ಅವುಗಳನ್ನು . . . ಸ್ವದೇಶಕ್ಕೆ ಬರಮಾಡಿ ಇಸ್ರಾಯೇಲಿನ ಬೆಟ್ಟಗಳಲ್ಲಿಯೂ ತೊರೆಗಳ ಬಳಿಯಲ್ಲಿಯೂ . . . ಮೇಯಿಸುವೆನು” ಎಂದು ಅವರಿಗೆ ಆಶ್ವಾಸನೆ ನೀಡುತ್ತಾನೆ.​—ಯೆಹೆಜ್ಕೇಲ 34:13.

ಆತ್ಮಿಕ ಜಲವನ್ನು ಒದಗಿಸುವುದರ ಬಗ್ಗೆಯೂ ಯೆಹೋವ ದೇವರು ತುಂಬ ಚಿಂತಿತನಾಗಿದ್ದಾನೆ. ದೇವರ ಸಿಂಹಾಸನದಿಂದ ಹರಿಯುವ “ಜೀವಜಲದ ನದಿಯ” ಬಗ್ಗೆ ಪ್ರಕಟನೆ ಪುಸ್ತಕವು ವರ್ಣಿಸುತ್ತದೆ. (ಪ್ರಕಟನೆ 22:1) ಈ ನದಿಯಿಂದ ನೀರನ್ನು ಕುಡಿಯುವ ಆಮಂತ್ರಣವು ಎಲ್ಲರಿಗೂ ಕೊಡಲ್ಪಡುತ್ತದೆ. “ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.”​—ಪ್ರಕಟನೆ 22:17.

ಈ ಸಾಂಕೇತಿಕ ನೀರು ನಿತ್ಯಜೀವಕ್ಕಾಗಿ ದೇವರು ಮಾಡಿರುವ ಏರ್ಪಾಡುಗಳನ್ನು ಪ್ರತಿನಿಧಿಸುತ್ತದೆ. ‘ಒಬ್ಬನೇ ಸತ್ಯದೇವರನ್ನು ಮತ್ತು ಆತನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನು ತಿಳಿಯುವ’ ಮೂಲಕ ಯಾವ ವ್ಯಕ್ತಿಯಾದರೂ ಅಂಥ ನೀರನ್ನು ಕುಡಿಯಬಹುದು.​—ಯೋಹಾನ 17:3.