“ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು”
“ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು”
ರಾಷ್ಟ್ರೀಯ ಬಿಕ್ಕಟ್ಟು ಮತ್ತು ಅಂತಾರಾಷ್ಟ್ರೀಯ ಉದ್ವೇಗದ ಸಮಯಗಳಲ್ಲಿ ಜನರು ಸುರಕ್ಷೆ ಮತ್ತು ಭದ್ರತೆಗಾಗಿ ತಮ್ಮ ಸರಕಾರಗಳ ಕಡೆಗೆ ನೋಡುತ್ತಾರೆ. ಮತ್ತು ಸರಕಾರಗಳು, ಜನಸಮುದಾಯದ ಬೆಂಬಲವನ್ನು ಐಕ್ಯಗೊಳಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ಯೋಜನೆಗಳನ್ನು ಹೆಚ್ಚಿಸುತ್ತವೆ. ಇಂಥ ಯೋಜನೆಗಳಿಂದ ಎಷ್ಟು ಹೆಚ್ಚು ದೇಶಭಕ್ತಿಯನ್ನು ಪ್ರೇರಿಸಲಾಗುತ್ತದೊ, ದೇಶಭಕ್ತಿಯ ಸಮಾರಂಭಗಳು ಸಹ ಅಷ್ಟೇ ಹೆಚ್ಚು ಉತ್ಸಾಹಕರವೂ, ಹೇರಳವೂ ಆಗುತ್ತವೆ.
ಒಂದು ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸಮಯದಲ್ಲಿ, ದೇಶಭಕ್ತಿಯ ಬಿಸುಪು ಜನರಿಗೆ ಐಕ್ಯತೆ ಮತ್ತು ಬಲದ ಪ್ರಜ್ಞೆಯನ್ನು ಕೊಡುತ್ತದೆ ಮತ್ತು ಅವರ ನಡುವೆ ಸಹಕಾರ ಹಾಗೂ ಪೌರ ಹಿತ ಭಾವನೆಯನ್ನು ಪ್ರವರ್ಧಿಸಬಹುದು. ಆದರೆ “ದೇಶಭಕ್ತಿಯ ಭಾವವು ಬೇರಾವುದೇ ಭಾವನೆಯಷ್ಟೇ ಅನಿರೀಕ್ಷಿತವಾಗಿ ಬದಲಾಗುವಂಥದ್ದಾಗಿದೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸಿನ್ನಲ್ಲಿ ಒಂದು ಲೇಖನವು ತಿಳಿಸುತ್ತದೆ. ಏಕೆಂದರೆ “ಅದು ಒಮ್ಮೆ ಹೊರಬಂದರೆ, ಅದು ವಿಕಾರವಾದ ರೂಪಗಳನ್ನು ತಾಳಬಲ್ಲದು.” ಅದರ ಅಭಿವ್ಯಕ್ತಿಗಳು, ದೇಶದ ನಿರ್ದಿಷ್ಟ ಪ್ರಜೆಗಳ ಪೌರ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ದಾಳಿಮಾಡಲಾರಂಭಿಸಬಹುದು. ವಿಶೇಷವಾಗಿ ಸತ್ಕ್ರೈಸ್ತರಿಗೆ ತಮ್ಮ ನಂಬಿಕೆಗಳನ್ನು ರಾಜಿಮಾಡುವ ಒತ್ತಡಬರುತ್ತದೆ. ತಮ್ಮ ಸುತ್ತಲಿರುವ ಲೋಕವನ್ನು ಇಂಥ ವಾತಾವರಣವು ಮುತ್ತಿಕೊಂಡಿರುವಾಗ ಅವರು ತಮ್ಮನ್ನೇ ಹೇಗೆ ನಡೆಸಿಕೊಳ್ಳುತ್ತಾರೆ? ಒಳನೋಟದಿಂದ ಕ್ರಿಯೆಗೈಯಲು ಮತ್ತು ದೇವರ ಕಡೆಗೆ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯಾವ ಶಾಸ್ತ್ರೀಯ ಮೂಲತತ್ತ್ವಗಳು ಅವರಿಗೆ ಸಹಾಯಮಾಡುತ್ತವೆ?
“ನೀವು ಅವುಗಳಿಗೆ ಅಡ್ಡಬೀಳಲೂ ಬಾರದು”
ಕೆಲವೊಮ್ಮೆ, ರಾಷ್ಟ್ರ ಧ್ವಜವನ್ನು ವಂದಿಸುವುದು ದೇಶಭಕ್ತಿಯ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಜನಪ್ರಿಯ ವಿಧವಾಗಿಬಿಡುತ್ತದೆ. ಆದರೆ ಹೆಚ್ಚಾಗಿ ಧ್ವಜಗಳಲ್ಲಿ, ನಕ್ಷತ್ರಗಳಂಥ ಆಕಾಶದಲ್ಲಿರುವ ವಸ್ತುಗಳ ಹಾಗೂ ಭೂಮಿಯಲ್ಲಿನ ವಸ್ತುಗಳ ಪ್ರತೀಕಗಳು ಇರುತ್ತವೆ. ತನ್ನ ಜನರಿಗೆ ಈ ಆಜ್ಞೆಯನ್ನು ಕೊಡುವಾಗ, ಇಂಥ ವಸ್ತುಗಳಿಗೆ ಅಡ್ಡಬೀಳುವುದರ ಕುರಿತಾಗಿ ತನ್ನ ಅಭಿಪ್ರಾಯವೇನೆಂದು ದೇವರು ವ್ಯಕ್ತಪಡಿಸಿದನು: “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು [“ಅನನ್ಯ ಭಕ್ತಿಯನ್ನು,” NW] ಮತ್ತೊಬ್ಬನಿಗೆ ಸಲ್ಲಗೊಡಿಸದವ”ನು.—ವಿಮೋಚನಕಾಂಡ 20:4, 5.
ರಾಷ್ಟ್ರವನ್ನು ಪ್ರತಿನಿಧಿಸುವ ಒಂದು ಧ್ವಜವನ್ನು ವಂದಿಸುವುದು ಇಲ್ಲವೆ ಅದರ ಮುಂದೆ ಮೊಣಕಾಲೂರುವುದು, ನಿಜವಾಗಿಯೂ ಯೆಹೋವ ದೇವರಿಗೆ ಅನನ್ಯ ಭಕ್ತಿಯನ್ನು ಸಲ್ಲಿಸುವುದರ ವಿರುದ್ಧವಾಗಿದೆಯೊ? ಪ್ರಾಚೀನ ಇಸ್ರಾಯೇಲ್ಯರ ಬಳಿಯೂ, “ಗೋತ್ರಧ್ವಜ”ಗಳು, ಇಲ್ಲವೆ ಪತಾಕೆಗಳಿದ್ದವು. ಅರಣ್ಯದಲ್ಲಿದ್ದಾಗ ಅವರು ಮೂರು ಗೋತ್ರಗಳ ಗುಂಪುಗಳಿಗನುಸಾರ ಅವುಗಳ ಸುತ್ತಲೂ ಒಟ್ಟುಗೂಡಬೇಕಾಗಿತ್ತು. (ಅರಣ್ಯಕಾಂಡ 2:1, 2) ಇಂಥ ಪತಾಕೆಗಳ ಬಗ್ಗೆ ಸೂಚಿಸುವ ಹೀಬ್ರು ಪದಗಳ ಕುರಿತಾಗಿ, ಮೆಕ್ಲಿಂಟಕ್ ಮತ್ತು ಸ್ಟ್ರಾಂಗ್ರವರ ಸೈಕ್ಲಪೀಡೀಯ ಹೀಗನ್ನುತ್ತದೆ: “ಈ ಹೀಬ್ರು ಪದಗಳಲ್ಲಿ ಯಾವುದೂ, ಸಾಮಾನ್ಯವಾಗಿ ‘ಪತಾಕೆ’ ಎಂಬ ಪದವು ನಮ್ಮ ಮನಸ್ಸಿಗೆ ತರುವ ಅರ್ಥವನ್ನು, ಅಂದರೆ ಒಂದು ಬಾವುಟದ ವಿಚಾರವನ್ನು ತರುವುದಿಲ್ಲ.” ಅಷ್ಟುಮಾತ್ರವಲ್ಲದೆ, ಇಸ್ರಾಯೇಲಿನ ಪತಾಕೆಗಳನ್ನು ಪವಿತ್ರವೆಂದು ದೃಷ್ಟಿಸಲಾಗುತ್ತಿರಲಿಲ್ಲ ಇಲ್ಲವೆ ಅವುಗಳನ್ನು ಬಳಸುವ ಯಾವುದೇ ಸಮಾರಂಭಗಳಿರಲಿಲ್ಲ. ಅವುಗಳು ಕೇವಲ ಸೂಚನಾಫಲಕಗಳ ಕೆಲಸವನ್ನು ಪೂರೈಸುತ್ತಿದ್ದವು, ಅಂದರೆ ಜನರು ಎಲ್ಲೆಲ್ಲಿ ಒಟ್ಟುಗೂಡಬೇಕೆಂಬದನ್ನು ತೋರಿಸುತ್ತಿದ್ದವು ಅಷ್ಟೇ.
ದೇವಗುಡಾರದಲ್ಲಿ ಮತ್ತು ಸೊಲೊಮೋನನ ಆಲಯದಲ್ಲಿದ್ದ ಕೆರೂಬಿಯರ ಮೂರ್ತಿಗಳು, ಸ್ವರ್ಗೀಯ ಕೆರೂಬಿಯರ ಒಂದು ಚಿತ್ರಣವಾಗಿ ಕೆಲಸಮಾಡಿದವು ಅಷ್ಟೇ. (ವಿಮೋಚನಕಾಂಡ 25:18; 26:1, 31, 33; 1 ಅರಸುಗಳು 6:23, 28, 29; ಇಬ್ರಿಯ 9:23, 24) ಈ ಕೆರೂಬಿಯರ ಪ್ರತೀಕಗಳು ಆರಾಧಿಸಲ್ಪಡಬಾರದಿತ್ತು ಎಂಬದನ್ನು, ಸಾಮಾನ್ಯ ಜನರು ಅವುಗಳನ್ನು ಎಂದೂ ನೋಡಲಿಲ್ಲ ಮತ್ತು ದೇವದೂತರು ಆರಾಧಿಸಲ್ಪಡಬಾರದೆಂಬ ವಾಸ್ತವಾಂಶದಿಂದ ವ್ಯಕ್ತವಾಗುತ್ತದೆ.—ಕೊಲೊಸ್ಸೆ 2:18; ಪ್ರಕಟನೆ 19:10; 22:8, 9.
ಅರಣ್ಯಕಾಂಡ 21:4-9; ಯೋಹಾನ 3:14, 15) ಅದನ್ನು ಪೂಜಿಸಲಾಗುತ್ತಿರಲಿಲ್ಲ ಇಲ್ಲವೆ ಆರಾಧನೆಯಲ್ಲಿ ಉಪಯೋಗಿಸಲಾಗುತ್ತಿರಲಿಲ್ಲ. ಆದರೆ ಮೋಶೆಯ ದಿನಗಳ ಶತಮಾನಗಳ ಬಳಿಕ ಇಸ್ರಾಯೇಲ್ಯರು, ಅಯೋಗ್ಯವಾಗಿ ಅದೇ ವಿಗ್ರಹವನ್ನು ಆರಾಧಿಸಲಾರಂಭಿಸಿದರು, ಮತ್ತು ಅದಕ್ಕೆ ಧೂಪವನ್ನೂ ಸುಡಲಾರಂಭಿಸಿದರು. ಹೀಗಿರುವುದರಿಂದ ಯೂದಾಯದ ರಾಜನಾದ ಹಿಜ್ಕೀಯನು ಅದನ್ನು ಜಜ್ಜಿ ಚೂರುಚೂರುಮಾಡಿದನು.—2 ಅರಸುಗಳು 18:1-4.
ಅರಣ್ಯದಲ್ಲಿ ಇಸ್ರಾಯೇಲ್ಯರ ಪ್ರಯಾಣದ ಸಮಯದಲ್ಲಿ ಪ್ರವಾದಿಯಾದ ಮೋಶೆಯು ಮಾಡಿದಂಥ, ತಾಮ್ರದ ಸರ್ಪದ ಆಕೃತಿಯನ್ನೂ ಪರಿಗಣಿಸಿರಿ. ಆ ಆಕೃತಿ ಇಲ್ಲವೆ ಪ್ರತಿರೂಪವು, ಒಂದು ಪ್ರತೀಕವಾಗಿ ಕಾರ್ಯನಡಿಸಿತು ಮತ್ತು ಅದಕ್ಕೆ ಪ್ರವಾದನಾತ್ಮಕ ಸೂಚ್ಯಾರ್ಥವಿತ್ತು. (ರಾಷ್ಟ್ರ ಧ್ವಜಗಳು, ಕೇವಲ ಒಂದು ಉಪಯುಕ್ತ ಕಾರ್ಯಕ್ಕಾಗಿರುವ ಸೂಚನಾಫಲಕಗಳಾಗಿವೆಯೊ? ಅವು ಏನನ್ನು ಸಾಂಕೇತಿಸುತ್ತವೆ? “ರಾಷ್ಟ್ರೀಯತಾವಾದದಲ್ಲಿ, ನಂಬಿಕೆಯ ಮುಖ್ಯ ಸಂಕೇತ ಮತ್ತು ಆರಾಧನೆಯ ಕೇಂದ್ರ ವಸ್ತು ಧ್ವಜ ಆಗಿದೆ” ಎಂದು ಲೇಖಕ ಜೆ. ಪಾಲ್ ವಿಲ್ಯಮ್ಸ್ ತಿಳಿಸಿದರು. ದಿ ಎನ್ಸೈಕ್ಲಪೀಡೀಯ ಅಮೆರಿಕಾನ ಹೇಳುವುದು: “ಶಿಲುಬೆಯಂತೆ, ಧ್ವಜವು ಪವಿತ್ರವಾಗಿದೆ.” ಧ್ವಜವು ರಾಷ್ಟ್ರದ ಸಂಕೇತವಾಗಿದೆ. ಆದುದರಿಂದ ಅದಕ್ಕೆ ಅಡ್ಡಬೀಳುವುದಾಗಲಿ, ಧ್ವಜವಂದನೆ ಮಾಡುವುದಾಗಲಿ, ರಾಷ್ಟ್ರಕ್ಕೆ ಪೂಜೆಯನ್ನು ಸಲ್ಲಿಸುವ ಒಂದು ಧಾರ್ಮಿಕ ಸಮಾರಂಭವಾಗಿದೆ. ಆ ಕೃತ್ಯವು, ರಾಷ್ಟ್ರವು ರಕ್ಷಣೆ ಕೊಡುತ್ತದೆಂದು ಹೇಳುವುದಾಗಿದೆ ಮತ್ತು ಬೈಬಲು ವಿಗ್ರಹಾರಾಧನೆಯ ಬಗ್ಗೆ ಏನು ಹೇಳುತ್ತದೊ ಅದರೊಂದಿಗೆ ಹೊಂದಿಕೆಯಲ್ಲಿರುವುದಿಲ್ಲ.
ಶಾಸ್ತ್ರವಚನಗಳು ಸ್ಪಷ್ಟವಾಗಿ ಹೀಗೆ ತಿಳಿಸುತ್ತವೆ: “ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.” (ಕೀರ್ತನೆ 3:8) ರಕ್ಷಣೆಯು ಮಾನವ ಸಂಸ್ಥೆಗಳಿಂದ ಇಲ್ಲವೆ ಅವುಗಳ ಸಂಕೇತಗಳಿಂದ ಸಿಗುವುದೆಂದು ಹೇಳಲಾರೆವು. ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಬುದ್ಧಿಹೇಳಿದ್ದು: “ಪ್ರಿಯ ಸಹೋದರರೇ, ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ.” (1 ಕೊರಿಂಥ 10:14) ಆರಂಭದ ಕ್ರೈಸ್ತರು, ರಾಷ್ಟ್ರದ ಆರಾಧನಾ ಕೃತ್ಯಗಳಲ್ಲಿ ಪಾಲ್ಗೊಳ್ಳಲಿಲ್ಲ. ಸಾವಿನ ಅಂಚಿನಲ್ಲಿರುವವರು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಡ್ಯಾನಿಯಲ್ ಪಿ. ಮನಿಕ್ಸ್ ಹೇಳುವುದು: “ಕ್ರೈಸ್ತರು . . . [ರೋಮನ್] ಸಾಮ್ರಾಟನ ರಕ್ಷಕ ದೇವತೆಗೆ ಬಲಿಯರ್ಪಿಸಲು ನಿರಾಕರಿಸಿದರು, ಇದು ಬಹುಮಟ್ಟಿಗೆ ಇಂದು ಧ್ವಜವಂದನೆಮಾಡಲು ನಿರಾಕರಿಸುವುದಕ್ಕೆ ಸಮಾನವಾಗಿದೆ.” ಇದು ಇಂದಿನ ಸತ್ಯ ಕ್ರೈಸ್ತರ ವಿಷಯದಲ್ಲೂ ಸತ್ಯವಾಗಿದೆ. ಯೆಹೋವನಿಗೆ ಅನನ್ಯ ಭಕ್ತಿಯನ್ನು ಸಲ್ಲಿಸಲಿಕ್ಕಾಗಿ, ಅವರು ಯಾವುದೇ ದೇಶದ ಧ್ವಜವಂದನೆಯನ್ನು ಮಾಡುವುದರಿಂದ ದೂರವಿರುತ್ತಾರೆ. ಹೀಗೆ ಮಾಡುವ ಮೂಲಕ, ಅವರು ದೇವರನ್ನು ಪ್ರಥಮವಾಗಿಟ್ಟು, ಅದೇ ಸಮಯದಲ್ಲಿ ಸರಕಾರಗಳಿಗೂ ನಾಯಕರುಗಳಿಗೂ ಗೌರವವನ್ನು ತೋರಿಸುತ್ತಾರೆ. ಹೌದು, ಸರಕಾರಿ ‘ಮೇಲಧಿಕಾರಿಗಳಿಗೆ’ ಅಧೀನರಾಗಿರಬೇಕಾದ ಅವರ ಜವಾಬ್ದಾರಿಯನ್ನು ಅವರು ಅಂಗೀಕರಿಸುತ್ತಾರೆ. (ರೋಮಾಪುರ 13:1-7) ಆದರೆ ರಾಷ್ಟ್ರಗೀತೆಗಳಂಥ ದೇಶಭಕ್ತಿಯ ಹಾಡುಗಳ ಕುರಿತಾಗಿ ಶಾಸ್ತ್ರೀಯ ದೃಷ್ಟಿಕೋನವೇನು?
ರಾಷ್ಟ್ರಗೀತೆಗಳು ಎಂದರೇನು?
“ರಾಷ್ಟ್ರಗೀತೆಗಳು ದೇಶಭಕ್ತಿ ಭಾವನೆಯ ವ್ಯಕ್ತಪಡಿಸುವಿಕೆಗಳಾಗಿವೆ ಮತ್ತು ಇವುಗಳಲ್ಲಿ ಅನೇಕವೇಳೆ, ಜನತೆ ಇಲ್ಲವೆ ಅವರ ನಾಯಕರಿಗಾಗಿ ದೈವಿಕ ಮಾರ್ಗದರ್ಶನೆ ಮತ್ತು ಸಂರಕ್ಷಣೆಯನ್ನು ಕೋರುವ ವಿನಂತಿಗಳು ಸೇರಿರುತ್ತವೆ,” ಎಂದು ದಿ ಎನ್ಸೈಕ್ಲಪೀಡೀಯ ಅಮೆರಿಕಾನ ಹೇಳುತ್ತದೆ. ಒಂದು ರಾಷ್ಟ್ರಗೀತೆಯು ಕಾರ್ಯತಃ, ಒಂದು ರಾಷ್ಟ್ರಕ್ಕಾಗಿ ಹಾಡಲ್ಪಡುವ ಸ್ತೋತ್ರಗೀತೆ ಇಲ್ಲವೆ ಪ್ರಾರ್ಥನೆಯಾಗಿದೆ. ಅದರಲ್ಲಿ, ರಾಷ್ಟ್ರವು ಭೌತಿಕ ಸಮೃದ್ಧಿ ಮತ್ತು ದೀರ್ಘಕಾಲ ಬಾಳಲಿ ಎಂಬಂಥ ಬೇಡಿಕೆಗಳೂ ಇರುತ್ತವೆ. ಇಂಥ ಪ್ರಾರ್ಥನಾಭಾವಗಳಲ್ಲಿ ಸತ್ಯ ಕ್ರೈಸ್ತರು ಜೊತೆಗೂಡಬೇಕೊ?
ಪ್ರವಾದಿಯಾದ ಯೆರೆಮೀಯನು, ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುತ್ತಿದ್ದ ಜನರ ನಡುವೆ ವಾಸಿಸುತ್ತಿದ್ದನು. ಹಾಗಿದ್ದರೂ ಯೆಹೋವನು ಅವನಿಗೆ ಆಜ್ಞಾಪಿಸಿದ್ದು: “ನೀನಂತು ಈ ಜನರಿಗೋಸ್ಕರ ಬೇಡಿಕೊಳ್ಳಬೇಡ, ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಬೇಡ, ನನಗೆ ವಿಜ್ಞಾಪಿಸಲೂ ಬೇಡ, ನಾನು ಕೇಳಲೊಲ್ಲೆ.” (ಯೆರೆಮೀಯ 7:16; 11:14; 14:11) ಯೆರೆಮೀಯನಿಗೆ ಈ ಆಜ್ಞೆ ಏಕೆ ಕೊಡಲ್ಪಟ್ಟಿತು? ಏಕೆಂದರೆ ಅವರ ಸಮಾಜವು, ಕಳ್ಳತನ, ಕೊಲೆ, ಹಾದರ, ಸುಳ್ಳು ಶಪಥಗಳು, ಮತ್ತು ವಿಗ್ರಹಾರಾಧನೆಯಿಂದ ತುಂಬಿತ್ತು.—ಯೆರೆಮೀಯ 7:9.
ಯೇಸು ಕ್ರಿಸ್ತನು ಹೀಗೆ ಹೇಳುತ್ತಾ ಒಂದು ಪೂರ್ವನಿದರ್ಶನವನ್ನಿಟ್ಟನು: “ನಾನು ಇವರಿಗೋಸ್ಕರ ಕೇಳಿಕೊಳ್ಳುತ್ತೇನೆ; ಲೋಕಕ್ಕೋಸ್ಕರ ಕೇಳಿಕೊಳ್ಳದೆ ನೀನು ನನಗೆ ಕೊಟ್ಟವರಿಗೋಸ್ಕರವೇ ಕೇಳಿಕೊಳ್ಳುತ್ತೇನೆ.” (ಯೋಹಾನ 17:9) “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಮತ್ತು ‘ಗತಿಸಿ ಹೋಗುತ್ತದೆ’ ಎಂದು ಶಾಸ್ತ್ರವಚನಗಳು ಹೇಳುತ್ತವೆ. (1 ಯೋಹಾನ 2:17; 5:19) ಹೀಗಿರುವಾಗ, ಇಂಥ ಒಂದು ವ್ಯವಸ್ಥೆಯ ಸಮೃದ್ಧಿ ಮತ್ತು ದೀರ್ಘಾಯುಸ್ಸಿಗಾಗಿ ನಿಜ ಕ್ರೈಸ್ತರು ಶುದ್ಧಾಂತಃಕರಣದಿಂದ ಹೇಗೆ ಪ್ರಾರ್ಥಿಸಬಲ್ಲರು?
ಎಲ್ಲ ರಾಷ್ಟ್ರಗೀತೆಗಳಲ್ಲಿ ದೇವರಿಗೆ ಭಿನ್ನಹಗಳು ಸಲ್ಲಿಸಲ್ಪಡುವುದಿಲ್ಲವೆಂಬುದು ನಿಜ. “ರಾಷ್ಟ್ರಗೀತೆಗಳಲ್ಲಿರುವ ರಸಭಾವಗಳು ಭಿನ್ನವಾಗಿರುತ್ತವೆ; ಒಂದರಲ್ಲಿ ಸಾಮ್ರಾಟನಿಗಾಗಿ ಪ್ರಾರ್ಥನೆಗಳಿದ್ದರೆ, ಇನ್ನೊಂದರಲ್ಲಿ ರಾಷ್ಟ್ರೀಯವಾಗಿ ಪ್ರಾಮುಖ್ಯವಾಗಿರುವ ಕದನಗಳು ಇಲ್ಲವೆ ದಂಗೆಗಳ ಕುರಿತು ಅಪ್ರತ್ಯಕ್ಷ ಸೂಚನೆಗಳಿರುತ್ತವೆ . . . ಮತ್ತೊಂದರಲ್ಲಿ ದೇಶಭಕ್ತಿ ಭಾವನೆಯ ವ್ಯಕ್ತಪಡಿಸುವಿಕೆಗಳಿರುತ್ತವೆ” ಎಂದು ಎನ್ಸೈಕ್ಲಪೀಡೀಯ ಬ್ರಿಟಾನಿಕ ಹೇಳುತ್ತದೆ. ಆದರೆ ದೇವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವವರು ಯಾವುದೇ ರಾಷ್ಟ್ರದ ಯುದ್ಧಗಳು ಇಲ್ಲವೆ ಕ್ರಾಂತಿಗಳ ಕುರಿತಾಗಿ ವಾಸ್ತವದಲ್ಲಿ ಹಿಗ್ಗಬಹುದೊ? ಸತ್ಯಾರಾಧಕರ ಕುರಿತಾಗಿ ಯೆಶಾಯನು ಮುಂತಿಳಿಸಿದ್ದು: ಯೆಶಾಯ 2:4) “ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ. ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ” ಎಂದು ಅಪೊಸ್ತಲ ಪೌಲನು ಬರೆದನು.—2 ಕೊರಿಂಥ 10:3, 4.
“ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು.” (ರಾಷ್ಟ್ರಗೀತೆಗಳು ಹೆಚ್ಚಾಗಿ ರಾಷ್ಟ್ರೀಯ ಹೆಮ್ಮೆ ಇಲ್ಲವೆ ಶ್ರೇಷ್ಠತೆಯ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಆದರೆ ಈ ರೀತಿಯ ಹೊರನೋಟಕ್ಕಾಗಿ ಯಾವುದೇ ಶಾಸ್ತ್ರೀಯ ಆಧಾರವಿಲ್ಲ. ಅರಿಯೋಪಾಗದಲ್ಲಿ ಅಪೊಸ್ತಲ ಪೌಲನು ಕೊಟ್ಟ ಭಾಷಣದಲ್ಲಿ ಅವನು ಹೇಳಿದ್ದು: “[ಯೆಹೋವ ದೇವರು] ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ . . . ಭೂಮಂಡಲದಲ್ಲೆಲ್ಲಾ ವಾಸಮಾಡಿಸಿ”ದನು. (ಅ. ಕೃತ್ಯಗಳು 17:26) “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂದು ಅಪೊಸ್ತಲ ಪೇತ್ರನು ತಿಳಿಸಿದನು.—ಅ. ಕೃತ್ಯಗಳು 10:34, 35.
ಬೈಬಲಿನ ಬಗ್ಗೆ ಅವರಿಗಿರುವ ತಿಳುವಳಿಕೆಯ ಕಾರಣದಿಂದ, ಅನೇಕರು ಧ್ವಜವಂದನೆ ಮತ್ತು ರಾಷ್ಟ್ರಭಕ್ತಿ ಗೀತೆಗಳ ಹಾಡುವಿಕೆಯಲ್ಲಿ ಪಾಲ್ಗೊಳ್ಳುವುದರಿಂದ ದೂರವಿರುವ ವೈಯಕ್ತಿಕ ನಿರ್ಣಯವನ್ನು ಮಾಡುತ್ತಾರೆ. ಆದರೆ ಈ ವಿವಾದಾಂಶಗಳು ಮುಖಾಮುಖಿಯಾಗಿ ಮುಂದೆ ಬಂದು ನಿಲ್ಲುವ ಸನ್ನಿವೇಶಗಳಲ್ಲಿ ಅವರು ಹೇಗೆ ನಡೆದುಕೊಳ್ಳುತ್ತಾರೆ?
ಗೌರವಪೂರ್ವಕವಾಗಿ ದೂರವಿರಿ
ತನ್ನ ಸಾಮ್ರಾಜ್ಯದ ಐಕ್ಯವನ್ನು ಬಲಪಡಿಸುವ ಯತ್ನದಲ್ಲಿ, ಪ್ರಾಚೀನ ಬಾಬೆಲಿನ ರಾಜ ನೆಬೂಕದ್ನೆಚ್ಚರನು ದೂರಾ ಬಯಲಿನಲ್ಲಿ ಚಿನ್ನದ ಒಂದು ದೊಡ್ಡ ಮೂರ್ತಿಯನ್ನು ನಿಲ್ಲಿಸಿದನು. ಅನಂತರ ಅವನು ಅದರ ಪ್ರತಿಷ್ಠಾಪನೆಗಾಗಿ ಒಂದು ಸಮಾರಂಭವನ್ನು ಏರ್ಪಡಿಸಿದನು. ಅದಕ್ಕಾಗಿ ಅವನು ತನ್ನ ಉಪರಾಜರನ್ನು, ನಾಯಕರನ್ನು, ದೇಶಾಧಿಪತಿಗಳನ್ನು, ಮಂತ್ರಿಗಳನ್ನು ಮತ್ತು ಇತರ ಉಚ್ಚ ಅಧಿಕಾರಿಗಳನ್ನು ಆಮಂತ್ರಿಸಿದನು. ಸಂಗೀತವನ್ನು ಕೇಳಿಸಿಕೊಂಡ ಕೂಡಲೆ, ಅಲ್ಲಿ ನೆರೆದಿದ್ದವರೆಲ್ಲರೂ ಅಡ್ಡಬಿದ್ದು ಆ ವಿಗ್ರಹವನ್ನು ಆರಾಧಿಸಬೇಕಿತ್ತು. ಅಲ್ಲಿ ಉಪಸ್ಥಿತರಿರಲೇಬೇಕಾಗಿದ್ದವರಲ್ಲಿ, ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬ ಮೂವರು ಇಬ್ರಿಯ ಯುವಕರಿದ್ದರು. ಈ ಧಾರ್ಮಿಕ ಸಮಾರಂಭದಲ್ಲಿ ತಾವು ಪಾಲ್ಗೊಳ್ಳುತ್ತಿಲ್ಲವೆಂದು ಅವರು ಹೇಗೆ ತೋರಿಸಿದರು? ಸಂಗೀತವು ಆರಂಭವಾಗಿ, ನೆರೆದಿದ್ದವರಲ್ಲೆರೂ ಆ ವಿಗ್ರಹಕ್ಕೆ ಅಡ್ಡಬಿದ್ದಾಗ, ಈ ಮೂವರು ಇಬ್ರಿಯರು ನಿಂತುಕೊಂಡೇ ಇದ್ದರು.—ದಾನಿಯೇಲ 3:1-12.
ಧ್ವಜವಂದನೆಯನ್ನು ಇಂದು, ಕೈಯನ್ನು ಮುಂಚಾಚುವ ಮೂಲಕ, ಸಲಾಮು ಹೊಡೆಯುವ ಮೂಲಕ ಇಲ್ಲವೆ ಕೈಯನ್ನು ಎದೆ ಮೇಲಿಡುವ ಮೂಲಕ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ, ಇದಕ್ಕಾಗಿ ಒಂದು ವಿಶೇಷವಾದ ಶಾರೀರಿಕ ಭಂಗಿಯಿರುತ್ತದೆ. ಕೆಲವು ದೇಶಗಳಲ್ಲಿ, ಶಾಲಾ ಮಕ್ಕಳು ಮೊಣಕಾಲೂರಿ ಧ್ವಜಕ್ಕೆ ಮುತ್ತಿಡಬೇಕಾಗುತ್ತದೆ. ಇತರರು ಧ್ವಜವಂದನೆ ಮಾಡುತ್ತಿರುವಾಗ, ಸುಮ್ಮನೆ ನಿಂತುಕೊಂಡಿರುವ ಮೂಲಕ ನಿಜ ಕ್ರೈಸ್ತರು ತಾವು ಗೌರವಪೂರ್ವಕ ಪ್ರೇಕ್ಷಕರಾಗಿದ್ದೇವೆಂಬದನ್ನು ತೋರಿಸಿಕೊಡುತ್ತಾರೆ.
ಆದರೆ ಸುಮ್ಮನೆ ನಿಂತುಕೊಳ್ಳುವುದು ಸಹ, ಅದರಲ್ಲಿ ಪಾಲ್ಗೊಳ್ಳುತ್ತಿದ್ದೇವೆಂಬ ಸಾಕ್ಷ್ಯವನ್ನು ಕೊಡುವಂಥ ರೀತಿಯಲ್ಲಿ ಧ್ವಜ ಸಮಾರಂಭವು ನಡೆಸಲ್ಪಡುವಲ್ಲಿ ಆಗೇನು? ಉದಾಹರಣೆಗಾಗಿ, ಶಾಲೆಯಲ್ಲಿರುವ ಒಬ್ಬ ವಿದ್ಯಾರ್ಥಿಯು ಇಡೀ ಶಾಲೆಯನ್ನು ಪ್ರತಿನಿಧಿಸಲು ಆಯ್ಕೆಮಾಡಲ್ಪಟ್ಟು, ಅವನು ಹೊರಗೆ ಧ್ವಜಕಂಬದ ಬಳಿ ಧ್ವಜಕ್ಕೆ ಸಲಾಮು ಹೊಡೆಯುವಾಗ, ತರಗತಿಯೊಳಗೆ ಬೇರೆಲ್ಲ ವಿದ್ಯಾರ್ಥಿಗಳು ನೆಟ್ಟಗೆ ನಿಂತಿರಲು ಕೇಳಿಕೊಳ್ಳಲ್ಪಡಬಹುದು. ಈ ಸಂದರ್ಭದಲ್ಲಿ ಕೇವಲ ನಿಂತುಕೊಳ್ಳುವುದು ತಾನೇ, ಹೊರಗೆ ಧ್ವಜಕಂಬದ ಬಳಿಯಿರುವ ವಿದ್ಯಾರ್ಥಿಯು ಧ್ವಜವಂದನೆ ಮಾಡುವುದಕ್ಕಾಗಿ ತನ್ನ ವೈಯಕ್ತಿಕ ಪ್ರತಿನಿಧಿಯಾಗಿದ್ದಾನೆಂದು ಒಪ್ಪಿಕೊಳ್ಳುವುದನ್ನು ಸೂಚಿಸುತ್ತದೆ. ಯಾವುದೇ ರೀತಿಯಲ್ಲಿ ನಿಂತುಕೊಂಡರೂ, ನಾವು ಆ ಸಮಾರಂಭದಲ್ಲಿ ಒಳಗೂಡುತ್ತಿದ್ದೇವೆಂಬದನ್ನು ಅದು ಸೂಚಿಸುವುದು. ಹೀಗಿರುವಲ್ಲಿ, ಕೇವಲ ಗೌರವಪೂರ್ವಕ ಪ್ರೇಕ್ಷಕರಾಗಿ ಉಳಿಯಲು ಬಯಸುವವರು ಮೌನವಾಗಿ ಕುಳಿತುಕೊಂಡಿರುವರು. ಆದರೆ ಅಂಥ ಸಮಾರಂಭವು ಆರಂಭವಾಗುವಾಗ ತರಗತಿಯು ಈಗಾಗಲೇ ನಿಂತುಕೊಂಡಿರುವಲ್ಲಿ ಏನು? ಆಗ, ನಾವು ನಿಂತುಕೊಂಡೇ ಇರುವಲ್ಲಿ ನಾವು ಪಾಲ್ಗೊಳ್ಳುತ್ತಿದ್ದೇವೆಂದು ಅದು ಸೂಚಿಸುವುದಿಲ್ಲ.
ಧ್ವಜವಂದನೆ ಮಾಡಲು ಅಲ್ಲ, ಬದಲಾಗಿ ಬೇರೆಯವರು ವಂದಿಸಲು ಸಾಧ್ಯವಾಗುವಂತೆ ಒಂದು ಪೆರೇಡ್ನಲ್ಲೊ, ತರಗತಿಯಲ್ಲೊ ಇಲ್ಲವೆ ಬೇರೆಲ್ಲೊ ಧ್ವಜವನ್ನು ಕೇವಲ ಹಿಡಿದುಕೊಳ್ಳುವಂತೆ ಒಬ್ಬನನ್ನು ಕೇಳಲಾಗಿದೆ ಎಂದಿಟ್ಟುಕೊಳ್ಳಿ. ಶಾಸ್ತ್ರವಚನಗಳಲ್ಲಿ ಆಜ್ಞಾಪಿಸಲ್ಪಟ್ಟಂತೆ ‘ವಿಗ್ರಹಾರಾಧನೆಯಿಂದ ದೂರ ಹೋಗುವ’ ಬದಲು, ಅದು ವಾಸ್ತವದಲ್ಲಿ ಆ ಸಮಾರಂಭದ ಕೇಂದ್ರಬಿಂದುವಿನಲ್ಲೇ ಇರುವಂತಾಗುವುದು. ದೇಶಭಕ್ತಿಯ ಪೆರೇಡ್ಗಳಲ್ಲಿ ಮಾರ್ಚ್ ಮಾಡುವ ವಿಷಯದಲ್ಲೂ ಇದು ಸತ್ಯ. ಅದರಲ್ಲಿ ಮಾರ್ಚ್ ಮಾಡುವುದು ಆ ಪೆರೇಡಿನ ಮುಖಾಂತರ ಏನನ್ನು ಸನ್ಮಾನಿಸಲಾಗುತ್ತಿದೆಯೊ ಅದಕ್ಕೆ ಬೆಂಬಲವನ್ನು ಕೊಡುವಂಥಾಗುವುದರಿಂದ ಸತ್ಯ ಕ್ರೈಸ್ತರು ಶುದ್ಧಾಂತಃಕರಣದಿಂದ ಅದನ್ನು ನಿರಾಕರಿಸುತ್ತಾರೆ.
ರಾಷ್ಟ್ರಗೀತೆಗಳು ನುಡಿಸಲ್ಪಡುವಾಗ, ಆ ಹಾಡಿನ ರಸಭಾವಗಳನ್ನು ತಾನೂ ಒಪ್ಪಿಕೊಳ್ಳುತ್ತೇನೆಂದು ತೋರಿಸಲಿಕ್ಕಾಗಿ ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ಕೇವಲ ಎದ್ದು ನಿಲ್ಲಬೇಕಷ್ಟೇ. ಅಂಥ ಸಂದರ್ಭಗಳಲ್ಲಿ ಕ್ರೈಸ್ತರು ಕುಳಿತುಕೊಂಡೇ ಇರುತ್ತಾರೆ. ಆದರೆ ರಾಷ್ಟ್ರ ಗೀತೆಯು ನುಡಿಸಲ್ಪಡುವಾಗ ಅವರು ಈಗಾಗಲೇ ನಿಂತುಕೊಂಡಿರುವಲ್ಲಿ, ಅದಕ್ಕೋಸ್ಕರವೇ ಕುಳಿತುಕೊಳ್ಳಬೇಕೆಂದೇನಿಲ್ಲ. ಯಾಕೆಂದರೆ ಅವರು ವಿಶೇಷವಾಗಿ ರಾಷ್ಟ್ರಗೀತೆಗಾಗಿ ಎದ್ದು ನಿಲ್ಲಲಿಲ್ಲ. ಆದರೆ ಇನ್ನೊಂದು ಬದಿಯಲ್ಲಿ, ಒಂದು ಗುಂಪು ನಿಂತುಕೊಂಡು ಹಾಡುವಂತೆ ಅಪೇಕ್ಷಿಸಲ್ಪಟ್ಟರೆ, ಆಗ ಗೌರವವನ್ನು ತೋರಿಸಲಿಕ್ಕೋಸ್ಕರ ಕೇವಲ ನಿಂತುಕೊಂಡಿದ್ದು, ಹಾಡದೇ ಇರುವುದು ಅವರು ಆ ಹಾಡಿನ ರಸಭಾವಗಳಲ್ಲಿ ಪಾಲಿಗರಾಗುತ್ತಿದ್ದಾರೆಂಬುದನ್ನು ಅರ್ಥೈಸುವುದಿಲ್ಲ.
“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ”
ಪೂಜಿಸಲಿಕ್ಕಾಗಿ ಉಪಯೋಗಿಸಲ್ಪಡುವ ಮಾನವನಿರ್ಮಿತ ವಸ್ತುಗಳ ನಿಷ್ಫಲತೆಯನ್ನು ವರ್ಣಿಸಿದ ನಂತರ ಕೀರ್ತನೆಗಾರನು ಹೇಳಿದ್ದು: “ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.” (ಕೀರ್ತನೆ 115:4-8) ಹಾಗಿರುವಾಗ, ರಾಷ್ಟ್ರಧ್ವಜಗಳನ್ನು ಸೇರಿಸಿ, ಆರಾಧನೆಗಾಗಿರುವ ಯಾವುದೇ ವಸ್ತುಗಳನ್ನು ತಯಾರಿಸುವುದರಲ್ಲಿ ನೇರವಾಗಿ ಒಳಗೂಡಿರುವ ಯಾವುದೇ ಉದ್ಯೋಗವು ಯೆಹೋವನ ಆರಾಧಕರಿಗೆ ಅನಂಗೀಕಾರಾರ್ಹವಾಗಿರುವುದು ಎಂಬುದು ಸುವ್ಯಕ್ತ. (1 ಯೋಹಾನ 5:21) ತಾವು ಧ್ವಜವನ್ನಾಗಲಿ ಅದು ಯಾವುದರ ದ್ಯೋತಕವಾಗಿದೆಯೊ ಅದನ್ನಾಗಲಿ ಆರಾಧಿಸದೇ, ಕೇವಲ ಯೆಹೋವನನ್ನು ಆರಾಧಿಸುತ್ತೇವೆಂದು ಕ್ರೈಸ್ತರು ಗೌರವಪೂರ್ವಕವಾಗಿ ತೋರಿಸುವಾಗ ಉದ್ಯೋಗದ ಸ್ಥಳಗಳಲ್ಲಿ ಬೇರೆ ಸನ್ನಿವೇಶಗಳು ಏಳಬಹುದು.
ಉದಾಹರಣೆಗಾಗಿ ಒಬ್ಬ ಧಣಿಯು, ತನ್ನ ನೌಕರನಿಗೆ ಕಟ್ಟಡದ ಮೇಲೆ ಧ್ವಜವನ್ನು ಏರಿಸಲು ಇಲ್ಲವೆ ಇಳಿಸಲು ಹೇಳಬಹುದು. ಹಾಗೆ ಮಾಡಬೇಕೊ ಇಲ್ಲವೊ ಎಂಬುದು, ಪರಿಸ್ಥಿತಿಗಳ ಕುರಿತಾದ ಒಬ್ಬನ ವೈಯಕ್ತಿಕ ದೃಷ್ಟಿಕೋನದ ಮೇಲೆ ಹೊಂದಿಕೊಂಡಿರುತ್ತದೆ. ಧ್ವಜವನ್ನು ಏರಿಸುವುದು ಇಲ್ಲವೆ ಇಳಿಸುವುದು ಒಂದು ವಿಶೇಷ ಸಮಾರಂಭದ ಭಾಗವಾಗಿದ್ದು, ಜನರು ನೆಟ್ಟನೆ ನಿಂತುಕೊಂಡಿದ್ದರೆ ಅಥವಾ ಧ್ವಜವಂದನೆ ಮಾಡುತ್ತಿರುವುದಾದರೆ, ಆಗ ಈ ಕೆಲಸವನ್ನು ಮಾಡುವುದು ಆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಸಮಾನವಾಗಿದೆ.
ಇನ್ನೊಂದು ಬದಿಯಲ್ಲಿ, ಧ್ವಜವನ್ನು ಏರಿಸುವಾಗ ಇಲ್ಲವೆ ಇಳಿಸುವಾಗ ಯಾವುದೇ ಸಮಾರಂಭವಿಲ್ಲದಿರುವಲ್ಲಿ, ಆಗ ಈ ಕೆಲಸಗಳನ್ನು ಮಾಡುವುದು, ಕಟ್ಟಡವನ್ನು ಉಪಯೋಗಕ್ಕಾಗಿ ಸಿದ್ಧಗೊಳಿಸುವುದು, ಬಾಗಿಲುಗಳಿಗೆ ಅಗುಳಿ ಹಾಕುವುದು ಮತ್ತು ಅಗುಳಿ ತೆಗೆಯುವುದು, ಮತ್ತು ಕಿಟಕಿಗಳನ್ನು ತೆರೆಯುವುದು ಹಾಗೂ ಮುಚ್ಚುವುದಕ್ಕೆ ಸಮಾನವಾಗಿದೆ. ಅಂಥ ಸಂದರ್ಭಗಳಲ್ಲಿ, ಧ್ವಜವು ಕೇವಲ ರಾಷ್ಟ್ರದ ಒಂದು ದ್ಯೋತಕವಾಗಿದೆಯಷ್ಟೇ, ಮತ್ತು ನಿತ್ಯದ ಬೇರೆ ಕೆಲಸಗಳಂತೆ ಇದನ್ನು ಏರಿಸಬೇಕೊ ಇಲ್ಲವೆ ಇಳಿಸಬೇಕೊ ಎಂಬುದು, ಒಬ್ಬ ವ್ಯಕ್ತಿಯು ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯು ಹೇಳುವಂತೆ ಮಾಡುವ ಒಂದು ವೈಯಕ್ತಿಕ ನಿರ್ಣಯವಾಗಿದೆ. (ಗಲಾತ್ಯ 6:5) ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯು, ಇನ್ನೊಬ್ಬ ಉದ್ಯೋಗಿಯು ಧ್ವಜವನ್ನು ಏರಿಸಿ ಇಳಿಸುವಂತೆ ಮಾಡಲು ತನ್ನ ಮೇಲ್ವಿಚಾರಕನಿಗೆ ಕೇಳಿಕೊಳ್ಳಲು ಹೇಳಬಹುದು. ಆದರೆ ಇನ್ನೊಬ್ಬ ಕ್ರೈಸ್ತನಿಗೆ, ಒಂದು ಸಮಾರಂಭವಿಲ್ಲದಿರುವಾಗ ಧ್ವಜವನ್ನು ಏರಿಸುವಂತೆ ಮತ್ತು ಇಳಿಸುವಂತೆ ತನ್ನ ಮನಸ್ಸಾಕ್ಷಿಯು ಅನುಮತಿಸುವುದೆಂದು ಅನಿಸಬಹುದು. ನಾವು ಮಾಡುವ ನಿರ್ಣಯವು ಏನೇ ಆಗಿರಲಿ ಅದು ಸತ್ಯಾರಾಧಕರು ದೇವರ ಮುಂದೆ “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿ”ರುವಂತೆ ಮಾಡಬೇಕು.—1 ಪೇತ್ರ 3:16.
ಎಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗುತ್ತದೊ ಆ ನಗರಪಾಲಿಕಾ ಕಛೇರಿಗಳು ಮತ್ತು ಶಾಲೆಗಳಂಥ ಸಾರ್ವಜನಿಕ ಕಟ್ಟಡಗಳಲ್ಲಿ ಕೆಲಸಮಾಡುವುದು ಅಥವಾ ಉದ್ಯೋಗಿಗಳಾಗಿರುವುದಕ್ಕೆ ಯಾವುದೇ ಶಾಸ್ತ್ರೀಯ ಆಕ್ಷೇಪಣೆಯಿಲ್ಲ. ಸ್ಟಾಂಪ್ಗಳು, ವಾಹನದ ಲೈಸೆನ್ಸ್ ಪ್ಲೇಟುಗಳು ಇಲ್ಲವೆ ಸರ್ಕಾರಿ ಉತ್ಪಾದನಾ ವಸ್ತುಗಳ ಮೇಲೂ ಧ್ವಜದ ಚಿತ್ರವು ಕಂಡುಬರಬಹುದು. ಆ ವಸ್ತುಗಳನ್ನು ಉಪಯೋಗಿಸಿದ ಮಾತ್ರಕ್ಕೆ, ಆ ವ್ಯಕ್ತಿಗಳು ಭಕ್ತಿಯ ಕೃತ್ಯಗಳಲ್ಲಿ ಭಾಗಿಗಳಾಗುತ್ತಿದ್ದಾರೆಂಬುದನ್ನು ಅರ್ಥೈಸುವುದಿಲ್ಲ. ಇಲ್ಲಿ ಪ್ರಾಮುಖ್ಯವಾಗಿರುವ ವಿಷಯವು, ಅಲ್ಲಿರುವ ಧ್ವಜ ಇಲ್ಲವೆ ಅದರ ಪ್ರತಿರೂಪವಲ್ಲ ಬದಲಾಗಿ ಅದರ ಕಡೆಗೆ ಒಬ್ಬನು ಹೇಗೆ ವರ್ತಿಸುತ್ತಾನೆ ಎಂಬದೇ.
ಧ್ವಜಗಳನ್ನು ಅನೇಕವೇಳೆ ಕಿಟಕಿಗಳು, ಬಾಗಿಲುಗಳು, ಕಾರ್ಗಳು, ಮೇಜುಗಳು ಇಲ್ಲವೆ ಬೇರೆ ವಸ್ತುಗಳ ಮೇಲೆ ಪ್ರದರ್ಶಿಸಲಾಗುತ್ತದೆ. ಬಟ್ಟೆಯ ಮೇಲೆ ಧ್ವಜದ ಅಲಂಕಾರವು ಹೊಲಿಯಲ್ಪಟ್ಟಿರುವ ಉಡುಪುಗಳು ಕೂಡ ಸಿಗುತ್ತವೆ. ಕೆಲವು ದೇಶಗಳಲ್ಲಿ ಇವುಗಳನ್ನು ಧರಿಸುವುದು ಕಾನೂನುವಿರುದ್ಧವಾಗಿದೆ. ಒಂದುವೇಳೆ ಅಂಥ ಬಟ್ಟೆಯನ್ನು ಧರಿಸುವುದು ಕಾನೂನನ್ನು ಉಲ್ಲಂಘಿಸದಿದ್ದರೂ, ಹಾಗೆ ಮಾಡುವುದು ಲೋಕದ ಸಂಬಂಧದಲ್ಲಿ ಒಬ್ಬ ವ್ಯಕ್ತಿಯ ನಿಲುವಿನ ಕುರಿತು ಏನನ್ನು ಸೂಚಿಸಬಹುದು? ತನ್ನ ಹಿಂಬಾಲಕರ ಕುರಿತಾಗಿ ಯೇಸು ಕ್ರಿಸ್ತನು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:16) ಆ ಕೃತ್ಯವು ಜೊತೆ ಕ್ರೈಸ್ತರ ಮೇಲೆ ಬೀರಬಲ್ಲ ಪರಿಣಾಮವನ್ನೂ ಅಲಕ್ಷಿಸಸಾಧ್ಯವಿಲ್ಲ. ಅದು ಕೆಲವರ ಮನಸ್ಸಾಕ್ಷಿಯನ್ನು ಗಾಯಗೊಳಿಸಬಹುದೊ? ನಂಬಿಕೆಯಲ್ಲಿ ದೃಢರಾಗಿ ಉಳಿಯುವ ಅವರ ದೃಢಸಂಕಲ್ಪವು ದುರ್ಬಲಗೊಳಿಸಲ್ಪಡಬಹುದೊ? ಪೌಲನು ಕ್ರೈಸ್ತರಿಗೆ ಸಲಹೆನೀಡಿದ್ದು: “ಉತ್ತಮ ಕಾರ್ಯಗಳು ಯಾವವೆಂದು ನೀವು ವಿವೇಚಿಸುವವರಾಗ”ಬೇಕು.—ಫಿಲಿಪ್ಪಿ 1:10.
“ಎಲ್ಲರ ವಿಷಯದಲ್ಲಿ ಸಾಧು”
ಈ ‘ಕಠಿನಕಾಲಗಳಲ್ಲಿ’ ಲೋಕ ಪರಿಸ್ಥಿತಿಗಳು ಕೆಡುತ್ತಾ ಹೋಗುವಾಗ, ದೇಶಭಕ್ತಿಯ ಭಾವನೆಗಳು ತೀವ್ರವಾಗುತ್ತಾ ಹೋಗುವವು. (2 ತಿಮೊಥೆಯ 3:1) ದೇವರನ್ನು ಪ್ರೀತಿಸುವವರು, ರಕ್ಷಣೆಯು ಯೆಹೋವನಿಂದಲೇ ಉಂಟಾಗುತ್ತದೆ ಎಂಬುದನ್ನು ಎಂದಿಗೂ ಮರೆಯದಿರಲಿ. ಆತನು ನಮ್ಮ ಅನನ್ಯ ಭಕ್ತಿಗೆ ಅರ್ಹನು. ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿರದ ಒಂದು ಕೆಲಸವನ್ನು ಮಾಡಲು ಕೇಳಲ್ಪಟ್ಟಾಗ ಯೇಸುವಿನ ಅಪೊಸ್ತಲರು ಹೇಳಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.”—ಅ. ಕೃತ್ಯಗಳು 5:29.
“ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ” ಆಗಿರಬೇಕೆಂದು ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 2:24) ಹೀಗಿರುವುದರಿಂದ, ಕ್ರೈಸ್ತರು ಧ್ವಜವಂದನೆ ಮತ್ತು ರಾಷ್ಟ್ರಗೀತೆಯನ್ನು ಹಾಡುವ ವಿಷಯದಲ್ಲಿ ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಮೇಲೆ ಅವಲಂಬಿಸಿ ವೈಯಕ್ತಿಕ ನಿರ್ಣಯಗಳನ್ನು ಮಾಡುವಾಗ ಶಾಂತಚಿತ್ತರೂ, ಗೌರವಪೂರ್ವಕರೂ, ಸಾಧು ಸ್ವಭಾವದವರೂ ಆಗಿರಲು ಪ್ರಯತ್ನಿಸುತ್ತಾರೆ.
[ಪುಟ 23ರಲ್ಲಿರುವ ಚಿತ್ರ]
ದೃಢಸಂಕಲ್ಪದಿಂದ ಆದರೂ ಗೌರವಪೂರ್ವಕರಾಗಿ, ಈ ಮೂವರು ಇಬ್ರಿಯರು ದೇವರನ್ನು ಮೆಚ್ಚಿಸಲು ಆಯ್ಕೆಮಾಡಿದರು
[ಪುಟ 24ರಲ್ಲಿರುವ ಚಿತ್ರ]
ಒಂದು ದೇಶಭಕ್ತಿ ಸಮಾರಂಭದಲ್ಲಿ ಒಬ್ಬ ಕ್ರೈಸ್ತನು ಹೇಗೆ ವರ್ತಿಸಬೇಕು?