ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
• ಲೂಸಿಫರ್ ಎಂಬುದು, ಸೈತಾನನಿಗಾಗಿ ಬೈಬಲ್ ಉಪಯೋಗಿಸುವ ಒಂದು ಹೆಸರಾಗಿದೆಯೊ?
ಲೂಸಿಫರ್ ಎಂಬ ಹೆಸರು ಶಾಸ್ತ್ರವಚನಗಳಲ್ಲಿ ಕೇವಲ ಒಮ್ಮೆ ಮತ್ತು ಅದು ಕೂಡ ಬೈಬಲಿನ ಕೆಲವೊಂದು ಭಾಷಾಂತರಗಳಲ್ಲಿ ಮಾತ್ರ ಕಂಡುಬರುತ್ತದೆ. ಉದಾಹರಣೆಗಾಗಿ ಕಿಂಗ್ ಜೇಮ್ಸ್ ವರ್ಷನ್ ಯೆಶಾಯ 14:12ನ್ನು ಹೀಗೆ ಭಾಷಾಂತರಿಸುತ್ತದೆ: “ಬೆಳಗ್ಗಿನ ಪುತ್ರನೇ ಓ ಲೂಸಿಫರನೇ, ನೀನು ಸ್ವರ್ಗದಿಂದ ಹೇಗೆ ದೊಬ್ಬಲ್ಪಟ್ಟಿದ್ದೀ!”
ಇಲ್ಲಿ “ಲೂಸಿಫರ್” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದದ ಅರ್ಥ, “ಮಿನುಗುವವನು” ಎಂದಾಗಿದೆ. ಸೆಪ್ಟೂಅಜಂಟ್ “ಉದಯವನ್ನು ತರುವವನು” ಎಂಬರ್ಥವುಳ್ಳ ಗ್ರೀಕ್ ಪದವನ್ನು ಉಪಯೋಗಿಸುತ್ತದೆ. ಹೀಗಿರುವುದರಿಂದ ಕೆಲವೊಂದು ಭಾಷಾಂತರಗಳು ಮೂಲ ಹೀಬ್ರು ಪದಗಳನ್ನು “ಉದಯಸೂಚಕ ನಕ್ಷತ್ರ” ಇಲ್ಲವೆ “ಬೆಳ್ಳಿ” ಎಂದು ಭಾಷಾಂತರಿಸುತ್ತವೆ. ಆದರೆ ಜೆರೋಮ್ನ ವಲ್ಗೇಟ್ ಎಂಬ ಲ್ಯಾಟಿನ್ ಭಾಷಾಂತರವು “ಲೂಸಿಫರ್” (ಬೆಳಕು ವಾಹಕ) ಎಂಬ ಹೆಸರನ್ನು ಉಪಯೋಗಿಸುತ್ತದೆ, ಮತ್ತು ಈ ಕಾರಣದಿಂದ ಬೈಬಲಿನ ಅನೇಕ ಭಾಷಾಂತರಗಳಲ್ಲಿ ಆ ಪದವು ತೋರಿಬರುತ್ತದೆ.
ಈ ಲೂಸಿಫರನು ಯಾರು? “ಮಿನುಗುವವನು” ಇಲ್ಲವೆ “ಲೂಸಿಫರ್” ಎಂಬ ಪದವು, ‘ಬಾಬೆಲಿನ ರಾಜನಿಗೆ ವಿರುದ್ಧವಾದ ಪದ್ಯ’ವಾಗಿ ಹೇಳಲು ಯೆಶಾಯನು ಇಸ್ರಾಯೇಲ್ಯರಿಗೆ ಪ್ರವಾದನಾತ್ಮಕವಾಗಿ ಆಜ್ಞಾಪಿಸಿದಂಥ ಪದ್ಯದಲ್ಲಿ ಕಂಡುಬರುತ್ತದೆ. ಹೀಗೆ, ಅದು ಬಾಬೆಲಿನ ರಾಜವಂಶಕ್ಕೆ ಪ್ರಮುಖವಾಗಿ ನಿರ್ದೇಶಿಸಲ್ಪಟ್ಟ ಒಂದು ಪದ್ಯದ ಭಾಗವಾಗಿದೆ. “ಮಿನುಗುವವನು” ಎಂಬ ಆ ವರ್ಣನೆಯು ಒಬ್ಬ ಆತ್ಮ ಜೀವಿಗಲ್ಲ ಬದಲಾಗಿ ಒಬ್ಬ ಮನುಷ್ಯನಿಗೆ ಕೊಡಲ್ಪಟ್ಟಿತೆಂಬುದನ್ನು ಇನ್ನೂ ಮುಂದೆ ಈ ಹೇಳಿಕೆಯಿಂದ ಕಂಡುಕೊಳ್ಳಬಹುದು: “ನೀನು ಶೀಯೋಲ್ಗೆ ಇಳಿಸಲ್ಪಡುವಿ.” ಶೀಯೋಲ್ ಎಂಬುದು ಮಾನವಕುಲದ ಸಾಮಾನ್ಯ ಸಮಾಧಿಯಾಗಿದೆ. ಅದು ಪಿಶಾಚನಾದ ಸೈತಾನನ ಸ್ಥಳವಾಗಿರುವುದಿಲ್ಲ. ಅಷ್ಟುಮಾತ್ರವಲ್ಲದೆ ಈ ಸ್ಥಿತಿಗೆ ತರಲ್ಪಟ್ಟಿರುವ ಲೂಸಿಫರನನ್ನು ನೋಡುವವರು ಹೀಗೆ ಕೇಳುತ್ತಾರೆ: “ಭೂಮಿಯನ್ನು ಅಲುಗಾಡಿಸುತ್ತಿದ್ದ ಮನುಷ್ಯನು ಇವನೊ?” ಹೀಗಿರುವುದರಿಂದ, “ಲೂಸಿಫರ್” ಎಂಬ ಹೆಸರು ಒಂದು ಆತ್ಮ ಜೀವಿಗಲ್ಲ ಬದಲಾಗಿ ಒಬ್ಬ ಮನುಷ್ಯನಿಗೆ ಸೂಚಿಸುತ್ತದೆಂಬುದು ಸ್ಪಷ್ಟ.—ಯೆಶಾಯ 14:4, 15, 16, NW.
ಬಾಬೆಲಿನ ರಾಜವಂಶಕ್ಕೆ ಇಂಥ ಎದ್ದುಕಾಣುವ ವರ್ಣನಾಪದವು ಉಪಯೋಗಿಸಲ್ಪಟ್ಟಿರುವುದೇಕೆ? ಬಾಬೆಲಿನ ರಾಜನನ್ನು ಮಿನುಗುವವನು ಎಂದು ಅವನ ಪತನದ ನಂತರವೇ ಕರೆಯಲ್ಪಡಲಿತ್ತು ಮತ್ತು ಅದೂ ಹೀಯಾಳಿಸುವಂಥ ವಿಧದಲ್ಲಿ ಎಂಬದನ್ನು ನಾವು ಗ್ರಹಿಸಬೇಕು. (ಯೆಶಾಯ 14:3) ಸ್ವಾರ್ಥ ಅಹಂಕಾರವು, ಬಾಬೆಲಿನ ಅರಸರು ತಮ್ಮ ಸುತ್ತಲಿದ್ದವರಿಗಿಂತಲೂ ತಮ್ಮನ್ನೇ ಏರಿಸಿಕೊಳ್ಳುವಂತೆ ಪ್ರಚೋದಿಸಿತು. ಆ ರಾಜವಂಶದ ಅಹಂಭಾವವು ಎಷ್ಟು ಮಹತ್ತಾಗಿತ್ತೆಂದರೆ, ಅದು ಹೀಗೆ ಜಂಬಕೊಚ್ಚಿಕೊಳ್ಳುತ್ತಿರುವುದನ್ನು ಚಿತ್ರಿಸಲಾಗಿದೆ: “ನಾನು ಆಕಾಶಕ್ಕೆ ಹತ್ತಿ ಉತ್ತರದಿಕ್ಕಿನ ಕಟ್ಟಕಡೆಯಿರುವ ಸುರಗಣ ಪರ್ವತದಲ್ಲಿ ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಮೇಲೆ ಏರಿಸಿ ಆಸೀನನಾಗುವೆನು; . . . ಉನ್ನತೋನ್ನತನಿಗೆ ಸರಿಸಮಾನನಾಗುವೆನು!”—ಯೆಶಾಯ 14:13, 14.
ಈ ‘ದೇವರ ನಕ್ಷತ್ರಗಳು’ ದಾವೀದನ ರಾಜ ವಂಶಾವಳಿಯಲ್ಲಿನ ರಾಜರನ್ನು ಸೂಚಿಸುತ್ತವೆ. (ಅರಣ್ಯಕಾಂಡ 24:17) ದಾವೀದನಿಂದಾರಂಭಿಸುತ್ತಾ ಈ ‘ನಕ್ಷತ್ರಗಳು’ ಚೀಯೋನ್ ಪರ್ವತದಿಂದ ಆಳಿದವು. ಸೊಲೊಮೋನನು ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿದ ನಂತರ, ಚೀಯೋನ್ ಎಂಬ ಹೆಸರು ಇಡೀ ನಗರಕ್ಕೆ ಬಂತು. ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ, ಎಲ್ಲ ಇಸ್ರಾಯೇಲ್ಯ ಪುರುಷರು ವರ್ಷಕ್ಕೆ ಮೂರಾವರ್ತಿ ಚೀಯೋನಿಗೆ ಪ್ರಯಾಣವನ್ನು ಮಾಡಲು ಆಜ್ಞಾಪಿಸಲ್ಪಟ್ಟಿದ್ದರು. ಹೀಗೆ ಅದು “ಸುರಗಣ ಪರ್ವತ” ಆಯಿತು. ಯೂದಾಯದ ರಾಜರನ್ನು ಜಯಿಸಿ, ಅವರನ್ನು ಆ ಪರ್ವತದಿಂದ ತೆಗೆದುಹಾಕಲು ದೃಢನಿರ್ಧಾರಮಾಡುವ ಮೂಲಕ, ನೆಬೂಕದ್ನೆಚ್ಚರನು ತನ್ನನ್ನೇ ಆ ‘ನಕ್ಷತ್ರಗಳಿಗಿಂತಲೂ’ ಮೇಲಕ್ಕೇರಿಸಿಕೊಳ್ಳುವ ತನ್ನ ಉದ್ದೇಶವನ್ನು ಘೋಷಿಸುತ್ತಾನೆ. ಆ ರಾಜರ ಮೇಲೆ ಗಳಿಸಿದಂಥ ವಿಜಯಕ್ಕಾಗಿ ಯೆಹೋವನಿಗೆ ಕೀರ್ತಿಯನ್ನು ಸಲ್ಲಿಸುವ ಬದಲು, ಅವನು ಸೊಕ್ಕಿನಿಂದ ತನ್ನನ್ನೇ ಯೆಹೋವನ ಸ್ಥಾನದಲ್ಲಿರಿಸುತ್ತಾನೆ. ಆದುದರಿಂದ ಬಾಬೆಲಿನ ರಾಜವಂಶದ ಪತನದ ನಂತರವೇ, ಅದನ್ನು ಅಣಕದಿಂದ “ಮಿನುಗುವವನು” ಎಂದು ಕರೆಯಲಾಗುತ್ತದೆ.
ಬಾಬೆಲಿನ ಅರಸರ ಅಹಂಕಾರವು, ಖಂಡಿತವಾಗಿಯೂ “ಈ ಪ್ರಪಂಚದ ದೇವರು” ಆಗಿರುವ ಪಿಶಾಚನಾದ ಸೈತಾನನ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. (2 ಕೊರಿಂಥ 4:4) ಅವನು ಕೂಡ ಅಧಿಕಾರಕ್ಕಾಗಿ ಅತ್ಯಾಸೆಪಡುತ್ತಾನೆ ಮತ್ತು ತನ್ನನ್ನೇ ಯೆಹೋವ ದೇವರಿಗಿಂತಲೂ ಮೇಲಕ್ಕೇರಿಸಿಕೊಳ್ಳಲು ಹಾತೊರೆಯುತ್ತಾನೆ. ಆದರೆ ಲೂಸಿಫರ್ ಎಂಬುದು, ಶಾಸ್ತ್ರೀಯವಾಗಿ ಸೈತಾನನಿಗೆ ಕೊಡಲ್ಪಟ್ಟಿರುವ ಹೆಸರಲ್ಲ.
• ಒಂದನೆಯ ಪೂರ್ವಕಾಲವೃತ್ತಾಂತ 2:13-15 ದಾವೀದನನ್ನು ಇಷಯನ ಏಳನೆಯ ಮಗನಾಗಿದ್ದನೆಂದು ಸೂಚಿಸುವಾಗ, 1 ಸಮುವೇಲ 16:10, 11 ಅವನು ಎಂಟನೆಯ ಮಗನಾಗಿದ್ದನೆಂದು ಸೂಚಿಸುವುದೇಕೆ?
ಪುರಾತನ ಇಸ್ರಾಯೇಲಿನ ರಾಜನಾದ ಸೌಲನು ಸತ್ಯಾರಾಧನೆಯಿಂದ ತಿರುಗಿಬಿದ್ದಾಗ, ಯೆಹೋವ ದೇವರು ಪ್ರವಾದಿಯಾದ ಸಮುವೇಲನನ್ನು, ಇಷಯನ ಪುತ್ರರಲ್ಲಿ ಒಬ್ಬನನ್ನು ರಾಜನೋಪಾದಿ ಅಭಿಷೇಕಿಸಲು ಕಳುಹಿಸಿದನು. ಸಾ.ಶ.ಪೂ. 11ನೆಯ ಶತಮಾನದಲ್ಲಿ ಸ್ವತಃ ಸಮುವೇಲನು ಬರೆದ ಈ ಐತಿಹಾಸಿಕ ಘಟನೆಯ ದೈವಿಕ ದಾಖಲೆಯು, ದಾವೀದನು ಇಷಯನ ಎಂಟನೆಯ ಮಗನಾಗಿದ್ದನೆಂದು ಸೂಚಿಸುತ್ತದೆ. (1 ಸಮುವೇಲ 16:10-13) ಆದರೆ, ಸುಮಾರು 600 ವರ್ಷಗಳ ನಂತರ, ಯಾಜಕನಾದ ಎಜ್ರನು ಬರೆದ ವೃತ್ತಾಂತವು ಹೇಳುವುದು: “ಇಷಯನ ಚೊಚ್ಚಲ ಮಗನು ಎಲೀಯಾಬ್; ಮರುಚಲನು ಅಬೀನಾದಾಬ್; ಮೂರನೆಯವನು ಶಿಮ್ಮ; ನಾಲ್ಕನೆಯವನು ನೆತನೇಲ್; ಐದನೆಯವನು ರದ್ದೈ; ಆರನೆಯವನು ಓಚೆಮ್; ಏಳನೆಯವನು ದಾವೀದ್.” (1 ಪೂರ್ವಕಾಲವೃತ್ತಾಂತ 2:13-15) ದಾವೀದನ ಸಹೋದರರಲ್ಲಿ ಒಬ್ಬನಿಗೆ ಏನಾಯಿತು, ಮತ್ತು ಏಜ್ರನು ಅವನ ಹೆಸರನ್ನು ಏಕೆ ಸೇರಿಸಲಿಲ್ಲ?
ಇಷಯನಿಗೆ ‘ಎಂಟು ಮಂದಿ ಪುತ್ರರು’ ಇದ್ದರೆಂದು ಶಾಸ್ತ್ರವಚನಗಳು ತಿಳಿಸುತ್ತವೆ. (1 ಸಮುವೇಲ 17:12, NW) ಪ್ರಾಯಶಃ ಅವನ ಪುತ್ರರಲ್ಲಿ ಒಬ್ಬನು, ವಿವಾಹವಾಗಿ ಮಕ್ಕಳನ್ನು ಪಡೆಯುವಷ್ಟು ಸಮಯ ಬದುಕಿರಲಿಲ್ಲವೆಂದು ತೋರುತ್ತದೆ. ಯಾವುದೇ ಸಂತಾನವಿಲ್ಲದಿದ್ದದರಿಂದ, ಗೋತ್ರದ ಆಸ್ತಿಯಲ್ಲಿ ಅವನಿಗೆ ಯಾವುದೇ ಹಕ್ಕಿರಲಿಲ್ಲ ಇಲ್ಲವೆ ಇಷಯನ ಸಂತತಿಯ ವಂಶಾವಳಿಯ ದಾಖಲೆಗಳಲ್ಲಿ ಯಾವುದೇ ಪ್ರಸ್ತಾಪವು ಇರಲಿಲ್ಲ.
ಈಗ ನಾವು ಎಜ್ರನ ದಿನಗಳ ಬಗ್ಗೆ ಯೋಚಿಸೋಣ. ಅವನು ಪೂರ್ವಕಾಲವೃತ್ತಾಂತಗಳನ್ನು ಸಂಕಲಿಸಿದಂಥ ಪರಿಸ್ಥಿತಿಗಳನ್ನು ಪರಿಗಣಿಸಿರಿ. ಬಾಬೆಲಿನಲ್ಲಿನ ಸೆರೆವಾಸವು ಸುಮಾರು 77 ವರ್ಷಗಳ ಹಿಂದೆ ಅಂತ್ಯಗೊಂಡಿತ್ತು, ಮತ್ತು ಯೆಹೂದ್ಯರು ತಮ್ಮ ದೇಶದಲ್ಲಿ ಪುನಃ ನೆಲೆಸಿದ್ದರು. ನ್ಯಾಯಸ್ಥಾಪಕರನ್ನು ಮತ್ತು ದೇವರ ನಿಯಮಶಾಸ್ತ್ರದ ಬೋಧಕರನ್ನು ನೇಮಿಸಲು ಹಾಗೂ ಯೆಹೋವನ ಆಲಯವನ್ನು ಅಂದಗೊಳಿಸಲು ಪಾರಸಿಯ ರಾಜನು ಎಜ್ರನಿಗೆ ಅಧಿಕಾರವನ್ನು ಕೊಟ್ಟಿದ್ದನು. ಗೋತ್ರದ ಆಸ್ತಿಯನ್ನು ದೃಢೀಕರಿಸಲು ಮತ್ತು ಕೇವಲ ಅಧಿಕೃತ ಜನರು ಯಾಜಕರಾಗಿ ಕೆಲಸಮಾಡುವುದನ್ನು ಖಚಿತಪಡಿಸಲಿಕ್ಕಾಗಿ ನಿಷ್ಕೃಷ್ಟವಾದ ವಂಶಾವಳಿಯ ದಾಖಲೆಗಳು ಅಗತ್ಯವಾಗಿದ್ದವು. ಆದುದರಿಂದ ಎಜ್ರನು ಆ ಜನಾಂಗದ ಇತಿಹಾಸದ ಬಗ್ಗೆ ಒಂದು ಪೂರ್ಣ ವೃತ್ತಾಂತವನ್ನು ತಯಾರಿಸಿದನು. ಅದರಲ್ಲಿ ಯೆಹೂದ ಮತ್ತು ದಾವೀದನ ವಂಶಾವಳಿಯ ಬಗ್ಗೆ ಒಂದು ಸ್ಪಷ್ಟ ಹಾಗೂ ಭರವಸಾರ್ಹ ದಾಖಲೆಯು ಸೇರಿತ್ತು. ಸಂತಾನವಿಲ್ಲದೆ ಸತ್ತುಹೋದ ಇಷಯನ ಮಗನ ಹೆಸರು ಇಲ್ಲಿ ಅಸಂಬದ್ಧವಾಗಿತ್ತು. ಆದುದರಿಂದ ಎಜ್ರನು ಅವನ ಹೆಸರನ್ನು ಸೇರಿಸಲಿಲ್ಲ.