ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯಕೊಡಿರಿ’

‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯಕೊಡಿರಿ’

‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯಕೊಡಿರಿ’

“ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋದೇವೆಂದು ಭಯಪಟ್ಟು ಅವುಗಳಿಗೆ [“ಸಾಮಾನ್ಯಕ್ಕಿಂತಲೂ,” NW] ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು.”​—ಇಬ್ರಿಯ 2:1.

1. ಅಪಕರ್ಷಣೆಯು ವಿಪತ್ತಿಗೆ ಹೇಗೆ ನಡೆಸಬಲ್ಲದೆಂಬುದನ್ನು ದೃಷ್ಟಾಂತಿಸಿರಿ.

ವಾಹನ ಅಪಘಾತಗಳು ಪ್ರತಿ ವರ್ಷ ಕೇವಲ ಅಮೆರಿಕವೊಂದರಲ್ಲೇ ಸುಮಾರು 37,000 ಜನರ ಜೀವಗಳನ್ನು ಬಲಿತೆಗೆದುಕೊಳ್ಳುತ್ತವೆ. ಚಾಲಕರು ರಸ್ತೆಯ ಮೇಲಿನ ತಮ್ಮ ಗಮನವನ್ನು ಹೆಚ್ಚಿಸುತ್ತಿದ್ದಲ್ಲಿ ಈ ಸಾವುಗಳನ್ನು ತಪ್ಪಿಸಸಾಧ್ಯವಿತ್ತೆಂದು ಪರಿಣತರು ಹೇಳುತ್ತಾರೆ. ಕೆಲವು ವಾಹನ ಚಾಲಕರು ಸೂಚನಾಫಲಕಗಳು ಮತ್ತು ಜಾಹೀರಾತು ಬೋರ್ಡ್‌ಗಳಿಂದ ಅಥವಾ ತಮ್ಮ ಸೆಲ್‌ ಫೋನಿನ ಉಪಯೋಗದಿಂದಾಗಿ ಅಪಕರ್ಷಿಸಲ್ಪಡುತ್ತಾರೆ. ವಾಹನ ಚಲಾಯಿಸುತ್ತಿರುವಾಗಲೇ ತಿನ್ನುತ್ತಾ ಇರುವವರೂ ಇದ್ದಾರೆ. ಈ ಎಲ್ಲ ಸನ್ನಿವೇಶಗಳಲ್ಲಿ, ಅಪಕರ್ಷಣೆ ವಿಪತ್ತಿಗೆ ನಡೆಸಬಲ್ಲದು.

2, 3. ಪೌಲನು ಇಬ್ರಿಯ ಕ್ರೈಸ್ತರಿಗೆ ಯಾವ ಬುದ್ಧಿವಾದವನ್ನು ಕೊಟ್ಟನು, ಮತ್ತು ಅವನ ಸಲಹೆಯು ಏಕೆ ಯಥೋಚಿತವಾಗಿತ್ತು?

2 ಮೋಟಾರು ವಾಹನಗಳ ಆವಿಷ್ಕಾರಕ್ಕಿಂತಲೂ ಸುಮಾರು 2,000 ವರ್ಷಗಳ ಹಿಂದೆ, ಕೆಲವು ಇಬ್ರಿಯ ಕ್ರೈಸ್ತರಿಗೆ ವಿಪತ್ಕಾರಕವಾಗಿ ಪರಿಣಮಿಸುತ್ತಿದ್ದ ಒಂದು ವಿಧದ ಅಪಕರ್ಷಣೆಯನ್ನು ಅಪೊಸ್ತಲ ಪೌಲನು ಗುರುತಿಸಿದನು. ಪುನರುತ್ಥಿತ ಯೇಸು ಕ್ರಿಸ್ತನು, ದೇವರ ಬಲಗಡೆಯಲ್ಲಿ ಕೂತುಕೊಂಡಿರಲಾಗಿ, ಅವನಿಗೆ ಎಲ್ಲ ದೇವದೂತರಿಗಿಂತಲೂ ಶ್ರೇಷ್ಠವಾದ ಸ್ಥಾನವನ್ನು ಕೊಡಲಾಗಿತ್ತೆಂಬುದನ್ನು ಪೌಲನು ಎತ್ತಿಹೇಳಿದನು. ಅಪೊಸ್ತಲನು ಅನಂತರ ಕೂಡಿಸಿ ಹೇಳಿದ್ದು: “ಆದದರಿಂದ ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋದೇವೆಂದು ಭಯಪಟ್ಟು ಅವುಗಳಿಗೆ [“ಸಾಮಾನ್ಯಕ್ಕಿಂತಲೂ,” NW] ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು.”​—ಇಬ್ರಿಯ 2:1.

3 ಯೇಸುವಿನ ಸಂಬಂಧದಲ್ಲಿ ಇಬ್ರಿಯ ಕ್ರೈಸ್ತರು ‘ಕೇಳಿದ ಸಂಗತಿಗಳಿಗೆ ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯಕೊಡುವವರಾಗಿರಬೇಕಿತ್ತು’ ಏಕೆ? ಏಕೆಂದರೆ ಅಷ್ಟರೊಳಗೆ ಯೇಸು ಭೂಮಿಯನ್ನು ಬಿಟ್ಟು ಕಡಿಮೆಪಕ್ಷ 30 ವರ್ಷಗಳು ದಾಟಿದ್ದವು. ತಮ್ಮ ಯಜಮಾನನ ಅನುಪಸ್ಥಿತಿಯಲ್ಲಿ, ಕೆಲವು ಇಬ್ರಿಯ ಕ್ರೈಸ್ತರು ಸತ್ಯ ನಂಬಿಕೆಯಿಂದ ದೂರ ತೇಲಿಹೋಗಲಾರಂಭಿಸಿದ್ದರು. ತಮ್ಮ ಹಿಂದಿನ ಆರಾಧನಾ ವಿಧಾನದಿಂದ ಅಂದರೆ ಯೆಹೂದ ಮತದಿಂದ ಅವರು ಅಪಕರ್ಷಿಸಲ್ಪಡುತ್ತಿದ್ದರು.

ಅವರು ಹೆಚ್ಚಿನ ಲಕ್ಷ್ಯವನ್ನು ಕೊಡಬೇಕಾಗಿತ್ತು

4. ಕೆಲವು ಇಬ್ರಿಯ ಕ್ರೈಸ್ತರು ಯೆಹೂದಿ ಮತಕ್ಕೆ ಹಿಂದಿರುಗಿ ಹೋಗಲು ಪ್ರಲೋಭಿಸಲ್ಪಟ್ಟಿರಬಹುದು ಏಕೆ?

4 ಒಬ್ಬ ಕ್ರೈಸ್ತನು ಯೆಹೂದಿ ಮತಕ್ಕೆ ಹಿಂದಿರುಗಿ ಹೋಗುವಂತೆ ಪ್ರಲೋಭಿಸಲ್ಪಡುವುದಾದರೂ ಏಕೆ? ಧರ್ಮಶಾಸ್ತ್ರಕ್ಕನುಸಾರ ನಡೆಯುತ್ತಿದ್ದ ಆರಾಧನಾ ವ್ಯವಸ್ಥೆಯಲ್ಲಿ ದೃಶ್ಯಗೋಚರ ವಸ್ತುಗಳು ಒಳಗೂಡಿದ್ದವು. ಜನರು ಯಾಜಕರನ್ನು ನೋಡಬಹುದಿತ್ತು ಮತ್ತು ಸುಡುತ್ತಿರುವ ಯಜ್ಞಗಳನ್ನು ಆಘ್ರಾಣಿಸಬಹುದಿತ್ತು. ಆದರೆ ಕೆಲವೊಂದು ವಿಷಯಗಳಲ್ಲಿ ಕ್ರೈಸ್ತ ಧರ್ಮವು ತೀರ ಭಿನ್ನವಾಗಿತ್ತು. ಕ್ರೈಸ್ತರಿಗೆ ಯೇಸು ಕ್ರಿಸ್ತನೆಂಬ ಒಬ್ಬ ಮಹಾಯಾಜಕನಿದ್ದನು ನಿಜ. ಆದರೆ ಅವನನ್ನು ಭೂಮಿಯ ಮೇಲೆ ನೋಡಿ ಮೂರು ದಶಕಗಳು ಸರಿದಿದ್ದವು. (ಇಬ್ರಿಯ 4:14) ಅವರಿಗೊಂದು ದೇವಾಲಯವೂ ಇತ್ತು, ಆದರೆ ಅದರ ಪವಿತ್ರ ಸ್ಥಾನವು ಸ್ವರ್ಗವೇ ಆಗಿತ್ತು. (ಇಬ್ರಿಯ 9:24) ಧರ್ಮಶಾಸ್ತ್ರದ ಕೆಳಗೆ ಮಾಡಲಾಗುತ್ತಿದ್ದ ಶಾರೀರಿಕ ಸುನ್ನತಿಗೆ ಭಿನ್ನವಾಗಿ, ಕ್ರೈಸ್ತ ಸುನ್ನತಿಯು ‘ಹೃದಯದಲ್ಲಿ ಆಗುವ ಆತ್ಮಸಂಬಂಧಿತ ಸುನ್ನತಿ’ ಆಗಿತ್ತು. (ರೋಮಾಪುರ 2:29) ಆದುದರಿಂದ, ಇಬ್ರಿಯ ಕ್ರೈಸ್ತರಿಗೆ, ಕ್ರೈಸ್ತ ಧರ್ಮದ ಸ್ವರೂಪವು ಗೋಚರವಾಗದಂಥದ್ದಾಗಿ ತೋರಿಬರಲಾರಂಭಿಸಿದ್ದಿರಬಹುದು.

5. ಯೇಸು ಸ್ಥಾಪಿಸಿದಂಥ ಆರಾಧನಾ ವ್ಯವಸ್ಥೆಯು, ಧರ್ಮಶಾಸ್ತ್ರಕ್ಕನುಸಾರವಾದ ಆರಾಧನೆಗಿಂತಲೂ ಶ್ರೇಷ್ಠವಾಗಿತ್ತೆಂದು ಪೌಲನು ತೋರಿಸಿದ್ದು ಹೇಗೆ?

5 ಕ್ರಿಸ್ತನಿಂದ ಸ್ಥಾಪಿಸಲ್ಪಟ್ಟಿದ್ದ ಆರಾಧನಾ ವ್ಯವಸ್ಥೆಯ ಬಗ್ಗೆ ಇಬ್ರಿಯ ಕ್ರೈಸ್ತರಿಗೆ ತುಂಬ ಮಹತ್ವಪೂರ್ಣವಾದ ಒಂದು ವಿಷಯವನ್ನು ಗ್ರಹಿಸುವ ಅಗತ್ಯವಿತ್ತು. ಅದು ಕಣ್ಣಿಗೆ ಕಾಣುವವುಗಳಿಗಿಂತಲೂ ಹೆಚ್ಚಾಗಿ ನಂಬಿಕೆಯ ಮೇಲೆ ಆಧಾರಿಸಲ್ಪಟ್ಟಿತ್ತು, ಆದರೂ ಅದೇ ಸಮಯದಲ್ಲಿ ಅದು ಪ್ರವಾದಿಯಾದ ಮೋಶೆಯ ಮೂಲಕ ರವಾನಿಸಲ್ಪಟ್ಟ ಧರ್ಮಶಾಸ್ತ್ರಕ್ಕಿಂತಲೂ ಶ್ರೇಷ್ಠವಾಗಿತ್ತು. ಪೌಲನು ಬರೆದುದು: “ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚೆಲ್ಲುವ ಕಡಸಿನ ಬೂದಿಯೂ ಶರೀರದ ಹೊಲೆಯನ್ನು ಹೋಗಲಾಡಿಸಿ ಪವಿತ್ರ ಮಾಡುವದಾದರೆ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು ಶುದ್ಧೀಕರಿಸುವದಲ್ಲವೇ.” (ಇಬ್ರಿಯ 9:13, 14) ಹೌದು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೇಲಿನ ನಂಬಿಕೆಯ ಮೂಲಕ ಲಭ್ಯವಿರುವ ಕ್ಷಮೆಯು, ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಡುತ್ತಿದ್ದ ಯಜ್ಞಗಳಿಂದ ಒದಗಿಸಲ್ಪಡುತ್ತಿದ್ದ ಕ್ಷಮೆಗಿಂತಲೂ ಎಷ್ಟೋ ವಿಧಗಳಲ್ಲಿ ಶ್ರೇಷ್ಠವಾಗಿತ್ತು.​—ಇಬ್ರಿಯ 7:​26-28.

6, 7. (ಎ) ಇಬ್ರಿಯ ಕ್ರೈಸ್ತರು ‘ಕೇಳಿದ ಸಂಗತಿಗಳಿಗೆ ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು ಕೊಡುವುದನ್ನು’ ತುರ್ತಾಗಿಸಿದ ಸನ್ನಿವೇಶವು ಯಾವುದಾಗಿತ್ತು? (ಬಿ) ಪೌಲನು ಇಬ್ರಿಯರಿಗೆ ತನ್ನ ಪತ್ರವನ್ನು ಬರೆದಾಗ, ಯೆರೂಸಲೇಮಿಗಾಗಿ ಎಷ್ಟು ಸಮಯ ಬಾಕಿ ಉಳಿದಿತ್ತು? (ಪಾದಟಿಪ್ಪಣಿಯನ್ನು ನೋಡಿರಿ.)

6 ಇಬ್ರಿಯ ಕ್ರೈಸ್ತರು ಯೇಸುವಿನ ಬಗ್ಗೆ ಕೇಳಿದ ಸಂಗತಿಗಳಿಗೆ ಕಟ್ಟುನಿಟ್ಟಿನ ಲಕ್ಷ್ಯವನ್ನು ಕೊಡಲಿಕ್ಕಾಗಿ ಬೇರೊಂದು ಕಾರಣವೂ ಇತ್ತು. ಯೆರೂಸಲೇಮು ನಾಶಗೊಳಿಸಲ್ಪಡುವುದೆಂದು ಯೇಸು ಮುಂತಿಳಿಸಿದ್ದನು. ಅವನು ಹೇಳಿದ್ದು: “ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳುಕೊಳ್ಳಲಿಲ್ಲವಾದದರಿಂದ ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು.”​—ಲೂಕ 19:43, 44.

7 ಇದು ಯಾವಾಗ ಸಂಭವಿಸಲಿತ್ತು? ಯೇಸು ಆ ದಿನ ಮತ್ತು ಗಳಿಗೆಯನ್ನು ತಿಳಿಸಲಿಲ್ಲ. ಬದಲಾಗಿ ಅವನು ಈ ಸೂಚನೆಯನ್ನು ಕೊಟ್ಟನು: “ಆದರೆ ದಂಡುಗಳು ಯೆರೂಸಲೇಮ್‌ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿ ಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.” (ಲೂಕ 21:20, 21) ಯೇಸು ಆ ಮಾತುಗಳನ್ನಾಡಿ ಕಳೆದಿದ್ದ 30 ವರ್ಷಗಳಲ್ಲಿ, ಯೆರೂಸಲೇಮಿನಲ್ಲಿದ್ದ ಕೆಲವು ಕ್ರೈಸ್ತರು ತಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಂಡು ಅಪಕರ್ಷಿತರಾಗಿದ್ದರು. ಅದು ಅವರು ತಮ್ಮ ದೃಷ್ಟಿಯನ್ನು ರಸ್ತೆಯ ಮೇಲಿಂದ ಬೇರೆ ಕಡೆಗೆ ತಿರುಗಿಸಿದ್ದರೋ ಎಂಬಂತಿತ್ತು. ಅವರು ತಮ್ಮ ಯೋಚನಾಧಾಟಿಯನ್ನು ಸರಿಹೊಂದಿಸದಿದ್ದರೆ, ಖಂಡಿತವಾಗಿಯೂ ವಿಪತ್ತು ಫಲಿಸಲಿತ್ತು. ಯೆರೂಸಲೇಮಿನ ನಾಶನವು ತೀರ ಹತ್ತಿರದಲ್ಲಿದೆ ಎಂದು ಅವರು ಯೋಚಿಸಿರಲಿ ಇಲ್ಲದಿರಲಿ, ಅದಂತೂ ನಿಶ್ಚಯವಾಗಿಯೂ ಹತ್ತಿರದಲ್ಲಿತ್ತು! * ಆಶಾದಾಯಕವಾಗಿ, ಪೌಲನ ಸಲಹೆಯು ಯೆರೂಸಲೇಮಿನಲ್ಲಿ ಆತ್ಮಿಕವಾಗಿ ನಿದ್ರೆಹೋಗಿದ್ದ ಕ್ರೈಸ್ತರಿಗೆ ಎಚ್ಚೆತ್ತುಕೊಳ್ಳುವ ಕರೆಯನ್ನು ಕೊಟ್ಟಿತು.

ಇಂದು ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು’ ಕೊಡುವುದು

8. ದೇವರ ವಾಕ್ಯದ ಸತ್ಯಗಳಿಗೆ ನಾವು ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು ಕೊಡಬೇಕು’ ಏಕೆ?

8 ಪ್ರಥಮ ಶತಮಾನದ ಕ್ರೈಸ್ತರಂತೆ, ನಾವು ದೇವರ ವಾಕ್ಯದ ಸತ್ಯಗಳಿಗೆ ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು ಕೊಡಬೇಕು.’ ಏಕೆ? ಏಕೆಂದರೆ ನಮ್ಮೆದುರಿಗೂ ಒಂದು ನಾಶನವಿದೆ. ಅದು ಕೇವಲ ಒಂದೇ ಜನಾಂಗದ್ದಲ್ಲ ಬದಲಾಗಿ ಇಡೀ ವಿಷಯಗಳ ವ್ಯವಸ್ಥೆಯ ನಾಶನವೇ. (ಪ್ರಕಟನೆ 11:18; 16:​14, 16) ಯೆಹೋವನು ಈ ಕ್ರಮವನ್ನು ಕೈಕೊಳ್ಳುವ ದಿನ ಮತ್ತು ಗಳಿಗೆ ನಮಗೆ ತಿಳಿದಿಲ್ಲ ನಿಜ. (ಮತ್ತಾಯ 24:36) ಹಾಗಿದ್ದರೂ, ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಾ ಇದ್ದೇವೆಂದು ಸ್ಪಷ್ಟವಾಗಿ ಸೂಚಿಸುವ ಬೈಬಲ್‌ ಪ್ರವಾದನೆಗಳ ನೆರವೇರಿಕೆಗೆ ನಾವು ಪ್ರತ್ಯಕ್ಷ ಸಾಕ್ಷಿಗಳಾಗಿದ್ದೇವೆ. (2 ತಿಮೊಥೆಯ 3:​1-5) ಹೀಗಿರುವುದರಿಂದ ನಮ್ಮನ್ನು ಅಪಕರ್ಷಿಸಸಾಧ್ಯವಿರುವ ಯಾವುದೇ ವಿಷಯದ ವಿರುದ್ಧ ನಾವು ಎಚ್ಚರದಿಂದಿರಬೇಕು. ನಾವು ದೇವರ ವಾಕ್ಯಕ್ಕೆ ಗಮನಕೊಟ್ಟು, ತುರ್ತಿನ ತೀವ್ರ ಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕು. ಹಾಗೆ ಮಾಡಿದರೆ ಮಾತ್ರ ನಾವು ‘ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವೆವು.’​—ಲೂಕ 21:36.

9, 10. (ಎ) ಆತ್ಮಿಕ ವಿಷಯಗಳಿಗೆ ನಾವು ಹೇಗೆ ಹೆಚ್ಚಿನ ಲಕ್ಷ್ಯವನ್ನು ಕೊಡಸಾಧ್ಯವಿದೆ? (ಬಿ) ದೇವರ ವಾಕ್ಯವು ‘ನಮ್ಮ ಕಾಲಿಗೆ ದೀಪವೂ ನಮ್ಮ ದಾರಿಗೆ ಬೆಳಕೂ’ ಆಗಿರುವುದು ಹೇಗೆ?

9 ಬಹುಮುಖ್ಯವಾದ ಈ ಸಮಯಗಳಲ್ಲಿ, ನಾವು ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು’ ಕೊಡುತ್ತಿದ್ದೇವೆಂಬುದನ್ನು ಹೇಗೆ ತೋರಿಸಬಲ್ಲೆವು? ಒಂದು ವಿಧವು, ಕ್ರೈಸ್ತ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಕ್ರಮವಾಗಿ ಹಾಜರಿರುವ ಮೂಲಕವೇ. ನಾವು ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳೂ ಆಗಿರಬೇಕು. ಹೀಗೆ ಮಾಡುವುದರಿಂದ ನಾವು ಅದರ ಗ್ರಂಥಕರ್ತನಾದ ಯೆಹೋವನಿಗೆ ಹೆಚ್ಚು ಆಪ್ತರಾಗಬಲ್ಲೆವು. (ಯಾಕೋಬ 4:8) ನಾವು ವೈಯಕ್ತಿಕ ಅಧ್ಯಯನ ಮತ್ತು ಕೂಟಗಳ ಮೂಲಕ ಜ್ಞಾನವನ್ನು ತೆಗೆದುಕೊಳ್ಳುವಲ್ಲಿ, ನಾವು ಕೀರ್ತನೆಗಾರನಂತಿರಬಲ್ಲೆವು. ಅವನು ದೇವರಿಗೆ ಹೀಗಂದನು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.”​—ಕೀರ್ತನೆ 119:105.

10 ಭವಿಷ್ಯತ್ತಿಗಾಗಿ ದೇವರ ಉದ್ದೇಶಗಳೇನಾಗಿವೆ ಎಂಬುದನ್ನು ಬೈಬಲ್‌ ನಮಗೆ ಹೇಳುವಾಗ ಅದು ‘ನಮ್ಮ ದಾರಿಗೆ ಬೆಳಕಾಗಿ’ ಕಾರ್ಯನಡಿಸುತ್ತದೆ. ಅದು ‘ನಮ್ಮ ಕಾಲಿಗೆ ದೀಪವೂ’ ಆಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಬದುಕಿನ ಸಂಕಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ನಮ್ಮ ಮುಂದಿನ ಹೆಜ್ಜೆಯನ್ನು ಎಲ್ಲಿಡಬೇಕೆಂಬ ವಿಷಯದಲ್ಲಿ ಅದು ನಮಗೆ ಸಹಾಯಮಾಡಬಲ್ಲದು. ಆದುದರಿಂದಲೇ, ಜೊತೆ ವಿಶ್ವಾಸಿಗಳೊಂದಿಗೆ ನಾವು ಉಪದೇಶವನ್ನು ಪಡೆಯಲು ಕೂಡಿಬರುವಾಗ, ಮತ್ತು ನಾವು ವೈಯಕ್ತಿಕವಾಗಿ ದೇವರ ವಾಕ್ಯವನ್ನು ಓದುವಾಗ ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು ಕೊಡುವುದು’ ಅತ್ಯಾವಶ್ಯಕವಾಗಿದೆ. ನಾವು ಪಡೆಯುವಂಥ ಮಾಹಿತಿಯು, ಯೆಹೋವನು ಮೆಚ್ಚುವಂಥ ಮತ್ತು ಆತನ ಮನಸ್ಸನ್ನು ಸಂತೋಷಪಡಿಸುವಂಥ ವಿವೇಕಯುತ ಹಾಗೂ ಉಪಯುಕ್ತ ನಿರ್ಣಯಗಳನ್ನು ಮಾಡುವಂತೆ ಸಹಾಯಮಾಡುವುದು. (ಜ್ಞಾನೋಕ್ತಿ 27:11; ಯೆಶಾಯ 48:17) ನಾವು ದೇವರ ಆತ್ಮಿಕ ಒದಗಿಸುವಿಕೆಗಳಿಂದ ಅತಿ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವಂತೆ, ಕೂಟಗಳಲ್ಲಿ ಮತ್ತು ವೈಯಕ್ತಿಕ ಅಧ್ಯಯನದ ಅವಧಿಗಳಲ್ಲಿ ನಾವು ನಮ್ಮ ಗಮನಾವಧಿಯನ್ನು ಹೇಗೆ ಹೆಚ್ಚಿಸಬಲ್ಲೆವು?

ಕೂಟಗಳಲ್ಲಿ ನಮ್ಮ ಏಕಾಗ್ರತೆಯನ್ನು ಹೆಚ್ಚಿಸುವುದು

11. ಕ್ರೈಸ್ತ ಕೂಟಗಳಲ್ಲಿ ಲಕ್ಷ್ಯಕೊಡುವುದು ಕೆಲವೊಮ್ಮೆ ಸುಲಭವಾಗಿರಲಿಕ್ಕಿಲ್ಲ ಏಕೆ?

11 ಕೆಲವೊಮ್ಮೆ ಕ್ರೈಸ್ತ ಕೂಟಗಳಲ್ಲಿ ಲಕ್ಷ್ಯಕೊಡುವುದು ಸುಲಭವಾಗಿರಲಿಕ್ಕಿಲ್ಲ. ಒಂದು ಮಗು ಅಳುತ್ತಿರುವುದಾದರೆ ಇಲ್ಲವೆ ತಡವಾಗಿ ಬಂದಿರುವವರೊಬ್ಬರು ಸೀಟ್‌ಗಾಗಿ ಹುಡುಕುತ್ತಿರುವುದಾದರೆ, ಮನಸ್ಸು ಸುಲಭವಾಗಿ ಅಪಕರ್ಷಿಸಲ್ಪಡಬಹುದು. ಇಡೀ ದಿನ ಕೆಲಸಮಾಡಿದ ನಂತರ ನಾವು ಸುಸ್ತಾಗಿರಲೂಬಹುದು. ವೇದಿಕೆಯಿಂದ ಭಾಷಣಕೊಡುತ್ತಿರುವವರು ಸಹ, ಆಸಕ್ತಿಯನ್ನು ಕೆರಳಿಸುವಂಥ ರೀತಿಯ ಭಾಷಣಕರ್ತರಾಗಿರಲಿಕ್ಕಿಲ್ಲ. ಆದುದರಿಂದ ನಮಗೆ ಗೊತ್ತಾಗುವ ಮುಂಚೆಯೇ ನಾವು ಹಗಲುಗನಸುಗಳಲ್ಲಿ ತೇಲುತ್ತಾ ಇರಬಹುದು, ಇಲ್ಲವೇ ತೂಕಡಿಸುತ್ತಿರಲೂಬಹುದು! ಸಾದರಪಡಿಸಲಾಗುತ್ತಿರುವ ಮಾಹಿತಿಯು ಅತಿ ಪ್ರಾಮುಖ್ಯವಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಸಭಾ ಕೂಟಗಳಲ್ಲಿನ ನಮ್ಮ ಏಕಾಗ್ರತೆಯನ್ನು ಉತ್ತಮಗೊಳಿಸಲು ಪ್ರಯಾಸಪಡುವುದು ಒಳ್ಳೇದು. ನಾವಿದನ್ನು ಹೇಗೆ ಮಾಡಬಲ್ಲೆವು?

12. ನಾವು ಕೂಟಗಳಲ್ಲಿ ಲಕ್ಷ್ಯಕೊಡುವುದನ್ನು ಯಾವುದು ಸುಲಭಗೊಳಿಸುವುದು?

12 ನಾವು ಚೆನ್ನಾಗಿ ತಯಾರಿಮಾಡಿ ಬರುವುದಾದರೆ ಕೂಟಗಳಲ್ಲಿ ಲಕ್ಷ್ಯಕೊಡುವುದು ಸಾಮಾನ್ಯವಾಗಿ ಹೆಚ್ಚು ಸುಲಭವಾಗಿರುತ್ತದೆ. ಹೀಗಿರುವುದರಿಂದ, ಚರ್ಚಿಸಲ್ಪಡಲಿರುವ ವಿಷಯಭಾಗವನ್ನು ಮುಂಚಿತವಾಗಿಯೇ ಪರಿಗಣಿಸಲು ಸಮಯವನ್ನು ಬದಿಗಿರಿಸಬಾರದೇಕೆ? ವಾರದ ಬೈಬಲ್‌ ವಾಚನಕ್ಕಾಗಿ ನೇಮಿಸಲ್ಪಟ್ಟಿರುವ ಅಧ್ಯಾಯಗಳ ಒಂದು ಭಾಗವನ್ನು ಪ್ರತಿದಿನ ಓದಿ ಮನನಮಾಡಲಿಕ್ಕಾಗಿ ಕೇವಲ ಕೆಲವೇ ನಿಮಿಷಗಳು ಸಾಕು. ಸ್ವಲ್ಪ ಯೋಜನೆ ಮಾಡುವಲ್ಲಿ ಸಭಾ ಪುಸ್ತಕ ಅಧ್ಯಯನ ಮತ್ತು ಕಾವಲಿನಬುರುಜು ಅಧ್ಯಯನಕ್ಕಾಗಿ ತಯಾರಿಸಲು ನಮಗೆ ಸಮಯ ಸಿಗುವುದು. ನಾವು ಯಾವುದೇ ರೀತಿಯ ಶೆಡ್ಯೂಲ್‌ ಮಾಡಲಿ, ಈ ವಿಷಯವಂತೂ ಖಂಡಿತ: ತಯಾರಿಯು, ಸಭಾ ಕೂಟಗಳಲ್ಲಿ ಚರ್ಚಿಸಲ್ಪಡುತ್ತಿರುವ ವಿಷಯಕ್ಕೆ ನಾವು ಲಕ್ಷ್ಯಕೊಡುವಂತೆ ಸಹಾಯಮಾಡುವುದು.

13. ಕೂಟಗಳಲ್ಲಿ ಚರ್ಚಿಸಲ್ಪಡಲಿರುವ ವಿಷಯಭಾಗದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಲು ಯಾವುದು ಸಹಾಯಮಾಡುವುದು?

13 ಒಳ್ಳೆಯ ತಯಾರಿಯ ಜೊತೆಗೆ, ಸಭಾಗೃಹದಲ್ಲಿ ಮುಂದಿನ ಭಾಗದಲ್ಲಿ ಕುಳಿತುಕೊಳ್ಳುವಾಗ ತಾವು ಕೂಟಗಳಿಗೆ ಹೆಚ್ಚು ಲಕ್ಷ್ಯಕೊಡಸಾಧ್ಯವಿದೆ ಎಂಬುದನ್ನು ಕೆಲವು ಮಂದಿ ಕಂಡುಕೊಂಡಿದ್ದಾರೆ. ಭಾಷಣಕರ್ತನೊಂದಿಗೆ ದೃಷ್ಟಿ ಸಂಪರ್ಕವನ್ನಿಟ್ಟುಕೊಳ್ಳುವುದು, ಒಂದು ವಚನವು ಓದಲ್ಪಡುವಾಗ ಸ್ವಂತ ಬೈಬಲ್‌ನಲ್ಲಿ ಅದನ್ನು ಓದುವುದು, ಮತ್ತು ಟಿಪ್ಪಣಿಗಳನ್ನು ಬರೆಯುವುದು, ಮನಸ್ಸು ಅಲೆದಾಡದಂತೆ ತಡೆಯುವ ಬೇರೆ ವಿಧಗಳಾಗಿವೆ. ಆದಾಗ್ಯೂ, ಯಾವುದೇ ನಿರ್ದಿಷ್ಟ ಏಕಾಗ್ರತೆಯ ತಂತ್ರಕ್ಕಿಂತಲೂ, ಸಿದ್ಧಗೊಳಿಸಲ್ಪಟ್ಟಿರುವ ಒಂದು ಹೃದಯವನ್ನು ಹೊಂದಿರುವುದು ಹೆಚ್ಚು ಪ್ರಾಮುಖ್ಯವಾಗಿದೆ. ನಾವು ಜೊತೆಯಾಗಿ ಕೂಡಿಬರುವ ಉದ್ದೇಶವನ್ನು ಗ್ರಹಿಸುವ ಅಗತ್ಯವಿದೆ. ನಾವು ಜೊತೆ ವಿಶ್ವಾಸಿಗಳೊಂದಿಗೆ ಕೂಡಿಬರುವ ಮುಖ್ಯ ಕಾರಣ ಯೆಹೋವನನ್ನು ಆರಾಧಿಸುವುದಾಗಿದೆ. (ಕೀರ್ತನೆ 26:12; ಲೂಕ 2:​36, 37) ಕೂಟಗಳು, ನಾವು ಆತ್ಮಿಕವಾಗಿ ಉಣಿಸಲ್ಪಡುವ ಒಂದು ಪ್ರಮುಖ ವಿಧವಾಗಿವೆ. (ಮತ್ತಾಯ 24:​45-47) ಅದಲ್ಲದೆ, ನಾವು ‘ಪರಸ್ಪರ ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸಲು’ ಅವು ಅವಕಾಶಗಳನ್ನು ಕೊಡುತ್ತವೆ.​—ಇಬ್ರಿಯ 10:​24, 25.

14. ಒಂದು ಕೂಟವನ್ನು ನಿಜವಾಗಿಯೂ ಯಶಸ್ವಿಕರವಾಗಿ ಮಾಡುವಂಥ ಸಂಗತಿ ಯಾವುದು?

14 ಕೆಲವರಿಗೆ, ಕೂಟಗಳನ್ನು ನಡೆಸುವವರ ಕಲಿಸುವ ಸಾಮರ್ಥ್ಯಗಳ ಆಧಾರದ ಮೇಲೆ ಕೂಟದ ಗುಣಮಟ್ಟವನ್ನು ಅಳೆಯುವ ಸ್ವಭಾವವಿರಬಹುದು. ತುಂಬ ಸಮರ್ಥ ಭಾಷಣಕರ್ತರು ಇರುವಲ್ಲಿ ಕೂಟವು ತುಂಬ ಚೆನ್ನಾಗಿತ್ತು, ಆದರೆ ಪರಿಣಾಮಕಾರಿಯಾದ ಕಲಿಸುವಿಕೆ ಇಲ್ಲದಿದ್ದಾಗ ಕೂಟವು ಚೆನ್ನಾಗಿರಲಿಲ್ಲವೆಂಬ ದೃಷ್ಟಿಕೋನವನ್ನು ನಾವು ಹೊಂದಿರುವ ಸಾಧ್ಯತೆಯಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ತಮ್ಮಿಂದ ಸಾಧ್ಯವಿರುವಷ್ಟರ ಮಟ್ಟಿಗೆ ಕಲಿಸುವ ಕಲೆಯನ್ನು ಉಪಯೋಗಿಸಬೇಕು ಮತ್ತು ವಿಶೇಷವಾಗಿ ಹೃದಯಗಳನ್ನು ತಲಪಬೇಕೆಂಬುದು ನಿಜ. (1 ತಿಮೊಥೆಯ 4:16) ಆದರೂ, ಕಿವಿಗೊಡುವವರಾದ ನಾವು ಅನಾವಶ್ಯಕವಾಗಿ ಟೀಕಿಸುವವರಾಗಿರಬಾರದು. ಭಾಷಣಕಾರರ ಕಲಿಸುವ ಸಾಮರ್ಥ್ಯವು ಪ್ರಾಮುಖ್ಯವಾಗಿದೆಯಾದರೂ, ಕೂಟವನ್ನು ಯಶಸ್ವಿಗೊಳಿಸುವುದರಲ್ಲಿ ಕೇವಲ ಅದೊಂದೇ ಕಾರಣಭೂತ ಅಂಶವಾಗಿರುವುದಿಲ್ಲ. ನಮ್ಮ ಮುಖ್ಯ ಚಿಂತೆಯು, ಭಾಷಣಕರ್ತನು ತನ್ನ ಭಾಷಣವನ್ನು ಹೇಗೆ ಕೊಡುತ್ತಾನೆ ಎಂಬುದಲ್ಲ ಬದಲಾಗಿ ನಾವು ಹೇಗೆ ಕಿವಿಗೊಡುತ್ತಿದ್ದೇವೆ ಎಂಬುದಾಗಿರಬೇಕೆಂದು ನೀವು ಒಪ್ಪುವುದಿಲ್ಲವೊ? ನಾವು ಕೂಟಗಳಿಗೆ ಹಾಜರಾಗಿ, ಅಲ್ಲಿ ಸಾದರಪಡಿಸಲ್ಪಡುತ್ತಿರುವ ವಿಷಯಕ್ಕೆ ಲಕ್ಷ್ಯಕೊಡುವಾಗ, ನಾವು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಆತನನ್ನು ಆರಾಧಿಸುತ್ತಿದ್ದೇವೆ. ಕೂಟವನ್ನು ಯಶಸ್ವಿಗೊಳಿಸುವ ಸಂಗತಿಯು ಇದೇ ಆಗಿದೆ. ನಾವು ದೇವರ ಜ್ಞಾನವನ್ನು ತೆಗೆದುಕೊಳ್ಳಲು ಆತುರಪಡುವಲ್ಲಿ, ಭಾಷಣಕರ್ತನ ಸಾಮರ್ಥ್ಯಗಳು ಏನೇ ಆಗಿರಲಿ, ನಾವು ಕೂಟಗಳಿಂದ ಪ್ರಯೋಜನಹೊಂದುವೆವು. (ಜ್ಞಾನೋಕ್ತಿ 2:​1-5) ಹೀಗಿರುವುದರಿಂದ ನಮ್ಮ ಕೂಟಗಳಲ್ಲಿ ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು ಕೊಡಲು’ ನಾವು ದೃಢಸಂಕಲ್ಪವುಳ್ಳವರಾಗಿರೋಣ.

ವೈಯಕ್ತಿಕ ಅಧ್ಯಯನದಿಂದ ಪೂರ್ಣವಾಗಿ ಪ್ರಯೋಜನ ಪಡೆಯಿರಿ

15. ಅಧ್ಯಯನ ಮತ್ತು ಮನನವು ನಮಗೆ ಹೇಗೆ ಪ್ರಯೋಜನ ತರಬಲ್ಲದು?

15 ವೈಯಕ್ತಿಕ ಅಧ್ಯಯನ ಮತ್ತು ಮನನದ ಅವಧಿಗಳಲ್ಲಿ ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು ಕೊಡು’ವುದರಿಂದ ತುಂಬ ಪ್ರಯೋಜನಗಳನ್ನು ಪಡೆಯುತ್ತೇವೆ. ಬೈಬಲ್‌ ಮತ್ತು ಕ್ರೈಸ್ತ ಪ್ರಕಾಶನಗಳನ್ನು ಓದಿ ಅವುಗಳ ಕುರಿತಾಗಿ ಚಿಂತಿಸುವುದು, ದೇವರ ವಾಕ್ಯದ ಸತ್ಯಗಳನ್ನು ನಮ್ಮ ಹೃದಯದಲ್ಲಿ ಬಲವಾಗಿ ಅಚ್ಚೊತ್ತಿಸಲು ಅಮೂಲ್ಯವಾದ ಅವಕಾಶಗಳನ್ನು ಕೊಡುತ್ತದೆ. ಮತ್ತು ಇದು, ನಾವು ಯೋಚಿಸುವ ಮತ್ತು ಕ್ರಿಯೆಗೈಯುವ ವಿಧಾನದ ಮೇಲೆ ಗಾಢವಾದ ಪರಿಣಾಮವನ್ನು ಬೀರುವುದು. ಹೌದು, ನಾವು ಯೆಹೋವನ ಚಿತ್ತದಂತೆ ಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳುವಂತೆ ಅದು ನಮಗೆ ಸಹಾಯಮಾಡುವುದು. (ಕೀರ್ತನೆ 1:2; 40:8) ಆದುದರಿಂದ, ನಾವು ಅಧ್ಯಯನ ಮಾಡುತ್ತಿರುವಾಗ, ನಮ್ಮ ಏಕಾಗ್ರತೆಯು ಪ್ರಯೋಜನಗಳನ್ನು ತರುವಂತೆ ಅದನ್ನು ವಿಕಸಿಸಿಕೊಳ್ಳುವ ಅಗತ್ಯವಿದೆ. ಅಪಕರ್ಷಿತರಾಗುವುದು ಎಷ್ಟೋ ಸುಲಭ! ಚಿಕ್ಕಪುಟ್ಟ ಅಡ್ಡಿತಡೆಗಳು​—ಒಂದು ಫೋನ್‌ ಕಾಲ್‌ ಇಲ್ಲವೆ ಯಾವುದೇ ಒಂದು ಶಬ್ದವು ನಾವು ಅಪಕರ್ಷಿಸಲ್ಪಡುವಂತೆ ಮಾಡಬಹುದು. ಇಲ್ಲವೆ, ಸ್ವತಃ ನಮ್ಮ ಗಮನಾವಧಿಯು ತೀರ ಕಡಿಮೆಯಾಗಿರಬಹುದು. ಆತ್ಮಿಕವಾಗಿ ಉಣ್ಣಬೇಕೆಂಬ ಒಳ್ಳೇ ಉದ್ದೇಶಗಳೊಂದಿಗೆ ನಾವು ಕುಳಿತುಕೊಳ್ಳಬಹುದು, ಆದರೆ ಸ್ವಲ್ಪ ಸಮಯದೊಳಗೆ ನಮ್ಮ ಮನಸ್ಸು ಕಾರ್ಯತಃ ಬೇರೆ ಹುಲ್ಲುಗಾವಲುಗಳಲ್ಲಿ ಮೇಯುತ್ತಿರಬಹುದು. ದೇವರ ವಾಕ್ಯದ ವೈಯಕ್ತಿಕ ಅಧ್ಯಯನದ ಸಮಯದಲ್ಲಿ ನಾವು ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು’ ಹೇಗೆ ಕೊಡಬಹುದು?

16. (ಎ) ವೈಯಕ್ತಿಕ ಅಧ್ಯಯನಕ್ಕಾಗಿ ಸಮಯವನ್ನು ಶೆಡ್ಯೂಲ್‌ ಮಾಡುವುದು ಪ್ರಾಮುಖ್ಯವೇಕೆ? (ಬಿ) ದೇವರ ವಾಕ್ಯವನ್ನು ಅಧ್ಯಯನ ಮಾಡಲಿಕ್ಕಾಗಿ ನೀವು ಹೇಗೆ ಸಮಯವನ್ನು ಮಾಡಿಕೊಂಡಿದ್ದೀರಿ?

16 ಒಂದು ಶೆಡ್ಯೂಲನ್ನು ತಯಾರಿಸಿ, ಅಧ್ಯಯನ ಮಾಡಲು ಸಹಾಯಮಾಡುವಂಥ ಒಂದು ಸ್ಥಳವನ್ನು ಆಯ್ಕೆಮಾಡುವುದು ಉಪಯುಕ್ತ. ನಮ್ಮಲ್ಲಿ ಹೆಚ್ಚಿನವರಿಗೆ, ಸಮಯ ಹಾಗೂ ಏಕಾಂತವು ಅಪರೂಪದ ಸಾಮಗ್ರಿಗಳಾಗಿಬಿಟ್ಟಿವೆ. ಪ್ರತಿನಿತ್ಯದ ಘಟನೆಗಳು ಎಷ್ಟು ವೇಗದಿಂದ ಸಾಗುತ್ತವೆಂದರೆ, ಬಿರುಸಾದ ಒಂದು ಪ್ರವಾಹದಲ್ಲಿ ಅವು ನಮ್ಮನ್ನು ಒಂದು ಕಡ್ಡಿಯಂತೆ ಕೊಚ್ಚಿಕೊಂಡು ಹೋಗುತ್ತಿರುವ ಅನಿಸಿಕೆ ನಮಗಾಗಬಹುದು. ಸಾಂಕೇತಿಕವಾಗಿ ಹೇಳುವುದಾದರೆ, ನಾವು ಆ ಪ್ರವಾಹದ ವಿರುದ್ಧ ಹೋರಾಡಿ, ಒಂದು ಪ್ರಶಾಂತವಾದ ಪುಟ್ಟ ದ್ವೀಪವನ್ನು ಕಂಡುಕೊಳ್ಳುವ ಅಗತ್ಯವಿದೆ. ಅಧ್ಯಯನ ಮಾಡಲಿಕ್ಕಾಗಿ ಅವಕಾಶವು ನಮ್ಮನ್ನು ಹುಡುಕಿಕೊಂಡು ಬರುವುದೆಂದು ನಾವು ಕಾಯುತ್ತಾ ಇರಲಾರೆವು. ಅದರ ಬದಲು ನಾವು ಅಧ್ಯಯನಕ್ಕಾಗಿ ಸಮಯವನ್ನು ಮಾಡಿಕೊಳ್ಳುತ್ತಾ, ಸನ್ನಿವೇಶವನ್ನು ನಮ್ಮ ನಿಯಂತ್ರಣದಲ್ಲಿಡಬೇಕು. (ಎಫೆಸ 5:​15, 16) ಕೆಲವರು, ಕಡಿಮೆ ಅಪಕರ್ಷಣೆಯಿರುವ ಬೆಳಗ್ಗಿನ ಹೊತ್ತಿನಲ್ಲಿ ಸ್ವಲ್ಪ ಸಮಯವನ್ನು ಬದಿಗಿರಿಸುತ್ತಾರೆ. ಇನ್ನಿತರರಿಗೆ, ಸಾಯಂಕಾಲವು ಉತ್ತಮ ಅವಕಾಶವನ್ನು ಕೊಡುತ್ತದೆಂದು ಅನಿಸುತ್ತದೆ. ಸಮಯವು ಯಾವುದೇ ಆಗಿರಲಿ, ಮುಖ್ಯ ಅಂಶವೇನೆಂದರೆ, ದೇವರ ಮತ್ತು ಆತನ ಮಗನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಅತಿ ಪ್ರಮುಖ ಆವಶ್ಯಕತೆಯನ್ನು ನಾವು ಅಲಕ್ಷಿಸಬಾರದು. (ಯೋಹಾನ 17:3) ಆದುದರಿಂದಲೇ ವೈಯಕ್ತಿಕ ಅಧ್ಯಯನಕ್ಕಾಗಿ ನಾವು ನಿರ್ದಿಷ್ಟ ಸಮಯವನ್ನು ಶೆಡ್ಯೂಲ್‌ ಮಾಡೋಣ ಮತ್ತು ಅದಕ್ಕೆ ಅಂಟಿಕೊಳ್ಳೋಣ.

17. ಮನನ ಎಂದರೇನು, ಮತ್ತು ಅದರಿಂದ ನಮಗೆ ಹೇಗೆ ಪ್ರಯೋಜನವಾಗಬಲ್ಲದು?

17 ಮನನ, ಅಂದರೆ ಅಧ್ಯಯನದ ಮೂಲಕ ನಾವೇನನ್ನು ಕಲಿತಿದ್ದೇವೊ ಅದರ ಬಗ್ಗೆ ಚಿಂತನೆಮಾಡುವ ಪ್ರಕ್ರಿಯೆಯ ಮೌಲ್ಯವನ್ನು ಎಷ್ಟು ಹೇಳಿದರೂ ಸಾಲದು. ಅದು, ದೇವರ ಆಲೋಚನೆಗಳನ್ನು ಮುದ್ರಿತ ಪುಟದಿಂದ ಹೊರತೆಗೆದು ಅವುಗಳನ್ನು ನಮ್ಮ ಹೃದಯದೊಳಗೆ ಇಳಿಸಲು ಸಹಾಯಮಾಡುತ್ತದೆ. ನಾವು ‘ವಾಕ್ಯವನ್ನು ಕೇಳುವವರು ಮಾತ್ರವೇ ಆಗಿರದೆ ಅದರ ಪ್ರಕಾರ ನಡೆಯುವವರಾಗಿರು’ವುದರ ಕುರಿತಾದ ಬೈಬಲ್‌ ಸಲಹೆಯನ್ನು ಅನ್ವಯಿಸುವುದು ಹೇಗೆಂಬುದನ್ನು ನೋಡಲು ಮನನವು ನಮಗೆ ಸಹಾಯಮಾಡುತ್ತದೆ. (ಯಾಕೋಬ 1:​22-25) ಅಷ್ಟುಮಾತ್ರವಲ್ಲದೆ, ಮನನವು ನಾವು ಯೆಹೋವನಿಗೆ ಇನ್ನೂ ಹೆಚ್ಚು ನಿಕಟವಾಗುವಂತೆ ಸಹಾಯಮಾಡುತ್ತದೆ. ಏಕೆಂದರೆ ಅದು, ನಾವು ಆತನ ಗುಣಗಳ ಕುರಿತಾಗಿ, ಮತ್ತು ನಮ್ಮ ಅಧ್ಯಯನದ ಅವಧಿಗಳಲ್ಲಿ ಪರಿಗಣಿಸಲ್ಪಡುತ್ತಿರುವ ಮಾಹಿತಿಯಲ್ಲಿ ಆ ಗುಣಗಳು ಹೇಗೆ ಎತ್ತಿತೋರಿಸಲ್ಪಟ್ಟಿವೆ ಎಂಬದರ ಬಗ್ಗೆ ಯೋಚಿಸುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ.

18. ಪರಿಣಾಮಕಾರಿಯಾದ ಮನನಕ್ಕಾಗಿ ಯಾವ ಪರಿಸ್ಥಿತಿಗಳು ಅಗತ್ಯ?

18 ಅಧ್ಯಯನ ಮತ್ತು ಮನನದಿಂದ ಪೂರ್ಣ ಪ್ರಯೋಜನವನ್ನು ಪಡೆಯಲು, ನಮ್ಮ ಮನಸ್ಸು ಅಪಕರ್ಷಣೆಗಳಿಂದ ಮುಕ್ತವಾಗಿರಬೇಕು. ಮನನ ಮಾಡುತ್ತಿರುವಾಗ ಹೊಸ ಮಾಹಿತಿಗಾಗಿ ಸ್ಥಳಾವಕಾಶವನ್ನು ಮಾಡಲು, ನಾವು ದೈನಂದಿನ ಬದುಕಿನ ಅಪಕರ್ಷಣೆಗಳನ್ನು ಮನಸ್ಸಿನಿಂದ ಹೊರಗಿಡಬೇಕು. ಮನನ ಮಾಡಲಿಕ್ಕಾಗಿ ಸಮಯ ಮತ್ತು ಏಕಾಂತತೆಯು ಬೇಕಾಗುತ್ತದೆ ನಿಜ. ಆದರೆ ದೇವರ ವಾಕ್ಯದಲ್ಲಿ ಸಿಗುವಂಥ ಆತ್ಮಿಕ ಆಹಾರ ಹಾಗೂ ಸತ್ಯದ ನೀರುಗಳನ್ನು ತೆಗೆದುಕೊಳ್ಳುವುದು ಎಷ್ಟು ಚೈತನ್ಯದಾಯಕವಾಗಿದೆ!

19. (ಎ) ವೈಯಕ್ತಿಕ ಅಧ್ಯಯನದ ಸಂಬಂಧದಲ್ಲಿ, ತಮ್ಮ ಗಮನಾವಧಿಯನ್ನು ಹೆಚ್ಚಿಸಲು ಕೆಲವರಿಗೆ ಯಾವುದು ಸಹಾಯಮಾಡಿದೆ? (ಬಿ) ಅಧ್ಯಯನದ ಕಡೆಗೆ ನಮ್ಮ ಮನೋಭಾವವು ಏನಾಗಿರಬೇಕು, ಮತ್ತು ಈ ಪ್ರಾಮುಖ್ಯ ಚಟುವಟಿಕೆಯಿಂದ ನಾವು ಯಾವ ಪ್ರಯೋಜನಗಳನ್ನು ಪಡೆಯಬಲ್ಲೆವು?

19 ಆದರೆ ನಮ್ಮ ಗಮನಾವಧಿಯು ಕಡಿಮೆಯಾಗಿದ್ದು, ಅಧ್ಯಯನವನ್ನು ಆರಂಭಿಸಿ ಸ್ವಲ್ಪ ಸಮಯ ಕಳೆಯುವಷ್ಟರಲ್ಲೇ ನಮ್ಮ ಮನಸ್ಸು ಅಲೆದಾಡತೊಡಗಿದರೆ ಆಗೇನು? ಅಧ್ಯಯನ ಮಾಡುವ ಸಮಯದಲ್ಲಿ ತಮ್ಮ ಏಕಾಗ್ರತೆಯನ್ನು ಹೆಚ್ಚಿಸಲಿಕ್ಕಾಗಿ, ಶುರುಶುರುವಿನಲ್ಲಿ ಅಧ್ಯಯನದ ಚಿಕ್ಕ ಚಿಕ್ಕ ಅವಧಿಗಳಿದ್ದು, ಅನಂತರ ಕ್ರಮೇಣ ಈ ಅವಧಿಗಳನ್ನು ಹೆಚ್ಚಿಸುವುದು ಸಹಾಯಮಾಡುತ್ತದೆಂದು ಅನೇಕರು ಕಂಡುಕೊಂಡಿದ್ದಾರೆ. ನಮ್ಮ ಗುರಿಯು, ಅಧ್ಯಯನ ಮಾಡುವುದರಲ್ಲಿ ಸಾಕಷ್ಟು ಸಮಯವನ್ನು ಕಳೆಯುವುದೇ ಹೊರತು, ಅದನ್ನು ಅವಸರದಲ್ಲಿ ಹೇಗಾದರೂ ಮಾಡಿ ಮುಗಿಸುವುದು ಆಗಿರಬಾರದು. ಚರ್ಚಿಸಲ್ಪಡುತ್ತಿರುವ ವಿಷಯದಲ್ಲಿ ನಾವು ತೀವ್ರಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮತ್ತು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಒದಗಿಸುವ ಅಪಾರವಾದ ವಿಷಯವಸ್ತುವನ್ನು ಉಪಯೋಗಿಸುತ್ತಾ ನಾವು ಹೆಚ್ಚಿನ ಸಂಶೋಧನೆಯನ್ನು ಮಾಡಬಲ್ಲೆವು. ‘ದೇವರ ಅಗಾಧವಾದ ವಿಷಯಗಳೊಳಗೆ’ ಇಣಿಕಿನೋಡುವುದು ಅತ್ಯಮೂಲ್ಯವಾದದ್ದಾಗಿದೆ. (1 ಕೊರಿಂಥ 2:10) ಹಾಗೆ ಮಾಡುವುದು ನಮ್ಮ ದೇವಜ್ಞಾನವನ್ನು ವರ್ಧಿಸುವುದು ಮತ್ತು ನಮ್ಮ ಜ್ಞಾನೇಂದ್ರಿಯಗಳನ್ನು ವಿಕಸಿಸಲು ಶಕ್ತರನ್ನಾಗಿ ಮಾಡುವುದು. (ಇಬ್ರಿಯ 5:14) ನಾವು ದೇವರ ವಾಕ್ಯದ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿರುವಲ್ಲಿ ನಾವು ಕೂಡ ‘ಇತರರಿಗೆ ಕಲಿಸಲು ಯೋಗ್ಯವಾಗಿ ಅರ್ಹರಾಗುವೆವು.’​—2 ತಿಮೊಥೆಯ 2:​2, NW.

20. ಯೆಹೋವ ದೇವರೊಂದಿಗೆ ನಾವು ಹೇಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿ, ಕಾಪಾಡಿಕೊಳ್ಳಬಲ್ಲೆವು?

20 ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ವೈಯಕ್ತಿಕ ಅಧ್ಯಯನದಲ್ಲಿ ತೊಡಗುವುದು, ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದರಲ್ಲಿ ಮತ್ತು ಅದನ್ನು ಕಾಪಾಡಿಕೊಳ್ಳುವುದರಲ್ಲಿ ಬಹಳಷ್ಟು ಸಹಾಯಮಾಡುತ್ತದೆ. “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ” ಎಂದು ದೇವರಿಗೆ ಹೇಳಿದ ಕೀರ್ತನೆಗಾರನ ವಿಷಯದಲ್ಲಿ ಅದು ಸತ್ಯವಾಗಿತ್ತೆಂದು ತೋರುತ್ತದೆ. (ಕೀರ್ತನೆ 119:97) ಹೀಗಿರುವುದರಿಂದ, ನಾವು ಕೂಟಗಳಿಗೆ, ಸಮ್ಮೇಳನಗಳಿಗೆ ಮತ್ತು ಅಧಿವೇಶನಗಳಿಗೆ ಕ್ರಮವಾಗಿ ಹಾಜರಾಗಲು ಸರ್ವ ಪ್ರಯತ್ನವನ್ನೂ ಮಾಡೋಣ. ಮತ್ತು ಬೈಬಲ್‌ ಅಧ್ಯಯನ ಹಾಗೂ ಮನನಕ್ಕಾಗಿ ಸಮಯವನ್ನು ಕೊಂಡುಕೊಳ್ಳೋಣ. ಈ ರೀತಿಯಲ್ಲಿ ದೇವರ ವಾಕ್ಯಕ್ಕೆ ‘ಸಾಮಾನ್ಯಕ್ಕಿಂತಲೂ ಹೆಚ್ಚಿನ ಲಕ್ಷ್ಯವನ್ನು’ ಕೊಟ್ಟದ್ದಕ್ಕಾಗಿ ನಾವು ಹೇರಳವಾಗಿ ಬಹುಮಾನಿಸಲ್ಪಡುವೆವು.

[ಪಾದಟಿಪ್ಪಣಿ]

^ ಪ್ಯಾರ. 7 ಇಬ್ರಿಯರಿಗೆ ಸಾ.ಶ. 61ರಲ್ಲಿ ಆ ಪತ್ರವು ಬರೆಯಲ್ಪಟ್ಟಿರಬಹುದು. ಹಾಗಿರುವಲ್ಲಿ, ಕೇವಲ ಸುಮಾರು ಐದು ವರ್ಷಗಳ ನಂತರ ಸೆಸ್ಟಿಯಸ್‌ ಗ್ಯಾಲಸ್‌ನ ಪಾಳೆಯ ಬಿಟ್ಟಿದ್ದ ಸೈನ್ಯಗಳಿಂದ ಯೆರೂಸಲೇಮು ಸುತ್ತುವರಿಯಲ್ಪಟ್ಟಿತ್ತು. ಬೇಗನೆ ಆ ಸೈನ್ಯಗಳು ಹೊರಟುಹೋದವು, ಮತ್ತು ಇದು ಎಚ್ಚರದಿಂದಿದ್ದ ಕ್ರೈಸ್ತರಿಗೆ ಓಡಿಹೋಗಲು ಅವಕಾಶವನ್ನು ಕೊಟ್ಟಿತು. ತದನಂತರ ನಾಲ್ಕು ವರ್ಷಗಳ ಬಳಿಕ, ಆ ನಗರವು ಜನರಲ್‌ ಟೈಟಸ್‌ನ ನೇತೃತ್ವದ ಕೆಳಗೆ ರೋಮನ್‌ ಸೈನ್ಯಗಳಿಂದ ನಾಶಗೊಳಿಸಲ್ಪಟ್ಟಿತು.

ನಿಮಗೆ ನೆನಪಿದೆಯೊ?

• ಕೆಲವು ಇಬ್ರಿಯ ಕ್ರೈಸ್ತರು ಸತ್ಯ ನಂಬಿಕೆಯಿಂದ ಏಕೆ ದೂರ ತೇಲಿಹೋಗುತ್ತಿದ್ದರು?

• ಕ್ರೈಸ್ತ ಕೂಟಗಳಲ್ಲಿ ನಾವು ಹೇಗೆ ಲಕ್ಷ್ಯಕೊಡುವವರಾಗಿ ಇರಬಲ್ಲೆವು?

• ವೈಯಕ್ತಿಕ ಬೈಬಲ್‌ ಅಧ್ಯಯನ ಮತ್ತು ಮನನದಿಂದ ಪ್ರಯೋಜನಹೊಂದಲು ನಮಗೆ ಯಾವುದು ಸಹಾಯಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

[ಪುಟ 11ರಲ್ಲಿರುವ ಚಿತ್ರ]

ಇಬ್ರಿಯ ಕ್ರೈಸ್ತರು ಯೆರೂಸಲೇಮಿನ ಸನ್ನಿಹಿತ ನಾಶನದ ಕುರಿತು ಎಚ್ಚರದಿಂದಿರಬೇಕಿತ್ತು

[ಪುಟ 13ರಲ್ಲಿರುವ ಚಿತ್ರ]

ಕ್ರೈಸ್ತ ಕೂಟಗಳಿಂದ ಪ್ರಯೋಜನ ಪಡೆಯುವಂತೆ ಹೆತ್ತವರು ಮಕ್ಕಳಿಗೆ ಸಹಾಯಮಾಡಬಲ್ಲರು