ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸೆಪ್ಟೂಅಜಂಟ್‌” ಗತಕಾಲದಲ್ಲೂ ಈಗಲೂ ಉಪಯುಕ್ತ

“ಸೆಪ್ಟೂಅಜಂಟ್‌” ಗತಕಾಲದಲ್ಲೂ ಈಗಲೂ ಉಪಯುಕ್ತ

“ಸೆಪ್ಟೂಅಜಂಟ್‌” ಗತಕಾಲದಲ್ಲೂ ಈಗಲೂ ಉಪಯುಕ್ತ

ಇಥಿಯೋಪಿಯದವನಾಗಿದ್ದ ವರ್ಚಸ್ಸುಳ್ಳ ಒಬ್ಬ ವ್ಯಕ್ತಿಯು ಯೆರೂಸಲೇಮಿನಿಂದ ತನ್ನ ಮನೆಯತ್ತ ಪ್ರಯಾಣ ಮಾಡುತ್ತಾ ಇದ್ದನು. ತನ್ನ ರಥದಲ್ಲಿ ಪ್ರಯಾಣಿಸುತ್ತಿದ್ದಾಗ, ಅವನು ಒಂದು ಧಾರ್ಮಿಕ ಸುರುಳಿಯಿಂದ ಗಟ್ಟಿಯಾಗಿ ಓದುತ್ತಾ ಇದ್ದನು. ಅದರಲ್ಲಿದ್ದ ಮಾತುಗಳ ವಿಷಯದಲ್ಲಿ ಅವನಿಗೆ ಸಿಕ್ಕಿದ ವಿವರಣೆಯು ಅವನ ಮೇಲೆ ಎಂಥ ಪ್ರಭಾವವನ್ನು ಬೀರಿತೆಂದರೆ, ಆ ಸಮಯದಿಂದ ಅವನ ಜೀವನವೇ ಬದಲಾಗಿಬಿಟ್ಟಿತು. (ಅ. ಕೃತ್ಯಗಳು 8:​26-38) ಆ ವ್ಯಕ್ತಿಯು, ಗ್ರೀಕ್‌ ಸೆಪ್ಟೂಅಜಂಟ್‌ನಿಂದ, ಅಂದರೆ ಬೈಬಲಿನ ಮೊತ್ತಮೊದಲ ತರ್ಜುಮೆಯಿಂದ ಯೆಶಾಯ 53:​7, 8ನ್ನು ಓದುತ್ತಿದ್ದನು. ಈ ಕೃತಿಯು ಶತಮಾನಗಳಾದ್ಯಂತ ಬೈಬಲಿನ ಸಂದೇಶವನ್ನು ಹಬ್ಬಿಸುವುದರಲ್ಲಿ ಎಷ್ಟೊಂದು ಪ್ರಾಮುಖ್ಯವಾದ ಪಾತ್ರವನ್ನು ವಹಿಸಿತೆಂದರೆ, ಜಗತ್ತನ್ನೇ ಬದಲಾಯಿಸಿದ ಬೈಬಲ್‌ ತರ್ಜುಮೆ ಎಂದು ಅದನ್ನು ಕರೆಯಲಾಗುತ್ತದೆ.

ಸೆಪ್ಟೂಅಜಂಟ್‌ ಅನ್ನು ಯಾವಾಗ ಮತ್ತು ಯಾವ ಪರಿಸ್ಥಿತಿಗಳಲ್ಲಿ ತಯಾರಿಸಲಾಯಿತು? ಈ ತರ್ಜುಮೆಯ ಅಗತ್ಯವೇನಿತ್ತು? ಶತಮಾನಗಳಾದ್ಯಂತ ಅದು ಹೇಗೆ ಉಪಯುಕ್ತವಾಗಿ ಪರಿಣಮಿಸಿದೆ? ಸೆಪ್ಟೂಅಜಂಟ್‌ನಿಂದ ನಾವು ಕಲಿಯುವಂಥದ್ದೇನಾದರೂ ಇರುವಲ್ಲಿ, ಅದೇನು?

ಗ್ರೀಕ್‌ ಭಾಷೆಯನ್ನಾಡುವ ಯೆಹೂದ್ಯರಿಗಾಗಿ ತಯಾರಿಸಲ್ಪಟ್ಟದ್ದು

ಸಾ.ಶ.ಪೂ. 332ರಲ್ಲಿ ಮಹಾ ಅಲೆಕ್ಸಾಂಡರನು, ತೂರ್‌ ಎಂಬ ಫಿನೀಷಿಯದ ನಗರವನ್ನು ನಾಶಮಾಡಿ ಐಗುಪ್ತದೊಳಗೆ ದಂಡೆತ್ತಿ ಬಂದಾಗ ಅವನನ್ನು ಒಬ್ಬ ವಿಮೋಚಕನಾಗಿ ಸ್ವಾಗತಿಸಲಾಯಿತು. ಅಲ್ಲಿ ಅವನು ಅಲೆಕ್ಸಾಂಡ್ರಿಯ ಎಂಬ ನಗರವನ್ನು ಸ್ಥಾಪಿಸಿದನು. ಇದು ಪ್ರಾಚೀನ ಜಗತ್ತಿನ ಶಿಕ್ಷಣಾ ಕೇಂದ್ರವಾಗಿತ್ತು. ತಾನು ಸ್ವಾಧೀನಪಡಿಸಿಕೊಂಡಂಥ ದೇಶಗಳಲ್ಲಿರುವ ಜನರ ನಡುವೆ ಗ್ರೀಕ್‌ ಸಂಸ್ಕೃತಿಯನ್ನು ಹಬ್ಬಿಸಲು ಆಶಿಸುತ್ತಾ, ಆಲೆಕ್ಸಾಂಡರನು ಸಾಮಾನ್ಯವಾದ ಗ್ರೀಕ್‌ (ಕಾಯ್ನೆ) ಭಾಷೆಯನ್ನು ತನ್ನ ವಿಸ್ತಾರವಾದ ಸಾಮ್ರಾಜ್ಯದಾದ್ಯಂತ ಪರಿಚಯಿಸಿದನು.

ಸಾ.ಶ.ಪೂ. ಮೂರನೆಯ ಶತಮಾನದಲ್ಲಿ ಅಲೆಕ್ಸಾಂಡ್ರಿಯದಲ್ಲಿ, ಯೆಹೂದ್ಯರ ಜನಸಂಖ್ಯೆಯು ಬಹುದೊಡ್ಡದ್ದಾಗಿತ್ತು. ಬಾಬೆಲಿನಲ್ಲಿನ ಬಂಧಿವಾಸದ ನಂತರ ಪ್ಯಾಲೆಸ್ಟೈನಿನ ಹೊರಗಿರುವ ವಸಾಹತುಗಳಲ್ಲಿ ಚದರಿಹೋಗಿದ್ದ ಅನೇಕ ಯೆಹೂದ್ಯರು ಅಲೆಕ್ಸಾಂಡ್ರಿಯಕ್ಕೆ ವಲಸೆಹೋದರು. ಈ ಯೆಹೂದ್ಯರಿಗೆ ಹೀಬ್ರು ಭಾಷೆ ಎಷ್ಟು ತಿಳಿದಿತ್ತು? ಮೆಕ್ಲಿಂಟಕ್‌ ಮತ್ತು ಸ್ಟ್ರಾಂಗ್‌ರವರ ಸೈಕ್ಲಪೀಡೀಯ ತಿಳಿಸಿದ್ದು: “ಬಾಬೆಲಿನಲ್ಲಿನ ಬಂಧಿವಾಸದಿಂದ ಹಿಂದಿರುಗಿದ ಯೆಹೂದ್ಯರು, ಪ್ರಾಚೀನ ಹೀಬ್ರು ಭಾಷೆಯ ಬಗ್ಗೆ ಚಿರಪರಿಚಿತವಾಗಿದ್ದ ಜ್ಞಾನವನ್ನು ಬಹಳಷ್ಟು ಪ್ರಮಾಣದಲ್ಲಿ ಕಳೆದುಕೊಂಡಿರಲಾಗಿ, ಪ್ಯಾಲೆಸ್ಟೈನ್‌ನಲ್ಲಿದ್ದ ಸಭಾಮಂದಿರಗಳಲ್ಲಿ ಮೋಶೆಯ ಪುಸ್ತಕಗಳನ್ನು ಕಸ್ದೀಯರ ಭಾಷೆಯಲ್ಲಿ ಅವರಿಗೆ ವಿವರಿಸಲಾಗುತ್ತಿತ್ತೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ . . . ಅಲೆಕ್ಸಾಂಡ್ರಿಯದ ಯೆಹೂದ್ಯರಿಗಂತೂ ಹೀಬ್ರು ಭಾಷೆಯ ಇನ್ನೂ ಕಡಿಮೆ ಜ್ಞಾನವಿದ್ದಿರಬಹುದು; ಅವರಿಗೆ ಪರಿಚಿತವಾಗಿದ್ದ ಭಾಷೆಯು ಅಲೆಕ್ಸಾಂಡ್ರಿಯದ ಗ್ರೀಕ್‌ ಆಗಿತ್ತು.” ಹೀಬ್ರು ಶಾಸ್ತ್ರಗಳನ್ನು ಗ್ರೀಕ್‌ ಭಾಷೆಗೆ ತರ್ಜುಮೆಮಾಡುವುದಕ್ಕಾಗಿ ಅಲೆಕ್ಸಾಂಡ್ರಿಯದ ಸನ್ನಿವೇಶವು ಸೂಕ್ತವಾಗಿತ್ತೆಂಬುದು ವ್ಯಕ್ತ.

ಹೀಬ್ರು ಧರ್ಮಶಾಸ್ತ್ರದ ಒಂದು ಭಾಷಾಂತರವು, ಟಾಲೆಮಿ ಫಿಲಡೆಲ್ಫಸ್‌ನ ಆಳ್ವಿಕೆಯ ಸಮಯದಲ್ಲಿ (ಸಾ.ಶ.ಪೂ. 285-246) ಗ್ರೀಕ್‌ ಭಾಷೆಗೆ ಪೂರ್ಣವಾಗಿ ಭಾಷಾಂತರಿಸಲ್ಪಟ್ಟಿತೆಂದು ಸಾ.ಶ.ಪೂ. ಎರಡನೆಯ ಶತಮಾನದಲ್ಲಿ ಜೀವಿಸುತ್ತಿದ್ದ ಅರಿಸ್ಟಾಬ್ಯೂಲಸ್‌ ಎಂಬ ಯೆಹೂದಿಯು ಬರೆದನು. “ಧರ್ಮಶಾಸ್ತ್ರ” ಎಂದು ಹೇಳಿದಾಗ ಅರಿಸ್ಟಾಬ್ಯೂಲಸ್‌ನ ಅರ್ಥವೇನಾಗಿತ್ತು ಎಂಬುದರ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಅವನು ಕೇವಲ ಪೆಂಟಟ್ಯೂಕ್‌ಗೆ ಸೂಚಿಸುತ್ತಿದ್ದನೆಂದು ಕೆಲವರು ನೆನಸುವಾಗ, ಹಾಗೆ ಬರೆಯುವಾಗ ಅವನ ಮನಸ್ಸಿನಲ್ಲಿ ಇಡೀ ಹೀಬ್ರು ಶಾಸ್ತ್ರಗಳಿದ್ದವೆಂದು ಇನ್ನಿತರರು ಹೇಳುತ್ತಾರೆ.

ಏನೇ ಆಗಿರಲಿ, ಸುಮಾರು 72 ಮಂದಿ ಯೆಹೂದಿ ವಿದ್ವಾಂಸರು, ಹೀಬ್ರು ಭಾಷೆಯಿಂದ ಗ್ರೀಕ್‌ ಭಾಷೆಗೆ ಮಾಡಲ್ಪಟ್ಟ ಶಾಸ್ತ್ರಗಳ ಪ್ರಪ್ರಥಮ ಲಿಖಿತ ತರ್ಜುಮೆಯಲ್ಲಿ ಒಳಗೂಡಿದ್ದರೆಂಬ ಪರಂಪರೆ ಇದೆ. ಸಮಯಾನಂತರ, 70 ಎಂಬ ಪೂರ್ಣ ಸಂಖ್ಯೆಯ ಉಪಯೋಗವು ಆರಂಭವಾಯಿತು. ಹೀಗಿರುವುದರಿಂದ ಆ ತರ್ಜುಮೆಯನ್ನು ಸೆಪ್ಟೂಅಜಂಟ್‌ ಎಂದು ಕರೆಯಲಾಯಿತು. ಅದರ ಅರ್ಥ “70” ಎಂದಾಗಿದೆ. ಮತ್ತು ಅದಕ್ಕೆ LXX, ಅಂದರೆ 70ರ ಸಂಖ್ಯೆಗಾಗಿರುವ ರೋಮನ್‌ ಸಂಖ್ಯೆಯನ್ನು ಕೊಡಲಾಗಿದೆ. ಸಾ.ಶ.ಪೂ. ಎರಡನೆಯ ಶತಮಾನದ ಅಂತ್ಯದೊಳಗೆ, ಹೀಬ್ರು ಶಾಸ್ತ್ರಗಳ ಎಲ್ಲ ಪುಸ್ತಕಗಳನ್ನು ಗ್ರೀಕ್‌ ಭಾಷೆಯಲ್ಲಿ ಓದಸಾಧ್ಯವಿತ್ತು. ಹೀಗೆ, ಸೆಪ್ಟೂಅಜಂಟ್‌ ಎಂಬ ಹೆಸರು, ಗ್ರೀಕ್‌ ಭಾಷೆಗೆ ತರ್ಜುಮೆಯಾಗಿರುವ ಇಡೀ ಹೀಬ್ರು ಶಾಸ್ತ್ರಗಳಿಗೆ ಸೂಚಿಸಲಾರಂಭಿಸಿತು.

ಪ್ರಥಮ ಶತಮಾನದಲ್ಲಿ ಉಪಯುಕ್ತ

ಸೆಪ್ಟೂಅಜಂಟ್‌ ಅನ್ನು ಯೇಸು ಕ್ರಿಸ್ತನ ಮತ್ತು ಅವನ ಅಪೊಸ್ತಲರ ಸಮಯದಲ್ಲಿ ಮತ್ತು ಅದಕ್ಕಿಂತಲೂ ಮುಂಚೆ, ಗ್ರೀಕ್‌ ಭಾಷೆಯನ್ನಾಡುವ ಯೆಹೂದ್ಯರು ಬಳಸುತ್ತಿದ್ದರು. ಸಾ.ಶ. 33ನೆಯ ಪಂಚಾಶತ್ತಮದಂದು ಒಟ್ಟುಗೂಡಿಸಲ್ಪಟ್ಟಿದ್ದ ಯೆಹೂದ್ಯರೂ ಯೆಹೂದಿ ಮತಾವಲಂಬಿಗಳೂ ಆಸ್ಯ ಸೀಮೆ, ಐಗುಪ್ತ, ಲಿಬ್ಯ, ರೋಮ್‌ ಮತ್ತು ಕ್ರೇತದವರಾಗಿದ್ದರು. ಈ ಕ್ಷೇತ್ರಗಳಲ್ಲಿ ಜನರು ಗ್ರೀಕ್‌ ಭಾಷೆಯನ್ನಾಡುತ್ತಿದ್ದರು. ನಿಸ್ಸಂದೇಹವಾಗಿ ಅವರು ವಾಡಿಕೆಗನುಸಾರ ಸೆಪ್ಟೂಅಜಂಟ್‌ ಅನ್ನು ಓದುತ್ತಿದ್ದರು. (ಅ. ಕೃತ್ಯಗಳು 2:​9-11) ಹೀಗೆ ಈ ತರ್ಜುಮೆಯು ಪ್ರಥಮ ಶತಮಾನದಲ್ಲಿ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಪ್ರಭಾವಶಾಲಿಯಾಗಿತ್ತು.

ಉದಾಹರಣೆಗಾಗಿ, ಕುರೇನ್ಯ, ಅಲೆಕ್ಸಾಂಡ್ರಿಯ, ಕಿಲಿಕ್ಯ, ಮತ್ತು ಆಸ್ಯದಿಂದ ಬಂದಿದ್ದ ಪುರುಷರೊಂದಿಗೆ ಮಾತಾಡುವಾಗ, ಶಿಷ್ಯನಾದ ಸ್ತೆಫನನು ಹೇಳಿದ್ದು: “ಯೋಸೇಫನು ತನ್ನ ತಂದೆಯಾದ ಯಾಕೋಬನನ್ನೂ ತನ್ನ ಎಲ್ಲಾ ಬಂಧುಬಳಗವನ್ನೂ ಒಟ್ಟಿಗೆ ಎಪ್ಪತ್ತೈದು ಮಂದಿಯನ್ನು [ಕಾನಾನಿನಿಂದ] ಕರೆಯಿಸಿಕೊಳ್ಳಲಾಗಿ ಯಾಕೋಬನು ಐಗುಪ್ತದೇಶಕ್ಕೆ ಇಳಿದುಹೋದನು.” (ಅ. ಕೃತ್ಯಗಳು 6:8-10; 7:12-14) ಆದಿಕಾಂಡ ಅಧ್ಯಾಯ 46ರಲ್ಲಿರುವ ಹೀಬ್ರು ಗ್ರಂಥಪಾಠವು, ಯೋಸೇಫನ ಸಂಬಂಧಿಕರ ಸಂಖ್ಯೆಯನ್ನು ಎಪ್ಪತ್ತು ಎಂದು ಹೇಳುತ್ತದೆ. ಆದರೆ ಸೆಪ್ಟೂಅಜಂಟ್‌ ಇಲ್ಲಿ ಎಪ್ಪತ್ತೈದು ಎಂಬ ಸಂಖ್ಯೆಯನ್ನು ಉಪಯೋಗಿಸುತ್ತದೆ. ಸ್ತೆಫನನು ಸೆಪ್ಟೂಅಜಂಟ್‌ನಿಂದ ಉಲ್ಲೇಖಿಸಿದನೆಂಬುದು ಇದರಿಂದ ಸುವ್ಯಕ್ತವಾಗುತ್ತದೆ.​—ಆದಿಕಾಂಡ 46:​20, 26, 27.

ಅಪೊಸ್ತಲ ಪೌಲನು ತನ್ನ ಎರಡನೆಯ ಹಾಗೂ ಮೂರನೆಯ ಮಿಷನೆರಿ ಯಾತ್ರೆಗಳಲ್ಲಿ ಆಸ್ಯ ಮೈನರ್‌ ಮತ್ತು ಗ್ರೀಸ್‌ನಾದ್ಯಂತ ಪ್ರಯಾಣಿಸಿದಾಗ, ಅವನು ದೇವರಿಗೆ ಭಯಪಟ್ಟ ಅನೇಕ ಅನ್ಯಜನಾಂಗಗಳವರಿಗೆ ಮತ್ತು ‘ದೇವಭಕ್ತರಾದ ಗ್ರೀಕರಿಗೂ’ ಸಾರಿದನು. (ಅ. ಕೃತ್ಯಗಳು 13:​16, 26; 17:4) ಈ ಜನರು ದೇವರಿಗೆ ಭಯಪಡಲು ಇಲ್ಲವೆ ಆತನನ್ನು ಆರಾಧಿಸಲು ಆರಂಭಿಸಿದ್ದರು ಏಕೆಂದರೆ ಅವರು ಸೆಪ್ಟೂಅಜಂಟ್‌ನಿಂದ ಆತನ ಬಗ್ಗೆ ಸ್ವಲ್ಪ ಜ್ಞಾನವನ್ನು ಪಡೆದಿದ್ದರು. ಗ್ರೀಕ್‌ ಭಾಷೆಯನ್ನಾಡುತ್ತಿದ್ದ ಈ ಜನರಿಗೆ ಸಾರುವಾಗ ಪೌಲನು ಆ ತರ್ಜುಮೆಯಿಂದ ಅನೇಕವೇಳೆ ಉಲ್ಲೇಖಿಸಿದನು ಇಲ್ಲವೆ ಕೆಲವೊಂದು ಭಾಗಗಳ ಸಾರಾಂಶವನ್ನು ತಿಳಿಸಿದನು.​—ಆದಿಕಾಂಡ 22:18; ಗಲಾತ್ಯ 3:8.

ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಹೀಬ್ರು ಶಾಸ್ತ್ರಗಳಿಂದ ಸುಮಾರು 320 ನೇರವಾದ ಉಲ್ಲೇಖಗಳು ಮತ್ತು ಪ್ರಾಯಶಃ ಒಟ್ಟಿನಲ್ಲಿ 890 ಉಲ್ಲೇಖಗಳು ಮತ್ತು ರೆಫರೆನ್ಸ್‌ಗಳು ಇವೆ. ಇವುಗಳಲ್ಲಿ ಹೆಚ್ಚಿನವು ಸೆಪ್ಟೂಅಜಂಟ್‌ನ ಮೇಲಾಧರಿತವಾಗಿವೆ. ಫಲಿತಾಂಶವಾಗಿ, ಹೀಬ್ರು ಹಸ್ತಪ್ರತಿಗಳಿಂದಲ್ಲ ಬದಲಾಗಿ ಆ ತರ್ಜುಮೆಯಿಂದ ತೆಗೆಯಲ್ಪಟ್ಟ ಉಲ್ಲೇಖಗಳು, ಪ್ರೇರಿತ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಭಾಗವಾದವು. ಇದೆಷ್ಟು ಮಹತ್ವಪೂರ್ಣ ವಾಸ್ತವಾಂಶವಾಗಿತ್ತು! ರಾಜ್ಯದ ಸುವಾರ್ತೆಯು ಇಡೀ ಲೋಕದಲ್ಲಿ ಸಾರಲ್ಪಡುವುದೆಂದು ಯೇಸು ಮುಂತಿಳಿಸಿದ್ದನು. (ಮತ್ತಾಯ 24:14) ಇದನ್ನು ಸಾಧಿಸಲಿಕ್ಕಾಗಿ, ಯೆಹೋವನು ತನ್ನ ಪ್ರೇರಿತ ವಾಕ್ಯವು ಲೋಕವ್ಯಾಪಕವಾಗಿ ಜನರು ಓದುವಂಥ ವಿವಿಧ ಭಾಷೆಗಳಿಗೆ ತರ್ಜುಮೆಯಾಗುವಂತೆ ಅನುಮತಿಸುವನು.

ಇಂದು ಉಪಯುಕ್ತ

ಸೆಪ್ಟೂಅಜಂಟ್‌ ಇಂದೂ ಅಮೂಲ್ಯವಾಗಿದೆ ಮತ್ತು ಇದರ ನಂತರದ ಸಮಯಗಳಲ್ಲಿ ನಕಲುಮಾಡಲ್ಪಟ್ಟಿರುವ ಹೀಬ್ರು ಹಸ್ತಪ್ರತಿಗಳಲ್ಲಿ ನುಸುಳಿಕೊಂಡಿರುವ ನಕಲುಗಾರರ ತಪ್ಪುಗಳನ್ನು ಬಯಲುಪಡಿಸುವುದರಲ್ಲಿ ಸಹಾಯಮಾಡಲು ಉಪಯೋಗಿಸಲಾಗುತ್ತದೆ. ಉದಾಹರಣೆಗಾಗಿ ಆದಿಕಾಂಡ 4:8ರಲ್ಲಿರುವ ವೃತ್ತಾಂತವು ಹೀಗೆ ಓದುತ್ತದೆ: “ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ​—ಅಡವಿಗೆ ಹೋಗೋಣ ಬಾ ಎಂದನು. ಅಡವಿಗೆ ಬಂದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.”

“ಅಡವಿಗೆ ಹೋಗೋಣ ಬಾ” ಎಂಬ ವಾಕ್ಯಖಂಡವು, ಸಾ.ಶ. ಹತ್ತನೆಯ ಶತಮಾನದಂದಿನ ಹೀಬ್ರು ಹಸ್ತಪ್ರತಿಗಳಲ್ಲಿ ಕಂಡುಬರುವುದಿಲ್ಲ. ಆದರೆ ಇದಕ್ಕಿಂತಲೂ ಹಳೆಯ ಸೆಪ್ಟೂಅಜಂಟ್‌ ಹಸ್ತಪ್ರತಿಗಳಲ್ಲಿ ಮತ್ತು ಆರಂಭದ ಇತರ ಕೆಲವೊಂದು ಕೃತಿಗಳಲ್ಲಿ ಆ ವಾಕ್ಯಖಂಡವು ಇದೆ. ಆ ಹೀಬ್ರು ಹಸ್ತಪ್ರತಿಗಳಲ್ಲಿ, ಸಾಮಾನ್ಯವಾಗಿ ಮಾತುಕತೆಯನ್ನು ಪರಿಚಯಿಸಲು ಉಪಯೋಗಿಸಲ್ಪಡುವ ಪದವಿದೆ, ಆದರೆ ಮುಂದೆ ಕಾಯಿನನಿಂದ ನುಡಿಯಲ್ಪಟ್ಟ ಯಾವುದೇ ಮಾತುಗಳಿಲ್ಲ. ಹೀಗೇಕೆ ಸಂಭವಿಸಿರಬಹುದು? ಆದಿಕಾಂಡ 4:8ರಲ್ಲಿ ಒಂದರ ನಂತರ ಒಂದು ಬರುವಂಥ ಎರಡೂ ವಾಕ್ಯಖಂಡಗಳ ಅಂತ್ಯದಲ್ಲಿ, “ಅಡವಿಗೆ” ಎಂಬದಕ್ಕಾಗಿರುವ ಒಂದೇ ರೀತಿಯ ಪದವು ಬರುತ್ತದೆ. ಆದುದರಿಂದ ಮೆಕ್ಲಿಂಟಕ್‌ ಮತ್ತು ಸ್ಟ್ರಾಂಗ್‌ರವರ ಸೈಕ್ಲಪೀಡೀಯ ಹೀಗೆ ಸೂಚಿಸುತ್ತದೆ: “ಹೀಬ್ರು ಭಾಷೆಯ ನಕಲುಗಾರನ ಕಣ್ಣು, ಎರಡೂ ವಾಕ್ಯಖಂಡಗಳನ್ನು ಅಂತ್ಯಗೊಳಿಸುತ್ತಿದ್ದ [ಒಂದೇ] ಪದದಿಂದ ಮೋಸಹೋಗಿರಬಹುದು.” ಹೀಗಿರುವುದರಿಂದ ಆ ನಕಲುಗಾರನಿಗೆ, “ಅಡವಿಗೆ” ಎಂಬ ಪದದೊಂದಿಗೆ ಅಂತ್ಯಗೊಳ್ಳುವ ಮೊದಲನೆಯ ವಾಕ್ಯಖಂಡವು ಕಣ್ತಪ್ಪಿ ಹೋಗಿರಬಹುದು. ಸ್ಪಷ್ಟವಾಗಿ ಸೆಪ್ಟೂಅಜಂಟ್‌ ಹಾಗೂ ಅಸ್ತಿತ್ವದಲ್ಲಿರುವ ಇತರ ಹಳೆಯ ಹಸ್ತಪ್ರತಿಗಳು, ಹೀಬ್ರು ಗ್ರಂಥಪಾಠದ ನಂತರದ ನಕಲುಪ್ರತಿಗಳಲ್ಲಾಗಿರುವ ತಪ್ಪುಗಳನ್ನು ಕಂಡುಹಿಡಿಯುವುದರಲ್ಲಿ ಉಪಯುಕ್ತವಾಗಿರಬಲ್ಲವು.

ಇನ್ನೊಂದು ಬದಿಯಲ್ಲಿ, ಸೆಪ್ಟೂಅಜಂಟ್‌ನ ನಕಲುಪ್ರತಿಗಳಲ್ಲೂ ತಪ್ಪುಗಳಿರಬಲ್ಲವು, ಮತ್ತು ಈ ಗ್ರೀಕ್‌ ಪ್ರತಿಗಳನ್ನು ತಿದ್ದಲಿಕ್ಕಾಗಿ ಕೆಲವೊಮ್ಮೆ ಹೀಬ್ರು ಗ್ರಂಥಪಾಠವನ್ನು ನೋಡಲಾಗುತ್ತದೆ. ಹೀಗೆ, ಹೀಬ್ರು ಹಸ್ತಪ್ರತಿಗಳನ್ನು ಗ್ರೀಕ್‌ ಹಾಗೂ ಇತರ ಭಾಷೆಯ ತರ್ಜುಮೆಗಳೊಂದಿಗೆ ಹೋಲಿಸುವುದು, ತರ್ಜುಮೆಯಲ್ಲಾಗಿರುವ ತಪ್ಪುಗಳು ಮತ್ತು ನಕಲುಗಾರರ ತಪ್ಪುಗಳನ್ನು ಕಂಡುಹಿಡಿಯುವುದನ್ನು ಸಾಧ್ಯಗೊಳಿಸಿ, ದೇವರ ವಾಕ್ಯದ ನಿಷ್ಕೃಷ್ಟವಾದ ತರ್ಜುಮೆ ನಮಗೆ ಸಿಗುವಂಥ ಆಶ್ವಾಸನೆಯನ್ನು ಕೊಡುತ್ತದೆ.

ಇಂದು ಅಸ್ತಿತ್ವದಲ್ಲಿರುವ ಸೆಪ್ಟೂಅಜಂಟ್‌ನ ಸಂಪೂರ್ಣ ಪ್ರತಿಗಳು, ಸಾ.ಶ. ನಾಲ್ಕನೆಯ ಶತಮಾನದಷ್ಟು ಹಿಂದಿನದ್ದಾಗಿವೆ. ಅಂಥ ಹಸ್ತಪ್ರತಿಗಳು ಮತ್ತು ನಂತರದ ಪ್ರತಿಗಳಲ್ಲಿ, ಟೆಟ್ರಗ್ರಾಮಟಾನ್‌ (YHWH)ನಿಂದ ಹೀಬ್ರುವಿನಲ್ಲಿ ಪ್ರತಿನಿಧಿಸಲ್ಪಟ್ಟಿರುವ ಯೆಹೋವ ಎಂಬ ದೈವಿಕ ನಾಮವಿಲ್ಲ. ಹೀಬ್ರು ಗ್ರಂಥಪಾಠದಲ್ಲಿ ಎಲ್ಲೆಲ್ಲಿ ಟೆಟ್ರಗ್ರಾಮಟಾನ್‌ ಕಂಡುಬರುತ್ತಿತ್ತೊ, ಅಲ್ಲೆಲ್ಲ ಈ ಪ್ರತಿಗಳು “ದೇವರು” ಮತ್ತು “ಕರ್ತನು” ಎಂಬದರ ಗ್ರೀಕ್‌ ಪದಗಳನ್ನು ಬದಲಿಯಾಗಿರಿಸಿವೆ. ಆದರೆ ಸುಮಾರು 50 ವರ್ಷಗಳ ಹಿಂದೆ ಪ್ಯಾಲೆಸ್ಟೈನ್‌ನಲ್ಲಾದ ಒಂದು ಕಂಡುಹಿಡಿತವು ಈ ವಿಷಯದ ಮೇಲೆ ಬೆಳಕನ್ನು ಬೀರಿತು. ಮೃತ ಸಮುದ್ರದ ಪಶ್ಚಿಮ ತೀರದ ಹತ್ತಿರದಲ್ಲಿದ್ದ ಗುಹೆಗಳನ್ನು ಶೋಧಿಸುತ್ತಿದ್ದ ಒಂದು ತಂಡವು, ಗ್ರೀಕ್‌ ಭಾಷೆಯಲ್ಲಿ ಬರೆಯಲ್ಪಟ್ಟಿರುವ 12 ಪ್ರವಾದಿಗಳ ಪುಸ್ತಕಗಳುಳ್ಳ (ಹೋಶೇಯನಿಂದ ಮಲಾಕಿಯ ವರೆಗೆ) ಪ್ರಾಚೀನಕಾಲದ ಒಂದು ಚರ್ಮದ ಸುರುಳಿಯ ಚೂರುಪಾರುಗಳನ್ನು ಕಂಡುಕೊಂಡಿತು. ಈ ಬರಹಗಳು, ಸಾ.ಶ.ಪೂ. 50ರಿಂದ ಸಾ.ಶ. 50ರ ನಡುವಿನ ಸಮಯದ್ದಾಗಿದ್ದವು. ಈ ಅವಶಿಷ್ಠಭಾಗಗಳಲ್ಲಿ, ಟೆಟ್ರಗ್ರಾಮಟಾನ್‌ನ ಸ್ಥಾನದಲ್ಲಿ “ದೇವರು” ಮತ್ತು “ಕರ್ತನು” ಎಂಬದಕ್ಕಾಗಿರುವ ಗ್ರೀಕ್‌ ಪದಗಳು ಬದಲಿಯಾಗಿ ಹಾಕಲ್ಪಟ್ಟಿರಲಿಲ್ಲ. ಹೀಗೆ, ಆರಂಭದ ಸೆಪ್ಟೂಅಜಂಟ್‌ನ ತರ್ಜುಮೆಯಲ್ಲಿ ದೈವಿಕ ನಾಮವು ಬಳಸಲ್ಪಟ್ಟಿತ್ತೆಂಬ ಸಂಗತಿಯು ದೃಢೀಕರಿಸಲ್ಪಟ್ಟಿತು.

ಇಸವಿ 1971ರಲ್ಲಿ, ಪ್ರಾಚೀನಕಾಲದ ಪಪೈರಸ್‌ ಸುರುಳಿಯ ಅವಶಿಷ್ಠಭಾಗಗಳನ್ನು (ಫೂಆಡ್‌ 266 ಪಪೈರಿ) ಬಹಿರಂಗಗೊಳಿಸಲಾಯಿತು. ಸಾ.ಶ.ಪೂ. ಎರಡನೆಯ ಇಲ್ಲವೆ ಮೊದಲನೆಯ ಶತಮಾನದ್ದಾಗಿದ್ದ ಸೆಪ್ಟೂಅಜಂಟ್‌ನ ಈ ಭಾಗಗಳು ಏನನ್ನು ಪ್ರಕಟಪಡಿಸಿದವು? ಅವುಗಳಲ್ಲೂ ದೈವಿಕ ನಾಮವು ಕಾದಿರಿಸಲ್ಪಟ್ಟಿತ್ತು. ಸೆಪ್ಟೂಅಜಂಟ್‌ನ ಈ ಆರಂಭದ ಅವಶಿಷ್ಟ ಭಾಗಗಳು, ಯೇಸು ಮತ್ತು ಅವನ ಪ್ರಥಮ ಶತಮಾನದ ಶಿಷ್ಯರಿಗೆ ದೇವರ ನಾಮ ತಿಳಿದಿತ್ತು ಮತ್ತು ಅವರದನ್ನು ಬಳಸಿದರೆಂಬದಕ್ಕೆ ಬಲವಾದ ರುಜುವಾತನ್ನು ಕೊಡುತ್ತವೆ.

ಇಂದು, ಬೈಬಲು ಇತಿಹಾಸದಲ್ಲೇ ಅತಿ ವ್ಯಾಪಕವಾಗಿ ತರ್ಜುಮೆಗೊಳಿಸಲ್ಪಟ್ಟಿರುವ ಪುಸ್ತಕವಾಗಿದೆ. ಮಾನವ ಕುಟುಂಬದಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚಿನವರಿಗೆ ಕಡಿಮೆಪಕ್ಷ ಅದರ ಒಂದು ಭಾಗವು ತಮ್ಮ ಸ್ವಂತ ಭಾಷೆಯಲ್ಲಿ ಲಭ್ಯವಿದೆ. ನಾವು ವಿಶೇಷವಾಗಿ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಎಂಬ ಆಧುನಿಕ ಭಾಷೆಯ ನಿಷ್ಕೃಷ್ಟವಾದ ತರ್ಜುಮೆಗಾಗಿ ಅಭಾರಿಗಳಾಗಿದ್ದೇವೆ. ಅದು ಈಗ ಸಂಪೂರ್ಣವಾಗಿ ಇಲ್ಲವೆ ಭಾಗಶಃ 40ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ​—ರೆಫರೆನ್ಸಸ್‌ಗಳೊಂದಿಗೆ ಬೈಬಲ್‌ನಲ್ಲಿ ಸೆಪ್ಟೂಅಜಂಟ್‌ಗೆ ಮತ್ತು ಇನ್ನಿತರ ಪ್ರಾಚೀನ ಹಸ್ತಪ್ರತಿಗಳಿಗೆ ಸೂಚಿಸುವ ನೂರಾರು ಪಾದಟಿಪ್ಪಣಿ ರೆಫರೆನ್ಸಸ್‌ಗಳಿವೆ. ಹೌದು, ಸೆಪ್ಟೂಅಜಂಟ್‌ ನಮ್ಮೀ ದಿನಗಳ ವರೆಗೂ ಬೈಬಲ್‌ ವಿದ್ಯಾರ್ಥಿಗಳಿಗೆ ಆಸಕ್ತಿಕರವಾದ ಮತ್ತು ಅಮೂಲ್ಯವಾದ ತರ್ಜುಮೆಯಾಗಿ ಉಳಿದಿದೆ.

[ಪುಟ 26ರಲ್ಲಿರುವ ಚಿತ್ರ]

ಶಿಷ್ಯನಾದ ಫಿಲಿಪ್ಪನು “ಸೆಪ್ಟೂಅಜಂಟ್‌”ನಿಂದ ಓದಲ್ಪಟ್ಟಂಥ ಒಂದು ಭಾಗವನ್ನು ವಿವರಿಸಿದನು

[ಪುಟ 29ರಲ್ಲಿರುವ ಚಿತ್ರಗಳು]

ಅಪೊಸ್ತಲ ಪೌಲನು ಹೆಚ್ಚಾಗಿ “ಸೆಪ್ಟೂಅಜಂಟ್‌”ನಿಂದ ಉಲ್ಲೇಖಿಸಿದನು