ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂತ್ಯವು ಸಮೀಪಿಸುತ್ತಿರುವಾಗ ವಿಧೇಯತೆಯನ್ನು ಬೆಳೆಸಿಕೊಳ್ಳಿರಿ

ಅಂತ್ಯವು ಸಮೀಪಿಸುತ್ತಿರುವಾಗ ವಿಧೇಯತೆಯನ್ನು ಬೆಳೆಸಿಕೊಳ್ಳಿರಿ

ಅಂತ್ಯವು ಸಮೀಪಿಸುತ್ತಿರುವಾಗ ವಿಧೇಯತೆಯನ್ನು ಬೆಳೆಸಿಕೊಳ್ಳಿರಿ

“[ಶಿಲೋವಿಗೆ] ಅನ್ಯಜನಗಳೂ ವಿಧೇಯರಾಗಿರುವರು.”​—ಆದಿಕಾಂಡ 49:10.

1. (ಎ) ಹಿಂದಿನ ಕಾಲಗಳಲ್ಲಿ ಯೆಹೋವನಿಗೆ ತೋರಿಸುವ ವಿಧೇಯತೆಯಲ್ಲಿ ಹೆಚ್ಚಾಗಿ ಏನು ಒಳಗೂಡಿತ್ತು? (ಬಿ) ವಿಧೇಯತೆಯ ಕುರಿತು ಯಾಕೋಬನು ಯಾವ ಪ್ರವಾದನೆಯನ್ನು ಮಾಡಿದನು?

ಯೆಹೋವನಿಗೆ ವಿಧೇಯತೆ ತೋರಿಸುವುದರಲ್ಲಿ ಅನೇಕವೇಳೆ ಆತನ ಪ್ರತಿನಿಧಿಗಳಿಗೆ ವಿಧೇಯತೆಯನ್ನು ತೋರಿಸುವುದು ಒಳಗೂಡಿರುತ್ತಿತ್ತು. ಈ ಪ್ರತಿನಿಧಿಗಳಲ್ಲಿ ದೇವದೂತರು, ಮೂಲಪಿತೃಗಳು, ನ್ಯಾಯಸ್ಥಾಪಕರು, ಯಾಜಕರು, ಪ್ರವಾದಿಗಳು ಮತ್ತು ಅರಸರು ಸೇರಿದ್ದರು. ಇಸ್ರಾಯೇಲಿನ ಅರಸರ ಸಿಂಹಾಸನವು ಯೆಹೋವನ ಸಿಂಹಾಸನವೆಂದೂ ಕರೆಯಲ್ಪಡುತ್ತಿತ್ತು. (1 ಪೂರ್ವಕಾಲವೃತ್ತಾಂತ 29:23) ಆದರೆ ದುಃಖಕರವಾಗಿ, ಇಸ್ರಾಯೇಲನ್ನು ಆಳಿದ ಅನೇಕ ಪ್ರಭುಗಳು ದೇವರಿಗೆ ಅವಿಧೇಯತೆಯನ್ನು ತೋರಿಸಿದರು. ಇದರಿಂದಾಗಿ ಅವರು ತಮಗೂ ತಮ್ಮ ಪ್ರಜೆಗಳಿಗೂ ವಿಪತ್ತುಗಳನ್ನು ತಂದೊಡ್ಡಿದರು. ಆದರೆ ಯೆಹೋವನು ತನ್ನ ನಿಷ್ಠಾವಂತರನ್ನು ನಿರೀಕ್ಷಾಹೀನರಾಗಿ ಬಿಟ್ಟುಬಿಡಲಿಲ್ಲ; ಯಾರಿಗೆ ವಿಧೇಯರಾಗಲು ನೀತಿವಂತರು ಹರ್ಷಿಸುವರೊ ಅಂತಹ ಒಬ್ಬ ಶಾಶ್ವತ ಅರಸನನ್ನು ತಾನು ಪ್ರತಿಷ್ಠಾಪಿಸುವೆನೆಂಬ ವಾಗ್ದಾನದಿಂದ ಆತನು ಅವರನ್ನು ಸಂತೈಸಿದನು. (ಯೆಶಾಯ 9:​6, 7) ಮರಣಶಯ್ಯೆಯಲ್ಲಿದ್ದ ಮೂಲಪಿತ ಯಾಕೋಬನು ಆ ಭಾವೀ ಅರಸನ ಕುರಿತು ಹೀಗೆ ಪ್ರವಾದಿಸಿದನು: “ರಾಜದಂಡವನ್ನು ಹಿಡಿಯತಕ್ಕವನು [“ಶಿಲೋವನು,” NW] ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ, ಮುದ್ರೆಕೋಲು ಅವನ ಪಾದಗಳ ಬಳಿಯಿಂದ ಕದಲುವದಿಲ್ಲ; ಅವನಿಗೆ ಅನ್ಯಜನಗಳೂ ವಿಧೇಯರಾಗಿರುವರು.”​—ಆದಿಕಾಂಡ 49:10.

2. “ಶಿಲೋವ” ಎಂಬುದರ ಅರ್ಥವೇನು, ಮತ್ತು ಅವನ ರಾಜವೈಭವದ ಆಳಿಕೆಯು ಯಾವುದನ್ನು ಆವರಿಸುವುದು?

2 “ಶಿಲೋವ” ಎಂಬ ಹೀಬ್ರು ಪದದ ಅರ್ಥವು “ಅದು ಯಾರದ್ದೊ ಅವನು,” ಅಥವಾ “ಅದು ಯಾರಿಗೆ ಸೇರಿದೆಯೊ ಅವನು” ಎಂದಾಗಿದೆ. ಹೌದು, ರಾಜದಂಡದಿಂದ ಸೂಚಿಸಲ್ಪಟ್ಟಿರುವಂತೆ ಆಳ್ವಿಕೆಯ ಪೂರ್ಣ ಹಕ್ಕನ್ನು ಮತ್ತು ಮುದ್ರೆಕೋಲಿನಿಂದ ಪ್ರತಿನಿಧಿಸಲ್ಪಟ್ಟಿರುವಂತೆ, ಆಜ್ಞಾಪಿಸುವ ಅಧಿಕಾರವನ್ನು ಶಿಲೋವನು ಪಡೆಯುವನು. ಇದಲ್ಲದೆ, ಅವನ ರಾಜವೈಭವದ ಆಳಿಕೆಯು ಯಾಕೋಬನ ವಂಶಸ್ಥರನ್ನು ಮಾತ್ರವಲ್ಲ, ಎಲ್ಲಾ “ಅನ್ಯಜನ”ರನ್ನೂ ಆವರಿಸುವುದು. ಇದು ಯೆಹೋವನು ಅಬ್ರಹಾಮನಿಗೆ ಕೊಟ್ಟ ಈ ವಾಗ್ದಾನಕ್ಕೆ ಹೊಂದಿಕೆಯಲ್ಲಿದೆ: “ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು . . . ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:​17, 18) ಯೆಹೋವನು ಈ “ಸಂತತಿಯ” ಗುರುತನ್ನು, ನಜರೇತಿನ ಯೇಸುವನ್ನು ಸಾ.ಶ. 29ರಲ್ಲಿ ಪವಿತ್ರಾತ್ಮದಿಂದ ಅಭಿಷೇಕಿಸಿದಾಗ ಸ್ಥಿರಪಡಿಸಿದನು.​—ಲೂಕ 3:21-23, 34; ಗಲಾತ್ಯ 3:16.

ಯೇಸುವಿನ ಪ್ರಥಮ ರಾಜ್ಯ

3. ಯೇಸು ಪರಲೋಕಕ್ಕೇರಿಹೋದಾಗ ಯಾವ ಆಳಿಕೆಯನ್ನು ಪಡೆದನು?

3 ಯೇಸು ಪರಲೋಕಕ್ಕೇರಿಹೋದಾಗ, ಅವನು ಒಡನೆ ಲೋಕದ ಜನರನ್ನಾಳಲು ರಾಜದಂಡವನ್ನು ಹಿಡಿಯಲಿಲ್ಲ. (ಕೀರ್ತನೆ 110:1) ಆದರೂ, ವಿಧೇಯತೆಯನ್ನು ತೋರಿಸುವಂಥ ಪ್ರಜೆಗಳಿದ್ದ ಒಂದು “ರಾಜ್ಯ”ವು ಅವನಿಗೆ ಕೊಡಲ್ಪಟ್ಟಿತು. ಆ ರಾಜ್ಯವು ಯಾವುದಾಗಿತ್ತೆಂಬುದನ್ನು ಅಪೊಸ್ತಲ ಪೌಲನು ಹೀಗೆ ಬರೆದಾಗ ಗುರುತಿಸಿದನು: “ದೇವರು ನಮ್ಮನ್ನು [ಆತ್ಮಾಭಿಷಿಕ್ತ ಕ್ರೈಸ್ತರನ್ನು] ಅಂಧಕಾರದ ಧೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು.” (ಓರೆ ಅಕ್ಷರಗಳು ನಮ್ಮವು.) (ಕೊಲೊಸ್ಸೆ 1:13) ಈ ಬಿಡುಗಡೆಯು ಸಾ.ಶ. 33ರ ಪಂಚಾಶತ್ತಮದಲ್ಲಿ, ಯೇಸುವಿನ ನಂಬಿಗಸ್ತ ಹಿಂಬಾಲಕರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಾಗ ಆರಂಭಗೊಂಡಿತು.​—ಅ. ಕೃತ್ಯಗಳು 2:1-4; 1 ಪೇತ್ರ 2:9.

4. ಯೇಸುವಿನ ಆದಿ ಶಿಷ್ಯರು ಯಾವ ವಿಧಗಳಲ್ಲಿ ತಮ್ಮ ವಿಧೇಯತೆಯನ್ನು ಪ್ರದರ್ಶಿಸಿದರು, ಮತ್ತು ಯೇಸು ಅವರನ್ನು ಒಂದು ಗುಂಪಾಗಿ ಹೇಗೆ ಗುರುತಿಸಿದನು?

4 “ಕ್ರಿಸ್ತನ ರಾಯಭಾರಿ”ಗಳೋಪಾದಿ ಆತ್ಮಾಭಿಷಿಕ್ತ ಶಿಷ್ಯರು, ಆ ಆತ್ಮಿಕ ರಾಜ್ಯದಲ್ಲಿ ‘ಒಂದೇ ಸಂಸ್ಥಾನದವರು’ ಆಗಿ ಪರಿಣಮಿಸಲಿದ್ದವರನ್ನು ವಿಧೇಯತೆಯಿಂದ ಒಟ್ಟುಗೂಡಿಸಲು ಆರಂಭಿಸಿದರು. (2 ಕೊರಿಂಥ 5:20; ಎಫೆಸ 2:19; ಅ. ಕೃತ್ಯಗಳು 1:8) ಅಲ್ಲದೆ, ಅರಸನಾದ ಯೇಸು ಕ್ರಿಸ್ತನ ಒಪ್ಪಿಗೆಯನ್ನು ಪಡೆಯಲು ಅವರು, “ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದ” ಇರಬೇಕಾಗಿತ್ತು. (1 ಕೊರಿಂಥ 1:10) ಒಂದು ಗುಂಪಾಗಿ ಅವರು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಅಥವಾ ನಂಬಿಗಸ್ತ ಮನೆವಾರ್ತೆಯವರ ವರ್ಗವಾಗಿ ಏರ್ಪಡಿಸಲ್ಪಟ್ಟರು.​—ಮತ್ತಾಯ 24:45; ಲೂಕ 12:42.

ದೇವರ ‘ಮನೆವಾರ್ತೆಯವನಿಗೆ’ ವಿಧೇಯರಾದುದಕ್ಕಾಗಿ ಆಶೀರ್ವದಿಸಲ್ಪಟ್ಟವರು

5. ಪುರಾತನ ಕಾಲಗಳಿಂದಲೂ ಯೆಹೋವನು ತನ್ನ ಜನರಿಗೆ ಹೇಗೆ ಬೋಧಿಸಿರುತ್ತಾನೆ?

5 ಯೆಹೋವನು ತನ್ನ ಜನರಿಗೆ ಯಾವಾಗಲೂ ಬೋಧಕರನ್ನು ಒದಗಿಸಿರುತ್ತಾನೆ. ಉದಾಹರಣೆಗೆ, ಯೆಹೂದ್ಯರು ಬಾಬೆಲಿನಿಂದ ಹಿಂದಿರುಗಿ ಬಂದ ನಂತರ, ಎಜ್ರನೂ ಇತರ ಅನೇಕ ಮಂದಿ ಅರ್ಹ ಪುರುಷರೂ ದೇವರ ಧರ್ಮಶಾಸ್ತ್ರವನ್ನು ಜನರಿಗೆ ಓದಿ ತಿಳಿಸಿದ್ದು ಮಾತ್ರವಲ್ಲ, ‘ಜನರು ಗ್ರಹಿಸುವಂತೆ’ ದೇವರ ವಾಕ್ಯದ ‘ತಾತ್ಪರ್ಯವನ್ನೂ ವಿವರಿಸಿದರು.’​—ನೆಹೆಮೀಯ 8:8.

6, 7. ಆಳು ವರ್ಗವು ತನ್ನ ಆಡಳಿತ ಮಂಡಲಿಯ ಮೂಲಕ ಸಮಯೋಚಿತವಾದ ಆತ್ಮಿಕ ಆಹಾರವನ್ನು ಹೇಗೆ ಒದಗಿಸಿದೆ, ಮತ್ತು ಈ ಆಳು ವರ್ಗಕ್ಕೆ ಅಧೀನತೆ ತೋರಿಸುವುದು ಏಕೆ ಯೋಗ್ಯವಾಗಿದೆ?

6 ಒಂದನೆಯ ಶತಮಾನದಲ್ಲಿ, ಸಾ.ಶ. 49ರಲ್ಲಿ ಸುನ್ನತಿಯ ವಿವಾದವು ಎದ್ದಾಗ, ಆ ಆದಿ ಆಳು ವರ್ಗದ ಆಡಳಿತ ಮಂಡಲಿಯು ಈ ವಿಷಯವನ್ನು ಪ್ರಾರ್ಥನಾಪೂರ್ವಕವಾಗಿ ಚರ್ಚಿಸಿ, ಒಂದು ಶಾಸ್ತ್ರಾಧಾರಿತ ತೀರ್ಮಾನಕ್ಕೆ ಬಂದಿತು. ಆ ತೀರ್ಮಾನವನ್ನು ಅವರು ಆ ಬಳಿಕ ಪತ್ರದ ಮೂಲಕ ಪ್ರಕಟಿಸಿದಾಗ, ಕೊಡಲ್ಪಟ್ಟ ಆ ನಿರ್ದೇಶನಕ್ಕೆ ಸಭೆಗಳು ವಿಧೇಯತೆ ತೋರಿಸಿದ ಕಾರಣ ಅವು ದೇವರ ಹೇರಳವಾದ ಆಶೀರ್ವಾದವನ್ನು ಅನುಭವಿಸಿದವು. (ಅ. ಕೃತ್ಯಗಳು 15:6-15, 22-29; 16:4, 5) ಅದೇ ರೀತಿಯಲ್ಲಿ, ಈ ಆಧುನಿಕ ಸಮಯಗಳಲ್ಲಿ ನಂಬಿಗಸ್ತ ಆಳು ತನ್ನ ಆಡಳಿತ ಮಂಡಲಿಯ ಮುಖಾಂತರ, ಕ್ರೈಸ್ತ ತಾಟಸ್ಥ್ಯ, ರಕ್ತದ ಪಾವಿತ್ರ್ಯ, ಅಮಲೌಷಧ ಮತ್ತು ಹೊಗೆಸೊಪ್ಪಿನ ಉಪಯೋಗದಂತಹ ಪ್ರಾಮುಖ್ಯ ವಿಷಯಗಳನ್ನು ಸ್ಪಷ್ಟೀಕರಿಸಿದೆ. (ಯೆಶಾಯ 2:4; ಅ. ಕೃತ್ಯಗಳು 21:25; 2 ಕೊರಿಂಥ 7:1) ತನ್ನ ವಾಕ್ಯ ಮತ್ತು ನಂಬಿಗಸ್ತ ಆಳಿಗೆ ವಿಧೇಯತೆ ತೋರಿಸಿದ ತನ್ನ ಜನರನ್ನು ಯೆಹೋವನು ಆಶೀರ್ವದಿಸಿದನು.

7 ಈ ಆಳು ವರ್ಗಕ್ಕೆ ಅಧೀನತೆಯನ್ನು ತೋರಿಸುವ ಮೂಲಕ, ದೇವಜನರು ಯಜಮಾನನಾದ ಯೇಸು ಕ್ರಿಸ್ತನಿಗೂ ತಮ್ಮ ಅಧೀನತೆಯನ್ನು ತೋರಿಸುತ್ತಾರೆ. ಇಂತಹ ಅಧೀನತೆಯು ಆಧುನಿಕ ದಿನಗಳಲ್ಲಿ ಇನ್ನೂ ಹೆಚ್ಚು ಮಹತ್ವವನ್ನು ಪಡೆದಿದೆ. ಏಕೆಂದರೆ ಯಾಕೋಬನ ಮರಣಶಯ್ಯೆಯ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಿರುವಂತೆ, ಯೇಸುವಿನ ಅಧಿಕಾರವು ವಿಸ್ತಾರವಾಗಿ ಹೆಚ್ಚಿದೆ.

ಶಿಲೋವನು ಭೂಮಿಯ ಹಕ್ಕುಳ್ಳ ಪ್ರಭುವಾಗುತ್ತಾನೆ

8. ಕ್ರಿಸ್ತನ ಅಧಿಕಾರವು ಹೇಗೆ ಮತ್ತು ಯಾವಾಗ ವಿಸ್ತಾರಗೊಂಡಿತು?

8 ಯಾಕೋಬನ ಪ್ರವಾದನೆಯು, ಶಿಲೋವನಿಗೆ “ಅನ್ಯಜನಗಳೂ ವಿಧೇಯರಾಗಿರುವರು” ಎಂಬುದನ್ನು ಮುಂತಿಳಿಸಿತು. ಹಾಗಾದರೆ ಕ್ರಿಸ್ತನ ಆಳಿಕೆಯು ಆತ್ಮಿಕ ಇಸ್ರಾಯೇಲನ್ನು ಮೀರಿ ಹರಡಿಕೊಳ್ಳುವುದೆಂಬುದು ಸ್ಪಷ್ಟ. ಅಂದರೆ ಅದು ಯಾವುದನ್ನು ಆವರಿಸುವುದು? ಪ್ರಕಟನೆ 11:15 ಉತ್ತರ ಕೊಡುವುದು: “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು.” (ಓರೆ ಅಕ್ಷರಗಳು ನಮ್ಮವು.) ಯೇಸು ಆ ಅಧಿಕಾರವನ್ನು 1914ರಲ್ಲಿ, ಪ್ರವಾದನಾತ್ಮಕವಾದ “ಏಳು ವರುಷ [“ಕಾಲಗಳು,” NW]”ದ ನಂತರ, ಅಂದರೆ “ಅನ್ಯದೇಶದವರ ಸಮಯಗಳ” ಅಂತ್ಯದಲ್ಲಿ ಪಡೆದನೆಂದು ಬೈಬಲು ತಿಳಿಯಪಡಿಸುತ್ತದೆ. * (ದಾನಿಯೇಲ 4:16, 17; ಲೂಕ 21:24) ಆ ವರುಷದಲ್ಲಿ, ಮೆಸ್ಸೀಯ ರಾಜನೋಪಾದಿ ಕ್ರಿಸ್ತನ ಅದೃಶ್ಯ “ಸಾನ್ನಿಧ್ಯ”ವೂ ಅವನ “ವೈರಿಗಳ ಮಧ್ಯದಲ್ಲಿ ದೊರೆತನ”ಮಾಡುವ ಸಮಯವೂ ಆರಂಭಗೊಂಡಿತು.​—ಮತ್ತಾಯ 24:​3, NW; ಕೀರ್ತನೆ 110:2.

9. ಯೇಸುವಿಗೆ ತನ್ನ ರಾಜ್ಯವು ದೊರೆತಾಗ ಅವನೇನು ಮಾಡಿದನು, ಮತ್ತು ಇದರಿಂದಾಗಿ ಮಾನವಕುಲದ ಮೇಲೆ, ವಿಶೇಷವಾಗಿ ಅವನ ಶಿಷ್ಯರ ಮೇಲೆ ಯಾವ ಪರೋಕ್ಷ ಪರಿಣಾಮವಾಯಿತು?

9 ಯೇಸು ರಾಜ್ಯಾಧಿಕಾರವನ್ನು ಪಡೆದ ಮೇಲೆ, ಅವನ ಪ್ರಥಮ ಕಾರ್ಯವು ಅವಿಧೇಯತೆಯ ಸಾಕಾರರೂಪವೇ ಆಗಿರುವ ಸೈತಾನನನ್ನು ಅವನ ದೆವ್ವಗಳೊಂದಿಗೆ ‘ಭೂಮಿಗೆ ದೊಬ್ಬುವುದೇ’ ಆಗಿತ್ತು. ಅಂದಿನಿಂದ, ಈ ದುಷ್ಟಾತ್ಮಗಳು ಯೆಹೋವನಿಗೆ ವಿಧೇಯರಾಗಿರುವುದನ್ನು ಕಷ್ಟಕರವಾಗಿ ಮಾಡುವ ಒಂದು ಪರಿಸರವನ್ನು ಉಂಟುಮಾಡಿರುವುದು ಮಾತ್ರವಲ್ಲ, ಮಾನವಕುಲಕ್ಕಾಗಿ ಅಭೂತಪೂರ್ವವಾದ ವಿಪತ್ತನ್ನೂ ಉಂಟುಮಾಡಿವೆ. (ಪ್ರಕಟನೆ 12:7-12; 2 ತಿಮೊಥೆಯ 3:1-5) ವಾಸ್ತವದಲ್ಲಿ, ಸೈತಾನನ ಆತ್ಮಿಕ ಹೋರಾಟದ ಮುಖ್ಯ ಗುರಿಹಲಗೆಯಾಗಿರುವವರಲ್ಲಿ, “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವವರಾದ ಯೆಹೋವನ ಅಭಿಷಿಕ್ತರು ಮತ್ತು “ಬೇರೆ ಕುರಿ”ಗಳಾಗಿರುವ ಅವರ ಸಂಗಾತಿಗಳು ಸೇರಿದ್ದಾರೆ.​—ಪ್ರಕಟನೆ 12:17; ಯೋಹಾನ 10:16.

10. ಯಾವ ಬೈಬಲ್‌ ಪ್ರವಾದನೆಗಳ ನೆರವೇರಿಕೆಯು, ಸತ್ಯ ಕ್ರೈಸ್ತರ ಮೇಲೆ ನಡೆಯುತ್ತಿರುವ ಸೈತಾನನ ಯುದ್ಧವು ನಿಷ್ಫಲವಾಗುವುದರ ಖಾತ್ರಿಯನ್ನು ಕೊಡುತ್ತದೆ?

10 ಆದರೂ, ಸೈತಾನನು ನಿಷ್ಫಲನಾಗುವುದೇನೊ ಖಂಡಿತ. ಏಕೆಂದರೆ, ಇದು “ಕರ್ತನ ದಿನ” ಆಗಿದೆ ಮತ್ತು ‘ಜಯಿಸುವುದರಿಂದ’ ಯೇಸುವನ್ನು ಯಾವುದೂ ತಡೆದುಹಿಡಿಯಲಾರದು. (ಪ್ರಕಟನೆ 1:10; 6:2) ಉದಾಹರಣೆಗೆ, ಅವನು 1,44,000 ಮಂದಿ ಆತ್ಮಿಕ ಇಸ್ರಾಯೇಲ್ಯರ ಮೇಲೆ ಅಂತಿಮ ಮುದ್ರೆ ಒತ್ತುವಿಕೆಯು ಖಂಡಿತವಾಗಿ ನಡೆಯುವಂತೆ ನೋಡಿಕೊಳ್ಳುವನು. ಅವನು, ‘ಯಾರಿಂದಲೂ ಎಣಿಸಲಾಗದಂಥ . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿರುವ ಮಹಾ ಸಮೂಹವನ್ನೂ’ ಸಂರಕ್ಷಿಸುವನು. (ಪ್ರಕಟನೆ 7:1-4, 9, 14-16) ಆದರೆ ಇವರು, ಅಭಿಷಿಕ್ತರಾದ ತಮ್ಮ ಸಂಗಾತಿಗಳಿಗೆ ಅಸದೃಶವಾಗಿ ಯೇಸುವಿನ ವಿಧೇಯ ಭೂಪ್ರಜೆಗಳಾಗುವರು. (ದಾನಿಯೇಲ 7:​13, 14) ಅವರು ಈಗಾಗಲೇ ಭೂಮಿಯ ಮೇಲೆ ತೋರಿಬಂದಿರುವ ವಿಷಯವೇ, ಶಿಲೋವನು ನಿಜವಾಗಿಯೂ “ಲೋಕದ ರಾಜ್ಯ”ವನ್ನು ಆಳುತ್ತಿದ್ದಾನೆ ಎಂಬುದಕ್ಕೆ ದೃಶ್ಯಗೋಚರವಾದ ರುಜುವಾತಾಗಿದೆ.​—ಪ್ರಕಟನೆ 11:15.

‘ಸುವಾರ್ತೆಗೆ ವಿಧೇಯರಾಗುವ’ ಸಮಯ ಇದೇ

11, 12. (ಎ) ಈಗಿನ ವಿಷಯಗಳ ವ್ಯವಸ್ಥೆಯನ್ನು ಯಾರು ಮಾತ್ರ ಪಾರಾಗುವರು? (ಬಿ) “ಪ್ರಾಪಂಚಿಕ ಆತ್ಮವನ್ನು” ಮೈಗೂಡಿಸಿಕೊಳ್ಳುವವರಲ್ಲಿ ಯಾವ ವ್ಯಕ್ತಿತ್ವ ಲಕ್ಷಣಗಳು ಬೆಳೆಯುತ್ತವೆ?

11 ನಿತ್ಯಜೀವವನ್ನು ಬಯಸುವವರೆಲ್ಲರೂ ವಿಧೇಯತೆಯನ್ನು ಕಲಿಯಲೇಬೇಕು, ಏಕೆಂದರೆ ‘ದೇವರನ್ನರಿಯದವರೂ ನಮ್ಮ ಕರ್ತನಾದ ಯೇಸುವಿನ ಸುವಾರ್ತೆಗೆ ವಿಧೇಯರಾಗದವರೂ’ ದೇವರ ಮುಯ್ಯಿತೀರಿಸುವ ದಿನದಲ್ಲಿ ಪಾರಾಗರು ಎಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. (2 ಥೆಸಲೊನೀಕ 1:​8, NW) ಆದರೂ, ಇಂದಿನ ದುಷ್ಟ ಪರಿಸರ ಹಾಗೂ ಬೈಬಲ್‌ ನಿಯಮ ಮತ್ತು ಮೂಲತತ್ತ್ವಗಳಿಗೆ ವಿರುದ್ಧವಾಗಿ ಅಸ್ತಿತ್ವದಲ್ಲಿರುವ ಅದರ ದಂಗೆಯ ಮನೋಭಾವವು ಸುವಾರ್ತೆಗೆ ವಿಧೇಯರಾಗುವುದನ್ನು ಕಷ್ಟಕರವಾಗಿ ಮಾಡುತ್ತದೆ.

12 ಬೈಬಲು ಈ ದೇವಧಿಕ್ಕಾರ ಮನೋಭಾವವನ್ನು “ಪ್ರಾಪಂಚಿಕ ಆತ್ಮ”ವೆಂದು ಹೇಳಿ ವರ್ಣಿಸುತ್ತದೆ. (1 ಕೊರಿಂಥ 2:12) ಜನರ ಮೇಲೆ ಅದು ಬೀರುವ ಪರಿಣಾಮವನ್ನು ವಿವರಿಸುತ್ತಾ, ಅಪೊಸ್ತಲ ಪೌಲನು ಒಂದನೆಯ ಶತಮಾನದ ಎಫೆಸದ ಕ್ರೈಸ್ತರಿಗೆ ಹೀಗೆ ಬರೆದನು: “ನೀವು ಪೂರ್ವದಲ್ಲಿ ಅಪರಾಧಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿಗೆ, ಅಂದರೆ ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮನಿಗೆ ಅನುಸಾರವಾಗಿ ನಡೆದುಕೊಂಡಿರಿ. ನಾವೆಲ್ಲರೂ ಪೂರ್ವದಲ್ಲಿ ಅವಿಧೇಯರಾಗಿದ್ದು ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವಸಿದ್ಧವಾಗಿ ದೇವರ ಕೋಪಕ್ಕೆ ಗುರಿಯಾಗಿದ್ದೆವು.”​—ಎಫೆಸ 2:2, 3.

13. ಕ್ರೈಸ್ತರು ಪ್ರಾಪಂಚಿಕ ಆತ್ಮವನ್ನು ಪರಿಣಾಮಕಾರಿಯಾಗಿ ಹೇಗೆ ತಡೆಯಬಲ್ಲರು, ಮತ್ತು ಇದರಿಂದ ಬರುವ ಪ್ರಯೋಜನಕರವಾದ ಫಲಿತಾಂಶಗಳಾವುವು?

13 ಸಂತೋಷದ ವಿಷಯವೇನಂದರೆ, ಎಫೆಸದ ಆ ಕ್ರೈಸ್ತರು ಆ ಅವಿಧೇಯತೆಯ ಮನೋಭಾವಕ್ಕೆ ಗುಲಾಮರಾಗಿಯೇ ಉಳಿಯಲಿಲ್ಲ. ಬದಲಿಗೆ, ದೇವರ ಆತ್ಮಕ್ಕೆ ಅಧೀನರಾಗುವ ಮೂಲಕ ದೇವರ ವಿಧೇಯ ಮಕ್ಕಳಾಗುತ್ತಾ, ಅದರ ಸಮೃದ್ಧವೂ ಹಿತಕರವೂ ಆದ ಫಲವನ್ನು ಅವರು ಕೊಯ್ದರು. (ಗಲಾತ್ಯ 5:​22, 23) ಅದೇ ರೀತಿಯಲ್ಲಿ ಇಂದು, ಇಡೀ ವಿಶ್ವದಲ್ಲಿಯೇ ಅತಿ ಬಲಾಢ್ಯ ಶಕ್ತಿಯಾದ ದೇವರಾತ್ಮವು, ಲಕ್ಷಾಂತರ ಮಂದಿ ಜನರು ಯೆಹೋವನಿಗೆ ವಿಧೇಯರಾಗುವಂತೆ ಮತ್ತು ಹೀಗೆ ‘ನಿರೀಕ್ಷೆಯನ್ನು ದೃಢ ಮಾಡಿಕೊಂಡು ಕಡೇ ತನಕ’ ಅದನ್ನು ಇಟ್ಟುಕೊಳ್ಳುವಂತೆ ಸಹಾಯಮಾಡುತ್ತಿದೆ.​—ಇಬ್ರಿಯ 6:11; ಜೆಕರ್ಯ 4:6.

14. ಕಡೇ ದಿವಸಗಳಲ್ಲಿ ಜೀವಿಸುವ ಎಲ್ಲಾ ಕ್ರೈಸ್ತರ ವಿಧೇಯತೆಯನ್ನು ಪರೀಕ್ಷಿಸಲಿರುವ ನಿರ್ದಿಷ್ಟ ವಿಷಯಗಳ ಬಗ್ಗೆ ಯೇಸು ಹೇಗೆ ಎಚ್ಚರಿಸಿದನು?

14 ನಮಗೆ ಶಿಲೋವನ ಬಲಾಢ್ಯವಾದ ಬೆಂಬಲವೂ ಇದೆಯೆಂಬುದನ್ನು ಮನಸ್ಸಿನಲ್ಲಿಡಿರಿ. ದೆವ್ವವಾಗಲಿ ಮಾನವನಾಗಲಿ, ಹೀಗೆ ಯಾವನೇ ವೈರಿಯು ನಮ್ಮ ಸಹನೆಗೆ ಮೀರುವ ರೀತಿಯಲ್ಲಿ ನಮ್ಮ ವಿಧೇಯತೆಯನ್ನು ಪರೀಕ್ಷಿಸುವಂತೆ ಶಿಲೋವನೂ ಅವನ ತಂದೆಯೂ ಎಂದಿಗೂ ಬಿಡರು. (1 ಕೊರಿಂಥ 10:13) ವಾಸ್ತವದಲ್ಲಿ, ನಮ್ಮ ಆತ್ಮಿಕ ಯುದ್ಧದಲ್ಲಿ ನಮಗೆ ಸಹಾಯ ನೀಡಲು, ಈ ಕಡೇ ದಿವಸಗಳಲ್ಲಿ ನಾವು ಎದುರಿಸಲಿರುವ ಅನೇಕ ನಿರ್ದಿಷ್ಟ ಸಮಸ್ಯೆಗಳನ್ನು ಯೇಸು ವರ್ಣಿಸಿದನು. ಅವನು ಇದನ್ನು ಅಪೊಸ್ತಲ ಯೋಹಾನನಿಗೆ ಒಂದು ದರ್ಶನದಲ್ಲಿ ಕೊಟ್ಟ ಏಳು ಪತ್ರಗಳ ಮೂಲಕ ವರ್ಣಿಸಿದನು. (ಪ್ರಕಟನೆ 1:​10, 11) ಅವುಗಳಲ್ಲಿ ಆ ಸಮಯದಲ್ಲಿದ್ದ ಕ್ರೈಸ್ತರಿಗೆ ಅತ್ಯಾವಶ್ಯಕ ಸಲಹೆಯಿದ್ದರೂ, ಅವುಗಳ ಮುಖ್ಯ ಅನ್ವಯವು 1914ರಿಂದ ಆರಂಭವಾಗಿರುವ “ಕರ್ತನ ದಿನ”ಕ್ಕೇ ಆಗಿದೆ ಎಂಬುದಂತೂ ನಿಶ್ಚಯ. ಆದುದರಿಂದ, ನಾವು ಈ ಸಂದೇಶಗಳಿಗೆ ಗಮನಕೊಡುವುದು ಅದೆಷ್ಟು ಸಮಂಜಸವಾಗಿದೆ! *

ನಿರಾಸಕ್ತಿ, ಅನೈತಿಕತೆ, ಪ್ರಾಪಂಚಿಕತೆಯಿಂದ ದೂರವಿರಿ

15. ಎಫೆಸದಲ್ಲಿದ್ದ ಸಭೆಯ ಮೇಲೆ ಬಂದೆರಗಿದಂಥ ಸಮಸ್ಯೆಯ ವಿಷಯದಲ್ಲಿ ನಾವೇಕೆ ಎಚ್ಚರಿಕೆಯಿಂದಿರಬೇಕು, ಮತ್ತು ನಾವು ಅದನ್ನು ಹೇಗೆ ಮಾಡಬಹುದು? (2 ಪೇತ್ರ 1:​5-8)

15 ಯೇಸುವಿನ ಮೊದಲನೆಯ ಪತ್ರವು ಎಫೆಸದ ಸಭೆಗೆ ಸಂಬೋಧಿಸಲ್ಪಟ್ಟಿತು. ಆ ಸಭೆಯ ತಾಳ್ಮೆಯನ್ನು ಪ್ರಶಂಸಿಸಿದ ಬಳಿಕ ಯೇಸು ಹೇಳಿದ್ದು: “ಆದರೆ ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟು ಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ.” (ಪ್ರಕಟನೆ 2:1-4) ಈ ದಿನಗಳಲ್ಲೂ, ಒಂದು ಸಮಯದಲ್ಲಿ ಹುರುಪನ್ನು ತೋರಿಸುತ್ತಿದ್ದ ಕೆಲವು ಮಂದಿ ಕ್ರೈಸ್ತರು, ಈ ಹಿಂದೆ ದೇವರ ಮೇಲೆ ಅವರಿಗಿದ್ದ ಆ ತೀವ್ರವಾದ ಪ್ರೀತಿಯನ್ನು ಕಳೆದುಕೊಂಡಿದ್ದಾರೆ. ಇಂತಹ ನಷ್ಟವು ಒಬ್ಬನಿಗೆ ದೇವರೊಂದಿಗಿನ ಸಂಬಂಧವನ್ನು ಶಿಥಿಲಗೊಳಿಸಬಲ್ಲದು. ಆದುದರಿಂದ ಅದಕ್ಕೆ ಅತಿ ಬೇಗನೆ ಗಮನಕೊಡತಕ್ಕದ್ದು. ಅಂತಹ ಪ್ರೀತಿಯನ್ನು ಹೇಗೆ ಪುನಃ ಹೊತ್ತಿಸಬಹುದು? ಕ್ರಮದ ಬೈಬಲ್‌ ಅಧ್ಯಯನ, ಕೂಟಗಳಲ್ಲಿ ಉಪಸ್ಥಿತಿ, ಪ್ರಾರ್ಥನೆ ಮತ್ತು ಧ್ಯಾನದ ಮೂಲಕವೇ. (1 ಯೋಹಾನ 5:3) ಹೌದು, ಇದಕ್ಕೆ “ಪೂರ್ಣಾಸಕ್ತಿ” ಅಗತ್ಯವಾದರೂ ಅದು ನಿಶ್ಚಯವಾಗಿ ಸಾರ್ಥಕವಾಗಿದೆ. (2 ಪೇತ್ರ 1:​5-8) ಪ್ರಾಮಾಣಿಕವಾದ ಸ್ವಪರೀಕ್ಷೆಯು ನಿಮ್ಮ ಪ್ರೀತಿಯು ತಣ್ಣಗಾಗಿದೆ ಎಂಬುದನ್ನು ತೋರಿಸುವಲ್ಲಿ, ಆ ಸ್ಥಿತಿಯನ್ನು ಒಡನೆ ಸರಿಪಡಿಸಿಕೊಳ್ಳಿರಿ. ಇದು ಯೇಸುವಿನ, “ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ದೇವರ ಕಡೆಗೆ ತಿರುಗಿಕೋ. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು” ಎಂಬ ಬುದ್ಧಿಮಾತಿಗೆ ವಿಧೇಯತೆ ತೋರಿಸುವಂತಿರುವುದು.​—ಪ್ರಕಟನೆ 2:5.

16. ಪೆರ್ಗಮ ಮತ್ತು ಥುವತೈರ ಸಭೆಗಳಲ್ಲಿ ಆತ್ಮಿಕವಾಗಿ ಅಪಾಯಕರವಾದ ಯಾವ ಪ್ರಭಾವಗಳಿದ್ದವು, ಮತ್ತು ಅವರಿಗೆ ಯೇಸು ಹೇಳಿದ ಮಾತುಗಳು ಇಂದು ಏಕೆ ತಕ್ಕದ್ದಾಗಿವೆ?

16 ಪೆರ್ಗಮ ಮತ್ತು ಥುವತೈರದಲ್ಲಿದ್ದ ಕ್ರೈಸ್ತರನ್ನು ಅವರ ಸಮಗ್ರತೆ, ತಾಳ್ಮೆ ಮತ್ತು ಹುರುಪಿಗಾಗಿ ಪ್ರಶಂಸಿಸಲಾಯಿತು. (ಪ್ರಕಟನೆ 2:12, 13, 18, 19) ಆದರೂ, ಪುರಾತನ ಇಸ್ರಾಯೇಲಿನಲ್ಲಿ ಲೈಂಗಿಕ ಅನೈತಿಕತೆ ಹಾಗೂ ಬಾಳನ ಆರಾಧನೆಯ ಮೂಲಕ ಜನರ ಮೇಲೆ ಭ್ರಷ್ಟಗೊಳಿಸುವ ಪ್ರಭಾವವನ್ನು ಬೀರಿದ ಬಿಳಾಮ ಮತ್ತು ಈಜೆಬೆಲರ ಮನೋಭಾವವನ್ನು ಪ್ರದರ್ಶಿಸಿದಂಥ ಕೆಲವರು ಈ ಕ್ರೈಸ್ತರ ಮೇಲೆ ಪ್ರಭಾವ ಬೀರುತ್ತಿದ್ದರು. (ಅರಣ್ಯಕಾಂಡ 31:16; 1 ಅರಸುಗಳು 16:30, 31; ಪ್ರಕಟನೆ 2:14, 16, 20-23) ಆದರೆ “ಕರ್ತನ ದಿನ”ವಾದ ನಮ್ಮ ದಿನಗಳ ಕುರಿತಾಗಿ ಏನು? ಅದೇ ರೀತಿಯ ಕೆಟ್ಟ ಪ್ರಭಾವಗಳಿವೆಯೋ? ಹೌದು, ಏಕೆಂದರೆ ದೇವಜನರ ಮಧ್ಯೆ ನಡೆಯುವ ಬಹಿಷ್ಕಾರಗಳ ಕಾರಣಗಳಲ್ಲಿ ಒಂದು ಮುಖ್ಯ ಕಾರಣವು ಅನೈತಿಕತೆಯಾಗಿದೆ. ಆದುದರಿಂದ, ಸಭೆಯ ಒಳಗಾಗಲಿ ಹೊರಗಾಗಲಿ ನಮ್ಮ ಮೇಲೆ ನೈತಿಕವಾಗಿ ಭ್ರಷ್ಟಗೊಳಿಸುವ ಪ್ರಭಾವವನ್ನು ಬೀರುವವರೊಂದಿಗೆ ಸಹವಾಸ ಮಾಡುವುದರಿಂದ ದೂರವಿರುವುದು ಅದೆಷ್ಟು ಪ್ರಾಮುಖ್ಯ! (1 ಕೊರಿಂಥ 5:9-11; 15:33) ಶಿಲೋವನ ವಿಧೇಯ ಪ್ರಜೆಗಳಾಗಿರಲು ಬಯಸುವವರು, ಸಂದೇಹಾಸ್ಪದವಾದ ವಿನೋದಾವಳಿಗಳನ್ನು ಮತ್ತು ಮುದ್ರಿತ ಹಾಗೂ ಇಂಟರ್‌ನೆಟ್‌ ಅಶ್ಲೀಲ ಸಾಹಿತ್ಯಗಳನ್ನು ತ್ಯಜಿಸುವರು.​—ಆಮೋಸ 5:15; ಮತ್ತಾಯ 5:28, 29.

17. ಸಾರ್ದಿಸ್‌ ಮತ್ತು ಲವೊದಿಕೀಯದವರ ದೃಷ್ಟಿಕೋನವೂ ಮನೋಭಾವವೂ, ಅವರ ಆತ್ಮಿಕ ಸ್ಥಿತಿಯ ಕುರಿತಾದ ಯೇಸುವಿನ ದೃಷ್ಟಿಕೋನದಿಂದ ಹೇಗೆ ಭಿನ್ನವಾಗಿತ್ತು?

17 ಕೆಲವು ವ್ಯಕ್ತಿಗಳನ್ನು ಬಿಟ್ಟರೆ, ಸಾರ್ದಿಸಿನಲ್ಲಿದ್ದ ಸಭೆಗೆ ಯಾವುದೇ ಪ್ರಶಂಸೆಯು ದೊರೆಯಲಿಲ್ಲ. ಅದು ಜೀವಿಸುತ್ತಿದೆ ಎಂಬ “ಹೆಸರು” ಅಥವಾ ತೋರಿಕೆಯಿದ್ದರೂ, ಆತ್ಮಿಕ ನಿರಾಸಕ್ತಿಯು ಎಷ್ಟು ಪ್ರಬಲವಾಗಿ ಬೇರೂರಿತ್ತೆಂದರೆ, ಯೇಸುವಿನ ದೃಷ್ಟಿಯಲ್ಲಿ ಅದು “ಸತ್ತ” ಸಭೆಯಾಗಿತ್ತು. ಸುವಾರ್ತೆಗೆ ವಿಧೇಯತೆಯನ್ನು ತೋರಿಸಲಾಗುತ್ತಿದ್ದರೂ ಅದನ್ನು ಯಾಂತ್ರಿಕ ರೀತಿಯಲ್ಲಿ ಮಾಡಲಾಗುತ್ತಿತ್ತು. ಎಂತಹ ಖಂಡನೆಯಿದು! (ಪ್ರಕಟನೆ 3:​1-3) ಲವೊದಿಕೀಯದ ಸಭೆಯೂ ಅದೇ ಸ್ಥಿತಿಯಲ್ಲಿತ್ತು. ಅದು ಪ್ರಾಪಂಚಿಕ ಸಂಪತ್ತಿನ ಕಾರಣ “ನಾನು ಐಶ್ವರ್ಯವಂತನು” ಎಂದು ಹೊಗಳಿಕೊಂಡರೂ, ಕ್ರಿಸ್ತನಿಗೆ ಅದು, ‘ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಮತ್ತು ಬಟ್ಟೆಯಿಲ್ಲದವ’ನಂತಿತ್ತು.​—ಪ್ರಕಟನೆ 3:14-17.

18. ಒಬ್ಬನು ದೇವರ ದೃಷ್ಟಿಯಲ್ಲಿ ಆತ್ಮಿಕವಾಗಿ ಉಗುರುಬೆಚ್ಚಗಾಗುವುದನ್ನು ಹೇಗೆ ತಪ್ಪಿಸಬಲ್ಲನು?

18 ಇಂದು ಸಹ ಒಂದೊಮ್ಮೆ ನಂಬಿಗಸ್ತರಾಗಿದ್ದ ಕೆಲವು ಮಂದಿ ಕ್ರೈಸ್ತರು ಅದೇ ರೀತಿಯ ಅವಿಧೇಯತೆಗೆ ಬಲಿಬಿದ್ದಿದ್ದಾರೆ. ಅವರು ಪ್ರಾಯಶಃ ಲೋಕದ ಆತ್ಮವು ತಮ್ಮ ಜೀವಿತದಿಂದ ಆ ತುರ್ತಿನ ಪ್ರಜ್ಞೆಯನ್ನು ಬತ್ತಿಸುವಂತೆ ಬಿಟ್ಟಿದ್ದಾರೆ. ಹೀಗೆ ಅವರು ಬೈಬಲ್‌ ಅಧ್ಯಯನ, ಪ್ರಾರ್ಥನೆ, ಕ್ರೈಸ್ತ ಕೂಟಗಳು ಮತ್ತು ಶುಶ್ರೂಷೆಯ ವಿಷಯದಲ್ಲಿ ಆತ್ಮಿಕವಾಗಿ ಉಗುರುಬೆಚ್ಚಗಿನ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. (2 ಪೇತ್ರ 3:​3, 4, 11, 12) ಆದುದರಿಂದ, ಇಂಥವರು ಆತ್ಮಿಕ ಐಶ್ವರ್ಯದಲ್ಲಿ ಬಂಡವಾಳಹೂಡುವ ಮೂಲಕ, ಹೌದು ಕ್ರಿಸ್ತನಿಂದ ‘ಬೆಂಕಿಯಲ್ಲಿ ಪುಟಾಹಾಕಿದ ಚಿನ್ನವನ್ನು ಕೊಂಡುಕೊಳ್ಳುವ’ ಮೂಲಕ ಅವನಿಗೆ ವಿಧೇಯರಾಗುವುದು ಅದೆಷ್ಟು ಪ್ರಾಮುಖ್ಯ! (ಪ್ರಕಟನೆ 3:18) ಇಂತಹ ನಿಜ ಸಂಪತ್ತಿನಲ್ಲಿ, “ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ” ಆಗಿರುವುದು ಸೇರಿದೆ. ಈ ರೀತಿಯ ನಿಜವಾಗಿ ಅಮೂಲ್ಯವಾಗಿರುವ ಆತ್ಮಿಕ ಸ್ವತ್ತುಗಳಲ್ಲಿ ಬಂಡವಾಳವನ್ನು ಹಾಕುವ ಮೂಲಕ ನಾವು, “ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ” “ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು” ಕೂಡಿಸಿಟ್ಟುಕೊಳ್ಳುತ್ತೇವೆ.​—1 ತಿಮೊಥೆಯ 6:​17-19.

ತಮ್ಮ ವಿಧೇಯತೆಗಾಗಿ ಪ್ರಶಂಸಿಸಲ್ಪಟ್ಟವರು

19. ಸ್ಮುರ್ನ ಮತ್ತು ಫಿಲದೆಲ್ಫಿಯದ ಕ್ರೈಸ್ತರಿಗೆ ಯೇಸು ಯಾವ ಪ್ರಶಂಸೆಯನ್ನೂ ಬುದ್ಧಿವಾದವನ್ನೂ ಕೊಟ್ಟನು?

19 ಸ್ಮುರ್ನ ಮತ್ತು ಫಿಲದೆಲ್ಫಿಯ ಸಭೆಗಳು ವಿಧೇಯತೆಯಲ್ಲಿ ಮಾದರಿಗಳಾಗಿ ಎದ್ದುನಿಲ್ಲುತ್ತವೆ. ಏಕೆಂದರೆ ಯೇಸುವಿನ ಪತ್ರಗಳಲ್ಲಿ ಅವರಿಗೆ ಯಾವುದೇ ಗದರಿಕೆ ಇರುವುದಿಲ್ಲ. ಸ್ಮುರ್ನದಲ್ಲಿದ್ದವರಿಗೆ ಅವನು ಹೇಳಿದ್ದು: “ನಾನು ನಿನ್ನ ಸಂಕಟವನ್ನೂ ನಿನ್ನ ಬಡತನವನ್ನೂ ಬಲ್ಲೆನು; ಆದರೂ ನೀನು ಐಶ್ವರ್ಯವಂತನೇ.” (ಪ್ರಕಟನೆ 2:9) ಇದು ತಮ್ಮ ಲೌಕಿಕ ಸಂಪತ್ತಿನ ವಿಷಯದಲ್ಲಿ ಬಡಾಯಿಕೊಚ್ಚಿದರೂ ನಿಜವಾಗಿಯೂ ಬಡವರಾಗಿದ್ದ ಲವೊದಿಕೀಯದವರಿಗಿಂತ ಎಷ್ಟು ಭಿನ್ನವಾಗಿದೆ! ಯಾರೇ ಆಗಲಿ, ಕ್ರಿಸ್ತನಿಗೆ ನಂಬಿಗಸ್ತಿಕೆ ಮತ್ತು ವಿಧೇಯತೆಯನ್ನು ತೋರಿಸುವುದನ್ನು ನೋಡಿ ಸೈತಾನನಿಗೆ ಸಂತೋಷವಾಗಲಿಲ್ಲವೆಂಬುದು ನಿಶ್ಚಯ. ಆದುದರಿಂದ ಯೇಸು ಎಚ್ಚರಿಸಿದ್ದು: “ನಿನಗೆ ಸಂಭವಿಸುವದಕ್ಕಿರುವ ಬಾಧೆಗಳಿಗೆ ಹೆದರಬೇಡ. ಇಗೋ ನೀವು ದುಷ್ಪ್ರೇರಣೆಗೆ ಒಳಗಾಗುವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವದಕ್ಕಿದ್ದಾನೆ; ಮತ್ತು ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವದು. ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು.” (ಪ್ರಕಟನೆ 2:10) ಅದೇ ರೀತಿಯಲ್ಲಿ, ಫಿಲದೆಲ್ಫಿಯದವರನ್ನೂ ಯೇಸು ಹೀಗೆ ಹೇಳಿ ಶ್ಲಾಘಿಸಿದನು: ‘ನೀನು ನನಗೆ ಸೇರಿದವನಲ್ಲವೆಂದು ಹೇಳದೆ ನನ್ನ ವಾಕ್ಯವನ್ನು ಕಾಪಾಡಿದ್ದೀ [ಅಥವಾ ನನಗೆ ವಿಧೇಯನಾಗಿದ್ದೀ] . . . ಬೇಗನೆ ಬರುತ್ತೇನೆ; ನಿನಗಿರುವದನ್ನು ಹಿಡಿದುಕೊಂಡಿರು; ನಿನ್ನ ಜಯಮಾಲೆಯನ್ನು ಯಾರೂ ಅಪಹರಿಸಬಾರದು.’​—ಪ್ರಕಟನೆ 3:8, 11.

20. ಇಂದು ಲಕ್ಷಾಂತರ ಮಂದಿ ಯೇಸುವಿನ ಮಾತುಗಳನ್ನು ಹೇಗೆ ಪಾಲಿಸಿರುತ್ತಾರೆ, ಮತ್ತು ಯಾವ ಪರಿಸ್ಥಿತಿಗಳ ಎದುರಿನಲ್ಲಿ?

20 ವರುಷ 1914ರಿಂದ ಆರಂಭಿಸಿರುವ “ಕರ್ತನ ದಿನ”ದಲ್ಲಿ, ನಂಬಿಗಸ್ತ ಉಳಿಕೆಯವರು ಮತ್ತು ಈಗ ಲಕ್ಷಾಂತರ ಮಂದಿಯಾಗಿರುವ ಅವರ ಬೇರೆ ಕುರಿ ಸಂಗಾತಿಗಳು, ಶುಶ್ರೂಷೆಯಲ್ಲಿ ಹುರುಪಿನಿಂದ ಪಾಲ್ಗೊಳ್ಳುವ ಮೂಲಕ ಹಾಗೂ ತಮ್ಮ ಸಮಗ್ರತೆಗೆ ಭದ್ರವಾಗಿ ಅಂಟಿಕೊಳ್ಳುವ ಮೂಲಕ ಯೇಸುವಿನ ಮಾತುಗಳನ್ನು ಪಾಲಿಸಿದ್ದಾರೆ. ಅವರ ಒಂದನೆಯ ಶತಮಾನದ ಸಹೋದರರಂತೆ, ಕೆಲವರು ಕ್ರಿಸ್ತನಿಗೆ ವಿಧೇಯತೆಯನ್ನು ತೋರಿಸಿರುವ ಕಾರಣ ಕಷ್ಟಗಳನ್ನು ಅನುಭವಿಸಿದ್ದಾರೆ. ಅವರನ್ನು ಸೆರೆಮನೆ ಮತ್ತು ಸೆರೆಶಿಬಿರಗಳಿಗೆ ಹಾಕಿದ್ದೂ ಉಂಟು. ಇತರರು, ಸಮೃದ್ಧಿ ಮತ್ತು ಲೋಭದಿಂದ ಸುತ್ತುವರಿದಿರುವುದಾದರೂ ‘ಸರಳವಾದ ಕಣ್ಣನ್ನು’ ಇಟ್ಟುಕೊಳ್ಳುವ ಮೂಲಕ ಯೇಸುವಿಗೆ ವಿಧೇಯರಾಗಿದ್ದಾರೆ. (ಮತ್ತಾಯ 6:​22, 23, NW) ಹೌದು, ಪ್ರತಿಯೊಂದು ಪರಿಸರದಲ್ಲಿ ಮತ್ತು ಸ್ಥಿತಿಗತಿಯಲ್ಲಿ ಸತ್ಯ ಕ್ರೈಸ್ತರು ತಮ್ಮ ವಿಧೇಯತೆಯ ಮೂಲಕ ಯೆಹೋವನ ಹೃದಯವನ್ನು ಹರ್ಷಗೊಳಿಸುತ್ತಾ ಮುಂದುವರಿಯುತ್ತಾರೆ.​—ಜ್ಞಾನೋಕ್ತಿ 27:11.

21. (ಎ) ಯಾವ ಆತ್ಮಿಕ ಕರ್ತವ್ಯವನ್ನು ಆಳು ವರ್ಗವು ಪೂರೈಸುತ್ತಾಹೋಗುವುದು? (ಬಿ) ನಾವು ಶಿಲೋವನಿಗೆ ನಿಜವಾಗಿಯೂ ವಿಧೇಯರಾಗಿರಲು ಬಯಸುತ್ತೇವೆಂಬುದನ್ನು ಹೇಗೆ ತೋರಿಸಬಲ್ಲೆವು?

21 ನಾವು ಮಹಾ ಸಂಕಟವನ್ನು ಸಮೀಪಿಸುವಾಗ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು ಯಜಮಾನನಾದ ಕ್ರಿಸ್ತನಿಗೆ ತೋರಿಸುವ ವಿಧೇಯತೆಯಲ್ಲಿ ಎಂದಿಗೂ ರಾಜಿಮಾಡಿಕೊಳ್ಳುವುದಿಲ್ಲವೆಂಬ ದೃಢನಿರ್ಧಾರಕ್ಕೆ ಅಂಟಿಕೊಂಡಿದೆ. ಈ ವಿಧೇಯತೆಯಲ್ಲಿ, ದೇವರ ಮನೆವಾರ್ತೆಯವರಿಗೆ ಸಮಯೋಚಿತವಾದ ಆತ್ಮಿಕ ಆಹಾರವನ್ನು ತಯಾರಿಸುವುದೂ ಸೇರಿದೆ. ಆದುದರಿಂದ, ಯೆಹೋವನ ಅದ್ಭುತಕರವಾದ ದೇವಪ್ರಭುತ್ವಾತ್ಮಕ ಸಂಸ್ಥೆಗೂ ಅದು ಒದಗಿಸುವ ವಿಷಯಗಳಿಗೂ ನಾವು ಕೃತಜ್ಞತೆಯನ್ನು ತೋರಿಸುತ್ತಾ ಮುಂದುವರಿಯೋಣ. ಈ ರೀತಿಯಲ್ಲಿ, ಯಾರು ತನ್ನ ಎಲ್ಲಾ ವಿಧೇಯ ಪ್ರಜೆಗಳಿಗೆ ನಿತ್ಯಜೀವವನ್ನು ಬಹುಮಾನವಾಗಿ ಕೊಡಲಿದ್ದಾನೊ ಆ ಶಿಲೋವನಿಗೆ ನಾವು ನಮ್ಮ ಅಧೀನತೆಯನ್ನು ಪ್ರದರ್ಶಿಸುತ್ತೇವೆ.​—ಮತ್ತಾಯ 24:45-47; 25:40; ಯೋಹಾನ 5:22-24.

[ಪಾದಟಿಪ್ಪಣಿಗಳು]

^ ಪ್ಯಾರ. 8 “ಏಳು ಕಾಲಗಳ” ವಿವರಣೆಗಾಗಿ, ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ 10ನೆಯ ಅಧ್ಯಾಯವನ್ನು ನೋಡಿರಿ.

^ ಪ್ಯಾರ. 14 ಎಲ್ಲಾ ಏಳು ಪತ್ರಗಳ ಸವಿವರವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ, ಪ್ರಕಟನೆ​—ಅದರ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ ಪುಟ 33ರಿಂದ ಆರಂಭವಾಗುವ ವಿಷಯವನ್ನು ನೋಡಿ.

ನಿಮಗೆ ನೆನಪಿದೆಯೆ?

• ಯಾಕೋಬನ ಮರಣಶಯ್ಯೆಯ ಪ್ರವಾದನೆಯಲ್ಲಿ ಮುಂತಿಳಿಸಿರುವಂತೆ ಯೇಸು ಯಾವ ಪಾತ್ರವನ್ನು ವಹಿಸಲಿದ್ದನು?

• ಯೇಸುವನ್ನು ಶಿಲೋವನೆಂದು ನಾವು ಹೇಗೆ ಒಪ್ಪಿಕೊಳ್ಳುತ್ತೇವೆ, ಮತ್ತು ನಾವು ಯಾವ ಮನೋಭಾವದಿಂದ ದೂರವಿರಬೇಕು?

• ಪ್ರಕಟನೆಯ ಏಳು ಸಭೆಗಳಿಗೆ ಬರೆಯಲ್ಪಟ್ಟ ಪತ್ರಗಳಲ್ಲಿ ನಮ್ಮ ದಿನಗಳಿಗೆ ಯಾವ ಪ್ರಾಯೋಗಿಕ ಸಲಹೆಯಿದೆ?

• ಹಳೆಯ ಸ್ಮುರ್ನ ಮತ್ತು ಫಿಲದೆಲ್ಫಿಯ ಸಭೆಗಳವರನ್ನು ನಾವು ಯಾವ ವಿಧದಲ್ಲಿ ಅನುಕರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರಗಳು]

ನಂಬಿಗಸ್ತ ‘ಮನೆವಾರ್ತೆಯವನಿಗೆ’ ವಿಧೇಯತೆ ತೋರಿಸಿರುವುದಕ್ಕಾಗಿ ಯೆಹೋವನು ತನ್ನ ಜನರನ್ನು ಆಶೀರ್ವದಿಸುತ್ತಾನೆ

[ಪುಟ 19ರಲ್ಲಿರುವ ಚಿತ್ರ]

ಸೈತಾನನ ಪ್ರಭಾವವು ದೇವರಿಗೆ ವಿಧೇಯತೆ ತೋರಿಸುವುದನ್ನು ಪಂಥಾಹ್ವಾನವಾಗಿಸುತ್ತದೆ

[ಪುಟ 21ರಲ್ಲಿರುವ ಚಿತ್ರಗಳು]

ಯೆಹೋವನೊಂದಿಗೆ ಒಂದು ಬಲವಾದ ಸಂಬಂಧವು ನಾವು ಆತನಿಗೆ ವಿಧೇಯರಾಗಿರುವಂತೆ ಸಹಾಯಮಾಡುತ್ತದೆ