ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ರಾಜ್ಯ ಸಭಾಗೃಹಕ್ಕೆ ಮಾನ್ಯತೆ ನೀಡುವ ಪದಕ

ಒಂದು ರಾಜ್ಯ ಸಭಾಗೃಹಕ್ಕೆ ಮಾನ್ಯತೆ ನೀಡುವ ಪದಕ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಒಂದು ರಾಜ್ಯ ಸಭಾಗೃಹಕ್ಕೆ ಮಾನ್ಯತೆ ನೀಡುವ ಪದಕ

ಫಿನ್ಲೆಂಡ್‌ನ ಪರಿಸರ ಇಲಾಖೆಯು ಇಸವಿ 2000ವನ್ನು, “ಭೂದೃಶ್ಯ ತೋಟಗಾರಿಕೆ ವಿನ್ಯಾಸದ ವರ್ಷ” ಎಂದು ನಿಯಮಿಸಿತು. ವ್ಯವಸ್ಥಾಪಕರಲ್ಲಿ ಒಬ್ಬರು ತಿಳಿಸಿದ್ದೇನೆಂದರೆ, “ಭೂದೃಶ್ಯ ತೋಟಗಾರಿಕೆ ವಿನ್ಯಾಸವನ್ನು ಈ ವರ್ಷದ ಮುಖ್ಯ ವಿಷಯವಾಗಿ ಆಯ್ಕೆಮಾಡುವ ಉದ್ದೇಶವು, ನಮ್ಮ ದಿನನಿತ್ಯದ ಜೀವಿತಗಳು ಹಾಗೂ ನಮ್ಮ ಕ್ಷೇಮದ ಮೇಲೆ ಹಸಿರು ಪರಿಸರವು ಬೀರುವ ಪ್ರಭಾವದ ಬಗ್ಗೆ ನಮ್ಮೆಲ್ಲರಿಗೂ ನೆನಪು ಹುಟ್ಟಿಸುವುದೇ ಆಗಿದೆ.”

ಇಸವಿ 2001ರ ಜನವರಿ 12ರಂದು, ಫಿನ್ಲೆಂಡ್‌ನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ, ಭೂದೃಶ್ಯ ತೋಟಗಾರಿಕೆ ವಿನ್ಯಾಸ ಉದ್ಯಮದ ಫಿನಿಷ್‌ ಸಂಘದಿಂದ ಒಂದು ಪತ್ರ ಬಂತು. ಟಿಕ್ಕುರಿಲಾ ಎಂಬಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದ ಸುತ್ತಮುತ್ತಲಿನ ಆವರಣದ ಎದ್ದುಕಾಣುವಂಥ ವಿನ್ಯಾಸ ಮತ್ತು ಅದರ ಒಪ್ಪಓರಣವಾದ ತೋಟದಿಂದಾಗಿ, ಅದಕ್ಕೆ ಆ ವರ್ಷದ ಭೂದೃಶ್ಯ ತೋಟಗಾರಿಕೆ ವಿನ್ಯಾಸದ ಪದಕಗಳಲ್ಲಿ ಒಂದನ್ನು ಬಹುಮಾನವಾಗಿ ನೀಡಲಾಗಿದೆ ಎಂದು ಆ ಪತ್ರದಲ್ಲಿ ವಿವರಿಸಲಾಗಿತ್ತು. “ಬೇಸಿಗೆ ಕಾಲದಲ್ಲಿಯೂ ಚಳಿಗಾಲದಲ್ಲಿಯೂ ಅದರ ಮೈದಾನದ ಸಾಮಾನ್ಯ ತೋರಿಕೆಯು, ಹಿತಕರವಾದದ್ದೂ, ಸುಂದರವೂ, ಉಚ್ಚ ಗುಣಮಟ್ಟದ್ದೂ ಆಗಿರುತ್ತದೆ” ಎಂದು ಆ ಪತ್ರವು ಕೂಡಿಸಿ ಹೇಳಿತು.

ಆ ಪದಕವನ್ನು ಫಿನ್ಲೆಂಡ್‌ನ ಟ್ಯಾಂಪರೇಯಲ್ಲಿರುವ ರೋಸನ್‌ಡಾಲ್‌ ಹೋಟೆಲ್‌ನಲ್ಲಿ ಯೆಹೋವನ ಸಾಕ್ಷಿಗಳಿಗೆ ಕೊಡಲಾಯಿತು. ಈ ಸಮಾರಂಭಕ್ಕೆ 400 ಮಂದಿ ವೃತ್ತಿಗಾರರೂ ವ್ಯಾಪಾರಿಗಳೂ ಹಾಜರಿದ್ದರು. ಭೂದೃಶ್ಯ ತೋಟಗಾರಿಕೆ ವಿನ್ಯಾಸ ಉದ್ಯಮದ ಫಿನಿಷ್‌ ಸಂಘವು, ವಾರ್ತಾಮಾಧ್ಯಮಕ್ಕೆ ಒಂದು ಅಧಿಕೃತ ಹೇಳಿಕೆಯನ್ನೂ ಕೊಟ್ಟಿತು. ಅದು ಹೀಗಿತ್ತು: “ದೇಶದ ವಿವಿಧ ಭಾಗಗಳಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳಲ್ಲಿ ಬಹುಮಟ್ಟಿಗೆ ಎಲ್ಲವೂ ಸುಂದರವಾದ ರೀತಿಯಲ್ಲಿ ಯೋಜಿಸಲ್ಪಟ್ಟಿವೆ. ಪರಿಸರಕ್ಕೆ ಕೊಡಲಾಗುತ್ತಿರುವ ಆರೈಕೆಯು ಅಲ್ಲಿಂದ ಹಾದುಹೋಗುವವರ ಆಸಕ್ತಿಯನ್ನು ಕೆರಳಿಸದೇ ಬಿಡುವುದಿಲ್ಲ. ಟಿಕ್ಕುರಿಲಾದಲ್ಲಿರುವ ರಾಜ್ಯ ಸಭಾಗೃಹವು, ಒಟ್ಟಿನಲ್ಲಿ ಒಂದು ಶೋಭಾಯಮಾನವಾದ ತೋಟದ ಉದಾಹರಣೆಯಾಗಿದೆ. ಆ ಕಟ್ಟಡ ಮತ್ತು ಅದರ ಸುತ್ತಲಿನ ಆವರಣಗಳಲ್ಲಿ ಮಾಡಲ್ಪಟ್ಟಿರುವ ವಿಸ್ತಾರವಾದ ಕೆಲಸವು, ಪ್ರಶಾಂತತೆ ಮತ್ತು ಸಮತೋಲನವನ್ನು ಪ್ರತಿಬಿಂಬಿಸುತ್ತದೆ.”

ಫಿನ್ಲೆಂಡ್‌ನಲ್ಲಿ 233 ರಾಜ್ಯ ಸಭಾಗೃಹಗಳಿವೆ, ಮತ್ತು ಅವುಗಳಲ್ಲಿ ಹೆಚ್ಚಿನವುಗಳ ಸುತ್ತಲೂ ಸುಂದರವಾದ ತೋಟಗಳಿವೆ. ಆದರೆ ಈ ಸ್ಥಳಗಳನ್ನು ನಿಜವಾಗಿಯೂ ಸುಂದರವಾಗಿಸುವಂಥ ವಿಷಯವೇನೆಂದರೆ, ಅವು ಸತ್ಯಾರಾಧನೆ ಹಾಗೂ ಬೈಬಲ್‌ ಶಿಕ್ಷಣದ ಕೇಂದ್ರಗಳಾಗಿವೆ. ಲೋಕದ ಸುತ್ತಲೂ ಇರುವ 60 ಲಕ್ಷಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳಿಗೆ, ಒಂದು ರಾಜ್ಯ ಸಭಾಗೃಹವು​—ಅದು ಅತ್ಯುತ್ತಮವಾಗಿ ನಿಯೋಜಿಸಲ್ಪಟ್ಟದ್ದಾಗಿರಲಿ ಇಲ್ಲವೆ ಸರಳ ವಿನ್ಯಾಸದ್ದಾಗಿರಲಿ​—ತುಂಬ ಪ್ರಿಯವಾದ ಸ್ಥಳವಾಗಿದೆ. ಆದುದರಿಂದಲೇ ಅವರು ಶ್ರದ್ಧೆಯಿಂದಲೂ ಪ್ರೀತಿಯಿಂದಲೂ ಅದನ್ನು ನೋಡಿಕೊಳ್ಳಲು ಉತ್ಸುಕರಾಗಿದ್ದಾರೆ. ರಾಜ್ಯ ಸಭಾಗೃಹದ ಬಾಗಿಲುಗಳು ನಿಮ್ಮ ಸಮಾಜದಲ್ಲಿರುವವರೆಲ್ಲರಿಗಾಗಿ ಸದಾ ತೆರೆದಿವೆ!