ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಕುರಿತಾದ ನಿಷ್ಕೃಷ್ಟ ಜ್ಞಾನದಿಂದ ಸಾಂತ್ವನ

ದೇವರ ಕುರಿತಾದ ನಿಷ್ಕೃಷ್ಟ ಜ್ಞಾನದಿಂದ ಸಾಂತ್ವನ

ದೇವರ ಕುರಿತಾದ ನಿಷ್ಕೃಷ್ಟ ಜ್ಞಾನದಿಂದ ಸಾಂತ್ವನ

ಕೆಲವು ಜನರಿಗೆ, ದೇವರ ಪ್ರೀತಿ ಮತ್ತು ಕರುಣೆಯ ಬಗ್ಗೆ ಬೈಬಲು ಏನನ್ನು ತಿಳಿಸುತ್ತದೊ ಅದು, ಅವರ ಮನಶ್ಶಾಂತಿಯನ್ನು ಕೆಡಿಸುವಂಥ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಅವರು ಕೇಳುವುದು: ದೇವರು ದುಷ್ಟತನವನ್ನು ನಿರ್ಮೂಲಮಾಡಲು ಬಯಸುತ್ತಾನಾದರೆ, ಅದನ್ನು ಹೇಗೆ ಮಾಡಬೇಕೆಂಬುದನ್ನು ತಿಳಿದವನಾಗಿದ್ದರೆ ಮತ್ತು ಅದನ್ನು ಮಾಡುವ ಶಕ್ತಿಯುಳ್ಳವನಾಗಿದ್ದರೆ, ಈಗಲೂ ದುಷ್ಟತನವು ಏಕೆ ಹೆಚ್ಚುತ್ತಾ ಇದೆ? ಈ ಕೆಳಗಿನ ಮೂರು ಹೇಳಿಕೆಗಳನ್ನು ಒಂದಕ್ಕೊಂದು ಹೊಂದಿಸಿಕೊಳ್ಳಲು ಅವರಿಗೆ ಕಷ್ಟವಾಗುತ್ತದೆ: (1) ದೇವರು ಸರ್ವಶಕ್ತನಾಗಿದ್ದಾನೆ; (2) ದೇವರು ಪ್ರೀತಿಪರನೂ ಒಳ್ಳೆಯವನೂ ಆಗಿದ್ದಾನೆ; ಮತ್ತು (3) ವಿಪತ್ಕಾರಕ ಘಟನೆಗಳು ಈಗಲೂ ಮುಂದುವರಿಯುತ್ತಾ ಇವೆ. ಈ ಮೂರನೆಯ ಹೇಳಿಕೆಯು ಅಲ್ಲಗಳೆಯಲಾರದಷ್ಟು ಸತ್ಯವಾಗಿರುವುದರಿಂದ, ಅದಕ್ಕಿಂತಲೂ ಮುಂಚಿನ ಎರಡು ಹೇಳಿಕೆಗಳಲ್ಲಿ ಕಡಿಮೆಪಕ್ಷ ಒಂದು ಸತ್ಯವಾಗಿರಲಾರದೆಂದು ಅವರು ತರ್ಕಿಸುತ್ತಾರೆ. ಅವರಿಗನುಸಾರ, ಒಂದೇ ದೇವರು ದುಷ್ಟತನವನ್ನು ನಿಲ್ಲಿಸಲು ಅಶಕ್ತನಾಗಿದ್ದಾನೆ ಇಲ್ಲವೆ ಆತನಿಗೆ ಅದರ ಬಗ್ಗೆ ಚಿಂತೆಯೇ ಇಲ್ಲ.

ನ್ಯೂ ಯಾರ್ಕ್‌ನಲ್ಲಿದ್ದ ವಿಶ್ವ ವಾಣಿಜ್ಯ ಕೇಂದ್ರದ ವಿನಾಶದ ಹಲವಾರು ದಿನಗಳ ಬಳಿಕ, ಅಮೆರಿಕದಲ್ಲಿರುವ ಒಬ್ಬ ಪ್ರಮುಖ ಧಾರ್ಮಿಕ ಮುಖಂಡನು ಹೇಳಿದ್ದು: “ದೇವರು ದುರಂತಗಳನ್ನೂ ನರಳಾಟವನ್ನೂ ಏಕೆ ಅನುಮತಿಸುತ್ತಾನೆಂದು ನನ್ನ ಜೀವಿತದಲ್ಲಿ ನೂರಾರು ಸಲ . . . ನನ್ನನ್ನು ಕೇಳಲಾಗಿದೆ. ಆದರೆ ಆ ಪ್ರಶ್ನೆಗೆ ತೃಪ್ತಿದಾಯಕವಾದ ಉತ್ತರವು ನನಗೇ ಗೊತ್ತಿಲ್ಲದಿರುವಾಗ, ಅದರ ಕುರಿತು ನನಗೆ ಪೂರ್ಣವಾಗಿ ಗೊತ್ತಿಲ್ಲವೆಂಬುದನ್ನು ಮಾತ್ರ ನಾನು ಒಪ್ಪಿಕೊಳ್ಳಲೇಬೇಕು.”

ಈ ಹೇಳಿಕೆಗೆ ಪ್ರತಿಕ್ರಿಯೆಯಲ್ಲಿ ದೇವತಾಶಾಸ್ತ್ರದ ಒಬ್ಬ ಪ್ರೊಫೆಸರನು, ಈ ಧಾರ್ಮಿಕ ಮುಖಂಡನು ಸಾರಿದ “ಉತ್ತಮವಾದ ದೇವತಾಶಾಸ್ತ್ರ”ದಿಂದ ತಾನು ಪ್ರಭಾವಿತನಾದೆನೆಂದು ಬರೆದನು. ಅವನು ಮತ್ತೊಬ್ಬ ವಿದ್ವಾಂಸನ ಅಭಿಪ್ರಾಯವನ್ನೂ ಸಮ್ಮತಿಸುತ್ತಾನೆ. ಆ ವಿದ್ವಾಂಸನು ಬರೆದುದು: “ಕಷ್ಟನೋವುಗಳನ್ನು ಅರ್ಥಮಾಡಿಕೊಳ್ಳುವ ಅಸಾಧ್ಯತೆಯು, ದೇವರ ಬಗ್ಗೆ ಅರ್ಥಮಾಡಿಕೊಳ್ಳುವ ಅಸಾಧ್ಯತೆಯ ಭಾಗವಾಗಿದೆ.” ಆದರೆ ದೇವರು ದುಷ್ಟತನವನ್ನು ಏಕೆ ಅನುಮತಿಸುತ್ತಿದ್ದಾನೆಂಬುದನ್ನು ಅರ್ಥಮಾಡಿಕೊಳ್ಳುವುದು ನಿಜವಾಗಿಯೂ ಅಸಾಧ್ಯವೊ?

ದುಷ್ಟತನದ ಆರಂಭ

ಧಾರ್ಮಿಕ ಮುಖಂಡರು ಏನು ಹೇಳಬಹುದೊ ಅದಕ್ಕೆ ತದ್ವಿರುದ್ಧವಾಗಿ ಬೈಬಲು, ದೇವರು ದುಷ್ಟತನವನ್ನು ಅನುಮತಿಸಿರುವ ಕಾರಣವನ್ನು ಅರ್ಥಮಾಡಿಕೊಳ್ಳಲಾಗದ ಸಂಗತಿಯಾಗಿ ಚಿತ್ರಿಸುವುದಿಲ್ಲ. ದುಷ್ಟತನದ ಕುರಿತಾದ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಒಂದು ಮುಖ್ಯ ಅಂಶವು, ಯೆಹೋವನು ಒಂದು ದುಷ್ಟ ಲೋಕವನ್ನು ಸೃಷ್ಟಿಸಲಿಲ್ಲವೆಂಬುದನ್ನು ಗ್ರಹಿಸುವುದೇ ಆಗಿದೆ. ಆತನು ಪ್ರಥಮ ಮಾನವ ದಂಪತಿಯನ್ನು ಪರಿಪೂರ್ಣರಾಗಿ ಅಂದರೆ ಪಾಪವಿಲ್ಲದೆ ಸೃಷ್ಟಿಸಿದನು. ಯೆಹೋವನು ತನ್ನ ಸೃಷ್ಟಿಕಾರ್ಯವನ್ನು ನೋಡಲಾಗಿ ಅದು “ಬಹು ಒಳ್ಳೇದಾಗಿತ್ತು” ಎಂದು ಕಂಡುಕೊಂಡನು. (ಆದಿಕಾಂಡ 1:​26, 31) ಆದಾಮಹವ್ವರು ಏದೆನಿನ ಪರದೈಸನ್ನು ಇಡೀ ಭೂಮಿಗೆ ವಿಸ್ತರಿಸಿ, ಆತನ ಪ್ರೀತಿಪರ ಪರಮಾಧಿಕಾರದ ಸಂರಕ್ಷಣೆಯ ಕೆಳಗೆ ಅದನ್ನು ಸಂತೋಷಭರಿತ ಜನರಿಂದ ತುಂಬಿಸಬೇಕೆಂಬುದು ಆತನ ಉದ್ದೇಶವಾಗಿತ್ತು.​—ಯೆಶಾಯ 45:18.

ದುಷ್ಟತನವು ಆರಂಭವಾದದ್ದು ಒಬ್ಬ ಆತ್ಮಜೀವಿಯಿಂದಲೇ. ಇವನು ಆರಂಭದಲ್ಲಿ ದೇವರಿಗೆ ನಂಬಿಗಸ್ತನಾಗಿದ್ದರೂ ಆಮೇಲೆ ಸ್ವತಃ ಆರಾಧಿಸಲ್ಪಡಬೇಕೆಂಬ ಆಸೆಯನ್ನು ಬೆಳೆಸಿಕೊಂಡನು. (ಯಾಕೋಬ 1:​14, 15) ದೇವರನ್ನು ವಿರೋಧಿಸುವುದರಲ್ಲಿ ಮೊದಲ ಮಾನವ ದಂಪತಿಯು ತನ್ನೊಂದಿಗೆ ಜೊತೆಗೂಡುವಂತೆ ಅವನು ಅವರನ್ನು ಪ್ರಭಾವಿಸಿದಾಗ, ಅವನ ದಂಗೆಯು ಇಲ್ಲಿ ಭೂಮಿಯ ಮೇಲೆ ವ್ಯಕ್ತವಾಯಿತು. ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮುಟ್ಟಲೂ ಕೂಡದು ತಿನ್ನಲೂ ಕೂಡದೆಂದು ದೇವರು ಕೊಟ್ಟ ಸ್ಪಷ್ಟವಾದ ಸೂಚನೆಗೆ ಅಧೀನರಾಗುವ ಬದಲು, ಆದಾಮಹವ್ವರು ಆ ಮರದ ಹಣ್ಣನ್ನು ತೆಗೆದು ತಿಂದರು. (ಆದಿಕಾಂಡ 3:​1-6) ಹೀಗೆ ಮಾಡುವ ಮೂಲಕ ಅವರು ದೇವರಿಗೆ ಅವಿಧೇಯತೆಯನ್ನು ತೋರಿಸಿದ್ದು ಮಾತ್ರವಲ್ಲ, ಆತನಿಂದ ಸ್ವತಂತ್ರರಾಗಿರುವ ತಮ್ಮ ಅಪೇಕ್ಷೆಯನ್ನೂ ತೋರಿಸಿದರು.

ಎಬ್ಬಿಸಲ್ಪಟ್ಟ ನೈತಿಕ ವಿವಾದಾಂಶ

ಏದೆನಿನಲ್ಲಿನ ಈ ದಂಗೆಯು, ಇಡೀ ವಿಶ್ವಕ್ಕೆ ಮಹತ್ವಪೂರ್ಣವಾದ ಒಂದು ನೈತಿಕ ವಿವಾದಾಂಶವನ್ನು ಎಬ್ಬಿಸಿತು. ಈ ಮಾನವ ದಂಗೆಕೋರರು, ಯೆಹೋವನು ತನ್ನ ಸೃಷ್ಟಿಜೀವಿಗಳ ಮೇಲೆ ತನ್ನ ಆಳ್ವಿಕೆಯನ್ನು ಸರಿಯಾಗಿ ನಡೆಸುತ್ತಾನೊ ಇಲ್ಲವೊ ಎಂಬ ಸವಾಲನ್ನು ಎಬ್ಬಿಸಿದರು. ಮಾನವಕುಲದಿಂದ ಪೂರ್ಣ ವಿಧೇಯತೆಯನ್ನು ಅಪೇಕ್ಷಿಸುವ ಹಕ್ಕು ಸೃಷ್ಟಿಕರ್ತನಿಗಿತ್ತೊ? ಅವರು ಆತನಿಂದ ಸ್ವತಂತ್ರರಾಗಿ ಕ್ರಿಯೆಗೈದರೆ ಅವರಿಗೆ ಹೆಚ್ಚು ಒಳಿತಾಗಬಹುದೊ?

ತನ್ನ ಆಳ್ವಿಕೆಯ ವಿಷಯದಲ್ಲಿ ಎಬ್ಬಿಸಲ್ಪಟ್ಟ ಈ ಪಂಥಾಹ್ವಾನವನ್ನು ಯೆಹೋವನು, ತನ್ನ ಪ್ರೀತಿ, ನ್ಯಾಯ, ವಿವೇಕ ಮತ್ತು ಶಕ್ತಿಯ ಪರಿಪೂರ್ಣವಾದ ಸಮತೋಲನವನ್ನು ತೋರ್ಪಡಿಸುವಂಥ ರೀತಿಯಲ್ಲಿ ನಿರ್ವಹಿಸಿದನು. ಆ ದಂಗೆಯನ್ನು ಆ ಕ್ಷಣವೇ ಕೊನೆಗೊಳಿಸಲಿಕ್ಕಾಗಿ ಆತನು ತನ್ನ ಶಕ್ತಿಯನ್ನು ಉಪಯೋಗಿಸಬಹುದಿತ್ತು. ದೇವರಿಗೆ ಅದನ್ನು ಮಾಡುವ ಹಕ್ಕು ಇರುವುದರಿಂದ, ಹಾಗೆ ಮಾಡುವುದು ನ್ಯಾಯವಾದದ್ದಾಗಿ ತೋರಬಹುದಿತ್ತು. ಆದರೆ ಹಾಗೆ ಮಾಡುವುದರಿಂದ, ಎಬ್ಬಿಸಲ್ಪಟ್ಟಂಥ ನೈತಿಕ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿರಲಿಲ್ಲ. ಇನ್ನೊಂದು ಬದಿಯಲ್ಲಿ, ದೇವರು ಆ ಪಾಪವನ್ನು ನೋಡಿಯೂ ನೋಡದಂತೆ ಇರಬಹುದಿತ್ತು. ಹಾಗೆ ಮಾಡುವುದು ಪ್ರೀತಿಯ ಕಾರ್ಯವಾಗಿರುತ್ತಿತ್ತೆಂದು ಇಂದು ಕೆಲವರಿಗೆ ತೋರಬಹುದು. ಆದರೆ ಹೀಗೆ ಮಾಡುವುದರಿಂದಲೂ, ಮಾನವರು ತಮ್ಮನ್ನೇ ಆಳಿಕೊಂಡರೆ ಸಂತೋಷದಿಂದಿರುವರೆಂಬ ಸೈತಾನನ ವಾದಕ್ಕೆ ಉತ್ತರ ಸಿಗುತ್ತಿರಲಿಲ್ಲ. ಅಲ್ಲದೆ, ಅದು ಇನ್ನೂ ಇತರರು ಯೆಹೋವನ ಮಾರ್ಗವನ್ನು ಬಿಟ್ಟುಹೋಗುವಂತೆ ಉತ್ತೇಜಿಸುತ್ತಿತ್ತು ಅಲ್ಲವೆ? ಫಲಿತಾಂಶವು ಕೊನೆಯಿಲ್ಲದ ಕಷ್ಟಾನುಭವವೇ ಆಗಿರುತ್ತಿತ್ತು.

ತನ್ನ ವಿವೇಕದಿಂದಾಗಿ, ಮಾನವರು ಸ್ವಲ್ಪ ಸಮಯದ ವರೆಗೆ ಸ್ವತಂತ್ರರಾಗಿರುವಂತೆ ಯೆಹೋವನು ಅನುಮತಿಸಿದ್ದಾನೆ. ಇದಕ್ಕಾಗಿ ದುಷ್ಟತನವನ್ನು ತಾತ್ಕಾಲಿಕವಾಗಿ ಅನುಮತಿಸಬೇಕಾಗಿ ಬಂದಿರುವುದಾದರೂ, ಇದರಿಂದಾಗಿ ಮಾನವರು ಸರಿ ಮತ್ತು ತಪ್ಪಿನ ಕುರಿತಾದ ತಮ್ಮ ಸ್ವಂತ ಮಟ್ಟಗಳಿಗನುಸಾರ ಜೀವಿಸುತ್ತಾ, ದೇವರಿಂದ ಸ್ವತಂತ್ರರಾಗಿ ತಮ್ಮನ್ನೇ ಯಶಸ್ವಿಕರವಾಗಿ ಆಳಬಲ್ಲರೊ ಇಲ್ಲವೊ ಎಂಬುದನ್ನು ತೋರಿಸಲು ಒಂದು ಅವಕಾಶವನ್ನು ಪಡೆದಿದ್ದಾರೆ. ಫಲಿತಾಂಶವೇನಾಗಿರುತ್ತದೆ? ಮಾನವ ಇತಿಹಾಸದಾದ್ಯಂತ ಸುಸಂಗತವಾಗಿ ಯುದ್ಧ, ಅನ್ಯಾಯ, ದಬ್ಬಾಳಿಕೆ ಮತ್ತು ಕಷ್ಟಾನುಭವವು ಕಂಡುಬಂದಿದೆ. ಆದರೆ ಯೆಹೋವನ ವಿರುದ್ಧ ನಡೆಸಲ್ಪಟ್ಟ ದಂಗೆಯ ಪೂರ್ಣ ವೈಫಲ್ಯವು, ಏದೆನಿನಲ್ಲಿ ಎಬ್ಬಿಸಲ್ಪಟ್ಟ ವಿವಾದಾಂಶಗಳನ್ನು ಎಂದೆಂದಿಗೂ ಶಾಂತಗೊಳಿಸುವುದು.

ತನ್ಮಧ್ಯೆ, ದೇವರು ತನ್ನ ಮಗನಾದ ಯೇಸು ಕ್ರಿಸ್ತನನ್ನು ಒದಗಿಸುವ ಮೂಲಕ ತನ್ನ ಪ್ರೀತಿಯನ್ನು ಪ್ರದರ್ಶಿಸಿದ್ದಾನೆ. ಅವನು ತನ್ನ ಮಾನವ ಜೀವವನ್ನು ಒಂದು ಪ್ರಾಯಶ್ಚಿತ್ತ ಯಜ್ಞವಾಗಿ ಕೊಟ್ಟನು. ಇದು, ಆದಾಮನ ಅವಿಧೇಯತೆಯಿಂದ ಫಲಿಸಿದಂಥ ಪಾಪಮರಣಗಳ ಖಂಡನೆಯಿಂದ ವಿಧೇಯ ಮಾನವರು ಮುಕ್ತವಾಗುವುದನ್ನು ಸಾಧ್ಯಗೊಳಿಸುತ್ತದೆ. ಈ ಪ್ರಾಯಶ್ಚಿತ್ತ ಯಜ್ಞವು, ಯೇಸುವಿನಲ್ಲಿ ನಂಬಿಕೆಯನ್ನಿಡುವ ಎಲ್ಲರಿಗಾಗಿ ನಿತ್ಯಜೀವದ ಮಾರ್ಗವನ್ನು ತೆರೆದಿದೆ.​—ಯೋಹಾನ 3:16.

ಮಾನವ ಕಷ್ಟಾನುಭವವು ತಾತ್ಕಾಲಿಕವಾದದ್ದು ಎಂಬ ಯೆಹೋವನ ಸಾಂತ್ವನದಾಯಕ ಆಶ್ವಾಸನೆ ನಮಗಿದೆ. ಕೀರ್ತನೆಗಾರನು ಬರೆದುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”​—ಕೀರ್ತನೆ 37:10, 11.

ಭದ್ರತೆ ಹಾಗೂ ಸಂತೋಷ ತುಂಬಿದ ಭವಿಷ್ಯ

ಕಾಯಿಲೆ, ದುಃಖ ಮತ್ತು ಮರಣಕ್ಕೆ ಅಂತ್ಯವನ್ನು ತರುವ ದೇವರ ಸಮಯವು ಹತ್ತಿರವಿದೆಯೆಂದು ಬೈಬಲ್‌ ಪ್ರವಾದನೆಗಳ ನೆರವೇರಿಕೆಯು ತೋರಿಸುತ್ತದೆ. ಬರಲಿರುವ ಸಂಗತಿಗಳ ಕುರಿತಾಗಿ ಅಪೊಸ್ತಲ ಯೋಹಾನನಿಗೆ ಒಂದು ದರ್ಶನದಲ್ಲಿ ಕೊಡಲ್ಪಟ್ಟ ಅದ್ಭುತಕರವಾದ ಮುನ್ನೋಟವನ್ನು ಗಮನಿಸಿರಿ. ಅವನು ಬರೆದುದು: “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು; ಇನ್ನು ಸಮುದ್ರವೂ ಇಲ್ಲ. . . . ದೇವರು ತಾನೇ [ಮಾನವಕುಲದ] ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಈ ವಾಗ್ದಾನಗಳ ಭರವಸಾರ್ಹತೆಯನ್ನು ಎತ್ತಿತೋರಿಸುವ ಹೇಳಿಕೆಯೋಪಾದಿ ಯೋಹಾನನಿಗೆ ಹೀಗೆ ಹೇಳಲಾಯಿತು: “ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.”​—ಪ್ರಕಟನೆ 21:1-5.

ಏದೆನಿನಲ್ಲಾದ ದಂಗೆಯಂದಿನಿಂದ ಮೃತರಾದ ಕೋಟಿಗಟ್ಟಲೆ ಮುಗ್ಧ ಜನರ ಕುರಿತಾಗಿ ಏನು? ಈಗ ಮರಣದಲ್ಲಿ ನಿದ್ರಿಸುತ್ತಿರುವವರನ್ನು ಉಜ್ಜೀವಿಸುವೆನೆಂದು ಯೆಹೋವನು ವಾಗ್ದಾನಿಸುತ್ತಾನೆ. ಅಪೊಸ್ತಲ ಪೌಲನು ಹೇಳಿದ್ದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” (ಅ. ಕೃತ್ಯಗಳು 24:15) ಇಂಥವರಿಗೆ, “ನೀತಿಯು ವಾಸವಾಗಿರುವ” ಲೋಕವೊಂದರಲ್ಲಿ ಜೀವಿಸುವ ಪ್ರತೀಕ್ಷೆಯಿರುವುದು.​—2 ಪೇತ್ರ 3:13.

ಒಂದು ನೋವುಭರಿತ ಶಸ್ತ್ರಚಿಕಿತ್ಸೆಗೆ ಒಳಗಾಗುವುದರಿಂದ ತನ್ನ ಮಗುವಿಗೆ ಮುಂದೆ ಬಾಳುವ ಪ್ರಯೋಜನಗಳು ಸಿಗುವವೆಂದು ಒಬ್ಬ ಪ್ರೀತಿಯ ತಂದೆಗೆ ತಿಳಿದಿರುವಲ್ಲಿ, ಆ ಮಗು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಅವನು ಬಿಡುವನು. ಹಾಗೆಯೇ ಯೆಹೋವನು ಸಹ, ಮನುಷ್ಯರು ತತ್ಕಾಲಕ್ಕೆ ಭೂಮಿಯ ಮೇಲೆ ದುಷ್ಟತನದ ಅಸ್ತಿತ್ವವನ್ನು ಅನುಭವಿಸುವಂತೆ ಅನುಮತಿಸಿದ್ದಾನೆ. ಆದರೆ ದೇವರ ಚಿತ್ತವನ್ನು ಮಾಡಲು ಪ್ರಯತ್ನಿಸುವವರೆಲ್ಲರಿಗಾಗಿ ನಿತ್ಯಕ್ಕೂ ಆಶೀರ್ವಾದಗಳು ಕಾದಿವೆ. ಪೌಲನು ವಿವರಿಸಿದ್ದು: “ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.”​—ರೋಮಾಪುರ 8:20, 21.

ಇದು ನಿಜವಾಗಿಯೂ ವಿಶೇಷವಾದ ವಾರ್ತೆಯಾಗಿದೆ. ಇದು ನಾವು ಟಿವಿಯಲ್ಲಿ ನೋಡುವ ಇಲ್ಲವೆ ವಾರ್ತಾಪತ್ರಿಕೆಯಲ್ಲಿ ಓದುವಂಥ ವಾರ್ತೆಯಲ್ಲ ಬದಲಾಗಿ ಸುವಾರ್ತೆಯಾಗಿದೆ. ನಮ್ಮ ಕುರಿತಾಗಿ ನಿಜವಾಗಿಯೂ ಚಿಂತಿಸುವ ‘ಸಕಲವಿಧವಾಗಿ ಸಂತೈಸುವ ದೇವರಿಂದ’ ಬರುವ ಅತ್ಯುತ್ತಮ ವಾರ್ತೆ ಇದಾಗಿದೆ.​—2 ಕೊರಿಂಥ 1:3.

[ಪುಟ 6ರಲ್ಲಿರುವ ಚಿತ್ರಗಳು]

ಮಾನವರು ದೇವರಿಂದ ಸ್ವತಂತ್ರರಾಗಿ ತಮ್ಮನ್ನು ಯಶಸ್ವಿಯಾಗಿ ಆಳಿಕೊಳ್ಳಲು ಸಾಧ್ಯವಿಲ್ಲವೆಂದು ಕಾಲವು ತೋರಿಸಿದೆ

[ಕೃಪೆ]

ಸೋಮಾಲಿಯದ ಕುಟುಂಬ: UN PHOTO 159849/M. GRANT; ಅಣು ಬಾಂಬು: USAF photo; ಸೆರೆಶಿಬಿರ: U.S. National Archives photo