ನೀವು ನಿಶ್ಚಿಂತ ಸ್ವಭಾವದವರು ಆಗಿರಬೇಕೋ?
ನೀವು ನಿಶ್ಚಿಂತ ಸ್ವಭಾವದವರು ಆಗಿರಬೇಕೋ?
ಒಬ್ಬ ನಿಶ್ಚಿಂತ ವ್ಯಕ್ತಿ, ಅಂದರೆ ಶಾಂತವಾದ, ಪ್ರಸನ್ನ, ಸಹಿಷ್ಣು ಸ್ವಭಾವದ ವ್ಯಕ್ತಿಯೆಂದು ಇತರರಿಂದ ಪರಿಗಣಿಸಲ್ಪಡುವುದು ಒಂದು ಅಭಿನಂದನೆಯಾಗಿದೆ ಎಂದು ಹೆಚ್ಚಿನ ಜನರಿಗನಿಸಬಹುದು. ಆದರೆ ನಿಶ್ಚಿಂತ ಸ್ವಭಾವದ ಇನ್ನೊಂದು ಮಗ್ಗುಲೂ ಇದೆ. ಬೈಬಲ್ ಹೇಳುವುದು “ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೇ ನಾಶವಾಗುವರು.” (ಜ್ಞಾನೋಕ್ತಿ 1:32) ಇದರರ್ಥವೇನು?
ಮೂಲ ಹೀಬ್ರು ಪದವನ್ನು ಇತರ ಬೈಬಲ್ ಭಾಷಾಂತರಗಳು, “ಅಜಾಗರೂಕ ನಿರಾತಂಕತೆ” (ಅಮೆರಿಕನ್ ಸ್ಟ್ಯಾಂಡರ್ಡ್ ವರ್ಷನ್), “ಆತ್ಮತೃಪ್ತಿ” (ದ ನ್ಯೂ ಅಮೆರಿಕನ್ ಬೈಬಲ್), ಮತ್ತು “ಸ್ವಸಂತುಷ್ಟಿ” (ದ ನ್ಯೂ ಇಂಗ್ಲಿಷ್ ಬೈಬಲ್) ಎಂಬಂಥ ಪದಗಳಿಂದ ತರ್ಜುಮೆ ಮಾಡುತ್ತವೆ. ಈ ಅರ್ಥದಲ್ಲಿ, ನಿಶ್ಚಿಂತೆಯನ್ನು ಸೋಮಾರಿತನ ಹಾಗೂ ಅಜಾಗರೂಕತೆ ಮತ್ತು ಹೀಗೆ ಮೊಂಡುತನ ಇಲ್ಲವೆ ಮೂರ್ಖತನದೊಂದಿಗೆ ಜೋಡಿಸಲಾಗಿದೆ.
ಪ್ರಥಮ ಶತಮಾನದಲ್ಲಿ, ಲವೊದಿಕೀಯದ ಸಭೆಯಲ್ಲಿದ್ದ ಕ್ರೈಸ್ತರು ತಮ್ಮ ಆತ್ಮಿಕ ಕೊರತೆಗಳ ಕುರಿತು ಎಷ್ಟು ಅಜಾಗರೂಕರಾಗಿದ್ದರೆಂದರೆ ಅವರಿಗೆ ಅವುಗಳ ಅರಿವೇ ಇರಲಿಲ್ಲ ಅಥವಾ ಚಿಂತೆಯೇ ಇರಲಿಲ್ಲ. ತಮಗೆ “ಒಂದರಲ್ಲಿಯೂ ಕೊರತೆಯಿಲ್ಲ”ವೆಂದು ಅವರು ಸ್ವಸಂತುಷ್ಟ ಭಾವನೆಯಿಂದ ಕೊಚ್ಚಿಕೊಂಡರು. ಯೇಸು ಕ್ರಿಸ್ತನು ಅವರನ್ನು ತಿದ್ದುತ್ತಾ, ತಮ್ಮ ಕ್ರೈಸ್ತ ಹುರುಪನ್ನು ಪುನರುಜ್ಜೀವಿಸುವಂತೆ ಅವರಿಗೆ ಕರೆಕೊಟ್ಟನು.—ಪ್ರಕಟನೆ 3:14-19.
ಸ್ವಸಂತುಷ್ಟ ಭಾವನೆಯು, ನೋಹನ ದಿನಗಳಲ್ಲಿದ್ದ ಜನರ ಗುಣಲಕ್ಷಣವೂ ಆಗಿತ್ತು. ಅವರು ಜೀವಿತದ ಲೌಕಿಕ ವಿಷಯಗಳಲ್ಲೇ ಮುಳುಗಿಹೋಗಿ, “ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೇ ಇದ್ದ”ರು. ಯೇಸು ನಂತರ ಕೂಡಿಸಿ ಹೇಳಿದ್ದು: “ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”—ಮತ್ತಾಯ 24:37-39.
ನಾವೀಗ “ಮನುಷ್ಯಕುಮಾರನು” ಅಂದರೆ ಯೇಸು ಕ್ರಿಸ್ತನ ‘ಪ್ರತ್ಯಕ್ಷತೆಯ ಕಾಲದಲ್ಲಿ’ ಜೀವಿಸುತ್ತಿದ್ದೇವೆಂದು ನೆರವೇರಿರುವ ಬೈಬಲ್ ಪ್ರವಾದನೆಗಳು ಸೂಚಿಸುತ್ತವೆ. ನಾವೆಂದಿಗೂ ಸ್ವಸಂತುಷ್ಟರು, ಅಜಾಗರೂಕರು, ಆತ್ಮತೃಪ್ತರು, ಅಂದರೆ ತಪ್ಪರ್ಥದಲ್ಲಿ ನಿಶ್ಚಿಂತ ಸ್ವಭಾವದವರು ಆಗದಿರೋಣ.—ಲೂಕ 21:29-36.