ಬಿಕ್ಕಟ್ಟಿನ ಸಮಯಗಳಲ್ಲಿ ಸಾಂತ್ವನ
ಬಿಕ್ಕಟ್ಟಿನ ಸಮಯಗಳಲ್ಲಿ ಸಾಂತ್ವನ
ಈ ದಿನಗಳಲ್ಲಿನ ವಾರ್ತೆಗಳು ಖಂಡಿತವಾಗಿಯೂ ಸಾಂತ್ವನದಾಯಕವಾಗಿರುವುದಿಲ್ಲ. ಒಬ್ಬ ವ್ಯಕ್ತಿಯು ಹೀಗೆ ಬರೆದನು: “ಸದ್ಯದ ಘಟನೆಗಳು ಎಷ್ಟು ಭಯಂಕರವಾಗಿವೆಯೆಂದರೆ, ಆರು ಗಂಟೆಯ ಟಿವಿ ವಾರ್ತೆಗಳನ್ನು ನೋಡಬೇಕೊ ಬೇಡವೊ ಎಂಬುದನ್ನು ನಿರ್ಣಯಿಸಲು ಧೈರ್ಯವು ಸಾಲದು.” ಯುದ್ಧ, ಭೀಕರ ಕೃತ್ಯಗಳು, ನರಳಾಟ, ಪಾತಕ ಮತ್ತು ರೋಗರುಜಿನಗಳಲ್ಲಿ ಲೋಕವು ಮುಳುಗಿಹೋಗಿದೆ. ಈ ಕೆಡುಕುಗಳು ನಮಗೆ ಈಗಾಗಲೇ ತಟ್ಟಿಲ್ಲವಾದರೆ, ಅವು ನಮ್ಮನ್ನು ನೇರವಾಗಿ ತಟ್ಟುವ ಸಮಯ ಹೆಚ್ಚು ದೂರವಿರಲಿಕ್ಕಿಲ್ಲ.
ಈ ಸ್ಥಿತಿಯ ಬಗ್ಗೆ ಬೈಬಲ್ ನಿಷ್ಕೃಷ್ಟವಾಗಿ ಮುಂತಿಳಿಸಿತ್ತು. ನಮ್ಮ ಸಮಯದ ಕುರಿತು ವರ್ಣಿಸುತ್ತಿರುವಾಗ, ದೊಡ್ಡ ದೊಡ್ಡ ಯುದ್ಧಗಳು, ಉಪದ್ರವಗಳು, ಬರಗಳು ಮತ್ತು ಭೂಕಂಪಗಳಾಗುವವು ಎಂದು ಯೇಸು ಹೇಳಿದನು. (ಲೂಕ 21:10, 11) ಜನರು ಉಗ್ರರೂ, ಹಣದಾಸೆಯುಳ್ಳವರೂ, ಒಳ್ಳೇದನ್ನು ಪ್ರೀತಿಸದವರೂ ಆಗಿರುವ ‘ಕಠಿನಕಾಲಗಳ’ ಕುರಿತಾಗಿ ಅಪೊಸ್ತಲ ಪೌಲನು ಬರೆದನು. ಆ ಅವಧಿಯನ್ನು ಅವನು ‘ಕಡೇ ದಿವಸಗಳು’ ಎಂದು ಕರೆದನು.—2 ತಿಮೊಥೆಯ 3:1-5.
ಹೀಗೆ, ಲೋಕದ ಪರಿಸ್ಥಿತಿಗಳನ್ನು ವರ್ಣಿಸುವಾಗ, ವಾರ್ತೆಗಳು ಬೈಬಲ್ ಏನನ್ನು ಮುಂತಿಳಿಸಿತ್ತೊ ಅದನ್ನು ಕೆಲವೊಂದು ರೀತಿಗಳಲ್ಲಿ ಹೋಲುತ್ತವೆ. ಆದರೆ ಈ ಹೋಲಿಕೆಯೊಂದನ್ನು ಬಿಟ್ಟರೆ ಬೇರಾವುದೇ ಹೋಲಿಕೆಯಿಲ್ಲ. ಈ ವಾರ್ತೆಗಳು ಕೊಡದಿರುವಂಥ ಒಂದು ದೃಷ್ಟಿಕೋನವನ್ನು ಬೈಬಲ್ ಕೊಡುತ್ತದೆ. ದೇವರ ಪ್ರೇರಿತ ವಾಕ್ಯದ ಮುಖಾಂತರ, ಇಷ್ಟೊಂದು ದುಷ್ಟತನ ಏಕಿದೆ ಎಂಬುದನ್ನು ಮಾತ್ರವಲ್ಲದೆ, ಭವಿಷ್ಯವು ಹೇಗಿರುವುದೆಂಬುದನ್ನೂ ನಾವು ಅರ್ಥಮಾಡಿಕೊಳ್ಳಬಲ್ಲೆವು.
ದೇವರು ದುಷ್ಟತನವನ್ನು ಹೇಗೆ ದೃಷ್ಟಿಸುತ್ತಾನೆ?
ನಮ್ಮ ದಿನಗಳ ಸಂಕಟಮಯ ಪರಿಸ್ಥಿತಿಗಳನ್ನು ದೇವರು ಹೇಗೆ ದೃಷ್ಟಿಸುತ್ತಾನೆಂಬುದನ್ನು ಬೈಬಲ್ ವಿವರಿಸುತ್ತದೆ. ಸದ್ಯದ ತೊಂದರೆಗಳನ್ನು ಆತನು ಮುಂಗಂಡಿದ್ದರೂ, ಆತನು ಅವುಗಳನ್ನು ಸಮ್ಮತಿಸುವುದೂ ಇಲ್ಲ, ಇಲ್ಲವೆ ಸದಾಕಾಲಕ್ಕೂ ಅವುಗಳನ್ನು ಸಹಿಸಿಕೊಳ್ಳುವುದೂ ಇಲ್ಲ. “ದೇವರು ಪ್ರೀತಿಸ್ವರೂಪಿ” ಎಂದು ಅಪೊಸ್ತಲ ಯೋಹಾನನು ಬರೆದನು. (1 ಯೋಹಾನ 4:8) ಯೆಹೋವನು ಜನರ ಕುರಿತಾಗಿ ತುಂಬ ಚಿಂತಿಸುತ್ತಾನೆ ಮತ್ತು ಎಲ್ಲಾ ರೀತಿಯ ಕೆಟ್ಟತನವನ್ನು ದ್ವೇಷಿಸುತ್ತಾನೆ. ದೇವರು ಒಳ್ಳೆಯವನೂ ಕರುಣಾಭರಿತನೂ ಆಗಿದ್ದು, ಭೂಮಿಯಿಂದ ದುಷ್ಟತನವನ್ನು ನಿರ್ಮೂಲಮಾಡುವ ಶಕ್ತಿಯೂ ಇಚ್ಛೆಯೂ ಉಳ್ಳವನಾಗಿರುವುದರಿಂದ, ಸಾಂತ್ವನಕ್ಕಾಗಿ ನಾವು ಆತನ ಬಳಿ ಹೋಗುವುದು ಯಥೋಚಿತವಾಗಿದೆ. ಕೀರ್ತನೆಗಾರನು ಬರೆದುದು: “ಅವನು [ದೇವರ ನೇಮಿತ ಸ್ವರ್ಗೀಯ ರಾಜನು] ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”—ಕೀರ್ತನೆ 72:12-14.
ಕಷ್ಟಪಡುತ್ತಿರುವವರನ್ನು ನೋಡಿ ನಿಮ್ಮ ಕರುಳು ಕಿತ್ತು ಬರುತ್ತದೊ? ಬಹುಶಃ ಹೌದು. ಸಹಾನುಭೂತಿಯು ಯೆಹೋವನು ನಮ್ಮಲ್ಲಿ ಬೇರೂರಿಸಿರುವ ಒಂದು ಗುಣವಾಗಿದೆ. ಏಕೆಂದರೆ ನಾವು ಆತನ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ. (ಆದಿಕಾಂಡ 1:26, 27) ಹೀಗಿರುವುದರಿಂದ, ಯೆಹೋವನು ಮಾನವರ ನರಳಾಟವನ್ನು ನೋಡಿ ಮನಸ್ಸನ್ನು ಕಲ್ಲುಮಾಡಿಕೊಳ್ಳುವುದಿಲ್ಲ ಎಂಬ ಭರವಸೆ ನಮಗಿದೆ. ಬೇರಾರಿಗಿಂತಲೂ ಹೆಚ್ಚಾಗಿ ಯೆಹೋವನನ್ನು ಆಪ್ತವಾಗಿ ಬಲ್ಲವನಾಗಿದ್ದ ಯೇಸು ಕಲಿಸಿದ್ದೇನೆಂದರೆ, ಯೆಹೋವನು ನಮ್ಮಲ್ಲಿ ತೀವ್ರ ಆಸಕ್ತಿಯುಳ್ಳವನಾಗಿದ್ದಾನೆ ಮತ್ತು ಕೋಮಲ ಕರುಣೆಯುಳ್ಳವನಾಗಿದ್ದಾನೆ.—ಮತ್ತಾಯ 10:29, 31.
ದೇವರು ಮಾನವಜಾತಿಯ ಬಗ್ಗೆ ಚಿಂತಿಸುತ್ತಾನೆಂಬುದಕ್ಕೆ ಸೃಷ್ಟಿಯು ತಾನೇ ಸಾಕ್ಷ್ಯ ಕೊಡುತ್ತದೆ. ದೇವರು “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ” ಎಂದು ಯೇಸು ಹೇಳಿದನು. (ಮತ್ತಾಯ 5:45) ಲುಸ್ತ್ರ ನಗರದ ಜನರಿಗೆ ಅಪೊಸ್ತಲ ಪೌಲನು ಹೇಳಿದ್ದು: “[ದೇವರು] ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರಮಾಡುತ್ತಾ ಬಂದವನು ಆತನೇ.”—ಅ. ಕೃತ್ಯಗಳು 14:17.
ದುಷ್ಟತನಕ್ಕೆ ಯಾರು ಜವಾಬ್ದಾರರು?
ಪೌಲನು ಲುಸ್ತ್ರದ ಜನರಿಗೆ ಹೀಗೂ ಹೇಳಿದ್ದು ಗಮನಾರ್ಹವಾದದ್ದಾಗಿದೆ: “ಗತಿಸಿಹೋದ ಕಾಲದಲ್ಲಿ [ದೇವರು] ಎಲ್ಲಾ ಜನಾಂಗಗಳನ್ನು ತಮ್ಮ ತಮ್ಮ ಮನಸ್ಸಿಗೆ ತೋಚಿದ ಮಾರ್ಗಗಳಲ್ಲಿ ನಡೆಯುವದಕ್ಕೆ ಬಿಟ್ಟನು.” ಹೀಗಿರುವುದರಿಂದ, ಜನಾಂಗಗಳು ಇಲ್ಲವೆ ಜನರೇ, ಯಾವುದರಲ್ಲಿ ಅವರು ಸಿಕ್ಕಿಬಿದ್ದಿದ್ದಾರೋ ಆ ಹೆಚ್ಚಿನ ಸಮಸ್ಯೆಗಳಿಗೆ ಬಹುಮಟ್ಟಿಗೆ ಜವಾಬ್ದಾರರಾಗಿದ್ದಾರೆ. ದೇವರನ್ನು ದೂಷಿಸಲು ಯಾವುದೇ ಕಾರಣವಿಲ್ಲ.—ಅ. ಕೃತ್ಯಗಳು 14:16.
ಆದರೆ ಕೆಟ್ಟ ಸಂಗತಿಗಳು ನಡೆಯುವಂತೆ ಯೆಹೋವನು ಅನುಮತಿಸುವುದೇಕೆ? ಅದರ ಬಗ್ಗೆ ಆತನು ಎಂದಾದರೂ ಕ್ರಮತೆಗೆದುಕೊಳ್ಳುವನೊ? ಈ ಪ್ರಶ್ನೆಗಳಿಗೆ ಉತ್ತರವು ದೇವರ ವಾಕ್ಯದಲ್ಲಿ ಮಾತ್ರ ಸಿಗಬಲ್ಲದು. ಏಕೆಂದರೆ ಈ ಉತ್ತರವು, ಇನ್ನೊಬ್ಬ ಆತ್ಮಜೀವಿ ಮತ್ತು ಅವನು ಅದೃಶ್ಯವಾದ ಆತ್ಮ-ಕ್ಷೇತ್ರದಲ್ಲಿ ಎಬ್ಬಿಸಿದಂಥ ಒಂದು ವಿವಾದಾಂಶದೊಂದಿಗೆ ನಿಕಟವಾಗಿ ಜೋಡಿಸಲ್ಪಟ್ಟಿದೆ.
[ಪುಟ 4ರಲ್ಲಿರುವ ಚಿತ್ರಗಳು]
ಮನುಷ್ಯರಿಗೆ ಸಹಾನುಭೂತಿಯೆಂಬುದಿದೆ. ಹೀಗಿರುವಾಗ ದೇವರು ಮಾನವ ಕಷ್ಟಾನುಭವದ ವಿಷಯದಲ್ಲಿ ಮಾನವರಿಗಿಂತ ಕಡಿಮೆ ಸೂಕ್ಷ್ಮಮತಿಯಾಗಿರುವನೊ?
[ಪುಟ 2ರಲ್ಲಿರುವ ಚಿತ್ರ ಕೃಪೆ]
COVER: Tank: UN PHOTO 158181/J. Isaac; earthquake: San Hong R-C Picture Company
[ಪುಟ 3ರಲ್ಲಿರುವ ಚಿತ್ರ ಕೃಪೆ]
ಮೇಲೆ ಎಡಕ್ಕೆ, ಕ್ರೊಏಷಿಯ: UN PHOTO 159208/S. ಶ್ವೇತಭವನ; ಹೊಟ್ಟೆಗಿಲ್ಲದ ಮಗು: UN PHOTO 146150 BY O. MONSEN