ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುದ್ಧಾನಂತರದ ವಿಸ್ತರಣೆಯಲ್ಲಿ ಪಾಲ್ಗೊಳ್ಳುವ ಅಮೂಲ್ಯ ಅವಕಾಶ

ಯುದ್ಧಾನಂತರದ ವಿಸ್ತರಣೆಯಲ್ಲಿ ಪಾಲ್ಗೊಳ್ಳುವ ಅಮೂಲ್ಯ ಅವಕಾಶ

ಜೀವನ ಕಥೆ

ಯುದ್ಧಾನಂತರದ ವಿಸ್ತರಣೆಯಲ್ಲಿ ಪಾಲ್ಗೊಳ್ಳುವ ಅಮೂಲ್ಯ ಅವಕಾಶ

ಫಿಲಿಪ್‌ ಎಸ್‌. ಹೋಫ್‌ಮಾನ್‌ ಅವರು ಹೇಳಿದಂತೆ

ಎರಡನೆಯ ವಿಶ್ವ ಯುದ್ಧವು, ಮೇ 1945ರಲ್ಲಿ ಕೊನೆಗೊಂಡಿತ್ತಷ್ಟೆ. ಅದೇ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಾರುವ ಚಟುವಟಿಕೆಗಳ ಮೇಲ್ವಿಚಾರಣೆಮಾಡುತ್ತಿದ್ದ ನೇತನ್‌ ಏಚ್‌. ನಾರ್‌ ಅವರು, 25 ವರ್ಷ ಪ್ರಾಯದ ತಮ್ಮ ಸೆಕ್ರಿಟರಿ ಮಿಲ್ಟನ್‌ ಜಿ. ಹೆನ್ಶಲ್‌ರೊಂದಿಗೆ ಡೆನ್ಮಾರ್ಕ್‌ಗೆ ಭೇಟಿಯಿತ್ತರು. ಎಲ್ಲರೂ ತವಕದಿಂದ ಎದುರುನೋಡುತ್ತಿದ್ದ ಆ ಭೇಟಿಗಾಗಿ ಒಂದು ದೊಡ್ಡ ಸಭಾಂಗಣವನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು. ಯುವಕರಾದ ನಮಗೆ, ಸಹೋದರ ಹೆನ್ಶಲ್‌ ಕೊಟ್ಟ ಭಾಷಣವು ವಿಶೇಷವಾಗಿ ಉತ್ತೇಜನದಾಯಕವಾಗಿತ್ತು, ಏಕೆಂದರೆ ಅವರು ನಮ್ಮ ಪ್ರಾಯದವರೇ ಆಗಿದ್ದರು ಮತ್ತು ತಮ್ಮ ಭಾಷಣದ ಶೀರ್ಷಿಕೆಯಾಗಿ, “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂಬ ವಿಷಯವನ್ನು ಆರಿಸಿಕೊಂಡಿದ್ದರು.​—ಪ್ರಸಂಗಿ 12:1.

ಲೋಕವ್ಯಾಪಕವಾಗಿ ಸಾರುವ ಕೆಲಸವನ್ನು ಹೆಚ್ಚಿಸಲು ಉದ್ರೇಕಕಾರಿ ಸಂಗತಿಗಳು ನಡೆಯುತ್ತಾ ಇವೆ ಮತ್ತು ನಾವು ಕೂಡ ಅದರಲ್ಲಿ ಒಳಗೂಡಸಾಧ್ಯವಿದೆ ಎಂಬುದನ್ನು ಆ ಭೇಟಿಯ ಸಮಯದಲ್ಲಿ ತಿಳಿದುಕೊಂಡೆವು. (ಮತ್ತಾಯ 24:14) ಉದಾಹರಣೆಗಾಗಿ, ಮಿಷನೆರಿ ಕೆಲಸಕ್ಕಾಗಿ ಯುವ ಪುರುಷರನ್ನೂ ಸ್ತ್ರೀಯರನ್ನೂ ತರಬೇತಿಗೊಳಿಸಲಿಕ್ಕಾಗಿ ಅಮೆರಿಕದಲ್ಲಿ ಒಂದು ಹೊಸ ಶಾಲೆಯು ಆರಂಭಿಸಲ್ಪಟ್ಟಿತ್ತು. ನಾವು ಆ ಶಾಲೆಗೆ ಆಮಂತ್ರಿಸಲ್ಪಟ್ಟರೆ, ನಮಗೆ “ಕೇವಲ ವನ್‌-ವೇ ಟಿಕೆಟ್‌” ಸಿಗುವುದು ಮತ್ತು ನಮ್ಮನ್ನು ಎಲ್ಲಿಗೆ ನೇಮಿಸಲಾಗುವುದೆಂಬುದು ನಮಗೆ ಗೊತ್ತಿರಲಿಕ್ಕಿಲ್ಲವೆಂಬ ವಿಷಯವನ್ನು ಸಹೋದರ ನಾರ್‌ ಒತ್ತಿಹೇಳಿದರು. ಹಾಗಿದ್ದರೂ, ನಮ್ಮಲ್ಲಿ ಕೆಲವರು ಆ ಶಾಲೆಗಾಗಿ ಅರ್ಜಿಯನ್ನು ಹಾಕಿದೆವು.

ಎರಡನೇ ವಿಶ್ವ ಯುದ್ಧಾನಂತರದ ನನ್ನ ಅನುಭವಗಳನ್ನು ನಿಮಗೆ ತಿಳಿಸುವ ಮುಂಚೆ, 1919ರಲ್ಲಿ ನನ್ನ ಜನನವಾದ ಸಮಯದಷ್ಟು ಹಿಂದಿನಿಂದ ನನ್ನ ಕಥೆಯನ್ನು ತಿಳಿಸುವೆ. ಯುದ್ಧಕ್ಕೆ ಮುಂಚೆ ಮತ್ತು ಯುದ್ಧದ ಸಮಯದಲ್ಲಿ ನಡೆದ ಅನೇಕ ಘಟನೆಗಳು ನನ್ನ ಜೀವಿತದ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದವು.

ಅಯೋಗ್ಯನಿಂದ ಪಡೆದ ಬೈಬಲ್‌ ಸತ್ಯ

ನಾನು ತಾಯಿಯ ಮೊದಲ ಮಗುವಾಗಿದ್ದೆ. ನಾನು ಅವರ ಗರ್ಭದಲ್ಲಿದ್ದಾಗ, ಹುಟ್ಟುವ ಮಗು ಹುಡುಗನಾದರೆ ಒಬ್ಬ ಮಿಷನೆರಿಯಾಗಲಿ ಎಂದು ಅವರು ಪ್ರಾರ್ಥಿಸಿದ್ದರಂತೆ. ಅವರ ಅಣ್ಣ ಒಬ್ಬ ಬೈಬಲ್‌ ವಿದ್ಯಾರ್ಥಿಯಾಗಿದ್ದರು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳನ್ನು ಹಾಗೆ ಕರೆಯಲಾಗುತ್ತಿತ್ತು. ಆದರೆ ಅವರ ಕುಟುಂಬದ ಇತರ ಸದಸ್ಯರು ಆ ಅಣ್ಣನನ್ನು ಅಯೋಗ್ಯನೆಂದು ಪರಿಗಣಿಸುತ್ತಿದ್ದರು. ನಮ್ಮ ಮನೆಯು ಕೋಪನ್‌ಹೇಗನ್‌ ಹತ್ತಿರವಿತ್ತು. ಆದುದರಿಂದ ಬೈಬಲ್‌ ವಿದ್ಯಾರ್ಥಿಗಳ ವಾರ್ಷಿಕ ಅಧಿವೇಶನಗಳು ಅಲ್ಲಿ ನಡೆಯುತ್ತಿದ್ದಾಗ, ಅಲ್ಲಿಂದ ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದ ಥಾಮಸ್‌ ಮಾವ ನಮ್ಮೊಂದಿಗೆ ಬಂದು ಉಳಿಯುವಂತೆ ಅಮ್ಮ ಆಮಂತ್ರಿಸುತ್ತಿದ್ದರು. ಅವರ ಬೆರಗುಗೊಳಿಸುವಂಥ ಬೈಬಲ್‌ ಜ್ಞಾನ ಮತ್ತು ತರ್ಕಬದ್ಧ ವಾದಸರಣಿಯು 1930ರಷ್ಟಕ್ಕೆ ತಾಯಿ ಕೂಡ ಒಬ್ಬ ಬೈಬಲ್‌ ವಿದ್ಯಾರ್ಥಿಯಾಗುವಂತೆ ಅವರನ್ನು ಮನಗಾಣಿಸಿತ್ತು.

ತಾಯಿಯವರು ಬೈಬಲನ್ನು ತುಂಬ ಪ್ರೀತಿಸುತ್ತಿದ್ದರು. ಧರ್ಮೋಪದೇಶಕಾಂಡ 6:7ರಲ್ಲಿರುವ ಆಜ್ಞೆಯನ್ನು ಪಾಲಿಸುತ್ತಾ ಅವರು ನನಗೂ ನನ್ನ ತಂಗಿಗೂ, ‘ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ’ ಕಲಿಸುತ್ತಿದ್ದರು. ಸಕಾಲದಲ್ಲಿ, ನಾನು ಮನೆಯಿಂದ ಮನೆಯ ಸಾರುವಿಕೆಯಲ್ಲಿ ಪಾಲ್ಗೊಳ್ಳಲಾರಂಭಿಸಿದೆ. ಚರ್ಚುಗಳು ಕಲಿಸುತ್ತಿದ್ದ ಅಮರ ಆತ್ಮ ಹಾಗೂ ನರಕಾಗ್ನಿಯಂಥ ವಿಷಯಗಳ ಕುರಿತಾಗಿ ಚರ್ಚಿಸುವುದು ನನಗೆ ತುಂಬ ಪ್ರಿಯವಾದ ಸಂಗತಿಯಾಗಿತ್ತು. ಆ ಬೋಧನೆಗಳು ತಪ್ಪಾಗಿವೆ ಎಂಬುದನ್ನು ನಾನು ಬೈಬಲಿನಿಂದ ಪರಿಣಾಮಕಾರಿಯಾದ ರೀತಿಯಲ್ಲಿ ತೋರಿಸಶಕ್ತನಾಗಿದ್ದೆ.​—ಕೀರ್ತನೆ 146:​3, 4; ಪ್ರಸಂಗಿ 9:​5, 10; ಯೆಹೆಜ್ಕೇಲ 18:4.

ನಮ್ಮ ಕುಟುಂಬವು ಐಕ್ಯವಾಯಿತು

ಇಸವಿ 1937ರಲ್ಲಿ ಕೋಪನ್‌ಹೇಗನ್‌ನಲ್ಲಿ ನಡೆದ ಅಧಿವೇಶನದ ಬಳಿಕ, ಯೆಹೋವನ ಸಾಕ್ಷಿಗಳ ಡೆನ್ಮಾರ್ಕ್‌ ಬ್ರಾಂಚ್‌ ಆಫೀಸಿನ ಸಾಹಿತ್ಯ ಡಿಪೋದಲ್ಲಿ ತತ್ಕಾಲಕ್ಕಾಗಿ ಸಹಾಯದ ಅಗತ್ಯವಿತ್ತು. ನಾನು ಆಗ ತಾನೇ ವಾಣಿಜ್ಯದ ಕಾಲೇಜಿನಲ್ಲಿ ನನ್ನ ವ್ಯಾಸಂಗವನ್ನು ಮುಗಿಸಿದ್ದೆ ಮತ್ತು ನನಗೆ ಯಾವುದೇ ಹಂಗುಗಳಿರಲಿಲ್ಲ. ಆದುದರಿಂದ ಡಿಪೋದಲ್ಲಿ ಸಹಾಯಮಾಡಲಿಕ್ಕಾಗಿ ನನ್ನನ್ನು ನೀಡಿಕೊಂಡೆ. ಡಿಪೋದಲ್ಲಿನ ಸೇವೆಯು ಮುಗಿದ ನಂತರ, ನನಗೆ ಬ್ರಾಂಚ್‌ ಆಫೀಸ್‌ನಲ್ಲಿ ಸಹಾಯಮಾಡುವಂತೆ ಕೇಳಲಾಯಿತು. ತದನಂತರ ಸ್ವಲ್ಪದರಲ್ಲೇ ನಾನು ಮನೆಯನ್ನು ಬಿಟ್ಟು, ಕೋಪನ್‌ಹೇಗನ್‌ನಲ್ಲಿದ್ದ ಬ್ರಾಂಚ್‌ಗೆ ಸ್ಥಳಾಂತರಿಸಿದೆ. ಆಗಿನ್ನೂ ನನ್ನ ದೀಕ್ಷಾಸ್ನಾನವಾಗಿರಲಿಲ್ಲ. ಆದರೆ ದಿನನಿತ್ಯವೂ ಪ್ರೌಢ ಕ್ರೈಸ್ತರೊಂದಿಗಿನ ಸಹವಾಸವು ನನಗೆ ಆತ್ಮಿಕವಾಗಿ ಪ್ರಗತಿಮಾಡಲು ಸಹಾಯಮಾಡಿತು. ಮುಂದಿನ ವರ್ಷ, ಅಂದರೆ 1938ರ ಜನವರಿ 1ರಂದು, ನೀರಿನ ದೀಕ್ಷಾಸ್ನಾನದ ಮೂಲಕ ನಾನು ಯೆಹೋವ ದೇವರಿಗೆ ಮಾಡಿದ ಸಮರ್ಪಣೆಯನ್ನು ಸಂಕೇತಿಸಿದೆ.

ಇಸವಿ 1939ರ ಸೆಪ್ಟೆಂಬರ್‌ ತಿಂಗಳಿನಲ್ಲಿ IIನೆಯ ವಿಶ್ವ ಯುದ್ಧವು ಆರಂಭವಾಯಿತು. ಆಮೇಲೆ, 1940ರ ಏಪ್ರಿಲ್‌ 9ರಂದು, ಜರ್ಮನ್‌ ಸೇನಾಪಡೆಗಳು ಡೆನ್ಮಾರ್ಕ್‌ ಅನ್ನು ವಶಪಡಿಸಿಕೊಂಡವು. ಡೆನ್ಮಾರ್ಕ್‌ ದೇಶದವರಿಗೆ ಸಾಧಾರಣ ಮಟ್ಟಿಗಿನ ವೈಯಕ್ತಿಕ ಸ್ವಾತಂತ್ರ್ಯವು ಅನುಮತಿಸಲ್ಪಟ್ಟಿದ್ದರಿಂದ, ನಮ್ಮ ಸಾರುವ ಚಟುವಟಿಕೆಗಳನ್ನು ನಾವು ಮುಂದುವರಿಸಲು ಶಕ್ತರಾಗಿದ್ದೆವು.

ಆಮೇಲೆ ಒಂದು ಅದ್ಭುತಕರವಾದ ಸಂಗತಿ ನಡೆಯಿತು. ನಮ್ಮ ತಂದೆಯೂ ಒಬ್ಬ ಸಕ್ರಿಯ, ನಿಷ್ಠಾವಂತ ಸಾಕ್ಷಿಯಾದರು. ಇದು ನಮ್ಮ ಕುಟುಂಬದ ಸಂತೋಷವನ್ನು ಪೂರ್ಣಗೊಳಿಸಿತು. ಆದುದರಿಂದ, ಡೆನ್ಮಾರ್ಕ್‌ ದೇಶದ ಇನ್ನಿತರ ನಾಲ್ಕು ಮಂದಿಯೊಂದಿಗೆ ನನಗೆ ಗಿಲ್ಯಡ್‌ ಶಾಲೆಯ ಎಂಟನೆಯ ತರಗತಿಗೆ ಹಾಜರಾಗುವ ಆಮಂತ್ರಣ ಸಿಕ್ಕಿದಾಗ, ನನ್ನ ಇಡೀ ಕುಟುಂಬವು ನನ್ನನ್ನು ಬೆಂಬಲಿಸಿತು. ಐದು ತಿಂಗಳ ಅವಧಿಯ ಆ ಶಾಲಾ ಕೋರ್ಸ್‌, 1946ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಆರಂಭವಾಯಿತು. ಅದನ್ನು, ನ್ಯೂ ಯಾರ್ಕ್‌ ರಾಜ್ಯದಲ್ಲಿರುವ ಸೌತ್‌ ಲಾನ್ಸಿಂಗ್‌ ಎಂಬಲ್ಲಿ ಸುಂದರವಾದ ಶಾಲಾ ಆವರಣದಲ್ಲಿ ನಡೆಸಲಾಯಿತು.

ಗಿಲ್ಯಡ್‌ ಮತ್ತು ಗಿಲ್ಯಡ್‌ ನಂತರದ ತರಬೇತಿ

ಗಿಲ್ಯಡ್‌ನಲ್ಲಿ ಒಳ್ಳೆಯ ಹೊಸ ಸ್ನೇಹಿತರನ್ನು ಮಾಡುವ ಅವಕಾಶಗಳು ಸಿಕ್ಕಿದವು. ಒಂದು ಸಾಯಂಕಾಲ, ಇಂಗ್ಲೆಂಡ್‌ನಿಂದ ಬಂದಿದ್ದ ಹ್ಯಾರಲ್ಡ್‌ ಕಿಂಗ್‌ ಎಂಬವರೊಂದಿಗೆ ಶಾಲಾ ಆವರಣದಲ್ಲಿ ಆರಾಮವಾಗಿ ನಡೆದಾಡುತ್ತಿದ್ದಾಗ, ನಮ್ಮ ತರಬೇತಿ ಮುಗಿದ ನಂತರ ನಮ್ಮನ್ನು ಎಲ್ಲಿ ಕಳುಹಿಸಲಾಗುವುದೊ ಎಂಬುದರ ಬಗ್ಗೆ ನಾವು ಮಾತಾಡಿದೆವು. “ನಾನು ಡೋವರ್‌ನ ಬಿಳಿ ಕಡಿಬಂಡೆಗಳನ್ನು ಕೊನೆ ಬಾರಿ ನೋಡಿಲ್ಲವೆಂದು ನೆನಸುತ್ತೇನೆ” ಎಂದು ಹ್ಯಾರಲ್ಡ್‌ ಹೇಳಿದರು. ಅವರ ಮಾತು ನಿಜವಾದವು. ಆದರೆ ಅವರು ಆ ಕಡಿಬಂಡೆಗಳನ್ನು ಪುನಃ ನೋಡಿದ್ದು 17 ವರ್ಷಗಳ ಬಳಿಕವೇ. ಮತ್ತು ಅವುಗಳಲ್ಲಿ ನಾಲ್ಕೂವರೆ ವರ್ಷಗಳನ್ನು ಅವರು ಒಂದು ಚೀನೀ ಸೆರೆಮನೆಯಲ್ಲಿ ಏಕಾಂತ ಸೆರೆವಾಸದಲ್ಲಿ ಕಳೆದಿದ್ದರು! *

ನಮ್ಮ ಪದವಿಪ್ರಾಪ್ತಿಯ ನಂತರ, ಅಮೆರಿಕದ ಟೆಕ್ಸಸ್‌ ಎಂಬಲ್ಲಿಗೆ, ಯೆಹೋವನ ಸಾಕ್ಷಿಗಳ ಸಭೆಗಳಿಗೆ ಆತ್ಮಿಕ ಸಹಾಯವನ್ನು ಕೊಡಲಿಕ್ಕಾಗಿ ಅವುಗಳನ್ನು ಸಂದರ್ಶಿಸುತ್ತಾ, ಒಬ್ಬ ಸಂಚರಣ ಮೇಲ್ವಿಚಾರಕನಾಗಿ ಸೇವೆಸಲ್ಲಿಸಲು ನನ್ನನ್ನು ಕಳುಹಿಸಲಾಯಿತು. ಅಲ್ಲಿ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಲಾಯಿತು. ಟೆಕ್ಸಸ್‌ನಲ್ಲಿದ್ದ ಸಹೋದರರಿಗೆ, ಆಗತಾನೇ ಗಿಲ್ಯಡ್‌ ಶಾಲೆಯಿಂದ ಹೊರಬಂದಿದ್ದ ಒಬ್ಬ ಯುವ ಯೂರೋಪಿಯನ್‌ ವ್ಯಕ್ತಿಯನ್ನು ಭೇಟಿಯಾಗುವುದು ಆಸಕ್ತಿಕರವಾದ ವಿಷಯವಾಗಿತ್ತು. ಆದರೆ ಟೆಕ್ಸಸ್‌ನಲ್ಲಿ ಕೇವಲ ಏಳು ತಿಂಗಳುಗಳನ್ನು ಕಳೆಯುವುದರೊಳಗೆ, ನನ್ನನ್ನು ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯಕ್ಕೆ ಕರೆಯಲಾಯಿತು. ಅಲ್ಲಿ ಸಹೋದರ ನಾರ್‌ ಅವರು ನನ್ನನ್ನು ಆಫೀಸ್‌ ಕೆಲಸಕ್ಕೆ ನೇಮಿಸಿದರು ಮತ್ತು ಬೆತೆಲ್‌ನಲ್ಲಿರುವ ಎಲ್ಲಾ ಡಿಪಾರ್ಟ್‌ಮೆಂಟ್‌ಗಳಲ್ಲಿ ಕೆಲಸವನ್ನು ಹೇಗೆ ಮಾಡಲಾಗುತ್ತಿದೆ ಎಂಬುದನ್ನು ಕಲಿತುಕೊಳ್ಳುವ ಸೂಚನೆಗಳನ್ನು ಕೊಟ್ಟರು. ಆಮೇಲೆ ನಾನು ಡೆನ್ಮಾರ್ಕ್‌ಗೆ ಹಿಂದಿರುಗುವಾಗ, ನಾನೇನು ಕಲಿತಿದ್ದೆನೋ ಅದೆಲ್ಲವನ್ನು ಅಲ್ಲಿ ಕಾರ್ಯರೂಪಕ್ಕೆ ಹಾಕಬೇಕಾಗಿತ್ತು. ಅಂದರೆ ಬ್ರೂಕ್ಲಿನ್‌ನಲ್ಲಿ ಕೆಲಸವು ಮಾಡಲ್ಪಡುವಂಥ ರೀತಿಯಲ್ಲೇ ಡೆನ್ಮಾರ್ಕ್‌ನಲ್ಲೂ ಕೆಲಸವು ಮಾಡಲ್ಪಡುವಂತೆ ನೋಡಿಕೊಳ್ಳಬೇಕಿತ್ತು. ಇದರ ಉದ್ದೇಶವು, ಹೆಚ್ಚಿನ ಕಾರ್ಯದಕ್ಷತೆಗಾಗಿ ಭೂಮ್ಯಾದ್ಯಂತವಿರುವ ಬ್ರಾಂಚ್‌ಗಳಲ್ಲಿನ ಕಾರ್ಯಾಚರಣೆಗಳನ್ನು ಏಕಪ್ರಕಾರವಾಗಿ ಮಾಡುವುದೇ ಆಗಿತ್ತು. ತದನಂತರ, ಸಹೋದರ ನಾರ್‌ ನನ್ನನ್ನು ಜರ್ಮನಿಗೆ ಸ್ಥಳಾಂತರಿಸಿದರು.

ಬ್ರಾಂಚ್‌ಗಳಲ್ಲಿ ಸೂಚನೆಗಳನ್ನು ಅನ್ವಯಿಸುವುದು

ಜುಲೈ 1949ರಲ್ಲಿ ನಾನು ಜರ್ಮನಿಯ ವೀಸ್‌ಬಾಡನ್‌ನಲ್ಲಿ ಆಗಮಿಸಿದಾಗ ಅನೇಕ ಜರ್ಮನ್‌ ನಗರಗಳು ಹಾಳುಬಿದ್ದಿದ್ದವು. ಸಾರುವ ಕಾರ್ಯದಲ್ಲಿ ಮುಂದಾಳತ್ವವನ್ನು ವಹಿಸುತ್ತಿದ್ದವರು, 1933ರಲ್ಲಿ ಹಿಟ್ಲರನು ಅಧಿಕಾರಕ್ಕೆ ಬಂದಂದಿನಿಂದ ಹಿಂಸಿಸಲ್ಪಟ್ಟಿದ್ದ ಪುರುಷರಾಗಿದ್ದರು. ಅವರಲ್ಲಿ ಕೆಲವರು ಎಂಟು, ಹತ್ತು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಸೆರೆಮನೆಯಲ್ಲಿ ಮತ್ತು ಸೆರೆಶಿಬಿರಗಳಲ್ಲಿ ಇದ್ದವರಾಗಿದ್ದರು! ಯೆಹೋವನ ಅಂಥ ಸೇವಕರೊಂದಿಗೆ ನಾನು ಮೂರೂವರೆ ವರ್ಷಗಳ ಕಾಲ ಕೆಲಸಮಾಡಿದೆ. ಅವರ ಅಪೂರ್ವ ಮಾದರಿಯು, ಗಾಬ್ರಿಯೇಲಾ ಯೋನಾನ್‌ ಎಂಬ ಜರ್ಮನ್‌ ಇತಿಹಾಸಗಾರ್ತಿಯು ನುಡಿದ ಹೇಳಿಕೆಯನ್ನು ನನ್ನ ನೆನಪಿಗೆ ತರುತ್ತದೆ. ಅವಳು ಹೀಗೆ ಬರೆದಿದ್ದಳು: “ರಾಷ್ಟ್ರೀಯ ಸಮಾಜವಾದಿ ಸರ್ವಾಧಿಕಾರದ ಕೆಳಗೆ ಈ ಸ್ಥಿರಚಿತ್ತ ಕ್ರೈಸ್ತ ಗುಂಪಿನ ಮಾದರಿ ಇಲ್ಲದಿರುತ್ತಿದ್ದರೆ, ಔಷ್‌ವಿಟ್ಸ್‌ ಶಿಬಿರದ ಭೀಕರತೆಗಳು ಮತ್ತು ಸಾಮೂಹಿಕ ನರಹತ್ಯೆಯನ್ನು ನೋಡಿದ ನಂತರ, ಯೇಸುವಿನ ಕ್ರೈಸ್ತ ಬೋಧನೆಗಳನ್ನು ನಿಜವಾಗಿ ಅನ್ವಯಿಸಲು ಸಾಧ್ಯವಿದೆಯೊ ಎಂದು ನಾವು ಶಂಕಿಸಬೇಕಾಗುತ್ತಿತ್ತು.”

ಡೆನ್ಮಾರ್ಕ್‌ನಲ್ಲಿ ನನಗಿದ್ದ ಕೆಲಸವೇ ಈ ಬ್ರಾಂಚ್‌ನಲ್ಲೂ ಇತ್ತು: ಸಂಘಟನಾತ್ಮಕ ವಿಷಯಗಳನ್ನು ನಿರ್ವಹಿಸುವ ಹೊಸ, ಏಕಪ್ರಕಾರದ ವಿಧಾನವನ್ನು ಪರಿಚಯಿಸುವುದೇ. ಈ ಹೊಂದಾಣಿಕೆಗಳು ಅವರ ಕೆಲಸವನ್ನು ಟೀಕಿಸುವುದಕ್ಕಾಗಿ ಮಾಡಲ್ಪಡುತ್ತಿಲ್ಲ, ಬದಲಾಗಿ ವಿಭಿನ್ನ ಬ್ರಾಂಚ್‌ಗಳು ಮತ್ತು ಮುಖ್ಯಕಾರ್ಯಾಲಯದ ನಡುವೆ ಹೆಚ್ಚು ನಿಕಟವಾದ ಸಹಕಾರಕ್ಕಾಗಿ ಸಮಯವು ಒದಗಿ ಬಂದಿತ್ತೆಂಬುದನ್ನು ಜರ್ಮನ್‌ ಸಹೋದರರು ಗ್ರಹಿಸಿದ ಕೂಡಲೇ, ಅವರು ಹುರುಪಿನಿಂದ ಮತ್ತು ಸಹಕಾರದ ಉತ್ತಮ ಮನೋಭಾವದಿಂದ ತುಂಬಿದವರಾದರು.

ಇಸವಿ 1952ರಲ್ಲಿ, ಸ್ವಿಟ್ಸರ್ಲೆಂಡ್‌ನ ಬರ್ನ್‌ನಲ್ಲಿರುವ ಬ್ರಾಂಚ್‌ಗೆ ಹೋಗುವಂತೆ ನನ್ನನ್ನು ನಿರ್ದೇಶಿಸಿದ ಒಂದು ಪತ್ರ ಸಹೋದರ ನಾರ್‌ರವರ ಆಫೀಸಿನಿಂದ ಬಂತು. ನನಗೆ ಅಲ್ಲಿ, 1953ರ ಜನವರಿ 1ರಿಂದಾರಂಭಿಸಿ ಬ್ರಾಂಚ್‌ ಮೇಲ್ವಿಚಾರಕನಾಗಿ ಸೇವೆಸಲ್ಲಿಸುವಂತೆ ನೇಮಿಸಲಾಯಿತು.

ಸ್ವಿಟ್ಸರ್ಲೆಂಡ್‌ನಲ್ಲಿ ಹೊಸ ರೀತಿಯ ಆನಂದಗಳು

ಸ್ವಿಟ್ಸರ್ಲೆಂಡ್‌ನಲ್ಲಿ ಆಗಮಿಸಿದ ಸ್ವಲ್ಪ ಸಮಯದೊಳಗೆ, ಒಂದು ಅಧಿವೇಶನದಲ್ಲಿ ನನಗೆ ಎಸ್ಟರ್‌ಳ ಪರಿಚಯವಾಯಿತು ಮತ್ತು ಬೇಗನೆ ನಮ್ಮ ನಿಶ್ಚಿತಾರ್ಥವಾಯಿತು. 1954ರ ಆಗಸ್ಟ್‌ ತಿಂಗಳಿನಲ್ಲಿ ಸಹೋದರ ನಾರ್‌ ಅವರು ನನಗೆ ಬ್ರೂಕ್ಲಿನ್‌ಗೆ ಬರುವಂತೆ ನಿರ್ದೇಶಿಸಿದರು. ಅಲ್ಲಿ ನನಗೆ ಒಂದು ಹೊಸ, ರೋಮಾಂಚಕ ಕೆಲಸದ ಸ್ವರೂಪವನ್ನು ಪ್ರಕಟಿಸಲಾಯಿತು. ಲೋಕದ ಸುತ್ತಲೂ ಬ್ರಾಂಚ್‌ ಆಫೀಸುಗಳ ಸಂಖ್ಯೆ ಹಾಗೂ ಗಾತ್ರ ತುಂಬ ಬೆಳೆದಿದ್ದುದರಿಂದ, ಒಂದು ಹೊಸ ಏರ್ಪಾಡು ಚಾಲ್ತಿಗೆ ಬರಲಿಕ್ಕಿತ್ತು. ಇಡೀ ಲೋಕವನ್ನು ವಲಯಗಳಾಗಿ ವಿಭಾಗಿಸಲಾಗಿತ್ತು, ಮತ್ತು ಪ್ರತಿಯೊಂದು ವಲಯದಲ್ಲಿ ಒಬ್ಬ ವಲಯ (ಸೋನ್‌) ಮೇಲ್ವಿಚಾರಕರು ಸೇವೆಸಲ್ಲಿಸಲಿದ್ದರು. ನನಗೆ ಇಂಥ ಎರಡು ವಲಯಗಳನ್ನು ಕೊಡಲಾಯಿತು: ಯೂರೋಪ್‌ ಹಾಗೂ ಮೆಡಿಟರೇನಿಯನ್‌ ಸಮುದ್ರದ ಕ್ಷೇತ್ರವೇ.

ಬ್ರೂಕ್ಲಿನ್‌ನಲ್ಲಿ ನನ್ನ ಸಂಕ್ಷಿಪ್ತ ಭೇಟಿಯಿಂದ ನಾನು ಸ್ವಿಟ್ಸರ್ಲೆಂಡ್‌ಗೆ ಮರಳಿ ಬಂದ ಕೂಡಲೇ ಸೋನ್‌ ಕೆಲಸಕ್ಕಾಗಿ ತಯಾರಿಮಾಡಲಾರಂಭಿಸಿದೆ. ಎಸ್ಟರ್‌ ಮತ್ತು ನಾನು ವಿವಾಹವಾಗಿದ್ದೆವು, ಮತ್ತು ಅವಳು ಸ್ವಿಟ್ಸರ್ಲೆಂಡ್‌ನಲ್ಲಿದ್ದ ಬ್ರಾಂಚ್‌ ಆಫೀಸಿನಲ್ಲಿ ಕೆಲಸ ಮಾಡಲು ನನ್ನನ್ನು ಜೊತೆಗೂಡಿದಳು. ನನ್ನ ಪ್ರಥಮ ಸಂಚಾರದಲ್ಲಿ ನಾನು ಇಟಲಿ, ಗ್ರೀಸ್‌, ಸೈಪ್ರಸ್‌, ಮಧ್ಯ ಪೂರ್ವದ ಹಾಗೂ ಉತ್ತರ ಆಫ್ರಿಕದ ಕರಾವಳಿಯಾದ್ಯಂತವಿದ್ದ ದೇಶಗಳು ಹಾಗೂ ಸ್ಪೆಯಿನ್‌ ಮತ್ತು ಪೋರ್ಚುಗಲ್‌ನಲ್ಲಿದ್ದ ಮಿಷನೆರಿ ಗೃಹಗಳು ಹಾಗೂ ಬ್ರಾಂಚ್‌ಗಳನ್ನು, ಹೀಗೆ ಒಟ್ಟು 13 ದೇಶಗಳನ್ನು ಭೇಟಿಮಾಡಿದೆ. ಸ್ವಲ್ಪ ಸಮಯ ಬರ್ನ್‌ನಲ್ಲಿ ತಂಗಿದ ಬಳಿಕ, ಕಬ್ಬಿಣದ ಪರದೆಯ ಪಶ್ಚಿಮಕ್ಕಿದ್ದ ಬೇರೆಲ್ಲ ಯೂರೋಪಿಯನ್‌ ದೇಶಗಳಿಗೆ ನನ್ನ ಪ್ರಯಾಣವನ್ನು ಮುಂದುವರಿಸಿದೆ. ನಮ್ಮ ವಿವಾಹವಾದ ಮೊದಲನೆಯ ವರ್ಷದಲ್ಲಿ, ನಮ್ಮ ಕ್ರೈಸ್ತ ಸಹೋದರರ ಸೇವೆಮಾಡುತ್ತಾ ನಾನು ಆರು ತಿಂಗಳುಗಳ ವರೆಗೆ ಮನೆಯಿಂದ ದೂರದಲ್ಲಿದ್ದೆ.

ಬದಲಾದ ಪರಿಸ್ಥಿತಿಗಳು

ಇಸವಿ 1957ರಲ್ಲಿ, ತಾನು ಗರ್ಭಿಣಿಯಾಗಿದ್ದೇನೆಂದು ಎಸ್ಟರ್‌ಳಿಗೆ ಗೊತ್ತಾಯಿತು. ಬ್ರಾಂಚ್‌ನಲ್ಲಿ ಮಕ್ಕಳುಳ್ಳ ಹೆತ್ತವರಿಗೆ ಸೌಕರ್ಯವಿಲ್ಲದಿರುವುದರಿಂದ, ನಾವು ಡೆನ್ಮಾರ್ಕ್‌ಗೆ ಸ್ಥಳಾಂತರಿಸಲು ನಿರ್ಣಯಿಸಿದೆವು. ಅಲ್ಲಿ ತಂದೆಯವರು ನಾವು ಅವರೊಂದಿಗೆ ಉಳಿಯುವಂತೆ ಸ್ವಾಗತಿಸಿದರು. ಎಸ್ಟರ್‌ ನಮ್ಮ ಮಗಳಾದ ರಾಕೆಲ್‌ ಮತ್ತು ನನ್ನ ತಂದೆ​—ಇವರಿಬ್ಬರ ಆರೈಕೆಯನ್ನು ಮಾಡಿದಳು, ಮತ್ತು ನಾನು ಅಲ್ಲಿ ಹೊಸದಾಗಿ ಕಟ್ಟಲ್ಪಟ್ಟಿದ್ದ ಬ್ರಾಂಚ್‌ ಆಫೀಸಿನ ಕೆಲಸದಲ್ಲಿ ಸಹಾಯಮಾಡಿದೆ. ಸಭಾ ಮೇಲ್ವಿಚಾರಕರಿಗಾಗಿದ್ದ ರಾಜ್ಯ ಶುಶ್ರೂಷಾ ಶಾಲೆಯಲ್ಲಿ ನಾನು ಒಬ್ಬ ಉಪದೇಶಕನಾಗಿ ಸೇವೆಮಾಡಿದೆ ಮತ್ತು ಒಬ್ಬ ಸೋನ್‌ ಮೇಲ್ವಿಚಾರಕನಾಗಿಯೂ ಕೆಲಸಮಾಡುವುದನ್ನು ಮುಂದುವರಿಸಿದೆ.

ಸೋನ್‌ ಕೆಲಸದಲ್ಲಿ, ತುಂಬ ದೀರ್ಘ ಸಮಯಾವಧಿಗಳ ವರೆಗೆ ಪ್ರಯಾಣಮಾಡಬೇಕಾಗುತ್ತಿತ್ತು. ಮತ್ತು ಇದರಿಂದಾಗಿ ನಮ್ಮ ಮಗಳಿಂದ ನಾನು ತುಂಬ ದೀರ್ಘ ಸಮಯದ ವರೆಗೆ ದೂರವಿರಬೇಕಾಗುತ್ತಿತ್ತು. ಆದಕಾರಣ ಕೆಲವೊಂದು ನಕಾರಾತ್ಮಕ ಪರಿಣಾಮಗಳು ಇದ್ದವು. ಒಮ್ಮೆ, ನಾನು ಪ್ಯಾರಿಸ್‌ನಲ್ಲಿ ಬಹಳಷ್ಟು ಸಮಯವನ್ನು ಕಳೆದೆ. ಏಕೆಂದರೆ ಅಲ್ಲಿ ನಾವೊಂದು ಚಿಕ್ಕ ಮುದ್ರಣಾಲಯವನ್ನು ಸ್ಥಾಪಿಸಿದ್ದೆವು. ಎಸ್ಟರ್‌ ಮತ್ತು ರಾಕೆಲ್‌ ನನ್ನನ್ನು ಅಲ್ಲಿ ನೋಡಲಿಕ್ಕಾಗಿ ಟ್ರೈನ್‌ನಲ್ಲಿ ಬಂದರು, ಮತ್ತು ಗಾರ್‌ ಡ್ಯೂ ನಾರ್‌ ಎಂಬಲ್ಲಿ ಆಗಮಿಸಿದರು. ಬ್ರಾಂಚ್‌ನಿಂದ ಲೇಆಪಾಲ್‌ ಸಾಂಟೇ ಮತ್ತು ನಾನು ಅವರನ್ನು ಬರಮಾಡಿಕೊಳ್ಳಲಿಕ್ಕಾಗಿ ಅಲ್ಲಿಗೆ ಹೋದೆವು. ರಾಕೆಲ್‌, ಟ್ರೈನಿನ ಒಂದು ಮೆಟ್ಟಿಲಿನ ಮೇಲೆ ನಿಂತು, ಒಮ್ಮೆ ಲೇಆಪಾಲ್‌ನನ್ನು, ಒಮ್ಮೆ ನನ್ನನ್ನು, ಮತ್ತು ಪುನಃ ಲೇಆಪಾಲ್‌ನನ್ನು ನೋಡಿ, ಅವರನ್ನೇ ಅಪ್ಪಿಕೊಂಡಳು!

ಇನ್ನೊಂದು ಗಮನಾರ್ಹವಾದ ಬದಲಾವಣೆಯು ನಾನು 45 ವರ್ಷದವನಾದಾಗ ಸಂಭವಿಸಿತು. ಆಗ ನನ್ನ ಕುಟುಂಬವನ್ನು ಪೋಷಿಸಲಿಕ್ಕಾಗಿ ನಾನು ಪೂರ್ಣ ಸಮಯದ ಸೇವೆಯನ್ನು ಬಿಟ್ಟು, ಐಹಿಕ ಕೆಲಸವನ್ನು ಮಾಡಬೇಕಾಯಿತು. ಯೆಹೋವನ ಸಾಕ್ಷಿಗಳ ಒಬ್ಬ ಶುಶ್ರೂಷಕನೋಪಾದಿ ನನಗಿದ್ದ ಅನುಭವದಿಂದಾಗಿ, ನಾನು ರಫ್ತು ಮ್ಯಾನೇಜರನಾಗಿ ಒಂದು ಉದ್ಯೋಗವನ್ನು ಪಡೆಯಲು ಶಕ್ತನಾದೆ. ಅದೇ ಕಂಪನಿಯಲ್ಲಿ ನಾನು ಸುಮಾರು ಒಂಬತ್ತು ವರ್ಷಗಳ ವರೆಗೆ ಕೆಲಸಮಾಡಿ, ರಾಕೆಲ್‌ ಶಾಲೆಯನ್ನು ಮುಗಿಸಿದ ನಂತರ, ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ಕ್ಷೇತ್ರಕ್ಕೆ ಸ್ಥಳಾಂತರಿಸುವಂತೆ ಕೊಡಲ್ಪಟ್ಟಿದ್ದ ಉತ್ತೇಜನಕ್ಕೆ ಪ್ರತಿಕ್ರಿಯೆ ತೋರಿಸಲು ನಾವು ನಿರ್ಧರಿಸಿದೆವು.

ನಾರ್ವೆಗೆ ಹೋಗುವ ಅವಕಾಶಗಳನ್ನು ಪರಿಶೀಲಿಸಿದ ನಂತರ, ಅಲ್ಲಿ ಒಂದು ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆಯೊ ಎಂದು ಒಂದು ಉದ್ಯೋಗದ ಏಜೆನ್ಸಿಯಲ್ಲಿ ವಿಚಾರಿಸಿದೆ. ಅವರು ಕೊಟ್ಟ ಉತ್ತರವು ಅಷ್ಟು ಉತ್ತೇಜನಕರವಾಗಿರಲಿಲ್ಲ. 55 ವರ್ಷ ಪ್ರಾಯದ ಒಬ್ಬ ವ್ಯಕ್ತಿಗೆ ಕೆಲಸವು ಸಿಗುವ ಸಂಭವ ತೀರ ಕಡಿಮೆಯಾಗಿತ್ತು. ಹಾಗಿದ್ದರೂ, ನಾನು ಆಸ್ಲೊದಲ್ಲಿದ್ದ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿದೆ ಮತ್ತು ನಂತರ ಡ್ರೊಬ್ಯಾಕ್‌ ಎಂಬ ಪಟ್ಟಣದ ಹತ್ತಿರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡೆ. ಉದ್ಯೋಗದ ಅವಕಾಶವು ಹೇಗಾದರೂ ಸಿಗುವುದೆಂಬ ಭರವಸೆಯನ್ನಿಟ್ಟೆ ಮತ್ತು ಕೊನೆಗೆ ಅದು ಸಿಕ್ಕಿತು. ಆಮೇಲೆ ನಾರ್ವೆಯಲ್ಲಿ ನಾವು ರಾಜ್ಯ ಸೇವೆಯಲ್ಲಿ ಬಹಳಷ್ಟು ಸಂತೋಷವನ್ನು ಅನುಭವಿಸಿದೆವು.

ನಮ್ಮ ಸಭೆಯು, ಉತ್ತರ ದಿಕ್ಕಿನಲ್ಲಿ ಯಾರಿಗೂ ನೇಮಿಸಲ್ಪಟ್ಟಿರದ ಟೆರಿಟೊರಿಯಲ್ಲಿ ಕೆಲಸಮಾಡಲು ಪ್ರವಾಸಗಳನ್ನು ಮಾಡಿದಾಗ ನಾವು ಅತ್ಯುತ್ತಮವಾದ ಸಮಯಗಳಲ್ಲಿ ಆನಂದಿಸಿದೆವು. ಶಿಬಿರಹೂಡುವ ಒಂದು ನಿವೇಶನದಲ್ಲಿ ನಾವು ಕುಟೀರಗಳನ್ನು ಬಾಡಿಗೆಗೆ ತೆಗೆದುಕೊಂಡು, ಪ್ರತಿ ದಿನ ಅಲ್ಲಿನ ಭವ್ಯವಾದ ಪರ್ವತಗಳಲ್ಲಿ ಹರಡಿಕೊಂಡಿದ್ದ ಫಾರ್ಮ್‌ಗಳನ್ನು ಸಂದರ್ಶಿಸಿದೆವು. ಈ ಸ್ನೇಹಪರ ಜನರಿಗೆ ದೇವರ ರಾಜ್ಯದ ಕುರಿತಾಗಿ ತಿಳಿಸುವುದು ನಮಗೆ ಬಹಳಷ್ಟು ಆನಂದವನ್ನು ತಂದಿತು. ಬಹಳಷ್ಟು ಸಾಹಿತ್ಯವನ್ನು ನೀಡಲಾಯಿತು. ಆದರೆ ಅವರಿಗೆ ಪುನರ್ಭೇಟಿಗಳನ್ನು ಮಾಡಲು, ನಾವು ಮುಂದಿನ ವರ್ಷದ ವರೆಗೆ ಕಾಯಬೇಕಾಯಿತು. ಹಾಗಿದ್ದರೂ ಆ ಜನರು ನಮ್ಮನ್ನು ಮರೆತುಬಿಡಲಿಲ್ಲ! ನಾವು ಪುನಃ ಅಲ್ಲಿ ಹಿಂದಿರುಗಿ ಹೋದಾಗ ಜನರು ನಮ್ಮನ್ನು, ಎಷ್ಟೋ ಸಮಯದಿಂದ ಕಳೆದುಹೋಗಿದ್ದ ಕುಟುಂಬ ಸದಸ್ಯರಂತೆ ಅಪ್ಪಿಕೊಂಡದ್ದನ್ನು ಎಸ್ಟರ್‌ ಮತ್ತು ರಾಕೆಲ್‌ರು ಈಗಲೂ ನೆನಪಿಸಿಕೊಳ್ಳುತ್ತಾರೆ. ನಾರ್ವೆಯಲ್ಲಿ ಮೂರು ವರ್ಷಗಳನ್ನು ಕಳೆದ ನಂತರ, ನಾವು ಡೆನ್ಮಾರ್ಕ್‌ಗೆ ಹಿಂದಿರುಗಿದೆವು.

ಕುಟುಂಬ ಜೀವಿತದ ಆನಂದಗಳು

ಸ್ವಲ್ಪದರಲ್ಲೇ, ನಿಲ್ಸ್‌ ಹೋಯಾ ಎಂಬ ಹುರುಪಿನ ಪೂರ್ಣ ಸಮಯದ ಪಯನೀಯರ್‌ ಶುಶ್ರೂಷಕನೊಂದಿಗೆ ರಾಕೆಲ್‌ಳ ನಿಶ್ಚಿತಾರ್ಥವಾಯಿತು. ಅವರ ಮದುವೆಯಾದ ನಂತರ ನಿಲ್ಸ್‌ ಮತ್ತು ರಾಕೆಲ್‌, ಅವರಿಗೆ ಮಕ್ಕಳು ಹುಟ್ಟುವ ವರೆಗೆ ಪಯನೀಯರರಾಗಿ ಮುಂದುವರಿದರು. ನಿಲ್ಸ್‌ ಒಬ್ಬ ಒಳ್ಳೇ ಗಂಡನೂ, ಉತ್ತಮ ತಂದೆಯೂ ಆಗಿದ್ದನು. ಒಂದು ಮುಂಜಾನೆ ಸೂರ್ಯೋದಯವಾಗುವುದನ್ನು ನೋಡಲಿಕ್ಕಾಗಿ ಅವನು ತನ್ನ ಮಗನನ್ನು ಸೈಕಲ್‌ನಲ್ಲಿ ಸಮುದ್ರ ತೀರಕ್ಕೆ ಕರೆದುಕೊಂಡುಹೋದನು. ಅವರು ಅಲ್ಲಿ ಏನು ಮಾಡಿದರೆಂದು ಒಬ್ಬ ನೆರೆಯವನು ಹುಡುಗನನ್ನು ಕೇಳಿದನು. ಅವನು ಉತ್ತರಿಸಿದ್ದು: “ನಾವು ಯೆಹೋವನಿಗೆ ಪ್ರಾರ್ಥನೆಮಾಡಿದೆವು.”

ಕೆಲವು ವರ್ಷಗಳ ಬಳಿಕ ಎಸ್ಟರ್‌ ಮತ್ತು ನಾನು, ನಮ್ಮಿಬ್ಬರು ಹಿರಿಯ ಮೊಮ್ಮಕ್ಕಳಾದ ಬೆನ್ಯಾಮಿನ್‌ ಮತ್ತು ನಾಡ್ಯಾಳ ದೀಕ್ಷಾಸ್ನಾನವನ್ನು ಕಣ್ಣಾರೆ ಕಂಡೆವು. ಅಲ್ಲಿದ್ದ ಪ್ರೇಕ್ಷಕರಲ್ಲಿ ನಿಲ್ಸ್‌ ಸಹ ಇದ್ದನು. ಅವನು ಹಠಾತ್ತಾಗಿ ನನಗೆ ಮುಖಮಾಡಿ ನಿಂತು, “ಪೌರುಷವುಳ್ಳವರು ಅಳುವುದಿಲ್ಲ” ಎಂದು ಹೇಳಿದನು. ಆದರೆ ಮರುಕ್ಷಣವೇ ನಾವಿಬ್ಬರು ಅಳುತ್ತಾ ಪರಸ್ಪರ ತಬ್ಬಿಕೊಂಡೆವು. ನೀವು ಯಾರೊಂದಿಗೆ ನಗಾಡಬಹುದೊ ಮತ್ತು ಅತ್ತುಬಿಡಬಹುದೊ ಅಂಥ ಅಳಿಯನಿರುವುದು ಎಂಥ ಆನಂದದ ಸಂಗತಿ!

ಈಗಲೂ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತಿರುವುದು

ಎಸ್ಟರ್‌ ಮತ್ತು ನಾನು ಡೆನ್ಮಾರ್ಕ್‌ನಲ್ಲಿರುವ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆಸಲ್ಲಿಸಲು ಹಿಂದಿರುಗಿ ಬರುವಂತೆ ನಮಗೆ ಕೇಳಿಕೊಳ್ಳಲ್ಪಟ್ಟಾಗ, ನಮಗೆ ಇನ್ನೊಂದು ಆಶೀರ್ವಾದವು ಸಿಕ್ಕಿತು. ಆದರೆ ಅಷ್ಟರೊಳಗೆ, ಹಾಲ್‌ಬೆಕ್‌ನಲ್ಲಿ ಹೆಚ್ಚು ದೊಡ್ಡದಾದ ಬ್ರಾಂಚ್‌ ಸೌಕರ್ಯವನ್ನು ಕಟ್ಟಲಿಕ್ಕಾಗಿ ಸಿದ್ಧತೆಗಳು ನಡೆಯುತ್ತಾ ಇದ್ದವು. ಆ ನಿರ್ಮಾಣ ಕೆಲಸದ ಮೇಲ್ವಿಚಾರಣೆ ಮಾಡುವುದರಲ್ಲಿ ಪಾಲ್ಗೊಳ್ಳುವ ಸುಯೋಗ ನನಗಿತ್ತು. ಈ ಎಲ್ಲ ಕೆಲಸವನ್ನು ಸಂಬಳ ಪಡೆಯದ ಸ್ವಯಂ ಸೇವಕರೇ ಮಾಡಿದರು. ಚಳಿಗಾಲವು ತುಂಬ ತೀಕ್ಷ್ಣವಾಗಿತ್ತಾದರೂ, 1982ರ ಅಂತ್ಯದೊಳಗೆ, ಆ ಕಾರ್ಯಯೋಜನೆಯ ಮೂಲಭೂತ ಕೆಲಸಗಳೆಲ್ಲವೂ ಪೂರ್ಣಗೊಂಡವು, ಮತ್ತು ನಾವು ಆ ವಿಸ್ತಾರಗೊಳಿಸಲ್ಪಟ್ಟ, ಹೆಚ್ಚು ಉತ್ತಮವಾದ ಸೌಕರ್ಯಕ್ಕೆ ಸ್ಥಳಾಂತರಿಸಲು ಹರ್ಷಗೊಂಡಿದ್ದೆವು!

ನಾನು ಬೇಗನೆ ಆಫೀಸ್‌ ಕೆಲಸದಲ್ಲಿ ಮಗ್ನನಾದೆ, ಮತ್ತು ಇದು ನನಗೆ ತುಂಬ ತೃಪ್ತಿಯನ್ನು ಕೊಟ್ಟಿತು. ಎಸ್ಟರ್‌ ಟೆಲಿಫೋನ್‌ ಸ್ವಿಚ್‌ಬೋರ್ಡನ್ನು ನಿರ್ವಹಿಸಿದಳು. ಆದರೆ ಸಮಯಾನಂತರ, ಅವಳು ಟೊಂಕ ಭರ್ತಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಮತ್ತು ಒಂದೂವರೆ ವರ್ಷದ ನಂತರ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾದಳು. ಬ್ರಾಂಚ್‌ನಲ್ಲಿದ್ದವರೆಲ್ಲರೂ ನಮಗೆ ದಯಾಪರ ಪರಿಗಣನೆಯನ್ನು ತೋರಿಸಿದರೂ, ನಾವು ಬ್ರಾಂಚನ್ನು ಬಿಟ್ಟುಹೋದರೆ ಎಲ್ಲರಿಗೂ ಒಳ್ಳೇದೆಂದು ನಿರ್ಣಯಿಸಿದೆವು. ನಮ್ಮ ಮಗಳು ಮತ್ತು ಅವಳ ಕುಟುಂಬವು ಯಾವ ಸಭೆಯಲ್ಲಿತ್ತೊ ಆ ಸಭೆಗೆ ನಾವು ಸ್ಥಳಾಂತರಿಸಿದೆವು.

ಈಗ ಎಸ್ಟರಳ ಆರೋಗ್ಯ ಅಷ್ಟು ಒಳ್ಳೇದಿಲ್ಲ. ಆದರೆ ನಾವಿಬ್ಬರೂ ಜೊತೆಯಾಗಿ ಸೇವೆಸಲ್ಲಿಸಿದ ವರ್ಷಗಳಾದ್ಯಂತ ನಮ್ಮ ಪರಿಸ್ಥಿತಿಗಳಲ್ಲಿ ಅನೇಕಾನೇಕ ಬದಲಾವಣೆಗಳಾದರೂ, ಅವಳು ನನಗೆ ಅದ್ಭುತವಾದ ಆಧಾರವೂ ಸಂಗಾತಿಯೂ ಆಗಿದ್ದಳು. ನಮ್ಮ ಆರೋಗ್ಯವು ಕುಂದುತ್ತಿರುವುದಾದರೂ, ನಾವಿಬ್ಬರೂ ಸಾರುವ ಕೆಲಸದಲ್ಲಿ ಅಲ್ಪಸ್ವಲ್ಪ ರೀತಿಯಲ್ಲಿ ಪಾಲ್ಗೊಳ್ಳುತ್ತೇವೆ. ನನ್ನ ಜೀವಿತದ ಮೇಲೆ ಹಿನ್ನೋಟ ಬೀರುವಾಗ, ನಾನು ಕೃತಜ್ಞತೆಯಿಂದ ಕೀರ್ತನೆಗಾರನ ಈ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತೇನೆ: “ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ.”​—ಕೀರ್ತನೆ 71:17.

[ಪಾದಟಿಪ್ಪಣಿ]

^ ಪ್ಯಾರ. 15 ಕಾವಲಿನಬುರುಜು (ಇಂಗ್ಲಿಷ್‌) 1963ರ ಜುಲೈ 15ರ ಸಂಚಿಕೆಯ 437-42ನೆಯ ಪುಟಗಳನ್ನು ನೋಡಿರಿ.

[ಪುಟ 24ರಲ್ಲಿರುವ ಚಿತ್ರ]

1949ರಲ್ಲಿ ನಿರ್ಮಾಣವಾಗುತ್ತಿದ್ದ ಜರ್ಮನಿ ಬ್ರಾಂಚ್‌ನಲ್ಲಿ ಸಾಹಿತ್ಯದ ಸರಕನ್ನು ಕೆಳಗಿಳಿಸುತ್ತಿರುವುದು

[ಪುಟ 25ರಲ್ಲಿರುವ ಚಿತ್ರ]

ನನ್ನ ಕೆಲಸದ ಸಂಗಡಿಗರಲ್ಲಿ ಸೆರೆಶಿಬಿರಗಳಿಂದ ಹಿಂದಿರುಗಿ ಬಂದಿದ್ದಂಥ ಈ ಸಾಕ್ಷಿಗಳೂ ಇದ್ದರು

[ಪುಟ 26ರಲ್ಲಿರುವ ಚಿತ್ರಗಳು]

ಈಗ ಎಸ್ಟರ್‌ಳೊಂದಿಗೆ ಮತ್ತು 1955ರ ಅಕ್ಟೋಬರ್‌ನಲ್ಲಿ ಬರ್ನ್‌ನ ಬೆತೆಲಿನಲ್ಲಾದ ನಮ್ಮ ಮದುವೆಯ ದಿನದಂದು