ಕ್ರೈಸ್ತರು ಈರ್ಷ್ಯೆಯುಳ್ಳವರು ಆಗಿರಬೇಕೊ?
ಕ್ರೈಸ್ತರು ಈರ್ಷ್ಯೆಯುಳ್ಳವರು ಆಗಿರಬೇಕೊ?
ಈರ್ಷ್ಯೆ—ಇದು ಕ್ರೈಸ್ತರು ಬೆಳೆಸಿಕೊಳ್ಳಬೇಕಾದ ಗುಣವಾಗಿದೆಯೊ? ಕ್ರೈಸ್ತರಾದ ನಮಗೆ, “ಪ್ರೀತಿಯನ್ನು ಅಭ್ಯಾಸಮಾಡಿಕೊಳ್ಳಿರಿ” ಎಂದು ಉತ್ತೇಜಿಸಲಾಗಿದೆ ಮತ್ತು “ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ” ಎಂದು ಹೇಳಲಾಗಿದೆ. (1 ಕೊರಿಂಥ 13:4; 14:1) ಆದರೆ ಇನ್ನೊಂದು ಕಡೆಯಲ್ಲಿ, “ಯೆಹೋವನು . . . ಈರ್ಷ್ಯೆಯ ದೇವರು” ಎಂದು ಹೇಳಲಾಗಿದ್ದು, “ಆತನನ್ನು ಅನುಸರಿಸುವವರಾಗಿರಿ” ಎಂದೂ ನಮಗೆ ಹೇಳಲಾಗಿದೆ. (ವಿಮೋಚನಕಾಂಡ 34:14, NW; ಎಫೆಸ 5:1) ಇದು ವಿರೋಧಾಭಾಸದಂತೆ ತೋರಿಬರುವುದೇಕೆ?
ಇಂಗ್ಲಿಷ್ ಬೈಬಲಿನಲ್ಲಿ “ಜೆಲಸಿ” (ಈರ್ಷ್ಯೆ) ಎಂದು ತರ್ಜುಮೆಯಾಗಿರುವ ಹೀಬ್ರು ಮತ್ತು ಗ್ರೀಕ್ ಪದಗಳಿಗೆ ವಿವಿಧ ಅರ್ಥಗಳಿರುವುದರಿಂದಲೇ. ಈ ಪದಗಳನ್ನು ಹೇಗೆ ಉಪಯೋಗಿಸಲಾಗಿದೆ ಎಂಬುದರ ಮೇಲೆ ಹೊಂದಿಕೊಂಡು, ಅವುಗಳಿಗೆ ಒಂದೇ ಸಕಾರಾತ್ಮಕ ಅರ್ಥವಿರಬಲ್ಲದು ಇಲ್ಲವೆ ನಕಾರಾತ್ಮಕ ಅರ್ಥವಿರಬಲ್ಲದು. ದೃಷ್ಟಾಂತಕ್ಕೆ, “ಈರ್ಷ್ಯೆ” ಎಂದು ಭಾಷಾಂತರವಾಗಿರುವ ಹೀಬ್ರು ಪದಕ್ಕೆ, “ಅನನ್ಯ ಭಕ್ತಿಗಾಗಿ ಹಠಹಿಡಿಯುವುದು, ಪ್ರತಿಸ್ಪರ್ಧೆಯನ್ನು ಸಹಿಸದಿರುವುದು, ಹುರುಪು, ಉತ್ಸಾಹ, ಈರ್ಷ್ಯೆ [ನೀತಿಭರಿತ ಅಥವಾ ಪಾಪಕರ], ಅಸೂಯೆಪಡುವುದು” ಎಂಬ ಅರ್ಥವಿರಸಾಧ್ಯವಿದೆ. ಇದಕ್ಕೆ ಅನುರೂಪವಾದ ಗ್ರೀಕ್ ಪದಕ್ಕೂ ಇದೇ ರೀತಿಯ ಅರ್ಥಗಳಿವೆ. ಈ ಪದಗಳು ಪ್ರತಿಸ್ಪರ್ಧಿಯೆಂದು ಊಹಿಸಲಾಗಿರುವ ಒಬ್ಬನ ಕಡೆಗೆ ಅಥವಾ ಯಾವುದೊ ಅನುಕೂಲತೆಯನ್ನು ಆನಂದಿಸುತ್ತಿದ್ದಾನೆಂದು ಎಣಿಸಲಾಗಿರುವ ಒಬ್ಬನ ಕಡೆಗೆ ವಕ್ರವಾದ, ತಿರುಚಲ್ಪಟ್ಟಿರುವ ಮನೋಭಾವವನ್ನು ತೋರಿಸುವುದಕ್ಕೆ ಸೂಚಿತವಾಗಿರಬಲ್ಲವು. (ಜ್ಞಾನೋಕ್ತಿ 14:30, NW) “ಈರ್ಷ್ಯೆ” ಎಂದು ತರ್ಜುಮೆಮಾಡಲ್ಪಟ್ಟಿರುವ ಈ ಪದಗಳು, ಒಂದು ದೇವದತ್ತ ಗುಣದ ಸಕಾರಾತ್ಮಕ ಅಭಿವ್ಯಕ್ತಿಯನ್ನು ಅಂದರೆ ಒಬ್ಬ ಪ್ರಿಯ ವ್ಯಕ್ತಿಯನ್ನು ಹಾನಿಯಿಂದ ಸಂರಕ್ಷಿಸುವ ಬಯಕೆಯನ್ನು ಸಹ ಸೂಚಿಸಬಲ್ಲದು.—2 ಕೊರಿಂಥ 11:2, NW.
ಪರಮಶ್ರೇಷ್ಠ ಮಾದರಿ
ಯೋಗ್ಯವಾದ ಈರ್ಷ್ಯೆಯನ್ನು ತೋರಿಸುವುದರಲ್ಲಿ ಯೆಹೋವನು ಪರಮಶ್ರೇಷ್ಠ ಮಾದರಿಯನ್ನು ಇಡುತ್ತಾನೆ. ಆತನ ಉದ್ದೇಶಗಳು ಶುದ್ಧವೂ ನಿರ್ಮಲವೂ ಆಗಿವೆ. ತನ್ನ ಜನರನ್ನು ಅಧ್ಯಾತ್ಮಿಕ ಮತ್ತು ನೈತಿಕ ಭ್ರಷ್ಟತೆಯಿಂದ ಕಾಪಾಡುವ ಬಯಕೆಯೇ ಇದಕ್ಕಿರುವ ಪ್ರೇರಣೆಯಾಗಿದೆ. ಚೀಯೋನೆಂದು ಸಾಂಕೇತಿಕವಾಗಿ ಕರೆಯಲ್ಪಟ್ಟಿರುವ ತನ್ನ ಪ್ರಾಚೀನಕಾಲದ ಜನರ ವಿಷಯವಾಗಿ ಆತನಂದದ್ದು: “ಚೀಯೋನಿಗೆ ಅವಮಾನವಾಯಿತಲ್ಲಾ ಎಂದು ಬಹಳವಾಗಿ ಕುದಿಯುತ್ತೇನೆ [“ಈರ್ಷ್ಯೆಪಡುತ್ತೇನೆ,” NW]. ಅತಿರೋಷಗೊಂಡು ಕುದಿಯುತ್ತೇನೆ [“ಈರ್ಷ್ಯೆಪಡುತ್ತೇನೆ,” NW].” (ಜೆಕರ್ಯ 8:2) ಒಬ್ಬ ಪ್ರೀತಿಯುಳ್ಳ ತಂದೆಯು ತನ್ನ ಮಕ್ಕಳನ್ನು ಹಾನಿಯಿಂದ ತಪ್ಪಿಸಲು ಸದಾ ಎಚ್ಚತ್ತಿರುವಂತೆಯೇ, ಯೆಹೋವನು ತನ್ನ ಸೇವಕರನ್ನು ಶಾರೀರಿಕ ಹಾಗೂ ಆತ್ಮಿಕ ಅಪಾಯದಿಂದ ಸಂರಕ್ಷಿಸಲು ಎಚ್ಚತ್ತಿರುತ್ತಾನೆ.
ತನ್ನ ಜನರನ್ನು ಕಾಪಾಡಲಿಕ್ಕಾಗಿ ಯೆಹೋವನು ತನ್ನ ವಾಕ್ಯವಾದ ಬೈಬಲನ್ನು ಒದಗಿಸಿದ್ದಾನೆ. ಇದರಲ್ಲಿ ಅವರು ವಿವೇಕದಿಂದ ವರ್ತಿಸುವಂತೆ ಧಾರಾಳ ಪ್ರೋತ್ಸಾಹವು ಕೊಡಲ್ಪಟ್ಟಿದ್ದು, ಹಾಗೆ ವರ್ತಿಸಿದವರ ಮಾದರಿಗಳೂ ಅದರಲ್ಲಿ ಅಡಕವಾಗಿವೆ. ಯೆಶಾಯ 48:17ರಲ್ಲಿ ನಾವು ಓದುವುದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” ಆತನ ಈರ್ಷ್ಯೆಯು, ಆತನು ನಮ್ಮನ್ನು ಪರಾಮರಿಸಿ ಕಾಯುವಂತೆ ಆತನನ್ನು ಪ್ರೇರಿಸುತ್ತದೆಂಬುದನ್ನು ತಿಳಿಯುವುದು ಅದೆಷ್ಟು ಸಾಂತ್ವನದಾಯಕ! ಆತನು ಈ ಒಳ್ಳೇ ವಿಧದಲ್ಲಿ ಈರ್ಷ್ಯೆಯುಳ್ಳವನು ಆಗಿರದಿರುತ್ತಿದ್ದಲ್ಲಿ, ನಾವು ನಮ್ಮ ಅನನುಭವದ ಕಾರಣ ಸಕಲ ವಿಧವಾದ ಹಾನಿಯನ್ನು ಅನುಭವಿಸುತ್ತಿದ್ದೆವು. ಯೆಹೋವನ ಈರ್ಷ್ಯೆಯ ಅಭಿವ್ಯಕ್ತಿಗಳು ಎಂದಿಗೂ ಸ್ವಾರ್ಥಪರವಾದವುಗಳಲ್ಲ.
ಹಾಗಾದರೆ ದೈವಿಕ ಈರ್ಷ್ಯೆ ಮತ್ತು ಅಯೋಗ್ಯವಾದ ಈರ್ಷ್ಯೆಗಳ ನಡುವಿನ ವ್ಯತ್ಯಾಸವೇನು? ಇದನ್ನು ಕಂಡುಹಿಡಿಯಲು ನಾವು ಮಿರ್ಯಾಮಳು ಮತ್ತು ಫೀನೆಹಾಸನ ದೃಷ್ಟಾಂತಗಳನ್ನು ಪರಿಗಣಿಸೋಣ. ಅವರು ಹಾಗೆ ವರ್ತಿಸುವಂತೆ ಯಾವುದು ಪ್ರೇರೇಪಿಸಿತೆಂಬುದನ್ನು ಗಮನಿಸಿರಿ.
ಮಿರ್ಯಾಮಳು ಮತ್ತು ಫೀನೆಹಾಸನು
ಮಿರ್ಯಾಮಳು, ಇಸ್ರಾಯೇಲ್ಯರ ನಿರ್ಗಮನದ ಸಮಯದಲ್ಲಿ ನಾಯಕರಾಗಿದ್ದ ಮೋಶೆ ಮತ್ತು ಆರೋನರ ಅಕ್ಕ ಆಗಿದ್ದಳು. ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ, ಮಿರ್ಯಾಮಳು ತನ್ನ ತಮ್ಮನಾಗಿದ್ದ ಮೋಶೆಯ ವಿಷಯದಲ್ಲಿ ಅಸೂಯೆಪಟ್ಟಳು. ಬೈಬಲ್ ದಾಖಲೆಯಲ್ಲಿ ಹೀಗೆ ಓದಸಾಧ್ಯವಿದೆ: “ಮೋಶೆ ಕೂಷ್ ದೇಶದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ಅದರ ನಿಮಿತ್ತ ಮಿರ್ಯಾಮಳೂ ಆರೋನನೂ ಅವನಿಗೆ ಅರಣ್ಯಕಾಂಡ 12:1-15.
ವಿರೋಧವಾಗಿ ಮಾತಾಡುವವರಾಗಿ—ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತಾಡಿದ್ದಾನೋ; ನಮ್ಮ ಮೂಲಕವೂ ಆತನು ಮಾತಾಡಲಿಲ್ಲವೇ ಎಂದು ಹೇಳಿಕೊಂಡರು.” ಮೋಶೆಯ ವಿರುದ್ಧ ತೆಗೆದುಕೊಳ್ಳಲ್ಪಟ್ಟ ಈ ಹೆಜ್ಜೆಯಲ್ಲಿ ಮಿರ್ಯಾಮಳು ನಾಯಕಿಯಾಗಿದ್ದಳೆಂಬುದು ಸುಸ್ಪಷ್ಟ, ಏಕೆಂದರೆ ಯೆಹೋವನು ಆರೋನನನ್ನಲ್ಲ, ಬದಲಾಗಿ ಮಿರ್ಯಾಮಳ ಅಗೌರವಪೂರ್ಣ ನಡತೆಯ ಕಾರಣ ಒಂದು ವಾರಪೂರ್ತಿ ಕುಷ್ಠರೋಗವನ್ನು ಬರಮಾಡಿ ಆಕೆಯನ್ನು ಶಿಸ್ತಿಗೊಳಪಡಿಸಿದನು.—ಮೋಶೆಯ ವಿರುದ್ಧ ದಂಗೆಯೇಳುವಂತೆ ಮಿರ್ಯಾಮಳನ್ನು ಯಾವುದು ಪ್ರೇರೇಪಿಸಿತು? ಸತ್ಯಾರಾಧನೆಯ ವಿಷಯದಲ್ಲಿ ಅವಳಿಗಿದ್ದ ಚಿಂತೆಯಾಗಿತ್ತೊ ಹಾಗೂ ಜೊತೆ ಇಸ್ರಾಯೇಲ್ಯರನ್ನು ಹಾನಿಯಿಂದ ತಪ್ಪಿಸುವ ಬಯಕೆಯಾಗಿತ್ತೊ? ಇಲ್ಲವೆಂಬುದು ಸ್ಪಷ್ಟ. ಹೆಚ್ಚು ಕೀರ್ತಿ ಮತ್ತು ಅಧಿಕಾರಕ್ಕಾಗಿ ಅಯೋಗ್ಯವಾದ ಆಸೆಯು ತನ್ನ ಹೃದಯದಲ್ಲಿ ಏಳುವಂತೆ ಮಿರ್ಯಾಮಳು ಅನುಮತಿಸಿದ್ದಳೆಂದು ತೋರುತ್ತದೆ. ಇಸ್ರಾಯೇಲಿನಲ್ಲಿ ಪ್ರವಾದಿನಿಯಾಗಿದ್ದ ಆಕೆ, ಜನರಿಂದ ವಿಶೇಷವಾಗಿ ಸ್ತ್ರೀಯರಿಂದ ತುಂಬ ಗೌರವವನ್ನು ಪಡೆದಿದ್ದಳು. ಕೆಂಪು ಸಮುದ್ರದಿಂದ ಅದ್ಭುತಕರವಾಗಿ ರಕ್ಷಿಸಲ್ಪಟ್ಟಾಗ, ಆಕೆ ಅವರ ಸಂಗೀತ ಹಾಗೂ ಗಾಯನಗಳಲ್ಲಿ ನೇತೃತ್ವವನ್ನು ವಹಿಸಿದ್ದಳು. ಆದರೆ ಈಗ ತನ್ನ ಪ್ರಾಧಾನ್ಯವು, ತನ್ನ ಪ್ರತಿಸ್ಪರ್ಧಿಯೆಂದು ಆಕೆ ಶಂಕಿಸಿದ ಮೋಶೆಯ ಹೆಂಡತಿಗೆ ಹೋಗುವುದು ಎಂಬುದರ ಬಗ್ಗೆ ಆಕೆ ಚಿಂತಿತಳಾಗಿದ್ದಿರಬಹುದು. ಆದುದರಿಂದ, ಸ್ವಾರ್ಥ ಈರ್ಷ್ಯೆಯಿಂದ ಪ್ರಚೋದಿತಳಾಗಿ, ಯೆಹೋವನಿಂದ ನೇಮಿತನಾಗಿದ್ದ ಮೋಶೆಯ ವಿರುದ್ಧ ಆಕೆ ಕಲಹವನ್ನೆಬ್ಬಿಸಿದಳು.—ವಿಮೋಚನಕಾಂಡ 15:1, 20, 21.
ಆದರೆ ಇನ್ನೊಂದು ಬದಿಯಲ್ಲಿ, ಫೀನೆಹಾಸನು ವರ್ತಿಸಿದ ರೀತಿಗೆ ಭಿನ್ನವಾದ ಇಂಗಿತವಿತ್ತು. ವಾಗ್ದತ್ತ ದೇಶವನ್ನು ಪ್ರವೇಶಿಸುವ ತುಸು ಮೊದಲು, ಇಸ್ರಾಯೇಲ್ಯರು ಮೋವಾಬಿನ ಬಯಲಿನಲ್ಲಿ ಪಾಳೆಯ ಹೂಡಿದ್ದಾಗ, ಮೋವಾಬ್ಯ ಮತ್ತು ಮಿದ್ಯಾನ್ಯ ಸ್ತ್ರೀಯರು ಅನೇಕ ಮಂದಿ ಇಸ್ರಾಯೇಲ್ಯರನ್ನು ಲೈಂಗಿಕ ಅನೈತಿಕತೆಗೂ ವಿಗ್ರಹಾರಾಧನೆಗೂ ಸೆಳೆದಿದ್ದರು. ಪಾಳೆಯವನ್ನು ಶುದ್ಧೀಕರಿಸಿ, ಯೆಹೋವನ ಕ್ರೋಧವನ್ನು ನಿಲ್ಲಿಸಲಿಕ್ಕಾಗಿ, ತಪ್ಪುದಾರಿಗೆ ಹೋಗಿದ್ದ ಸಕಲ ಪುರುಷರನ್ನು ಕೊಲ್ಲುವಂತೆ ಇಸ್ರಾಯೇಲಿನ ನ್ಯಾಯಾಧಿಪತಿಗಳಿಗೆ ಆದೇಶ ನೀಡಲಾಗಿತ್ತು. ಸಿಮೆಯೋನ್ ಕುಲದವರಲ್ಲಿ ಗೋತ್ರಪ್ರಧಾನನಾಗಿದ್ದ ಜಿಮ್ರೀ ಎಂಬವನು “ಸರ್ವಸಮೂಹದವರಿಗೂ ಎದುರಾಗಿಯೇ” ನಿರ್ಲಜ್ಜೆಯಿಂದ ಕೊಜ್ಬೀ ಎಂಬ ಮಿದ್ಯಾನ್ಯ ಸ್ತ್ರೀಯನ್ನು ಅನೈತಿಕ ಉದ್ದೇಶಗಳಿಗಾಗಿ ಪಾಳೆಯದೊಳಕ್ಕೆ ಕರೆತಂದನು. ಆಗ ಫೀನೆಹಾಸನು ನಿರ್ಣಾಯಕ ರೀತಿಯಲ್ಲಿ ಕ್ರಿಯೆಗೈದನು. ಯೆಹೋವನ ಆರಾಧನೆಗಾಗಿ ಈರ್ಷ್ಯೆ ಅಥವಾ ಹುರುಪಿನ ಭಾವನೆಗಳಿಂದ ಪ್ರಚೋದಿತನಾಗಿ, ಮತ್ತು ಪಾಳೆಯದ ನೈತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಬಯಕೆಯಿಂದ ಪ್ರೇರಿತನಾಗಿ, ಆ ವ್ಯಭಿಚಾರಿಗಳನ್ನು ಅವನು ಅವರ ಡೇರೆಯೊಳಗೆಯೇ ಹತಿಸಿದನು. ಅವನ “ಈರ್ಷ್ಯೆಯ ಕೋಪ”ಕ್ಕಾಗಿ, ಯೆಹೋವನ ಕಡೆಗಿನ “ಯಾವುದೇ ಪ್ರತಿಸ್ಪರ್ಧೆಯನ್ನು ಸಹಿಸಿಕೊಳ್ಳದ್ದಕ್ಕಾಗಿ” ಅವನನ್ನು ಪ್ರಶಂಸಿಸಲಾಯಿತು. ಫೀನೆಹಾಸನು ತಕ್ಕ ಸಮಯದಲ್ಲಿ ಕ್ರಿಯೆಯನ್ನು ಕೈಗೊಂಡ ಕಾರಣ, ಈಗಾಗಲೇ 24,000 ಮಂದಿಯನ್ನು ಬಲಿತೆಗೆದುಕೊಂಡಿದ್ದ ಘೋರವ್ಯಾಧಿಯು ನಿಂತುಹೋಯಿತು. ಮತ್ತು ಅವನ ವಂಶದಲ್ಲಿ ಯಾಜಕತ್ವವು ಅನಿಶ್ಚಿತಕಾಲದ ವರೆಗೆ ಇರುವಂತೆ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ಮೂಲಕ ಯೆಹೋವನು ಅವನಿಗೆ ಪ್ರತಿಫಲವನ್ನು ಕೊಟ್ಟನು.—ಅರಣ್ಯಕಾಂಡ 25:4-13; ದ ನ್ಯೂ ಇಂಗ್ಲಿಷ್ ಬೈಬಲ್.
ಈರ್ಷ್ಯೆಯ ಈ ಎರಡು ವ್ಯಕ್ತಪಡಿಸುವಿಕೆಗಳ ನಡುವೆ ಇದ್ದ ವ್ಯತ್ಯಾಸವೇನು? ಮಿರ್ಯಾಮಳು ಸ್ವಾರ್ಥಪರ ಈರ್ಷ್ಯೆಯ ಕಾರಣದಿಂದ ತನ್ನ ತಮ್ಮನ ವಿರುದ್ಧ ವರ್ತಿಸಿದಳು. ಆದರೆ ಫೀನೆಹಾಸನು, ದೈವಿಕ ಈರ್ಷ್ಯೆಯ ಮೇಲೆ ಆಧಾರಿತವಾಗಿದ್ದ ನ್ಯಾಯವನ್ನು ಜಾರಿಗೆ ತಂದನು. ಫೀನೆಹಾಸನಂತೆಯೇ ನಾವೂ ಯೆಹೋವನ ನಾಮ, ಆತನ ಆರಾಧನೆ ಮತ್ತು ಆತನ ಜನರ ಸಮರ್ಥನೆ ಮಾಡಲು ಧೈರ್ಯದಿಂದ ಮಾತಾಡಬೇಕಾಗುವ ಅಥವಾ ಯಾವುದಾದರೂ ಕ್ರಮವನ್ನು ಕೈಕೊಳ್ಳುವ ಹಂಗುಳ್ಳವರಾಗಿದ್ದೇವೆಂದು ನಮಗನಿಸಬೇಕಾದ ಸಮಯಗಳಿರುತ್ತವೆ.
ಅನುಚಿತವಾದ ಈರ್ಷ್ಯೆ
ಆದರೆ, ಒಬ್ಬನು ಅನುಚಿತವಾದ ಅಥವಾ ಅಯೋಗ್ಯವಾದ ಈರ್ಷ್ಯೆಯ ಅನಿಸಿಕೆಗಳನ್ನು ಇಟ್ಟುಕೊಳ್ಳುವ ಸಾಧ್ಯತೆಯಿದೆಯೊ? ಹೌದು, ಇದೆ. ಒಂದನೆಯ ಶತಮಾನದ ಯೆಹೂದ್ಯರಲ್ಲಿ ಇದೊಂದು ಸಾಮಾನ್ಯ ವಿಷಯವಾಗಿತ್ತು. ಅವರು ದೇವದತ್ತ ಧರ್ಮಶಾಸ್ತ್ರವನ್ನು ಮತ್ತು ಅವರ ಸಂಪ್ರದಾಯಗಳನ್ನು ಈರ್ಷ್ಯೆಯಿಂದ ರಕ್ಷಿಸಿದರು. ಧರ್ಮಶಾಸ್ತ್ರವನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ಅವರು ಅಸಂಖ್ಯಾತ ವಿವರಣಾತ್ಮಕ ಕಟ್ಟಳೆಗಳು ಮತ್ತು ನಿರ್ಬಂಧಗಳನ್ನು ರಚಿಸಿದರು. ಇವು ಜನರ ಮೇಲೆ ಭಾರವಾದ ಹೊರೆಯಾಗಿ ಪರಿಣಮಿಸಿದವು. (ಮತ್ತಾಯ 23:4) ದೇವರು ಮೋಶೆಯ ಧರ್ಮಶಾಸ್ತ್ರವನ್ನು, ಅದು ಯಾವುದನ್ನು ಮುನ್ಸೂಚಿಸಿತೋ ಆ ನಿಜತ್ವದಿಂದ ಸ್ಥಾನಪಲ್ಲಟಗೊಳಿಸಿದ್ದಾನೆಂದು ಒಪ್ಪಿಕೊಳ್ಳಲು ಅಶಕ್ತರು ಇಲ್ಲವೆ ಮನಸ್ಸಿಲ್ಲದವರು ಆಗಿದ್ದ ಅವರ ಅನುಚಿತ ಈರ್ಷ್ಯೆಯು ಅವರನ್ನು, ಯೇಸುವಿನ ಹಿಂಬಾಲಕರ ಮೇಲೆ ಅನಿಯಂತ್ರಿತ ಕೋಪೋದ್ರೇಕವನ್ನು ಹೊಯ್ಯುವಂತೆ ಪ್ರಚೋದಿಸಿತು. ಯಾರು ಒಂದೊಮ್ಮೆ ತಪ್ಪಾದ ರೀತಿಯಲ್ಲಿ ಧರ್ಮಶಾಸ್ತ್ರಕ್ಕೆ ಈರ್ಷ್ಯೆಭರಿತ ನಿಷ್ಠೆಯನ್ನು ತೋರಿಸಿದನೊ ಆ ಅಪೊಸ್ತಲ ಪೌಲನೇ ಹೇಳಿದ್ದೇನಂದರೆ, ಧರ್ಮಶಾಸ್ತ್ರವನ್ನು ಸಮರ್ಥಿಸುವ ಜನರು, “ದೇವರಲ್ಲಿ ಆಸಕ್ತರು [“ಈರ್ಷ್ಯೆಯುಳ್ಳವರು,” NW]” ಆಗಿದ್ದರೂ “ಅವರ ಆಸಕ್ತಿ [“ಈರ್ಷ್ಯೆ,” NW] ಜ್ಞಾನಾನುಸಾರವಾದದ್ದಲ್ಲ.”—ರೋಮಾಪುರ 10:2; ಗಲಾತ್ಯ 1:14.
ಕ್ರೈಸ್ತರಾಗಿ ಪರಿಣಮಿಸಿದ ಅನೇಕ ಮಂದಿ ಯೆಹೂದ್ಯರಿಗೂ ಧರ್ಮಶಾಸ್ತ್ರದ ಬಗ್ಗೆ ಅವರಿಗಿದ್ದ ಮಿತಿಮೀರಿದ ಹುರುಪನ್ನು ತ್ಯಜಿಸುವುದು ಕಷ್ಟಕರವಾಗಿತ್ತು. ಪೌಲನು ತನ್ನ ಮೂರನೆಯ ಮಿಷನೆರಿ ಸಂಚಾರವನ್ನು ಮುಗಿಸಿದ ಬಳಿಕ, ಪ್ರಥಮ ಶತಮಾನದ ಆಡಳಿತ ಮಂಡಲಿಗೆ ಜನಾಂಗಗಳ ಪರಿವರ್ತನೆಯ ಕುರಿತಾಗಿ ಒಂದು ವರದಿಯನ್ನು ಕೊಟ್ಟನು. ಆ ಸಮಯದಲ್ಲಿ ಕ್ರೈಸ್ತರಾಗಿದ್ದ ಸಾವಿರಾರು ಮಂದಿ ಯೆಹೂದ್ಯರು “ಧರ್ಮಶಾಸ್ತ್ರದಲ್ಲಿ ಅಭಿಮಾನಿ”ಗಳಾಗಿದ್ದರು. (ಅ. ಕೃತ್ಯಗಳು 21:20) ಅನ್ಯಜನಾಂಗದವರಿಂದ ಕ್ರೈಸ್ತರಾದವರು ಸುನ್ನತಿ ಮಾಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಆಡಳಿತ ಮಂಡಲಿಯು ಕೊಟ್ಟ ತೀರ್ಪು ಜಾರಿಗೆ ಬಂದು ಅನೇಕ ವರುಷಗಳಾದ ಬಳಿಕ ಅವನು ಇದನ್ನು ಬರೆದನು. ಧರ್ಮಶಾಸ್ತ್ರವನ್ನು ಪಾಲಿಸುವುದರ ಕುರಿತಾದ ವಿವಾದಗಳು ಸಭೆಯಲ್ಲಿ ಕಲಹವನ್ನೆಬ್ಬಿಸಿದ್ದವು. (ಅ. ಕೃತ್ಯಗಳು 15:1, 2, 28, 29; ಗಲಾತ್ಯ 4:9, 10; 5:7-12) ಯೆಹೋವನು ಈಗ ತನ್ನ ಜನರೊಂದಿಗೆ ಹೇಗೆ ವ್ಯವಹರಿಸುತ್ತಿದ್ದಾನೆಂಬ ವಿಷಯವನ್ನು ಪೂರ್ಣವಾಗಿ ಗ್ರಹಿಸಿರದಂಥ ಕೆಲವು ಯೆಹೂದಿ ಕ್ರೈಸ್ತರು, ತಮ್ಮ ಸ್ವಂತ ದೃಷ್ಟಿಕೋನಗಳ ವಿಷಯದಲ್ಲಿ ಪಟ್ಟುಹಿಡಿದು ಇತರರನ್ನು ಟೀಕಿಸುತ್ತಿದ್ದರು.—ಕೊಲೊಸ್ಸೆ 2:17; ಇಬ್ರಿಯ 10:1.
ಆದುದರಿಂದ, ನಮಗೆ ಪ್ರಿಯವಾಗಿರುವ ಆದರೆ ದೇವರ ವಾಕ್ಯದ ಮೇಲೆ ಸ್ಥಿರವಾಗಿ ಆಧಾರಿತವಾಗಿರದ ನಮ್ಮ ಸ್ವಂತ ವಿಚಾರಗಳು ಇಲ್ಲವೆ ಮಾರ್ಗಗಳನ್ನು ನಾವು ಹುರುಪಿನ ಈರ್ಷ್ಯೆಯಿಂದ ಸಂರಕ್ಷಿಸಲು ಪ್ರಯತ್ನಿಸುವ ಪಾಶದೊಳಗೆ ಬೀಳದಂತೆ ಜಾಗ್ರತೆ ವಹಿಸಬೇಕು. ಯೆಹೋವನು ಇಂದು ಉಪಯೋಗಿಸುತ್ತಿರುವ ಮಾಧ್ಯಮದ ಮುಖಾಂತರ ದೇವರ ವಾಕ್ಯದ ಮೇಲೆ ಪ್ರಕಾಶಿಸಲ್ಪಡುವ ಹೊಸ ಬೆಳಕನ್ನು ಅಂಗೀಕರಿಸುವುದು ನಮಗೆ ಎಷ್ಟೋ ಹಿತಕರ.
ಯೆಹೋವನಿಗಾಗಿ ಈರ್ಷ್ಯೆಯುಳ್ಳವರಾಗಿರಿ
ಆದರೆ ದೈವಿಕ ಈರ್ಷ್ಯೆಗೆ ಸತ್ಯಾರಾಧನೆಯಲ್ಲಿ ಯೋಗ್ಯವಾದ ಸ್ಥಾನವಿದೆ. ನಾವು ನಮ್ಮ ಸ್ವಂತ ಹೆಸರು ಅಥವಾ ಹಕ್ಕುಗಳ ಕುರಿತು ಅನಾವಶ್ಯಕವಾಗಿ ಚಿಂತಿಸುವ ಪ್ರವೃತ್ತಿಯುಳ್ಳವರಾಗಿರುವಾಗ, ದೈವಿಕ ಈರ್ಷ್ಯೆಯು ನಮ್ಮ ಗಮನವನ್ನು ಯೆಹೋವನ ಕಡೆಗೆ ತಿರುಗಿಸುತ್ತದೆ. ಆತನ ಕುರಿತಾದ ಸತ್ಯವನ್ನು ಸಾರುತ್ತಾ, ಆತನ ರೀತಿನೀತಿಗಳನ್ನು ಮತ್ತು ಜನರನ್ನು ಸಮರ್ಥಿಸಲು ನಾವು ವಿವಿಧ ದಾರಿಗಳನ್ನು ಹುಡುಕುವಂತೆ ಅದು ನಮ್ಮನ್ನು ಪ್ರೇರೇಪಿಸುತ್ತದೆ.
ರಕ್ತದ ಸಂಬಂಧದಲ್ಲಿ ದೇವರ ನಿಯಮದ ಕುರಿತು ತಪ್ಪಭಿಪ್ರಾಯಗಳಿದ್ದ ಒಬ್ಬ ಮನೆಯಾಕೆ, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕಿಯಾಗಿದ್ದ ಆಕೀಕೋ ಎಂಬವಳನ್ನು ನಿಷ್ಠುರವಾದ ರೀತಿಯಲ್ಲಿ ಧಿಕ್ಕರಿಸಿದಳು. ಆಗ ಆಕೀಕೋ ಸಮಯೋಚಿತ ನಯದಿಂದ ದೇವರ ವಾಕ್ಯವನ್ನು ಸಮರ್ಥಿಸಿದಳು. ಆಕೆ ರಕ್ತಪೂರಣದ ಸಂಬಂಧದಲ್ಲಿ ಏಳುವಂಥ ವೈದ್ಯಕೀಯ ತೊಡಕುಗಳನ್ನೂ ಸಮಸ್ಯೆಗಳನ್ನೂ ತಿಳಿಸಿದಳು. ಯೆಹೋವನ ಕುರಿತು ಮಾತಾಡುವ ತೀಕ್ಷ್ಣ ಬಯಕೆಯಿಂದ ಪ್ರಚೋದಿತಳಾದ ಅವಳು, ಆ ಸ್ತ್ರೀಯ ಆಕ್ಷೇಪಣೆಗಳಿಗೆ ನಿಜ ಕಾರಣವೆಂದು ಯಾವುದನ್ನು ವಿವೇಚಿಸಿ ತಿಳಿದುಕೊಂಡಳೊ ಅದರೆಡೆಗೆ ಅಂದರೆ, ಒಬ್ಬ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆಯ ಕೊರತೆಯ ಕಡೆಗೆ ತನ್ನ ಸಂಭಾಷಣೆಯನ್ನು ತಿರುಗಿಸಿದಳು. ಸೃಷ್ಟಿಯು ಒಬ್ಬ ಸೃಷ್ಟಿಕರ್ತನಿದ್ದಾನೆಂಬುದನ್ನು ಹೇಗೆ ಬೆಂಬಲಿಸುತ್ತದೆಂಬ ವಿಷಯದಲ್ಲಿ ಆಕೀಕೋ ಮನೆಯಾಕೆಯೊಂದಿಗೆ ತರ್ಕಬದ್ಧವಾಗಿ ಮಾತಾಡಿದಳು. ಆಕೆ ಧೈರ್ಯದಿಂದ ಮಾಡಿದ ಸಮರ್ಥನೆಯು, ಮನೆಯಾಕೆಯ ಆಧಾರವಿಲ್ಲದ ಅವಿಚಾರಾಭಿಪ್ರಾಯಗಳನ್ನು ತೊಲಗಿಸುವಂತೆ ಮಾಡಿತು ಮಾತ್ರವಲ್ಲ, ಆ ಸ್ತ್ರೀಯೊಂದಿಗೆ ಒಂದು ಮನೆ ಬೈಬಲ್ ಅಧ್ಯಯನಕ್ಕೂ ನಡೆಸಿತು. ಇಂದು ಆ ಮಾಜಿ ಸಿಡುಕಿನ ಮನೆಯಾಕೆಯು ಯೆಹೋವನಿಗೆ ಸ್ತುತಿಗೈಯುವವಳಾಗಿದ್ದಾಳೆ.
ಸತ್ಯಾರಾಧನೆಯ ಕಡೆಗಿರುವ ಯೋಗ್ಯ ರೀತಿಯ ಈರ್ಷ್ಯೆ ಅಥವಾ ಹುರುಪು ನಮ್ಮನ್ನು, ನಾವು ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಅಂಗಡಿಯಲ್ಲಿ ಮತ್ತು ಪ್ರಯಾಣಿಸುತ್ತಿರುವಾಗ ನಮ್ಮ ನಂಬಿಕೆಯ ಕುರಿತು ಮಾತಾಡಿ ಅದನ್ನು ಸಮರ್ಥಿಸುವ ಸಂದರ್ಭಗಳ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ನಿರ್ಬಂಧಿಸುತ್ತದೆ. ಉದಾಹರಣೆಗೆ, ಮೀಡೋರೀ ಎಂಬವಳು ಜೊತೆ ಕಾರ್ಮಿಕರೊಂದಿಗೆ ತನ್ನ ನಂಬಿಕೆಯ ವಿಷಯದಲ್ಲಿ * ಎಂಬ ಪುಸ್ತಕವನ್ನು ಆಕೆಗೆ ತೋರಿಸಿ, ಆ ಪುಸ್ತಕದ ಸಹಾಯದಿಂದ ಅವಳ ಮಗಳೊಂದಿಗೆ ಅಧ್ಯಯನ ಮಾಡಲು ತಾನು ಸಿದ್ಧಳೆಂದು ಹೇಳಿದಳು. ಅಧ್ಯಯನವು ಆರಂಭವಾದರೂ ತಾಯಿ ಆ ಚರ್ಚೆಗಾಗಿ ಕುಳಿತುಕೊಳ್ಳಲಿಲ್ಲ. ಆಗ ಮೀಡೋರೀ, ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ* (ಇಂಗ್ಲಿಷ್) ಎಂಬ ವಿಡಿಯೋವನ್ನು ಆ ಸ್ತ್ರೀಗೆ ತೋರಿಸಲು ನಿಶ್ಚಯಿಸಿದಳು. ಇದು ಅವಳ ಹೆಚ್ಚಿನ ತಪ್ಪಭಿಪ್ರಾಯಗಳನ್ನು ಬಗೆಹರಿಸಿತು. ಅದನ್ನು ನೋಡಿ ಪ್ರಚೋದಿತಳಾದ ಆಕೆ ಹೇಳಿದ್ದು: “ನಾನು ಯೆಹೋವನ ಸಾಕ್ಷಿಗಳಂತಾಗಲು ಬಯಸುತ್ತೇನೆ.” ಅಂದಿನಿಂದ ಆಕೆ ತನ್ನ ಮಗಳ ಬೈಬಲ್ ಅಧ್ಯಯನದಲ್ಲಿ ಜೊತೆಗೂಡಿದಳು.
ಮಾತಾಡಲು ದೃಢಸಂಕಲ್ಪವುಳ್ಳವಳಾಗಿದ್ದಾಳೆ. ಸುಮಾರು 40 ವರುಷ ಪ್ರಾಯದ ಒಬ್ಬ ಸಹಕರ್ಮಿಯು ತನಗೆ ಯೆಹೋವನ ಸಾಕ್ಷಿಗಳೊಂದಿಗೆ ಯಾವ ಸಂಬಂಧವೂ ಇಷ್ಟವಿಲ್ಲವೆಂದು ಹೇಳಿದಳು. ಆದರೆ ತರುವಾಯ ಇನ್ನೊಂದು ಸಂಭಾಷಣೆಯಲ್ಲಿ, ತನ್ನ ಮಗಳು ಅನಪೇಕ್ಷಿತ ಗುಣಗಳನ್ನು ಬೆಳೆಸಿಕೊಳ್ಳುತ್ತಿದ್ದಾಳೆಂದು ಆ ಸ್ತ್ರೀಯು ದೂರುಹೇಳಿದಳು. ಆಗ ಮೀಡೋರೀ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳುಯೋಗ್ಯ ರೀತಿಯ ಈರ್ಷ್ಯೆಗೆ ಕ್ರೈಸ್ತ ಸಭೆಯಲ್ಲಿಯೂ ಅದರದ್ದೇ ಆದ ಸ್ಥಾನವಿದೆ. ಅದು ಪ್ರೀತಿ ಮತ್ತು ಕಾಳಜಿಯ ಹಾರ್ದಿಕ ಮನೋಭಾವವನ್ನು ಉತ್ತೇಜಿಸಿ, ಹಾನಿಕರವಾದ ಹರಟೆ ಮತ್ತು ಧರ್ಮಭ್ರಷ್ಟ ಆಲೋಚನೆಗಳಂತಹ, ನಮ್ಮ ಆತ್ಮಿಕ ಸಹೋದರರಿಗೆ ಹಾನಿ ಮಾಡುವಂತಹ ಒಡಕಿನ ಪ್ರಭಾವಗಳನ್ನು ನಾವು ತಡೆಯುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ದೈವಿಕ ಈರ್ಷ್ಯೆಯು, ಕೆಲವು ಬಾರಿ ಹಿರಿಯರು ತಪ್ಪಿತಸ್ಥರನ್ನು ಖಂಡಿಸಿ ತಿದ್ದುವುದು ಆವಶ್ಯಕವೆಂದು ನಿಶ್ಚಯಿಸುವಾಗ, ಅವರ ನಿರ್ಣಯಗಳನ್ನು ನಾವು ಬೆಂಬಲಿಸುವಂತೆ ಪ್ರಚೋದಿಸುತ್ತದೆ. (1 ಕೊರಿಂಥ 5:11-13; 1 ತಿಮೊಥೆಯ 5:20) ತನ್ನ ಜೊತೆ ವಿಶ್ವಾಸಿಗಳ ಕಡೆಗೆ ತನಗಿರುವ ಈರ್ಷ್ಯೆಯ ಭಾವನೆಗಳ ಕುರಿತು ಕೊರಿಂಥ ಸಭೆಗೆ ಬರೆಯುವಾಗ ಪೌಲನು ಹೇಳಿದ್ದು: “ದೇವರಲ್ಲಿರುವಂಥ ಚಿಂತೆ [“ದೈವಿಕ ಈರ್ಷ್ಯೆ,” NW]ಯಿಂದಲೇ ನಾನು ನಿಮ್ಮ ವಿಷಯದಲ್ಲಿ ಚಿಂತಿಸುತ್ತೇನೆ [“ಈರ್ಷ್ಯೆಪಡುತ್ತೇನೆ,” NW]. ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ಧಕನ್ಯೆಯಂತೆ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯಮಾಡಿದೆನಲ್ಲಾ.” (2 ಕೊರಿಂಥ 11:2) ಹಾಗೆಯೇ ನಮ್ಮ ಈರ್ಷ್ಯೆಯು ಸಹ, ಸಭೆಯಲ್ಲಿರುವ ಎಲ್ಲರ ತಾತ್ತ್ವಿಕ, ಆತ್ಮಿಕ ಮತ್ತು ನೈತಿಕ ಶುದ್ಧತೆಯನ್ನು ಕಾಪಾಡಲು ನಾವು ಸಕಲ ಪ್ರಯತ್ನವನ್ನೂ ಮಾಡುವಂತೆ ನಮ್ಮನ್ನು ಪ್ರಚೋದಿಸುವುದು.
ಹೌದು, ಯೋಗ್ಯವಾಗಿ ಪ್ರಚೋದಿಸಲ್ಪಟ್ಟಿರುವ ಈರ್ಷ್ಯೆಯು—ದೈವಿಕ ಈರ್ಷ್ಯೆಯು—ಇತರರ ಮೇಲೆ ಹಿತಕರವಾದ ಪ್ರಭಾವವನ್ನು ಬೀರುತ್ತದೆ. ಇದು ಯೆಹೋವನ ಮೆಚ್ಚಿಕೆಯನ್ನು ತರುತ್ತದೆ ಮತ್ತು ಇದು ಕ್ರೈಸ್ತರಲ್ಲಿ ಇಂದು ಕಂಡುಬರಬೇಕಾದ ಗುಣಗಳಲ್ಲಿ ಒಂದಾಗಿರಬೇಕು.—ಯೋಹಾನ 2:17.
[ಪಾದಟಿಪ್ಪಣಿ]
^ ಪ್ಯಾರ. 20 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 29ರಲ್ಲಿರುವ ಚಿತ್ರಗಳು]
ಫೀನೆಹಾಸನ ಕಾರ್ಯಗಳು ದೈವಿಕ ಈರ್ಷ್ಯೆಯ ಮೇಲೆ ಆಧಾರಿತವಾಗಿದ್ದವು
[ಪುಟ 30ರಲ್ಲಿರುವ ಚಿತ್ರಗಳು]
ಅನುಚಿತ ಈರ್ಷ್ಯೆಯ ಪಾಶದಿಂದ ದೂರವಿರಿ
[ಪುಟ 31ರಲ್ಲಿರುವ ಚಿತ್ರಗಳು]
ದೈವಿಕ ಈರ್ಷ್ಯೆಯು ನಾವು ನಮ್ಮ ನಂಬಿಕೆಯ ಬಗ್ಗೆ ಇತರರಿಗೆ ತಿಳಿಸುವಂತೆ ಮತ್ತು ನಮ್ಮ ಸಹೋದರತ್ವವನ್ನು ಬಹು ಪ್ರಿಯವಾದದ್ದಾಗಿ ಎಣಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ