ದುಷ್ಟ ಶಕ್ತಿಗಳು ಕಾರ್ಯಪ್ರವೃತ್ತವಾಗಿವೆಯೊ?
ದುಷ್ಟ ಶಕ್ತಿಗಳು ಕಾರ್ಯಪ್ರವೃತ್ತವಾಗಿವೆಯೊ?
“ಅತೀಂದ್ರಿಯ ಶಕ್ತಿಗಳು ವಿಶೇಷವಾದ ಜಾಗರೂಕತೆಯನ್ನು ವಹಿಸುತ್ತಾ, ತಪ್ಪಿಸಿಕೊಳ್ಳಲಿಕ್ಕಾಗಿರುವ ಎಲ್ಲ ಮಾರ್ಗಗಳನ್ನು ಮುಚ್ಚಲು ಪ್ರಯತ್ನಿಸುತ್ತಿರುವ ಕಾರಣದಿಂದಲೊ ಎಂಬಂತೆ ಈ ಜಗತ್ತು ತಲೆಸುತ್ತಿನಿಂದ ಬಳಲುತ್ತಿದೆ.”—ಶಾನ್‌ಕ್ಲೋಡ್ ಸೂಲೇರೀ, ಪತ್ರಿಕೋದ್ಯಮಿ.
‘ಒಬ್ಬ ವ್ಯಕ್ತಿಗಿರುವ ನಿಸ್ಸಹಾಯಕತೆಯ ಭಾವನೆಯು, ಅತಿ ಭಾರಿಯಾದ ಯಾವುದೋ ದುಷ್ಟ ಶಕ್ತಿಯು ಪ್ರಭಾವ ಬೀರುತ್ತಿದೆಯೆಂಬ ಪ್ರಜ್ಞೆಯನ್ನು ಉದ್ರೇಕಿಸುತ್ತದೆ.’—ಜೋಸೆಫ್ ಬಾರ್ಟನ್, ಇತಿಹಾಸಕಾರ.
ಸೆಪ್ಟೆಂಬರ್ 11, 2001ರಲ್ಲಿ ನಡೆದ ಭಯೋತ್ಪಾದಕರ ದಾಳಿಯ ಭೀತಿಯು, ಅನೇಕರು ವಿಷಯಗಳ ಕುರಿತು ಗಂಭೀರವಾಗಿ ಚಿಂತಿಸುವಂತೆ ಮಾಡಿತು. ಇಂಗ್ಲೆಂಡಿನ ಫಿನ್ಯಾನ್‌ಷಲ್ ಟೈಮ್ಸ್‌ನಲ್ಲಿ ಮೈಕಲ್ ಪ್ರೌಸ್ ಬರೆದುದು: “ಯಾವುದೇ ಮೃಗವೂ ಅಷ್ಟು ಕ್ರೂರವಾಗಿ ವರ್ತಿಸಲಿಕ್ಕಿಲ್ಲ ಅಥವಾ ವರ್ತಿಸದು.” ನ್ಯೂ ಯಾರ್ಕ್ ಟೈಮ್ಸ್ ವಾರ್ತಾಪತ್ರಿಕೆಯ ಸಂಪಾದಕೀಯವು ಅವಲೋಕಿಸಿದ್ದೇನಂದರೆ, ಅಂತಹ ದಾಳಿಗೆ ಬೇಕಾಗಿದ್ದ ಯೋಜನೆಯಲ್ಲದೆ, “ಅದನ್ನು ಕಾರ್ಯರೂಪಕ್ಕೆ ಹಾಕಲು ಇರಬೇಕಾಗಿದ್ದ ದ್ವೇಷದ ತೀಕ್ಷ್ಣತೆಯ ಕುರಿತು ಚಿಂತಿಸುವುದೂ ಅಷ್ಟೇ ಪ್ರಾಮುಖ್ಯ. ಆ ದ್ವೇಷವು ಯುದ್ಧೋದ್ಯಮದ ಸಾಮಾನ್ಯ ರೂಢಿಗಳನ್ನೂ ಮೀರಿಸುವ, ನಿಯಂತ್ರಣವಿಲ್ಲದ, ಯಾವುದೇ ಕರಾರನ್ನು ಪಾಲಿಸದ ದ್ವೇಷವಾಗಿದೆ.”
ವಿವಿಧ ಧರ್ಮಗಳ ಜನರು, ಕಾರ್ಯಪ್ರವೃತ್ತವಾಗಿರುವ ಅತ್ಯುಗ್ರವಾದ ಶಕ್ತಿಯೊಂದು ಇರುವ ಸಾಧ್ಯತೆಯ ಕುರಿತು ಚಿಂತಿಸಿದರು. ಬಾಸ್ನಿಯದಲ್ಲಿ ಕುಲದ್ವೇಷದ ಭೀಕರತೆಯನ್ನು ನೋಡಿದ ಸಾರಏವೊ ನಗರದ ವ್ಯಾಪಾರಸ್ಥನೊಬ್ಬನು ಹೇಳಿದ್ದು: “ಬಾಸ್ನಿಯದಲ್ಲಿ ಒಂದು ವರ್ಷ ಯುದ್ಧವನ್ನು ನೋಡಿದ ಬಳಿಕ, ಸೈತಾನನೇ ಇದರ ಸೂತ್ರಧಾರನೆಂದು ನಾನೀಗ ನಂಬುತ್ತೇನೆ. ಇದು ಶುದ್ಧ ಹುಚ್ಚುತನ.”
ಪಿಶಾಚನು ಇದ್ದಾನೆಂದು ನಂಬುತ್ತೀರೊ ಎಂದು ಇತಿಹಾಸಕಾರ ಶಾನ್ ಡಿಲೂಮೋ ಎಂಬವರನ್ನು ಕೇಳಿದಾಗ ಅವರಂದದ್ದು: “ಈಗ ಏನು ಸಂಭವಿಸುತ್ತಿದೆಯೊ ಮತ್ತು ನನ್ನ ಹುಟ್ಟಿದಂದಿನಿಂದ ಏನು ಸಂಭವಿಸುತ್ತಿದೆಯೊ ಅದೆಲ್ಲವನ್ನು—ಎರಡನೆಯ ಲೋಕ ಯುದ್ಧದಲ್ಲಿ ಬಲಿಯಾದ ನಾಲ್ಕು ಕೋಟಿಗಿಂತಲೂ ಹೆಚ್ಚು ಜನ; ಔಶ್ವಿಟ್ಸ್ ಮತ್ತು ಸಾವಿನ ಶಿಬಿರಗಳು; ಕೆಂಬೋಡಿಯದ ಜನಾಂಗಹತ್ಯೆ; ಚೌಶೆಸ್ಕೂ ಸರಕಾರದ ದಬ್ಬಾಳಿಕೆ; ಲೋಕಾದ್ಯಂತವಾಗಿ ಅನೇಕ ಸ್ಥಳಗಳಲ್ಲಿ ಸರಕಾರೀ ವ್ಯವಸ್ಥೆಯೋಪಾದಿ ಉಪಯೋಗಿಸಲಾಗುವ ಚಿತ್ರಹಿಂಸೆ—ನೋಡಿರುವಾಗ ನಾನು ಆ ದುಷ್ಟ ಶಕ್ತಿಯನ್ನು ಹೇಗೆ ತಾನೇ ಅಲ್ಲಗಳೆಯಬಲ್ಲೆ? ಇಂತಹ ಭೀಕರತೆಗಳ ಪಟ್ಟಿಗೆ ಅಂತ್ಯವಿಲ್ಲ. . . . ಆದಕಾರಣ ಇಂತಹ ಕೃತ್ಯಗಳನ್ನು ‘ಪೈಶಾಚಿಕ’ ಎಂದು ಕರೆಯುವುದು ನ್ಯಾಯವೆಂದು ನನ್ನ ನಂಬಿಕೆ. ಅಂದರೆ ಇವು, ಕೊಂಬು ಮತ್ತು ಸೀಳಿದ ಗೊರಸುಳ್ಳ ಒಬ್ಬ ಪಿಶಾಚನಿಂದ ಪ್ರೇರಿಸಲ್ಪಡುತ್ತವೆಂದಲ್ಲ, ಬದಲಿಗೆ ಲೋಕದಲ್ಲಿ ಕಾರ್ಯನಡೆಸುತ್ತಿರುವ ದುಷ್ಟ ಮನೋಭಾವ ಮತ್ತು ದುಷ್ಟ ಶಕ್ತಿಯ ಸಂಕೇತವಾದ ಒಂದು ಪಿಶಾಚನಿಂದಲೇ ಪ್ರೇರಿಸಲ್ಪಟ್ಟಿವೆ.”
ಶಾನ್ ಡಿಲೂಮೋ ಹೇಳಿದಂತೆ, ಇಂದು ಮಾನವ ಸಮಾಜದಲ್ಲಿ ನಡೆಯುತ್ತಿರುವ ಭಯಂಕರ ಸಂಗತಿಗಳನ್ನು ಅನೇಕರು, ಕುಟುಂಬ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ರಂಗದ ವರೆಗೂ ನಡೆಯುತ್ತಿರುವ ಭೀತಿಹುಟ್ಟಿಸುವ ವಿಷಯಗಳನ್ನು “ಪೈಶಾಚಿಕ” ಎಂದು ವರ್ಗೀಕರಿಸುತ್ತಾರೆ. ಆದರೆ ಅದರ ಅರ್ಥವೇನು? ಇಂತಹ ಕರಾಳ ಕೃತ್ಯಗಳು ಭಾವನಾ ರೂಪದ ದುಷ್ಟ ಶಕ್ತಿಗಳಿಂದ ಗೈದವುಗಳು ಎಂದು ಹೇಳಬೇಕೊ, ಇಲ್ಲವೆ ಸಾಮಾನ್ಯವಾದ ಮಾನವ ಕೆಟ್ಟತನವನ್ನು ಮೀರಿ ಹೋಗುವಂತಹ ರೀತಿಯ ಕ್ರೂರ ಪಾತಕಗಳನ್ನು ಮಾನವರು ಮಾಡುವಂತೆ ಅವರನ್ನು ಪ್ರಭಾವಿಸುವ ವ್ಯಕ್ತಿಸ್ವರೂಪವುಳ್ಳ ದುಷ್ಟಶಕ್ತಿಗಳಿವೆಯೊ? ಇಂತಹ ಪಡೆಗಳು ದುಷ್ಟತನದ ರಾಜಕುಮಾರನಾದ ಪಿಶಾಚನಾದ ಸೈತಾನನಿಂದ ನಿರ್ದೇಶಿಸಲ್ಪಡುತ್ತಿವೆಯೊ?
[ಪುಟ 3ರಲ್ಲಿರುವ ಚಿತ್ರ ಕೃಪೆ]
ಮಕ್ಕಳು: U.S. Coast Guard photo