“ಪಿಶಾಚನನ್ನು ವಿರೋಧಿಸಿರಿ”
“ಪಿಶಾಚನನ್ನು ವಿರೋಧಿಸಿರಿ”
“ಪಿಶಾಚನನ್ನು ವಿರೋಧಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು.”—ಯಾಕೋಬ 4:7, NW.
1. ಇಂದಿನ ಲೋಕದ ಬಗ್ಗೆ ಏನು ಹೇಳಸಾಧ್ಯವಿದೆ, ಮತ್ತು ಅಭಿಷಿಕ್ತರೂ ಅವರ ಸಂಗಾತಿಗಳೂ ಏಕೆ ಎಚ್ಚರದಿಂದಿರಬೇಕು?
“ದೇವರು ಕಾಣೆಯಾಗಿದ್ದಾನೆ, ಆದರೆ ಪಿಶಾಚನು ಇನ್ನೂ ಇದ್ದಾನೆ.” ಫ್ರೆಂಚ್ ಲೇಖಕ ಆಂಡ್ರೇ ಮಾಲ್ರೋ ಅವರ ಈ ಮಾತುಗಳನ್ನು, ನಾವು ಜೀವಿಸುತ್ತಿರುವ ಈ ಲೋಕಕ್ಕೆ ಸಮಂಜಸವಾಗಿಯೇ ಅನ್ವಯಿಸಸಾಧ್ಯವಿದೆ. ಖಂಡಿತವಾಗಿಯೂ ಜನರ ಕೆಲಸಗಳು ದೇವರ ಚಿತ್ತಕ್ಕಿಂತಲೂ ಹೆಚ್ಚಾಗಿ ಪಿಶಾಚನ ತಂತ್ರಗಳನ್ನು ಪ್ರತಿಬಿಂಬಿಸುತ್ತಿರುವಂತೆ ತೋರುತ್ತವೆ. ಸೈತಾನನು ಜನರನ್ನು, “ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ ಇವುಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶನಮಾರ್ಗದಲ್ಲಿ” ದಾರಿತಪ್ಪಿಸಿ ನಡೆಸುತ್ತಾನೆ. (2 ಥೆಸಲೊನೀಕ 2:9, 10) ಆದರೆ ಈ “ಕಡೇ ದಿವಸಗಳಲ್ಲಿ” ಸೈತಾನನು ತನ್ನ ಪ್ರಯತ್ನಗಳನ್ನು ದೇವರ ಸಮರ್ಪಿತ ಸೇವಕರ ಮೇಲೆ ಕೇಂದ್ರೀಕರಿಸುತ್ತಾ, “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವವ”ರಾದ ಅಭಿಷಿಕ್ತ ಕ್ರೈಸ್ತರ ಮೇಲೆ ಯುದ್ಧ ಮಾಡುತ್ತಾನೆ. (2 ತಿಮೊಥೆಯ 3:1; ಪ್ರಕಟನೆ 12:9, 17) ಆದುದರಿಂದ, ಈ ಸಾಕ್ಷಿಗಳು ಮತ್ತು ಭೂನಿರೀಕ್ಷೆಯಿರುವ ಅವರ ಸಂಗಾತಿಗಳು ಎಚ್ಚರದಿಂದಿರುವುದು ಅತ್ಯಾವಶ್ಯಕ.
2. ಸೈತಾನನು ಹವ್ವಳನ್ನು ಹೇಗೆ ಮೋಸಗೊಳಿಸಿದನು, ಮತ್ತು ಅಪೊಸ್ತಲ ಪೌಲನು ಯಾವ ಭಯವನ್ನು ವ್ಯಕ್ತಪಡಿಸಿದನು?
2 ಸೈತಾನನು ಶುದ್ಧ ವಂಚಕನಾಗಿದ್ದಾನೆ. ಒಂದು ಸರ್ಪವನ್ನು ವಂಚನೆಯ ಉಪಕರಣವಾಗಿ ಉಪಯೋಗಿಸುತ್ತಾ, ಹವ್ವಳು ದೇವರನ್ನು ಬಿಟ್ಟು ಸ್ವತಂತ್ರವಾಗಿ ವರ್ತಿಸಿದರೆ ಹೆಚ್ಚು ಸಂತೋಷವನ್ನು ಪಡೆಯುವಳೆಂದು ನೆನಸುವಂತೆ ಮಾಡುವ ಮೂಲಕ ಅವನು ಅವಳನ್ನು ಮೋಸಗೊಳಿಸಿದನು. (ಆದಿಕಾಂಡ 3:1-6) ಸುಮಾರು ನಾಲ್ಕು ಸಾವಿರ ವರುಷಗಳ ಬಳಿಕ, ಕೊರಿಂಥದ ಅಭಿಷಿಕ್ತ ಕ್ರೈಸ್ತರು ಸೈತಾನನ ಕುಟಿಲತೆಗೆ ಬಲಿಬೀಳಬಹುದೆಂಬ ಭಯವನ್ನು ಅಪೊಸ್ತಲ ಪೌಲನು ವ್ಯಕ್ತಪಡಿಸಿದನು. ಅವನು ಬರೆದುದು: “ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು.” (2 ಕೊರಿಂಥ 11:3) ಸೈತಾನನು ಜನರ ಮನಸ್ಸುಗಳನ್ನು ಕೆಡಿಸಿ, ಅವರ ಆಲೋಚನೆಯನ್ನು ವಕ್ರಗೊಳಿಸುತ್ತಾನೆ. ಅವನು ಹವ್ವಳನ್ನು ಮೋಸಗೊಳಿಸಿದಂತೆಯೇ, ಕ್ರೈಸ್ತರು ತಪ್ಪಾಗಿ ತರ್ಕಿಸಿ, ತಮ್ಮ ಸಂತೋಷವು ಯೆಹೋವನು ಮತ್ತು ಆತನ ಕುಮಾರನು ಇಷ್ಟಪಡದಿರುವಂಥ ಒಂದು ವಿಷಯದ ಮೇಲೆ ಹೊಂದಿಕೊಂಡಿದೆಯೆಂದು ಅವರು ಊಹಿಸಿಕೊಳ್ಳುವಂತೆ ಅವನು ಮಾಡಬಲ್ಲನು.
3. ಪಿಶಾಚನಿಗೆದುರಾಗಿ ಯೆಹೋವನು ಯಾವ ಸಂರಕ್ಷಣೆಯನ್ನು ಒದಗಿಸುತ್ತಾನೆ?
3 ಸೈತಾನನನ್ನು, ಅಮಾಯಕ ಪಕ್ಷಿಗಳನ್ನು ಹಿಡಿಯಲು ಬಲೆಗಳನ್ನು ಹರಡುವ ಪಕ್ಷಿ ಹಿಡಿಯುವವನಿಗೆ ಹೋಲಿಸಬಹುದು. ಸೈತಾನನ ಬಲೆಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಾವು ‘ಪರಾತ್ಪರನ ಮರೆಹೋಗುವ’ ಅಗತ್ಯವಿದೆ. ಇದು ತಮ್ಮ ಕ್ರಿಯೆಗಳಲ್ಲಿ ಯೆಹೋವನ ವಿಶ್ವ ಪರಮಾಧಿಕಾರವನ್ನು ಅಂಗೀಕರಿಸಿ ಅದಕ್ಕೆ ಅಧೀನರಾಗುವವರಿಗೆ ಆತನು ಒದಗಿಸುವ ಒಂದು ಸಾಂಕೇತಿಕ ಸಂರಕ್ಷಣಾ ಸ್ಥಾನವಾಗಿದೆ. (ಕೀರ್ತನೆ 91:1-3) ‘ಸೈತಾನನ ತಂತ್ರೋಪಾಯಗಳನ್ನು ನಾವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ’ ದೇವರು ತನ್ನ ವಾಕ್ಯ, ತನ್ನ ಪವಿತ್ರಾತ್ಮ ಮತ್ತು ತನ್ನ ಸಂಸ್ಥೆಯ ಮೂಲಕ ಒದಗಿಸುವ ಎಲ್ಲ ಸಂರಕ್ಷಣೆಯು ನಮಗೆ ಅಗತ್ಯ. (ಎಫೆಸ 6:11) “ತಂತ್ರೋಪಾಯಗಳು” ಎಂಬುದಕ್ಕಿರುವ ಗ್ರೀಕ್ ಪದವನ್ನು “ಕುಟಿಲ ಕೃತ್ಯಗಳು” ಅಥವಾ “ಕಪಟೋಪಾಯಗಳು” ಎಂಬುದಾಗಿಯೂ ಭಾಷಾಂತರಿಸಬಹುದು. ಯೆಹೋವನ ಸೇವಕರನ್ನು ಬಲೆಯಲ್ಲಿ ಸಿಕ್ಕಿಸಿಹಾಕುವ ಪ್ರಯತ್ನದಲ್ಲಿ ಪಿಶಾಚನು ಅನೇಕ ಕಪಟೋಪಾಯಗಳನ್ನು ಮತ್ತು ಕುಟಿಲ ಕೃತ್ಯಗಳನ್ನು ಉಪಯೋಗಿಸುತ್ತಾನೆಂಬುದರಲ್ಲಿ ಸಂದೇಹವೇ ಇಲ್ಲ.
ಆದಿಕ್ರೈಸ್ತರಿಗೆ ಸೈತಾನನು ಒಡ್ಡಿದ್ದ ಬಲೆಗಳು
4. ಆದಿಕ್ರೈಸ್ತರು ಯಾವ ರೀತಿಯ ಲೋಕದಲ್ಲಿ ಜೀವಿಸುತ್ತಿದ್ದರು?
4 ಸಾ.ಶ. ಒಂದನೆಯ ಮತ್ತು ಎರಡನೆಯ ಶತಮಾನದಲ್ಲಿ ಜೀವಿಸುತ್ತಿದ್ದ ಕ್ರೈಸ್ತರು, ರೋಮನ್ ಸಾಮ್ರಾಜ್ಯವು ತನ್ನ ಆಳ್ವಿಕೆಯ ಉತ್ತುಂಗದಲ್ಲಿದ್ದ ಸಮಯದಲ್ಲಿ ಜೀವಿಸಿದ್ದರು. ಪಾಕ್ಸ್ ರೋಮಾನ (ರೋಮನ್ ಶಾಂತಿ)ದ ಸಮಯದಲ್ಲಿ ವಾಣಿಜ್ಯ ವ್ಯವಸ್ಥೆಯು ಹಸನಾಗಿ ವೃದ್ಧಿಯಾಯಿತು. ಈ ಸಮೃದ್ಧಿಯು ಆಳುವ ವರ್ಗಕ್ಕೆ ಧಾರಾಳ ವಿರಾಮದ ಸಮಯವನ್ನು ಕೊಟ್ಟಿತು. ಮತ್ತು ಆಳುವ ವರ್ಗವು ಜನಸಾಮಾನ್ಯರಿಗೆ, ಅವರು ದಂಗೆಯೇಳದಂತೆ ಮಾಡಲು ಹೇರಳವಾದ ವಿನೋದಾವಳಿಗಳು ಏರ್ಪಡಿಸಲ್ಪಡುವಂತೆ ನೋಡಿಕೊಂಡಿತು. ಕೆಲವು ಸಮಯಾವಧಿಗಳಲ್ಲಿ, ಸಾರ್ವಜನಿಕ ರಜಾದಿನಗಳ ಸಂಖ್ಯೆಯು ಕೆಲಸ ಮಾಡುವ ದಿನಗಳ ಸಂಖ್ಯೆಯಷ್ಟೇ ಇರುತ್ತಿತ್ತು. ಜನರ ಹೊಟ್ಟೆ ತುಂಬಿಸಲು ಮತ್ತು ಅವರ ಮನಸ್ಸುಗಳನ್ನು ಅಪಕರ್ಷಿಸಲು ನಾಯಕರು ಸಾರ್ವಜನಿಕ ನಿಧಿಯನ್ನು ಉಪಯೋಗಿಸಿದರು.
5, 6. (ಎ) ರೋಮನ್ ನಾಟಕ ಶಾಲೆ ಮತ್ತು ಮಲ್ಲರಂಗಗಳಿಗೆ ಕ್ರೈಸ್ತರು ಹೋಗುವುದು ಅನುಚಿತವಾಗಿತ್ತೇಕೆ? (ಬಿ) ಸೈತಾನನು ಯಾವ ಉಪಾಯವನ್ನು ಉಪಯೋಗಿಸಿದನು, ಮತ್ತು ಕ್ರೈಸ್ತರು ಅದರಿಂದ ಹೇಗೆ ದೂರವಿರಸಾಧ್ಯವಿತ್ತು?
5 ಈ ಪರಿಸರವು ಆದಿಕ್ರೈಸ್ತರಿಗೆ ಅಪಾಯಕರವಾಗಿತ್ತೊ? ಅಪೊಸ್ತಲರ ಅನಂತರ ಜೀವಿಸಿದ ಟೆರ್ಟಲ್ಯನ್‌ನಂತಹ ಆದಿ ಲೇಖಕರು ಬರೆದ ಎಚ್ಚರಿಕೆಗಳ ಆಧಾರದ ಮೇರೆಗೆ ತೀರ್ಮಾನಿಸುವಾಗ, ಆ ಸಮಯದಲ್ಲಿನ ವಿರಾಮಕಾಲದ ಕಾರ್ಯಕಲಾಪಗಳಲ್ಲಿ ಹೆಚ್ಚಿನವು ಸತ್ಕ್ರೈಸ್ತರಿಗೆ ಆತ್ಮಿಕ ಹಾಗೂ ನೈತಿಕ ರೀತಿಯ ಅಪಾಯಗಳಿಂದ ತುಂಬಿದವುಗಳಾಗಿದ್ದವು. ಈ ಅಪಾಯವನ್ನು ಉಂಟುಮಾಡಿದ ಒಂದು ವಿಷಯವೇನೆಂದರೆ, ಸಾರ್ವಜನಿಕ ಉತ್ಸವ ಮತ್ತು ಆಟಗಳಲ್ಲಿ ಹೆಚ್ಚಿನವು ವಿಧರ್ಮಿ ದೇವತೆಗಳ ಗೌರವಾರ್ಥವಾಗಿ ನಡೆಯುತ್ತಿದ್ದವು. (2 ಕೊರಿಂಥ 6:14-18) ನಾಟಕ ಶಾಲೆಗಳಲ್ಲಿ, ಸಾಂಪ್ರದಾಯಿಕ ನಾಟಕಗಳಲ್ಲೂ ಹೆಚ್ಚಿನವು ಒಂದೇ ತೀರ ಅನೈತಿಕವಾಗಿರುತ್ತಿದ್ದವು ಇಲ್ಲವೆ ರಕ್ತಪಾತದ ಹಿಂಸಾಚಾರದಿಂದ ತುಂಬಿರುತ್ತಿದ್ದವು. ಸಮಯ ದಾಟಿದಷ್ಟಕ್ಕೆ, ಸಾಂಪ್ರದಾಯಿಕ ನಾಟಕಗಳಲ್ಲಿನ ಸಾರ್ವಜನಿಕ ಅಭಿರುಚಿಯು ಬತ್ತಿಹೋಗಿ, ಅವುಗಳ ಸ್ಥಾನದಲ್ಲಿ ಅಶ್ಲೀಲವಾದ ಮೂಕ ನಾಟಕಗಳು ಬಂದವು. ಇತಿಹಾಸಕಾರ ಸೇರೋಮ್ ಕಾರ್ಕೋಪೀನೋ, ಪುರಾತನ ಕಾಲದ ರೋಮ್‌ನಲ್ಲಿ ದಿನನಿತ್ಯದ ಜೀವನ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಹೇಳುವುದು: “ಈ ನಾಟಕಗಳಲ್ಲಿ ನಟಿಯರಿಗೆ ಪೂರ್ತಿಯಾಗಿ ಬಟ್ಟೆಯನ್ನು ಕಳಚಿಹಾಕುವ ಅನುಮತಿಯಿತ್ತು. . . . ರಕ್ತವು ಧಾರಾಳವಾಗಿ ಸುರಿಸಲ್ಪಡುತ್ತಿತ್ತು. . . . [ಅಣಕ ನಾಟಕವು] ರಾಜಧಾನಿಯ ಜನಸ್ತೋಮಗಳನ್ನು ವಶೀಕರಿಸಿದ್ದಂಥ ಒಂದು ವಕ್ರಬುದ್ಧಿಯನ್ನು ವಿಪರೀತ ಮಟ್ಟದ ವರೆಗೆ ಬಳಸಿಕೊಂಡಿತ್ತು. ಇಂತಹ ತಲ್ಲಣಗೊಳಿಸುವ ಪ್ರದರ್ಶನಗಳಿಂದ ಅವರಿಗೆ ಹೇವರಿಕೆಯಾಗುತ್ತಿರಲಿಲ್ಲ. ಏಕೆಂದರೆ ಮಲ್ಲರಂಗದಲ್ಲಿ ನಡೆಯುತ್ತಿದ್ದ ಘೋರವಾದ ಹಿಂಸಾಚಾರ ಮತ್ತು ರಕ್ತಪಾತಗಳು ಜನರ ಭಾವನೆಗಳ ಸಂವೇದನಾಶೀಲತೆಯನ್ನು ಇಲ್ಲವಾಗಿಸಿ, ಅವರ ಸಹಜ ಪ್ರವೃತ್ತಿಗಳನ್ನು ವಿಕೃತಗೊಳಿಸಿದ್ದವು.”—ಮತ್ತಾಯ 5:27, 28.
6 ಮಲ್ಲರಂಗಗಳಲ್ಲಿ ಖಡ್ಗಮಲ್ಲರು ಒಬ್ಬರನ್ನೊಬ್ಬರು ಕೊಲ್ಲುವ ತನಕ ಹೋರಾಡಿದರು. ಅಥವಾ ಅವರು ಮೃಗಗಳೊಂದಿಗೆ—ಒಂದೇ ಅವುಗಳನ್ನು ಕೊಲ್ಲುವ ವರೆಗೆ ಇಲ್ಲವೆ ಅವುಗಳಿಂದ ಕೊಲ್ಲಲ್ಪಡುವ ವರೆಗೆ—ಹೋರಾಡಿದರು. ಮರಣಶಿಕ್ಷೆ ಹೊಂದಿದ್ದ ಪಾತಕಿಗಳನ್ನು ಮತ್ತು ಕ್ರಮೇಣ ಅನೇಕ ಮಂದಿ ಕ್ರೈಸ್ತರನ್ನೂ ಕ್ರೂರ ಮೃಗಗಳಿಗೆ ಎಸೆಯಲಾಗುತ್ತಿತ್ತು. ಆ ಆದಿ ಸಮಯಗಳಲ್ಲಿಯೂ ಸೈತಾನನ ಉಪಾಯವು, ಅನೈತಿಕತೆ ಮತ್ತು ಹಿಂಸಾಚಾರವು ಸಾಮಾನ್ಯವಾದ ವಿಷಯಗಳಾಗಿ ಪರಿಣಮಿಸಿ, ಆಮೇಲೆ ಜನರು ಸ್ವತಃ ಅದರ ಹಿಂದೆ ಹೋಗುವಂತೆ ಮಾಡುವಷ್ಟರ ಮಟ್ಟಿಗೆ, ಅದರ ಕಡೆಗೆ ಅವರಿಗಿರುವ ಹೇವರಿಕೆಯನ್ನು ಮಂದಮಾಡುವುದಾಗಿತ್ತು. ಆ ಬಲೆಯಿಂದ ತಪ್ಪಿಸಿಕೊಳ್ಳುವ ಒಂದೇ ಮಾರ್ಗವು, ನಾಟಕ ಶಾಲೆಗಳು ಮತ್ತು 1 ಕೊರಿಂಥ 15:32, 33.
ಮಲ್ಲರಂಗಗಳಿಂದ ದೂರವಿರುವುದೇ ಆಗಿತ್ತು.—7, 8. (ಎ) ಒಬ್ಬ ಕ್ರೈಸ್ತನು ರಥದೋಟಗಳನ್ನು ನೋಡಲು ಹೋಗುವುದು ಅವಿವೇಕತನವಾಗಿತ್ತೇಕೆ? (ಬಿ) ಸೈತಾನನು ಕ್ರೈಸ್ತರನ್ನು ಸಿಕ್ಕಿಸಿಹಾಕಲು ರೋಮನ್ ಸ್ನಾನಗೃಹಗಳನ್ನು ಹೇಗೆ ಉಪಯೋಗಿಸಬಹುದಿತ್ತು?
7 “ಸರ್ಕಸ್”ಗಳು ಎಂದು ಕರೆಯಲಾದ ವಿಸ್ತಾರವಾದ ಆಯಾಕಾರದ ರಂಗಗಳಲ್ಲಿ ನಡೆಯುತ್ತಿದ್ದ ರಥದೋಟಗಳು ರೋಮಾಂಚಕವಾಗಿದ್ದವೇನೊ ನಿಶ್ಚಯವಾದರೂ ಅವು ಕ್ರೈಸ್ತರಿಗೆ ಅಂಗೀಕಾರಾರ್ಹವಾಗಿರಲಿಲ್ಲ. ಏಕೆಂದರೆ ನೆರೆದು ಬಂದಿದ್ದ ಜನರು ಅನೇಕವೇಳೆ ಹಿಂಸಾತ್ಮಕರಾಗುತ್ತಿದ್ದರು. ಮೂರನೆಯ ಶತಮಾನದ ಲೇಖಕನೊಬ್ಬನು, ಕೆಲವು ಮಂದಿ ಪ್ರೇಕ್ಷಕರು ತಮ್ಮೊಳಗೇ ಗುದ್ದಾಡಿಕೊಳ್ಳುತ್ತಿದ್ದರೆಂದು ವರದಿಮಾಡಿದನು. ಮತ್ತು ಕಾರ್ಕೋಪೀನೋ ಹೇಳುವುದೇನಂದರೆ, “ಜೋತಿಷಿಗಳಿಗೂ ವೇಶ್ಯೆಯರಿಗೂ” ಆ ಸರ್ಕಸ್ ಕಟ್ಟಡದ ಕಮಾನುಸಾಲುಗಳಲ್ಲಿ “ದಂಧೆಯ ಸ್ಥಳಗಳಿದ್ದವು.” ಆದುದರಿಂದ, ರೋಮನ್ ಸರ್ಕಸ್‌ಗಳು ಕ್ರೈಸ್ತರಿಗೆ ಯೋಗ್ಯವಾದ ಸ್ಥಳವಾಗಿರಲಿಲ್ಲವೆಂಬುದು ಸುವ್ಯಕ್ತ.—1 ಕೊರಿಂಥ 6:9, 10.
8 ಹಾಗಾದರೆ ಪ್ರಸಿದ್ಧವಾದ ರೋಮನ್ ಸ್ನಾನಗೃಹಗಳ ವಿಷಯವೇನು? ಶುಚಿಯಾಗಿರಲಿಕ್ಕಾಗಿ ಸ್ನಾನಮಾಡುವುದರಲ್ಲಿ ತಪ್ಪಿರಲಿಲ್ಲ ನಿಶ್ಚಯ. ಆದರೆ ಅನೇಕ ರೋಮನ್ ಸ್ನಾನಗೃಹಗಳು ಬೃಹತ್ ಸೌಕರ್ಯವುಳ್ಳವುಗಳಾಗಿದ್ದವು. ಅಲ್ಲಿ ಅಂಗಮರ್ದನ ಕೋಣೆ, ಅಂಗಸಾಧನೆಯ ಗೃಹ, ಜೂಜಾಟದ ಕೋಣೆಗಳು ಮತ್ತು ಊಟಮಾಡುವ ಹಾಗೂ ಕುಡಿಯುವ ಸ್ಥಳಗಳಿದ್ದವು. ನಿಯಮಾನುಸಾರ, ಗಂಡಸರ ಮತ್ತು ಹೆಂಗಸರ ಸ್ನಾನ ಪ್ರತ್ಯೇಕವಾಗಿ ನಿರ್ಧರಿಸಲ್ಪಟ್ಟ ಸಮಯಗಳಲ್ಲಿ ನಡೆಯಬೇಕಾಗಿದ್ದರೂ, ಅನೇಕವೇಳೆ ಗಂಡಸರೂ ಹೆಂಗಸರೂ ಒಟ್ಟಿಗೆ ಸ್ನಾನಮಾಡುವುದನ್ನು ಅನುಮತಿಸಲಾಗುತ್ತಿತ್ತು. ಅಲೆಕ್ಸಾಂಡ್ರಿಯದ ಕ್ಲೆಮೆಂಟ್ ಬರೆದುದು: “ಸ್ನಾನಗೃಹಗಳನ್ನು ಪುರುಷ ಮತ್ತು ಸ್ತ್ರೀಯರಿಗೆ ತಾರತಮ್ಯವಿಲ್ಲದೆ ತೆರೆಯಲಾಗುತ್ತದೆ. ಅಲ್ಲಿ ಅವರು ಕಾಮುಕ ತೃಪ್ತಿಗಾಗಿ ನಗ್ನರಾಗುತ್ತಾರೆ.” ಹೀಗೆ, ಒಂದು ಅಂಗೀಕೃತ ಸಾರ್ವಜನಿಕ ಸೌಕರ್ಯವು ಕ್ರೈಸ್ತರನ್ನು ಸಿಕ್ಕಿಸಿಹಾಕಲು ಸೈತಾನನು ಸುಲಭವಾಗಿ ಉಪಯೋಗಿಸಸಾಧ್ಯವಿದ್ದ ಒಂದು ಬಲೆಯಾಗಿರಸಾಧ್ಯವಿತ್ತು. ವಿವೇಕಿಗಳು ಇಂತಹ ಸ್ಥಳಗಳಿಗೆ ಹೋಗುತ್ತಿರಲಿಲ್ಲ.
9. ಆದಿಕ್ರೈಸ್ತರು ಯಾವ ಪಾಶಗಳಿಂದ ತಪ್ಪಿಸಿಕೊಳ್ಳಬೇಕಾಗಿತ್ತು?
9 ರೋಮನ್ ಸಾಮ್ರಾಜ್ಯವು ತನ್ನ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ ಜೂಜಾಡುವುದು ಜನರ ನಡುವೆ ಜನಪ್ರಿಯ ಮನೋರಂಜನೆಯಾಗಿತ್ತು. ಆದಿಕ್ರೈಸ್ತರು ಅಂತಹ ರಂಗಗಳಿಗೆ ಹೋಗದಿರುವ ಮೂಲಕ ರಥದೋಟಗಳಲ್ಲಿ ನಡೆಯುತ್ತಿದ್ದ ಜೂಜಾಟದಿಂದ ದೂರವಿರಸಾಧ್ಯವಿತ್ತು. ಚಿಕ್ಕ ಪ್ರಮಾಣದ ಜೂಜಾಟವನ್ನು ಕಳ್ಳರೀತಿಯಲ್ಲಿ ಪ್ರವಾಸಿ ತಂಗುದಾಣಗಳಲ್ಲಿ ಮತ್ತು ಪಾನಶಾಲೆಗಳಲ್ಲಿ ನಡೆಸಲಾಗುತ್ತಿತ್ತು. ಇನ್ನೊಬ್ಬ ಆಟಗಾರನ ಕೈಯಲ್ಲಿ ಉರುಟುಗಲ್ಲು ಅಥವಾ ಗೆಣ್ಣೆಮೂಳೆಗಳು ಸಮ ಸಂಖ್ಯೆಯಲ್ಲಿವೆಯೊ ವಿಷಮ ಸಂಖ್ಯೆಯಲ್ಲಿವೆಯೊ ಎಂಬುದರ ಮೇಲೆ ಆಟಗಾರರು ಪಣವೊಡ್ಡುತ್ತಿದ್ದರು. ಜೂಜಾಟವು ಸುಲಭ ರೀತಿಯಲ್ಲಿ ಹಣವನ್ನು ಗಳಿಸುವ ನಿರೀಕ್ಷೆಯನ್ನು ಕೊಟ್ಟದ್ದರಿಂದ, ಅದು ಜನರ ಜೀವನಕ್ಕೆ ಸ್ವಾರಸ್ಯವನ್ನು ಕೂಡಿಸಿತು. (ಎಫೆಸ 5:5) ಇದಲ್ಲದೆ, ಅಂತಹ ಪಾನಗೃಹಗಳ ಪರಿಚಾರಿಕೆಯರು ಅನೇಕವೇಳೆ ವೇಶ್ಯೆರಾಗಿದ್ದುದರಿಂದ ಲೈಂಗಿಕ ದುರಾಚಾರದ ಅಪಾಯವೂ ಅಲ್ಲಿತ್ತು. ರೋಮನ್ ಸಾಮ್ರಾಜ್ಯದ ನಗರಗಳಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಸೈತಾನನು ಇಂತಹ ಕೆಲವು ಪಾಶಗಳನ್ನು ಒಡ್ಡಿದ್ದನು. ಇಂದು ವಿಷಯಗಳು ಹೆಚ್ಚು ಭಿನ್ನವಾಗಿವೆಯೊ?
ಇಂದು ಸೈತಾನನ ಪಾಶಗಳು
10. ಇಂದಿನ ಪರಿಸ್ಥಿತಿಯು ರೋಮನ್ ಸಾಮ್ರಾಜ್ಯದಲ್ಲಿದ್ದ ಪರಿಸ್ಥಿತಿಗಳನ್ನು ಹೋಲುವುದು ಹೇಗೆ?
10 ಸಾಮಾನ್ಯವಾಗಿ ನೋಡುವುದಾದರೆ, ಸೈತಾನನ ತಂತ್ರಗಳು ಈ ಎಲ್ಲ ಶತಮಾನಗಳಲ್ಲಿ ಬದಲಾಗಿಲ್ಲ. ಭ್ರಷ್ಟಗೊಂಡಿದ್ದ ಕೊರಿಂಥ ನಗರದಲ್ಲಿದ್ದ ಕ್ರೈಸ್ತರು ‘ಸೈತಾನನಿಂದ ವಂಚಿಸಲ್ಪಡದಂತೆ’ ಅಪೊಸ್ತಲ ಪೌಲನು ಅವರಿಗೆ ಪ್ರಬಲವಾದ ಸಲಹೆಯನ್ನು ಕೊಟ್ಟನು. “[ಸೈತಾನನ] ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ” ಎಂದನವನು. (2 ಕೊರಿಂಥ 2:11) ರೋಮನ್ ಸಾಮ್ರಾಜ್ಯವು ತನ್ನ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ ಇದ್ದ ಪರಿಸ್ಥಿತಿಯೇ ಇಂದು ವಿಕಾಸಹೊಂದಿರುವ ಅನೇಕ ದೇಶಗಳಲ್ಲಿದೆ. ಅನೇಕ ಜನರಿಗೆ ಇಂದು ಹಿಂದೆಂದಿಗಿಂತಲೂ ಹೆಚ್ಚು ವಿರಾಮದ ಸಮಯವಿದೆ. ಸರಕಾರೀ ಲಾಟರಿಗಳು ಬಡವರಿಗೂ ಆಶಾಕಿರಣವನ್ನು ತೋರಿಸುತ್ತವೆ. ಜನರ ಮನಸ್ಸನ್ನು ವಶಪಡಿಸಿಕೊಳ್ಳಲು ಅಗ್ಗವಾಗಿರುವ ಧಾರಾಳ ವಿನೋದಾವಳಿಗಳಿವೆ. ಕ್ರೀಡಾಂಗಣಗಳು ಜನರಿಂದ ಕಿಕ್ಕಿರಿದಿವೆ, ಜನರು ಜೂಜಾಡುತ್ತಿದ್ದಾರೆ, ಅವರು ಕೆಲವು ಸಲ ಹಿಂಸಾತ್ಮಕರಾಗುತ್ತಾರೆ ಮತ್ತು ಆಟಗಾರರೂ ಅನೇಕ ಸಲ ಹಿಂಸಾತ್ಮಕರಾಗುತ್ತಾರೆ. ಕೀಳ್ಮಟ್ಟದ ಸಂಗೀತವು ಜನರ ಕಿವಿಗಳನ್ನು ತುಂಬುತ್ತದೆ, ನಾಟಕ ಶಾಲೆ ಹಾಗೂ ಚಲನಚಿತ್ರ ಮತ್ತು ಟಿವಿ ಪರದೆಗಳು ಅಶ್ಲೀಲ ಪ್ರದರ್ಶನಗಳಿಂದ ತುಂಬಿರುತ್ತವೆ. ಕೆಲವು ದೇಶಗಳಲ್ಲಿ ಸಾನ ಮತ್ತು ಬಿಸಿನೀರಿನ ಬುಗ್ಗೆಗಳಲ್ಲಿ ಸ್ತ್ರೀಪುರುಷರು ಒಟ್ಟಿಗೆ ಸ್ನಾನಮಾಡುವುದು ಜನಪ್ರಿಯವಾಗಿದೆ. ಮತ್ತು ಕೆಲವು ಸಮುದ್ರ ತೀರಗಳಲ್ಲಿ ನಗ್ನ ಸ್ನಾನಗಳು ಜನಪ್ರಿಯವಾಗಿವೆಯೆಂಬುದನ್ನು ಹೇಳುವ ಆವಶ್ಯಕತೆಯೇ ಇಲ್ಲ. ಕ್ರೈಸ್ತತ್ವದ ಆದಿ ಶತಮಾನಗಳಲ್ಲಿ ನಡೆದಂತೆಯೇ, ಸೈತಾನನು ಲೌಕಿಕ ವಿರಾಮಕಾಲದ ಕಾರ್ಯಕಲಾಪಗಳ ಮೂಲಕ ದೇವರ ಸೇವಕರನ್ನು ಸೆಳೆಯಲು ಪ್ರಯತ್ನಿಸುತ್ತಾನೆ.
11. ವಿಶ್ರಾಮಪಡೆಯುವ ಅಪೇಕ್ಷೆಯಲ್ಲಿ ಯಾವ ಪಾಶಗಳಿರುತ್ತವೆ?
11 ಒತ್ತಡವು ಸಾಮಾನ್ಯವಾಗಿರುವ ಈ ಲೋಕದಲ್ಲಿ, ವಿಶ್ರಾಮಪಡೆಯುವುದನ್ನು ಅಥವಾ ಬೇರೆ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಅಪೇಕ್ಷಿಸುವುದು ಸ್ವಾಭಾವಿಕ. ಆದರೆ ರೋಮನ್ ಸ್ನಾನಗೃಹದಲ್ಲಿ ಆದಿಕ್ರೈಸ್ತರಿಗೆ ಅಪಾಯಕರವಾಗಿ ಪರಿಣಮಿಸಸಾಧ್ಯವಿದ್ದಂಥ ಕೆಲವು ವೈಶಿಷ್ಟ್ಯಗಳಿದ್ದಂತೆಯೇ, ಕೆಲವು ರಜಾದಿನ ಸೌಕರ್ಯಗಳೂ ಪ್ರವಾಸ ಸ್ಥಳಗಳೂ ಆಧುನಿಕ ದಿನದಲ್ಲಿರುವ ಕ್ರೈಸ್ತರನ್ನು ಅನೈತಿಕತೆಗೆ ಅಥವಾ ವಿಪರೀತ ಕುಡಿತಕ್ಕೆ ನಡೆಸುವ ಸೈತಾನನ ಬಲೆಯಾಗಿ ಪರಿಣಮಿಸಿವೆ. ಕೊರಿಂಥದ ಕ್ರೈಸ್ತರಿಗೆ ಪೌಲನು ಬರೆದುದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ. ಇಂಥ ಅಮಲಿನಿಂದೆಚ್ಚತ್ತು ನೀತಿವಂತರಾಗಿರಿ, ಪಾಪವನ್ನು ಬಿಟ್ಟುಬಿಡಿರಿ. ಕೆಲವರಿಗೆ ದೇವರ ವಿಷಯದಲ್ಲಿ ಜ್ಞಾನವೇ ಇಲ್ಲ.”—1 ಕೊರಿಂಥ 15:33, 34.
12. ಇಂದು ಯೆಹೋವನ ಸೇವಕರನ್ನು ಸಿಕ್ಕಿಸಿಹಾಕಲು ಸೈತಾನನು ಉಪಯೋಗಿಸುವ ಕೆಲವು ಉಪಾಯಗಳಾವುವು?
12 ಹವ್ವಳ ಸಂಬಂಧದಲ್ಲಿ ಸೈತಾನನು ಆಕೆಯ ಯೋಚನೆಯನ್ನು ಕೆಡಿಸಲು ಹೇಗೆ ಕುತಂತ್ರವನ್ನು ಉಪಯೋಗಿಸಿದನೆಂಬುದನ್ನು ನಾವು ನೋಡಿದ್ದೇವೆ. (2 ಕೊರಿಂಥ 11:3) ಇಂದು ಸೈತಾನನ ಪಾಶಗಳಲ್ಲಿ ಒಂದು ಯಾವುದೆಂದರೆ, ಯೆಹೋವನ ಸಾಕ್ಷಿಗಳು ಸಹ ಬೇರೆ ಜನರಂತೆಯೇ ಇರುವ ಜನರೆಂದು ತೋರಿಸಲಿಕ್ಕಾಗಿ ಅವರು ಸಾಧ್ಯವಿರುವಷ್ಟರ ಮಟ್ಟಿಗೆ ಲೋಕದ ಮಾರ್ಗಗಳಲ್ಲಿ ತೊಡಗುವಲ್ಲಿ ಅವರು ಕೆಲವರನ್ನು ಕ್ರೈಸ್ತ ಸತ್ಯಕ್ಕೆ ಆಕರ್ಷಿಸಸಾಧ್ಯವಿದೆ ಎಂದು ಕ್ರೈಸ್ತರು ಯೋಚಿಸುವಂತೆ ಮಾಡುವುದೇ. ಇದರಿಂದಾಗಿ ಕೆಲವು ಸಲ ಅವರು ಅವಿಶ್ವಾಸಿಗಳಂತೆಯೇ ವರ್ತಿಸುತ್ತಾರೆ ಮತ್ತು ಇದರ ಪರಿಣಾಮವು ವ್ಯತಿರಿಕ್ತವಾದದ್ದಾಗುತ್ತದೆ. (ಹಗ್ಗಾಯ 2:12-14) ಸೈತಾನನ ಉಪಾಯಗಳಲ್ಲಿ ಇನ್ನೊಂದು, ಯುವಕರೂ ವಯಸ್ಕರೂ ಸೇರಿರುವ ಸಮರ್ಪಿತ ಕ್ರೈಸ್ತರು ಇಬ್ಬಗೆಯ ಜೀವನಗಳನ್ನು ನಡೆಸಿ, ‘ದೇವರ ಪವಿತ್ರಾತ್ಮವನ್ನು ದುಃಖಪಡಿಸು’ವಂತೆ ಪ್ರೇರೇಪಿಸುವುದೇ ಆಗಿದೆ. (ಎಫೆಸ 4:30) ಕೆಲವರು ಇಂಟರ್‌ನೆಟ್ ಅನ್ನು ದುರುಪಯೋಗಿಸುವ ಮೂಲಕ ಈ ಬಲೆಯೊಳಗೆ ಸಿಕ್ಕಿಬಿದ್ದಿದ್ದಾರೆ.
13. ವೇಷಮರಸಿಕೊಂಡಿರುವ ಯಾವ ಪಾಶವು ಸೈತಾನನ ಕುಟಿಲ ಕೃತ್ಯಗಳಲ್ಲಿ ಒಂದಾಗಿದೆ, ಮತ್ತು ಜ್ಞಾನೋಕ್ತಿಯ ಯಾವ ಸಲಹೆ ಇಲ್ಲಿ ಸಮಂಜಸವಾಗಿದೆ?
13 ಸೈತಾನನ ಪಾಶಗಳಲ್ಲಿ ಇನ್ನೊಂದು, ವೇಷಮರಸಿಕೊಂಡಿರುವ ಇಂದ್ರಜಾಲ ವಿದ್ಯೆಯೇ. ಸೈತಾನಾರಾಧನೆ ಅಥವಾ ಪ್ರೇತವ್ಯವಹಾರದಲ್ಲಿ ಯಾವ ಸತ್ಕ್ರೈಸ್ತನೂ ಉದ್ದೇಶಪೂರ್ವಕವಾಗಿ ಕೈಹಾಕನು ನಿಜ. ಆದರೂ ಕೆಲವರು ಹಿಂಸಾಚಾರ ಇಲ್ಲವೆ ಅಲೌಕಿಕ ರೂಢಿಗಳನ್ನು ಎತ್ತಿತೋರಿಸುವಂಥ ಚಲನಚಿತ್ರ, ಟಿವಿ ಧಾರಾವಾಹಿಗಳು, ವಿಡಿಯೋ ಆಟಗಳು ಮತ್ತು ಮಕ್ಕಳ ಪುಸ್ತಕ ಹಾಗೂ ಕಾಮಿಕ್‌ಗಳ ವಿಷಯದಲ್ಲಿಯೂ ಅದರಲ್ಲಿ ಅಪಾಯವಿಲ್ಲವೊ ಎಂಬಂತೆ ನಿರ್ಲಕ್ಷ್ಯಭಾವವನ್ನು ತೋರಿಸುತ್ತಾರೆ. ಆದರೆ ಇಂದ್ರಜಾಲದ ಲೇಶಮಾತ್ರ ಸುಳಿವೂ ಇರುವ ಯಾವುದರಿಂದಲೂ ದೂರವಿರುವ ಅಗತ್ಯವಿದೆ. ವಿವೇಕಪೂರ್ಣವಾದ ಜ್ಞಾನೋಕ್ತಿ ಹೇಳುವುದು: “ವಕ್ರಬುದ್ಧಿಯುಳ್ಳವನ ಮಾರ್ಗದಲ್ಲಿ ಮುಳ್ಳುಗಳೂ ಉರುಲುಗಳೂ ತುಂಬಿವೆ; ತನ್ನನ್ನು ರಕ್ಷಿಸಿಕೊಳ್ಳುವವನು ಅವುಗಳಿಗೆ ದೂರವಾಗಿರುವನು.” (ಜ್ಞಾನೋಕ್ತಿ 22:5) ಸೈತಾನನು “ಈ ಪ್ರಪಂಚದ ದೇವರು” ಆಗಿರುವುದರಿಂದ, ತುಂಬ ಜನಪ್ರಿಯವಾಗಿರುವ ಯಾವುದೇ ಸಂಗತಿಯ ಮರೆಯಲ್ಲಿ ಅವನ ಒಂದು ಬಲೆಯು ಬಚ್ಚಿಡಲ್ಪಟ್ಟಿರುವ ಸಾಧ್ಯತೆಯಿದೆ.—2 ಕೊರಿಂಥ 4:4; 1 ಯೋಹಾನ 2:15, 16.
ಯೇಸು ಪಿಶಾಚನನ್ನು ವಿರೋಧಿಸಿದನು
14. ಯೇಸು ಪಿಶಾಚನ ಮೊದಲನೆಯ ಶೋಧನೆಯನ್ನು ಹೇಗೆ ಪ್ರತಿಭಟಿಸಿದನು?
14 ಪಿಶಾಚನನ್ನು ವಿರೋಧಿಸಿ ಅವನು ಓಡಿಹೋಗುವಂತೆ ಮಾಡುವುದರಲ್ಲಿ ಯೇಸು ಒಂದು ಉತ್ತಮ ಮಾದರಿಯನ್ನು ಇಟ್ಟನು. ದೀಕ್ಷಾಸ್ನಾನ ಹೊಂದಿ 40 ದಿನ ಉಪವಾಸ ಮಾಡಿದ ಬಳಿಕ, ಯೇಸುವನ್ನು ಸೈತಾನನು ಶೋಧನೆಗೊಳಪಡಿಸಿದನು. (ಮತ್ತಾಯ 4:1-11) ಮೊದಲನೆಯ ಶೋಧನೆಯು, ಉಪವಾಸ ಮಾಡಿದ್ದರಿಂದ ಯೇಸುವಿಗಾಗಿದ್ದ ಸ್ವಾಭಾವಿಕ ಹಸಿವೆಯ ಪ್ರಯೋಜನವನ್ನು ತೆಗೆದುಕೊಳ್ಳುವುದಾಗಿತ್ತು. ಒಂದು ಶಾರೀರಿಕ ಆವಶ್ಯಕತೆಯನ್ನು ತೃಪ್ತಿಪಡಿಸಲಿಕ್ಕಾಗಿ ತನ್ನ ಪ್ರಥಮ ಅದ್ಭುತವನ್ನು ಮಾಡುವಂತೆ ಸೈತಾನನು ಯೇಸುವಿಗೆ ಕರೆಕೊಟ್ಟನು. ಧರ್ಮೋಪದೇಶಕಾಂಡ 8:3ನ್ನು ಉದ್ಧರಿಸುತ್ತಾ, ಯೇಸು ತನಗಿರುವ ಶಕ್ತಿಯನ್ನು ಸ್ವಾರ್ಥಕ್ಕಾಗಿ ಉಪಯೋಗಿಸಲು ನಿರಾಕರಿಸಿ, ಶಾರೀರಿಕ ಆಹಾರಕ್ಕಿಂತ ಆತ್ಮಿಕ ಆಹಾರವನ್ನು ಹೆಚ್ಚು ಅಮೂಲ್ಯವಾದದ್ದಾಗಿ ಪರಿಗಣಿಸಿದನು.
15. (ಎ) ಯೇಸುವನ್ನು ಶೋಧಿಸಲಿಕ್ಕಾಗಿ ಸೈತಾನನು ಯಾವ ಸ್ವಾಭಾವಿಕ ಅಪೇಕ್ಷೆಯನ್ನು ಬಳಸಿಕೊಂಡನು? (ಬಿ) ದೇವರ ಸೇವಕರ ಎದುರಾಗಿ ಪಿಶಾಚನು ಇಂದು ಉಪಯೋಗಿಸುವ ಒಂದು ಪ್ರಧಾನ ಕುಟಿಲ ಕೃತ್ಯ ಯಾವುದು, ಆದರೆ ನಾವು ಅವನನ್ನು ಹೇಗೆ ವಿರೋಧಿಸಬಲ್ಲೆವು?
ಆದಿಕಾಂಡ 39:9 ಮತ್ತು 1 ಕೊರಿಂಥ 6:18ರಂತಹ ವಚನಗಳನ್ನು ಜ್ಞಾಪಿಸಿಕೊಳ್ಳಬಲ್ಲೆವು.
15 ಈ ಶೋಧನೆಯ ಸಂಬಂಧದಲ್ಲಿ ಒಂದು ಆಸಕ್ತಿಕರ ವಿಷಯವೇನಂದರೆ, ಯೇಸು ಒಂದು ಲೈಂಗಿಕ ಪಾಪವನ್ನು ಮಾಡುವಂತೆ ಪ್ರಚೋದಿಸಲು ಪಿಶಾಚನು ಪ್ರಯತ್ನಿಸಲಿಲ್ಲ. ಆಹಾರಕ್ಕಾಗಿ ಹಂಬಲಿಸುವಂತೆ ಮಾಡುವ ಸ್ವಾಭಾವಿಕ ಹಸಿವೆಯೇ ಈ ಸಂದರ್ಭದಲ್ಲಿ ಯೇಸುವನ್ನು ಶೋಧಿಸಲಿಕ್ಕಾಗಿ ಅತಿ ಬಲಾಢ್ಯವಾದ ಶಾರೀರಿಕ ಅಪೇಕ್ಷೆ ಎಂದು ಅವನಿಗೆ ತೋರಿತು. ಇಂದು ದೇವಜನರನ್ನು ಸೆಳೆಯಲು ಪಿಶಾಚನು ಯಾವ ಶೋಧನೆಗಳನ್ನು ಉಪಯೋಗಿಸುತ್ತಾನೆ? ಅವು ಅನೇಕವೂ ವಿವಿಧವೂ ಆಗಿವೆ. ಆದರೆ ಯೆಹೋವನ ಜನರ ಸಮಗ್ರತೆಯನ್ನು ಮುರಿಯುವ ಪ್ರಯತ್ನದಲ್ಲಿ ಅವನು ಉಪಯೋಗಿಸುವ ಮುಖ್ಯ ಕುಟಿಲ ಕೃತ್ಯಗಳಲ್ಲಿ ಒಂದು ಲೈಂಗಿಕ ಶೋಧನೆಗಳಾಗಿವೆ. ಯೇಸುವನ್ನು ಅನುಕರಿಸುವ ಮೂಲಕ, ನಾವು ಪಿಶಾಚನನ್ನು ವಿರೋಧಿಸಿ ಶೋಧನೆಗಳನ್ನು ತಡೆದುಹಿಡಿಯಬಲ್ಲೆವು. ತನ್ನನ್ನು ಒಡಂಬಡಿಸಲು ಸೈತಾನನು ಮಾಡಿದ ಪ್ರಯತ್ನಗಳನ್ನು ಯೇಸು ತಕ್ಕ ಶಾಸ್ತ್ರವಚನಗಳನ್ನು ಜ್ಞಾಪಿಸಿಕೊಳ್ಳುವ ಮೂಲಕ ತಡೆದಂತೆಯೇ, ನಾವು ಲೈಂಗಿಕ ದುರಾಚಾರಕ್ಕೆ ಪ್ರೇರೇಪಿಸಲ್ಪಟ್ಟಾಗ,16. (ಎ) ಸೈತಾನನು ಯೇಸುವನ್ನು ಎರಡನೆಯ ಬಾರಿ ಶೋಧಿಸಿದ್ದು ಹೇಗೆ? (ಬಿ) ನಾವು ಯೆಹೋವನನ್ನು ಪರೀಕ್ಷಿಸುವಂತೆ ಸೈತಾನನು ಯಾವ ವಿಧಗಳಲ್ಲಿ ನಮ್ಮನ್ನು ಪ್ರಲೋಭಿಸಬಹುದು?
16 ಮುಂದಕ್ಕೆ, ದೇವಾಲಯದ ಗೋಡೆಯಿಂದ ಕೆಳಗೆ ಹಾರಿ, ದೇವರಿಗೆ ತನ್ನ ದೂತರ ಮುಖಾಂತರ ಅವನನ್ನು ರಕ್ಷಿಸಲು ಇರುವ ಸಾಮರ್ಥ್ಯವನ್ನು ಪರೀಕ್ಷಿಸುವಂತೆ ಯೇಸುವಿಗೆ ಕರೆಕೊಟ್ಟನು. ಆಗ ಯೇಸು ಧರ್ಮೋಪದೇಶಕಾಂಡ 6:16ನ್ನು ಉದ್ಧರಿಸುತ್ತಾ, ತನ್ನ ತಂದೆಯನ್ನು ಪರೀಕ್ಷೆಗೊಳಪಡಿಸಲು ನಿರಾಕರಿಸಿದನು. ಒಂದು ದೇವಾಲಯದ ಗೋಡೆಯಿಂದ ಹಾರುವಂತೆ ಸೈತಾನನು ನಮ್ಮನ್ನು ಪ್ರೇರೇಪಿಸಲಿಕ್ಕಿಲ್ಲವಾದರೂ, ಯೆಹೋವನನ್ನು ನಾವು ಪರೀಕ್ಷಿಸುವಂತೆ ಆತನು ನಮ್ಮನ್ನು ಶೋಧಿಸಬಲ್ಲನು. ಯಾರಿಂದಲೂ ಸಲಹೆ ಸಿಗದೇ, ನಾವು ಎಷ್ಟು ನಿಕಟವಾಗಿ ಉಡುಪು ಮತ್ತು ಕೇಶಶೈಲಿಗಳಲ್ಲಿ ಲೋಕದ ಗೀಳುಗಳನ್ನು ಅನುಕರಿಸಬಲ್ಲೆವೆಂದು ನೋಡಲು ನಮಗೆ ಮನಸ್ಸಾಗುತ್ತದೊ? ಸಂಶಯಾಸ್ಪದವಾದ ವಿನೋದಾವಳಿಗಳ ಕ್ಷೇತ್ರದಲ್ಲಿ ನಾವು ಪ್ರಲೋಭಿಸಲ್ಪಡುತ್ತೇವೊ? ಹಾಗಿರುವಲ್ಲಿ, ನಾವು ಆಗ ಯೆಹೋವನನ್ನು ಪರೀಕ್ಷಿಸಿದಂತಾಗಬಹುದು. ನಮಗೆ ಅಂತಹ ಪ್ರವೃತ್ತಿಗಳಿರುವಲ್ಲಿ, ಸೈತಾನನು ನಮ್ಮನ್ನು ಬಿಟ್ಟು ಓಡಿಹೋಗುವ ಬದಲು ನಮ್ಮ ಸುತ್ತಲೂ ಸುತ್ತಾಡಿಕೊಂಡು, ನಾವು ಅವನ ಪಕ್ಷವನ್ನು ಹಿಡಿಯುವಂತೆ ಮಾಡಲು ಎಡೆಬಿಡದೆ ಪ್ರಯತ್ನಿಸುತ್ತಿರಬಹುದು.
17. (ಎ) ಪಿಶಾಚನು ಯೇಸುವನ್ನು ಮೂರನೆಯ ಬಾರಿ ಹೇಗೆ ಶೋಧಿಸಿದನು? (ಬಿ) ಯಾಕೋಬ 4:7 ನಮ್ಮ ವಿಷಯದಲ್ಲಿ ಹೇಗೆ ನಿಜವಾಗಿ ಪರಿಣಮಿಸಬಲ್ಲದು?
17 ಆರಾಧನೆಯ ಒಂದೇ ಒಂದು ಕೃತ್ಯಕ್ಕೆ ವಿನಿಮಯವಾಗಿ ಲೋಕದ ಸಕಲ ರಾಜ್ಯಗಳನ್ನು ಸೈತಾನನು ಯೇಸುವಿಗೆ ನೀಡಿದಾಗ, ಯೇಸು ಪುನಃ ಶಾಸ್ತ್ರವನ್ನು ಉದ್ಧರಿಸುವ ಮೂಲಕ ಅವನನ್ನು ವಿರೋಧಿಸಿ, ತನ್ನ ತಂದೆಯಾದ ದೇವರ ಅನನ್ಯ ಆರಾಧನೆಗಾಗಿ ದೃಢವಾದ ನಿಲುವನ್ನು ತೆಗೆದುಕೊಂಡನು. (ಧರ್ಮೋಪದೇಶಕಾಂಡ 5:9; 6:13; 10:20) ಇಂದು ಸೈತಾನನು ನಮಗೆ ಈ ಲೋಕದ ರಾಜ್ಯಗಳನ್ನು ನೀಡಲಿಕ್ಕಿಲ್ಲವಾದರೂ, ಅವನು ಸದಾ ಲೌಕಿಕ ಬೆಡಗಿನಿಂದ, ನಮ್ಮದೇ ಆದ ಒಂದು ಚಿಕ್ಕ ಸಾಮ್ರಾಜ್ಯವನ್ನು ಹೊಂದುವ ಪ್ರತೀಕ್ಷೆಯೊಂದಿಗೆ ನಮ್ಮನ್ನು ಸೆಳೆಯುತ್ತಾನೆ. ನಮ್ಮ ಅನನ್ಯಭಕ್ತಿಯನ್ನು ಯೆಹೋವನಿಗೆ ಕೊಡುತ್ತಾ ನಾವು ಯೇಸುವಿನಂತೆ ಪ್ರತಿವರ್ತಿಸುತ್ತೇವೊ? ಹಾಗೆ ಮಾಡುವಲ್ಲಿ, ಯೇಸು ಏನನ್ನು ಅನುಭವಿಸಿದನೊ ಅದನ್ನೇ ನಾವೂ ಅನುಭವಿಸುವೆವು. ಮತ್ತಾಯನ ವೃತ್ತಾಂತವು, “ಆಗ ಸೈತಾನನು ಆತನನ್ನು ಬಿಟ್ಟುಬಿಟ್ಟನು” ಎಂದು ಹೇಳುತ್ತದೆ. (ಮತ್ತಾಯ 4:11) ನಾವು ತಕ್ಕದಾದ ಬೈಬಲ್ ಮೂಲತತ್ತ್ವಗಳನ್ನು ನೆನಪಿಸಿಕೊಳ್ಳುವ ಮತ್ತು ಕಾರ್ಯರೂಪಕ್ಕೆ ಹಾಕುವ ಮೂಲಕ ಸೈತಾನನ ಎದುರಾಗಿ ಸ್ಥಿರವಾದ ನಿಲುವನ್ನು ತೆಗೆದುಕೊಳ್ಳುವಲ್ಲಿ, ಅವನು ನಮ್ಮನ್ನು ಬಿಟ್ಟುಹೋಗುವನು. ಶಿಷ್ಯ ಯಾಕೋಬನು ಬರೆದುದು: “ಪಿಶಾಚನನ್ನು ವಿರೋಧಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು.” (ಯಾಕೋಬ 4:7, NW) ಒಬ್ಬ ಕ್ರೈಸ್ತನು ಫ್ರಾನ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಬರೆದುದು: “ಸೈತಾನನು ನಿಜವಾಗಿಯೂ ಕುತಂತ್ರಿ. ನನ್ನ ಉದ್ದೇಶಗಳು ಒಳ್ಳೇದಾಗಿದ್ದರೂ, ನನ್ನ ಅನಿಸಿಕೆಗಳು ಮತ್ತು ಅಪೇಕ್ಷೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ನನಗೆ ಬಹಳ ಕಷ್ಟಕರವಾಗಿ ತೋರುತ್ತದೆ. ಆದರೂ, ಧೈರ್ಯ, ತಾಳ್ಮೆ ಮತ್ತು ಎಲ್ಲಕ್ಕೂ ಮಿಗಿಲಾಗಿ, ಯೆಹೋವನ ಸಹಾಯದಿಂದ, ಸಮಗ್ರತೆಯನ್ನು ಕಾಪಾಡಿಕೊಂಡು ಸತ್ಯಕ್ಕೆ ಅಂಟಿಕೊಂಡಿರಲು ನನಗೆ ಸಾಧ್ಯವಾಗಿದೆ.”
ಪಿಶಾಚನನ್ನು ವಿರೋಧಿಸಲು ಪೂರ್ತಿಯಾಗಿ ಸನ್ನದ್ಧರು
18. ನಾವು ಸೈತಾನನನ್ನು ವಿರೋಧಿಸುವಂತೆ ಯಾವ ಆತ್ಮಿಕ ಆಯುಧಗಳು ನಮ್ಮನ್ನು ಸಜ್ಜುಗೊಳಿಸುತ್ತವೆ?
18 ನಾವು “ಸೈತಾನನ ತಂತ್ರೋಪಾಯಗಳನ್ನು . . . ಎದುರಿಸಿ ನಿಲ್ಲುವದಕ್ಕೆ” ಶಕ್ತರಾಗುವಂತೆ ಯೆಹೋವನು ನಮಗೆ ಸರ್ವ ಆಯುಧಗಳೂ ಎಫೆಸ 6:11-18) ಸತ್ಯಕ್ಕಾಗಿ ನಮಗಿರುವ ಪ್ರೀತಿಯು, ಕ್ರೈಸ್ತ ಚಟುವಟಿಕೆಗಾಗಿ ನಮ್ಮ ನಡುಕಟ್ಟನ್ನು ಕಟ್ಟುವುದು ಅಥವಾ ನಮ್ಮನ್ನು ಸಿದ್ಧಗೊಳಿಸುವುದು. ಯೆಹೋವನ ನೀತಿಯ ಮಟ್ಟಗಳಿಗೆ ಅಂಟಿಕೊಳ್ಳಲು ನಾವು ಮಾಡುವ ದೃಢನಿಶ್ಚಯವು ನಮ್ಮ ಹೃದಯವನ್ನು ಕಾಪಾಡುವ ವಜ್ರಕವಚವಾಗಿರುವುದು. ನಮ್ಮ ಪಾದಗಳು ಸುವಾರ್ತೆಯ ಕೆರಗಳನ್ನು ಮೆಟ್ಟಿಕೊಂಡಿರುವುದಾದರೆ, ಅವು ನಮ್ಮನ್ನು ಸಾರುವ ಕೆಲಸಕ್ಕೆ ಕ್ರಮವಾಗಿ ಒಯ್ಯುವವು. ಮತ್ತು ಇದು ನಮ್ಮನ್ನು ಆತ್ಮಿಕವಾಗಿ ಬಲಪಡಿಸಿ ಕಾಪಾಡುವುದು. ನಮ್ಮ ಬಲವಾದ ನಂಬಿಕೆಯು ಒಂದು ದೊಡ್ಡ ಗುರಾಣಿಯಂತೆ ಇದ್ದು, “ಕೆಡುಕನ ಅಗ್ನಿಬಾಣ”ಗಳಿಂದ, ಅಂದರೆ ಅವನ ಕುಟಿಲ ಆಕ್ರಮಣಗಳು ಮತ್ತು ಶೋಧನೆಗಳಿಂದ ನಮ್ಮನ್ನು ಕಾಪಾಡುವುದು. ಯೆಹೋವನ ವಾಗ್ದಾನಗಳ ನೆರವೇರಿಕೆಯಲ್ಲಿ ನಮಗಿರುವ ಭರವಸೆಯ ನಿರೀಕ್ಷೆಯು ಒಂದು ಶಿರಸ್ತ್ರಾಣದಂತಿದ್ದು, ನಮ್ಮ ಯೋಚನಾ ಸಾಮರ್ಥ್ಯಗಳನ್ನು ಕಾಪಾಡುವುದು ಮತ್ತು ನಮಗೆ ಮನಶ್ಶಾಂತಿಯನ್ನು ಕೊಡುವುದು. (ಫಿಲಿಪ್ಪಿ 4:7) ನಾವು ದೇವರ ವಾಕ್ಯದ ಉಪಯೋಗದಲ್ಲಿ ನಿಪುಣರಾಗುವಲ್ಲಿ, ಅದು ಸೈತಾನನಿಗೆ ಆತ್ಮಿಕ ದಾಸತ್ವದಲ್ಲಿರುವ ಜನರನ್ನು ಬಿಡಿಸಲಿಕ್ಕಾಗಿ ನಾವು ಉಪಯೋಗಿಸಬಹುದಾದ ಕತ್ತಿಯಂತಿರುವುದು. ನಾವು ಅದನ್ನು, ಯೇಸು ತಾನು ಶೋಧಿಸಲ್ಪಟ್ಟ ಸಮಯದಲ್ಲಿ ಮಾಡಿದಂತೆ, ನಮ್ಮನ್ನು ರಕ್ಷಿಸಿಕೊಳ್ಳಲು ಸಹ ಉಪಯೋಗಿಸಬಲ್ಲೆವು.
ಇರುವ ಆತ್ಮಿಕ ರಕ್ಷಾಕವಚವನ್ನು ಒದಗಿಸಿದ್ದಾನೆ. (19. ‘ಪಿಶಾಚನನ್ನು ವಿರೋಧಿಸು’ವುದಲ್ಲದೆ ಇನ್ನಾವುದು ಅಗತ್ಯ?
19 ಆದುದರಿಂದ, ‘ದೇವರು ದಯಪಾಲಿಸುವ ಈ ಸರ್ವಾಯುಧಗಳನ್ನು’ ಧರಿಸಿಕೊಂಡು ಪ್ರಾರ್ಥನೆಯಲ್ಲಿ ನಿತ್ಯವೂ ನಿರತರಾಗಿರುವುದರಿಂದ, ಸೈತಾನನು ದಾಳಿಮಾಡುವಾಗ ನಮಗೆ ಯೆಹೋವನ ಸಂರಕ್ಷಣೆ ದೊರೆಯುವುದೆಂಬ ಭರವಸೆ ನಮಗಿರಬಲ್ಲದು. (ಯೋಹಾನ 17:15; 1 ಕೊರಿಂಥ 10:13) ಆದರೆ ಯಾಕೋಬನು ತಿಳಿಸುವಂತೆ, ‘ಪಿಶಾಚನನ್ನು ವಿರೋಧಿಸಿದರೆ’ ಮಾತ್ರ ಸಾಲದು. ನಾವು, ನಮಗೋಸ್ಕರ ಚಿಂತಿಸುವ ‘ದೇವರಿಗೆ ಅಧೀನರಾಗಬೇಕು.’ (ಯಾಕೋಬ 4:7, 8, NW) ನಾವಿದನ್ನು ಹೇಗೆ ಮಾಡಬಲ್ಲೆವೆಂಬುದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
ನೀವು ಹೇಗೆ ಉತ್ತರ ಕೊಡುವಿರಿ?
• ಸೈತಾನನ ಯಾವ ಪಾಶಗಳಿಂದ ಆದಿಕ್ರೈಸ್ತರು ತಪ್ಪಿಸಿಕೊಳ್ಳಬೇಕಾಗಿತ್ತು?
• ಯೆಹೋವನ ಸೇವಕರನ್ನು ಸಿಕ್ಕಿಸಿಹಾಕಲು ಇಂದು ಸೈತಾನನು ಯಾವ ಕುಟಿಲ ಕೃತ್ಯಗಳನ್ನು ಉಪಯೋಗಿಸುತ್ತಾನೆ?
• ಪಿಶಾಚನ ಶೋಧನೆಗಳನ್ನು ಯೇಸು ಹೇಗೆ ವಿರೋಧಿಸಿದನು?
• ಪಿಶಾಚನನ್ನು ವಿರೋಧಿಸಲು ಯಾವ ಆತ್ಮಿಕ ಆಯುಧಗಳು ನಮ್ಮನ್ನು ಶಕ್ತರಾಗಿಸುತ್ತವೆ?
[ಅಧ್ಯಯನ ಪ್ರಶ್ನೆಗಳು]
[ಪುಟ 8, 9ರಲ್ಲಿರುವ ಚಿತ್ರ]
ಯೇಸು ದೃಢವಾದ ರೀತಿಯಲ್ಲಿ ಪಿಶಾಚನನ್ನು ವಿರೋಧಿಸಿದನು
[ಪುಟ 10ರಲ್ಲಿರುವ ಚಿತ್ರಗಳು]
ಪ್ರಥಮ ಶತಮಾನದ ಕ್ರೈಸ್ತರು, ಹಿಂಸಾತ್ಮಕ ಮತ್ತು ಅನೈತಿಕ ವಿನೋದಾವಳಿಗಳನ್ನು ತಳ್ಳಿಹಾಕಿದರು
[ಕೃಪೆ]
The Complete Encyclopedia of Illustration/J. G. Heck