ಬಾಲ್ಕನ್ ದೇಶಗಳಲ್ಲಿ ಹರ್ಷೋಲ್ಲಾಸದ ಸಮಯ
ಬಾಲ್ಕನ್ ದೇಶಗಳಲ್ಲಿ ಹರ್ಷೋಲ್ಲಾಸದ ಸಮಯ
ಇಸವಿ 1922. ಆಸ್ಟ್ರಿಯದ ಇನ್ಸ್‌ಬ್ರುಕ್‌ನಲ್ಲಿ ಆಗ ಅರ್ನೆಸ್ಟ್ ಬೈಬಲ್ ಸ್ಟೂಡೆಂಟ್ಸ್ ಎಂದು ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳ ಒಂದು ಕೂಟವು ನಡೆಯುತ್ತಿತ್ತು. ನೆರೆದಿದ್ದವರಲ್ಲಿ ಸರ್ಬಿಯ ದೇಶದ ವಾಯ್‌ವಡೀನ ಪ್ರದೇಶದ ಆಪಟೀನ್ ಪಟ್ಟಣದ ಫ್ರಾಂಟ್ಸ್ ಬ್ರಾಂಟ್ ಎಂಬ ಒಬ್ಬ ಯುವಕನಿದ್ದನು. ಭಾಷಣಕರ್ತನು ಯೆಹೋವ ಎಂಬ ದೇವರ ಹೆಸರನ್ನು ಉಚ್ಚರಿಸಿದ ಕೂಡಲೇ, ಒಂದು ಗಲಭೆಯ ಗುಂಪು ಅಪಹಾಸ್ಯಮಾಡತೊಡಗಿ ಭಾಷಣವನ್ನು ಮುಂದುವರಿಸಲಾಗದೆ ಆ ಕೂಟವನ್ನು ಮುಕ್ತಾಯಗೊಳಿಸಲಾಯಿತು. ಆದರೂ, ಫ್ರಾಂಟ್ಸ್ ಏನನ್ನು ಕೇಳಿಸಿಕೊಂಡನೊ ಅದು ಅವನ ಮೇಲೆ ಆಳವಾದ ಪರಿಣಾಮವನ್ನು ಬೀರಿದ್ದರಿಂದ, ಅವನು ರಾಜ್ಯದ ಸುವಾರ್ತೆಯನ್ನು ಸಾರತೊಡಗಿದನು. ಇದು ಬಾಲ್ಕನ್ ದೇಶಗಳಲ್ಲೊಂದರಲ್ಲಿ ಆಗಲಿದ್ದ ರೋಮಾಂಚಕವಾದ ಆತ್ಮಿಕ ಅಭಿವೃದ್ಧಿಯ ಪುಟ್ಟ ಆರಂಭವಾಗಿತ್ತು.
ಇದು ಹೆಚ್ಚಿನ ಜನರಿಗೆ ಯುಗೊಸ್ಲಾವಿಯ ಎಂಬ ಹೆಸರು ಯುದ್ಧ ಮತ್ತು ಸಾಮೂಹಿಕ ಹತ್ಯೆಯ ಚಿತ್ರಣವನ್ನು ಮನಸ್ಸಿಗೆ ತರುತ್ತದೆ. ದುಃಖವನ್ನು ಬರಿಸುವ ಕಗ್ಗೊಲೆಗಳು, ಸಂಕಟಪಡುತ್ತಿರುವ ನಿರಾಶ್ರಿತರು, ಧ್ವಂಸವಾಗಿರುವ ಮನೆಗಳು ಮತ್ತು ಯಾತನೆಪಡುತ್ತಿರುವ ಅನಾಥರು—ಇವರ ಚಿತ್ರ ಮನಸ್ಸಿಗೆ ಬರುತ್ತದೆ. ಬಾಲ್ಕನ್ ದ್ವೀಪವನ್ನು 1991ರಿಂದ 1995ರ ತನಕ ಧ್ವಂಸಮಾಡಿ, ಮಾನವ ಪ್ರಯತ್ನಗಳಿಂದ ಸಮೃದ್ಧವಾದ ಮತ್ತು ನಿಶ್ಚಿಂತೆಯ ಭವಿಷ್ಯವನ್ನು ತರುವ ಸಕಲ ನಿರೀಕ್ಷೆಯನ್ನು ನುಚ್ಚುನೂರುಗೊಳಿಸಿದ ಯುದ್ಧವು ತಂದ ಭಯಂಕರ ವೇದನೆ ಮತ್ತು ದುರವಸ್ಥೆಯು ವರ್ಣಿಸಲಸಾಧ್ಯ. ಆ ಯುದ್ಧದ ಕಾರಣ ಹಿಂದಿನ ಯುಗೊಸ್ಲಾವಿಯದ ಜನರು ಆರ್ಥಿಕ ತೊಂದರೆ ಮತ್ತು ದಾರಿದ್ರ್ಯದಿಂದ ನರಳುತ್ತಿದ್ದಾರೆ. *
ಇಂತಹ ಕಷ್ಟಾನುಭವಗಳು ಇರುವುದರಿಂದ ಲೋಕದ ಈ ಭಾಗದಲ್ಲಿ ಸಂತುಷ್ಟ ಜನರನ್ನು ಕಂಡುಕೊಳ್ಳುವುದು ಕಷ್ಟಸಾಧ್ಯವೆಂದು ನಮಗನಿಸಬಹುದು. ಆದರೂ ವಿಚಿತ್ರವೇನಂದರೆ, ಅಂತಹ ಜನರು ಇಲ್ಲಿದ್ದಾರೆ. ಅಷ್ಟೇಕೆ, 20ನೆಯ ಶತಮಾನದ ಅಂತ್ಯದಲ್ಲಿ ಅವರು ಹರ್ಷೋಲ್ಲಾಸದ ವಿಶೇಷ ದಿನವೊಂದನ್ನು ಅನುಭವಿಸಿದರು. ಆದರೆ ಈ ಹಿಂದೆ ತಿಳಿಸಲ್ಪಟ್ಟಿರುವ ಫ್ರಾಂಟ್ಸ್ ಬ್ರಾಂಟ್ ಎಂಬ ಯುವಕನಿಗೂ ಇದೆಲ್ಲದ್ದಕ್ಕೂ ಏನು ಸಂಬಂಧ?
ಬಾಲ್ಕನ್ ಪ್ರದೇಶದಲ್ಲಿ ಆತ್ಮಿಕ ಬೆಳವಣಿಗೆ
ತಾನು ಕೇಳಿಸಿಕೊಂಡಿದ್ದ ಹೊಸ ಸತ್ಯಗಳ ಕುರಿತು ಫ್ರಾಂಟ್ಸ್ ಬ್ರಾಂಟ್ ರೋಮಾಂಚಗೊಂಡು ತಾನು ಸುವಾರ್ತೆಯನ್ನು ಸಾರಲೇಬೇಕೆಂದು ನಿರ್ಧರಿಸಿದರು. ಆಸ್ಟ್ರಿಯದ ಗಡಿಯ ಹತ್ತಿರ ಸ್ಲೊವೇನಿಯದಲ್ಲಿದ್ದ ಮಾರಿಬಾರ್ ನಗರದಲ್ಲಿ ಕ್ಷೌರಿಕನ ಕೆಲಸವು ಅವರಿಗೆ ಸಿಕ್ಕಿತು. ಅಲ್ಲಿ ಅವರು ತಮ್ಮ ಗಿರಾಕಿಗಳಿಗೆ ಸಾರಲಾರಂಭಿಸಿದಾಗ, ಆ ಗಿರಾಕಿಗಳು ಸಾಮಾನ್ಯವಾಗಿ ಕ್ಷೌರ ನಡೆಯುತ್ತಿದ್ದಾಗ ಸುಮ್ಮನೆ ಕುಳಿತು ಕೇಳಿಸಿಕೊಳ್ಳುತ್ತಿದ್ದರು. ಅವರ ಈ
ಪ್ರಯತ್ನಗಳ ಪರಿಣಾಮವಾಗಿ, 1920ಗಳ ಕೊನೆಯಲ್ಲಿ ಮಾರಿಬಾರ್‌ನಲ್ಲಿ ರಾಜ್ಯ ಪ್ರಚಾರಕರ ಒಂದು ಚಿಕ್ಕ ಗುಂಪು ಏರ್ಪಡಿಸಲ್ಪಟ್ಟಿತು. ಬೈಬಲ್ ಭಾಷಣಗಳನ್ನು ಒಂದು ರೆಸ್ಟೊರಾಂಟ್‌ನಲ್ಲಿ ಕೊಡಲಾಯಿತು. ಆ ರೆಸ್ಟೊರಾಂಟ್‌ಗೆ ಆ ಬಳಿಕ, ನಾವೀ ಸ್ವೆಟ್ (ನೂತನ ಲೋಕ) ಸೀಫೂಡ್ ರೆಸ್ಟೊರಾಂಟ್ ಎಂಬ ತಕ್ಕದಾದ ಹೆಸರು ಕೊಡಲ್ಪಟ್ಟಿತು.ಸಕಾಲದಲ್ಲಿ, ಸುವಾರ್ತೆಯು ಇಡೀ ದೇಶಕ್ಕೆ ಹಬ್ಬಿಸಲ್ಪಟ್ಟಿತು. “ಫೋಟೋ ಡ್ರಾಮ ಆಫ್ ಕ್ರಿಏಷನ್” (ಎಂಬ ಎಂಟು ತಾಸುಗಳ ಚಲನಚಿತ್ರ, ಸ್ಲೈಡುಗಳು ಮತ್ತು ಧ್ವನಿಮುದ್ರಣದ ಕಾರ್ಯಕ್ರಮವು) ಈ ಅಭಿವೃದ್ಧಿಗೆ ಕಾರಣವಾಯಿತು. ಬಳಿಕ, 1930ಗಳಲ್ಲಿ, ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳಿಗೆ ಘೋರ ಹಿಂಸೆ ಬಂದಾಗ, ತಮ್ಮ ಸ್ವದೇಶವನ್ನು ಬಿಟ್ಟು ಓಡಿದ ಜರ್ಮನ್ ಪಯನೀಯರರಿಂದ ಯುಗೊಸ್ಲಾವಿಯ ರಾಜ್ಯದ ಸಾಕ್ಷಿವರ್ಗವು ಇನ್ನಷ್ಟು ಬಲಗೊಂಡಿತು. ತಮ್ಮ ಸ್ವಂತ ಸುಖ ಅಥವಾ ಸೌಕರ್ಯಗಳನ್ನು ತ್ಯಜಿಸಿ, ಇವರು ಈ ನಾಡಿನ ಅತಿ ದೂರದ ಪರ್ವತ ಪ್ರದೇಶಗಳ ವರೆಗೂ ಸಾರಲು ಹೋಗುವ ಪ್ರಯತ್ನವನ್ನು ಮಾಡಿದರು. ಆರಂಭದಲ್ಲಿ ಅವರ ಸಂದೇಶಕ್ಕೆ ಪ್ರತಿವರ್ತನೆ ಸ್ವಲ್ಪವೆಂದು ಕಂಡುಬಂತು. ಆರಂಭದ 1940ಗಳಲ್ಲಿ, ಕೇವಲ 150 ಮಂದಿ ಪ್ರಚಾರಕರು ಕ್ಷೇತ್ರ ಸೇವೆಯ ವರದಿಯನ್ನು ಮಾಡಿದರು.
ಭಯಂಕರ ಹಿಂಸೆಯು 1941ರಲ್ಲಿ ಆರಂಭಗೊಂಡು 1952ರ ತನಕ ಮುಂದುವರಿಯಿತು. ಆದರೆ ಕೊನೆಗೆ, ಜನರಲ್ ಟೀಟೋವಿನ ಕಮ್ಯೂನಿಸ್ಟ್ ಸರಕಾರದ ಕೆಳಗೆ ಯೆಹೋವನ ಸಾಕ್ಷಿಗಳು ಸೆಪ್ಟೆಂಬರ್ 9, 1953ರಲ್ಲಿ ಶಾಸನಬದ್ಧವಾಗಿ ರಿಜಿಸ್ಟರ್ ಆದದ್ದನ್ನು ನೋಡುವುದು ಎಷ್ಟು ಹರ್ಷದಾಯಕವಾಗಿತ್ತು! ಆ ವರುಷ, 914 ಮಂದಿ ಸುವಾರ್ತಾ ಪ್ರಚಾರಕರಿದ್ದರು, ಮತ್ತು ಅವರ ಸಂಖ್ಯೆ ಏಕಪ್ರಕಾರವಾಗಿ ಹೆಚ್ಚಾಗುತ್ತಾ ಹೋಯಿತು. ಇಸವಿ 1991ರೊಳಗೆ, ಪ್ರಚಾರಕರ ಸಂಖ್ಯೆಯು 7,420ಕ್ಕೆ ಏರಿ, ಆ ವರ್ಷ 16,072 ಮಂದಿ ಜ್ಞಾಪಕಾಚರಣೆಗೆ ಹಾಜರಾಗಿದ್ದರು.
ಇಸವಿ 1991ರಲ್ಲಿ ಆಗಸ್ಟ್ 16ರಿಂದ 18ರ ವರೆಗೆ, ಈ ದೇಶದಲ್ಲಿ ಯೆಹೋವನ ಸಾಕ್ಷಿಗಳ ಪ್ರಥಮ ಅಂತಾರಾಷ್ಟ್ರೀಯ ಅಧಿವೇಶನವು ಕ್ರೊಏಷಿಯದ ಸಾಗ್ರೆಬ್‌ನಲ್ಲಿ ನಡೆಯಿತು. ದೇಶದ ಒಳಗಿನಿಂದಲೂ ಹೊರಗಿನಿಂದಲೂ 14,684 ಮಂದಿ ಹಾಜರಾದರು. ಈ ಅವಿಸ್ಮರಣೀಯ ಅಧಿವೇಶನವು ಯೆಹೋವನ ಜನರನ್ನು ಮುಂದೆ ಬರಲಿದ್ದ ಪರೀಕ್ಷೆಗಳಿಗಾಗಿ ಸಿದ್ಧಪಡಿಸಿತು. ಕ್ರೊಏಷಿಯ ಮತ್ತು ಸರ್ಬಿಯ ದೇಶಗಳ ಮಧ್ಯೆ ಇದ್ದ ತನಿಖೆಕಟ್ಟೆಯನ್ನು ಹಾದುಹೋದ ಕೊನೆಯ ವಾಹನಗಳಲ್ಲಿ, ಸರ್ಬಿಯದಲ್ಲಿ ನಡೆದ ಅಧಿವೇಶನಕ್ಕೆ ಹಾಜರಾದ ಪ್ರತಿನಿಧಿಗಳನ್ನು ಮನೆಗೆ ಕೊಂಡೊಯ್ದಂಥ ಬಸ್ಸುಗಳೂ ಇದ್ದವು. ಕೊನೆಯ ಬಸ್ಸು ದಾಟಿದೊಡನೆ, ದೇಶದ ಗಡಿಯು ಮುಚ್ಚಲ್ಪಟ್ಟು ಯುದ್ಧವು ಆರಂಭಗೊಂಡಿತು.
ಯೆಹೋವನ ಜನರಿಗೆ ಹರ್ಷಿಸಲು ಕಾರಣಗಳಿವೆ
ಯುದ್ಧದ ವರುಷಗಳು ಬಾಲ್ಕನ್ ಪ್ರದೇಶದಲ್ಲಿದ್ದ ಯೆಹೋವನ ಸಾಕ್ಷಿಗಳಿಗೆ ಕಠಿನ ಪರೀಕ್ಷೆಯ ಸಮಯವಾಗಿ ಪರಿಣಮಿಸಿದವು. ಆದರೂ, ಅವರಿಗೆ ಹರ್ಷಿಸಲು ಸಕಾರಣವಿದೆ. ಏಕೆಂದರೆ ಯೆಹೋವನು ತನ್ನ ಜನರಿಗೆ ಅತ್ಯುತ್ತಮ ಅಭಿವೃದ್ಧಿಯನ್ನು ಕೊಟ್ಟು ಆಶೀರ್ವದಿಸಿದ್ದಾನೆ. ಹಿಂದಿನ ಯುಗೊಸ್ಲಾವಿಯ ಪ್ರದೇಶದಲ್ಲಿ, 1991ರಿಂದ ರಾಜ್ಯ ಪ್ರಚಾರಕರ ಸಂಖ್ಯೆ 80ಕ್ಕೂ ಹೆಚ್ಚು ಪ್ರತಿಶತ ವೃದ್ಧಿಯಾಗಿದೆ. 2001ರ ಸೇವಾ ವರುಷದಲ್ಲಿ ಸಂಖ್ಯೆಯು 13,472ರಷ್ಟು ಉನ್ನತಿಯನ್ನು ಮುಟ್ಟಿತು.
ಸಾಗ್ರೆಬ್ ಮತ್ತು ಬೆಲ್‌ಗ್ರೇಡ್ (ಸರ್ಬಿಯ)ನಲ್ಲಿದ್ದ ಆಫೀಸುಗಳು ಹಿಂದಿನ ಯುಗೊಸ್ಲಾವಿಯದ ಎಲ್ಲ ಪ್ರದೇಶಗಳಲ್ಲಿದ್ದ ಯೆಹೋವನ ಸಾಕ್ಷಿಗಳ ಕೆಲಸವನ್ನು ನೋಡಿಕೊಳ್ಳುತ್ತಿದ್ದವು. ಆದರೆ ವೃದ್ಧಿ ಮತ್ತು ರಾಜಕೀಯ ಬದಲಾವಣೆಗಳ ಕಾರಣ, ಲಿವೂಬ್ಲಿಯಾನ (ಸ್ಲೊವೇನಿಯ) ಮತ್ತು ಸ್ಕಾಪ್ಯೆ (ಮ್ಯಾಸಡೋನ್ಯ)ಗಳಲ್ಲಿ ಹೊಸ ಆಫೀಸುಗಳನ್ನು ಸ್ಥಾಪಿಸಬೇಕಾಯಿತಲ್ಲದೆ, ಬೆಲ್‌ಗ್ರೇಡ್ ಮತ್ತು ಸಾಗ್ರೆಬ್‌ನಲ್ಲಿಯೂ ಹೊಸ ಆಫೀಸುಗಳನ್ನು ಪಡೆದುಕೊಳ್ಳಬೇಕಾಯಿತು. ಈ ಆಫೀಸುಗಳಲ್ಲಿ ಸರಿಸುಮಾರು 140 ಮಂದಿ ಸದಸ್ಯರು ಸೇವೆಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಯುವ ಜನರು ಮತ್ತು ಯೆಹೋವನಿಗಾಗಿ ಹುರುಪು ಹಾಗೂ ಪ್ರೀತಿಯಿಂದ ತುಂಬಿದವರಾಗಿದ್ದಾರೆ. ಇವರಲ್ಲಿ ಒಂದು ದೊಡ್ಡ ಸಂಖ್ಯೆಯು ಕ್ರೊಏಷ್ಯನ್, ಮ್ಯಾಸಡೋನ್ಯನ್, ಸರ್ಬಿಯನ್ ಮತ್ತು ಸ್ಲೊವೇನಿಯನ್ ಭಾಷೆಗಳಿಗೆ ಬೈಬಲ್ ಅಧ್ಯಯನ ಸಹಾಯಕಗಳನ್ನು ತರ್ಜುಮೆಮಾಡುವ ಕೆಲಸದಲ್ಲಿ ತೊಡಗಿದೆ. ಈ ಭಾಷೆಗಳಲ್ಲಿ ಯೆಹೋವನ ಸಾಕ್ಷಿಗಳ ಹೆಚ್ಚಿನ ಪತ್ರಿಕೆಗಳು ಮತ್ತು ಸಾಹಿತ್ಯವು ಈಗ ಮೂಲ ಇಂಗ್ಲಿಷ್ ಸಂಚಿಕೆಯೊಂದಿಗೆ ಏಕಕಾಲಿಕವಾಗಿ ಪ್ರಕಟಿಸಲ್ಪಡುವುದು ಎಷ್ಟು ಆಶೀರ್ವಾದದಾಯಕ ಸಂಗತಿ! ಈ ಪ್ರಕಾಶನಗಳು ಅನೇಕ ಜನರು ಸಾಂತ್ವನ ಮತ್ತು ನಿರೀಕ್ಷೆಯನ್ನು ಪಡೆಯುವಂತೆ ಸಹಾಯಮಾಡುತ್ತವೆ.
ಹರ್ಷಿಸಲಿಕ್ಕಾಗಿರುವ ಇನ್ನೊಂದು ಕಾರಣವು, ಬೇರೆ ದೇಶಗಳ ಅಸಂಖ್ಯಾತ ಪೂರ್ಣ ಸಮಯದ ಸೇವಕರು ನಿಸ್ವಾರ್ಥಭಾವದಿಂದ ಕೊಡುತ್ತಿರುವ ಬೆಂಬಲವೇ. ಇತ್ತೀಚಿನ ವರುಷಗಳಲ್ಲಿ ಅನೇಕ ಸೊಗಸಾದ ರಾಜ್ಯ ಸಭಾಗೃಹಗಳು ಕಟ್ಟಲ್ಪಟ್ಟಿರುವುದು ಸಭೆಗಳ ಸಂತೋಷವನ್ನು ಹೆಚ್ಚಿಸಿದೆ. ಆದರೂ, ಅವರಿಗೆ ಇನ್ನೂ ಹೆಚ್ಚಿನ ಸಂತೋಷವು ಕಾದಿತ್ತು. ಅದು ಹೇಗೆ?
ಒಂದು ಅದ್ವಿತೀಯ ಯೋಜನೆ
ಅನೇಕ ಮಂದಿ ಪ್ರಚಾರಕರು, ‘ನಮ್ಮ ಭಾಷೆಯಲ್ಲಿ ನಾವು ಎಂದಾದರೂ ನೂತನ ಲೋಕ ಭಾಷಾಂತರ ಬೈಬಲನ್ನು ನೋಡಿಯೇವೊ?’ ಎಂದು ಅನೇಕಾವರ್ತಿ ಕುತೂಹಲಪಡುತ್ತಿದ್ದರು. ಪ್ರತಿ ವರ್ಷ ಅವರು ಒಂದು ಜಿಲ್ಲಾ ಅಧಿವೇಶನದಲ್ಲಿ ಇದರ ಕುರಿತಾದ ಪ್ರಕಟನೆಯನ್ನು ಕೇಳಲು ನಿರೀಕ್ಷಿಸುತ್ತಿದ್ದರು. ಆದರೆ ಇಷ್ಟು ಮಹತ್ತರವಾದ ಯೋಜನೆಯನ್ನು ಕೈಕೊಳ್ಳುವುದಾದರೂ ಹೇಗೆ? ಅದರಲ್ಲೂ ಈ ಭಾಷೆಗಳ ತರ್ಜುಮೆ ತಂಡಗಳನ್ನು ಕೆಲವೇ ವರುಷಗಳ ಹಿಂದೆ ರಚಿಸಲಾಗಿತ್ತು ಮತ್ತು ತರ್ಜುಮೆಗಾರರು ಸಂಬಂಧಸೂಚಕವಾಗಿ ಕೆಲವೇ ಮಂದಿ ಇದ್ದರು.
ಈ ವಿಷಯಗಳನ್ನು ಪರೀಕ್ಷಿಸಿದ ಮೇಲೆ, ಆಡಳಿತ ಮಂಡಲಿಯು ಒಂದು ಜಂಟಿ ಯೋಜನೆಯನ್ನು ಮಂಜೂರು ಮಾಡಿತು. ಇದರಲ್ಲಿ ಕ್ರೊಏಷ್ಯನ್, ಮ್ಯಾಸಡೋನ್ಯನ್ ಮತ್ತು ಸರ್ಬಿಯನ್ ತರ್ಜುಮೆ ತಂಡಗಳು ಒತ್ತಾಗಿ ಸಹಕಾರ ಕೊಟ್ಟು, ಒಬ್ಬರು ಇನ್ನೊಬ್ಬರ ಕೆಲಸ ಮತ್ತು ಮಾಹಿತಿಯಿಂದ ಪ್ರಯೋಜನ ಪಡೆಯಲಿದ್ದವು. ಕ್ರೊಏಷ್ಯನ್ ತಂಡವು ಇದರಲ್ಲಿ ಮುಂದಾಳತ್ವವನ್ನು ವಹಿಸಬೇಕಾಗಿತ್ತು.
ಹರ್ಷೋಲ್ಲಾಸದ ದಿನ
ಜುಲೈ 23, 1999. ಈ ದಿನವನ್ನು ಬಾಲ್ಕನ್ ಪ್ರದೇಶದ ಯೆಹೋವನ ಸಾಕ್ಷಿಗಳು ಎಂದಿಗೂ ಮರೆಯರು. “ದೇವರ ಪ್ರವಾದನ ವಾಕ್ಯ” ಜಿಲ್ಲಾ ಅಧಿವೇಶನಗಳ ಸರಣಿಯು ಏಕಕಾಲದಲ್ಲಿ ಬೆಲ್‌ಗ್ರೇಡ್, ಸಾರಏವೊ (ಬಾಸ್ನಿಯ-ಹರ್ಟ್ಸಗೋವೀನ), ಸ್ಕಾಪ್ಯೆ ಮತ್ತು ಸಾಗ್ರೆಬ್‌ನಲ್ಲಿ ನಡೆಯಲಿಕ್ಕಿತ್ತು. ಬೆಲ್‌ಗ್ರೇಡ್‌ನಲ್ಲಿ ಅಧಿವೇಶನವನ್ನು ನಡೆಸಬಹುದೊ ಎಂಬ ವಿಷಯದಲ್ಲಿ ಸ್ವಲ್ಪ ಸಮಯ ಸಂದೇಹವಿತ್ತು, ಏಕೆಂದರೆ ನೇಟೋ ಸಂಸ್ಥೆಯ ಬಾಂಬಿಂಗ್ ಸಮಯದಲ್ಲಿ ಸಾರ್ವಜನಿಕ ಕೂಟಗಳಿಗೆ ಅನುಮತಿಯಿರಲಿಲ್ಲ. ಹೀಗೆ ಎಷ್ಟೊ ತಿಂಗಳುಗಳ ಅನಿಶ್ಚಿತತೆಯ ಬಳಿಕ ಒಬ್ಬರೊಂದಿಗೊಬ್ಬರು ಸಹವಾಸ ಮಾಡುವ ಪ್ರತೀಕ್ಷೆಯಿಂದ ಸಹೋದರರು ಎಷ್ಟೊಂದು ಸಂತೋಷಪಟ್ಟರು! ಆದರೂ, ಅಧಿವೇಶನವು ಅವರಿಗಿದ್ದ ಎಲ್ಲ ನಿರೀಕ್ಷಣೆಗಳನ್ನು ಮೀರಿಸಿತು.
ಶುಕ್ರವಾದ ಮಧ್ಯಾಹ್ನ, ಎಲ್ಲಾ ನಾಲ್ಕು ಅಧಿವೇಶನ ನಗರಗಳಲ್ಲಿಯೂ ಒಂದು ವಿಶೇಷ ಪ್ರಕಟನೆಯನ್ನು ಮಾಡಲಾಯಿತು. ತಾವು ಏನು ಕೇಳಿಸಿಕೊಳ್ಳಲಿದ್ದೇವೆಂಬುದನ್ನು ಪ್ರತೀಕ್ಷಿಸುತ್ತಾ, 13,497 ಪ್ರತಿನಿಧಿಗಳು ಮೌನವಾಗಿ ಕಾದುಕುಳಿತರು. ಭಾಷಣಕರ್ತನು ಕೊನೆಗೆ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಬೈಬಲ್ ಭಾಗವನ್ನು ಕ್ರೊಏಷ್ಯನ್ ಮತ್ತು ಸರ್ಬಿಯನ್ ಭಾಷೆಯಲ್ಲಿ ಬಿಡುಗಡೆ ಮಾಡಿ, ಮ್ಯಾಸಡೋನ್ಯನ್ ಭಾಷೆಯ ತರ್ಜುಮೆಯು ಒಳ್ಳೆಯದಾಗಿ ಮುಂದುವರಿಯುತ್ತಿದೆ ಎಂದು ಸಭಿಕರಿಗೆ ಹೇಳಿದಾಗ, ಸಭಿಕರಿಗೆ ತಮ್ಮ ಭಾವನೆಗಳನ್ನು ಹತ್ತಿಕ್ಕಲಾಗಲಿಲ್ಲ. ಅಬ್ಬರದ ಕರತಾಡನವು ಭಾಷಣಕರ್ತನು ತನ್ನ ಪ್ರಕಟನೆಯನ್ನು ಮುಗಿಸಲು ಬಿಡಲಿಲ್ಲ. ಸಾರಏವೊ ಅಧಿವೇಶನದಲ್ಲಿ, ಸಂಪೂರ್ಣವಾಗಿ ಚಕಿತರಾದ ಸಭಿಕರ ನಡುವೆ, ಥಟ್ಟನೆ ಮೌನವು ಆವರಿಸಿತು. ಅನಂತರ ಬಹಳಷ್ಟು ಸಮಯದ ವರೆಗೆ ಕರತಾಡನವಾಯಿತು. ಬೆಲ್‌ಗ್ರೇಡ್‌ನಲ್ಲಿ ಅನೇಕರ ಗಲ್ಲಗಳ ಮೇಲೆ ಆನಂದ ಬಾಷ್ಪಗಳು ಸುರಿದವು. ಭಾಷಣಕರ್ತನು ತನ್ನ ಪ್ರಕಟನೆಯನ್ನು ಮುಗಿಸುವ ಮೊದಲು ಪದೇ ಪದೇ ಚಪ್ಪಾಳೆಗಳು ಅವನನ್ನು ತಡೆದವು. ಎಲ್ಲರೂ ಎಷ್ಟು ಸಂತೋಷಗೊಂಡಿದ್ದರು!
ಯೆಹೋವನ ಸಾಕ್ಷಿಗಳು ಕ್ರೊಏಷ್ಯನ್ ಮತ್ತು ಸರ್ಬಿಯನ್ ಬೈಬಲ್ ತರ್ಜುಮೆಗಾಗಿ ಮುದ್ರಣ ಹಕ್ಕುಗಳನ್ನು ಪಡೆದುಕೊಂಡದ್ದರಿಂದ ಈ ಕೊಡುಗೆಯು ಇನ್ನಷ್ಟು ಅಮೂಲ್ಯವಾದುದಾಗಿತ್ತು. ಹೀಗೆ ಈ ಎರಡು ಭಾಷೆಗಳ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ನೂತನ ಲೋಕ ಭಾಷಾಂತರವನ್ನು ಆಯಾ ಭಾಷೆಯ ಹೀಬ್ರು ಶಾಸ್ತ್ರದ ತರ್ಜುಮೆಯೊಂದಿಗೆ ಒಂದು ಸಂಪುಟವಾಗಿ ಸಂಯೋಜಿಸಲಾಯಿತು. ಇದಲ್ಲದೆ, ಸರ್ಬಿಯನ್ ಬೈಬಲನ್ನು ರೋಮನ್ ಹಾಗೂ ಸಿರಿಲಿಕ್ ಅಚ್ಚುಮೊಳೆಗಳಲ್ಲಿ ಮುದ್ರಿಸಲಾಯಿತು.
ದೊರೆತಿರುವ ಸಕಲ ಆಶೀರ್ವಾದ ಮತ್ತು ಮಾರ್ಗದರ್ಶನೆಗೆ ಕೃತಜ್ಞರಾಗಿರುವ ಬಾಲ್ಕನ್ ದೇಶಗಳಲ್ಲಿರುವ ಯೆಹೋವನ ಜನರು ದಾವೀದನ ಮಾತುಗಳನ್ನು ನಿಜವಾಗಿಯೂ ಒಪ್ಪಿಕೊಳ್ಳುತ್ತಾರೆ: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು [ಯೆಹೋವನು] ಹತ್ತಿರವಿರುವದರಿಂದ ಕೇಡಿಗೆ ಹೆದರೆನು.” ಈಗಲೂ ಎದುರಿಸುತ್ತಿರುವ ಸಕಲ ಕಷ್ಟಗಳ ಮಧ್ಯದಲ್ಲೂ, ಅವರು ‘ಯೆಹೋವನ ಆನಂದವನ್ನು ಅವರ ಆಶ್ರಯವಾಗಿ’ ಮಾಡಿಕೊಳ್ಳಲು ದೃಢನಿಶ್ಚಯದಿಂದಿದ್ದಾರೆ.—ಕೀರ್ತನೆ 23:4; ನೆಹೆಮೀಯ 8:10.
[ಪಾದಟಿಪ್ಪಣಿ]
^ ಪ್ಯಾರ. 3 ಹಿಂದಿನ ಯುಗೊಸ್ಲಾವಿಯದಲ್ಲಿ ಆರು ಪ್ರಜಾಧಿಪತ್ಯಗಳಿದ್ದವು—ಬಾಸ್ನಿಯ-ಹರ್ಟ್ಸಗೋವೀನ, ಕ್ರೊಏಷಿಯ, ಮ್ಯಾಸಡೋನ್ಯ, ಮಾಂಟನೀಗ್ರೊ, ಸರ್ಬಿಯ ಮತ್ತು ಸ್ಲೊವೇನಿಯ.
[ಪುಟ 20ರಲ್ಲಿರುವ ಚಿತ್ರ]
ಸ್ಲೊವೇನಿಯದ ಮಾರಿಬಾರ್‌ನ ಪ್ರಚಾರಕರ ಪ್ರಥಮ ಗುಂಪು ದೂರದ ಟೆರಿಟೊರಿಯಲ್ಲಿ ಸಾರುತ್ತಿರುವುದು