“ಮುಂದೆ ಜ್ಞಾನಿಯಾಗುವಿ”
“ಮುಂದೆ ಜ್ಞಾನಿಯಾಗುವಿ”
“ಮಾನವರಲ್ಲಿ ಅಧಿಕಾಂಶ ಮಂದಿ ತಮ್ಮ ಜೀವಿತದ ಆರಂಭದ ವರ್ಷಗಳನ್ನು, ತಮ್ಮ ಜೀವಿತದ ಕೊನೆಯ ವರ್ಷಗಳನ್ನು ಕ್ಲೇಶಭರಿತವನ್ನಾಗಿ ಮಾಡಲು ಉಪಯೋಗಿಸುತ್ತಾರೆ.” ಇವು 17ನೆಯ ಶತಮಾನದ ಫ್ರೆಂಚ್ ಪ್ರಬಂಧಕಾರರಾಗಿದ್ದ ಶಾನ್ ಡಾ ಲಾ ಬ್ರೂಯರ್‌ರ ಮಾತುಗಳಾಗಿದ್ದವು. ಅಸ್ಥಿರ ಮನಸ್ಸಿನ ಒಬ್ಬ ಯುವ ವ್ಯಕ್ತಿಯು ತನ್ನ ಮುಂದಿರುವ ಆಯ್ಕೆಗಳ ಕುರಿತು ಚಂಚಲಚಿತ್ತನಾಗಿದ್ದು, ಅತೃಪ್ತಿ ಹಾಗೂ ವಿಷಾದಗಳನ್ನು ಅನುಭವಿಸುತ್ತಾ ಇರಬಹುದು. ಇನ್ನೊಂದು ಬದಿಯಲ್ಲಿ, ಒಬ್ಬ ಹಠಮಾರಿ ಯುವ ವ್ಯಕ್ತಿಯು ತಾನು ಹಿಡಿದಿರುವ ಮೂರ್ಖ ಮಾರ್ಗವೇ ಸರಿಯೆಂದು ಪಟ್ಟುಹಿಡಿದು, ಹೀಗೆ ಮುಂದೆ ಜೀವನದಲ್ಲಿ ಆನಂದವನ್ನು ಪಡೆದುಕೊಳ್ಳುವುದರಿಂದ ವಂಚಿತನಾಗುವನು. ಇವುಗಳಲ್ಲಿ ಯಾವುದೇ ರೀತಿಯ ವ್ಯಕ್ತಿಯಾಗಿರುವುದಾದರೂ, ಕರ್ತವ್ಯಲೋಪ ಅಥವಾ ತಪ್ಪುಗೈಯುವಿಕೆಯ ಪಾಪಗಳು ಬಹಳಷ್ಟು ಕ್ಲೇಶಕ್ಕೆ ನಡಿಸಬಲ್ಲವು.
ಈ ರೀತಿಯ ಫಲಿತಾಂಶವನ್ನು ಹೇಗೆ ತಪ್ಪಿಸಸಾಧ್ಯವಿದೆ? ಯೌವನದಲ್ಲಿನ ಅಸ್ಥಿರ ಮನಸ್ಸಿನ ವಿರುದ್ಧ ಎಚ್ಚರಿಸುತ್ತಾ, ದೇವರ ವಾಕ್ಯವು ಯುವ ಜನರಿಗೆ ಹೀಗೆ ಬುದ್ಧಿವಾದ ನೀಡುತ್ತದೆ: “ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ನೀನು ಹೇಳುವ ವರುಷಗಳೂ ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.” (ಪ್ರಸಂಗಿ 12:1) ನೀವು ಒಬ್ಬ ಯುವ ವ್ಯಕ್ತಿಯಾಗಿರುವಲ್ಲಿ, ಎಳೆಯ ಪ್ರಾಯದಲ್ಲಿಯೇ ‘ನಿಮ್ಮ ಸೃಷ್ಟಿಕರ್ತನ’ ಕುರಿತು ಕಲಿಯಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಿರಿ.
ಹಾಗಾದರೆ ಹರೆಯದ ವಿಚಾರಹೀನ ನಡವಳಿಕೆಯಿಂದ ದೂರವಿರಲು ಬೈಬಲ್ ಯುವ ಜನರಿಗೆ ಹೇಗೆ ಸಹಾಯಮಾಡುತ್ತದೆ? ಅದು ಹೇಳುವುದು: “ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.” (ಜ್ಞಾನೋಕ್ತಿ 19:20) ಯೌವನದಲ್ಲಿ ಇಲ್ಲವೆ ಬೇರಾವುದೇ ವಯಸ್ಸಿನಲ್ಲಿ ಅಲಕ್ಷ್ಯ ಇಲ್ಲವೆ ಪ್ರತಿಭಟನಾ ಸ್ವಭಾವದಿಂದಾಗಿ ದೈವಿಕ ವಿವೇಕವನ್ನು ತಿರಸ್ಕರಿಸುವುದು, ಕಹಿಯಾದ ಫಲಗಳನ್ನು ಉತ್ಪಾದಿಸುತ್ತದೆಂದೂ ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ. (ಜ್ಞಾನೋಕ್ತಿ 13:18) ಇದಕ್ಕೆ ವಿರುದ್ಧವಾಗಿ, ದೈವಿಕ ನಿರ್ದೇಶನಗಳಿಗೆ ಕಿವಿಗೊಡುವುದರಿಂದ, ‘ಆಯುಷ್ಯವು ವೃದ್ಧಿಯಾಗಿ ಸುಕ್ಷೇಮವುಂಟಾಗುವುದು,’ ಅಂದರೆ ತೃಪ್ತಿದಾಯಕ ಹಾಗೂ ಸಫಲವಾದ ಜೀವನವು ಫಲಿಸುವುದು.—ಜ್ಞಾನೋಕ್ತಿ 3:2.