ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಇನ್ನೊಂದು ಧಾರ್ಮಿಕ ಪಂಗಡದಿಂದ ಒಂದು ಕಟ್ಟಡವನ್ನು ಖರೀದಿಸಿ, ಅದನ್ನು ರಾಜ್ಯ ಸಭಾಗೃಹವಾಗಿ ಪರಿವರ್ತಿಸುವುದು ಒಂದು ರೀತಿಯ ಮಿಶ್ರನಂಬಿಕೆಯ ಕೆಲಸವಾಗಿರುವುದೊ?
ಯೆಹೋವನ ಸಾಕ್ಷಿಗಳು ಸಾಮಾನ್ಯವಾಗಿ ಬೇರೆ ಧರ್ಮಗಳೊಂದಿಗಿನ ಇಂತಹ ವ್ಯವಹಾರಗಳಿಂದ ದೂರವಿರುತ್ತಾರೆ. ಹಾಗಿದ್ದರೂ, ಈ ವ್ಯವಹಾರವು ಮಿಶ್ರನಂಬಿಕೆಯ ಕೃತ್ಯವಾಗಿರಬೇಕೆಂದಿರುವುದಿಲ್ಲ. ಅದನ್ನು ಒಂದು ಸಲ ಮಾಡಿ ಮುಗಿಸುವ ಒಂದು ವ್ಯಾಪಾರವಾಗಿ ವೀಕ್ಷಿಸಬಹುದಷ್ಟೆ. ಈ ಸಂದರ್ಭದಲ್ಲಿ, ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯು ಇನ್ನೊಂದು ಧರ್ಮದೊಂದಿಗೆ ಜೊತೆಗೂಡಿ ಎರಡೂ ಪಂಗಡಗಳು ಉಪಯೋಗಿಸುವ ಒಂದು ಆರಾಧನಾ ಸ್ಥಳವನ್ನು ಕಟ್ಟುತ್ತಿಲ್ಲ.
ಯೆಹೋವನ ದೃಷ್ಟಿಯಲ್ಲಿ ಯಾವುದು ಮಿಶ್ರನಂಬಿಕೆಯ ಕೃತ್ಯವಾಗಿರುತ್ತದೆ? ಅಪೊಸ್ತಲ ಪೌಲನ ನಿರ್ದೇಶನವನ್ನು ಪರಿಗಣಿಸಿರಿ: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು? ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು? . . . ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆ.” (2 ಕೊರಿಂಥ 6:14-17) ಹಾಗಾದರೆ ಪೌಲನು ಉಪಯೋಗಿಸಿದ “ಜೊತೆ” ಮತ್ತು “ಐಕ್ಯ” ಎಂಬ ಮಾತುಗಳ ಅರ್ಥವೇನು?
ಪೌಲನು ಅಲ್ಲಿ ಉಪಯೋಗಿಸಿದ “ಜೊತೆ” ಎಂಬ ವಿಷಯವು, ವಿಗ್ರಹಾರಾಧಕರೊಂದಿಗೆ ಮತ್ತು ಅವಿಶ್ವಾಸಿಗಳೊಂದಿಗೆ ಮಾಡುವ ಆರಾಧನೆ ಮತ್ತು ಆತ್ಮಿಕ ವ್ಯವಹಾರಗಳನ್ನು ಸ್ಪಷ್ಟವಾಗಿ ಒಳಗೂಡಿಸುತ್ತದೆ. ಅವನು “ದೆವ್ವಗಳ ಪಂಕ್ತಿ”ಯಲ್ಲಿ ‘ಊಟಮಾಡುವುದರ’ ವಿರುದ್ಧ ಕೊರಿಂಥದವರನ್ನು ಎಚ್ಚರಿಸಿದನು. (1 ಕೊರಿಂಥ 10:20, 21) ಹೀಗೆ, ಇತರ ಧಾರ್ಮಿಕ ಸಂಸ್ಥೆಗಳೊಂದಿಗೆ ಆರಾಧನೆಯಲ್ಲಿ ಪಾಲುಗಾರರಾಗುವುದು ಅಥವಾ ಅವರೊಂದಿಗೆ ಆತ್ಮಿಕ ವಿಷಯಗಳಿಗಾಗಿ ಜೊತೆಗೂಡುವುದು ಮಿಶ್ರನಂಬಿಕೆಯ ಕೃತ್ಯವಾಗಿದೆ. (ವಿಮೋಚನಕಾಂಡ 20:5; 23:13; 34:12) ಒಂದು ಧಾರ್ಮಿಕ ಸಂಸ್ಥೆಯು ಉಪಯೋಗಿಸುತ್ತಿದ್ದ ಒಂದು ಕಟ್ಟಡವನ್ನು ಖರೀದಿಸುವ ಮುಖ್ಯ ಉದ್ದೇಶವು, ರಾಜ್ಯ ಸಭಾಗೃಹಕ್ಕೆ ಬೇಕಾಗಿರುವ ಒಂದು ಕಟ್ಟಡವನ್ನು ಪಡೆದುಕೊಳ್ಳುವುದಾಗಿದೆ ಅಷ್ಟೆ. ಅದನ್ನು ಒಂದು ರಾಜ್ಯ ಸಭಾಗೃಹವಾಗಿ ಉಪಯೋಗಿಸುವ ಮೊದಲು, ಸುಳ್ಳು ಆರಾಧನೆಯ ಯಾವುದೇ ಅವಶೇಷಗಳನ್ನು ಅಲ್ಲಿಂದ ತೆಗೆದುಹಾಕಲಾಗುತ್ತದೆ. ಹೀಗೆ ಮಾರ್ಪಡಿಸಲ್ಪಟ್ಟ ಕಟ್ಟಡವನ್ನು, ಯೆಹೋವನನ್ನು ಆರಾಧಿಸುವ ಏಕಮಾತ್ರ ಉದ್ದೇಶಕ್ಕಾಗಿ ಆತನಿಗೆ ಪ್ರತಿಷ್ಠಾಪಿಸಲಾಗುತ್ತದೆ. ಹೀಗೆ ಅಲ್ಲಿ ಸತ್ಯ ಮತ್ತು ಸುಳ್ಳು ಧರ್ಮಗಳ ಮಧ್ಯೆ ಯಾವುದೇ ಜೊತೆ ಅಥವಾ ಐಕ್ಯವಿರುವುದಿಲ್ಲ.
ಇಂತಹ ಖರೀದಿಯ ಕುರಿತಾದ ವಿವರಗಳನ್ನು ಚರ್ಚಿಸುವಾಗ, ಅದನ್ನು ಮಾರುವ ಪಕ್ಷದೊಂದಿಗಿನ ಸಂಪರ್ಕವನ್ನು ಆದಷ್ಟು ಕಡಮೆಯಾಗಿರಿಸಿ, ಅದನ್ನು ಕಟ್ಟುನಿಟ್ಟಾಗಿ ವ್ಯಾಪಾರದ ವಿಷಯಕ್ಕೆ ಮಾತ್ರ ಸೀಮಿತವಾಗಿರಿಸಬೇಕು. ಕ್ರೈಸ್ತ ಸಭೆಯ ಸದಸ್ಯರು, “ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ” ಎಂಬ ಪೌಲನ ಎಚ್ಚರಿಕೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಬೇರೆ ಧರ್ಮಗಳನ್ನು ಅನುಸರಿಸುವವರಿಗಿಂತ ನಾವು ಶ್ರೇಷ್ಠರೆಂಬ ಭಾವನೆ ನಮಗಿಲ್ಲವಾದರೂ, ನಾವು ಅವರೊಂದಿಗೆ ಸಾಮಾಜಿಕವಾಗಿ ಸೇರಿಕೊಳ್ಳುವುದರಿಂದ ಅಥವಾ ಅವರ ಆರಾಧನೆಯಲ್ಲಿ ಜೊತೆಗೂಡುವಂತೆ ಪ್ರಭಾವಿಸಲ್ಪಡುವುದರಿಂದ ದೂರವಿರುತ್ತೇವೆ. *
ಹಾಗಾದರೆ, ಒಂದು ಸಭೆಯು ಒಂದು ಧಾರ್ಮಿಕ ಸಂಸ್ಥೆಗೆ ಸೇರಿರುವ ಕಟ್ಟಡವೊಂದನ್ನು ಬಾಡಿಗೆಗೆ ತೆಗೆದುಕೊಳ್ಳುವ ವಿಷಯದಲ್ಲೇನು? ಹೀಗೆ ಬಾಡಿಗೆಗೆ ತೆಗೆದುಕೊಳ್ಳುವುದರಲ್ಲಿ ಸಾಮಾನ್ಯವಾಗಿ ಆ ಸಂಸ್ಥೆಯ ಸದಸ್ಯರೊಂದಿಗೆ ಕ್ರಮಬದ್ಧವಾದ ಸಂಪರ್ಕವನ್ನಿಟ್ಟುಕೊಳ್ಳುವುದು ಅಡಕವಾಗಿರುತ್ತದೆ. ಇದರಿಂದ ನಾವು ದೂರವಿರಬೇಕು. ಅಂತಹ ಕಟ್ಟಡವನ್ನು ಕೇವಲ ಒಂದೇ ಸಮಾರಂಭಕ್ಕಾಗಿ ಬಾಡಿಗೆಗೆ ತೆಗೆದುಕೊಳ್ಳುವಾಗಲೂ ಹಿರಿಯರ ಮಂಡಲಿಯು ಕೆಳಗಣ ವಿಷಯಗಳನ್ನು ಪರಿಗಣಿಸಬೇಕು: ಆ ಕಟ್ಟಡದ ಒಳಗಾಗಲಿ ಹೊರಗಾಗಲಿ ಯಾವುದೇ ವಿಗ್ರಹಗಳು ಮತ್ತು ಧಾರ್ಮಿಕ ಸಂಕೇತಗಳು ಇರುವವೊ? ಆ ಸೌಕರ್ಯವನ್ನು ನಾವು ಉಪಯೋಗಿಸುವುದರ ಬಗ್ಗೆ ಸಮಾಜದಲ್ಲಿನ ಜನರ ಅಭಿಪ್ರಾಯವೇನಾಗಿರುವುದು? ನಾವು ಈ ಕಟ್ಟಡವನ್ನು ಉಪಯೋಗಿಸುವುದು ಸಭೆಯಲ್ಲಿ ಯಾರಾದರೂ ಎಡವಲು ಕಾರಣವಾಗುವುದೊ? (ಮತ್ತಾಯ 18:6; 1 ಕೊರಿಂಥ 8:7-13) ಹಿರಿಯರು ಈ ಅಂಶಗಳನ್ನು ತೂಗಿ ನೋಡಿ, ಅದಕ್ಕನುಸಾರ ನಿರ್ಣಯಿಸುವರು. ಅಂತಹ ಕಟ್ಟಡವನ್ನು ಖರೀದಿಸಿ ಅದನ್ನು ರಾಜ್ಯ ಸಭಾಗೃಹವಾಗಿ ಪರಿವರ್ತಿಸಬೇಕೊ ಎಂಬ ವಿಷಯದಲ್ಲಿ, ಅವರು ತಮ್ಮ ಸ್ವಂತ ಮನಸ್ಸಾಕ್ಷಿಯನ್ನು ಮತ್ತು ಸಭೆಯಲ್ಲಿರುವವರ ಮನಸ್ಸಾಕ್ಷಿಯನ್ನು ಪರಿಗಣಿಸಬೇಕು.
[ಪಾದಟಿಪ್ಪಣಿ]
^ ಪ್ಯಾರ. 6 ಯೆಹೋವನ ಅಸಮ್ಮತಿಯಿರುವ ಸಂಸ್ಥೆಗಳೊಂದಿಗೆ ನಾವು ಮಾಡುವ ವ್ಯಾಪಾರೀ ವ್ಯವಹಾರಗಳ ಸಮಂಜಸತೆಯ ಕುರಿತಾದ ಮಾಹಿತಿಗಾಗಿ, ಏಪ್ರಿಲ್ 15, 1999ರ ಕಾವಲಿನಬುರುಜುವಿನ 28 ಮತ್ತು 29ನೆಯ ಪುಟಗಳನ್ನು ನೋಡಿ.
[ಪುಟ 27ರಲ್ಲಿರುವ ಚಿತ್ರ]
ಯೆಹೂದ್ಯರ ಆರಾಧನ ಮಂದಿರವಾಗಿದ್ದ ಈ ಕಟ್ಟಡವನ್ನು ಖರೀದಿಸಿ, ರಾಜ್ಯ ಸಭಾಗೃಹವಾಗಿ ನವೀಕರಿಸಲಾಯಿತು