ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿದೇಶವೊಂದರಲ್ಲಿ ಮಕ್ಕಳನ್ನು ಬೆಳೆಸುವುದು—ಅದರ ಪಂಥಾಹ್ವಾನಗಳು ಮತ್ತು ಬಹುಮಾನಗಳು

ವಿದೇಶವೊಂದರಲ್ಲಿ ಮಕ್ಕಳನ್ನು ಬೆಳೆಸುವುದು—ಅದರ ಪಂಥಾಹ್ವಾನಗಳು ಮತ್ತು ಬಹುಮಾನಗಳು

ವಿದೇಶವೊಂದರಲ್ಲಿ ಮಕ್ಕಳನ್ನು ಬೆಳೆಸುವುದು—ಅದರ ಪಂಥಾಹ್ವಾನಗಳು ಮತ್ತು ಬಹುಮಾನಗಳು

ಕೋಟ್ಯಂತರ ಜನರು ಹೊಸ ಜೀವನವನ್ನು ಆರಂಭಿಸುವ ನಿರೀಕ್ಷೆಯಿಂದ ಒಂದು ಹೊಸ ದೇಶಕ್ಕೆ ವಲಸೆಹೋಗುತ್ತಾರೆ. ಯೂರೋಪಿನಲ್ಲಿ ಈಗ 2 ಕೋಟಿಗಿಂತಲೂ ಹೆಚ್ಚು ವಲಸಿಗರಿದ್ದಾರೆ. ಅಮೆರಿಕವು, ವಿದೇಶದಲ್ಲಿ ಹುಟ್ಟಿರುವ 2 ಕೋಟಿ 60 ಲಕ್ಷ ಜನರಿಗೆ ವಾಸಸ್ಥಳವಾಗಿ ಪರಿಣಮಿಸಿದೆ. ಮತ್ತು ಆಸ್ಟ್ರೇಲಿಯದ ಒಟ್ಟು ಜನಸಂಖ್ಯೆಯಲ್ಲಿ 21 ಪ್ರತಿಶತ ಜನರು ವಿದೇಶದಲ್ಲಿ ಹುಟ್ಟಿದವರಾಗಿದ್ದಾರೆ. ಅನೇಕವೇಳೆ, ಈ ವಲಸಿಗ ಕುಟುಂಬಗಳು ಹೊಸ ಭಾಷೆಯನ್ನು ಕಲಿಯಲು ಹೆಣಗಾಡಬೇಕಾಗುತ್ತದೆ ಮತ್ತು ಒಂದು ಹೊಸ ಸಂಸ್ಕೃತಿಗೆ ಹೊಂದಿಕೊಳ್ಳಬೇಕಾಗುತ್ತದೆ.

ಹೆಚ್ಚಾಗಿ ಮಕ್ಕಳು ತಮ್ಮ ಹೊಸ ದೇಶದ ಭಾಷೆಯನ್ನು ಬೇಗನೆ ಕಲಿತು ಆ ಹೊಸ ಭಾಷೆಯಲ್ಲಿಯೇ ಯೋಚಿಸಲೂ ತೊಡಗುತ್ತಾರೆ. ಆದರೆ ಅವರ ತಂದೆತಾಯಿಗಳಿಗೆ ಹೆಚ್ಚು ಸಮಯ ತಗಲಬಹುದು. ಹೆತ್ತವರಿಗೆ ವಿದೇಶವಾಗಿರುವಂಥ ಒಂದು ದೇಶದಲ್ಲಿ ಮಕ್ಕಳು ಬೆಳೆಯುವಾಗ, ಭಾಷೆಯ ಕಾರಣ ಮಕ್ಕಳ ಹಾಗೂ ಹೆತ್ತವರ ಮಧ್ಯೆ ಮಾತುಸಂಪರ್ಕದ ಸಮಸ್ಯೆಗಳು ತಲೆದೋರಿ, ಇವುಗಳನ್ನು ಬಗೆಹರಿಸುವುದು ಸುಲಭವಾಗಲಿಕ್ಕಿಲ್ಲ.

ಈ ಹೊಸ ಭಾಷೆಯು ಮಕ್ಕಳು ಯೋಚಿಸುವ ವಿಧವನ್ನು ಪ್ರಭಾವಿಸುವುದು ಮಾತ್ರವಲ್ಲ, ಹೊಸ ದೇಶದ ಸಂಸ್ಕೃತಿಯು ಅವರ ಅನಿಸಿಕೆಯನ್ನೂ ಪ್ರಭಾವಿಸಬಹುದು. ಮಕ್ಕಳು ತೋರಿಸುವ ಪ್ರತಿಕ್ರಿಯೆಯನ್ನು ಹೆತ್ತವರಿಗೆ ಅರ್ಥಮಾಡಿಕೊಳ್ಳುವುದು ಹೆಚ್ಚು ಕಷ್ಟಕರವಾದೀತು. ಈ ಕಾರಣದಿಂದ, “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಮಕ್ಕಳನ್ನು ಬೆಳೆಸಲು ಪ್ರಯತ್ನಿಸುತ್ತಿರುವ ವಲಸಿಗ ಹೆತ್ತವರು ಅಸಾಧಾರಣವಾದ ಪಂಥಾಹ್ವಾನಗಳನ್ನು ಎದುರಿಸುತ್ತಾರೆ.​—ಎಫೆಸ 6:​4, NW.

ಹೃದಮನಗಳೆರಡನ್ನೂ ತಲಪುವ ಪಂಥಾಹ್ವಾನ

ತಮ್ಮ ಮಕ್ಕಳಿಗೆ ಬೈಬಲ್‌ ಸತ್ಯದ “ಶುದ್ಧ ಭಾಷೆ”ಯನ್ನು ಕಲಿಸುವ ಅಪೇಕ್ಷೆಯೂ ಜವಾಬ್ದಾರಿಯೂ ಕ್ರೈಸ್ತ ಹೆತ್ತವರಿಗಿದೆ. (ಚೆಫನ್ಯ 3:​9, NW) ಆದರೆ, ಮಕ್ಕಳಿಗೆ ಹೆತ್ತವರ ಭಾಷೆಯ ಕೇವಲ ಸೀಮಿತ ಜ್ಞಾನವು ಮಾತ್ರ ಇರುವಲ್ಲಿ ಮತ್ತು ಹೆತ್ತವರಿಗೆ ಮಕ್ಕಳು ಈಗ ಒಗ್ಗಿಹೋಗಿರುವ ಭಾಷೆಯಲ್ಲಿ ಕಾರ್ಯಸಾಧಕವಾಗಿ ತಮ್ಮನ್ನು ವ್ಯಕ್ತಪಡಿಸಿಕೊಳ್ಳಲು ಅಸಾಧ್ಯವಾಗಿರುವಲ್ಲಿ, ಅವರು ಯೆಹೋವನ ನಿಯಮವನ್ನು ತಮ್ಮ ಮಕ್ಕಳ ಹೃದಯದೊಳಗೆ ಹೇಗೆ ನಾಟಿಸಬಲ್ಲರು? (ಧರ್ಮೋಪದೇಶಕಾಂಡ 6:7) ಮಕ್ಕಳಿಗೆ ಹೆತ್ತವರು ಆಡುವ ಶಬ್ದಗಳು ಅರ್ಥವಾದರೂ, ಏನು ಹೇಳಲ್ಪಡುತ್ತದೋ ಅದು ಅವರ ಹೃದಯವನ್ನು ತಲಪದಿರುವಲ್ಲಿ, ಮಕ್ಕಳು ತಮ್ಮ ಸ್ವಂತ ಮನೆಯಲ್ಲೇ ಪರಕೀಯರಾಗಬಹುದು.

ಪೇತ್ರೋ ಮತ್ತು ಸ್ಯಾಂಡ್ರ ದಕ್ಷಿಣ ಅಮೆರಿಕದಿಂದ ಆಸ್ಟ್ರೇಲಿಯಕ್ಕೆ ವಲಸೆಹೋದರು. * ಅವರು ಹದಿಹರೆಯದ ತಮ್ಮ ಇಬ್ಬರು ಗಂಡುಮಕ್ಕಳನ್ನು ಬೆಳೆಸುತ್ತಿರುವಾಗ ಈ ಪಂಥಾಹ್ವಾನವು ಅವರ ಮುಂದಿದೆ. ಪೇತ್ರೋ ಹೇಳುವುದು: “ಆತ್ಮಿಕ ವಿಷಯಗಳ ಕುರಿತು ಮಾತಾಡುವಾಗ, ಅದರಲ್ಲಿ ಹೃದಯ ಮತ್ತು ಭಾವುಕತೆಯು ಸೇರಿದೆ. ಗಾಢವಾದ ಮತ್ತು ಹೆಚ್ಚು ಅರ್ಥಪೂರ್ಣವಾದ ವಿಚಾರಗಳನ್ನು ನೀವು ವ್ಯಕ್ತಪಡಿಸುವ ಆವಶ್ಯಕತೆಯಿರುವುದರಿಂದ, ಹೆಚ್ಚು ದೊಡ್ಡ ಶಬ್ದಭಂಡಾರದ ಅಗತ್ಯವಿರುತ್ತದೆ.” ಸ್ಯಾಂಡ್ರ ಕೂಡಿಸಿ ಹೇಳುವುದು: “ಮಾತೃಭಾಷೆಯ ಪಕ್ಕಾ ತಿಳಿವಳಿಕೆ ನಮ್ಮ ಮಕ್ಕಳಿಗಿಲ್ಲದಿರುವಲ್ಲಿ, ಅವರ ಅಧ್ಯಾತ್ಮಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮವು ಉಂಟಾಗಬಲ್ಲದು. ಅವರು ಏನನ್ನು ಕಲಿಯುತ್ತಿದ್ದಾರೋ ಅದರ ಹಿಂದಿರುವ ಮೂಲತತ್ತ್ವಗಳನ್ನು ಅರ್ಥಮಾಡಿಕೊಳ್ಳದಿರುವುದರಿಂದ, ಸತ್ಯಕ್ಕಾಗಿ ಅವರಿಗಿರಬೇಕಾದ ಗಾಢವಾದ ಕೃತಜ್ಞತೆಯನ್ನು ಅವರು ಕಳೆದುಕೊಂಡಾರು. ಅವರ ಆತ್ಮಿಕ ವಿವೇಚನಾಶಕ್ತಿ ಬೆಳೆಯದೆ ಕುಂಠಿತವಾದೀತು. ಮತ್ತು ಯೆಹೋವನೊಂದಿಗೆ ಅವರಿಗಿರುವ ಸಂಬಂಧಕ್ಕೆ ಹಾನಿ ಬರಬಹುದು.”

ಜ್ಞಾನಪ್ರಕಾಶಂ ಮತ್ತು ಹೆಲೆನ್‌, ಶ್ರೀ ಲಂಕದಿಂದ ಜರ್ಮನಿಗೆ ವಲಸೆಹೋಗಿ, ಈಗ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಒಪ್ಪಿಕೊಳ್ಳುವುದು: “ನಮ್ಮ ಮಕ್ಕಳು ಜರ್ಮನ್‌ ಭಾಷೆಯನ್ನು ಕಲಿಯುತ್ತಿರುವ ಸಮಯದಲ್ಲೇ ನಮ್ಮ ಮಾತೃಭಾಷೆಯಲ್ಲಿ ಮಾತಾಡುವುದೂ ಅತಿ ಪ್ರಾಮುಖ್ಯವೆಂಬುದು ನಮ್ಮ ಅಭಿಪ್ರಾಯ. ಅವರು ತಮ್ಮ ಭಾವನೆಗಳ ಕುರಿತು ಹೃದಯ ಬಿಚ್ಚಿ ನಮ್ಮೊಂದಿಗೆ ಮಾತಾಡಲು ಶಕ್ತರಾಗುವುದು ಅತಿ ಪ್ರಾಮುಖ್ಯ.”

ಮೀಗಲ್‌ ಮತ್ತು ಕಾರ್ಮೆನ್‌ ಉರುಗ್ವೆ ದೇಶದಿಂದ ಆಸ್ಟ್ರೇಲಿಯಕ್ಕೆ ವಲಸೆಹೋದರು. ಅವರು ಹೇಳುವುದು: “ನಮ್ಮ ಸನ್ನಿವೇಶದಲ್ಲಿರುವ ಹೆತ್ತವರು ಹೆಚ್ಚು ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅವರು ಒಂದೇ ಆ ಹೊಸ ಭಾಷೆಯಲ್ಲಿ ಆತ್ಮಿಕ ವಿಷಯಗಳನ್ನು ಅರ್ಥಮಾಡಿಕೊಂಡು ವಿವರಿಸಲಾಗುವಂತೆ ಆ ಹೊಸ ಭಾಷೆಯನ್ನು ತುಂಬ ಚೆನ್ನಾಗಿ ಕಲಿಯಬೇಕು, ಇಲ್ಲವೆ ಮಕ್ಕಳು ಹೆತ್ತವರ ಭಾಷೆಯಲ್ಲಿ ನಿಪುಣರಾಗಲು ಅವರಿಗೆ ಆ ಭಾಷೆಯನ್ನು ಕಲಿಸಬೇಕು.”

ಕುಟುಂಬದ ನಿರ್ಣಯ

ಯಾವುದೇ ವಲಸೆಗಾರ ಕುಟುಂಬದ ಆತ್ಮಿಕ ಆರೋಗ್ಯಕ್ಕೆ ಮೂಲಭೂತವಾಗಿರುವ ವಿಷಯವು, ‘ಯೆಹೋವನಿಂದ ಶಿಕ್ಷಿತರಾಗಲು’ ಆ ಕುಟುಂಬವು ಯಾವ ಭಾಷೆಯನ್ನು ಉಪಯೋಗಿಸುವುದೆಂದು ನಿರ್ಣಯಿಸುವುದೇ ಆಗಿದೆ. (ಯೆಶಾಯ 54:13) ಆ ಕುಟುಂಬದ ಮಾತೃಭಾಷೆಯನ್ನು ಮಾತಾಡುವ ಒಂದು ಸಭೆಯು ಹತ್ತಿರದಲ್ಲಿರುವಲ್ಲಿ, ಆ ಸಭೆಯನ್ನೇ ಬೆಂಬಲಿಸಲು ಈ ಕುಟುಂಬವು ಆರಿಸಿಕೊಳ್ಳಬಹುದು. ಆದರೆ, ಇನ್ನೊಂದು ಬದಿಯಲ್ಲಿ ತಾವು ವಲಸೆಬಂದಿರುವ ದೇಶದ ಮುಖ್ಯ ಭಾಷೆಯನ್ನು ಮಾತಾಡುವ ಸಭೆಯೊಂದಿಗೂ ಅವರು ಸೇರಿಕೊಳ್ಳಲು ಆರಿಸಿಕೊಳ್ಳಬಹುದು. ಆದರೆ ಈ ನಿರ್ಣಯವನ್ನು ಮಾಡುವುದರಲ್ಲಿ ಯಾವ ಸಂಗತಿಗಳು ಕೂಡಿಕೊಂಡಿವೆ?

ಸೈಪ್ರಸ್‌ನಿಂದ ಇಂಗ್ಲೆಂಡಿಗೆ ವಲಸೆಹೋಗಿ ಐವರು ಮಕ್ಕಳನ್ನು ಬೆಳೆಸಿದ ತೀಮೀತ್ರೀಯಾಸ್‌ ಮತ್ತು ಪಾಟ್ರುಲರು, ಅವರ ನಿರ್ಣಯವನ್ನು ಬಾಧಿಸಿದಂಥ ಸಂಗತಿಗಳನ್ನು ವಿವರಿಸುತ್ತಾರೆ: “ಆರಂಭದಲ್ಲಿ ನಮ್ಮ ಕುಟುಂಬವು ಗ್ರೀಕ್‌ ಭಾಷೆಯ ಸಭೆಗೆ ಹೋಯಿತು. ಇದು ಹೆತ್ತವರಾದ ನಮಗೆ ತುಂಬ ಸಹಾಯಮಾಡಿತಾದರೂ ನಮ್ಮ ಮಕ್ಕಳ ಆತ್ಮಿಕ ಬೆಳವಣಿಗೆಗೆ ಇದು ಒಂದು ತಡೆಯಾಗಿತ್ತು. ಗ್ರೀಕ್‌ ಭಾಷೆಯ ಮೂಲಭೂತ ತಿಳಿವಳಿಕೆ ಅವರಿಗಿತ್ತಾದರೂ ಆತ್ಮಿಕ ವಿಷಯಗಳ ಗಾಢಾರ್ಥವು ಅವರಿಗೆ ತಿಳಿಯುತ್ತಿರಲಿಲ್ಲ. ಇದು ಅವರ ತುಲನಾತ್ಮಕವಾಗಿ ನಿಧಾನವಾದ ಆತ್ಮಿಕ ಬೆಳವಣಿಗೆಯಲ್ಲಿ ತೋರಿಬಂತು. ಆಗ ನಾವು ಕುಟುಂಬವಾಗಿ, ಇಂಗ್ಲಿಷ್‌ ಭಾಷೆಯ ಸಭೆಗೆ ಹೋಗತೊಡಗಿದೆವು. ಆಗ ನಮ್ಮ ಮಕ್ಕಳಿಗೆ ಹೆಚ್ಚುಕಡಿಮೆ ಒಡನೆಯೇ ಒಳ್ಳೆಯ ಫಲಿತಾಂಶಗಳು ಸಿಕ್ಕಿದವು. ಅವರು ಆತ್ಮಿಕವಾಗಿ ಬಲಹೊಂದಿದ್ದಾರೆ. ಹೀಗೆ ಬೇರೊಂದು ಸಭೆಗೆ ಹೋಗುವ ನಿರ್ಣಯವನ್ನು ಮಾಡುವುದು ಸುಲಭವಾಗಿಲ್ಲದಿದ್ದರೂ, ನಮ್ಮ ವಿಷಯದಲ್ಲಿ ಇದು ವಿವೇಕಪೂರ್ಣ ನಿರ್ಣಯವಾಗಿ ಪರಿಣಮಿಸಿತು.”

ಆದರೂ ಆ ಕುಟುಂಬವು ಹೆತ್ತವರ ಮಾತೃಭಾಷೆಯನ್ನಾಡುತ್ತಾ ಮುಂದುವರಿದುದರಿಂದ ಅನೇಕ ಒಳ್ಳೆಯ ಪ್ರತಿಫಲಗಳನ್ನು ಪಡೆಯಿತು. ಅವರ ಮಕ್ಕಳು ಹೇಳುವುದು: “ಒಂದಕ್ಕಿಂತ ಹೆಚ್ಚು ಭಾಷೆಗಳ ಜ್ಞಾನ ಲಾಭದಾಯಕ. ನಮ್ಮ ಪ್ರಥಮ ಭಾಷೆ ಇಂಗ್ಲಿಷ್‌ ಆಗಿದ್ದರೂ, ಗ್ರೀಕ್‌ ಭಾಷೆಯ ಕುರಿತಾದ ನಮ್ಮ ಜ್ಞಾನವು ನಮ್ಮ ಕುಟುಂಬ ಸಂಬಂಧಗಳನ್ನು, ವಿಶೇಷವಾಗಿ ಅಜ್ಜಅಜ್ಜಿಯರೊಂದಿಗಿನ ನಮ್ಮ ಸಂಬಂಧವನ್ನು ಹೆಚ್ಚು ಬಲಪಡಿಸಿದೆ ಮತ್ತು ಇನ್ನಷ್ಟು ಆಪ್ತವಾಗಿಸಿದೆ. ಇದು ವಲಸೆಗಾರರೊಂದಿಗೆ ನಾವು ಹೆಚ್ಚು ಸಹಾನುಭೂತಿಯುಳ್ಳವರಾಗಿರುವಂತೆ ಮಾಡಿ, ನಾವು ಇನ್ನೊಂದು ಭಾಷೆಯನ್ನು ಕಲಿಯಬಲ್ಲೆವೆಂಬ ಭರವಸೆಯನ್ನು ನಮ್ಮಲ್ಲಿ ಹುಟ್ಟಿಸಿದೆ. ಹೀಗಿರುವುದರಿಂದ ನಾವು ದೊಡ್ಡವರಾದಾಗ, ಒಂದು ಅಲ್ಬೇನಿಯನ್‌ ಸಭೆಗೆ ಸಹಾಯಮಾಡಲಿಕ್ಕಾಗಿ ಕುಟುಂಬವಾಗಿ ಅಲ್ಲಿಗೆ ಹೋದೆವು.”

ಕ್ರಿಸ್ಟಫರ್‌ ಮತ್ತು ಮಾರ್ಗರೀಟ ಕೂಡ ಸೈಪ್ರಸ್‌ನಿಂದ ಇಂಗ್ಲೆಂಡಿಗೆ ವಲಸೆಹೋಗಿ ಅಲ್ಲಿ ಮೂರು ಮಂದಿ ಮಕ್ಕಳನ್ನು ಬೆಳೆಸಿದರು. ಅವರು ಗ್ರೀಕ್‌ ಭಾಷೆಯ ಸಭೆಯನ್ನು ಬೆಂಬಲಿಸಲು ನಿಶ್ಚಯಿಸಿದರು. ಈಗ ಒಂದು ಗ್ರೀಕ್‌ ಭಾಷೆಯ ಸಭೆಯಲ್ಲಿ ಒಬ್ಬ ಹಿರಿಯನೋಪಾದಿ ಸೇವೆಮಾಡುತ್ತಿರುವ ಅವರ ಮಗ ನೀಕಾಸ್‌ ಜ್ಞಾಪಿಸಿಕೊಳ್ಳುವುದು: “ಹೊಸದಾಗಿ ರಚಿಸಲ್ಪಟ್ಟಿರುವ ಗ್ರೀಕ್‌ ಭಾಷೆಯ ಸಭೆಗೆ ಸೇರಿಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸಲಾಯಿತು. ನಮ್ಮ ಕುಟುಂಬವು ಅದನ್ನು ಒಂದು ದೇವಪ್ರಭುತ್ವಾತ್ಮಕ ನೇಮಕವಾಗಿ ವೀಕ್ಷಿಸಿತು.”

ಮಾರ್ಗರೀಟ ಹೇಳುವುದು: “ನಮ್ಮ ಇಬ್ಬರು ಹುಡುಗರು ಏಳು ಮತ್ತು ಎಂಟು ವರುಷ ಪ್ರಾಯದವರಾಗಿದ್ದಾಗ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಸೇರಿದರು. ಹೆತ್ತವರಾಗಿದ್ದ ನಮಗೆ ಅವರಿಗಿದ್ದ ಸೀಮಿತ ಗ್ರೀಕ್‌ ಜ್ಞಾನದ ಕುರಿತು ಸ್ವಲ್ಪ ಚಿಂತೆ ಇತ್ತು. ಆದರೂ ಅವರಿಗೆ ಸಿಗುತ್ತಿದ್ದ ಪ್ರತಿಯೊಂದು ನೇಮಕವನ್ನು ನಾವು ಕುಟುಂಬದ ಒಂದು ಯೋಜನೆಯಾಗಿ ಮಾಡಿ, ಅವರು ಭಾಷಣಗಳನ್ನು ತಯಾರಿಸುವಂತೆ ಸಹಾಯಮಾಡುವುದರಲ್ಲಿ ಅನೇಕ ತಾಸುಗಳನ್ನು ಕಳೆದೆವು.”

ಅವರ ಮಗಳಾದ ಜೊಆನ ಹೇಳುವುದು: “ನಮ್ಮ ತಂದೆ ನಮಗೆ ಗ್ರೀಕ್‌ ಭಾಷೆಯನ್ನು ಕಲಿಸಲಿಕ್ಕಾಗಿ ಗ್ರೀಕ್‌ ಅಕ್ಷರಮಾಲೆಯನ್ನು ಮನೆಯಲ್ಲಿದ್ದ ಕಪ್ಪುಹಲಗೆಯಲ್ಲಿ ಬರೆಯುತ್ತಿದ್ದದ್ದು ನನಗೆ ಈಗಲೂ ಜ್ಞಾಪಕವಿದೆ. ನಾವು ಅದನ್ನು ಚೆನ್ನಾಗಿ ಕಲಿಯಬೇಕಾಗಿತ್ತು. ಒಂದು ಭಾಷೆಯನ್ನು ಕಲಿಯಲು ಅನೇಕರು ಎಷ್ಟೋ ವರುಷಗಳನ್ನು ಕಳೆಯುವಾಗ, ನಮ್ಮ ತಂದೆತಾಯಿಯ ಸಹಾಯದಿಂದ ನಾವು ಅತಿ ಬೇಗನೆ ಗ್ರೀಕ್‌ ಭಾಷೆಯನ್ನು ಕಲಿತೆವು.”

ಕೆಲವು ಹೆತ್ತವರಿಗೆ, “ಆತ್ಮೀಯ ಜ್ಞಾನವನ್ನು” ಬೆಳೆಸಿಕೊಳ್ಳಲು ಮತ್ತು ಪ್ರಗತಿಯನ್ನು ಮಾಡಲು ತಮ್ಮ ಮಾತೃಭಾಷೆಯಲ್ಲಿ ತಾವು ಬೋಧಿಸಲ್ಪಡಬೇಕೆಂದು ಅನಿಸುವುದರಿಂದ, ಕೆಲವು ಕುಟುಂಬಗಳು ತಮ್ಮ ಸ್ವಂತ ಭಾಷೆಯನ್ನಾಡುವ ಸಭೆಗಳಿಗೆ ಹೋಗುತ್ತವೆ. (ಕೊಲೊಸ್ಸೆ 1:9, 10; 1 ತಿಮೊಥೆಯ 4:13, 15) ಇಲ್ಲವೆ ತಮ್ಮ ಭಾಷಾ ಕೌಶಲವು, ಇತರ ವಲಸೆಗಾರರು ಸತ್ಯವನ್ನು ಕಲಿಯಲು ಸಹಾಯಮಾಡುವುದರಲ್ಲಿ ಪ್ರಯೋಜನಕರವೆಂಬುದು ಸಹ ಆ ಕುಟುಂಬದ ದೃಷ್ಟಿಕೋನವಾಗಿರಬಹುದು.

ಇನ್ನೊಂದು ಕಡೆಯಲ್ಲಿ, ತಾವು ವಲಸೆಬಂದಿರುವ ದೇಶದ ಮುಖ್ಯ ಭಾಷೆಯನ್ನು ಮಾತಾಡುವ ಸಭೆಯನ್ನು ಸೇರುವುದು ತಮಗೆ ಅತಿ ಉಪಯುಕ್ತವೆಂದು ಒಂದು ಕುಟುಂಬವು ಯೋಚಿಸಬಹುದು. (ಫಿಲಿಪ್ಪಿ 2:4; 1 ತಿಮೊಥೆಯ 3:5) ಈ ಸ್ಥಿತಿಗತಿಯನ್ನು ಕುಟುಂಬದೊಂದಿಗೆ ಚರ್ಚಿಸಿದ ನಂತರ, ಇದನ್ನು ಪ್ರಾರ್ಥನಾಪೂರ್ವಕವಾಗಿ ನಿರ್ಣಯಿಸುವುದು ಕುಟುಂಬದ ತಲೆಯ ಜವಾಬ್ದಾರಿಯಾಗಿದೆ. (ರೋಮಾಪುರ 14:4; 1 ಕೊರಿಂಥ 11:3; ಫಿಲಿಪ್ಪಿ 4:6, 7) ಈ ಕುಟುಂಬಗಳಿಗೆ ಯಾವ ಸಲಹೆಗಳು ಸಹಾಯ ನೀಡುವವು?

ಕೆಲವು ಪ್ರಾಯೋಗಿಕ ಸಲಹೆಗಳು

ಈ ಹಿಂದೆ ಮಾತಾಡಿರುವ ಪೇತ್ರೋ ಮತ್ತು ಸ್ಯಾಂಡ್ರ ಹೇಳುವುದು: “ನಮ್ಮ ಮಾತೃಭಾಷೆಯು ಮರೆತುಹೋಗದಂತೆ ನಾವು ಮನೆಯಲ್ಲಿ ಸ್ಪ್ಯಾನಿಷ್‌ ಮಾತ್ರ ಮಾತಾಡಬೇಕೆಂಬ ನಿಯಮವನ್ನಿಟ್ಟಿದ್ದೇವೆ. ಇದು ಕಷ್ಟಕರ ಏಕೆಂದರೆ ನಮಗೆ ಇಂಗ್ಲಿಷ್‌ ಗೊತ್ತಿದೆಯೆಂಬುದು ನಮ್ಮ ಹುಡುಗರಿಗೆ ತಿಳಿದಿದೆ. ಆದರೆ ಈ ನಿಯಮವಿಲ್ಲದಿರುವಲ್ಲಿ ಅವರು ಸ್ಪ್ಯಾನಿಷ್‌ ಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ನಿಲ್ಲಿಸಾರು.”

ಈ ಹಿಂದೆ ಉಲ್ಲೇಖಿಸಲ್ಪಟ್ಟಿರುವ ಮೀಗಲ್‌ ಮತ್ತು ಕಾರ್ಮೆನ್‌ ಸಹ ಹೀಗೆ ಶಿಫಾರಸ್ಸು ಮಾಡುತ್ತಾರೆ: “ಹೆತ್ತವರು ಮಾತೃಭಾಷೆಯಲ್ಲಿ ಕ್ರಮದ ಕುಟುಂಬ ಅಧ್ಯಯನವನ್ನು ನಡೆಸಿ, ದಿನದ ವಚನವನ್ನು ಪ್ರತಿದಿನ ಚರ್ಚಿಸುವಲ್ಲಿ, ಮಕ್ಕಳು ಭಾಷೆಯ ಮೂಲ ವಿಷಯಗಳಿಗಿಂತ ಹೆಚ್ಚಿನದನ್ನು ಕಲಿಯುವರು​—ಅವರು ಆ ಭಾಷೆಯಲ್ಲಿ ಆತ್ಮಿಕ ವಿಚಾರಗಳನ್ನು ವ್ಯಕ್ತಪಡಿಸಲು ಸಹ ಕಲಿಯುವರು.”

ಮೀಗಲ್‌ ಇದನ್ನು ಸಹ ಸೂಚಿಸುತ್ತಾರೆ: “ಸಾಕ್ಷಿಕಾರ್ಯವನ್ನು ಆನಂದಕರವನ್ನಾಗಿ ಮಾಡಿರಿ. ಒಂದು ದೊಡ್ಡ ನಗರದ ದೊಡ್ಡ ವಿಭಾಗವು ನಮ್ಮ ಟೆರಿಟೊರಿಯಾಗಿದೆ. ಮತ್ತು ಕಾರಿನಲ್ಲಿ ಹೋಗಿ ನಮ್ಮ ಭಾಷೆಯನ್ನು ಮಾತಾಡುವವರನ್ನು ಹುಡುಕಲು ತುಂಬ ಸಮಯ ಹಿಡಿಯುತ್ತದೆ. ನಾವು ಅದಕ್ಕಾಗಿ ಪ್ರಯಾಣಿಸುವ ಸಮಯವನ್ನು ಬೈಬಲ್‌ ಆಟಗಳನ್ನಾಡುವುದರಲ್ಲಿ ಮತ್ತು ಮುಖ್ಯವಾದ ವಿಷಯಗಳ ಕುರಿತು ಮಾತಾಡುವುದರಲ್ಲಿ ಕಳೆಯುತ್ತೇವೆ. ನಾವು ಅನೇಕ ಉತ್ತಮ ಪುನರ್ಭೇಟಿಗಳನ್ನು ಮಾಡಲು ಸಾಧ್ಯವಾಗುವಂತೆ ನಾನು ಇಂತಹ ಸಾಕ್ಷಿ ನೀಡುವ ಪ್ರಯಾಣಗಳನ್ನು ಯೋಜಿಸಲು ಪ್ರಯತ್ನಿಸುತ್ತೇನೆ. ಹೀಗೆ, ದಿನಾಂತ್ಯದಲ್ಲಿ ಮಕ್ಕಳು ಕಡಿಮೆಪಕ್ಷ ಒಂದು ಅರ್ಥಪೂರ್ಣ ಸಂಭಾಷಣೆಯಲ್ಲಾದರೂ ಒಳಗೂಡುವ ಸಂದರ್ಭ ಸಿಗುತ್ತದೆ.”

ಸಾಂಸ್ಕೃತಿಕ ಭಿನ್ನತೆಗಳನ್ನು ನಿಭಾಯಿಸುವುದು

ದೇವರ ವಾಕ್ಯವು ಯುವ ಜನರನ್ನು ಪ್ರೋತ್ಸಾಹಿಸುವುದು: “ಮಗನೇ, ನಿನ್ನ ತಂದೆಯ ಉಪದೇಶವನ್ನು [“ಶಿಸ್ತನ್ನು,” NW] ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” (ಜ್ಞಾನೋಕ್ತಿ 1:8) ಆದರೆ ತಂದೆಯ ಶಿಸ್ತಿನ ಮಟ್ಟ ಮತ್ತು ತಾಯಿಯ “ಬೋಧನೆ”ಯು, ಈಗ ಮಕ್ಕಳ ಸುತ್ತಲೂ ಇರುವ ಸಂಸ್ಕೃತಿಗಿಂತ ಭಿನ್ನವಾದ ಸಂಸ್ಕೃತಿಯಿಂದ ಪ್ರಭಾವಿತವಾಗಿರುವಲ್ಲಿ ತೊಂದರೆಗಳು ಏಳಬಹುದು.

ಪ್ರತಿ ಕುಟುಂಬದ ತಲೆಯು ತನ್ನ ಕುಟುಂಬದ ಮೇಲೆ ಹೇಗೆ ಅಧ್ಯಕ್ಷತೆ ವಹಿಸುತ್ತಾನೆಂಬುದನ್ನು ನಿರ್ಣಯಿಸುವುದು ಅವನಿಗೆ ಬಿಟ್ಟದೆಂಬುದು ನಿಜ. ಮತ್ತು ಅವನು ಬೇರೆ ಕುಟುಂಬಗಳಿಂದ ಅನುಚಿತ ರೀತಿಯಲ್ಲಿ ಪ್ರಭಾವಿಸಲ್ಪಡಬಾರದು. (ಗಲಾತ್ಯ 6:4, 5) ಆದರೂ, ಹೆತ್ತವರು ಮತ್ತು ಮಕ್ಕಳ ಮಧ್ಯೆ ಉತ್ತಮ ಮಾತುಸಂಪರ್ಕವು ಹೊಸ ಪದ್ಧತಿಗಳನ್ನು ಅಂಗೀಕರಿಸುವುದನ್ನು ಸುಲಭಗೊಳಿಸೀತು.

ಆದರೆ ಅಭಿವೃದ್ಧಿಹೊಂದಿರುವ ದೇಶಗಳಲ್ಲಿ ಪ್ರಚಲಿತವಾಗಿರುವ ಪದ್ಧತಿಗಳು ಮತ್ತು ರೂಢಿಗಳಲ್ಲಿ ಹೆಚ್ಚಿನವು, ಕ್ರೈಸ್ತರ ಆತ್ಮಿಕ ಆರೋಗ್ಯಕ್ಕೆ ಹಾನಿಕರವಾಗಿವೆ. ಜನಪ್ರಿಯವಾದ ಸಂಗೀತ ಮತ್ತು ಮನೋರಂಜನೆಯ ಮೂಲಕ ಅನೇಕವೇಳೆ ಲೈಂಗಿಕ ಅನೈತಿಕತೆ, ಲೋಭ, ಮತ್ತು ದಂಗೆಯನ್ನು ಪ್ರವರ್ಧಿಸಲಾಗುತ್ತದೆ. (ರೋಮಾಪುರ 1:​26-32) ತಮಗೆ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆಂಬ ಒಂದೇ ಕಾರಣಕ್ಕಾಗಿ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಸಂಗೀತ ಹಾಗೂ ಮನೋರಂಜನೆಯ ಆಯ್ಕೆಯನ್ನು ನಿಯಂತ್ರಿಸುವುದನ್ನು ನಿಲ್ಲಿಸಬಾರದು. ಅವರು ದೃಢವಾದ ನಿರ್ದೇಶನಗಳನ್ನು ಸ್ಥಾಪಿಸಬೇಕು. ಆದರೆ ಇದು ಒಂದು ಪಂಥಹ್ವಾನವಾಗಿರಬಹುದು.

ಕಾರ್ಮೆನ್‌ ಹೇಳುವುದು: “ನಮ್ಮ ಮಕ್ಕಳು ಕೇಳಿಸಿಕೊಳ್ಳುತ್ತಿರುವ ಸಂಗೀತದ ಪದಗಳು ನಮಗೆ ಹೆಚ್ಚಾಗಿ ಅರ್ಥವಾಗುವುದಿಲ್ಲ. ಅದರ ರಾಗವು ಒಳ್ಳೇದಾಗಿರುವಂತೆ ಧ್ವನಿಸಬಹುದು, ಆದರೆ ಆ ಮಾತುಗಳಿಗೆ ದ್ವಂದರ್ಥವಿರುವಲ್ಲಿ ಇಲ್ಲವೆ ಅನೈತಿಕವಾಗಿರುವ ಅಸಂಸ್ಕಾರಿ ಮಾತುಗಳು ಇರುವಲ್ಲಿ, ನಮಗೆ ಗೊತ್ತಾಗುತ್ತಿರಲಿಲ್ಲ.” ಈ ಸನ್ನಿವೇಶವನ್ನು ಅವರು ಹೇಗೆ ನಿಭಾಯಿಸಿದ್ದಾರೆ? ಮೀಗಲ್‌ ಹೇಳುವುದು: “ಅನೈತಿಕ ಸಂಗೀತದ ಅಪಾಯಗಳ ಕುರಿತಾಗಿ ಕಲಿಸಲು ನಾವು ನಮ್ಮ ಮಕ್ಕಳೊಂದಿಗೆ ಬಹಳಷ್ಟು ಸಮಯವನ್ನು ಕಳೆಯುತ್ತೇವೆ ಮತ್ತು ಯೆಹೋವನಿಂದ ಮೆಚ್ಚಲ್ಪಡುವಂಥ ರೀತಿಯ ಸಂಗೀತವನ್ನು ಆಯ್ಕೆಮಾಡುವಂತೆ ಅವರಿಗೆ ಸಹಾಯಮಾಡಲು ಪ್ರಯತ್ನಿಸುತ್ತೇವೆ.” ಹೌದು, ಸಾಂಸ್ಕೃತಿಕ ಭಿನ್ನತೆಗಳನ್ನು ನಿಭಾಯಿಸಲು ಎಚ್ಚರಿಕೆ ಮತ್ತು ವಿವೇಚನೆಯು ಅಗತ್ಯ.​—ಧರ್ಮೋಪದೇಶಕಾಂಡ 11:​18, 19; ಫಿಲಿಪ್ಪಿ 4:5, NW.

ಬಹುಮಾನಗಳನ್ನು ಕೊಯ್ಯುವುದು

ವಿದೇಶದಲ್ಲಿ ಮಕ್ಕಳನ್ನು ಬೆಳೆಸುವುದು ಹೆಚ್ಚಿನ ಸಮಯ ಮತ್ತು ಪ್ರಯತ್ನವನ್ನು ಅಗತ್ಯಪಡಿಸುತ್ತದೆ. ಇದರ ವಿಷಯದಲ್ಲಿ ಮರುಸವಾಲಿಲ್ಲ. ಆದರೆ ಹೆತ್ತವರು ಮತ್ತು ಮಕ್ಕಳು ತಮ್ಮ ಪ್ರಯತ್ನಗಳಿಗಾಗಿ ಹೆಚ್ಚಿನ ಬಹುಮಾನಗಳನ್ನು ಕೊಯ್ಯುವರು.

ಅಜ್ಜಾಮ್‌ ಮತ್ತು ಅವನ ಹೆಂಡತಿ ಸಾರಾ, ಟರ್ಕಿಯಿಂದ ಜರ್ಮನಿಗೆ ವಲಸೆಹೋದರು. ಅಲ್ಲಿ ಮೂರು ಮಂದಿ ಮಕ್ಕಳನ್ನು ಬೆಳೆಸಿದರು. ಅವರ ಹಿರಿಯ ಮಗನು ಈಗ ಜರ್ಮನಿಯ ಸೆಲ್ಟರ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆಸಲ್ಲಿಸುತ್ತಿದ್ದಾನೆ. ಅಜ್ಜಾಮ್‌ ಹೇಳುವುದು: “ಮಕ್ಕಳಿಗೆ ಇದರಿಂದಾಗುವ ಮಹತ್ವಪೂರ್ಣ ಪ್ರಯೋಜನವೇನೆಂದರೆ, ಅವರು ಎರಡೂ ಸಂಸ್ಕೃತಿಗಳಲ್ಲಿನ ಅತ್ಯಾವಶ್ಯಕ ಗುಣಗಳನ್ನು ಬೆಳೆಸಿಕೊಳ್ಳಬಲ್ಲರು.”

ಆ್ಯಂಟೊನ್ಯೊ ಮತ್ತು ಲುಟೋನಾಡ್ಯೊ, ಅಂಗೋಲದಿಂದ ಜರ್ಮನಿಗೆ ಸ್ಥಳಾಂತರಿಸಿ, ಅಲ್ಲಿ ಒಂಬತ್ತು ಮಂದಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಆ ಕುಟುಂಬವು ಲಿಂಗಾಲಾ, ಫ್ರೆಂಚ್‌ ಮತ್ತು ಜರ್ಮನ್‌ ಭಾಷೆಗಳನ್ನು ಮಾತಾಡುತ್ತದೆ. ಆ್ಯಂಟೊನ್ಯೊ ಹೇಳುವುದು: “ಭಿನ್ನ ಭಿನ್ನ ಭಾಷೆಗಳನ್ನಾಡುವ ಸಾಮರ್ಥ್ಯದಿಂದಾಗಿ ನಮ್ಮ ಕುಟುಂಬವು ಅನೇಕ ದೇಶಗಳಿಂದ ಬಂದಿರುವ ಜನರಿಗೆ ಸಾಕ್ಷಿಕೊಡಲು ಸಹಾಯಮಾಡುತ್ತದೆ. ಇದು ಖಂಡಿತವಾಗಿಯೂ ನಮಗೆ ಬಹಳಷ್ಟು ಸಂತೋಷವನ್ನು ತರುತ್ತದೆ.”

ಇಂಗ್ಲೆಂಡ್‌ಗೆ ಸ್ಥಳಾಂತರಿಸಿದ ಜಪಾನೀ ದಂಪತಿಯ ಇಬ್ಬರು ಮಕ್ಕಳಿಗೆ, ತಮಗೆ ಜಪಾನೀ ಭಾಷೆ ಮತ್ತು ಇಂಗ್ಲಿಷ್‌ ಭಾಷೆ ತಿಳಿದಿರುವುದರಿಂದ ತುಂಬ ಪ್ರಯೋಜನವಿದೆಯೆಂದು ಅನಿಸುತ್ತದೆ. ಆ ಯುವ ಜನರು ಹೇಳುವುದು: “ಎರಡೆರಡು ಭಾಷೆಗಳನ್ನು ತಿಳಿದಿರುವುದು ನಮಗೆ ಉದ್ಯೋಗವನ್ನು ಪಡೆಯಲು ಸಹಾಯಮಾಡಿತು. ಇಂಗ್ಲಿಷ್‌ ಭಾಷೆಯ ದೊಡ್ಡ ಅಧಿವೇಶನಗಳಿಂದ ನಾವು ಪ್ರಯೋಜನಪಡೆದಿದ್ದೇವೆ. ಅದೇ ಸಮಯದಲ್ಲಿ, ತುಂಬ ಸಹಾಯದ ಅಗತ್ಯವಿರುವ, ಜಪಾನೀ ಭಾಷೆಯನ್ನಾಡುವ ಒಂದು ಸಭೆಯಲ್ಲಿ ಸೇವೆಸಲ್ಲಿಸುವ ಸುಯೋಗ ನಮಗಿದೆ.”

ನೀವು ಸಫಲರಾಗಬಲ್ಲಿರಿ

ತಮ್ಮಂಥದ್ದೇ ಸಾಂಸ್ಕ್ರತಿಕ ಮೌಲ್ಯಗಳನ್ನು ಹೊಂದಿರದ ಜನರ ನಡುವೆ ಜೀವಿಸುತ್ತಿದ್ದು ಮಕ್ಕಳನ್ನು ಬೆಳೆಸುವುದು, ಬೈಬಲ್‌ ಕಾಲಗಳಿಂದಲೂ ದೇವರ ಸೇವಕರು ಎದುರಿಸಬೇಕಾಗಿ ಬಂದಿರುವ ಒಂದು ಪಂಥಾಹ್ವಾನವಾಗಿದೆ. ಮೋಶೆಯು ಐಗುಪ್ತದಲ್ಲಿ ಬೆಳೆಸಲ್ಪಟ್ಟರೂ, ಮೋಶೆಯ ಹೆತ್ತವರು ಈ ವಿಷಯದಲ್ಲಿ ಸಫಲರಾದರು. (ವಿಮೋಚನಕಾಂಡ 2:​9, 10) ಬಾಬೆಲಿಗೆ ಗಡೀಪಾರುಮಾಡಲ್ಪಟ್ಟಿದ್ದ ಅನೇಕ ಯೆಹೂದ್ಯರು, ಯೆರೂಸಲೇಮಿಗೆ ಹಿಂದಿರುಗಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸಲು ಸಿದ್ಧರಾಗಿದ್ದ ಮಕ್ಕಳನ್ನು ಬೆಳೆಸಿದರು.​—ಎಜ್ರ 2:​1, 2, 64-70.

ತದ್ರೀತಿಯಲ್ಲಿ ಇಂದು, ಕ್ರೈಸ್ತ ಹೆತ್ತವರು ಸಫಲರಾಗಬಲ್ಲರು. ಒಂದು ದಂಪತಿಯ ಮಕ್ಕಳು ಹೇಳಿದಂಥ ಈ ಮಾತುಗಳನ್ನು ತಮ್ಮ ಮಕ್ಕಳು ಸಹ ಹೇಳುವುದನ್ನು ಕೇಳಿಸಿಕೊಳ್ಳುವ ಬಹುಮಾನ ಅವರಿಗಿರಬಹುದು: “ಅಪ್ಪಅಮ್ಮಂದಿರ ಪ್ರೀತಿಯ ಆರೈಕೆಯಿಂದಾಗಿ ನಾವು ತುಂಬ ಆಪ್ತವಾಗಿರುವ ಒಂದು ಕುಟುಂಬವಾಗಿದ್ದೇವೆ. ಅವರೊಂದಿಗೆ ನಾವು ಯಾವಾಗಲೂ ಉತ್ತಮವಾದ ಮಾತುಸಂಪರ್ಕವನ್ನು ಆನಂದಿಸಿದ್ದೇವೆ. ಯೆಹೋವನನ್ನು ಸೇವಿಸುತ್ತಿರುವ ಒಂದು ಭೂವ್ಯಾಪಕ ಕುಟುಂಬದ ಭಾಗವಾಗಿರಲು ನಾವು ಸಂತೋಷಿಸುತ್ತೇವೆ.”

[ಪಾದಟಿಪ್ಪಣಿ]

^ ಪ್ಯಾರ. 7 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 24ರಲ್ಲಿರುವ ಚಿತ್ರ]

ಮನೆಯಲ್ಲಿ ಕೇವಲ ನಿಮ್ಮ ಮಾತೃಭಾಷೆಯಲ್ಲಿ ಮಾತಾಡುವುದು ನಿಮ್ಮ ಮಕ್ಕಳಿಗೆ ಆ ಭಾಷೆಯ ಮೂಲಭೂತ ತಿಳಿವಳಿಕೆಯನ್ನು ಕೊಡುತ್ತದೆ

[ಪುಟ 24ರಲ್ಲಿರುವ ಚಿತ್ರ]

ಒಂದೇ ಸಾಮಾನ್ಯ ಭಾಷೆಯು, ಅಜ್ಜಅಜ್ಜಿಯಂದಿರು ಮತ್ತು ಮೊಮ್ಮಕ್ಕಳ ನಡುವಿನ ಬಂಧವನ್ನು ಕಾದಿರಿಸುತ್ತದೆ

[ಪುಟ 25ರಲ್ಲಿರುವ ಚಿತ್ರ]

ನಿಮ್ಮ ಮಕ್ಕಳೊಂದಿಗೆ ಬೈಬಲ್‌ ಅಧ್ಯಯನ ಮಾಡುವುದು ಅವರ “ಆತ್ಮೀಯ ಜ್ಞಾನವನ್ನು” ಬೆಳೆಸುತ್ತದೆ