ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೈತಾನ ಕೇವಲ ಕಾಲ್ಪನಿಕ ವ್ಯಕ್ತಿಯೊ ಅಥವಾ ಅಸ್ತಿತ್ವದಲ್ಲಿರುವ ಕುಟಿಲ ಜೀವಿಯೊ?

ಸೈತಾನ ಕೇವಲ ಕಾಲ್ಪನಿಕ ವ್ಯಕ್ತಿಯೊ ಅಥವಾ ಅಸ್ತಿತ್ವದಲ್ಲಿರುವ ಕುಟಿಲ ಜೀವಿಯೊ?

ಸೈತಾನ ಕೇವಲ ಕಾಲ್ಪನಿಕ ವ್ಯಕ್ತಿಯೊ ಅಥವಾ ಅಸ್ತಿತ್ವದಲ್ಲಿರುವ ಕುಟಿಲ ಜೀವಿಯೊ?

ದುಷ್ಟತ್ವದ ಮೂಲವೇನು ಎಂಬ ವಿಷಯವು ಪುರಾತನ ಕಾಲದಿಂದಲೂ ಚಿಂತಕರ ಕುತೂಹಲವನ್ನು ಕೆರಳಿಸಿದೆ. ಜೇಮ್ಸ್‌ ಹೇಸ್ಟಿಂಗ್ಸ್‌ ಬರೆದ ಬೈಬಲಿನ ಕುರಿತಾದ ನಿಘಂಟು (ಇಂಗ್ಲಿಷ್‌) ಹೇಳುವುದು: “ಮಾನವ ಪ್ರಜ್ಞಾಶಕ್ತಿಯ ಆದಿಯಲ್ಲಿ, ಅವನ ನಿಯಂತ್ರಣಕ್ಕೆ ಮೀರಿದ ಮತ್ತು ಅವನ ಮೇಲೆ ಹಾನಿಕರವಾದ ಅಥವಾ ನಾಶಕರವಾದ ಪ್ರಭಾವವನ್ನು ಬೀರಿದ ಶಕ್ತಿಗಳು ಎದುರಾದವು.” ಅದೇ ಪರಾಮರ್ಶೆಯ ಗ್ರಂಥವು ಇನ್ನೂ ಹೇಳುವುದು: “ಆದಿ ಮಾನವಕುಲವು ಸಹಜ ಪ್ರವೃತ್ತಿಯಿಂದ ಕಾರಣಗಳನ್ನು ಹುಡುಕಿ, ನಿಸರ್ಗದ ಶಕ್ತಿಗಳನ್ನೂ ಬೇರೆ ಪ್ರದರ್ಶನಗಳನ್ನೂ ಅವು ವ್ಯಕ್ತಿಸ್ವರೂಪವುಳ್ಳವುಗಳು ಎಂದು ಅರ್ಥವಿವರಣೆಮಾಡಿತು.”

ಇತಿಹಾಸಕಾರರಿಗನುಸಾರ, ದೆವ್ವ ದೇವತೆಗಳಲ್ಲಿ ಮತ್ತು ದುಷ್ಟಾತ್ಮಗಳಲ್ಲಿನ ನಂಬಿಕೆಯು, ಮೆಸಪೊಟೇಮ್ಯದ ಅತಿ ಆದಿಯ ಇತಿಹಾಸದಿಂದಲೂ ಅಸ್ತಿತ್ವದಲ್ಲಿದೆಯೆಂದು ಹೇಳಸಾಧ್ಯವಿದೆ. ಅಧೋಲೋಕವನ್ನು ಅಥವಾ “ಮರಳಿ ಬರಲಾಗದ ದೇಶವನ್ನು” ನೇರ್ಗಲ್‌ ಎಂಬವನು ಆಳುತ್ತಿದ್ದನು ಮತ್ತು ಇವನು “ಸುಡುವವನು” ಎಂದು ಪ್ರಸಿದ್ಧನಾಗಿದ್ದ ಹಿಂಸಾತ್ಮಕ ದೇವತೆಯಾಗಿದ್ದನು ಎಂದು ಬಾಬೆಲಿನವರು ನಂಬುತ್ತಿದ್ದರು. ಅವರು ದೆವ್ವಗಳಿಗೂ ಭಯಪಡುತ್ತಿದ್ದರು. ಅವುಗಳನ್ನು ಮಾಯಾ ಮಂತ್ರಪ್ರಯೋಗಗಳಿಂದ ಅವರು ಸಮಾಧಾನಪಡಿಸುತ್ತಿದ್ದರು. ಈಜಿಪ್ಟಿನ ಪುರಾಣ ಸಾಹಿತ್ಯದಲ್ಲಿ ಕೆಟ್ಟತನದ ದೇವನು ಸೆಟ್‌ ಆಗಿದ್ದನು. “ಅವನನ್ನು ತೆಳ್ಳಗಿನ, ಬಾಗಿದ ಮೂತಿ, ನೆಟ್ಟಗಿನ, ಚಚ್ಚೌಕ ಕಿವಿ ಮತ್ತು ಸೀಳು ಬಿಟ್ಟಿರುವ ಬಾಲವುಳ್ಳವನಾಗಿ ಪ್ರತಿನಿಧಿಸಲಾಗುತ್ತಿತ್ತು.”​—ಲಾರೂಸ್‌ ಎನ್‌ಸೈಕ್ಲಪೀಡೀಯ ಆಫ್‌ ಮಿಥಾಲಜಿ.

ಗ್ರೀಕರಿಗೂ ರೋಮನರಿಗೂ ಉಪಕಾರಬುದ್ಧಿಯ ಮತ್ತು ಕೇಡೆಣಿಸುವ ದೇವತೆಗಳಿದ್ದರೂ, ಅವರಿಗೆ ಪ್ರಧಾನವಾಗಿ ದುಷ್ಟನಾಗಿರುವ ಒಬ್ಬ ದೇವನಿರಲಿಲ್ಲ. ಒಂದಕ್ಕೊಂದು ವಿರೋಧವಾದ ಎರಡು ಮೂಲತತ್ತ್ವಗಳು ಅಸ್ತಿತ್ವದಲ್ಲಿವೆಯೆಂದು ಅವರ ತತ್ತ್ವಜ್ಞಾನಿಗಳು ಬೋಧಿಸಿದರು. ಎಂಪೆಡಕ್ಸೀಸ್‌ ಎಂಬವನ ಅಭಿಪ್ರಾಯದಲ್ಲಿ, ಅವು ಪ್ರೀತಿ ಮತ್ತು ಅಸಾಂಗತ್ಯಗಳೇ ಆಗಿದ್ದವು. ಪ್ಲೇಟೊವಿನ ಅಭಿಪ್ರಾಯಕ್ಕನುಸಾರ, ಲೋಕದಲ್ಲಿ ಒಂದು ಒಳ್ಳೆಯದನ್ನು ಮಾಡುವ ಮತ್ತು ಇನ್ನೊಂದು ಕೆಟ್ಟದ್ದನ್ನು ಮಾಡುವ ಮೂಲತತ್ತ್ವಗಳಿದ್ದವು. ಸಾರ್ಸ್‌ ಮೀನ್ವಾ ತನ್ನ ಲ ಡ್ಯಾಬ್ಲ (ಪಿಶಾಚನು) ಎಂಬ ಪುಸ್ತಕದಲ್ಲಿ ತಿಳಿಸುವಂತೆ, “ಸಾಂಪ್ರದಾಯಿಕ [ಗ್ರೀಕೋ-ರೋಮನ್‌] ವಿಧರ್ಮವು ಒಬ್ಬ ಪಿಶಾಚನು ಅಸ್ತಿತ್ವದಲ್ಲಿದ್ದಾನೆಂಬುದನ್ನು ಒಪ್ಪಿಕೊಳ್ಳಲಿಲ್ಲ.”

ಇರಾನ್‌ನಲ್ಲಿ, ಸೊರೋಸ್ಟ್ರಿಯನ್‌ ಮತವು, ಪರಮ ದೇವನಾದ ಆಹುರ ಮಸ್ಡ ಅಥವಾ ಆರ್ಮಸ್ಡ್‌, ಆಂಗ್ರ ಮೈನ್ಯೂ ಅಥವಾ ಆರಿಮನ್‌ ಎಂಬವನನ್ನು ಸೃಷ್ಟಿಸಿದನು ಎಂದು ಬೋಧಿಸಿತು. ಇವನು ಕೆಟ್ಟದ್ದನ್ನು ಮಾಡಲು ಇಚ್ಛೈಸಿ ನಾಶಕಾರಕ ಆತ್ಮನಾದನು ಅಥವಾ ವಿನಾಶಕಾರಿಯಾದನು ಎಂದು ಅದು ಬೋಧಿಸಿತು.

ಯೆಹೂದಿ ಮತದಲ್ಲಿ, ಪಾಪವನ್ನು ಬರಮಾಡಿದ ದೇವರ ವಿರೋಧಿಯೆಂದು ಸೈತಾನನನ್ನು ಸರಳ ರೀತಿಯಲ್ಲಿ ಚಿತ್ರಿಸಲಾಗಿತ್ತು. ಆದರೆ ಅನೇಕ ಶತಮಾನಗಳ ಬಳಿಕ, ಆ ಚಿತ್ರಣವನ್ನು ವಿಧರ್ಮಿ ವಿಚಾರಗಳು ಕಳಂಕಿತಗೊಳಿಸಿದವು. ಎನ್‌ಸೈಕ್ಲಪೀಡೀಯ ಜೂಡೇಅಕ ಹೇಳುವುದು: “ಸಾಮಾನ್ಯ ಶಕ ಪೂರ್ವದ ಕೊನೆಯ ಶತಮಾನಗಳಲ್ಲಿ . . . ಒಂದು ದೊಡ್ಡ ಬದಲಾವಣೆ ಸಂಭವಿಸಿತ್ತು. ಈ ಸಮಯಾವಧಿಯಲ್ಲಿ [ಯೆಹೂದಿ] ಧರ್ಮವು . . . ಎರಡು ವಿರೋಧಾತ್ಮಕ ಮೂಲತತ್ತ್ವಗಳ ವ್ಯವಸ್ಥೆಯ ಗುಣಲಕ್ಷಣಗಳನ್ನು ಸ್ವೀಕರಿಸಿತ್ತು. ಇದಕ್ಕನುಸಾರ, ದೇವರು ಮತ್ತು ಒಳ್ಳೆಯ ಹಾಗೂ ಸತ್ಯದ ಶಕ್ತಿಗಳನ್ನು ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಕೆಟ್ಟತನ ಮತ್ತು ವಂಚನೆಯ ಬಲಾಢ್ಯ ಶಕ್ತಿಗಳು ವಿರೋಧಿಸಿದವು. ಇದು ಪರ್ಸಿಯನ್‌ ಧರ್ಮದ ಪ್ರಭಾವದಿಂದಾಗಿ ಬಂದಿರುವಂತೆ ತೋರುತ್ತದೆ.” ದ ಕನ್‌ಸೈಸ್‌ ಜೂವಿಷ್‌ ಎನ್‌ಸೈಕ್ಲಪೀಡೀಯ ಹೇಳುವುದು: “ಆಜ್ಞಾಪಾಲನೆ ಮತ್ತು ತಾಯಿತಿಗಳ ಉಪಯೋಗವು, ದೆವ್ವಗಳ ವಿರುದ್ಧವಾದ ರಕ್ಷಣೆಯನ್ನು ಸಾಧ್ಯಗೊಳಿಸಿತು.”

ಧರ್ಮಭ್ರಷ್ಟ ಕ್ರೈಸ್ತ ದೇವತಾಶಾಸ್ತ್ರ

ಯೆಹೂದಿ ಮತವು ಸೈತಾನನ ಮತ್ತು ದೆವ್ವಗಳ ಕುರಿತು ಬೈಬಲೇತರ ಕಲ್ಪನೆಗಳನ್ನು ಸ್ವೀಕರಿಸಿದಂತೆಯೇ ಧರ್ಮಭ್ರಷ್ಟ ಕ್ರೈಸ್ತರು ಸಹ ಅಶಾಸ್ತ್ರೀಯವಾದ ವಿಚಾರಗಳನ್ನು ವಿಕಸಿಸಿದರು. ದಿ ಆ್ಯಂಕರ್‌ ಬೈಬಲ್‌ ಡಿಕ್ಷನೆರಿ ಹೇಳುವುದು: “ಪುರಾತನ ದೇವತಾಶಾಸ್ತ್ರೀಯ ವಿಚಾರಗಳಲ್ಲಿ ಅತಿ ವಿಪರೀತವಾದ ಒಂದು ವಿಚಾರವೇನೆಂದರೆ, ದೇವರು ತನ್ನ ಜನರ ವಿಮೋಚನೆಗಾಗಿ ಸೈತಾನನಿಗೆ ಬೆಲೆ ತೆತ್ತನು ಎಂಬುದೇ.” ಈ ವಿಚಾರವನ್ನು ಮುಂದೆ ತಂದವನು ಐರೀನೀಯಸ್‌ (ಸಾ.ಶ. ಎರಡನೆಯ ಶತಮಾನ). ಇದನ್ನು ಇನ್ನೂ ಹೆಚ್ಚು ವಿಕಸಿಸಿದ್ದು ಆರಿಜನ್‌ (ಸಾ.ಶ. ಮೂರನೆಯ ಶತಮಾನ). “ಪಿಶಾಚನು ಮನುಷ್ಯರ ಮೇಲೆ ಕಾನೂನುಬದ್ಧ ಹಕ್ಕನ್ನು ಪಡೆದುಕೊಂಡಿದ್ದನು” ಎಂದು ಅವನು ವಾದಿಸಿದನು. “ಕ್ರಿಸ್ತನ ಮರಣವು . . . ಪಿಶಾಚನಿಗೆ ಕೊಡಲ್ಪಟ್ಟ ಪ್ರಾಯಶ್ಚಿತ್ತದ ಬೆಲೆಯಾಗಿತ್ತು” ಎಂದು ಅವನು ನೆನಸಿದನು.​—ಹಿಸ್ಟರಿ ಆಫ್‌ ಡಾಗ್ಮ, ಆಡಾಲ್ಫ್‌ ಹಾರ್ನಾಕ್‌ರಿಂದ.

ದ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡೀಯ ಹೀಗನ್ನುತ್ತದೆ: “[ಪ್ರಾಯಶ್ಚಿತ್ತದ ಬೆಲೆಯನ್ನು ಪಿಶಾಚನಿಗೆ ತೆರಲಾಯಿತು ಎಂಬ ವಿಚಾರವು] ಸುಮಾರು ಒಂದು ಸಾವಿರ ವರುಷ ಕಾಲ ದೇವತಾಶಾಸ್ತ್ರ ಇತಿಹಾಸದಲ್ಲಿ ಪ್ರಧಾನ ಪಾತ್ರವನ್ನು ವಹಿಸಿತ್ತು” ಮತ್ತು ಅದು ಚರ್ಚ್‌ ನಂಬಿಕೆಗಳ ಒಂದು ಭಾಗವಾಗಿ ಉಳಿಯಿತು. ಅಗಸ್ಟಿನ್‌ (ಸಾ.ಶ. ನಾಲ್ಕು-ಐದನೆಯ ಶತಮಾನಗಳು)ನ ಸಮೇತ ಬೇರೆ ಚರ್ಚ್‌ ಫಾದರ್‌ಗಳು, ಸೈತಾನನಿಗೆ ಪ್ರಾಯಶ್ಚಿತ್ತ ಬೆಲೆಯನ್ನು ತೆರಲಾಯಿತೆಂಬ ವಿಚಾರವನ್ನು ಸ್ವೀಕರಿಸಿದರು. ಕೊನೆಯದಾಗಿ, ಸಾ.ಶ. 12ನೆಯ ಶತಮಾನದೊಳಗೆ, ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞರಾದ ಆ್ಯನ್‌ಸೆಲ್ಮ್‌ ಮತ್ತು ಆಬಿಲಾರ್‌ ಎಂಬವರು, ಕ್ರಿಸ್ತನ ಯಜ್ಞವು ಸೈತಾನನಿಗಲ್ಲ, ಬದಲಾಗಿ ದೇವರಿಗೆ ಕೊಡಲ್ಪಟ್ಟಿತೆಂಬ ತೀರ್ಮಾನಕ್ಕೆ ಬಂದರು.

ಮಧ್ಯಯುಗಗಳ ಮೂಢನಂಬಿಕೆಗಳು

ಸೈತಾನನ ವಿಷಯದ ಸಂಬಂಧದಲ್ಲಿ ಹೆಚ್ಚಿನ ಕ್ಯಾಥೊಲಿಕ್‌ ಚರ್ಚ್‌ ಕೌನ್ಸಿಲ್‌ಗಳು ಗಮನಾರ್ಹವಾದ ರೀತಿಯಲ್ಲಿ ಮೌನವಾಗಿದ್ದರೂ, ಸಾ.ಶ. 1215ರಲ್ಲಿ ನಾಲ್ಕನೆಯ ಲ್ಯಾಟರನ್‌ ಕೌನ್ಸಿಲ್‌, ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡೀಯ ಯಾವುದನ್ನು “ನಂಬಿಕೆಯ ಗಂಭೀರ ಘೋಷಣೆ” ಎಂದು ಕರೆಯಿತೊ ಅದನ್ನು ಮಂಡಿಸಿತು. ಪ್ರಾಮಾಣ 1 ಹೇಳುವುದು: “ಪಿಶಾಚನನ್ನೂ ದೆವ್ವಗಳನ್ನೂ ದೇವರು ಒಳ್ಳೆಯ ಸ್ವಭಾವವುಳ್ಳವರಾಗಿ ಸೃಷ್ಟಿಸಿದರೂ, ಅವರು ತಮ್ಮ ಸ್ವಂತ ಕ್ರಿಯೆಯಿಂದ ದುಷ್ಟರಾದರು.” ಅವರು ಮಾನವರನ್ನು ಶೋಧನೆಗೊಳಪಡಿಸುವುದರಲ್ಲಿ ಕಾರ್ಯನಿರತರಾಗಿರುತ್ತಾರೆಂದು ಅದು ಕೂಡಿಸಿ ಹೇಳುತ್ತದೆ. ಮಧ್ಯಯುಗಗಳಲ್ಲಿ ಈ ಕೊನೆಯ ವಿಚಾರವು ಅನೇಕರ ಮನಸ್ಸನ್ನು ಕಾಡಿಸಿತು. ಅಸಾಧಾರಣವಾಗಿ ಕಂಡುಬಂದ ಯಾವುದೇ ವಿಷಯದ ಹಿಂದೆ, ಅಂದರೆ ಯಾವುದೇ ಕಾರಣವಿಲ್ಲದೆ ಬಂದಿರುವ ಕಾಯಿಲೆ, ಅಕಸ್ಮಾತ್ತಾಗಿ ಬರುವ ಮರಣ ಅಥವಾ ಚೆನ್ನಾಗಿ ಫಲಕೊಡದ ಪೈರುಗಳಂತಹ ವಿಷಯಗಳ ಹಿಂದೆ ಸೈತಾನನ ಕೈವಾಡವಿದೆಯೆಂದು ಜನರು ನಂಬಿದರು. ಸಾ.ಶ. 1233ರಲ್ಲಿ IXನೆಯ ಪೋಪ್‌ ಗ್ರೆಗರಿ, ಪಿಶಾಚನ ಆರಾಧಕರೆಂದು ಎಣಿಸಲಾದ ಲೂಸಿಫೇರಿಯನರ ವಿರುದ್ಧವೂ ಒಂದು ಆಜ್ಞೆಯನ್ನು ಒಳಗೂಡಿಸಿ ಪಾಷಂಡಿಗಳ ವಿರುದ್ಧ ಅನೇಕ ಆಜ್ಞೆಗಳನ್ನು ಹೊರಡಿಸಿದನು.

ಪಿಶಾಚನು ಅಥವಾ ದೆವ್ವಗಳು ಜನರ ಒಳಸೇರಿ ಅವರನ್ನು ಸ್ವಾಧೀನಪಡಿಸಿಕೊಳ್ಳುತ್ತವೆ ಎಂಬ ನಂಬಿಕೆಯು ಬೇಗನೆ ಸಾಮುದಾಯಿಕ ಬುದ್ಧಿವೈಕಲ್ಯಕ್ಕೆ ಅಂದರೆ ಮಾಟಮಂತ್ರಗಳ ವಿಷಯದಲ್ಲಿ ಅತ್ಯುದ್ರೇಕದ ಭಯಕ್ಕೆ ನಡೆಸಿತು. 13ರಿಂದ 17ನೆಯ ಶತಮಾನದ ತನಕ, ಇದ್ದಕ್ಕಿದ್ದಂತೆ ಮಾಟಗಾರರ ಭಯವು ಯೂರೋಪಿನಲ್ಲೆಲ್ಲ ಹರಡಿ, ಯೂರೋಪಿನ ವಲಸೆಗಾರರು ಉತ್ತರ ಅಮೆರಿಕಕ್ಕೆ ಹೋದಾಗ ಅಲ್ಲಿಗೂ ತಲಪಿತು. ಪ್ರಾಟೆಸ್ಟಂಟ್‌ ಸುಧಾರಕರಾದ ಮಾರ್ಟಿನ್‌ ಲೂಥರ್‌ ಮತ್ತು ಜಾನ್‌ ಕ್ಯಾಲ್ವಿನ್‌ ಸಹ ಇಂತಹ ಮಾಟಗಾರರನ್ನು ಹಿಡಿದು ಶಿಕ್ಷಿಸುವುದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಯೂರೋಪಿನಲ್ಲಿ ಕೇವಲ ಗಾಳಿಸುದ್ದಿ ಅಥವಾ ಮತ್ಸರದಿಂದ ಪ್ರೇರಿತವಾದ ಖಂಡನೆಗಳ ಆಧಾರದ ಮೇರೆಗೆ ಪಾಷಂಡಮತೀಯ ನ್ಯಾಯಸ್ಥಾನ ಮತ್ತು ಲೌಕಿಕ ನ್ಯಾಯಾಲಯಗಳೆರಡರಲ್ಲಿಯೂ ಮಾಟಗಾರರ ನ್ಯಾಯವಿಚಾರಣೆ ನಡೆಯಿತು. “ಅಪರಾಧಿ” ಎಂದು ಒಪ್ಪಿಕೊಳ್ಳುವಂತೆ ಮಾಡಲು ಚಿತ್ರಹಿಂಸೆಯನ್ನು ಸಾಮಾನ್ಯವಾಗಿ ಉಪಯೋಗಿಸಲಾಗುತ್ತಿತ್ತು.

ಇದರಲ್ಲಿ ಅಪರಾಧಿಗಳಾಗಿ ಕಂಡುಬಂದವರಿಗೆ ಸುಟ್ಟು ಕೊಲ್ಲುವ ಶಿಕ್ಷೆಯನ್ನು ವಿಧಿಸುವ ಸಾಧ್ಯತೆಯಿತ್ತು ಅಥವಾ ಇಂಗ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ನಲ್ಲಿ ಗಲ್ಲಿಗೇರಿಸಲ್ಪಡುವ ಸಾಧ್ಯತೆಯಿತ್ತು. ಇದಕ್ಕೆ ಬಲಿಯಾದವರ ಸಂಖ್ಯೆಯ ವಿಷಯದಲ್ಲಿ ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ಹೇಳುವುದು: “ಕೆಲವು ಮಂದಿ ಇತಿಹಾಸಕಾರರಿಗನುಸಾರ, 1484ರಿಂದ 1782ರ ವರೆಗೆ ಕ್ರೈಸ್ತ ಚರ್ಚು 3,00,000 ಮಂದಿ ಸ್ತ್ರೀಯರನ್ನು ಮಾಟಮಂತ್ರದ ಕಾರಣ ಮರಣಕ್ಕೊಪ್ಪಿಸಿತು.” ಈ ಮಧ್ಯಯುಗದ ದುರಂತದ ಹಿಂದೆ ಸೈತಾನನ ಕೈವಾಡವಿರುವಲ್ಲಿ, ಅವನ ಸಲಕರಣೆಗಳು ಯಾರಾಗಿದ್ದರು​—ಆಹುತಿಯಾದವರೊ, ಅವರ ಮತಾಂಧ ಧಾರ್ಮಿಕ ಹಿಂಸಕರೊ?

ಈಗಿನ ವಿಶ್ವಾಸ ಅಥವಾ ಅವಿಶ್ವಾಸ

ಹದಿನೆಂಟನೆಯ ಶತಮಾನದಲ್ಲಿ ದಾರ್ಶನಿಕ ಚಳವಳಿ ಎಂದು ಪ್ರಸಿದ್ಧವಾಗಿರುವ ತರ್ಕಪಾರಮ್ಯವಾದವು ಬೆಳೆದುಬರುವುದನ್ನು ಜನರು ನೋಡಿದರು. ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ಹೇಳುವುದು: “ದಾರ್ಶನಿಕ ಚಳವಳಿಯ ತತ್ತ್ವಜ್ಞಾನವೂ ದೇವತಾಶಾಸ್ತ್ರವೂ ಪಿಶಾಚನನ್ನು, ಮಧ್ಯಯುಗಗಳ ಪೌರಾಣಿಕ ಭ್ರಾಂತಿಯ ಉತ್ಪನ್ನ ಎಂದು ಹೇಳಿ ಕ್ರೈಸ್ತ ಪ್ರಜ್ಞೆಯಿಂದ ಹೊರದೂಡಲು ಪ್ರಯತ್ನಿಸಿತು.” ಇದಕ್ಕೆ ರೋಮನ್‌ ಕ್ಯಾಥೊಲಿಕ್‌ ಚರ್ಚ್‌ ಪ್ರತಿವರ್ತಿಸುತ್ತಾ, ಪಿಶಾಚನಾದ ಸೈತಾನನಲ್ಲಿ ಅದರ ನಂಬಿಕೆಯನ್ನು ಮೊದಲನೆಯ ವ್ಯಾಟಿಕನ್‌ ಕೌನ್ಸಿಲ್‌ನಲ್ಲಿ (1869-70) ಪುನಃ ದೃಢೀಕರಿಸಿ, ಎರಡನೆಯ ವ್ಯಾಟಿಕನ್‌ ಕೌನ್ಸಿಲ್‌ನಲ್ಲಿ (1962-65) ತುಸು ಹಿಂಜರಿಯುತ್ತಾ ಪುನರುಚ್ಚರಿಸಿತು.

ಅಧಿಕೃತವಾಗಿ, ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡೀಯ ಒಪ್ಪಿಕೊಳ್ಳುವಂತೆ, “ದೇವದೂತರಲ್ಲಿ ಮತ್ತು ದೆವ್ವಗಳಲ್ಲಿನ ಒಂದು ನಂಬಿಕೆಗೆ ಚರ್ಚು ಬದ್ಧವಾಗಿದೆ.” ಆದರೂ “ಇಂದು ಅನೇಕ ಕ್ರೈಸ್ತರು ಲೋಕದ ಕೆಟ್ಟತನಕ್ಕೆ ಪಿಶಾಚನು ಕಾರಣನೆಂದು ನಂಬಲು ನಿರಾಕರಿಸುತ್ತಾರೆ,” ಎಂದು ಕ್ಯಾಥೊಲಿಕ್‌ ಧರ್ಮದ ಕುರಿತಾದ ಒಂದು ಫ್ರೆಂಚ್‌ ನಿಘಂಟಾದ ಟೇಆ ಹೇಳುತ್ತದೆ. ಇತ್ತೀಚಿನ ವರುಷಗಳಲ್ಲಿ ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞರು ಬಿಗಿಹಗ್ಗದ ಮೇಲೆಯೊ ಎಂಬಂತೆ ಅನಿಶ್ಚಿತವಾಗಿ, ಅಧಿಕೃತ ಕ್ಯಾಥೊಲಿಕ್‌ ಬೋಧನೆ ಮತ್ತು ಆಧುನಿಕ ವಿಚಾರದ ನಡುವೆ ಸಮತೂಕತೆಯನ್ನು ಕಾಪಾಡಿಕೊಳ್ಳುತ್ತಾ ನಡೆಯುತ್ತಿದ್ದಾರೆ. ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ಹೇಳುವುದು: “ಉದಾರ ದೃಷ್ಟಿಯ ಕ್ರೈಸ್ತ ದೇವತಾಶಾಸ್ತ್ರವು ಸೈತಾನನ ಕುರಿತಾದ ಬೈಬಲ್‌ ಭಾಷೆಯನ್ನು, ಅಕ್ಷರಾರ್ಥವಾದದ್ದಾಗಿ ಅಲ್ಲ ಬದಲಾಗಿ ‘ಚಿತ್ರರೂಪದ್ದು,’ ಅಂದರೆ ವಿಶ್ವದಲ್ಲಿರುವ ಕೆಟ್ಟತನದ ವಾಸ್ತವಿಕತೆ ಮತ್ತು ವೈಶಾಲ್ಯವನ್ನು ವ್ಯಕ್ತಪಡಿಸಲು ಕೊಡಲ್ಪಟ್ಟಿರುವ ಪುರಾಣ ಸಾಹಿತ್ಯದ ಪ್ರಯತ್ನವಾಗಿ ಪರಿಗಣಿಸುತ್ತದೆ.” ಪ್ರಾಟೆಸ್ಟಂಟರ ವಿಷಯದಲ್ಲಿ ಅದೇ ಪರಾಮರ್ಶಕ ಗ್ರಂಥವು ಹೇಳುವುದು: “ಉದಾರ ದೃಷ್ಟಿಯ ಆಧುನಿಕ ಪ್ರಾಟೆಸ್ಟಂಟ್‌ ಧರ್ಮವು ಪಿಶಾಚನನ್ನು ಒಬ್ಬ ವ್ಯಕ್ತಿಯಾಗಿ ನಂಬುವ ಆವಶ್ಯಕತೆಯನ್ನು ಅಲ್ಲಗಳೆಯುವ ಪ್ರವೃತ್ತಿಯುಳ್ಳದ್ದಾಗಿದೆ.” ಆದರೆ ನಿಜ ಕ್ರೈಸ್ತರು, ಬೈಬಲು ಸೈತಾನನ ವಿಷಯದಲ್ಲಿ ಏನು ಹೇಳುತ್ತದೊ ಅದನ್ನು ಕೇವಲ “ಚಿತ್ರರೂಪದ್ದು” ಎಂದು ಪರಿಗಣಿಸಬೇಕೊ?

ಶಾಸ್ತ್ರಗಳು ಏನನ್ನು ಕಲಿಸುತ್ತವೆ?

ಮಾನವ ತತ್ತ್ವಜ್ಞಾನ ಮತ್ತು ದೇವತಾಶಾಸ್ತ್ರವು, ಕೆಟ್ಟತನದ ಮೂಲದ ಕುರಿತು ಬೈಬಲಿನಲ್ಲಿ ಕೊಡಲ್ಪಟ್ಟಿರುವುದಕ್ಕಿಂತಲೂ ಉತ್ತಮವಾದ ವಿವರಣೆಯನ್ನು ಕೊಟ್ಟಿರುವುದಿಲ್ಲ. ಸೈತಾನನ ಕುರಿತು ಶಾಸ್ತ್ರವಚನಗಳು ಏನು ಹೇಳುತ್ತವೊ ಅದು, ದುಷ್ಟತನ ಮತ್ತು ಮಾನವ ಕಷ್ಟಾನುಭವದ ಮೂಲವನ್ನು ಹಾಗೂ ಊಹಿಸಲೂ ಸಾಧ್ಯವಾಗದಷ್ಟು ಘೋರವಾಗಿರುವ ಹಿಂಸಾಕೃತ್ಯಗಳು ಪ್ರತಿ ವರುಷ ಏಕೆ ಹೆಚ್ಚೆಚ್ಚು ಕೆಟ್ಟದ್ದಾಗುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅತ್ಯಾವಶ್ಯಕವಾಗಿದೆ.

ಕೆಲವರು ಹೀಗೆ ಪ್ರಶ್ನಿಸಬಹುದು: ‘ದೇವರು ಒಳ್ಳೆಯವನಾಗಿದ್ದು ಪ್ರೀತಿಭರಿತ ಸೃಷ್ಟಿಕರ್ತನಾಗಿರುವುದಾದರೆ, ಆತನು ಸೈತಾನನಂತಹ ದುಷ್ಟ ಆತ್ಮಜೀವಿಯನ್ನು ಹೇಗೆ ಸೃಷ್ಟಿಸಿದನು?’ ಯೆಹೋವ ದೇವರ ಕಾರ್ಯಗಳೆಲ್ಲವೂ ಪರಿಪೂರ್ಣವಾಗಿವೆ ಮತ್ತು ಬುದ್ಧಿಶಕ್ತಿಯಿರುವ ಆತನ ಸಕಲ ಸೃಷ್ಟಿಜೀವಿಗಳಿಗೆ ಆತನು ಇಚ್ಛಾ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ ಎಂಬ ಮೂಲತತ್ತ್ವವನ್ನು ಬೈಬಲ್‌ ಸ್ಥಾಪಿಸುತ್ತದೆ. (ಧರ್ಮೋಪದೇಶಕಾಂಡ 30:19; 32:4; ಯೆಹೋಶುವ 24:15; 1 ಅರಸುಗಳು 18:21) ಆದುದರಿಂದ, ಸೈತಾನನಾಗಿ ಪರಿಣಮಿಸಿದ ಆ ಆತ್ಮವ್ಯಕ್ತಿಯು ಪರಿಪೂರ್ಣನಾಗಿ ಸೃಷ್ಟಿಸಲ್ಪಟ್ಟ ಮೇಲೆ, ಉದ್ದೇಶಪೂರ್ವಕವಾಗಿ ಸ್ವಂತ ಆಯ್ಕೆಯಿಂದಲೇ ಸತ್ಯ ಮತ್ತು ನೀತಿಯ ಮಾರ್ಗದಿಂದ ವಿಮುಖನಾಗಿರಬೇಕು.​—ಯೋಹಾನ 8:44; ಯಾಕೋಬ 1:14, 15.

ಸೈತಾನನ ಪ್ರತಿಭಟನೆಯ ಮಾರ್ಗವು ಅನೇಕ ವಿಧಗಳಲ್ಲಿ “ತೂರಿನ ಅರಸ”ನ ರೀತಿನೀತಿಗಳಿಗೆ ಹೋಲುತ್ತದೆ. ಅವನನ್ನು ಕಾವ್ಯಾತ್ಮಕವಾಗಿ, “ಪರಿಪೂರ್ಣಸುಂದರ”ನೆಂದೂ ‘ಅವನ ಸೃಷ್ಟಿಯ ದಿನದಿಂದ ಅವನಲ್ಲಿ ಅಪರಾಧವು ಸಿಕ್ಕುವ ತನಕ ಅವನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು’ ಎಂದೂ ವರ್ಣಿಸಲಾಗಿದೆ. (ಯೆಹೆಜ್ಕೇಲ 28:11-19) ಯೆಹೋವನ ಪರಮಾಧಿಕಾರವನ್ನಾಗಲಿ ಆತನ ಸೃಷ್ಟಿಸಾಮರ್ಥ್ಯವನ್ನಾಗಲಿ ಸೈತಾನನು ವಿವಾದಕ್ಕೊಳಪಡಿಸಲಿಲ್ಲ. ಅವನೇ ದೇವರಿಂದ ಸೃಷ್ಟಿಸಲ್ಪಟ್ಟಿರುವುದರಿಂದ ಅವನು ಅದನ್ನು ಹೇಗೆ ವಿವಾದಕ್ಕೊಳಪಡಿಸಸಾಧ್ಯವಿತ್ತು? ಆದರೆ ಯೆಹೋವನು ತನ್ನ ಪರಮಾಧಿಕಾರವನ್ನು ಉಪಯೋಗಿಸುತ್ತಿದ್ದ ವಿಧದ ಕುರಿತು ಅವನು ಸವಾಲೊಡ್ಡಿದನು. ಯಾವುದರ ಮೇಲೆ ಪ್ರಥಮ ಮಾನವ ಜೊತೆಯ ಹಿತವು ಹೊಂದಿಕೊಂಡಿತ್ತೋ ಮತ್ತು ಯಾವುದನ್ನು ಪಡೆಯುವ ಹಕ್ಕು ಅವರಿಗಿತ್ತೋ ಅದನ್ನು ಅವರಿಗೆ ಕೊಡದೆ ದೇವರು ಅದನ್ನು ಅಪಹರಿಸಿದ್ದಾನೆಂದು ಏದೆನ್‌ ತೋಟದಲ್ಲಿ ಸೈತಾನನು ಪರೋಕ್ಷವಾಗಿ ಸೂಚಿಸಿದನು. (ಆದಿಕಾಂಡ 3:​1-5) ಆದಾಮಹವ್ವರು ಯೆಹೋವನ ನೀತಿಯ ಪರಮಾಧಿಕಾರದ ವಿರುದ್ಧ ದಂಗೆಯೇಳುವಂತೆ ಮಾಡುವುದರಲ್ಲಿ ಅವನು ಸಾಫಲ್ಯವನ್ನು ಹೊಂದಿ, ಅವರ ಮೇಲೆ ಮತ್ತು ಅವರ ವಂಶಸ್ಥರ ಮೇಲೆ ಪಾಪ ಮತ್ತು ಮರಣವನ್ನು ತಂದನು. (ಆದಿಕಾಂಡ 3:6-19; ರೋಮಾಪುರ 5:12) ಹೀಗೆ ಸೈತಾನನೇ ಮಾನವ ಕಷ್ಟಾನುಭವದ ಮೂಲ ಕಾರಣನೆಂದು ಬೈಬಲು ತೋರಿಸುತ್ತದೆ.

ಜಲಪ್ರಳಯಕ್ಕೆ ಸ್ವಲ್ಪ ಮುಂಚೆ, ಸೈತಾನನ ದಂಗೆಯಲ್ಲಿ ಬೇರೆ ದೇವದೂತರೂ ಅವನ ಜೊತೆ ಸೇರಿಕೊಂಡರು. ಅವರು ಮನುಷ್ಯಪುತ್ರಿಯರೊಂದಿಗೆ ಲೈಂಗಿಕ ಸುಖಾನುಭವಕ್ಕಿದ್ದ ತಮ್ಮ ಆಶೆಯನ್ನು ತಣಿಸಿಕೊಳ್ಳಲು ಮಾನವ ದೇಹಧಾರಿಗಳಾಗಿ ಬಂದರು. (ಆದಿಕಾಂಡ 6:​1-4) ಜಲಪ್ರಳಯದ ಸಮಯದಲ್ಲಿ ಈ ಪಕ್ಷದ್ರೋಹಿ ದೇವದೂತರು ಆತ್ಮಜೀವಿಗಳ ಲೋಕಕ್ಕೆ ಹಿಂದಿರುಗಿದರು. ಆದರೆ ಸ್ವರ್ಗದಲ್ಲಿ ತಮಗೆ ದೇವರೊಂದಿಗಿದ್ದ ಆ “ತಕ್ಕ ವಾಸಸ್ಥಾನ”ಕ್ಕೆ ಅವರು ಹಿಂದೆ ಹೋಗುವಂತಿರಲಿಲ್ಲ. (ಯೂದ 6) ಅವರು ವಿಪರೀತ ಆತ್ಮಿಕ ಅಂಧಕಾರದ ಸ್ಥಿತಿಗೆ ದೊಬ್ಬಲ್ಪಟ್ಟರು. (1 ಪೇತ್ರ 3:19, 20; 2 ಪೇತ್ರ 2:4) ಹೀಗೆ ಅವರು ದೆವ್ವಗಳಾದರು. ಅವರು ಯೆಹೋವನ ಪರಮಾಧಿಕಾರದ ಕೆಳಗೆ ಇನ್ನು ಮೇಲೆ ಸೇವೆಮಾಡದೆ, ಸೈತಾನನಿಗೆ ಅಧೀನರಾಗಿ ಜೀವಿಸಿದರು. ಅವರು ಪುನಃ ದೇಹಧಾರಿಗಳಾಗಿ ಬರುವುದು ಅಶಕ್ಯವಾಗಿ ಕಂಡುಬರುತ್ತದಾದರೂ, ಅವರೀಗಲೂ ಮಾನವರ ಮನಸ್ಸು ಮತ್ತು ಜೀವನಗಳ ಮೇಲೆ ಪ್ರಬಲವಾದ ಶಕ್ತಿಯನ್ನು ಉಪಯೋಗಿಸಬಲ್ಲರು. ಮತ್ತು ಇಂದು ನಾವು ನೋಡುತ್ತಿರುವ ಹಿಂಸಾಚಾರದಲ್ಲಿ ಹೆಚ್ಚಿನದ್ದಕ್ಕೆ ನಿಸ್ಸಂದೇಹವಾಗಿಯೂ ಅವರೇ ಜವಾಬ್ದಾರರು.​—ಮತ್ತಾಯ 12:43-45; ಲೂಕ 8:27-33.

ಸೈತಾನನ ಆಳಿಕೆಯ ಅಂತ್ಯವು ಸಮೀಪಿಸಿದೆ

ಇಂದು ಲೋಕದಲ್ಲಿ ದುಷ್ಟ ಶಕ್ತಿಗಳು ಕಾರ್ಯಪ್ರವೃತ್ತವಾಗಿವೆ ಎಂಬುದು ಸುವ್ಯಕ್ತ. ಅಪೊಸ್ತಲ ಯೋಹಾನನು ಬರೆದುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.”​—1 ಯೋಹಾನ 5:19.

ಆದರೂ ನೆರವೇರಿರುವ ಬೈಬಲ್‌ ಪ್ರವಾದನೆಗಳು, ಪಿಶಾಚನು ಭೂಮಿಯ ಸಂಕಟವನ್ನು ತೀವ್ರಗೊಳಿಸುತ್ತಿದ್ದಾನೆಂದು ತೋರಿಸುತ್ತವೆ. ಏಕೆಂದರೆ ತಾನು ಬಂಧಿಸಲ್ಪಡುವ ಮೊದಲು ಧ್ವಂಸಗೊಳಿಸಲು “ತನಗಿರುವ ಕಾಲವು ಸ್ವಲ್ಪವೆಂದು” ಅವನಿಗೆ ತಿಳಿದದೆ. (ಪ್ರಕಟನೆ 12:7-12; 20:1-3) ಸೈತಾನನ ಆಳಿಕೆಯ ಅಂತ್ಯವು, ಕಣ್ಣೀರು, ಮರಣ ಮತ್ತು ವೇದನೆ ‘ಇನ್ನಿಲ್ಲದಿರುವ’ ನೀತಿಯ ನೂತನ ಲೋಕವನ್ನು ಒಳತರುವುದು. ಆಗ ದೇವರ ಚಿತ್ತವು, “ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ” ನೆರವೇರುವುದು.​—ಪ್ರಕಟನೆ 21:1-4; ಮತ್ತಾಯ 6:10.

[ಪುಟ 4ರಲ್ಲಿರುವ ಚಿತ್ರಗಳು]

ಬಾಬೆಲಿನವರು ಹಿಂಸಾತ್ಮಕ ದೇವನಾದ ನೇರ್ಗಲ್‌ (ತೀರ ಎಡದಲ್ಲಿ) ಎಂಬವನಲ್ಲಿ ನಂಬಿಕೆಯಿಟ್ಟಿದ್ದರು; ಪ್ಲೇಟೊ (ಎಡಕ್ಕೆ) ಎರಡು ವಿರೋಧಾತ್ಮಕ ಮೂಲತತ್ತ್ವಗಳ ಅಸ್ತಿತ್ವದಲ್ಲಿ ನಂಬಿಕೆಯಿಟ್ಟನು

[ಕೃಪೆ]

ಸಿಲಿಂಡರ್‌: Musée du Louvre, Paris; ಪ್ಲೇಟೊ: National Archaeological Museum, Athens, Greece

[ಪುಟ 5ರಲ್ಲಿರುವ ಚಿತ್ರಗಳು]

ಐರೀನೀಯಸ್‌, ಆರಿಜನ್‌ ಮತ್ತು ಅಗಸ್ಟಿನ್‌ ಎಂಬುವವರು ಪ್ರಾಯಶ್ಚಿತ್ತ ಬೆಲೆಯನ್ನು ಪಿಶಾಚನಿಗೆ ತೆರಲಾಯಿತೆಂದು ಬೋಧಿಸಿದರು

[ಕೃಪೆ]

ಆರಿಜನ್‌: Culver Pictures; ಅಗಸ್ಟಿನ್‌: From the book Great Men and Famous Women

[ಪುಟ 6ರಲ್ಲಿರುವ ಚಿತ್ರ]

ಮಾಟಗಾರರ ಭಯವು ಲಕ್ಷಗಟ್ಟಲೆ ಜನರ ಹತ್ಯೆಗೆ ನಡೆಸಿತು

[ಕೃಪೆ]

From the book Bildersaal deutscher Geschichte