ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಡೇ ದಿವಸಗಳಲ್ಲಿ ತಟಸ್ಥ ಕ್ರೈಸ್ತರು

ಕಡೇ ದಿವಸಗಳಲ್ಲಿ ತಟಸ್ಥ ಕ್ರೈಸ್ತರು

ಕಡೇ ದಿವಸಗಳಲ್ಲಿ ತಟಸ್ಥ ಕ್ರೈಸ್ತರು

“ನಾನು ಲೋಕದ ಭಾಗವಾಗಿಲ್ಲದಿರುವ ಪ್ರಕಾರ ಇವರೂ ಲೋಕದ ಭಾಗವಾಗಿರುವುದಿಲ್ಲ.”​—ಯೋಹಾನ 17:​16, NW.

1, 2. ಲೋಕದೊಂದಿಗೆ ತನ್ನ ಹಿಂಬಾಲಕರಿಗಿರುವ ಸಂಬಂಧದ ಬಗ್ಗೆ ಯೇಸು ಏನು ಹೇಳಿದನು, ಮತ್ತು ಅವನ ಮಾತುಗಳು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತವೆ?

 ಯೇಸು ಒಬ್ಬ ಪರಿಪೂರ್ಣ ಮನುಷ್ಯನಾಗಿ ಜೀವಿಸಿದ ಕೊನೆಯ ರಾತ್ರಿಯಂದು, ತನ್ನ ಶಿಷ್ಯರಿಗೆ ಕೇಳಿಸುವಂತೆ ಅವನು ಒಂದು ದೀರ್ಘವಾದ ಪ್ರಾರ್ಥನೆಯನ್ನು ಮಾಡಿದನು. ಹಾಗೆ ಪ್ರಾರ್ಥಿಸುತ್ತಿದ್ದಾಗ ಅವನು, ಸಕಲ ಸತ್ಯ ಕ್ರೈಸ್ತರ ಜೀವನಗಳನ್ನು ವರ್ಣಿಸುವಂಥ ಒಂದು ವಿಷಯವನ್ನು ಹೇಳಿದನು. ತನ್ನ ಶಿಷ್ಯರನ್ನು ಕುರಿತು ಅವನು ಹೇಳಿದ್ದು: “ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ; ನಾನು ಲೋಕದ ಭಾಗವಾಗಿಲ್ಲದಿರುವ ಪ್ರಕಾರ ಇವರೂ ಲೋಕದ ಭಾಗವಾಗಿರುವುದಿಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ. ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದ ಭಾಗವಾಗಿಲ್ಲದಿರುವ ಪ್ರಕಾರ ಇವರೂ ಲೋಕದ ಭಾಗವಾಗಿರುವುದಿಲ್ಲ.”​—ಯೋಹಾನ 17:14-16, NW.

2 ತನ್ನ ಹಿಂಬಾಲಕರು ಲೋಕದ ಭಾಗವಾಗಿರುವುದಿಲ್ಲವೆಂದು ಯೇಸು ಎರಡು ಬಾರಿ ಹೇಳಿದನು. ಇದಲ್ಲದೆ ಆ ಪ್ರತ್ಯೇಕತೆಯು ಉದ್ವೇಗಗಳಿಗೆ ನಡಿಸಲಿಕ್ಕಿತ್ತು, ಅಂದರೆ ಲೋಕವು ಅವರನ್ನು ದ್ವೇಷಿಸಲಿಕ್ಕಿತ್ತು. ಆದರೂ ಕ್ರೈಸ್ತರು ನಿರುತ್ಸಾಹಗೊಳ್ಳುವ ಅಗತ್ಯವಿರುವುದಿಲ್ಲ; ಏಕೆಂದರೆ ಯೆಹೋವನು ಅವರನ್ನು ಕಾಯಲಿದ್ದನು. (ಜ್ಞಾನೋಕ್ತಿ 18:10; ಮತ್ತಾಯ 24:9, 13) ಯೇಸುವಿನ ಈ ಮಾತುಗಳಿಂದಾಗಿ ನಾವು ಹೀಗೆ ಕೇಳಬಹುದು: ‘ಸತ್ಯ ಕ್ರೈಸ್ತರು ಏಕೆ ಲೋಕದ ಭಾಗವಾಗಿಲ್ಲ? ಲೋಕದ ಭಾಗವಾಗಿಲ್ಲದಿರುವುದರ ಅರ್ಥವೇನು? ಲೋಕವು ಕ್ರೈಸ್ತರನ್ನು ದ್ವೇಷಿಸುತ್ತಿರುವುದಾದರೆ, ಲೋಕದ ಕುರಿತಾಗಿ ಅವರ ಅಭಿಪ್ರಾಯವೇನು? ವಿಶೇಷವಾಗಿ, ಲೋಕದ ಸರಕಾರಗಳ ಬಗ್ಗೆ ಅವರ ಅಭಿಪ್ರಾಯವೇನು?’ ಈ ಪ್ರಶ್ನೆಗಳಿಗೆ ಶಾಸ್ತ್ರೀಯ ಉತ್ತರಗಳು ಪ್ರಾಮುಖ್ಯವಾಗಿವೆ, ಏಕೆಂದರೆ ಅವು ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ.

“ನಾವು ದೇವರಿಂದ ಹುಟ್ಟಿದವರು”

3. (ಎ) ನಮ್ಮನ್ನು ಲೋಕದಿಂದ ಪ್ರತ್ಯೇಕಿಸುವಂಥ ಸಂಗತಿ ಯಾವುದು? (ಬಿ) ಲೋಕವು “ಕೆಡುಕನ ವಶದಲ್ಲಿ ಬಿದ್ದಿದೆ”ಯೆಂಬುದಕ್ಕೆ ಯಾವ ಪುರಾವೆಯಿದೆ?

3 ನಾವು ಏಕೆ ಲೋಕದ ಭಾಗವಾಗಿಲ್ಲ ಎಂಬುದಕ್ಕಿರುವ ಒಂದು ಕಾರಣವು, ಯೆಹೋವನೊಂದಿಗೆ ನಮಗಿರುವ ನಿಕಟ ಸಂಬಂಧವೇ ಆಗಿದೆ. ಅಪೊಸ್ತಲ ಯೋಹಾನನು ಬರೆದುದು: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.” (1 ಯೋಹಾನ 5:19) ಲೋಕದ ಕುರಿತು ಯೋಹಾನನು ಆಡಿದ ಮಾತುಗಳು ನಿಜವೆಂಬುದು ಸ್ಪಷ್ಟ. ಇಂದು ಅತಿರೇಕವಾಗಿರುವ ಯುದ್ಧಗಳು, ಪಾತಕ, ಕ್ರೌರ್ಯ, ದಬ್ಬಾಳಿಕೆ, ಅಪ್ರಾಮಾಣಿಕತೆ ಮತ್ತು ಅನೈತಿಕತೆಗಳು ಸೈತಾನನ ಪ್ರಭಾವವನ್ನು ತಿಳಿಯಪಡಿಸುತ್ತವೆಯೇ ಹೊರತು ದೇವರದ್ದನ್ನಲ್ಲ. (ಯೋಹಾನ 12:31; 2 ಕೊರಿಂಥ 4:4; ಎಫೆಸ 6:12) ಒಬ್ಬ ವ್ಯಕ್ತಿಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವಾಗ, ಅವನು ಅಂಥ ತಪ್ಪು ಕೆಲಸಗಳನ್ನು ನಡೆಸುವುದೂ ಇಲ್ಲ, ಅಂತಹ ಕೆಲಸಗಳಿಗೆ ಒಪ್ಪಿಗೆ ಕೊಡುವುದೂ ಇಲ್ಲ. ಮತ್ತು ಇದು ಅವನನ್ನು ಲೋಕದ ಭಾಗವಾಗಿಲ್ಲದವನಾಗಿ ಮಾಡುತ್ತದೆ.​—ರೋಮಾಪುರ 12:2; 13:12-14; 1 ಕೊರಿಂಥ 6:9-11; 1 ಯೋಹಾನ 3:10-12.

4. ನಾವು ಯೆಹೋವನಿಗೆ ಸೇರಿದವರೆಂದು ತೋರಿಸುವ ವಿಧಗಳಾವುವು?

4 ಲೋಕಕ್ಕೆ ವ್ಯತಿರಿಕ್ತವಾಗಿ, ಕ್ರೈಸ್ತರು “ದೇವರಿಂದ ಹುಟ್ಟಿದವರು” ಎಂದು ಯೋಹಾನನು ಹೇಳಿದನು. ಯೆಹೋವನಿಗೆ ತಮ್ಮನ್ನೇ ಸಮರ್ಪಿಸಿಕೊಳ್ಳುವವರೆಲ್ಲರೂ ಆತನವರು. ಅಪೊಸ್ತಲ ಪೌಲನು ಹೇಳಿದ್ದು: “ನಾವು ಬದುಕಿದರೆ ಕರ್ತ [“ಯೆಹೋವ,” NW]ನಿಗಾಗಿ ಬದುಕುತ್ತೇವೆ; ಸತ್ತರೆ ಕರ್ತ [“ಯೆಹೋವ,” NW]ನಿಗಾಗಿ ಸಾಯುತ್ತೇವೆ; ಬದುಕಿದರೂ ಸತ್ತರೂ ನಾವು ಕರ್ತ [“ಯೆಹೋವ,” NW]ನವರೇ.” (ರೋಮಾಪುರ 14:8; ಕೀರ್ತನೆ 116:15) ನಾವು ಯೆಹೋವನಿಗೆ ಸೇರಿದವರಾಗಿರುವುದರಿಂದ ನಾವಾತನಿಗೆ ಅನನ್ಯ ಭಕ್ತಿಯನ್ನು ಸಲ್ಲಿಸುತ್ತೇವೆ. (ವಿಮೋಚನಕಾಂಡ 20:​4-6) ಈ ಕಾರಣದಿಂದ, ಸತ್ಕ್ರೈಸ್ತನೊಬ್ಬನು ಯಾವುದೊ ಒಂದು ಲೌಕಿಕ ಉದ್ದೇಶಕ್ಕಾಗಿ ತನ್ನ ಜೀವನವನ್ನು ಅರ್ಪಿಸುವುದಿಲ್ಲ. ಮತ್ತು ಅವನು ರಾಷ್ಟ್ರೀಯ ಪ್ರತೀಕಗಳಿಗೆ ಮಾನವನ್ನು ಸಲ್ಲಿಸುತ್ತಾನಾದರೂ, ಅವನು ತನ್ನ ಕ್ರಿಯೆಗಳಿಂದಾಗಲಿ ಪೂಜ್ಯ ಮನೋಭಾವದಿಂದಾಗಲಿ ಅವುಗಳನ್ನು ಆರಾಧಿಸುವುದಿಲ್ಲ. ಅವನು ಕ್ರೀಡಾಪಟುಗಳನ್ನಾಗಲಿ, ಇತರ ಆಧುನಿಕ ಆರಾಧ್ಯ ದೈವಗಳನ್ನಾಗಲಿ ಖಂಡಿತವಾಗಿಯೂ ಆರಾಧಿಸುವುದಿಲ್ಲ. ಇತರರು ತಮ್ಮ ಇಷ್ಟದಂತೆ ಮಾಡಲು ಅವರಿಗಿರುವ ಹಕ್ಕನ್ನು ಅವನು ಗೌರವಿಸುತ್ತಾನಾದರೂ, ಅವನು ಮಾತ್ರ ಕೇವಲ ಸೃಷ್ಟಿಕರ್ತನೊಬ್ಬನನ್ನೇ ಆರಾಧಿಸುತ್ತಾನೆ. (ಮತ್ತಾಯ 4:10; ಪ್ರಕಟನೆ 19:10) ಇದು ಕೂಡ ಅವನನ್ನು ಲೋಕದಿಂದ ಪ್ರತ್ಯೇಕವಾಗಿರಿಸುತ್ತದೆ.

‘ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ’

5, 6. ದೇವರ ರಾಜ್ಯಕ್ಕೆ ಅಧೀನತೆಯು ನಮ್ಮನ್ನು ಲೋಕದಿಂದ ಹೇಗೆ ಪ್ರತ್ಯೇಕಿಸುತ್ತದೆ?

5 ಕ್ರೈಸ್ತರು ಯೇಸು ಕ್ರಿಸ್ತನ ಅನುಯಾಯಿಗಳೂ ದೇವರ ರಾಜ್ಯದ ಪ್ರಜೆಗಳೂ ಆಗಿದ್ದಾರೆ. ಇದು ಸಹ ಅವರು ಲೋಕದ ಭಾಗವಾಗಿರದಂತೆ ಮಾಡುತ್ತದೆ. ಪೊಂತ್ಯ ಪಿಲಾತನ ಮುಂದೆ ಯೇಸು ವಿಚಾರಣೆಗೊಳಗಾದಾಗ, ಅವನಂದದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ [“ಲೋಕದ ಭಾಗವಾಗಿಲ್ಲ,” NW]; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 18:36) ಯೆಹೋವನ ಹೆಸರು ಪವಿತ್ರೀಕರಿಸಲ್ಪಡುವ, ಆತನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವ ಮತ್ತು ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲೂ ಆತನ ಚಿತ್ತವು ನೆರವೇರುವ ಮಾಧ್ಯಮವು ಈ ರಾಜ್ಯವಾಗಿದೆ. (ಮತ್ತಾಯ 6:​9, 10) ತನ್ನ ಶುಶ್ರೂಷೆಯ ಕಾಲದಲ್ಲೆಲ್ಲ ಯೇಸು ರಾಜ್ಯದ ಸುವಾರ್ತೆಯನ್ನು ಸಾರಿ, ಅದು ಈ ವಿಷಯಗಳ ವ್ಯವಸ್ಥೆಯ ಅಂತ್ಯದ ತನಕವೂ ತನ್ನ ಹಿಂಬಾಲಕರಿಂದ ಸಾರಲ್ಪಡುವುದೆಂದು ಹೇಳಿದನು. (ಮತ್ತಾಯ 4:23; 24:14) ಪ್ರಕಟನೆ 11:14ರಪ್ರವಾದನಾ ಮಾತುಗಳು 1914ರಲ್ಲಿ ನೆರವೇರಿದವು: “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು.” ಶೀಘ್ರದಲ್ಲೇ, ಮಾನವ ಕುಲವನ್ನು ಆಳುವ ಏಕಮಾತ್ರ ಸರಕಾರವು ಆ ಸ್ವರ್ಗೀಯ ರಾಜ್ಯವಾಗಿರುವುದು. (ದಾನಿಯೇಲ 2:44) ಒಂದು ನಿರ್ದಿಷ್ಟ ಹಂತದಲ್ಲಿ, ಅದರ ಅಧಿಕಾರಕ್ಕೆ ಐಹಿಕ ಅಧಿಕಾರಿಗಳೂ ತಲೆಬಾಗುವಂತೆ ಒತ್ತಾಯಿಸಲ್ಪಡುವರು.​—ಕೀರ್ತನೆ 2:​6-12.

6 ಇದೆಲ್ಲವನ್ನೂ ತಿಳಿದವರಾಗಿ, ಸತ್ಯ ಕ್ರೈಸ್ತರು ಇಂದು ದೇವರ ರಾಜ್ಯದ ಪ್ರಜೆಗಳಾಗಿದ್ದು, ‘ರಾಜ್ಯವನ್ನೂ ದೇವರ ನೀತಿಯನ್ನೂ ಹುಡುಕುತ್ತಾ’ ಹೋಗುವಂತೆ ತಿಳಿಸಲ್ಪಟ್ಟ ಯೇಸುವಿನ ಸಲಹೆಯನ್ನು ಅನುಸರಿಸುತ್ತಾರೆ. (ಮತ್ತಾಯ 6:33) ಇದು ಅವರನ್ನು, ತಾವು ಜೀವಿಸುವ ದೇಶಗಳಿಗೆ ದ್ರೋಹಿಗಳಾಗಿ ಮಾಡುವುದಿಲ್ಲವಾದರೂ, ಆತ್ಮಿಕ ರೀತಿಯಲ್ಲಿ ಅವರು ಲೋಕದಿಂದ ಪ್ರತ್ಯೇಕವಾಗಿರುವಂತೆ ಮಾಡುತ್ತದೆ. ಪ್ರಥಮ ಶತಮಾನದಲ್ಲಿದ್ದಂತೆಯೇ ಇಂದಿನ ಕ್ರೈಸ್ತರ ಪ್ರಧಾನ ಕೆಲಸವು, ‘ದೇವರ ರಾಜ್ಯದ ಬಗ್ಗೆ ಪ್ರಮಾಣವಾಗಿ ಸಾಕ್ಷಿ’ಹೇಳುವುದಾಗಿದೆ. (ಅ. ಕೃತ್ಯಗಳು 28:23) ಈ ದೇವದತ್ತ ಕೆಲಸವನ್ನು ತಡೆಯುವ ಹಕ್ಕು ಯಾವುದೇ ಮಾನವ ಸರಕಾರಕ್ಕಿಲ್ಲ.

7. ನಿಜ ಕ್ರೈಸ್ತರು ತಟಸ್ಥರಾಗಿರುವುದೇಕೆ, ಮತ್ತು ಅವರು ಇದನ್ನು ಹೇಗೆ ತೋರಿಸಿದ್ದಾರೆ?

7 ಯೆಹೋವನಿಗೆ ಸೇರಿದವರೂ ಯೇಸುವಿನ ಹಿಂಬಾಲಕರೂ, ದೇವರ ರಾಜ್ಯದ ಪ್ರಜೆಗಳೂ ಆಗಿರುವ ಯೆಹೋವನ ಸಾಕ್ಷಿಗಳು, 20ನೆಯ ಮತ್ತು 21ನೆಯ ಶತಮಾನಗಳ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಹಗಳಲ್ಲಿ ತಟಸ್ಥರಾಗಿ ಉಳಿದಿದ್ದಾರೆ. ಅವರು ಯಾವುದೇ ಪಕ್ಷವನ್ನು ಹಿಡಿದಿಲ್ಲ, ಯಾರ ವಿರುದ್ಧವೂ ಆಯುಧಗಳನ್ನೆತ್ತಿಲ್ಲ, ಮತ್ತು ಯಾವುದೇ ಐಹಿಕ ಉದ್ದೇಶದ ದೃಷ್ಟಿಯಿಂದ ಅಪಪ್ರಚಾರದಲ್ಲಿ ತೊಡಗಿಲ್ಲ. ಭಾರೀ ವಿರೋಧದ ಎದುರಿನಲ್ಲಿ ಗಮನಾರ್ಹವಾದ ನಂಬಿಕೆಯನ್ನು ತೋರಿಸುತ್ತಾ ಅವರು 1934ರಲ್ಲಿ ಜರ್ಮನಿಯ ನಾಸೀ ನಾಯಕರಿಗೆ ವ್ಯಕ್ತಪಡಿಸಿರುವ ಮೂಲತತ್ತ್ವಗಳನ್ನು ಅನುಸರಿಸಿ ಬಂದಿದ್ದಾರೆ: “ನಮಗೆ ರಾಜಕೀಯ ವಿಚಾರಗಳಲ್ಲಿ ಆಸಕ್ತಿಯೇ ಇಲ್ಲ. ನಾವು ದೇವರ ನೇಮಿತ ಅರಸನಾಗಿರುವ ಕ್ರಿಸ್ತನ ಕೆಳಗಿರುವ ದೇವರ ರಾಜ್ಯಕ್ಕೆ ಪೂರ್ತಿಯಾಗಿ ಸಮರ್ಪಿತರಾಗಿದ್ದೇವೆ. ನಾವು ಯಾರಿಗೂ ಯಾವುದೇ ಕೆಡುಕನ್ನು ಅಥವಾ ಹಾನಿಯನ್ನು ಮಾಡೆವು. ನಾವು ಶಾಂತಿಯಿಂದ ಜೀವಿಸಲು ಮತ್ತು ಸಂದರ್ಭ ದೊರೆತಂತೆ, ಎಲ್ಲರಿಗೂ ಒಳ್ಳೆಯದನ್ನು ಮಾಡಲು ಸಂತೋಷಿಸುವೆವು.”

ಕ್ರಿಸ್ತನ ರಾಯಭಾರಿಗಳು ಮತ್ತು ನಿಯೋಗಿಗಳು

8, 9. ಯೆಹೋವನ ಸಾಕ್ಷಿಗಳು ಇಂದು ಯಾವ ರೀತಿಯಲ್ಲಿ ರಾಯಭಾರಿಗಳೂ ನಿಯೋಗಿಗಳೂ ಆಗಿದ್ದಾರೆ, ಮತ್ತು ಇದು ರಾಷ್ಟ್ರಗಳೊಂದಿಗಿನ ಅವರ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

8 ಪೌಲನು ತನ್ನನ್ನೂ ಜೊತೆ ಅಭಿಷಿಕ್ತ ಕ್ರೈಸ್ತರನ್ನೂ, “ನಾವು ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ಬುದ್ಧಿ ಹೇಳುವ ಹಾಗಾಯಿತು” ಎಂದು ವರ್ಣಿಸಿದನು. (2 ಕೊರಿಂಥ 5:20; ಎಫೆಸ 6:20) 1914ರಿಂದ ಹಿಡಿದು, ಆತ್ಮಾಭಿಷಿಕ್ತ ಕ್ರೈಸ್ತರನ್ನು ಯೋಗ್ಯವಾಗಿಯೇ ದೇವರ ರಾಜ್ಯದ ರಾಯಭಾರಿಗಳೆಂದು ಕರೆಯಸಾಧ್ಯವಿದೆ. ಅವರು ಆ ರಾಜ್ಯದ “ಪುತ್ರರು” ಆಗಿದ್ದಾರೆ. (ಮತ್ತಾಯ 13:​38, NW; ಫಿಲಿಪ್ಪಿ 3:20; ಪ್ರಕಟನೆ 5:9, 10) ಇದಲ್ಲದೆ, ರಾಯಭಾರಿತ್ವದ ಕೆಲಸದಲ್ಲಿ ಅಭಿಷಿಕ್ತ ಪುತ್ರರನ್ನು ಬೆಂಬಲಿಸಲಿಕ್ಕಾಗಿ, ಯೆಹೋವನು ಜನಾಂಗಗಳಿಂದ ಭೂನಿರೀಕ್ಷೆಯಿರುವ ಕ್ರೈಸ್ತರಾದ “ಬೇರೆ ಕುರಿಗಳ” ಒಂದು “ಮಹಾ ಸಮೂಹ”ವನ್ನು ಒಟ್ಟುಗೂಡಿಸಿರುತ್ತಾನೆ. (ಪ್ರಕಟನೆ 7:9; ಯೋಹಾನ 10:16) ಈ ‘ಬೇರೆ ಕುರಿಗಳನ್ನು’ ದೇವರ ರಾಜ್ಯದ “ನಿಯೋಗಿಗಳು” ಎಂದು ಕರೆಯಬಹುದು.

9 ರಾಯಭಾರಿಯೂ ಅವನ ಸಿಬ್ಬಂದಿ ವರ್ಗವೂ ಅವರು ಕಾರ್ಯನಡಿಸುವ ದೇಶದ ವಿಚಾರಗಳಲ್ಲಿ ತಲೆಹಾಕುವುದಿಲ್ಲ. ಅದೇ ರೀತಿ, ಕ್ರೈಸ್ತರು ಲೋಕದ ರಾಷ್ಟ್ರಗಳ ರಾಜಕೀಯ ವಿಚಾರಗಳ ವಿಷಯದಲ್ಲಿ ತಟಸ್ಥರಾಗಿರುತ್ತಾರೆ. ಯಾವುದೇ ರಾಷ್ಟ್ರೀಯ, ಕುಲ ಸಂಬಂಧಿತ, ಸಾಮಾಜಿಕ ಅಥವಾ ಆರ್ಥಿಕ ಪಂಗಡಗಳ ಪರವಾಗಿಯಾಗಲಿ ವಿರುದ್ಧವಾಗಿಯಾಗಲಿ ಅವರು ಪಕ್ಷವನ್ನು ವಹಿಸುವುದಿಲ್ಲ. (ಅ. ಕೃತ್ಯಗಳು 10:​34, 35) ಬದಲಿಗೆ, ಅವರು “ಎಲ್ಲರಿಗೆ ಒಳ್ಳೇದನ್ನು” ಮಾಡುತ್ತಾರೆ. (ಗಲಾತ್ಯ 6:10) ಯೆಹೋವನ ಸಾಕ್ಷಿಗಳ ಈ ತಾಟಸ್ಥ್ಯವು, ಅವರು ಯಾವುದೊ ಕುಲ, ರಾಷ್ಟ್ರ ಅಥವಾ ಬುಡಕಟ್ಟಿನ ವಿರುದ್ಧ ಪಕ್ಷಕ್ಕೆ ಸೇರಿದವರೆಂದು ಹೇಳಿ ಅವರ ಸಂದೇಶವನ್ನು ಯಾರೊಬ್ಬನೂ ನ್ಯಾಯಬದ್ಧವಾಗಿ ತಳ್ಳಿಹಾಕಸಾಧ್ಯವಿಲ್ಲವೆಂಬ ಅರ್ಥವನ್ನು ಕೊಡುತ್ತದೆ.

ಪ್ರೀತಿಯಿಂದ ಗುರುತಿಸಲ್ಪಟ್ಟಿರುವುದು

10. ಒಬ್ಬ ಕ್ರೈಸ್ತನಿಗೆ ಪ್ರೀತಿಯು ಎಷ್ಟು ಪ್ರಾಮುಖ್ಯವಾದದ್ದಾಗಿದೆ?

10 ಮೇಲೆ ಹೇಳಿರುವ ವಿಷಯಗಳ ಕಾರಣದಿಂದಲ್ಲದೆ, ಕ್ರೈಸ್ತರಿಗೆ ಇತರ ಕ್ರೈಸ್ತರೊಂದಿಗಿರುವ ಸಂಬಂಧದ ಕಾರಣವೂ ಅವರು ಲೋಕದ ವಿಚಾರಗಳಲ್ಲಿ ತಟಸ್ಥರಾಗಿರುತ್ತಾರೆ. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಸಹೋದರ ಪ್ರೀತಿಯು ಒಬ್ಬ ಕ್ರೈಸ್ತನಾಗಿರುವುದರ ಒಂದು ಪ್ರಧಾನ ಭಾಗವಾಗಿದೆ. (1 ಯೋಹಾನ 3:14) ಅದು ಯೆಹೋವನೊಂದಿಗೆ ಮತ್ತು ಯೇಸುವಿನೊಂದಿಗಿನ ಅವನ ಸಂಬಂಧದೊಂದಿಗೆ ಜೋಡಿಸಲ್ಪಟ್ಟಿದೆ. ಆದುದರಿಂದ ಒಬ್ಬ ಕ್ರೈಸ್ತನಿಗೆ ಇತರ ಕ್ರೈಸ್ತರೊಂದಿಗಿರುವ ಸಂಬಂಧವು ಅತ್ಯಾಪ್ತವಾದದ್ದು. ಅವನ ಪ್ರೀತಿ ಸ್ಥಳಿಕ ಸಭೆಗೆ ಮಾತ್ರ ಸೀಮಿತವಾಗಿರದೆ, ‘ಲೋಕದಲ್ಲಿರುವ [ಅವನ] ಸಹೋದರರ ಇಡೀ ಸಂಘವನ್ನೂ’ ಆವರಿಸುತ್ತದೆ.​—1 ಪೇತ್ರ 5:9, NW.

11. ಯೆಹೋವನ ಸಾಕ್ಷಿಗಳಲ್ಲಿರುವ ಪರಸ್ಪರ ಪ್ರೀತಿಯು ಅವರ ನಡತೆಯನ್ನು ಹೇಗೆ ಪ್ರಭಾವಿಸಿದೆ?

11 ಇಂದು ಯೆಹೋವನ ಸಾಕ್ಷಿಗಳು ತಮ್ಮ ಸಹೋದರ ಪ್ರೀತಿಯನ್ನು ಯೆಶಾಯ 2:4ರ ಮಾತುಗಳನ್ನು ನೆರವೇರಿಸುವ ಮೂಲಕ ಪ್ರದರ್ಶಿಸುತ್ತಾರೆ: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” ಯೆಹೋವನಿಂದ ಶಿಕ್ಷಿತರಾಗಿರುವ ಸತ್ಯ ಕ್ರೈಸ್ತರು, ದೇವರೊಂದಿಗೂ ತಮ್ಮೊಳಗೂ ಪರಸ್ಪರವಾಗಿ ಶಾಂತಿಯಿಂದಿದ್ದಾರೆ. (ಯೆಶಾಯ 54:13) ಅವರು ದೇವರನ್ನೂ ತಮ್ಮ ಸಹೋದರರನ್ನೂ ಪ್ರೀತಿಸುವುದರಿಂದ, ಬೇರೆ ದೇಶಗಳ ಜೊತೆ ಕ್ರೈಸ್ತರಿಗೆದುರಾಗಿ ಇಲ್ಲವೆ ಬೇರೆ ಯಾರ ಎದುರಾಗಿಯೂ ಆಯುಧಗಳನ್ನೆತ್ತುವುದು ಅವರಿಗೆ ಊಹಾತೀತವಾದ ಸಂಗತಿ. ಅವರ ಪ್ರೀತಿ ಮತ್ತು ಐಕ್ಯಭಾವಗಳು ಅವರ ಆರಾಧನೆಯ ಆವಶ್ಯಕ ಭಾಗವಾಗಿದ್ದು, ತಮ್ಮಲ್ಲಿ ನಿಜವಾಗಿಯೂ ದೇವರಾತ್ಮವಿದೆಯೆಂಬುದರ ರುಜುವಾತಾಗಿವೆ. (ಕೀರ್ತನೆ 133:1; ಮೀಕ 2:12; ಮತ್ತಾಯ 22:37-39; ಕೊಲೊಸ್ಸೆ 3:14) ಅವರು “ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನ ಪಡು”ತ್ತಾರೆ. “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ” ಎಂದು ಅವರಿಗೆ ತಿಳಿದದೆ.​—ಕೀರ್ತನೆ 34:14, 15.

ಲೋಕದ ಬಗ್ಗೆ ಕ್ರೈಸ್ತರಿಗೆ ಯಾವ ಅಭಿಪ್ರಾಯವಿದೆ?

12. ಲೋಕದ ಜನರ ಕಡೆಗೆ ಯೆಹೋವನಿಗಿರುವ ಯಾವ ಮನೋಭಾವವನ್ನು ಯೆಹೋವನ ಸಾಕ್ಷಿಗಳು ಅನುಕರಿಸುತ್ತಾರೆ, ಮತ್ತು ಹೇಗೆ?

12 ಯೆಹೋವನು ಈ ಲೋಕಕ್ಕೆ ಪ್ರತಿಕೂಲವಾದ ತೀರ್ಪನ್ನು ವಿಧಿಸಿದ್ದಾನೆ. ಆದರೆ ಆತನಿನ್ನೂ ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ತೀರ್ಪನ್ನು ವಿಧಿಸಿಲ್ಲ. ಆತನು ಇದನ್ನು ಯೇಸುವಿನ ಮೂಲಕ ತಕ್ಕ ಸಮಯದಲ್ಲಿ ಮಾಡುವನು. (ಕೀರ್ತನೆ 67:3, 4; ಮತ್ತಾಯ 25:31-46; 2 ಪೇತ್ರ 3:10) ಈಮಧ್ಯೆ, ಆತನು ಮಾನವಕುಲಕ್ಕೆ ಮಹಾ ಪ್ರೀತಿಯನ್ನು ತೋರಿಸುತ್ತಾನೆ. ಎಲ್ಲರಿಗೂ ನಿತ್ಯಜೀವವನ್ನು ಪಡೆಯುವ ಅವಕಾಶವು ದೊರೆಯುವಂತೆ ಆತನು ತನ್ನ ಏಕಜಾತ ಪುತ್ರನನ್ನೂ ಕೊಟ್ಟನು. (ಯೋಹಾನ 3:16) ಆದುದರಿಂದ ಕ್ರೈಸ್ತರಾಗಿರುವ ನಾವು, ನಮ್ಮ ಪ್ರಯತ್ನಗಳು ಪದೇ ಪದೇ ಧಿಕ್ಕರಿಸಲ್ಪಟ್ಟರೂ, ದೇವರ ರಕ್ಷಣಾ ಏರ್ಪಾಡುಗಳ ಕುರಿತು ಇತರರಿಗೆ ತಿಳಿಸುತ್ತಾ ದೇವರ ಪ್ರೀತಿಯನ್ನು ಅನುಕರಿಸುತ್ತೇವೆ.

13. ಐಹಿಕ ಅಧಿಕಾರಿಗಳ ಬಗ್ಗೆ ನಮಗೆ ಯಾವ ಅಭಿಪ್ರಾಯವಿರಬೇಕು?

13 ಲೋಕದ ಐಹಿಕ ಅಧಿಕಾರಿಗಳನ್ನು ನಾವು ಹೇಗೆ ವೀಕ್ಷಿಸಬೇಕು? ಪೌಲನು ಹೀಗೆ ಬರೆದಾಗ ಆ ಪ್ರಶ್ನೆಗೆ ಉತ್ತರ ಕೊಟ್ಟನು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು [“ಇರುವ ಅಧಿಕಾರಿಗಳು ತಮ್ಮ ಸಂಬಂಧಿತ ಸ್ಥಾನಗಳಲ್ಲಿ ದೇವರಿಂದ ಇರಿಸಲ್ಪಟ್ಟವರು,” NW].” (ರೋಮಾಪುರ 13:1, 2) ಮಾನವರು ಅಧಿಕಾರದ “ಸಂಬಂಧಿತ” ಸ್ಥಾನಗಳಲ್ಲಿರುವುದು (ಪರಸ್ಪರರಿಗೆ ಹೋಲಿಸುವಾಗ ಮೇಲಿನ ದರ್ಜೆಯವರು ಅಥವಾ ಕೆಳದರ್ಜೆಯವರು ಆಗಿದ್ದರೂ, ಯೆಹೋವನಿಗೆ ಮಾತ್ರ ಅವರು ಯಾವಾಗಲೂ ಕೆಳಗಿನವರಾಗಿರುವುದು) ಸರ್ವಶಕ್ತನು ಅವರಿಗೆ ಅನುಮತಿಯನ್ನು ನೀಡಿರುವುದರಿಂದಲೇ. ಒಬ್ಬ ಕ್ರೈಸ್ತನು ಐಹಿಕ ಅಧಿಕಾರಕ್ಕೆ ಏಕೆ ಅಧೀನನಾಗುತ್ತಾನೆಂದರೆ, ಅದು ಯೆಹೋವನಿಗೆ ಅವನು ತೋರಿಸುವ ವಿಧೇಯತೆಯ ಒಂದು ಭಾಗವಾಗಿದೆ. ಆದರೆ ದೇವರ ಆವಶ್ಯಕತೆಗಳು ಮತ್ತು ಮಾನವ ಸರಕಾರವೊಂದರ ಆವಶ್ಯಕತೆಗಳ ಮಧ್ಯೆ ಘರ್ಷಣೆ ಏಳುವಲ್ಲಿ ಆಗೇನು?

ದೇವರ ನಿಯಮ ಮತ್ತು ಕೈಸರನ ನಿಯಮ

14, 15. (ಎ) ವಿಧೇಯತೆಯ ವಿಷಯದಲ್ಲಿ ಸಂಘರ್ಷವನ್ನು ತಪ್ಪಿಸಲು ದಾನಿಯೇಲನಿಗೆ ಹೇಗೆ ಸಾಧ್ಯವಾಯಿತು? (ಬಿ) ವಿಧೇಯತೆಯ ವಿಷಯದಲ್ಲಿ ಎದ್ದ ಸಂಘರ್ಷದಿಂದ ತಪ್ಪಿಸಿಕೊಳ್ಳಲು ಆಗದಿದ್ದಾಗ ಆ ಮೂವರು ಇಬ್ರಿಯರು ಯಾವ ನಿಲುವನ್ನು ತೆಗೆದುಕೊಂಡರು?

14 ಮಾನವ ಸರಕಾರಗಳಿಗೆ ತೋರಿಸಬೇಕಾದ ಅಧೀನತೆಯನ್ನು, ದೇವರ ಅಧಿಕಾರಕ್ಕೆ ಅಧೀನತೆಯೊಂದಿಗೆ ಹೇಗೆ ಸಮತೂಕಗೊಳಿಸಬಹುದು ಎಂಬುದಕ್ಕೆ ಉತ್ತಮ ಮಾದರಿಯನ್ನು ದಾನಿಯೇಲನೂ ಅವನ ಮೂವರು ಸಂಗಾತಿಗಳೂ ಒದಗಿಸುತ್ತಾರೆ. ಈ ನಾಲ್ವರು ಹೀಬ್ರು ಯುವಕರು ಬಾಬೆಲಿನಲ್ಲಿ ಬಂಧಿವಾಸದಲ್ಲಿದ್ದಾಗ, ಅವರು ಆ ದೇಶದ ನಿಯಮಗಳನ್ನು ಪಾಲಿಸಿದ್ದರಿಂದ ಬೇಗನೆ ಅವರನ್ನು ವಿಶೇಷ ತರಬೇತಿಗೆ ಆರಿಸಿಕೊಳ್ಳಲಾಯಿತು. ಈ ತರಬೇತು ಯೆಹೋವನ ನಿಯಮದೊಂದಿಗಿನ ಘರ್ಷಣೆಗೆ ನಡೆಸಬಹುದೆಂದು ಗ್ರಹಿಸಿದ ದಾನಿಯೇಲನು, ಮೇಲ್ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯೊಂದಿಗೆ ಇದರ ಕುರಿತು ಮಾತಾಡಿದನು. ಇದರ ಫಲವಾಗಿ, ಈ ನಾಲ್ವರು ಇಬ್ರಿಯರ ಮನಸ್ಸಾಕ್ಷಿಯನ್ನು ಗೌರವಿಸಲು ವಿಶೇಷ ಏರ್ಪಾಡನ್ನು ಮಾಡಲಾಯಿತು. (ದಾನಿಯೇಲ 1:​8-17) ಅನಾವಶ್ಯಕವಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು, ತಮ್ಮ ಸ್ಥಾನವನ್ನು ಅಧಿಕಾರಿಗಳಿಗೆ ಸಮಯೋಚಿತ ಜಾಣ್ಮೆಯಿಂದ ವಿವರಿಸುವಾಗ ಯೆಹೋವನ ಸಾಕ್ಷಿಗಳು ದಾನಿಯೇಲನ ಮಾದರಿಯನ್ನು ಅನುಸರಿಸುತ್ತಾರೆ.

15 ಆದರೆ ತರುವಾಯ ಒಂದು ಸಂದರ್ಭದಲ್ಲಿ, ಅಧೀನತೆಯ ವಿಷಯದಲ್ಲಿ ಎದ್ದ ಸಂಘರ್ಷದಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಬಾಬೆಲಿನ ರಾಜನು ದೂರಾ ಎಂಬ ಬೈಲಿನಲ್ಲಿ ದೊಡ್ಡ ಪ್ರತಿಮೆಯನ್ನು ನಿರ್ಮಿಸಿ, ಸಂಸ್ಥಾನಾಧಿಕಾರಿಗಳ ಜೊತೆಗೆ ಉನ್ನತಾಧಿಕಾರಿಗಳನ್ನು ಅದರ ಪ್ರತಿಷ್ಠಾಪನೆಗಾಗಿ ಒಟ್ಟುಗೂಡುವಂತೆ ಆಜ್ಞಾಪಿಸಿದನು. ಇಷ್ಟರೊಳಗೆ ದಾನಿಯೇಲನ ಮೂವರು ಮಿತ್ರರು ಬಾಬೆಲಿನ ಸಂಸ್ಥಾನಾಧಿಕಾರಿಗಳಾಗಿ ನೇಮಿಸಲ್ಪಟ್ಟಿದ್ದುದರಿಂದ ಈ ಆಜ್ಞೆ ಅವರಿಗೂ ಅನ್ವಯಿಸಿತು. ಆ ಕಾರ್ಯಕ್ರಮದ ಒಂದು ನಿರ್ದಿಷ್ಟ ಕ್ಷಣದಲ್ಲಿ, ನೆರೆದಿದ್ದವರೆಲ್ಲರೂ ಆ ಪ್ರತಿಮೆಗೆ ಅಡ್ಡಬೀಳಬೇಕಾಗಿತ್ತು. ಆದರೆ ಇದು ದೇವರ ನಿಯಮಕ್ಕೆ ವಿರುದ್ಧವಾಗಿದೆಯೆಂದು ಆ ಇಬ್ರಿಯರಿಗೆ ತಿಳಿದಿತ್ತು. (ಧರ್ಮೋಪದೇಶಕಾಂಡ 5:​8-10) ಆದುದರಿಂದ, ಎಲ್ಲರೂ ಅಡ್ಡಬಿದ್ದಾಗ ಅವರು ನಿಂತುಕೊಂಡಿದ್ದರು. ರಾಜಾಜ್ಞೆಗೆ ಅವಿಧೇಯರಾಗುವ ಮೂಲಕ ಅವರಿಗೆ ಭಯಂಕರ ಮರಣಾಪಾಯವಿತ್ತು. ಅವರ ಜೀವಗಳು ಒಂದು ಅದ್ಭುತದ ಮೂಲಕ ಮಾತ್ರ ರಕ್ಷಿಸಲ್ಪಟ್ಟಿದ್ದವು. ಆದರೆ ಅವರು ಯೆಹೋವನಿಗೆ ಅವಿಧೇಯರಾಗುವ ಬದಲು ಮರಣಾಪಾಯಕ್ಕೆ ತುತ್ತಾಗಲು ಆರಿಸಿಕೊಂಡರು.​—ದಾನಿಯೇಲ 2:​49–3:29.

16, 17. ಸಾರುವುದನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಲ್ಪಟ್ಟಾಗ ಅಪೊಸ್ತಲರ ಪ್ರತಿಕ್ರಿಯೆ ಏನಾಗಿತ್ತು, ಮತ್ತು ಏಕೆ?

16 ಒಂದನೆಯ ಶತಮಾನದಲ್ಲಿ, ಯೇಸು ಕ್ರಿಸ್ತನ ಅಪೊಸ್ತಲರನ್ನು ಯೆರೂಸಲೇಮಿನ ಯೆಹೂದಿ ನಾಯಕರ ಮುಂದೆ ಕರೆದು, ಯೇಸುವಿನ ಹೆಸರಿನಲ್ಲಿ ಸಾರುವುದನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಲಾಯಿತು. ಅವರು ಹೇಗೆ ಪ್ರತಿವರ್ತಿಸಿದರು? ಯೂದಾಯವೂ ಸೇರಿ ಎಲ್ಲಾ ಜನಾಂಗಗಳಲ್ಲಿ ಶಿಷ್ಯರನ್ನಾಗಿ ಮಾಡುವಂತೆ ಯೇಸು ಅವರಿಗೆ ಆದೇಶವನ್ನು ಕೊಟ್ಟಿದ್ದನು. ಅವರು ಯೆರೂಸಲೇಮಿನಲ್ಲಿಯೂ ಲೋಕದ ಮಿಕ್ಕ ಭಾಗಗಳಲ್ಲಿಯೂ ತನ್ನ ಸಾಕ್ಷಿಗಳಾಗಿರಬೇಕೆಂದೂ ಅವನು ಹೇಳಿದ್ದನು. (ಮತ್ತಾಯ 28:19, 20; ಅ. ಕೃತ್ಯಗಳು 1:8) ಯೇಸುವಿನ ಆಜ್ಞೆಯು ತಮಗಾಗಿರುವ ದೇವರ ಚಿತ್ತವನ್ನು ಸೂಚಿಸಿತೆಂದು ಅಪೊಸ್ತಲರಿಗೆ ತಿಳಿದಿತ್ತು. (ಯೋಹಾನ 5:30; 8:28) ಆದಕಾರಣ ಅವರು ಹೇಳಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.”​—ಅ. ಕೃತ್ಯಗಳು 4:19, 20; 5:29.

17 ಅಪೊಸ್ತಲರು ಇಲ್ಲಿ ಬಂಡಾಯ ಪ್ರವೃತ್ತಿಯನ್ನು ತೋರಿಸುತ್ತಿರಲಿಲ್ಲ. (ಜ್ಞಾನೋಕ್ತಿ 24:21) ಆದರೂ ಮಾನವ ಅಧಿಕಾರಿಗಳು ದೇವರ ಚಿತ್ತವನ್ನು ಮಾಡುವುದರಿಂದ ಅವರನ್ನು ತಡೆದಾಗ, ‘ನಾವು ಮನುಷ್ಯನಿಗಲ್ಲ ಬದಲಾಗಿ ದೇವರಿಗೆ ವಿಧೇಯರಾಗಬೇಕು’ ಎಂದು ಮಾತ್ರ ಅವರಿಗೆ ಹೇಳಸಾಧ್ಯವಾಯಿತು. ನಾವು ‘ಕೈಸರನದನ್ನು ಕೈಸರನಿಗೆ ಕೊಡಬೇಕು; ದೇವರದನ್ನು ದೇವರಿಗೆ ಕೊಡಬೇಕು’ ಎಂದು ಯೇಸು ಹೇಳಿದನು. (ಮಾರ್ಕ 12:17) ಒಬ್ಬ ಮನುಷ್ಯನು ಹೇಳಿದನೆಂಬ ಕಾರಣಕ್ಕಾಗಿ ನಾವು ದೇವರಾಜ್ಞೆಗೆ ಅವಿಧೇಯರಾಗುವಲ್ಲಿ, ದೇವರಿಗೆ ಸೇರಿರುವುದನ್ನು ನಾವು ಮನುಷ್ಯನಿಗೆ ಕೊಡುತ್ತೇವೆ. ಇದಕ್ಕೆ ಬದಲಾಗಿ, ಕೈಸರನಿಗೆ ಸಲ್ಲತಕ್ಕದ್ದನ್ನೆಲ್ಲ ನಾವು ಕೊಡುತ್ತೇವಾದರೂ, ಯೆಹೋವನ ಸರ್ವೋಚ್ಛ ಅಧಿಕಾರವನ್ನು ನಾವು ಮಾನ್ಯಮಾಡುತ್ತೇವೆ. ಆತನೇ ವಿಶ್ವದ ಪರಮಾಧಿಕಾರಿಯೂ ಸೃಷ್ಟಿಕರ್ತನೂ ಅಧಿಕಾರದ ಸಾಕ್ಷಾತ್‌ ಮೂಲನೂ ಆಗಿದ್ದಾನೆ.​—ಪ್ರಕಟನೆ 4:11.

ನಾವು ಸ್ಥಿರರಾಗಿ ನಿಲ್ಲುವೆವು

18, 19. ಯಾವ ಉತ್ತಮ ನಿಲುವನ್ನು ನಮ್ಮ ಅನೇಕ ಸಹೋದರರು ತೆಗೆದುಕೊಂಡಿದ್ದಾರೆ, ಮತ್ತು ನಾವು ಅವರ ಮಾದರಿಯನ್ನು ಹೇಗೆ ಅನುಸರಿಸಬಲ್ಲೆವು?

18 ಪ್ರಸ್ತುತ, ಹೆಚ್ಚಿನ ಐಹಿಕ ಸರಕಾರಗಳು ಯೆಹೋವನ ಸಾಕ್ಷಿಗಳ ತಟಸ್ಥ ನಿಲುವನ್ನು ಅಂಗೀಕರಿಸಿವೆ ಮತ್ತು ಇದಕ್ಕೆ ನಾವು ಕೃತಜ್ಞರು. ಆದರೆ ಕೆಲವು ದೇಶಗಳಲ್ಲಿ ಸಾಕ್ಷಿಗಳು ಕಠಿನ ವಿರೋಧವನ್ನು ಎದುರಿಸಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲೆಲ್ಲ ಮತ್ತು ಇಂದಿನ ವರೆಗೂ, ನಮ್ಮ ಕೆಲವು ಸಹೋದರ ಸಹೋದರಿಯರು ಬಲಾಢ್ಯವಾಗಿ ಹೋರಾಡಿದ್ದಾರೆ, ಆತ್ಮಿಕಾರ್ಥದಲ್ಲಿ “ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು” ನಡೆಸಿದ್ದಾರೆ.​—1 ತಿಮೊಥೆಯ 6:12.

19 ನಾವೂ ಅವರಂತೆ ಹೇಗೆ ಸ್ಥಿರರಾಗಿ ನಿಲ್ಲಬಲ್ಲೆವು? ಮೊದಲನೆಯದಾಗಿ, ವಿರೋಧವು ಖಂಡಿತವಾಗಿಯೂ ಬಂದೇ ಬರುವುದೆಂಬುದನ್ನು ನಾವು ಮರೆಯಬಾರದು. ವಿರೋಧವು ಎದುರಾಗುವಲ್ಲಿ ನಾವು ಗಾಬರಿಗೊಳ್ಳಬಾರದು ಇಲ್ಲವೆ ನಮಗೆ ಅದರಿಂದ ಆಶ್ಚರ್ಯವಾಗಬಾರದು. ಪೌಲನು ತಿಮೊಥೆಯನನ್ನು ಎಚ್ಚರಿಸಿದ್ದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12; 1 ಪೇತ್ರ 4:12) ಸೈತಾನನ ಪ್ರಭಾವವೇ ಅಧಿಕಾರ ಚಲಾಯಿಸುತ್ತಿರುವ ಈ ಲೋಕದಲ್ಲಿ ನಮಗೆ ವಿರೋಧ ಬರದೆ ಇರುವುದಾದರೂ ಹೇಗೆ? (ಪ್ರಕಟನೆ 12:17) ನಾವು ನಂಬಿಗಸ್ತರಾಗಿರುವಷ್ಟು ಕಾಲ, ನಮ್ಮ ಕುರಿತು ‘ಆಶ್ಚರ್ಯಪಟ್ಟು ನಮ್ಮನ್ನು ದೂಷಿಸುವ’ ಕೆಲವರು ಸದಾ ಇದ್ದೇ ಇರುವರು.​—1 ಪೇತ್ರ 4:4.

20. ನಮಗೆ ಯಾವ ಬಲದಾಯಕ ಸತ್ಯಗಳು ಜ್ಞಾಪಕಕ್ಕೆ ತರಲ್ಪಟ್ಟಿವೆ?

20 ಎರಡನೆಯದಾಗಿ, ಯೆಹೋವನೂ ಆತನ ದೂತರೂ ನಮ್ಮನ್ನು ಬೆಂಬಲಿಸುವರೆಂಬ ದೃಢನಿಶ್ಚಯ ನಮಗಿದೆ. ಪೂರ್ವಕಾಲದ ಎಲೀಷನು ಹೇಳಿದಂತೆ, “ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ.” (2 ಅರಸುಗಳು 6:16; ಕೀರ್ತನೆ 34:7) ಯೆಹೋವನು ತನ್ನ ಸದುದ್ದೇಶದ ನಿಮಿತ್ತವೇ, ಸ್ವಲ್ಪ ಕಾಲ ವಿರೋಧಿಗಳಿಂದ ಒತ್ತಡವು ಮುಂದುವರಿಯುವಂತೆ ಬಿಡುತ್ತಿರಬಹುದು. ಆದರೂ, ಆತನು ಸದಾ ನಮಗೆ ತಾಳಿಕೊಳ್ಳಲು ಬೇಕಾದ ಶಕ್ತಿಯನ್ನು ಕೊಡುವನು. (ಯೆಶಾಯ 41:​9, 10) ಕೆಲವರು ತಮ್ಮ ಜೀವಗಳನ್ನು ಕಳೆದುಕೊಂಡಿರುವುದಾದರೂ, ಅದು ನಮ್ಮನ್ನು ಗಾಬರಿಗೊಳಿಸದು. ಯೇಸು ಹೇಳಿದ್ದು: “ದೇಹವನ್ನು ಕೊಂದು ಆತ್ಮ [“ಪ್ರಾಣ,” NW]ವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ [“ಪ್ರಾಣ,” NW] ದೇಹ ಎರಡನ್ನೂ ಕೂಡ ನರಕ [“ಗೆಹೆನ್ನ,” NW]ದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.” (ಮತ್ತಾಯ 10:16-23, 28) ಈ ವಿಷಯಗಳ ವ್ಯವಸ್ಥೆಯಲ್ಲಿ ನಾವು ಕೇವಲ “ಪ್ರವಾಸಿಗಳು” ಆಗಿದ್ದೇವೆ. ನಾವು ಇಲ್ಲಿರುವ ಸಮಯವನ್ನು, “ವಾಸ್ತವವಾದ ಜೀವವನ್ನು,” ಅಂದರೆ ದೇವರ ನೂತನ ಲೋಕದಲ್ಲಿ ನಿತ್ಯಜೀವವನ್ನು ಹೊಂದುವುದಕ್ಕೋಸ್ಕರ ಉಪಯೋಗಿಸುತ್ತೇವೆ. (1 ಪೇತ್ರ 2:11; 1 ತಿಮೊಥೆಯ 6:18, 19) ನಾವು ದೇವರಿಗೆ ನಂಬಿಗಸ್ತರಾಗಿರುವಷ್ಟು ಕಾಲ, ಆ ಪ್ರತಿಫಲವನ್ನು ಯಾವ ಮಾನವನೂ ನಮ್ಮಿಂದ ಅಪಹರಿಸಲಾರನು.

21. ನಾವು ಸದಾ ಯಾವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

21 ಆದಕಾರಣ, ನಮಗೆ ಯೆಹೋವ ದೇವರೊಂದಿಗಿರುವ ಆ ಅಮೂಲ್ಯ ಸಂಬಂಧವನ್ನು ನಾವು ಜ್ಞಾಪಕದಲ್ಲಿಡೋಣ. ಕ್ರಿಸ್ತನ ಹಿಂಬಾಲಕರು ಮತ್ತು ರಾಜ್ಯದ ಪ್ರಜೆಗಳಾಗಿರುವ ಆಶೀರ್ವಾದವನ್ನು ನಾವು ಸದಾ ಗಣ್ಯಮಾಡೋಣ. ನಾವು ನಮ್ಮ ಸಹೋದರರನ್ನು ಪೂರ್ಣಹೃದಯದಿಂದ ಪ್ರೀತಿಸೋಣ, ಮತ್ತು ಅವರಿಂದ ಪಡೆಯುವ ಪ್ರೀತಿಯಲ್ಲಿ ನಾವು ಸದಾ ಸಂತೋಷಿಸೋಣ. ಎಲ್ಲಕ್ಕೂ ಮುಖ್ಯವಾಗಿ, “ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು” ಎಂಬ ಕೀರ್ತನೆಗಾರನ ಮಾತುಗಳಿಗೆ ನಾವು ಕಿವಿಗೊಡೋಣ. (ಕೀರ್ತನೆ 27:14; ಯೆಶಾಯ 54:17) ಹಾಗೆ ಮಾಡುವಲ್ಲಿ, ನಮಗಿಂತಲೂ ಮುಂಚೆ ಜೀವಿಸಿದ್ದ ಅಸಂಖ್ಯಾತ ಕ್ರೈಸ್ತರಂತೆ ನಾವು ನಮ್ಮ ನಿರೀಕ್ಷೆಯ ನಿಶ್ಚಯತೆಯುಳ್ಳವರಾಗಿರುವೆವು​—ಲೋಕದ ಭಾಗವಾಗಿರದಂಥ ನಂಬಿಗಸ್ತರಾದ ತಟಸ್ಥ ಕ್ರೈಸ್ತರಾಗಿ ಸ್ಥಿರವಾಗಿ ನಿಲ್ಲುವೆವು.

ನೀವು ವಿವರಿಸಬಲ್ಲಿರೊ?

• ಯೆಹೋವನೊಂದಿಗೆ ನಮಗಿರುವ ಸಂಬಂಧವು ಈ ಲೋಕದಿಂದ ನಮ್ಮನ್ನು ಹೇಗೆ ಪ್ರತ್ಯೇಕಿಸುತ್ತದೆ?

• ದೇವರ ರಾಜ್ಯದ ಪ್ರಜೆಗಳಾದ ನಾವು ಈ ಲೋಕದಲ್ಲಿ ತಟಸ್ಥ ನಿಲುವನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ?

• ನಮ್ಮ ಸಹೋದರರಿಗಾಗಿರುವ ಪ್ರೀತಿಯು ಯಾವ ವಿಧಗಳಲ್ಲಿ ನಮ್ಮನ್ನು ತಟಸ್ಥರಾಗಿ, ಈ ಲೋಕದಿಂದ ಪ್ರತ್ಯೇಕಿಸಲ್ಪಟ್ಟವರಾಗಿ ಇಡುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ದೇವರ ರಾಜ್ಯಕ್ಕೆ ನಾವು ತೋರಿಸುವ ಅಧೀನತೆಯು ಲೋಕದೊಂದಿಗಿನ ನಮ್ಮ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

[ಪುಟ 16ರಲ್ಲಿರುವ ಚಿತ್ರ]

ಹೂಟೂ ಮತ್ತು ಟೂಟ್ಸೀ ಕುಲದವರು ಸಂತೋಷದಿಂದ ಜೊತೆಯಾಗಿ ಕೆಲಸ ಮಾಡುತ್ತಾರೆ

[ಪುಟ 17ರಲ್ಲಿರುವ ಚಿತ್ರ]

ಯೆಹೂದಿ ಮತ್ತು ಅರಬ್ಬಿ ಕ್ರೈಸ್ತ ಸಹೋದರರು

[ಪುಟ 17ರಲ್ಲಿರುವ ಚಿತ್ರ]

ಸರ್ಬಿಯನ್‌, ಬಾಸ್ನಿಯನ್‌ ಮತ್ತು ಕ್ರೊಏಷಿಯನ್‌ ಕ್ರೈಸ್ತರು ಪರಸ್ಪರ ಒಡನಾಟದಲ್ಲಿ ಸಂತೋಷಿಸುತ್ತಾರೆ

[ಪುಟ 18ರಲ್ಲಿರುವ ಚಿತ್ರ]

ಅಧಿಪತಿಗಳು ನಮಗೆ ದೇವರಾಜ್ಞೆಯನ್ನು ಮುರಿಯುವಂತೆ ಅಪ್ಪಣೆ ಕೊಡುವಾಗ, ನಾವು ತೆಗೆದುಕೊಳ್ಳಬೇಕಾದ ಸರಿಯಾದ ಮಾರ್ಗ ಯಾವುದು?